Total Pageviews

Sunday 4 August 2019

ಚಹಾಯಣ
ಕಲಿಯುಗದ ಅಮೃತವೆಂದೇ  ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!.  ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ"ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು.."ಎಂದು ಮನೆಯ ಹತ್ತಿರದ  ದೇವಸ್ಥಾನದ ಶುಭ ಸುಪ್ರಭಾತದೊಂದಿಗೆ  ಎಚ್ಚರವಾಗುವ ನನಗೆ ಬೆಳಗು  ನಿತ್ಯೋತ್ಸವವಿದ್ದಂತೆ. ಪ್ರತಿ ಶುಭೋದಯವನ್ನೂ ಹಬ್ಬದಂತೆ ಸಂಭ್ರಮಿಸಿ ಹರ್ಷಿಸುತ್ತೇನೆ. ಮನೆಯ ಮುಂದಿನ ಬೇವು, ತೆಂಗು, ಕಣಗಲಿ ಗಿಡಮರಗಳೊಳಗಣ ಗೂಡುಗಳಿಂದ ರೆಕ್ಕೆಬಿಚ್ಚಿ ಮೈಮುರಿಯುತ್ತಾ ಹೊರಬಂದ ಗಿಳಿ, ಗುಬ್ಬಿ , ಪಾರಿವಾಳ, ಕೋಗಿಲೆ ಕಾಕಗಳ ಚಿಲಿಪಿಲಿ ಗಾನ, ಮನೆಯ ಮುಂದಿನ ಕಲ್ಪವೃಕ್ಷದ ಪ್ರತೀಕದಂತಿರುವ ತೆಂಗು ಬೇವು ಸೀತಾಫಲ ಮರಗಳ ಎಲೆಗಳ ಮಧ್ಯೆ ಇಣುಕುತ್ತಾ ತೂರಿಬಂದು ನೆಲದ ಮೇಲೆ ಸ್ವರ್ಣ ಬೆಳಕಿನ ರಂಗೋಲಿ ಬಿಡಿಸಿದ ನೇಸರನ ನವೋಲ್ಲಾಸದ ಹೊನ್ನ ಕಿರಣಗಳ  ಎರಕ, ಮೈದುಂಬಿಕೊಂಡು ದಟ್ಟ ಆಮ್ಲಜನಕದ ತೇವಭರಿತ ಗಂಧ ಸೂಸುತ್ತಿರುವ ಮಂದಹಾಸದ ತಂಗಾಳಿಯ ಹಿತವಾದ ಸ್ಪರ್ಶ, ಇಬ್ಬನಿಯ ಹನಿಗಳಿಂದ ತೊಯ್ದು ಇರುವೆಗಳ ಮುಂಜಾವಿನ ಜಾತ್ರೆಗೆ ಕಾರಣವಾದ ಸವಿನೆಲದ ರಸ ಮಾಧುರ್ಯ, ದಾಸವಾಳ, ಮಲ್ಲಿಗೆ,ಸೇವಂತಿಗೆ ಕುಸುಮಗಳ ಮೇಲೆ ಸವಾರಿ ಹೊರಟು ರೆಕ್ಕೆಬಡಿಯುತ್ತಾ ಹನಿಹನಿಯಾಗಿ ಮಧು ಹೀರುತ್ತಿರುವ ದುಂಬಿಗಳ ನಿನಾದ,  ಚುಮುಚುಮು ಬೆಳಕಿನ ಉದಯರಾಗ, ಕೈಗೆಟುಕುವ ಕಣ್ಣಳತೆಯಲ್ಲಿ ಗೂಡುಕಟ್ಟಿ ಮಧುವಿನ ಸಂಗ್ರಹದಲ್ಲಿ ತೊಡಗಿರುವ ಮರಿದುಂಬಿಗಳ ಸ್ವರಾಂಜಲಿ,ಹೂವಿಂದ ಹೂವಿಗೆ ಹಾರಿ, ರಸರುಚಿಯ ಪರೀಕ್ಷೆಗಿಳಿದು ಸುತ್ತಿ ಸುಳಿಯುತ್ತಿರುವ ಚಿಟ್ಟೆಗಳ ಸರಸ ಸಲ್ಲಾಪ, ರವಿಯ ಹೊಂಗಿರಣಗಳಿಗೆ ಮೈಯ್ಯೊಡ್ಡಿ ಅರಳಿ ನಿಂತು ಸುಗಂಧಸುಧೆಯನ್ನು ಹರಿಸುತ್ತಿರುವ ತುಳಸಿ,ದುಂಡುಮಲ್ಲಿಗೆ,ಚೆಂಡು ಹೂ, ಸೇವಂತಿಗೆ, ಕಣಗಿಲೆ, ಸೂಜಿಮಲ್ಲಿಗೆ,ಮಧ್ಯಾಹ್ನಮಲ್ಲಿಗೆ, ಬೇವಿನ ಹೂ,ಪೇರು ಹೂಗಳ ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳ  ಸೌಂದರ್ಯಮೀಮಾಂಸೆ,  ಮಂಜಿನ ರಸಗಂಗೆಯ ಹನಿಗಳ ಮಿಲನದಿಂದಾಗಿ  ಪೆಟ್ರಿಕೋರ್ ವಿದ್ಯಮಾನದುಂದುಂಟಾಗಿ ಚಿಮ್ಮುತಿರುವ  ಆರ್ದ್ರ ಮಣ್ಣಿನ ಹದಭರಿತ ಪರಿಮಳ, ಭಾನುವಿನ ನವಪ್ರಭೆಗಾಗಿ ಕಾತರಿಸುತ್ತಲೇ ಮರೆಯಾಗುತ್ತಿರುವ ಮಂದಬೆಳಕಿನ ಉದಯಗೀತೆ..... ಹೀಗೆ ಸರದಿಯಂತೆ ಬಂದಪ್ಪಳಿಸುವ ಶುಭೋದಯದ ನಾದಬಿಂದುಗಳೊಂದಿಗೆ ಚಹಾಮಾಯಿಯ ಚಪ್ಪರಿಸುವ ಸವಿ ಗುಟುಕಿದ್ದರೆ ಮುಗಿಯಿತು. ಅದು ಧರೆಗಿಳಿದ ನಂದನವನದ ಸಾಕ್ಷಾತ್ಕಾರದ ಪರಮಸುಖ ; ನೆಲದ ಮೇಲಿನ ಬೃಂದಾವನ ದರ್ಶಿಸಿದ ಮಹದಾನಂದ ; ಅಮೃತಧಾರೆಯನ್ನೇ ಹೀರಿದ ದಿವ್ಯಾನುಭವ ; ಇಬ್ಬನಿಯ ಹನಿಗಳೆಲ್ಲಾ ಮುತ್ತಾದ ಸಂಭ್ರಮ; ಮರ್ತ್ಯ ಲೋಕದಿಂದ ಹಾರುತಿರುವ ಹೃದಯಾನಂದದ ಅನುಭವ. ಈ ಅನುಭವಗಳು ಒಮ್ಮೆಲೇ ಬಂದಪ್ಪಳಿಸಿ ಅಂತರಂಗದ ಕಡಲಿಗೆ ಪ್ರಶಾಂತಿಯನ್ನು ನೀಡುವ ದಿವ್ಯಾನುಭವ ನನಗೆ ಶುಭೋದಯದ ಚಹಾರಾಣಿ ನನ್ನೊಳಗಿಳಿದಾಗ ಸಂಭವಿಸಿದೆ. ನನ್ನನ್ನು ಧ್ಯಾನದ ಶೂನ್ಯಕ್ಕೆ ಕರೆದೊಯ್ಯುವ ಹಕ್ಕಿಯಂತೆ ಚಹಾಮಾಯೆ ನನ್ನನ್ನು ಬೆಂಬತ್ತಿದೆ."ಆನಂದಮಯ ಈ ಜಗಹೃದಯ|ಭಯವೇತಕೆ ಮಾಣೊ ಸೂರ್ಯೋದಯ | ಚಂದ್ರೋದಯ ದೇವರ ದಯೆ ಕಾಣೊ" ಎಂಬ ಕುವೆಂಪುರವರ ಉಕ್ತಿಯಂತೆ ಉದಯರವಿಯೊಂದಿಗೆ, ಸಲ್ಲಾಪದಲ್ಲಿ ತೊಡಗಿದರೆ ಸಾಕು ಬರೆಯುತ್ತಿರುವ ಸಂಗತಿಗಳೆಲ್ಲಾ ಕಿರಣಗಳ ಹೊಳಪಿನಲ್ಲಿ ಮಂದವಾಗುತ್ತವೆ.
ಚಹಾದ ಮಗ್ಗಿಗೆ ಬರೋಣ. ಚಹಾವೆಂದರೆ ನನಗಂತೂ ಎಲ್ಲಿಲ್ಲದ ಹಿಗ್ಗು. ಬೆಳಗಿನ ಈ ಸುಖಜೀವನದ ಘಳಿಗೆಗಳೊಂದಿಗಿನ ಸೇವನೆ ನನ್ನ ನಿತ್ಯದ ಬದುಕನ್ನು ರಸಮಯವಾಗಿಸಿದೆ. ಚೈತನ್ಯದ ಚಿಲುಮೆಯ ಒರತೆಯನ್ನಾಗಿಸಿದೆ. ಚಹಾದ ಗುಟುಕಿನಿಂದಲೇ ನನ್ನ ಬೆಳಗಿನ ಅಧಿಕೃತ ಪ್ರಾರಂಭವೆಂದರೆ ತಪ್ಪಾಗಲಾರದು. ಅಂದರೆ ಬೆಳಿಗ್ಗೆ ೬ ಗಂಟೆಗೆ ಎದ್ದರೂ ಅಂದು ತಡವಾಗಿ ೧೦ ಗಂಟೆಗೆ ಚಹಾ ಹೀರಿದರೆ ನನಗೆ ಶುಭೋದಯವಾಗುವುದು ೧೦ ಗಂಟೆಗೆ ಎಂದರೆ ಚಹಾ ನನ್ನನ್ನಾವರರಿಸಿರುವ ಪರಿಯನ್ನೊಮ್ಮೆ ಊಹಿಸಬಹುದು. ಬೆಳಗಿನಲ್ಲಿ ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲೂ ನನ್ನೊಳಗಿಳಿಯುವ ಆಪತ್ಕಾಲದ ಪಾನರಾಣಿ. ತಲೆ ನೋವಿನ ಹಾವಳಿಯಿರಲಿ, ಸುಖವೆಂದು ಬಗೆದ ಸಂಸಾರದ ಅಸಂಖ್ಯಾತ ತಾಪತ್ರಯಗಳ ದಾಳಿಯಿರಲಿ, ಮೈ ಹಣ್ಣಾಗುವ ಆಯಾಸವಿರಲಿ, ಮೈಗಳ್ಳತನವೆಂಬ ಠಕ್ಕನ ಬಲೆಯಾಗಿರಲಿ,ತರಗತಿಗಳಲ್ಲಿನ ಉಪನ್ಯಾಸದ ಬಳಲಿಕೆಯಿರಲಿ, ಸ್ನೇಹಿತರೊಂದಿಗಿನ ಹರಟೆಯಿರಲಿ ಅಥವಾ ಏನೂ ಇಲ್ಲದೇ ಸುಮ್ಮನೆ ಹೊತ್ತುಗಳೆಯುತಿದ್ದರೂ ಚಹಾ ಎಂಬ ಮನದನ್ನೆ ಮಾತ್ರ ನನ್ನನ್ನು ಆಗಾಗ ಬಂದು ಕ್ಷೇಮಕುಶಲ ತಿಳಿದು ಮನದ ಕ್ಲೇಶ ಕಳೆಯುವ ಜೀವ ಸಂಜೀವಿನಿಯಾಗಲೇಬೇಕು. ಕಾರಣಗಳೇ ಬೇಕೆಂದೇನಿಲ್ಲ  ನಾನು ಆಕೆಯನ್ನು ಬಯಸುವುದಕ್ಕೆ. ನೆಪಗಳಿದ್ದರೆ ಸಾಕು, ಬರಸೆಳೆದು ಬಾಚಿಕೊಳ್ಳುತ್ತೇನೆ ಆಕೆಯನ್ನು ಸಂಧಿಸಲು ದೊರೆತ ಅವಕಾಶಗಳನ್ನು. ನೆಪಗಳಿಲ್ಲದಿದ್ದರೂ ಚಿಂತೆಯಿಲ್ಲ ತಲೆ ಸರಿಯಿಲ್ಲವೆಂದೊ, ಗೆಳೆಯರಾರೊ ಬಹಳ ಮಾತನಾಡಿದರೆಂದೋ, ಪ್ರಾಂಶುಪಾಲರು ಹೊಗಳಿದರೆಂದೋ, ಚಹಾ ಒಲ್ಲದ ಸಹೋದ್ಯೋಗಿಗಳು ಬಯಸಿದರೆಂದೋ, ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತೆನೆಂದೊ, ಗೆಳೆಯರ ಜನ್ಮದಿನವೆಂದೊ...   ಹೀಗೆ ತರಹೇವಾರಿ  ನೆಪಗಳನ್ನು ಅವಳಿಗಾಗಿ ಹುಟ್ಟುಹಾಕಿಕೊಳ್ಳುತ್ತೇನೆ. ಕೆಲವೊಮ್ಮೆ ಮಧ್ಯಾಹ್ನದ ಭೋಜನ  ಸವಿಯುವಾಗಲೇ ಆಕೆಗಾಗಿ ಕಾಯುವ ಪ್ರೇಮತಪಸ್ವಿಯಾಗುತ್ತೇನೆ. ಹೌದು ಆಕೆಯೆಂದರೆ ಸಮಯದ ಪರಿವೆಯಿಲ್ಲ ಎನಗೆ. ಆಕೆ ನೆನಪಾದರೆ ಮುಗಿಯಿತು ಹೊರಡಲೇಬೇಕು ಅವಳು ಸಿಗುವಲ್ಲಿಗೆ. ಬಸ್ಸು ನನ್ನನ್ನು ಬಿಟ್ಟು ಹೊರಟರೂ ಪರವಾಗಿಲ್ಲ ಆಕೆಯೊಂದಿಗೆ ಕೆಲಕಾಲ ಮಾತಿಗಿಳಿಯಲೇಬೇಕು. ಆಕೆಯ ಸಂಗದಿಂದ ಕ್ಷಣಹೊತ್ತು ಮೈಮರೆತು ಕುಳಿತ ನಂತರ, ಎಚ್ಚರವಾದಾಗ ಏನನ್ನೋ ಅವಳಿಗಾಗಿ ಕಳೆದುಕೊಂಡಿರುತ್ತೇನೆ. ಮಹತ್ವದ ಸಮಯವನ್ನೊ,ಮನೆ ಸೇರಿಸಬೇಕಾದ ಬಸ್ಸನ್ನೊ, ಮಹತ್ವದ ಕೆಲಸವಾಗಬೇಕಾದ ಯಾರದೋ ಭೇಟಿಯನ್ನೊ,ಹೊರಟಿರುವ ಪ್ರಯಾಣದ ರೈಲನ್ನೊ, ಕಾಯುತ್ತಿರುವ ಗೆಳೆಯನನ್ನೊ ಅಥವಾ ಸಂಬಂಧಿಕರನ್ನೊ  ಇನ್ನೇನೇನೋ ಆ ಕ್ಷಣಕ್ಕೆ ಕಳೆದುಕೊಂಡಿರುತ್ತೇನೆ.  
ಆದರೂ ಚಿಂತೆಯಿಲ್ಲ ನನಗೆ. ಕಳೆದುಕೊಂಡಿದ್ದೇನೆ ಎಂಬ ಕೊರಗಿಲ್ಲ; ದಕ್ಕದೇ ಹೋಯಿತೆಂಬ ಪಶ್ಚಾತ್ತಾಪವಿಲ್ಲ; ತಪ್ಪಿಹೋಯಿತಲ್ಲ ಎಂಬ ಕನವರಿಕೆಯಿಲ್ಲ ; ಜಾರಿದೆನೆಂಬ ಪ್ರಾಯಶ್ಚಿತವಿಲ್ಲ; ಅನಾಹುತವಾಯಿತಲ್ಲ ಎಂಬ ಹೆದರಿಕೆಯಿಲ್ಲ ; ಸಂಭವಿಸಬಾರದಾಗಿತ್ತು ಎಂಬ ಹಳಹಳಿಕೆಯಿಲ್ಲ; ಎಚ್ಚರ ತಪ್ಪಿದೆನೆಂಬ ಹಳವಂಡವಿಲ್ಲ; ಓಹೋ ಕೈಜಾರಿತೆಂಬ ಪರಿತಪಿಸುವಿಕೆಯಂತೂ ನನ್ನಲಿಲ್ಲ ಏಕೆಂದರೆ ನಾನು ಅವಳನ್ನು (ಚಹಾಮಾಯೆ) ಕುಡಿದಿದ್ದೇನೆ. ಅಲ್ಲಮನಿಗೆ ತಾಮಸವು ಮಾಯೆಯಾಗಿ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ. ಆದರೆ ಅಲ್ಲಮ ಮಾಯೆಯನ್ನು ಗೆದ್ದು ಬೀಗಿ ಬಯಲಾದ. ನಾನು ಸೋತು ಹಿಗ್ಗಿ ಪರವಶನಾದೆ. ಅವಳೊಲವಿನ ಶಾಶ್ವತ ಪ್ರೇಮಭಿಕ್ಷುವಾದೆ. ಆಕೆ ಪ್ರೇಮಮಧುವನ್ನು ಧಾರೆಯೆರೆಯುವ ಗಂಗೆಯಾದಳು. ಆಕೆಯ ರಸಾನುಭವದ ಸಖನಾದೆ. ಆಕೆಯ ಪರಿಮಳದ ಹಬ್ಬದಲ್ಲಿ ಸಂಭ್ರಮಿಸುವ ಮಗುವಾದೆ. ಹದಭರಿತ ಚಹಾಕನ್ನಿಕೆಯ ಸ್ವಾದಕ್ಕಿಂತ ಮಿಗಿಲಾದ ರಸರಾಸಾಯನ ಈ ಭುವಿಯ ಮೇಲೆ ಬೇರೊಂದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬರು ಬಲ್ಲವರು. ಆದರೆ ನನಗೆ ಈ ಜಗದಲಿ ಚಹಾಗಿಂತ ರುಚಿ ಬೇರೊಂದಿಲ್ಲ.
ಕಾರಣ ಚಹಾಷೋಡಶಿಯ ಬಾಯಿ ಚಪ್ಪರಿಸುವ ಆಸ್ವಾದ; ನನ್ನೊಳಗಿಳಿದು ನಶೆಯೇರಿಸುವ ಅವಳ ಆಮೋದ. ಸಾಮಾನ್ಯವಾಗಿ ಸರ್ವರಿಗೂ ತಿಂಗಳಿಗೊಮ್ಮೆ ಹುಣ್ಣಿಮೆ, ಅಮವಾಸ್ಯೆಗಳ ಹಬ್ಬವಾದರೆ ನನಗೆ ಚಹಾಸಿನಿ ಯ ಸಖ್ಯ ದೊರೆತಾಗಲೆಲ್ಲ ಮಹಾನವಮಿ. ಯಾಕೆಂದರೆ ಚಹಾಮಾಯೆಯನ್ನು ಪಡೆದುಕೊಂಡಿದ್ದೇನೆ. 
"ಬೆಳಗಾಗೆದ್ದ ಕೂಡಲೇ ಯೋಗಿಯಾಗುತ್ತೇನೆ ಧ್ಯಾನನಿರತನಾಗುತ್ತೇನೆ, ನಂತರವಾದರೂ ಚಹಾಮೃತವನ್ನು ಸವಿಯಬಹುದೆನ್ನುವ ಮಹಾ ಹಂಬಲದಿಂದ, ಮಜ್ಜನದಲಿ ತೊಯ್ಯುತ್ತೇನೆ, ತಾಳದ ಚಳಿ ಪಡೆದು ಹೆಚ್ಚು ಚಹಾ ಹೀರಬಹುದೆಂಬ ಮಹದಾಸೆಯಿಂದ, ಉಪಹಾರ ಸೇವಿಸುತ್ತೇನೆ ಜಠರಲದಲ್ಲಿನಿತು ಅವಕಾಶವನಿಟ್ಡು. ಸಾಧ್ಯವಾದಷ್ಟೂಅವಳನ್ನು ಕುಡಿದು ತುಂಬಿಕೊಳ್ಳಬೇಕೆಂಬ ಬಯಕೆಯಿಂದ "ಸದಾ ತುಂಬಿಕೊಂಡೇ ನಶೆಯನ್ನೇರಿಸಿಕೊಳ್ಳುವ ಚಹಾದ ಮಗ್ಗನ್ನು ಕಂಡು ಅಸೂಯೆಪಟ್ಟಿದ್ದೇನೆ. ಸಂಸ್ಕರಿತ ಮಣ್ಣಿನ ಹೊಳೆಯುವ ಶ್ವೇತ ವರ್ಣದ ಪಿಂಗಾಣಿ ಮಗ್ಗಿನಲ್ಲಿಯ ಆಕೆಯ ತುಳುಕುವಿಕೆಯನ್ನು ಕಂಡು ಮೋದಿಸಿದ್ದೇನೆ. ಕೆಂಬಣ್ಣದ ಕೆನ್ನೆಯಂತಿರುವ ಅವಳ ಕೆನೆಯನ್ನು ಸವರಿ ಎತ್ತಿಕೊಂಡು ಚರ್ವಿಸಿದ್ದೇನೆ. ನಾಲಿಗೆ ಚಪ್ಪರಿಸಿ ರಸಾಂಕುರಗಳನ್ನು ಉದ್ದೀಪಿಸಿದ್ದೇನೆ. ಹರಿವಂಶರಾಯ್ ಬಚ್ಚನ್ ರವರು-"ನನ್ನ ಶೆರೆಯಲ್ಲಿ ಒಂದೊಂದುಹನಿ ಒಬ್ಬೊಬ್ಬರಿಗೂ| ನನ್ನ ಪ್ಯಾಲೆಯೊಳಗೆ ಒಂದೊಂದು ಗುಟುಕು ಎಲ್ಲರಿಗೂ| ನನ್ನ ಸಾಕಿಯೊಳಗೇ ಅವರವರ ಸಾಕಿಯರ ಸುಖ ಎಲ್ಲರಿಗೂ|ಯಾರಿಗೆ ಯಾವ ಹಂಬಲವೊ ಹಾಗೇ ಕಂಡಳು ನನ್ನ ಮಧುಶಾಲಾ"ಎಂದು  ಮದಿರೆ ಹಾಗೂ ಮಧುಶಾಲೆಯನ್ನು ಕುರಿತು ಹಾಡಿದ ಕವಿತೆಯ ಸಾಲುಗಳು ನನ್ನ ಚಹಾ ಹಾಗೂ ಚಹಾಶಾಲೆಯನ್ನು ಕುರಿತ ಅನುಭವವನ್ನು ಹೋಲುತ್ತವೆ.  ಚಹಾಶಾಲೆಯಲ್ಲಿ ಕುಳಿತು ಚಹಾವನ್ನು ಮದಿರೆಯಂತೆ ಹೀರಿದ್ದೇನೆ. "ವಾಹ್ ತಾಜ್..." ಎಂಬ ತಬಲಾವಾದಕನ  ಚಹಾ ಹೀರುವ ದೃಶ್ಯದ ತುಣುಕು ನನಗೆ ಜಾಹೀರಾತಾಗಿ ಕಾಣಲೇ ಇಲ್ಲ, ಬದಲಾಗಿ ಚಹಾದ ತಾಜಾ ಸ್ವಾದ ಹಾಗೂ ನವೋಲ್ಲಾಸದ ಹೊಳೆಯ ಅಭಿವ್ಯಕ್ತಿಯಾಗಿ ಕಾಣುತ್ತದೆ. ಮೈಯ್ಯೊಳಗೆ ರುಧಿರದ ಬದಲಾಗಿ ಚಹಾವೇ ಪ್ರವಹಿಸುವಂತಿದ್ದರೆ ದಿನವಿಡೀ ಮನೋಲ್ಲಾಸದ ಮಡುವಿನಲ್ಲಿ ತೇಲಾಡಬಹುದಿತ್ತಲ್ಲ ನಶೆಯ ಗುಂಗಿನಲ್ಲಿಯೇ ಓಲಾಡಬಹುದಿತ್ತಲ್ಲ ಎಂಬ ದುರಾಸೆಯ ಕನಸಿನ ಬೆನ್ನು ಹತ್ತಿ ಕನವರಿಸಿದ್ದೇನೆ. ಊಟ, ಉಪಹಾರವಿಲ್ಲದೇ ಸರಾಗವಾಗಿ ಜೀವನ ನಡೆಸಬಹುದು ಆದರೆ ಚಹಾಕನ್ನಿಕೆಯ ದರ್ಶನವಿಲ್ಲದ ನನ್ನ ಹೃದಯ ಮತ್ತು ಮನಸ್ಸುಗಳು ಕ್ಷಣಕಾಲವೂ ಬದುಕಿರಲಾರವು ಎಂಬುದು ನನ್ನ ಅನುಭವದ ಸಾರ!! ದೇವತೆಗಳು ಭೂಲೋಕದಲ್ಲಿ ಆಕಸ್ಮಾತ್ ಆಗಿ ಮರೆತು ಬಿಟ್ಟು ಹೋದ ಸುಧೆಯ ಮೂಲರಸಾಯನವೇ ಚಹಾ ಇರಬಹುದು ಎಂಬ ನನ್ನ ದೃಢ ಕಪೋಲ  ಕಲ್ಪನೆಗೂ ರೆಕ್ಕೆ ಕಟ್ಟಿ ಹಾರಿಸಿದ್ದೇನೆ. ಶಿವರಾತ್ರಿಯ ಉಪವಾಸ ನನ್ನಿಂದ ಸಾಧ್ಯವಾಗುವುದು ಅಮೂರ್ತ ಶಿವನೆಡೆಗಿನ ಭಕ್ತಿಗಿಂತ ಹೆಚ್ಚಾಗಿ  ಈ ಚಹಾಯಣದ ಅಮೂರ್ತ ಸಾಂಗತ್ಯದ ಆಧ್ಯಾತ್ಮದಿಂದ; ಆಸ್ವಾದದ ಎದೆಯಗಾನದ ಲಹರಿಯಿಂದ ; ಚಹಾಮಾಯಿಯನ್ನು ಅಪ್ಪಿಕೊಳ್ಳುವ  ಸುಖಲೋಲುಪತೆಯಲ್ಲಿ ಕಳೆದುಹೋಗುವುದರಿಂದ; ಚಹಾರಾಣಿಯ ಮಡಿಲಲ್ಲಿ ಮೈಮರೆಯುವ ಅಂತರ್ಧ್ಯಾನದಿಂದ. ಒಂದು ಬಾರಿ ಮಹತ್ವದ ಕಾರ್ಯಕ್ಕಾಗಿ ತಹಶೀಲ್ದಾರರ ಭೇಟಿಗೆ ಅಂದು ತುರ್ತಾಗಿ ಹೋಗಲೇಬೇಕಾಗಿ ಬಂದಾಗ ಮನೆಯಲ್ಲಿ ಉಪಹಾರದ ನಂತರ ಸಮಯವಿಲ್ಲದಿದ್ದರೂ ನಾನು ಹೋಗಿದ್ದು ಯಥಾಪ್ರಕಾರ ಚಹಾದ ಸುಖವನ್ನು ಹೊತ್ತುಕೊಂಡೇ.
ಶಾಲಾ ಕರ್ತವ್ಯ ಮುಗಿಸಿ ಸರ್ವ ಶಿಕ್ಷಕ ಬಳಗವೆಲ್ಲಾ ದಂಡಿಯಾಗಿ ನೆರೆಯುತ್ತಿದ್ದ ಬಸ್ ನಿಲ್ದಾಣದ ಹತ್ತಿರ ನಿಂತು ಬಳಗದವರನ್ನೆಲ್ಲಾ ಕರೆದು, ಒಲ್ಲೆ ಎಂದವರನ್ನೂ ಕೇಳದೇ ಕೈಹಿಡಿದು  ಹತ್ತಿರದ ಚಹಾಶಾಲೆಯಲ್ಲಿ ಚಹಾವನ್ನು ಸ್ವಾದಿಸಿ ಖುಷಿಪಟ್ಟಿದ್ದುಂಟು. ಮತ್ತೆ ಹೊರಬಂದ ನಂತರ ಯಾರಾದರೂ ಹೊಸಬರು ಬಂದರೆ ಅವರನ್ನೂ   ಕರೆದೊಯ್ದು ಚಹಾ ಹೀರಿಸಿ ನಾವೂ ಹೀರಿ ಅತಿಸುಖವನ್ನು ಪಡೆದದ್ದಿದೆ. ಹೀಗೆ ಸರಿಯಾಗಿ ಲೆಕ್ಕ ಹಾಕಿದರೆ ನಾವು ಆ ದಿನಗಳಲ್ಲಿ ಪ್ರತಿದಿನ ಆನಂದಿಸುತ್ತಿದ್ದ ನಮ್ಮ ಚಹಾಪ್ರಣಯ ಪ್ರಸಂಗದ ವಿಲಾಸವನ್ನು ಊಹಿಸಿಕೊಳ್ಳಬೇಕು. ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ  ಚಹಾರಾಣಿ  ಗ್ರೀನ್ ಟೀ  ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ. ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ  ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ.  ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ.  ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ "  ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ?  ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ  ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು. ನಾನು ಡಿಇಡಿ ವ್ಯಾಸಂಗದ ನಿಮಿತ್ತ ಬೆಂಗಳೂರಿನ ವಿಜಯನಗರದ ವಸತಿನಿಲಯವೊಂದರಲ್ಲಿ ಎರಡು ವರ್ಷಗಳ ಆಶ್ರಯ ಪಡೆದಿದ್ದೆ. ನಿಲಯದಲ್ಲಿ ಚಹಾಸಂಸ್ಕೃತಿಯೇ ಇಲ್ಲದ್ದರಿಂದ  ಎಲ್ಲ ವಿದ್ಯಾರ್ಥಿಗಳು ಮುಗ್ಧತೆಯಿಂದ ಒಗ್ಗಿಕೊಂಡು ನಿರಾಳವಾಗಿದ್ದರೆ, ನಾನು ಮಾತ್ರ ಒಳಗೊಳಗೆ ಚಡಪಡಿಸುತ್ತಿದ್ದೆ. ಉಪಹಾರ ಭೋಜನಗಳಿಲ್ಲದ ಹಾಸ್ಟೆಲ್ ನಲ್ಲಿ ಬೇಕಾದರೆ ಇದ್ದು ಜಯಿಸಬಲ್ಲೆ  ಆದರೆ ಚಹಾ ಕೊಡದ ವಸತಿನಿಲಯದಲ್ಲಿ ಹೇಗಿರುವುದು?  ಎಂದುಕೊಂಡು ಬಹುಕಾಲ ಕಸಿವಿಸಿಪಟ್ಟಿದ್ದೇನೆ. ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲಿರುವ ಏಕೈಕ ಆಸರೆಯನ್ನು ಚಹಾಗೋಸ್ಕರ ತಿರಸ್ಕರಿಸುವ ಶಕ್ತಿ ಇಲ್ಲದ್ದರಿಂದ ಅನಿವಾರ್ಯವಾಗಿ ವಸತಿನಿಲಯದ ವಾತಾವರಣಕ್ಕೆ ಹೊಂದಿಕೊಂಡು ಪರ್ಯಾಯ ದಾರಿಯೊಂದನ್ನು ಕಂಡುಕೊಂಡೆ. ಪ್ರತಿದಿನ ಬೆಳಿಗ್ಗೆ   ಹಾಗೂ ಸಂಜೆ ಚಹಾರಾಣಿಯ ಭೇಟಿಗಾಗಿ ಒಂದು ಪ್ರಶಸ್ತವಾದ  ಭಟ್ಟರ ವಿಶೇಷ ಚಹಾಶಾಲೆಯೊಂದನ್ನು ( ಕೆಫೆ) ಗುರ್ತಿಸಿಕೊಂಡೆ. ಪ್ರತಿದಿನ ಕಾಲೇಜು ಮುಗಿದ ನಂತರ ಮುಸ್ಸಂಜೆಯ ಮುಖಮಜ್ಜನದಲ್ಲಿ ಮಿಂದು ನವೋಲ್ಲಾಸದ ಮನಸು ಹೊತ್ತು  ವಾಯುವಿಹಾರಕ್ಜೆ ಹೊರಟೆನೆಂದರೆ ಅದು ಕೊನೆಯಾಗುವುದು ಚಹಾಮಣಿಯ ಲೀಲಾವಿಲಾಸದ ಸಮಾಗಮದೊಂದಿಗೆ ಎಂಬುದು ನಿಶ್ಚಿತವಾಯಿತು. ಹೀಗೆ ಕೆಲವು ದಿನ ಕಳೆದವು. ಪ್ರಾರಂಭದಲ್ಲಿ ಚಹಾಶಾಲೆಯ ಚಹಾ ಮೊದಲಿಗೆ ಸಪ್ಪೆಯೆನಿಸುತ್ತಿತ್ತು. ದಿನಗಳೆದ ನಂತರ ಚಹಾಶಾಲೆಯ ಮಾಣಿಯೊಂದಿಗೆ ಸ್ನೇಹ ಮಧುರವಾಗುತ್ತಾ ಹೋದಂತೆ  ನಮ್ಮ ಚಹಾಷೋಡಶಿಯು ಸಿಹಿಯಾಗುತ್ತಲೇ ಹೋದಳು. ಮಾಣಿಯೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾ ಪುಸಲಾಯಿಸಿ ಬೇಕಾದಷ್ಟು ಸಕ್ಕರೆಯನ್ನು ಬೆರೆಸುವಂತೆ ಮಾಡಿ ಚಹಾರಾಣಿಯ ನೈಜ  ಸ್ವಾದವನ್ನು ಅನುಭವಿಸತೊಡಗಿದೆ.
ಚಹಾರಾಣಿಯ ದರ್ಶನ ಅಪರೂಪವೆಂಬಂತಿದ್ದ ಕಾಫಿಜಗತ್ತಿನಲ್ಲಿ ಚಹಾಜೇನು ಸವಿದ ಆನಂದ ಪಡೆದು ತೇಲಾಡತೊಡಗಿದೆ.  ಹೀಗೊಂದು ದಿನ ಸಂಜೆ ಯಥಾಪ್ರಕಾರ ಚಹಾಶಾಲೆಯತ್ತ ಹೊರಟಾಗ ಜೇಬಿನಲ್ಲಿ ಬಿಡಿಪೈಸೆಯೂ ಇರಲಿಲ್ಲ. ಗೋಧೂಳಿಯ ಮುಹೂರ್ತ ಮೀರುವ ಮಹತ್ವದ ಘಳಿಗೆಯಲ್ಲಿ ಚಹಾರಾಣಿ ನನಗಾಗಿ ಕಾಯುತ್ತಿದ್ದಾಳೆ. ಮನಸು ಅವಳದೇ ನೆನಪಿನಲ್ಲಿ ಪಿಸುಗುಟ್ಟಿ ತೊಳಲಾಡುತ್ತಿದೆ. ಮನಸ್ಸು ಆಕೆಯನ್ನು ಬಿಟ್ಟು ಕದಲೊಲ್ಲದು. ಅತ್ತ ಊರಿನಿಂದ ಬರಬೇಕಾಗಿದ್ದ ಅವ್ವ ಕಳಿಸಿದ ದುಡ್ಡು ಇನ್ನೂ ತಲುಪಿರಲಿಲ್ಲ. ಏನು ಮಾಡುವುದು ಎಂದು ತೋಚದಾದಾಗ ಗೆಳೆಯನೊಬ್ಬನ ಹತ್ತಿರ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬಂತೆ ಸಾಲ ಪಡೆದಾದರೂ ಅವಳ ಸಂಗಡ ಈ ಸಂಜೆ ಮಾತಿಗಿಳಿಯಲೇಬೇಕು. ನನ್ನೆದೆಯೊಳಗೆ ಅವಳ ಮಾತಿನ ಸವಿಯನ್ನಿಳಿಸಿಕೊಂಡು  ಕಾಪಿಟ್ಟುಕೊಳ್ಳಲೇಬೇಕಾಗಿತ್ತು. ಹೀಗೆ ಅವಳತ್ತ ವಿಭವದಿಂದ  ಜಾರುವ ಮನದ ನೂರಾರು ಮಾತುಗಳನ್ನು ಅಂತರಾಳದಲ್ಲಿ ಕಟ್ಟಿಕೊಂಡೇ  ನೂರು ರೂಪಾಯಿ ಸಾಲ ಪಡೆದು ನೇರವಾಗಿ ಅವಳಿರುವಲ್ಲಿಗೆ  ಹೋಗಿ ಅವಳೊಂದಿಗೆ ಸಲ್ಲಾಪಕ್ಕಿಳಿದೆ. ಗುಟುಕು ಗುಟುಕಾಗಿ ಅವಳೊಂದಿಗೆ ಹಂಚಿಕೊಂಡ ರಸನಿಮಿಷಗಳನ್ನು  ಅಂತರಂಗದಲ್ಲಿಳಿಸಿಕೊಂಡು ಹರ್ಷಗೊಂಡೆ. ಇಂತಹ ಸವಿಸಮಯವನ್ನು ಕದ್ದೊಯ್ದು ಕಳೆದುಕೊಳ್ಳುವಂತೆ ಮಾಡುತ್ತಿದ್ದ ಆರ್ಥಿಕ  ದುರಾದೃಷ್ಟವನ್ನು ನೆನೆದು  ಶಪಿಸಿಕೊಂಡೆ. ಹೀಗೆ ಸಾಗಿತ್ತು ಚಹಾಸಖಿಯೊಂದಿಗಿನ ನನ್ನ ಪ್ರಣಯಗೀತೆ. ಮತ್ತೊಮ್ಮೆ  ಕೈಯ್ಯಲ್ಲಿ ಹಣವಿಲ್ಲದ ಬಡಪಾಯಿ ಪರಿಸ್ಥಿತಿಯೊದಗಿ ಬಂದಾಗ ನೇರವಾಗಿ ಚಹಾಶಾಲೆಯ ಮಾಲೀಕ ಭಟ್ಟರ ಹತ್ತಿರವೇ ನನ್ನ ಹೆಸರಿನ ಮೌಖಿಕ ಖಾತೆಯೊಂದನ್ನು ತೆರೆದು ಸಾಲ ಕೇಳಿದ್ದೆ. ಅವರ ದೃಷ್ಟಿಯಲ್ಲಿ ಯಕಃಶ್ಚಿತ ಚಹಾದ ಸಾಲವಾಗಿದ್ದರೆ, ನನಗದು ಚಹಾ ರಾಣಿಯೊಂದಿಗೆ ಸಮಯ ಕಳೆಯಲು  ಅಡೆತಡೆಯಿಲ್ಲದೆ ಕನಿಷ್ಠ ಹಣದ ಭಯವಿಲ್ಲದೆಯೂ ಚಹಾಶಾಲೆಯನ್ನು ಮುನ್ನುಗ್ಗಲು ಅಧಿಕೃತ ಲೈಸೆನ್ಸ್ ದೊರೆತಂತಾಗಿತ್ತು. ಯಾರ ಅಪ್ಪಣೆಗೂ ಕಾಯದೇ ಸಂಜೆಯನ್ನು ಸಾರ್ಥಕಗೊಳಿಸಿಕೊಳ್ಳುವ ನನ್ನ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆತಿತ್ತು. ಕೊನೆ ಕೊನೆಗೆ ಚಹಾರಾಣಿಯೊಂದಿಗಿನ ಬಿಡುವಿಲ್ಲದ ಸಹವಾಸ ಕಂಡ ಭಟ್ಟರು ಚಹಾಶಾಲೆಯ ಖಾಯಂ ಗಿರಾಕಿಯೆಂದುಕೊಂಡು ಸಾಲವನ್ನು ಬರೆದುಕೊಳ್ಳಹತ್ತಿದರು. ಚಹಾಕಿಶೋರಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಕಂಡ ಮಾಲೀಕ ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಹಣದ ಸಾಲವನ್ನೂ ನೀಡಿ ಕೈಹಿಡಿದು ಮುನ್ನಡೆಸಿದನೆಂದರೆ, ಚಹಾದ ಸಂಗ ಹೆಜ್ಜೇನು ಸವಿದಂತಾಗಿತ್ತು ನನಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಾತ್ರ ಮಲ್ಲಿಗೆಯಿರಲೇಬೇಕೆಂಬಂತಾಗಿತ್ತು ಚಹಾದೆಡೆಗಿನ ನನ್ನ ಪ್ರೀತಿ. ಹೀಗೆ ಎರಡು ವರ್ಷದ ಬೆಂಗಳೂರಿನ ಚಹಾಬೆಡಗಿಯ ಸಾಂಗತ್ಯ ನನಗೆ ಚಹಾಶಾಲೆಯ  ಹೊಸ ಆಪ್ತ ಗೆಳೆಯರನ್ನು ಪರಿಚಯಿಸಿತ್ತು. ಮನೆಯಲ್ಲಿನ ಹಿಂಡು ಮಂದಿಗೆ ಮಾಡುವ ಚಹಾ ನನಗೆ ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಪರಿಹಾರವಾಗಿ ಮನೆಮಂದಿಗೆಲ್ಲ ಚಹಾ ತಯಾರಿಸುವ ಪಾಠವನ್ನು ಆಗಾಗ ಪ್ರಾತ್ಯಕ್ಷಿಕೆಯ ಮೂಲಕ   ಹೇಳಿಕೊಟ್ಟಿದ್ದಿದೆ. ಹದಬೆರೆತ  ರಸಾಯನವೇ ನನಗಿಷ್ಟವೆಂದು ಅವ್ವ ನನಗಾಗಿ ಮಾಡುವ ಚಹಾ ಗಾಗಿ ಕಾದು ಕುಳಿತಿರುತ್ತಿದ್ದೆ. ಅಂದು ಚಹಾಗೆಳತಿಯ ದರ್ಶನವಾಗದಿದ್ದಾಗ ಚಡಪಡಿಸಿ ಅಡುಗೆಮನೆಗೆ ಹೋಗಿ  ಬೆಳದಿಂಗಳು ಬಣ್ಣದ ಹಾಲಿನಲ್ಲಿ ಕೆಂಬಣ್ಣದ ಚಹಾದೆಲೆಗಳನ್ನುದುರಿಸಿ ಅಗ್ನಿಹಂಸದ ತೂಲಿಕಾತಲ್ಪದಲಿಟ್ಟು ಚೆನ್ನಾಗಿ ಕುದಿಸುತ್ತಾ ತಪದಂತೆ ಕಾದಿದ್ದೇನೆ.ನನ್ನ ಮೇಲಿನ  ಪ್ರೀತಿಯುಕ್ಕಿ ಪಾತ್ರೆಯೊಳಗಿಂದ ಮೇಲೆ ಹಸನ್ಮುಖಿಯಾಗಿ ಬಂದ ನೊರೆಯ ಮುತ್ತುಗಳನ್ನು   ಕಂಡು ಹರ್ಷಗೊಂಡಿದ್ದೇನೆ. ಕೊನೆಗೆ ಹದವಾದ ಸಕ್ಕರೆಯನ್ನು ಬೆರೆಸಿ ಘಮಘಮಿಸುವ ಪರಿಮಳದಲ್ಲಿ ಮೈಮರೆತು ಸಮಾಧಿಗೇರಿದ್ದೇನೆ. ಶೋಧಿಸುವಾಗ ಹೊರಟ ಸುಮಧುರ ಸುವಾಸನೆಯನ್ನು ಹೀರಿ ಸಂಭ್ರಮಿಸಿದ್ದೇನೆ. ಶ್ವೇತಸುಂದರಿಯಂತಿರುವ ಮಗ್ಗಿನೊಳಗೆ ಒಯ್ಯಾರದಿಂದ ನರ್ತಿಸಿತ್ತಿದ್ದ ಹಾಲುಗೆನ್ನೆಯ ಚಹಾಚೆಲುವೆಯನ್ನು ಕಂಡು ಹಿಗ್ಗಿದ್ದೇನೆ.
ಚಹಾ ಎಂಬುದು ನನ್ನ ಪಾಲಿಗೆ ಕೇವಲ ಕರ್ಮೋಪಚಾರಕ್ಕಾಗಿ ಸೇವಿಸುವ ಭೌತಿಕ ದ್ರಾವಣವಲ್ಲ. ಯಾಂತ್ರಿಕವಾಗಿ ಕ್ಷಣಮಾತ್ರ ಭುಜಿಸಿ ಮತ್ತೆ ಅರೆಗಳಿಗೆಯಲ್ಲಿ ಮರೆತುಬಿಡುವ  ಹಾಲು ಸಕ್ಕರೆಗಳ ಮಿಶ್ರಣ ಮಾತ್ರದ ರಸಾಯನವಲ್ಲ. ಕೇವಲ ಆಯಾಸ ಕಳೆಯಲಿಕ್ಕಾಗಿ ಇರುವ ಉಪಚಾರದ ಪಾನೀಯವೂ ಅಲ್ಲ .ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿಸುವ ಪ್ರಣಯಗೀತೆ; ಹೃದಯದೊಳಗೆ ಜುಳು ಜುಳು ಎಂದು ಹರಿಯುವ ಝರಿಯ  ನಿನಾದ; ಮನದೊಳಗೆ ಕೋಗಿಲೆಯ ಧ್ವನಿಯಂತೆ ಇಳಿಯುವ ರಸಗಾನ; ಮನಕಡಲಿನ ಮೇಲೆ ಕುಣಿಯುವ ಅಲೆಗಳ ಬಣ್ಣಿಸಲಾಗದ ಮೌನರಾಗದ ಮೊರೆತ; ಗುಟುಕು ಗುಟುಕಾಗಿ  ನಾಲಿಗೆ ಚಪ್ಪರಿಸಿ ಹೀರಿ ಅದರಲ್ಲಿಯೇ ಲೀನವಾಗುವಂತೆ ಸೆಳೆಯುವ ಅಮೃತಧಾರೆಯ ಜೇನಹನಿ; ನೆನಪು ಮಾತ್ರದಿಂದಲೇ ಚಿಮ್ಮಿ ಉತ್ಸಾಹ ಉಕ್ಕಿಸುವ ಚಿಲುಮೆಯೊರತೆ. ಚಹಾ ಎಂದರೆ ಭಾವದೊಳಗಿನ ಬಂಧುರ ಒಲವಿನೊಳಗಿನ ಮಂದಾರ. ಶ್ರಾವಣದ ಇಳೆ ಮಳೆಗಳೊಂದಿಗಿನ ಅನುಸಂಧಾನ ಬೇಂದ್ರೆಯವರಂತಹ ಆರಾಧಕರಲ್ಲಿ ಕಾವ್ಯದ ಮೂಲಕ ಸಾಧ್ಯವಾಗಿದೆ. ಕವಿಸೂರಿಗಳದು ಪ್ರಕೃತಿ ಆರಾಧನೆಯಾದರೆ ನನ್ನದು ಚಹಾರಾಧನೆ. ಆಷಾಢದ ಜಿಟಿ ಜಿಟಿ ಜಡಿ ಮಳೆಯಲ್ಲಿ  ಚಹಾಶಾಲೆಯ ಮುಂದೆ ನಿಂತು ಬಿಸಿ ಬಿಸಿಯಾದ ಚಹಾಮಾಯಿಯ ಹನಿ ಹನಿಯ ಗುಟುಕುಗಳ ಮಾಯೆಗೆ ಕರಗುವುದೆಂದರೆ  ಪ್ರಕೃತಿಯಲ್ಲಿನ ಪಾರಮಾರ್ಥಕ್ಕೆ ಪಯಣ ಹೊರಟಂತೆ. ಚಹಾರಾಣಿಯೊಂದಿಗಿನ ಎನ್ನ ಒಡನಾಟ ಇಂದು ನಿನ್ನೆಯದಲ್ಲ, ನನ್ನೆದೆಯೊಳಗೆ ಇಷ್ಟೊಂದು ಆಳವಾಗಿ ಮೈಚಾಚಿಕೊಂಡು ಹರಡಿ ಮೈಮನಗಳನ್ನು ತುಂಬಿಕೊಂಡಿರುವ ಇದರ ಭಾವಗೀತೆಗಳ ಆಲಾಪವನ್ನು ಬಾಲ್ಯದಿಂದಲೂ ಆಲಿಸಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೂ ಆಕೆ (ಚಹಾಮಾಯಿ) ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ರೆಕ್ಕೆ ಮೂಡುವವರೆಗೂ ನನ್ನದೆಯ ಗೂಡಿನಲ್ಲಿ ಮರಿಹಕ್ಕಿಗಳಂತೆ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದೇನೆ. ಭಾವಗಳಿಲ್ಲದೇ ಬತ್ತಿ ಕೊರಡಾಗುವ ಘಳಿಗೆ ಎದುರಾದಾಗ, ಈ ನೆನಪುಗಳನ್ನು ಹೆಕ್ಕಿ ತೆಗೆದು ಆನಂದಿಸಿ, ಮತ್ತೆ ಮತ್ತೆ ಚಹಾ ರಾಣಿಯ ಸಾಂಗತ್ಯವನ್ನು   ಸವಿದಿದ್ದೇನೆ. ನನ್ನಲ್ಲಿ ಚಹಾ ಹುಟ್ಟಿಸಿದ ಭಾವಯಾಣ ಅನುಪಮವಾದದ್ದು, ಅನೂಹ್ಯವಾದದ್ದು. ಆರೋಗ್ಯದ ಲಯ ತಪ್ಪಿದಾಗ ಚಹಾ ತ್ಯಜಿಸಬೇಕೆಂದು ಹೇಳಿದ ವೈದ್ಯರನ್ನು 
" ನಿಮಗೇನು ಗೊತ್ತು ಚಹಾದ ಗಮ್ಮತ್ತು ಕುಡಿದರಿಲ್ಲ ಜೀವಕೇನೂ ಆಪತ್ತುಬಿಟ್ಟರೆ ನನಗೆ ಅದೇ ವಿಪತ್ತುಸವಿಯಲು ನನಗಿಲ್ಲ ಹೊತ್ತು ಗೊತ್ತು ಎತ್ತಣ ಮಾಮರ ಎತ್ತಣ ಕೋಗಿಲೆ ?" ಎಂದು ಹೀಗಳೆದಿದ್ದೇನೆ. ಬಹುಶಃ ಚಹಾ ಸೇವನೆಯಲ್ಲಿ ತಪ್ಪಿದ ಲಯವೇ ಆರೋಗ್ಯವನ್ನು ಹದಗೆಡಿಸಿರಬೇಕು ಎಂಬ ಬಲವಾದ ನಂಬಿಕೆ ನನ್ನದು!"ನೀನೆಂದರೆ ಮಧುರಗಾನ |ಸವಿಜೇನಿನ ರಸಪಾನ| ಹಿಗ್ಗುತಿರುವೆ ಮನದುಂಬಿ |ಹೊರಟಿರುವೆ ಭಾವಯಾಣ | ಹಾಲುಗೆನ್ನೆಯ ಚೆಲುವೆ |ಕೆಂಬಣ್ಣದ ಮೈಮನವೆ | ಇಳಿದು ಬಾ ಮಹಾರಾಣಿ |ದೇವಲೋಕದ ಸುರಪಾಣಿ | ಮಹಾದಿವ್ಯದ ಸಂಗತ| ದಿವದೆಡೆಗಿನ ನವನೀತ | ನಿನ್ನೊಲುಮೆಯ ಕೈಸೆರೆ | ನನ್ನನಾಳುವ ಸುಮಧುರೆ | ಮುತ್ತು ರತ್ನ ಹವಳ ನೊರೆ| ಕೇಳುತಿರು ನನ್ನ ಮೊರೆ |ಮಹಾಸಂಗಮ ಆಲಿಂಗನ|ಎದೆಯುಕ್ಕುವ ರಸಚೇತನ| ಮಾಧುರ್ಯದ ರಸಪಾಕ |ಚಹಾಶಾಲೆಯೇ ಸವಿನಾಕ |ಎಂದು ಚಹಾಷೋಡಶಿಯೊಂದಿಗಿನ ಪಿಸುಮಾತು ನನ್ನಲ್ಲಿ ಹರ್ಷೋಲ್ಲಾಸದ ಹೊಳೆಯನ್ನು ಹರಿಸುತ್ತದೆ. ಘಳಿಗೆಗೊಮ್ಮೆಯ ಆಕೆಯ ಭೇಟಿ  ಎನ್ನ  ಹೃದಯವನ್ನು ರಸಾನಂದದ ಕಡಲಾಗಿ ಪರಿವರ್ತಿಸುತ್ತದೆ.
ಚಹಾರಾಣಿಯನ್ನು ನೆನೆದಾಗಲೆಲ್ಲಾ -
"ಹರಿಯಬೇಕು ಆಕೆ ಕರೆದಲ್ಲಿ| ಹೊರಡಬೇಕು ಆಕೆ ಬಯಸಿದಲ್ಲಿ| ನಡೆಯಬೇಕು ಜೊತೆಯಾಗಿ ಕೈಹಿಡಿದು | ಮಾತಾಗಿ ಸಲ್ಲಾಪದ ಸವಿಜೇನು |ಸವಿಯಬೇಕು ಎದೆತುಂಬಿ ಗುಟುಕು ರಸ| ತಣಿಯಬೇಕು ಹೀರಿ ಮತ್ತೆ| ನೆನೆಯಬೇಕು "ಎಂದು ಪದೇ ಪದೇ ಆಕೆಯ ಸುತ್ತ ಸುಳಿದು ಸೇವಿಸಲೇಬೇಕೆನ್ನಿಸುತ್ತದೆ. ನನಗೆ ಚಹಾಸೇವನೆ ಎಂದರೆ ನಿತ್ಯ ವೈಭವದ ಮೆರವಣಿಗೆಯ ಮಹಾನವಮಿ ಹಬ್ಬವಾಚರಿಸಿದಂತೆ. ಬಿದಿಗೆಯ ಚಂದ್ರನ ಬೆಳ್ಳಿಯ ಬೆಳಕು ಅಂತರಾಳಕ್ಕಿಳಿದು ಹೊಳೆದು ಬೆಳಗಿದಂತೆ. ಚೈತನ್ಯದ ಕಡಲುಕ್ಕಿ  ಅಲೆ ಅಲೆಯಾಗಿ ಹರಿದು ನಾದಗೈದು ವಿಜೃಂಭಿಸಿದಂತೆ. "ಮುಗ್ಧ ಮಗುವಿನಂತೆ ಚಹಾವೇಣಿಯ ಮೊಗ್ಗು  ಹಿಡಿದು ಮೇಲೆತ್ತಿ ಬಾಯಿಚಪ್ಪರಿಸಿ ನಾಲಿಗೆ ಸವರಿದಾಗಲೇ ರಸರುಚಿಯ ದರ್ಶನಾನುಭವ ದಕ್ಕುವುದು. ರಸಾಂಕುರಗಳಿಗೆ ನೈಜ ರಸಾನುಭವದ ಸಾಕ್ಷಾತ್ಕಾರವಾಗುವುದು. ಭಾವಗಳ ಮುಗ್ಧತೆ ಹೇಗೆ ಕಾವ್ಯವೊಂದರ ಹುಟ್ಟಿಗೆ ಕಾರಣವಾಗಬಲ್ಲದೋ ಹಾಗೆ ಪೂರ್ವಾಗ್ರಹಗಳಿಲ್ಲದೇ,  ಮುಗ್ಧತೆಯಿಂದ ಹೀರುವ ಚಹಾದ  ಸ್ವಾದಸುಖವೂ ಕಾವ್ಯಾನಂದವನ್ನು ಹುಟ್ಟಿಸಬಲ್ಲದು. ಕಾವ್ಯ ಮತ್ತು ಚಹಾಗಳ ಅದೈತ ಸಂಗಮಸುಖವನ್ನು ಶ್ರಧ್ಧೆಯಿಂದ ಅನುಭವಿಸಿದ್ದೇನೆ ನಾನು. ವೈದೇಹಿಯವರ" ತಿಳಿಸಾರು ಎಂದರೆ ಏನೆಂದುಕೊಂಡಿರಿ? | ಅದಕ್ಕೂ ಬೇಕು ಒಳಗೊಂದು |ಜಲತತ್ವ-ಗಂಧತತ್ವ ಕುದಿದು| ಹದಗೊಂಡ ಸಾರತತ್ವ "ಎಂಬ  ಕಾವ್ಯಾಲಾಪದಂತೆ ಸಕ್ಕರೆ ಹಾಲು, ಚಹಾದೆಲೆಗಳು ಹದವಾಗಿ ಬೆರೆಯಲು ಗಂಧತತ್ವ, ಜಲತತ್ವ ಹಾಗೂ ಸಾರತತ್ವಗಳ ತಿಳುವಳಿಕೆ ಅತ್ಯಗತ್ಯ. ಈ  ತ್ರಿವಿಧ ಸಂಗತಿಗಳ ಹದಭರಿತ ಸಮರಸದ ಸಂಗಮವೇ ಚಹಾರಸಾಯನದ ತಿರುಳು. ನನ್ನೂರು ಗುಳೇದಗುಡ್ಡ  ನೇಕಾರಿಕೆಯ ನೂಲಿನ ಬಳ್ಳಿಯನ್ನೆ  ತಮ್ಮ ಬದುಕಿನ ಸುತ್ತ ಹಬ್ಬಿಸಿಕೊಂಡ ಕರಕುಶಲಿಗರ ನಾಡು. ರಂಗಭೂಮಿ, ಬಯಲಾಟ, ಸಂಗೀತ, ಚಿತ್ರಕಲೆ ಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಚಾಲುಕ್ಯರಾಳಿದ ಬೀಡು.  ಇಂತಹ ಹೊನ್ನಾಡಿನಲ್ಲಿ  ಕುಶಲೋದ್ಯಮದ ಜೊತೆಜೊತೆಗೆ ಚಹಾಸಂಸ್ಕೃತಿಯೊಂದು ಮೈದಾಳಿರುವುದು ಇಲ್ಲಿಯ ವಿಶೇಷ. ಪ್ರತಿ ಒಂದು ಮೀಟರ್ ನೇಯ್ಗೆಗೊಂದು ಕಪ್ ಚಹಾ ಈ ಕರ ಕುಶಲಿಗರ ದೇಹದ ದೇಗುಲಕ್ಕರ್ಪಣೆಯಾಗಲೇಬೇಕು. ಒಂದು ಹೊತ್ತಿನ ಉಪಹಾರ, ಭೋಜನವಿರದಿದ್ದರೂ ನಡೆದೀತು ಆದರೆ ಚಹಾ ಇರದ ಕ್ಷಣಗಳನ್ನು ಈ ಕುಶಲಿಗಳು ಕಳೆಯಲಸಾಧ್ಯವೆನ್ನುವಷ್ಟರ ಮಟ್ಟಿಗೆ ಇಲ್ಲಿಯ ಬದುಕು ಚಹಾಗೊಡ್ಡಿಕೊಂಡಿದೆ. ಪೂರ್ವಾಶ್ರಮದ ನೇಯ್ಗೆಯ ಪ್ರಭಾವವೋ ಏನೋ ಘಳಿಗೆಗೊಮ್ಮೆ  ನನ್ನವ್ವನಿಗೆ ಹಾಗೂ ನನಗೆ ಚಹಾ ಅಮೃತ ಚೈತನ್ಯವನ್ನು ನೀಡಲೇಬೇಕು. ನನ್ನ ಮನೆಯ ಪಕ್ಕದ ಚಹಾಶಾಲೆಯಲ್ಲಿ ಚಹಾದ ದರ ಈಗಲೂ ೨ ರೂಪಾಯಿಗಳೆಂದರೆ ಚಹಾ ಎಷ್ಟೊಂದು ಅಗ್ಗದ ಸಂಗತಿಯಾಗಿ ನನ್ನೂರನ್ನು ಆವರಿಸಿಕೊಂಡಿದೆ  ಎಂಬುದನ್ನು ಅರ್ಥೈಸಿಕೊಳ್ಳಬಹುದು. ಡಾ.ರಾಜಶೇಖರ ಮಠಪತಿ (ರಾಗಂ) ರವರು, ಹದಿನಾರು ವರ್ಷಗಳ ನಂತರವೂ  ಒಂದೇ ಒಂದು ಪೈಸೆಯಷ್ಟು ಬೆಲೆಯನ್ನೂ ಹೆಚ್ಚಿಸಿಕೊಳ್ಳದ ರೂ. ೨ ರ ಒಂದು ಕಪ್  ಚಹಾ ಹಾಗೂ 'ಚಟಕ್ ಪಟಕ್ ' ಎಂದು ಲಯಬದ್ಧವಾಗಿ ನುಡಿಯುತ್ತಿರುವ ಅದೇ ಮಗ್ಗಗಳ ನಿನಾದ ಬದಲಾಗದ್ದನ್ನು ಗಮನಿಸುತ್ತಾ  "ನಾ ಕಂಡಂತೆ ಒಂದೂವರೆ ದಶಕದ ನಂತರವೂ ಕೇವಲ ಚಿಕ್ಕ ಪುಟ್ಟ ಸ್ಥಿತ್ಯಂತರಗಳನ್ನು ಹೊರತುಪಡಿಸಿ ಮೂಲಸ್ವರೂಪವನ್ನು ಬದಲಿಸಿಕೊಳ್ಳದೇ ತನ್ನ ಪರಂಪರೆ ಹಾಗೂ ಸತ್ವವನ್ನು ಉಳಿಸಿಕೊಂಡ ಕರ್ನಾಟಕದ ವಿರಳಾತಿವಿರಳ ಪುರಗಳಲ್ಲಿ ಒಂದು ಗುಳೇದಗುಡ್ಡ " ಎಂದು  ಬಣ್ಣಿಸಲ್ಪಟ್ಟ ಊರಿನಲ್ಲಿ ಇಂದಿಗೂ ಚಹಾದೊಂದಿಗಿನ ಸಂಗತಿಗಳಾವವೂ ಆಧುನಿಕ ಯುಗದ ಯಾವ ಸೆಳೆತಗಳಿಗೂ ಒಳಗಾಗಿಲ್ಲ. ನೇಕಾರಿಕೆ ಹಾಗೂ ಉಪಕಸುಬುಗಳ ಕುಶಲವೃತ್ತಿಗಳ ಜೊತೆ ಜೊತೆಗೆ ಬೆಳೆದು ಬಂದಿರುವ ಈ ಚಹಾ ಸಂಸ್ಕೃತಿ ಆತಿಥ್ಯದ ಹೊಸ ಪರಿಭಾಷೆಯೊಂದನ್ನು ಕಟ್ಟಿ  ಕೊಟ್ಟಿದೆ. ಅಬಾಲವೃದ್ಧರಾದಿಯಾಗಿ  ಮನೆಗೆ ಬರುವ ಸಕಲ ಅತಿಥಿಗಳು ಕನಿಷ್ಠ ಚಹಾತಿಥ್ಯವನ್ನಾದರೂ ಸ್ವೀಕರಿಸಲೇಬೇಕು. ಇದು ಅಘೋಷಿತ ಅತಿಥಿ ಸತ್ಕಾರದ ನಿಯಮ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಸಾಕು ಚಹಾದ ಪಾತ್ರೆ ಅಗ್ನಿಹಂಸವನ್ನೇರಲೇಬೇಕು.  ಚಹಾ ನನ್ನೂರಿನ ಕರಕುಶಲಿಗಳ ಕಾಯಕಕ್ಕೆ ಉತ್ಸಾಹದ ಚಿಲುಮೆಯಾಗಿರುವಂತೆ, ಬಂಧುಗಳೆಡೆಗಿನ ಪ್ರೀತಿ ವಾತ್ಸಲ್ಯದ  ದ್ಯೋತಕವೂ ಆಗಿದೆ. ಆತಿಥ್ಯದ ಸಂಕೇತವಾಗಿರುವ 'ಚಹಾ'ವನ್ನು  ಅತಿಥಿಗಳು ನಿರಾಕರಿಸಿದರೆ ಸಾಕು ಬೇಡದ ಮುನಿಸು ತಪ್ಪಿದ್ದಲ್ಲ.
ಅನುಬಂಧದ ಪ್ರತೀಕವಾಗಿರುವ  ಚಹಾವನ್ನು ಸ್ವೀಕರಿಸಲೇಬೇಕು.ಚಹಾತಿಥ್ಯ ಸತ್ಕಾರ ಆತಿಥೇಯರಲ್ಲಿ ಅವರ್ಣನೀಯ ಆನಂದವನ್ನು ತಂದರೆ ಅತಿಥಿಗಳಲ್ಲಿ ವಾತ್ಸಲ್ಯದ ಸುಮವನ್ನು ಅರಳಿಸುತ್ತದೆ.  ಸಂಬಂಧಗಳನ್ನು  ಗಟ್ಟಿಯಾಗಿ ಬೆಸೆಯುವ ಸೇತುವೆಯಾಗಿ ಚಹಾದ ರಾಯಭಾರಿತನ ತಲೆದೂಗುವಂತಹುದು. ಮನೆಯವರಗೆ ಜಗಳವಾಡಲು ಬಂದವರಿಗೂ ಕುಳ್ಳಿರಿಸಿ ಚಹಾದಿಂದ ಸತ್ಕರಿಸುವಂತಹ ಅತಿಥಿ ಔದಾರ್ಯ ಅನಿಕೇತನವಾದದ್ದು. ಚಹಾ ಬಂಧುತ್ವದ ಸೇತುವೆಯಾಗಿರುವಂತೆಯೇ  ಋಣದ ಪ್ರತಿನಿಧಿಯೂ ಆಗಿದೆ. ಬಗೆಹರಿಯಲಾರದ ಎಷ್ಟೋ ವಿವಾದಗಳು ಚಹಾದ ಬಾಂಧವ್ಯ ಮಾತ್ರದಿಂದ ಮಾಯವಾಗಿದ್ದನ್ನು ಕಂಡಿದ್ದೇನೆ. ಪರರ ಮನೆಯ ಚಹಾದ ಋಣ ಬಗೆಯಬೇಕಾದ ದುಷ್ಟರ ದ್ರೋಹಗಳನ್ನು, ಅಪನಂಬಿಕೆಗಳನ್ನು ತಿಳಿಗೊಳಿಸಿ ತಣ್ಣಗಾಗಿಸಿದ್ದನ್ನು ತಿಳಿದಿದ್ದೇನೆ. ಮನುಷ್ಯ- ಮನುಷ್ಯರ ಮಧ್ಯದ ದ್ವೇಷ, ವಿರಸ,ವೈರತ್ವಗಳಿಗೆ ರಾಮಬಾಣದ ಔಷಧಿಯಾಗಬಲ್ಲ ಶ್ರೇಷ್ಠ ಚಿಕಿತ್ಸಾಗುಣ ನಮ್ಮೂರಿನ ಚಹಾದಲ್ಲಿದೆ. ಸಂಜೆಯಾದರೆ ಸಾಕು ನಮ್ಮೂರಿನ ತರಕಾರಿ ಉಪ ಮಾರುಕಟ್ಟೆ ಹರಟೆಯ ಕೇಂದ್ರವಾಗಿ ಬದಲಾಗುತ್ತದೆ. ಹೀಗೆ ಸೂರ್ಯಾಸ್ತವಾಗುತ್ತಲೇ ಸೂಜಿಗಲ್ಲಿನಂತೆ ಹರಟುವವರನ್ನಾಕರ್ಷಿಸಿ ತನ್ನತ್ತ ಸೆಳೆಯುವ  ಮಾಂತ್ರಿಕನೆಂದರೆ  'ಚಹಾಮಣಿ'. ಪ್ರತಿನಿತ್ಯ ಈ ಮುಸ್ಸಂಜೆಯ ಹರಟೆಯನ್ನು  ಜಾತ್ರೆಯೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ ಇಲ್ಲಿಯ ಜನ. ಇಲ್ಲಿ ಜಾಗತಿಕವಲ್ಲದೇ, ಕೇಂದ್ರದಿಂದ ಹಿಡಿದು ಗ್ರಾಮಮಟ್ಟದವರೆಗಿನ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ,ಆಧ್ಯಾತ್ಮಿಕವಾದ ಸೂಕ್ಷ್ಮ  ಒಳನೋಟಗಳ ಚರ್ಚೆಯಿದೆ; ಊರಿನಲ್ಲಿ ಜರುಗುತ್ತಿರುವ ಹಾಗೂ ಜರುಗಿದ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದವಿದೆ; ಅಂದು ಗಮನಸೆಳೆದಿರುವ ಊರಿನ ಪ್ರಮುಖ ಸಂಗತಿಗಳ ಕುರಿತು ಮಾತುಗಳಿವೆ; ಸ್ನೇಹಿತರು, ದಾಯಾದಿ ಸಂಬಂಧಿಗಳ ಮಧ್ಯದ  ವಾದವಿವಾದಗಳ ವಿವೇಚನೆಯಿದೆ;  ಕೌಟುಂಬಿಕ, ಸಾಮಾಜಿಕ,ಆರ್ಥಿಕ,ನೈತಿಕ, ಸಾಂಸ್ಕೃತಿಕ ಅಲ್ಲದೇ ಪಾರಮಾರ್ಥಿಕ ಸಂಗತಿಗಳ ವ್ಯಾಖ್ಯಾನಗಳಿವೆ; ಸಂಬಂಧಿಕರ ಮಧ್ಯದ ವಿವಾದಗಳಿಗೆ ಮುಕ್ತಿ ನೀಡಬಲ್ಲ ನ್ಯಾಯಿಕ ಪರಿಹಾರಗಳ ಸಂಕಥನಗಳಿವೆ; ತಮ್ಮ ಕೈಗೆಟುಕದ ರಾಜಕಾರಣದ ಒಳಸುಳಿಗಳಿಗೂ ಇಲ್ಲಿ ಅನೌಪಚಾರಿಕ ಪರಿಹಾರಗಳಿವೆ; ಗೆಳೆಯರ ಮಧ್ಯದ ತುಂಟಾಟದ ಭಾವಗಳ ಸಲ್ಲಾಪಗಳಿವೆ.  ಮಾನವನ ಸಕಲ ಮನೋವ್ಯಾಪಾರಗಳ ಅಭಿವ್ಯಕ್ತಿಗೊಂದು ದಿವ್ಯಲೋಕ ಈ ಚಹಾಜಾತ್ರೆ. ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರ ಶಿಸ್ತುಗಳ ಅಧ್ಯಯನಕಾರರಿಗೆ ಒಂದು ಪ್ರಯೋಗಶಾಲೆಯಂತಿದೆ ಈ ಮೇಳ.  ಜಾತಿ ಧರ್ಮ, ಮತ,ವರ್ಣಗಳ ಭೇದವಿಲ್ಲದೇ ಚಹಾಗಾಗಿ  ಒಂದೆಡೆ ನೆರೆಯುವ ಸಂಗತಿಯೇ ವಿಸ್ಮಯ  ಮೂಡಿಸಿದೆ. ಕಲೆ ಹಾಗೂ ಸಾಹಿತ್ಯ ಮೀಮಾಂಸೆಗೂ ಅಲ್ಲಿ ಜಾಗವಿದೆಯೆಂದರೆ ಚಹಾ ಹೇಗೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನರಿಯಬಹುದು. ತೆರೆದುಕೊಳ್ಳುವ ಚಹಾಕಾರಣದ ನಮ್ಮೂರಿನ ಈ ಮಾರುಕಟ್ಟೆಯ ಜಗತ್ತು  ಸರ್ವಜನಾಂಗದವರನ್ನಳಗೊಂಡು ಇತಿಹಾಸ, ಅರ್ಥಶಾಸ್ತ್ರ, ಸಮಾಜವಿಜ್ಞಾನ,ರಾಜ್ಯಶಾಸ್ತ್ರ, ತತ್ವಜ್ಞಾನಾದಿಯಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಸಂಗತಿಗಳನ್ನೆಲ್ಲಾ ನಿಷ್ಕರ್ಷೆಗೊಳಪಡಿಸಬಲ್ಲ  ಅನುಭವ ಮಂಟಪವಾಗಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಪಕ್ಕದ ಮನೆಯವರೆಗಿನ ಸುದ್ದಿ ಸಮಾಚಾರಗಳೆಲ್ಲಾ ಈ ಅನುಭವ ಮಂಟಪದಲ್ಲಿ ನಿಕಷಕ್ಕೊಳಗಾಗಲೇಬೇಕು.ನೇಕಾರ ಸಂಗಣ್ಣ, ವಾಲೀಕಾರ ಬಸಪ್ಪ,  ಕಮ್ಮಾರ ಹನುಮಂತ, ಕುಂಬಾರ ಮಲ್ಲಪ್ಪ, ಗೌಡರ ಲಕ್ಷ್ಮಣ್ಣ ಹೀಗೆ ತರತಮಗಳಿಲ್ಲದ ಜಾತ್ಯಾತೀತ ಸಮುದಾಯವೊಂದು ಬೀದಿ ಬದಿಯ ಚಹಾಶಾಲೆಗಳ ಮುಂದೆ ಶ್ರದ್ಧೆಯಿಂದ ನಿತ್ಯ ನೆರೆಯುತ್ತದೆಯೆಂದರೆ ಚಹಾದ ಈ ಮಾಯಾಲೋಕಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು.
ಚಹಾದೊಂದಿಗೆ ಚೂಡಾ,  ಮಿರ್ಚಿ ಬಜಿ, ದೊಣ್ಣೆಮೆಣಸಿನಕಾಯಿ ಬಜಿ,  ಬದನೆಕಾಯಿ ಬಜಿ, ವಡಾ ಬಜಿ, ಆಲೂ ಬಜಿ, ಹುರಿದ ಮಸಾಲೆ ಶೇಂಗಾಕಾಳುಗಳು, ಒಗ್ಗರಣೆ ಹಾಕಿದ ಚುರುಮರಿ, ಹೀಗೆ ಬಗೆ ಬಗೆಯ ವೈವಿಧ್ಯಮಯ ಖಾದ್ಯಗಳ ಸಾಂಗತ್ಯ ಹರಟೆಗೆ ನಿತ್ಯೋತ್ಸವದ ಮೆರಗನ್ನು ನೀಡುತ್ತದೆ. ಬಿಸಿಯಾದ ಈ ಕರಿದ ಖಾದ್ಯಗಳನ್ನು ಸವಿಯುತ್ತಲೇ  ನಡೆಯುವ  ಚರ್ಚೆ ಕಾವೇರುವ ಬಗೆಯನ್ನು ನಮ್ಮ ಜನರ ಗ್ರಾಮೀಣ ಸೊಗಡಿನ ಭಾಷೆಯಲ್ಲಿಯೇ  ಕೇಳಬೇಕು. ಕರಿದ ಖಾದ್ಯಗಳ ಸವಿಯನ್ನುಂಡ ನಂತರದ ಸಾಂಗತ್ಯವೇ ಚಹಾಪಾನೀಯದ್ದು. ಅಲ್ಲಿಗೆ ಅಂದಿನ ಹರಟೆ ಅಂತಿಮ ಹಂತಕ್ಕೆ ಬಂದಿದೆಯೆಂದೇ ತಿಳಿಯಬೇಕು. ಒಂದು ಪುಟ್ಟ ಗ್ರಾಮದ  ಜಾತ್ರೆಯಷ್ಟು ಜನರನ್ನು ಸೆಳೆಯುವ ಈ  ಚಹಾಶಾಲೆಗಳೇನೂ ಪಂಚತಾರಾಗೃಹಗಳಲ್ಲ. ಬೀದಿ ಬದಿಯ ಮೂಲೆಯೊಂದರಲ್ಲಿ  ತಳ್ಳುವ ಗಾಡಿಗಳ,ಚತುರ್ಭುಜಗಳಂತಿರುವ  ನಾಲ್ಕು ಚಕ್ರಗಳ ಮೇಲೆ   ಪ್ರತಿಷ್ಠಾಪಿಸಲ್ಪಟ್ಟ ಸಂಚಾರಿಯಂತೆ ಕಾಣುವ ಡಬ್ಬಿಯಂಗಡಿಗಳು.  ಮಲೆನಾಡಿನ ಚಹಾಕುಶಲಿಗಳು ಚೂಡಾದಂಗಡಿಯ ಪಕ್ಕತೆರೆದಿರುವ  ಚಹಾಶಾಲೆ ಒಂದಕ್ಷರದ ವಿದ್ಯೆಯನ್ನು ಧಾರೆಯೆರೆಯದಿದ್ದರೂ ಚಹಾದ ಅನುಭಾವದ ರಸಪಾಕವನ್ನು ರಸಿಕರಿಗೆ ಹಂಚುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ!. ಮುಸ್ಸಂಜೆಯ ವಿಹಾರಿಗಳು ಸೇರುವ ಈ ಜಾಗ ವಿಶಾಲವಾದ ಬಯಲೇನೂ ಅಲ್ಲ, ಸುಮಾರು ೧೦೦ ಮೀಟರ್ ಉದ್ದಳತೆಯ ಚಿಕ್ಕ ಉಪಮಾರುಕಟ್ಟೆಯ ತಾಣವದು. ಅಂದ ಹಾಗೆ ಈ ಹರಟೆಯ ಜಗತ್ತಿನ ನಿತ್ಯದ ಆಯಸ್ಸು ಸಂಜೆ  ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರವೆಂದರೆ ಅಚ್ಚರಿಯೆನಿಸದಿರದು.  ಗೋಧೂಳಿಯ ಮುಹೂರ್ತದಲ್ಲಿ  ಜನಿಸಿ, ವಿವಿಧೆಡೆಗಳಿಂದ  ಹರಿದು ಬಂದ ಜಲ ಸಾಗರವ ಸೇರುವಂತೆ ನಮ್ಮೂರಿನ ಗಲ್ಲಿ ಹಲ್ಲುಗಳಿಂದ ಜನ ನಿತ್ಯದ ಈ ಚಹಾಮೇಳಕ್ಕೆ ಹರಿದುಬರುತ್ತಾರೆ. ಕೆಲವೇ ಗಂಟೆಗಳಲ್ಲಿ  ಬೃಹದಾಕಾರವಾಗಿ ಬೆಳೆದು, ಮತ್ತೆ ಐದಾರು ಗಂಟೆಗಳಲ್ಲಿಯೇ ಕೊನೆಯಾಗುವ ಈ ಚಹಾರಂಜನೆಯ ಜಾತ್ರೆ ಬಲು ವಿಶಿಷ್ಟವಾದುದು.
ಸಾಮಾನ್ಯರಾದಿಯಾಗಿ ಶಿಕ್ಷಕರು, ವಕೀಲರು, ಸುದ್ದಿಮಾಧ್ಯಮದವರು,  ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು, ಕರಕುಶಲಿಗಳು, ರೈತರು  ಹೀಗೆ ವರ್ಗಭೇದವಿಲ್ಲದೇ ಸರ್ವರನ್ನೂ ಸೆಳೆದು, ಭ್ರಾತೃತ್ವದ ಮುನ್ನುಡಿಯನ್ನು ಹಾಡುತ್ತಿರುವ ಸೌಹಾರ್ದತೆಯ ಸಂಗೀತವನ್ನು ನುಡಿಸುತ್ತಿರುವ, ಸಮಾನತೆಯ ತತ್ವವನ್ನು ಸಾರುತ್ತಿರುವ,ಜಗತ್ತಿಗೆ ಬಾಂಧವ್ಯದ ಪಾಠ ಮಾಡುತ್ತಿರುವ, ನಮ್ಮೂರಿನ ಚಹಾಜಗತ್ತಿನ ಮಾಂತ್ರಿಕ ಮೋಡಿ ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ  ಅಲ್ಲವೆ ?  ದಿನವೆಲ್ಲಾ ದುಡಿದು ಬಳಲಿದ ಮನಸುಗಳನ್ನು ತನ್ನತ್ತ ಕೈ ಬೀಸಿ ಕರೆದು ಉಣಬಡಿಸಿ,  ಸಂಜೆಯ ಚಹಾಮೃತದ ಸವಿಯನ್ನು ನಿಷ್ಪಕ್ಷಪಾತವಾಗಿ ಹಂಚುವ ಈ ನಿರ್ಮಲ ಜಗತ್ತು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಶ್ರಮ ಸಂಸ್ಕೃತಿಯ ಬೇರುಗಳಿಂದ ನವಚಿಗುರನ್ನು ಪಡೆದು ಕಂಗೊಳಿಸುತ್ತಿರುವ ನಮ್ಮೂರಿನ ನಾಗರಿಕತೆಯಲ್ಲಿ, ಕೆಲವು ಕಾಲ ಬಡವರ ಜಠರಾಗ್ನಿಯನ್ನು ತಣಿಸಿ ಹಸಿವನ್ನು ಮುಂದೂಡುವ ಅಥವಾ ಒಂದು ಹೊತ್ತಿನ ಉಪವಾಸಕ್ಕೆ ಸಹಕರಿಸಿ ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವ ಈ ಚಹಾ ಎಂಬ ಮಾಯೆ ತನ್ನ ಸುತ್ತ  ಒಂದು ನವಸಂಸ್ಕೃತಿಯನ್ನೆ ರೂಪಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. ಬಡವರ ಕೊನೆಯಿರದ ಹಸಿವಿನ ಔಷಧಿಯಾಗಿರುವ ಈ "ಬಡವರ ಬಂಧು" ಶ್ರಮಿಕರ ಅಮೃತವೂ ಹೌದು; ಶೋಷಿತರ ಬದುಕಿನ ತೀರ್ಥವೂ ಹೌದು.ಲಾಲ್ ಬಹಾದ್ದೂರ ಶಾಸ್ತ್ರಿಯವರು ಕರೆಕೊಟ್ಟ ಸೋಮವಾರದ ಉಪವಾಸ ಯಶಸ್ವಿಯಾಗುವಂತೆ ಮಾಡಿ ದೇಶ ಸೇವೆ ಮಾಡಿದ ಚಹಾಮಾಯಿಯ ದೇಶಭಕ್ತಿಯನ್ನು ಮೆಚ್ಚಲೇಬೇಕು! ಈ ಲೇಖನ ಅಕ್ಷರವಾಗುವ ಹೊತ್ತಿನಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕ ಗೆಳೆಯ ಮೌನೇಶ ಕಮ್ಮಾರರವರು ಹಾಡಿದ"ಕಪ್ಪ ಬಸಿ ಚಹಾ | ಗೆಳೆಯ ಗೆಳೆಯರು ಕೂಡಿ| ಸಲಿಗೆಯ ಮಾತನಾಡಿ|ಪ್ರೀತಿಗೆ ನಾಂದಿಯಾತು| ಕಪ್ಪ ಬಸಿ ಚಹಾ| ಅದು ಒಂದು ಇಲ್ಲದಿರೆ|ಗೆಳೆತನ ಎಲ್ಲಾ ಮರೆ| ಬದುಕುವುದು ಬಿರಿಯಾತು| ಕಪ್ಪ ಬಸಿ ಚಹಾ|"ಎಂಬ ಜಾನಪದ ಗೀತೆಯಲ್ಲಿ ಅಭಿವ್ಯಕ್ತವಾದ  ಚಹಾಮಾಯಿಯ ಸೊಬಗು ಅವರ್ಣನೀಯ. ಚಹಾ ಜನಪದರ ಜೀವಸೆಲೆಯಾಗಿ ಬದುಕಿಗೆ ಚೈತನ್ಯವನ್ನು ಧಾರೆಯೆರೆಯುತ್ತಲೇ ಬಂದಿದೆ. ನಾಡವರ ಕಾಯಕದಲ್ಲಿನ ಕೈಲಾಸ ತಲುಪಲು ಈ ಚಹಾ ಎಂಬ ಉತ್ಸಾಹದ ಚಿಲುಮೆ  ಪ್ರವಹಿಸಲೇಬೇಕು. "ನೀನೆಂದರೆ  ಕಣ ಕಣದಲೂ ರೋಮಾಂಚನ | ಮನದ ಮೂಲೆಯಲೂ ಭರವಸೆಯ ಹೊಂಗಿರಣ| ಅರಳಿ ನಿಂತ ಎದೆಯಲಿ ನೀನು ಅಮೃತ ಸಿಂಚನ| ಕದಡಿದ ಮನ ತಿಳಿಯ ಬಾನು | ಆಗದೇನು ಇಳಿದಾಗ ಚಹಾ ಹನಿಯ ಜೇನು|"ಎಂಬ ಚಹಾರಾಧನೆ ಮನದ ಮೂಲೆಯಲ್ಲಿ ಸದಾ ಜರುಗುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಆಹಾರ ಸಂಸ್ಕೃತಿಯ ಅತ್ಯಗತ್ಯ ಪಾನೀಯಗಳಲ್ಲಿ ಒಂದಾಗಿರುವ ಚಹಾದೇವಿ, ವರ್ತಮಾನದ ಬೆಡಗಿನ ಲೋಕದ ಸೆಳೆತಕ್ಕೆ ಸಿಕ್ಕು ಕೆಫೆಗಳಲ್ಲಿ ಕಪ್ಪು ಸುಂದರಿಯಾಗಿ, ಬಿಳಿ ಕಿಶೋರಿಯಾಗಿ, ಹಸಿರು ನೀರೆಯಾಗಿ, ಕೆಂಬಣ್ಣದ ಮೋಹಿನಿಯಾಗಿ, ವೈವಿಧ್ಯಮಯ ರೂಪಗಳನ್ನು ಅಲಂಕರಿಸಿದ್ದಾಳೆ. ಪ್ರಾತಃಕಾಲದಲೆದ್ದು ಮುಖ, ಹಲ್ಲುಗಳನುಜ್ಜಿ, ವಿಭೂತಿ ಧರಿಸಿ ಒಂದು ಲೋಟ ಚಹಾ ಹೀರಿದಾಗಲೇ ಅಂದಿನ ಕಾಯಕದ ಅಧಿಕೃತ ಪ್ರಾರಂಭಕ್ಕೆ ಮುನ್ನುಡಿ ಬರೆದ ಹಾಗೆ. ಅಲ್ಲಿಂದ ಮೂರು ಗಂಟೆಗಳಿಗೊಮ್ಮೆ ಚಹಾರಾಣಿಯೊಂದಿಗೆ ಉಲ್ಲಾಸದ ಹಾಡನ್ನು ಹಾಡಲೇಬೇಕು. ಶ್ರಮಿಕ ವರ್ಗದ ಜನರ ಜೀವನದ ಚೈತನ್ಯವಾಗಿರುವ ಕಲಿಯುಗದ ಅಮೃತವಾಗಿರುವ ಚಹಾ ನಮ್ಮೂರಿನ ಭಾವೈಕ್ಯತೆಯ ಪ್ರತೀಕವೂ ಆಗಿದೆಯೆಂದರೆ ಅತೀಶಯೋಕ್ತಿಯೇನಲ್ಲ.




ಚಹಾಯಣ

ಚಹಾಯಣ

ಕಲಿಯುಗದ ಅಮೃತವೆಂದೇ  ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!.  ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ
ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು..........
" ಎಂದು ಮನೆಯ ಹತ್ತಿರದ  ದೇವಸ್ಥಾನದ ಶುಭ ಸುಪ್ರಭಾತದೊಂದಿಗೆ  ಎಚ್ಚರವಾಗುವ ನನಗೆ ಬೆಳಗು  ನಿತ್ಯೋತ್ಸವವಿದ್ದಂತೆ. ಪ್ರತಿ ಶುಭೋದಯವನ್ನೂ ಹಬ್ಬದಂತೆ ಸಂಭ್ರಮಿಸಿ ಹರ್ಷಿಸುತ್ತೇನೆ.ಮನೆಯ ಮುಂದಿನ ಬೇವು,ತೆಂಗು,ಕಣಗಲಿ ಗಿಡಮರಗಳೊಳಗಣ ಗೂಡುಗಳಿಂದ ರೆಕ್ಕೆಬಿಚ್ಚಿ ಮೈಮುರಿಯುತ್ತಾ ಹೊರಬಂದ ಗಿಳಿ, ಗುಬ್ಬಿ ,ಪಾರಿವಾಳ,ಕೋಗಿಲೆ ಕಾಕಗಳ ಚಿಲಿಪಿಲಿ ಗಾನ, ಮನೆಯ ಮುಂದಿನ ಕಲ್ಪವೃಕ್ಷದ ಪ್ರತೀಕದಂತಿರುವ ತೆಂಗು, ಬೇವು, ಸೀತಾಫಲ ಮರಗಳ ಎಲೆಗಳ ಮಧ್ಯೆ ಇಣುಕುತ್ತಾ ತೂರಿಬಂದು ನೆಲದ ಮೇಲೆ ಸ್ವರ್ಣ ಬೆಳಕಿನ ರಂಗೋಲಿ ಬಿಡಿಸಿದ ನೇಸರನ ನವೋಲ್ಲಾಸದ ಹೊನ್ನ ಕಿರಣಗಳ  ಎರಕ, ಮೈದುಂಬಿಕೊಂಡು ದಟ್ಟ ಆಮ್ಲಜನಕದ ತೇವಭರಿತ ಗಂಧ ಸೂಸುತ್ತಿರುವ ಮಂದಹಾಸದ ತಂಗಾಳಿಯ ಹಿತವಾದ ಸ್ಪರ್ಶ, ಇಬ್ಬನಿಯ ಹನಿಗಳಿಂದ ತೊಯ್ದು ಇರುವೆಗಳ ಮುಂಜಾವಿನ ಜಾತ್ರೆಗೆ ಕಾರಣವಾದ ಸವಿನೆಲದ ರಸ ಮಾಧುರ್ಯ, ದಾಸವಾಳ, ಮಲ್ಲಿಗೆ,ಸೇವಂತಿಗೆ ಕುಸುಮಗಳ ಮೇಲೆ ಸವಾರಿ ಹೊರಟು ರೆಕ್ಕೆಬಡಿಯುತ್ತಾ ಹನಿಹನಿಯಾಗಿ ಮಧು ಹೀರುತ್ತಿರುವ ದುಂಬಿಗಳ ನಿನಾದ,  ಚುಮುಚುಮು ಬೆಳಕಿನ ಉದಯರಾಗ, ಕೈಗೆಟುಕುವ ಕಣ್ಣಳತೆಯಲ್ಲಿ ಗೂಡುಕಟ್ಟಿ ಮಧುವಿನ ಸಂಗ್ರಹದಲ್ಲಿ ತೊಡಗಿರುವ ಮರಿದುಂಬಿಗಳ ಸ್ವರಾಂಜಲಿ,ಹೂವಿಂದ ಹೂವಿಗೆ ಹಾರಿ, ರಸರುಚಿಯ ಪರೀಕ್ಷೆಗಿಳಿದು ಸುತ್ತಿ ಸುಳಿಯುತ್ತಿರುವ ಚಿಟ್ಟೆಗಳ ಸರಸ ಸಲ್ಲಾಪ, ರವಿಯ ಹೊಂಗಿರಣಗಳಿಗೆ ಮೈಯ್ಯೊಡ್ಡಿ ಅರಳಿ ನಿಂತು ಸುಗಂಧಸುಧೆಯನ್ನು ಹರಿಸುತ್ತಿರುವ ತುಳಸಿ,ದುಂಡುಮಲ್ಲಿಗೆ,ಚೆಂಡು ಹೂ, ಸೇವಂತಿಗೆ, ಕಣಗಿಲೆ, ಸೂಜಿಮಲ್ಲಿಗೆ,ಮಧ್ಯಾಹ್ನಮಲ್ಲಿಗೆ, ಬೇವಿನ ಹೂ,ಪೇರು ಹೂಗಳ ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳ  ಸೌಂದರ್ಯಮೀಮಾಂಸೆ,  ಮಂಜಿನ ರಸಗಂಗೆಯ ಹನಿಗಳ ಮಿಲನದಿಂದಾಗಿ  ಪೆಟ್ರಿಕೋರ್ ವಿದ್ಯಮಾನದುಂದುಂಟಾಗಿ ಚಿಮ್ಮುತಿರುವ  ಆರ್ದ್ರ ಮಣ್ಣಿನ ಹದಭರಿತ ಪರಿಮಳ, ಭಾನುವಿನ ನವಪ್ರಭೆಗಾಗಿ ಕಾತರಿಸುತ್ತಲೇ ಮರೆಯಾಗುತ್ತಿರುವ ಮಂದಬೆಳಕಿನ ಉದಯಗೀತೆ..... ಹೀಗೆ ಸರದಿಯಂತೆ ಬಂದಪ್ಪಳಿಸುವ ಶುಭೋದಯದ ನಾದಬಿಂದುಗಳೊಂದಿಗೆ ಚಹಾಮಾಯಿಯ ಚಪ್ಪರಿಸುವ ಸವಿ ಗುಟುಕಿದ್ದರೆ ಮುಗಿಯಿತು. ಅದು ಧರೆಗಿಳಿದ ನಂದನವನದ ಸಾಕ್ಷಾತ್ಕಾರದ ಪರಮಸುಖ ; ನೆಲದ ಮೇಲಿನ ಬೃಂದಾವನ ದರ್ಶಿಸಿದ ಮಹದಾನಂದ ; ಅಮೃತಧಾರೆಯನ್ನೇ ಹೀರಿದ ದಿವ್ಯಾನುಭವ ; ಇಬ್ಬನಿಯ ಹನಿಗಳೆಲ್ಲಾ ಮುತ್ತಾದ ಸಂಭ್ರಮ; ಮರ್ತ್ಯ ಲೋಕದಿಂದ ಹಾರುತಿರುವ ಹೃದಯಾನಂದದ ಅನುಭವ.
ಈ ಅನುಭವಗಳು ಒಮ್ಮೆಲೇ ಬಂದಪ್ಪಳಿಸಿ ಅಂತರಂಗದ ಕಡಲಿಗೆ ಪ್ರಶಾಂತಿಯನ್ನು ನೀಡುವ ದಿವ್ಯಾನುಭವ ನನಗೆ ಶುಭೋದಯದ ಚಹಾರಾಣಿ ನನ್ನೊಳಗಿಳಿದಾಗ ಸಂಭವಿಸಿದೆ. ನನ್ನನ್ನು ಧ್ಯಾನದ ಶೂನ್ಯಕ್ಕೆ ಕರೆದೊಯ್ಯುವ ಹಕ್ಕಿಯಂತೆ ಚಹಾಮಾಯೆ ನನ್ನನ್ನು ಬೆಂಬತ್ತಿದೆ.

" ಆನಂದಮಯ ಈ ಜಗಹೃದಯಭಯವೇತಕೆ ಮಾಣೊ ಸೂರ್ಯೋದಯ ಚಂದ್ರೋದಯದೇವರ ದಯೆ ಕಾಣೊ" ಎಂಬ ಕುವೆಂಪುರವರ ಉಕ್ತಿಯಂತೆ ಉದಯರವಿಯೊಂದಿಗೆ, ಸಲ್ಲಾಪದಲ್ಲಿ ತೊಡಗಿದರೆ ಸಾಕು ಬರೆಯುತ್ತಿರುವ ಸಂಗತಿಗಳೆಲ್ಲಾ ಕಿರಣಗಳ ಹೊಳಪಿನಲ್ಲಿ ಮಂದವಾಗುತ್ತವೆ. ಚಹಾದ ಮಗ್ಗಿಗೆ ಬರೋಣ.ಚಹಾವೆಂದರೆ ನನಗಂತೂ ಎಲ್ಲಿಲ್ಲದ ಹಿಗ್ಗು. ಬೆಳಗಿನ ಈ ಸುಖಜೀವನದ ಘಳಿಗೆಗಳೊಂದಿಗಿನ ಸೇವನೆ ನನ್ನ ನಿತ್ಯದ ಬದುಕನ್ನು ರಸಮಯವಾಗಿಸಿದೆ. ಚೈತನ್ಯದ ಚಿಲುಮೆಯ ಒರತೆಯನ್ನಾಗಿಸಿದೆ. ಚಹಾದ ಗುಟುಕಿನಿಂದಲೇ ನನ್ನ ಬೆಳಗಿನ ಅಧಿಕೃತ ಪ್ರಾರಂಭವೆಂದರೆ ತಪ್ಪಾಗಲಾರದು. ಅಂದರೆ ಬೆಳಿಗ್ಗೆ ೬ ಗಂಟೆಗೆ ಎದ್ದರೂ ಅಂದು ತಡವಾಗಿ ೧೦ ಗಂಟೆಗೆ ಚಹಾ ಹೀರಿದರೆ ನನಗೆ ಶುಭೋದಯವಾಗುವುದು ೧೦ ಗಂಟೆಗೆ ಎಂದರೆ ಚಹಾ ನನ್ನನ್ನಾವರರಿಸಿರುವ ಪರಿಯನ್ನೊಮ್ಮೆ ಊಹಿಸಬಹುದು. ಬೆಳಗಿನಲ್ಲಿ ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲೂ ನನ್ನೊಳಗಿಳಿಯುವ ಆಪತ್ಕಾಲದ ಪಾನರಾಣಿ. ತಲೆ ನೋವಿನ ಹಾವಳಿಯಿರಲಿ, ಸುಖವೆಂದು ಬಗೆದ ಸಂಸಾರದ ಅಸಂಖ್ಯಾತ ತಾಪತ್ರಯಗಳ ದಾಳಿಯಿರಲಿ, ಮೈ ಹಣ್ಣಾಗುವ ಆಯಾಸವಿರಲಿ, ಮೈಗಳ್ಳತನವೆಂಬ ಠಕ್ಕನ ಬಲೆಯಾಗಿರಲಿ,ತರಗತಿಗಳಲ್ಲಿನ ಉಪನ್ಯಾಸದ ಬಳಲಿಕೆಯಿರಲಿ, ಸ್ನೇಹಿತರೊಂದಿಗಿನ ಹರಟೆಯಿರಲಿ ಅಥವಾ ಏನೂ ಇಲ್ಲದೇ ಸುಮ್ಮನೆ ಹೊತ್ತುಗಳೆಯುತಿದ್ದರೂ ಚಹಾ ಎಂಬ ಮನದನ್ನೆ ಮಾತ್ರ ನನ್ನನ್ನು ಆಗಾಗ ಬಂದು ಕ್ಷೇಮಕುಶಲ ತಿಳಿದು ಮನದ ಕ್ಲೇಶ ಕಳೆಯುವ ಜೀವ ಸಂಜೀವಿನಿಯಾಗಲೇಬೇಕು. ಕಾರಣಗಳೇ ಬೇಕೆಂದೇನಿಲ್ಲ  ನಾನು ಆಕೆಯನ್ನು ಬಯಸುವುದಕ್ಕೆ. ನೆಪಗಳಿದ್ದರೆ ಸಾಕು, ಬರಸೆಳೆದು ಬಾಚಿಕೊಳ್ಳುತ್ತೇನೆ ಆಕೆಯನ್ನು ಸಂಧಿಸಲು ದೊರೆತ ಅವಕಾಶಗಳನ್ನು. ನೆಪಗಳಿಲ್ಲದಿದ್ದರೂ ಚಿಂತೆಯಿಲ್ಲ ತಲೆ ಸರಿಯಿಲ್ಲವೆಂದೊ, ಗೆಳೆಯರಾರೊ ಬಹಳ ಮಾತನಾಡಿದರೆಂದೋ,ಪ್ರಾಂಶುಪಾಲರು ಹೊಗಳಿದರೆಂದೋ, ಚಹಾ ಒಲ್ಲದ ಸಹೋದ್ಯೋಗಿಗಳು ಬಯಸಿದರೆಂದೋ,ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತೆನೆಂದೊ, ಗೆಳೆಯರ ಜನ್ಮದಿನವೆಂದೊ...   ಹೀಗೆ ತರಹೇವಾರಿ  ನೆಪಗಳನ್ನು ಅವಳಿಗಾಗಿ ಹುಟ್ಟುಹಾಕಿಕೊಳ್ಳುತ್ತೇನೆ. ಕೆಲವೊಮ್ಮೆ ಮಧ್ಯಾಹ್ನದ ಭೋಜನ  ಸವಿಯುವಾಗಲೇ ಆಕೆಗಾಗಿ ಕಾಯುವ ಪ್ರೇಮತಪಸ್ವಿಯಾಗುತ್ತೇನೆ. ಹೌದು ಆಕೆಯೆಂದರೆ ಸಮಯದ ಪರಿವೆಯಿಲ್ಲ ಎನಗೆ. ಆಕೆ ನೆನಪಾದರೆ ಮುಗಿಯಿತು ಹೊರಡಲೇಬೇಕು ಅವಳು ಸಿಗುವಲ್ಲಿಗೆ. ಬಸ್ಸು ನನ್ನನ್ನು ಬಿಟ್ಟು ಹೊರಟರೂ ಪರವಾಗಿಲ್ಲ ಆಕೆಯೊಂದಿಗೆ ಕೆಲಕಾಲ ಮಾತಿಗಿಳಿಯಲೇಬೇಕು.
ಆಕೆಯ ಸಂಗದಿಂದ ಕ್ಷಣಹೊತ್ತು ಮೈಮರೆತು ಕುಳಿತ ನಂತರ, ಎಚ್ಚರವಾದಾಗ ಏನನ್ನೋ ಅವಳಿಗಾಗಿ ಕಳೆದುಕೊಂಡಿರುತ್ತೇನೆ. ಮಹತ್ವದ ಸಮಯವನ್ನೊ,ಮನೆ ಸೇರಿಸಬೇಕಾದ ಬಸ್ಸನ್ನೊ, ಮಹತ್ವದ ಕೆಲಸವಾಗಬೇಕಾದ ಯಾರದೋ ಭೇಟಿಯನ್ನೊ,ಹೊರಟಿರುವ ಪ್ರಯಾಣದ ರೈಲನ್ನೊ, ಕಾಯುತ್ತಿರುವ ಗೆಳೆಯನನ್ನೊ ಅಥವಾ ಸಂಬಂಧಿಕರನ್ನೊ  ಇನ್ನೇನೇನೋ ಆ ಕ್ಷಣಕ್ಕೆ ಕಳೆದುಕೊಂಡಿರುತ್ತೇನೆ.  ಆದರೂ ಚಿಂತೆಯಿಲ್ಲ ನನಗೆ. ಕಳೆದುಕೊಂಡಿದ್ದೇನೆ ಎಂಬ ಕೊರಗಿಲ್ಲ;
ದಕ್ಕದೇ ಹೋಯಿತೆಂಬ ಪಶ್ಚಾತ್ತಾಪವಿಲ್ಲ; ತಪ್ಪಿಹೋಯಿತಲ್ಲ ಎಂಬ ಕನವರಿಕೆಯಿಲ್ಲ ;
ಜಾರಿದೆನೆಂಬ ಪ್ರಾಯಶ್ಚಿತವಿಲ್ಲ; ಅನಾಹುತವಾಯಿತಲ್ಲ ಎಂಬ ಹೆದರಿಕೆಯಿಲ್ಲ ; ಸಂಭವಿಸಬಾರದಾಗಿತ್ತು ಎಂಬ ಹಳಹಳಿಕೆಯಿಲ್ಲ;
ಎಚ್ಚರ ತಪ್ಪಿದೆನೆಂಬ ಹಳವಂಡವಿಲ್ಲ;ಓಹೋ ಕೈಜಾರಿತೆಂಬ ಪರಿತಪಿಸುವಿಕೆಯಂತೂ ನನ್ನಲಿಲ್ಲಏಕೆಂದರೆ ನಾನು ಅವಳನ್ನು (ಚಹಾಮಾಯೆ) ಕುಡಿದಿದ್ದೇನೆ.
ಅಲ್ಲಮನಿಗೆ ತಾಮಸವು ಮಾಯೆಯಾಗಿ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ. ಆದರೆ ಅಲ್ಲಮ ಮಾಯೆಯನ್ನು ಗೆದ್ದು ಬೀಗಿ ಬಯಲಾದ. ನಾನು ಸೋತು ಹಿಗ್ಗಿ ಪರವಶನಾದೆ. ಅವಳೊಲವಿನ ಶಾಶ್ವತ ಪ್ರೇಮಭಿಕ್ಷುವಾದೆ. ಆಕೆ ಪ್ರೇಮಮಧುವನ್ನು ಧಾರೆಯೆರೆಯುವ ಗಂಗೆಯಾದಳು.ಆಕೆಯ ರಸಾನುಭವದ ಸಖನಾದೆ. ಆಕೆಯಪರಿಮಳದ ಹಬ್ಬದಲ್ಲಿ ಸಂಭ್ರಮಿಸುವ ಮಗುವಾದೆ.
ಹದಭರಿತ ಚಹಾಕನ್ನಿಕೆಯ ಸ್ವಾದಕ್ಕಿಂತ ಮಿಗಿಲಾದ ರಸರಾಸಾಯನ ಈ ಭುವಿಯ ಮೇಲೆ ಬೇರೊಂದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬರು ಬಲ್ಲವರು.ಆದರೆ ನನಗೆ ಈ ಜಗದಲಿ ಚಹಾಗಿಂತ ರುಚಿ ಬೇರೊಂದಿಲ್ಲ. "ನಹೀ ಜ್ಞಾನೇನ ಸದೃಶಂ"  ಎನ್ನುವಂತಯೇ ನನಗೆ ನಹೀ ಚಹಾ ಸದೃಶಂ ಎಂದೆನ್ನಿಸಿದೆ. ಇದ ಕಾರಣ ಚಹಾಷೋಡಶಿಯ ಬಾಯಿಚಪ್ಪರಿಸುವ ಆಸ್ವಾದ; ನನ್ನೊಳಗಿಳಿದು ನಶೆಯೇರಿಸುವ ಅವಳ ಆಮೋದ. ಸಾಮಾನ್ಯವಾಗಿ ಸರ್ವರಿಗೂ ತಿಂಗಳಿಗೊಮ್ಮೆ ಹುಣ್ಣಿಮೆ, ಅಮವಾಸ್ಯೆಗಳ ಹಬ್ಬವಾದರೆ ನನಗೆ ಚಹಾಸಿನಿ ಯ ಸಖ್ಯ ದೊರೆತಾಗಲೆಲ್ಲ ಮಹಾನವಮಿ.ಯಾಕೆಂದರೆ ಚಹಾಮಾಯೆಯನ್ನು ಪಡೆದುಕೊಂಡಿದ್ದೇನೆ. ಬೆಳಗಾಗೆದ್ದ ಕೂಡಲೇ ಯೋಗಿಯಾಗುತ್ತೇನೆ ಧ್ಯಾನನಿರತನಾಗುತ್ತೇನೆ, ನಂತರವಾದರೂ ಚಹಾಮೃತವನ್ನು ಸವಿಯಬಹುದೆನ್ನುವ ಮಹಾ ಹಂಬಲದಿಂದ.ಮಜ್ಜನದಲಿ ತೊಯ್ಯುತ್ತೇನೆ.ತಾಳದ ಚಳಿ ಪಡೆದುಹೆಚ್ಚು ಚಹಾ ಹೀರಬಹುದೆಂಬ ಮಹದಾಸೆಯಿಂದಉಪಹಾರ ಸೇವಿಸುತ್ತೇನೆಜಠರಲದಲ್ಲಿನಿತು ಅವಕಾಶವನಿಟ್ಡು. ಸಾಧ್ಯವಾದಷ್ಟೂ ಅವಳನ್ನು ಕುಡಿದು ತುಂಬಿಕೊಳ್ಳಬೇಕೆಂಬ ಬಯಕೆಯಿಂದ.
ಸದಾ ತುಂಬಿಕೊಂಡೇ ನಶೆಯನ್ನೇರಿಸಿಕೊಳ್ಳುವ ಚಹಾದ ಮಗ್ಗನ್ನು ಕಂಡು ಅಸೂಯೆಪಟ್ಟಿದ್ದೇನೆ. ಸಂಸ್ಕರಿತ ಮಣ್ಣಿನ ಹೊಳೆಯುವ ಶ್ವೇತ ವರ್ಣದ ಪಿಂಗಾಣಿ ಮಗ್ಗಿನಲ್ಲಿಯ ಆಕೆಯ ತುಳುಕುವಿಕೆಯನ್ನು ಕಂಡು ಮೋದಿಸಿದ್ದೇನೆ. ಕೆಂಬಣ್ಣದ ಕೆನ್ನೆಯಂತಿರುವ ಅವಳ ಕೆನೆಯನ್ನು ಸವರಿ ಎತ್ತಿಕೊಂಡು ಚರ್ವಿಸಿದ್ದೇನೆ. ನಾಲಿಗೆ ಚಪ್ಪರಿಸಿ ರಸಾಂಕುರಗಳನ್ನು ಉದ್ದೀಪಿಸಿದ್ದೇನೆ.
ಹರಿವಂಶರಾಯ್ ಬಚ್ಚನ್ ರವರು-
"ನನ್ನ ಶೆರೆಯಲ್ಲಿ ಒಂದೊಂದುಹನಿ ಒಬ್ಬೊಬ್ಬರಿಗೂನನ್ನ ಪ್ಯಾಲೆಯೊಳಗೆಒಂದೊಂದು ಗುಟುಕು ಎಲ್ಲರಿಗೂನನ್ನ ಸಾಕಿಯೊಳಗೇಅವರವರ ಸಾಕಿಯರ ಸುಖ ಎಲ್ಲರಿಗೂಯಾರಿಗೆ ಯಾವ ಹಂಬಲವೊಹಾಗೇ ಕಂಡಳು ನನ್ನ ಮಧುಶಾಲಾ"ಎಂದು  ಮದಿರೆ ಹಾಗೂ ಮಧುಶಾಲೆಯನ್ನು ಕುರಿತು ಹಾಡಿದ ಕವಿತೆಯ ಸಾಲುಗಳು ನನ್ನ ಚಹಾ ಹಾಗೂ ಚಹಾಶಾಲೆಯನ್ನು ಕುರಿತ ಅನುಭವವನ್ನು ಹೋಲುತ್ತವೆ.  ಚಹಾಶಾಲೆಯಲ್ಲಿ ಕುಳಿತು ಚಹಾವನ್ನು ಮದಿರೆಯಂತೆ ಹೀರಿದ್ದೇನೆ. "ವಾಹ್ ತಾಜ್..." ಎಂಬ ತಬಲಾವಾದಕನ  ಚಹಾ ಹೀರುವ ದೃಶ್ಯದ ತುಣುಕು ನನಗೆ ಜಾಹೀರಾತಾಗಿ ಕಾಣಲೇ ಇಲ್ಲ, ಬದಲಾಗಿ ಚಹಾದ ತಾಜಾ ಸ್ವಾದ ಹಾಗೂ ನವೋಲ್ಲಾಸದ ಹೊಳೆಯ ಅಭಿವ್ಯಕ್ತಿಯಾಗಿ ಕಾಣುತ್ತದೆ. ಮೈಯ್ಯೊಳಗೆ ರುಧಿರದ ಬದಲಾಗಿ ಚಹಾವೇ ಪ್ರವಹಿಸುವಂತಿದ್ದರೆ ದಿನವಿಡೀ ಮನೋಲ್ಲಾಸದ ಮಡುವಿನಲ್ಲಿ ತೇಲಾಡಬಹುದಿತ್ತಲ್ಲ ನಶೆಯ ಗುಂಗಿನಲ್ಲಿಯೇ ಓಲಾಡಬಹುದಿತ್ತಲ್ಲ ಎಂಬ ದುರಾಸೆಯ ಕನಸಿನ ಬೆನ್ನು ಹತ್ತಿ ಕನವರಿಸಿದ್ದೇನೆ. ಊಟ,ಉಪಹಾರವಿಲ್ಲದೇ ಸರಾಗವಾಗಿ ಜೀವನ ನಡೆಸಬಹುದು ಆದರೆ ಚಹಾಕನ್ನಿಕೆಯ ದರ್ಶನವಿಲ್ಲದ ನನ್ನ ಹೃದಯ ಮತ್ತು ಮನಸ್ಸುಗಳು ಕ್ಷಣಕಾಲವೂ ಬದುಕಿರಲಾರವು ಎಂಬುದು ನನ್ನ ಅನುಭವದ ಸಾರ!! ದೇವತೆಗಳು ಭೂಲೋಕದಲ್ಲಿ ಆಕಸ್ಮಾತ್ ಆಗಿ ಮರೆತು ಬಿಟ್ಟು ಹೋದ ಸುಧೆಯ ಮೂಲರಸಾಯನವೇ ಚಹಾ ಇರಬಹುದು ಎಂಬ ನನ್ನ ದೃಢ ಕಪೋಲ  ಕಲ್ಪನೆಗೂ ರೆಕ್ಕೆ ಕಟ್ಟಿ ಹಾರಿಸಿದ್ದೇನೆ. ಶಿವರಾತ್ರಿಯ ಉಪವಾಸ ನನ್ನಿಂದ ಸಾಧ್ಯವಾಗುವುದು ಅಮೂರ್ತ ಶಿವನೆಡೆಗಿನ ಭಕ್ತಿಗಿಂತ ಹೆಚ್ಚಾಗಿ  ಈ ಚಹಾಯಣದ ಅಮೂರ್ತ ಸಾಂಗತ್ಯದ ಆಧ್ಯಾತ್ಮದಿಂದ; ಆಸ್ವಾದದ ಎದೆಯಗಾನದ ಲಹರಿಯಿಂದ ; ಚಹಾಮಾಯಿಯನ್ನು ಅಪ್ಪಿಕೊಳ್ಳುವ  ಸುಖಲೋಲುಪತೆಯಲ್ಲಿ ಕಳೆದುಹೋಗುವುದರಿಂದ; ಚಹಾರಾಣಿಯ ಮಡಿಲಲ್ಲಿ ಮೈಮರೆಯುವ ಅಂತರ್ಧ್ಯಾನದಿಂದ. ಒಂದು ಬಾರಿ ಮಹತ್ವದ ಕಾರ್ಯಕ್ಕಾಗಿ ತಹಶೀಲ್ದಾರರ ಭೇಟಿಗೆ ಅಂದು ತುರ್ತಾಗಿ ಹೋಗಲೇಬೇಕಾಗಿ ಬಂದಾಗ ಮನೆಯಲ್ಲಿ ಉಪಹಾರದ ನಂತರ ಸಮಯವಿಲ್ಲದಿದ್ದರೂ ನಾನು ಹೋಗಿದ್ದು ಯಥಾಪ್ರಕಾರ ಚಹಾದ ಸುಖವನ್ನು ಹೊತ್ತುಕೊಂಡೇ. ಶಾಲಾ ಕರ್ತವ್ಯ ಮುಗಿಸಿ ಸರ್ವ ಶಿಕ್ಷಕ ಬಳಗವೆಲ್ಲಾ ದಂಡಿಯಾಗಿ ನೆರೆಯುತ್ತಿದ್ದ ಬಸ್ ನಿಲ್ದಾಣದ ಹತ್ತಿರ ನಿಂತು ಬಳಗದವರನ್ನೆಲ್ಲಾ ಕರೆದು, ಒಲ್ಲೆ ಎಂದವರನ್ನೂ ಕೇಳದೇ ಕೈಹಿಡಿದು  ಹತ್ತಿರದ ಚಹಾಶಾಲೆಯಲ್ಲಿ ಚಹಾವನ್ನು ಸ್ವಾದಿಸಿ ಖುಷಿಪಟ್ಟಿದ್ದುಂಟು. ಮತ್ತೆ ಹೊರಬಂದ ನಂತರ ಯಾರಾದರೂ ಹೊಸಬರು ಬಂದರೆ ಅವರನ್ನೂ   ಕರೆದೊಯ್ದು ಚಹಾ ಹೀರಿಸಿ ನಾವೂ ಹೀರಿ ಅತಿಸುಖವನ್ನು ಪಡೆದದ್ದಿದೆ. ಹೀಗೆ ಸರಿಯಾಗಿ ಲೆಕ್ಕ ಹಾಕಿದರೆ ನಾವು ಆ ದಿನಗಳಲ್ಲಿ ಪ್ರತಿದಿನ ಆನಂದಿಸುತ್ತಿದ್ದ  ನಮ್ಮ ಚಹಾಪ್ರಣಯ ಪ್ರಸಂಗದ ವಿಲಾಸವನ್ನು ನೀವು ಊಹಿಸಿಕೊಳ್ಳಬೇಕು.

ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ  ಚಹಾರಾಣಿ  ಗ್ರೀನ್ ಟೀ  ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ.
ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ  ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ.  ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ.  ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ "  ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ?  ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ  ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು.

ನಾನು ಡಿಇಡಿ ವ್ಯಾಸಂಗದ ನಿಮಿತ್ತ ಬೆಂಗಳೂರಿನ ವಿಜಯನಗರದ ವಸತಿನಿಲಯವೊಂದರಲ್ಲಿ ಎರಡು ವರ್ಷಗಳ ಆಶ್ರಯ ಪಡೆದಿದ್ದೆ. ನಿಲಯದಲ್ಲಿ ಚಹಾಸಂಸ್ಕೃತಿಯೇ ಇಲ್ಲದ್ದರಿಂದ  ಎಲ್ಲ ವಿದ್ಯಾರ್ಥಿಗಳು ಮುಗ್ಧತೆಯಿಂದ ಒಗ್ಗಿಕೊಂಡು ನಿರಾಳವಾಗಿದ್ದರೆ, ನಾನು ಮಾತ್ರ ಒಳಗೊಳಗೆ ಚಡಪಡಿಸುತ್ತಿದ್ದೆ. ಉಪಹಾರ ಭೋಜನಗಳಿಲ್ಲದ ಹಾಸ್ಟೆಲ್ ನಲ್ಲಿ ಬೇಕಾದರೆ ಇದ್ದು ಜಯಿಸಬಲ್ಲೆ  ಆದರೆ ಚಹಾ ಕೊಡದ ವಸತಿನಿಲಯದಲ್ಲಿ ಹೇಗಿರುವುದು?  ಎಂದುಕೊಂಡು ಬಹುಕಾಲ ಕಸಿವಿಸಿಪಟ್ಟಿದ್ದೇನೆ. ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲಿರುವ ಏಕೈಕ ಆಸರೆಯನ್ನು ಚಹಾಗೋಸ್ಕರ ತಿರಸ್ಕರಿಸುವ ಶಕ್ತಿ ಇಲ್ಲದ್ದರಿಂದ ಅನಿವಾರ್ಯವಾಗಿ ವಸತಿನಿಲಯದ ವಾತಾವರಣಕ್ಕೆ ಹೊಂದಿಕೊಂಡು ಪರ್ಯಾಯ ದಾರಿಯೊಂದನ್ನು ಕಂಡುಕೊಂಡೆ. ಪ್ರತಿದಿನ ಬೆಳಿಗ್ಗೆ   ಹಾಗೂ ಸಂಜೆ ಚಹಾರಾಣಿಯ ಭೇಟಿಗಾಗಿ ಒಂದು ಪ್ರಶಸ್ತವಾದ  ಭಟ್ಟರ ವಿಶೇಷ ಚಹಾಶಾಲೆಯೊಂದನ್ನು ( ಕೆಫೆ) ಗುರ್ತಿಸಿಕೊಂಡೆ.
ಪ್ರತಿದಿನ ಕಾಲೇಜು ಮುಗಿದ ನಂತರ ಮುಸ್ಸಂಜೆಯ ಮುಖಮಜ್ಜನದಲ್ಲಿ ಮಿಂದು ನವೋಲ್ಲಾಸದ ಮನಸು ಹೊತ್ತು  ವಾಯುವಿಹಾರಕ್ಜೆ ಹೊರಟೆನೆಂದರೆ ಅದು ಕೊನೆಯಾಗುವುದು ಚಹಾಮಣಿಯ ಲೀಲಾವಿಲಾಸದ ಸಮಾಗಮದೊಂದಿಗೆ ಎಂಬುದು ನಿಶ್ಚಿತವಾಯಿತು. ಹೀಗೆ ಕೆಲವು ದಿನ ಕಳೆದವು. ಪ್ರಾರಂಭದಲ್ಲಿ ಚಹಾಶಾಲೆಯ ಚಹಾ ಮೊದಲಿಗೆ ಸಪ್ಪೆಯೆನಿಸುತ್ತಿತ್ತು. ದಿನಗಳೆದ ನಂತರ ಚಹಾಶಾಲೆಯ ಮಾಣಿಯೊಂದಿಗೆ ಸ್ನೇಹ ಮಧುರವಾಗುತ್ತಾ ಹೋದಂತೆ  ನಮ್ಮ ಚಹಾಷೋಡಶಿಯು ಸಿಹಿಯಾಗುತ್ತಲೇ ಹೋದಳು. ಮಾಣಿಯೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾ ಪುಸಲಾಯಿಸಿ ಬೇಕಾದಷ್ಟು ಸಕ್ಕರೆಯನ್ನು ಬೆರೆಸುವಂತೆ ಮಾಡಿ ಚಹಾರಾಣಿಯ ನೈಜ  ಸ್ವಾದವನ್ನು ಅನುಭವಿಸತೊಡಗಿದೆ. ಚಹಾರಾಣಿಯ ದರ್ಶನ ಅಪರೂಪವೆಂಬಂತಿದ್ದ ಕಾಫಿಜಗತ್ತಿನಲ್ಲಿ ಚಹಾಜೇನು ಸವಿದ ಆನಂದ ಪಡೆದು ತೇಲಾಡತೊಡಗಿದೆ.  ಹೀಗೊಂದು ದಿನ ಸಂಜೆ ಯಥಾಪ್ರಕಾರ ಚಹಾಶಾಲೆಯತ್ತ ಹೊರಟಾಗ ಜೇಬಿನಲ್ಲಿ ಬಿಡಿಪೈಸೆಯೂ ಇರಲಿಲ್ಲ. ಗೋಧೂಳಿಯ ಮುಹೂರ್ತ ಮೀರುವ ಮಹತ್ವದ ಘಳಿಗೆಯಲ್ಲಿ ಚಹಾರಾಣಿ ನನಗಾಗಿ ಕಾಯುತ್ತಿದ್ದಾಳೆ. ಮನಸು ಅವಳದೇ ನೆನಪಿನಲ್ಲಿ ಪಿಸುಗುಟ್ಟಿ ತೊಳಲಾಡುತ್ತಿದೆ. ಮನಸ್ಸು ಆಕೆಯನ್ನು ಬಿಟ್ಟು ಕದಲೊಲ್ಲದು. ಅತ್ತ ಊರಿನಿಂದ ಬರಬೇಕಾಗಿದ್ದ ಅವ್ವ ಕಳಿಸಿದ ದುಡ್ಡು ಇನ್ನೂ ತಲುಪಿರಲಿಲ್ಲ. ಏನು ಮಾಡುವುದು ಎಂದು ತೋಚದಾದಾಗ ಗೆಳೆಯನೊಬ್ಬನ ಹತ್ತಿರ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬಂತೆ ಸಾಲ ಪಡೆದಾದರೂ ಅವಳ ಸಂಗಡ ಈ ಸಂಜೆ ಮಾತಿಗಿಳಿಯಲೇಬೇಕು. ನನ್ನೆದೆಯೊಳಗೆ ಅವಳ ಮಾತಿನ ಸವಿಯನ್ನಿಳಿಸಿಕೊಂಡು  ಕಾಪಿಟ್ಟುಕೊಳ್ಳಲೇಬೇಕಾಗಿತ್ತು. ಹೀಗೆ ಅವಳತ್ತ ವಿಭವದಿಂದ  ಜಾರುವ ಮನದ ನೂರಾರು ಮಾತುಗಳನ್ನು ಅಂತರಾಳದಲ್ಲಿ ಕಟ್ಟಿಕೊಂಡೇ  ನೂರು ರೂಪಾಯಿ ಸಾಲ ಪಡೆದು ನೇರವಾಗಿ ಅವಳಿರುವಲ್ಲಿಗೆ  ಹೋಗಿ ಅವಳೊಂದಿಗೆ ಸಲ್ಲಾಪಕ್ಕಿಳಿದೆ. ಗುಟುಕು ಗುಟುಕಾಗಿ ಅವಳೊಂದಿಗೆ ಹಂಚಿಕೊಂಡ ರಸನಿಮಿಷಗಳನ್ನು  ಅಂತರಂಗದಲ್ಲಿಳಿಸಿಕೊಂಡು ಹರ್ಷಗೊಂಡೆ. ಇಂತಹ ಸವಿಸಮಯವನ್ನು ಕದ್ದೊಯ್ದು ಕಳೆದುಕೊಳ್ಳುವಂತೆ ಮಾಡುತ್ತಿದ್ದ ಆರ್ಥಿಕ  ದುರಾದೃಷ್ಟವನ್ನು ನೆನೆದು  ಶಪಿಸಿಕೊಂಡೆ. ಹೀಗೆ ಸಾಗಿತ್ತು ಚಹಾಸಖಿಯೊಂದಿಗಿನ ನನ್ನ ಪ್ರಣಯಗೀತೆ. ಮತ್ತೊಮ್ಮೆ  ಕೈಯ್ಯಲ್ಲಿ ಹಣವಿಲ್ಲದ ಬಡಪಾಯಿ ಪರಿಸ್ಥಿತಿಯೊದಗಿ ಬಂದಾಗ ನೇರವಾಗಿ ಚಹಾಶಾಲೆಯ ಮಾಲೀಕ ಭಟ್ಟರ ಹತ್ತಿರವೇ ನನ್ನ ಹೆಸರಿನ ಮೌಖಿಕ ಖಾತೆಯೊಂದನ್ನು ತೆರೆದು ಸಾಲ ಕೇಳಿದ್ದೆ. ಅವರ ದೃಷ್ಟಿಯಲ್ಲಿ ಯಕಃಶ್ಚಿತ ಚಹಾದ ಸಾಲವಾಗಿದ್ದರೆ, ನನಗದು ಚಹಾ ರಾಣಿಯೊಂದಿಗೆ ಸಮಯ ಕಳೆಯಲು  ಅಡೆತಡೆಯಿಲ್ಲದೆ ಕನಿಷ್ಠ ಹಣದ ಭಯವಿಲ್ಲದೆಯೂ ಚಹಾಶಾಲೆಯನ್ನು ಮುನ್ನುಗ್ಗಲು ಅಧಿಕೃತ ಲೈಸೆನ್ಸ್ ದೊರೆತಂತಾಗಿತ್ತು. ಯಾರ ಅಪ್ಪಣೆಗೂ ಕಾಯದೇ ಸಂಜೆಯನ್ನು ಸಾರ್ಥಕಗೊಳಿಸಿಕೊಳ್ಳುವ ನನ್ನ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆತಿತ್ತು. ಕೊನೆ ಕೊನೆಗೆ ಚಹಾರಾಣಿಯೊಂದಿಗಿನ ಬಿಡುವಿಲ್ಲದ ಸಹವಾಸ ಕಂಡ ಭಟ್ಟರು ಚಹಾಶಾಲೆಯ ಖಾಯಂ ಗಿರಾಕಿಯೆಂದುಕೊಂಡು ಸಾಲವನ್ನು ಬರೆದುಕೊಳ್ಳಹತ್ತಿದರು.
ಚಹಾಕಿಶೋರಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಕಂಡ ಮಾಲೀಕ ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಹಣದ ಸಾಲವನ್ನೂ ನೀಡಿ ಕೈಹಿಡಿದು ಮುನ್ನಡೆಸಿದನೆಂದರೆ, ಚಹಾದ ಸಂಗ ಹೆಜ್ಜೇನು ಸವಿದಂತಾಗಿತ್ತು ನನಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಾತ್ರ ಮಲ್ಲಿಗೆಯಿರಲೇಬೇಕೆಂಬಂತಾಗಿತ್ತು ಚಹಾದೆಡೆಗಿನ ನನ್ನ ಪ್ರೀತಿ.
ಹೀಗೆ ಎರಡು ವರ್ಷದ ಬೆಂಗಳೂರಿನ ಚಹಾಬೆಡಗಿಯ ಸಾಂಗತ್ಯ ನನಗೆ ಚಹಾಶಾಲೆಯ  ಹೊಸ ಆಪ್ತ ಗೆಳೆಯರನ್ನು ಪರಿಚಯಿಸಿತ್ತು.
ಮನೆಯಲ್ಲಿನ ಹಿಂಡು ಮಂದಿಗೆ ಮಾಡುವ ಚಹಾ ನನಗೆ ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಪರಿಹಾರವಾಗಿ ಮನೆಮಂದಿಗೆಲ್ಲ ಚಹಾ ತಯಾರಿಸುವ ಪಾಠವನ್ನು ಆಗಾಗ ಪ್ರಾತ್ಯಕ್ಷಿಕೆಯ ಮೂಲಕ   ಹೇಳಿಕೊಟ್ಟಿದ್ದಿದೆ. ಹದಬೆರೆತ  ರಸಾಯನವೇ ನನಗಿಷ್ಟವೆಂದು ಅವ್ವ ನನಗಾಗಿ ಮಾಡುವ ಚಹಾ ಗಾಗಿ ಕಾದು ಕುಳಿತಿರುತ್ತಿದ್ದೆ. ಅಂದು ಚಹಾಗೆಳತಿಯ ದರ್ಶನವಾಗದಿದ್ದಾಗ ಚಡಪಡಿಸಿ ಅಡುಗೆಮನೆಗೆ ಹೋಗಿ  ಬೆಳದಿಂಗಳು ಬಣ್ಣದ ಹಾಲಿನಲ್ಲಿ ಕೆಂಬಣ್ಣದ ಚಹಾದೆಲೆಗಳನ್ನುದುರಿಸಿ ಅಗ್ನಿಹಂಸದ ತೂಲಿಕಾತಲ್ಪದಲಿಟ್ಟು ಚೆನ್ನಾಗಿ ಕುದಿಸುತ್ತಾ ತಪದಂತೆ ಕಾದಿದ್ದೇನೆ.ನನ್ನ ಮೇಲಿನ  ಪ್ರೀತಿಯುಕ್ಕಿ ಪಾತ್ರೆಯೊಳಗಿಂದ ಮೇಲೆ ಹಸನ್ಮುಖಿಯಾಗಿ ಬಂದ ನೊರೆಯ ಮುತ್ತುಗಳನ್ನು   ಕಂಡು ಹರ್ಷಗೊಂಡಿದ್ದೇನೆ. ಕೊನೆಗೆ ಹದವಾದ ಸಕ್ಕರೆಯನ್ನು ಬೆರೆಸಿ ಘಮಘಮಿಸುವ ಪರಿಮಳದಲ್ಲಿ ಮೈಮರೆತು ಸಮಾಧಿಗೇರಿದ್ದೇನೆ. ಶೋಧಿಸುವಾಗ ಹೊರಟ ಸುಮಧುರ ಸುವಾಸನೆಯನ್ನು ಹೀರಿ ಸಂಭ್ರಮಿಸಿದ್ದೇನೆ. ಶ್ವೇತಸುಂದರಿಯಂತಿರುವ ಮಗ್ಗಿನೊಳಗೆ ಒಯ್ಯಾರದಿಂದ ನರ್ತಿಸಿತ್ತಿದ್ದ ಹಾಲುಗೆನ್ನೆಯ ಚಹಾಚೆಲುವೆಯನ್ನು ಕಂಡು ಹಿಗ್ಗಿದ್ದೇನೆ.

ಚಹಾ ಎಂಬುದು ನನ್ನ ಪಾಲಿಗೆ ಕೇವಲ ಕರ್ಮೋಪಚಾರಕ್ಕಾಗಿ ಸೇವಿಸುವ ಭೌತಿಕ ದ್ರಾವಣವಲ್ಲ. ಯಾಂತ್ರಿಕವಾಗಿ ಕ್ಷಣಮಾತ್ರ ಭುಜಿಸಿ ಮತ್ತೆ ಅರೆಗಳಿಗೆಯಲ್ಲಿ ಮರೆತುಬಿಡುವ  ಹಾಲು ಸಕ್ಕರೆಗಳ ಮಿಶ್ರಣ ಮಾತ್ರದ ರಸಾಯನವಲ್ಲ. ಕೇವಲ ಆಯಾಸ ಕಳೆಯಲಿಕ್ಕಾಗಿ ಇರುವ ಉಪಚಾರದ ಪಾನೀಯವೂ ಅಲ್ಲ .ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿಸುವ ಪ್ರಣಯಗೀತೆ; ಹೃದಯದೊಳಗೆ ಜುಳು ಜುಳು ಎಂದು ಹರಿಯುವ ಝರಿಯ  ನಿನಾದ; ಮನದೊಳಗೆ ಕೋಗಿಲೆಯ ಧ್ವನಿಯಂತೆ ಇಳಿಯುವ ರಸಗಾನ; ಮನಕಡಲಿನ ಮೇಲೆ ಕುಣಿಯುವ ಅಲೆಗಳ ಬಣ್ಣಿಸಲಾಗದ ಮೌನರಾಗದ ಮೊರೆತ; ಗುಟುಕು ಗುಟುಕಾಗಿ  ನಾಲಿಗೆ ಚಪ್ಪರಿಸಿ ಹೀರಿ ಅದರಲ್ಲಿಯೇ ಲೀನವಾಗುವಂತೆ ಸೆಳೆಯುವ ಅಮೃತಧಾರೆಯ ಜೇನಹನಿ; ನೆನಪು ಮಾತ್ರದಿಂದಲೇ ಚಿಮ್ಮಿ ಉತ್ಸಾಹ ಉಕ್ಕಿಸುವ ಚಿಲುಮೆಯೊರತೆ. ಚಹಾ ಎಂದರೆ ಭಾವದೊಳಗಿನ ಬಂಧುರ ಒಲವಿನೊಳಗಿನ ಮಂದಾರ. ಶ್ರಾವಣದ ಇಳೆ ಮಳೆಗಳೊಂದಿಗಿನ ಅನುಸಂಧಾನ ಬೇಂದ್ರೆಯವರಂತಹ ಆರಾಧಕರಲ್ಲಿ ಕಾವ್ಯದ ಮೂಲಕ ಸಾಧ್ಯವಾಗಿದೆ. ಕವಿಸೂರಿಗಳದು ಪ್ರಕೃತಿ ಆರಾಧನೆಯಾದರೆ ನನ್ನದು ಚಹಾರಾಧನೆ. ಆಷಾಢದ ಜಿಟಿ ಜಿಟಿ ಜಡಿ ಮಳೆಯಲ್ಲಿ  ಚಹಾಶಾಲೆಯ ಮುಂದೆ ನಿಂತು ಬಿಸಿ ಬಿಸಿಯಾದ ಚಹಾಮಾಯಿಯ ಹನಿ ಹನಿಯ ಗುಟುಕುಗಳ ಮಾಯೆಗೆ ಕರಗುವುದೆಂದರೆ  ಪ್ರಕೃತಿಯಲ್ಲಿನ ಪಾರಮಾರ್ಥಕ್ಕೆ ಪಯಣ ಹೊರಟಂತೆ. ಚಹಾರಾಣಿಯೊಂದಿಗಿನ ಎನ್ನ ಒಡನಾಟ ಇಂದು ನಿನ್ನೆಯದಲ್ಲ, ನನ್ನೆದೆಯೊಳಗೆ ಇಷ್ಟೊಂದು ಆಳವಾಗಿ ಮೈಚಾಚಿಕೊಂಡು ಹರಡಿ ಮೈಮನಗಳನ್ನು ತುಂಬಿಕೊಂಡಿರುವ ಇದರ ಭಾವಗೀತೆಗಳ ಆಲಾಪವನ್ನು ಬಾಲ್ಯದಿಂದಲೂ ಆಲಿಸಿಕೊಂಡು ಬಂದಿದ್ದೇನೆ.
ಇಲ್ಲಿಯವರೆಗೂ ಆಕೆ (ಚಹಾಮಾಯಿ) ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ರೆಕ್ಕೆ ಮೂಡುವವರೆಗೂ ನನ್ನದೆಯ ಗೂಡಿನಲ್ಲಿ ಮರಿಹಕ್ಕಿಗಳಂತೆ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದೇನೆ.ಭಾವಗಳಿಲ್ಲದೇ ಬತ್ತಿ ಕೊರಡಾಗುವ ಘಳಿಗೆ ಎದುರಾದಾಗ, ಈ ನೆನಪುಗಳನ್ನು ಹೆಕ್ಕಿ ತೆಗೆದು ಆನಂದಿಸಿ, ಮತ್ತೆ ಮತ್ತೆ ಚಹಾ ರಾಣಿಯ ಸಾಂಗತ್ಯವನ್ನು   ಸವಿದಿದ್ದೇನೆ. ನನ್ನಲ್ಲಿ ಚಹಾ ಹುಟ್ಟಿಸಿದ ಭಾವಯಾಣ ಅನುಪಮವಾದದ್ದು, ಅನೂಹ್ಯವಾದದ್ದು. ಆರೋಗ್ಯದ ಲಯ ತಪ್ಪಿದಾಗ ಚಹಾ ತ್ಯಜಿಸಬೇಕೆಂದು ಹೇಳಿದ
ವೈದ್ಯರನ್ನು " ನಿಮಗೇನು ಗೊತ್ತು ಚಹಾದ ಗಮ್ಮತ್ತು ಕುಡಿದರಿಲ್ಲ ಜೀವಕೇನೂ ಆಪತ್ತುಬಿಟ್ಟರೆ ನನಗೆ ಅದೇ ವಿಪತ್ತುಸವಿಯಲು ನನಗಿಲ್ಲ ಹೊತ್ತು ಗೊತ್ತು ಎತ್ತಣ ಮಾಮರ ಎತ್ತಣ ಕೋಗಿಲೆ ?" ಎಂದು ಹೀಗಳೆದಿದ್ದೇನೆ.  ಬಹುಶಃ ಚಹಾ ಸೇವನೆಯಲ್ಲಿ ತಪ್ಪಿದ ಲಯವೇ ಆರೋಗ್ಯವನ್ನು ಹದಗೆಡಿಸಿರಬೇಕು ಎಂಬ ಬಲವಾದ ನಂಬಿಕೆ ನನ್ನದು!
"ನೀನೆಂದರೆ ಮಧುರಗಾನಸವಿಜೇನಿನ ರಸಪಾನಹಿಗ್ಗುತಿರುವೆ ಮನದುಂಬಿಹೊರಟಿರುವೆ ಭಾವಯಾಣ
ಹಾಲುಗೆನ್ನೆಯ ಚೆಲುವೆಕೆಂಬಣ್ಣದ ಮೈಮನವೆಇಳಿದು ಬಾ ಮಹಾರಾಣಿದೇವಲೋಕದ ಸುರಪಾಣಿ
ಮಹಾದಿವ್ಯದ ಸಂಗತದಿವದೆಡೆಗಿನ ನವನೀತನಿನ್ನೊಲುಮೆಯ ಕೈಸೆರೆನನ್ನನಾಳುವ ಸುಮಧುರೆ
ಮುತ್ತು ರತ್ನ ಹವಳ ನೊರೆಕೇಳುತಿರು ನನ್ನ ಮೊರೆಮಹಾಸಂಗಮ ಆಲಿಂಗನಎದೆಯುಕ್ಕುವ ರಸಚೇತನ
ಮಾಧುರ್ಯದ ರಸಪಾಕಚಹಾಶಾಲೆಯೇ ಸವಿನಾಕ
ಎಂದು ಚಹಾಷೋಡಶಿಯೊಂದಿಗಿನ ಪಿಸುಮಾತು ನನ್ನಲ್ಲಿ ಹರ್ಷೋಲ್ಲಾಸದ ಹೊಳೆಯನ್ನು ಹರಿಸುತ್ತದೆ. ಘಳಿಗೆಗೊಮ್ಮೆಯ ಆಕೆಯ ಭೇಟಿ  ಎನ್ನ  ಹೃದಯವನ್ನು ರಸಾನಂದದ ಕಡಲಾಗಿ ಪರಿವರ್ತಿಸುತ್ತದೆ.ಚಹಾರಾಣಿಯನ್ನು ನೆನೆದಾಗಲೆಲ್ಲಾ -
"ಹರಿಯಬೇಕು ಆಕೆ ಕರೆದಲ್ಲಿಹೊರಡಬೇಕು ಆಕೆ ಬಯಸಿದಲ್ಲಿನಡೆಯಬೇಕು ಜೊತೆಯಾಗಿಕೈಹಿಡಿದು ಮಾತಾಗಿಸಲ್ಲಾಪದ ಸವಿಜೇನುಸವಿಯಬೇಕು ಎದೆತುಂಬಿಗುಟುಕು ರಸ ತಣಿಯಬೇಕುಹೀರಿ ಮತ್ತೆ ನೆನೆಯಬೇಕು
ಎಂದು ಪದೇ ಪದೇ ಆಕೆಯ ಸುತ್ತ ಸುಳಿದು ಸೇವಿಸಲೇಬೇಕೆನ್ನಿಸುತ್ತದೆ. ನನಗೆಚಹಾಸೇವನೆ ಎಂದರೆ ನಿತ್ಯ ವೈಭವದ ಮೆರವಣಿಗೆಯ ಮಹಾನವಮಿ ಹಬ್ಬವಾಚರಿಸಿದಂತೆ. ಬಿದಿಗೆಯ ಚಂದ್ರನ ಬೆಳ್ಳಿಯ ಬೆಳಕು ಅಂತರಾಳಕ್ಕಿಳಿದು ಹೊಳೆದು ಬೆಳಗಿದಂತೆ. ಚೈತನ್ಯದ ಕಡಲುಕ್ಕಿ  ಅಲೆ ಅಲೆಯಾಗಿ ಹರಿದು ನಾದಗೈದು ವಿಜೃಂಭಿಸಿದಂತೆ.
"ಮುಗ್ಧ ಮಗುವಿನಂತೆ ಚಹಾವೇಣಿಯ ಮೊಗ್ಗು  ಹಿಡಿದು ಮೇಲೆತ್ತಿ ಬಾಯಿಚಪ್ಪರಿಸಿ ನಾಲಿಗೆ ಸವರಿದಾಗಲೇ ರಸರುಚಿಯ ದರ್ಶನಾನುಭವ ದಕ್ಕುವುದು. ರಸಾಂಕುರಗಳಿಗೆ ನೈಜ ರಸಾನುಭವದ ಸಾಕ್ಷಾತ್ಕಾರವಾಗುವುದು. ಭಾವಗಳ ಮುಗ್ಧತೆ ಹೇಗೆ ಕಾವ್ಯವೊಂದರ ಹುಟ್ಟಿಗೆ ಕಾರಣವಾಗಬಲ್ಲದೋ ಹಾಗೆ ಪೂರ್ವಾಗ್ರಹಗಳಿಲ್ಲದೇ,  ಮುಗ್ಧತೆಯಿಂದ ಹೀರುವ ಚಹಾದ  ಸ್ವಾದಸುಖವೂ ಕಾವ್ಯಾನಂದವನ್ನು ಹುಟ್ಟಿಸಬಲ್ಲದು. ಕಾವ್ಯ ಮತ್ತು ಚಹಾಗಳ ಅದೈತ ಸಂಗಮಸುಖವನ್ನು ಶ್ರಧ್ಧೆಯಿಂದ ಅನುಭವಿಸಿದ್ದೇನೆ ನಾನು. ವೈದೇಹಿಯವರ
"ತಿಳಿಸಾರು ಎಂದರೆ ಏನೆಂದುಕೊಂಡಿರಿ?ಅದಕ್ಕೂ ಬೇಕು ಒಳಗೊಂದು ಜಲತತ್ವ-ಗಂಧತತ್ವ -ಕುದಿದು ಹದಗೊಂಡ ಸಾರತತ್ವ "
ಎಂಬ  ಕಾವ್ಯಾಲಾಪದಂತೆ ಸಕ್ಕರೆ ಹಾಲು, ಚಹಾದೆಲೆಗಳು ಹದವಾಗಿ ಬೆರೆಯಲು ಗಂಧತತ್ವ ಜಲತತ್ವ ಹಾಗೂ ಸಾರತತ್ವಗಳ ತಿಳುವಳಿಕೆ ಅತ್ಯಗತ್ಯ. ಈ  ತ್ರಿವಿಧ ಸಂಗತಿಗಳ ಹದಭರಿತ ಸಮರಸದ ಸಂಗಮವೇ ಚಹಾರಸಾಯನದ ತಿರುಳು.
ನನ್ನೂರು ಗುಳೇದಗುಡ್ಡ  ನೇಕಾರಿಕೆಯ ನೂಲಿನ ಬಳ್ಳಿಯನ್ನೆ  ತಮ್ಮ ಬದುಕಿನ ಸುತ್ತ ಹಬ್ಬಿಸಿಕೊಂಡ ಕರಕುಶಲಿಗರ ನಾಡು. ರಂಗಭೂಮಿ, ಬಯಲಾಟ, ಸಂಗೀತ,ಚಿತ್ರಕಲೆ ಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಚಾಲುಕ್ಯರಾಳಿದ ಬೀಡು. 
ಇಂತಹ ಹೊನ್ನಾಡಿನಲ್ಲಿ  ಕುಶಲೋದ್ಯಮದ ಜೊತೆಜೊತೆಗೆ ಚಹಾಸಂಸ್ಕೃತಿಯೊಂದು ಮೈದಾಳಿರುವುದು ಇಲ್ಲಿಯ ವಿಶೇಷ. ಪ್ರತಿ ಒಂದು ಮೀಟರ್ ನೇಯ್ಗೆಗೊಂದು ಕಪ್ ಚಹಾ ಈ ಕರ ಕುಶಲಿಗರ ದೇಹದ ದೇಗುಲಕ್ಕರ್ಪಣೆಯಾಗಲೇಬೇಕು. ಒಂದು ಹೊತ್ತಿನ ಉಪಹಾರ, ಭೋಜನವಿರದಿದ್ದರೂ ನಡೆದೀತು ಆದರೆ ಚಹಾ ಇರದ ಕ್ಷಣಗಳನ್ನು ಈ ಕುಶಲಿಗಳು ಕಳೆಯಲಸಾಧ್ಯವೆನ್ನುವಷ್ಟರ ಮಟ್ಟಿಗೆ ಇಲ್ಲಿಯ ಬದುಕು ಚಹಾಗೊಡ್ಡಿಕೊಂಡಿದೆ. ಪೂರ್ವಾಶ್ರಮದ ನೇಯ್ಗೆಯ ಪ್ರಭಾವವೋ ಏನೋ ಘಳಿಗೆಗೊಮ್ಮೆ  ನನ್ನವ್ವನಿಗೆ ಹಾಗೂ ನನಗೆ ಚಹಾ ಅಮೃತ ಚೈತನ್ಯವನ್ನು ನೀಡಲೇಬೇಕು. ನನ್ನ ಮನೆಯ ಪಕ್ಕದ ಚಹಾಶಾಲೆಯಲ್ಲಿ ಚಹಾದ ದರ ಈಗಲೂ ೨ ರೂಪಾಯಿಗಳೆಂದರೆ ಚಹಾ ಎಷ್ಟೊಂದು ಅಗ್ಗದ ಸಂಗತಿಯಾಗಿ ನನ್ನೂರನ್ನು ಆವರಿಸಿಕೊಂಡಿದೆ  ಎಂಬುದನ್ನು ಅರ್ಥೈಸಿಕೊಳ್ಳಬಹುದು. ಡಾ.ರಾಜಶೇಖರ ಮಠಪತಿ (ರಾಗಂ) ರವರು, ಹದಿನಾರು ವರ್ಷಗಳ ನಂತರವೂ  ಒಂದೇ ಒಂದು ಪೈಸೆಯಷ್ಟು ಬೆಲೆಯನ್ನೂ ಹೆಚ್ಚಿಸಿಕೊಳ್ಳದ ರೂ. ೨ ರ ಒಂದು ಕಪ್  ಚಹಾ ಹಾಗೂ 'ಚಟಕ್ ಪಟಕ್ ' ಎಂದು ಲಯಬದ್ಧವಾಗಿ ನುಡಿಯುತ್ತಿರುವ ಅದೇ ಮಗ್ಗಗಳ ನಿನಾದ ಬದಲಾಗದ್ದನ್ನು ಗಮನಿಸುತ್ತಾ  "ನಾ ಕಂಡಂತೆ ಒಂದೂವರೆ ದಶಕದ ನಂತರವೂ ಕೇವಲ ಚಿಕ್ಕ ಪುಟ್ಟ ಸ್ಥಿತ್ಯಂತರಗಳನ್ನು ಹೊರತುಪಡಿಸಿ ಮೂಲಸ್ವರೂಪವನ್ನು ಬದಲಿಸಿಕೊಳ್ಳದೇ ತನ್ನ ಪರಂಪರೆ ಹಾಗೂ ಸತ್ವವನ್ನು ಉಳಿಸಿಕೊಂಡ ಕರ್ನಾಟಕದ ವಿರಳಾತಿವಿರಳ ಪುರಗಳಲ್ಲಿ ಒಂದು ಗುಳೇದಗುಡ್ಡ " ಎಂದು  ಬಣ್ಣಿಸಲ್ಪಟ್ಟ ಊರಿನಲ್ಲಿ ಇಂದಿಗೂ ಚಹಾದೊಂದಿಗಿನ ಸಂಗತಿಗಳಾವವೂ ಆಧುನಿಕ ಯುಗದ ಯಾವ ಸೆಳೆತಗಳಿಗೂ ಒಳಗಾಗಿಲ್ಲ. ನೇಕಾರಿಕೆ ಹಾಗೂ ಉಪಕಸುಬುಗಳ ಕುಶಲವೃತ್ತಿಗಳ ಜೊತೆ ಜೊತೆಗೆ ಬೆಳೆದು ಬಂದಿರುವ ಈ ಚಹಾ ಸಂಸ್ಕೃತಿ ಆತಿಥ್ಯದ ಹೊಸ ಪರಿಭಾಷೆಯೊಂದನ್ನು ಕಟ್ಟಿ  ಕೊಟ್ಟಿದೆ. ಅಬಾಲವೃದ್ಧರಾದಿಯಾಗಿ  ಮನೆಗೆ ಬರುವ ಸಕಲ ಅತಿಥಿಗಳು ಕನಿಷ್ಠ ಚಹಾತಿಥ್ಯವನ್ನಾದರೂ ಸ್ವೀಕರಿಸಲೇಬೇಕು. ಇದು ಅಘೋಷಿತ ಅತಿಥಿ ಸತ್ಕಾರದ ನಿಯಮ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಸಾಕು ಚಹಾದ ಪಾತ್ರೆ ಅಗ್ನಿಹಂಸವನ್ನೇರಲೇಬೇಕು.  ಚಹಾ ನನ್ನೂರಿನ ಕರಕುಶಲಿಗಳ ಕಾಯಕಕ್ಕೆ ಉತ್ಸಾಹದ ಚಿಲುಮೆಯಾಗಿರುವಂತೆ, ಬಂಧುಗಳೆಡೆಗಿನ ಪ್ರೀತಿ ವಾತ್ಸಲ್ಯದ  ದ್ಯೋತಕವೂ ಆಗಿದೆ. ಆತಿಥ್ಯದ ಸಂಕೇತವಾಗಿರುವ 'ಚಹಾ'ವನ್ನು  ಅತಿಥಿಗಳು ನಿರಾಕರಿಸಿದರೆ ಸಾಕು ಬೇಡದ ಮುನಿಸು ತಪ್ಪಿದ್ದಲ್ಲ. ಅನುಬಂಧದ ಪ್ರತೀಕವಾಗಿರುವ  ಚಹಾವನ್ನು ಸ್ವೀಕರಿಸಲೇಬೇಕು.ಚಹಾತಿಥ್ಯ ಸತ್ಕಾರ ಆತಿಥೇಯರಲ್ಲಿ ಅವರ್ಣನೀಯ ಆನಂದವನ್ನು ತಂದರೆ ಅತಿಥಿಗಳಲ್ಲಿ ವಾತ್ಸಲ್ಯದ ಸುಮವನ್ನು ಅರಳಿಸುತ್ತದೆ.  ಸಂಬಂಧಗಳನ್ನು  ಗಟ್ಟಿಯಾಗಿ ಬೆಸೆಯುವ ಸೇತುವೆಯಾಗಿ ಚಹಾದ ರಾಯಭಾರಿತನ ತಲೆದೂಗುವಂತಹುದು. ಮನೆಯವರಗೆ ಜಗಳವಾಡಲು ಬಂದವರಿಗೂ ಕುಳ್ಳಿರಿಸಿ ಚಹಾದಿಂದ ಸತ್ಕರಿಸುವಂತಹ ಅತಿಥಿ ಔದಾರ್ಯ ಅನಿಕೇತನವಾದದ್ದು. ಚಹಾ ಬಂಧುತ್ವದ ಸೇತುವೆಯಾಗಿರುವಂತೆಯೇ  ಋಣದ ಪ್ರತಿನಿಧಿಯೂ ಆಗಿದೆ. ಬಗೆಹರಿಯಲಾರದ ಎಷ್ಟೋ ವಿವಾದಗಳು ಚಹಾದ ಬಾಂಧವ್ಯ ಮಾತ್ರದಿಂದ ಮಾಯವಾಗಿದ್ದನ್ನು ಕಂಡಿದ್ದೇನೆ. ಪರರ ಮನೆಯ ಚಹಾದ ಋಣ ಬಗೆಯಬೇಕಾದ ದುಷ್ಟರ ದ್ರೋಹಗಳನ್ನು, ಅಪನಂಬಿಕೆಗಳನ್ನು ತಿಳಿಗೊಳಿಸಿ ತಣ್ಣಗಾಗಿಸಿದ್ದನ್ನು ತಿಳಿದಿದ್ದೇನೆ. ಮನುಷ್ಯ- ಮನುಷ್ಯರ ಮಧ್ಯದ ದ್ವೇಷ, ವಿರಸ,ವೈರತ್ವಗಳಿಗೆ ರಾಮಬಾಣದ ಔಷಧಿಯಾಗಬಲ್ಲ ಶ್ರೇಷ್ಠ ಚಿಕಿತ್ಸಾಗುಣ ನಮ್ಮೂರಿನ ಚಹಾದಲ್ಲಿದೆ. 
ಸಂಜೆಯಾದರೆ ಸಾಕು ನಮ್ಮೂರಿನ ತರಕಾರಿ ಉಪ ಮಾರುಕಟ್ಟೆ ಹರಟೆಯ ಕೇಂದ್ರವಾಗಿ ಬದಲಾಗುತ್ತದೆ. ಹೀಗೆ ಸೂರ್ಯಾಸ್ತವಾಗುತ್ತಲೇ ಸೂಜಿಗಲ್ಲಿನಂತೆ ಹರಟುವವರನ್ನಾಕರ್ಷಿಸಿ ತನ್ನತ್ತ ಸೆಳೆಯುವ  ಮಾಂತ್ರಿಕನೆಂದರೆ  'ಚಹಾಮಣಿ'. ಪ್ರತಿನಿತ್ಯ ಈ ಮುಸ್ಸಂಜೆಯ ಹರಟೆಯನ್ನು  ಜಾತ್ರೆಯೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ ಇಲ್ಲಿಯ ಜನ. ಇಲ್ಲಿ ಜಾಗತಿಕವಲ್ಲದೇ, ಕೇಂದ್ರದಿಂದ ಹಿಡಿದು ಗ್ರಾಮಮಟ್ಟದವರೆಗಿನ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ,ಆಧ್ಯಾತ್ಮಿಕವಾದ ಸೂಕ್ಷ್ಮ  ಒಳನೋಟಗಳ ಚರ್ಚೆಯಿದೆ; ಊರಿನಲ್ಲಿ ಜರುಗುತ್ತಿರುವ ಹಾಗೂ ಜರುಗಿದ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದವಿದೆ; ಅಂದು ಗಮನಸೆಳೆದಿರುವ ಊರಿನ ಪ್ರಮುಖ ಸಂಗತಿಗಳ ಕುರಿತು ಮಾತುಗಳಿವೆ; ಸ್ನೇಹಿತರು, ದಾಯಾದಿ ಸಂಬಂಧಿಗಳ ಮಧ್ಯದ  ವಾದವಿವಾದಗಳ ವಿವೇಚನೆಯಿದೆ;  ಕೌಟುಂಬಿಕ, ಸಾಮಾಜಿಕ,ಆರ್ಥಿಕ,ನೈತಿಕ, ಸಾಂಸ್ಕೃತಿಕ ಅಲ್ಲದೇ ಪಾರಮಾರ್ಥಿಕ ಸಂಗತಿಗಳ ವ್ಯಾಖ್ಯಾನಗಳಿವೆ; ಸಂಬಂಧಿಕರ ಮಧ್ಯದ ವಿವಾದಗಳಿಗೆ ಮುಕ್ತಿ ನೀಡಬಲ್ಲ ನ್ಯಾಯಿಕ ಪರಿಹಾರಗಳ ಸಂಕಥನಗಳಿವೆ; ತಮ್ಮ ಕೈಗೆಟುಕದ ರಾಜಕಾರಣದ ಒಳಸುಳಿಗಳಿಗೂ ಇಲ್ಲಿ ಅನೌಪಚಾರಿಕ ಪರಿಹಾರಗಳಿವೆ; ಗೆಳೆಯರ ಮಧ್ಯದ ತುಂಟಾಟದ ಭಾವಗಳ ಸಲ್ಲಾಪಗಳಿವೆ.  ಮಾನವನ ಸಕಲ ಮನೋವ್ಯಾಪಾರಗಳ ಅಭಿವ್ಯಕ್ತಿಗೊಂದು ದಿವ್ಯಲೋಕ ಈ ಚಹಾಜಾತ್ರೆ. ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರ ಶಿಸ್ತುಗಳ ಅಧ್ಯಯನಕಾರರಿಗೆ ಒಂದು ಪ್ರಯೋಗಶಾಲೆಯಂತಿದೆ ಈ ಮೇಳ.  ಜಾತಿ ಧರ್ಮ, ಮತ,ವರ್ಣಗಳ ಭೇದವಿಲ್ಲದೇ ಚಹಾಗಾಗಿ  ಒಂದೆಡೆ ನೆರೆಯುವ ಸಂಗತಿಯೇ ವಿಸ್ಮಯ  ಮೂಡಿಸಿದೆ. ಕಲೆ ಹಾಗೂ ಸಾಹಿತ್ಯ ಮೀಮಾಂಸೆಗೂ ಅಲ್ಲಿ ಜಾಗವಿದೆಯೆಂದರೆ ಚಹಾ ಹೇಗೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನರಿಯಬಹುದು. ತೆರೆದುಕೊಳ್ಳುವ ಚಹಾಕಾರಣದ ನಮ್ಮೂರಿನ ಈ ಮಾರುಕಟ್ಟೆಯ ಜಗತ್ತು  ಸರ್ವಜನಾಂಗದವರನ್ನಳಗೊಂಡು ಇತಿಹಾಸ, ಅರ್ಥಶಾಸ್ತ್ರ, ಸಮಾಜವಿಜ್ಞಾನ,ರಾಜ್ಯಶಾಸ್ತ್ರ, ತತ್ವಜ್ಞಾನಾದಿಯಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಸಂಗತಿಗಳನ್ನೆಲ್ಲಾ ನಿಷ್ಕರ್ಷೆಗೊಳಪಡಿಸಬಲ್ಲ  ಅನುಭವ ಮಂಟಪವಾಗಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಪಕ್ಕದ ಮನೆಯವರೆಗಿನ ಸುದ್ದಿ ಸಮಾಚಾರಗಳೆಲ್ಲಾ ಈ ಅನುಭವ ಮಂಟಪದಲ್ಲಿ ನಿಕಷಕ್ಕೊಳಗಾಗಲೇಬೇಕು.
ನೇಕಾರ ಸಂಗಣ್ಣ, ವಾಲೀಕಾರ ಬಸಪ್ಪ,  ಕಮ್ಮಾರ ಹನುಮಂತ, ಕುಂಬಾರ ಮಲ್ಲಪ್ಪ, ಗೌಡರ ಲಕ್ಷ್ಮಣ್ಣ ಹೀಗೆ ತರತಮಗಳಿಲ್ಲದ ಜಾತ್ಯಾತೀತ ಸಮುದಾಯವೊಂದು ಬೀದಿ ಬದಿಯ ಚಹಾಶಾಲೆಗಳ ಮುಂದೆ ಶ್ರದ್ಧೆಯಿಂದ ನಿತ್ಯ ನೆರೆಯುತ್ತದೆಯೆಂದರೆ ಚಹಾದ ಈ ಮಾಯಾಲೋಕಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು. ಚಹಾದೊಂದಿಗೆ ಚೂಡಾ,  ಮಿರ್ಚಿ ಬಜಿ, ದೊಣ್ಣೆಮೆಣಸಿನಕಾಯಿ ಬಜಿ,  ಬದನೆಕಾಯಿ ಬಜಿ, ವಡಾ ಬಜಿ, ಆಲೂ ಬಜಿ, ಹುರಿದ ಮಸಾಲೆ ಶೇಂಗಾಕಾಳುಗಳು, ಒಗ್ಗರಣೆ ಹಾಕಿದ ಚುರುಮರಿ, ಹೀಗೆ ಬಗೆ ಬಗೆಯ ವೈವಿಧ್ಯಮಯ ಖಾದ್ಯಗಳ ಸಾಂಗತ್ಯ ಹರಟೆಗೆ ನಿತ್ಯೋತ್ಸವದ ಮೆರಗನ್ನು ನೀಡುತ್ತದೆ. ಬಿಸಿಯಾದ ಈ ಕರಿದ ಖಾದ್ಯಗಳನ್ನು ಸವಿಯುತ್ತಲೇ  ನಡೆಯುವ  ಚರ್ಚೆ ಕಾವೇರುವ ಬಗೆಯನ್ನು
ನಮ್ಮ ಜನರ ಗ್ರಾಮೀಣ ಸೊಗಡಿನ ಭಾಷೆಯಲ್ಲಿಯೇ  ಕೇಳಬೇಕು. ಕರಿದ ಖಾದ್ಯಗಳ ಸವಿಯನ್ನುಂಡ ನಂತರದ ಸಾಂಗತ್ಯವೇ ಚಹಾಪಾನೀಯದ್ದು. ಅಲ್ಲಿಗೆ ಅಂದಿನ ಹರಟೆ ಅಂತಿಮ ಹಂತಕ್ಕೆ ಬಂದಿದೆಯೆಂದೇ ತಿಳಿಯಬೇಕು. ಒಂದು ಪುಟ್ಟ ಗ್ರಾಮದ  ಜಾತ್ರೆಯಷ್ಟು ಜನರನ್ನು ಸೆಳೆಯುವ ಈ  ಚಹಾಶಾಲೆಗಳೇನೂ ಪಂಚತಾರಾಗೃಹಗಳಲ್ಲ. ಬೀದಿ ಬದಿಯ ಮೂಲೆಯೊಂದರಲ್ಲಿ  ತಳ್ಳುವ ಗಾಡಿಗಳ,ಚತುರ್ಭುಜಗಳಂತಿರುವ  ನಾಲ್ಕು ಚಕ್ರಗಳ ಮೇಲೆ   ಪ್ರತಿಷ್ಠಾಪಿಸಲ್ಪಟ್ಟ ಸಂಚಾರಿಯಂತೆ ಕಾಣುವ ಡಬ್ಬಿಯಂಗಡಿಗಳು.  ಮಲೆನಾಡಿನ ಚಹಾಕುಶಲಿಗಳು ಚೂಡಾದಂಗಡಿಯ ಪಕ್ಕತೆರೆದಿರುವ  ಚಹಾಶಾಲೆ ಒಂದಕ್ಷರದ ವಿದ್ಯೆಯನ್ನು ಧಾರೆಯೆರೆಯದಿದ್ದರೂ ಚಹಾದ ಅನುಭಾವದ ರಸಪಾಕವನ್ನು ರಸಿಕರಿಗೆ ಹಂಚುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ!. ಮುಸ್ಸಂಜೆಯ ವಿಹಾರಿಗಳು ಸೇರುವ ಈ ಜಾಗ ವಿಶಾಲವಾದ ಬಯಲೇನೂ ಅಲ್ಲ, ಸುಮಾರು ೧೦೦ ಮೀಟರ್ ಉದ್ದಳತೆಯ ಚಿಕ್ಕ ಉಪಮಾರುಕಟ್ಟೆಯ ತಾಣವದು. ಅಂದ ಹಾಗೆ ಈ ಹರಟೆಯ ಜಗತ್ತಿನ ನಿತ್ಯದ ಆಯಸ್ಸು ಸಂಜೆ  ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರವೆಂದರೆ ಅಚ್ಚರಿಯೆನಿಸದಿರದು.  ಗೋಧೂಳಿಯ ಮುಹೂರ್ತದಲ್ಲಿ  ಜನಿಸಿ, ವಿವಿಧೆಡೆಗಳಿಂದ  ಹರಿದು ಬಂದ ಜಲ ಸಾಗರವ ಸೇರುವಂತೆ ನಮ್ಮೂರಿನ ಗಲ್ಲಿ ಹಲ್ಲುಗಳಿಂದ ಜನ ನಿತ್ಯದ ಈ ಚಹಾಮೇಳಕ್ಕೆ ಹರಿದುಬರುತ್ತಾರೆ. ಕೆಲವೇ ಗಂಟೆಗಳಲ್ಲಿ  ಬೃಹದಾಕಾರವಾಗಿ ಬೆಳೆದು, ಮತ್ತೆ ಐದಾರು ಗಂಟೆಗಳಲ್ಲಿಯೇ ಕೊನೆಯಾಗುವ ಈ ಚಹಾರಂಜನೆಯ ಜಾತ್ರೆ ಬಲು ವಿಶಿಷ್ಟವಾದುದು.
ಸಾಮಾನ್ಯರಾದಿಯಾಗಿ ಶಿಕ್ಷಕರು, ವಕೀಲರು, ಸುದ್ದಿಮಾಧ್ಯಮದವರು,  ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು, ಕರಕುಶಲಿಗಳು, ರೈತರು  ಹೀಗೆ ವರ್ಗಭೇದವಿಲ್ಲದೇ ಸರ್ವರನ್ನೂ ಸೆಳೆದು, ಭ್ರಾತೃತ್ವದ ಮುನ್ನುಡಿಯನ್ನು ಹಾಡುತ್ತಿರುವ ಸೌಹಾರ್ದತೆಯ ಸಂಗೀತವನ್ನು ನುಡಿಸುತ್ತಿರುವ, ಸಮಾನತೆಯ ತತ್ವವನ್ನು ಸಾರುತ್ತಿರುವ,ಜಗತ್ತಿಗೆ ಬಾಂಧವ್ಯದ ಪಾಠ ಮಾಡುತ್ತಿರುವ, ನಮ್ಮೂರಿನ ಚಹಾಜಗತ್ತಿನ ಮಾಂತ್ರಿಕ ಮೋಡಿ ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ  ಅಲ್ಲವೆ ? ದಿನವೆಲ್ಲಾ ದುಡಿದು ಬಳಲಿದ ಮನಸುಗಳನ್ನು ತನ್ನತ್ತ ಕೈ ಬೀಸಿ ಕರೆದು ಉಣಬಡಿಸಿ,  ಸಂಜೆಯ ಚಹಾಮೃತದ ಸವಿಯನ್ನು ನಿಷ್ಪಕ್ಷಪಾತವಾಗಿ ಹಂಚುವ ಈ ನಿರ್ಮಲ ಜಗತ್ತು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಶ್ರಮ ಸಂಸ್ಕೃತಿಯ ಬೇರುಗಳಿಂದ ನವಚಿಗುರನ್ನು ಪಡೆದು ಕಂಗೊಳಿಸುತ್ತಿರುವ ನಮ್ಮೂರಿನ ನಾಗರಿಕತೆಯಲ್ಲಿ, ಕೆಲವು ಕಾಲ ಬಡವರ ಜಠರಾಗ್ನಿಯನ್ನು ತಣಿಸಿ ಹಸಿವನ್ನು ಮುಂದೂಡುವ ಅಥವಾ ಒಂದು ಹೊತ್ತಿನ ಉಪವಾಸಕ್ಕೆ ಸಹಕರಿಸಿ ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವ ಈ ಚಹಾ ಎಂಬ ಮಾಯೆ ತನ್ನ ಸುತ್ತ  ಒಂದು ನವಸಂಸ್ಕೃತಿಯನ್ನೆ ರೂಪಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. ಬಡವರ ಕೊನೆಯಿರದ ಹಸಿವಿನ ಔಷಧಿಯಾಗಿರುವ ಈ "ಬಡವರ ಬಂಧು" ಶ್ರಮಿಕರ ಅಮೃತವೂ ಹೌದು; ಶೋಷಿತರ ಬದುಕಿನ ತೀರ್ಥವೂ ಹೌದು.ಲಾಲ್ ಬಹಾದ್ದೂರ ಶಾಸ್ತ್ರಿಯವರು ಕರೆಕೊಟ್ಟ ಸೋಮವಾರದ ಉಪವಾಸ ಯಶಸ್ವಿಯಾಗುವಂತೆ ಮಾಡಿ ದೇಶ ಸೇವೆ ಮಾಡಿದ ಚಹಾಮಾಯಿಯ ದೇಶಭಕ್ತಿಯನ್ನು ಮೆಚ್ಚಲೇಬೇಕು.
ಈ ಲೇಖನ ಅಕ್ಷರವಾಗುವ ಹೊತ್ತಿನಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕ ಗೆಳೆಯ ಮೌನೇಶ ಕಮ್ಮಾರರವರು ಹಾಡಿದ
"ಕಪ್ಪ ಬಸಿ ಚಹಾಗೆಳೆಯ ಗೆಳೆಯರು ಕೂಡಿಸಲಿಗೆಯ ಮಾತನಾಡಿಪ್ರೀತಿಗೆ ನಾಂದಿಯಾತು
ಕಪ್ಪ ಬಸಿ ಚಹಾಅದು ಒಂದು ಇಲ್ಲದಿರೆಗೆಳೆತನ ಎಲ್ಲಾ ಮರೆಬದುಕುವುದು ಬಿರಿಯಾತುಕಪ್ಪ ಬಸಿ ಚಹಾ........................................................ಎಂಬ ಜಾನಪದ ಗೀತೆಯಲ್ಲಿ ಅಭಿವ್ಯಕ್ತವಾದ  ಚಹಾಮಾಯಿಯ ಸೊಬಗು ಅವರ್ಣನೀಯ. ಚಹಾ ಜನಪದರ ಜೀವಸೆಲೆಯಾಗಿ ಬದುಕಿಗೆ ಚೈತನ್ಯವನ್ನು ಧಾರೆಯೆರೆಯುತ್ತಲೇ ಬಂದಿದೆ. ನಾಡವರ ಕಾಯಕದಲ್ಲಿನ ಕೈಲಾಸ ತಲುಪಲು ಈ ಚಹಾ ಎಂಬ ಉತ್ಸಾಹದ ಚಿಲುಮೆ  ಪ್ರವಹಿಸಲೇಬೇಕು.
ನೀನೆಂದರೆ  ಕಣ ಕಣದಲೂರೋಮಾಂಚನಮನದ ಮೂಲೆಯಲೂಭರವಸೆಯ ಹೊಂಗಿರಣಅರಳಿ ನಿಂತ ಎದೆಯಲಿನೀನು ಅಮೃತ ಸಿಂಚನ
ಕದಡಿದ ಮನ ತಿಳಿಯಬಾನುಆಗದೇನು ಇಳಿದಾಗಚಹಾ ಹನಿಯ ಜೇನು.........ಎಂಬ ಚಹಾರಾಧನೆ ಮನದ ಮೂಲೆಯಲ್ಲಿ ಸದಾ ಜರುಗುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಆಹಾರ ಸಂಸ್ಕೃತಿಯ ಅತ್ಯಗತ್ಯ ಪಾನೀಯಗಳಲ್ಲಿ ಒಂದಾಗಿರುವ ಚಹಾದೇವಿ, ವರ್ತಮಾನದ ಬೆಡಗಿನ ಲೋಕದ ಸೆಳೆತಕ್ಕೆ ಸಿಕ್ಕು ಕೆಫೆಗಳಲ್ಲಿ ಕಪ್ಪು ಸುಂದರಿಯಾಗಿ, ಬಿಳಿ ಕಿಶೋರಿಯಾಗಿ, ಹಸಿರು ನೀರೆಯಾಗಿ, ಕೆಂಬಣ್ಣದ ಮೋಹಿನಿಯಾಗಿ, ವೈವಿಧ್ಯಮಯ ರೂಪಗಳನ್ನು ಅಲಂಕರಿಸಿದ್ದಾಳೆ. ಪ್ರಾತಃಕಾಲದಲೆದ್ದು ಮುಖ, ಹಲ್ಲುಗಳನುಜ್ಜಿ, ವಿಭೂತಿ ಧರಿಸಿ ಒಂದು ಲೋಟ ಚಹಾ ಹೀರಿದಾಗಲೇ ಅಂದಿನ ಕಾಯಕದ ಅಧಿಕೃತ ಪ್ರಾರಂಭಕ್ಕೆ ಮುನ್ನುಡಿ ಬರೆದ ಹಾಗೆ. ಅಲ್ಲಿಂದ ಮೂರು ಗಂಟೆಗಳಿಗೊಮ್ಮೆ ಚಹಾರಾಣಿಯೊಂದಿಗೆ ಉಲ್ಲಾಸದ ಹಾಡನ್ನು ಹಾಡಲೇಬೇಕು. ಶ್ರಮಿಕ ವರ್ಗದ ಜನರ ಜೀವನದ ಚೈತನ್ಯವಾಗಿರುವ ಕಲಿಯುಗದ ಅಮೃತವಾಗಿರುವ ಚಹಾ ನಮ್ಮೂರಿನ ಭಾವೈಕ್ಯತೆಯ ಪ್ರತೀಕವೂ ಆಗಿದೆಯೆಂದರೆ ಅತೀಶಯೋಕ್ತಿಯೇನಲ್ಲ.

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...