Total Pageviews

Tuesday 29 May 2018

ರಾಗರತಿಯ ನಂಜು ಏರಿದಾಗ...

ರಾಗರತಿಯ ನಂಜು ಏರಿದಾಗ....
                  ದಿನಾಂಕ 28-5-2018 ರಂದು  ಸುಮಾರು ೪ ೩೦ ರ ವೇಳೆಗೆ ಧಾರವಾಡದ  ಸಾಧನಕೇರಿಯಲ್ಲಿಳಿದಾಗ,ಬೇಂದ್ರೆ ಯೆಂಬ 'ಶಬ್ದಗಾರುಡಿಗ, ',ಶಬ್ದಬ್ರಹ್ಮ' ರ ರಾಗರತಿಯ ನಂಜು ತನ್ನ ಮೋಹಕ ಲಾವಣ್ಯದಿಂದ ಹೃನ್ಮನ ಸೆಳೆಯುತ್ತಿದ್ದಂತೆ 'ಆಗ ಸಂಜೆಯಾಗಿತ್ತ' ; ನೆಲದ ಮೇಲೆ ಬಿದ್ದು   ಸಸಿಗೆ ನೀರೆರೆಯುವ  ಹಂಬಲಕೆ ಕಾದು ಕುಳಿತ ಮೋಡ ಮಂಜು  ಕಟ್ಟುತ್ತಿತ್ತು. ದಿನವೆಲ್ಲ ದಣಿದ  ಚಿತ್  'ಸೂರ್ಯಪಾನ' ಮತ್ತೆ ಪುನಃಶ್ಚೇತನದ ಚೈತನ್ಯಶೀಲತೆಯ ಕಡೆಗೆ ಹೊರಳುವ ಅಮೃತಘಳಿಗೆಯೂ ಆಗಿತ್ತು.ಸಹೃದಯರನ್ನು,ಜೀವನಪ್ರೇಮಿಗಳನ್ನು, ಶ್ರೀಸಾಮಾನ್ಯರನ್ನು ,ಸಾಹಿತ್ಯಪ್ರೇಮಿಗಳನ್ನು, ಕಾವ್ಯಾರ್ಥಿಗಳನ್ನು 'ಬಾರೋ ಸಾಧನಕೇರಿಗೆ' ಎಂದು ಬೇಂದ್ರೆಯವರು ಜೀವನಪ್ರೀತಿಯೆಂಬ ತಮ್ಮ  ಕಾವ್ಯಝರಿಯ ಕೆರೆಯಲ್ಲಿ ಮಿಂದೆದ್ದು ನವನೀತದ ನವೋಲ್ಲಾಸವನ್ನು ಪಡೆದು ವೈವಿಧ್ಯಮಯ ಸಾಸಿರವಿಧ ಸ್ಪೂರ್ತಿತೇಜಸ್ಸುಗಳಿಂದ ಕಂಗೊಳಿಸುವ ಬದುಕು ಪಡೆಯಬನ್ನಿ ಎಂದು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತದೆ. ಆ ನೆಲದ ಗುಣವೇ ಹಾಗೆ, ಬೇಂದ್ರೆ ಯೆಂಬ ಕಾವ್ಯ ಋಷಿ ಯ ಸ್ಪರ್ಶದಿಂದ ಹಸಿರು ಮೈದುಂಬಿ ನಿಂತು ಗಿಡ ಮರ ಪೊದೆ ಲತೆಗಳ ಕೊರಳೊಳಗಿಂದ ಹಕ್ಕಿಯ ಇಂಚರಗಳ ನಿನಾದವನ್ನು ಹೊಮ್ಮಿಸುವ, ಹಾಲ್ಗಡಲಲ್ಲಿ ಸವಿಸಕ್ಕರೆಯ ರಸಪಾಕ ಬೆರೆಸಿದಂತೆ ,ಸಹೃದಯರೆಂಬ ಮರಿದುಂಬಿಗಳನಾಕರ್ಷಿಸುವ  ಮಾಧುರ್ಯದ  ಪಕಳೆಗಳೊಳಗಿಂದ ಮಕರಂದವನ್ನು ಸ್ಫುರಿಸುವ ಬೆಡಗಿನ ಬೆರಗಿನ ಜೀವರಸಧಾರೆಯ ತಾಣವದು.ಅಲ್ಲಿ ಹೆಜ್ಜೆಯಿಡುವ ಪ್ರತಿ ಕ್ಷಣವೂ ಧನ್ಯತೆಯ ಆಲಿಂಗನ, ಕಾವ್ಯ ಪರಂಪರೆಯೊಂದರ ಭವ್ಯತೆಯ ದರ್ಶನ.
ಈ ಕಾವ್ಯತಪಸ್ವಿ ಬೇಂದ್ರೆಯಜ್ಜನ ಮನೆಯಂಗಳ ಹಾಗೂ ಎದುರಿಗಿರುವ ಕೆರೆಯಂಗಳ ಪಾತರಗಿತ್ತಿಯ ಬಣ್ಣ ಬಣ್ಣದ ರೆಕ್ಕೆಗಳ,ಬೆಳ್ಳಕ್ಕಿ,ಕೋಗಿಲೆ,ಹಂಸದ ಮೃದುಮಧುರ ಪುಕ್ಕಗಳ,ಬೇವು,ಮಾವಿನ ಚಿಗುರೆಲೆಗಳು ನಿತಾಂತವಾಗಿ ಹರಡಿಕೊಳ್ಳುವ ವಿಸ್ಮಯದ ತಾವು.ಕರ್ನಾಟಕ ಸರ್ಕಾರ ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಸ್ಕೃತಿ ಹಿರಿಮೆ ಬೇಂದ್ರೆ ಸಮಗ್ರ ದರ್ಶನಕ್ಕಾಗಿ ಸ್ಥಾಪಿಸಿರುವ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ 'ಬೇಂದ್ರೆ ಭವನ'ವನ್ನು ಒಳಹೊಕ್ಕಾಗ  ತಮ್ಮದೇ ವಿಶಿಷ್ಟ ಕಾವ್ಯಪರಂಪರೆಯೊಂದನ್ನು ನಿರ್ಮಿಸಿ ಸಾರಸ್ವತ ಲೋಕವನ್ನು ತಮ್ಮ ಕಾವ್ಯಮಣಿಗಳಿಂದ ಪ್ರಕಾಶಮಾನವಾಗಿ ಬೆಳಗಿರುವ  ಬೇಂದ್ರೆಯವರ ಭವ್ಯ ಕಲಾಕೃತಿಯೊಂದು ನಮ್ಮನ್ನು ಮೈಮರೆಸುತ್ತದೆ.ಆ ಭಾವುಕ ಕಣ್ಣುಗಳ ಮಾಂತ್ರಿಕ ನೋಟ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ ಹಾಗೂ ತನ್ನ ಪರಂಪರೆಗೆ ಸ್ವಾಗತ ಕೋರುತ್ತದೆ. ಆ ಪರಂಪರೆಯ ಹೆಗ್ಗುರುತಾಗಿದ್ದ ಅವರ ತಲೆಯ ಮೇಲಿನ  ರಟ್ಟಿನ ಟೊಪ್ಪಿಗೆ,ಟೊಪ್ಪಿಗೆಯಿಂದ ಹೊರಗೆ ಇಣುಕುತ್ತಿರುವ ಶಿವನ ಹರಡಿದ ಜಟಾಜೂಟವನ್ನು ನೆನಪಿಸುವ ಬಿಡಿ ಕೇಶದೆಳಗಳು,ಹಣೆಯಲ್ಲಿ ತೆಳು ಗಂಧ, ಕಂಡದ್ದೆಲ್ಲವನ್ನೂ ಎದೆಯ ಅಕ್ಷಯ ಪಾತ್ರೆಯಲ್ಲಿ ತೀರದ ಅನುಭಾವಗಳನ್ನಾಗಿಸುವ ತೇಜಸ್ಸಿನ ಕಂಗಳ  ತೀಕ್ಷ್ಣದೃಷ್ಟಿಗೆ ಹೆದರಿ ಮುದುಡಿರುವ ಬೆಳ್ಳನೆಯ ಹುಬ್ಬುಗಳು, ಮಾಸ್ತರಿಕೆಯ ಕುರುಹಾದ ಕಪ್ಪು ಕೋಟು,ಬದುಕಿನ ಸುಖ ದುಃಖಗಳನ್ನೆಲ್ಲಾ ಮಡುಗಟ್ಟಿ ಸ್ಥಾಯಿಯಾಗಿಸಿಕೊಂಡಿರುವ ಮೂಕವಿಸ್ಮಿತರನ್ನಾಗಿಸುವ ಮಂದಹಾಸ. ಇವು ಬೇಂದ್ರೆ ಮಾಸ್ತರರ ನಿರಾಡಂಬರದ ಸರಳ ವ್ಯಕ್ತಿತ್ವದ ಆಭರಣಗಳು.
ಆ ಕಲಾಕೃತಿಯನ್ನು ದಾಟಿ ಮುಂದೆ ಒಳಹೋದಾಗ ಬೇಂದ್ರೆಯವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು ತನ್ನ ಒಂದೊಂದೇ ಪುಟಗಳನ್ನು ತೆರೆದು ತೋರುತ್ತಿತ್ತು.ಬೇಂದ್ರೆಯವರು ಶಿವರಾಮ ಕಾರಂತರಿಂದ ಕರಂಡಿಕೆಯನ್ನು ಪಡೆದುಕೊಂಡ ಭಾವಚಿತ್ರ,೮೦ ವಸಂತ ತುಂಬಿದ ಸಂದರ್ಭದ ಕುಟುಂಬದ ಹಾರೈಕೆಯ ಭಾವಚಿತ್ರ,ಕುವೆಂಪುರವರೊಂದಿಗಿನ ಭಾವಚಿತ್ರ,ಹೀಗೆ ಗತಕಾಲದ ಸಾಹಿತ್ಯದ ಸುವರ್ಣಯುಗದ ಕಾಮನಬಿಲ್ಲಿನಂತೆ ವೈವಿಧ್ಯಮಯವಾದ ಅವರ ಕಾವ್ಯ ಬದುಕಿನ ಘಟನಾವಳಿಗಳನ್ನು ಕಪ್ಪು ಬಿಳುಪುಗಳಲ್ಲಿಯೇ ಕಟ್ಟಿಕೊಡುವ ಸುಂದರ ಛಾಯಾಗ್ರಹಣದ ಕೃತಿಗಳು ಮತ್ತೆ ನಮ್ಮನ್ನು ಆ ಕಾಲಕ್ಕೆ ಕರೆದೊಯ್ಯುತ್ತವೆ.ಮನಸ್ಸು ಏಕಾಗ್ರಚಿತ್ತವಾಗಿ ಸಲಿಲದರ್ಪಣದಂತೆ ಬೇಂದ್ರೆಯವರ ಪ್ರತಿಬಿಂಬಗಳನ್ನು ಮನಪಟಲದಲ್ಲಿ ಕಡೆದು ನಿಲ್ಲಿಸುತ್ತದೆ.ಆ ಕಲಾಕೃತಿಗಳಲ್ಲಿಯೇ ಮೈಮರೆಯುವಂತೆ ಮಾಡುತ್ತದೆ.ಜೊತೆಗೆ

                                ಘಮ ಘಮ ಘಮಾಡಸ್ತಾವ ಮಲ್ಲಿಗಿ 

ನೀ ಹೊರಟಿದ್ದೀಗ ಎಲ್ಲಿಗಿ

ತುಳುಕ್ಯಾಡತಾವ ತೂಕಡಿಕಿ

ಎವೆಗಪ್ಪುತಾವ ಕಣ್ಣ್ ದುಡುಕಿ

ಕನಸು ತೇಲಿ ಬರುತಾವ ಹುಡುಕಿ .....ಎಂಬ ಭಾವಗೀತೆಯ ಧ್ವನಿ ಈ ಮೈಮರೆಯುವಿಕೆಗೆ ಹಿಮ್ಮೇಳವಾಗಿ 'ಕನಸು ತೇಲಿ ಬರುವಂತೆ '  ಮಲ್ಲಿಗೆಯ ಸುಮಧುರತೆ,ಮಂದ್ರ ಪರಿಮಳ ,ಕಾವ್ಯ ಪ್ರತಿಮೆಗಳು ಮನದ ಮೂಲೆಯಿಂದ ಪಟಲದೆಡೆಗೆ ಅಲೆ ಅಲೆಯಾಗಿ ತೇಲಿ ಬರುತ್ತಿವೆ.
ಬೇಂದ್ರೆಯಜ್ಜನನ್ನು ಅಖಂಡವಾಗಿ ಕಟ್ಟಿಕೊಡಲು ಹೆಣಗುತ್ತಿವೆ.ಬೇಂದ್ರೆಯವರೆಂದರೆ ಹಾಗೆ ,ಅವರ ಬಗೆ ಬಗೆ ಭಂಗಿಯ ಭಾವಚಿತ್ರಗಳನ್ನು ನೋಡಿದಷ್ಟು ಹಾಗೂ ಸ್ಮರಿಸಿಕೊಂಡಷ್ಟು ಬಾರಿ ವೈವಿಧ್ಯಮಯ ನವ ನವೀನ ಭಾವಗಳು ಪ್ರತಿಯೊಬ್ಬರಲ್ಲೂ ಹುಟ್ಟು ಪಡೆಯುತ್ತಲೇ ಇರುತ್ತವೆ.ಅವರ ಕಾವ್ಯ ಓದಿದಾಗಲೊಮ್ಮೊಮ್ಮೆ ಒಂದೊಂದು  ಹೊಸ  ಹೊಳವು ಸ್ಮರಿಸಿಕೊಂಡಾಗಲೊಮ್ಮೆ ನಿಗೂಢ ರಹಸ್ಯವನ್ನು ಬಿಚ್ಚಿಡುತ್ತಲೇ ಹೋಗುತ್ತವೆ .ಅದು ಅವರ ಶಬ್ದಶಕ್ತಿಯ ಅಗಾಧತೆ ;ಶಬ್ದಾರ್ಥ ಚಮತ್ಕಾರದ ವಿರಾಟ್ ರೂಪ ಹಾಗೂ ಅವರ ಶ್ಲೇಷ ,ಉಪಮೆ ಪ್ರತಿಮೆಗಳ ಬೇಲೂರು ಶಿಲಾಬಾಲಿಕೆಯರಂತಹ ಸೌಂದರ್ಯದ ಸೃಷ್ಟಿಯ ಕಾವ್ಯಕಲೆಯ ಕುಸುರು.
ಬೇಂದ್ರೆಯವರ ಕಾವ್ಯ ಪ್ರತಿಬಾರಿಯೂ ನಮ್ಮನ್ನು ಚಕಿತಗೊಳಿಸುತ್ತಲೇ ಹೋಗುತ್ತದೆ.

ಇದಕ್ಕೆ ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾವ್ಯ ಸಂಕಲನದ ನಾಕುತಂತಿ ಯ ಈ ಪದಮಣಿಗಳನ್ನು ಗಮನಿಸಿ
'ಆವು ಈವಿನ ನಾವು ನೀವಿಗೆ ಆನು ತಾನದ ತನನನಾs
ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾs
ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು- -ರಸ್ವನಾ
ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ
ಇವು ಬೇಂದ್ರೆಯವರ ಭವ್ಯತೆಯ ದರ್ಶನಕ್ಕೆ,ನಾದ ಬ್ರಹ್ಮತ್ವಕ್ಕೆ ಸಾಕ್ಷಿಯಾಗಿವೆ.ನಾದ ಸ್ವರಗಳೊಂದಿಗೆ ಮಾಧುರ್ಯದ ಚೆಲ್ಲಾಟವಾಡಿದವರು ಬೇಂದ್ರೆಯವರು.ಅವರ ಅನುಭವಗಳ ಅನುಭಾವದ ಚಿತ್ರಕಶಕ್ತಿ ಹಿಮಾಲಯದಷ್ಟು ಎತ್ತರ ಸಾಗರದಷ್ಟು ಆಳವಾದದ್ದು.ಅವರೊಳಗಿನ ಕವಿ ಕ್ರಾಂತದರ್ಶಿ.
ಕಾವ್ಯಕಡಲಿನ   ತಮ್ಮ ಮನೆ'ಶ್ರೀಮಾತಾ 'ಳ ಮಡಿಲಿಗೆ ತಬ್ಬಿ ಅವಳಾಶ್ರಯದಲ್ಲಿ ಹಬ್ಬಿಕೊಂಡ ಬೇಂದ್ರೆಯವರು ಕಾವ್ಯದ ರಸಪಾಕವನ್ಮು ತಮ್ಮ ಅನುಭವಗಳ ಮೂಸೆಯಲ್ಲಿ ಕಡೆದು ಸವಿಜೇನಾಗಿಸುತ್ತಾರೆ ಹಾಲೋಗರವಾಗಿಸುತ್ತಾರೆ.
ಮನವು ಕಡಲಾಗಿ ನಿಶಾಂತವಾಗಿ ಹರಿದಿತ್ತು ಆ ಕಡಲ ನೊರೆಯಲೆಗಳು ನಿಧಾನವಾಗಿ ಮನಭಿತ್ತಿಯ ಮೇಲೆ ಅಪ್ಫಳಿಸುತ್ತಿದ್ದವು.ಘಮ ಘಮ ಘಮಾಡಸ್ತಾವ ಮಲ್ಲಿಗೆ ಹಾಡು ಅಲೆ ಅಲೆಯಾಗಿ ಮನವನಾವರಿಸುತ್ತಿತ್ತು.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ
'ಪಾತರಗಿತ್ತಿ ಪಕ್ಕ 
ನೋಡಿದೇನ ಅಕ್ಕ
ಹಸಿರು ಹಚ್ಚಿ ಚುಚ್ಚಿ 
ಮೇಲಕ್ಕರಣ ಹಚ್ಚಿ'
ಎಂಬ ಸೃಷ್ಟಿಕರ್ತನ ಜಗನಿರ್ಮಾಣದ ಕೌಶಲವನ್ನೂ ತಮ್ಮ ಕಾವ್ಯಕಲೆಯ ಬಲೆಯಲ್ಲಿ ಹೆಣೆಯುತ್ತಾರೆ.ಹೀಗೆ ಬೇಂದ್ತೆಯವರೆಂಬ ಭುವನದ ಭಾಗ್ಯ ವೊಂದು ನಡೆದಾಡಿದ ಪುಣ್ಯಭೂಮಿಯಾದ ಸಾಧನಕೇರಿಯ ಕೆರೆಯ ದಂಡೆಯ ಮೇಲೆ  ಮೈಮರೆತು ಸಾಗುತ್ತಿರುವಾಗ ಬೇಂದ್ರೆಯಜ್ಜ ಕಟ್ಟಿದ ರಸಭಾವಗಳು ಮಡುಗಟ್ಟಿದ ಮುಂಗಾರಿನ ಮೋಡಗಳು ಹನಿ ಹನಿಯಾಗಿ ಸಿಂಚನಗೈಯ್ಯಲು ಪ್ರಾರಂಭಿಸಿದವು. ಆ ಮೈದುಂಬಿದ ಸರೋವರ ತಟದ  ಪ್ರಕೃತಿಯನ್ನು ನೋಡಿದ ನನಗೆ
"ನಾರಿ ನಿನ್ನ ಮಾರಿ ಮ್ಯಾಲ 
ನಗಿನವಿಲ ಕುಣಿಯುತಿತ್ತ"
ಎಂಬ ಸಾಲುಗಳನ್ನು ಉದ್ಘರಿಸಿತು ಮನ. ಪ್ರಕೃತಿಯ ಮೊಗದಲ್ಲಿ ಮಳೆಗಾಲದ  ನಗಿನವಿಲು ಕುಣಿಯುತಿತ್ತು.ಸಂಭ್ರಮ ಮನೆ ಮಾಡಿತ್ತು.

ಪಾತರಗಿತ್ತಿಯ ಕೆನೆರೆಕ್ಕೆಯ ಬೆಡಗು,ಕೆರೆಯ ಜಲ ನೀಲಿ,ಮರದ ಟೊಂಗೆಗಳ ಕಂದು,ತರುಲತೆಗಳ ಪುಷ್ಪಗಳ ಚೆದರಿದ ಬಣ್ಣ,ಮರಿದುಂಬಿಗಳ ಮೈಬಣ್ಣ  ಹೀಗೆ  ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳ್ಳುತ್ತಿರುವ ಈ  ರಸಘಳಿಗೆಗಳು ನಮಗಾಗಿ ಕಾದುಕುಳಿತಿರುವಂತೆ ಭಾಸವಾಯಿತು.ಜಡಿಮಳೆ ಬೇಂದ್ರೆಯವರ ಕಾವ್ಯ ಕನ್ನಿಕೆ ಮೋಡಗಳಿಂದ ಹನಿಹನಿಯಾಗಿ ಇಳಿದು ಇಳೆಯ ಮೇಲೆ ತನ್ನ ಪ್ರತಿಮೆಯನ್ನು ಸೃಷ್ಟಿಸುತ್ತಿರುವ ಹಾಗೆ   ಧರೆಗಿಳಿಯುತಿತ್ತು .ಆ ಕೆರೆಯಂಗಳದಲ್ಲಿ ನಿಲ್ಲಿಸಿದ  ಪ್ರತಿಮೆಯೊಂದು ಬಾನಿಗೆ ಗುರಿಯಿಟ್ಟು ಬಾಣ ಹೊಡೆಯುತ್ತಿತ್ತು.   ಅದು ಮರಳಿ ಮೇಘಮಂದಾರವನ್ನು ಇಳೆಗಿಳಿಸುತ್ತಿರುವಂತೆ ಪ್ರಕೃತಿ ವರುಣ ನ ಸಿಂಚನದಲ್ಲಿ ಮಿಂದೇಳುತ್ತಿತ್ತು.ಆ ಸಸ್ಯೋದ್ಯಾನ ಬೇಂದ್ರೆಯವರನ್ನು ಅವರ ಕಾವ್ಯಗಳನ್ನು  ಮತ್ತೆ ಮತ್ತೆ ಒಡಲಲ್ಲಿ ತುಂಬಿಕೊಂಡು ಚಿರನೂತನವಾಗಿ  ಕಂಗೊಳಿಸುತ್ತಿತ್ತು.
ಈ ಮುಂಗಾರಿನ ಮಳೆ ಮೋಡಗಳ ಚೆಲ್ಲಾಟದಲ್ಲಿ ಬೇಂದ್ರೆ ಎಂಬ ಜಲಾಮೃತ ಸಿಂಚನ ಮನಸ್ಸಿಗೆ ಮುದ ನೀಡುತ್ತಿತ್ತು.
'ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು 
ಜೀವದಾಣೆಯಂತೆ ತಾನೆ
ನುಡಿಯುತಿರುವುದು'
ಎಂಬ ಕಾವ್ಯಾಲಾಪ ಮನದ ಮೂಲೆಯಿಂದ  ತೇಲಿಬರುತಿತ್ತು.
ಬೇಂದ್ರೆಯವರು ಕಂಡನುಭವಿಸಿದ ಕಾವ್ಯ ಪ್ರತಿಮೆಗಳ ದರ್ಶನಕ್ಕಾಗಿ ಜೀವವೀಣೆ ಮಿಡಿಯುತ್ತಿತ್ತು.ಅವುಗಳ ಸೌಂದರ್ಯಮೀಮಾಂಸೆಯನ್ನು ಆನಂದಿಸುವುದರಲ್ಲಿಯೇ ಹೃದಯ ಕಳೆದುಹೋಗುತ್ತಿತ್ತು.

ಬೇಂದ್ರೆಯವರು ಮೀಟಿದ
ನಾನು ನೀನು ಆನು ತಾನು ಎಂಬ
ನಾಕೇ ನಾಕು ತಂತಿ
ನಮ್ಮೆದೆಯ ದೇವಚೈತನ್ಯವನ್ನು ರಾಗಿಸುತ್ತಿತ್ತು. ಸ್ವರ ಮಾಧುರ್ಯದ ರಾಗ ರಸ ಗಂಧ ತೀಡುತಿತ್ತು. ಬೇಂದ್ರೆಯವರ  ಶಬ್ದನಾದ ಕಿವಿಗಪ್ಪಳಿಸುತಿತ್ತು. 'ಎದೆ ತುಂಬಿ ಹಾಡುತ್ತಿತ್ತು.ಮನದುಂಬಿ ಹಾರುತ್ತಿತ್ತುಅಂತರಂಗವೆಲ್ಲ  ಉಲ್ಲಾಸ ಕವಿದು ಚೇತನವಾಗಿತ್ತು.ಹೃದಯವೇ  ತೇಲಿ ಅನಂತಾನಂದದಲಿ  ಚಿಗುರೊಡೆಯುತ್ತಿತ್ತು.' ಆನಂದಮಯ ಈ ಜಗ ಹೃದಯ ' ವೆಂಬ ಕುವೆಂಪುರವರ ಸಾಲುಗಳು ಧನ್ಯತೆಯ ಧ್ಯಾನದಿಂದ ಕಾಡಹತ್ತಿದವು.ದತ್ತಜ್ಜನ ಬದುಕಿನ ಜಿಜ್ಞಾಸೆ ನಮ್ಮನ್ನು  ಪ್ರತಿಕ್ಷಣದ ನವೀನತೆಗೆ ತೆರೆದುಕೊಳ್ಳುವಂತೆ ಮಾಡುತ್ತದೆ,ಹೇಗೆಂದರೆ
'ತಿರುತಿರುಗಿಯೂ ಹೊಸತಾಗಿರಿ
ಎನುತಿದೆ ಋತುಗಾನ
ಈ ಹಾಡಿಗೆ ಶೃತಿ ಹಿಡಿದಿದೆ
ಬ್ರಹ್ಮಾಂಡದ ಮೌನ'
ಸುರಿಯುತ್ತಿರುವ ಜಡಿಮಳೆಯ ತಂಪಿನಾರ್ದ್ರತೆಗೆ ಹೃದಯ ಸ್ವಾತಿಮುತ್ತಿನ ಅಮಿತಾನಂದವನ್ನು ಅನುಭವಿಸುವ ಮೋಡಿಯಲ್ಲಿತ್ತು

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಶಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ
ಎಂದು ಇಳೆಗಿಳಿಯುತ್ತಿರುವ ಗಂಗೆಯನ್ನು ಶಿರಬಾಗಿ ಸ್ವಾಗತಿಸುವ ದೀನ ಭಾವ ಪ್ರಕೃತಿಯೊಂದಿಗೆ ನೇರವಾಗಿ ಅನುಸಂಧಾನಕ್ಕಿಳಿದಿತ್ತು.ಬೇಂದ್ರೆಯಜ್ಜನ ಮನೆಯ ಮುಂದಿನ ಕೆರೆಯ ತೀರದ  ವಿಹಾರದಲ್ಲಿ ನನ್ನ
'ಅಂತರಂಗದಾ ಮೃದಂಗ 
ಅಂತು ತೊಂತನಾನ....' 
ಚಿತ್ತ ತಾಳ ಬಾರಿಸುತಿತ್ತು
ಝಂಝಣಣನಾನ..... ಎಂದು 
ಶೃತಿ ತಾಳದ ಲಯದಲ್ಲಿ ಅಂತರಂಗ  ಕುಣಿಯುತ್ತಿತ್ತು.ನನ್ನೊಳು ನಾ ಕಳೆದುಹೋಗಿದ್ದೆ  ಚಟಪಟ  ಹನಿಮಜ್ಜನ ನಿಂತರೂ ,ಎದೆಯಾಳದ  ಮರದೆಲೆಗಳ ಮೇಲಿಂದ ಶಬ್ದನಾದಗಳ  ಹನಿಗಳೊಂದೊಂದಾಗಿ   ತೊಟ್ಟಿಕ್ಕುತ್ತಿದ್ದವು.....ಹೊರಗೆ ಬಂದಾಗ ಏನನ್ನೋ ಕಳೆದುಕೊಳ್ಳುತ್ತರುವ ಆರ್ದ್ರಭಾವ.....ಮಾತ್ರ ಉಳಿದಿತ್ತು...




Saturday 26 May 2018

ಕುಲದ ನೆಲೆಯನರಸುತ್ತಾ....

ಕುಲದ ನೆಲೆಯನರಸುತ್ತಾ....
                          ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ    ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವಿಶ್ವ ಮಟ್ಟದ ಕವಿ ದಾರ್ಶನಿಕರು  ಜಗತ್ತಿನ ಯಾವುದೇ ಸಾಹಿತ್ಯ ಲೋಕದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ"  ಎಂಬ ಹೇಳಿಕೆಗೆ ಕುಲನಿರಸನ ವನ್ನು ತಮ್ಮ ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಪ್ರತಿಪಾದಿಸಿದ  ಕನಕದಾಸರನ್ನೂ ಸೇರಿಸಬಹುದಾಗಿದೆ.  ಕನಕದಾಸರು ೧೬ ನೇ ಶತಮಾನದ ಜಗತ್ತು ಕಂಡ ವಿಶ್ವಶ್ರೇಷ್ಠ   ಹರಿದಾಸ ಪಂಥದ  ವೈಚಾರಿಕತೆಯ ಹರಿಕಾರರು.ಇವರು ಸಮಾಜಕ್ಕೆ ಅಂಟಿಕೊಂಡಿರುವ  ಜಾತಿ ಮತ ಕುಲ ಪಂಗಡ ತಾರತಮ್ಯದ ಪಿಡುಗುಗಳನ್ನು  ಬೇರು ಸಮೇತ ಕಿತ್ತು ಹಾಕಲು ಪ್ರಯತ್ನಿಸಿದರು. ಆದಿ ಕವಿ ಪಂಪ ಹೇಳಿದ "ಮನುಷ್ಯ ಜಾತಿ ತಾನೊಂದೆ ವಲಂ"  ಎಂಬ ಉಕ್ತಿಯಂತೆ ,ಕನಕದಾಸರು ಭಕ್ತಿ ಧ್ಯಾನದ ತಂಬೆಲರಿನ ಮೂಲಕ  ಜನರನ್ನು ನೀತಿ ಮಾರ್ಗದತ್ತ ನಡೆಸುವ ದಾರ್ಶನಿಕರಾಗಿದ್ದರು.


              ೧೨ ನೇ ಶತಮಾನದಲ್ಲಿ ಜಾತಿ,ಮತ, ವರ್ಗ ವರ್ಣ ತಾರತಮ್ಯಗಳ ಅಸಮಾನತೆಯನ್ನು ತೊಡೆದುಹಾಕಲು 'ಕಲ್ಯಾಣ ಕ್ರಾಂತಿ 'ಯ ಮೂಲಕ ಹೆದ್ದಾರಿಯನ್ನು ನಿರ್ಮಿಸಿದ ಬಸವಣ್ಣನವರ ಹೋರಾಟವನ್ನು ಮುಂದುವರೆಸುವ ಪ್ರತಿನಿಧಿಯಾಗಿ ಕನಕದಾಸರು ನಮಗೆ ಕಾಣುತ್ತಾರೆ. "ಇವನಾರವ ಇವನಾರವ ಎಂದು ಕೇಳುವ  ಕೂಪಮಂಡೂಕದ ಅಜ್ಞಾನಕ್ಕಿಂತ,  ವಸುದೈವ ಕುಟುಂಬದೊಳಗೆ ಒಂದಾಗಿ ಸರ್ವರಿಗೂ ಸಮಬಾಳು ಸಮಭಾವ, ಭ್ರಾತೃತ್ವ ದ ಸಮರಸದ ಬದುಕು ನಮ್ಮದಾಗಬೇಕು ಎಂಬುದು  ಕನಕದಾಸರ ಪರಮೋದ್ಧೇಶವಾಗಿತ್ತು.ಅವರ ಕೀರ್ತನೆಗಳಲ್ಲಿ ಕುಲನಿರಸನಕ್ಕೆ ಸಂಬಂಧಿಸಿದಂತೆ 'ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ','ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ',ಹೊಲೆಯರು ಹೊರಗಿಹನೆ,ಊರೊಳಗಿಲ್ಲವೆ',ಮುಂತಾದ ರಚನೆಗಳು ಅನನ್ಯವಾಗಿವೆ. 'ಕುಲ ಕುಲ ಕುಲವೆನ್ನುತಿಹರು',ಕುಲ ಕುಲವೆಂದು ಹೊಡೆದಾಡದಿರಿ','ಯಾತರವನೆಂದುಸುರಲಿ','ದಾಸ ದಾಸರ ಮನೆಯ ದಾಸಿಯರ ಮಗ ನಾನು' ಎಂಬ ಮುಂತಾದ ರಚನೆಗಳು ಅವರ ಕ್ರಾಂತದರ್ಶಿತ್ವಕ್ಕೆ ಸಾಕ್ಷಿಯಾಗಿವೆ.

                         ಕನಕದಾಸರ ಸರ್ವ ಸಮಾನತೆ, ಸರ್ವ ಸಮಭಾವದ ಸಮಾಜ ನಿರ್ಮಾಣದ  ದೃಷ್ಟಿ ವಿಶಾಲವೂ ವಿಶಿಷ್ಟವೂ ಆಗಿದೆ.ಜಾತಿ ವರ್ಗ ವರ್ಣ ಮತ ಕುಲ ಪಂಗಡಗಳ ತಾರತಮ್ಯದ ಬೇಗೆಯಲ್ಲಿ ಸ್ವತಃ ಬೆಂದ ಕನಕದಾಸರು   ತಮ್ಮ ಕೀರ್ತನೆಗಳ ಮೂಲಕ ಜಾತಿ ಮತ  ಕುಲರಹಿತವಾದ ಸಮಾನತೆಯ ಸಮಾಜವನ್ನು  ನಿರ್ಮಿಸುವ ಪಣ ತೊಟ್ಟಿದ್ದರು.            ಆಂಗ್ಲ ಚಿಂತಕರೊಬ್ಬರು "ಕವಿಯೊಬ್ಬ ಹುಟ್ಟುವುದು ವಿರಳ,ದಾರ್ಶನಿಕನೊಬ್ಬ ಜನಿಸುವುದು ಇನ್ನೂ ವಿರಳ; ಕವಿ  ಹಾಗೂ ದಾರ್ಶನಿಕನೊಬ್ಬ ಉದಯಿಸುವುದು ವಿರಳಾತಿವಿರಳ." ಎಂದು ಹೇಳಿದ ಹಾಗೆ ಕನಕದಾಸರು ಅಂತಹ  ವಿರಳಾತಿ ವಿರಳ ಕವಿಯೂ ದಾರ್ಶನಿಕರು ಆಗಿದ್ದರು ಎಂಬುದಕ್ಕೆ ಅವರ 'ಮೋಹನ ತರಂಗಿಣಿ ','ನಳಚರಿತೆ','ರಾಮಧಾನ್ಯ ಚರಿತೆ', 'ಹರಿಭಕ್ತಿಸಾರ' ಎಂಬ ಕಾವ್ಯ ರತ್ನಗಳು   ಹಾಗೂ ಅವರ ಕೀರ್ತನೆಗಳೇ ನಿದರ್ಶನಗಳಾಗಿವೆ.
    ಕನಕದಾಸರು ಸುಮಾರು ೩೧೨ ಕ್ಕೂ ಹೆಚ್ಚು ಕೀರ್ತನೆಗಳನ್ನು  ರಚಿಸಿದ್ದಾರೆ.ಇವುಗಳಲ್ಲಿ ಹರಿಸ್ತುತಿ,ಸಮಾಜವಿಡಂಬನೆ,ಸಾಮಾಜಿಕ ನೀತಿ ಹಾಗೂ ಉಪದೇಶ,ವೈಚಾರಿಕತೆ ಗೆ ಸಂಬಂಧಿಸಿದ ಹಲವಾರು ಕೀರ್ತನೆಗಳಿವೆ.
'ಕುಲ ಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ
ಕೆಸರೊಳು ತಾವರೆ ಪುಟ್ಟಲು ಅದ ತಂದು 
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣಲಿಲ್ಲವೆ'
              ಎಂದು ಹಾಲು ಮತ್ತು ತಾವರೆಗಳಂತೆ ಮನುಷ್ಯನಲ್ಲಿರುವ  ಗುಣಮೌಲ್ಯಗಳೆ ಮುಖ್ಯ ಹೊರತು , ಆತನ  ಹುಟ್ಟಿನ  ಜಾತಿ ಮತ ಕುಲಗಳು ಮುಖ್ಯವಲ್ಲ ಎಂದು ಸಾರುತ್ತಾರೆ. ಇವರ ಮತ್ತೊಂದು ಕೀರ್ತನೆಯಾದ "ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ,"ಯಲ್ಲಿಯೂ ವ್ಯಕ್ತಿಯ ಜಾತಿಯನ್ನು ತಿರಸ್ಕರಿಸಿ ಸಜ್ಜನ ಸದ್ಗುಣಶೀಲ ಮೌಲ್ಯಗಳಿಗೆ ಪ್ರಾಧಾನ್ಯತೆಯನ್ನು ನೀಡುತ್ತಾರೆ.ಬೇಲೂರು ಕೇಶವದಾಸರು ' ಜಾತಿ ಜಾತಿಗಳಲ್ಲಿ ತಿರಸ್ಕೃತರಾದವರಿಗೆ ಪುರಸ್ಕಾರ ಕೊಟ್ಟವರು ಕನಕದಾಸರು' ಎನ್ನತ್ತಾರೆ.
ಕುಲ ಕುಲವೆನ್ನುತಿಹರು ...ಕೀರ್ತನೆಯ ಮೂರನೇಯ  ಚರಣದಲ್ಲಿ
"ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವನು
ಆತನೊಲಿದ ಮೇಲೆ ಯಾತರ ಕುಲವಯ್ಯ" 
ಎಂದು
ಬಯಸಿದುದೆಲ್ಲವನ್ನೂ ಸವಿಯುವ  ನಮ್ಮ ಜೀವ, ಆತ್ಮ ತತ್ವೇಂದ್ರಿಯಗಳಿಗಿಲ್ಲದ ಕುಲ ದೇಹಕೇತಕೆ ಎನ್ನುತ್ತಾ  ಕೇಶವನೇ ಅಂತರಾತ್ಮದ ಅಧಿಪತಿಯಾದ ಮೇಲೆ  ಕುಲವೇಕೆ ಬೇಕು? ಎಂದು ಕುಲ ಸಂವಾದವನ್ನು ಖಂಡಿಸುತ್ತಾರೆ.ಕನಕದಾಸರು ಕುಲವೆಂಬ ತಮಂಧದ ಕೇಡನ್ನು   ಭಕ್ತಿಯೆಂಬ ಜ್ಯೋತಿಯ ಬೆಳಕಿನ ಬಲದಿಂದ  ಮಾಯವಾಗಿಸುತ್ತಾರೆ.

              ಕನಕದಾಸರ ನಂತರದವನಾದ  ಸರ್ವಜ್ಞನೂ ಕೂಡ
"ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ
ಜಾತಿ ವಿಜಾತಿ ಎನಬೇಡ ದೇವನೊ
ಲಿದಾತನೆ ಜಾತ ಸರ್ವಜ್ಞ"
           ಎಂದು ಕನಕದಾಸರ ನಿಲುವನ್ನೇ ಪ್ರತಿಪಾದಿಸುತ್ತಾನೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ  ಕುಲಶೂನ್ಯತೆಯ ಸಿದ್ಧಾಂತವನ್ನೇ ಮಂಡಿಸುತ್ತಾರೆ.ಇವರು ಆಧ್ಯಾತ್ಮದ ಬೆಳದಿಂಗಳ ಮೂಲಕ ಕುಲಾರುಣ ನೇತ್ರಗಳನ್ನು ತಂಪಾಗಿಸುತ್ತಾರೆ.     ಕನಕದಾಸರ  "ಯಾತರವನೆಂದುಸುರಲಿ"ಎಂಬ ಮತ್ತೊಂದು ಕೀರ್ತನೆಯಲ್ಲಿ
"ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ
ತೊಟ್ಟಿದ್ದೆನಾಗ ತೊಗಲಬಕ್ಕಣ
ಇಷ್ಟರೊಳಗೆ ಒಂದು ವಿವರವರಿಯದಿಂಥ
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ"
ಹುಟ್ಟಿನಲ್ಲಿ ಭೌತಿಕವಾಗಿ ಹೀನತೆ ಹೊಂದಿ ಕೇವಲ ಮೂಳೆ ಮಾಂಸದ ತಡಿಕೆಯಾಗಿ, ಚರ್ಮಧಾರಿಯಾಗಿ ಬಂದ ಈ ಒಡಲು ದೇವನ ಕೃಪೆಯಾಗಿದ್ದು ಇದಕೆ ಕುಲದ ಹಂಗಿಲ್ಲ   ಎಂದು ತಮ್ಮನ್ನೇ ರೂಪಕವನ್ನಾಗಿಸಿಕೊಂಡು  ಮತಾಂಧ ಕರ್ಮಠರಿಗೆ ಚೇಳು ಕುಟುಕುವ ಹಾಗೆ , ಕುಲನಿರಸನದ ಚಿಕಿತ್ಸೆಯನ್ನು ನೀಡುತ್ತಾರೆ.

ಅದೇ ಕೀರ್ತನೆಯ ಮತ್ತೊಂದು ಚರಣದಲ್ಲಿ
"ಕರುಳು ಖಂಡ ನಾರುವ ಚರ್ಮ ರೋಹಿತ
ನರಪಂಜರದಿ ಹುರುಳಿಲ್ಲದ
ನರದೇಹ ಹೊತ್ತು ತಿರುಗುವಂಥ
ತಿರುಕ ನನಗಿನ್ಯಾತರ ಕುಲವಯ್ಯ"
ಮೂಳೆ ಮಾಂಸದ ಕೊಡವಾಗಿ ಕಶ್ಮಲಗಳಿಂದ ತುಂಬಿ ತುಳುಕುತ್ತಿರುವ, ಅಸ್ಥಿಪಂಜರದ ನಶ್ವರ ದೇಹ ಹೊತ್ತು ಭಿಕ್ಷುಕನಂತೆ ತಿರುಗುವ ಈ ದೇಹಕ್ಕೆ  ಕುಲದ ಅವಶ್ಯಕತೆಯಿಲ್ಲ ಎಂದು ಜಾತಿ ಮತಗಳನ್ನು ಅಲ್ಲಗಳೆಯುತ್ತಾರೆ.

ಕನಕದಾಸರ ಇನ್ನೊಂದು ಕೀರ್ತನೆಯಲ್ಲಿ
'ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ 
ಕುಲದ ನೆಲೆಯನೇನಾದರೂ 
ಬಲ್ಲಿರಾ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ  ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ'
ನೂರಾರು ಭವಾವಳಿಗಳಲ್ಲಿ  ತೊಳಲುವ, ಮನಬಯಸಿದೆಲ್ಲವನ್ನೂ ಸವಿದು ಸುಖಿಸುವ ಈ ದೇಹಕ್ಕೆ ಮೇಲು ಕೀಳಿಲ್ಲ,ವ್ಯರ್ಥಾಲಾಪ ತೊಡೆದು
ಕೇಶವನನ್ನು ನೆನೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂಬ ದಾರ್ಶನಿಕತೆಯನ್ನು ಎತ್ತಿಹಿಡಿಯುತ್ತಾರೆ ಜನ್ಮಾಂತರಗಳಲ್ಲಿ ಭೂತದಂತೆ ಅಲೆಯುವ ಈ ದೇಹ ಅನಿಶ್ಚಿತವಾದದ್ದು.ಅದೇ ಕೀರ್ತನೆಯ ಎರಡನೆಯ ಚರಣದಲ್ಲಿ
'ಜಲವೆ ಸಕಲ ಕುಲಕ್ಕೆ ತಾಯಲ್ಲದೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆ ಕಂಡ್ಯ ಮನುಜ'
ಈ ಜಗದ ಜೀವರಾಶಿಗಳ ತಾಯಿಯಾಗಿರುವ ಜಲಕೆ ಯಾವ ಕುಲವಿದೆನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾಗಿರುವ ಈ ಒಡಲನ್ನು ಕುಲದ  ನಿಜವರಿತು  ಹರಿನಾಮಸ್ಮರಣೆಯಲ್ಲಿ ತೊಡಗಿಸಿ ಮುಕ್ತಿ ಪಡೆಯಬೇಕುಎಂದು ಸಾರುತ್ತಾರೆ.
ಕನಕದಾಸರು  ಜೀವಿಗಳ ಉಗಮ ಸಿದ್ಧಾಂತವನ್ನು ಬಲ್ಲ ವಿಜ್ಞಾನಿಯೂ ಆಗಿದ್ದರು ಎಂಬುದು ಮೇಲಿನ ಚರಣದಿಂದ ಅವಲೋಕಿಸಬಹುದು.
ಪ್ರಕೃತಿಯ ಚರಾಚರ ವಸ್ತುಗಳಿಗಿಲ್ಲದ ಜಾತಿ ಕುಲಗಳು ಮಾನವನಿಗೇಕೆ ? ಎಂಬ ಪರಿಸರವಿಜ್ಞಾನ ದ ಮೂಲಕ ಸರ್ವ ಜೀವಿಗಳಿಗೂ ಸೃಷ್ಟಿಯು ಸಮಾನತೆಯನ್ನು ನೀಡಿದೆ ಎಂಬುದನ್ನು ಎತ್ತಿಹಿಡಿಯುತ್ತಾರೆ;ದಯವಿಲ್ಲದ ಧರ್ಮವಿಲ್ಲ ಎಂದು ಮಾನವತಾವಾದದ ಬುದ್ಧನಾಗುತ್ತಾರೆ.ಇವರ ಹೋರಾಟದ ಎಳೆಗಳೇ ಮುಂದೆ ಹೊಸಗನ್ನಡ ಸಾಹಿತ್ಯ ದಲಿತ ಮತ್ತು ಬಂಡಾಯ ಚಳುವಳಿಗಳ ಅಂತಃಪ್ರವಾಹವಾಗುತ್ತವೆ.


Monday 21 May 2018

'ಶಬ್ದ' ಮಂಜರಿಗೆ ಮನಸೋತಾಗ......

'ಶಬ್ದ' ಮಂಜರಿಗೆ ಮನಸೋತಾಗ.......

ಅದೊಂದು ಅಪೂರ್ವ ಮಹಾಸಂಗಮ. ಅಷ್ಟಾವರಣಗಳಲ್ಲಿ ಮಹತ್ವವಾದ   ಗುರು, ಲಿಂಗ, ಜಂಗಮ ರೆಂಬ ಮೂರು ಆವರಣಗಳು ಏಕತ್ರಯದಲ್ಲಿ ಸಂಗಮಿಸಿ  ಡಾ.ಗುರುಲಿಂಗ ಕಾಪಸೆ  ಎಂಬ ಗುರುವಾಗಿ ಮೈವೆತ್ತು ದರ್ಶನ ನೀಡಿದ  ಅಪರೂಪದ ಅನೂಹ್ಯ ಕ್ಷಣಗಳು ಇಡೀ ಸಭಾಂಗಣವನ್ನು ನಿಶ್ಯಬ್ದಗೊಳಿಸಿವೆ.ಈ ನಿಶ್ಯಬ್ದತೆಗೆ ಕಾರಣವಾಗಿದ್ದು 'ಶಬ್ದ' ಕಾರಣದ ಬೆಳಕು.
           ಅಕ್ಕನ ವಚನ ವರ್ಣಿಸಲಸದಳವಾದ " ಶಬ್ದದ ಲಜ್ಜೆ ನೋಡಾ, ಅಕಟಕಟಾ"ಎಂದು ಉಲಿದರೆ,ಈ ಸುವರ್ಣ  ಸೌಧದ 'ಬಯಲಿ'ನಲ್ಲಿ ಮಾತ್ರ 'ಶಬ್ದದ ಬೆಳಕು ನೋಡಾ' ಎಂಬ ಅರಿವಿನ ಮಂತ್ರಮುಗ್ಧತೆ ಆವರಿಸಿತ್ತು
ಈ ಶಬ್ದ ವೆಂಬ ಬೆಳಕಿನ ದರ್ಶನದ ಈ ವೃತ್ತಾಂತಕ್ಕೆ ಕಾರಣವಾಗಿದ್ದು,ಆಲೂರು ವೆಂಕಟರಾಯರು,ದ ರಾ ಬೇಂದ್ರೆ,  ಜಿ.ಬಿ ಜೋಶಿ,ಜಿ ವಿ ಕುಲಕರ್ಣಿ,  ಚಂದ್ರಶೇಖರ ಪಾಟೀಲ,ಪಾಟೀಲ ಪುಟ್ಟಪ್ಪನ,ಚನ್ನವೀರ ಕಣವಿ ,ಎಂ ಎಂ ಕಲಬುರ್ಗಿ,ಸಿದ್ಧಲಿಂಗ ಪಟ್ಟಣಶೆಟ್ಟಿ ,ಆನಂದಕಂದ,ಮಲ್ಲಿಕಾರ್ಜುನ ಮನ್ಸೂರ,ರಂಥ ಸಾಹಿತ್ಯ ಹಾಗೂ ಸಂಗೀತ ಕಲಾ ದಿಗ್ಗಜರ ಪುಣ್ಯಭೂಮಿಯಾಗಿರುವ,ಮೈತುಂಬ ಹಸಿರುಟ್ಟು, ಕಾಕ,ಕುಕಿಲ,ಕಾಜಾಣದ ಸಪ್ತಸ್ವರಗಳ ನಾದಮಯವಾಗಿರುವ, ಮಲೆನಾಡ ಉದ್ಯಾನವನದಂತಿರುವ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದ ಪ್ರಕೃತಿ ದೇವಿಯ ಮಡಿಲಿನ ಸುಂದರ ಸುವರ್ಣ ಮಹೋತ್ಸವ ಭವನ ರಲ್ಲಿ ನಡೆಯುತ್ತಿರುವ,
ಹೊಸದಾಗಿ ನೇಮಕವಾದ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ವೃತ್ತಿ ಬುನಾದಿ ತರಬೇತಿ ಯ ಉದ್ಘಾಟನಾ ಸಮಾರಂಭ.

              ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.
ಗುರುಲಿಂಗ ಕಾಪಸೆಯವರ 'ಶಬ್ದ 'ಮಾಧುರ್ಯವನ್ನು ಆಹ್ಲಾದಿಸುವ ಸೌಭಾಗ್ಯವೊಂದು ನಮಗೆ ದಕ್ಕಿದ್ದು, ಮತ್ತೆ ನಾವು ಧಾರವಾಡದ 'ಸಾಂಸ್ಕೃತಿಕ ಸುವರ್ಣಯುಗಕ್ಕೆ' ಹೊರಳುವಂತೆ ಮಾಡಿತ್ತು.
              ಹಸುವಿನ ಕ್ಷೀರಕ್ಕಾಗಿ ಹಂಬಲಿಸುವ ಕರುವಿನಂತೆ,ತಾಯಿಹಕ್ಕಿಯ ಗುಟುಕಿಗಾಗಿ ಕಾದಿರುವ ಮರಿಯಂತೆ,ವರ್ಷಧಾರೆಗಾಗಿ ಕಾತರಿಸುತ್ತಿರುವ ನವಿಲಿನಂತೆ ಡಾ. ಗುರುಲಿಂಗ ಕಾಪಸೆ ಎಂಬ ಗುರುವಿನ ಸಾನಿಧ್ಯದಲ್ಲಿ,ಕಾದಿರುವ  ನಮ್ಮ ನಿಶ್ಯಬ್ದದಲ್ಲಿಯೂ 'ಶಬ್ದ 'ದ ಮಾರ್ದವತೆ ಅನುರಣಿಸುತ್ತಿತ್ತು.

       ಡಾ ಗುರುಲಿಂಗ ಕಾಪಸೆ ಯವರೆಂದರೆ ,ಜ್ಞಾನದ ನಿತಾಂತ ನದಿಯೊಂದರ ಮಧುರವಾದ ಜುಳು ಜುಳು ನಿನಾದದ ಹಾಗೆ,ಗುರುವಿನಿಂದ ಲಿಂಗಕ್ಕೆ,ಲಿಂಗದಿಂದ ಜಂಗಮಕ್ಕೆ, ಉದಾತ್ತೀಕರಣಗೊಂಡ  ಹಾಗೆ,ತಾಯಿಯೊಬ್ಬಳು ಮಗುವನ್ನು ತಬ್ಬಿ ಮೇಲೆತ್ತಿ ಮುದ್ದಿಸಿದ ನಿರ್ಮಲ ಅನುಭಾವದ ಹಾಗೆ, ಕನ್ನಡ ದೇವಿ ಮರಾಠಿ ಗೆಳತಿಯ ಹೆಗಲ ಮೇಲೆ ಕೈಹಾಕಿ ಕುಶಲೋಪರಿ ಮಾತಾಡಿದ ಹಾಗೆ,ಭಾಷಾವಿಜ್ಞಾನ, ಕಾವ್ಯಮೀಮಾಂಸೆ,ಸಾಹಿತ್ಯವಿಮರ್ಶೆ,ಆಧ್ಯಾತ್ಮಿಕತೆ,ಉಪನಿಷತ್ತು,  ಐಹಿಕತೆ, ದಾರ್ಶನಿಕತೆ ಎಂಬ ಅನಂತತೆಗಳ ಕೂಡಲಸಂಗಮ .

             ಅವರು ಬೆಳಗಿಸಿದ ಶಬ್ದ ಪ್ರಸಂಗವನ್ನು ಗಮನಿಸಿ...
  " ಬಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ, ಮಹರ್ಷಿ ಹಾಗೂ  ಮಹರ್ಷಿಯ ಸತಿಯರಾದ ಕಾತ್ಯಾಯಿಣಿ ಹಾಗೂ ಮೈತ್ರೇಯಿ ಯರ ನಡುವಿನ ಸಂವಾದದಲ್ಲಿ ಯಾಜ್ಞವಲ್ಕರು 'ಜಗತ್ತಿನ ಎರಡು ಪ್ರಧಾನವಾದ ವಸ್ತುಗಳೆಂದರೆ,
ಬಯಲು ಮತ್ತು ಬೆಳಕು. ಬಯಲಿನಲ್ಲಿ ವಸ್ತುವಿನ ಅಸ್ತಿತ್ವವಿದ್ದರೆ,ಬೆಳಕಿನಲ್ಲಿ ವಸ್ತುವಿನ ಕಾಣ್ಕೆ ಅಡಕವಾಗಿರುತ್ತದೆ.
ಬೆಳಕಿನ ಮೂಲಗಳು ಸೂರ್ಯ,ಸೂರ್ಯಪ್ರೇರಿತ ಚಂದ್ರ,ನಕ್ಷತ್ರಗಳೆಂಬ ಭೌತಿಕ ವಸ್ತುಗಳಾದರೂ,ಇವುಗಳ ನಿರ್ವಾತದಲ್ಲಿ ಜಗತ್ತಿಗೆ ಬೆಳಕನ್ನು ನೀಡುವ ಸರ್ವಶಕ್ತತೆ ಇರುವದು 'ಶಬ್ದ'ಕ್ಕೆ ಮಾತ್ರ ಎಂಬುದು ಅಂತಿಮ ವಾಕ್ಯ."
ಇದನ್ನು ಆಲಿಸಿದ ನಮಗೆ" ಬಯಲು ಬೆಳಕಿನೊಳಗೊ ಅಥವಾ ಬೆಳಕು ಬಯಲೊಳಗೊ"ಎನ್ನುವಂತಾಯಿತು.ಇದೇ ಅಲ್ಲವೇ  'ಶಬ್ದ'ವೆಂಬ ಮಹಾಬೆಳಕಿನಿಂದ ನಮಗೆ ಅಂತಿಮವಾಗಿ ದಕ್ಕಬೇಕಾಗಿದ್ದು,ಆನಂದಿಸಬೇಕಾಗಿದ್ದು. ಬೇಂದ್ರೆಯವರು ಹೇಳಿದ 'ಅಂತರಂಗದಾ ಮೃದಂಗ ಅಂತು ತೊಂತನಾನ' ಎಂದು ಮಿಡಿಯುವುದೇ ಶಬ್ದವೆಂಬ ಕಿರಣಗಳ ಬೆಳಕಿನಲ್ಲಿ; "ಮಾನಿಷಾದ......."ಶ್ಲೋಕದ ನೆಲೆಯಿರುವುದೇ ಶಬ್ದಸೌಧದ ಆಶ್ರಯದಲ್ಲಿ;ರನ್ನನು ಮುದ್ರೆಯೊಡೆದ ಸರಸ್ವತಿ ಭಂಡಾರದ ಸೌಂದರ್ಯವಿರುವುದು ಶಬ್ದ ವೆಂಬ ವಜ್ರವೈಢೂರ್ಯದ ಹೊಳಪಿನಲ್ಲಿ.
ಹೀಗೆ
ಚಿಂತನೆಯ ಸೆಳತಕ್ಕೆ ಒಳಗಾಗುವ ಡಾ. ಗುರುಲಿಂಗ ಕಾಪಸೆ ಯವರ ಮತ್ತೊಂದು ಕಾವ್ಯಮೀಮಾಂಸೆಯನ್ನೊಮ್ಮೆ ಕೇಳಿ.....
"...  ೧೦ನೇ ಶತಮಾನದಲ್ಲಿಯೇ  ಆದಿಕವಿ ಪಂಪ ಜಗತ್ತಿಗೆ  ಮಾದರಿಯಾಗುವಂತಹ  ಕೊಡುಗೆ ನೀಡಿದ  ಶಬ್ದ ವೈಭವವನ್ನೊಮ್ಮೆ ನೋಡಿ
"ಮಾನವ ಜಾತಿ ತಾನೊಂದೆ ವಲಂ".
೧೨ ನೇ ಶತಮಾನದಲ್ಲಿ ಸಾಹಿತ್ಯದ ಸ್ವರೂಪ ಮತ್ತು ವಸ್ತುವನ್ನೇ ಬದಲಿಸಿ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಗೆ ಕಾರಣವಾಗಿದ್ದು  ಶಿವಶರಣರು  ವಿಶ್ವಸಾಹಿತ್ಯಕ್ಕೆ ನೀಡಿದ ಮೌಲಿಕ ಕೊಡುಗೆಯಾಗಿದೆ.
"ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎಂಬ ಶಬ್ದ ಮಜ್ಜನ ಪ್ರಾಚೀನತಮ   ತಮಿಳು ಇಂಗ್ಲೀಷ ಸೇರಿ ಯಾವ ಭಾಷೆಗಳಲ್ಲಿಯೂ ಸಿಗಲಾರದು.ಸಂಸಾರಕ್ಕೆ ಅಂಟಿಯೂ ಅಂಟದಂತೆ,
ಭವದಲ್ಲಿದ್ದೂ ಭವಿಯಾಗದೇ ಅನುಭಾವಿಯಾಗಬೇಕು.ಲೌಕಿಕದಲ್ಲಿದ್ದೂ ಅಲೌಕಿಕತೆಯನ್ನು ಸಾಧಿಸಬೇಕೆಂಬುವ ಸಮರಸದ ಆಧ್ಯಾತ್ಮ ,ಪ್ರಪಂಚದ ಯಾವ ದರ್ಶನದಲ್ಲೂ ಕಾಣಲಾರದು." 

     ಹೀಗೆ ನಮ್ಮ ಸಾಹಿತ್ಯದ ಹಿರಿಮೆಯನ್ನು ಸಾರುತ್ತಲೇ  ಮತ್ತೆ ಶಬ್ದ ವೆಂಬ ಮಾಂತ್ರಿಕ ಲೋಕಕ್ಕೆ  ನಮ್ಮನ್ನು ಕೈಹಿಡಿದು ಕರೆದೊಯ್ದು ಬೆಳಕು ತೋರಿದ ಪರಿಯನ್ನು ಡಾ.ಕಾಪಸೆಯವರು ಉಲ್ಲೇಖಿಸಿದ   ಈ ವಾಕ್ಯಗಳಿಂದ ಆಘ್ರಾಣಿಸಬಹುದು
"ಮನುಷ್ಯನಲ್ಲಿರುವ ಪಶುತ್ವವನ್ನು ಪಳಗಿಸಬೇಕು ದೈವತ್ವವನ್ನು ಎಚ್ಚರಿಸಬೇಕು"-ಸ್ವಾಮಿ ವಿವೇಕಾನಂದ
"ಮಹಿಳೆಯನ್ನು ಗೌರವಿಸಬೇಕು ಮಕ್ಕಳನ್ನು ಪ್ರೀತಿಸಬೇಕು"  ಈ ಪದಾರ್ಥಗಳನ್ನೇ ನಾವು ತಿರುವು ಮುರುವು ಮಾಡಿ ಪಶು ಬದುಕನ್ನು ಬದುಕುತ್ತಿದ್ದೇವೆ.
ಕಾಮಧೇನುವಿನಂತೆ ಜ್ಞಾನದ ಕ್ಷೀರಧಾರೆಯನೆರೆದು ನಮ್ಮನ್ನು ತಣಿಸುತ್ತಲೇ ,
ಸಾಹಿತ್ಯದ ಸೌಂದರ್ಯಮೀಮಾಂಸೆಯತ್ತ ಹೊರಳಿದರು
"ಸಾಹಿತ್ಯದಲ್ಲಿ ಅಮೂಲ್ಯ ಸೌಂದರ್ಯಗಳಿವೆ.
೧ ಐಂದ್ರಿಕ ಸೌಂದರ್ಯ(Sensuous Beauty)
ಇದಕ್ಕೆ  ಬೇಂದ್ರೆಯವರ
"ನಾನು ಬಡವಿ ಆತ ಬಡವ
      ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
      ಅದಕು ಇದಕು ಎದಕು" ಎಂಬ ಕವಿತೆ,
"ಇದು ಬರಿ ಬೆಳಗಲ್ಲೋ ಅಣ್ಣಾ"ಎಂಬ ಬೆಳಗು ಕವಿತೆ ಹಾಗೂ "ಮೂಡಲ ಮನೆಯ ಮುತ್ತಿನ ನೀರಿನ ..." ಕವಿತೆಗಳು ಇಂದ್ರಿಯ ಸೌಂದರ್ಯದ ನಕ್ಷತ್ರಗಳಾಗಿವೆ.

೨ .ಬೌದ್ಧಿಕ ಸೌಂದರ್ಯ (Intellectual Beauty)
ಈ ಸೌಂದರ್ಯವನ್ನು ಆಸ್ವಾದಿಸಲು
"ಕೇಳುವುದೆಲ್ಲ ಮಧುರ
ಕೇಳದೇ ಇರುವುದೆಲ್ಲ ಅತಿ ಮಧುರ"ಎನ್ನುವ ಹಾಗೆ,
ಚನ್ಮವೀರ ಕಣವಿಯವರ
"ಗಾಂಧೀಜಿ ಯಾರು ಹೇಳಿದರು
ನಿಮ್ಮನ್ನು ಮರೆತಿರುವೆವೆಂದು
ಕೂಟಕೂಟದಲ್ಲಿ ನಿಮ್ಮನ್ನು ನಿಲ್ಲಿಸಿದ್ದೇವೆ.
ಏಕೆಂದರೆ
ನಿಮ್ಮ ಆದರ್ಶ ಪಾಲನೆ
ನಾವು ನಿಲ್ಲಿಸಿದ್ದೇವೆ"
ಎಂಬ ಪದ್ಯಗಳಲ್ಲಿನ ಚಿಂತನೆಯನ್ನು ಗ್ರಹಿಸಬೇಕು
೩.ಆಧ್ಯಾತ್ಮಿಕ ಸೌಂದರ್ಯ-(Spiritual Beauty)
ಅರವಿಂದರು ವ್ಯಕ್ತಿಯಲ್ಲಿರುವ
1 ಜೀವಾತ್ಮ-(Individualself)
2.ಪರಮಾತ್ಮ - (Universalself)
ಜೀವಾತ್ಮ ಪರಮಾತ್ಮಗಳೆರಡೂ ಎಂಬುದೇ  ಅದ್ವೈತ.ಈ ಅದ್ವೈತವೇ ಬೌದ್ಧಿಕ ಸೌಂದರ್ಯ"
ಹೀಗೆ ಡಾ.ಕಾಪಸೆಯವರ ಶಬ್ದ ಬೆಳಕಿನ ಕಿರಣಗಳು ನಮ್ಮ ಮೌನ ಮನಗಳನ್ನು ಇನ್ನಿಲ್ಲದಂತೆ ವ್ಯಾಪಿಸಿಕೊಂಡದ್ದು ನಮ್ಮನ್ನು ಅಚ್ಚರಿಗೊಳಿಸಿತ್ತು
ಅವರ  ಮನಸು ಹರಿದಲ್ಲೆಲ್ಲಾ ಜ್ಞಾನಪ್ರವಾಹ ದೃಷ್ಟಾಂತಗಳದ್ದೇ ರಸಪಾಕ .ಪಂಪ, ಕುವೆಂಪು, ಬೇಂದ್ರೆ,ಯವರಂತಹ ದಾರ್ಶನಿಕ ಕವಿಗಳ ವಿಶ್ವ ಶ್ರೇಷ್ಠತೆ,ಕನ್ನಡ ಮರಾಠಿ ಭಾಷೆ  ಗಳ ಸಹ ಸಂಬಂಧ,ಸಂಸ್ಕೃತ ಇಂಗ್ಲೀಷ ಭಾಷೆಗಳ ಜ್ಞಾನಾತ್ಮಕ ವ್ಯಾಪ್ತಿಯ ಕಲಿಕೆ,ಈ ಎಲ್ಲ ಸಂಗತಿಗಳು ನಿರರ್ಗಳವಾಗಿ ಶಬ್ದಮಂಜರಿಯ ಪ್ರವಾಹದ ಕೊನೆಗೆ ಅವರಿಂದ ಬಂದ  ಮಾತು
"ಅರವತ್ತಕ್ಕೆ ಅರಳು ಮರಳು ಆದರೆ ನನಗೆ ತೊಂಬತ್ತಕ್ಕೆ ತಿರುವು ಮುರುವು "
  ಇದಲ್ಲವೇ ಶಬ್ದ ಗಾರುಡಿಗನ ಕೌಶಲ್ಯ...




x

ಶಬ್ದ' ಮಂಜರಿಗೆ ಮನಸೋತಾಗ.......
                                  ಅದೊಂದು ಅಪೂರ್ವ ಮಹಾಸಂಗಮ. ಅಷ್ಟಾವರಣಗಳಲ್ಲಿ ಮಹತ್ವವಾದ   ಗುರು, ಲಿಂಗ, ಜಂಗಮ ರೆಂಬ ಮೂರು ಆವರಣಗಳು ಏಕತ್ರಯದಲ್ಲಿ ಸಂಗಮಿಸಿ  ಡಾ.ಗುರುಲಿಂಗ ಕಾಪಸೆ  ಎಂಬ ಗುರುವಾಗಿ ಮೈವೆತ್ತು ದರ್ಶನ ನೀಡಿದ  ಅಪರೂಪದ ಅನೂಹ್ಯ ಕ್ಷಣಗಳು ಇಡೀ ಸಭಾಂಗಣವನ್ನು ನಿಶ್ಯಬ್ದಗೊಳಿಸಿವೆ.ಈ ನಿಶ್ಯಬ್ದತೆಗೆ ಕಾರಣವಾಗಿದ್ದು 'ಶಬ್ದ' ಕಾರಣದ ಬೆಳಕು.                ಅಕ್ಕನ ವಚನ ವರ್ಣಿಸಲಸದಳವಾದ " ಶಬ್ದದ ಲಜ್ಜೆ ನೋಡಾ, ಅಕಟಕಟಾ"ಎಂದು ಉಲಿದರೆ,ಈ ಸುವರ್ಣ  ಸೌಧದ 'ಬಯಲಿ'ನಲ್ಲಿ ಮಾತ್ರ 'ಶಬ್ದದ ಬೆಳಕು ನೋಡಾ' ಎಂಬ ಅರಿವಿನ ಮಂತ್ರಮುಗ್ಧತೆ ಆವರಿಸಿತ್ತು .ಈ ಶಬ್ದ ವೆಂಬ ಬೆಳಕಿನ ದರ್ಶನದ ಈ ವೃತ್ತಾಂತಕ್ಕೆ ಕಾರಣವಾಗಿದ್ದು,ಆಲೂರು ವೆಂಕಟರಾಯರು,ದ ರಾ ಬೇಂದ್ರೆ,  ಜಿ.ಬಿ ಜೋಶಿ,ಜಿ ವಿ ಕುಲಕರ್ಣಿ,  ಚಂದ್ರಶೇಖರ ಪಾಟೀಲ,ಪಾಟೀಲ ಪುಟ್ಟಪ್ಪನ,ಚನ್ನವೀರ ಕಣವಿ ,ಎಂ ಎಂ ಕಲಬುರ್ಗಿ,ಸಿದ್ಧಲಿಂಗ ಪಟ್ಟಣಶೆಟ್ಟಿ ,ಆನಂದಕಂದ,ಮಲ್ಲಿಕಾರ್ಜುನ ಮನ್ಸೂರ,ರಂಥ ಸಾಹಿತ್ಯ ಹಾಗೂ ಸಂಗೀತ ಕಲಾ ದಿಗ್ಗಜರ ಪುಣ್ಯಭೂಮಿಯಾಗಿರುವ,ಮೈತುಂಬ ಹಸಿರುಟ್ಟು, ಕಾಕ,ಕುಕಿಲ,ಕಾಜಾಣದ ಸಪ್ತಸ್ವರಗಳ ನಾದಮಯವಾಗಿರುವ, ಮಲೆನಾಡ ಉದ್ಯಾನವನದಂತಿರುವ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದ ಪ್ರಕೃತಿ ದೇವಿಯ ಮಡಿಲಿನ ಸುಂದರ ಸುವರ್ಣ ಮಹೋತ್ಸವ ಭವನ ರಲ್ಲಿ ನಡೆಯುತ್ತಿರುವ,ಹೊಸದಾಗಿ ನೇಮಕವಾದ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ವೃತ್ತಿ ಬುನಾದಿ ತರಬೇತಿ ಯ ಉದ್ಘಾಟನಾ ಸಮಾರಂಭ.
                               ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಗುರುಲಿಂಗ ಕಾಪಸೆಯವರ 'ಶಬ್ದ 'ಮಾಧುರ್ಯವನ್ನು ಆಹ್ಲಾದಿಸುವ ಸೌಭಾಗ್ಯವೊಂದು ನಮಗೆ ದಕ್ಕಿದ್ದು, ಮತ್ತೆ ನಾವು ಧಾರವಾಡದ 'ಸಾಂಸ್ಕೃತಿಕ ಸುವರ್ಣಯುಗಕ್ಕೆ' ಹೊರಳುವಂತೆ ಮಾಡಿತ್ತು.              ಹಸುವಿನ ಕ್ಷೀರಕ್ಕಾಗಿ ಹಂಬಲಿಸುವ ಕರುವಿನಂತೆ,ತಾಯಿಹಕ್ಕಿಯ ಗುಟುಕಿಗಾಗಿ ಕಾದಿರುವ ಮರಿಯಂತೆ,ವರ್ಷಧಾರೆಗಾಗಿ ಕಾತರಿಸುತ್ತಿರುವ ನವಿಲಿನಂತೆ ಡಾ. ಗುರುಲಿಂಗ ಕಾಪಸೆ ಎಂಬ ಗುರುವಿನ ಸಾನಿಧ್ಯದಲ್ಲಿ,ಕಾದಿರುವ  ನಮ್ಮ ನಿಶ್ಯಬ್ದದಲ್ಲಿಯೂ 'ಶಬ್ದ 'ದ ಮಾರ್ದವತೆ ಅನುರಣಿಸುತ್ತಿತ್ತು.       ಡಾ ಗುರುಲಿಂಗ ಕಾಪಸೆ ಯವರೆಂದರೆ ,ಜ್ಞಾನದ ನಿತಾಂತ ನದಿಯೊಂದರ ಮಧುರವಾದ ಜುಳು ಜುಳು ನಿನಾದದ ಹಾಗೆ,ಗುರುವಿನಿಂದ ಲಿಂಗಕ್ಕೆ,ಲಿಂಗದಿಂದ ಜಂಗಮಕ್ಕೆ, ಉದಾತ್ತೀಕರಣಗೊಂಡ  ಹಾಗೆ,ತಾಯಿಯೊಬ್ಬಳು ಮಗುವನ್ನು ತಬ್ಬಿ ಮೇಲೆತ್ತಿ ಮುದ್ದಿಸಿದ ನಿರ್ಮಲ ಅನುಭಾವದ ಹಾಗೆ, ಕನ್ನಡ ದೇವಿ ಮರಾಠಿ ಗೆಳತಿಯ ಹೆಗಲ ಮೇಲೆ ಕೈಹಾಕಿ ಕುಶಲೋಪರಿ ಮಾತಾಡಿದ ಹಾಗೆ,ಭಾಷಾವಿಜ್ಞಾನ, ಕಾವ್ಯಮೀಮಾಂಸೆ,ಸಾಹಿತ್ಯವಿಮರ್ಶೆ,ಆಧ್ಯಾತ್ಮಿಕತೆ,ಉಪನಿಷತ್ತು,  ಐಹಿಕತೆ, ದಾರ್ಶನಿಕತೆ ಎಂಬ ಅನಂತತೆಗಳ ಕೂಡಲಸಂಗಮ .
             ಅವರು ಬೆಳಗಿಸಿದ ಶಬ್ದ ಪ್ರಸಂಗವನ್ನು ಗಮನಿಸಿ...  " ಬಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ, ಮಹರ್ಷಿ ಹಾಗೂ  ಮಹರ್ಷಿಯ ಸತಿಯರಾದ ಕಾತ್ಯಾಯಿಣಿ ಹಾಗೂ ಮೈತ್ರೇಯಿ ಯರ ನಡುವಿನ ಸಂವಾದದಲ್ಲಿ ಯಾಜ್ಞವಲ್ಕರು 'ಜಗತ್ತಿನ ಎರಡು ಪ್ರಧಾನವಾದ ವಸ್ತುಗಳೆಂದರೆ,ಬಯಲು ಮತ್ತು ಬೆಳಕು. ಬಯಲಿನಲ್ಲಿ ವಸ್ತುವಿನ ಅಸ್ತಿತ್ವವಿದ್ದರೆ,ಬೆಳಕಿನಲ್ಲಿ ವಸ್ತುವಿನ ಕಾಣ್ಕೆ ಅಡಕವಾಗಿರುತ್ತದೆ.ಬೆಳಕಿನ ಮೂಲಗಳು ಸೂರ್ಯ,ಸೂರ್ಯಪ್ರೇರಿತ ಚಂದ್ರ,ನಕ್ಷತ್ರಗಳೆಂಬ ಭೌತಿಕ ವಸ್ತುಗಳಾದರೂ,ಇವುಗಳ ನಿರ್ವಾತದಲ್ಲಿ ಜಗತ್ತಿಗೆ ಬೆಳಕನ್ನು ನೀಡುವ ಸರ್ವಶಕ್ತತೆ ಇರುವದು 'ಶಬ್ದ'ಕ್ಕೆ ಮಾತ್ರ ಎಂಬುದು ಅಂತಿಮ ವಾಕ್ಯ."ಇದನ್ನು ಆಲಿಸಿದ ನಮಗೆ" ಬಯಲು ಬೆಳಕಿನೊಳಗೊ ಅಥವಾ ಬೆಳಕು ಬಯಲೊಳಗೊ"ಎನ್ನುವಂತಾಯಿತು.ಇದೇ ಅಲ್ಲವೇ  'ಶಬ್ದ'ವೆಂಬ ಮಹಾಬೆಳಕಿನಿಂದ ನಮಗೆ ಅಂತಿಮವಾಗಿ ದಕ್ಕಬೇಕಾಗಿದ್ದು,ಆನಂದಿಸಬೇಕಾಗಿದ್ದು. ಬೇಂದ್ರೆಯವರು ಹೇಳಿದ 'ಅಂತರಂಗದಾ ಮೃದಂಗ ಅಂತು ತೊಂತನಾನ' ಎಂದು ಮಿಡಿಯುವುದೇ ಶಬ್ದವೆಂಬ ಕಿರಣಗಳ ಬೆಳಕಿನಲ್ಲಿ; "ಮಾನಿಷಾದ......."ಶ್ಲೋಕದ ನೆಲೆಯಿರುವುದೇ ಶಬ್ದಸೌಧದ ಆಶ್ರಯದಲ್ಲಿ;ರನ್ನನು ಮುದ್ರೆಯೊಡೆದ ಸರಸ್ವತಿ ಭಂಡಾರದ ಸೌಂದರ್ಯವಿರುವುದು ಶಬ್ದ ವೆಂಬ ವಜ್ರವೈಢೂರ್ಯದ ಹೊಳಪಿನಲ್ಲಿ.
ಹೀಗೆ ಚಿಂತನೆಯ ಸೆಳತಕ್ಕೆ ಒಳಗಾಗುವ ಡಾ. ಗುರುಲಿಂಗ ಕಾಪಸೆ ಯವರ ಮತ್ತೊಂದು ಕಾವ್ಯಮೀಮಾಂಸೆಯನ್ನೊಮ್ಮೆ ಕೇಳಿ....."...  ೧೦ನೇ ಶತಮಾನದಲ್ಲಿಯೇ  ಆದಿಕವಿ ಪಂಪ ಜಗತ್ತಿಗೆ  ಮಾದರಿಯಾಗುವಂತಹ  ಕೊಡುಗೆ ನೀಡಿದ  ಶಬ್ದ ವೈಭವವನ್ನೊಮ್ಮೆ ನೋಡಿ"ಮಾನವ ಜಾತಿ ತಾನೊಂದೆ ವಲಂ".೧೨ ನೇ ಶತಮಾನದಲ್ಲಿ ಸಾಹಿತ್ಯದ ಸ್ವರೂಪ ಮತ್ತು ವಸ್ತುವನ್ನೇ ಬದಲಿಸಿ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಗೆ ಕಾರಣವಾಗಿದ್ದು  ಶಿವಶರಣರು  ವಿಶ್ವಸಾಹಿತ್ಯಕ್ಕೆ ನೀಡಿದ ಮೌಲಿಕ ಕೊಡುಗೆಯಾಗಿದೆ.
"ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎಂಬ ಶಬ್ದ ಮಜ್ಜನ ಪ್ರಾಚೀನತಮ   ತಮಿಳು ಇಂಗ್ಲೀಷ ಸೇರಿ ಯಾವ ಭಾಷೆಗಳಲ್ಲಿಯೂ ಸಿಗಲಾರದು.ಸಂಸಾರಕ್ಕೆ ಅಂಟಿಯೂ ಅಂಟದಂತೆ,ಭವದಲ್ಲಿದ್ದೂ ಭವಿಯಾಗದೇ ಅನುಭಾವಿಯಾಗಬೇಕು.ಲೌಕಿಕದಲ್ಲಿದ್ದೂ ಅಲೌಕಿಕತೆಯನ್ನು ಸಾಧಿಸಬೇಕೆಂಬುವ ಸಮರಸದ ಆಧ್ಯಾತ್ಮ ,ಪ್ರಪಂಚದ ಯಾವ ದರ್ಶನದಲ್ಲೂ ಕಾಣಲಾರದು." 
     ಹೀಗೆ ನಮ್ಮ ಸಾಹಿತ್ಯದ ಹಿರಿಮೆಯನ್ನು ಸಾರುತ್ತಲೇ  ಮತ್ತೆ ಶಬ್ದ ವೆಂಬ ಮಾಂತ್ರಿಕ ಲೋಕಕ್ಕೆ  ನಮ್ಮನ್ನು ಕೈಹಿಡಿದು ಕರೆದೊಯ್ದು ಬೆಳಕು ತೋರಿದ ಪರಿಯನ್ನು ಡಾ.ಕಾಪಸೆಯವರು ಉಲ್ಲೇಖಿಸಿದ   ಈ ವಾಕ್ಯಗಳಿಂದ ಆಘ್ರಾಣಿಸಬಹುದು"ಮನುಷ್ಯನಲ್ಲಿರುವ ಪಶುತ್ವವನ್ನು ಪಳಗಿಸಬೇಕು ದೈವತ್ವವನ್ನು ಎಚ್ಚರಿಸಬೇಕು"-ಸ್ವಾಮಿ ವಿವೇಕಾನಂದ"ಮಹಿಳೆಯನ್ನು ಗೌರವಿಸಬೇಕು ಮಕ್ಕಳನ್ನು ಪ್ರೀತಿಸಬೇಕು"  ಈ ಪದಾರ್ಥಗಳನ್ನೇ ನಾವು ತಿರುವು ಮುರುವು ಮಾಡಿ ಪಶು ಬದುಕನ್ನು ಬದುಕುತ್ತಿದ್ದೇವೆ.ಕಾಮಧೇನುವಿನಂತೆ ಜ್ಞಾನದ ಕ್ಷೀರಧಾರೆಯನೆರೆದು ನಮ್ಮನ್ನು ತಣಿಸುತ್ತಲೇ ,ಸಾಹಿತ್ಯದ ಸೌಂದರ್ಯಮೀಮಾಂಸೆಯತ್ತ ಹೊರಳಿದರು
"ಸಾಹಿತ್ಯದಲ್ಲಿ ಅಮೂಲ್ಯ ಸೌಂದರ್ಯಗಳಿವೆ.೧ ಐಂದ್ರಿಕ ಸೌಂದರ್ಯ(Sensuous beauty)ಇದಕ್ಕೆ  ಬೇಂದ್ರೆಯವರ
"ನಾನು ಬಡವಿ ಆತ ಬಡವ
      ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
      ಅದಕು ಇದಕು ಎದಕು" ಎಂಬ ಕವಿತೆ,
"ಇದು ಬರಿ ಬೆಳಗಲ್ಲೋ ಅಣ್ಣಾ"ಎಂಬ ಬೆಳಗು ಕವಿತೆ ಹಾಗೂ "ಮೂಡಲ ಮನೆಯ ಮುತ್ತಿನ ನೀರಿನ ..." ಕವಿತೆಗಳು ಇಂದ್ರಿಯ ಸೌಂದರ್ಯದ ನಕ್ಷತ್ರಗಳಾಗಿವೆ.
೨ .ಬೌದ್ಧಿಕ ಸೌಂದರ್ಯ (Intellectual Beauty)ಈ ಸೌಂದರ್ಯವನ್ನು ಆಸ್ವಾದಿಸಲು"ಕೇಳುವುದೆಲ್ಲ ಮಧುರಕೇಳದೇ ಇರುವುದೆಲ್ಲ ಅತಿ ಮಧುರ"ಎನ್ನುವ ಹಾಗೆ,
ಚನ್ಮವೀರ ಕಣವಿಯವರ
"ಗಾಂಧೀಜಿ ಯಾರು ಹೇಳಿದರು
ನಿಮ್ಮನ್ನು ಮರೆತಿರುವೆವೆಂದು
ಕೂಟಕೂಟದಲ್ಲಿ ನಿಮ್ಮನ್ನು ನಿಲ್ಲಿಸಿದ್ದೇವೆ.
ಏಕೆಂದರೆ
ನಿಮ್ಮ ಆದರ್ಶ ಪಾಲನೆ 
ನಾವು ನಿಲ್ಲಿಸಿದ್ದೇವೆ" 
ಎಂಬ ಪದ್ಯಗಳಲ್ಲಿನ ಚಿಂತನೆಯನ್ನು ಗ್ರಹಿಸಬೇಕು
೩.ಆಧ್ಯಾತ್ಮಿಕ ಸೌಂದರ್ಯ-(Spiritual Beaury)ಅರವಿಂದರು ವ್ಯಕ್ತಿಯಲ್ಲಿರುವ1 ಜೀವಾತ್ಮ-(Individualself)2.ಪರಮಾತ್ಮ - (universalself)ಜೀವಾತ್ಮ ಪರಮಾತ್ಮಗಳೆರಡೂ ಎಂಬುದೇ  ಅದ್ವೈತ.ಈ ಅದ್ವೈತವೇ ಬೌದ್ಧಿಕ ಸೌಂದರ್ಯ"ಹೀಗೆ ಡಾ.ಕಾಪಸೆಯವರ ಶಬ್ದ ಬೆಳಕಿನ ಕಿರಣಗಳು ನಮ್ಮ ಮೌನ ಮನಗಳನ್ನು ಇನ್ನಿಲ್ಲದಂತೆ ವ್ಯಾಪಿಸಿಕೊಂಡದ್ದು ನಮ್ಮನ್ನು ಅಚ್ಚರಿಗೊಳಿಸಿತ್ತುಅವರ  ಮನಸು ಹರಿದಲ್ಲೆಲ್ಲಾ ಜ್ಞಾನಪ್ರವಾಹ ದೃಷ್ಟಾಂತಗಳದ್ದೇ ರಸಪಾಕ .ಪಂಪ, ಕುವೆಂಪು, ಬೇಂದ್ರೆ,ಯವರಂತಹ ದಾರ್ಶನಿಕ ಕವಿಗಳ ವಿಶ್ವ ಶ್ರೇಷ್ಠತೆ,ಕನ್ನಡ ಮರಾಠಿ ಭಾಷೆ  ಗಳ ಸಹ ಸಂಬಂಧ,ಸಂಸ್ಕೃತ ಇಂಗ್ಲೀಷ ಭಾಷೆಗಳ ಜ್ಞಾನಾತ್ಮಕ ವ್ಯಾಪ್ತಿಯ ಕಲಿಕೆ,ಈ ಎಲ್ಲ ಸಂಗತಿಗಳು ನಿರರ್ಗಳವಾಗಿ ಶಬ್ದಮಂಜರಿಯ ಪ್ರವಾಹದ ಕೊನೆಗೆ ಅವರಿಂದ ಬಂದ  ಮಾತು "ಅರವತ್ತಕ್ಕೆ ಅರಳು ಮರಳು ಆದರೆ ನನಗೆ ತೊಂಬತ್ತಕ್ಕೆ ತಿರುವು ಮುರುವು "  ಇದಲ್ಲವೇ ಶಬ್ದ ಗಾರುಡಿಗನ ಕೌಶಲ್ಯ...



x

Friday 4 May 2018

ಲಾವಣಿ - ಮತಶಕ್ತಿ

ಕೇಳಿರಿ ಜನಗಳೇ
ಕೇಳಿರಿ ನೀವು
ಚುನಾವಣೆ ರಾಜ್ಯದಿ ನಡೆದೈತಿ
ಪ್ರಜಾಪ್ರಭುತ್ವದ ಕ್ರಾಂತಿಯ ನಾಂದಿ
ರಾಜ್ಯದಲೆಲ್ಲೆಡೆ ಹರಡೈತಿ
ಮತದಾನದ ಹಕ್ಕು
ನಮ್ಮಯ ಶಕ್ತಿ
ಚಲಾಯಿಸಿ ನೀವು ವಿವೇಚಿಸಿ
ಸರ್ಕಾರವ ರಚಿಸಲು
ನಿಮ್ಮಯ ಹಕ್ಕನು ತಪ್ಪದೇ 
ನೀವು ದಾಖಲಿಸಿ
ನಿಮ್ಮಯ ಮತವನು
ಮಾರಿಕೊಳ್ಳದಿರಿ 
ಆಸೆಯ ಮಾಡಿ ಪುಡಿಗಾಸಿಗೆ
ನಾಡನು ಕಟ್ಟುವ ಘನ 
ಹೊಣೆಗಾರಿಕೆ
ನಮ್ಮಯ ಮೇಲಿದೆ 
ಧ್ಯಾನಿಸಿರಿ
ಅಳುಕದೆ ಧೈರ್ಯದಿ 
ಮತವನು ಹಾಕಿ
ಜನಶಕ್ತಿಯ ನಾವು ಸಾರೋಣ
ಪ್ರಜಾಪ್ರಭುತ್ವದ ಸೌಂದರ್ಯವನ್ನು 
ಲೋಕಕೆ ನಾವು ತಿಳಿಸೋಣ
ಜನತಂತ್ರದಲಿ ಜನರೇ
ಜನಾರ್ಧನ
ಮತ ಕರ್ತವ್ಯವ
ಮರೆಯದಿರಿ
ಹಿರಿಯರು ಕಟ್ಟಿದ 
ನಾಡಿಗೆ ನಾವು ಎಲ್ಲರೂ 
ಶಕ್ತಿಯ ತುಂಬೋಣ
ಸರ್ವಜನಾಂಗದ ಶಾಂತಿಯ 
ತೋಟವ ಸರ್ವರೂ ಸೇರಿ
ಬೆಳೆಸೋಣ
ರಾಜ್ಯತಂತ್ರದ ಪರಂಪರೆಯನು
ಎಲ್ಲರೂ ಕೂಡಿ ಉಳಿಸೋಣ


ಲಾವಣಿ - ಮತಶಕ್ತಿ










ಕೇಳಿರಿ ಜನಗಳೇ
ಕೇಳಿರಿ ನೀವು
ಚುನಾವಣೆ ರಾಜ್ಯದಿ ನಡೆದೈತಿ
ಪ್ರಜಾಪ್ರಭುತ್ವದ ಕ್ರಾಂತಿಯ ನಾಂದಿ
ರಾಜ್ಯದಲೆಲ್ಲೆಡೆ ಹರಡೈತಿ
 ಮತದಾನದ ಹಕ್ಕು
ನಮ್ಮಯ ಶಕ್ತಿ
ಚಲಾಯಿಸಿ ನೀವು ವಿವೇಚಿಸಿ
ಸರ್ಕಾರವ ರಚಿಸಲು
ನಿಮ್ಮಯ ಹಕ್ಕನು ತಪ್ಪದೇ 
ನೀವು ದಾಖಲಿಸಿ
ನಿಮ್ಮಯ ಮತವನು
ಮಾರಿಕೊಳ್ಳದಿರಿ 
ಆಸೆಯ ಮಾಡಿ ಪುಡಿಗಾಸಿಗೆ
ನಾಡನು ಕಟ್ಟುವ ಘನ 
ಹೊಣೆಗಾರಿಕೆ
ನಮ್ಮಯ ಮೇಲಿದೆ 
ಧ್ಯಾನಿಸಿರಿ.
ಅಳುಕದೆ ಧೈರ್ಯದಿ 
ಮತವನು ಹಾಕಿ
ಜನಶಕ್ತಿಯ ನಾವು ಸಾರೋಣ
ಪ್ರಜಾಪ್ರಭುತ್ವದ ಸೌಂದರ್ಯವನ್ನು 
ಲೋಕಕೆ ನಾವು ತಿಳಿಸೋಣ
ಜನತಂತ್ರದಲಿ ಜನರೇ
ಜನಾರ್ಧನ
ಮತ ಕರ್ತವ್ಯವ
ಮರೆಯದಿರಿ
ಹಿರಿಯರು ಕಟ್ಟಿದ 
ನಾಡಿಗೆ ನಾವು ಎಲ್ಲರೂ 
ಶಕ್ತಿಯ ತುಂಬೋಣ
ಸರ್ವಜನಾಂಗದ ಶಾಂತಿಯ 
ತೋಟವ ಸರ್ವರೂ ಸೇರಿ
ಬೆಳೆಸೋಣ
ರಾಜ್ಯತಂತ್ರದ ಪರಂಪರೆಯನು
ಎಲ್ಲರೂ ಕೂಡಿ ಉಳಿಸೋಣ

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...