Total Pageviews

Sunday 11 November 2018

ಹೆಗಲ ಭಾರ

ಹೆಗಲ ಭಾರ
ನಾನು ಎಂಬುದೊಂದು
ಹೊರಲಾರದ ಮಣಭಾರ
ಜಾಗ ಸಿಕ್ಕಲ್ಲಿ ಇಣುಕುವುದು
ಕೈಚಾಚಿ ಜನಸಂದಣಿಗಳ ಮಧ್ಯೆ

ಜಗತ್ತನ್ನೇ ಗೆಲ್ಲಬೇಕೆಂದರೂ
ಹೆಣವಾದ ಭಾರದಿಂದ
ಕುಗ್ಗುತಿದೆ ಈ ಹೆಗಲು
ಹಗುರವಾದೀತು ಎಂದು ಈ ಹೊರೆ
ಕಾಯುತಿರುವೆ ನಿಟ್ಟುಸಿರಿಗಾಗಿ

ಬಿಟ್ಟು ತೊಲಗೆಂದರೂ
ವಿಕ್ರಮನ ಈ ಭೂತ
ರಹಸ್ಯಗಳ ಪ್ರಶ್ನೆ ಕೇಳಿ ಕೇಳಿ
ನೆಪ ಹೊತ್ತು ಜೋತು ಬಿದ್ದಿದೆ
ಬೆಂಬಿಡದೆ ಬೆನ್ನೇರಿದೆ

ಸಾಧನೆಗೆ ಶರಾ ಬರೆದು
ಪತನಕೆ ಬೆನ್ನು ತೋರಿ
ಬೀಗುತಲೆ ಕಾಡುತಿದೆ ಗುಳ್ಳೆ ನರಿ
ದಿಗಂತದಿಂದ ಎದ್ದು ಬಂದು
ಮಧ್ಯೆ ನಿಲ್ಲುತಿದೆ ಹೇಳದೆ ಈ ಪರಿ
ಈ ಜಗಕೆ ನಾ ಕಾರಣ
ಈ ಸುಖಕೆ ನಾ ಧಾರಣ
ಗೆಲುವಿಗಂತೂ ನಾ ಭೂಷಣ
ಎಂದಂದೇ ಹಪಹಪಿಸಿ
ನಂಬಿಸಿ ಹಾತೊರೆದಿದೆ
ವ್ಯಕ್ತಿತ್ವದ ಬಲಿಗಾಗಿ

ಸ್ವರ್ಗದ ಮಡಿಲಿಗೆ
ನಾ ಹೋದರೆ ಹೋದೇನು
ಎಂದರವರು ದಾಸರು
ಭಯಂಕರದ ಈ ಭವದಿಂದ
ನಾ ಹೇಗೆ ಹೋಗುವುದು
ಅರಿಯುತಿಲ್ಲ ಆಳುತಿಹುದು

ಇಳಿಸಿದರೂ ಭಾರವದು
ಕಾಲಿಗಾದರೂ ತೊಡರುವುದು
ಬಿಟ್ಟನೆಂದರೂ ಬಿಡದೀ ಮಾಯೆ
ಅಷ್ಟಪದಿಯ ಬಾಹುಗಳ
ಬಿಡದ ಗಟ್ಟಿ ಹಿಡಿತವದು


Thursday 1 November 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ(ಮುಂದುವರೆದ ಭಾಗ)
ಶ್ರೀಕೃಷ್ಣದೇವರಾಯನು ಚೆದುರಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಡಿ ಪುಷ್ಪಗಳನ್ನೆಲ್ಲ ಆಯ್ದು ತಂದು ಪರಿಮಳಭರಿತ ಹೊಸ ಹೂ ಮಾಲೆಯನ್ನು ಕಟ್ಟಿದಂತಿದೆ ಈ ಮಹಾಕಾವ್ಯ.ಈ ಕಾವ್ಯವನ್ನು ಓದುತ್ತಿದ್ದರೆ ಹಂಪೆಯ ಮೈ ತುಂಬ ತುಂಡರಿಸಿಕೊಂಡು ಸೋತುಬಿದ್ದ  ಶಿಲ್ಪ ಗಳೆಲ್ಲಾ ಜೀವಚೈತನ್ಯ ಪಡೆದು ಸುಂದರ ಕಲಾಕನ್ನಿಕೆಯರಾಗಿ ಕಣ್ಣಮುಂದಿನ ರಂಗದಲ್ಲಿ ನೆನಪುಗಳ ಗೆಜ್ಜೆ ಕಟ್ಟಿಕೊಂಡು ಕಾವ್ಯದ ತಾಳಗತಿಗೆ ತಕ್ಕಂತೆ  ಕುಣಿಯುತ್ತಿರುವಂತೆ ಭಾಸವಾಗುತ್ತದೆ. ಕುಮಾರವ್ಯಾಸ ಭಾರತ ಕಣ್ಣಲಿ ಕುಣಿದಂತೆ ಮಧುರಾಪುರದ ನೈಜ ಚಿತ್ರಣ, ಪುಷ್ಪಲಾವಿಕೆಯರ ವ್ಯಾಪಾರದ ಸೌಂದರ್ಯ ಲಾಲಿತ್ಯ, ವೇಶ್ಯೆಯರ ಅಲಂಕಾರ ಮಜ್ಜನ, ಪ್ರಖರ ಸೂರ್ಯನ ಬಿಸಿಲು ಹೊದ್ದು ಪ್ರಕೃತಿಯ ಅಗ್ನಿಕುಂಡವೇ ಆದ ಗ್ರೀಷ್ಮ ಋತುವಿನ ವರ್ಣನೆ, ಯಮುನಾಚಾರ್ಯನ ಉಪದೇಶ ಗಳು ನಮ್ಮ ಮನೋರಂಗದ ಮೇಲೆ ಒಂದಾದ ಮೇಲೊಂದರಂತೆ ಹೆಣೆದುಕೊಂಡು ಸರಣಿಯ ಸುಂದರ ದೃಶ್ಯಗಳಾಗಿ  ಮೈದಳೆಯುತ್ತವೆ.
ಭಾವತೀವ್ರತೆಯಿಂದ ಪರಕಾಯ ಪ್ರವೇಶವನ್ನುಂಟು ಮಾಡುವ ರೀತಿಯಲ್ಲಿ , ಸ್ವತಃ ರಾಯನೇ ಖುದ್ದಾಗಿ ಸಾಮಾನ್ಯ ಜನಪದ ಸಂಸಾರೊಂದಿಗರ ಮನೆ ಮನೆಯಲ್ಲಿ ವಾಸವಿದ್ದು ಕಂಡಂತೆ ಅವರ ಬದುಕಿನ ಪ್ರತಿ ಕ್ಷಣಗಳನ್ನು ತನ್ನ ಅಂತರ್ ಚಕ್ಷು ಎಂಬ ಸೂಕ್ಷ್ಮ ದರ್ಶಕ ಯಂತ್ರದಿಂದ ಬಹು ಸೂಕ್ಷ್ಮವಾಗಿ ಹಿಗ್ಗಲಿಸಿ ಪರಿಶೀಲಿಸಿದ್ದಾನೆ; ಮನೋಜ್ಞವಾಗಿ ದಾಖಲಿಸಿದ್ದಾನೆ.ಇಂದು ಕೆಂಬಣ್ಣದ  ಧೂಳು  ತುಂಬಿಕೊಂಡು ತನ್ನ ಕಾಲಗರ್ಭದಲ್ಲಿ ಬಾಯಿಬಿಟ್ಟು ಹೇಳಲಾಗದ ಅದೆಷ್ಟೋ ನಿಗೂಢ ಸತ್ಯಗಳನ್ನು ಬಚ್ಚಿಟ್ಟುಕೊಂಡು ನರಳುತ್ತಿದ್ದರೂ  ನಳನಳಿಸುತ್ತಲೇ ತೋರಿಕೆಯ    ಹಸನ್ಮುಖದಿಂದ ತನ್ನೆಡೆಗೆ ಬರುವವರನ್ನೆಲ್ಲಾ ಸ್ವಾಗತಿಸುತ್ತಿರುವ  ಪಾಳು ಬಿದ್ದ  ಹಂಪೆಯು ಈ ಕೃತಿಯ ಒಳಹೊಕ್ಕಾಗ  ತನ್ನ ಕಪ್ಪು ಬಿಳುಪನ್ನು ಕಳಚಿಕೊಂಡು ಸಮೃದ್ಧತೆಯ ಹಸಿರುಸಿರು ತುಂಬಿಕೊಂಡು,ಕಣ್ಣು ಕೋರೈಸುವ ಹೊಂಬಣ್ಣದಿಂದ ಅಲಂಕರಿಸಿಕೊಂಡು, ಪ್ರಜ್ವಲಿಸುವ ಮುತ್ತು ರತ್ನ ಹವಳಗಳ ಹೊಂಬೆಳಕಿನ ಬೀದಿಗಳನ್ನು ಹೊಂದಿ ದೇದೀಪ್ಯಮಾನವಾಗಿ ವಿಜೃಂಭಿಸುವ  ಸಾಮ್ರಾಜ್ಯವಾಗಿ ಪುನರುಜ್ಜೀವ ಪಡೆಯುತ್ತದೆ. 

                ಮಧುರಾಪುರ ನಗರ ವರ್ಣನೆಯ ಸಂದರ್ಭವೊಂದು ಹೀಗಿದೆ"ಮಧುರಾಪುರ ಭೋಗ ಭಾಗ್ಯಗಳಿಂದ ಕೂಡಿದೆ.ಆ ನಗರದ ರಾಜರಲ್ಲದೇ ಸಾಮಾನ್ಯರು ಸಹ ಮರಕತ ಮಾಣಿಕ್ಯದ ಆಭರಣಗಳನ್ನು ಧರಿಸುತ್ತಾರೆ......ಅವರ ಮನೆಗಳ ದ್ವಾರಗಳು, ಹೊಸ್ತಿಲುಗಳು, ಮಕರಸ್ತಂಭಗಳು ಬೆಳ್ಳಿ ಬಂಗಾರದಿಂದ ಅಮೂಲ್ಯ ರತ್ನಗಳ ಅಲಂಕಾರದಿಂದ ಕುಬೇರನ ಭವನವನ್ನು ನೆನಪಿಗೆ ತರುವಂತಿದೆ. ಅತಿ ಎತ್ತರದ ಕೋಟೆ ಬುರುಜುಗಳು ಆಗಸದಲ್ಲಿನ ಸಂಪಿಗೆಯ ಹೂವಿನ ಮಾಲೆಯಂತೆ ಕಂಗೊಳಿಸುತ್ತಿವೆ! ಆ ಕೋಟೆಯ ಸುತ್ತಲೂ ತುಂಬ ಆಳವಾದ ಕಂದಕಗಳು ನೀರಿನಿಂದ ತುಂಬಿ ಮಂದಾಕಿನಿಯನ್ನು ನೆನಪಿಗೆ ತರುತ್ತದೆ. ಪೌರಕಾಂತೆಯರ ಸುಕುಮಾರ ದೇಹದ ಮೇಲೆ ಗಂಧ, ಕಸ್ತೂರಿ,ಕುಂಕುಮ,ಅಗರುಚಂದನಗಳನ್ನು ಲೇಪಿಸುವಾಗ ಇವುಗಳಲ್ಲಿ ಬೆರೆತಿದ್ದರಿಂದ ಆ ಕಂದಕಕ್ಕೆ 'ಭೋಗವತಿ' ಎಂದು ಹೆಸರು ಬಂತು....." ಇಲ್ಲಿ ಮಧುರಾಪುರ ದ ಹೆಸರಿನಲ್ಲಿ ಕೃಷ್ಣದೇವರಾಯ ಬಣ್ಣಿಸಿರುವುದೆಲ್ಲ ತನ್ನ  ಸಾಮ್ರಾಜ್ಯದ ಭೋಗವಿಲಾಸವನ್ನೇ ಎಂದೆನಿಸುತ್ತದೆ. ಈ ಕಾವ್ಯದ ಆರಂಭದ ಭಾಗವಂತೂ ಇದೊಂದು ಶೃಂಗಾರ ಕಾವ್ಯವೆನ್ನುವಷ್ಟರ ಮಟ್ಟಿಗೆ ರಸಮಯವಾಗಿದೆ.
                   ಇಲ್ಲಿ ರಾಯನೆಂಬ ರಸಿಕನಾಡಿದ ಮಾತುಗಳು ಶಶಿಯುದಿಸಿ ಬಂದಂತೆ ಸಹೃದಯರ ಮನದ ತುಂಬೆಲ್ಲಾ ಹಾಲುಬೆಳದಿಂಗಳನ್ನು ಚೆಲ್ಲಿ ಮುದ ನೀಡುತ್ತವೆ.ಇಲ್ಲಿ ಬರುವ ವೇಶ್ಯೆಯರು,ವಿಲ್ಲಿಪುತ್ತೂರಿನ ಸ್ತ್ರೀಯರು, ಲತಾಂಗಿಯರು,ಪುರದಂಗನೆಯರ ಒನಪು- ಒಯ್ಯಾರ,ಹಾಸ್ಯ- ಲಾಸ್ಯಗಳ ಚಿತ್ರಣ  ಶೃಂಗಾರ ರಸದ ನವನವೀನ ಕಲಾಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತವೆ.ಇಲ್ಲಿ ಶೃಂಗಾರ ರಸ ಮೈಯ್ಯುಕ್ಕಿ ಪ್ರವಾಹೋಪಾದಿಯಲ್ಲಿ ಹರಿಯುತ್ತದೆ. 
"ಆ ಲತಾಂಗಿಯರು ತಮ್ಮ ಮಹಡಿಯ ಮೇಲೆ ನಿಂತು ನೀಳ ಕೇಶ ರಾಶಿಯನ್ನು ಬಿಚ್ಚಿ ಸಿಕ್ಕು ಬಿಡಿಸುತ್ತಿದ್ದಾಗ, ಹೂಗಳನ್ನು ಕುಯ್ಯುತ್ತಿದ್ದಾಗ, ವೀಣೆಯನ್ನು ನುಡಿಸುವಾಗ ಅವರ ಬೆರಳುಗಳು ಒಂದೇ ರೀತಿಯಲ್ಲಿ, ಲಲಿತಸುಕುಮಾರವಾಗಿ, ಲಯಬದ್ಧವಾಗಿ ನೃತ್ಯ ಮಾಡುತ್ತಿರುವಂತೆ ಕಾಣುತ್ತವೆ.ಒಮ್ಮೊಮ್ಮೆ ಆ ಬೆರಳುಗಳನ್ನೇ ಹೂಗಳೆಂದು ಭ್ರಮಿಸಿ ದುಂಬಿಗಳು ಮೋಹಿಸಿ ಎರಗುತ್ತವೆ" ಈ ಕಾವ್ಯದಲ್ಲಿಉಪಮೆಯು ರಾಯನನ್ನು  ಲತಾಂಗಿನಿಯಂತೆ ಬಳಿ ಕರೆದು ಮೋಹಿಸಿದೆ .ಉತ್ಪ್ರೇಕ್ಷೆಯು ರಾಣಿಯಂತೆ ಪಕ್ಕದಲ್ಲಿದ್ದು ಕಾಂತಾಸಂಮ್ಮಿತವನ್ನು ಬೋಧಿಸಲು ನೆರವಾಗಿದೆ. 
         ಮಧುರಾಪುರದ ವನಿತೆಯರು ಮುಡಿದುಕೊಂಡು ಮಹಡಿಯಿಂದ ಕೆಳಗೆಸೆದ ಪುಷ್ಪಗಳು ದಾರಿಹೋಕರಿಗೆ ಆಗಸದಿಂದುದುರುವ ಮುತ್ತುಗಳಾಗಿ ರೂಪು ಪಡೆಯುತ್ತವೆ.ಮುತ್ತುಗಳಾಗಿ ಎಂಬಲ್ಲಿ ಅಲಂಕಾರಗಳು ರಾಯನ ಕೈಯ್ಯಲ್ಲಿ ಪಳಗಿದ ರೀತಿಯನ್ನು ಗಮನಿಸಬೇಕು. ಬಹುಶಃ ಶ್ರೀಕೃಷ್ಣದೇವರಾಯ ತನ್ನ ರಾಜ್ಯದ ಬೀದಿಗಳಲ್ಲಿ ಕಂಡ ಜನಜೀವನದ ಚೆಹರೆಗಳನ್ನೇ ತನ್ನ ಕಾವ್ಯದ ಘಟನೆಗಳನ್ನಾಗಿ ಬಹು ಸುಂದರವಾಗಿ ಬಣ್ಣಿಸಿದ್ದಾನೆ.ತೆಲುಗು ಸಾಹಿತ್ಯದ ಮಹತ್ವದ "ಪ್ರಬಂಧ ಕಾವ್ಯ"ವಾಗಿ ಹೆಸರಾಗಿರುವ ಈ ಕೃತಿಯಲ್ಲಿ  ಪ್ರತಿಯೊಂದು ಪಾತ್ರವೂ ಸಹಜತೆಯಿಂದ ಸರಳತೆಯಿಂದ ಕೂಡಿದೆ. ಇವನಂತೆ ಜನಪದರ ಜೀವನವನ್ನು ಇಷ್ಟೊಂದು ಹತ್ತಿರದಿಂದ ಪರಿಶೀಲಿಸಿ ಉಲ್ಲೇಖಿಸಿದ  ಸಾಮ್ರಾಟ ಮತ್ತೊಬ್ಬನಿಲ್ಲವೆಂದೇ ಹೇಳಬಹುದು. ಬೀದಿಯಲ್ಲಿ ಸಿಕ್ಕ ಶ್ರೀಸಾಮಾನ್ಯ ಹೆಣ್ಣೂ ಕೂಡ ಶ್ರೀಕೃಷ್ಣದೇವರಾಯನ ಲೇಖನಿಯ ಕುಂಚದಲ್ಲಿ ವಿಷ್ಣುವನ್ನೇ ಮಧುವಣಿಗನನ್ನಾಗಿ ಪಡೆದು ಪರಮಶ್ರೇಷ್ಠ ಸ್ಥಾನವನ್ನು ಅಲಂಕರಿಸುತ್ತಾಳೆ. ಗ್ರೀಷ್ಮ,ವಸಂತ,ವರ್ಷಾ ಋತುಗಳ ವರ್ಣನೆಯಲ್ಲಿ  ಪ್ರಕೃತಿಯೂ ಒಂದು ಮಹತ್ವದ ಪಾತ್ರವಾಗಿ ದಾಖಲಾಗಿದೆ.ಮಳೆಗಾಲದ ನಂತರ ಬರುವ 'ಶರದೃತು ಎಂಬ ಯುವತಿಗೆ  ಸೂರ್ಯ ಚಂದ್ರರಿಬ್ಬರೂ ಕಾಂತಿ ಮತ್ತು ಬಣ್ಣಗಳನ್ನು ತೊಡಿಸಿದಂತಿದೆ.
" ಕಬ್ಬಿನ ಜಲ್ಲೆಗಳು ಅತಿ ಎತ್ತರಕ್ಕೆ ಬೆಳೆದು ತೆನೆಗಳಿಂದ ಭಾರವಾಗಿ ಬಿಲ್ಲಿನಂತೆ ಬಗ್ಗುತ್ತಾ ಸಿಹಿಯಾದ ರಸದೊಂದಿಗೆ ತುಂಬಿದೆ.ಈ ಸಿಹಿ ಗಾಳಿ ಪ್ರತಿಯೊಂದು ಹೂವಿಗೂ ಸೋಕಿಸುತ್ತಾ ಪದ್ಮಗಳೊಡನೆ ಚೆಲ್ಲಾಟವಾಡುತ್ತಿದೆ.ಈ ಗಾಳಿಗೆ ಮಾರುಹೋಗಿ ದುಂಬಿಗಳ ಗುಂಪು ಝೇಂಕಾರ ಗೀತೆಯನ್ನಾಲಾಪಿಸುತ್ತಿದೆ." ಹೀಗೆ ಪ್ರಕೃತಿ ವರ್ಣನೆಯು ಅವಕಾಶ ದೊರೆತಾಗೆಲ್ಲ ಮನೋಹರವಾಗಿ  ಮೈದುಂಬಿ ಬಂದಿದೆ. ಮಧುರಾಪುರದ ವನಿತೆಯರೊಂದಿಗೆ ಋತುಗಳೂ ಕೂಡ ಹೆಣ್ಣಾಗಿ ಈ ಕೃತಿಯನ್ನು ಶೃಂಗರಿಸಿವೆ. ವಿಷ್ಣುಚಿತ್ತನ ಮೂಲಕ ವೈಷ್ಣವ ಮತ ಪ್ರತಿಷ್ಠಾಪನೆಯ ಈ ಕಾವ್ಯದ ಬೀಜವಾಗಿದ್ದರೂ ,ಅತ್ಯುತ್ತಮ ಜನಾನುರಾಗಿಯಾಗಿದ್ದ ರಾಯನು ಈ ಕಾವ್ಯದ ಮುಖೇನ ತನ್ನ ಸಾಮ್ರಾಜ್ಯದ  ಸಮಕಾಲೀನ ರಾಜನೀತಿ,ಧರ್ಮ, ಜನಜೀವನ,ಕಲೆ,ಸಾಹಿತ್ಯ ಸಂಸ್ಕೃತಿ,ಜ್ಞಾನ, ವೈರಾಗ್ಯ, ಸಂಪ್ರದಾಯಗಳನ್ನು  ಆ  ಬೀಜದ ಸುತ್ತಲೂ ಆವರಿಸಿರುವ ಹಣ್ಣಿನ ತಿರುಳಿನಂತೆ ಲೇಪಿಸಿ ರಸವತ್ತಾದ ಪಾಕವನ್ನಾಗಿಸಿದ್ದಾನೆ.ಇದೊಂದು ಲೌಕಿಕದಿಂದೊಡಗೂಡಿದ ಅಲೌಕಿಕ ಕಾವ್ಯ.
ಅಲ್ಲಸಾನಿ ಪೆದ್ದನ, ನಂದಿ ತಿಮ್ಮಣ್ಣ, ಧೂರ್ಜಟ ,ಅಯ್ಯೆಲರಾಜ ರಾಭದ್ರ ಕವಿ, ಮಲ್ಲನ, ತೆನಾಲಿ ರಾಮಕೃಷ್ಣ, ಪಿಂಗಳಸೂರನ,ರಾಮರಾಜಭೂಷಣ ರಂತಹ ಅಷ್ಟದಿಗ್ಗಜರಿಗೆ ಆಶ್ರಯವನ್ನಿತ್ತು ಪೋಷಿಸಿ ನಮ್ಮ ನಾಡಿನ ಸಾಹಿತ್ಯ,ಕಲೆ, ಸಂಸ್ಕೃತಿಯ ಹಿರಿಮೆಯನ್ನು ಉತ್ತುಂಗ ಶಿಖರಕ್ಕೇರಿಸಿದ ಸುಪ್ರಭು ಶ್ರೀಕೃಷ್ಣದೇವರಾಯ.ಡಾ.ನಿರುಪಮಾ ರವರು ತೆಲುಗಿನ ಈ "ಆಮುಕ್ತಮಾಲ್ಯದ" ಕಾವ್ಯವನ್ನು  ಒಪ್ಪವಿಟ್ಟು ಕನ್ನಡದ ಅಚ್ಚಿನಲ್ಲಿ ಸುಂದರ ಪುತ್ಥಳಿಯನ್ನಾಗಿ ಎರಕ ಹೊಯ್ದಿದ್ದಾರೆ; ಕನ್ನಡ ದೇವಿಯ ಮುಡಿ
ಯನ್ನು ಎಂದೂ ಬಾಡದ ಈ ಕಾವ್ಯ ಪುಷ್ಪ 'ಮಾಲ್ಯ'ದಿಂದ ಅಲಂಕರಿಸಿ ಮತ್ತಷ್ಟು  ಶೋಭಿಸುವಂತೆ ಮಾಡಿದ್ದಾರೆ.





 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...