Total Pageviews

Wednesday 19 December 2018

ಸ್ತ್ರೀ ಎಂದರೆ ಅಷ್ಟೆ ಸಾಕೆ ?...(ಭಾಗ ೨)
ಸಾಮಗಾನದ ಕವಿ ಜಿ. ಎಸ್. ಶಿವರುದ್ರಪ್ಪ, ನವಿಲೂರ ಚೆಲುವೆಯ ರವಿ ಕೆ. ಎಸ್.ನರಸಿಂಹಸ್ವಾಮಿ, ಸಖಿಗೀತ ಹಾಡಿದ ಗಾರುಡಿಗ ದ.ರಾ.ಬೇಂದ್ರೆ, 'ಷೋಡಶಿ'ಯ ರನ್ನ ಕುವೆಂಪು ಮೊದಲಾದ ಕಾವ್ಯಾರಾಧಕರ ಆಲಾಪವಾದ 'ಅವಳು' 'ರಾಗಂ'(ಡಾ.ರಾಜಶೇಖರ ಮಠಪತಿ) ರವರ "ಹೆಣ್ಣು ಹೇಳುವ ಅರ್ಧ ಸತ್ಯ" ಕೃತಿಯಲ್ಲಿ ಬದುಕೆಂಬ ಬೆಳಕಿನ ಸುತ್ತಲೇ  ಸುಳಿದು ಸುಟ್ಟುಕೊಳ್ಳುವ ಪತಂಗವಾಗಿದ್ದಾಳೆ. 'ಹೊನ್ನೋಲೆ ಕಿವಿಯೋಳೆ,ಕೆನ್ನೇಲಿ ಸೂರ್ಯ ಹೊಳೆಯೋಳೆ' ಎಂದು ಜನಪದರಿಂದ ಸಿಂಗರಿಸಿಕೊಂಡ 'ಅವಳು' ಕುರಿತು ಲೇಖಕರು ಬಸವರಾಜ ಒಕ್ಕುಂದರ ಅಗ್ನಿಸಾಕ್ಷಿ ಕವಿತೆಯೊಂದರ ಆಯ್ದ ಭಾಗವನ್ನು  ಹೀಗೆ ಉಲ್ಲೇಖಿಸಿದ್ದಾರೆ-
"ಗೆಳತಿ
ಅಗ್ನಿಸಾಕ್ಷಿಗೆ ಏನೇನೋ ಅರ್ಥಗಳ 
ಮೂಡಿಸಿದೆ ನೀನು
................
ಜತೆಗೂಡಿ ಬಂದಿ, ಸಹಗಮನವೆಂದಿ
ಬೆಂಕಿಯನು ಸಮನಾಗಿ
ಹಂಚಿಕೊಂಡಿ
ಅರ್ಧಾಂಗಿಯಾಗಿ ಸರಿಯಾಗಿ
ಅರ್ಧ ಸುಟ್ಟುಕೊಂಡಿ"
ಎಲ್ಲಿಂದಲೋ  ಜೊತೆಯಾಗಿ , ತನ್ನದೆನ್ನುವ ಎಲ್ಲವನ್ನೂ ಬಸಿದುಕೊಂಡು ಅರ್ಧಾಂಗಿಯಾಗಿ, ಕರುಳು ಬಳ್ಳಿಯ ಬೆಳೆಸಲು ಬರುವ ಜೀವವೊಂದನ್ನು ಕುರಿತು ನನ್ನಲ್ಲಿ ಹುಟ್ಟಿದ ಸಾಲುಗಳಿವು-
ಬಯಕೆಗಳ ಉಸಿರು
ಬಿಗಿಹಿಡಿದು
ತಲ್ಲಣಗಳ ದನಿಯಾಗಿ
ಕರುಳಬಳ್ಳಿಯ ಬೇರಿಗೆ
ಹೀರುವ ಸವಿ ಸಾರವಾಗಿ
ವಾತ್ಸಲ್ಯದ ತಣಿಯನೆರೆದು
ತಣ್ಣನೆ ಬಸಿಬಸಿದು 
ಹಸಿದ ಒಡಲ ಜೇನಾಗಿ
ಏಕೆ ಹೆಸರು ನಿನಗೆ
ಬರಿದಾಗುವ  ವಿಶಾಖಿ
ಮಮತೆಯ ಗೂಡಿನಲ್ಲಿ
ಹಸಿರು ತ್ಯಾಗವ ಹಾಸಿ
ಉಸಿರ ಬಿಸಿಯ
ಹೊರಹಾಕುತ
ಬಯಸಿದವರ ಬೆಚ್ಚಗಿಡುವ 
ನೀ ಮಾಯಿ ಹೆಮ್ಮರ
ತಾಯಿ ನೀನು ಅಜರಾಮರ
ಬಿಗಿದಪ್ಪುವ ನೋವುಗಳಿಗೆ
ಸಾಂತ್ವನದ ಕೊರಳೊಡ್ಡಿ
ನೆಪ ಹೇಳದೆ ನಗುವಾಗಿ
ಬಯಸಿ ಬಂದ 
ಮಗುವಿನಂತೆ
ಚೈತನ್ಯದ ಮಡುವಾಗಿ
ಬೆಂಕಿಯ ಬಲೆಯಲ್ಲಿ
ಆನಂದದ ಹೊಳೆ ಹರಿಸುವ
ಜಲಧಾರಿಣಿ ಓ ಮಾನಿನಿ
ತನ್ನ ಮಮತೆಯ ಮಡಿಲು ಹಿಡಿದು, ಎಲ್ಲ ನೋವುಗಳನ್ನು ಮರೆತು ತನ್ನವರೆನ್ನುವ ಎಲ್ಲರನ್ನೂ  ಕಾಪಿಡುವ ಆ ಪರಿಯೇ ಹೃದಯಂಗಮಯ."ಹರಿವ ಹೊಳೆಯೊಳಗೆ, ಮೊರೆವ ಅಲೆಗಳೊಳಗೆ, ಜಗದ ಸಚರಾಚರ ಜೀವಗಳೊಳಗೆ ಬದುಕಿನ ವ್ಯಾಪಾರಕ್ಕೆ ಕಾರಣವಾದ, ಕಣ್ಣೀರ ಹನಿಗೂ, ಹವಳದಾ ಕುಡಿಗೂ,  ಜೀವಧಾರೆಯಾಗುವ ಆ ಶಕ್ತಿಯನ್ನು 'ಅವಳು' ಎನ್ನಬೇಕೆ?" ಎಂದು 'ಅವಳ'ನ್ನು ಮತ್ತೆ ನಮ್ಮಲ್ಲಿ  ಮೂಡಿ, ಎಂದೆಂದಿಗೂ ಉತ್ತರಿಸಲಾಗದೇ  ಉಳಿಯುವ ಪ್ರಶ್ನೆಯಾಗಿ ನಮ್ಮ ಮುಂದಿಡುತ್ತಾರೆ. ಪುರಂದರದಾಸರು ಹೇಳುವಂತೆ
" ಶೃಂಗಾರದ ದೇಹವೆಲ್ಲಾ
ಅಂಗ ಮುರಿದು ಬೀಳುವಾಗ
ಕಂಗಳಿಗಾತ್ಮ ಸೇರಿದಾಗ
ಧ್ಯಾನ ಒದಗದೋ
ರಂಗನ ಧ್ಯಾನ ಒದಗದೋ"
ಶೃಂಗಾರ ವೆಂಬ ಮಾಯಾ ಜಿಂಕೆಯ ಬೆನ್ನು ಹತ್ತಿ ಬೆಡಗಿನ ಲೋಕದ ಬಿನ್ನಾಣದಲ್ಲಿ ನಮ್ಮನ್ನು ನಾವು ಕಳೆದುಕೊಂಡು ಮೈಮನಕೆ ಮುಪ್ಪಡರಿದಾಗ ದೇವನ ಧ್ಯಾನದೊಳು ಪೊಗುವೆನೆಂದರೆ, ಸಮಾಧಿಯಾಗುವ ಮುಸ್ಸಂಜೆಯ ಹೊತ್ತಿನಲ್ಲಿ ಉದ್ಧಾರದ ಅಂಬರಕ್ಕೇರುವ ಹುಸಿ ಕನಸುಗಳನ್ನು ಕಟ್ಟಿದಂತಾಗುತ್ತದೆ . ಶೃಂಗಾರದ ಮಾಯೆಯಲ್ಲಿ, ಸಾತ್ವಿಕವಾಗಿಯೇ ಬದುಕಬೇಕೆಂದು ನಿರ್ಧರಿಸಿ,  ಜೀವನದ ತಿರುವುಗಳಲ್ಲಿ ಗೊತ್ತಿಲ್ಲದೆ  ಜಾರಿ ಹೋದ 'ಜಾನಕಿ'ಯರಂತಹ  ಸಾಕಿಯರ ಹಣೆಬರಹವನ್ನು ದಾಸರ ಈ  ಸಾಲುಗಳು ಮನೋಜ್ಞವಾಗಿ ಬಣ್ಣಿಸುತ್ತವೆ. ದಾಸರು ಹೇಳಿದ ಶೃಂಗಾರದ ಶಾಶ್ವತವಲ್ಲದ ನಿಸ್ಸಾರತೆಯನ್ನು ಓದಿದ ನನಗೆ ಹೀಗೆ ಹಾಡಬೇಕೆನಿಸುತ್ತಿದೆ-
"ಜಗವಿದು ರಂಗನ ರಂಗ
ಪಾತ್ರಧಾರಿಗಳು ನಾವು
ಕುಣಿಯಬೇಕು ಕುಣಿಸಿದಂತೆ
ಬೆಳಗಬೇಕು ನೀಲಾಗಸದಲಿ 
ಬದುಕು ಬಿಡಿಸುವ 
ರಂಗು ರಂಗಿನ
ಕಾಮನಬಿಲ್ಲಿನಂತೆ...."
ಸಿನಿಮಾ ರಂಗದ ಕಲ್ಪನೆಯ ಬೆಳಕಿನಲ್ಲಿ, ಕಷ್ಡಪಟ್ಟು ತನ್ನಲ್ಲರಳಿದ ಕಲಾ ಪ್ರತಿಭೆಯಿಂದ ಚಿತ್ರರಂಗದ ಕೆಲವು ದಿಗ್ಗಜರ ಬೆರಳು ಹಿಡಿದು ಬಹದೂರ ಸಾಗಿ, ಯಶಸ್ಸಿನ ಉತ್ತುಂಗಕ್ಕೇರಿ, ಮತ್ತೆ ರಂಗಭೂಮಿಯ ಕಡೆಗೆ ಹೆಜ್ಜೆ ಹಾಕಿ ಬದುಕಿನ ಬವಣೆಗಳ ತಾಪಕ್ಕೆ ಮಂಜುಗಡ್ಡೆಯಾಗಿ ಕರಗುತ್ತಲೇ ಮಿನುಗಿ  ಮಾಯವಾದವಳು ಮಿನುಗುತಾರೆ ಕಲ್ಪನಾ. ಅಪ್ಪಟ ವೃತ್ತಿಪರ ಕಲಾವಿದೆಯೊಬ್ಬಳು ಏರಬೇಕಾದ ಎತ್ತರವನ್ನೇರಿಯೂ, ಜೀವನ ಕಷ್ಟವಾದಾಗ ಮರಳಿ ಬಂದು ಬಸವರಾಜ ಗುಡಗೇರಿಯವರೊಂದಿಗೆ ರಂಗಭೂಮಿಯ ಕಲಾವಿದೆಯಾಗಿ ಹಾಡಿ ಕುಣಿದವಳು; ಬದುಕು ಇಷ್ಟೊಂದು ಅನಿಶ್ಚಿತವೆ ಎಂಬ ಕಲ್ಪನೆಯೂ ಬಾರದಂತೆ ಬದುಕನ್ನು ಬಂದಂತೆ ಸ್ವೀಕರಿಸಿದವಳು; ಕಲಾಲೋಕದ  ಶರಪಂಜರದಲ್ಲಿ, ಹೊಳೆಯುವ ಬೆಳ್ಳಿಮೋಡದ ಗೆರೆಗಳನ್ನು ಕಾಣುತ್ತಲೇ, ಸಿನೆಮಾ ಹಾಗೂ ರಂಗಭೂಮಿಯೆಂಬ  ಎರಡು ಕನಸು ಕಂಡು, ಚಿನ್ನದ ಗೊಂಬೆಯಾದವಳು  ಕಲ್ಪನಾ. ಪಂತಲು ರವರ 'ಸಾಕುಮಗಳು' 'ಸೀತೆ'ಯಾಗಿ 'ಬಂಗಾರದ ಹೂ' ಮುಡಿದು  ಕಲ್ಪನೆಯ 'ಬಯಲು ದಾರಿ' ಸವೆಸಿ ಬದುಕಿನಲ್ಲಿ 'ಸೋತು ಗೆದ್ದವಳು';ಕಾವ್ಯ ಛಂದಸ್ಸಿನ ಏರಿಳಿತದಂತೆ ಬದುಕಿ  ಕೊನೆಗೆ ಕವಿತೆಯಾಗಿ ಪುಟಗಳಲ್ಲಿ ಸೇರಿ ಹೋದವಳು. ಪುಟ್ಟಣ್ಣ ಕಣಗಾಲ್ ರಂತಹ ಅತ್ಯಾಪ್ತ ಮಾರ್ಗದರ್ಶಕರ ಗರಡಿಯಲ್ಲಿ  ಧೃವತಾರೆಯಾಗಿ ಬೆಳೆದ ಜೀವವೊಂದು ಗೋಟೂರಿನ ಬಂಗಲೆಯಲ್ಲಿ ಉಂಗುರದ ವಜ್ರ ಕುಡಿದು ತಣ್ಣಗೆ ಮಲಗಿತ್ತು ಎಂದರೆ ಜಗತ್ತು ನಂಬಲಾಗಲಿಲ್ಲ. ಸತ್ಯವಾಗಿತ್ತು ಆಕೆ ಬದುಕಿನ ತಿರುವಿನಲ್ಲಿದ್ದಳು ಎಂಬುದು; ಸತ್ಯವಾಗಿತ್ತು ಆಕೆಗೆ ಬದುಕು ಕೊನೆಗಾಲದಲ್ಲಿ ಸಹಿಸಲಾಗದ ಸಂಕಟಗಳನ್ನು ನೀಡಿತ್ತು ಎಂಬುದು. ರಾಗಂರವರು 
"ಕಣ್ಣೀರ ಮಳೆಯೊಳಗೆ
ಎದೆಯ ಉರಿ ಹೊಳೆಯೊಳಗೆ
ಬಳಗ ಚೆಲ್ಲಿದ ಬದುಕು
ಕೊಚ್ಚಿ ಹೋಗಿದ್ದಕ್ಕಾಗಿ
ನಾನು ಸಾಯುತ್ತೇನೆ" 
ಎಂದು ಕಲ್ಪನಾಳ ಸಾವನ್ನು ಕವಿತೆಯ ಅಚ್ಚಿನಲ್ಲಿ ಎರಕ ಹೊಯ್ದಿದ್ದಾರೆ. ಬದುಕು ಹೋಗೆಂದ ಕಡೆ ಹೋದ  ಕಲ್ಪನಾ ಬರೆದ ಮರಣ ಪತ್ರದಲ್ಲಿನ ಸಾಲುಗಳಿವು-
'ಬದುಕು ಜಟಕಾ ಬಂಡಿ
ವಿಧಿಯದರ ಸಾಹೇಬ
ಮದುವೆಗೋ ಮಸಣಕೋ
ಹೋಗೆಂದ  ಕಡೆ ಹೋಗು
ಮಂಕುತಿಮ್ಮ"
ಹೀಗೆ ಓದುತ್ತಾ ಹೋದಂತೆ ನಮ್ಮನ್ನು ಕತೆಯ ಆವರಣದೊಳಗೆ ಎಳೆದುಕೊಂಡು ನಮ್ಮನ್ನಾವರಿಸಿಕೊಳ್ಳುವ ಅಪರೂಪದ ಕೃತಿ. ರಾಗಂ ರವರ ಕಾವ್ಯಭಾಷೆ ಗದ್ಯಕ್ಕೊಂದು ಸಂಗೀತದ ಸ್ಪರ್ಶವನ್ನು ನೀಡಿದೆ.ಇಲ್ಲಿಯ ಶಬ್ದಗಳು ರಾಗಂ ರವರು ಕುಣಿಸಿದಂತೆ ಕುಣಿಯುತ್ತವೆ; ಮಣಿಸಿದಂತೆ ಮಣಿಯುತ್ತವೆ; ತೇಲಿಸಿದಂತೆ ತೇಲುತ್ತವೆ; ಹಕ್ಕಿಯಂತೆ ಹಾರುತ್ತವೆ. ಸಹೃದಯರನ್ನು ಕೈಹಿಡಿದು ಕರೆದೊಯ್ಯುತ್ತವೆ. ಇಲ್ಲಿ ಬರುವ ಕತೆಗಳು ನಿಜ ಜೀವನದಲ್ಲಿ ಲೇಖಕರು ಕಂಡ ಜೀವಂತ ದಂತಕಥೆಗಳೇ ಆಗಿರುವುದರಿಂದ ಸಹೃದಯರಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸುತ್ತವೆ. ಸ್ವತಃ ಲೇಖಕರೇ ನಮ್ಮ ಕಣ್ಣೆದುರಿಗೆ ನಿಂತು ಸಂವಾದ ನಡೆಸುತ್ತಾ ಈ ಘಟನೆಗಳನ್ನು ಮೆಲುಕು ಹಾಕುತ್ತಿರುವರೇನೋ  ಎಂಬಂತೆ ಕತೆಗಳು ಆರ್ದ್ರವಾಗಿ ಆಪ್ತವಾಗಿ ನಿರೂಪಿತವಾಗಿರುವುದು ವಿಶೇಷ. ಇಲ್ಲಿ ಬಯಲಾಗಿರುವ ಸಾಕಿಯರನ್ನು ಓದುವಾಗ, ಹಿನ್ನೆಲೆಯಾಗಿ ತಕ್ಕ ಲಯದ ಗದ್ಯಸಂಗೀತವೊಂದು ಶಬ್ದಗಳ ನಾದದೊಂದಿಗೆ ಹೊರಟು ಅಲೆಅಲೆಯಾಗಿ ತೇಲಿಬಂದು ಕತೆಯ ಘಟನೆಗಳನ್ನು ದೃಶ್ಯಕಾವ್ಯಗಳನ್ನಾಗಿ ಪರಿವರ್ತಿಸುತ್ತವೆ. ಶಬ್ದಗಳು ರಾಗಂರವರ ಲೇಖನಿಯೆಂಬ ಕುಂಚದಲ್ಲಿ ಕಲಾಕೃತಿಗಳಾಗಿವೆ; ಕಣ್ಣ ಮುಂದಿನ ದೃಶ್ಯಗಳಾಗಿವೆ. ಕಾಲ್ಪನಿಕ ಕತೆಗಳಿಗಿಂತ  ನೈಜ ಬದುಕುಗಳನ್ನು ಕತೆಯಾಗಿ ಹೆಣೆಯುವುದು  ಬಲು ಸಾಹಸದ ಸಂಗತಿ. ಲೇಖಕರು ಸವಾಲಾಗಿ ಸ್ವೀಕರಿಸಿ, ಆ ಸಾಹಸ ಮೆರೆದಿದ್ದಾರೆ. ನೆಲದ ಮರೆಯ ನಿದಾನದಂತೆ ಎಲ್ಲೋ  ಅರಳಿ, ಎಲ್ಲೋ ಪರಮಳ ಬೀರಿ ಮತ್ತೆಲ್ಲೋ ಕಾಯಿಯಾಗಿ, ಹಣ್ಣಾಗಿ,ಬೀಜವಾಗಿ ಕೊನೆಗೆ  ಮಣ್ಣಲ್ಲಿ ಮಣ್ಣಾಗುವ ಗಟ್ಟಿಗಿತ್ತಿ, ಭಂಡ, ದುರಂತ ಸಾಕಿಯರನ್ನು ಕಣ್ಣ ಮುಂದೆ ಸಾಲಾಗಿ ನಿಲ್ಲಿಸಿ, ಒಬ್ಬೊಬ್ಬರನ್ಬಾಗಿ ಕರೆದು ಅನಾವರಣಗೊಳಿಸುವ  ಅತ್ಯುತ್ತಮವಾದ ದಾಖಲೆಯಾಗಿದೆ ಈ ಕೃತಿ. ತಮ್ಮ ನೆಲಕ್ಕಂಟಿ ಬದುಕಿ,ನೊಂದು, ಬೆಂದು,ಸವೆದು, ತೆವಳಿದರೂ ಸೋಲು ಬಿಟ್ಟುಕೊಡದ  ಈ ಸಾಕಿಯರ  ಜೀವನೋತ್ಸಾಹದ ಪರಿ ಅದಮ್ಯವಾದುದು. ರಾಗಂರವರು  ಜೀವನಸಾಗರದಲ್ಲಿ ಮಳೆಹನಿಗಳಾಗಿ ಕರಗಿ ಮರೆಯಾಗಬೇಕಾಗಿದ್ದ  ಈ ಸಾಕಿಯರನ್ನು ತಮ್ಮ ಕತೆಗಳ ಚಿಪ್ಪುಗಳಲ್ಲಿ ಹಿಡಿದು ಬೆಳಕಿನ ಮಣಿಗಳನ್ನಾಗಿಸಿದ್ದಾರೆ; ತಮ್ಮನ್ನು ಸುಟ್ಟುಕೊಂಡು ಜಗಕೆ ಬೆಳಕು ಬೀರುವ ಜ್ಯೋತಿಗಳನ್ನಾಗಿಸಿದ್ದಾರೆ. ಹೆಸರಿಲ್ಲದಂತೆ ಸಮಾಧಿಯಾಗಿ ಹೋದ ಜೀವಗಳನ್ನು ಮೇಲೆತ್ತಿ ರಕ್ತಕಣ್ಣೀರಿನ  ಕಲಾಮೂರ್ತಿಗಳನ್ನಾಗಿ ಕೆತ್ತಿ  ನಿಲ್ಲಿಸಿದ್ದಾರೆ. ಬದುಕಿನ ಮತ್ತೊಂದು ಆಯಾಮವನ್ನು ದರ್ಶಿಸುವಂತೆ ಮಾಡುವ ಈ ಕೃತಿ ಸಮಾಜದ ನಿಗೂಢ ಸತ್ಯಗಳನ್ನು  ತೆರೆದಿಡುತ್ತದೆ. ಆದರ್ಶಗಳ ಬೆನ್ನುಬಿದ್ದು ಉಪದೇಶ  ಮಾಡುವ ನಮಗೆ ಈ ಸಾಕಿಯರ ಬದುಕುಗಳೇ ಜೀವನ ಪಾಠವಾಗಲಿಕ್ಕೆ ಸಾಕು.
ಈ ಕೃತಿಯಲ್ಲಿ ನನ್ನನ್ನು ಸೆಳೆದ ಮತ್ತೊಬ್ಬ ದುರಂತ ಭಾವದೊಡತಿಯೆಂದರೆ , ಭಾರತೀಯ ಚಿತ್ರರಂಗದ ಅಂದಕಾಲತ್ತಿನ ಅನಭಿಷಕ್ತ ರಾಣಿಯಾಗಿ ಅಕ್ಷರಶಃ ಸಿನೆಮಾ ಸಾಮ್ರಾಜ್ಯವನ್ನಾಳಿ,
ಹುಚ್ಚು ಪ್ರೇಯಸಿ ನಾನು 
ರಾತ್ರಿ ಕಳೆಯುತ್ತೇನೆ
ದುಃಖ ನನ್ನ ವೈರಿ,
ದುಃಖವೇ ಹಂಬಲ ಈ 
ಹೃದಯಕೆ ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ"
ಎಂದು ಹಾಡಿ ಬರೆದು ಈ ಕವಿತೆಯೊಳಗಿನ ಪ್ರಿಯತಮೆಯಾದ ಮೀನಾಕುಮಾರಿ ಅಲಿಯಾಸ್ ಮುನ್ನಿ ಅಲಿಯಾಸ್ ಮಜಹಬೀನ್ ಜಗತ್ತಿನ ನಶೆಯೆಲ್ಲಾ ತನ್ನೊಳಗೇ ಇಳಿಯಬೇಕೆಂದು  ಹೀರಿ ಮದಿರೆಯೊಳಗಿನ ಮಧುವಾದ ಮೀನಾಕುಮಾರಿ ಬಣ್ಣ ಹಚ್ಚಿದ್ದು ತನ್ನ ಏಳನೇ ವಯಸ್ಸಿನಲ್ಲಿ. ಕಿತ್ತು ತಿನ್ನುವ ಬಡತನವೆಂಬ ಹಂತಕ ಹದ್ದಿನ ಕೆಂಗಣ್ಣುಗಳಿಗೆ ಗುರಿಯಾಗಿ, ಬಣ್ಣದ ಬದುಕೆಂದರೆ ಏನೆಂದೂ ಅರಿಯದ ಎಳೆಯ ಬಾಲ್ಯದಲ್ಲಿಯೇ, ಕೆಲವಾರು ಸಿನೇಮಾಗಳಲ್ಲಿ ನಟಿಸಿ ಬಾಲಕಲಾವಿದೆಯಾಗಿ ಗುರ್ತಿಸಿಕೊಂಡವಳು. ಈಕೆ ಲೇಖಕರೇ ಅಕ್ಷರಿಸಿದಂತೆ
ಗೊಂಬೆಯೊಳಗೊಣ ಗೊಂಬೆ
ಗೊಂಬೆಯೊಳಗಣ ಗೊಂಬೆ
ಗೊಂಬೆಯೊಳಗಣ ಗೊಂಬೆಯಾಗಿದ್ದವಳು. 
"ಮಾನವಸಂಬಂಧಗಳ ಭೀಷ್ಮ"ನೆಂಬ ಖ್ಯಾತಿಯ ಕೆ. ಎ. ಅಬ್ಬಾಸರು ಈಕೆಗೆ ವಿದೇಶದಿಂದ  ತಂದುಕೊಟ್ಟ ಗೊಂಬೆಗೆ ಪ್ರೀತಿಯ ಪ್ರಾಣ ಕೊಟ್ಟು ಮುದ್ದಿಸಿದವಳು. ಗೊಂಬೆಗಳೊಂದಿಗೆ ಆಟವಾಡಿ ಸಂಭ್ರಮಿಸಬೇಕಾಗಿದ್ದ ಬಾಲ್ಯವನ್ಜು ಪರದೆಯ ಮೇಲೆ ಗೊಂಬೆಯಾಗಿ ನಟಿಸಿ ಕಳೆದುಕೊಂಡ ದುರ್ದೈವಿ. ಬಾಲ್ಯದಲ್ಲಿ ಜೊತೆಯಾಗದ ಗೊಂಬೆಯೆಂದರೆ ಅವಳಿಗೆ ಪಂಚಪ್ರಾಣವಾಗಿತ್ತು.ಅದಕ್ಕಾಗಿ ಮನೆಯಲ್ಲೊಂದು ಗೊಂಬೆಗಳ ಮ್ಯುಸಿಯಂನ್ನೇ ನಿರ್ಮಾಣ ಮಾಡಿದ್ದಳು. ಕಮಲ್ ಅಮ್ರೋಹಿ ನಿರ್ದೇಶನದ ಬಿಜುಬಾವ್ರಾ, ಪರಿಣಿತಾ ,ಗುರುದತ್ತ ನಿರ್ದೇಶನದ ' ಸಾಹಿಬ್ ಬೀಬಿ ಔರ್ ಗುಲಾಮ್' ಹಾಗೂ ' ಕಾಜಲ್' ಸೇರಿದಂತೆ ೩೯ ವರ್ಷಗಳಲ್ಲಿ ಆಕೆ ನಟಿಸಿದ ಚಿತ್ರಗಳ ಸಂಖ್ಯೆ ಬರೋಬ್ಬರಿ ೭೦ ಎಂದರೆ ಆಕೆಯಲ್ಲಿರುವ ಕಲಾವಿದೆಯ ಸೆಳೆತವನ್ನು ಅರ್ಥಮಾಡಿಕೊಳ್ಳಬೇಕು. 'ಬದುಕೆಂದರೆ ಸಿನೇಮಾ, ಸಿನೇಮಾ ಎಂದರೆ ಬದುಕು' ಎಂದೇ ಜೀವಿಸಿದವಳು.
"ನಾ ಹೇಗೆ ಬದುಕುವೆ 
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ..."
ಎಂಬ ಅವಳ ವೇದನೆ ಯಾರಿಗೂ  ಕೇಳಿಸದೇ ಹೋಯಿತು. ಇವಳನ್ನು ಕೇವಲ  ಕಲಾವಿದೆಯಾಗಿ ಕಲಾರಾಧಕಳಾಗಿ ಕಂಡ ಜಗತ್ತು ಸ್ವತಃ ಜೀವಂತ ಕವಿತೆಯಾಗಿದ್ದ  ಈಕೆಯ ಕವಯಿತ್ರಿಯ ಮನಸ್ಸನ್ನು ಅರಿಯದೆ ಹೋಯಿತು. ಹೀಗೆ ನಟಿಸಿ, ಕುಡಿದು ಇತಿಹಾಸದ ಪುಟದೊಳಗಿನ  ಕವಿತೆಯಾಗಿ  ಮರೆಯಾದ ಮೀನಾಕುಮಾರಿಯ ಬದುಕು ಕಡುಕಷ್ಟಗಳಿಗೂ ಬಂಡೆಯಂತೆ ನಿಲ್ಲುವ ಗೊಂಬೆಯಂತಾಗಿತ್ತು. ತನ್ನದೇ ಕವಿತೆಯೊಳಗಿನ ಕವಿತೆಯಾಗಿ ಸಾವನ್ನೇ ನಶೆ ಎಂದು ಆಹ್ವಾನಿಸಿದ  ಮೀನಾಕುಮಾರಿ ಈ ಹೊತ್ತಿನಲ್ಲಿ ನಮ್ಮನ್ನು ನೋಡಿ ಧೃವತಾರೆಯಾಗಿ ನಗುತ್ತಿರಬೇಕು ಎಂದೆನಿಸುತ್ತದೆ.
"ಇಹವ ತೊರೆದವಳೊಂದಿಗೇನು
ಎಂದು, ಮನಸ್ಸಿಲ್ಲದೆ ಮಾತಿಗಿಳಿದೆ
ಮುಸಲಧಾರೆಯಂತೆ ಬಂದವು
ದಡಬಡಿಸಿ ಹೋದವಳ
ನೆನಪು ಮರುಕಳಿಸಿದವು"
ಜೀವನದ ಸಂತೆಯಲ್ಲಿ  ಮಕ್ಕಳ ಹೊಟ್ಟೆಗೆ ಹಿಟ್ಟು ಹುಡುಕುವ, ಬಡತನವೆಂಬ ಮಾರಿಗಾಗಿ ತನ್ನ ಸೆರಗಿನ ಕಷ್ಟಗಳನ್ನು  ಶೆರೆಯ  ಗುಂಗಿನಲ್ಲಿ ಅನುಭವಿಸುತ್ತಾ ಜನರ ಬಾಯಿಗೆ ತುತ್ತಾಗಿ ಹಳ್ಳದ ದಂಡೆಯ ಹೆಣವಾದ ಗಂಗವ್ವಳನ್ನು ಕುರಿತು ಲೇಖಕರ ಸಾಲುಗಳಿವು. ನಿಜ.ಲೇಖಕರಾದ ರಾಗಂರವರು ನೆಲಮೂಲ ಸಂಸ್ಕೃತಿಯ ಬೇರುಗಳಾಗಿ  ಆಳಕ್ಕಿಳಿದು ಬದುಕುತ್ತಾ,ಬಾಳಪಯಣದಲ್ಲಿ  ಹೆಸರಿಲ್ಲದ  ಹೂಗಳಂತೆ ಎದುರಾದ ಸಾಕಿಯರೊಂದಿಗೆ  ಮುಖಾಮುಖಿಯಾಗುತ್ತಾರೆ. ಅವರ ಎದೆಯ ಭಿತ್ತಿಯೊಳಗೆ ಅವಿತಿರುವ ನೋವುಗಳ ಚಿತ್ತಾರಗಳನ್ನು ಅಕ್ಷರಗಳ ಕುಂಚದಲ್ಲಿ ಮೇಲಿನಂತೆ ಬರೆಯುತ್ತಾರೆ. ಅಲಿ ಸರ್ದಾರ್ ಜಾಫ್ರಿಯವರ
"ಒಂದು ಕ್ಷಣ, ನೀನು ಬೆಂಕಿ, 
ಮತ್ತೊಂದು ಕ್ಷಣ ಇಬ್ಬನಿ
ನೀನು ವಜ್ರ,ಒಮ್ಮೆ ದೇವತೆ,
ಮತ್ತೆ ಪುನಃ ಶಿಲಾಮೂರ್ತಿ" 
ಎಂಬ  ಮಾತುಗಳನ್ನು ಉಲ್ಲೇಖಿಸುವ ಲೇಖಕರು ಮಾತಿಗೆ ಸೋತವಳನ್ನು ಮಾತಾಗಿಸುತ್ತಾರೆ; ಕಾವ್ಯದಲ್ಲಿ ಸೋತವಳನ್ನು ಗದ್ಯವಾಗಿಸುತ್ತಾರೆ; ಗದ್ಯದಲ್ಲಿ ಸೋತವಳನ್ನು ಪದ್ಯವಾಗಿಸುತ್ತಾರೆ; ಚಾರಿತ್ರ್ಯದಲಿ ಸೋತವಳನ್ನು ಚರಿತ್ರೆಯಾಗಿಸುತ್ತಾರೆ; ಪದಗಳಿಗೂ ಸೋತವಳನ್ನು ನಮ್ಮೆದೆಯೊಳಗಿನ ಭಾವವಾಗಿಸುತ್ತಾರೆ; ಬದುಕಾಗಿ ಸೋತವರನ್ನು ತಮ್ಮ ಮಾಂತ್ರಿಕ ಲೇಖನಿಯಲ್ಲಿ ಅಮರವಾಗಿಸುತ್ತಾರೆ."ಬಾಳಿನ ದಾರಿಯಲ್ಲಿ ಬೆಳಕಿದ್ದವರ ಬೆನ್ನುಹತ್ತಿ ಬಹಳಷ್ಟು ಹೆಂಗಸರು ಬರುತ್ತಾರೆ.ಬಂದವರು ಮೈಯಲ್ಲಿ ಮುಳುಗಿ, ಮಾತಲ್ಲಿ ಅರಳಿ,ಮತ್ಯಾವುದೋ ವಿನಾಕಾರಣಕ್ಕೆ ಕೆರಳಿ, ಇದುವರೆಗಿನ ಈ ಬದುಕೇ ಸುಳ್ಳು ಎನ್ನುವಂತೆ ಎಲ್ಲ ಕಿತ್ತೆಸೆದು ಹೊರಟು ಹೋಗುತ್ತಾರೆ. ಕೆಲವೇ ಕೆಲವರು ಮಾತ್ರ ಹಳೆಯ ಹಾಡಿನಂತೆ, ಗಂಟೆಯ ರಿಂಗಣದಂತೆ,ಮಧುರವಾಸನೆಯಂತೆ ಅವರ ನಿರ್ಗಮನದ ನಂತರವೂ ಉಳಿದುಬಿಡುತ್ತಾರೆ.
ಇಂಥವರ ನೆನಪೆಂದರೆ ಹುಚ್ಚು ಹುಚ್ಚಾಗಿ ಕೆನ್ನೆ ಕಚ್ಚುವ ಕೂಸಿನ ಮಾತೇ ಅಲ್ಲವೇ?"ಎಂದು ಅವಳು ಕುರಿತು ಹೃದಯದಾಳಕ್ಕಿಳಿಯುತ್ತಾರೆ ರಾಗಂರವರು. ಸಾಕಿಯನ್ನು ಬರಹಕ್ಕಿಳಿಸುವಾಗ ಲೇಖಕರು ಬಹುದೂರದ ವ್ಯರ್ಥ ಅಲೆದಾಟಕ್ಕೆ ತೊಡಗದೇ ತಮ್ಮ ತಲೆ ನೇವರಿಸಿ ಕೈ ಸೋಕಿಸಿ ನೆತ್ತಿ ಕಾದ  ಅವರ ಅಜ್ಜಿ ಕಾಶೀಬಾಯಿಯನ್ನೇ ಕರೆತರುತ್ತಾರೆ. ಹೀಗೆ ನಮ್ಮ ದೇಶದ ಚರಿತ್ರೆಯೆಂಬ ನೀಲಾಗಸದಲ್ಲಿ  ಮಿನುಗುತಾರೆಗಳಾಗಿ ಬೆಳಗಬೇಕಾಗಿದ್ದ ಸಾಕಿಯರ ದುರದೃಷ್ಟಕರ, ದುರಂತ ಬದುಕುಗಳನ್ನು ಲೇಖಕರಾದ ರಾಗಂ ರವರು  ಅರ್ಥಪೂರ್ಣವಾಗಿ  ಕಟ್ಟಿಕೊಟ್ಟಿದ್ದಾರೆ. ಸದಾ  ಆದರ್ಶ  ಜೀವನಗಳತ್ತಲೇ ನೋಟ ಬೀರುವ ಸಮಾಜದ ದೃಷ್ಟಿಕೋನವನ್ನು ದುರಂತದ ವಾಸ್ತವಿಕ  ಬದುಕುಗಳ ಕಡೆಗೂ  ಅಷ್ಟೇ ಪ್ರೀತಿಯಿಂದ ಹರಿಸಬೇಕಾದ ಅವಶ್ಯಕತೆಯಿದೆ ಎಂಬ ಕಾಳಜಿ ರಾಗಂರವರದು. ಸಾಕಿಯರ ಜೀವನದ  ಕತ್ತಲೆ ಬೆಳಕುಗಳನ್ನು ಅನಾವರಣಗೊಳಿಸುತ್ತಲೆ ಕಟ್ಟಿದ ಕಪ್ಪುಬಿಳುಪಿನ ದೃಶ್ಯಕಾವ್ಯವಿದು. ಆದರ್ಶದ ಬೆಳಕಿನಲ್ಲಿ ಕಪ್ಪು ಕಲೆಗಳಿಂದ ಮರೆಯಾಗಿ ಹೋಗಬೇಕಾಗಿದ್ದ ವ್ಯಕ್ತಿತ್ವಗಳನ್ನು  ಸಾಹಿತ್ಯದ ಬೆಳಕಿನಲ್ಲಿ ಮತ್ತೆ  ಪ್ರಕಾಶಿಸುವಂತೆ ಮಾಡಿದ್ದಾರೆ. ಲೇಖಕರು ಸಮಾಜವನ್ನು ನೋಡುವ ದೃಷ್ಟಿಯೇ ವಿಭಿನ್ನ ಎಂಬುದಕ್ಕೆ ಈ ಕೃತಿ ನಿದರ್ಶನವಾಗಿದೆ. ಈ 'ಅವಳು' ಕುರಿತು ಎಷ್ಟು ಬರೆದರೂ, ಎಷ್ಟು ಭಾಷಣ ಮಾಡಿದರೂ ಅವಳೊಂದು ಬರಿ ಮಾತಿಗೆ ದಕ್ಕದ ಎಂದೆಂದಿಗೂ ಮುಗಿಯದ ಅಧ್ಯಾಯ. ಏಕೆಂದರೆ ಅವಳು ಮೇಲೆ ಹೇಳಿದಂತೆ ಹರಿಯುವ ನದಿ; ಉಕ್ಕುವ ಕಡಲು; ಬೆಳಗುವ ನಂದಾದೀಪ; ಅಂತ್ಯವಿಲ್ಲದ ಅನಂತ; ಕೈಗೆಟುಕುವಂತೆ ಕಾಣುವ ನಿಲುಕದ ನಕ್ಷತ್ರ; ಸೀಮಾತೀತ ನಭೋಮಂಡಲ. ರಾಗಂರವರು  "...ನಾನು ಅವಳನ್ನು ಕುರಿತು ಏನೆಲ್ಲ ಬರೆದೂ ವಿಫಲನಾಗಿದ್ದೇನೆ.ಯಾಕೆಂದರೆ, 'ಅವಳು' ಕಾಮನಬಿಲ್ಲಿನಂತೆ,  ಏಳೂ ಬಣ್ಣಗಳನ್ನು ಸೇರಿಸಿ ಕಾಮನಬಿಲ್ಲು ಎಂದು ಕರೆದೆ, ಆದರೆ ಬಣ್ಣ ಬಣ್ಣಗಳು ಸಂಧಿಸಿ ಹೊರಹೊಮ್ಮುವ ಚೆಲುವಿಗೆ ಏನೆಂದು ಹೆಸರಿಸಲಿ? ಮಾತಿಗೆ ಮಾತೆಂದೆ,ಮೌನಕ್ಕೆ ಮೌನ. ಮಾತು ಮತ್ತು ಮೌನಗಳು ಸಂಧಿಸುವ ಸುಮ್ಕಾನಕ್ಕೆ ಯಾವ ಹೊಸ ವ್ಯಾಖ್ಯಾನ ನೀಡಲಿ?  " ಎಂದು ಲೇಖನಿಯ ತುದಿಯಲ್ಲಿ ಹಿಡಿಯಲಾಗದ ಬ್ರಹ್ಮಾಂಡ ಅವಳು ಎಂದು ಮನೋಜ್ಞವಾಗಿ ಬಣ್ಣಿಸುತ್ತಾರೆ ; ಕಾವ್ಯದ ಕ್ಯಾನ್ವಾಸಿನಲ್ಲಿಯೂ ಬಿಡಿಸಲಾಗದ ಭವ್ಯ ಸಂಕೀರ್ಣ ಕಲಾಕೃತಿ ಅವಳು  ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಕವಿತೆಯಾಗಿಯೂ ಅವಳು ಎಷ್ಟು ಅಪೂರ್ಣವೆಂಬುದನ್ನು ಕೆಳಗಿನಂತೆ ನಾನು ಹೀಗೆ ಬರೆಯಬೇಕೆನ್ನಿಸುತ್ತಿದೆ -
"ಹೇಗೆ ಬಿಡಿಸಲಿ ಗೆಳತಿ 
ನಿನ್ನ ಹಂಬಲದ ಗೆರೆಗಳನು
ಮನದ ತುಮುಲರೇಖೆಗಳನು
ಒಲವ ಧಾರೆಗಾವ ಬಣ್ಣ
ಇದೆಯೊ ಬಣ್ಣ ಉಸುರಿಗೆ
ಮಮತೆಗೆಲ್ಲಿಯ ರೂಹು
ವಾತ್ಸಲ್ಯಕ್ಕಾವ ರಂಗು 
ನೀನೆಂದರೆ 
ಸುಳಿಯಲೆಗಳ ಮಹಾಕಡಲು
ಸುಳಿಸುಳಿದು ಬೀಸುವ
ಮಂದಾನಿಲ ಹೇಗೆಂದರೂ
ನೀನೊಂದು ಬರೆದಷ್ಟೂ
ಬಗೆದಷ್ಟೂ ಎಂದಿಗೂ
ಮುಗಿಯದ ಮಹಾಧ್ಯಾಯ".



x

Sunday 2 December 2018

ಸ್ತ್ರೀ ಎಂದರೆ ಅಷ್ಟೇ ಸಾಕೆ....(ಭಾಗ-೧)
          'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂದು ಹೆಣ್ಣು ಪಡೆಯಬೇಕಾದ ಶಿಕ್ಷಣದ ಅವಶ್ಯಕತೆಯ ಬಗ್ಗೆ  ನಾವು ಉದ್ಘೋಷಿಸುವುದಕ್ಕಿಂತ ಅದೆಷ್ಟೋ ಮುಂಚೆಯೇ ಎದೆಯಲ್ಲೊಂದು ಅಕ್ಷರದ ಗಂಧವನ್ನೂ ಸುಳಿಯಗೊಡದ ಆ ಹೆಣ್ಣು ಹಿಮಾಲಯದಂತಹ ಜೀವನಗಳನ್ನು ಮುಗಿಲೆತ್ತರಕ್ಕೆ ಕಟ್ಟಿ ಅಪರಿಮಿತ ಜೀವಗಳಿಗೆ ಬೆಳಕಾಗಿ ಬದುಕಿನ ದಾರಿಗೆ ಚೈತನ್ಯವಾಗಿದ್ದಳು. ಅದೂ ಸಮಾಜದ   ಪಂಡಿತರೆಲ್ಲ ಸೇರಿ ನಿರ್ಮಿಸಿದ ಕಟ್ಟಳೆಗಳ ಸಂಕೋಲೆಯ ಮಧ್ಯೆ ಎಂದರೆ ಹೆಣ್ಣು ಎಂಬ ಜೀವವೊಂದರ ಉಸಿರಾಟವನ್ನು ನಾವಿನ್ನೂ  ಅರಿಯಬೇಕಾಗಿದೆ. "ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ " ಎಂಬ ಉವಾಚವನ್ನು ಮುನಿದ ಹೆಣ್ಣಿನ ಮುಂದೆ ಉಲಿದು ಸಮಾಧಾನ ಪಡಿಸಿ ಮತ್ತೆಂದೂ ತಲೆ ಎತ್ತದಂತೆ ಫಲಭರಿತ ಬಾಳೆಯಂತೆ ಬಾಗಿಸಿ  ನಡೆಸಿಕೊಳ್ಳುವ  ಕಲೆ ಸಮಾಜಕ್ಕೆ ಪಾರಂಪರಿಕವಾಗಿ ಕರಗತವಾಗಿದೆ. ಹೆಣ್ಣೆಂದರೆ ಮೌನ ಹೆಣ್ಣೆಂದರೆ ಸುಮ್ಮಾನ.ಹೆಣ್ಣೆಂದರೆ ಜೀವನದ ಕುಶಲ ಕಲೆಗಾರ್ತಿ, ಹೆಣ್ಣೆಂದರೆ ಬದುಕೆಂಬ ನಾಟಕದ ರಂಗನಾಯಕಿ.ಹೆಣ್ಣೆಂದರೆ ಧೋ ಎಂದು ಸುರಿಯುವ ಬಿರುಮಳೆ;

  ಕೆಲವೊಮ್ಮೆ ಹೆಣ್ಣೆಂ
ದರೆ ಜಿಟಿಜಿಟಿ ಸದ್ದಿನ ಜಡಿಮಳೆ.ಮಗದೊಮ್ಮೆ ಹೆಣ್ಣೆಂದರೆ  ಬದುಕಿನ ಸವಾಲುಗಳ ಕಲ್ಲುಬಂಡೆಗಳ ಮಧ್ಯೆ ನಿಶಾಂತವಾಗಿ ಜಿನುಗುವ ಹಾಲನೊರೆ; ಅವಳೆಂದರೆ ಆಗಸದಲ್ಲಿ ಒಡಮೂಡಿ ಗುಡುಗುವ ಕಾರ್ಮೋಡ.ಅವಳೆಂದರೆ ಕ್ರಮಿಸಲಾಗದ ಬಲು ದೀರ್ಘ ದಾರಿ ಹೀಗೆ ಅವಳು ನಮಗೆ ಎಲ್ಲವೂ ಆಗಿ ಏನೂ ಆಗಿಲ್ಲದಂತೆ ಬದುಕುವ ನಿಸ್ಪೃಹ ಜೀವಿ. ಇತಿಹಾಸದಲ್ಲಿ ಹೆಣ್ಣು ಷಹಜಾನನ ಹೆಂಡತಿಯಾಗಿ ತಾಜಮಹಲಿನ ಗೋರಿಯೊಳಗೆ ಮಲಗಿ ವಿರಮಿಸಿದ ಪ್ರೀತಿಯಾಗಿದ್ದಾಳೆ. ಶ್ರೀಕೃಷ್ಣನ ಹದಿನಾರು ಸಾವಿರ ಮಡದಿಯರಾಗಿ ಶ್ರೀ ಕೃಷ್ಣಮಹಾತ್ಮೆಯ ಝರಿಗಳಾಗಿದ್ದಾರೆ. ಹದಿನಾಲ್ಕು ವರ್ಷಗಳ ಸುದೀರ್ಘ ಕಾಲ ವನವಾಸಗೈದು ರಾವಣನಂತಹವರ ಕೈಯ್ಯಲ್ಲಿ ನರಳಿ ಮತ್ತೆ ಪತಿಯೇ ಪರದೈವವೆಂದು ಶ್ರೀರಾಮನ ಪಾದಕೆರಗಿದ ಸೀತೆಯಾಗಿದ್ದಾಳೆ. ದುಷ್ಯಂತನ ಬಲೆಯಲ್ಲಿ ಸಿಲುಕಿದ ದುಂಬಿಯಂತೆ  ಚಡಪಡಿಸಿ, ಒಡಲೊಳಗೊಂದು ಕರುಳಕುಡಿಯನ್ನಿಟ್ಟುಕೊಂಡು ಬಾಳಭಿಕ್ಷುಕಿಯಾಗಿ ದುಷ್ಯಂತನೆಂಬ ಮಹಾರಾಜನ ಮುಂದೆ ಸೆರಗೊಡ್ಡಿ ನಿಂತ ಶಕುಂತಲೆಯಾಗಿದ್ದಾಳೆ.
   ದ್ರುಪದನೆಂಬ ಮಹತ್ವಾಕಾಂಕ್ಷೆಯ ಚಕ್ರವರ್ತಿಯ ಕೈಯ್ಯಲ್ಲಿನ ಕೈದುವಾಗಿ , ಶಿವಧನಸ್ಸನ್ನು ಹೆದೆಯೇರಿಸಿ ಮುರಿದು ಮೀನಾಕ್ಷಿಗೆ ಗುರಿಯಿಟ್ಟು ಪಾರ್ಥನೊಬ್ಬನೇ ಹೊಡೆದ ಬಾಣವನ್ನು ಕೊರಳ ಮಾಲೆಯಾಗಿ ಧರಿಸಿ, ಪಾಂಡವರೈವರಿಗೂ ಪತ್ನಿಯಾಗಿ, ಸಂತಾನಮಾತೆಯಾಗಿದ್ದೂ ಬಾಲರನ್ನು ಕಳೆದುಕೊಂಡ ಬಂಜೆತನದ ಹುಲ್ಲೆಯಾಗಿ,ಮಹಾ ಸಾಮ್ರಾಜ್ಯದ ಮಹಾಮಹಿಮರಿಂದ ತುಂಬಿದ ಒಡ್ಡೋಲಗದಲ್ಲಿ ಮುಡಿಯನೆಳೆಸಿಕೊಂಡು ಹೆರಳ ನೆರಳಲ್ಲಿ ಮುಖ ಹುದುಗಿಸಿ, ಸೀರೆ ಸೆಳೆವ ಹೆಬ್ಬಾವಿನ  ಕೈಗೆ  ಸಿಕ್ಕ ಮೊಲದಂತೆ ವಿಲವಿಲನೆ ಒದ್ದಾಡಿ, ಅರಚಾಡಿ,ಹೊಟ್ಟೆ ಹೊಸೆದುಕೊಂಡು ಸೋತು ತಲೆಬಾಗಿಸಿದ, ರಾಜಾಧಿರಾಜರ ರಾಣಿಯಾಗಿ ಸಕಲ ಸೌಭಾಗ್ಯಗಳನ್ನು ಪಡೆದಂತಿದ್ದರೂ, ಅನುಭವಿಸದಂತಿದ್ದು ಕೊನೆಗೆ ಧರ್ಮರಾಯನ ಮಾತಿನಂತೆ ಕಾಣದ ಸ್ವರ್ಗದತ್ತ ಹೆಜ್ಜೆ ಹಾಕಿದ ದ್ರೌಪದಿಯಾಗಿದ್ದಾಳೆ. ಕಪಟನಾಟಕ ಸೂತ್ರಧಾರಿಯಾಗಿ ಧರೆಗಿಳಿದ  ಇಂದ್ರನ ತೋಳತೆಕ್ಕೆಯಲ್ಲಿ ಗೊತ್ತಿಲ್ಲದೇ ಮುಖವಿಟ್ಟು ಮಲಗಿ ಕಳೆದ ಸುಖಕ್ಕೆ  ತಾನೇ ಹೊಣೆಯಾಗಿ ತನ್ನದಲ್ಲದ ತಪ್ಪಿಗೆ ದಂಡಿಸಿಕೊಂಡು ಮೂಕ ಶಿಲೆಯಾಗಿ ನಿಂತ ಅಹಲ್ಯೆಯಾಗಿದ್ದಾಳೆ. ಉರಿಯುವ ಜಮದಗ್ನಿಯ ಸತಿಯಾಗಿ ಯಕಃಶ್ಚಿತ ಸಂದೇಹದ ಕಾರಣವಾಗಿ ಕಟುಕನ ಮುಂದೆ ಬಾಗಿದ ಹಸುವಿನಂತೆ, ತಲೆ ತಗ್ಗಿಸಿ ನಿಂತು ಪುತ್ರ ಪರಶುರಾಮನಿಂದ ಕೊರಳಿಗೆ ಕೊಡಲಿಯೇಟು ಹಾಕಿಸಿಕೊಂಡು  ನೆತ್ತರ ಹೊಳೆಯಾಗಿ ಹರಿದ ರೇಣುಕೆಯಾಗಿದ್ದಾಳೆ.
 ಹಿರಣ್ಯಕಶ್ಯಪನ ಪತ್ನಿಯಾಗಿ ಸಹಿಸಲಾರದ ಸಂಕಷ್ಟಗಳನ್ನೆಲ್ಲ ವಿಷದಂತೆ ನುಂಗಿಯೂ ಬದುಕಿದ ಕಯಾದು ಆಗಿದ್ದಾಳೆ ಈ ಹೆಣ್ಣು. ಹೀಗೆ  ಪುರಾಣ ಮತ್ತು ಚರಿತ್ರೆಯ  ಪುಟಗಳನ್ನು  ತಿರುವುತ್ತಾ ಹೋದಂತೆ  ನಮಗೆದುರಾಗುವ  ಸಂಗತಿಗಳೆಲ್ಲ ಹೆಣ್ಣು ಹೇಳುವ ಅರ್ಧ ಸತ್ಯಗಳೇ ಆಗಿವೆ.  ಈ ಸಂಗತಿಗಳೆಲ್ಲ ಮನದ ಮೂಲೆಯಿಂದ ತೂರಿಬರಲು ಕಾರಣವಾಗಿ, ನನ್ನನ್ನು ಇನ್ನಿಲ್ಲದಂತೆ  ಕಾಡಿ ಬಿಡಿಸಲಾಗದ ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕಿದ ಕೃತಿಯೆಂದರೆ ಗುರುಗಳಾದ ಡಾ. ರಾಜಶೇಖರ ಮಠಪತಿ(ರಾಗಂ)ಯವರ  "ಹೆಣ್ಣು ಹೇಳುವ ಅರ್ಧ ಸತ್ಯ".- ಈ ಸಾಕಿಯರ ಕೈ ಸೋಕಿ.....ಇತಿಹಾಸವೆಂಬ ಭೂಗರ್ಭದ ಬೆಂಕಿಯಲ್ಲಿ ಕೊತಕೊತನೆ ಕುದಿಯುತ್ತಿರುವ ರಕ್ತವರ್ಣದ  ಲಾವಾ ರಸವಾಗಿ, ಜಗತ್ತಿನ ಸವ್ಯ ಸಾಕಿಯರು ಅನುಭವಿಸಿದ ತಲ್ಲಣಗಳನ್ನು,ಏರಿಳಿತಗಳನ್ನು,ಸಂಕಟಗಳನ್ನು,ಹಿಂಸೆಗಳನ್ನು, ಸಂವೇದನೆಗಳನ್ನು ಸಹೃದಯರ ಹೃದಯದ ಭಿತ್ತಿಗೇ ಸುನಾಮಿಯ ಆರ್ಭಟದ ಅಲೆಗಳಾಗಿ ಬಂದಪ್ಪಳಿಸಿ  ಕೊಚ್ಚಿಹೋಗುವಂತೆ ಮಾಡುವ ಅನನ್ಯ ಕೃತಿ ಈ "ಹೆಣ್ಣು ಹೇಳುವ ಅರ್ಧ ಸತ್ಯ" .
ಹೆಣ್ಣು ಈ ಜಗದ ಕಣ್ಣು ಎಂದೆಲ್ಲ ಬೊಗಳೆ ಬಿಡುವ ನಾವು ಆ ಕಣ್ಣಿಗೆ ಮಣ್ಣೆರಚಿ ಅವಳಿಗೆ  ಮಾಡಿದ ಅಪಚಾರಗಳು ಒಂದೇ   ಎರಡೇ... ಹೇಗೆಂದು ವರ್ಣಿಸುವುದು ಮನುಕುಲದ ಈ ಒಂಟಿಗಾಲಿನ ನಡಿಗೆಯನ್ನು; ಒಂಟಿ ಎತ್ತಿನ ಬಂಡಿಯ ಈ  ಬಾಳ ಪಯಣವನ್ನು.. ಒಕ್ಕಣ್ಣಿನ ನೋಟದಿಂದ ಮುನ್ನಡೆಯುತ್ತಿರುವ ಜೀವನದ ಅರೆಬೆಳಕಿನ ದಾರಿಯನ್ನು.. ಏನೆಂದು ಬಣ್ಣಿಸುವುದು ಪ್ರಕೃತಿಯಲ್ಲಿ ಮಿಂದು ಪ್ರಕೃತಿಯನ್ನೇ ಬದುಕಿ ಪ್ರಕೃತಿಸ್ವರೂಪಿಯ ಸಾಕಿಯರನ್ನು ಮರೆತು ಜೀವಿಸುವ ಜೀವಸಂಕುಲದ ಭಾವಲಹರಿಯನ್ನು... ಜಗತ್ತು  ಪರಿಪೂರ್ಣವೆಂದು ಎಂದೆನಿಸುತ್ತಿಲ್ಲ  ಎಂಬುದಕ್ಕೆ ಈ ಕೃತಿಯಲ್ಲಿ ಉಲ್ಲೇಖಿಸಿದ ಗಿಬ್ರಾನ್ ನ ಈ ಸಾಲುಗಳನ್ನು  ನೋಡಿ  " ಹೆಣ್ಣು ಮಗಳ ಮುಖ ಜಗತ್ತಿನ ನೆರಳಲ್ಲಿ ಅರ್ಧ ಮುಚ್ಚಿದೆ.ಮತ್ತು ಅರ್ಧ ಮುಖ ಸೂರ್ಯನ ಪ್ರಖರ ಕಿರಣಗಳಿಂದ ಹೊಳೆಯುತ್ತದೆ. ಅಂದ ಮೇಲೆ, ಅದು ಎಲ್ಲಿಂದ ನೋಡಿದರೂ, ಹೇಗೆ ನೋಡಿದರೂ ಅರ್ಧವಾಗಿಯೇ ಕಾಣಿಸುತ್ತದೆಯೊ?  ಅಥವಾ ಅರ್ಧವಾಗಿಯೇ ಇದೆಯೊ? "  
ಹೀಗೆ ಸಾಕಿಯರ ಕುರಿತು ನಮ್ಮಲ್ಲಿ ಶತಾವಧಾನದ ಚಿಂತನೆಗಳನ್ನು, ಭಾವಬಿಂದುಗಳನ್ನು ಸ್ಫುರಿಸುವ ಈ ಕೃತಿಯ  ತಂಗಾಳಿಯ ತಂಪನ್ನೆರೆದೂ, ಎದೆಯೊಳಗೆ ನಿಧಾನವಾಗಿ  ಹೊತ್ತಿಕೊಳ್ಳುವ ಚಳಿಗಾಲದ  ಅಗ್ನಿಯಂತಿರುವ  ಸಾಲುಗಳು ನಮ್ಮ ಬದುಕೆಂಬ ನಾವೆಯ ದಿಕ್ಕನ್ನೇ ಬದಲಿಸುವಂತಿವೆ.
ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು
"ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ 
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ 
ಸ್ತ್ರೀ ಎಂದರೆ ಅಷ್ಟೇ ಸಾಕೆ
ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ" 
ಸ್ತ್ರೀ ಎಂದರೆ ಅಷ್ಟೇ ಸಾಕೆ ?"
ಎಂದು ಹಾಡುವಂತೆ  ಶಬ್ದಗಳ ಮಿತಿಗೆ ಸಿಗದ ಬದುಕಿನ
ಶಬ್ದಾತೀತ ತರಂಗಗಳ ಹುಟ್ಟೆನಿಸಿದ ಆಕೆಗೊಂದು
ತಕ್ಕ ಹೆಸರಿಗಾಗಿ ತಡಕಾಡುವಷ್ಟು 'ಅವಳು' ಕಾಡಿದ್ದಾಳೆ. ಹಸಿರನ್ನುಟ್ಟು ಜೀವಿಗಳ ಹಸಿದ ಒಡಲು ತುಂಬಿಸಿದ್ದಾಳೆ.ಜಗತ್ತಿನ ಆಗುಹೋಗುಗಳನ್ನೇ ಅಲ್ಲವೆನಿಸುವ ಅಲ್ಲಮನಿಗೇ ಮಾಯೆಯಾಗಿ ಕಾಡಿದ,  ನಿರ್ಮೋಹಿಗೆ ಮೋಹದ ಪಾಠವನ್ನು ಹೇಳಲು ಹೋಗಿ ಸೋತ 'ತಾಮಸೆ'ಯಾಗಿ ಕ್ರಾಂತಿಯ ಕಾಂತೆಯಾದವಳು ಈ 'ಮಾಯೆ' ಯೆಂಬ ಅವಳು. ಇಂತಹ ಕೊನೆಯಿರದ ನೀಲಾಂಬರ, ಆಳವೇ ಅನಂತವಾದ ಕಡಲು ಎಂಬ ಅರ್ಥಗಳನ್ನು ಹೊರಡಿಸುತ್ತಲೇ ನಿರಂತರವಾಗಿ ಅನುರಣಿಸುವ ಶಬ್ದ, ಅಪರಿಮಿತವನ್ನೇ ಎದೆಯೊಳಿಟ್ಟುಕೊಂಡು ಸೀಮೆಯೇ ಇಲ್ಲದ ಸೀಮಾತೀತ ಜೀವ ಈ 'ಅವಳು' ಆಗಿದ್ದಾಳೆ.
ಸನಾತನ ಕಾಲದಿಂದಲೂ ನಮ್ಮ ಬದುಕಿನಲ್ಲಿ 'ಅವಳು' ನಿರಂತರ ನಿಶಾಂತವಾಗಿ ಹರಿಯುವ ಗಂಗೆಯಾಗಿದ್ದಾಳೆ ;  ನಿರಮ್ಮಳವಾಗಿ ಹರಡುವ  ಕಾವೇರಿಯಾಗಿದ್ದಾಳೆ ;ಧುಮ್ಮಿಕ್ಕಿ ಇಳಿಯುವ ಕವಲೊಡೆದ   ಜಲಪಾತವೆಂಬ ಶರಾವತಿಯಾಗಿದ್ದಾಳೆ; ಭರ ಭರನೇ ಅವಸರಿಸಿ ನೆಲ ತಬ್ಬಿ ಹಸಿರಾಗುವ ಕೃಷ್ಣೆಯಾಗಿದ್ದಾಳೆ; ಅಲ್ಲದೇ ಸಮಯ ಬಂದಾಗ 'ಅವಳು' ಭೋರ್ಗರೆಯುವ ಆರ್ಭಟದ ಕಡಲೂ ಆಗಿದ್ದಾಳೆ.
ಗೋಪಾಲಕೃಷ್ಣ ಅಡಿಗರ 'ಮೊರೆಯದಲೆಗಳ ಮೂಕ ಮರ್ಮರ'ವಾಗಿದ್ದಾಳೆ. "ಮೋಹ"ನ ಮುರಳಿಗೆ ಮನಸೋತು ಕನ್ನಿಕೆಯಾಗಿದ್ದಾಳೆ. ಕುವೆಂಪುರವರಿಗೆ
“ನೀನು ಬಳಿ ಇಲ್ಲದಿದರೆ, ಓನಲ್ಲೆ ಹೇಮಾಕ್ಷಿ, ಜಗವೆಲ್ಲ
ಜಡಬಂಡೆ ಬೇಸರದ ಬೀಡು’ ಎಂದು ಬಾಳು ಬೆಳಗುವ ದೇವತೆಯಾಗಿದ್ದಾಳೆ.
ಹಿಮಾಲಯದೆತ್ತರಕೆ ಬೆಳೆದರೂ ಆಕೆ, ಸುಡುವ ಸೂರ್ಯನಂತೆ ಎದುರಾಗುವ  ಸಂಕಟಗಳ ತಾಪಕ್ಕೆ ಹಿಮದಂತೆ  ಕಣ್ಣೀರಾಗುವುದು ತಪ್ಪಲಿಲ್ಲ. ಜೀವನಪೂರ್ತಿ ನಿರಂತರವಾಗಿ ಬಸಿರಾಗಿ ಹರಿಯುವುದು ಕೊನೆಯಾಗಲಿಲ್ಲ. ಎಂತಹ ಆಮಿಷವದು ! ಬೆಳಕಿನಂತೆ ತಾನು ದಕ್ಕುವುದಿಲ್ಲವೆಂದು ಗೊತ್ತಿದ್ದರೂ ತನ್ನ ಸುತ್ತವೇ ಸುತ್ತುವ ಪತಂಗಗಳನ್ನು ಆಕರ್ಷಿಸಿ ಬಲಿ ಹಾಕುವ ಮಹಾಹದನವದು. ನಿಜಗುಣಶಿವಯೋಗಿಗಳ ಕೈವಲ್ಯಪದ್ಧತಿಯಲ್ಲಿ
" ಗಿರಿಜೆ ಗೀರ್ವಾಣಿಪೂಜಿತೆ,ಗೌರಿ ಗುಹಜನನಿ
ಪರನಾದಬಿಂದುಮಂದಿರೆ,ಮನೋಂಬುಜಹಂಸೆ
ವರದೆ ವೈಭವೆ ನಿತ್ಯಮುಕ್ತೆ ನಿರ್ಮಲೆ..." 
ಇತ್ಯಾದಿ ಆದ ಹೆಣ್ಣು ಷಹಜಾನನ ಸಾಲುಗಳಲ್ಲಿ ' ಎಂದೆಂದಿಗೂ ಈ ಜಗತ್ತು ಆಕೆಯ ಮೊಲೆ ಕುಡಿಯುವ ಹಸುಗೂಸು ' ಎನ್ನುವಲ್ಲಿನ 'ಜಗನ್ಮಾತೆ'ಯಾಗುತ್ತಾ, ರಾಗಂರವರ ಈ ಕೃತಿಯಲ್ಲಿ ಮತ್ತೆ ಮತ್ತೆ ಬಸಿದು ಸಾಯುವ ಜೈನಬಿ,ದಾಸರ ದಾಸಿಯಂತೆ ಬದುಕಿ ಅಬ್ಬಾಸರ ದೇವತೆಯಾದ ಮುಜತಾಬಾಯಿ, ಸೆರೆ ಮತ್ತು ಕಾಮದ ಗುಂಗಿನಲ್ಲಿ ಕೊನೆಯುಸಿರೆಳೆಯುತ್ತಲೇ ತನ್ನೂರಿಗೆ ಗಂಗೆಯನ್ನು ಧರೆಗಿಳಿಸಿದ ಪಕ್ಕದ ಮನೆಯ ಪಾತ್ರ ಗಂಗವ್ವ,ಮಹಾಕವಿ ಆಧ್ಯಾತ್ಮಿಕ ಜೀವಿ ಮಧುರಚನ್ನರಿಗೆ ದಿವ್ಯಜೀವನದ ದಾರಿ ತೋರಿದ 'ವಾಸಂತಿ'ಯಾಗಿದ್ದ 'ಬಸವ್ವ' ಳಾಗಿ ಹೀಗೆ ಹತ್ತು ಹಲವು ರೂಪಾಂತರಗಳನ್ನು ಪಡೆದು ಅವತರಿಸಿದ್ದಾಳೆ.
" ಹುಗಿದ ನೆಲದಲ್ಲೊಂದಿಷ್ಟು ಸುಮ್ಮನಿರಬಹುದು ನನ್ನವ್ವ 
ನಾಯಿ ಬಾಳಿನಿಂದ ಮುಕ್ತಿ ಪಡೆದು
ತಣ್ಣಗಿರಬಹುದು"
ಎಂದು  ನೆಲದಲ್ಲಿ ಮುಖವಿಟ್ಟು ಮಲಗಿದಾಗಲೇ ಹೆಣ್ಣಿಗೆ ಸಿಗುವ ಪರಮಸುಖಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದಿದೆ ಹೇಳಿ?  ಆಕೆಯ ಭವಬಂಧನದ ಬಿಡುಗಡೆಯ ಮೋಕ್ಷ  ಎಂದರೆ ಅದು ತಾನು ಕಟ್ಟಿ ಹೆಣೆದ ಕರುಳು ಜಾಲವನ್ನು ಕತ್ತರಿಸಿಕೊಂಡು ಯಾರಿಗೂ ಹೇಳದೇ ಇಲ್ಲಿಂದ ಮತ್ತೆಂದೂ ಬರದಂತೆ ಎದ್ದು  ಹೋಗುವುದು ಎಂದರ್ಥವೆನಿಸುತ್ತದೆ. ಹೀಗೆ ಕಾಡಿದ ತಾಯಿಯನ್ನು ಜೈನಬಿಯ ರೂಪದಲ್ಲಿ ಲೇಖಕರು ಸ್ಮರಿಸಿಕೊಳ್ಳುತ್ತಾರೆ.
" ಈಗ ಊರು ಬದಲಾಗಿದೆ
ತಳದಲ್ಲಿ, ಬುಡದಲ್ಲಿ
ಆದರೂ
ಅವ್ವನ ಘೋರಿಯ ಪಕ್ಕದ
ಹುಣಸೆ ಇನ್ನೂ ಹಸಿರಾಗಿದೆ
ಸಮಾಧಿ ಮೇಲಿನ ಹುಲ್ಲು
ಇನ್ನೂ ಚಿಗುರುತ್ತಿದೆ."
ಹೀಗೆ ಅವ್ವನ ಬಿಸಿಯುಸಿರು ಹುಣಸೆಯಂತೆ ಚಿಗುರುವ ಬದುಕಿಗೆ ಹೇಗೆ ತನ್ನೊಡಲ ಜೀವಜಲವನ್ನು ಬಸಿಯುತ್ತಲೇ  ಭರವಸೆಯಾಗುತ್ತದೆ ಎಂಬುದನ್ನು ರಾಗಂರವರು ಸೋಪಜ್ಞವಾಗಿ ಬಣ್ಣಿಸುತ್ತಾರೆ .ಮಣ್ಣೊಳಗೆ ಮಣ್ಣಾದರೂ ಜಗ ಕಾಯುವ ಅವಳ ಮಮತೆಗೇನೂ ಕೊರತೆಯಾಗಬಾರದೆಂದೇ ಅವಳು ಮಮತಾಮಯಿಯಾದ. ಈ 'ವಸುಂಧರೆ'ಯನ್ನು ಬಿಟ್ಟುಹೋಗಿರುವಳೇನೋ ಎಂದೆನಿಸುತ್ತದೆ ಕೊನೆಗೆ. ಲೇಖಕರು ಉಲ್ಲೇಖಿಸುವ,"In the home is true union; In the home is enjoyment of life ; why should I forsake my home and wander in to forest? " ಎಂಬ ಟ್ಯಾಗೋರರು ಭಾಷಾಂತರಿಸಿದ ಕಬೀರರ ಸಾಲುಗಳು' ಮಹಿಳೆ' ಎಂದರೆ 'ಮನೆ', 'ಮನೆ' ಎಂದರೆ 'ಮಹಿಳೆ 'ಎನ್ನುವ ಪರಮಸತ್ಯವನ್ನು  ಜಗತ್ತಿನ ಮುಂದೆ ತೆರೆದು ತೋರುತ್ತವೆ.ನಾವು ಆ ಮನೆಯೊಳಗಿನ ವಾತ್ಸಲ್ಯದ ಮಡಿಲಲ್ಲಿ ಕರುಗಳಾಗಿರುವುದನ್ನು ಮತ್ತೆ ಮತ್ತೆ ನೆನಪಿಸುತ್ತವೆ. ರಾಗಂರವರು ಹೇಳುತ್ತಿರುವ ಜೀವಂತ ಕತೆಗಳ ಕಥಾನಾಯಕಿಯರೆಲ್ಲ ಹತ್ತರೊಳಗೆ ಹನ್ನೊಂದಾಗಿ ಬದುಕಿ ಹೋದವರಲ್ಲ. ಈ ಭೂಮಿಯ ಮೇಲೆ ಕೇವಲ ಭೌತಿಕವಾದ ಅಸ್ತಿತ್ವವನ್ನು  ನೆಚ್ಚಿಕೊಂಡವರೂ ಅಲ್ಲ; ಜೀವನವನ್ನು 'ಹೊರೆ' ಯೆಂದು ಬಗೆದು ಬದುಕಿದವರಲ್ಲ.
ಹಾಗಾದರೆ ಅವರೇನು ? ಅವರು ಯಾರು?  ಎಂಬುದನ್ನು ಲೇಖಕರ ಮಾತಿನಲ್ಲಿಯೇ ಕೇಳಿ.
"ಸಭ್ಯತೆಯ ಚೌಕಟ್ಟಿನಲ್ಲಿಯೇ ಸುಳಿಯದ, ಯಾವುದೋ ಭ್ರಮೆಗಾಗಿ ತಮ್ಮನ್ನೇ ಸುಟ್ಟುಕೊಂಡವರು. ಸಭ್ಯ ಸಮಾಜದ ಯಾವುದೇ ನ್ಯಾಯಿಕ ವ್ಯವಸ್ಥೆ ಇವರನ್ನು ಆದರ್ಶ ಪ್ರಾಯರೆಂದು ಘೋಷಿಸಲು ಸಾಧ್ಯವಿಲ್ಲ. ಮೋಜಿನ ಸಂಗತಿಯೆಂದರೆ ನಿಮ್ಮ ಘೋಷಣೆಗಳನ್ನು ಈ ಸಾಕಿಯರು ಮನ್ನಿಸಲೂ ಇಲ್ಲ. 'ಸಭ್ಯತೆ' ಎನ್ನುವ ಏರಿನಲ್ಲಿ ನಾವು ಬದುಕಿದರೆ, ಪ್ರಾಮಾಣಿಕತೆ ಎಂಬ ತೇರಿನಲ್ಲಿ ಕುಳಿತು ಸಮಾಜ ಸಂಸಾರ ಗಳ ಹುಸಿ ಹರಕೆಗಳ ಕೇಳಿ,ಇಣುಕಿ ನೋಡಿ ಸಾಗಿಹೋದವರು ಈ ಸಾಕಿಯರು." 
ಜಗವನ್ನೇ ತೊಟ್ಟಿಲಲ್ಲಿಟ್ಟು ತೂಗುವ ತಾಯಿಯಾಗಿ, ,ಮಾತೆಯಂತೆ ವಾತ್ಸಲ್ಯದ ನೆಲೆಯಾದ ಸಹೋದರಿಯಾಗಿ, ತಲೆಮಾರುಗಳಿಗೆಲ್ಲ ಬುದ್ಧಿ ಹೇಳಿ ಕತೆಯಾಗುವ ಅಜ್ಜಿಯಾಗಿ, ಕುಟುಂಬದ ಗೌರವವನ್ನು  ಕಣ್ಣಂಚಿನಲ್ಲಿಟ್ಟು ಕಾಪಾಡುವ   ಮಗಳಾಗಿ, ಮನವೆಂಬ ಕಾಣದ ಕಡಲಿನ ಭಾವದಲೆಗಳಿಗೆ ದಾರಿ ತೋರುವ  'ನವಿಲೂರ ಚೆಲುವೆ'ಯಾಗಿ ನಮ್ಮೊಂದಿಗೆ ಬದುಕಿನುದ್ದಕ್ಕೂ, ಕ್ಷಣ ಕ್ಷಣಕ್ಕೂ ನಮ್ಮನ್ನು ನೆರಳಿನಂತೆ ಹಿಂಬಾಲಿಸಿ ಬಾಳು ಬೆಳಗುವ ನಂದಾದೀಪವಾದ ಹೆಣ್ಣಿನ ಕುರಿತು ವಿಶಿಷ್ಟ  ಕೃತಿಯೊಂದು ರಾಗಂ ರವರಿಂದ ರಚನೆಯಾಗಿರುವುದು ಅಭಿನಂದನಾರ್ಹವಾಗಿದೆ.
" ನಾ ನಿನ್ನ ಕಂಡೆ, ನೀ ನನ್ನ ಕಂಡೆ, ಕಂಡದ್ದು ಯಾರ ಯಾವ
ನೀ ನನ್ನನುಂಡೆ, ನಾ ನಿನ್ನನುಂಡೆ,  ಉಳಿದದ್ದೆ ಆತ್ಮಭಾವ " ಎಂಬ ಅಂಬಿಕಾತನಯದತ್ತರ ಕವಿತೆಯ ಸಾಲುಗಳು  ಮಧುರಚೆನ್ನರು ಹಾಗೂ ಅಶಿಕ್ಷಿತ ಧರ್ಮಪತ್ನಿ ಬಸವ್ವ ಳೆಂಬ 'ಪುಣ್ಯವಂತಿ'ಯ ರ  ದಾಂಪತ್ಯಕ್ಕೆ  ಒಪ್ಪುವಂತಿವೆ. ತನ್ನ ಪತಿಯ ಒಡನಾಡಿಯಾಗಿದ್ದ ಮಧುರಚೆನ್ನರ ಒಲವಿನ ಧಾರೆಯಿದು-
"ನಲ್ಲೆ ವಾಸಂತಿ
ತಾ ಜೀವದ ಜೊತೆಗಾರ್ತಿ" .
ಸಿಂಪಿ ಲಿಂಗಣ್ಣ, ರೇವಪ್ಪ ಕಾಪ್ಸೆ  ಪಿ.ಧೂಲಾಸಾಹೇಬ,ಬೇಂದ್ರೆ ಮುಂತಾದ ಮಹನೀಯರಿಂದ ಜನ್ಮತಾಳಿದ ಹಲಸಂಗಿ ಗೆಳೆಯರ ಬಳಗದ ಮಾತೆಯಾಗಿ, ಬಡತನದ ಬೇಗೆಯಲ್ಲಿ ಬೆಂದು, ಮಧುರಚೆನ್ನರ ಸಂಸಾರದ ನೊಗಹೊತ್ತು  ಬದುಕಿನ ಬಂಡಿಯನ್ನು ಅಂಬಿಕೆಯಂತೆ ಸರಾಗವಾಗಿ ಮುನ್ನಡೆಸಿದವರು ಈ ಬಸವ್ವಳೆಂಬ ಮಧುರಚೆನ್ನರ ಆಧ್ಯಾತ್ಮಿಕ ಸಂಪತ್ತಿನ ಒಡತಿ . ಯಶಸ್ವಿ ಪುರುಷನ ಹಿಂದೆ ಮಹಿಳೆಯ ಕಾಣದ ಕೈಗಳಿರುತ್ತವೆ ಎಂಬುದು ಸತ್ಯವಾದರೂ ಆ ಕೈಗಳು ಯಶಸ್ಸಿನ ಪಕ್ಕದಲ್ಲಿ ಕಾಣುವುದು ವಿರಳಾತಿವಿರಳ. ಆ ಕಾಣದ ಕೈಗಳನ್ನು, ಬದುಕಿನ ಕಷ್ಟಗಳ ಬಂಡೆಗಲ್ಲುಗಳಿಂದಾಗಿ ತಮಗಾದ ಎಂದೂ ಮಾಯದ ಹುಣ್ಣುಗಳೊಂದಿಗೆ, ನಿರ್ದಯಿ ಜೀವನ ಹಾಕಿದ ಕಪ್ಪಿಟ್ಟ ಕಡು ಕೆಂಬಣ್ಣದ ಬರೆಗಳೊಂದಿಗೆ ಜಗತ್ತಿಗೆ  ಕಾಣುವಂತೆ ಮಾಡುವ ಕೃತಿ ಈ ಸಾಕಿಯರ ಕೈ ಸೋಕಿ...
"ಕುಣಿಯುತ್ತಾಳೆ ಆಕೆ 
ನನ್ನೆದೆಯ ಗೂಡಿನೊಳಗೆ
ನಸುನಗುತ್ತಾ ಹೆಜ್ಜೆ ಹಾಕಿ
ತಾನು ನನ್ನುಸಿರ
ಬಿಸಿಯಲ್ಲಿದ್ದೇನೆ ಎಂಬ
ಭ್ರಮೆಯಿಂದ ತಾಳ ಹಾಕಿ
ಗೊತ್ತಿಲ್ಲ ಅವಳಿಗೆ
ನನ್ನೊಲವಿನುಸಿರು
ಯಾರದೆಂದು ?
ಕುಣಿಯಲಿ ಮನ
ತಣಿಯಲಿ
ನನ್ನುಸಿರ ಸಿರಿಯಲಿ
ಬೆಳೆಯಲಿ
ಹೆಸರುಳಿಸುವ ಹಸಿರ
ಬಳ್ಳಿಯಂತೆ  ಮಲ್ಲಿಗೆಯ
ಮುಡಿಯಲಿ..."
ಎಂಬ ನನ್ನದೇ ಕವಿತೆಯ ಸಾಲುಗಳಲ್ಲಿನ ಆಕೆಯ ಉಸಿರು ಮತ್ತೊಬ್ಬರ ಸಂತಸದಲ್ಲಿದೆ. ಎಂಬ ಉದಾರ  ಹೆಬ್ಬಯಕೆ ಆಕೆಯದು. ಬದುಕು ದ.ರಾ. ಬೇಂದ್ರೆಯವರು ಹಾಡುವಂತೆ 
ಬದುಕು ಬೇವು ಬೆಲ್ಲಗಳ ಮಹಾಸಂಗಮ ವೆಂಬುದನ್ನು ರಾಗಂ ರವರ ಕೆಳಗಿನ ಸಾಲುಗಳು ನೆನಪಿಗೆ ತರುತ್ತವೆ.
" ನಿನ್ನ ಚಿತೆ ಸುಡುವಲ್ಲಿ
ನನ್ನ ಕನಸುಗಳಿಲ್ಲ
ಕಳೆದ ಬದುಕೆಲ್ಲವೂ
ಬೇವು ಬೆಲ್ಲ
ನಿನ್ನ ರಾತ್ರಿಯ ಎದೆಗೆ
ನನ್ನ ನೆನಪುಗಳಿಲ್ಲ
ಉಳಿದ ಉಸಿರೆಲ್ಲವೂ
ಉರಿದ ಹುಲ್ಲು "
ಪ್ರಾಣಸಖಿಯೇ ಇಲ್ಲವಾದಾಗ  ಬತ್ತಿಹೋಗುವ ನೆನಪುಗಳ  ಜೀವನವೆಷ್ಟು ಶೂನ್ಯ .ಉಸಿರು ಕೂಡ ಉರಿಯುವ ಹುಲ್ಲಾಗಿ ಕಾಡುವ ಬಗೆಯನ್ನು ಲೇಖಕರು ಮನೋಜ್ಞವಾಗಿ ಬಣ್ಣಿಸುತ್ತಾರೆ.ಕುವೆಂಪುರವರಿಗೂ ಕೂಡ ಈ ಸಾಕಿ
"ರವಿಯುದಯಕೆ, ಶಶಿಯುದಯಕೆ
ಹೂದಿಂಗಳುದಯಕೆ
ಕೃತಿಯ ಮಧುರ ಸಮುದಯಕೆ
ಹೇಮಲತೆಯೇ ಹೃದಯವಂತೆ!
ಕಲೆ, ಕೀರ್ತಿ ಸಿರಿಯೆಲ್ಲವೂ ಹೇಮಲತೆ ಇಲ್ಲದಿಲ್ಲ,
ಹೇಮಲತೆಯೇ ಎಲ್ಲ"
ಚೈತನ್ಯಶಕ್ತಿಯಾಗಿದ್ದಾಳೆ.
'ಕಸ್ತೂರಿ ಬಾ' ಎಂಬ ಮಮತೆಯ ಸುಗಂಧವಿರದೇ  ಇದ್ದರೆ ಗಾಂಧಿಯ ಬದುಕು ಅದೆಷ್ಟು ಶೂನ್ಯವಾಗಿರುತ್ತಿತ್ತು.ಅದೆಷ್ಟು ಬರಡಾಗಿರುತ್ತಿತ್ತು. ಪತಿಯ ಹೋರಾಟದ ಅಂತಃಶಕ್ತಿಯಾಗಿದ್ದ, ಜೀವನದ ಚೈತನ್ಯವಾಗಿದ್ದ  ಕಸ್ತೂರಿ ಬಾ ತೀರಿ ಹೋದಾಗ ಕೋಟ್ಯಾನುಕೋಟಿ ಭಾರತೀಯರ ಮಧ್ಯೆಯೂ ಅಕ್ಷರಶಃ  ಗಾಂಧೀಜಿ ಒಂಟಿಯಾಗಿದ್ದರು. 'ಬಾ' ಳನ್ನು ಬಿಟ್ಟು ಅನಾಥವಾಗಿದ್ದ ಗಾಂಧಿ ಮೇಲಿನ ಕಾವ್ಯದ ಸಾಲುಗಳಂತೆ ದುಃಖಿಸಿರಬೇಕು ಎಂಬುದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. ಗದ್ಯದ ಲಯದ ಜೊತೆಗೆ ಪದ್ಯದ ನಾದ ಜೊತೆಯಾದರೆ ಆ ಸಾಹಿತ್ಯ ರಸದೌತಣವಾಗುವುದರಲ್ಲಿ ಸಂದೇಹವಿಲ್ಲ. ರಾಗಂರವರದು ಕಾವ್ಯಾತ್ಮಕ  ಗದ್ಯ ಶೈಲಿ.ಅವರ ಗದ್ಯ ಬರಹವನ್ನು ಲಯಕ್ಕೆ ತಕ್ಕಂತೆ ಪದ್ಯದ ಪಂಕ್ತಿಗಳನ್ನಾಗಿಯೂ ಪರಿವರ್ತಿಸಬಹುದಾದಷ್ಟು ಇವರ ಗದ್ಯ ಕಾವ್ಯಾತ್ಮಕ ಶೈಲಿಯದು.ಇಲ್ಲಿಯ ಕತೆಗಳೆಲ್ಲ ಬದುಕಿನ ನಿತ್ಯ ಸತ್ಯ ಘಟನೆಗಳಾಗಿರುವುದರಿಂದ ನಾಟಕೀಯತೆ ಒಂದಿನಿತೂ ಇಣುಕಿಲ್ಲ. ನಮ್ಮ ನೆರೆಹೊರೆಯಲ್ಲಿ ಬದುಕುತ್ತಿರುವ ಪಾತ್ರಗಳೇನೋ ಎನ್ನುವಷ್ಟರ ಮಟ್ಟಿಗೆ ಇಲ್ಲಿಯ ವ್ಯಕ್ತಿತ್ವಗಳು ಆಪ್ಯಾಯಮಾನವಾಗುತ್ತವೆ.ತಮ್ಮ ಬದುಕನ್ನು ತೆರೆದ ಪುಸ್ತಕದಂತೆ ಬಿಚ್ಚಿಡುತ್ತವೆ. ಗಟ್ಟಿ  ಕತೆಗಾರ ರಾಗಂ ರವರು ಒಬ್ಬ ಸಂವೇದನಾಶೀಲ ನಿರೂಪಕರೆಂಬುದಕ್ಕೆ ಈ ಕತೆಗಳೆ ಜೀವಂತ ಸಾಕ್ಷಿಯಾಗಿವೆ .ಕಥೆಗಳನ್ನು ತಾವೇ ಸ್ವತಃ ನಮ್ಮೆದುರಿಗೆ ನಿಂತು ನಿರೂಪಿಸುತ್ತಿದ್ದಾರೆ ಏನೋ ಎಂಬ ಭಾವ ನಮ್ಮನ್ನಾವರಿಸುವಂತೆ ಭಾಷೆ ಸುಲಲಿತವಾಗಿದೆ; ಸಮೃದ್ಧವಾಗಿದೆ. ಅವಕಾಶ ಸಿಕ್ಕಾಗ ಪದಗಳೆ. ನಾಟ್ಯವಾಡುತ್ತವೆ.ಶಬ್ದಲೋಕ ಎಷ್ಟು ವಿಸ್ಮಯ ಎಂಬುದಕ್ಕೆ ಈ ಕತೆಗಳ ಭಾವಲಹರಿಯನ್ನು ಅಧ್ಯಯನ ಮಾಡಲೇಬೇಕು.


Sunday 11 November 2018

ಹೆಗಲ ಭಾರ

ಹೆಗಲ ಭಾರ
ನಾನು ಎಂಬುದೊಂದು
ಹೊರಲಾರದ ಮಣಭಾರ
ಜಾಗ ಸಿಕ್ಕಲ್ಲಿ ಇಣುಕುವುದು
ಕೈಚಾಚಿ ಜನಸಂದಣಿಗಳ ಮಧ್ಯೆ

ಜಗತ್ತನ್ನೇ ಗೆಲ್ಲಬೇಕೆಂದರೂ
ಹೆಣವಾದ ಭಾರದಿಂದ
ಕುಗ್ಗುತಿದೆ ಈ ಹೆಗಲು
ಹಗುರವಾದೀತು ಎಂದು ಈ ಹೊರೆ
ಕಾಯುತಿರುವೆ ನಿಟ್ಟುಸಿರಿಗಾಗಿ

ಬಿಟ್ಟು ತೊಲಗೆಂದರೂ
ವಿಕ್ರಮನ ಈ ಭೂತ
ರಹಸ್ಯಗಳ ಪ್ರಶ್ನೆ ಕೇಳಿ ಕೇಳಿ
ನೆಪ ಹೊತ್ತು ಜೋತು ಬಿದ್ದಿದೆ
ಬೆಂಬಿಡದೆ ಬೆನ್ನೇರಿದೆ

ಸಾಧನೆಗೆ ಶರಾ ಬರೆದು
ಪತನಕೆ ಬೆನ್ನು ತೋರಿ
ಬೀಗುತಲೆ ಕಾಡುತಿದೆ ಗುಳ್ಳೆ ನರಿ
ದಿಗಂತದಿಂದ ಎದ್ದು ಬಂದು
ಮಧ್ಯೆ ನಿಲ್ಲುತಿದೆ ಹೇಳದೆ ಈ ಪರಿ
ಈ ಜಗಕೆ ನಾ ಕಾರಣ
ಈ ಸುಖಕೆ ನಾ ಧಾರಣ
ಗೆಲುವಿಗಂತೂ ನಾ ಭೂಷಣ
ಎಂದಂದೇ ಹಪಹಪಿಸಿ
ನಂಬಿಸಿ ಹಾತೊರೆದಿದೆ
ವ್ಯಕ್ತಿತ್ವದ ಬಲಿಗಾಗಿ

ಸ್ವರ್ಗದ ಮಡಿಲಿಗೆ
ನಾ ಹೋದರೆ ಹೋದೇನು
ಎಂದರವರು ದಾಸರು
ಭಯಂಕರದ ಈ ಭವದಿಂದ
ನಾ ಹೇಗೆ ಹೋಗುವುದು
ಅರಿಯುತಿಲ್ಲ ಆಳುತಿಹುದು

ಇಳಿಸಿದರೂ ಭಾರವದು
ಕಾಲಿಗಾದರೂ ತೊಡರುವುದು
ಬಿಟ್ಟನೆಂದರೂ ಬಿಡದೀ ಮಾಯೆ
ಅಷ್ಟಪದಿಯ ಬಾಹುಗಳ
ಬಿಡದ ಗಟ್ಟಿ ಹಿಡಿತವದು


Thursday 1 November 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ(ಮುಂದುವರೆದ ಭಾಗ)
ಶ್ರೀಕೃಷ್ಣದೇವರಾಯನು ಚೆದುರಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಡಿ ಪುಷ್ಪಗಳನ್ನೆಲ್ಲ ಆಯ್ದು ತಂದು ಪರಿಮಳಭರಿತ ಹೊಸ ಹೂ ಮಾಲೆಯನ್ನು ಕಟ್ಟಿದಂತಿದೆ ಈ ಮಹಾಕಾವ್ಯ.ಈ ಕಾವ್ಯವನ್ನು ಓದುತ್ತಿದ್ದರೆ ಹಂಪೆಯ ಮೈ ತುಂಬ ತುಂಡರಿಸಿಕೊಂಡು ಸೋತುಬಿದ್ದ  ಶಿಲ್ಪ ಗಳೆಲ್ಲಾ ಜೀವಚೈತನ್ಯ ಪಡೆದು ಸುಂದರ ಕಲಾಕನ್ನಿಕೆಯರಾಗಿ ಕಣ್ಣಮುಂದಿನ ರಂಗದಲ್ಲಿ ನೆನಪುಗಳ ಗೆಜ್ಜೆ ಕಟ್ಟಿಕೊಂಡು ಕಾವ್ಯದ ತಾಳಗತಿಗೆ ತಕ್ಕಂತೆ  ಕುಣಿಯುತ್ತಿರುವಂತೆ ಭಾಸವಾಗುತ್ತದೆ. ಕುಮಾರವ್ಯಾಸ ಭಾರತ ಕಣ್ಣಲಿ ಕುಣಿದಂತೆ ಮಧುರಾಪುರದ ನೈಜ ಚಿತ್ರಣ, ಪುಷ್ಪಲಾವಿಕೆಯರ ವ್ಯಾಪಾರದ ಸೌಂದರ್ಯ ಲಾಲಿತ್ಯ, ವೇಶ್ಯೆಯರ ಅಲಂಕಾರ ಮಜ್ಜನ, ಪ್ರಖರ ಸೂರ್ಯನ ಬಿಸಿಲು ಹೊದ್ದು ಪ್ರಕೃತಿಯ ಅಗ್ನಿಕುಂಡವೇ ಆದ ಗ್ರೀಷ್ಮ ಋತುವಿನ ವರ್ಣನೆ, ಯಮುನಾಚಾರ್ಯನ ಉಪದೇಶ ಗಳು ನಮ್ಮ ಮನೋರಂಗದ ಮೇಲೆ ಒಂದಾದ ಮೇಲೊಂದರಂತೆ ಹೆಣೆದುಕೊಂಡು ಸರಣಿಯ ಸುಂದರ ದೃಶ್ಯಗಳಾಗಿ  ಮೈದಳೆಯುತ್ತವೆ.
ಭಾವತೀವ್ರತೆಯಿಂದ ಪರಕಾಯ ಪ್ರವೇಶವನ್ನುಂಟು ಮಾಡುವ ರೀತಿಯಲ್ಲಿ , ಸ್ವತಃ ರಾಯನೇ ಖುದ್ದಾಗಿ ಸಾಮಾನ್ಯ ಜನಪದ ಸಂಸಾರೊಂದಿಗರ ಮನೆ ಮನೆಯಲ್ಲಿ ವಾಸವಿದ್ದು ಕಂಡಂತೆ ಅವರ ಬದುಕಿನ ಪ್ರತಿ ಕ್ಷಣಗಳನ್ನು ತನ್ನ ಅಂತರ್ ಚಕ್ಷು ಎಂಬ ಸೂಕ್ಷ್ಮ ದರ್ಶಕ ಯಂತ್ರದಿಂದ ಬಹು ಸೂಕ್ಷ್ಮವಾಗಿ ಹಿಗ್ಗಲಿಸಿ ಪರಿಶೀಲಿಸಿದ್ದಾನೆ; ಮನೋಜ್ಞವಾಗಿ ದಾಖಲಿಸಿದ್ದಾನೆ.ಇಂದು ಕೆಂಬಣ್ಣದ  ಧೂಳು  ತುಂಬಿಕೊಂಡು ತನ್ನ ಕಾಲಗರ್ಭದಲ್ಲಿ ಬಾಯಿಬಿಟ್ಟು ಹೇಳಲಾಗದ ಅದೆಷ್ಟೋ ನಿಗೂಢ ಸತ್ಯಗಳನ್ನು ಬಚ್ಚಿಟ್ಟುಕೊಂಡು ನರಳುತ್ತಿದ್ದರೂ  ನಳನಳಿಸುತ್ತಲೇ ತೋರಿಕೆಯ    ಹಸನ್ಮುಖದಿಂದ ತನ್ನೆಡೆಗೆ ಬರುವವರನ್ನೆಲ್ಲಾ ಸ್ವಾಗತಿಸುತ್ತಿರುವ  ಪಾಳು ಬಿದ್ದ  ಹಂಪೆಯು ಈ ಕೃತಿಯ ಒಳಹೊಕ್ಕಾಗ  ತನ್ನ ಕಪ್ಪು ಬಿಳುಪನ್ನು ಕಳಚಿಕೊಂಡು ಸಮೃದ್ಧತೆಯ ಹಸಿರುಸಿರು ತುಂಬಿಕೊಂಡು,ಕಣ್ಣು ಕೋರೈಸುವ ಹೊಂಬಣ್ಣದಿಂದ ಅಲಂಕರಿಸಿಕೊಂಡು, ಪ್ರಜ್ವಲಿಸುವ ಮುತ್ತು ರತ್ನ ಹವಳಗಳ ಹೊಂಬೆಳಕಿನ ಬೀದಿಗಳನ್ನು ಹೊಂದಿ ದೇದೀಪ್ಯಮಾನವಾಗಿ ವಿಜೃಂಭಿಸುವ  ಸಾಮ್ರಾಜ್ಯವಾಗಿ ಪುನರುಜ್ಜೀವ ಪಡೆಯುತ್ತದೆ. 

                ಮಧುರಾಪುರ ನಗರ ವರ್ಣನೆಯ ಸಂದರ್ಭವೊಂದು ಹೀಗಿದೆ"ಮಧುರಾಪುರ ಭೋಗ ಭಾಗ್ಯಗಳಿಂದ ಕೂಡಿದೆ.ಆ ನಗರದ ರಾಜರಲ್ಲದೇ ಸಾಮಾನ್ಯರು ಸಹ ಮರಕತ ಮಾಣಿಕ್ಯದ ಆಭರಣಗಳನ್ನು ಧರಿಸುತ್ತಾರೆ......ಅವರ ಮನೆಗಳ ದ್ವಾರಗಳು, ಹೊಸ್ತಿಲುಗಳು, ಮಕರಸ್ತಂಭಗಳು ಬೆಳ್ಳಿ ಬಂಗಾರದಿಂದ ಅಮೂಲ್ಯ ರತ್ನಗಳ ಅಲಂಕಾರದಿಂದ ಕುಬೇರನ ಭವನವನ್ನು ನೆನಪಿಗೆ ತರುವಂತಿದೆ. ಅತಿ ಎತ್ತರದ ಕೋಟೆ ಬುರುಜುಗಳು ಆಗಸದಲ್ಲಿನ ಸಂಪಿಗೆಯ ಹೂವಿನ ಮಾಲೆಯಂತೆ ಕಂಗೊಳಿಸುತ್ತಿವೆ! ಆ ಕೋಟೆಯ ಸುತ್ತಲೂ ತುಂಬ ಆಳವಾದ ಕಂದಕಗಳು ನೀರಿನಿಂದ ತುಂಬಿ ಮಂದಾಕಿನಿಯನ್ನು ನೆನಪಿಗೆ ತರುತ್ತದೆ. ಪೌರಕಾಂತೆಯರ ಸುಕುಮಾರ ದೇಹದ ಮೇಲೆ ಗಂಧ, ಕಸ್ತೂರಿ,ಕುಂಕುಮ,ಅಗರುಚಂದನಗಳನ್ನು ಲೇಪಿಸುವಾಗ ಇವುಗಳಲ್ಲಿ ಬೆರೆತಿದ್ದರಿಂದ ಆ ಕಂದಕಕ್ಕೆ 'ಭೋಗವತಿ' ಎಂದು ಹೆಸರು ಬಂತು....." ಇಲ್ಲಿ ಮಧುರಾಪುರ ದ ಹೆಸರಿನಲ್ಲಿ ಕೃಷ್ಣದೇವರಾಯ ಬಣ್ಣಿಸಿರುವುದೆಲ್ಲ ತನ್ನ  ಸಾಮ್ರಾಜ್ಯದ ಭೋಗವಿಲಾಸವನ್ನೇ ಎಂದೆನಿಸುತ್ತದೆ. ಈ ಕಾವ್ಯದ ಆರಂಭದ ಭಾಗವಂತೂ ಇದೊಂದು ಶೃಂಗಾರ ಕಾವ್ಯವೆನ್ನುವಷ್ಟರ ಮಟ್ಟಿಗೆ ರಸಮಯವಾಗಿದೆ.
                   ಇಲ್ಲಿ ರಾಯನೆಂಬ ರಸಿಕನಾಡಿದ ಮಾತುಗಳು ಶಶಿಯುದಿಸಿ ಬಂದಂತೆ ಸಹೃದಯರ ಮನದ ತುಂಬೆಲ್ಲಾ ಹಾಲುಬೆಳದಿಂಗಳನ್ನು ಚೆಲ್ಲಿ ಮುದ ನೀಡುತ್ತವೆ.ಇಲ್ಲಿ ಬರುವ ವೇಶ್ಯೆಯರು,ವಿಲ್ಲಿಪುತ್ತೂರಿನ ಸ್ತ್ರೀಯರು, ಲತಾಂಗಿಯರು,ಪುರದಂಗನೆಯರ ಒನಪು- ಒಯ್ಯಾರ,ಹಾಸ್ಯ- ಲಾಸ್ಯಗಳ ಚಿತ್ರಣ  ಶೃಂಗಾರ ರಸದ ನವನವೀನ ಕಲಾಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತವೆ.ಇಲ್ಲಿ ಶೃಂಗಾರ ರಸ ಮೈಯ್ಯುಕ್ಕಿ ಪ್ರವಾಹೋಪಾದಿಯಲ್ಲಿ ಹರಿಯುತ್ತದೆ. 
"ಆ ಲತಾಂಗಿಯರು ತಮ್ಮ ಮಹಡಿಯ ಮೇಲೆ ನಿಂತು ನೀಳ ಕೇಶ ರಾಶಿಯನ್ನು ಬಿಚ್ಚಿ ಸಿಕ್ಕು ಬಿಡಿಸುತ್ತಿದ್ದಾಗ, ಹೂಗಳನ್ನು ಕುಯ್ಯುತ್ತಿದ್ದಾಗ, ವೀಣೆಯನ್ನು ನುಡಿಸುವಾಗ ಅವರ ಬೆರಳುಗಳು ಒಂದೇ ರೀತಿಯಲ್ಲಿ, ಲಲಿತಸುಕುಮಾರವಾಗಿ, ಲಯಬದ್ಧವಾಗಿ ನೃತ್ಯ ಮಾಡುತ್ತಿರುವಂತೆ ಕಾಣುತ್ತವೆ.ಒಮ್ಮೊಮ್ಮೆ ಆ ಬೆರಳುಗಳನ್ನೇ ಹೂಗಳೆಂದು ಭ್ರಮಿಸಿ ದುಂಬಿಗಳು ಮೋಹಿಸಿ ಎರಗುತ್ತವೆ" ಈ ಕಾವ್ಯದಲ್ಲಿಉಪಮೆಯು ರಾಯನನ್ನು  ಲತಾಂಗಿನಿಯಂತೆ ಬಳಿ ಕರೆದು ಮೋಹಿಸಿದೆ .ಉತ್ಪ್ರೇಕ್ಷೆಯು ರಾಣಿಯಂತೆ ಪಕ್ಕದಲ್ಲಿದ್ದು ಕಾಂತಾಸಂಮ್ಮಿತವನ್ನು ಬೋಧಿಸಲು ನೆರವಾಗಿದೆ. 
         ಮಧುರಾಪುರದ ವನಿತೆಯರು ಮುಡಿದುಕೊಂಡು ಮಹಡಿಯಿಂದ ಕೆಳಗೆಸೆದ ಪುಷ್ಪಗಳು ದಾರಿಹೋಕರಿಗೆ ಆಗಸದಿಂದುದುರುವ ಮುತ್ತುಗಳಾಗಿ ರೂಪು ಪಡೆಯುತ್ತವೆ.ಮುತ್ತುಗಳಾಗಿ ಎಂಬಲ್ಲಿ ಅಲಂಕಾರಗಳು ರಾಯನ ಕೈಯ್ಯಲ್ಲಿ ಪಳಗಿದ ರೀತಿಯನ್ನು ಗಮನಿಸಬೇಕು. ಬಹುಶಃ ಶ್ರೀಕೃಷ್ಣದೇವರಾಯ ತನ್ನ ರಾಜ್ಯದ ಬೀದಿಗಳಲ್ಲಿ ಕಂಡ ಜನಜೀವನದ ಚೆಹರೆಗಳನ್ನೇ ತನ್ನ ಕಾವ್ಯದ ಘಟನೆಗಳನ್ನಾಗಿ ಬಹು ಸುಂದರವಾಗಿ ಬಣ್ಣಿಸಿದ್ದಾನೆ.ತೆಲುಗು ಸಾಹಿತ್ಯದ ಮಹತ್ವದ "ಪ್ರಬಂಧ ಕಾವ್ಯ"ವಾಗಿ ಹೆಸರಾಗಿರುವ ಈ ಕೃತಿಯಲ್ಲಿ  ಪ್ರತಿಯೊಂದು ಪಾತ್ರವೂ ಸಹಜತೆಯಿಂದ ಸರಳತೆಯಿಂದ ಕೂಡಿದೆ. ಇವನಂತೆ ಜನಪದರ ಜೀವನವನ್ನು ಇಷ್ಟೊಂದು ಹತ್ತಿರದಿಂದ ಪರಿಶೀಲಿಸಿ ಉಲ್ಲೇಖಿಸಿದ  ಸಾಮ್ರಾಟ ಮತ್ತೊಬ್ಬನಿಲ್ಲವೆಂದೇ ಹೇಳಬಹುದು. ಬೀದಿಯಲ್ಲಿ ಸಿಕ್ಕ ಶ್ರೀಸಾಮಾನ್ಯ ಹೆಣ್ಣೂ ಕೂಡ ಶ್ರೀಕೃಷ್ಣದೇವರಾಯನ ಲೇಖನಿಯ ಕುಂಚದಲ್ಲಿ ವಿಷ್ಣುವನ್ನೇ ಮಧುವಣಿಗನನ್ನಾಗಿ ಪಡೆದು ಪರಮಶ್ರೇಷ್ಠ ಸ್ಥಾನವನ್ನು ಅಲಂಕರಿಸುತ್ತಾಳೆ. ಗ್ರೀಷ್ಮ,ವಸಂತ,ವರ್ಷಾ ಋತುಗಳ ವರ್ಣನೆಯಲ್ಲಿ  ಪ್ರಕೃತಿಯೂ ಒಂದು ಮಹತ್ವದ ಪಾತ್ರವಾಗಿ ದಾಖಲಾಗಿದೆ.ಮಳೆಗಾಲದ ನಂತರ ಬರುವ 'ಶರದೃತು ಎಂಬ ಯುವತಿಗೆ  ಸೂರ್ಯ ಚಂದ್ರರಿಬ್ಬರೂ ಕಾಂತಿ ಮತ್ತು ಬಣ್ಣಗಳನ್ನು ತೊಡಿಸಿದಂತಿದೆ.
" ಕಬ್ಬಿನ ಜಲ್ಲೆಗಳು ಅತಿ ಎತ್ತರಕ್ಕೆ ಬೆಳೆದು ತೆನೆಗಳಿಂದ ಭಾರವಾಗಿ ಬಿಲ್ಲಿನಂತೆ ಬಗ್ಗುತ್ತಾ ಸಿಹಿಯಾದ ರಸದೊಂದಿಗೆ ತುಂಬಿದೆ.ಈ ಸಿಹಿ ಗಾಳಿ ಪ್ರತಿಯೊಂದು ಹೂವಿಗೂ ಸೋಕಿಸುತ್ತಾ ಪದ್ಮಗಳೊಡನೆ ಚೆಲ್ಲಾಟವಾಡುತ್ತಿದೆ.ಈ ಗಾಳಿಗೆ ಮಾರುಹೋಗಿ ದುಂಬಿಗಳ ಗುಂಪು ಝೇಂಕಾರ ಗೀತೆಯನ್ನಾಲಾಪಿಸುತ್ತಿದೆ." ಹೀಗೆ ಪ್ರಕೃತಿ ವರ್ಣನೆಯು ಅವಕಾಶ ದೊರೆತಾಗೆಲ್ಲ ಮನೋಹರವಾಗಿ  ಮೈದುಂಬಿ ಬಂದಿದೆ. ಮಧುರಾಪುರದ ವನಿತೆಯರೊಂದಿಗೆ ಋತುಗಳೂ ಕೂಡ ಹೆಣ್ಣಾಗಿ ಈ ಕೃತಿಯನ್ನು ಶೃಂಗರಿಸಿವೆ. ವಿಷ್ಣುಚಿತ್ತನ ಮೂಲಕ ವೈಷ್ಣವ ಮತ ಪ್ರತಿಷ್ಠಾಪನೆಯ ಈ ಕಾವ್ಯದ ಬೀಜವಾಗಿದ್ದರೂ ,ಅತ್ಯುತ್ತಮ ಜನಾನುರಾಗಿಯಾಗಿದ್ದ ರಾಯನು ಈ ಕಾವ್ಯದ ಮುಖೇನ ತನ್ನ ಸಾಮ್ರಾಜ್ಯದ  ಸಮಕಾಲೀನ ರಾಜನೀತಿ,ಧರ್ಮ, ಜನಜೀವನ,ಕಲೆ,ಸಾಹಿತ್ಯ ಸಂಸ್ಕೃತಿ,ಜ್ಞಾನ, ವೈರಾಗ್ಯ, ಸಂಪ್ರದಾಯಗಳನ್ನು  ಆ  ಬೀಜದ ಸುತ್ತಲೂ ಆವರಿಸಿರುವ ಹಣ್ಣಿನ ತಿರುಳಿನಂತೆ ಲೇಪಿಸಿ ರಸವತ್ತಾದ ಪಾಕವನ್ನಾಗಿಸಿದ್ದಾನೆ.ಇದೊಂದು ಲೌಕಿಕದಿಂದೊಡಗೂಡಿದ ಅಲೌಕಿಕ ಕಾವ್ಯ.
ಅಲ್ಲಸಾನಿ ಪೆದ್ದನ, ನಂದಿ ತಿಮ್ಮಣ್ಣ, ಧೂರ್ಜಟ ,ಅಯ್ಯೆಲರಾಜ ರಾಭದ್ರ ಕವಿ, ಮಲ್ಲನ, ತೆನಾಲಿ ರಾಮಕೃಷ್ಣ, ಪಿಂಗಳಸೂರನ,ರಾಮರಾಜಭೂಷಣ ರಂತಹ ಅಷ್ಟದಿಗ್ಗಜರಿಗೆ ಆಶ್ರಯವನ್ನಿತ್ತು ಪೋಷಿಸಿ ನಮ್ಮ ನಾಡಿನ ಸಾಹಿತ್ಯ,ಕಲೆ, ಸಂಸ್ಕೃತಿಯ ಹಿರಿಮೆಯನ್ನು ಉತ್ತುಂಗ ಶಿಖರಕ್ಕೇರಿಸಿದ ಸುಪ್ರಭು ಶ್ರೀಕೃಷ್ಣದೇವರಾಯ.ಡಾ.ನಿರುಪಮಾ ರವರು ತೆಲುಗಿನ ಈ "ಆಮುಕ್ತಮಾಲ್ಯದ" ಕಾವ್ಯವನ್ನು  ಒಪ್ಪವಿಟ್ಟು ಕನ್ನಡದ ಅಚ್ಚಿನಲ್ಲಿ ಸುಂದರ ಪುತ್ಥಳಿಯನ್ನಾಗಿ ಎರಕ ಹೊಯ್ದಿದ್ದಾರೆ; ಕನ್ನಡ ದೇವಿಯ ಮುಡಿ
ಯನ್ನು ಎಂದೂ ಬಾಡದ ಈ ಕಾವ್ಯ ಪುಷ್ಪ 'ಮಾಲ್ಯ'ದಿಂದ ಅಲಂಕರಿಸಿ ಮತ್ತಷ್ಟು  ಶೋಭಿಸುವಂತೆ ಮಾಡಿದ್ದಾರೆ.





Wednesday 31 October 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ
ನಮ್ಮ ನಾಡು ೬೩ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಭ್ರಮದ ಹೊತ್ತಿನಲ್ಲಿ ನನ್ನ ಕೈಗೊಂದು ಮಹತ್ವದ ಕೃತಿ ದಕ್ಕಿದ್ದು, ಅನುಪಮ ಕ್ಷಣಗಳನ್ನು ಮನದುಂಬಿಕೊಳ್ಳಲು ಕಾರಣವಾಯಿತು.ನಮ್ಮ ನಾಡು ಕಂಡ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಅನ್ವರ್ಥವಾಗಿದ್ದಂತಹ, ನಮ್ಮ ಶ್ರೀಮಂತ ನಾಡು ನುಡಿ ಸಂಸೃತಿಯ ಪರಂಪರೆಗೆ ಹೆಸರಾಗಿದ್ದ, 'ಪೇಯಸ್' ರಂತಹ ವಿದೇಶಿ ಯಾತ್ರಿಕರಿಂದ 'ಸುವರ್ಣಯುಗದ' ಸಾಮ್ರಾಜ್ಯವೆಂದು ಬಣ್ಣಿಸಲ್ಪಟ್ಟು ಧೀಮಂತವಾಗಿ ಬೆಳಗಿದ 'ವಿಜಯನಗರ ಸಾಮ್ರಾಜ್ಯ' ದ ಗತವೈಭವವನ್ನು ಸಾರುವ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ "ಆಮುಕ್ತಮಾಲ್ಯದ ".ಯಾವ ರಾಜ್ಯದಲ್ಲಿ ಸುಭದ್ರ ಆಡಳಿತವಿರುತ್ತದೋ ಅಲ್ಲೊಂದು ಸಮೃದ್ಧ ಸಂಸ್ಕೃತಿ ಮೈದಳೆಯುತ್ತದೆ ಎಂಬುದಕ್ಕೆ ನಮ್ಮ ನಾಡನ್ನಾಳಿದ ಕದಂಬರು,ಚಾಲುಕ್ಯರು,ಹೊಯ್ಸಳರು,ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯಗಳೇ ಅತ್ಯುತ್ತಮ  ನಿದರ್ಶನಗಳಾಗಿವೆ. ಅಂತಹ ಒಂದು ಅಭೂತಪೂರ್ವ ಸಂಸ್ಕೃತಿಯ ತವರಾಗಿದ್ದ ವಿಜಯನಗರ ಸಾಮ್ರಾಜ್ಯ ಹೆಸರಿಗೆ ತಕ್ಕಂತೆ ಅನೇಕ  ವಿಜಯಗಳ ಸರಮಾಲೆಗಳನ್ನೇ ಕೊರಳಿಗೆ ಧರಿಸಿಕೊಂಡು, ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ಶಿಲ್ಪ ಕಲೆ,ಸಾಹಿತ್ಯ, ಸಂಗೀತ, ನೃತ್ಯ,ವಾಸ್ತುಶಿಲ್ಪ ದಂತಹ ಲಲಿತಕಲಾಕ್ಷೇತ್ರಗಳೆಂಬ ಗರಿಗಳಿಂದ ಅಲಂಕೃತಗೊಂಡು ಅದರ ಕೀರ್ತಿಕಿರೀಟವು ಕಂಗೊಳಿಸಿ ಮೆರೆದಿದೆ.ಇಂತಹ ಒಂದು ಮಹೋನ್ನತ ಸಾಮ್ರಾಜ್ಯ ಮೈದಾಳಿದ ಪುಣ್ಯಭೂಮಿಯಲ್ಲಿ ನಾವಿದ್ದೇವೆ ಎಂಬುದೇ ಎಲ್ಲ ಕನ್ನಡಿಗರಿಗೆ ಧನ್ಯತೆಯೊಂದಿಗೆ ಸಾರ್ಥಕತೆ ಮತ್ತು ಅಭಿಮಾನವನ್ನು ಮೂಡಿಸುವ ಸಂಗತಿಯಾಗಿದೆ.
ಬಾಲ್ಯದಲ್ಲಿಯೇ ತನ್ನ ಸಹೋದರ ವೀರನರಸಿಂಹನ ದುಷ್ಟತನದಿಂದಾಗಿ ತನ್ನ ಕಣ್ಣುಗಳನ್ನು ಕೀಳಿಸಿಕೊಂಡು ಅನಾಮಿಕನಂತೆ,ಅನಾಥನಂತೆ  ಪ್ರಾಣ ಕಳೆದುಕೊಳ್ಳಬೇಕಾಗಿದ್ದ ತುಳುವ ವಂಶದ ಶ್ರೀ ಕೃಷ್ಣದೇವರಾಯನು, ನಿಷ್ಠಾವಂತ ಮಂತ್ರಿ ಸಾಳ್ವ ತಿಮ್ಮರಸನ ಚಾಣಾಕ್ಷತೆಯಿಂದಾಗಿ ೧೫೦೯ ಆಗಸ್ಟ್ ೭ ರಂದು ಪಟ್ಟವೇರಿ ನಾಡಪ್ರಭುವಾಗಿ ಮೆರೆಯುತ್ತಾನೆ.ಕವಿರಾಜಮಾರ್ಗಕಾರನು
         "ಸುಭಟರ್ಕಳ್ ಕವಿಗಳ್ ಸು
          ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
          ಅಭಿಮಾನಿಗಳತ್ಯುಗ್ರರ್
          ಗಂಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್"
  ಎಂದು ಹೇಳುವ ಈ ಪದ್ಯದಲ್ಲಿನ ಸರ್ವಗುಣಸಂಪನ್ನತೆಗೆ ಅತ್ಯುತ್ತಮ ಉದಾಹರಣೆ ಶ್ರೀಕೃಷ್ಣದೇವರಾಯ ಎಂದರೆ ಅತಿಶಯೋಕ್ತಿಯಾಗಲಾರದು. ಬಾಲ್ಯದಲ್ಲಿಯೇ ಸಂಗೀತ ಸಾಹಿತ್ಯ ಕಲೆ ಸಾಹಸ ಗಳನ್ನು ಶ್ರದ್ಧೆಯಿಂದ ಆರಾಧಿಸಿ, "ಆಂಧ್ರಕವಿತಾ ಪಿತಾಮಹ"ನೆಂದು ಬಿರುದಾಂಕಿತನಾದ ಅಲ್ಲಸಾನಿ ಪೆದ್ದಣ ಮತ್ತು ನಂದಿ ತಿಮ್ಮಣ್ಣರೊಂದಿಗೆ ಒಡನಾಟವನ್ನಿಟ್ಟುಕೊಂಡು ಬೆಳೆದು, ಕವಿಯೂ ಕಲಿಯೂ ಆಗಿ ಇತಿಹಾಸದಾಗಸದಲ್ಲಿ ತನ್ನ ಕೀರ್ತಿಚಂದ್ರನನ್ನು ಶಾಶ್ವತವಾಗಿ ನೆಲೆಗೊಳಿಸಿದವನು ಶ್ರೀಕೃಷ್ಣದೇವರಾಯ.
ತೆಲುಗು ಭಾಷೆಯ ಮಹಾಕಾವ್ಯಗಳಾದ ಅಲ್ಲಸಾನಿ ಪೆದ್ದನ ನ 'ಮನುಚರಿತ್ರೆ',ತೆನಾಲಿ ರಾಮಕೃಷ್ಣನ 'ಪಾಂಡುರಂಗ ಮಹಾತ್ಮೆ',ನಂದಿ ತಿಮ್ಮಣ್ಣನ 'ಪಾರಿಜಾತಾಪಹರಣ',ಧೂರ್ಜಟ ಕವಿಯ 'ಕಾಳಹಸ್ತಿ ಮಹಾತ್ಮೆ',ಪಿಂಗಳಿಸೂರನ 'ಕಳಾ ಪೂರ್ಣೋದಯ ' ಗಳಲ್ಲಿ  ಬಹುಪಾಲು ರಚನೆಯಾಗಿದ್ದು ಕೃಷ್ಣದೇವರಾಯನ ಸಾಹಿತ್ಯ ಮತ್ತು ಸಂಸ್ಕೃತಿಯ ಸುವರ್ಣಯುಗದಲ್ಲಿಯೇ.ಈ ಸಾಲಿಗೆ ಸೇರ್ಪಡೆಯಾದ ಮತ್ತೊಂದು ವಿದ್ವತ್ಪೂರ್ಣ ಮಹಾಕಾವ್ಯವೆಂದರೆ, ಸರಸ್ವತಿ ಕೊರಳ ಮಣಿಹಾರವಾಗಿದ್ದ ಶ್ರೀಕೃಷ್ಣದೇವರಾಯನ "ಆಮುಕ್ತಮಾಲ್ಯದ".
ತೆಲುಗು ಭಾಷೆಯ ಕೃತಿಯಾಗಿದ್ದರೂ ಮೂಲಕ್ಕೆ ಭಂಗ ಬರದಂತೆ ಸ್ವತಂತ್ರ ಕೃತಿಯೆಂಬಂತೆ ಕನ್ನಡೀಕರಿಸಿದವರು  'ಭುವನ ವಿಜಯ' ದಂತಹ ಪ್ರಮುಖ ಕಾದಂಬರಿಗಳನ್ನು ಕೊಡುಗೆಯಾಗಿ ಕೊಟ್ಟ ಕಾದಂಬರಿಗಾರ್ತಿ,ಕಥೆಗಾರ್ತಿ,ಬಹುಭಾಷಾ ವಿಶಾರದೆ,ಸಂಶೋಧಕಿಯರೂ, ಡಾ.ನಿರುಪಮಾ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾದ ಪದ್ಮಾ ಆರ್ ರಾವ್ ರವರು. ಲೇಖಕಿಯೆರೇ ಈ ಕೃತಿಯ ಬಗ್ಗೆ ಪ್ರಸ್ತಾಪಿಸುತ್ತಾ "ಆಮುಕ್ತಮಾಲ್ಯದ "ಕೃತಿಯನ್ನು ನಿರ್ಮಲವಾದ ಮನಸ್ಸಿನಿಂದ ತಪಗೈಯ್ಯುವಂತೆ ಧ್ಯಾನಾಸಕ್ತರಾಗಿ ಓದಿದಾಗ ಮಾತ್ರ ಅದು ತನ್ನ ನಿಗೂಢ ರಹಸ್ಯಗಳನ್ನು ತೆರೆದಿಡಬಲ್ಲದು ಎಂದು ಹೇಳುತ್ತಾರೆ.ಕನ್ನಡದ ಈ ಕೃತಿಯನ್ನು ಓದುವಾಗಲೂ ನಮಗೆ ಅದೇ ಅನುಭವವಾಗುತ್ತದೆ.
ಶ್ರೀಕೃಷ್ಣದೇವರಾಯನು 'ಮದಾಲಸ ಚರಿತ್ರೆ', ಸತ್ಯಾವಧು ಪ್ರೀಣನಂ, ' ಸಕಲ ಕಥಾ ಸಾರಸಂಗ್ರಹ', 'ಜ್ಞಾನಚಿಂತಾಮಣಿ ', 'ರಸಮಂಜರಿ'  ಪ್ರೌಢಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿದ್ದು ಇವು ಉಪಲಬ್ಧವಿಲ್ಲ. ಲಭ್ಯವಿರುವ ರಾಯನ ಏಕೈಕ ಕೃತಿ "ಆಮುಕ್ತಮಾಲ್ಯದ" ಆಗಿದೆ ."ಆಮುಕ್ತ " ಎಂದರೆ ಅಲಂಕರಿಸಿಕೊಂಡ," ಮಾಲ್ಯ" ಎಂದರೆ ಹೂ ಮಾಲೆ, "ದ "ಎಂದರೆ ಕೊಟ್ಟವಳು ಎಂದಾಗಿ ಪೂರ್ಣವಾದ ಅರ್ಥ "ಅಲಂಕರಿಸಿಕೊಂಡ ಹೂ ಮಾಲೆಯನ್ನು ಕೊಟ್ಟವಳು " ಎಂದರ್ಥವಾಗುತ್ತದೆ. ತಮಿಳಿನ ಆಳ್ವಾರರ ಕಥೆಯೊಂದು ತೆಲುಗು ಭಾಷೆಯಲ್ಲಿ ಕನ್ನಡದ ರಾಜದುರಂಧರನೂ,ಬಹುಭಾಷಾ ವಿದ್ವಾಂಸನೂ,ರಾಜನೀತಿಶಾಸ್ತ್ರಜ್ಞನೂ ಆದ ಶ್ರೀಕೃಷ್ಣದೇವರಾಯನಿಂದ ಜನ್ಮತಳೆದಿರುವುದು, ತ್ರಿಭಾಷಾ ಸೂತ್ರದಲ್ಲಿ ಪೋಣಿಸಿದ ಮಣಿಹಾರದಂತೆ ಪ್ರಕರ್ಷಿತವಾಗಿದೆ.  ಇಲ್ಲಿಯ  ಕಥೆ ಚಿಕ್ಜದಾಗಿದ್ದರೂ ಚಕ್ಕೆ,ಚೂರ್ಣ, ಮಸಾಲೆಗಳಂತಹ ಪೂರಕ ಘಟನೆಗಳೇ ಬಳಿಸಾರಿ ವಿಜೃಂಭಿಸಿವೆ. ಈ ಕಾವ್ಯದಲ್ಲಿ ಮೂರು ಕಥೆಗಳು ಪ್ರಮುಖವಾಗಿವೆ.
೧.)ಯಮುನಾಚಾರ್ಯರ ಚರಿತ್ರೆ,
೨) ಖಾಂಡಿಕ್ಯ ಕೇಶಿಧ್ವಜರ ಕಥೆ
೩) ಮಾಲದಾಸರಿ ಕಥೆ
ತಮಿಳು ದೇಶದ ವಿಲ್ಲಿಪುತ್ತೂರಿನ ವೈಷ್ಣವ ಭಕ್ತ ವಿಷ್ಣುಚಿತ್ತನ ಸಾಕುಮಗಳು "ಆಂಡಾಳಮ್ಮ "(ತಾಯಿ) ಇವಳು ತಂದೆ ಕಟ್ಟಿದ ಹೂಮಾಲೆಯನ್ನು ವ್ಯಾಮೋಹದಿಂದ ‌  ತಾನೊಂದು ಗಳಿಗೆ ಮುಡಿದ ನಂತರವೇ ದೇವರಿಗೆ ಸಮರ್ಪಿಸುತ್ತಿದ್ದಳು.ಮಗಳ ಈ ಹುಚ್ಚಾಟ  ಗೊತ್ತಾಗಿ ತಂದೆ ವಿಷ್ಣುದೇವರಿಗೆ ಮಗಳು ಮುಡಿಯದ ಹೊಸ ಮಾಲೆಯನ್ನು ತಂದು ಅರ್ಪಿಸುತ್ತಾನೆ.
ಇದರಿಂದ ತೃಪ್ತನಾಗದ ದೇವರು ಕನ್ಯೆ ಮುಡಿದ ಹೂಮಾಲೆಯೇ ಸುಮಧುರವಾದ ಪರಿಮಳಭರಿತವಾಗಿರುತ್ತದೆಂದು ಕನ್ಯೆಯು(ವಿಷ್ಣುಚಿತ್ತನ ಸಾಕುಮಗಳು) ಮುಡಿದ ಪುಷ್ಪಮಾಲೆಯನ್ನೇ ಬಯಸುತ್ತಾನೆ.ಇದರಿಂದ ಆನಂದಿತುಂದಿಲನಾಗಿ ದೇವರ ಕೃಪೆಗೆ ಪಾತ್ರಳಾದ "ಎನ್ನೈ ಆಂಡಾಳ್"(ನನ್ನ ತಾಯಿ) ಎಂದು ಮಗಳನ್ನು ಕೊಂಡಾಡುತ್ತಾನೆ.ದೇವರೇ ತನ್ನನ್ನು ಬಯಸಿರುವಾಗ ತಾನೂ ಕೂಡ ನಮ್ಮ ಚೆನ್ನಮಲ್ಲಿಕಾರ್ಜುನನೊಲಿದ ವಚನಗಾರ್ತಿ ಅಕ್ಕನಂತೆ  ಆ ದೇವರನ್ನೇ ಮದುವೆಯಾಗುತ್ತೇನೆಂದು  ವೃತವಿಡಿದು ಭಕ್ತಿಯನ್ನಾಚರಿಸಿ ಶ್ರೀರಂಗನಾಥನನ್ನೊಲಿಸಿಕೊಂಡು ಮದುವೆಯೂ! ಆಗುತ್ತಾಳೆ. ಇವಳು ದೈವಾರಾಧನೆಗೆ ಹಾಡಿದ ಗೀತೆಗಳೇ ತಮಿಳಿನಲ್ಲಿ "ತಿರುಪ್ಪಾವೈ" ಎಂದು ಪ್ರಖ್ಯಾತವಾಗಿವೆ.ತಮಿಳಿನ ಹನ್ನೆರಡು ಆಳ್ವಾರರಲ್ಲಿ ಈ ವಿಷ್ಣುಚಿತ್ತನೂ,ಆಂಡಾಳಮ್ಮನೂ ಮಹಾವ್ಯಕ್ತಿತ್ವಗಳಾಗಿ ಸ್ಥಾನ ಪಡೆದಿದ್ದಾರೆ.ರಾಯನು ಈ ಚಿಕ್ಜ ಕಥೆಯ ಎಳೆಯನ್ನಿಟ್ಟುಕೊಂಡು, ಸಮುಚಿತ ಘಟನೆಗಳ ರಕ್ತಮಾಂಸವನ್ಬು ತುಂಬಿ,ಜೀವಂತ ದೃಶ್ಯ ಕಾವ್ಯವೊಂದನ್ನು ರಚಿಸಿದ್ದಾನೆ.
ಉತ್ಪ್ರೇಕ್ಷೆ, ಉಪಮಾ ಅಲಂಕಾರಗಳು ಕಾವ್ಯಕ್ಕೆ ಕಳೆಯನ್ನು ತಂದಿವೆ.ಹೀಗೆ ವಿಷ್ಣುಚಿತ್ತ ಹಾಗೂ ಆಂಡಾಳಮ್ಮ ಇವರಿಬ್ಬರ ಚರಿತ್ರೆಯನ್ನು ೭ ಆಶ್ವಾಸಗಳಲ್ಲಿ ಪ್ರೌಢ ಮಹಾಕಾವ್ಯವಾಗಿ ಬರೆಯಲು ಪ್ರೇರೇಪಿಸಿದ್ದೇ ಕನಸಿನಲ್ಲಿ ದರ್ಶನಗೈದು ಆಶೀರ್ವದಿಸಿದ ತನ್ನ ಆರಾಧ್ಯ ದೈವ ಭಗವಾನ್ ವಿಷ್ಣು ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾನೆ. "ವೀರನಾರಾಯಣನೇ ಕವಿ, ಲಿಪಿಕಾರ ಶ್ರೀಕೃಷ್ಣದೇವರಾಯ "ಎಂದು ಕುಮಾರವ್ಯಾಸನಂತೆ ವಿನಮ್ರತೆಯನ್ನೂ ಮೆರೆಯುತ್ತಾನೆ.

                                                      (ಮುಂದುವರೆಯುವುದು...)

Saturday 13 October 2018

"ಶೀಲಾಗ್ನಿ"

"ಶೀಲಾಗ್ನಿ"

ಬೆತ್ತಲಾದವು ದೊಡ್ಡವರ
ಹೆಬ್ಬಯಕೆಗಳು!
ಕಳಚಿದವು ಧೀಮಂತರ
ಮುಖವಾಡಗಳು!
ಕ್ರಾಂತಿಯನೆಬ್ಬಿಸಿದೆ 
ಜಗದಲಿ ಮೀ ಟೂ
ಹೊರಬೀಳುತಿವೆ
ಎಲ್ಲೆಲ್ಲೋ ನಡೆದ ಮೀಟು
ಬೀಳುತಿವೆ ಖ್ಯಾತರಿಗೆ 
ಏಟಿನ ಮೇಲೇಟು
ಕೇಳಲೆಷ್ಟು ಘೋರವದು
'ಕಲೆಗಾಗಿ ಪಲ್ಲಂಗ'
ಮಾಡದಿರು ಓ ಮನುಜ
ಸೀಮೋಲ್ಲಂಘನ
ಜಾರುತಿವೆ ನಾರುತಿವೆ
ಲಯ ತಪ್ಪಿದ ಹೆಜ್ಜೆಗಳು
ಹಿಂಸಿಸುತಿವೆ ಗತಕಾಲದ 
ದೌರ್ಜನ್ಯದ ಬಾಹುಗಳು
ಇರಿಯುತಿವೆ ಅವಿತು ಹೂತು
ಹೋದ  ಮಾನಭಂಗಗಳು
ಸಾಕೆನಿಸಿದೆ ಕಾಲಗರ್ಭಕೆ
ಹೊತ್ತು ಹೆತ್ತು ಮುಚ್ಚಿ ಸಾಕಿ
ಎದ್ದಿದೆ ಧೂಳು ಕೊಡವಿ
ಅಕ್ಷೋಹಿಣಿ ಮಹಾಸೈನ್ಯ
ಕಾಯುತಿದೆ ಆಕ್ರೋಶದಿ
ಯಾರದಿದೆಯೊ ಬಲಿ ಸರದಿ
ರಣರಂಗದಿ ಬೆಂಕಿಯುಗುಳಿ
ಉರಿಯುತಿದೆ ಧಗಧಗಿಸಿ
ಮನದೊಳಗಣ ಆರದ ಬೆಂಕಿ!
ಕುಣಿಯುತಿದೆ ಶಸ್ತ್ರ ಹಿಡಿದು
ಚಂಡಿಯಂತೆ ಬಲೆ ಬೀಸಿ
ಚಾಮುಂಡಿಯಂತೆ ನೆತ್ತರು
ಶೀಲ ತ್ರಿಶೂಲ ಹಿಡಿದು
ಇನ್ನಾದರೂ ಸಿಗಲಿ ಮುಕ್ತಿ 
ನೊಂದು ಬೆಂದ ನೋವುಗಳಿಗೆ
ಮುದುಡಿಹೋದ ಆಕ್ರಂದನಗಳಿಗೆ
ಎಷ್ಟೋ ಅಹಲ್ಯೆಯರ
ಬೇಯುತಿರುವ ಹೃದಯಗಳಿಗೆ...


Wednesday 3 October 2018

"೧೫೦ ರ ಗಾಂಧಿ ಜೀವನ ಸಂದೇಶವಾಗಿ...."

"೧೫೦ ರ ಗಾಂಧಿ ಜೀವನ ಸಂದೇಶವಾಗಿ...."
        ಗಾಂಧಿ ಎಂಬ 'ಸತ್ಯ'ವನ್ನು ,ಬಾಪು ಎಂಬ 'ಅಹಿಂಸೆ'ಯನ್ನು, 'ಮಹಾತ್ಮಾ 'ಎಂಬ 'ಶಾಂತಿ'ಯನ್ನು ನಾವು ಅನುಸರಿಸಲಾಗುತ್ತಿಲ್ಲವೆಂಬುದಕ್ಕೆ ಭಾರತ ಮಾತೆಯ ಕಿರೀಟ 'ಜಮ್ಮು ಕಾಶ್ಮೀರ'ದಲ್ಲಿ ಸದಾ ಕೇಳಿಬರುತ್ತಿರುವ ಗುಂಡಿನ ಮೊರೆತ, ಬಾಂಗ್ಲಾದ ಗಡಿಯಲ್ಲಾಗುತ್ತಿರುವ ತಗಾದೆಗಳು, ದಲೈಲಾಮಾರಂಥವರ ಹತ್ಯೆಗೆ ನಡೆಯುತ್ತಿರುವ ಸಂಚುಗಳು, ರೈತರ ಆತ್ಮಹತ್ಯೆಗಳು, ನೇಗಿಲಯೋಗಿಯ ಪ್ರತಿಭಟನೆಗಳು, ನಮ್ಮ ನೆರೆಹೊರೆಯಲ್ಲಾಗುತ್ತಿರುವ ಮರ್ಯಾದಾ ಹತ್ಯೆಗಳು,ಅತ್ಯಾಚಾರಗಳು,ನಕ್ಸಲ್ ದಾಳಿಗಳು  ಜ್ವಲಂತ ನಿದರ್ಶನಗಳಾಗಿವೆ. ಅದಕ್ಕಾಗಿಯೇ ಜಗತ್ತಿನ ಪ್ರಸಿದ್ಧ ವಿಜ್ಞಾನಿ 'ಐನ್ ಸ್ಟೀನ್' ರಕ್ತ ಮಾಂಸಗಳಿಂದ ತುಂಬಿದ ಇಂತಹ ಮಾನವತಾವಾದಿಯೊಬ್ಬ ಈ ಭೂಮಿಯ ಮೇಲೆ ನಡೆದಾಡಿದ್ದ ಎಂಬುದನ್ನು ಮುಂದಿನ ಪೀಳಿಗೆ ನಂಬಲಿಕ್ಕಿಲ್ಲ " ಎಂದು ಭವಿಷ್ಯವನ್ನು ಕಣ್ಣೆದುರಿಗೆ ಕಂಡಂತೆ ಬಣ್ಣಿಸಿದ್ದರು; ಗಾಂಧಿಯವರನ್ನು ಈ ಜಗದ ವಿಸ್ಮಯವೆಂದು ಗುರುತಿಸಿದ್ದರು. ಹೌದು, ನಾವು ಅದ್ಬುತವೆಂದು ಕೊಂಡಾಡುವ ಗಾಂಧೀಜಿಯನ್ನು ನಮ್ಮದೇ ಮನೆಯ ಹಿರಿಯಜ್ಜನೆಂದು  ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
 ಗಾಂಧೀಜಿಯನ್ನು ನಾವು ದೇವಾಲಯದ ಗರ್ಭಗುಡಿಯಲ್ಲಿಟ್ಟು ಆರಾಧಿಸುತ್ತಿದ್ದೇವೆ.ನಗರದ   ವೃತ್ತಗಳಲ್ಲಿ,  ಗಲ್ಲಿಗಳಲ್ಲಿ ಕಂಚಿನ ಅಥವಾ ಶಿಲೆಯ ಮೂರ್ತಿಯನ್ನಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ.ವರುಷಕ್ಕೊಮ್ಮೆ  ಜಯಂತಿಯಂದು ಅವನ ಮುಂದೆ ತಲೆಬಾಗಿ ಪುಷ್ಪಮಾಲೆ ಸಮರ್ಪಿಸಿ,  "ರಘುಪತಿ ರಾಘವ ರಾಜಾರಾಮ್......ಎಂದು ಭಜಿಸಿ ನಮಿಸುತ್ತಿದ್ದೇವೆ. ಇದನ್ನು ಹೊರತುಪಡಿಸಿ ಗಾಂಧೀಜಿಯನ್ನು ಪ್ರತಿನಿತ್ಯ ನಾವು ಬದುಕಲಾಗುತ್ತಿಲ್ಲ. ಬಾಪು, ತಾತ ಎಂದು ಪುಟ್ಟ ಮಕ್ಕಳ  ಎದೆಯೊಳಗೆ ಗಾಂಧಿಯನ್ನು ಇಳಿಸಲು ಪ್ರಯತ್ನಿಸುವ ನಾವು ನಮ್ಮದೇ ಹೃದಯದೊಳಗೆ ಈ ತಾತನನ್ನು ಅರಿವನ್ನಾಗಿ ಬಿಟ್ಟುಕೊಳ್ಳಲು ಮರೆಯುತ್ತೇವೆ.ಈ ವೈರುಧ್ಯವೇ ಗಾಂಧಿಯನ್ನು ನಮ್ಮಿಂದ ದೂರವಾಗಿಸುತ್ತಿದೆ. ನಮ್ಮ ದೇಶದ ಜನಸಂಖ್ಯೆಯಷ್ಟೇ ಅವರವರ ಭಾವಕ್ಕೆ ತಕ್ಕಂತೆ ಕೋಟಿಗಟ್ಟಲೇ ಗಾಂಧಿಯರನ್ನು ನಾವು ನಮ್ಮಮನಮನೆ ಗಳಲ್ಲಿ ಸೃಷ್ಟಿಸಿಕೊಂಡಿದ್ದೇವೆ. ಆದರೂ ಗಾಂಧೀಜಿ ನಮ್ಮ ಬದುಕನ್ನು ಆವರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧಿಯವರಷ್ಟು ಚರ್ಚೆಗೊಳಗಾದ, ಚರ್ಚೆಗೊಳಗಾಗುತ್ತಿರುವ ವ್ಯಕ್ತಿತ್ವ ಬೇರೊಂದಿಲ್ಲವೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಗಾಂಧೀಜಿಯವರು ಯಾವುದನ್ನು ತಮಗೆ ನೋವು ಕೊಡುವ ಸಂಗತಿ ಎಂದು  ವಿರೋಧಿಸಿದ್ದರೊ, ನಾವು ಅದನ್ನೇ ಇಂದು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಮಹಾತ್ಮಾ,ಪರಮಾತ್ಮ, ದೇವರು ಎಂದು  ಗಾಂಧಿಯವರನ್ನು ಬಗೆ ಬಗೆಯ    ತೃಪ್ತಿಕರ ಹೆಸರುಗಳಿಂದ  ಆರಾಧಿಸಿ, ಮಾಡಬೇಕಾದ ಕರ್ತವ್ಯಗಳಿಂದ,ಕೈಗೊಳ್ಳಬೇಕಾದ ಕಾರ್ಯಗಳಿಂದ ವಿಮುಖರಾಗುತ್ತಿದ್ದೇವೆ.
ಗಾಂಧಿಯೇ ಬೇರೆ ಈ ನಮ್ಮ ಕಾಲದ ಜೀವನವೇ ಬೇರೆ ಎಂದುಕೊಂಡು ಕಾಲನ ಕುದುರೆಯೇರಿ ಹೊರಟಿದ್ದೇವೆ.ಇವೆರಡರ ಮಧ್ಯದ ಅಂತರ ಕಡಿಮೆಯಾಗದ ಹೊರತು  ನಮ್ಮ ಜೀವನದ ಎಷ್ಟೋ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು.ಅಂದರೆ ಈಗಲೂ ಗಾಂಧಿ ನಮಗೆಷ್ಟು ಪ್ರಸ್ತುತವಾಗಿದ್ದಾರೆ ಎಂಬುದನ್ನು ಅಂತರಾವಲೋಕನದ ಮೂಲಕ ಕಂಡುಕೊಳ್ಳಬೇಕಾಗಿದೆ. ನಾವು ನಿಜದಲ್ಲಿ ಗಾಂಧಿಯವರನ್ನಾಚರಿಸಬೇಕಾಗಿದೆ;
ಗಾಂಧಿಯವರ ಸರಳತೆಯನ್ನು ಬದುಕಬೇಕಾಗಿದೆ;ಅವರ ಉದಾತ್ತ ಚಿಂತನೆಯನ್ನು ಜೀವಿಸಬೇಕಾಗಿದೆ;
ನಾವು ಇತ್ತೀಚೆಗೆ  ಎಲ್ಲ ಮಹಾಪುರುಷರ ಹಬ್ಬಗಳನ್ನು ಅವರ ಹುಟ್ಟಿಗನುಗುಣವಾಗಿ ಆಯಾ ಜಾತಿ ಮತ ಪಂಗಡಗಳಿಗೆ ಮಾತ್ರ ಜನನಾಯಕರನ್ನಾಗಿ ಸೀಮಿತಗೊಳಿಸಿ  ವೈಭವೋಪೇತವಾಗಿ ಅವರ ಭಾವಚಿತ್ರಗಳನ್ನು  ಮೆರೆಸುವುದರ ಮೂಲಕ ನಮ್ಮ ಬಾಹ್ಯ ರಾಜಕಾರಣಕ್ಕೆ ತೃಪ್ತಿಯಾಗುವ  ಹಾಗೆ ಆಚರಿಸಿ,ಕುಣಿದು ಕುಪ್ಪಳಿಸುವ ಹೊಸ ಪರಂಪರೆಗೆ ನಾಂದಿ ಹಾಡಿದ್ದೇವೆ! ಕೆಲವು ಹಿರಿಯರಿಗಂತೂ ಈಗೀಗ ತಮ್ಮ ಜಾತಿಯಲ್ಲಿ ಆಗಿಹೋದ ಸಾಧಕರ ಬಗ್ಗೆ ತಿಳಿದುಕೊಳ್ಳುವಂತಾಗಿದೆ  ಅಥವಾ ಈ ಮಹಾಪುರುಷರು ತಮ್ಮ ಜಾತಿಯವರೆ ?  ಎಂದು ಆಶ್ಚರ್ಯ ಪಡುವಂತಾಗಿದೆ!ಆದರೆ ಇಲ್ಲಿಯವರೆಗೆ ಜಾತ್ಯಾತೀತ ಗಾಂಧಿಯವರಿಗೆ ಮಾತ್ರ ಈ ಸ್ವಜಾತಿ ಪೆಡಂಭೂತ ಮೆತ್ತಿಕೊಂಡಿಲ್ಲವೆಂಬುದೇ ಸಮಾಧಾನದ ಸಂಗತಿ.
ಹಾಗಾದರೆ ಗಾಂಧಿ ನಮಗೆಷ್ಟು ಪ್ರಸ್ತುತ ಎಂಬುದನ್ನು ನಿಕಷಕ್ಕೊಳಪಡಿಸುವುದಾದರೆ,ಗಾಂಧಿ ನಮ್ಮ ಜೀವನ ಪಥವಾಗಬೇಕು; ನಮ್ಮ ಕ್ಷಣ ಕ್ಷಣದ ಕರ್ಮಕಾರಣಗಳಲ್ಲಿ ಒಂದಾಗಬೇಕು. ನಾವು ನಡೆಯುವ ಪ್ರತಿ ಹೆಜ್ಜೆಯಲ್ಲಿಯೂ ಗಾಂಧಿ ನಡೆದ ದಾರಿಯ ನೆನಪುಗಳಿರಬೇಕು.  ಪ್ಲೇಟೋ, ಸಾಕ್ರಟೀಸ್,ಅರಿಸ್ಟಾಟಲ್ ರಂಥವರು  ವೈಚಾರಿಕತೆಯನ್ನು ವೈಜ್ಞಾನಿಕತೆಯನ್ನು ಬರೆದು ತತ್ವಜ್ಞಾನಿಗಳಾದರೆ, ಗಾಂಧಿ ವೈಚಾರಿಕತೆಯ ಮೂಲ ಸತ್ವಗಳಾದ  ಸತ್ಯ ,ಶಾಂತಿ, ಅಹಿಂಸೆಗಳನ್ನೇ  ಬದುಕಿ ತೋರಿಸಿದ ದಾರ್ಶನಿಕರಾಗಿದ್ದಾರೆ.ನನ್ನ ಬಾಲ್ಯದ ದಿನಗಳಲ್ಲಿ ನನ್ನದೇ ಮನೆಯ ಅಜ್ಜನಂತೆ ಕೇಳಿದ್ದ ಗಾಂಧಿಯಲ್ಲಿ ಇಂದು ಬದುಕಿನ ತತ್ವಜ್ಞಾನಿಯನ್ನು ಕಾಣುತ್ತಿದ್ದೇನೆ.
ಪಿ .ಲಂಕೇಶ್ ರವರು ತಮ್ಮ  "ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ "ಎಂಬ ಲೇಖನದಲ್ಲಿ "ಬುದ್ಧನ ನುಡಿಮುತ್ತುಗಳನ್ನು ಹೀಗೆ ಉಲ್ಲೇಖಿಸುತ್ತಾರೆ -" ಜಗತ್ತಿಗೆ ನಾನೇ ಕೊನೆಯ ಬುದ್ಧನಲ್ಲ.ನನ್ನ ಸರಳ ತತ್ವ ಪರಿಪಾಲನೆಯಿಂದ ಯಾರು ಬೇಕಾದರೂ ಬುದ್ಧನಾಗಬಹುದು" ಎಂದು ಸರಳ ಸತ್ಯವನ್ನು ಜಗತ್ತಿಗೆ ಅರುಹಿದನು.ಹೀಗೆಂದು  ಬುದ್ಧ ಮಾರ್ಗದೋರಿದರೂ,ನಾವು ಮಾತ್ರ ಬುದ್ಧನನ್ನು ಪರಮದೈವ ವೆಂದು ಆರಾಧಿಸಿ ನಮ್ಮಿಂದ ದೂರವಾದ  ದೈವಪೀಠದಲ್ಲಿ ಶಿಲಾಮೂರ್ತಿಯಾಗಿಯೋ ಅಥವಾ ಲೋಹಮೂರ್ತಿಯಾಗಿಯೋ ಪ್ರತಿಷ್ಠಾಪಿಸುವಲ್ಲಿ ಮಾತ್ರ ನಮ್ಮ ಕರ್ತವ್ಯ ಮುಗಿಯಿತೆಂದು ನಿರಾಳರಾಗಿದ್ದೇವೆ. ಯಾರು ಮೂರ್ತಿ ಆರಾಧನೆಯನ್ನು ಅರ್ಥಹೀನವೆಂದು ವಿರೋಧಿಸಿದ್ದರೋ ಅವರನ್ನೇ  ಕಲಾಮೂರ್ತಿಗಳನ್ನಾಗಿ  ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿ ವರುಷಕ್ಕೊಮ್ಮೆ ಆರಾಧಿಸಿ ಆ ಮಹನೀಯರು ಬದುಕಿದ ತತ್ವಾಚರಣೆಯನ್ನು ಮರೆಯುತ್ತಿದ್ದೇವೆ. ಡಾ.ರಾಜಶೇಖರ ಮಠಪತಿಯವರು ತಮ್ಮ 'ಗಾಂಧಿ' ಕೃತಿಯಲ್ಲಿ "ಗಾಂಧೀಜಿಯವರನ್ನು ಮಹಾತ್ಮ ನೆಂದು ನಮ್ಮಿಂದ ದೂರ ಮಾಡಿಕೊಳ್ಳುವುದಕ್ಕಿಂತ ನಮ್ಮಂತೆಯೇ ರಕ್ತ ಮಾಂಸ, ನೋವು, ನಲಿವು,ಹಠ, ದ್ವಂದ್ವ, ಮೌನ, ಕೋಪ, ಆನಂದಗಳನ್ನೊಂಡ  ಸರಳ ಮನುಷ್ಯನೆಂದು ಸ್ವೀಕರಿಸಿ , ನಮ್ಮ ಬದುಕುಗಳಲ್ಲಿ ನಿತ್ಯಸತ್ಯನನ್ನಾಗಿ ಆಚರಿಸಿ, ಹತ್ತಿರವಾಗಿಸಿಕೊಳ್ಳಬೇಕಾಗಿದೆ" ಎನ್ನುತ್ತಾರೆ.
         ಅಕ್ಕನ ಸಾಲುಗಳಲ್ಲಿನ  ನೆಲದ ಮರೆಯ ನಿಧಾನದಂತೆ, ನಮ್ಮ ಭಾರತೀಯರ ಭಾವದ ಮರೆಯ ಬ್ರಹ್ಮನಾದವರು ಗಾಂಧೀಜಿ. ಗಾಂಧಿಯವರ ಪ್ರಕಾರ ಯಾವುದು ದೇಸಿ ಸಂಸ್ಕೃತಿಯ ಪರಮೋಚ್ಚ ಸಂಕೇತವಾಗಿತ್ತೊ,ಯಾವುದು ಸ್ವಾವಲಂಬಿ ಬದುಕಿನ ಆಧಾರ ಸ್ತಂಭವಾಗಿತ್ತೊ ,ಯಾವುದು ಭಾರತೀಯರ ಎದೆಗಳಲ್ಲಿ ಬೆಚ್ಚಗಿನ ಭಾವವನ್ನು ಮೂಡಿಸಿ ,ಬ್ರಿಟಿಷ್ ಸಂಸ್ಕೃತಿಯ ವಿರುದ್ಧದ ಹೋರಾಟಕ್ಕೊಂದು ಕಿಡಿಯನ್ನು ಹೊತ್ತಿಸಿತ್ತೊ, ಖಾದಿಯನ್ನು ಉತ್ಪಾದಿಸಿ  ಅಂದಿನ  ಕೈಗಾರಿಕೆಗಳಿಗೆಲ್ಲ ಸೂರ್ಯನಂತಿರಬೇಕಾಗಿತ್ತೊ, ಅದೇ "ಚರಕ"ವಿಂದು ನಮ್ಮದೇ ಮನೆಯ ಮೂಲೆಯೊಂದರಲ್ಲಿ   ತನ್ನ ದೇಹದ ಮೂಳೆಗಳನ್ನೆಲ್ಲ ಮುರಿದುಕೊಂಡು ,ಉಸಿರಿಲ್ಲದೆ ಕ್ಷಯರೋಗದಿಂದ ಕ್ಷೀಣಿಸಿ, ಜೇಡಗಳಿಗೆ ಆಶ್ರಯಾದಾತನಾಗಿ, ಪಾಳುಬಿದ್ದಿರುವ ಎದೆಗೂಡಿನಂತೆ ಅವಸಾನದ ಅಂಚಿನಲ್ಲಿರುವ ಪಳೆಯುಳಿಕೆಯಾಗಿದೆ.  ಹೀಗೆ ಕೆಲವು ಮನೆಗಳ ನಿರುಪಯುಕ್ತ ಸರಕು ಕೋಣೆಯಲ್ಲಿ ಮೈಮುರಿದುಕೊಂಡು ಅನಾಥವಾಗಿ ಬಿದ್ದಿರುವ ಚರಕ ಮತ್ತು ಅದರ ತಾಯಿಯಾದ ಕೈಮಗ್ಗದ ಅವಶೇಷಗಳು ವೈಭೋಗದ ಇಂದಿನ  ಆಧುನಿಕ ಜೀವನದಲ್ಲಿ ಗಾಂಧಿಯವರ ದೇಸಿ ಸಂಸ್ಕೃತಿ, ಮೂಲಶಿಕ್ಷಣ ಹಾಗೂ ಗುಡಿಕೈಗಾರಿಕೆಗಳು  ಅನುಭವಿಸುತ್ತಿರುವ ದುಸ್ಥಿತಿಯ ಪ್ರತೀಕವಾಗಿವೆ.
ಒಂದು ಕಾಲದಲ್ಲಿ ನನ್ನವ್ವನ ಕೈಯ್ಯಲ್ಲಿ ತಿರುಗುತ್ತಾ ನೂಲನ್ನು ಸುತ್ತುತ್ತಿದ್ದ  ಗಾಂಧಿ ಚರಕ ತನ್ನ ಪೂರ್ವದ ಜೀವಕಳೆಯನ್ನು ಕಳೆದುಕೊಂಡು ಬೇಡವಾದ ಕೊರಡಾಗಿದೆ.  ಇಂದು ಕೈಮಗ್ಗದ ಸ್ಥಾನವನ್ನು ವಿದ್ಯುತ್ ಮಗ್ಗಗಳು ಆವರಿಸಿಕೊಂಡಿದ್ದರೂ  ಅವುಗಳ ಸ್ಥಿತಿಯೇನೂ ಭಿನ್ನವಾಗಿಲ್ಲ. ನೇಯ್ಗೆಯ ಕುಪ್ಪಸದ  ಖಣಗಳಿಗೆ ಕರ್ನಾಟಕದಲ್ಲಿ ಅಷ್ಟೇ ಏಕೆ ಮಹಾರಾಷ್ಟ್ರದಂತಹ ಹೊರರಾಜ್ಯಗಳಲ್ಲಿಯೂ ಹೆಸರುವಾಸಿಯಾಗಿರುವ ನನ್ನೂರು  ಗುಳೇದಗುಡ್ಡ ಸೇರಿದಂತೆ ಕೆರೂರು, ಅಮೀನಗಡ, ಇಲಕಲ್, ಬನಹಟ್ಟಿ, ಮಹಾಲಿಂಗಪುರ,ಗಜೇಂದ್ರಗಡ ಮುಂತಾದ ಪಟ್ಟಣಗಳು ನೇಕಾರಿಕೆಯ ಗುಡಿ ಸಂಸ್ಕೃತಿಯನ್ನುಳಿಸಿಕೊಳ್ಳಲು ಹೆಣಗಾಡುತ್ತಿವೆ. ನಾಡಿನ ಖ್ಯಾತ ರಂಗಕರ್ಮಿ ಪ್ರಸನ್ನ ರವರು ಚರಕ ಸಂಸ್ಕೃತಿಯ ರಕ್ಷಣೆಗಾಗಿ ಪಣತೊಟ್ಟು, ಸತ್ಯಾಗ್ರಹ ಗಳ ಮೂಲಕ ಸರಕಾರವನ್ನೆಚ್ಚರಿಸುತ್ತಾ ಗಾಂಧಿ ಮಾರ್ಗ
ದಲ್ಲಿ ಅಚಲವಾಗಿ ನಂಬಿಕೆಯಿಟ್ಟು ಮುನ್ನಡೆಯುತ್ತಿದ್ದಾರೆ.  ಖಾದಿಯನ್ನು ಉತ್ಪಾದಿಸುತ್ತಾ ದೇಸಿ ಸಂಸ್ಕೃತಿಯ ಉಳಿವಿಗಾಗಿ ನಾಡಿನಾದ್ಯಂತ  ಸಾಮಾಜಿಕ  ಮೌನಕ್ರಾಂತಿಯನ್ನು ಹುಟ್ಟುಹಾಕುವುದರ ಮೂಲಕ ಸಂಚಲನವನ್ನುಂಟುಮಾಡಿದ್ದಾರೆ. ಜನರಿಂದ ತುಂಬಿ ತುಳುಕಬೇಕಾಗಿದ್ದ, ಗಾಂಧೀಜಿಯವರ ಸ್ವಾವಲಂಬಿ ಬದುಕಿನ ಮಾರ್ಗವಾಗಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಸೊರಗುತ್ತಿವೆ. ಈ ಕೇಂದ್ರಗಳನ್ನು ಬದಲಾದ ಕಾಲಘಟ್ಟಕ್ಕನುಗುಣವಾಗಿ ಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆ.


Thursday 6 September 2018

ಅಜಾತಶತ್ರು

ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ




ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ





 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...