Total Pageviews

Thursday 21 October 2021

ಬೆಳದಿಂಗಳ ಕಾವ್ಯ

ಬೆಳದಿಂಗಳ ಕಾವ್ಯ
ಗಾಲಿಬ್ ಹಾಡುತ್ತಾನೆ ಹೀಗೆ -
"ಮಸೀದಿಯಲ್ಲಿ ಕುಳಿತು ಮದಿರೆಯನ್ನು ಕುಡಿಯಲು ಬಿಡು ಗಾಲಿಬ್
ಇಲ್ಲವಾದರೆ ದೇವರಿಲ್ಲದ ಸ್ಥಳವನ್ನಾದರೂ ಹುಡುಕಿಕೊಡು ಕುಡಿಯಲು ಶರಾಬು"
ಎಂದು ದೇವರಿಲ್ಲದ ಸ್ಥಳವನ್ನು ಶೋಧಿಸುವ ಮಾರ್ಗವಾಗಿ ಕವಿತೆ ಗಾಲೀಬನನ್ನು ಕಾಡಿದರೆ, ಸಂತ ಶಿಶುನಾಳ ಶರೀಫರ ಬದುಕಿನುದ್ದಕ್ಕೂ ಇದೇ ಪ್ರಶ್ನೆ ನಾದವಾಗಿ ಹರಿದಿರುವುದನ್ನು ಅಲ್ಲಗಳೆಯಲಾಗದು. ಕನಕದಾಸರಲ್ಲಿ ಈ ಅಂತರಂಗದ ಶೋಧನೆ ಬಾಳೆಹಣ್ಣಿನ ಪ್ರಸಂಗದ ಮೂಲಕ ಸಾಕಾರವಾಗಿರುವುದನ್ನು ಗಮನಿಸಬೇಕು. ಇದನ್ನೇ ಬಸವಣ್ಣನವರು ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಎಂದು ಕೂಡಲಸಂಗಮದೇವನನ್ನೊಲಿಸಿಕೊAಡು ಪರಿಶೋಧಿಸುವ ಮಾರ್ಗವನ್ನಾಗಿ ವ್ಯಾಖ್ಯಾನಿಸುತ್ತಾರೆ. ಜಿ.ಎಸ್. ಶಿವರುದ್ರಪ್ಪನವರಿಗೆ ಕಾವ್ಯ ಕೆಲವು ಉತ್ತರಿಸಲಾಗದ ಪ್ರಶ್ಜೆಗಳ ಸ್ವರೂಪದಲ್ಲಿ ದಕ್ಕಿದರೆ, ಅಡಿಗರಿಗೆ ಹುತ್ತಗಟ್ಟಿದ ಚಿತ್ತದ ಸುಳಿಯಾಗಿ ಆವರಿಸಿದ್ದಿದೆ. ಟಿ. ಎಸ್. ಇಲಿಯಟ್‌ನಿಗೆ ಕಾವ್ಯ ಅವನ ಬದುಕಿನಂತೆ ನೀರ ಮೇಲಿನ ನೆನಪುಗಳಾಗಿ ಹರಡಿಕೊಂಡಿರುವುದು ಅಷ್ಟೇ ವಿಸ್ಮಯವನ್ನುಂಟು ಮಾಡುತ್ತದೆ. ಕಾವ್ಯವೆಂದರೆ ಏನೂ ಅಲ್ಲ ಅದೊಂದು ಬಯಲು  ಎಂದವನು ಅಲ್ಲಮ. ‘ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯ " ಎಂದು ಹಾಡುತ್ತಲೇ ಕಾವ್ಯದಂತೆ ಬಯಲಾಗಿ ಹೋದ. ಕಾವ್ಯ ಕೇವಲ ರಸಾನಂದಕ್ಕಾಗಿ ಮಾತ್ರವಲ್ಲ. 

“ಕಾವ್ಯಂ ಯಶಸ್ಸೇರ್ಥಕೃತೇ ವ್ಯವಹಾರವಿದೆ
ಶಿವೇತರಕ್ಷತಯೇ ಕಾಂತಾ ಸಮ್ಮಿತತಯೋಪದೇಶಯುಜೆ”
ಎಂದು ಮಮ್ಮಟ ಹೇಳುವ  ಕಾವ್ಯ ಕೀರ್ತಿಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಧನಾರ್ಜನೆಗಾಗಿ, ಪರಮಾನಂದಕ್ಕಾಗಿ, ಅಮಂಗಳ ನಿವಾರಣೆಗಾಗಿ, ಕಾಂತೆಯAತೆ ಉಪದೇಶಿಸುವುದಕ್ಕಾಗಿ ಸಹಾಯ ಮಾಡಬಲ್ಲದು. ಈ ಕಾವ್ಯ ಪ್ರಯೋಜನಗಳು ಪ್ರಾಚೀನ ಕಾವ್ಯವನ್ನು ಅನುಲಕ್ಷಿಸಿ ಹೇಳಲಾಗಿದೆ. 

ನಡುಗನ್ನಡದ ಕಾವ್ಯದ ಪರಿಣಾಮಗಳು ಇದಕ್ಕಿಂತ ಭಿನ್ನವಾಗಿವೆ. ಪರಂಪರೆಯ ಕಟ್ಟಳೆಯೊಳಗೆ ಬಂಧಿಯಾದ ಅರಮನೆಯ ಹಾಗೂ ಪಂಡಿತರ ಕಾವ್ಯವನ್ನು ಮರಿದು ಕಟ್ಟಿದ ವಚನಕಾರರು ವ್ಯವಹಾರ ಜ್ಞಾನ ಉಪದೇಶಗಳಿಗೆ ಸೀಮಿತವಾಗಿದ್ದ ಕಾವ್ಯಪ್ರಯೋಜನಗಳನ್ನು ಅದೆಷ್ಡರ ಮಟ್ಟಿಗೆ ವಿಸ್ತರಿಸಿದರೆಂದರೆ ವಚನವೆಂದರೆ ಬದುಕು; ಬದುಕೆಂದರೆ ವಚನವೆನ್ನುವಂತಾಯಿತು. 
“ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯರಿ ಕೂಡಲಸಂಗಯ್ಯಾ
ಎನ್ನುವ ಕಾವ್ಯಕ್ಕೆ ಬಿಜ್ಜಳ ಉರುಳಾಗಿ ಪರಿಣಮಿಸಿದ. ಲಕ್ಷದ ತೊಂಭತ್ತಾರು ಸಾವಿರ ಶರಣರ ಮಾರಣಹೋಮವಾದರೂ ಬದುಕಾಗಿದ್ದ ಕಾವ್ಯವನ್ನು ಮಾತ್ರ ತ್ಯಜಿಸಲಿಲ್ಲ ಶರಣರು. ಶ್ರೀಶೈಲ, ಉಳವಿ, ಕೂಡಲಸಂಗಮ ಹೀಗೆ ಬದುಕು ಹರಿದಲ್ಲೆಲ್ಲಾ ಹರಿದರು ನದಿಯಾಗಿ. ಅಂದರೆ ಕಾವ್ಯವೆಂದರೆ ಅದೊಂದು ಸಂಭ್ರಮದ ಕಡಲು ಮಾತ್ರವಲ್ಲ; ಸಂಕಟದ ಹೆರಿಗೆಯೂ ಹೌದು. ಇದನ್ನೇ ರಾಗಂರವರು ಕಾವ್ಯವೆನ್ನುವುದು ಪದರುಡಿಯ ಕೆಂಡವೆನ್ನುತ್ತಾರೆ. ಝಳಪಿಸಿದರೆ ಖಡ್ಗವಾಗಬಲ್ಲ, ಅಪ್ಪಿಕೊಂಡರೆ ಮುಗ್ಧತೆಯ ಮಗುವಾಗಬಲ್ಲ, ಕೆರಳಿದರೆ ಕೆಂಡವಾಗಬಲ್ಲ, ಅರಳಿದರೆ ಕುಸುಮವಾಗಬಲ್ಲ, ಹರಿದರೆ ನದಿಯಾಗಬಲ್ಲ ಜಗತ್ತಿನ ಏಕೈಕ ದಿವ್ಯವೆಂದರೆ ಅದು ಕಾವ್ಯ ಮಾತ್ರ. ಕುವೆಂಪು, ಬೇಂದ್ರೆ, ಪುತಿನರಂತಹ ದಾರ್ಶನಿಕರು ಪ್ರಕೃತಿ, ರಮ್ಯತೆ, ಆದರ್ಶ, ದೇಶಭಕ್ತಿಗಾಗಿ ನವೋದಯವನ್ನು ಹಾಡಿದರೆ, ಗೋಪಾಲಕೃಷ್ಣ ಅಡಿಗರಂತಹ ಮಹನೀಯರು ಸಂಕೀರ್ಣ ಹಾಗೂ ವೈಯಕ್ತಿಕ ಸಂಘರ್ಷಗಳ ನವ್ಯ ಗೀತೆಗಳನ್ನು ಆಲಾಪಿಸಿದರು. ಸಿದ್ಧಲಿಂಗಯ್ಯ, ದೇವನೂರರು ಕ್ರಾಂತಿಯನ್ನೇ ಕಾವ್ಯವಾಗಿಸಿಕೊಂಡರು.

 ಹೀಗೆ ಎಲ್ಲವೂ, ಏನೆಲ್ಲವೂ ಆದ ಕಾವ್ಯವನ್ನು ಆರಾಧಿಸುವುದೆಂದರೆ ಎಲ್ಲಿಲ್ಲದ ಮಹದಾನಂದ. ಬೆಳದಿಂಗಳು, ಕಾವ್ಯ, ಮಗು, ಗುರು, ಇತಿಹಾಸ, ಕುಶಲೋಪರಿ, ತಹತಹಿಕೆಗಳ ಸಮ್ಮಿಲನ, ಹೀಗೆ ಬದುಕಿನ ರಸಾಯನಗಳೆಲ್ಲವೂ ಮೇಳೈಸಿ ಸಂಭವಿಸಿದ ಸಮ್ಮೇಳನವೇ ಈ ಬೆಳದಿಂಗಳ ಕಾವ್ಯಗೋಷ್ಠಿ. ಮಹರ್ಷಿ ವಾಲ್ಮೀಕಿ, ಕೆ.ಎಸ್. ನಿಸಾರ್ ಆಹಮ್ಮದ್, ಗ್ರಾಹಕರ ತಲ್ಲಣಗಳು, ಗಜಲ್, ಭಾವಗೀತೆ, ವಿರಹ, ಪ್ರೇಮ, ಪ್ರಶ್ನೆಗಳು ಹೀಗೆ ವೈವಿಧ್ಯಮಯ ವಸ್ತುಗಳೆಲ್ಲವೂ ಚಂದಿರನ ಮಡಿಲಲ್ಲಿ ಬೆಳದಿಂಗಳ ಕಾವ್ಯಗಳಾಗಿ ಧ್ಯಾನಿಸಿದ ಬಗೆಯನ್ನು ಮೆಲುಕು ಹಾಕುತ್ತಲೇ ಇರಬೇಕೆನಿಸುತ್ತಿದೆ. ಸಹೃದಯರೆಲ್ಲರೂ ಚಕೋರರಾಗಿ ಬೆಳದಿಂಗಳ ಕವಿತೆಯ ಸಾಲುಗಳನ್ನು ಹೀರಿ ತಣಿಯುತ್ತಿದ್ದರೆನ್ನುವುದಕ್ಕೆ ತಲೆದೂಗುತ್ತಿದ್ದ ಪರಿಯೇ ಸಾಕ್ಷಿಯನ್ನೊದಗಿಸಿತ್ತು.  
 

Monday 16 August 2021

ಆತ್ಮರಂಗ

ಆತ್ಮರಂಗ

 ಹರಿಯುತಿದೆ ಚಿತ್ತ ಕರಗುತಿದೆ ಹುತ್ತ
ಅಮಲೇರಿದ ಹಾಗೆ ಮತ್ತು ಮತ್ತ
ಕುಣಿದು ಹೂಂಕರಿಸುವ ಬೆತ್ತ

ಬಿಡದೆ ತಿವಿದು ಆಡಿಸುವ ನೆತ್ತ


ಎದೆಯೊಳಗೆ ಹಾಡಿ ಕರೆವ ರಿಂಗಣ
ತೃಪ್ತಿ ಹರಿದು ಹೊನಲಾದ ಬಂಧನ
ವನವೆಂದು ಭಾವಿಸಿದೆ ಸುತ್ತ ನಂದನ
ಎತ್ತಿಕೊಂಡು ಚೈತನ್ಯ ತನ್ನ ಕಂದನ


ಸುಖವೆಂದು ಹುಡುಕಿದೆ ಬಹಿರಂಗ
ತೋರಿತು ಮೊನೆಯಿಟ್ಟು ಅಂತರಂಗ
ಹರಿಯಿತಲ್ಲ ಗುಪ್ತಗಾಮಿನಿಯ ಗಂಗ
ಸೆಳೆದು ಆವರಿಸಿತೊಮ್ಮೆ ಆತ್ಮರಂಗ


ಆನಂದ ಕಂಡು ಕೋಲಾಟದ ಕೋಲ
ಕಣ್ಣ ಬಣ್ಣ ಚೆನ್ನ ರನ್ನದ ಡೋಲ
ಬಯಸಿ ಸುಳಿದು ಸುತ್ತಿಕೊಂಡ ಜಾಲ
ಹಾಸಿದೆ ಹಿಂಜರಿದು ಕೆಣಕಿ ನಿಂತ ಕಾಲ


ಒಲವು ನಿಲುವು ಬುದ್ಧಿಯೆಂಬ ಸಿದ್ಧಿ
ಅಚ್ಚೋದವಿದು ಬಯಸಿದಂತೆ ತಿದ್ದಿ
ಮರೆತೆ ಸಲ್ಲದ ಇರುಳೊಳಗಿನ ನಿದ್ದಿ
ಈಜು ಕಲಿತರೊಮ್ಮೆ ಸಾಕು ನೀ ಗೆದ್ದಿ

Saturday 1 May 2021

ಜಗವೆಂಬ ಕಡಲ ಕುದಿ ದಂಡಿ

 ಜಗವೆಂಬ ಕಡಲ ಕುದಿ ದಂಡಿ
‘ದಂಡಿ' ಇದು ಇದುವರೆಗೂ ನಾವು ತಿಳಿದಿರುವಂತೆ ಕೇವಲ ಒಂದು ಸ್ಥಳದ ಹೆಸರಲ್ಲ ಎಂಬ ಸತ್ಯ ಡಾ.ರಾಜಶೇಖರ ಮಠಪತಿಯವರ (ರಾಗಂ) "ದಂಡಿ"  ಕಾದಂಬರಿಯನ್ನೋದಿದ ನಂತ
ರ ದರ್ಶನವಾಗದೇ ಇದು. 'ದಂಡಿ'  ಹೋರಾಟದ ರೂಪಕವೂ ಹೌದು. ಸತ್ಯಕ್ಕಾಗಿ ನಡೆದ ಆಗ್ರಹದ ಪ್ರತಿರೂಪವೂ ಹೌದು. ದಂಡಿಯೆಂದರೆ ನಮಗೆ ನೆನಪಾಗುವುದು ಗಾಂಧೀಜಿಯವರು ೧೯೩೦ ಜನವರಿ ೩೦ ರಂದು ಬ್ರಿಟಿಷರು ಉಪ್ಪಿನ ಮೇಲೆ ಹೇರಿದ ಕರವನ್ನು ವಿರೋಧಿಸಿ ನಡೆಸಿದ ಉಲ್ಲಂಘನೆಯ ಪ್ರತಿಭಟನೆ. ಸ್ವದೇಶಿ ಚಳುವಳಿ ತೀವ್ರವಾಗಿ ಸಂಭವಿಸುತ್ತಿದ್ದ ಕಾಲಘಟ್ಟವದು.  ಗುಲಾಮಗಿರಿಯಲ್ಲಿ ದೇಶ ನರಳುತ್ತಿದ್ದ ಸಂದರ್ಭವದು. ಪರಂಗಿಯವರ ಬಂದೂಕಿನ ಮೇಲೆ ಜನ್ಮತಳೆದ ಕಾಯಿದೆಗಳು ನಮ್ಮನ್ನಾಳಿ ತುಳಿದು ಮೆರೆಯುತ್ತಿದ್ದ ದುರಿತ ಸಂಕಟಗಳ ಸಮಯ. ಮಂದಗಾಮಿಗಳು, ತೀವ್ರಗಾಮಿಗಳು ತಮ್ಮದೇ ನೆಲೆಯಲ್ಲಿ ಹೋರಾಟವನ್ನು ರೂಪಿಸಿಕೊಂಡು ಬ್ರಿಟಿಷರಿಗಾಗಿ ಕ್ರಾಂತಿಯ ಬಲೆಯನ್ನು ನೇಯುತ್ತಿದ್ದ ಸಂದಿಗ್ಧ ಕಾಲದಲ್ಲಿ ಸ್ವಾತಂತ್ರ‍್ಯ ಸಂಗ್ರಾಮಕ್ಕೊಂದು  ನಿರ್ಣಾಯಕವಾಗಬಹುದಾದ ದಿಕ್ಕು ದೆಸೆಯನ್ನು ತೋರಿದ ಚಳುವಳಿಯೆಂದರೆ ದಂಡಿ ಉಪ್ಪಿನ ಸತ್ಯಾಗ್ರಹ. ಸ್ವಾತಂತ್ರ‍್ಯ ಚಳುವಳಿಯ ಇತಿಹಾಸದಲ್ಲಿ ದಂಡಿ ಹೋರಾಟಕ್ಕೆ ವಿಶೇಷವಾದ ಮಹತ್ವವಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಅನುಯಾಯಿಗಳೊಂದಿಗೆ ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ೨೪೦ ಮೈಲುಗಳ ಕಾಲ್ನಡಿಗೆಯ ಮೂಲಕ ಮಾರ್ಚ್ - ಎಪ್ರಿಲ್ ನಲ್ಲಿ ೨೫ ದಿನಗಳ ಕಾಲ ದಂಡಿಯವರೆಗೆ ಸಾಗಿ ಅಲ್ಲಿ ಉಪ್ಪನ್ನು ತಯಾರಿಸುವುದರ ಮೂಲಕ  ಉಪ್ಪಿನ ಮೇಲೆ ಆಂಗ್ಲರು ಹಾಕಿದ ತೆರಿಗೆಯನ್ನು ವಿರೋಧಿಸಿದರು. ಸಾವಿಲ್ಲದ ಸ್ವಾತಂತ್ರ‍್ಯ ಹೋರಾಟದ ಹಸಿ ಹಸಿಯಾದ ನೆನಪುಗಳನ್ನಿಟ್ಟುಕೊಂಡು, ಸಾವಿರದ ಹೆಜ್ಜೆಗಳನ್ನು ಗಾಂಧೀಜಿಯೊಂದಿಗೆ ಇಡಬಯಸಿದವರು ದಂಡಿ ಕಾದಂಬರಿಯ ಕರ್ತೃ ರಾಗಂರವರು. ಹಾಗೆಂದು ದಂಡಿ ಕೇವಲ ಉಪ್ಪಿನ ಕಥೆಯಲ್ಲ ; ಉಪ್ಪು ತಿಂದು ನೀರನ್ನು ಕುಡಿದವರ ಕಥೆಯೂ ಅಲ್ಲ ; ಉಪ್ಪಿನ ಋಣಕ್ಕಾಗಿ ಹೋರಾಡಿ ಹಾಡಿ ಮಡಿದವರ ವ್ಯಥೆ ; ಸ್ವಾತಂತ್ರ‍್ಯವೆಂಬ ಉಪ್ಪಿನ ರುಚಿಗಾಗಿ ಬಲಿಯಾದವರ ಯಶೋಗಾಥೆ. ಉಪ್ಪು ಭಾರತೀಯರ ಅಸ್ಮಿತೆಯ ಸಂಗತಿ ; ಬದುಕಿನ ಗೆಳತಿ. ವೈಜ್ಞಾನಿಕವಾಗಿ ಉಪ್ಪು ಕೊಳೆಯನ್ನು ತೊಳೆಯಲು ಹೆಸರಾಗಿರುವಂತೆಯೇ ಭಾರತಕ್ಕಂಟಿದ ವಸಾಹತುಶಾಹಿ ಮಾಲಿನ್ಯದಿಂದ ಬಿಡುಗಡೆಗೊಳಿಸುವ ವಿಮುಕ್ತಿಯ ಸಂಜೀವಿನಿಯಾಗಿಯೂ ಪಾತ್ರವನ್ನು ನಿರ್ವಹಿಸಿದೆ ಹಾಗೂ ಕೆಲವೊಮ್ಮೆ ಮಹಾತ್ಮಾಗಾಂಧಿಯಾಗಿ, ಮಗದೊಮ್ಮೆ ಕಾದಂಬರಿ ದಂಡಿಯಾಗಿ. ಈ ಕಾದಂಬರಿಯಲ್ಲಿ ದಂಡಿ ಹೋರಾಟದ ಪ್ರತಿಮೆಯಾಗಿ ಮಾತ್ರ ವಿರಮಿಸದೇ ಒಂದು ಪಾತ್ರವಾಗಿ ಕಡಲಿನ ಪ್ರವಾಹದಂತೆ ಹರಿದುಬಂದಿರುವುದು ವಿಶೇಷವಾಗಿದೆ.
ಕರಾವಳಿಯು ನಮ್ಮ ನಾಡಿನ ದಂಡಿಯಾಗಿ ಮಾರ್ಪಟ್ಟ ಘಳಿಗೆಗಳ ಜೀವಂತ ನೆನಪುಗಳನ್ನು ಮರಳಿ ಹಸಿರು ಹಸಿರಾಗಿ ಕಟ್ಟಿಕೊಡುವ ಮಹತ್ವದ ದಾಖಲೆಯಾಗಿ ಈ ಕಾದಂಬರಿ ಗಮನ ಸೆಳೆಯುತ್ತದೆ. ಕಾದಂಬರಿಕಾರರು ಕರಾವಳಿಯ ನಾಡಿನವರಲ್ಲದಿದ್ದರೂ ಅಲ್ಲಿಯ ಪರಿಸರದ ಹೋರಾಟವೊಂದನ್ನು ಮನೋಜ್ಞವಾಗಿ ಹೆಣೆದುಕೊಡುವ ಪ್ರಯತ್ನ ವಿಸ್ಮಯ ಮೂಡಿಸುವಂತಿದೆ. ತಮ್ಮ ವೃತ್ತಿ ಜೀವನದ ಹನ್ನೊಂದು ಹಾಗೂ ಮತ್ತೊಂದು ತಿಂಗಳ ಕೆಲವೇ ಅವಧಿಯನ್ನು‌ ಭಟ್ಕಳದ ನೆಲದಲ್ಲಿ‌ ಕಳೆದ ಅನುಭವಗಳ ಆಧಾರದ ಮೇಲೆಯೇ ಕಡಲತಡಿಯ ಪ್ರದೇಶದ  ಸಾತಂತ್ರ‍್ಯ ಹೋರಾಟವೊಂದರ ಚಿತ್ರಣದ ಮಲ್ಲಿಗೆಯಮಾಲೆಯನ್ನು ಅಭೂತಪೂರ್ವವಾಗಿ ಹೆಣೆದು ಕನ್ನಡ ಸರಸ್ವತಿಗೆ ಮುಡಿಸಿದ ಯಶಸ್ಸು ಕಾದಂಬರಿಕಾರರಿಗೆ ಸಲ್ಲುತ್ತದೆ. ಲೇಖನಿ ಹಾಗೂ ಲೇಖಕರು ಎಂದೆಂದಿಗೂ ಸೀಮಾತೀತ ಎನ್ನುವುದಕ್ಕೆ ‌ನಿದರ್ಶನದಂತಿದೆ ಈ ಕೃತಿ. ಕಡಲ ಕಿನಾರೆಯ ನಾಡಿನಲ್ಲಿ ಸಂಭವಿಸಿದ ಸಾತಂತ್ರ‍್ಯ ಹೋರಾಟವನ್ನು ಕುರಿತು ಪ್ರಥಮ ದಾಖಲೆಯ ಕೃತಿಯಾಗಿಯೂ 'ದಂಡಿ'ಗೆ ವಿಶೇಷ ಸ್ಥಾನಮಾನವಿದೆ. ನಮ್ಮ ನಾಡಿನ ಪಶ್ಚಿಮದ ಸಾಗರದ ದಂಡೆಯ ಮೇಲೆ ಹರಳುಗಟ್ಟಿದ ಸಾತಂತ್ರ‍್ಯ ಹೋರಾಟದ ಘಟನೆಗಳನ್ನು ಎಳೆಎಳೆಯಾಗಿ ಹೆಕ್ಕಿಕೊಡುವ ದೃಶ್ಯಕಾವ್ಯವೇ ದಂಡಿ ಕಾದಂಬರಿ.
ಅಮಾಯಕರ ಮೇಲೆ ನಡೆದ ವಸಾಹತುಶಾಹಿಯ 
ದೌರ್ಜನ್ಯ, ಉಳುವವರನ್ನೇ ಗುರಿಯಾಗಿಸಿಕೊಂಡ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ, ಹೊರಗಿನ ಶತ್ರುಗಳಿಗಿಂತ ಅಪಾಯಕಾರಿಯಾದ ನಾಡಿನೊಳಗಿನ ವೈರಿಗಳ ಕುತಂತ್ರಗಳು, ಇದೇ ಸರಿಯಾದ ಸಂದರ್ಭವೆಂದು ಬಗೆದು ಬಡವರ ಹೊಟ್ಟೆ ಬಗೆದ ದುರುಳರ ಅಟ್ಟಹಾಸ, ಜೋಳಿಗೆ ಹಾಕಿಕೊಂಡು ತಿರುಗಿದರೆ ಸಾಕು ಬಂಧಿಸಿ ಕೊಲ್ಲುವ ಪರಂಗಿಯವರ ಬಂದೂಕುಗಳ ಮಾರಣಹೋಮ, ವಂದೇಮಾತರಂ ಎಂದವರನ್ನು ಜೈಲಿಗಟ್ಟಿ ಮೂಳೆಗಳನ್ನು ಪುಡಿಮಾಡಿ ಜೀವಂತ ಶವಗಳನ್ನಾಗಿಸುವ ಪರಂಗಿಯವರ ಪಕ್ಷವಹಿಸಿ ಮೆರೆದ ನಮ್ಮವರ ದುರುಳುತನಗಳು ಇವೆಲ್ಲವುಗಳ ಸುತ್ತ ಹೆಣೆದ ಹುತ್ತಗಟ್ಟಿದ ಚಿತ್ತವೇ ಈ ಕಾದಂಬರಿಯ ಮೂಲಸೆಲೆ. ಹಾಲಿನಂತೆಯೇ ಪರಿಶುದ್ಧವಾಗಿರುವ ಹಾಲಕ್ಕಿ‌ ಜನರ ಜೀವನದೊಳಗೆ ವಿಷ ಬೆರೆಸಿ ಕಾಡಿನಿಂದ ಒಕ್ಕಲೆಬ್ಬಿಸುವ ಹುನ್ನಾರದ ವಿರುದ್ಧದ ಪ್ರತಿಭಟನೆಯೂ ಒಂದು ಸಾತಂತ್ರ‍್ಯ ಹೋರಾಟವೇ ಎಂಬ ಕ್ರಾಂತಿಗಿರುವ ಹೊಸ ಆಯಾಮದತ್ತ ಬೊಟ್ಟು ಮಾಡುತ್ತದೆ ಕಾದಂಬರಿಯೊಳಗಿನ ಆಶಯ. ಈ ಕಾದಂಬರಿಯು ವಿಶಾಲ್  ರಾಜ್ ವರ ನಿರ್ದೇಶನದಲ್ಲಿ ಚಲನಚಿತ್ರವಾಗುತ್ತಿರುವ ಈ ಹೊತ್ತಿನಲ್ಲಿ ಈ ಕೃತಿಯೊಂದಿಗಿನ ನನ್ನ ಅನುಸಂಧಾನ ಕೊರೊನಾ ದೊಂದಿಗಿನ ಹೋರಾಟವನ್ನು ಚೈತನ್ಯಪೂರ್ಣಗೊಳಿಸಿದೆ. ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ, ಮನೋಬಲಗಳನ್ನು ವೃದ್ಧಿಸುವಲ್ಲಿ ರೂಪಕವಾಗಿ ಕಾದಂಬರಿಯ ಅಧ್ಯಯನ ಈ ಹೊತ್ತಿನ ಮದ್ದಾಗಿದೆ ಎಂಬುದರಲ್ಲಿ ಅತಿಶಯೋಕ್ತಿಯೇನಲ್ಲ.

    ಕಾದಂಬರಿಕಾರರಾದ ರಾಗಂರವರು "ಈ ನನ್ನ ದಂಡಿ ತುಂಡು ನೆಲದ ಕಥನವಲ್ಲ. ಜಗವೆಂಬ ಕಡಲ ಕುದಿ. 'ದಂಡಿ' ಸತ್ತವರ ಚರಿತ್ರೆಯಲ್ಲ, ವರ್ತಮಾನವಲ್ಲ, ಮುಂದೊಮ್ಮೆ ಇದು ಭವಿಷ್ಯವಾಗುವುದಾದರೆ ಅದು ಗುಣದ ಶಕ್ತಿ ಒಂದರ್ಥದಲ್ಲಿ ಇದು ನಾವು ನಿತ್ಯ ತಿಂದು ಮರೆಯುವ ಉಪ್ಪಿನ ಆತ್ಮಚರಿತ್ರೆ. ಆದರೆ, ಉಪ್ಪೆಂದರೆ ? ಗುಣ ಮತ್ತು ಋಣದ ಹಾಡು. ಈ ಅರ್ಥದಲ್ಲಿ 'ದಂಡಿ' ಇಡಿಯಾದ ಜಗತ್ತಿನಲ್ಲಿ ಚಾಚಿಕೊಂಡ ಮನುಷ್ಯನೆಂಬೋ ಮನುಷ್ಯ  ಧರ್ಮದ ಅನಾವರಣವಷ್ಟೇ. ಗಾಂಧಿಯಾಗುವ ಈ ಮನುಷ್ಯ ಋಣದ ಕಾರಣ ಖಂಡಾಂತರ ಸುತ್ತುತ್ತಾನೆ. ಲೋಕದ ಜೀವನ್ಮರಣದಲ್ಲಿ ಬೆರೆತು ಕಡಲುಕ್ಕಿದಲ್ಲೆಲ್ಲಾ ದಂಡಿ ದಂಡಿಯಾಗಿ ರ‍್ಮವೆಂದರೇನು ? ಋಣವೆಂದರೇನು ? ಮನುಷ್ಯಗುಣವೆಂದರೇನು ? ಎಂದು ಪ್ರಶ್ನೆ-ಪ್ರಜ್ಞೆಗಳ ಸಾಲು ಮರಗಳ ನೆಟ್ಟು ನಮ್ಮ ಸಾವನ್ನೂ ಪ್ರಶ್ನೆಯಾಗಿಸುತ್ತಾನೆ." ಎಂದು ಹಿಡಿಉಪ್ಪನ್ನು , ಚಿಟಿಕೆ ಮಣ್ಣನ್ನು ಹಿಡಿದು  ಅರೆಬೆತ್ತಲೆ ಫಕೀರನೊಬ್ಬ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದವರ ಬುಡವನ್ನೇ ಅಲ್ಲಾಡಿಸಿದ ಚರಿತ್ರೆಯಾಗಿ ದಂಡಿ ಕಾದಂಬರಿ ರೂಪುಗೊಂಡ ಬಗೆಯನ್ನು ಅನೂಹ್ಯವಾಗಿ ಬಣ್ಣಿಸುತ್ತಾರೆ. ‘ದಂಡಿ’ ಈ ಕಾದಂಬರಿಯ ನಾಯಕನ ಹೆಸರು. ಅಹಿಂಸಾತ್ಮಕತೆಯನ್ನೇ ಉಸಿರಾಡುವ ಜನರ ಮಧ್ಯೆ ತರವಲ್ಲದ ಸ್ವರವಾಗಿ ಮೂಡಿಬಂದವನೀತ. ತನ್ನ ಜನರನ್ನು ಭೂತದಂತೆ ಕಾಡಿದ ಲತೀಫ್ ಖಾನ್ ನ ರುಂಡವನ್ನು ಚೆಂಡಾಡಿ ಹಿಂಸೆಯ ದಾರಿಯನ್ನು ಹಿಡಿದ ಉಗ್ರಗಾಮಿಯಾಗಿ ದಾರಿ ತಪ್ಪಿದ ದಂಡಿಯನ್ನು ನಿಲ್ಲಿಸಿ, ಉಪ್ಪಿನ ಕಥೆಯನ್ನು ಹೇಳಿ, ಬಾಯಿಗೆ ಚಿಟಿಕೆ ಉಪ್ಪು ಹಾಕಿ, ಋಣದ ಶಾಂತಿಯ ಹಾದಿಗೆ ತಂದವಳು ತಾಯಿಯಂತಿದ್ದ‌ ರುಕ್ಮಣಿಬಾಯಿ.     ಕರಾವಳಿ ಕರ್ನಾಟಕದ ಮಡಿಲ ಹೋರಾಟಗಳೆಲ್ಲವನ್ನೂ ತನ್ನದೆಂಬಂತೆ ಮಡಿಲು ತುಂಬಿಕೊಂಡು ಸವೆದ ರುಕ್ಮಣಿಬಾಯಿ ತಾಯಿ ಭಾರತಿಯ ಮಗದೊಂದು ಪ್ರತಿರೂಪ.‌ ಹಳಿ ತಪ್ಪಿದ ದಂಡಿಯೆಂಬ ಕುದಿರಕ್ತದ ಒಡಲ ಬಂಡಿಗೆ ರುಕ್ಮಿಣಿಬಾಯಿಯ ನುಡಿಗಡಣವೇ ಕಡೆಗೀಲಾದವು. ಮಲ್ಲಿಗೆಯ ಪರಿಮಳದಂತಿದ್ದ ಒಲುಮೆಯ ಗೆಳತಿ ವಸುಧೆಯ ಹೃದಯಮಿಡಿತ ದಂಡಿಯ ಬಾಳಿನ ಬೆಳಕಾಯಿತು. ದಂಡಿ ಹೊರಡುತ್ತಾನೆ ತಾನೇ ಕಂಡುಕೊಂಡ ಹೋರಾಟದ ಹಾದಿಯೆಡೆ್ಗೆ; ಬಯಕೆಗಳಿಂದ ಬಿಡುಗಡೆಗೊಂಡ ಮುಕ್ತಿಯ ಪಥದೆಡೆಗೆ. ತಾನೊಬ್ಬನೇ ಬೆಳಕನ್ನು ಕಂಡದ್ದಲ್ಲದೇ ನಮಗೆಲ್ಲರಿಗೂ ಬೆಳಕಿನ ಹಾದಿಯನ್ನು ತೋರುವ ನಾಯಕನಾಗಿ ದಂಡಿ ಇಲ್ಲಿ ರೂಪು ಪಡೆಯುವ ಪರಿ ವಿಭಿನ್ನವಾಗಿದೆ.

ಜನಾಂಗವೊಂದು ಜನಾಂಗದಾಚೆಗೆ, ಪ್ರದೇಶವೊಂದು ಪ್ರದೇಶದಾಚೆಗೆ, ಹೋರಾಟವೊಂದು ಹೋರಾಟದಾಚೆಗೆ ವಿಸ್ತರಿಸಿಕೊಂಡ ಸೀಮಾತೀತತೆಯನ್ನು ಅನಾವರಣಗೊಳಿಸುತ್ತದೆ ಕಾದಂಬರಿ. ಇಲ್ಲಿ ಮೈವಡೆದಿರುವ ಹೋರಾಟ ಕೇವಲ ಕರಾವಳಿ ಕರ್ನಾಟಕದ್ದಲ್ಲ, ಅಖಂಡ ಭಾರತದ್ದು, ಅಸೀಮ ಜಗತ್ತಿನದು. ಏಕೆಂದರೆ ಸ್ವಾತಂತ್ರ‍್ಯದ ಸಂಗ್ರಾಮ ಕಾಲಾತೀತ ಹಾಗೂ ಸೀಮಾತೀತ. ಇದು ಭೂತದೊಳಗೆ ಮಣ್ಣಾಗಿ ಹೋಗಿರುವಂತೆಯೇ ವರ್ತಮಾನದೊಳಗೆ ಗುಪ್ತಗಾಮಿನಿಯಾಗಿ, ಭವಿಷ್ಯತ್ತಿನೊಳಗೆ ಕ್ಷೀರಪಥವಾಗಿ  ಗೋಚರಿಸಬಲ್ಲದು. ವರ್ತಮಾನದಲ್ಲಿಯ ಜಗತ್ತಿನ ಯಾವುದೇ ಮೂಲೆಯಲ್ಲಿ ಜರುಗುತ್ತಿರುವ ಬಂಡಾಯದ ಕಹಳೆಯಿರಬಹುದು, ರೈತ ಹೋರಾಟಗಳಿರಬಹುದು, ಕಾರ್ಮಿಕರ  ಪ್ರತಿಭಟನೆಗಳಿರಬಹುದು ಅಲ್ಲಿ ಸತ್ಯದ  ಆಗ್ರಹವಿದ್ದರೆ ಖಂಡಿತವಾಗಿಯೂ ದಂಡಿ ಮುನ್ನಲೆಯಲ್ಲಿದ್ದಾನೆಂದೇ ಅರ್ಥ. ದಂಡಿ ಒಂದು ಐತಿಹಾಸಿಕ ಕಾದಂಬರಿಯಾಗಿದ್ದರೂ ಒಳನೋಟದಲ್ಲಿ ವರ್ತಮಾನದ ತಲ್ಲಣಗಳ ಸಂಕಥನವನ್ನೂ ಹಾಡುತ್ತಲೇ ಸಾಗುತ್ತದೆ. ದಂಡಿ ಕೇವಲ ಚರಿತ್ರೆಯ ಪಾತ್ರವಾಗಿರದೇ ವರ್ತಮಾನದ ಎಚ್ಚರವೂ ಆಗಿದ್ದಾನೆ. ಕಾದಂಬರಿಕಾರರೇ ಉಲ್ಲೇಖಿಸುವ ಹಾಗೆ " ಮಹಾತ್ಮಾ ಗಾಂಧೀಜಿ ಅವರಿಂದಾದಿಯಾಗಿ ಕರ್ನಾಟಕದ ಉತ್ತರ ಕನ್ನಡದ ಟಿ.ಎಸ್. ನಾಯಕ, ರಂಗನಾಥ ದಿವಾಕರ, ಡಾ. ಹರ್ಡೀಕರರ ರಾಷ್ಟ್ರೀಯ ಕಾಳಜಿಗಳು ಕಾದಂಬರಿಯ ನಾಯಕ ದಂಡಿಯಲ್ಲಿ ಸಮ್ಮಿಳಿತಗೊಂಡಿವೆ. ಅವರಂತೆಯೇ  ಈ ನೆಲದ ಉಪ್ಪಿನ ಋಣವನ್ನು ತೀರಿಸಿದ ಧನ್ಯತೆಯನ್ನು ಅನುಭವಿಸುವುದೇ ನಮ್ಮ ನಾಯಕ ದಂಡಿಯ ಉದ್ಧೇಶ. ಈ ಅರ್ಥದಲ್ಲಿ ದಂಡಿ ಸರ್ವಕಾಲಕ್ಕೂ ಸಲ್ಲುವ ನಾಯಕ. ಈತನಿಗೆ ಭೂತದ ಹಂಗಿಲ್ಲ, ವರ್ತಮಾನದ ಬಂಧನವಿಲ್ಲ, ಮತ್ತು ಭವಿಷ್ಯದ ಮಿತಿ ಇಲ್ಲ."
    ಭಾರತೀಯರಿಗೆ ಉಪ್ಪು ಸ್ವಾತಂತ್ರ‍್ಯದ ಸಂಕೇತವಾದಂತೆಯೇ ಹೋರಾಟ ಜೀವನದ ಧ್ಯೇಯವೂ ಆಗಿಹೋಯಿತು. ಭಾಷೆಯ ದೃಷ್ಟಿಯಿಂದ ಕರಾವಳಿ ಕನ್ನಡದ ಸೊಬಗನ್ನು ಇನ್ನೂ ಸ್ವಾರಸ್ಯಕರವಾಗಿ ಹೆಣೆಯಬಹುದಾಗಿತ್ತು. ಕಾದಂಬರಿಯ ಕಥಾಸಂವಿಧಾನವು ನೆಲಮೂಲ ಸಂಸ್ಕೃತಿಯೊಳಗೆ ರೂಪು ತಳೆದಿರಬಹುದಾದ ಕ್ರಾಂತಿಯ ಸ್ವರೂಪವನ್ನು ಆಲಂಗಿಸಿಕೊಂಡು ಕಸುವಿನಿಂದ ಕಂಗೊಳಿಸಿದೆ. ಪಾತ್ರ ವೈವಿಧ್ಯತೆ ಕಥೆಯ ಓಘಕ್ಕೆ ಮೆರಗನ್ನು ತಂದಿದೆ. ಚಳುವಳಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡ ಶ್ಯಾನುಭೋಗ ಹಾಗೂ ರುಕ್ಮಿಣಿಬಾಯಿ ದಂಪತಿ, ನಾಗೇಶ ಹೆಗಡೆಯವರ ಪರಿವಾರ, ದೇಶಾವರಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡ ವಿನಾಯಕ ಭಟ್ಟರು ಹಾಗೂ ವಸುಧೆ, ಚಳುವಳಿಯಲ್ಲಿ ಏನೆಲ್ಲವನ್ನು ಕಳೆದುಕೊಂಡರೂ ಏನೂ ಆಗಿಲ್ಲವೆಂಬಂತೆ ಚೈತನ್ಯದ ಸೇವೆಯನ್ನು ಸಲ್ಲಿಸುವ ಬೊಮ್ಮ, ರಾಕರು, ಸತ್ಯಾಗ್ರಹಕ್ಕಾಗಿ ಸದಾ ಸಿದ್ಧರಾಗಿರುವಂತೆ ಕಾಯುತ್ತಿದ್ದ ರಾಯನಗೌಡ ಮತ್ತು ಸೋಮ್ನಿ, ನಾಗೇಶ ಹೆಗಡೆಯವರ ಅಪಾರ ನಿಧಿಯನ್ನು ರಕ್ಷಿಸಿ ತಾನುಂಡ ಉಪ್ಪಿನ ಋಣವನ್ನು ವಿಭಿನ್ನ ಬಗೆಯಲ್ಲಿ ತೀರಿಸಿ ಮಹಾತ್ಮನಿಂದ ನಮಿಸಲ್ಪಟ್ಟ ಹಸಲರದೇವಿ ಹೀಗೆ ಕರಾವಳಿಯ ನೆಲದ ಹೋರಾಟದ ಪ್ರತಿಮೆಗಳಂತೆ ಮೈತಳೆದು ನಿಂತ ಪಾತ್ರವೈವಿಧ್ಯತೆ ಕಾದಂಬರಿಯನ್ನು ದೃಶ‍್ಯಕಾವ್ಯವಾಗಿಸಿವೆ. ಅರಿತು ನೋಡಿದರೆ ಇವರೆಲ್ಲರೂ ಆಧುನಿಕ ಜಗತ್ತಿನ ಹೋರಾಟಗಳಲ್ಲಿನ ಪ್ರತಿನಿಧಿಗಳೇ ಆಗಿರುವುದನ್ನು ನಾವು ಮನಗಾಣಬಹುದು. ಬಸವಣ್ಣನವರು ತಮ್ಮ ವಚನವೊಂದರಲ್ಲಿ ಅದಂದೇ ಹುಟ್ಟಿತ್ತು ಅದಂದೇ ಹೊಂದಿತ್ತು ಎಂದು ಹಾಡಿದಂತೆ ದಂಡಿಯೂ ಅಂದೇ ಹುಟ್ಟಿ ಅಂದೇ ಯಶಸ್ವಿಯಾಗಿ ಅಂತ್ಯವಾದಂತೆನಿಸಿದರೂ ಕೂಡ ಅದು ಜಗದ ಒಡಲೊಳಗೆ  ನಿರಂತವರಾಗಿ ಜರುಗುತ್ತಿರುವ ಸಂಘರ್ಷದ ಪ್ರತಿಮೆಯಾಗಿಯೂ ನಿಲ್ಲುವ ಕಾಣ್ಕೆಯನ್ನು ಹೊಂದಿದೆ. ಪಾತ್ರಗಳು ಅಂದಂದೇ ಹುಟ್ಟಿ ಅಂದಂದೇ ಮುಗಿದಿದ್ದರೂ ಹೋರಾಟ ಮಾತ್ರ ನಿರಂತರವಾಗಿರುತ್ತದೆ ಎಂಬ ಧ್ವನಿ ದಂಡಿಯ ಪಾತ್ರದ  ಮೂಲಕ ಹೊರಹೊಮ್ಮಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳಂತಹ ಸ್ವಾತಂತ್ರ‍್ಯ ಪೂರ್ವ ಭಾರತದ ರೋಚಕ ಯಾತ್ರೆಯನ್ನು ತನ್ನದೇ ಶೈಲಿಯಲ್ಲಿ ತೆರದಿಡುವ ಕಾದಂಬರಿಯು ಬಾಪೂಜಿಯವರ ಅಂತರಂಗದ ಶೋಧನೆಯಾಗಿರುವ ಸತ್ಯಾಗ್ರಹವು  ಹೇಗೆ ಮಾನವನ ಧರ್ಮವೇ ಆಗಿಹೋಯಿತೆನ್ನುವುದಕ್ಕೆ ದೃಷ್ಟಾಂತಗಳನ್ನೊದಗಿಸುತ್ತದೆ. ಸತ್ಯ, ಅಹಿಂಸೆ, ಹಾಗೂ ಶಾಂತಿ ಎಂಬ ತತ್ವಗಳು ಹೇಗೆ ಲಕ್ಷಾಂತರ ಜನರ ಬದುಕನ್ನು ಒಳಹೊಕ್ಕು ರೂಪಿಸಿದ ಮಂತ್ರವಾದವು ಎನ್ನುವುದರ ನಿರೂಪಣೆ ಕಾದಂಬರಿಯ ಆಶಯಗಳನ್ನು ಇನ್ನಿಲ್ಲದಂತೆ ದೃಢೀಕರಿಸುತ್ತದೆ. ಸರ್ವರಿಗೂ ಸಮಬಾಳು ಎನ್ನುವ ಕುವೆಂಪುರವರ ಉಕ್ತಿಯು ಈ ಕಾದಂಬರಿಯ ಕತೆಯ ಹಿನ್ನೆಲೆಯಲ್ಲಿನ ಭಿತ್ತಿಯಾಗಿ  ಗಮನಸೆಳೆಯುತ್ತದೆ. ಜಾತಿ ಮತ ಭೇದಗಳಿಲ್ಲದೇ ಎಲ್ಲರ ಜೀವನಾಡಿಯಾಗಿರುವ ಉಪ್ಪು ಸ್ವತಂತ್ರಪೂರ್ವ ಭಾರತದ ಅಸ್ಮಿತೆಯಾಗಿ ಹೇಗೆ ಜನರನ್ನು ಒಗ್ಗೂಡಿಸಲು ಕಾರಣವಾಯಿತೆನ್ನುವುದಕ್ಕೆ ದಂಡಿ ಉತ್ತರವಾಗಿ ನಿಲ್ಲುತ್ತದೆ. ಪ್ರಾದೇಶಿಕ ಸಂಸ್ಕೃತಿಯ ತಲ್ಲಣಗಳನ್ನೂ ಅಷ್ಟೇ ಆಪ್ತವಾಗಿ ಕಟ್ಟಿಕೊಡುವ  ಕಾದಂಬರಿಯು ಏಕಕಾಲಕ್ಕೆ ವಿಶ್ವ ಸಂಸ್ಕೃತಿಗೂ ತನ್ನದೇ ಆದ ಕೊಡುಗೆಯನ್ನು ನೀಡುವಂತಿದೆ. ದಂಡಿ ಆಂಗ್ಲರ ವಿರುದ್ಧದ ಬಂಡಾಯದ ಕಥೆಯಾಗಿದ್ದರೂ ನಮ್ಮೊಳಗಿನ ವೈರಿಗಳ ವಿರುದ್ಧದ ಪ್ರತಿಭಟನೆಯಾಗಿಯೂ ಎದುರು ನಿಲ್ಲುತ್ತದೆ.

ರಣಹದ್ದಿನಂತೆ ಜನರನ್ನು ಕುಕ್ಕಿ ತಿನ್ನುವ ದುಷ್ಟನೊಬ್ಬನ ಕೊಲೆಯಿಂದಲೇ ಆರಂಭವಾಗುವ ಕಾದಂಬರಿಯು ಬಂಡಾಯದ ಉತ್ತುಂಗವನ್ನು ಅನುಭವಿಸುವಂತೆ ಮಾಡುತ್ತದೆ. ನಂತರ ಗಂಗಾವಳಿ ನದಿಯಂತೆ ಹರಹನ್ನು ಪಡೆದುಕೊಂಡು ತನ್ನ ಲೋಕವನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ನದಿಯೊಳಗಿನ ಅಲೆಗಳಂತೆ ಪಾತ್ರಗಳು ಏರಿಳಿದು ದಡ ಸೇರುವ ಪರಿಯನ್ನು ಓದಿಯೇ ಆನಂದಿಸಬೇಕು. ಪ್ರವಾಹದಂತೆ ಮುನ್ನುಗ್ಗುವ ನಾಯಕ ದಂಡಿ ಊರೊಳಗೆ ಹೊಕ್ಕು ಸಲ್ಲದ ಪಾತಕವನ್ನು ಮಾಡಿ ಆವೇಶ ಕಡಿಮೆಯಾದಾಗ ಮರಳಿ ತಣ್ಣಗಾಗುವಂತೆ ರೂಪಿತವಾಗಿರುವ ಗುಣಶೀಲತೆಯನ್ನು ಹೊಂದಿದ್ದಾನೆ. ಲತೀಫ್ ಖಾನ್ ಎಂಬ ಮೊಸಳೆಯಂತಹ ನದಿಯೊಳಗಿನ ಶತ್ರುಗಳು ನದಿಗೆ ನೀರಾದವರನ್ನೇ ನುಂಗಿ ನೊಣೆಯುವ ಕ್ರೂರತೆಯನ್ನು ಅಭಿವ್ಯಕ್ತಿಸುವುದರಲ್ಲಿ ಮುಕ್ತಿಯನ್ನು ಕಾಣುತ್ತಾರೆ. ಚಳುವಳಿಕಾರರೆಲ್ಲರೂ ಹರಿಯುವ ಜಲದಂತೆ ಒಂದುಗೂಡಿ ಆಂಗ್ಲರೆಂಬ ವಿಷಗಾಳಿಯ ವಿರುದ್ಧವಾಗಿ ಪ್ರತಿಭಟಿಸುತ್ತಾ ಕಾದಂಬರಿಯುದ್ದಕ್ಕೂ ಗಾಂಧೀಜಿಯವರ ತಾತ್ವಿಕತೆಗನುಗುಣವಾಗಿ ವರ್ತಿ ಸುವುದನ್ನು ಗುರುತಿಸಬಹುದಾಗಿದೆ.  ಕಾದಂಬರಿಯು ತನ್ನಲ್ಲಿರುವ ಸತ್ಯಗಳನ್ನು ಅನಾವರಣಗೊಳಿಸುತ್ತಲೇ ಸ್ವಾತಂತ್ರ‍್ಯ ಹೋರಾಟದ ಸಂಕಥನವನ್ನು ರಾಗಿಸುತ್ತಾ ಸಾಗುವುದರಲ್ಲಿ ಸಂತೃಪ್ತಿಯನ್ನನುಭವಿಸುತ್ತದೆ. ಒಟ್ಟಂದದಲ್ಲಿ ಈ ಕಾದಂಬರಿಯೊಂದು ದಿವ್ಯ ಭಾರತದ ಯಾತ್ರೆ;  ಕ್ರಾಂತಿಯೊಳಗಿನ ಸವ್ಯಸಾಚಿಯರ ಅಕ್ಷಯಪಾತ್ರೆ; ಚಳುವಳಿಯೆಂದು ಹೊರಟವರ ಬಲಿದಾನದ ಜಾತ್ರೆ.


Tuesday 16 February 2021

ಅಮ್ಮಾ ಹಚ್ಚಿದೊಂದು ಹಣತೆ.....

ಅಮ್ಮಾ ಹಚ್ಚಿದೊಂದು ಹಣತೆ  
ಅದು ನಮ್ಮೂರಿನ ಜಾತ್ರೆ ಊರ ಹಬ್ಬವಾಗಿ ನೆರೆಯುತ್ತಿದ್ದ ಸಂದರ್ಭ.  ಊರ ದೇವರ ಜಾತ್ರಾ ಮಹೋತ್ಸವವೆಂದರೆ  ಕೇಳಬೇಕೆ? ಊರಿನಲ್ಲಿ ನಡೆಯುವ ಹನ್ನೆರಡು ಜಾತ್ರೆಗಳಲ್ಲಿಯೇ ಅತಿ ದೊಡ್ಡ ಜಾತ್ರೆಯ ಸಂಭ್ರಮವದು. ಊರಿನಲ್ಲಿಯೇ ೫ ದಿನಗಳ ದೀರ್ಘ ಕಾಲದವರೆಗೆ ನಡೆಯುವ ಮಹಾ ಉತ್ಸವವದು.  ಜಾತ್ರೆಯೆಂದರೆ ಅಂತಿಂಥ ಜಾತ್ರೆಯಲ್ಲ. ಜರುಗುವ ಐದೂ ದಿನಗಳ ರಾತ್ರಿಯಿಡೀ ಸಂಭ್ರಮಿಸಬಲ್ಲ ನಾಟಕ ಕಲಾಪ್ರದರ್ಶನದ ರಸದೌತಣ  ಮನೆ ಮನಗಳಲ್ಲಿಯೂ ತುಂಬಿ ತುಳುಕುತ್ತಿರುತ್ತದೆ. ಜಾತ್ರೆಯ ಹಿಂದಿನ ದಿನವೇ, ಬಣ್ಣಬಣ್ಣದ ಬಾವುಟಗಳನ್ನು ಗರಿಗಳಂತೆ  ಅಳವಡಿಸಿದ ಮುಕುಟವನ್ನು  ರಾಜನ ಪಟ್ಟಾಭಿಷೇಕಕ್ಕಾಗಿ ಸಿದ್ಧಗೊಳಿಸಿದಂತೆ, ರಥದ ಶಿರವನ್ನಲಂಕರಿಸುವ ಸಿದ್ಧತೆಗಳನ್ನು ಕೈಗೊಳ್ಳಲಾಗಿರುತ್ತದೆ. ರಥವೋ ಸುಮಾರು ಮೂವತ್ತು ವರ್ಷಗಳ ಅನುಭವವುಳ್ಳ ಮಹಾರಾಜ. ಜಾತ್ರೆಯ ಸಮಯದಲ್ಲಿ ಇದರ ಅಲಂಕಾರವೂ ರಾಜಗಾಂಭೀರ್ಯದಿಂದ ವಿಹರಿಸುವ ಅರಸನೊಬ್ಬನಿಗೆ ಸಲ್ಲುವಂತೆ ಭೂಷಣವಾಗಿರುವುದು ಈ ಜಾತ್ರೆಯ ವಿಶೇಷತೆಗಳಲ್ಲೊಂದು. ಅಂದು ರಥರಾಜನ ಮೈದುಂಬ ಸ್ವರ್ಣದೊಡವೆಗಳಂತೆ  ಕಂಗೊಳಿಬಲ್ಲ  ಸುವರ್ಣ ಬಣ್ಣದ ಲೇಪನಗಳ ಮಹಾಮೇಳ. ಮಲ್ಲಿಗೆ, ಚೆಂಡು, ಸುಗಂಧಿ, ಗುಲಾಬಿಗಳ ಪುಷ್ಪಮಾಲೆಗಳೆಲ್ಲವೂ ರಥಮನ್ಮಥನ ಮೆರವಣಿಗೆಯೆಂದು ತಾವೇ ಪಾದಯಾತ್ರೆ ಮಾಡುತ್ತಾ ಬಂದು ರಥಕುಮಾರನ ಕೊರಳನ್ನಲಂಕರಿಸಿ ಸಾರ್ಥಕವಾಯಿತು ಇಂದು ತಮ್ಮ ಜನ್ಮವೆಂದು ಜಪಿಸುತ್ತಾ ಒಡಲನ್ನೇ ಮೇಲಿನಿಂದ ಕೆಳಗೆ ಇಳಿಬಿಟ್ಟು ಉಯ್ಯಾಲೆಯಾಡುತ್ತವೆ. ಪರ್ಯಟನೆಗೆಂದು ಹೊರಟ ಈ ಮಹಾರಾಜನ ದರ್ಶನ ಸುಖವೇ ಕಣ್ಣಿಗೊಂದು ವೈಭವದ ಹಬ್ಬ. ಒಡಲನ್ನೇ ನುಂಗುವಂತಹ ಸುವರ್ಣ ಬಣ್ಣದಲ್ಲಿ ಹೊಳೆಯುತ್ತಿರುವ ರೇಷ್ಮೆಯಂತಹ ಅಂಗಿ, ಅದೇ ರಂಗಿನಲ್ಲಿ ಕಂಗೊಳಿಸುತ್ತಿರುವ ಧೋತಿಯನ್ನುಟ್ಟ ಮಧುಮಗನಂತೆ ಬಂಗಾರದ ಬಣ್ಣದಿಂದ ಥಳಥಳಿಸುವ ಹಾಳೆಗಳ ಲೇಪನದಿಂದ ಅಲಂಕೃತವಾಗಿ ಸಾಗುವ ರಥರಾಯನ ಬೀಗುವಿಕೆಯನ್ನೊಮ್ಮೆ ಕಣ್ತುಂಬಿಕೊಂಡೇ ಸವಿಯಬೇಕು. ಹೀಗೆ ಸುರಸುಂದರಾಂಗನಾಗಿ ಮೆರೆಯಲು ರಥನಾಯಕ ತೆಗೆದುಕೊಳ್ಳುವ ಸಮಯ ಬರೋಬ್ಬರಿ ಒಂದು ತಿಂಗಳು. ಮೂವತ್ತು ದಿನಗಳ ಮಾಘಸ್ನಾನಕ್ಕಿಂತ ಮುನ್ನ, ಮೈಮೇಲಿನ ಚಿಕ್ಕಪುಟ್ಟ ಗಾಯಗಳಿಗೆ ಔಷಧಿಯನ್ನು ಸವರುವಂತೆ, ಬಡಿಗರೊಬ್ನರಿಂದ ಕ್ಷೇಮ ಸಮಾಚಾರದ ಕುಶಲೋಪರಿಯೇ ಮೊದಲ ವಾರದ ಪೂರ್ವ ತಯಾರಿ. ರಥಕುಮಾರನ ಮೂರ್ತಿಯೆಂದು ಮೆತ್ತಿಕೊಂಡು ಅವನೊಡಲ ಬಾಹ್ಯ ಹಾಗೂ ಅಂತರಂಗದೊಳಗೆ ಮನೆ ಮಾಡಿದ ಕಣಜಗಳ ಮಣ್ಣಿನ ಗೂಡುಗಳನ್ನೆಲ್ಲಾ ಒಂದೊಂದಾಗಿ ಕೆತ್ತಿ ತೆಗೆದರೆ ಅಲ್ಲಿಗೆ ಪ್ರಾಣ ತುಂಬುವ ಪ್ರಕ್ರಿಯೆಗೊಂದು ಅಧಿಕೃತ ಚಾಲನೆ ದೊರಕಿದಂತಾಗುತ್ತದೆ. ಜಾತ್ರೆ ಮುಗಿದ ಎರಡು ವಾರಗಳ ನಂತರ ಕೆಲಸವಿಲ್ಲದೇ ವಸಂತವಿಡೀ ವಿಶ್ರಾಂತಿಯನ್ನು ಬಯಸಿ ರಥದ ಅರಮನೆಯೊಳಗೆ ಪ್ರವೇಶಿಸುವ ರಥ ಋಷಿಯ ತಪಸ್ಸನ್ನಾಚರಿಸಲು ಯಾರಿಗೆ ತಾನೇ ಸಾಧ್ಯವಾದೀತು ? ಪಾಪ ! ರಾಜಸತ್ತೆಯ ಕಾಲ‌ ಅಂತ್ಯವಾಗಿ ಪ್ರಜಾಪ್ರಭುತ್ವವೇ ಮೆರೆಯುತ್ತಿದೆಯೆಂದು ಅವನಿಗೇನು ಗೊತ್ತು ? ತಪಸ್ಸಿಗೆ ಕುಳಿತ ವಾಲ್ಮೀಕಿ ಮಹರ್ಷಿಯ ಮೈಮೇಲೆ ಮಣ್ಣಿನ ಹುತ್ತವೇ ಸುತ್ತಿಕೊಂಡು ಬಿಡದೇ ಅಪ್ಪಿಕೊಂಡಂತೆ, ರಥಯೋಗಿಯ ಒಡಲಿನೊಳಗೆ ಹಾಗೂ ಹೊರಗೆ ಎಲ್ಲಿ ನೋಡಿದರಲ್ಲಿ ಕಣಜಗಳ ಮಣ್ಣಿನ ಗೂಡುಗಳು ಹಾಗೂ ಚಿಕ್ಕಪುಟ್ಟ ಹಕ್ಕಿಗಳ ಹುಲ್ಲಿನ ಮನೆಗಳೇ ರಾರಾಜಿಸುತ್ತಿರುತ್ತವೆ. ಒಂದು ತಿಂಗಳ ಮುಂಚೆ ತನ್ನರಮನೆಯಿಂದ  ವಾದ್ಯಗೋಷ್ಠಿಗಳ ಮೆರವಣಿಗೆಯ ಸಮ್ಮಾನದಿಂದ ಕರೆದೊಯ್ಯಲ್ಪಡುವ ರಥರಾಜನನ್ನು ಶುಚಿಗೊಳಿಸುವ ಮಜ್ಜನದ ಯಾತ್ರೆಗೂ ಅಂದೇ ಅಧಿಕೃತ ಚಾಲನೆ ಸಿಗುತ್ತದೆ.
ದಿನಕ್ಕೊಂದರಂತೆ ಮಜ್ಜನದ ಕಾರ್ಯಗಳನ್ನೆಸಗುವ ತಂಡವೇ ರಚನೆಯಾಗಿ ಇದಕ್ಕಾಗಿ ಶ್ರಮಿಸುತ್ತಿರುತ್ತದೆ. ಹೀಗೆ ತಿಂಗಳುಗಟ್ಟಲೇ ಸಜ್ಜುಗೊಂಡು, ವರುಷಕ್ಕೊಮ್ಮೆ ದರ್ಶನ ಕೊಡುವ ಈ ರಥಪುರುಷನ ಸಂದರ್ಶನಕ್ಕಾಗಿ ಭಕ್ತಾದಿಗಳೆಲ್ಲರೂ ಮುಗಿಬಿದ್ದು ನಮಿಸಿ ಮೈಮರೆಯುತ್ತಾರೆ. ಸಾಲದೆಂಬಂತೆ ಆ  ರಥಧೀರನ ಅಂತರಂಗದ ಬಾಗಿಲುಗಳನ್ನು ತೆರೆದು ಅಡಿಯಿಂದ ಮುಡಿಯವರೆಗೆ ಹರಿದಾಡಿದಾಗಲೇ  ಮನಸಾರೆ ಅಪ್ಪಿಕೊಂಡಂತಹ ಅನುಭವ ನಮ್ಮದಾಗುತ್ತಿತ್ತು. ಆ ಸಂಭ್ರಮದಿಂದಲೇ ನಮ್ಮ ಜಾತ್ರೆಯ ಉಲ್ಲಾಸಮಯ ಘಳಿಗೆಗಳಿಗೆ ಅಧಿಕೃತ ಆರಂಭವೊಂದು ದಕ್ಕಿದಂತಾಗುತ್ತಿತ್ತು. ತನ್ನ ಮೈಮೇಲಿನ ತುಂಟಾಟ ಹೆಚ್ಚಾದಾಗ ಕೆಲವೊಮ್ಮೆ ತನ್ನೊಡಲೊಳಗಿನ ಗೂಡುಗಳಿಂದ ಕಣಜದ ಕೀಟಗಳನ್ನು ಬಿಟ್ಟು  ಶಿಕ್ಷೆ  ವಿಧಿಸಿರುವುದನ್ನೂ  ಅನುಭವಿಸಿದ್ದೇವೆ. ನಮಗೆ ರಥರಾಮನು ಹೊರಬಂದ ದಿನದಿಂದಲೇ ನಿತ್ಯೋತ್ಸವ. ರಥವೆಂಬ ಯುವರಾಜನನ್ನು ಮಹಾರಾಜನನ್ನಾಗಿ ಪಟ್ಟಾಭಿಷೇಕ ಮಾಡುವ ಕಾರ್ಯಕಾರಣಗಳಲ್ಲಿ ಸರ್ವ ಭಕ್ತಗಣದ ಅಳಿಲುಸೇವೆ ನಿರಂತರವಾಗಿರುತ್ತದೆ. ಹಾಗೆ ತಿಂಗಳಿಡೀ ಭಿನ್ನ ಭಿನ್ನ ಬಗೆಯ ಅಭ್ಯಂಜನಗಳಗೈದು ತಲೆಯ‌ ಮೇಲೊಂದು ಶ್ರೀಕೃಷ್ಣನಂತೆ ಬಾವುಟಗಳ ಗರಿಗಳನ್ನು ಧರಿಸಿದ ಕಿರೀಟವನ್ನು ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ದೃಶ್ಯವನ್ನೊಮ್ಮೆ ಮನದುಂಬಿ ತಣಿಯಲೇಬೇಕು.  ನಮ್ಮೂರಿನಲ್ಲಿಯೇ ಅತ್ಯಂತ ಎತ್ತರದ ರಥರಾಜನೆಂದು ಬಿರುದಾಂಕಿತನೆಂದ ಮೇಲೆ ಎದೆಯುಬ್ಬಿಸಿ ಮುನ್ನಡೆಯುವ ಅದರ ಬೀಗುವಿಕೆಯನ್ನು ಕೇಳಬೇಕೆ ? ಕೈಯ್ಯಲ್ಲಿ ಗಂಟೆಯೊಂದನ್ನು ಹಿಡಿದು ರಥವನ್ನೇರುವ ಪೂಜಾರಿಗಳೂ ಗಡಗಡನೆ ಇವನೊಂದಿಗೆ ಹೆಜ್ಜೆ ಹಾಕಲು ನಡುಗುತ್ತಾರೆಂದರೆ, ರಥರಾಜನ ದಿಟ್ಟ ನಡಿಗೆಯನ್ನೊಮ್ಮೆ ಕಲ್ಪಿಸಿಕೊಳ್ಳಿ. 
 ಈ ರಥಮೋಹನನ ಯಾತ್ರೆಯನ್ನು ಮಧುಮಗಳ ಮದುವೆಗೆ ಹೋಲಿಸಿದರೂ ಅಷ್ಟೇ ಔಚಿತ್ಯಪೂರ್ಣವಾಗಿ ಹೊಂದಿಕೆಯಾಗುತ್ತದೆ ಗಮನಿಸಿ - ಜಾತ್ರೆಯೊಂದು ಮದುವೆಯ ಮಹಾದಿಬ್ಬಣವೆಂಬಂತೆ ಪರಿಭಾವಿಸಿಕೊಂಡಾಗ ರಥರಾಣಿಯನ್ನು ಮಧುಮಗಳನ್ನಾಗಿ ಕಲ್ಪಿಸಿಕೊಳ್ಳಿ. ಜಾತ್ರೆಯೆಂಬ ಮದುವೆಯ ಒಂದು ಮಾಸದ ಮುಂಚೆಯೇ ಮಧುಮಗಳನ್ನು ಕರೆದೊಯ್ಯಲು ಬರುವ ಮೆರವಣಿಗೆಯೇ, ರಥರಾಣಿಯನ್ನು ಅವಳ ಅಂತಃಪುರವಾದ ರಥದಮನೆಯಿಂದ ಮದುವೆ ಮನೆಯೆಡೆಗೆ ಸ್ವಾಗತಿಸುವ ಉತ್ಸವವಾಗಿಬಿಡುತ್ತದೆ. ಮದುವೆಯ ಸಮಾರಂಭವೆಂಬುದು ಕೆಲವೇ ಕ್ಷಣಗಳಲ್ಲಿ ಸಂಪನ್ನಗೊಳ್ಳುತ್ತಿರುವ ಈ ಹೊತ್ತಿನಲ್ಲಿ,
ನಮ್ಮ ಪೂರ್ವಜರ ಮದುವೆಗಳೆಲ್ಲವೂ ಒಂದೊಂದು ತಿಂಗಳ ಅವಧಿಯ ದೀರ್ಘ ಕಾಲದವರೆಗೂ ಸಂಭವಿಸುತ್ತಿದ್ದವು ಎಂಬುದನ್ನು ನೆನೆದರೆ ರೋಮಾಂಚನ ಹಾಗೂ ವಿಸ್ಮಯಗಳೆರಡೂ ಏಕಕಾಲಕ್ಕೆ ಮನದ ಪಟಲಕ್ಕೆ ಬಂದಪ್ಪಳಿಸುತ್ತವೆ. ಅಂಥದ್ದೇ ಪ್ರಾಚೀನ ಮದುವೆಯ ಘಳಿಗೆಗಳನೊಮ್ಮೆ ಸ್ಮರಿಸಿಕೊಂಡು ಬಿಡಿ. ಈಗ ಸರಿಹೊಂದುತ್ತದೆ. ರಥರಾಣಿಯನ್ನು ಹಾಗೆ ಅಂತಃಪುರದಿಂದ ಕರೆದೊಯ್ದು ಮಧುಮಗಳನ್ನಾಗಿ ಪರಿವರ್ತಿಸುವ ಕಾರ್ಯವೀಗ ಸಾಂಗವಾಗಿಯೇ ನೆರವೇರುತ್ತದೆ‌ ಹಂತ ಹಂತವಾಗಿ. ಮದುವೆಯ ದಿನ ಸಮೀಪಿಸಿದ ಹಾಗೆ ಅದಕ್ಕೆ ತಕ್ಕಂತೆ ರಥಷೋಡಶಿಯ ಅಲಂಕಾರವೂ ಉತ್ಕರ್ಷಿಸಲ್ಪಡುತ್ತದೆ. ಮದುವೆಯ ದಿನ ಅಂದರೆ ಜಾತ್ರೆಯ ದಿನ ರೇಷ್ಮೆಯ ಪೀತಾಂಬರವನ್ನುಟ್ಟ ಮಧುಮಗಳ ಶೃಂಗಾರ, ಸಡಗರ  ಒಯ್ಯಾರಗಳಂತೂ ಹೇಳತೀರದು. ಬಗೆ ಬಗೆಯ ಬಣ್ಣದ ಮಣಿಗಳಿಂದ ಹೆಣೆಯಲ್ಪಟ್ಟ ರತ್ನದ ಹಾರಗಳಂತೆ ಕಂಗೊಳಿಸುವ ವೈವಿಧ್ಯಮಯ ಪುಷ್ಪಮಾಲೆಗಳಿಂದಲಕೃತವಾದ ರನ್ನದ ಕೊರಳು ಒಂದೆಡೆಯಾದರೆ ರಥರಾಗಿಣಿಯ ಲಾವಣ್ಯಕ್ಕೆ ಕಲಶದಂತಿರುವ ಬಣ್ಣದ ಹಾಳೆಗಳ ಸೀರೆಯ ಮೆರಗು ಮಗದೊಂದೆಡೆಗೆ. ಹೊರಡುವಾಗ ಸಂಗೀತದ ರಸಾನಂದ ನೀಡಲೆಂದು ರಥರಮಣಿಯ ಉರುಳುವ ಚಕ್ರಪಾದಗಳ ಕೊರಳಿಗೆ ಕಟ್ಟಿದ  ಕಾಲ್ಗೆಜ್ಜೆಗಳ ಮೆರುಗು ಮತ್ತೊಂದೆಡೆಗೆ‌. ವೈವಿಧ್ಯಮಯ ಬಣ್ಣದ ಬಾವುಟಗಳ ಗರಿಗಳಿಂದ ರೂಪುಗೊಂಡ ಬಿದಿರಿನ ಕಿರೀಟಕ್ಕೇ ಮುಕುಟವೆಂಬಂತೆ ಹೊನ್ನಿನ ರಂಗಿನಿಂದ ಮಿಂಚುವ ಕಲಶದ ಶಿಖರ ಮಗದೊಂಡೆದೆಡೆಗೆ.
ಹೀಗೆ ಎತ್ತ ನೋಡಿದರತ್ತ ಮಧುವೆಯಾಗುತ್ತಿರುವ ಮಧುಮಗಳಿಗೂ ಜಾತ್ರೆಯೊಳಗೆ ಯಾತ್ರೆ ಹೊರಡುತ್ತಿರುವ ರಥವಧುವಿಗೂ ಅದೆಂತಹ ಸಾದೃಶ್ಯಗಳಿವೆಯಲ್ಲವೇ ?  ಜಾತ್ರೆಯ ದಿನದ ಮದುವೆಯ ಮೆರವಣಿಗೆ ಮುಗಿದ ನಂತರ ಮತ್ತೆ ಮಧುವಣಗಿತ್ತಿಯನ್ನು ತವರುಮನೆಗೆ ಕಳುಹಿಸುವಂತೆ ರಥಕೋಮಲೆಯನ್ನೂ ಮತ್ತೆ ಆಕೆಯ ಎಂದಿನ ಅಂತಃಪುರದತ್ತ ಕರೆತರಲಾಗುತ್ತದೆ ತಾತ್ಕಾಲಿಕವಾಗಿ. ಇದು ನಮ್ಮೂರಿನ ಮಹಾಮದುವೆಯ ದಿಬ್ಬಣವೂ ಹೌದು,ಮರೆಯಲಾಗದ ಜಾತ್ರೆಯ ಮಹೋತ್ಸವವೂ ಹೌದು. 
ನಮ್ಮೂರಿನ ಹೆಮ್ಮೆಯ ಅರಸನನ್ನು ರಥದ ಸ್ವರೂಪದಲ್ಲಿ ಪ್ರತಿವರ್ಷವೂ ಬಿಡದೇ ಕಣ್ತುಂಬಿಕೊಳ್ಳುವ ಸೌಭಾಗ್ಯ ನನ್ನದು‌. ಇಂದೇಕೋ ಕೋವಿಡ್ ಮಹಾಮಾರಿ ಈ ರಥರಾಜನ ಮೆರವಣಿಗೆಯನ್ನು ಸಹಿಸಲಾಗುತ್ತಿಲ್ಲವೆಂದೆನಿಸಿದೆ. ವೈರಾಣುವಿನ ಅಸೂಯೆಯೇ ಮೇಲುಗೈ ಪಡೆಯುತ್ತಿರುವಂತೆ ಭಾಸವಾಗುತ್ತಿದ್ದರೂ, ವೈರಾಣುವಿನ ಎದೆಯ ಮೇಲೆ ಲಸಿಕೆಯ ಮರಣ ಶಾಸನ ಕೊರೆದು, ಮತ್ತೆ ಪುಟಿದೆದ್ದು ಚರಿಸುವ ಜಪವನ್ನಾಚರಿಸಲು ರಥವೂ ಸನ್ನದ್ಧವಾಗುತ್ತಿದೆ‌. ಬಸವಣ್ಣನವರ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹಾಡಿದಂತೆ ಜಂಗಮವೇ ಆಗಿ ಜನರ ಹೃನ್ಮನಗಳ ಒಳಪೊಕ್ಕು ಸದಾ ಚೈತನ್ಯದ ಸಂಚಲನವನ್ನುಂಟು ಮಾಡುತ್ತಿರುವ ಈ ರಥರಮಣನ ಧೀಃಶಕ್ತಿಗೆಲ್ಲಿಯ ಅಳಿವು ? 
ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಕಟ್ಟೆ ಬಾವಿಗಳುಂಟು
ಶಯನಕ್ಕೆ ಪಾಳು ದೇಗುಲಗಳುಂಟು
ಆತ್ಮಸಂಗಾತಕ್ಕೆ ನೀ ಎನಗುಂಟು ಚೆನ್ನಮಲ್ಲಿಕಾರ್ಜುನ 
ಎಂದು ಹಾಡಿದ ಅಕ್ಕಮಹಾದೇವಿಯಂತೆ ಉತ್ಸವದ ದಿನ ಯಾತ್ರೆ ಹೊರಡುವ ರಥದೇವನೆದುರಿಗೆ ನಿಂತು ಪ್ರಾರ್ಥಿಸುವ ಭಕ್ತರ ಸಂಖ್ಯೆಯಂತೂ ಎಣಿಕೆಗೆ ನಿಲುಕದು. ಹಿಂದೆ ಮಣ್ಣಿನ ರಥಬೀದಿಯಿರುವಾಗ ರಥರಾಜನಂತೂ ದೃಢವಾದ ಹಾಗೂ ಅಷ್ಟೇ ತಾಳ್ಮೆಯ ಚಿಂತನಶೀಲತೆಯ‌ ಹೆಜ್ಜೆಗಳನ್ನು ಹಾಕಿ ಗಾಂಭೀರ್ಯವನ್ನು ಮೆರೆಯುತ್ತಿದ್ದ. ಆದರೀಗ ಮಣ್ಣ ಮೇಲೊಂದು ಅಡಿ ಕಾಂಕ್ರೀಟನ್ನು ಸುರಿದು ಮಾಡಿದ ಜಾರುಬಂಡೆಯಂತಿರುವ ರಥಬೀದಿಯ ಮೇಲೆ ಈ ಬಾರಿ ಅದೆಂತು ಹೆಜ್ಜೆ ಹಾಕುವನೋ ಎಂಬ ಕುತೂಹಲವೂ ನನ್ನಲ್ಲಿ ಮನೆ ಮಾಡಿದೆ. ಕಳೆದ ಬಾರಿ ಇದೇ ಕಾಂಕ್ರೀಟ್ ಬೀದಿಯಲ್ಲಿ ಹೇಳದೇ ಓಡಿಹೋಗುತ್ತಿದ್ದ ರಥರಾಜನನ್ನು ತಡೆದು ನಿಲ್ಲಿಸುವುದೇ ಹರಸಾಹಸವಾಗಿತ್ತು. ಆಧುನಿಕತೆಯ  ಹಾದಿಯಿಂದಾಗಿ ಗಾಂಭೀರ್ಯದ ಹೆಜ್ಜೆಗಳೆಲ್ಲವೂ ಮಾಯವಾಗಿ ತಪ್ಪಿಸಿಕೊಂಡು ಓಡುವ ಕಳ್ಳನಂತಾಗಿತ್ತು ರಥದರಸನ ಸ್ಥಿತಿ. ಕೆಂಪುಹಾಸಿನ ( ರೆಡ್ ಕಾರ್ಪೆಟ್ ) ಸ್ವಾಗತ ಕೋರುತ್ತಿದ್ದ
ಕೆಮ್ಮಣ್ಣಿನ ( ಜಾತ್ರೆಗೆಂದು ಹಾಸುವ ಕೆಂಪು ಗೊರಸು ಮಣ್ಣು) ಹೊದಿಕೆಯ ಕಳೆಯೇ ಅನನ್ಯವಾಗಿರುತ್ತಿತ್ತು. ರಥೋತ್ಸವಕ್ಕಾಗಿ ಬೀದಿಗಾಗಿ ಹೊದಿಸಿದ ಕೆಮ್ಮಣ್ಣು ರಥಬೀದಿಯ ಸಹಜ ಸೌಂದರ್ಯವನ್ನು ಇಮ್ಮಡಿಸಿ, ತನ್ನ ಮಡಿಲಿನೊಳಗೆ ಕುಳಿತು, ಹೊರಳಿ ಆಡುವಂತೆ ಓಣಿಯ ಮಕ್ಕಳನ್ನೆಲ್ಲಾ ಕರೆದು ಆಟವಾಡಿಸುತ್ತಿತ್ತು ಮಹೋತ್ಸವದ ನೆಪದಲ್ಲಿ. ಇದೂ ಕೂಡ ಜಾತ್ರೆಯ ಭಾಗವೇ. ಮಹೋತ್ಸವ ತರುವ ಆನಂದದ ಮಗದೊಂದು ವಿಲಾಸವಿದು. ಆದರೆ ಇಂದು
ಕಾಲಿಟ್ಟರೆ ಪಾದಗಳಿಗೆ ಬರೆಯಿಡುವ ಕಾಂಕ್ರಿಟ್ ರಸ್ತೆಯ ಮೇಲೆ ಕೂಸುಗಳು ಹೊರಳಾಡಿ ಆಡುವುದಿರಲಿ ಹೆಜ್ಜೆ ಹಾಕುವುದೇ ದುಸ್ತರವಾಗಿಬಿಟ್ಟಿದೆ. ಕಾಲಾಯ ತಸ್ಮೈನಮಃ.
ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.
ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆ
ಒಸಗೆ ವೈಭವಂಗಳು ತಾನೆ ಕಾಣಿರೊ.
ಎಂಬ ಷಣ್ಮುಖಸ್ವಾಮಿಯವರ ವಚನದಂತೆ  ನಮ್ಮ ಅಂತರಂಗದೊಳಗೆ ಜರುಗುವ ನಿತ್ಯ ಜಾತ್ರೆ ಉತ್ಸವಗಳನ್ನು ಮರೆತು, ಬಹಿರಂಗದೊಳಗಿನ ಸಂಭ್ರಮವನ್ನು ಹಬ್ಬಹರಿದಿನಗಳಲ್ಲಿ ಶೋಧಿಸಲು ತುಡಿಯುವ ನಾವು ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಪಯಣವನ್ನೇ ನಿತ್ಯೋತ್ಸವವೆಂದು  ಭ್ರಮೆಯಲ್ಲಿ ಸುಖಿಸುತ್ತಿದ್ದೇವೆ. ನನ್ನೊಳಗೆ ಕೆಲವೊಮ್ಮೆ ದಕ್ಕದ  ಪರಮಾನಂದದ ಜಾತ್ರೆಯನ್ನು  ನಾನೀಗ ಮನೆಯ‌ ಮುಂದಿನ ರಥೋತ್ಸವದಲ್ಲಿ ಹುಡುಕಿ ಆನಂದಿಸುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ. ಒಂದು ಬಾರಿ ಆಕಸ್ಮಾತ್ ಆಗಿ ಭೇಟಿಯಾದ ಜಾತ್ರಾ ಪ್ರಹಸನವೊಂದನ್ನು ಹೇಳುತ್ತೇನೆ ಕೇಳಿಬಿಡಿ - ಐದು ದಿನಗಳ ಮಹೋತ್ಸವವಾದುದರಿಂದ, ನಮ್ಮೂರಿನ ಓಣಿ, ಓಣಿಗೊಂದು ನಿಯಮಿತವಾಗಿರುವ  ಮ್ಯಾಳ ( ನಾಟ್ಯ ಸಂಘ)ಗಳ ನಡುವೆ ನಾಟಕ ಪ್ರದರ್ಶನದ ಆರೋಗ್ಯಕರ ಸ್ಪರ್ಧೆಯೊಂದು ತಾನೇ ತಾನಾಗಿ ಉದ್ಭವವಾಗುತ್ತಿತ್ತು. ಕೆಲವೊಮ್ಮೆ ಅನಾರೋಗ್ಯಕರವಾಗಿಯೂ ಪರಿಣಮಿಸಿದ್ದನ್ನು ನಾನು ಕಂಡಿದ್ದೇನೆ. ದಿನಕ್ಕೊಂದು ಮ್ಯಾಳದ ನಾಟಕವೆಂಬಂತೆ ಒಟ್ಟು ಐದು ದಿನಗಳ ರಂಗೋತ್ಸವವೂ ಜಾತ್ರೆಯೊಡನೆ ತಾನಾಗಿಯೇ ಮೈದಳೆಯುವುದು ವಾಡಿಕೆ. 
           ಐದು ಮ್ಯಾಳ (ನಾಟ್ಯ ಸಂಘ)  ಗಳಲ್ಲಿ ಯಾವುದೋ ಒಂದು ಮ್ಯಾಳದ ನಾಟಕದ ಬಗ್ಗೆ ಯಾರಾದರೂ " ಎಂಥಾ ಅದ್ಭುತ ನಾಟಕಾ ಮಾಡಿದ್ರು ಆ ಮ್ಯಾಳದವ್ರು " ಎಂದು ಹೊಗಳಿಬಿಟ್ಟರೆ ಸಾಕು ಆಭಾಸವಾದರೂ ಚಿಂತೆಯಿಲ್ಲ, ಮಾರನೇ ದಿನದ ಬೇರೊಂದು ಮ್ಯಾಳದ ನಾಟಕದ ಮೃದು ಸ್ವಭಾವದ ಅಳುಮುಂಜಿ ಪಾತ್ರಗಳಲ್ಲಿಯೂ ರೊಚ್ಚು ಕೆಚ್ಚು ವೀರಾವೇಶ ತುಂಬಿ ರಂಗಸಜ್ಜಿಕೆ ನಡುಗಿಬಿಡುತ್ತಿತ್ತು.  ರಂಗೋತ್ಸವದ ಮೂರನೇ ದಿನ ಒಂದು ಮ್ಯಾಳದ ಯಾವುದೋ ನಾಟಕ ಪ್ರದರ್ಶನವೊಂದು ನಿಗದಿಯಾಗಿತ್ತು. ಯಥಾಪ್ರಕಾರ ಜನರೆಲ್ಲಾ ಜಾತ್ರೆಯ ನಿಮಿತ್ಯ ಮಧ್ಯಾಹ್ನ ಮಾಡಿದ ಹೋಳಿಗೆಯನ್ನೊ ಅಥವಾ ಗೋಧಿಹುಗ್ಗಿಯನ್ನೊ, ಮಗದೊಮ್ಮೆ ರಾತ್ರಿಯ ಕವಳವಾಗಿ ಬಿಗಿದು ಚಳಿಯಿಂದ ತಪ್ಪಿಸಿಕೊಳ್ಳಲೊಂದು ಶಾಲು ಹೊದ್ದು , ರಂಗಸಜ್ಜಿಕೆಯ‌‌ ಮುಂದೆ ಆರು ಚದರ ಅಡಿ ಜಾಗ ಹಿಡಿದು ಕುಳಿತರೆ ಮುಗಿಯಿತು. ನಾಟಕಕ್ಕೆ ಮಂಗಳ ಹಾಡುವವರೆಗೂ ಇಲ್ಲವೇ ಪಾತ್ರಧಾರಿಗಳೇ ಮಾತು ತಪ್ಪಿ ಎಬ್ಬಿಸುವವರೆಗೂ ಆ ಸ್ಥಳ ಅವರವರ ಹೆಸರಿಗೆ ನೋಂದಣಿಯಾದಂತೆಯೇ‌. ನಾಂದಿ ಹಾಡಲು ಬಣ್ಣದೊಳಗಿನ ನಟರು ಬಂದು ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾಗಿ ಉತ್ಸಾಹ ತುಂಬಿಕೊಂಡು, ಎದೆಯ ನಡುಕವೂ  ಕೂಡ ಇವರ ಧ್ವನಿಗೆ ಹೆದರಿ ಹೊರಹೋಗುವಂತೆ ಏರುದನಿಯಿಂದಲೇ ಪ್ರಸ್ತುತಪಡಿಸಿದರು. ಅದುವರೆಗೂ ನಾಟಕವಿನ್ನೂ ಆರಂಭವಾಗಿಲ್ಲವೆಂದು  ಮನೆಯಲ್ಲಿಯೇ ಚಡಪಡಿಸುತ್ತಿದ್ದ ಉಳಿದ ಸಾಮಾಜಿಕರೆಲ್ಲರೂ ಶಸ್ತ್ರಸಜ್ಜಿತರಾಗಿ  ಯುದ್ದೋಪಾದಿಯಲ್ಲಿ ಧಾವಿಸಿ ನೆರೆದು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು‌. ರಂಗಪ್ರವೇಶ ಮಾಡಿ, ಗಜಮುಖನೇ ಗಣಪತಿಯೇ ನಿನಗೆ ವಂದನೆ ಎಂದು ಗಣಪತಿಯನ್ನು ಸ್ತುತಿಸಿದ ನಟಿಯು ಆರತಿ ಹಿಡಿದು ಕುರ್ಚಿಯಲ್ಲಿ ಕುಳಿತ ಗಜಮುಖನಿಗೆ ಹಾಗೂ ದೈವಸಮಾನರಾದ ಸಾಮಾಜಿಕರಿಗೆ ಬೆಳಗಿ ಒಂದೆರಡು ಮಾತು ಹೇಳಿ ನಾಟಕದ ಕಥೆಗೆ ಶಾಸ್ತ್ರೋಕ್ತ ಆರಂಭವನ್ನೊದಗಿಸಿದಳು. ನಂತರ ನಿಜವಾದ ನಾಟಕವೀಗ ಆರಂಭವಾಯಿತು. ಆದಿಪುರಾಣದಲ್ಲಿ
ಪಂಪ ಬಣ್ಣಿಸುವ  "ಕರ್ಬಿನ ಬಿಲ್ಲಿಂ ಮಸೆದ ಮದನನಲರ್ಗಣೆ ಬರ್ದುಕಿತ್ತೆನಿಸುತ್ತೊಳಪೊಕ್ಕಳ್  ಭೋಂಕೆನೆ ನಿಖಿಳಜನಾಂತರಂಗಮಂ ರಂಗಮುಂ" ಎನ್ನುವಂತೆ ಇಲ್ಲಿಯೂ ಇಂದ್ರಲೋಕದ ನೀಲಾಂಜನೆಯಂತಹ ನರ್ತಕಿಯೊಬ್ಬಳು ರಂಗವನ್ನೂ ಜನರ ಅಂತರಂಗವನ್ನೂ ಮದನನ ಪುಷ್ಲಬಾಣದಂತೆ ಏಕಕಾಲಕ್ಕೇ ಹೊಕ್ಕುಬಿಡುವಂತೆ ರಂಗಪ್ರವೇಶವನ್ನು ಪಡೆದಳು. ಶೃಂಗಾರ ರಸದೊಳಗೆ ಅದ್ದಿ ತೆಗೆದಂತಿದ್ದ ನಟಿಯತ್ತಲೇ ಎಲ್ಲರ ಚಿತ್ತ. ಬಿಟ್ಟಗಣ್ಣು ಬಿಟ್ಟಂತೆ ಬಿಟ್ಟ ಬಾಯಿ ಬಿಟ್ಟಂತೆ ಕಣ್ಣೆವೆಯಿಕ್ಕದೇ ದಿಟ್ಟಿಸುತ್ತಿದ್ದ ನೋಟಗಳನ್ನು,  ಕಲಾಕೋವಿದೆಯ ಮುಕ್ತಶೈಲಿಯ ನೃತ್ಯ ಲೀಲಾಜಾಲವಾಗಿ ಅಪಹರಿಸಿತ್ತು. ಹೋ ಎಂದು ಶಿಳ್ಳೆ ಹಾಕುತ್ತಿದ್ದ ಜನರ ಗಮನವೆಲ್ಲಾ ಅವಳ ಮೇಲೆಯೇ ಕೆಂದ್ರೀಕೃತವಾಗಿತ್ತು. ಬಗೆ ಬಗೆಯ ಬೆಡಗಿನ ಭಂಗಿಗಳ ಮೂಲಕ ನಾಟ್ಯ ರಂಗೇರುತ್ತಿತ್ತು. ಅಷ್ಟರಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮಧ್ಯೆ ಒಮ್ಮಿಂದೊಮ್ಮೆಲೇ ಗಲಾಟೆ ಶುರುವಾಯಿತು. ಗಲಾಟೆಯು ತರಂಗವಾಗಿ ಅದರ ಕೇಂದ್ರದಿಂದ ಸುತ್ತಲೂ ವಿಸ್ತರಿಸುತ್ತಾ ಬಂದು ವೇದಿಕೆಗೂ ತಟ್ಟಿತು. ಕಡೆಗೆ ನಾಟ್ಯ ನಿಲ್ಲುವವರೆಗೂ ಮುಂದುವರೆಯಿತು. ಜನರೆಲ್ಲಾ ಚೆದುರಿ ಹಾರಿದರು. ಕೆಲವರು ಅಪ್ಪಳಿಸಿ ಓಡಲಾರಂಭಿಸಿದರು. ಇನ್ನೂ ಕೆಲರು ಜಿಗಿದು ಮನೆಯ ಜಗುಲಿಗಳ ಮೇಲೆ ಹಾರಿ ಸರಿದು ನಿಂತರು. ಏನಾಯಿತೆಂದು ತಿಳಿಯುವಷ್ಟರಲ್ಲಿ ನಾಟಕ ನಿಂತು ಹೋಯಿತು. ಜನರನ್ಜು ಭೋಗಾನಂದದ ಔನ್ನತ್ಯಕ್ಕೇರಿಸುವ ಸಂದರ್ಭದಲ್ಲಿಯೇ ಇದೆಂತಹ ಅನಾಹುತವಾಯಿತು, ಛೇ ರಸಭಂಗವಾಯಿತೆಂದುಕೊಂಡು ಜನರು ಜೋಲುಮೋರೆ ಹಾಕಿಕೊಂಡು ಲೊಚಗುಟ್ಟಿದರು‌.  ಅಲ್ಲಿಯೇ ಇದ್ದ ಪರಿಚಯದವರೊಬ್ಬರನ್ನು ಕೇಳಿದೆ‌ - " ಯಾಕೀ ಗಲಾಟೆ ಏನಾಯ್ತಂತೆ?"" ನಾಗರಹಾವು ಬಂತಂತೆ..." ಕೇಳಿದೊಡನೆಯೇ ನನ್ನೆದೆಯೂ ನಡುಗಿಹೋಯಿತು. ಇದ್ದಕ್ಕಿದ್ದಂತೆ ಚಳಿ ಹೆಚ್ಚಾಯಿತು. ಕಾಲಡಿಯೇ ಹಾದು ಹೋದಂತೆನಿಸಿ ಭಯಗೊಂಡು ದೂರ ಸರಿದು ನಿಂತೆ. ಹೆಣ್ಣುಮಕ್ಕಳು, ಕೂಸುಗಳೆಲ್ಲಾ ಹೋ ಎಂದು ಚೀರಲಾರಂಭಿಸಿದವು. 
   ಅಬಾಲವೃದ್ಧರಾದಿಯಾಗಿ ಪ್ರೇಕ್ಷಕರೆಲ್ಲರೂ ದಿಕ್ಕೆಟ್ಟು ಓಡಲಾರಂಭಿಸಿದರು. ಅತ್ತಿಯ ಹಣ್ಣಿನೊಳಗಿನ ಹುಳುವೂ ಕೂಡ ನುಸುಳಲು ಜಾಗವಿಲ್ಲದಂತೆ ತುಂಬಿ ಹೋಗಿದ್ದ ರಂಗಸಭಾಂಗಣದಲ್ಲಿ ನಾಲ್ಕಡಿಯುದ್ದದ ಕಾಳಕೂಟ ಹೇಗೆ ಸುಳಿಯಿತೋ ಗೊತ್ತೇ ಆಗಲಿಲ್ಲ!! ನೃತ್ಯದ ರಸದೌತಣದಲ್ಲಿ ತಲ್ಲೀನವಾಗಿ ತುಂಬಿ ತುಳುಕುತ್ತಿದ್ದ ರಸಿಕರ  ಸಭಾ ಮಂಟಪವೀಗ ಖಾಲಿ ಖಾಲಿ. ಸಂಘಟಕರಿಗೂ ದಿಗಿಲುಬಡಿಯಿತು. ಇದೇನು ಅಪಶಕುನವಾಯಿತು ಎಂದು ಕಳವಳಗೊಂಡರು. ಆಮೇಲೆ ಗೊತ್ತಾಯಿತು, ಯಾವ ನಾಗರಹಾವೂ ಇಲ್ಲ. ಈ ಮ್ಯಾಳದ ನಾಟಕದ ಸೌಂದರ್ಯವನ್ನು ಸೈರಿಸದ ಕೆಲವು ಕಿಡಿಗೇಡಿಗಳು ಸುಳ್ಳೇ ಸುದ್ದಿಯನ್ನು ಹಬ್ಬಿಸಿ ನಾಟಕಕ್ಕೆ ಅಡಚಣೆ ಮಾಡಿದರು ಎಂಬುದು. ಅಂದಿನ ನಾಟಕವನ್ನು ಪ್ರಯೋಗಿಸುತ್ತಿದ್ದ ಆ ಸಂಘದ ಗುಪ್ತಚರ ಇಲಾಖೆ ಈ ಆಫ್ ದಿ ರೆಕಾರ್ಡ ವಿಚಾರವನ್ನು ಬಯಲೆಗೆಳೆಯಿತು. ಸತ್ಯ ಗೊತ್ತಾಗಿ ಜನ ನಿಟ್ಟುಸಿರು ಬಿಟ್ಟರು. ರಂಗ ಪ್ರೇಕ್ಷಕರಿಗೀಗ ಮತ್ತೊಮ್ಮೆ ಸುವರ್ಣ ಭಾಗ್ಯ. ಪಂಪಭಾರತದಲ್ಲಿ ನೀಲಾಂಜನೆಯು ಒಂದು ಬಾರಿ ಮಾತ್ರ ರಂಗವನ್ನು ಹೊಕ್ಕಿದ್ದರೆ, ಈ ನಾಟಕದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಜವನಿಕೆಯ ಮರೆಯಿಂದ ಮಗದೊಮ್ಮೆ ರಂಗಪ್ರವೇಶವನ್ನು ಮಾಡಬೇಕಾಯಿತು ನಮ್ಮೂರಿನ ಈ ಆಧುನಿಕ ನೀಲಾಂಜನೆ.  ನೀಲಾಂಜನೆಯ ನೃತ್ಯವನ್ಜು ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದ ಪ್ರೇಕ್ಷಕ ಗಣ ಹಾವಿನ ಸುದ್ದಿ ಸುಳ್ಳೆಂದು ತಿಳಿದು ತಕ್ಷಣವೇ ರಂಗಮಂಟಪದೆದುರು ಕಾತರಿಸಿ ನೆರೆದರು. ಆದರೂ ಹೀಗೆ ಎಲ್ಲವೂ ಸರಿಯಾಗಿ ನಾಟ್ಯ ಆರಂಭವಾಗಬೇಕಾದರೆ ಸುಮಾರು ಎರಡು ಗಂಟೆ ಕಳೆಯಿತು. ಸಮಯದ ಕೊರತೆಯಾಯಿತೆಂದು ಮೂರ್ನಾಲ್ಕು ದೃಶ್ಯಗಳನ್ನು ಕಡಿತಗೊಳಿಸಿಕೊಂಡು ಅಂತೂ ಯಶಸ್ವಿಯಾದ ಪ್ರದರ್ಶನ ಕಂಡಿತು ಆ ನಾಟಕ.

    ಇದೇ ಜಾತ್ರೆಯೊಂದಿಗೆ ಅವಿನಾಭಾವ ನಂಟನ್ನು ಹೊಂದಿರುವ ಬಾಲ್ಯದ ಪ್ರಸಂಗವೊಂದನ್ನು ಹೇಳುತ್ತೇನೆ ಕೇಳಿ - " ನಾನಗಾಗ ಐದೋ ಅಥವಾ ಆರರ ಹರೆಯ. ಈಗಿನಂತೆ ಕಿವಿಗಡಚಿಕ್ಕುವ ಧ್ವನಿವರ್ಧಕ ಸೇರಿ ರಂಗಪರಿಕರಗಳ ಕೊರತೆಯಿದ್ದರೂ, ತಕ್ಕಮಟ್ಟಿನ ರಂಗಪ್ರಯೋಗಗಳು ಜನಮನವನ್ನು ಸೆಳೆದಿದ್ದ ಕಾಲಘಟ್ಟವದು. ಅಂದರೆ ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಪ್ರಸಂಗವಿದು. ಜಾತ್ರೆಯ ಮೂರನೇಯ ದಿನ . ಐದು ಮ್ಯಾಳ ( ನಾಟ್ಯ ಸಂಘ)ಗಳಲ್ಲಿ ಮೂರನೇಯ ಸಂಘದ ನಾಟಕವು ಅಯೋಜನೆಯಾಗಿತ್ತು. ನಮ್ಮ ಮನೆಯವರೆಲ್ಲರೂ, ನಾನಂದು ನಾಟಕದ ಸಮಯಕ್ಕೆ ನಿದ್ದೆ ಮಾಡುತ್ತಿದ್ದುದರಿಂದ ನನ್ನನ್ನು ಬಿಟ್ಟು ನಾಟಕ ನೋಡಲು ಹೋಗಿದ್ದರು. ಒಂದೇ ಒಂದೇ ದೀಪವಿಲ್ಲದ, ಕನಿಷ್ಠ ಕಂದೀಲಿನ ಬೆಳಕೂ ಇಲ್ಲದ ಖಗ್ರಾಸ ಕತ್ತಲೆಯ ನಡುಮನೆಯಲ್ಲಿ ನಾನೊಬ್ಬ ತೊಟ್ಟಿಲಲ್ಲಿ ಮಲಗಿಕೊಂಡಿದ್ದೆ‌. ನಿದ್ರಾದೇವಿಯ ಲೋಕವೇ ಹಾಗೆ. ಆ ಮಾಯೆ ಸುತ್ತಿಕೊಂಡ ಮೇಲೆ ಇನ್ನಾವ ಕತ್ತಲು ಬೆಳಕಿನ ಪ್ರಶ್ನೆ ಎದುರಾಗಬಲ್ಲದು ಹೇಳಿ ? ಸಾಧ್ಯವೇ ಇರಲಿಲ್ಲ. ಯಾವುದರ ಪರಿವೆಯಿಲ್ಲದೇ ತಾಯಿ ಮಲಗಿಸಿದಲ್ಲೇ ತಣ್ಣಗೆ ಪರವಶನಾಗಿದ್ದೆ. ಮಲಗಿಕೊಂಡಿದ್ದಾನೆಂದು ತಿಳಿದು ಹೊರಗೆ ಚಿಲುಕ ಹಾಕಿಕೊಂಡು, ನಾಟಕದ ರುಚಿ ಸವಿಯುಣ್ಣಲು ಹೋದವರು ನಾಟಕ ಮುಗಿಯದೇ ಹೇಗೆ ಮರಳಬಲ್ಲರು ?. ಅದು ಮಧ್ಯರಾತ್ರಿಯ ಸಮಯ. ಕಾಲದ ಅರಿವಿಲ್ಲದಿದ್ದ ನನಗೆ ಒಮ್ಮಿಂದೊಮ್ಮೆಲೆ ಎಚ್ಚರವಾಯಿತು. ಕಣ್ಣು ತೆಗೆದು ನೋಡಿದೆ ಏನೂ ಕಾಣಿಸುತ್ತಿಲ್ಲ. ನಾನು ತೊಟ್ಟಿಲಲ್ಲಿದ್ದೇನೆ ಎಂಬುದಷ್ಟರ ಅರಿವನ್ನು ಹೊರತುಪಡಿಸಿ ಇನ್ನಾವುದೂ ಗಮನಕ್ಕೆ ಬರುತ್ತಿಲ್ಲ. ಕಣ್ಣುಜ್ಜಿಕೊಂಡು ನೋಡಿದೆ ಆಗಲೂ ಏನೂ ಕಾಣಲಿಲ್ಲ. ದಟ್ಟವಾದ ಕತ್ತಲೆಯ ಕರಾಳ ಕಪ್ಪು ಕಣ್ಷಿಗೆ ರಾಚುತ್ತಿತ್ತು. ಕಣ್ಣಿದ್ದರೂ ಕುರುಡನಾದೆ ಎಂದೆನಿಸಿತು. ಮಗದೊಮ್ಮೆ ಕಣ್ಣುಜ್ಜಿಕೊಂಡು ಏನಾದರೂ ಕಾಣುವುದೇ ಎಂದು ನೋಡಲೆತ್ನಿಸಿದೆ. ಬದಲಾಗಲಿಲ್ಲ ದೃಶ್ಯ. ಗರಬಡಿದವರಂತೆ ದಿಗ್ಗನೆ ಎದ್ದು ಕುಳಿತೆ. ಕತ್ತಲೆಯೊಂದನ್ನು ಹೊರತುಪಡಿಸಿ ಇನ್ನಾರ ಸುಳಿವೂ ಅಲ್ಲಿರಲಿಲ್ಲ. ಒಂದು ಕ್ಷಣ ಬೆಚ್ಚಿಬಿದ್ದೆ.‌ ಬೆವರೊಡೆಯಿತು ಒಡಲ ತುಂಬ.  ಎತ್ತ ನೋಡಿದರತ್ತ ಕತ್ತಲೆಯೇ. ಕತ್ತಲೆಯೆಂದರೆ ಮಾರುದೂರವಿರುತ್ತಿದ್ದವನೇ ಈಗ ಅದರ ಮಡಿಲಲ್ಲಿ ಎಂದರೆ ಹೇಗಾಗಿರಬೇಡ ನನ್ನ ಪರಿಸ್ಥಿತಿ ? ಭಯಾನಕತೆಯನ್ನು ಕಲ್ಪಿಸಿಕೊಳ್ಳಲೂ ಈಗ ಸಮಯವಿಲ್ಲ. ನಡುಗಿಹೋದೆ. ಏನೊಂದು ತೋಚದೇ ಅಳಲು ಶುರುವಿಟ್ಟುಕೊಂಡೆ. ಯಾರೂ ಇಲ್ಲದ ಮನೆಯಲ್ಲಿ ಅತ್ತರೂ ಅಷ್ಟೇ, ನಕ್ಕರೂ ಅಷ್ಟೇ.  ಚೀರಿದೆ. ಬಿಕ್ಕಿ ಬಿಕ್ಕಿದೆ; ಒದ್ದಾಡಿದೆ. ಯಾರೊಬ್ಬರೂ ಸುಳಿಯದಾದಾಗ ಭಯದಿಂದ ಮತ್ತಷ್ಟು ತಲ್ಲಣಿಸಿದೆ. ಸೋತು ಸುಸ್ತಾಗಿ ಹೋದೆ. ಕತ್ತಲೆಯೊಂದೇ ತನಗೀಗ ಜೊತೆಗಾರನೆಂದು ಅಳುವುದನ್ನು ನಿಲ್ಲಿಸಿದೆ. ತೊಟ್ಟಿಲನಿಂದ ನಿಧಾನವಾಗಿ ಕೆಳಗುರುಳಿದೆ. ನೆಲ ಸಿಕ್ಕಿತು. ಕೈಗೆ ಏನಾದರೂ ಸಿಗುವುದೇ ಆಧಾರವಾಗಿ ಎಂದು ಕೈಯ್ಯಾಡಿಸಿದೆ. ಸೆಗಣಿಯ ನೆಲದ ಹುಡಿಯಷ್ಟೇ ದಕ್ಕಿದ ಪಾಲು. ಏನು ಮಾಡುವುದು ಏನೊಂದೂ ಹೊಳೆಯುತ್ತಿಲ್ಲ.
ಎದ್ದು ನಿಲ್ಲಲೂ ಧೈರ್ಯ ಸಾಲದೇ ಮಲಗಿದಲ್ಲಿಂದಲೇ ಅಂಬೆಗಾಲಿಡುತ್ತಾ
"ದಾರಿ ಯಾವುದಯ್ಯ" ಎಂದು ಹೊರಟೆ. ನಾನು ಅನುಭವಿಸಿದ ಭಯಂಕರ ಘಟನೆಗಳಲ್ಲಿ ಇದೂ ಒಂದು. ಕೊನೆಗೆ ಯಾವುದೋ ಒಂದು ದಿಕ್ಕಿಗೆ ಅಂಬೆಗಾಲಿನ ಹೆಜ್ಜೆ ಗಳನ್ನಿಟ್ಟುಕೊಂಡೇ ಸಾಗಿದೆ. ಆಗಿನ್ನೂ ನಮ್ಮ ಮನೆಯಲ್ಲಿ ಕೈಮಗ್ಗಗಳಿದ್ದವು‌. ( Hand Looms). ನಾನು ನಡೆಯುವ ನೆಲ ಸಗಣಿಯದ್ದಾಗಿದ್ದರಿಂದ ಅಂಕುಡೊಂಕುಗಳಿಂದಾಗಿ ಮೊಣಕಾಲುಗಳು ನೋಯಲಾರಂಭಿಸಿದವು. ಈಗ ಆಗಿದ್ದರೆ ಡಾ‌.ಎನ್ .ಎಸ್ ‌ಲಕ್ಷ್ಮೀನಾರಾಯಣ ಭಟ್ಟರ
"ಯಾರು ಅರಿವರು ಹೇಳು ನನ್ನ ನೋವ 
ತಲ್ಲಣಿಸಿ ಕೂಗುತಿದೆ ದಾಸೀ ಜೀವ" 
ಎಂದು ಹಾಡಿಬಿಡುತ್ತಿದ್ದೆನೇನೋ ?.  ಹೊರಹೋಗುವ ಯಾವುದಾದರೊಂದು ದಾರಿ ಸಿಗಬಹುದೇನೊ ಎಂದುಕೊಂಡು ನಿಧಾನವಾಗಿ ಮುಂದೆ ಸಾಗಿದೆ...ಹೋಗಹೋಗುತ್ತಿದ್ದಂತೆಯೇ ಧೊಪ್ಪನೇ ಕೆಳಗೆ ಬಿದ್ದೆ‌. ಆಳವಾದ ಪ್ರಪಾತಕ್ಕೆ ಬಿದ್ದ ಅನುಭವವಾಯಿತು.ಒಂದು ಕ್ಷಣ ಎದೆಯೇ ಒಡೆದು ಹೋಯಿತು. ತಲೆ ಹಾಗೂ ಬೆನ್ನಿಗೆ ಬಿದ್ದ ಏಟುಗಳಿಂದ ನರಳಿದೆ. ಮೊದಲಿಗಿಂತ ಜೋರಾಗಿ ಅಳತೊಡಗಿದೆ.  ಅರಣ್ಯರೋದನವಾಯಿತು ನನ್ನ ಕೂಗು. ಅಕ್ಷರಶಃ ಕುರುಡನಾಗಿ ಪರಿತಪಿಸಿದೆ.‌  ನಾನು ಬಿದ್ದ ಸ್ಥಳ ಯಾವುದೆಂದು ನಿಧಾನವಾಗಿ ಅಲ್ಲಿರುವ ಸಾಧನಗಳನ್ನು ಮುಟ್ಟಿ ಪರಿಶೀಲಿಸಿದೆ. ಅದು ಕೈಮಗ್ಗದ ಕುನಿಯಾಗಿತ್ತು (ತಗ್ಗು, ಕುಸಿ ). ಸ್ಪರ್ಶಮಾತ್ರದಿಂದಲೇ ಇದನ್ನರಿತುಕೊಂಡೆ ; ಭಯಭೀತನಾದೆ‌. ಆಗಿನ ನನ್ನ ದುಸ್ಥಿತಿಯಂತೂ ಹೇಳತೀರದು. ಕುನಿಯಲ್ಲಿದ್ದ (ತಗ್ಗು) ಮಣ್ಣು ಮೈಕೈಗಳನ್ನು  ಮೆತ್ತಿಕೊಂಡಿತು.
    ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು ನನ್ನ ಕಥೆ. ಹೇಗೆಂದು ಬಣ್ಣಿಸುವುದು ಈ ವ್ಯಥೆ. ಅತ್ತೂ ಅತ್ತೂ ಕಣ್ಣೀರು ಬತ್ತಿಹೋದವು. ನಡುಗಿದ ಎದೆಯೊಳಗೆ ಭಯವೊಂದನ್ನು ಬಿಟ್ಟು ಏನೂ ಇರಲಿಲ್ಲ. ಕಣ್ಣೀರು ಒಣಗಿದ ಕೆನ್ನೆಗಳು ಹಾಳೆಯಂತಾದವು. ಮಗ್ಗದ ಕುನಿ ( ತಗ್ಗು ) ಯಲ್ಲಿನ ಧೂಳು‌ ಮೆತ್ತಿದ ಕೈಗಳಿಂದಲೇ ಕಣ್ಣುಗಳನ್ನೊರೆಸಿಕೊಂಡೆ. ಕಣ್ಣುರಿಯತೊಡಗಿದವು, ಸಹಿಸಿಕೊಂಡೆ. ತಲೆಯ ಮೇಲೆ ಜೋತುಬಿದ್ದಿದ್ದ ಮಗ್ಗದ ತಂತಿಗಳಿಂದ ಹೊಡೆಸಿಕೊಂಡು ದಡಬಡಾಯಿಸುತ್ತಲೇ ಎದ್ದು ನಿಂತೆ. ಮಗ್ಗದ ಮೇಲೆ ಹಾಸಿದ ರೇಷ್ಮೆಯ ಖಣದ ಕೆಳಗೆ ತೂರಿ ಕುಳಿಯಿಂದ ಮೇಲೆ ಬರಲು ಅಡ್ಡ ಬಿದ್ದೆ. ರೇಷ್ಮೆಯ ಎಳೆಗಳ ಬಲೆಯೊಳಗೆ ಸಿಲುಕಿ ಒದ್ದಾಡಿದೆ, ಬೇಟೆಗಾರನ ಬಲೆಯಲ್ಲಿ ಸಿಲುಕಿದ ಹುಲ್ಲೆಯಂತೆ. ಪಕ್ಕದ ಕಟ್ಟಿಗೆಯ ಹಲಗೆ ಧಡಲ್ ಎಂದಿತು ತಲೆಗೆ ಬಡಿದು. ಎದ್ದು ಬಿದ್ದು ಹೇಗೋ ಮೇಲೆ ಹತ್ತಿ ಬಂದೆ.

    ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಿಗೂ ನನಗೂ ಯಾವ ಭಿನ್ನತೆಗಳೂ ಇರಲಿಲ್ಲ. ಅಲ್ಲಿ ಸುಳಿದು ಸುತ್ತಿ ಇರಿಯುವ ಸರಳುಗಳು ಅಭಿಮನ್ಯುವಿನ ಮೈಯ್ಯನ್ನು ಹೊಗಲು ಹವಣಿಸುತ್ತಿದ್ದರೆ , ಇಲ್ಲಿ ಮಗ್ಗದ ತಂತಿ, ಕೋಲುಗಳು ಸುತ್ತ ನೆರೆದು ಥಳಿಸಲೆಂಬಂತೆ ನೆರೆದು ನಿಂತಿದ್ದವು. ಶೂರನಲ್ಲದಿದ್ದರೂ ಕತ್ತಲೆಯ ಹೊಡೆತಕ್ಕೆ ನಲುಗಿ ಪರಾಕ್ರಮಿಯಾಗಿ ಬದಲಾಗಬೇಕಾಯಿತು‌. ಅಭಿಮನ್ಯು ಮರಳಿ ಬರಲಿಲ್ಲ. ನಾನು ಛಲ ಬಿಡದೇ ಭೇದಿಸಿ ಹೊರ‌ಬಂದೆ‌. ನನ್ನ ವಿದ್ಯೆಯೇ ಅಭಿಮನ್ಯುವಿಗಿಂತ ತುಸು ಹೆಚ್ಚೆನಿಸುತ್ತಿದೆ ನನಗೆ‌. ಏಕೆ ಎನ್ನುವಿರೋ ತುಲನೆ ಮಾಡಿ.  ನನಗಿನ್ನೂ ನಾಲ್ಕೈದರ ಹರೆಯ. ಆತನಿಗೆ ಯೌವ್ವನದ ವಯ. ಹತ್ತಾರು ವರ್ಷದ ತರಬೇತಿ ಅವನದು. ತರಬೇತಿ ಎಂದರೇನೆಂದು ತಿಳಿಯದ ಎಳಸು ನನ್ನದು. ಬೆಳ್ಳಂಬೆಳಕಿನಲ್ಲಿ ಆತನ ಯುದ್ಧ; ನನ್ನದೋ ಖಗ್ರಾಸ ಕತ್ತಲೆಯಲ್ಲಿನ ಬಿಡದ ಜಿದ್ದು. ಜಿ.ಎಸ್. ಎಸ್ ರವರು ಹಾಡುವ ಹಾಗೆ ಕಾಣದ ಕಡಲಿನಲ್ಲಿಯೇ ಈಜಿದಂತಾಗಿತ್ತು ನನ್ನ ಗತಿ. ಎದ್ದೋ ಬಿದ್ದೋ ಮೇಲೆ ಬಂದೆ‌. ಕಾದು ಕುಳಿತ ಸುಣ್ಣವೂ ಮೈಕೈಗಳಿಗೆಲ್ಲಾ ಮೆತ್ತಿಕೊಂಡು ಅಲಂಕಾರ ಮಾಡಿತ್ತೆಂದು ನಂತರ ತಿಳಿಯಿತು. ಬಯಸದ ನೋವುಗಳನುಂಡು, ಅಂತೂ ಒದ್ದಾಡಿ ಮೇಲೆ ಬಂದೆ‌. ನಿದ್ದೆಗಣ್ಣುಗಳೀಗ ನಿಚ್ಚಳವಾಗಿದ್ದರೂ  ಪ್ರಯೋಜನವಿರಲಿಲ್ಲ. ಈ ರಣರಂಗದಿಂದ ಮೊದಲು ತಪ್ಪಿಸಿಕೊಂಡು ಬೆಳಕು ಹುಡುಕಿದರಾಯಿತೆಂದು ಅರಿವಿನಿಂದಲೋ, ಅರೆಪ್ರಜ್ಞೆಯಿಂದಲೋ ನಿಧಾನವಾಗಿ ಅಂಬೆಗಾಲಿನ ಮೇಲೆಯೇ ಬಾಗಿಲ‌ ಬಳಿ ಬಂದೆ.
ಸ್ಪರ್ಶಮಾತ್ರದಿಂದ 
ಬಾಗಿಲು ದಕ್ಕಿತೆಂದುಕೊಂಡು ತಡಬಡಾಯಿಸಿದೆ‌. ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರೆಯುತ್ತಿಲ್ಲ. ಸತ್ಯದ  ಅರಿವಾಯಿತು. ಹೊರಗೆ ಬೀಗ ಹಾಕಿದ ಬಾಗಿಲನ್ನು ತೆರೆಯಲು ಹೇಗೆ ಸಾಧ್ಯವಾದೀತು ?
"ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು 
ಎಲೆ ಹೋತೆ ಅಳು ಕಂಡೆಯಾ
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲ ಸಂಗಮದೇವ"
ಎಂಬ ವಚನ ಹಾಡಿ ಮನೆಯವರ ಮೇಲೆ ಸೇಡು ತೀರಿಸಿಕೊಂಡು ಬಿಡುತ್ತಿದ್ದೆನೇನೋ ?  ಆ ಅವಕಾಶವೂ ಇರಲಿಲ್ಲ ನನಗೆ. ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿದೆ. 
ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು
ಎಂಬ ಬಿ.ಎಂ.ಶ್ರೀಯವರ ಪ್ರಾರ್ಥನೆಯಂತೆ, ಬೆಳಕನ್ನೊಮ್ಮೆ ನನಗೆ ತಿಳಿದ ಭಾಷೆಯಿಂದೊಮ್ಮೆ ಕರೆದೆ. ಬೆಳಕಿನ ಸುಳಿವಿರಲಿಲ್ಲ. ಕೋಲೆಬಸವನಂತೆ ಜೋತುಬಿದ್ದ ಮೋರೆಯನ್ನು ಕೆಳಗೆ ಹಾಕಿ ಅಲುಗಾಡಿಸುತ್ತಾ ಮತ್ತೆ ತೆವಳಿದೆ. ತಲೆಗೆ ಏನೋ ತದಕಿದಂತಾಯಿತು. ಅದಾಗಲೇ ಸಾಕಷ್ಟು ಪೆಟ್ಟು ತಿಂದ ತಲೆಯು ಅನುಭವಿಯಾಗಿಬಿಟ್ಟಿತ್ತು. ಯಾವುದೋ ವಸ್ತುವಿರಬೇಕೆಂದು ತಿಳಿದು, ಕುಳಿತಲ್ಲೇ ಕೈಯ್ಯಾಡಿಸಿದೆ. ಕುರುಡನೊಬ್ಬ ಆನೆಯನ್ನು ಸ್ಪರ್ಶಿಸಿದಂತೆ ಸೋಫಾದ ಮೇಲೆ ಕೈಯ್ಯಾಡಿಸಿದೆ‌. ಯಾವುದೋ ಮಾನವಾಕೃತಿಯು ಮಲಗಿದಂತೆ ಕಂಡಿತು. ಸ್ವಲ್ಪ ಧೈರ್ಯ ಬಂದಂತಾಯಿತು. ಅದುವರೆಗೂ ಒಬ್ಬಂಟಿಯೆಂದುಕೊಂಡವನಿಗೀಗ ಯಾರೋ ಜೊತೆಯಾದರಲ್ಲ ಎನ್ನುವುದು ಎಲ್ಲಿಲ್ಲದ ಸಮಾಧಾನವನ್ನು ತಂದಿತು. ಅನುಮಾನ ಬಂದು ಮತ್ತೊಮ್ಮೆ ಆ ಮನುಷ್ಯಾಕೃತಿಯ ಮೈಕೈಗಳನ್ನು ಮುಟ್ಟಿದೆ. ಅನುಮಾನವೇ ಇಲ್ಲ. ಯಾರೋ ಮಲಗಿದ್ದಾರಿಲ್ಲಿ ಎಂದು ಕತ್ತಲೆಯಲ್ಲಿಯೇ ಸಂತಸಗೊಂಡೆ‌‌. ಕಣ್ಣಿಲ್ಲದವನಿಗೆ ಬೆಳಕು ಕಂಡಂತಾಯಿತು. ಮುಳುಗುತ್ತಿದ್ದವನಿಗೊಂದು ನೆಲೆ ನಿಲುಕಿದಂತಾಯಿತು. ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಕರೆದರೂ ಇಣುಕದ ಬೆಳಕನ್ನು ಶಪಿಸುತ್ತಿದ್ದವನಿಗೆ ಬೆಳಕಿನ ನಿಜ ರೂಪವನ್ನು ಕಂಡದ್ದೇ ಆನಂದಭಾಷ್ಪಗಳುದುರಿದವು‌. ಚಿಕ್ಕಪ್ಪನ ರೂಪದಲ್ಲಿ ಸಹಾಯಕ್ಕೆ ಬಂದ ಬೆಳಕಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ. ಕುಂಭಕರ್ಣ ನಿದ್ದೆಯಲ್ಲಿದ್ದವರನ್ನು ಎಬ್ಬಿಸಿದರೂ  ಅಲುಗಾಡಲಿಲ್ಲವೆಂದ ಮೇಲೆ ಇವರು ಚಿಕ್ಕಪ್ಪನೇ ಸರಿಯೆಂದು ತಿಳಿದೆ. ಗೊಡವೆಯೇ ಬೇಡವೆಂದು ಬೆನ್ನು ಮೇಲೆ ಮಾಡಿ ಮಲಗಿದ್ದವನ‌ ಮೇಲೆ ಕುದುರೆಯನ್ನೇರುವಂತೆ ಏರಿ ಹಾಗೆಯೇ ಬೆನ್ನಿಗಂಟಿಕೊಂಡು ಒರಗಿದೆ. ನಮ್ಮ ಮನೆಯಲ್ಲಿ  ಬೆನ್ನು ಮೇಲೆ ಮಾಡಿಕೊಂಡು ಕುಂಭಕರ್ಣನಂತೆ ಎಚ್ವರಿಸಿದರೂ ಸರಳವಾಗಿ ಏಳದೇ ಮಲಗುವ ಏಕೈಕ ವ್ಯಕ್ತಿ ಎಂದರೆ ಅದು ಚಿಕ್ಕಪ್ಪನೇ. ಇನ್ನೇನು ಬೇಕು ಕತ್ತಲೆಯಲ್ಲಿ ಪಯಣಹೊರಟವನಿಗೆ. ಕಣ್ಣೀರನ್ನೊರೆಸಿಕೊಳ್ಳುತ್ತಲೇ ನೆಮ್ಮದಿಯ ನಿದ್ದೆಗೆ ಜಾರಿದೆ. ದಟ್ಟಾರಣ್ಯದಲ್ಲಿ ದಿಕ್ಕೆಟ್ಟ ಜಿಂಕೆಯ ಮರಿಗೆ ತಾಯಿ ಸಿಕ್ಕಂತಾಯಿತು. ಅತ್ತ ಹೊರಗಡೆ ಜಾತ್ರೆಯ ನಾಟಕ ಜನರ ಕೇಕೆಗಳಿಂದ ರಂಗೇರುತ್ತಿದ್ದರೆ,  ನನ್ನ ಸಂಕಟದ ನಾಟಕಕ್ಕೆ ತೆರೆ ಬಿದ್ದಿತ್ತು. ಬೆಳಿಗ್ಗೆ ನಾಟಕ‌‌ ಮುಗಿಸಿಕೊಂಡು ಬಂದ ಮನೆಯವರು ಈ ದೃಶ್ಯ ಕಂಡು ಮಮ್ಮಲ ಮರಗಿದರಂತೆ. ಅಲ್ಲದೇ ಊರಿಗೆ ಹೋಗಿದ್ದ ನನ್ನ ದೊಡ್ಡಪ್ಪ ಬಂದವರೇ ನಡೆದ ಘಟನೆಯನ್ನು ಕೇಳಿ ನನ್ನೆದುರಿಗೆ ಮನೆಯವರೆಲ್ಲರನ್ನೂ ಚೆನ್ನಾಗಿ ಬೈದರು. ಆಗ ನನಗೆ "ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ" ಎಂಬ ಸಾಲು ನೆನಪಿಗೆ ಬಂದಿರಬೇಕು. 
ಯಾರೋ ಹೇಳಿದ ನೆನಪು"ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗದು "  ಎಂದು. ಆದರೆ ಈ ಘಟನೆಯ ನಂತರ ಬೆಳಕಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎನ್ನುವುದೇ ಬಿಡಿಸಲಾಗದ ಒಗಟಾಯಿತು ನನಗೆ.  ಬಹುಶಃ ಅಂತಹ ಕತ್ತಲೆಯಲ್ಲೂ ನನ್ನನ್ನೂ‌‌‌ ಮುನ್ನಡೆಸಿದ ಶಕ್ರಿ ಯಾವುದಿರಬಹುದು ಎಂದು ಚಿಂತಿಸಿದ್ದೇನೆ. ಉತ್ತರವೀಗ ಕವಯಿತ್ರಿ ಎಂ.ಆರ್.‌ಕಮಲ ರವರ  
"ಅಮ್ಮಾ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ 
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ"
ಎಂಬ ಭಾವಗೀತೆಯ ಮೂಲಕ ಹೀಗೆ ದಕ್ಕಿದೆ. ತಾಯಿ ನನ್ನೆದೆಯೊಳಗೆ ಹಚ್ಚಿಟ್ಟ ಇಂತಹ ಹಣತೆಯ ಬೆಳಕಿನಲ್ಲಿಯೇ ಸಾಗಿ ಅಂತೂ ನೆಲೆಯೊಂದನ್ನು ಕಂಡುಕೊಂಡಿರಬೇಕು ನಾನು.  ಆ ಹಣತೆಯ ಬೆಳಕಿನ್ನೂ ಬೆಳಗುತ್ತಲೇ ಇದೆ ಹೀಗೆ ಬರಹವಾಗಿ; ಕೆಲವೊಮ್ಮೆ ಅರಿವಾಗಿ; ಮಗದೊಮ್ಮೆ ಬದುಕಾಗಿ.

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...