Total Pageviews

Tuesday 16 July 2019

ಮುಳ್ಳು ಹಾದಿಯಲ್ಲಿ ನಡೆದ ಕಾವ್ಯ ಭೀಷ್ಮ….
            ಜೀವನವೊಂದು ಸಂತೋಷ ನಲಿವುಗಳ ಪರಮಸುಖವಷ್ಟೇ ತುಂಬಿರುವ ಸಂಭ್ರಮದಾಗರವಾಗಿದ್ದರೆ, ಬದುಕಿನ ಕಷ್ಟಕೋಟಲೆಗಳ ಬೆಂಕಿಯಲ್ಲಿ ಬೆಂದ ದಿವಂಗತ ಡಾ. ಸಂಗಪ್ಪ ಶಿವಪ್ಪ ಬಸುಪಟ್ಟದ ಎಂಬ ಕಾವ್ಯಭೀಷ್ಮರೊಬ್ಬರು ಕನ್ನಡ ಸಾರಸ್ವತ ಲೋಕಕ್ಕೆ ಹೀಗೆ ಪುಟಕ್ಕಿಟ್ಟ ಚಿನ್ನವಾಗಿ ದಕ್ಕುತ್ತಿರಲಿಲ್ಲವೇನೋ. ನಮ್ಮ ಸೌಭಾಗ್ಯ ಗುಳೇದಗುಡ್ಡ ಎಂಬ ಬಯಲು ಸೀಮೆಯ ನಾಡಿಗೊಬ್ಬ ಡಾ. ಎಸ್ ಎಸ್ ಬಸುಪಟ್ಟದರವರೆಂಬ ಕಾವ್ಯಋಷಿಯನ್ನು ಪಡೆದ ಧನ್ಯತೆ ನಮ್ಮದಾಗಿದೆ. ಬಡತನವನ್ನೇ ಹಾಸಿ ಹೊದ್ದ ನೇಕಾರಿಕೆಯ ಮನೆತನದಲ್ಲಿ ಶಿವಪ್ಪ ಹಾಗೂ ನೀಲವ್ವ ಎಂಬ ಸಾತ್ವಿಕ ದಂಪತಿಗಳ ಸುಪುತ್ರರಾಗಿ 14 ನೇ ನವೆಂಬರ್ 1923 ರಲ್ಲಿ ಜನಿಸಿದ ಸಂಗಪ್ಪನವರು ಬಾಲ್ಯದಿಂದಲೇ ಸಾಹಿತ್ಯದ ಒಲವನ್ನು ಬೆಳೆಸಿಕೊಂಡವರು. ಬಾಗಲಕೋಟ ಜಿಲ್ಲೆಯ ಆಗಿನ ಬದಾಮಿ ತಾಲ್ಲೂಕಿನ (ಈಗ ಗುಳೇದಗುಡ್ಡ ತಾಲ್ಲೂಕು) ಜಗತ್ಪ್ರಸಿದ್ದ ‘ರೇಷ್ಮೆ ಖಣಗಳ ತವರೂರು’ ಎಂದು ಪ್ರಖ್ಯಾತವಾದ  ‘ಗುಳೇದಗುಡ’್ಡ ದಲ್ಲಿ ಜನಿಸಿ ಇಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಐದನೇ ತರಗತಿಯಲ್ಲಿ ಓದುತ್ತಿರುವಾಗಲೇ ‘ಅರಳು ಮಲ್ಲಿಗೆ’ ಎಂಬ ಹಸ್ತ ಪತ್ರಿಕೆಯೊಂದನ್ನು ಸಂಪಾದಿಸಿದ ಸಂಗಪ್ಪನವರು ಪತ್ರಿಕೆಯ ಹೆಸರಿನಂತೆ ಕನ್ನಡ ನಾಡಿಗೆ ಸಾಹಿತ್ಯದ ರಸಗಂಧವನ್ನು ಹರಡುವ ಅರಳು ಮಲ್ಲಿಗೆಯೇ ಆಗಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು’ ಎಂಬಂತೆ ಸಾಹಿತ್ಯದ ಸಿರಿಯಾಗಿ ಬೆಳೆಯುತ್ತಿದ್ದ ಸಂಗಪ್ಪನವರು ಗುಳೇದಗುಡ್ಡ, ಗದಗ, ಬಾಗಲಕೋಟೆ, ಸೋಲಾಪುರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಸೊಲ್ಲಾಪುರದ ಹೈಸ್ಕೂಲಿನಲ್ಲಿ ಸಹ ಶಿಕ್ಷಕರಾಗಿ ಒಂದು ವರ್ಷ ದುಡಿದು, ಗುಳೇದಗುಡ್ಡದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಮತ್ತೆ ಹತ್ತು ವರ್ಷ ಅದೇ ಹೈಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿ, ನಂತರ ಭಂಡಾರಿ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ 1978 ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದ ಇವರು ಬದಾಮಿಯ  ಶ್ರೀ  ವೀರಪುಲಿಕೇಶಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯರಾಗುವ ಅವಕಾಶ ಒದಗಿ ಬಂದಾಗ ತುಂಬು ಹೃದಯದಿಂದ ಒಪ್ಪಿಕೊಂಡು“ಕನ್ನಡ ನೆಲವೆಲ್ಲ ಕನ್ನಡದ ಜಲವೆಲ್ಲಕನ್ನಡದ ಜನಮನದ ಬಾಳಿಗಾಗಿಕನ್ನಡದ ಗಿರಿಯೆಲ್ಲ ಕನ್ನಡದ ಸಿರಿಯೆಲ್ಲಕನ್ನಡದ ಮುನ್ನಡೆಯ ಕೇಳಿಗಾಗಿ”
ಎಂದು ಹಾಡುತ್ತಾ ಸೇವೆಗೈದರು. ಸಂಗಪ್ಪನವರು ಹೀಗೆ ಶಿಕ್ಷಕ  ವೃತಿಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡು ವಿದ್ಯಾರ್ಥಿಗಳ ಹೃದಯ ಗೆದ್ದ ಕವಿ ಸಾಮ್ರಾಟರಾಗಿ ಕನ್ನಡ ಸರಸ್ವತಿಯ ಹೆಮ್ಮೆಯ ಪುತ್ರರಾಗಿ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯ ನೀಲಾಗಸದಲ್ಲಿ ಅರುಣೋದಯವಾಗುತ್ತಿದ್ದ, ಹೊಂಬೆಳಕು ಮೂಡುತ್ತಿದ್ದ ಕಾಲವದು. ಹೊಸಗನ್ನಡದ ನೇಸರನು ನವೋದಯದ ಚೆಂಬೆಳಕಿನಲ್ಲಿ ಆಂಗ್ಲಸಾಹಿತ್ಯದ ಮಾಧುರ್ಯತೆಯನ್ನು ಹೀರುತ್ತಾ ಪ್ರಖರವಾಗುತಿದ್ದ ನವ ಮನ್ವಂತರದ ಕಾಲಘಟ್ಟವದು.
ಅತ್ತ ಕಾವ್ಯ ಶಕುಂತಲೆಯನ್ನು ಪಿತೃವಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಿಡುವ ಸಂಕಲ್ಪದ ಹೆಬ್ಬಯಕೆಯನ್ನು ಹೊಂದಿ, ನಾಡಿನಾದ್ಯಂತ ಸಂಚಲನವನ್ನುಂಟು ಮಾಡಿದ  ‘ಕನ್ನಡದ ಕಣ್ವ’ ಎಂದೇ ಪ್ರಖ್ಯಾತರಾದ  ಬಿ. ಎಂ. ಶ್ರೀಕಂಠಯ್ಯ ನವರ ಮೊಟ್ಟ ಮೊದಲ ಹಾಗೂ ಕನ್ನಡ ಸಾಹಿತ್ಯಕ್ಕೊಂದು ಹೊಸ ದಿಕ್ಸೂಚಿ ಕೃತಿಯೆಂದೇ ಹೆಸರಾದ ‘ಇಂಗ್ಲೀಷ ಗೀತೆಗಳು’ ಕವನಸಂಕಲನ ಪ್ರಕಟವಾಗುತ್ತಿದ್ದರೆ, ಇತ್ತ ಗುಳೇದಗುಡ್ಡದಲ್ಲಿ  ಸಂಗಪ್ಪ ಶಿವಪ್ಪ ಬಸುಪಟ್ಟದ ಎಂಬ ಕಾವ್ಯಭೀಷ್ಮ ರ ಜನನ ದುಂದುಭಿ ಮೊಳಗಿತ್ತು. ಹೊಸಗನ್ನಡ ಸಾಹಿತ್ಯ ಚರಿತ್ರೆಯ ನವೋದಯ ,ಪ್ರಗತಿಶೀಲ, ನವ್ಯ , ದಲಿತ ಮತ್ತು ಬಂಡಾಯ ವೆಂಬ ಚಳುವಳಿಗಳ ಹೆದ್ದಾರಿಯಲ್ಲಿ ದ ರಾ ಬೇಂದ್ರೆ, ಶಿವರಾಮ ಕಾರಂತ, ರಂ. ಶ್ರೀ. ಮುಗಳಿ, ಡಿ ಎಸ್ ಕರ್ಕಿ, ಎಸ್ ಎಸ್ ಭೂಸನೂರಮಠ , ಚೆನ್ನವೀರ ಕಣವಿ ಯವರಂತಹ ಸಾಹಿತ್ಯ ದಿಗ್ಗಜರ ಜೊತೆ ಜೊತೆಯಾಗಿ ಸಾಗುತ್ತಲೇ ಬಸುಪಟ್ಟದರವರು ತಾವು ನೆಟ್ಟ ಕಾವ್ಯ ಮರಗಳ ರಸ ಸೌಂದರ್ಯವನ್ನು ನಾಡಿಗೆ ಹಂಚುತ್ತಲೇ ನಾಡದೇವಿಗೆ ಸಮೃದ್ಧ ಪರಂಪರೆಯ ಕೊಡುಗೆಯನ್ನು ನೀಡಿದರು. ಡಾ ಎಸ್ ಎಸ್ ಬಸುಪಟ್ಟದರವರು ಬದುಕಿನ ಕಡಲಿನಲ್ಲಿ ಹೆಬ್ಬಂಡೆಯಂತೆ ತಮಗೆ ಎದುರಾಗುವ ಕಷ್ಟಗಳನ್ನು, ನೋವುಗಳನ್ನು ಕಲ್ಲಾಗಿ ಎದುರಿಸಿ ಅವುಗಳನ್ನೇ ತಮ್ಮ ಕಾವ್ಯದ ತಲ್ಲಣಗಳನ್ನಾಗಿಸಿಕೊಂಡರು. ಇವರಿಗೆ ಕಾವ್ಯವೆಂದರೆ ಕೇವಲ ಭಾವಯಾಣವಲ್ಲ : ಭಾವತೀವ್ರತೆಯ ಔಪಚಾರಿಕ ಬಂಧನವಲ್ಲ; ಬದಲಾಗಿ ತಾವು ಹಾಕಿದ ಬದುಕಿನ ಹೆಜ್ಜೆಗಳನ್ನು, ಜೀವನ ತಮಗೆ  ಕಲಿಸಿದ ಪಾಠಗಳನ್ನು ಪ್ರಯೋಗಿಸುವ ಒಂದು ಯಜ್ಞಶಾಲೆ. ಸಾಹಿತ್ಯವನ್ನು ತಪಸ್ಸಿನಂತೆ ಆಚರಿಸಿ ಅದಕ್ಕಾಗಿ ಹಂಬಲಿಸಿದರು. ಜೀವನದ ಪ್ರೀತಿ, ನೋವು, ಸುಖ, ಸಂತೋಷ, ವಿರಹ, ಉತ್ಸಾಹ ಗಳೆಂಬ ಭಾವನೆಯ ಎಳೆಗಳನ್ನು ಕಲಾತ್ಮಕವಾಗಿ ಕುಸುರಿನ ಚಿತ್ರಗಳನ್ನು ಚಿತ್ತಾರಗಳೊಂದಿಗೆ ಬಿಡಿಸಿ ನೇಯುತ್ತಲೇ ಕಾವ್ಯದ ಬಟ್ಟೆಯನ್ನು  ಅರಿವಿನ ಹೊಳಪಿನಿಂದ ಮೆರಗುಗೊಳಿಸಿದರು. ಡಾ.ಬಸುಪಟ್ಟದರವರ ಕಾವ್ಯ ಯಾತ್ರೆಯು ಅವರ ಬದುಕಿನ ಪ್ರತಿಕ್ಷಣವನ್ನೂ ಆಹ್ಲಾದಿಸುವ ಸಂಭ್ರಮದ ಹೊಳೆ. ಬದುಕಿನ ಕುರಿತು ಈ ಕವ್ಯಾರಾಧಕರ ಜೀವನ ಪ್ರೀತಿ, ಅದಮ್ಯ ಉತ್ಸಾಹ, ಗುಳೇದಗುಡ್ಡ ಹಾಗೂ ಸುತ್ತಮುತ್ತಲಿನ ಬಯಸಲುಸೀಮೆಯ ಪ್ರಕೃತಿ ಸೌಂದರ್ಯ, ಈ ನೆಲದ ಸಾವಯವ ಸಂಸ್ಕøತಿ, ದಾಂಪತ್ಯ ಪ್ರೇಮ, ಭವಿಯಾಗಿದ್ದೂ ಭಕ್ತನಾಗುವ ಅನನ್ಯ ಹಂಬಲ, ಬಾಳ ಯುದ್ಧದಲ್ಲಿ ಯೋಧನಂತೆ ಹೋರಾಡಿ ಗೆಲ್ಲುವ ಹೆಬ್ಬಯಕೆ, ಬದುಕಿನ ಶ್ರದ್ಧೆಯೆಡೆಗಿನ ನಿರಂತರ ತುಡಿತ, ನಿಷ್ಠೆಯಡೆಗಿನ ಸೆಳೆತ, ಪ್ರಾಮಾಣಿಕತೆಯೆಡೆಗಿನ ಭಕ್ತಿ, ತಮ್ಮನ್ನು ತೇದುಕೊಂಡಷ್ಟೂ ಗಂಧದಂತೆ, ಸುಗಂಧವನ್ನು ಸೂಸುವ ಗಟ್ಟಿತನ, ಒರೆಗೆ ಹಚ್ಚಿದಷ್ಟೂ ಹೊಳೆಯುವ ಅವರ ಅಚಲತೆ, ಬಡವರ ದೀನದಲಿತರ ಶೋಷಿತರ ಪರ ಕಾಳಜಿ ಹೀಗೆ ಬದುಕಿನ ಪ್ರತಿ ಘಳಿಗೆಯನ್ನೂ ಆಸ್ವಾದಿಸುತ್ತಲೇ, ಅನಂತವನ್ನು ಶೋಧಿಸುವ ಅನಿಕೇತನದತ್ತ ಇವರ ಕಾವ್ಯ ಪಯಣ ಸಮೃದ್ಧವಾದುದು. ಬದುಕೆಂಬ ಕಡಲಿನ ಹನಿ ಹನಿಯನ್ನೂ ಮೊಗೆದು ಕಾವ್ಯವನ್ನಾಗಿ ಕಟ್ಟುವ ಇವರ ಕಾವ್ಯ ಕೃಷಿ ಅನೂಹ್ಯವಾದದ್ದು.
          ‘ವೀಣಾನಾದ’, ‘ರತ್ನದೀಪ’, ‘ವೈಜಯಂತಿ’, ‘ಸತ್ತವರು ನಾವಲ್ಲ’, ‘ಚೈತ್ರಾಗಮನ’, ‘ನಿಜಗುಣ ಶಿವಯೋಗಿಗಿಳು; ಜೀವನ ಮತ್ತು ಕೃತಿಗಳು’, ಮುಂತಾದ ಕೃತಿರತ್ನಗಳು ಇವರ ದಣಿವರಿಯದ ಲೇಖನಿಯಿಂದ ನದಿಯಾಗಿ ಹರಿದಿವೆ. ಹೊಳೆಯಂತೆ ಸಹೃದಯರ ಬತ್ತಿದೆದೆಗಳಿಗೆ ಜೀವ ಸೆಲೆಯನ್ನು  ಉಣಿಸುತ್ತಾ ಆತ್ಮಾನಂದದ ಹಸಿರ ಉಸಿರನ್ನು ನೀಡಿ ಕಂಗೊಳಿಸಿವೆ.“ನಿಮ್ಮ ಮೇಲೆ ನಾವು ಹತ್ತಿ ನಿಂತುಬಂಗಾರದ ಬಾಚಣಿಕೆ ಹಿಡಿದು ತಲೆಯ ಬಾಚುತ್ತೇವೆಮುಗಿಲಿಗೆ ಕೈ ಹಚ್ಚುತ್ತೇವೆಹೀಗಿದ್ದರೂ,ನಿಮ್ಮನ್ನು ಮೆಟ್ಟಿದ ಈ ಕಾಲತಲೆಯ ಮೇಲೆ ಹೊತ್ತು ಆದಿಶೇಷನ ತೆರದಿ ನಿಂತಿದ್ದೀರಿಅಂತೆಯೇ ನಮ್ಮ ದೊಡ್ಡವರಹಾರಾಟ- ಏರಾಟ”ಚರಿತ್ರೆಯ ಪುಟಗಳಲ್ಲಿ ಶತಶತಮಾನಗಳಿಂಲೂ ಯಜಮಾನ್ಯ ಸಂಸ್ಕøತಿಯ ಶೋಷಣೆ ದೌರ್ಜನ್ಯ ದಬ್ಬಾಳಿಕೆಗಳ ತುಳಿತಕ್ಕೆ ಸಿಕ್ಕು , ತಮ್ಮನ್ನು ತಾವು ದೀಪದಂತೆ ಸುಟ್ಟುಕೊಂಡು ಅನ್ಯರ ಬಾಳಿಗೆ ಬೆಳಕಾಗುವ ಶೋಷಿತರ ಬದುಕಿನ ತ್ಯಾಗದ ಪರಿ ಬಣ್ಣಿಸಲಸದಳವಾದದ್ದು. ಹಾಗಿದ್ದೂ ತಮ್ಮನ್ನು ಪಾದದಡಿಯಲ್ಲಿ ಸಿಲುಕಿ ನೋವನನುಭವಿಸುವ  ಮಣ್ಣ ಕಣಗಳಂತೆ ನಡೆಸಿಕೊಳ್ಳುತ್ತಿರುವ ಸಮಾಜದ ಕುರಿತು ಕವಿಯಲ್ಲಿ ಮೂಡಿದ ಆಕ್ರೋಶದ ಬೆಂಕಿ ಜ್ವಾಲೆಯಾಗಿ ‘ಮಣ್ಣ ಕಣಗಳು’ ಎಂಬ ಕವಿತೆಯ ರೂಪ ತಾಳಿದೆ. ಸಮಾಜದ ಅಂಚಿಗೆ ತಳ್ಳಲ್ಪಟ್ಟವರನ್ನು ಏಣಿಯಂತೆ ಬಳಸಿಕೊಂಡು ಮೇಲೇರಿದ ಮೇಲೆ ತುಳಿಯುವ ದೊಡ್ಡವರ  ಅಮಾನವೀಯ ಮುಖ ಈ ಕವಿತೆಯಲ್ಲಿ ಬಯಲಾಗಿದೆ. ಬಂಡಾಯದ ಈ ಕವಿತೆ ನನ್ನಲ್ಲಿ ದಲಿತ ಕವಿ ಡಾ. ಸಿದ್ಧಲಿಂಗಯ್ಯನವನರ ‘ಸಾವಿರಾರು ನದಿಗಳು’ ಕವಿತೆಯ ಈ ಸಾಲುಗಳನ್ನು ನೆನಪಿಗೆ ತರುತ್ತದೆ. ‘ನಾವು ಸತ್ತವರಲ್ಲ’ ಕವಿತೆಯಲ್ಲಿ“ನಾವು ಸತ್ತವರಲ್ಲ ಸಾರ್ಆದರೆ ಮೊದಲೇ ನಾವು ಬಾಯಿ ಸತ್ತವರು. . . . . . . .. . . . . . .. . . .ಧ್ವನಿ ದೊಡ್ಡದು ಮಾಡಿ ಕಿರುಚಿ ನಮಗೆ ಗೊತ್ತಿಲ್ಲನಾವೇನೂ ಸತ್ತಿಲ್ಲ. .  . . . …. . . …..    . . .ಹಲವಾರು ತೆರದಿ ಬಡಿಬಡಿದು ಹೋದರೂಕಲ್ಲು ಬಂಡೆಯ ತೆರದಿ ನಿಂತವರು ನಾವು ”
ಶೋಷಿತರ ಪರವಾಗಿ ಧ್ವನಿಯನ್ನೆತ್ತುವ ಇವರ ಕವಿತೆ ದಲಿತ ಮತ್ತು ಬಂಡಾಯದ ಚಳುವಳಿಯ ಹಾದಿಯನ್ನು ಹೇಗೆ ತನ್ನ ಹೆದ್ದಾರಿಯನ್ನಾಗಿಸಿಕೊಂಡಿದೆ ಎಂಬುದನ್ನು ಮನದಟ್ಟು ಮಾಡಿಸುತ್ತದೆ. ಬದುಕಿನ ಪ್ರತಿ ಹಂತದಲ್ಲಿಯ ಕೋಟಿ  ಕೋಟಲೆಗಳು ಎದುರಾದರೂ ಕಲ್ಲುಬಂಡೆಯಂತೆ ಎದೆಗೊಟ್ಟು ಎದುರಾಗಿ ನಿಲ್ಲುವ ದಿಟ್ಟತನವನ್ನು, ಆತ್ಮವಿಶ್ವಾಸವನ್ನು ಶೋಷಿತರಲ್ಲಿ ಮೂಡಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಇವರ ಕವಿತೆ ಪ್ರಾಮಾಣಿಕತೆಯಿಂದ ನಿಭಾಯಿಸುತ್ತದೆ. ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಹೋರಾಡುತ್ತದೆ. ಬಡತನವೆಂಬ ಹೆಮ್ಮಾರಿಯ ಕೈಯ್ಯೊಳಗೆ ಸಿಕ್ಕು ನರಳುತ್ತಿರುವ ಮನುಷ್ಯನ ಅಳ್ಳೆದೆಯಲ್ಲಿ ಹೆಮ್ಮಾರಿಯ ವಿರುದ್ಧ ಹೋರಾಡುವ ಶೂರತನವನ್ನು, ಧೈರ್ಯವನ್ನು ತುಂಬುತ್ತದೆ.
ಕವಿ ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿ ದೊಡ್ಡವರಿಗೊಂದು ಸಂದೇಶವನ್ನು ತಮ್ಮ ಕಾವ್ಯದ ಮೂಲಕ ತಲುಪಿಸುತ್ತಾರೆ. ಸಾಯುವ ಹಾಗೂ ಸತ್ತಂತೆ ಬದುಕುವ ನಿರಾಶಾವಾದವನ್ನು ಬದಿಗೊತ್ತಿ ಚೈತನ್ಯದ ಜೀವಂತಿಕೆಯನ್ನು ಚಿಗುರಿಸಿ ಬದುಕಿಗೆ ಉಲ್ಲಾಸವನ್ನು ತುಂಬುವ ಇವರ ಕವಿತೆ ಅನನ್ಯವಾಗಿದೆ.
“ತುಂಬು ಹೊಳೆ ತಾ ಹರಿದು ದೂರ ದೂರದಲಿರುವಎರಡು ದಡಗಳನಿಲ್ಲಿ ಕೂಡಿಸುತಲಿಹುದು;ಎರಡೆಲ್ಲ ಒಂದಾಗಿ ನಿಂದಿರಲಿ ಬಾಳಿನಲಿಎಂಬ  ನುಡಿಯನು ಇಳೆಗೆ ಊಡಿಸುತಲಿಹುದು”                                                 (ಹೊಳೆ- ಚೈತ್ರಾಗಮನ)ನಿಸರ್ಗ ಕವಿಯನ್ನು ಜೀವನದ ಚೈತನ್ಯವಾಗಿ ಕಾಡಿದೆ. ಚೈತ್ರಾಗಮನ ಕವನಸಂಕಲನದಲ್ಲಿಯ  ‘ಹೊಳೆ’ ಎಂಬ ಕವಿತೆಯಾಗಿ ಹರಿದ ಬಾಳು ಸುಖ ದುಃಖಗಳೆಂಬ ಎರಡು ಕವಲು ದಡಗಳನ್ನು ಒಂದು ಮಾಡಿ ಸಮರಸವನ್ನು ಮೂಡಿಸಬೇಕೆಂಬ ಹಂಬಲವನ್ನಿಟ್ಟುಕೊಂಡಿದೆ. ನಿಸರ್ಗದೆಡೆಗಿನ ಕುತೂಹಲದಲ್ಲಿ ಕುವೆಂಪು, ಬೇಂದ್ರೆಯವರಂತಹ ಪ್ರಕೃತಿಯ ಆರಾಧಕರನ್ನು ಸ್ಮರಿಸುವಂತೆ ಮಾಡುವ ಹೆಮ್ಮೆಯ ಕವಿ ಚಿಂತಕ ಸಂಶೋಧಕ ಆಧ್ಯಾತ್ಮಿಕ ಜೀವಿಗಳಾದ ಡಾ. ಎಸ್ ಎಸ್ ಬಸುಪಟ್ಟದರವರ”ನಿನ್ನ ಕರುಣೆಯ ಕಿರಣ ಕಣ ಕಣದಿ ತೋರಿಬರೆನಾನೇಕೆ ಭಯಪಡಲಿ ಓ ಎನ್ನ ದೊರೆಯೆನಿನ್ನ ಕರುಣೆಯ ಕಿರಣ ಸ್ಪರ್ಶ ಮಾತ್ರದಿ ಇಲ್ಲಿಪ್ರತಿವಸ್ತು ತಾವೆಲ ್ಲಚೈತನ್ಯದಾ ಸಿರಿಯೆ”
 ಸಾಲುಗಳು ಕುವೆಂಪು ರವರ ಈ ಕೆಳಗಿನ ಪದ್ಯವನ್ನು ನೆನಪಿಸುವಂತೆ ಮಾಡುತ್ತವೆ.”ಆನಂದಮಯ ಈ ಜಗಹೃದಯಭಯ ಏತಕೆ ಮಾಣೊಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೊ”
ಬೇಂದ್ರೆಯವರ ಕೆಳಗಿನ ಸಾಲುಗಳು ಬಸುಪಟ್ಟದರವರ ಪ್ರಕೃತಿ ಕಾವ್ಯಕ್ಕೆ ಪ್ರೇರಣೆಯನ್ನೊದಗಿಸಿರಬೇಕು- 
“ಮೂಡಲ ಮನೆಯ ಮುತ್ತಿನ ನೀರಿನಎರಕವ ಹೊಯ್ದನುಣ್ಣನೆ ಎರಕವ ಹೊಯ್ದಬಾಗಿಲು ತೆರೆದು ಬೆಳಕೂ ಹರಿದು ಜಗವೆಲ್ಲ ತೊಯ್ದಗಿಡ ಗಂಟೆಗಳ ಕೊರಳೊಳಗಿಂದಹಕ್ಕಿಗಳಾ ಹಾಡು ಹೊರಟಿತು ಹಕ್ಕಿಗಳಾ ಹಾಡುಗಂಧರ್ವರ ಸೀಮೆಯಾಯಿತುಕಾಡಿನಾ ನಾಡು ಕ್ಷಣದೊಳು ಕಾಡಿನಾ ನಾಡು”
ಹಿರಿಯ ತಲೆಮಾರಿನ ನವೋದಯದ ಆದರ್ಶಗಳನ್ನು ಕಾವ್ಯದಲ್ಲಿ ತಂದು ಮಾರ್ಗದರ್ಶಿಸಿದ ಕವಿ ಬಸುಪಟ್ಟದರವರು ಜೀವ ಜಗತ್ತನ್ನು ಅನವರತ ಬೆಳಗುತ್ತಿರುವ, ಜೀವಜಂತುಗಳಿಗೆಲ್ಲಾ ಚೈತನ್ಯದ ಸವಿಯನ್ನು ಉಣಬಡಿಸುತ್ತಾ ನೆತ್ತಿ ಕಾಯುತ್ತಿರುವಂತೆಯೆ ತನ್ನ ಜ್ಞಾನದ ಬೆಳಕಿನ ಕಿರಣಗಳ ಮೂಲಕ ಜಗತ್ತಿನ ಅಂಧಕಾರವನ್ನು ದೂರಮಾಡುತ್ತಿರುವ  ಕಿರಣಗಳ ದಾರ್ಶನಿಕ ನೇಸರನನ್ನು ಕುರಿತು ಆಲಾಪಿಸಿದ್ದಾರೆ.
ಕುವೆಂಪು ಬೇಂದ್ರೆಯವರಲ್ಲಿ ಗಂಧರ್ವ ಸೀಮೆಯ ಮಾಂತ್ರಿಕನಾಗಿರುವ ನೇಸರ ಬಸುಪಟ್ಟದರವರಲ್ಲಿ ಚೈತನ್ಯದ ಸಿರಿಯಾಗಿದ್ದಾನೆ. ಜಗದ ಕೀಲಿ ಕೈ ಇರುವುದು ನೇಸರನಲ್ಲಿ ಎಂಬ ಸತ್ಯದ ದರ್ಶನವನ್ನು ಅನಾವರಣಗೊಳಿಸುತ್ತಾರೆ, ನಿತ್ಯ ಸೌಂದರ್ಯದ ದೇವತೆಯಾಗಿ ಮಾನವ ಕುಲವನ್ನು ಸಹಿಸಿಕೊಂಡು ಸಲಹುತ್ತಿರುವ ಪ್ರಕೃತಿಯನ್ನು ರವಿಯ ರೂಪದಲ್ಲಿ ಆರಾಧಿಸುತ್ತಾರೆ. ಕುವೆಂಪುರವರು ‘ತೆರೆದಿದೆ ಮನೆ ಓ ಬಾ ಅತಿಥಿ’ ಎಂದು ಬೆಳಕಿನ ಅಧಿಪತಿಯನ್ನು ಬರಮಾಡಿಕೊಂಡರೆ ಬಸುಪಟ್ಟದರವರು ‘ಕರುಣೆ ದೋರು ಓ ಎನ್ನ ದೊರೆಯೆ’ ಎಂದು ಸಂಭ್ರಮಿಸುತ್ತಾರೆ. ಪ್ರಕೃತಿ ಕವಿಯನ್ನು ಚೈತನ್ಯದ ಚಿಲುಮೆಯಾಗುವಂತೆ ಹಾರೈಸುತ್ತದೆ.

“ಆಗು ಹೋಗು ಸೌಖ್ಯ ದುಃಖ ಏಳು ಬೀಳು ಸೋಲು ಗೆಲುವಹೂವ ಮಾಡಿ ಸೊಗದ ಜೊತೆಗೆ ಬಾಳಹಾಸಿನಲ್ಲಿ ಚೆಲುವಹೊಕ್ಕ ಹಾಕಿ ನೇಯ್ವನಿವನು”
 ಎಂದು ಬಸುಪಟ್ಟದರವರು ದೇವನೊಬ್ಬ ಈ ಸುಂದರ ಬಾಳಿನ ಕಲಾತ್ಮಕ ನೇಕಾರ ಎಂಬುದನ್ನು ಅರ್ಥಪೂರ್ಣವಾಗಿ ಬಣ್ಣಿಸುತ್ತಾರೆ.  ನೇಕಾರ ಮನೆತನದಲ್ಲಿ ಹುಟ್ಟಿ ಸ್ವತಃ ಕಾವ್ಯಬಟ್ಟೆ ನೇಯುವ ಕೌಶಲ್ಯ ಕರಗತ ಮಾಡಿಕೊಂಡಿದ್ದ ಇವರಿಗೆ ದೇವನೂ ಕೂಡ ಬಲುಚತುರ ನೇಕಾರನಾಗಿ ಕಂಡಿದ್ದರಲ್ಲಿ ಆಶ್ಚರ್ಯ ಕಾಣದು. ಬಣ್ಣ ಬಣ್ಣದ ನೂಲಿನ ಎಳೆಗಳಿರುವಂತೆ ಬದುಕಿನ ತೊಳಲಾಟಗಳನ್ನು ಸುಂದರ ಹಾಸನ್ನಾಗಿ ಮಾಡಿಕೊಂಡು ಚೆಲುವಿನ ಚಿತ್ತಾರಗಳ ಜೀವನದ ಬಟ್ಟೆಯನ್ನು ನೇಯುವ ಕರಕುಶಲಿಗನಾದ ದೇವನೇ ಈ ಜಗದೊಡೆಯ ಎಂಬ ದಾರ್ಶನಿಕತೆ ಕವಿಯದು.  ಬದುಕನ್ನು ಅದು ಬಂದಂತೆಯೇ ಸ್ವೀಕರಿಸಿ ಆತ್ಮಾನಂದ ಪಡೆಯಬೇಕೆಂಬ ಜೀವನೋತ್ಸಾಹ ಇಲ್ಲಿ ಮಾದರಿಯಾಗಿದೆ. ಮಧುರ ಚೆನ್ನರ ಪರಜೀವನ ತತ್ವ, ಕುವೆಂಪುರವರ ಆಧ್ಯಾತ್ಮಿಕತೆಯ ದರ್ಶನ, ಬೇಂದೆಯವರ ಜೀವನ ತತ್ವಜ್ಞಾನದ ಒಲವು, ಚೆನ್ನವೀರ ಕಣವಿಯವರ ಕಾವ್ಯದ ಚೆಂಬೆಳಕು, ಕರ್ಕಿಯವರ ನಾಡಪ್ರೆಮ, ರಂ ಶ್ರೀ ಮುಗಳಿಯವರ ಸಂಶೋಧನಾ ಪ್ರೀತಿ,ವಿ. ಕೃ.ಗೋಕಾಕರು, ಗೋಪಾಲ ಕೃಷ್ಣ ಅಡಿಗರಂತಹ ನವ್ಯರ ಮಣ್ಣಿನ ವಾಸನೆಯ ಸತ್ವಶೀಲತೆ, ಬಂಡಾಯ ಸಾಹಿತ್ಯದ ಕೆಚ್ಚೆದೆಯ ಹೋರಾಟದ ಸಕಲ ಗುಣಗಳೂ ಮುಪ್ಪರಿಗೊಂಡು, ಎರಕ ಹೊಯ್ದ ಸುಗುಣಶೀಲದ ಕಲಾತ್ಮಕ ಮೂರ್ತಿಯಾಗಿದ್ದಾರೆ ಬಸುಪಟ್ಟದರವರು.“ಮನದ ಕಲ್ಮಶವೆಲ್ಲ ತೊಳೆದು ತಿಳಿಗೊಳವಾಯ್ತುಅಮರ ಗಂಗ ನದಿಯು ನೀನುಚಪಲ ಚಂಚಲ ನಿಂತು ಚಿತ್ತ ಸುಸ್ಥಿರವಾಯ್ತುಅನುಪಮ ಹಿಮಾಚಲ ನೀನು” ಎಂದು ಹಾಡುವ ಕವಿಯ ಪ್ರೀತಿಯು, ಮನಸೆಂಬ ಶತಮುಖ ಅವತಾರದ ಕಲ್ಮಶಗಳನ್ನೆಲ್ಲ ತೊಳೆಯುವ ಅಮರ ಗಂಗೆಯಾಗಿ , ಮನಸೆಂಬ ಮಾಯೆಯ ಹುಚ್ಚು ಕುದುರೆಯ ಓಟವನ್ನು ತಡೆದು ನಿಲ್ಲಿಸುವ ಅಚಲ ಹಿಮಾಚಲವಾಗಿ ವಿಲಾಸಗೈದಿದೆ.
ಕೆ ಎಸ್ ನರಸಿಂಹಸ್ವಾಮಿಯವರ ಪ್ರೀತಿಯ ಈ ಸಾಲುಗಳನ್ನು ನೋಡಿ
“ಸೋಲು ಗೆಲುವುಗಳಲ್ಲಿ ಮುಂಬರಿಯುವೆನು ನಾನುನಾನು ಅಂಜುವುದಿಲ್ಲ ಬಿರುಗಾಳಿಗೆನನ್ನ ನಂಬಿಕೆಯಲ್ಲಿ ಅಡಿಯನಿಡುವೆನು ನಾನುನಾನೆ ನಕ್ಷತ್ರ ನೀಲಾಕಾಶ ನೀನೆ”ಈ ಕವಿತೆಯಲ್ಲಿ ನೀಲಾಕಾಶ ವಾಗಿರುವ ಒಲವು ಬಸುಪಟ್ಟದರವರ ಮೇಲಿನ ಸಾಲುಗಳಲ್ಲಿ ಗಂಗೆಯಾಗಿ ಹರಡಿದೆ; ಹಿಮಾಚಲವಾಗಿ ನಿಂತಿದೆ. ಬಸುಪಟ್ಟದರವರು ಪ್ರಕ್ರೃತಿಯ ಆರಾಧಕರಾಗಿರುವಂತೆ ಒಲವಿನ ಪೂಜಾರಿಗಳೂ ಆಗಿದ್ದರೆಂಬುದಕ್ಕೆ ಅವರ ಕವಿತೆಗಳು ನಿದರ್ಶನವಾಗಿವೆ. ಮನಸೆಂಬ ಮಾಯೆಗೊಂದು ಸುಭದ್ರ ಕಡಿವಾಣ ಪ್ರೀತಿಯಲ್ಲಿದೆ ಎಂಬ ನಿಲುವು ಕವಿಯದು. ಸಾಮಾನ್ಯವಾಗಿ ಕವಿಗಳಲ್ಲಿ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುವ ಒಲವು ಬಸುಪಟ್ಟದರವರಲ್ಲಿ ಸುಸ್ಥಿರ ಹಾಗೂ ದೃಢ ಹಿಮಾಚಲಕ್ಕೆ ಕಾರಣವಾಗಿದೆ. ಪ್ರಣಯದ ಮೂಲಕ ಅನಂತತೆಯ ಔನ್ನತ್ಯಕ್ಕೇರುವ ಹೆಬ್ಬಯಕೆ ಬಸುಪಟ್ಟದರವರದು. ಪರಿಶುಧ್ಧ ಪ್ರೇಮದ ತುಡಿತ ಕವಿಯನ್ನು ಗಂಗೆಯಲ್ಲಿ ಮಿಂದೇಳುವಂತೆ ಮಾಡಿದೆ. ಅಗಣಿತ ಅನಂತ ಚೈತನ್ಯದ ಸೂತ್ರಧಾರಿ ಈ ಒಲವು ಎಂಬುದಕ್ಕೆ ಕವಿಯ ಸಾಲುಗಳನ್ನು ಗಮನಿಸಿ“ನೀನೆರಡು ನುಡಿ ನುಡಿಯೆ ಅಕ್ಕರೆಯ ಸಕ್ಕರೆಯಹಾಲು ಜೇನಿನ ಹೊಳೆಯೆ ಹರಿದು ಬಂತುಕಣ್ಣು ಮಿಂಚದು ತಾನು ಸಾಂದ್ರ ಚಂದ್ರಿಕೆಯಾಗಿಹೃದಯದಂಗಳವನ್ನು ಬೆಳಗಿತಿಂತು” ಜೀವನದ ಪರಮ ಉತ್ಸಾಹ ಅಡಗಿರುವುದು ಜೇನಿನ ಹೊಳೆಯಂತೆ ಹರಿಯುವ ಸುಮಧುರ ಪ್ರೀತಿಯಲ್ಲಿ. ಅದು ಸಾಂದ್ರ ಚಂದ್ರಿಕೆಯಾಗಿ ಹೃದಯದಂಗಳವನ್ನು ಬೆಳಗಿದರಂತೂ ತಣಿದು ಭಾವಪರವಶರಾಗುವ ಸುಖವಂತೂ ವರ್ಣಿಸಲಸದಳವಾದದ್ದು. ಒಲವಿನಾಕೆಯ ಎರಡು ನುಡಿ ಅಕ್ಕರೆಯ ಹೊಳೆಯನ್ನು ಹರಿಸುವ ಇವರ ಕಾವ್ಯದ ಪರಿಗೆ ಮೂಕವಿಸ್ಮಿತರಾಗದವರೆ ಇಲ್ಲ. ಒಲವು ಇವರ ಹೃದಯದಲ್ಲಿ  ಹಾಲು ಜೇನಿನ ಹೊಳೆಯಾಗಿ ಹರಿದು ಮಾಧುರ್ಯವನ್ನು ತಂದಿದೆ. ಹೃದಯವನ್ನು ಬೆಳಗುವ ಏಕೈಕ ಶಕ್ತಿ ಅದು ಒಲವು . ಒಲವಿನಿಂದಲೆ ಜೀವನ ಸಾಕ್ಷಾತ್ಕಾರ ವೆಂಬ ಗಂತವ್ಯದ ನೆಲೆ ಬಸುಪಟ್ಟದರವರ ಕಾವ್ಯದ ಸೆಲೆ. ಇವರು ಹಾಡಿದ ಒಲವಿನಾಲಾಪವನ್ನು ಕೇಳಿದೊಡನೆ ನನ್ನ ಮನದ ಮೂಲೆಯಿಂದ ತೂರಿ ಬಂದ ನನ್ನದೆ ಕವಿತೆಯ ಸಾಲುಗಳನ್ನು ದನಿಗೂಡಿಸುವುದಾದರೆ-“ಚಂದ್ರನಿಲ್ಲದ ಹುಣ್ಣಿಮೆಯುಂಟೆಬೆಳಗು ಬತ್ತಿದ ಹೃದಯತಣಿಸು ಬಾ ನನ್ನೆದೆಯನಿನ್ನ ಹೆಜ್ಜೆಗಳ ನಿನಾದದಿಂದ”          ಡಾ. ಶೀಲಾಕಾಂತ ಪತ್ತಾರ ರವರು ಬಸುಪಟ್ಟದರವರ ಸಾತ್ವಿಕ ವ್ಯಕ್ತಿತ್ವ, ದಾರ್ಶನಿಕತೆಯ ಸಾಹಿತ್ಯ, ಸಮಾಜದ ಅಲಕ್ಷಿತ ವರ್ಗದವರೆಡೆಗಿನ ಕಾಳಜಿ, ವಿನಯ ತುಂಬಿದ ಪಾಂಡಿತ್ಯ ಕುರಿತು ‘ನಮ್ಮೂರ ಟ್ಯಾಗೋರ್’ ಎಂದು ಬಣ್ಣಿಸಿರುವುದು ಔಚಿತ್ಯಪೂರ್ಣವಾಗಿದೆ.“ಮಾತು ನಿನ್ನದು ಮಲ್ಲಿಗೆಅಷ್ಟು ಶುಭ್ರ; ಸುವಾಸಿತಹಸಿರು ಗದ್ದೆಯ ಮಧ್ಯೆಶ್ವೇತ ಕುಸುಮವು ನೀನುಮಾತಿನಿಂದ ಇರಿದವನು ನೀನಲ್ಲಹರಿದವನೂ ನೀನಲ್ಲಅಧಿಕಾರದ ಲಗಾಮು ಹಿಡಿದವನಲ್ಲನಿನ್ನಿಂದ ಬೆಲೆ ಆ ಕುರ್ಚಿಗೆಅದರಿಂದ ನಿನಗಲ್ಲನಿನ್ನ ಗುರುತ್ವ ಶಕ್ತಿಯೊಂದು ನನಗೆ ಒಗಟು”ಎಂದು ವಿದ್ವಾಂಸರೂ, ಸಂಶೋಧಕರೂ, ಇತಿಹಾಸ ತಜ್ಞರೂ ಆದ ಡಾ. ಶೀಲಾಕಾಂತ ಪತ್ತಾರರವರು ಬಸುಪಟ್ಟದರವರ ವ್ಯಕ್ತಿತ್ವವನ್ನು ಕವಿತೆಯಾಗಿ ಹಾಡಿ ಹೆಮ್ಮೆ ಮೂಡಿಸಿದ್ದಾರೆ. ಡಾ.ಬಸುಪಟ್ಟದರವರು ಅಧ್ಯಯನ, ಅಧ್ಯಾಪನ, ಅಧ್ಯಾಪಕವೃತ್ತಿಗಳ ಬಿಡುವಿಲ್ಲದ ಪರಿಶ್ರಮದ ತಪಸ್ಸಿನ ಮಧ್ಯೆಯೂ ಬದುಕನ್ನು ಹಣ್ಣಿನಂತೆ ಸವಿದವರು; ಜೇನಿನಂತೆ ಹೀರಿದವರು; ನೀಲಾಂಬರದಂತೆ ಪ್ರೀತಿಸಿದವರು.
ನಮ್ಮ ನಾಡಿನ ಮತ್ತೊಬ್ಬ ವಿದ್ವಾಂಸರಾದ  ಹಾ. ಮಾ . ನಾಯಕರು ಕವಿ ಬಸುಪಟ್ಟದರವರನ್ನು ಕುರಿತು “ಹತ್ತಿರದಿಂದ ಬಲ್ಲವರಿಗೆ ಸಹೃದಯಮಿತ್ರ, ಕಾವ್ಯ ಪ್ರೇಮಿಗಳಿಗೆ ನಿಜವಾದ ಕವಿ, ನಿಷ್ಠಾವಂತ ಅಧ್ಯಾಪಕ. ತಾಳ್ಮೆ ಹಾಗೂ ಮಾಗುವಿಕೆ ಬಸುಪಟ್ಟದ ರವರವರ ಬದುಕಿನ ಸೂತ್ರ.” ಎಂದು ಅಭಿಮಾನದ ಹಾರೈಕೆಯನ್ನಿತ್ತಿದ್ದಾರೆ,
ಹತ್ತು ದಿಕ್ಕಿಗೂ ಹಾದಿ ಹರಡಿಹುದು ಸುತ್ತುಹಾದಿಯಲಿ  ಬಹುಮುಳ್ಳಹಾದಿಯಲಿ ಬಹ ಈ ಮುಳ್ಳುಗಳ ತಳ್ಳುಸಾಗು ಮುಂದಕೆ ಸಾಗುಎಂದು ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ಬೆನ್ನು ತೋರಿ ಹೇಡಿಯಾಗುವುದಕ್ಕಿಂತ ಮುಳ್ಳುಗಳಂತೆ ಬದುಕಿನ ದಾರಿಯಲ್ಲಿ ಹರಡಿರುವ ತಡೆಗಳನ್ನು ಸವಾಲುಗಳೆಂದು ಸ್ವೀಕರಿಸಿ ಮುನ್ನಡೆಯುವುದೇ ಬದುಕಿನ ಪರಮೋದ್ಧೇಶವಾಗಬೇಕು. ‘ಮುಳ್ಳ ಮಂಚವನ್ನೇರಿ ನೀನಾಗು ಭೀಷ್ಮ’ ಎಂಬ ಅವರದೆ ಕವಿತೆಯ ಸಾಲು ಅವರ ವ್ಯಕ್ತಿತ್ವಕ್ಕೊಂದು  ಮೆರಗನ್ನು ನೀಡುತ್ತದೆ. 1960 ರ ದಶಕದಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿಯೇ ಪಿ.ಎಚ್.ಡಿ ಪಡೆದ ಏಕೈಕ ವಿದ್ವಾಂಸರೆಂಬ ಹೆಗ್ಗಳಿಕೆಯೂ ಡಾ. ಎಸ್ ಎಸ್ ಬಸುಪಟ್ಟದರವರದು. ಹೀಗೆ ಆಗಿನ ಗುಳೇದಗುಡ್ಡ ವೆಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಅವರು ಅಖಂಡ ಕರ್ನಾಟಕಕ್ಕೆ ತಮ್ಮ ಸಾಹಿತ್ಯದ ಸವಿಯನ್ನು ಉಣಬಡಿಸಿ ನೀಲಾಗಸದಂತೆ ವಿಸ್ತರಿಸಿಕೊಂಡ ಕೀರ್ತಿಪುರುಷರಾಗಿದ್ದಾರೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...