Total Pageviews

Saturday 1 May 2021

ಜಗವೆಂಬ ಕಡಲ ಕುದಿ ದಂಡಿ

 ಜಗವೆಂಬ ಕಡಲ ಕುದಿ ದಂಡಿ
‘ದಂಡಿ' ಇದು ಇದುವರೆಗೂ ನಾವು ತಿಳಿದಿರುವಂತೆ ಕೇವಲ ಒಂದು ಸ್ಥಳದ ಹೆಸರಲ್ಲ ಎಂಬ ಸತ್ಯ ಡಾ.ರಾಜಶೇಖರ ಮಠಪತಿಯವರ (ರಾಗಂ) "ದಂಡಿ"  ಕಾದಂಬರಿಯನ್ನೋದಿದ ನಂತ
ರ ದರ್ಶನವಾಗದೇ ಇದು. 'ದಂಡಿ'  ಹೋರಾಟದ ರೂಪಕವೂ ಹೌದು. ಸತ್ಯಕ್ಕಾಗಿ ನಡೆದ ಆಗ್ರಹದ ಪ್ರತಿರೂಪವೂ ಹೌದು. ದಂಡಿಯೆಂದರೆ ನಮಗೆ ನೆನಪಾಗುವುದು ಗಾಂಧೀಜಿಯವರು ೧೯೩೦ ಜನವರಿ ೩೦ ರಂದು ಬ್ರಿಟಿಷರು ಉಪ್ಪಿನ ಮೇಲೆ ಹೇರಿದ ಕರವನ್ನು ವಿರೋಧಿಸಿ ನಡೆಸಿದ ಉಲ್ಲಂಘನೆಯ ಪ್ರತಿಭಟನೆ. ಸ್ವದೇಶಿ ಚಳುವಳಿ ತೀವ್ರವಾಗಿ ಸಂಭವಿಸುತ್ತಿದ್ದ ಕಾಲಘಟ್ಟವದು.  ಗುಲಾಮಗಿರಿಯಲ್ಲಿ ದೇಶ ನರಳುತ್ತಿದ್ದ ಸಂದರ್ಭವದು. ಪರಂಗಿಯವರ ಬಂದೂಕಿನ ಮೇಲೆ ಜನ್ಮತಳೆದ ಕಾಯಿದೆಗಳು ನಮ್ಮನ್ನಾಳಿ ತುಳಿದು ಮೆರೆಯುತ್ತಿದ್ದ ದುರಿತ ಸಂಕಟಗಳ ಸಮಯ. ಮಂದಗಾಮಿಗಳು, ತೀವ್ರಗಾಮಿಗಳು ತಮ್ಮದೇ ನೆಲೆಯಲ್ಲಿ ಹೋರಾಟವನ್ನು ರೂಪಿಸಿಕೊಂಡು ಬ್ರಿಟಿಷರಿಗಾಗಿ ಕ್ರಾಂತಿಯ ಬಲೆಯನ್ನು ನೇಯುತ್ತಿದ್ದ ಸಂದಿಗ್ಧ ಕಾಲದಲ್ಲಿ ಸ್ವಾತಂತ್ರ‍್ಯ ಸಂಗ್ರಾಮಕ್ಕೊಂದು  ನಿರ್ಣಾಯಕವಾಗಬಹುದಾದ ದಿಕ್ಕು ದೆಸೆಯನ್ನು ತೋರಿದ ಚಳುವಳಿಯೆಂದರೆ ದಂಡಿ ಉಪ್ಪಿನ ಸತ್ಯಾಗ್ರಹ. ಸ್ವಾತಂತ್ರ‍್ಯ ಚಳುವಳಿಯ ಇತಿಹಾಸದಲ್ಲಿ ದಂಡಿ ಹೋರಾಟಕ್ಕೆ ವಿಶೇಷವಾದ ಮಹತ್ವವಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಅನುಯಾಯಿಗಳೊಂದಿಗೆ ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ೨೪೦ ಮೈಲುಗಳ ಕಾಲ್ನಡಿಗೆಯ ಮೂಲಕ ಮಾರ್ಚ್ - ಎಪ್ರಿಲ್ ನಲ್ಲಿ ೨೫ ದಿನಗಳ ಕಾಲ ದಂಡಿಯವರೆಗೆ ಸಾಗಿ ಅಲ್ಲಿ ಉಪ್ಪನ್ನು ತಯಾರಿಸುವುದರ ಮೂಲಕ  ಉಪ್ಪಿನ ಮೇಲೆ ಆಂಗ್ಲರು ಹಾಕಿದ ತೆರಿಗೆಯನ್ನು ವಿರೋಧಿಸಿದರು. ಸಾವಿಲ್ಲದ ಸ್ವಾತಂತ್ರ‍್ಯ ಹೋರಾಟದ ಹಸಿ ಹಸಿಯಾದ ನೆನಪುಗಳನ್ನಿಟ್ಟುಕೊಂಡು, ಸಾವಿರದ ಹೆಜ್ಜೆಗಳನ್ನು ಗಾಂಧೀಜಿಯೊಂದಿಗೆ ಇಡಬಯಸಿದವರು ದಂಡಿ ಕಾದಂಬರಿಯ ಕರ್ತೃ ರಾಗಂರವರು. ಹಾಗೆಂದು ದಂಡಿ ಕೇವಲ ಉಪ್ಪಿನ ಕಥೆಯಲ್ಲ ; ಉಪ್ಪು ತಿಂದು ನೀರನ್ನು ಕುಡಿದವರ ಕಥೆಯೂ ಅಲ್ಲ ; ಉಪ್ಪಿನ ಋಣಕ್ಕಾಗಿ ಹೋರಾಡಿ ಹಾಡಿ ಮಡಿದವರ ವ್ಯಥೆ ; ಸ್ವಾತಂತ್ರ‍್ಯವೆಂಬ ಉಪ್ಪಿನ ರುಚಿಗಾಗಿ ಬಲಿಯಾದವರ ಯಶೋಗಾಥೆ. ಉಪ್ಪು ಭಾರತೀಯರ ಅಸ್ಮಿತೆಯ ಸಂಗತಿ ; ಬದುಕಿನ ಗೆಳತಿ. ವೈಜ್ಞಾನಿಕವಾಗಿ ಉಪ್ಪು ಕೊಳೆಯನ್ನು ತೊಳೆಯಲು ಹೆಸರಾಗಿರುವಂತೆಯೇ ಭಾರತಕ್ಕಂಟಿದ ವಸಾಹತುಶಾಹಿ ಮಾಲಿನ್ಯದಿಂದ ಬಿಡುಗಡೆಗೊಳಿಸುವ ವಿಮುಕ್ತಿಯ ಸಂಜೀವಿನಿಯಾಗಿಯೂ ಪಾತ್ರವನ್ನು ನಿರ್ವಹಿಸಿದೆ ಹಾಗೂ ಕೆಲವೊಮ್ಮೆ ಮಹಾತ್ಮಾಗಾಂಧಿಯಾಗಿ, ಮಗದೊಮ್ಮೆ ಕಾದಂಬರಿ ದಂಡಿಯಾಗಿ. ಈ ಕಾದಂಬರಿಯಲ್ಲಿ ದಂಡಿ ಹೋರಾಟದ ಪ್ರತಿಮೆಯಾಗಿ ಮಾತ್ರ ವಿರಮಿಸದೇ ಒಂದು ಪಾತ್ರವಾಗಿ ಕಡಲಿನ ಪ್ರವಾಹದಂತೆ ಹರಿದುಬಂದಿರುವುದು ವಿಶೇಷವಾಗಿದೆ.
ಕರಾವಳಿಯು ನಮ್ಮ ನಾಡಿನ ದಂಡಿಯಾಗಿ ಮಾರ್ಪಟ್ಟ ಘಳಿಗೆಗಳ ಜೀವಂತ ನೆನಪುಗಳನ್ನು ಮರಳಿ ಹಸಿರು ಹಸಿರಾಗಿ ಕಟ್ಟಿಕೊಡುವ ಮಹತ್ವದ ದಾಖಲೆಯಾಗಿ ಈ ಕಾದಂಬರಿ ಗಮನ ಸೆಳೆಯುತ್ತದೆ. ಕಾದಂಬರಿಕಾರರು ಕರಾವಳಿಯ ನಾಡಿನವರಲ್ಲದಿದ್ದರೂ ಅಲ್ಲಿಯ ಪರಿಸರದ ಹೋರಾಟವೊಂದನ್ನು ಮನೋಜ್ಞವಾಗಿ ಹೆಣೆದುಕೊಡುವ ಪ್ರಯತ್ನ ವಿಸ್ಮಯ ಮೂಡಿಸುವಂತಿದೆ. ತಮ್ಮ ವೃತ್ತಿ ಜೀವನದ ಹನ್ನೊಂದು ಹಾಗೂ ಮತ್ತೊಂದು ತಿಂಗಳ ಕೆಲವೇ ಅವಧಿಯನ್ನು‌ ಭಟ್ಕಳದ ನೆಲದಲ್ಲಿ‌ ಕಳೆದ ಅನುಭವಗಳ ಆಧಾರದ ಮೇಲೆಯೇ ಕಡಲತಡಿಯ ಪ್ರದೇಶದ  ಸಾತಂತ್ರ‍್ಯ ಹೋರಾಟವೊಂದರ ಚಿತ್ರಣದ ಮಲ್ಲಿಗೆಯಮಾಲೆಯನ್ನು ಅಭೂತಪೂರ್ವವಾಗಿ ಹೆಣೆದು ಕನ್ನಡ ಸರಸ್ವತಿಗೆ ಮುಡಿಸಿದ ಯಶಸ್ಸು ಕಾದಂಬರಿಕಾರರಿಗೆ ಸಲ್ಲುತ್ತದೆ. ಲೇಖನಿ ಹಾಗೂ ಲೇಖಕರು ಎಂದೆಂದಿಗೂ ಸೀಮಾತೀತ ಎನ್ನುವುದಕ್ಕೆ ‌ನಿದರ್ಶನದಂತಿದೆ ಈ ಕೃತಿ. ಕಡಲ ಕಿನಾರೆಯ ನಾಡಿನಲ್ಲಿ ಸಂಭವಿಸಿದ ಸಾತಂತ್ರ‍್ಯ ಹೋರಾಟವನ್ನು ಕುರಿತು ಪ್ರಥಮ ದಾಖಲೆಯ ಕೃತಿಯಾಗಿಯೂ 'ದಂಡಿ'ಗೆ ವಿಶೇಷ ಸ್ಥಾನಮಾನವಿದೆ. ನಮ್ಮ ನಾಡಿನ ಪಶ್ಚಿಮದ ಸಾಗರದ ದಂಡೆಯ ಮೇಲೆ ಹರಳುಗಟ್ಟಿದ ಸಾತಂತ್ರ‍್ಯ ಹೋರಾಟದ ಘಟನೆಗಳನ್ನು ಎಳೆಎಳೆಯಾಗಿ ಹೆಕ್ಕಿಕೊಡುವ ದೃಶ್ಯಕಾವ್ಯವೇ ದಂಡಿ ಕಾದಂಬರಿ.
ಅಮಾಯಕರ ಮೇಲೆ ನಡೆದ ವಸಾಹತುಶಾಹಿಯ 
ದೌರ್ಜನ್ಯ, ಉಳುವವರನ್ನೇ ಗುರಿಯಾಗಿಸಿಕೊಂಡ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ, ಹೊರಗಿನ ಶತ್ರುಗಳಿಗಿಂತ ಅಪಾಯಕಾರಿಯಾದ ನಾಡಿನೊಳಗಿನ ವೈರಿಗಳ ಕುತಂತ್ರಗಳು, ಇದೇ ಸರಿಯಾದ ಸಂದರ್ಭವೆಂದು ಬಗೆದು ಬಡವರ ಹೊಟ್ಟೆ ಬಗೆದ ದುರುಳರ ಅಟ್ಟಹಾಸ, ಜೋಳಿಗೆ ಹಾಕಿಕೊಂಡು ತಿರುಗಿದರೆ ಸಾಕು ಬಂಧಿಸಿ ಕೊಲ್ಲುವ ಪರಂಗಿಯವರ ಬಂದೂಕುಗಳ ಮಾರಣಹೋಮ, ವಂದೇಮಾತರಂ ಎಂದವರನ್ನು ಜೈಲಿಗಟ್ಟಿ ಮೂಳೆಗಳನ್ನು ಪುಡಿಮಾಡಿ ಜೀವಂತ ಶವಗಳನ್ನಾಗಿಸುವ ಪರಂಗಿಯವರ ಪಕ್ಷವಹಿಸಿ ಮೆರೆದ ನಮ್ಮವರ ದುರುಳುತನಗಳು ಇವೆಲ್ಲವುಗಳ ಸುತ್ತ ಹೆಣೆದ ಹುತ್ತಗಟ್ಟಿದ ಚಿತ್ತವೇ ಈ ಕಾದಂಬರಿಯ ಮೂಲಸೆಲೆ. ಹಾಲಿನಂತೆಯೇ ಪರಿಶುದ್ಧವಾಗಿರುವ ಹಾಲಕ್ಕಿ‌ ಜನರ ಜೀವನದೊಳಗೆ ವಿಷ ಬೆರೆಸಿ ಕಾಡಿನಿಂದ ಒಕ್ಕಲೆಬ್ಬಿಸುವ ಹುನ್ನಾರದ ವಿರುದ್ಧದ ಪ್ರತಿಭಟನೆಯೂ ಒಂದು ಸಾತಂತ್ರ‍್ಯ ಹೋರಾಟವೇ ಎಂಬ ಕ್ರಾಂತಿಗಿರುವ ಹೊಸ ಆಯಾಮದತ್ತ ಬೊಟ್ಟು ಮಾಡುತ್ತದೆ ಕಾದಂಬರಿಯೊಳಗಿನ ಆಶಯ. ಈ ಕಾದಂಬರಿಯು ವಿಶಾಲ್  ರಾಜ್ ವರ ನಿರ್ದೇಶನದಲ್ಲಿ ಚಲನಚಿತ್ರವಾಗುತ್ತಿರುವ ಈ ಹೊತ್ತಿನಲ್ಲಿ ಈ ಕೃತಿಯೊಂದಿಗಿನ ನನ್ನ ಅನುಸಂಧಾನ ಕೊರೊನಾ ದೊಂದಿಗಿನ ಹೋರಾಟವನ್ನು ಚೈತನ್ಯಪೂರ್ಣಗೊಳಿಸಿದೆ. ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ, ಮನೋಬಲಗಳನ್ನು ವೃದ್ಧಿಸುವಲ್ಲಿ ರೂಪಕವಾಗಿ ಕಾದಂಬರಿಯ ಅಧ್ಯಯನ ಈ ಹೊತ್ತಿನ ಮದ್ದಾಗಿದೆ ಎಂಬುದರಲ್ಲಿ ಅತಿಶಯೋಕ್ತಿಯೇನಲ್ಲ.

    ಕಾದಂಬರಿಕಾರರಾದ ರಾಗಂರವರು "ಈ ನನ್ನ ದಂಡಿ ತುಂಡು ನೆಲದ ಕಥನವಲ್ಲ. ಜಗವೆಂಬ ಕಡಲ ಕುದಿ. 'ದಂಡಿ' ಸತ್ತವರ ಚರಿತ್ರೆಯಲ್ಲ, ವರ್ತಮಾನವಲ್ಲ, ಮುಂದೊಮ್ಮೆ ಇದು ಭವಿಷ್ಯವಾಗುವುದಾದರೆ ಅದು ಗುಣದ ಶಕ್ತಿ ಒಂದರ್ಥದಲ್ಲಿ ಇದು ನಾವು ನಿತ್ಯ ತಿಂದು ಮರೆಯುವ ಉಪ್ಪಿನ ಆತ್ಮಚರಿತ್ರೆ. ಆದರೆ, ಉಪ್ಪೆಂದರೆ ? ಗುಣ ಮತ್ತು ಋಣದ ಹಾಡು. ಈ ಅರ್ಥದಲ್ಲಿ 'ದಂಡಿ' ಇಡಿಯಾದ ಜಗತ್ತಿನಲ್ಲಿ ಚಾಚಿಕೊಂಡ ಮನುಷ್ಯನೆಂಬೋ ಮನುಷ್ಯ  ಧರ್ಮದ ಅನಾವರಣವಷ್ಟೇ. ಗಾಂಧಿಯಾಗುವ ಈ ಮನುಷ್ಯ ಋಣದ ಕಾರಣ ಖಂಡಾಂತರ ಸುತ್ತುತ್ತಾನೆ. ಲೋಕದ ಜೀವನ್ಮರಣದಲ್ಲಿ ಬೆರೆತು ಕಡಲುಕ್ಕಿದಲ್ಲೆಲ್ಲಾ ದಂಡಿ ದಂಡಿಯಾಗಿ ರ‍್ಮವೆಂದರೇನು ? ಋಣವೆಂದರೇನು ? ಮನುಷ್ಯಗುಣವೆಂದರೇನು ? ಎಂದು ಪ್ರಶ್ನೆ-ಪ್ರಜ್ಞೆಗಳ ಸಾಲು ಮರಗಳ ನೆಟ್ಟು ನಮ್ಮ ಸಾವನ್ನೂ ಪ್ರಶ್ನೆಯಾಗಿಸುತ್ತಾನೆ." ಎಂದು ಹಿಡಿಉಪ್ಪನ್ನು , ಚಿಟಿಕೆ ಮಣ್ಣನ್ನು ಹಿಡಿದು  ಅರೆಬೆತ್ತಲೆ ಫಕೀರನೊಬ್ಬ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದವರ ಬುಡವನ್ನೇ ಅಲ್ಲಾಡಿಸಿದ ಚರಿತ್ರೆಯಾಗಿ ದಂಡಿ ಕಾದಂಬರಿ ರೂಪುಗೊಂಡ ಬಗೆಯನ್ನು ಅನೂಹ್ಯವಾಗಿ ಬಣ್ಣಿಸುತ್ತಾರೆ. ‘ದಂಡಿ’ ಈ ಕಾದಂಬರಿಯ ನಾಯಕನ ಹೆಸರು. ಅಹಿಂಸಾತ್ಮಕತೆಯನ್ನೇ ಉಸಿರಾಡುವ ಜನರ ಮಧ್ಯೆ ತರವಲ್ಲದ ಸ್ವರವಾಗಿ ಮೂಡಿಬಂದವನೀತ. ತನ್ನ ಜನರನ್ನು ಭೂತದಂತೆ ಕಾಡಿದ ಲತೀಫ್ ಖಾನ್ ನ ರುಂಡವನ್ನು ಚೆಂಡಾಡಿ ಹಿಂಸೆಯ ದಾರಿಯನ್ನು ಹಿಡಿದ ಉಗ್ರಗಾಮಿಯಾಗಿ ದಾರಿ ತಪ್ಪಿದ ದಂಡಿಯನ್ನು ನಿಲ್ಲಿಸಿ, ಉಪ್ಪಿನ ಕಥೆಯನ್ನು ಹೇಳಿ, ಬಾಯಿಗೆ ಚಿಟಿಕೆ ಉಪ್ಪು ಹಾಕಿ, ಋಣದ ಶಾಂತಿಯ ಹಾದಿಗೆ ತಂದವಳು ತಾಯಿಯಂತಿದ್ದ‌ ರುಕ್ಮಣಿಬಾಯಿ.     ಕರಾವಳಿ ಕರ್ನಾಟಕದ ಮಡಿಲ ಹೋರಾಟಗಳೆಲ್ಲವನ್ನೂ ತನ್ನದೆಂಬಂತೆ ಮಡಿಲು ತುಂಬಿಕೊಂಡು ಸವೆದ ರುಕ್ಮಣಿಬಾಯಿ ತಾಯಿ ಭಾರತಿಯ ಮಗದೊಂದು ಪ್ರತಿರೂಪ.‌ ಹಳಿ ತಪ್ಪಿದ ದಂಡಿಯೆಂಬ ಕುದಿರಕ್ತದ ಒಡಲ ಬಂಡಿಗೆ ರುಕ್ಮಿಣಿಬಾಯಿಯ ನುಡಿಗಡಣವೇ ಕಡೆಗೀಲಾದವು. ಮಲ್ಲಿಗೆಯ ಪರಿಮಳದಂತಿದ್ದ ಒಲುಮೆಯ ಗೆಳತಿ ವಸುಧೆಯ ಹೃದಯಮಿಡಿತ ದಂಡಿಯ ಬಾಳಿನ ಬೆಳಕಾಯಿತು. ದಂಡಿ ಹೊರಡುತ್ತಾನೆ ತಾನೇ ಕಂಡುಕೊಂಡ ಹೋರಾಟದ ಹಾದಿಯೆಡೆ್ಗೆ; ಬಯಕೆಗಳಿಂದ ಬಿಡುಗಡೆಗೊಂಡ ಮುಕ್ತಿಯ ಪಥದೆಡೆಗೆ. ತಾನೊಬ್ಬನೇ ಬೆಳಕನ್ನು ಕಂಡದ್ದಲ್ಲದೇ ನಮಗೆಲ್ಲರಿಗೂ ಬೆಳಕಿನ ಹಾದಿಯನ್ನು ತೋರುವ ನಾಯಕನಾಗಿ ದಂಡಿ ಇಲ್ಲಿ ರೂಪು ಪಡೆಯುವ ಪರಿ ವಿಭಿನ್ನವಾಗಿದೆ.

ಜನಾಂಗವೊಂದು ಜನಾಂಗದಾಚೆಗೆ, ಪ್ರದೇಶವೊಂದು ಪ್ರದೇಶದಾಚೆಗೆ, ಹೋರಾಟವೊಂದು ಹೋರಾಟದಾಚೆಗೆ ವಿಸ್ತರಿಸಿಕೊಂಡ ಸೀಮಾತೀತತೆಯನ್ನು ಅನಾವರಣಗೊಳಿಸುತ್ತದೆ ಕಾದಂಬರಿ. ಇಲ್ಲಿ ಮೈವಡೆದಿರುವ ಹೋರಾಟ ಕೇವಲ ಕರಾವಳಿ ಕರ್ನಾಟಕದ್ದಲ್ಲ, ಅಖಂಡ ಭಾರತದ್ದು, ಅಸೀಮ ಜಗತ್ತಿನದು. ಏಕೆಂದರೆ ಸ್ವಾತಂತ್ರ‍್ಯದ ಸಂಗ್ರಾಮ ಕಾಲಾತೀತ ಹಾಗೂ ಸೀಮಾತೀತ. ಇದು ಭೂತದೊಳಗೆ ಮಣ್ಣಾಗಿ ಹೋಗಿರುವಂತೆಯೇ ವರ್ತಮಾನದೊಳಗೆ ಗುಪ್ತಗಾಮಿನಿಯಾಗಿ, ಭವಿಷ್ಯತ್ತಿನೊಳಗೆ ಕ್ಷೀರಪಥವಾಗಿ  ಗೋಚರಿಸಬಲ್ಲದು. ವರ್ತಮಾನದಲ್ಲಿಯ ಜಗತ್ತಿನ ಯಾವುದೇ ಮೂಲೆಯಲ್ಲಿ ಜರುಗುತ್ತಿರುವ ಬಂಡಾಯದ ಕಹಳೆಯಿರಬಹುದು, ರೈತ ಹೋರಾಟಗಳಿರಬಹುದು, ಕಾರ್ಮಿಕರ  ಪ್ರತಿಭಟನೆಗಳಿರಬಹುದು ಅಲ್ಲಿ ಸತ್ಯದ  ಆಗ್ರಹವಿದ್ದರೆ ಖಂಡಿತವಾಗಿಯೂ ದಂಡಿ ಮುನ್ನಲೆಯಲ್ಲಿದ್ದಾನೆಂದೇ ಅರ್ಥ. ದಂಡಿ ಒಂದು ಐತಿಹಾಸಿಕ ಕಾದಂಬರಿಯಾಗಿದ್ದರೂ ಒಳನೋಟದಲ್ಲಿ ವರ್ತಮಾನದ ತಲ್ಲಣಗಳ ಸಂಕಥನವನ್ನೂ ಹಾಡುತ್ತಲೇ ಸಾಗುತ್ತದೆ. ದಂಡಿ ಕೇವಲ ಚರಿತ್ರೆಯ ಪಾತ್ರವಾಗಿರದೇ ವರ್ತಮಾನದ ಎಚ್ಚರವೂ ಆಗಿದ್ದಾನೆ. ಕಾದಂಬರಿಕಾರರೇ ಉಲ್ಲೇಖಿಸುವ ಹಾಗೆ " ಮಹಾತ್ಮಾ ಗಾಂಧೀಜಿ ಅವರಿಂದಾದಿಯಾಗಿ ಕರ್ನಾಟಕದ ಉತ್ತರ ಕನ್ನಡದ ಟಿ.ಎಸ್. ನಾಯಕ, ರಂಗನಾಥ ದಿವಾಕರ, ಡಾ. ಹರ್ಡೀಕರರ ರಾಷ್ಟ್ರೀಯ ಕಾಳಜಿಗಳು ಕಾದಂಬರಿಯ ನಾಯಕ ದಂಡಿಯಲ್ಲಿ ಸಮ್ಮಿಳಿತಗೊಂಡಿವೆ. ಅವರಂತೆಯೇ  ಈ ನೆಲದ ಉಪ್ಪಿನ ಋಣವನ್ನು ತೀರಿಸಿದ ಧನ್ಯತೆಯನ್ನು ಅನುಭವಿಸುವುದೇ ನಮ್ಮ ನಾಯಕ ದಂಡಿಯ ಉದ್ಧೇಶ. ಈ ಅರ್ಥದಲ್ಲಿ ದಂಡಿ ಸರ್ವಕಾಲಕ್ಕೂ ಸಲ್ಲುವ ನಾಯಕ. ಈತನಿಗೆ ಭೂತದ ಹಂಗಿಲ್ಲ, ವರ್ತಮಾನದ ಬಂಧನವಿಲ್ಲ, ಮತ್ತು ಭವಿಷ್ಯದ ಮಿತಿ ಇಲ್ಲ."
    ಭಾರತೀಯರಿಗೆ ಉಪ್ಪು ಸ್ವಾತಂತ್ರ‍್ಯದ ಸಂಕೇತವಾದಂತೆಯೇ ಹೋರಾಟ ಜೀವನದ ಧ್ಯೇಯವೂ ಆಗಿಹೋಯಿತು. ಭಾಷೆಯ ದೃಷ್ಟಿಯಿಂದ ಕರಾವಳಿ ಕನ್ನಡದ ಸೊಬಗನ್ನು ಇನ್ನೂ ಸ್ವಾರಸ್ಯಕರವಾಗಿ ಹೆಣೆಯಬಹುದಾಗಿತ್ತು. ಕಾದಂಬರಿಯ ಕಥಾಸಂವಿಧಾನವು ನೆಲಮೂಲ ಸಂಸ್ಕೃತಿಯೊಳಗೆ ರೂಪು ತಳೆದಿರಬಹುದಾದ ಕ್ರಾಂತಿಯ ಸ್ವರೂಪವನ್ನು ಆಲಂಗಿಸಿಕೊಂಡು ಕಸುವಿನಿಂದ ಕಂಗೊಳಿಸಿದೆ. ಪಾತ್ರ ವೈವಿಧ್ಯತೆ ಕಥೆಯ ಓಘಕ್ಕೆ ಮೆರಗನ್ನು ತಂದಿದೆ. ಚಳುವಳಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡ ಶ್ಯಾನುಭೋಗ ಹಾಗೂ ರುಕ್ಮಿಣಿಬಾಯಿ ದಂಪತಿ, ನಾಗೇಶ ಹೆಗಡೆಯವರ ಪರಿವಾರ, ದೇಶಾವರಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡ ವಿನಾಯಕ ಭಟ್ಟರು ಹಾಗೂ ವಸುಧೆ, ಚಳುವಳಿಯಲ್ಲಿ ಏನೆಲ್ಲವನ್ನು ಕಳೆದುಕೊಂಡರೂ ಏನೂ ಆಗಿಲ್ಲವೆಂಬಂತೆ ಚೈತನ್ಯದ ಸೇವೆಯನ್ನು ಸಲ್ಲಿಸುವ ಬೊಮ್ಮ, ರಾಕರು, ಸತ್ಯಾಗ್ರಹಕ್ಕಾಗಿ ಸದಾ ಸಿದ್ಧರಾಗಿರುವಂತೆ ಕಾಯುತ್ತಿದ್ದ ರಾಯನಗೌಡ ಮತ್ತು ಸೋಮ್ನಿ, ನಾಗೇಶ ಹೆಗಡೆಯವರ ಅಪಾರ ನಿಧಿಯನ್ನು ರಕ್ಷಿಸಿ ತಾನುಂಡ ಉಪ್ಪಿನ ಋಣವನ್ನು ವಿಭಿನ್ನ ಬಗೆಯಲ್ಲಿ ತೀರಿಸಿ ಮಹಾತ್ಮನಿಂದ ನಮಿಸಲ್ಪಟ್ಟ ಹಸಲರದೇವಿ ಹೀಗೆ ಕರಾವಳಿಯ ನೆಲದ ಹೋರಾಟದ ಪ್ರತಿಮೆಗಳಂತೆ ಮೈತಳೆದು ನಿಂತ ಪಾತ್ರವೈವಿಧ್ಯತೆ ಕಾದಂಬರಿಯನ್ನು ದೃಶ‍್ಯಕಾವ್ಯವಾಗಿಸಿವೆ. ಅರಿತು ನೋಡಿದರೆ ಇವರೆಲ್ಲರೂ ಆಧುನಿಕ ಜಗತ್ತಿನ ಹೋರಾಟಗಳಲ್ಲಿನ ಪ್ರತಿನಿಧಿಗಳೇ ಆಗಿರುವುದನ್ನು ನಾವು ಮನಗಾಣಬಹುದು. ಬಸವಣ್ಣನವರು ತಮ್ಮ ವಚನವೊಂದರಲ್ಲಿ ಅದಂದೇ ಹುಟ್ಟಿತ್ತು ಅದಂದೇ ಹೊಂದಿತ್ತು ಎಂದು ಹಾಡಿದಂತೆ ದಂಡಿಯೂ ಅಂದೇ ಹುಟ್ಟಿ ಅಂದೇ ಯಶಸ್ವಿಯಾಗಿ ಅಂತ್ಯವಾದಂತೆನಿಸಿದರೂ ಕೂಡ ಅದು ಜಗದ ಒಡಲೊಳಗೆ  ನಿರಂತವರಾಗಿ ಜರುಗುತ್ತಿರುವ ಸಂಘರ್ಷದ ಪ್ರತಿಮೆಯಾಗಿಯೂ ನಿಲ್ಲುವ ಕಾಣ್ಕೆಯನ್ನು ಹೊಂದಿದೆ. ಪಾತ್ರಗಳು ಅಂದಂದೇ ಹುಟ್ಟಿ ಅಂದಂದೇ ಮುಗಿದಿದ್ದರೂ ಹೋರಾಟ ಮಾತ್ರ ನಿರಂತರವಾಗಿರುತ್ತದೆ ಎಂಬ ಧ್ವನಿ ದಂಡಿಯ ಪಾತ್ರದ  ಮೂಲಕ ಹೊರಹೊಮ್ಮಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳಂತಹ ಸ್ವಾತಂತ್ರ‍್ಯ ಪೂರ್ವ ಭಾರತದ ರೋಚಕ ಯಾತ್ರೆಯನ್ನು ತನ್ನದೇ ಶೈಲಿಯಲ್ಲಿ ತೆರದಿಡುವ ಕಾದಂಬರಿಯು ಬಾಪೂಜಿಯವರ ಅಂತರಂಗದ ಶೋಧನೆಯಾಗಿರುವ ಸತ್ಯಾಗ್ರಹವು  ಹೇಗೆ ಮಾನವನ ಧರ್ಮವೇ ಆಗಿಹೋಯಿತೆನ್ನುವುದಕ್ಕೆ ದೃಷ್ಟಾಂತಗಳನ್ನೊದಗಿಸುತ್ತದೆ. ಸತ್ಯ, ಅಹಿಂಸೆ, ಹಾಗೂ ಶಾಂತಿ ಎಂಬ ತತ್ವಗಳು ಹೇಗೆ ಲಕ್ಷಾಂತರ ಜನರ ಬದುಕನ್ನು ಒಳಹೊಕ್ಕು ರೂಪಿಸಿದ ಮಂತ್ರವಾದವು ಎನ್ನುವುದರ ನಿರೂಪಣೆ ಕಾದಂಬರಿಯ ಆಶಯಗಳನ್ನು ಇನ್ನಿಲ್ಲದಂತೆ ದೃಢೀಕರಿಸುತ್ತದೆ. ಸರ್ವರಿಗೂ ಸಮಬಾಳು ಎನ್ನುವ ಕುವೆಂಪುರವರ ಉಕ್ತಿಯು ಈ ಕಾದಂಬರಿಯ ಕತೆಯ ಹಿನ್ನೆಲೆಯಲ್ಲಿನ ಭಿತ್ತಿಯಾಗಿ  ಗಮನಸೆಳೆಯುತ್ತದೆ. ಜಾತಿ ಮತ ಭೇದಗಳಿಲ್ಲದೇ ಎಲ್ಲರ ಜೀವನಾಡಿಯಾಗಿರುವ ಉಪ್ಪು ಸ್ವತಂತ್ರಪೂರ್ವ ಭಾರತದ ಅಸ್ಮಿತೆಯಾಗಿ ಹೇಗೆ ಜನರನ್ನು ಒಗ್ಗೂಡಿಸಲು ಕಾರಣವಾಯಿತೆನ್ನುವುದಕ್ಕೆ ದಂಡಿ ಉತ್ತರವಾಗಿ ನಿಲ್ಲುತ್ತದೆ. ಪ್ರಾದೇಶಿಕ ಸಂಸ್ಕೃತಿಯ ತಲ್ಲಣಗಳನ್ನೂ ಅಷ್ಟೇ ಆಪ್ತವಾಗಿ ಕಟ್ಟಿಕೊಡುವ  ಕಾದಂಬರಿಯು ಏಕಕಾಲಕ್ಕೆ ವಿಶ್ವ ಸಂಸ್ಕೃತಿಗೂ ತನ್ನದೇ ಆದ ಕೊಡುಗೆಯನ್ನು ನೀಡುವಂತಿದೆ. ದಂಡಿ ಆಂಗ್ಲರ ವಿರುದ್ಧದ ಬಂಡಾಯದ ಕಥೆಯಾಗಿದ್ದರೂ ನಮ್ಮೊಳಗಿನ ವೈರಿಗಳ ವಿರುದ್ಧದ ಪ್ರತಿಭಟನೆಯಾಗಿಯೂ ಎದುರು ನಿಲ್ಲುತ್ತದೆ.

ರಣಹದ್ದಿನಂತೆ ಜನರನ್ನು ಕುಕ್ಕಿ ತಿನ್ನುವ ದುಷ್ಟನೊಬ್ಬನ ಕೊಲೆಯಿಂದಲೇ ಆರಂಭವಾಗುವ ಕಾದಂಬರಿಯು ಬಂಡಾಯದ ಉತ್ತುಂಗವನ್ನು ಅನುಭವಿಸುವಂತೆ ಮಾಡುತ್ತದೆ. ನಂತರ ಗಂಗಾವಳಿ ನದಿಯಂತೆ ಹರಹನ್ನು ಪಡೆದುಕೊಂಡು ತನ್ನ ಲೋಕವನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ನದಿಯೊಳಗಿನ ಅಲೆಗಳಂತೆ ಪಾತ್ರಗಳು ಏರಿಳಿದು ದಡ ಸೇರುವ ಪರಿಯನ್ನು ಓದಿಯೇ ಆನಂದಿಸಬೇಕು. ಪ್ರವಾಹದಂತೆ ಮುನ್ನುಗ್ಗುವ ನಾಯಕ ದಂಡಿ ಊರೊಳಗೆ ಹೊಕ್ಕು ಸಲ್ಲದ ಪಾತಕವನ್ನು ಮಾಡಿ ಆವೇಶ ಕಡಿಮೆಯಾದಾಗ ಮರಳಿ ತಣ್ಣಗಾಗುವಂತೆ ರೂಪಿತವಾಗಿರುವ ಗುಣಶೀಲತೆಯನ್ನು ಹೊಂದಿದ್ದಾನೆ. ಲತೀಫ್ ಖಾನ್ ಎಂಬ ಮೊಸಳೆಯಂತಹ ನದಿಯೊಳಗಿನ ಶತ್ರುಗಳು ನದಿಗೆ ನೀರಾದವರನ್ನೇ ನುಂಗಿ ನೊಣೆಯುವ ಕ್ರೂರತೆಯನ್ನು ಅಭಿವ್ಯಕ್ತಿಸುವುದರಲ್ಲಿ ಮುಕ್ತಿಯನ್ನು ಕಾಣುತ್ತಾರೆ. ಚಳುವಳಿಕಾರರೆಲ್ಲರೂ ಹರಿಯುವ ಜಲದಂತೆ ಒಂದುಗೂಡಿ ಆಂಗ್ಲರೆಂಬ ವಿಷಗಾಳಿಯ ವಿರುದ್ಧವಾಗಿ ಪ್ರತಿಭಟಿಸುತ್ತಾ ಕಾದಂಬರಿಯುದ್ದಕ್ಕೂ ಗಾಂಧೀಜಿಯವರ ತಾತ್ವಿಕತೆಗನುಗುಣವಾಗಿ ವರ್ತಿ ಸುವುದನ್ನು ಗುರುತಿಸಬಹುದಾಗಿದೆ.  ಕಾದಂಬರಿಯು ತನ್ನಲ್ಲಿರುವ ಸತ್ಯಗಳನ್ನು ಅನಾವರಣಗೊಳಿಸುತ್ತಲೇ ಸ್ವಾತಂತ್ರ‍್ಯ ಹೋರಾಟದ ಸಂಕಥನವನ್ನು ರಾಗಿಸುತ್ತಾ ಸಾಗುವುದರಲ್ಲಿ ಸಂತೃಪ್ತಿಯನ್ನನುಭವಿಸುತ್ತದೆ. ಒಟ್ಟಂದದಲ್ಲಿ ಈ ಕಾದಂಬರಿಯೊಂದು ದಿವ್ಯ ಭಾರತದ ಯಾತ್ರೆ;  ಕ್ರಾಂತಿಯೊಳಗಿನ ಸವ್ಯಸಾಚಿಯರ ಅಕ್ಷಯಪಾತ್ರೆ; ಚಳುವಳಿಯೆಂದು ಹೊರಟವರ ಬಲಿದಾನದ ಜಾತ್ರೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...