Total Pageviews

Saturday 26 May 2018

ಕುಲದ ನೆಲೆಯನರಸುತ್ತಾ....

ಕುಲದ ನೆಲೆಯನರಸುತ್ತಾ....
                          ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ    ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವಿಶ್ವ ಮಟ್ಟದ ಕವಿ ದಾರ್ಶನಿಕರು  ಜಗತ್ತಿನ ಯಾವುದೇ ಸಾಹಿತ್ಯ ಲೋಕದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ"  ಎಂಬ ಹೇಳಿಕೆಗೆ ಕುಲನಿರಸನ ವನ್ನು ತಮ್ಮ ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಪ್ರತಿಪಾದಿಸಿದ  ಕನಕದಾಸರನ್ನೂ ಸೇರಿಸಬಹುದಾಗಿದೆ.  ಕನಕದಾಸರು ೧೬ ನೇ ಶತಮಾನದ ಜಗತ್ತು ಕಂಡ ವಿಶ್ವಶ್ರೇಷ್ಠ   ಹರಿದಾಸ ಪಂಥದ  ವೈಚಾರಿಕತೆಯ ಹರಿಕಾರರು.ಇವರು ಸಮಾಜಕ್ಕೆ ಅಂಟಿಕೊಂಡಿರುವ  ಜಾತಿ ಮತ ಕುಲ ಪಂಗಡ ತಾರತಮ್ಯದ ಪಿಡುಗುಗಳನ್ನು  ಬೇರು ಸಮೇತ ಕಿತ್ತು ಹಾಕಲು ಪ್ರಯತ್ನಿಸಿದರು. ಆದಿ ಕವಿ ಪಂಪ ಹೇಳಿದ "ಮನುಷ್ಯ ಜಾತಿ ತಾನೊಂದೆ ವಲಂ"  ಎಂಬ ಉಕ್ತಿಯಂತೆ ,ಕನಕದಾಸರು ಭಕ್ತಿ ಧ್ಯಾನದ ತಂಬೆಲರಿನ ಮೂಲಕ  ಜನರನ್ನು ನೀತಿ ಮಾರ್ಗದತ್ತ ನಡೆಸುವ ದಾರ್ಶನಿಕರಾಗಿದ್ದರು.


              ೧೨ ನೇ ಶತಮಾನದಲ್ಲಿ ಜಾತಿ,ಮತ, ವರ್ಗ ವರ್ಣ ತಾರತಮ್ಯಗಳ ಅಸಮಾನತೆಯನ್ನು ತೊಡೆದುಹಾಕಲು 'ಕಲ್ಯಾಣ ಕ್ರಾಂತಿ 'ಯ ಮೂಲಕ ಹೆದ್ದಾರಿಯನ್ನು ನಿರ್ಮಿಸಿದ ಬಸವಣ್ಣನವರ ಹೋರಾಟವನ್ನು ಮುಂದುವರೆಸುವ ಪ್ರತಿನಿಧಿಯಾಗಿ ಕನಕದಾಸರು ನಮಗೆ ಕಾಣುತ್ತಾರೆ. "ಇವನಾರವ ಇವನಾರವ ಎಂದು ಕೇಳುವ  ಕೂಪಮಂಡೂಕದ ಅಜ್ಞಾನಕ್ಕಿಂತ,  ವಸುದೈವ ಕುಟುಂಬದೊಳಗೆ ಒಂದಾಗಿ ಸರ್ವರಿಗೂ ಸಮಬಾಳು ಸಮಭಾವ, ಭ್ರಾತೃತ್ವ ದ ಸಮರಸದ ಬದುಕು ನಮ್ಮದಾಗಬೇಕು ಎಂಬುದು  ಕನಕದಾಸರ ಪರಮೋದ್ಧೇಶವಾಗಿತ್ತು.ಅವರ ಕೀರ್ತನೆಗಳಲ್ಲಿ ಕುಲನಿರಸನಕ್ಕೆ ಸಂಬಂಧಿಸಿದಂತೆ 'ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ','ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ',ಹೊಲೆಯರು ಹೊರಗಿಹನೆ,ಊರೊಳಗಿಲ್ಲವೆ',ಮುಂತಾದ ರಚನೆಗಳು ಅನನ್ಯವಾಗಿವೆ. 'ಕುಲ ಕುಲ ಕುಲವೆನ್ನುತಿಹರು',ಕುಲ ಕುಲವೆಂದು ಹೊಡೆದಾಡದಿರಿ','ಯಾತರವನೆಂದುಸುರಲಿ','ದಾಸ ದಾಸರ ಮನೆಯ ದಾಸಿಯರ ಮಗ ನಾನು' ಎಂಬ ಮುಂತಾದ ರಚನೆಗಳು ಅವರ ಕ್ರಾಂತದರ್ಶಿತ್ವಕ್ಕೆ ಸಾಕ್ಷಿಯಾಗಿವೆ.

                         ಕನಕದಾಸರ ಸರ್ವ ಸಮಾನತೆ, ಸರ್ವ ಸಮಭಾವದ ಸಮಾಜ ನಿರ್ಮಾಣದ  ದೃಷ್ಟಿ ವಿಶಾಲವೂ ವಿಶಿಷ್ಟವೂ ಆಗಿದೆ.ಜಾತಿ ವರ್ಗ ವರ್ಣ ಮತ ಕುಲ ಪಂಗಡಗಳ ತಾರತಮ್ಯದ ಬೇಗೆಯಲ್ಲಿ ಸ್ವತಃ ಬೆಂದ ಕನಕದಾಸರು   ತಮ್ಮ ಕೀರ್ತನೆಗಳ ಮೂಲಕ ಜಾತಿ ಮತ  ಕುಲರಹಿತವಾದ ಸಮಾನತೆಯ ಸಮಾಜವನ್ನು  ನಿರ್ಮಿಸುವ ಪಣ ತೊಟ್ಟಿದ್ದರು.            ಆಂಗ್ಲ ಚಿಂತಕರೊಬ್ಬರು "ಕವಿಯೊಬ್ಬ ಹುಟ್ಟುವುದು ವಿರಳ,ದಾರ್ಶನಿಕನೊಬ್ಬ ಜನಿಸುವುದು ಇನ್ನೂ ವಿರಳ; ಕವಿ  ಹಾಗೂ ದಾರ್ಶನಿಕನೊಬ್ಬ ಉದಯಿಸುವುದು ವಿರಳಾತಿವಿರಳ." ಎಂದು ಹೇಳಿದ ಹಾಗೆ ಕನಕದಾಸರು ಅಂತಹ  ವಿರಳಾತಿ ವಿರಳ ಕವಿಯೂ ದಾರ್ಶನಿಕರು ಆಗಿದ್ದರು ಎಂಬುದಕ್ಕೆ ಅವರ 'ಮೋಹನ ತರಂಗಿಣಿ ','ನಳಚರಿತೆ','ರಾಮಧಾನ್ಯ ಚರಿತೆ', 'ಹರಿಭಕ್ತಿಸಾರ' ಎಂಬ ಕಾವ್ಯ ರತ್ನಗಳು   ಹಾಗೂ ಅವರ ಕೀರ್ತನೆಗಳೇ ನಿದರ್ಶನಗಳಾಗಿವೆ.
    ಕನಕದಾಸರು ಸುಮಾರು ೩೧೨ ಕ್ಕೂ ಹೆಚ್ಚು ಕೀರ್ತನೆಗಳನ್ನು  ರಚಿಸಿದ್ದಾರೆ.ಇವುಗಳಲ್ಲಿ ಹರಿಸ್ತುತಿ,ಸಮಾಜವಿಡಂಬನೆ,ಸಾಮಾಜಿಕ ನೀತಿ ಹಾಗೂ ಉಪದೇಶ,ವೈಚಾರಿಕತೆ ಗೆ ಸಂಬಂಧಿಸಿದ ಹಲವಾರು ಕೀರ್ತನೆಗಳಿವೆ.
'ಕುಲ ಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ
ಕೆಸರೊಳು ತಾವರೆ ಪುಟ್ಟಲು ಅದ ತಂದು 
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣಲಿಲ್ಲವೆ'
              ಎಂದು ಹಾಲು ಮತ್ತು ತಾವರೆಗಳಂತೆ ಮನುಷ್ಯನಲ್ಲಿರುವ  ಗುಣಮೌಲ್ಯಗಳೆ ಮುಖ್ಯ ಹೊರತು , ಆತನ  ಹುಟ್ಟಿನ  ಜಾತಿ ಮತ ಕುಲಗಳು ಮುಖ್ಯವಲ್ಲ ಎಂದು ಸಾರುತ್ತಾರೆ. ಇವರ ಮತ್ತೊಂದು ಕೀರ್ತನೆಯಾದ "ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ,"ಯಲ್ಲಿಯೂ ವ್ಯಕ್ತಿಯ ಜಾತಿಯನ್ನು ತಿರಸ್ಕರಿಸಿ ಸಜ್ಜನ ಸದ್ಗುಣಶೀಲ ಮೌಲ್ಯಗಳಿಗೆ ಪ್ರಾಧಾನ್ಯತೆಯನ್ನು ನೀಡುತ್ತಾರೆ.ಬೇಲೂರು ಕೇಶವದಾಸರು ' ಜಾತಿ ಜಾತಿಗಳಲ್ಲಿ ತಿರಸ್ಕೃತರಾದವರಿಗೆ ಪುರಸ್ಕಾರ ಕೊಟ್ಟವರು ಕನಕದಾಸರು' ಎನ್ನತ್ತಾರೆ.
ಕುಲ ಕುಲವೆನ್ನುತಿಹರು ...ಕೀರ್ತನೆಯ ಮೂರನೇಯ  ಚರಣದಲ್ಲಿ
"ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವನು
ಆತನೊಲಿದ ಮೇಲೆ ಯಾತರ ಕುಲವಯ್ಯ" 
ಎಂದು
ಬಯಸಿದುದೆಲ್ಲವನ್ನೂ ಸವಿಯುವ  ನಮ್ಮ ಜೀವ, ಆತ್ಮ ತತ್ವೇಂದ್ರಿಯಗಳಿಗಿಲ್ಲದ ಕುಲ ದೇಹಕೇತಕೆ ಎನ್ನುತ್ತಾ  ಕೇಶವನೇ ಅಂತರಾತ್ಮದ ಅಧಿಪತಿಯಾದ ಮೇಲೆ  ಕುಲವೇಕೆ ಬೇಕು? ಎಂದು ಕುಲ ಸಂವಾದವನ್ನು ಖಂಡಿಸುತ್ತಾರೆ.ಕನಕದಾಸರು ಕುಲವೆಂಬ ತಮಂಧದ ಕೇಡನ್ನು   ಭಕ್ತಿಯೆಂಬ ಜ್ಯೋತಿಯ ಬೆಳಕಿನ ಬಲದಿಂದ  ಮಾಯವಾಗಿಸುತ್ತಾರೆ.

              ಕನಕದಾಸರ ನಂತರದವನಾದ  ಸರ್ವಜ್ಞನೂ ಕೂಡ
"ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ
ಜಾತಿ ವಿಜಾತಿ ಎನಬೇಡ ದೇವನೊ
ಲಿದಾತನೆ ಜಾತ ಸರ್ವಜ್ಞ"
           ಎಂದು ಕನಕದಾಸರ ನಿಲುವನ್ನೇ ಪ್ರತಿಪಾದಿಸುತ್ತಾನೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ  ಕುಲಶೂನ್ಯತೆಯ ಸಿದ್ಧಾಂತವನ್ನೇ ಮಂಡಿಸುತ್ತಾರೆ.ಇವರು ಆಧ್ಯಾತ್ಮದ ಬೆಳದಿಂಗಳ ಮೂಲಕ ಕುಲಾರುಣ ನೇತ್ರಗಳನ್ನು ತಂಪಾಗಿಸುತ್ತಾರೆ.     ಕನಕದಾಸರ  "ಯಾತರವನೆಂದುಸುರಲಿ"ಎಂಬ ಮತ್ತೊಂದು ಕೀರ್ತನೆಯಲ್ಲಿ
"ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆ
ತೊಟ್ಟಿದ್ದೆನಾಗ ತೊಗಲಬಕ್ಕಣ
ಇಷ್ಟರೊಳಗೆ ಒಂದು ವಿವರವರಿಯದಿಂಥ
ಭ್ರಷ್ಟಗೆ ನನಗಿನ್ಯಾತರ ಕುಲವಯ್ಯ"
ಹುಟ್ಟಿನಲ್ಲಿ ಭೌತಿಕವಾಗಿ ಹೀನತೆ ಹೊಂದಿ ಕೇವಲ ಮೂಳೆ ಮಾಂಸದ ತಡಿಕೆಯಾಗಿ, ಚರ್ಮಧಾರಿಯಾಗಿ ಬಂದ ಈ ಒಡಲು ದೇವನ ಕೃಪೆಯಾಗಿದ್ದು ಇದಕೆ ಕುಲದ ಹಂಗಿಲ್ಲ   ಎಂದು ತಮ್ಮನ್ನೇ ರೂಪಕವನ್ನಾಗಿಸಿಕೊಂಡು  ಮತಾಂಧ ಕರ್ಮಠರಿಗೆ ಚೇಳು ಕುಟುಕುವ ಹಾಗೆ , ಕುಲನಿರಸನದ ಚಿಕಿತ್ಸೆಯನ್ನು ನೀಡುತ್ತಾರೆ.

ಅದೇ ಕೀರ್ತನೆಯ ಮತ್ತೊಂದು ಚರಣದಲ್ಲಿ
"ಕರುಳು ಖಂಡ ನಾರುವ ಚರ್ಮ ರೋಹಿತ
ನರಪಂಜರದಿ ಹುರುಳಿಲ್ಲದ
ನರದೇಹ ಹೊತ್ತು ತಿರುಗುವಂಥ
ತಿರುಕ ನನಗಿನ್ಯಾತರ ಕುಲವಯ್ಯ"
ಮೂಳೆ ಮಾಂಸದ ಕೊಡವಾಗಿ ಕಶ್ಮಲಗಳಿಂದ ತುಂಬಿ ತುಳುಕುತ್ತಿರುವ, ಅಸ್ಥಿಪಂಜರದ ನಶ್ವರ ದೇಹ ಹೊತ್ತು ಭಿಕ್ಷುಕನಂತೆ ತಿರುಗುವ ಈ ದೇಹಕ್ಕೆ  ಕುಲದ ಅವಶ್ಯಕತೆಯಿಲ್ಲ ಎಂದು ಜಾತಿ ಮತಗಳನ್ನು ಅಲ್ಲಗಳೆಯುತ್ತಾರೆ.

ಕನಕದಾಸರ ಇನ್ನೊಂದು ಕೀರ್ತನೆಯಲ್ಲಿ
'ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ 
ಕುಲದ ನೆಲೆಯನೇನಾದರೂ 
ಬಲ್ಲಿರಾ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ  ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ'
ನೂರಾರು ಭವಾವಳಿಗಳಲ್ಲಿ  ತೊಳಲುವ, ಮನಬಯಸಿದೆಲ್ಲವನ್ನೂ ಸವಿದು ಸುಖಿಸುವ ಈ ದೇಹಕ್ಕೆ ಮೇಲು ಕೀಳಿಲ್ಲ,ವ್ಯರ್ಥಾಲಾಪ ತೊಡೆದು
ಕೇಶವನನ್ನು ನೆನೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂಬ ದಾರ್ಶನಿಕತೆಯನ್ನು ಎತ್ತಿಹಿಡಿಯುತ್ತಾರೆ ಜನ್ಮಾಂತರಗಳಲ್ಲಿ ಭೂತದಂತೆ ಅಲೆಯುವ ಈ ದೇಹ ಅನಿಶ್ಚಿತವಾದದ್ದು.ಅದೇ ಕೀರ್ತನೆಯ ಎರಡನೆಯ ಚರಣದಲ್ಲಿ
'ಜಲವೆ ಸಕಲ ಕುಲಕ್ಕೆ ತಾಯಲ್ಲದೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆ ಕಂಡ್ಯ ಮನುಜ'
ಈ ಜಗದ ಜೀವರಾಶಿಗಳ ತಾಯಿಯಾಗಿರುವ ಜಲಕೆ ಯಾವ ಕುಲವಿದೆನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾಗಿರುವ ಈ ಒಡಲನ್ನು ಕುಲದ  ನಿಜವರಿತು  ಹರಿನಾಮಸ್ಮರಣೆಯಲ್ಲಿ ತೊಡಗಿಸಿ ಮುಕ್ತಿ ಪಡೆಯಬೇಕುಎಂದು ಸಾರುತ್ತಾರೆ.
ಕನಕದಾಸರು  ಜೀವಿಗಳ ಉಗಮ ಸಿದ್ಧಾಂತವನ್ನು ಬಲ್ಲ ವಿಜ್ಞಾನಿಯೂ ಆಗಿದ್ದರು ಎಂಬುದು ಮೇಲಿನ ಚರಣದಿಂದ ಅವಲೋಕಿಸಬಹುದು.
ಪ್ರಕೃತಿಯ ಚರಾಚರ ವಸ್ತುಗಳಿಗಿಲ್ಲದ ಜಾತಿ ಕುಲಗಳು ಮಾನವನಿಗೇಕೆ ? ಎಂಬ ಪರಿಸರವಿಜ್ಞಾನ ದ ಮೂಲಕ ಸರ್ವ ಜೀವಿಗಳಿಗೂ ಸೃಷ್ಟಿಯು ಸಮಾನತೆಯನ್ನು ನೀಡಿದೆ ಎಂಬುದನ್ನು ಎತ್ತಿಹಿಡಿಯುತ್ತಾರೆ;ದಯವಿಲ್ಲದ ಧರ್ಮವಿಲ್ಲ ಎಂದು ಮಾನವತಾವಾದದ ಬುದ್ಧನಾಗುತ್ತಾರೆ.ಇವರ ಹೋರಾಟದ ಎಳೆಗಳೇ ಮುಂದೆ ಹೊಸಗನ್ನಡ ಸಾಹಿತ್ಯ ದಲಿತ ಮತ್ತು ಬಂಡಾಯ ಚಳುವಳಿಗಳ ಅಂತಃಪ್ರವಾಹವಾಗುತ್ತವೆ.


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...