Total Pageviews

Tuesday 24 July 2018

'ದರ್ಶನ'ದ ಬೆಳಕಿನಲ್ಲಿ.....(ಭಾಗ ೧)

ದರ್ಶನದ ಬೆಳಕಿನಲ್ಲಿ.....(ಭಾಗ ೧)
        ಶ್ರೀ ರಾಮಾಯಣ ದರ್ಶನಂ' ಎಂಬ ಹೆಸರೇ ನಮ್ಮಲ್ಲಿ ದಾರ್ಶನಿಕತೆಯ ದೃಷ್ಟಿಯನ್ನು ಪಡೆಮೂಡಿಸುವ ಶಕ್ತಿಯಾಗಿದೆ. ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು  ನಮ್ಮ ದೇಶದ ಸಾಹಿತ್ಯ ಸಂಸ್ಕೃತಿಗಳನ್ನು ಆಲದಮರಗಳ ಬಿಳಲುಗಳಂತೆ ವ್ಯಾಪಕವಾಗಿ ಆವರಿಸಿಕೊಂಡು ನಿತ್ಯದ ಜನಜೀವನದ ಕ್ಷೀರದೊಂದಿಗೆ ಸಕ್ಕರೆಯಂತೆ ಬೆರೆತು ಬದುಕಿನ ಸ್ವಾರಸ್ಯವನ್ನು ಹೆಚ್ಚಿಸಿವೆ ಎಂದರೂ ಅತಿಶಯೋಕ್ತಿಯಾಗಲಾರದು. ರಾಮಾಯಣ ಹಾಗೂ ಮಹಾಭಾರತ ಗಳು ಅಂದು ಕಂಡು ಇಂದು ಮರೆಯಾಗುವ ಸರಸ್ವತಿಯಂತಹ  ನದಿಗಳಲ್ಲ.ಬದಲಾಗಿ ಅವು  ನಿರಂತರ ಪ್ರವಹಿಸುವ ಗಂಗೆ, ಕಾವೇರಿಯಂತೆ ಸರ್ವಕಾಲಕ್ಕೂ ಜೀವಾಮೃತವನ್ನೊದಗಿಸುವ ಚಲನಶೀಲತೆಯನ್ನು  ಹೊಂದಿರುವ ಜೀವಂತ ನದಿಗಳಾಗಿವೆ. ಜನರ ಆಚಾರ, ವಿಚಾರ,ಸಾಹಿತ್ಯ, ಸಂಸ್ಕೃತಿಯಲ್ಲಿ ಅಂತರ್ ಗಂಗೆಯಾಗಿ ಹರಿಯುವ ನಿಶಾಂತ  ಗುಪ್ತಗಾಮಿನಿಗಳಾಗಿವೆ. ಈ ಆಧುನಿಕ ಕಾಲಘಟ್ಟದಲ್ಲಿಯೂ ರಾಮಾಯಣವನ್ನು  ಮಹಾಕಾವ್ಯ ಪರಂಪರೆಯ ಮೂಲಕ ಮುಂದುವರಿಸುವ ವಾರಸುದಾರರಾಗಿ ಕುವೆಂಪುರವರು ನಮಗೆ ವಿಶಿಷ್ಟವಾಗಿ  ಕಾಣುತ್ತಾರೆ.ಇವರ ಮಹಾಕಾವ್ಯ ಕೃತಿ'ಶ್ರೀ ರಾಮಾಯಣ ದರ್ಶನಂ' ಎಂಬ ಹೆಸರೇ ನಮ್ಮಲ್ಲಿ ದಾರ್ಶನಿಕತೆಯ ದೃಷ್ಟಿಯನ್ನು ಪಡೆಮೂಡಿಸುವ ಶಕ್ತಿಯಾಗಿದೆ.
          ದಿನಾಂಕ ೧೯-೭-೨೦೧೮ ರಂದು ವಿದ್ಯಾವರ್ಧಕ ಸಂಘ ಧಾರವಾಡದ ರಾ.ಹ.ದೇಶಪಾಂಡೆ ಭವನದಲ್ಲಿ ನಡೆದ  'ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ  ಕುರಿತು ವಿಶೇಷ ಉಪನ್ಯಾಸ'ದಲ್ಲಿ ಭಾಗಿಯಾಗುವ ಸದವಕಾಶ ನನ್ನದಾಗಿತ್ತು.ಈ ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿದ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಡಾ.ಗುರುಲಿಂಗ  ಕಾಪಸೆಯವರು " ನಮ್ಮ ನಾಡಿನ ಜೈನಕವಿ ನಾಗಚಂದ್ರನಿಂದ ಪ್ರಾರಂಭವಾದ ರಾಮಾಯಣ  ಕುರಿತ ಕಾವ್ಯಪರಂಪರೆ ಆಧುನಿಕ ಕಾಲಘಟ್ಟದಲ್ಲಿಯೂ ಕುವೆಂಪುರವರಿಂದ ದಾರ್ಶನಿಕತೆಯ ಗೌರಿಶಂಕರದ ಶಿಖರ  ತಲುಪಿ,ಮುಂದುವರೆದು,  ಕ.ತ. ರಾಜಶೇಖರ, ಎಂ ವೀರಪ್ಪ ಮೊಯಿಲಿ ಯವರಿಂದ ಚಲನಶೀಲವಾಗಿ ಮುನ್ನಡೆಯುತ್ತಿದೆ" ಎಂದು ರಾಮಾಯಣ ಕಾವ್ಯ ಪರಂಪರೆಯನ್ನು ಕುರಿತು ವಿಶ್ಲೇಷಿಸಿದರು.  ಹಿರಿಯ ಸಾಹಿತಿಗಳಾದ ಡಾ.ಗುರುಪಾದ ಮರೆಗುದ್ದಿಯವರು ವಿಶೇಷ ಆಹ್ವಾನಿತರಾಗಿ 'ಶ್ರೀರಾಮಾಯಣದರ್ಶನಂ' ಕುರಿತು ಮಾತನಾಡಿದ ಉಪನ್ಯಾಸದ ಸಂಗ್ರಹಿತ ಆಂಶಗಳ ವಿಶ್ಲೇಷಣೆ ಈ ಕೆಳಗಿನಂತಿದೆ.

ವಾಲ್ಮೀಕಿ ರಾಮಾಯಣ ನಮಗೆ ಏಕಮುಖವಾಗಿ ರಾಮನ ಉದಾತ್ತೀಕರಣವನ್ನು ಸಾರಿ ಅವನ ವ್ಯಕ್ತಿತ್ವವನ್ನು  ದೈವತ್ವಕ್ಕೇರಿಸಿ ಉಳಿದ ಪಾತ್ರಗಳನ್ನು ಅವನಿಗೆ ಪೋಷಕವಾಗಿ ನಿಲ್ಲುವ  ಆಶಯದ ಗ್ರಂಥವಾಗಿ ಕಂಡರೆ, ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿ ರಾಮ ,ಲಕ್ಷ್ಮಣ,ಸೀತೆ,ರಾವಣರಿಂದ ಹಿಡಿದು ಮಂಥರೆ,ಶಬರಿ,ಊರ್ಮಿಳಾ ವರೆಗಿನ ಪ್ರತಿಯೊಂದು ಪಾತ್ರವೂ  ಕೂಡ ಸೀತಾವಲ್ಲಭನಿಗೆ ಪೋಷಕವಾಗಿ ಮಾತ್ರ ನಿಲ್ಲುವುದಕ್ಕಿಂತ ತಮಗೆ ನ್ಯಾಯವಾಗಿ ಸಲ್ಲಬೇಕಾದ  ಪ್ರಾಮುಖ್ಯತೆಯನ್ನು ಪಡೆದುಕೊಂಡು ಆತ್ಮೋನ್ನತಿಯ  ಶಕ್ತಿಗಳಾಗಿ ರೂಪು ಪಡೆಯುತ್ತವೆ.ಇಲ್ಲಿ ಯಾರೂ  ಮುಖ್ಯರಲ್ಲ ಹಾಗೂ ಅಮುಖ್ಯರಲ್ಲ ಸರ್ವರೂ ಇಲ್ಲಿ ಸಮಾನರು.ಕುವೆಂಪುರವರು ಹೇಳಿದ ಹಾಗೆ ' ಅನ್ನಮಯ ಪ್ರಪಂಚದಿಂದ ,ಆನಂದಮಯ ಪ್ರಪಂಚಕ್ಕೆ 'ಕರೆದೊಯ್ಯುವ  ಕೃತಿಯಾಗಿ 'ಶ್ರೀ ರಾಮಾಯಣ ದರ್ಶನಂ' ಕನ್ನಡ ಸಾರಸ್ವತ ಲೋಕದಲ್ಲಿ ಅನುಪಮ ಸ್ಥಾನವನ್ನು ಪಡೆದು ರಾರಾಜಿಸುತ್ತಿದೆ. ಅರವಿಂದರು,ರಾಮಕೃಷ್ಣ ಪರಮಹಂಸರು,ರವೀಂದ್ರನಾಥ ಟ್ಯಾಗೋರರು ಮುಂತಾದ ದಾರ್ಶನಿಕರ ಪ್ರಭಾವಳಿ ಕುವೆಂಪುರವರ ಮನಭಿತ್ತಿಯಲ್ಲಿ ದಿವ್ಯಜ್ಞಾನದ   ತೇಜೋಪುಂಜಗಳನ್ನು ಸೃಷ್ಟಿಸಿ ಶ್ರೀರಾಮಾಯಣ ದರ್ಶನಂ ಕಾವ್ಯದ ಮೂಲಕ ಜಗತ್ತಿಗೆ ಬೆಳಕನ್ನು ನೀಡುವ ದಿವ್ಯಜ್ಯೋತಿಯಾಗಿ ಸಹೃದಯರ ಎದೆಗಳಲ್ಲಿ ಎಂದೆಂದಿಗೂ ಪ್ರಕಾಶಮಾನವಾಗಿ   ಹೊಳೆಯುತ್ತಿದೆ.ಈ ಕೃತಿಯನ್ನು ಕುವೆಂಪುರವರು ತಮ್ಮ ವಿದ್ಯಾಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.ಕೃತಿಯ ಪ್ರಾರಂಭದ ಈ ಅರ್ಪಣೆಯು ವಿಶೇಷವಾಗಿದೆ.ಇದರ "ಕುವೆಂಪುವ ಸೃಜಿಸಿದ ಈ ಕೃತಿ "ಎಂಬ ಸಾಲಿನಲ್ಲಿ ಕುವೆಂಪು ಈ ಕೃತಿಯನ್ನು ಸೃಜಿಸಿದರು ಎಂಬುದಕ್ಕಿಂತ ಈ ಮಹಾಕಾವ್ಯ  ಕುವೆಂಪುರವರನ್ನು ಸೃಷ್ಟಿಮಾಡಿತು ಎಂಬುದೇ ಹೆಚ್ಚು ಔಚಿತ್ಯಪೂರ್ಣವಾಗಿದೆ. ಕುವೆಂಪುರವರ ಮೇಲೆ ಪ್ರಭಾವ ಬೀರಿದ ಇಬ್ಬರು ಮಹಾಗುರುಗಳೆಂದರೆ ಎ ಆರ್ ಕೃಷ್ಣಶಾಸ್ತ್ರಿ ಹಾಗೂ ಟಿ ಎಸ್ ವೆಂಕಣ್ಣಯ್ಯ.ಪ್ರೀತಿಯ ಗುರುಗಳಾದ  ಟಿ ಎಸ್ ವೆಂಕಣ್ಣಯನವರ ಪ್ರೇರಣೆಯಂತೆ ಈ ಮಹಾಕಾವ್ಯ ಜನ್ಮತಾಳಿತಾದರೂ ಮೊದಲ ಸಂಪುಟ ಪ್ರಕಟವಾದಾಗ ವೆಂಕಣ್ಣಯ್ಯನವರು ಅಲ್ಲಿರುವ ನಿಜದ ಮನೆಗೆ ಪಯಣ ಬೆಳೆಸಿದ್ದರು. ಅತ್ಯಂತ ಗೌರವಪೂರ್ವಕವಾಗಿ ಈ ಕೃತಿಯನ್ನು ಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿದ ಕುವೆಂಪುರವರು "ನಿಮ್ಮ ಪ್ರೇರಣೆಯಂತೆ ಈ ಕಾವ್ಯ ರಚಿಸಿದ್ದು ನಿಮ್ಮ ವೈಕುಂಠದಲ್ಲಿರುವ ವಿದ್ವಾಂಸರಿಗೆಲ್ಲ ಈ ಕಾವ್ಯ ವಾಚನದ ಮೂಲಕ ಶ್ರೀರಾಮಾಯಣ ದರ್ಶನಂ ಪರಿಚಯಿಸಿ ಆಶೀರ್ವದಿಸಿ " ಎಂದು ವಿನಮ್ರತೆಯ ಗುರುಕಾಣಿಕೆ ನೀಡುತ್ತಾರೆ.

   ಈ ಕಾವ್ಯದಲ್ಲಿ ಕುವೆಂಪುರವರ ಮಂಥರೆಯ ವ್ಯಕ್ತಿ ಚಿತ್ರಣ ನಮಗೆ ಅವಳ ಬಗ್ಗೆ ಇರುವ  ಪೂರ್ವಾಗ್ರಹಗಳನ್ನು ಬದಲಾಯಿಸುವಂತೆ ಮಾಡುತ್ತದೆ.ಈ ಪಾತ್ರ ಚಿತ್ರಣ ಕರುಣರಸದ ಕೊಳವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಕೈಕೆಯ ಮನದಲ್ಲಿ ವಿಷಬೀಜ ಬಿತ್ತಿ ಕತೆಗೆ ಸೂತ್ರಧಾರಿಯಾಗುವ ಮೂಲ ರಾಮಾಯಾಣದ  ದುಷ್ಟ ಮಂಥರೆ, ಇಲ್ಲಿ  ಕವಿಯ ಕ್ರಾಂತದರ್ಶನದಲ್ಲಿ ಎಲ್ಲರ ಕರುಣೆಗೆ, ಪಾತ್ರವಾಗುತ್ತಾಳೆ; ಶೋಕಭಾವಕ್ಕೆ ಪ್ರತಿನಿಧಿಯಾಗಿ ಪೋಷಕವಾಗುತ್ತಾಳೆ; ಇಲ್ಲಿ ಮಂಥರೆ ಕೈಕೆಗೆ ಮಮತೆಯ ಮಡಿಲಾಗುತ್ತಾಳೆ; ವಾತ್ಸಲ್ಯದ ತಾಯಿಯಾಗುತ್ತಾಳೆ; ಮಾತೃಪ್ರೇಮದ ಆಶ್ರಯವಾಗುತ್ತಾಳೆ. ರಾಮಾಯಣಕ್ಕೆ ಮೂಲ ಕಾರಣವಾಗಿರುವ ನಮ್ಮ ಪ್ರಕಾರ ದುಷ್ಟೆಯಾಗಿರುವ ಮಂಥರೆಗೂ ಪಾಪಿಗುದ್ಧಾರವಿಹುದಿಲ್ಲಿ ಎಂದು ಆತ್ಮೋದ್ಧಾರದ ದ್ವಾರವನ್ನು ತೋರುತ್ತಾರೆ ಕುವೆಂಪುರವರು.
ರಾಮನು ಕೈಕೆ ಯ ಕಠಿಣ ವಚನಕ್ಕೆ ಅಲ್ಪವೂ ವಿಚಲಿತನಾಗದೆ ಸ್ಥಿತಪ್ರಜ್ಞನಾಗಿ ಮಹಾಪ್ರಸಾದವೆಂಬಂತೆ ತನ್ನ ಪಾಲಿಗೆ ಬಂದ ಪಂಚಾಮೃತವನ್ನು ಸ್ವೀಕರಿಸಿ ಧರ್ಮವೃತನಾಗಿ ಕಾಡಿಗೆ ತೆರಳುತ್ತಾನೆ.ಅಯೋಧ್ಯೆಯೆಲ್ಲಾ ಕಣ್ಣೀರಿನ ಸಾಗರದಲ್ಲಿ ಮುಳುಗಿದ್ದರೂ ತಾನು ಮಾತ್ರ ಎದೆಗುಂದದೆ ಜನರಲ್ಲಿ ಧೈರ್ಯ ತುಂಬಿ ಸಂಭಾಳಿಸಿ ಮುನ್ನಡೆಯುವ ಅವನ ಸತ್ವಶೀಲತೆ ಮಹೋನ್ನತವಾದುದು.ಇತ್ತ  ರಾಮನ ಜೊತೆ ಸಾಗುವ ನಾರುಮುಡಿಯುಟ್ಟ  ಲಕ್ಷ್ಮಣ, ಸೀತೆಯರು ಮುಂದೆ ಸಂಭವಿಸಬಹುದಾದ ಕತೆಗೆ  ಮುನ್ನುಡಿ ಬರೆಯುತ್ತಾರೆ. ಹಾಗಾದರೆ ಲಕ್ಷ್ಮಣನ ಹೆಂಡತಿಯಾದ  ಊರ್ಮಿಳೆಯ ಗತಿಯೇನು ಎನ್ನುವ ಪ್ರಶ್ನೆಗೆ ಕುವೆಂಪುರವರು ಆಕೆಗೆ ತಪೋಮೂರ್ತಿಯ ಪವಿತ್ರ ಕಾಯಕವನ್ನು ದಯಪಾಲಿಸಿ,ಏಕಾಂತದ  ವೃತಾಧಾರಿಯನ್ನಾಗಿಸಿ, ಧ್ಯಾನದ ಆನಂದವನ್ನು ನೀಡಿ ಅವಳ ಆತ್ಮೋನ್ನತಿಗೆ ಅವಕಾಶ ಕಲ್ಪಿಸುತ್ತಾರೆ.
                           ಈ ಮಹಾಕಾವ್ಯದ ಪ್ರತಿನಾಯಕನ ಸ್ಥಾನದಲ್ಲಿರುವ ರಾವಣ ಇಲ್ಲಿ ಶ್ರೀರಾವಣ ನಾಗುತ್ತಾನೆ.(ಡಾ.ಗುರುಲಿಂಗ ಕಾಪಸೆಯವರ ಮಾತು).ರಾವಣ ತನ್ನ ರಾವಣತ್ವವನ್ನು ಕಳೆದುಕೊಂಡು ರಾಮತ್ವವನ್ನು ಆರೋಹಿಸಿ ಆತ್ಮವಿಕಾಸವನ್ನು ಪಡೆಯುವ ಶಕ್ತಿಯಾಗುತ್ತಾನೆ.'ಜಗತ್ತಿನಲ್ಲಿ ನನಗೊಲಿಯದ ಪತಿವ್ರತೆಯರಿಲ್ಲ' ಎಂಬುದೇ  ತನ್ನ ಪರಾಕ್ರಮವೆಂದು ಹೆಮ್ಮೆಪಟ್ಟುಕೊಳ್ಳುವ ಇಲ್ಲಿಯ  ರಾವಣ ನ ಹೆಣ್ಣುಬಾಕತನ ತನ್ನ ಸಹೋದರಿ ಶೂರ್ಪನಖಿಗಾದ ಅವಮಾನದ ನೆಪದಲ್ಲಿ ಸೀತೆಯನ್ನು ಅಪಹರಿಸುವಂತೆ ಮಾಡುತ್ತದೆ.ಸೀತೆಯ ಸ್ವಯಂವರದಲ್ಲಿ ಶಿವಧನಸ್ಸನ್ನು ಎತ್ತಲಾಗದೆ ಕುಸಿದು ಬಿದ್ದು ತುಂಬಿದ ಸಭೆಯಲ್ಲಿ ಅಪಹಾಸ್ಯಕ್ಕೀಡಾದ ಸೇಡೂ ಕೂಡ ರಾವಣನಿಗೆ ಸೀತೆಯನ್ನು ಅಪಹರಿಸುವಲ್ಲಿ ಪ್ರೇರಣಾ ಶಕ್ತಿಯಾಗಿ ಕಾರಣೀಭೂತವಾಗುತ್ತದೆ. ಎಲ್ಲ ಪತಿವ್ರತೆಯರಿ  ತನಗೊಲಿದಂತೆ  ಸೀತೆಯೂ ಇದರಿಂದ ಹೊರತಾಗಲಾರಳು ಎಂಬ ನಂಬಿಕೆಯೇ ಸೀತಾಪಹರಣಕ್ಕೆಡೆ ಮಾಡುತ್ತದೆ.  ಕೊನೆಯಲ್ಲಿ ರಾವಣನ ಎದೆಗೆ ಹೊಡೆದ ರಾಮನ ಬಾಣವೇ ರಾಮನಾಗಿ ಕಂಡು ನೋವಿನಲ್ಲಿದ್ದರೂ ಪರಿವೆಯಿಲ್ಲದೆ ರಾಮನನ್ನು ಬಾಣದ ರೂಪದಲ್ಲಿ ಹಿಡಿದು ತಂದ  ಆನಂದಮಯ ಕೋಶವನ್ನು ಪ್ರವೇಶಿಸುವ ಮುತ್ಸದ್ದಿಯಾಗಿ ಪರಿವರ್ತನೆಯಾಗುತ್ತಾನೆ..ಇದು ಕುವೆಂಪುರವರ ದರ್ಶನದ ಪರಿಣಾಮ.                               ( ಮುಂದುವರೆಯುವುದು......)


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...