Total Pageviews

Friday 15 February 2019

ನೀವೆತ್ತ..? ನಾವೆತ್ತ..?

                                      ನೀವೆತ್ತ..? ನಾವೆತ್ತ..?

ದ್ವೇಷದಂಗಡಿಯಲ್ಲಿ ಹಿಂಸೆ ಮಾರುವ

ದುರುಳರೇ ನೀವೆತ್ತ ..? 

ಶಾಂತಿಯರಮನೆಯಲ್ಲಿ ಸೌಹಾರ್ದದ 

ನಗೆ ಬೀರುವ ನಾವೆತ್ತ.. ?


ಭಯದ ಕರಿನೆರಳನ್ನೇ ಹರಡಿ 

ಹಬ್ಬವೆನ್ನುವ  ಕರಾಳರೇ ನೀವೆತ್ತ..? 

ಅಭಯದ ಹಸ್ತ ನೀಡಿ 

ಭಾರತಿಯ ಕಾಪಿಡುವವರು  ನಾವೆತ್ತ...?


ಅಂಧಕಾರದ ಹೊಗೆಯಲ್ಲಿ 

ರಕ್ತಕೃತಿಯ ಬಿಡಿಸಿ ನಗುವ ನೀವೆತ್ತ..?

 ಜಗವ ಬೆಳಗುವ ಭಾವೈಕ್ಯತೆ

 ಸವಿಯ ಉಣಬಡಿಸುವ ನಾವೆತ್ತ...?

ಕರುಳು ನೆತ್ತರು ಮಾಂಸದಂಗಡಿ  

 ನಮ್ಮದೆನ್ನುವ ಕೀಚಕರೇ ನೀವೆತ್ತ 

ಸರ್ವ ಜನಾಂಗದ ಶಾಂತಿಯ ತೋಟದ 

ದೇಶ ನಮ್ಮದೆನ್ನುವ ನಾವೆತ್ತ

ಬಂದೂಕಿನ ನಳಿಕೆಯಲ್ಲಿ

 ಧರ್ಮವನ್ನರಸುವ ಅಧಮರೇ ನೀವೆತ್ತ..? 

ಮತಾತೀತ ಬಾಂಧವರ ಅಪ್ಪುಗೆಯಲ್ಲಿ  

ಭ್ರಾತೃತ್ವವನರಸುವವರು ನಾವೆತ್ತ...?

ಮದ್ದು ಬಾಂಬು ಗುಂಡು 

ಕ್ಷಿಪಣಿಧಾರಿ ದುರ್ಜನರೇ ನೀವೆತ್ತ..? 

ಸಹನೆ ಕರುಣೆ ಶಾಂತಿ ದಯೆ 

 ಪ್ರೇಮಗಳ ಹೃದಯವುಳ್ಳ ನಾವೆತ್ತ...?

Sunday 10 February 2019

ರಕ್ತರಾತ್ರಿಯ ಬೆಳಕಿನಲ್ಲಿ...ಭಾಗ 2

ಕಂದಗಲ್ಲ ಹನಮಂತರಾಯರ ಕೃತಿರತ್ನಗಳಲ್ಲಿ ಅಮೂಲ್ಯ ನಾಟಕಮಣಿ  ‘ರಕ್ತರಾತ್ರಿ’. ಈ ಭಾರತನಾಟಕದಲ್ಲಿ ಧರ್ಮರಾಜನ ವಾಗ್ಬಾಣವೊಂದು ಹೀಗಿದೆ–“ಓ ವಾಯುಸುತ! ಓ ಅಗ್ನಿಪುತ್ರಿ! ಕೇವಲ ನಿಮ್ಮ ಪ್ರತಿಜ್ಞೆಗಳ ಪರಿಣಾಮವಾಗಿ ಹೊತ್ತಿರುವ ರಣಯಜ್ಞಕುಂಡದಲ್ಲಿ ಪ್ರಾಣಾಹುತಿಯನ್ನು ಹಾಕಿದ ಅಭಿಮನ್ಯುವಿನ ಬಲಿರಕ್ತದಲಿ ಮುಣಿಗೆದ್ದು ದುಃಖದಗ್ಗಿಷ್ಟಿಕೆಯನ್ನು ತನ್ನೆದೆಯೊಳಿಟ್ಟುಕೊಂಡು ಬೆಮೆಗೊಂಡ ಉತ್ತರೆ ತನ್ನ ಕಣ್ಣೊಳಿಳಿದ ಬೆಸನದ ಬಣ್ಣ ಬರೆವಳು ಪಾಂಡವರ ಬಾಳಿನ ಇತಿಹಾಸಕ್ಕೆ.” ಪಾಂಡವರ ಬಾಳಿಗೆ ಶರಾ ಬರೆಯುವ ಉತ್ತರೆಯ ಬಾಷ್ಪಗಳೆಂಬ ಎದೆಯ ಶಾಹಿಯ ಹನಿಗಳು ತನ್ನೊಡತಿಯ ಎದೆಯಲ್ಲಿದ್ದ ದುಃಖದಗ್ಗಿಷ್ಟಿಕೆಯ ಕೆಂಡವನ್ನು ಭಾರತದ ತುಂಬೆಲ್ಲ ಹೇಗೆ ಹರಡುತ್ತಿವೆ ಎಂಬುದರ ಅಂತರಾವಲೋಕನ ಕಂದಗಲ್ಲ ಹನಮಂತರಾಯರದು. ಕರುಣ ರಸ ಉತ್ತರೆಯ ಹೃದಯದಲ್ಲಿ ಮಡುಗಟ್ಟಿ ಗಂಗೋತ್ರಿಯಾಗಿ ಮಹಾನದಿಸ್ವರೂಪದಲ್ಲಿ ಪ್ರವಹಿಸುತ್ತಿದೆ. ‘ರಸ , ಭಾವ, ಸಂವಿಧಾನ, ಆಶ್ರಯಗಳೆಂಬ ಚತುರ್ವಿಧ ಸಂಗತಿಗಳು ನಾಟಕಕ್ಕೆ ಚತುರ್ವೇದಗಳಿದ್ದಂತೆ’ ಎಂಬ ನಿಜಗುಣ ಶಿವಯೋಗಿಗಳ ಮಾತು ರಾಯರ ನಾಟಕಗಳಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ರಕ್ತರಾತ್ರಿಯ ಕಥಾ ಸಂವಿಧಾನವು ಮಹಾಭಾರತದ ಕುರುಕ್ಷೇತ್ರದಲ್ಲಿ ಕೌರವರಿಂದ ಹೆಣೆದ ಚಕ್ರವ್ಯೂಹದೊಳ್ ಪೊಕ್ಕು ಹೊರಬರಲಾಗದೆ ವೀರಮರಣವನ್ನಪ್ಪಿದ ಅಭಿಮನ್ಯುವಿನ ನೆತ್ತರು ಕಡಲಾಗಿ ಹರಿದ ರಕ್ತರಾತ್ರಿಯಿಂದ ಪ್ರಾರಂಭವಾಗಿ, ದುಷ್ಟದ್ಯುಮ್ನನಿಂದ ದೇಹ ತುಂಡರಿಸಿಕೊಂಡು ಹೆಣವಾದ ದ್ರೋಣ,
ಶರಶಯ್ಯೆಯ ಮೇಲೆ ಇಚ್ಛಾಮರಣಿಯಾಗಿ ಕಾಲ ನೂಕುತ್ತಿರುವ  ಭೀಷ್ಮ, ವಾಯುಪುತ್ರನಿಂದ ಎದೆಬಗೆಸಿಕೊಂಡು ರಣಹದ್ದುಗಳಿಗೆ ಆಹಾರವಾದ ದುಶ್ಯಾಸನ, ಭೀಮನಿಂದ ಊರುಭಂಗದ ಮಹಾಘಾತಕ್ಕೆ ನಲುಗಿ ನರಳಿ ಜೀವಚ್ಛವವಾದ ದುರ್ಯೋಧನ ಇವರೆಲ್ಲರ ಶರೀರಗಳಿಂದ ಕಾಲುವೆಯಾಗಿ ಹರಿದ ನೆತ್ತರಿನ ಮೂಲಕ, ಗರತಿಯ ಕರುಳ ಕೊರೆದ ಶಿಶುಹತ್ಯಾದೋಷಕ್ಕೆ ಗುರಿಯಾಗಿ ಪಾಂಚಾಲಿಯ ಕೂರಂಬು ತಿವಿದು ಹರಿದ ನೆತ್ತರದ ಕಾಳರಾತ್ರಿಯವರೆಗೆ ಹಬ್ಬಿಕೊಂಡಿದೆ.
ಇದರಲ್ಲಿ ಬರುವ ಅರಮನೆಯ ದಾಸಿ ಮದಹಂಸಿ ಹಾಗೂ ಇವಳ ಪತಿ ನವಲಿಪಕ್ಕರ ಪಾತ್ರಗಳಲ್ಲಿ ಹಾಸ್ಯರಸ ಉಕ್ಕಿಹರಿಯುತ್ತದೆ. “ಹ ಹ್ಹ ಹ್ಹ! ನೋಡದೋ ಬೆದರಿ ಬೆಚ್ಚಿದವು ಉಳಿದ ಸೇನಾನಿಗಳೆಂಬ ಮದ್ದಾನೆಗಳು. ಬೆಚ್ಚಿದವು ಧೃತರಾಷ್ಟ್ರನೆದೆ. ಹೆಚ್ಚಿದುದು ದುಃಖ ಗಾಂಧಾರಿ ಒಡಲೊಳು. ಹರಿ ವಜ್ರ ಕಂಠದ ಭೀಮೋರಗ ವೀರ ಬೊಬ್ಬೆಗಳು, ಇಳೆಯ ವಾರಿಧಿಯ ಪೆರ್ದೆರೆಗಳಂತೆ ಹಬ್ಬಿದವು ಹವೆಯೊಳಾ ದಿಗ್ ದಿಗಂತದಲ್ಲಿ. ಬಾ ಪಾಂಚಾಲಿ ಹೇಗಿದೆ ದುಶ್ಯಾಸನನ ವಕ್ಷಸ್ಥಲದ ನೆತ್ತರು. ಅಂದು ಸೆಳೆ ಸೀರೆಯ ಸಮಯದಲ್ಲಿ ಸೊಕ್ಕಿನಿಂದಿರ್ದ ದುಶ್ಯಾಸನನ ಎದೆ ರಗುತ ಹೇಗಿದೆ ಹೇಳು.(ಹಲ್ಲುಗಳ ಬಾಚಣಿಕೆ ತೋರಿಸಿ ನಗುತ್ತ ) ಇದೇ ಬಾಚಣಿಕೆ ನಿನಗೆ ಹೇಗಿದೆ ಹೇಳು ದುಶ್ಯಾಸನನ ಹಲ್ಲುಗಳ ಹಣಿಗೆ ( ಕರುಳು ಮಾಲೆ ಹಾಕಿ) ಓ ರುದ್ರ ಸುಂದರಿ ನಿನ್ನ ತುರುಬು ಕಟ್ಟಿದ ನಮ್ಮಯ ರೀತಿ ಸೊಗಸಿದೆಯೆ ?” ಎಂಬ ಭೀಮನ ರಣಭೇರಿಯ ಬಿರುನುಡಿಗಳು ಆದಿಕವಿ ಪಂಪನ ‘ವಿಕ್ರಮಾರ್ಜುನ ವಿಜಯ’ದ ‘ಕೇಶಪಾಶ ಪ್ರಪಂಚಂ’ ಭಾಗದಲ್ಲಿನ ಈ ಕೆಳಗಿನ 
‘ಪಸರಿಸಿ ಪಂದಲೆಯಂ ಮೆ
ಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದ|
ಳ್ದೊಸಗೆಯಿನವನ ಕರುಳ್ಗಳೆ|
ಪೊಸವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ||
ಎಂಬ ವಾಗ್ವಿಭಾವವನ್ನು ನೆನಪಿಸುತ್ತವೆ.

ರಾಜ್ಯಲಕ್ಷ್ಮಿಯ ಹಂಸತೂಲಿಕಾತಲ್ಪದಲ್ಲಿ ಒಮ್ಮೆ ಪಾಂಡವರತ್ತ, ಮಗದೊಮ್ಮೆ ಕುರುರಾಜರತ್ತ ತೂಗುತ್ತಿದ್ದ ಹಸ್ತಿನಾವತಿಯ  ಕೈವಶಕ್ಕಾಗಿ ನಡೆದ ಭಾರತಯುದ್ಧ ತನ್ಮೂಲಕ ಮನುಕುಲಕ್ಕೆ ‘ಹೊನ್ನು, ಮಣ್ಣುಗಳು ಎಂದೆಂದಿಗೂ ರಮಣನ ಕೈಹಿಡಿದು ಬಳಿಬಿದ್ದು ರಮಿಸುವ ಶಾಶ್ವತ ಜಲಜಾಕ್ಷಿಯರಲ್ಲ, ಅವು ನಿರಂತರವಾಗಿ ಕಾಲನ ಕೈಯೈಲ್ಲಿ ತೂಗುತ್ತಿರುವ ಚಂಚಲ ಚಂದ್ರಿಕೆಯರು’ ಎಂಬ ಸತ್ಯದ ಸಂದೇಶವನ್ನು ನೀಡುತ್ತದೆ. ಹನಮಂತರಾಯರು ಬೀಳಗಿ ತಾಲೂಕಿನ ಕಂದಗಲ್ಲಿನಲ್ಲಿ 1896 ಜನವರಿ 11 ರ ಭೂಮಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಹೊರಳಿಸುವ ಸಂಕ್ರಮಣದ ಅಮೃತಘಳಿಗೆಯಲ್ಲಿ ನಾಟ್ಯ ಸ್ವರ್ಗದ ಬಾಗಿಲನ್ನು ತೆರೆಯಲು ಅವತರಿಸಿದವರು.

ಜನ್ಮಭೂಮಿ ಕಂದಗಲ್ಲ ಎಂಬ ಗ್ರಾಮವಾದರೂ ತಮ್ಮ ನಾಟಕಗಳ ಕರ್ಮಭೂಮಿಯನ್ನಾಗಿ ಆಯ್ದುಕೊಂಡಿದ್ದು ಕಲೆ ಹಾಗೂ ಸಾಂಸ್ಕ್ರತಿಕ ಕ್ಷೇತ್ರದ ಇಂದ್ರಲೋಕ ಗುಳೇದಗುಡ್ಡವನ್ನು.ವಚನಕಾರ ಜೇಡರ ದಾಸಿಮಯ್ಯನವರ ನೇಕಾರಿಕೆಯನ್ನೇ ಕಾಯಕವನ್ನಾಗಿ ಆಚರಿಸುತ್ತಾ ಪಂಡಿತ ಪಾಮರರ ಬಾಳ ಬಟ್ಟೆಯಲ್ಲಿ  ಕಲೆ ಹಾಗೂ ಸಂಸ್ಕøತಿಯ ಕುಸುರಿಯನ್ನು ಅರಳಿಸಿದ ಹೆಗ್ಗಳಿಕೆ ಗುಳೇದಗುಡ್ಡ ಪಟ್ಟಣದ್ದಾಗಿದೆ. ಈ ಹೆಗ್ಗಳಿಕೆಗೆ ಕಾರಣವಾದ ಅಮೂಲ್ಯ ರತ್ನಗಳಲ್ಲಿ ಅನಘ್ರ್ಯವಾದುದು ಕಂದಗಲ್ಲ ಹನಮಂತರಾಯರು. ಮಹಾರಾಷ್ಟ್ರದ ಪುಣೆಯಲ್ಲಿ ಲೆಕ್ಕಿಗ ಕೆಲಸಕ್ಕೆ ಸೇರಿ, ಅಲ್ಲಿ ಕಲಾಹಬ್ಬಕ್ಕೆ ಕಾರಣವಾಗಿದ್ದ  ಮರಾಠಿ, ಬಂಗಾಳಿ ನಾಟಕಗಳ ಪ್ರಭಾವಕ್ಕೊಳಗಾದರು. ನೌಕರಿಯನ್ನು ತ್ಯಜಿಸಿ ರಂಗಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಂಗಜಂಗಮ ಹನಮಂತರಾಯರು ಕೆಲವು ಕಾಲ ಉತ್ತರ ಕರ್ನಾಟಕದ ಮೊಟ್ಟ ಮೊದಲ ರಂಗಕಲಾವಿದೆ ಯಲ್ಲುಬಾಯಿ ಗುಳೇದಗುಡ್ಡ ಹಾಗೂ ಸಹೋದರಿ ಗಾನರತ್ನ ಬಿರುದಾಂಕಿತೆ ಗಂಗೂಬಾಯಿ ಗುಳೇದಗುಡ್ಡರವರ ನಾಟಕ ಕಂಪೆನಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಇವರ ನಾಟ್ಯಕುಂಚದಲ್ಲಿ ಕಲಾಕೃತಿಯಾದ ಮೊಟ್ಟ ಮೊದಲ ನಾಟಕ ‘ಸಂಧ್ಯಾರಾಗ’, ವಿ. ಶಾಂತಾರಾಮರಿಂದ ‘ಸುಬಹಕಾ ತಾರಾ’ ಎಂಬ  ಚಲನಚಿತ್ರವಾಗಿ ಜಗತ್ತಿಗೆ ತನ್ನ ಪರಿಮಳದ ಸುಧೆಯನ್ನು ಉಣಬಡಿಸಿದೆ. ‘ಅಕ್ಷಯಾಂಬರ’, ‘ಕುರುಕ್ಷೇತ’್ರದಂತಹ ಪೌರಾಣಿಕ ನಾಟಕಗಳು ಇವರನ್ನು ಆವರಿಸಿಕೊಂಡಷ್ಟು ಸಂಧ್ಯಾರಾಗ, ಕಿತ್ತೂರು ರಾಣಿ ಚೆನ್ನಮ್ಮ ನಂತಹ ಐತಿಹಾಸಿಕ ನಾಟಕಗಳು ಅಷ್ಟಾಗಿ ಸೆಳೆಯಲಿಲ್ಲ.ಕಂದಗಲ್ಲ ಹನಮಂತರಾಯರ  ನಾಟಕಗಳ ಭಾಷೆಯೇ ವಿಶಿಷ್ಟಪೂರ್ಣವಾದುದು. ವಸುಂಧರೆಯ ರಂಗವೇ ಬೆದರಿ ಬೆಂಡಾಗಿ ಅದುರಿ  ನಡುನಡುಗಿ ಕುಣಿಯುವಂತೆ ಮಾಡಿ ಹವಣಿಸುತ್ತಲೇ ಸರದಿಯಂತೆ ಬಂದೆರಗುವ ಶಬ್ದಪ್ರಾಸಗಳೆಂಬ ಗುಡುಗು ಸಿಡಿಲು ಮಿಂಚುಗಳ ಉಲ್ಕೆಯದು. ಶಬ್ದಗಳೇ ಡಿಂಡಿಮವಾಗಿ ಅರ್ಥಗಳೇ ಎದೆತಾಳವಾಗಿ ಧ್ವನಿಯೇ ಸಾಕ್ಷಾತ್ ಶಂಭುವಾಗಿ ಅಕ್ಷರಗಳೇ ಹೆಜ್ಜೆಗಳ ಸಿಂಹನಾದವಾಗಿ ತ್ರಿಲೋಕಗಳೇ ಗಡಚಿಕ್ಕುವಂತೆ ಕುಣಿದ ರುದ್ರತಾಂಡವವದು.



ನಿದರ್ಶನಕ್ಕೆ ಅಶ್ವತ್ಥಾಮನು ಕುರುಕ್ಷೇತ್ರದ ರಣಾಂಗಣದಲ್ಲಿ ಕೆಂಬಾಣಗಳಿಂದ ಶರೀರ ಕತ್ತರಿಸಿಕೊಂಡು ಸ್ವರ್ಗಸ್ಥರಾಗಿದ್ದ ತನ್ನ ತಂದೆ ಗುರುದೇವ ದ್ರೋಣಾಚಾರ್ಯರ ಕೃಪೆಗಾಗಿ ಪ್ರಾರ್ಥಿಸುವ ಪರಿಯನ್ನೊಮ್ಮೆ ಹನಮಂತರಾಯರ ಸಿರಿನುಡಿಗಳಲ್ಲಿಯೇ ಕೇಳಿ-“ಓ ಅಗಸ್ತ್ಯ ನಕ್ಷತ್ರ ಕಡಲ ಕುಡಿದಿಟ್ಟ ದಿವ್ಯಾತ್ಮನು ನೀನು! ಗಾತ್ರದಲಿ ಸೂರ್ಯನನ್ನು ಎಷ್ಟು ಪಾಲು ಮಿಕ್ಕಿರುವಿ ಎಂಬುದು ಗೊತ್ತಾಗದು ಮಣ್ಣಿನ ಮಡಿಲ ಮಕ್ಕಳಿಗೆ. ಮೂರು ಪಾದಗಳಿಂದ ಮೂರು ಲೋಕಗಳನ್ನು ಆಕ್ರಮಿಸಿದ ಆ ತ್ರಿವಿಕ್ರಮನು ಕೇವಲ ಕೂಸು ನಿನ್ನ ಕಣ್ದಿಟ್ಟಿಗೆ. ಓ ಮಹಿತೋಮಹಿಮನೆ ನಿನ್ನೆದೆಯೊಳು ಮಲಗಿರುವ ಅಗ್ನಿರಸ ಕಡಲನೇ ಕೆರಳಿಸಿ ನನ್ನನ್ನು ಆಶೀರ್ವದಿಸು.ಬಿರುಗಾಳಿಗೆ ಭೋರ್ಗರೆವ ಕಡಲನೇ ನಿನ್ನೆದೆಯುಸಿರಿನಿಂದ ಕೆರಳಿಸಿ ನನ್ನೆದೆಯೊಳಗುರುಳಿಸು. ಗುಡುಗು ಮಿಂಚುಗಳ ಸಂಚಯ ಮಾಡೆನ್ನೆದೆಯೊಳಗೆ ನಿನ್ನೆದೆಯ ಸಿರಿಯ ಸುರಿಸಿ. ಓ ಎನ್ನ ತಂದೆಯೇ, ಗುರುದೇವ ದ್ರೋಣಾರ್ಯರೆ, ಕಪಟತನದಿಂದ ನಿಮ್ಮಂಕೋದ ಕೌಂತೇಯರ ಕೆನ್ನೀರಿನೊಡನೆ ದುಃಖಾಶ್ರುಗಳನ್ನು ಅರ್ಪಿಸುವೆನಲ್ಲದೇ ಬರಿಯ ಕಣ್ಣ್ಣೀರಿನಿಂದ ದುಃಖಾಶ್ರುಗಳನ್ನರ್ಪಿಸಲಾರೆ. ಪಾಂಡವರ ರಕ್ತ ಮಾಂಸ ಮಜ್ಜಾದಿಗಳಿಂದ ನಿಮಗೆ ಪಿಂಡ ಪ್ರದಾನ ಮಾಡುವೆನಲ್ಲದೇ ಬರಿಯ ಪಿಂಡ ಪ್ರದಾನ ಮಾಡಲಾರೆ. ಕೆಂಪನೋಕರಿಪ ನರಮೇಧ ಯಜ್ಞರಂಗದಲಿ ಪಾಂಡವರ ಮಿದುಳಿನ ಮಲ್ಲಿಗೆಯ  ಹಾರವನು ಕೌರವೇಶನ ಕೊರಳಿಗೆ ಹಾಕುವೆ ನನ್ನ ತಂದೆಯ ಜೈ ಜಯಕಾರದಲಿ.ಈ ಮಾತಿಗೆ ಸಾಕ್ಷಿಯಾಗಿರಲಿ ದಕ್ಷಿಣ ದಿಕ್ಕಿನಲ್ಲಿ ಮೂಡಿದ  ಅಗಸ್ತ್ಯ ನಕ್ಷತ್ರ.”ನುಡಿಗಡಣದ ಕಡೆಗೀಲುಗಳನ್ನೇ ಮುರಿದು ಪುಡಿಗಟ್ಟಿ ನವರಸಗಳಿಂದ ಹದ ಮಾಡಿ ಒಪ್ಪವಿಟ್ಟು ನಿರ್ಮಿಸಿದ ತೊಳಗಿ ಬೆಳಗುವ ಸ್ವರ್ಣಪುತ್ಥಳಿಯ ಹೊಂಬೆಳಕು ಈ ರಕ್ತರಾತ್ರಿ ನಾಟಕ. ಇವರ ದೀರ್ಘವಾದ ಪ್ರೌಢ ಸಂಭಾಷಣೆಯ ವಾಕ್ಯಗಳನ್ನು ಪಠಿಸಿ ಅಭಿನಯಿಸುವವರಿಗೆ ಎಂಟೆದೆಯೇ ಬೇಕು. ಆದರೂ ಪ್ರಾಸಬದ್ಧವಾದ ಲಯವಂತಿಕೆಯ ಔಚಿತ್ಯಪೂರ್ಣ ಪದಸಂಪತ್ತು ನಾಟ್ಯರಮಣೀಯತೆಯನ್ನು ಮೈದುಂಬಿಕೊಂಡು ಆಡುಮಾತಿನ ರೂಪಕವಾಗಿ ಸುಲಲಿತತೆಗೆ ಮೆರಗನ್ನುಂಟುಮಾಡುತ್ತದೆ. ಇವರ ಭಾಷೆ ಸಂಸ್ಕøತ, ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡಗಳ ಸಮಯೋಚಿತ ಸಮನ್ವಯದ ಸಮ್ಮಿಳಿತ ರಸಾಯನವದು.ಇಲ್ಲಿಯ ಭಾಷೆ ವಿದ್ಯೆಯ ನಾಲಿಗೆಗೆ ಬಹುಬೇಗನೇ ಹೊಂದಿಕೊಂಡರೂ ಕಲಿಯದವರಿಗೆ ಕಬ್ಬಿಣದ ಕಡಲೆಯಲ್ಲ. ಕುಮಾರವ್ಯಾಸನೇ ತನ್ನ ಭಾರತಕಾವ್ಯವನ್ನು ಕುರಿತು ಹೇಳಿದ


ಇಲ್ಲಿಯ ಭಾಷೆ ವಿದ್ಯೆಯ ನಾಲಿಗೆಗೆ ಬಹುಬೇಗನೇ ಹೊಂದಿಕೊಂಡರೂ ಕಲಿಯದವರಿಗೆ ಕಬ್ಬಿಣದ ಕಡಲೆಯಲ್ಲ. ಕುಮಾರವ್ಯಾಸನೇ ತನ್ನ ಭಾರತಕಾವ್ಯವನ್ನು ಕುರಿತು ಹೇಳಿದ
“ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾಪರಿಣತರಲಂಕಾರ”
ಎಂಬ ಮಾತುಗಳು ಹನಮಂತರಾಯರ ರಕ್ತರಾತ್ರಿ ನಾಟಕಕ್ಕೂ ಅನ್ವಯವಾಗುತ್ತವೆ. ದ.ರಾ. ಬೇಂದ್ರೆಯವರು “ಕಂದಗಲ್ಲರ ನಾಟಕಗಳ ಇರವನ್ನೂ ಹಾಗೂ ಅರಿವನ್ನೂ ಬಲ್ಲವರಾರೆಂದರೆ, ಸಾಹಿತ್ಯವೆಂದರೇನೂ ಅರಿಯದ ಮುಗ್ಧನೊಬ್ಬ, ಇಲ್ಲವೇ ಎಲ್ಲವನ್ನೂ ಅರಿತ ವಿದ್ವಾಂಸನೊಬ್ಬ” ಎಂದು ಒರೆಗೆ ಹಚ್ಚಿ ಪಂಡಿತ ಪಾಮರರಿಬ್ಬರಿಗೂ ಸಲ್ಲುವ ಇವರ ನಾಟಕ ಸಾಹಿತ್ಯ ಮೌಲಿಕವಾದುದು ಎಂಬುದನ್ನು ಸಾರುತ್ತಾರೆ. ಕುವೆಂಪುರವರು ಹನಮಂತರಾಯರ ನಾಟ್ಯವಿಲಾಸಕ್ಕೆ ಸಲ್ಲಿಸುವ ನುಡಿನಮನ “ಸರಳ ರಗಳೆಯ ಭಾಷೆಯನ್ನು ರಂಗಭೂಮಿಯಲ್ಲಿ ಯಶಸ್ಸುಗೊಳಿಸಿದ ಸಾಹಸ ಹನಮಂತರಾಯರದು” ಎಂದು ದಾಖಲಾಗಿದೆ. ಅನಕೃ ರವರು ರಾಯರಿಗೆ ‘ಅಭಿನವ ಮುದ್ದಣ’ ನೆಂದೇ ಬಿರುದು ನೀಡಿದ್ದಾರೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನಮ್ಮ ದೇಶ ಎದುರಿಸಿದ ಸಂಕಷ್ಟಗಳನ್ನು ಕಣ್ಣಾರೆ ಕಂಡ ಹನಮಂತರಾಯರು ಈ ಸಂಕಟಗಳಿಗೆ ಪರಿಹಾರವಾಗಬಲ್ಲ ರಾಷ್ಟ್ರಪ್ರೇಮದ ಮೂಲಕ ಭಾರತಮಾತೆಯನ್ನು ವಿಶ್ವಗುರುಮಾತೆಯನ್ನಾಗಿ ಕಾಣುವ ಹಂಬಲವನ್ನು  ರಕ್ತರಾತ್ರಿ ನಾಟಕದ ಪಾತ್ರಗಳಲ್ಲಿ ಭಕ್ತಿಪೂರ್ವಕವಾಗಿ ಅಭಿವ್ಯಕ್ತಿಸಿದ್ದಾರೆ.ಗಾಂಧೀಜಿಯವರ ತತ್ವಾದರ್ಶಗಳಿಗೆ ಮಾರುಹೋಗಿದ್ದ ಇವರು ತಮ್ಮ ಸಾಹಿತ್ಯದ ಮೂಲಕ ಅವುಗಳನ್ನು ಪ್ರತಿಷ್ಠಾಪಿಸುವ ಕಳಕಳಿಯನ್ನು ಬದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ರಾಯರು ಸನಾತನ ಧರ್ಮದ ರಸವನ್ನು ಸಾರುವ ವೇದೋಪನಿಷತ್ತುಗಳನ್ನೂ ಕೂಡ ವಿಮರ್ಶಿಸದೆ ಬಿಟ್ಟವರಲ್ಲ. ‘ಓ ಗುರುಪುತ್ರ! ಇಂದು ಎಲ್ಲಿ ಕಣ್ಣಿಡಲಲ್ಲಿ ಕಾಂಬುದು ಕೈಸಾಗದವರ ಕೆನ್ನೀರು. ಸಬಲರು ಹರಿಸಿದ ನೆತ್ತರು ಪ್ರೀತಿಯೇ ಪವಿತ್ರವೆಂದು ಗೆಳೆತನವೇ ಸಮಸ್ತ ಮಾನವ ಸಮಾಜಕ್ಕೆ ತಳಹದಿಯೆಂದು ಉದ್ಘೋಷಿಸಿದ ಉಪನಿಷತ್ತಿನ ಧರ್ಮಕಾರ್ಯಗಳು ಹಳೆಯ ಹೊತ್ತಿಗೆಯ ಮಾತಾಗಿದೆ.” ಎಂದು ದ್ರೌಪದಿಯ ಮೂಲಕ ಸಮಕಾಲೀನ ಸಮಾಜದಲ್ಲಿ ಪರಂಪರೆಯ ಸೋಗಿನಲ್ಲಿ ಸೃಷ್ಟಿಯಾಗಿರುವ ಉಳ್ಳವರು ಹಾಗೂ ಬಡವರ ನಡುವಿನ ಕಣಿವೆಯ ಆಳವನ್ನು ಅಳೆದು ತೋರುತ್ತಾರೆ. ಮಾನವಕುಲಕ್ಕೆ ಪ್ರೀತಿ, ಪ್ರೇಮ, ವಾತ್ಸಲ್ಯ, ದಯೆ, ಅಂತಃಕರಣ, ಅನುಕಂಪ, ವಿಶ್ವಾಸದ ಸಂದೇಶಗಳು ಮುಖ್ಯವಾಗಬೇಕೇ ವಿನಃ ಜಾತಿ ಮತ, ಧರ್ಮ. ಪಂಥಗಳ ತಳಹದಿಯ ಮೇಲಿನ ಅಭದ್ರ ತಾರತಮ್ಯಗಳಲ್ಲ. ಹರಿಯುವ ನೆತ್ತರು ಯಾರದಾದರೂ ಅದರೊಳಗಿನ ವಾತ್ಸಲ್ಯದ ಬಣ್ಣ ಒಂದೇ ಎಂಬುದನ್ನು ಇಂದು ಅರಿಯಬೇಕಾಗಿದೆ. ಇದಕ್ಕೆ ಪೂರಕವಾಗಿ ಕೇಶವ ಹೀಗೆ ಪ್ರತಿಕ್ರಿಯಿಸುತ್ತಾನೆ- “ಬೇಕಾದಂತಹ ಬಟ್ಟೆಗಳ ದಿನಕೊಮ್ಮೆ ಬದಲಿಸಿ ತೊಟ್ಟು ಕಳೆಯುವವರಿಲ್ಲಿ, ಆದರೆ ತುಂಡು ಬಟ್ಟೆ ಸಿಕ್ಕದು ಬಡವನ ಮೈಗೆ. ಇಂದ್ರನ ಅರಮನೆಯನ್ನು ನಾಚಿಸುವಂತಹ ಹಿರಿಮನೆಗಳು ಹುಟ್ಟಿದರೂ, ಗುಡಿಸಲಿನಲ್ಲಿ ಕಾಲಕಳೆಯುವವರು ಬಡಜನ. ಬಾನಿನಿಂದಿಳೀದು ಬಂದ ಮಿಂಚೆ, ಮನೆ ಮನೆಗಳಿಗೂ ಎಣ್ಣೇ ಇಲ್ಲದ ದೀಪ ಉರಿಸಿದರೂ ಬಡತನದೊಡಲಿಗೆ ತೊಟ್ಟು ತೈಲವಿಲ್ಲ. ಮತ್ತೆ ಬಡಗುಡಿಸಲಿನಲ್ಲಿ ಬೆಳಕಿಲ್ಲ. ಓ ಕಲಿಪುರುಷ ಸಿರಿವಂತರ ಕೈಯ್ಯಲ್ಲಿ ಈ ಭೂಗೋಲಕ ಒಡಕಗೋಲಕ. ರಾಯರು ತಮ್ಮ ಬದುಕಿನ ಬಡತನದ ಬೇಗೆಯಲ್ಲಿ ಬೆಂದು ಕಂಡುಂಡ ನೋವುಗಳೇ ಹೀಗೆ ಕೇಶವನ ಮಾತುಗಳಾಗಿ ರೂಪು ಪಡೆದಿರಲಿಕ್ಕೆ ಸಾಕು. ಇವರ ನಾಟ್ಯ ಕಾವ್ಯ ಬಡವರ ಪರ,ದುಡಿಯುವ ವರ್ಗದ ಪರ ಧ್ವನಿಯನ್ನು ಎತ್ತುವ ಶಿಷ್ಟಜನರಕ್ಷಕ ಪಾತ್ರವನ್ನು ವಹಿಸುತ್ತದೆ. ಇಲ್ಲಿ ಮೈದಾಳುವ ಕಲಿಪುರುಷನ ಪಾತ್ರವಂತೂ ನವಯುಗದ ಅದ್ಭುತಗಳಿಗೆ ಅದ್ವಾನಗಳಿಗೆ ಮುನ್ನುಡಿಯಂತಿದೆ.

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...