Total Pageviews

Monday 21 January 2019

ಜನರ ಜಂಗಮ..
                ಸಾಟಿಯಿಲ್ಲ ಓ ಸದ್ಗರು ನಿನಗೆ                                 ಜಗವೇ ನಡೆದಿದೆ ನಿನ್ನಯ ಕಡೆಗೆ                       ಹೊರಟೆಯಾ ನೀನು ನಿಜ ಮನೆಯೆಡೆಗೆ       ಮನುಕುಲಕಾರು ದಿಕ್ಕು ಕೊನೆಗೆ


              ತ್ರಿವಿಧ ದಾಸೋಹಿ ಕನ್ನಡ ರತುನ                         ಕಾದೆಯಾ ನೀ ಯುಗವೊಂದನು ಜತುನ                      ಮುಗಿಯಿತೆ ಕಾಲದೊಂದಿಗೆ ಮಂಥನ             ನಡೆದಾಡುವ ದೇವನೆ ಮುಗಿಯದು ಕಥನ


           ವಸುಧೈವಕೆ ಮಾನವ ಧರ್ಮ ದರ್ಶನ                      ಕಾಯಕ ಯೋಗಿ ನೀನೇ ಸುದರ್ಶನ                          ಜನರ ಜಂಗಮ ದೀನರ ಸಂಗಮ                ಜಗದಂಧಕಾರವ ಕಳೆದ ಅಲ್ಲಮ


              ಜಾತಿ ಧರ್ಮ ಮತ ಪಂಗಡ ಭೂತ                         ಹಿಡಿದು ಕರಗಿಸಿದ ಸಮತೆಯ ಸಂತ                            ವಿಶ್ವಮಾನವತೆ ಹರಡಿದ ದೇವ.                     ಅರಿವೇ ಗುರು  ನೀ ಯುಗದಾ ಬಸವ


                  ಮೌಢ್ಯದ ಕತ್ತಲೆ ಕಳೆದ ಚಂದಿರ                              ಜಗವ ಬೆಳಗಿದ ಭಕ್ತಿಯ ನೇಸರ                        ಅನಂತಕೂ ಮಿಗಿಲು ಕ್ಷಿತಿಜಕೂ ದಿಗಿಲು              ಎಲ್ಲಿಯ ಜ್ಯೊತಿ ಎಲ್ಲಿಗೆ ಬೆಳಕು


            ನಿರ್ಗುಣ  ನಿರಹಂಕಾರದ ಮೂರುತಿ                        ಹಸಿವು ಹಿಂಗಿಸಿದ ಮಹಾ ಅನುಭೂತಿ                        ಜ್ಞಾನ,ಭಕ್ತಿ ಕರ್ಮಗಳ ಯೋಗಿ                    ಉದ್ಧರಿಸಿದೆ ಬಡವ ಬಲ್ಲಿದರೆನ್ನದೆ ತೂಗಿ

                                                   ಚಂದ್ರಶೇಖರ ಹೆಗಡೆ

Tuesday 15 January 2019

ರಕ್ತರಾತ್ರಿಯ ಬೆಳಕಿನಲ್ಲಿ...ಭಾಗ 1

‘ಕಲ್ಲಿನಲ್ಲಿ ಮಲಗಿರುವ ಅಣಿಗಳನ್ನೆಬ್ಬಿಸಿ, ಬೃಹತ್ ಬ್ರಹ್ಮಾಂಡದೊಳು ಕಬ್ಬೊಗೆಯ ತುಂಬಿಸಿ, ರುದ್ರಾಗ್ನಿ ಜ್ವಾಲೆ ಧಗಧಗಿಸಿ ಬೆಟ್ಟ ನಿಟ್ಟುಗಳ ಸುಟ್ಟುರಿವಂತೆಸಗುವ ಆ ಅಶ್ವತ್ಥಾಮನ ಬಿಲ್ವಿದ್ಯೆಗೆ ಇಲ್ಲಿಂದಲೇ ನಮೋ ಎಂಬೆ.’ ‘ಪಾಶುಪತಾಸ್ತ್ರದಿಂದ ಹೊರಹೊಮ್ಮುವ ಸಿಡಿಲಿನ ಬೆಂಗಿಡಿ ಕೆಮ್ಮಿಂಚಿನ ಕೆಂಗಿಡಿ ದಟ್ಟಯಿಸಿ ಕಿಕ್ಕಿರಿದು  ಜಡಿದಾಗ ಹೆಬ್ಬೆಟ್ಟವೇ ಹುಡಿಯೊಡೆದು ಹಾರಿ ಹೋಗುವುದು. ಆಮೇಲೆ ಕರ್ಣನಾವ ಗಿಡದ ತೊಪ್ಪಲು?' ಎಂಬ ಮಾತುಗಳ ಭೋರ್ಗರೆಯುವ ಶಬ್ದ ಕಡಲು; ಮಹೋನ್ನತ ಉನ್ಮತ್ತ ಪ್ರತಿಭಾಶೈಲದಿಂದ ಆರ್ಭಟದಿ ಧುಮ್ಮಿಕ್ಕುತ್ತಿರುವ ಪದಗಳ ಜಲಲ ಜಲಧಾರೆ; ಝೇಂಕರಿಸಿ ಮುತ್ತಿಕ್ಕುವ, ನರನಾಡಿಗಳಲ್ಲಿ ರುಧಿರವಾಗಿ ಹರಿಯುವ ನಾದಪ್ರವಾಹ; ಅಂತರಂಗದ ವಸುಧಾವಲಯ ಗರ್ಭದೊಳ್ ಬೈಚಿಟ್ಟುಕೊಂಡರೂ ಒತ್ತಡದಿ ಕುದಿಕುದಿದು ಸುಳಿದು ಸುತ್ತಿ ಭೋಂಕನೆ ಮೇಲೆದ್ದು ಕಲಾದೇವಿಯಾಗಿ ಅವತರಿಸಿ ಆವರಿಸುವ ಭಾವಶಿಲಾರಸ; ಶೃಂಗಾರ ಕರುಣ ಹಾಸ್ಯ ರೌದ್ರ ವೀರ ಭಯಾನಕಾದಿಗಳು ಹೃದಯ ಸಮುದ್ರವನ್ನೇ ಕಲಕಿ, ತಾಳಕ್ಕೆ ತಕ್ಕಂತೆ  ಪುಟಿ ಪುಟಿದು ರಂಗವನ್ನೇ ಕಂಪಿಸುತ್ತಾ ಬಿಜಯಂಗೈದು ತಮ್ಮಲ್ಲೇ ಸಂಧಾನಿಸಿ ಲಯಸೂತ್ರದಲ್ಲಿ ಓತಪ್ರೋತವಾಗಿ ಸಮಾಗಮಿಸುವ ನವರಸಪಾಕವದು.
ಹೀಗೆ ಸಾಮಾಜಿಕರಾದ ನಮ್ಮ  ಎದೆ ತುಂಬಿ ಘಂಟಾನಾದಗೈದು ಹೊರಟ ಶಬ್ದತಾಪಕ್ಕೆ ನಮ್ಮನ್ನೇ ಕುದಿಸಿ ಕುಣಿಯುವಂತೆ ಮಾಡಿದ ಅವಧೂತ ನಾಟಕವೆಂದರೆ ಕಂದಗಲ್ಲ ಹನಮಂತರಾಯರ ‘ರಕ್ತರಾತ್ರಿ'. ದಿನಾಂಕ 10 ನೇ ಜನವರಿ 2019 ರ ಋತು ಹೇಮಂತ ದಯಪಾಲಿಸಿದ ಮೈಕೊರೆಯುವ ಚಳಿಯಲ್ಲೂ ಎದೆಯ ಬಿಸಿರಕ್ತ ಕುದಿಯುವಂತೆ, ತುದಿಗಾಲಿನಲ್ಲಿ ನಿಂತು ವೀಕ್ಷಿಸುವಂತೆ ಮಾಡಿದ ರಂಗಪ್ರಯೋಗ ರಕ್ತರಾತ್ರಿ. ಗುಳೇದಗುಡ್ಡದ ಲಕ್ಷ್ಮೀ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮದ ಘಳಿಗೆಯಲ್ಲಿ ಏರ್ಪಡಿಸಿದ ಸಾಂಸ್ಕøತಿಕ ಉತ್ಸವದ ಅಂಗವಾಗಿ ನಡೆದ ಈ ರಂಗಪ್ರಯೋಗ ರಂಗರಸಿಕರ ಮನವನ್ನು ಗೆದ್ದಿತು. ಆಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದ ಹಾವಳಿಯಿಂದಾಗಿ ಇತ್ತೀಚೆಗೆ ಪ್ರೇಕ್ಷಕರ ಬರವನ್ನು ತೀವ್ರವಾಗಿ ಎದುರಿಸುತ್ತಿರುವ  ವೃತ್ತಿರಂಗಭೂಮಿಯ ಸಂಕಟದ ಈ ದಿನಗಳಲ್ಲಿ ಪೌರಾಣಿಕ ನಾಟಕವೊಂದು ಈ ಮಟ್ಟಿನ ಯಶಸ್ಸು ಸಾಧಿಸಿರುವುದು ರಂಗವಿಮರ್ಶಕರಿಗೆ ಹುಬ್ಬನ್ನೇರಿಸುವಂತೆ ಮಾಡಿದರೂ ಗುಳೇದಗುಡ್ಡ ಎಂಬ ಶ್ರೀಮಂತ ರಂಗಪರಂಪರೆಯ ನಾಡಿನಲ್ಲಿ ಇದು ಅಚ್ಚರಿಯ ಸಂಗತಿಯೇನಲ್ಲ. ರಾತ್ರಿ 2 ಗಂಟೆಯವರೆಗೂ ನಡೆದ ಈ ರಂಗಪ್ರಯೋಗವು ಹಿಮಗಟ್ಟುವ ಚಳಿಯಲ್ಲೂ ವ


ಸ್ಸಿನ 
ಭೇದ

ವಿಲ್ಲದೆ ಅಬಾಲವೃದ್ಧರಾದಿಯಾಗಿ ಸರ್ವರೂ ತವಕದ ಮುಳ್ಳಿನ ಮೇಲೆ ನಿಂತು ರಸಾನುಭವದಲ್ಲಿ ಮಿಂದೇಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.


ಅದು ಭೋರ್ಗರೆದಷ್ಟೂ ನಿಯಂತ್ರಿಸಲಾಗದ ಆರ್ಭಟದ ಕಡಲ ಅಬ್ಬರ. ಉಕ್ಕಿದಷ್ಟೂ ತಡೆಯಲಾಗದ ಹೊನ್ನುಡಿಗಳ ಚಿಲುಮೆ. ಹರಿದಷ್ಟೂ ವಿಸ್ತಾರ ಪಡೆಯುವ ಶಬ್ದಪಾವನ ಗಂಗೆಯದು. ಬೀರಿದಷ್ಟೂ ಬ್ರಹ್ಮಾಂಡವನ್ನೇ ಆವರಿಸುವ ನುಡಿಬೆಳಕಿನ  ಮಹಾಜ್ಯೋತಿಯದು. ತಣಿದಷ್ಟೂ ಹನಿಯುವ ರಸಇಬ್ಬನಿಯದು, ಆಲಿಸಿದಷ್ಟೂ ಎದೆಯೊಳಗಿಳಿಯುವ ರಾಗವೈಭವವದು. ಅಕ್ಷರಗಳಿಗೇ ಅಚ್ಚರಿಯಾಗುವಂತೆ ಸದಾ ರೆಕ್ಕೆಯಾಡಿಸುವ ದುಂಬಿಯ ತಡೆಯಿಲ್ಲದ ನುಡಿ ಝೇಂಕಾರವದು. ಹೀಗೆ ತಮ್ಮ ಮಾಂತ್ರಿಕ ನಾಟ್ಯ ಭೈರವರಾಗದಿಂದ ಹೃದಯ ಕಡಲನ್ನೇ ಅಲ್ಲೋಲ ಕಲ್ಲೋಲಗೊಳಿಸುವ ‘ಕರ್ನಾಟಕದ ಶೇಕ್ಸಪಿಯರ್’, ‘ನಾಟ್ಯಕವಿಕೇಸರಿ’, ಎಂದೇ ಪ್ರಸಿದ್ಧರಾದ  ಕಂದಗಲ್ಲ ಹನಮಂತರಾಯರ ‘ರಕ್ತರಾತ್ರಿ’ ನಾಟಕದ ರಂಗಪ್ರಯೋಗ ಜನಮನಸೆಳೆಯಿತು. ಈ ನಾಟಕದ ಶ್ರೀಕೃಷ್ಣ ಪಾತ್ರಧಾರಿಯ ಅಭಿನಯದ ವೈಭವ ಎಷ್ಟು ಪ್ರಭಾವಮಯವಾಗಿತ್ತೆಂದರೆ ಪ್ರಯೋಗ ಮುಗಿಯುತ್ತಲೇ ಪ್ರೇಕ್ಷಕರಲ್ಲಿಯೇ ಕೆಲವರು ಅವರ ಪಾದಸ್ಪರ್ಶಿಸಿ ನಮನ ಸಲ್ಲಿಸಿದರು. ಕಥಾವಸ್ತುವಿಗೆ ಹಾಗೂ ಅಂದಿನ ರಂಗಪ್ರಯೋಗಕ್ಕೂ ಸೂತ್ರಧಾರನಂತಿದ್ದ ‘ಕಲಿಯುಗದ ಶ್ರೀಕೃಷ್ಣ’ ನೆಂದು ಬಿರುದಾಂಕಿತರಾದ ಬಳ್ಳಾರಿಯ ಶ್ರೀ ಚಿದಾನಂದಪ್ಪ ಗವಾಯಿ ಯವರು ನಿರ್ವಹಿಸಿದ ಶ್ರೀಕೃಷ್ಣ ಪಾತ್ರ ಜನಮೆಚ್ಚುಗೆ ಗಳಿಸಿತು. ಸಾಕ್ಷಾತ್ ಶ್ರೀಕೃಷ್ಣನೇ ಧರೆಗಿಳಿದಂತಿದ್ದ, ನಟ, ನಿರ್ದೇಶಕ, ಸಂಗೀತ ನಿರ್ದೇಶಕರಾಗಿ ದುಡಿದ ಅನುಭವದ ಹದಭರಿತ ಹಾವಭಾವ, ಕಣ್ಮನ ಕುಕ್ಕುವ ರಂಗು ರಂಗಿನ ವೇಷಭೂಷಣ, ಸಂಗೀತ ಶಿಕ್ಷಕರಾಗಿ ವೃತ್ತಿನಿರತ ಅನುಭಾವಿಯಾಗಿರುವ ಇವರ ರಾಗ, ತಾಳ, ಲಯಬದ್ಧ ಶಾಸ್ತ್ರೀಯತೆ, ವಿದ್ವತ್ಪೂರ್ಣ ಸ್ಪಷ್ಟ ಸಂಭಾಷಣೆಯ ಅಭಿವ್ಯಕ್ತಿ, 400 ನೇ ರಂಗಪ್ರಯೋಗದ ಅನುಭವ ಹೊಂದಿದ ಯತಿಭರಿತ ಸಂಯಮದ ಭಾವಾಭಿನಯ, ಅಷ್ಟೇ ಅಲ್ಲದೇ ಮಾತು ಮರೆಯುವ ಸಹಕಲಾವಿದರಿಗೂ ಮಾತಿನ ನೆನಹೇ ತಾವಾಗಿ ರಂಗದ ಸಮತೋಲನ ತೂಗಿದ ಇವರ ಸಮಯಪ್ರಜ್ಞೆ ಗಳು ರಂಗಕ್ಕೆ ವಿಶೇಷ ಕಳೆಯನ್ನು ತಂದಿದ್ದವು.
ನೆರೆಯ ಆಂದ್ರಪ್ರದೇಶದ ಗಡಿ ಗ್ರಾಮ ಗುಳ್ಯಂ ನಲ್ಲಿ ಗಡಿನಾಡ ಕನ್ನಡಿಗರಾಗಿ ಬೆಟ್ಟದಷ್ಟು ಸಮಸ್ಯೆಗಳನ್ನೆದುರಿಸುತ್ತಲೇ ಸವಾಲಾಗಿ ಸ್ವೀಕರಿಸಿ 80 ವರ್ಷಗಳ ಸುದೀರ್ಘ ಕಾಲ ಕನ್ನಡ ಮಾತೃಭೂಮಿಯ ಹಾಗೂ ಮಾತೃಭಾಷೆಯ ಸೊಗಡಿನ ಸುಗಂಧವನ್ನು ನಾಡಿನೆಲ್ಲೆಡೆ ತಮ್ಮ 150 ರಂಗ ಪ್ರಯೋಗಗಳ ಕಲಾಭಿನಯದಿಂದ ಪಸರಿಸಿ ಕಲಾಲೋಕದಲ್ಲಿ ‘ಅಭಿನವ ಅಶ್ವತ್ಥಾಮ’ ರೆಂದೇ ಖ್ಯಾತರಾದ ಶ್ರೀಯುತ ಗುಳ್ಯಂ ಶರಣಯ್ಯಸ್ವಾಮಿ ಯವರ ಪುತ್ರ ಗುಳ್ಯಂ ಶೂಲಪಾಣಿ ಸ್ವಾಮಿಯವರು, ತಮ್ಮ ತಂದೆಯವರ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವಂತೆ, ಈ ರಕ್ತರಾತ್ರಿ ನಾಟಕದ ತಮ್ಮ 12 ನೇಯ ಪ್ರಯೋಗದಲ್ಲಿ ಅಶತ್ಥಾಮನ ಪಾತ್ರದ ಪರಕಾಯ ಪ್ರವೇಶ ಮಾಡಿದ್ದು ವಿಶೇಷವಾಗಿತ್ತು. ‘ಕನ್ನಡ ನಾಡಿನ 'ಸಾಂಸ್ಕøತಿಕ ಕಲಾ ಲೋಕ ಗುಳೇದಗುಡ್ಡ'ದಲ್ಲಿ ಅಭಿನಯಿಸಿ ರಂಗರಸಿಕರ ಮನ ಗೆದ್ದರೆ ಸಾಕು ನಾಡಿನೆಲ್ಲೆಡೆಯಲ್ಲಿಯೂ ನಟನಾಗಿ ಕೀರ್ತಿ ಪಡೆಯಬಹುದು’  ಎಂದು ತಮ್ಮ ತಂದೆ ಶರಣಯ್ಯಸ್ವಾಮಿಯವರ ಮಾತನ್ನು ಸ್ಮರಿಸಿಕೊಂಡು, ಹೆಚ್. ಆರ್. ಭಸ್ಮೆ, ಪಿ. ಬಿ. ಧುತ್ತರಗಿ, ಕಂದಗಲ್ಲ ಹನಮಂತರಾಯರಂತಹ ರಂಗಭೀಷ್ಮರ ಕರ್ಮಭೂಮಿ ಗುಳೇದಗುಡ್ಡದಲ್ಲಿನ ತಮ್ಮ ಈ ಕಲಾಸೇವೆ ಸಾರ್ಥಕ್ಯವನ್ನು ಪಡೆದುದರ ಬಗ್ಗೆ ಘೋಷಿಸಿ ಹೆಮ್ಮೆಪಡುತ್ತಾರೆ; ಶೂಲಪಾಣಿಯವರು. ದ್ರೌಪದಿಯ ಪಾತ್ರವನ್ನು ನಿರ್ವಹಿಸಿದ ಮತ್ತೋರ್ವ ಕಲಾರಾಗಿಣಿಯವರ ಕಂಚಿನ ಕಂಠದ ನುಡಿರಣನ ಭೀಷಣವಾಗಿತ್ತು.


ಶಕುನಿಯ ಪಾತ್ರದಲ್ಲಿದ್ದ ಸ್ಥಳೀಯರಾದ  ಶ್ರೀ ಈಶ್ವರ ಕಂಠಿಯವರ ಸಿರಿಕಂಠದ ಅಭಿನಯ ಜನಮನಸೂರೆಗೊಂಡಿತು.
ರೇಷ್ಮೆಸೀರೆಗಳ ನಾಡು ಇಳಕಲ್ಲಿನ ರಂಗಕಲಾಚತುರೆ ಶ್ರೀಮತಿ ಉಮಾರಾಣಿ ಬಾರಿಗಿಡದ ರವರ,  ವೀರ ಅಭಿಮನ್ಯುವನ್ನು ಕಳೆದುಕೊಂಡ  'ಉತ್ತರೆ' ಯ ಪಾತ್ರ ಪ್ರವೇಶ ಜನರನ್ನು  ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಭೀಮ, ದುರ್ಯೋಧನ ಮುಂತಾದವರು  ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು. ಧರ್ಮರಾಜನ ಪಾತ್ರಧಾರಿ ಇನ್ನಷ್ಟು ಪಳಗಿ ಬೆಳಗಬೇಕಾಗಿತ್ತು. 
ಕನ್ನಡ ನಾಡಿಗೇ ವೃತ್ತಿರಂಗಭೂಮಿಯ ಪಾಠವನ್ನು ಹೇಳಿಕೊಟ್ಟ ಕಂದಗಲ್ಲ ಹನಮಂತರಾಯರ ನಾಟಕಗಳು ನಾಡವರಿಗೆ ರಸದೌತಣವನ್ನು ವ್ಯಂಜಿಸುವ ರಸಾಯನಗಳು. ಅವು ಕೇವಲ ನಾಟಕಗಳಲ್ಲ; ರಗಳೆಯನ್ನೇ ಸಂಭಾಷಣೆಯ ಹೊಳೆಯನ್ನಾಗಿ ಹರಿಸಿದ ಮಹಾಕಾವ್ಯಗಳು. ಅವರ ಪ್ರತಿಯೊಂದು ನಾಟಕವೂ ರಂಗು ರಂಗಿನ ನಾಟ್ಯ ಮಯೂರಿ ಕುಣಿದ ಮಹಾಕಾವ್ಯ. ‘ಬಡತನದ ಭೂತ’, ‘ಚಿತ್ರಾಂಗದಾ’, ‘ಕುರುಕ್ಷೇತ್ರ’ ಅರ್ಥಾತ್ ‘ಪಾಂಡವರ ಪಾಣಿಪತ್’, ‘ವರಪ್ರದಾನ’ ಅಥವಾ ‘ವಿಜಯನಗರ ಸಾಮ್ರಾಜ್ಯ ಸ್ಥಾಪನೆ’,’ತಾವರೆಯ ತೊಟ್ಟಿಲು’, ‘ಮಾತಂಗ ಕನ್ಯಾ’, ‘ಅದ್ಭುತ ರಾಮಾಯಣ (ಅಗ್ನಿಕಮಲ), ‘ಬೆಳ್ಳಿಚಿಕ್ಕಿ’, ‘ಆಗಸ್ಟ್ ಹದಿನೈದರ ನಂತರ’, ‘ಬಾಣಸಿಗ ಭೀಮ’, ‘ಪುಣ್ಯಪ್ರಭಾ’, ‘ದೈವದುರಂತ ಕರ್ಣ’, ‘ನೆತ್ತರದೌತಣ’, ‘ಪಾಂಚಾಲಿ’(ದ್ರೌಪದಿಯ ಸ್ವಯಂವರ), ‘ಜಗನ್ಮಾಯಾ’, ‘ಪಾಶುಪತಾಸ್ತ್ರ’ ಅರ್ಥಾತ್ ‘ನರವೀರ ಪಾರ್ಥ’ ಇತ್ಯಾದಿ 25 ಕ್ಕೂ ಹೆಚ್ಚು ನಾಟಕಕೃತಿಗಳು ಅವರ ಲೆಕ್ಕಣಿಕೆಯಿಂದ ಪ್ರವಾಹೋಪಾದಿಯಲ್ಲಿ ಧುಮ್ಮಿಕ್ಕಿವೆ. ಇವರ ನಾಟಕಗಳಲ್ಲಿ ಸಂಸ್ಕøತಭೂಯಿಷ್ಠ ಮಾರ್ಗದ ಹೊಳಪಿದೆ.
ರನ್ನನ ಎಂಟೆದೆಯಲ್ಲರಳಿದ ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ ಪದಭೀಷಣವಿದೆ. ಪಂಪನ ಹಳಗನ್ನಡದ ನಾದಮಾಧುರ್ಯವಿದೆ. ವಿಕ್ರಮಾರ್ಜುನ ವಿಜಯಭೇರಿಯ ಲಯವಿದೆ. ಇಂದ್ರನ ಒಡ್ಡೋಲಗದಲ್ಲಿ ಜರುಗಿದ ನೀಲಾಂಜನೆಯ ನೃತ್ಯವೈಭವದ ಪದಲಲಾಟವಿದೆ. ಗದಾಯುದ್ಧದಲ್ಲಿ ಹೊತ್ತಿಕೊಂಡು ಭಾರತವನ್ನಾಕ್ರಮಿಸುತ್ತಿರುವ ರಣಕಿಡಿಗಳಿವೆ. ವೈಶಂಪಾಯನ ಸರೋವರದೊಳಗಿದ್ದೂ  ಬೆವರುವಂತಹ ನಿರಸ್ತ ಘನರವವಿದೆ; ಪೊನ್ನನ ‘ಶಾಂತಿ ಪುರಾಣ’ದ ಅಮರ ಅಮೃತತ್ವವಿದೆ; ಲಕ್ಷ್ಮೀಶನ ‘ಜೈಮಿನಿಭಾರತ’ ದ ಉಪಮಾಲಾಲಿತ್ಯವಿದೆ; ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾ ಮಂಜರಿ’ಯ ಕೃಷ್ಣ ಲೀಲಾ ವಿನೋದವಿದೆ; ರೂಪಕ 

ಸಾಮ್ರಾಜ್ಯ
ವಿದೆ; ಮುದ್ದಣ ಮನೋರಮೆಯರ ಸಲ್ಲಾಪಗಳಿವೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಹೃದಯದಲ್ಲಿ ಮಹದಾನಂದದ ರಸ ಹೊಳೆಯಾಗಿ ಹರಿಯುವುದಕ್ಕೆ ಬೇಕಾದ ಶಬ್ದಲೋಕದ ಅಷ್ಟೈಶ್ವರ್ಯಗಳೂ ಇಲ್ಲಿವೆ.

 

Tuesday 1 January 2019

ನವವಸಂತ

 ನವವಸಂತ
 
ಸಂಭ್ರಮದ ನವವಸಂತಕೆ
ಕೇಕು ಕತ್ತರಿಸುವ ಮುನ್ನ 
ಯೋಚಿಸಿ ಒಮ್ಮೆ......


  ಬೇಕರಿಯ ಪಾಕಶಾಲೆಯಲಿ

ಬೆಂಕಿಗೆ ಬೇಯುವ  ಕೈಗಳ
  ಮೇಲೆ ಬದುಕು ಎಳೆದ
  ಬಡತನದ ಬರೆಗಳು ಹೇಗೆ
 ಹೆಪ್ಪುಗಟ್ಟಿವೆ ಎಂದು...

  ಮಧುಶಾಲೆಯ  ಮುಂದೆ
  ಶೇಂಗಾ, ಕಡಲೆ, ಹುಳಿ
  ಮಾರುವ ಕಪ್ಪು ಮುಖಗಳಲ್ಲಿ
  ಚಿಂತೆಯ ಗೆರೆಗಳು ಕಂತೆಯಾಗಿ
  ಏಕೆ ಸುಕ್ಕುಗಟ್ಟಿವೆ ಎಂದು
ಮದಿರೆಯ ಮಧುವಿನಲ್ಲಿ
  ಮುಳುಗೇಳುವ ಮುನ್ನ
  ಹಿಂತಿರುಗಿ ನೋಡಿ ಒಮ್ಮೆ.......
  ನಾವು ಬಂದ ದಾರಿಯ
  ದುಃಖ ನೋವು ಸಂಕಟಗಳು
  ಹೇಗೆ ಬೆನ್ನತ್ತಿವೆ ಎಂದು

  ಮಾಂಸ ಮದ್ಯಗಳ ಮಧ್ಯೆ
  ಹಾಡಿ ಕುಣಿದು  ಕುಪ್ಪಳಿಸಿ
  ಮರೆಯುವ ಭಾರತ ಮಣ್ಣಿನ
  ಶ್ರೀಮಂತ ಸಂಸ್ಕೃತಿ
  ಪರಂಪರೆಯ ಹೆಜ್ಜೆಗಳಿಂದು
  ಝಗಮಗಿಸುವ ಅದಾವ
  ಬೆಳಕಿನಲ್ಲಿಂದು ಮಾಯವಾಗುತ್ತಿವೆ ಎಂದು

 ಪಂಚತಾರೆಯ  ಬೆಡಗಿನ
  ಬಳುಕಿನಲಿ ಕತ್ತರಿಸಿದ
  ಉಡುಪಿನೊಳಗೆ ಮೈಮರೆಯುವ
  ಮುನ್ನ ಚಿಂತಿಸಿ ಒಮ್ಮೆ.....
  ಎಲ್ಲೋ ಬಿದ್ದ ಹರಿದ
  ನಿಲುವಂಗಿಯ  ಧರಿಸಿ
  ಬೀದಿಯಲಿ ನಾವೆಸೆದ
  ಅನ್ನವನು ಬಾಯಿಗಿಡುವ
  ನತದೃಷ್ಟರ ಹಸಿವು
  ಹಿಂಗಿಸುವುದು  ಹೇಗೆಂದು?
ಕೇಕಿನ ಮೇಲೆ ಮೊಂಬತ್ತಿ
  ಬೆಳಗುವ ಮುನ್ನ ಆಲೋಚಿಸಿ
  ಒಮ್ಮೆ........
  ಜಾತಿ  ಪಂಥ ಮತ ಪಂಗಡ
  ಭೇದಗಳ ಬೆಂಕಿಯ ಬೇಗೆ
  ಆರಿಸುವುದು ಹೇಗೆಂದು
  ಸರ್ವಜನಾಂಗದ ಶಾಂತಿಯ
  ತೋಟದ ಬೆಳಕು
  ಹರಡುವುದು ಹೇಗೆಂದು?

  ಐತಿಹಾಸಿಕ ದೇವಾಲಯಗಳ
 ಹೆಬ್ಬಾಗಿಲ ನೆರಳ ಮುಂದೆ
  ಭೂಮಾತೆಯ ಮಡಿಲು
  ಉತ್ತಿ ಬಿತ್ತಿ ಅನ್ನವನೀಯುವ
  ಅನ್ನದಾತೆಯಿಂದು
  ರೊಟ್ಟಿ ಮೊಸರು ಮಜ್ಜಿಗೆ
  ಸೌತೆ, ಹಪ್ಪಳ, ಹಿಡಿದು
  ಏಕೆ ದುಂಬಾಲು ಬೀಳುತ್ತಿರುವಳೆಂದು?
  ಪಂಪ ರನ್ನ ಪೊನ್ನ ಜನ್ನ
  ಅಕ್ಕ ಬಸವ ಅಲ್ಲಮ
  ಕವಿ ಪುಂಗವ ಶರಣರ
  ಪುಣ್ಯ ಭೂಮಿಯಲಿಂದು
  ಅರ್ಧಾಂಗಿ ಧರಿಸಿ ತೇಲಿ
  ನಾವು ಬೆಳೆಯುತ್ತಿರುವುದು
  ಏನೆಂದು?

  ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ
  ಚಂದ್ರಶೇಖರ ಹೆಗಡೆ

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...