Total Pageviews

Tuesday 1 January 2019

ನವವಸಂತ

 ನವವಸಂತ
 
ಸಂಭ್ರಮದ ನವವಸಂತಕೆ
ಕೇಕು ಕತ್ತರಿಸುವ ಮುನ್ನ 
ಯೋಚಿಸಿ ಒಮ್ಮೆ......


  ಬೇಕರಿಯ ಪಾಕಶಾಲೆಯಲಿ

ಬೆಂಕಿಗೆ ಬೇಯುವ  ಕೈಗಳ
  ಮೇಲೆ ಬದುಕು ಎಳೆದ
  ಬಡತನದ ಬರೆಗಳು ಹೇಗೆ
 ಹೆಪ್ಪುಗಟ್ಟಿವೆ ಎಂದು...

  ಮಧುಶಾಲೆಯ  ಮುಂದೆ
  ಶೇಂಗಾ, ಕಡಲೆ, ಹುಳಿ
  ಮಾರುವ ಕಪ್ಪು ಮುಖಗಳಲ್ಲಿ
  ಚಿಂತೆಯ ಗೆರೆಗಳು ಕಂತೆಯಾಗಿ
  ಏಕೆ ಸುಕ್ಕುಗಟ್ಟಿವೆ ಎಂದು
ಮದಿರೆಯ ಮಧುವಿನಲ್ಲಿ
  ಮುಳುಗೇಳುವ ಮುನ್ನ
  ಹಿಂತಿರುಗಿ ನೋಡಿ ಒಮ್ಮೆ.......
  ನಾವು ಬಂದ ದಾರಿಯ
  ದುಃಖ ನೋವು ಸಂಕಟಗಳು
  ಹೇಗೆ ಬೆನ್ನತ್ತಿವೆ ಎಂದು

  ಮಾಂಸ ಮದ್ಯಗಳ ಮಧ್ಯೆ
  ಹಾಡಿ ಕುಣಿದು  ಕುಪ್ಪಳಿಸಿ
  ಮರೆಯುವ ಭಾರತ ಮಣ್ಣಿನ
  ಶ್ರೀಮಂತ ಸಂಸ್ಕೃತಿ
  ಪರಂಪರೆಯ ಹೆಜ್ಜೆಗಳಿಂದು
  ಝಗಮಗಿಸುವ ಅದಾವ
  ಬೆಳಕಿನಲ್ಲಿಂದು ಮಾಯವಾಗುತ್ತಿವೆ ಎಂದು

 ಪಂಚತಾರೆಯ  ಬೆಡಗಿನ
  ಬಳುಕಿನಲಿ ಕತ್ತರಿಸಿದ
  ಉಡುಪಿನೊಳಗೆ ಮೈಮರೆಯುವ
  ಮುನ್ನ ಚಿಂತಿಸಿ ಒಮ್ಮೆ.....
  ಎಲ್ಲೋ ಬಿದ್ದ ಹರಿದ
  ನಿಲುವಂಗಿಯ  ಧರಿಸಿ
  ಬೀದಿಯಲಿ ನಾವೆಸೆದ
  ಅನ್ನವನು ಬಾಯಿಗಿಡುವ
  ನತದೃಷ್ಟರ ಹಸಿವು
  ಹಿಂಗಿಸುವುದು  ಹೇಗೆಂದು?
ಕೇಕಿನ ಮೇಲೆ ಮೊಂಬತ್ತಿ
  ಬೆಳಗುವ ಮುನ್ನ ಆಲೋಚಿಸಿ
  ಒಮ್ಮೆ........
  ಜಾತಿ  ಪಂಥ ಮತ ಪಂಗಡ
  ಭೇದಗಳ ಬೆಂಕಿಯ ಬೇಗೆ
  ಆರಿಸುವುದು ಹೇಗೆಂದು
  ಸರ್ವಜನಾಂಗದ ಶಾಂತಿಯ
  ತೋಟದ ಬೆಳಕು
  ಹರಡುವುದು ಹೇಗೆಂದು?

  ಐತಿಹಾಸಿಕ ದೇವಾಲಯಗಳ
 ಹೆಬ್ಬಾಗಿಲ ನೆರಳ ಮುಂದೆ
  ಭೂಮಾತೆಯ ಮಡಿಲು
  ಉತ್ತಿ ಬಿತ್ತಿ ಅನ್ನವನೀಯುವ
  ಅನ್ನದಾತೆಯಿಂದು
  ರೊಟ್ಟಿ ಮೊಸರು ಮಜ್ಜಿಗೆ
  ಸೌತೆ, ಹಪ್ಪಳ, ಹಿಡಿದು
  ಏಕೆ ದುಂಬಾಲು ಬೀಳುತ್ತಿರುವಳೆಂದು?
  ಪಂಪ ರನ್ನ ಪೊನ್ನ ಜನ್ನ
  ಅಕ್ಕ ಬಸವ ಅಲ್ಲಮ
  ಕವಿ ಪುಂಗವ ಶರಣರ
  ಪುಣ್ಯ ಭೂಮಿಯಲಿಂದು
  ಅರ್ಧಾಂಗಿ ಧರಿಸಿ ತೇಲಿ
  ನಾವು ಬೆಳೆಯುತ್ತಿರುವುದು
  ಏನೆಂದು?

  ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ
  ಚಂದ್ರಶೇಖರ ಹೆಗಡೆ

9 comments:

  1. This comment has been removed by the author.

    ReplyDelete
  2. ಯುವಜನತೆಯನ್ನು ಎಚ್ಚರಿಸುವ ಸಮಾಜಮುಖಿಯಾದ ಕವಿತೆ.ಸಂಸ್ಕೃತಿಯಲ್ಲಿ ಸಂಸ್ಕಾರಗೊಳ್ಳದೆ ವಿಕೃತಿಯನ್ನು ಮೆರೆಯುವ ಯುವಜನತೆಗೆ ಪ್ರತಿಯೊಂದು ವಸ್ತುವಿನ ಹಿಂದಿರುವ ಬೆವರಿನ,ನೋವಿನ ಸಂಗತಿಗಳನ್ನು ಉದಾಹರಣೆ ಸಮೇತ ಹೇಳಿದೆ.ನಾಡಿನ ಭವ್ಯ ಪರಂಪರೆಯನ್ನು ಅನುಚೂನವಾಗಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯಿರುವುದೇ ಇಂದು ದಾರಿ ತಪ್ಪಿದ ನವಜನತೆದೆಂದಿದೆ.

    ReplyDelete
    Replies
    1. ತಮ್ಮ ಸ್ಪೂರ್ತಿದಾಯಕ ವಿಮರ್ಶೆಯ ನುಡಿಗಳಿಗೆ ಅನಂತ ಕೃತಜ್ಞತೆಗಳು ಸರ್

      Delete
    2. ತಮ್ಮ ಸ್ಪೂರ್ತಿದಾಯಕ ವಿಮರ್ಶೆಯ ನುಡಿಗಳಿಗೆ ಅನಂತ ಕೃತಜ್ಞತೆಗಳು ಸರ್

      Delete
  3. ಹೊಸ ವರ್ಷ ದ ಓ ದ ನ್ನು ಆರಂಭಿಸಲು ಮಾನಸನ್ನು ಆ ಕಡೆ
    ಯೋಚನೆ ಮಾಡಲು ಹಚ್ಚಿದ ಕವಿತೆ

    ReplyDelete
  4. ಸಾಮಾಜಿಕ ಕಾಳಜಿಯನ್ನು ಬಿತ್ತುವ ಈ ಕಾವ್ಯ ಅಮೂಲ್ಯವಾದದ್ದು ದಾರಿ ಕಾಣದೆ ದಾರಿ ಬಿಟ್ಟಿರುವ ಯುವಕರೊಮ್ಮೆ ಓದಿದರೆ ಬದುಕನ್ನು ಸಾರ್ಥಕ ದಿಕ್ಕಿನೆಡೆ ಹೊರಳಿಸುವ ಅವರಂತರಾಳದ ಸತ್ತ ಜೀವಕೋಶಗಳಿಗೆ ಮರು ಜೀವ ನೀಡುವ ಕಾರ್ಯ ಮಾಡುವಂತಹ ಸುಂದರ ಭಾವ ತುಂಬಿಕೊಂಡ ಸದ್ಭಾವದ ನುಡಿಗಳು....ಸೂಪರ ಸರ್ ಇಂತಹ ಕಾವ್ಯಗಳು ಹೆಚ್ಚೆಚ್ಚು ಮೂಡಿ ಬರಲಿ ನಿಮ್ಮ ಲೇಖನಿಯಿಂದ....ನಮನಗಳು ನಿಮ್ಮ ಸದ್ಭಾವಕೆ...

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...