Total Pageviews

Wednesday 13 November 2019

ಕರಿಕೆ ಸಂಹಾರ

ಕರಿಕೆ ಸಂಹಾರ

ಮಣ್ಣಿನ ಮಾಳಿಗೆಯನೇರಿ  ಸಾಕಿ ಹೊರಟಳೆಂದರೆ ಅಲ್ಲಿ ಮೈಯ್ಯುಬ್ಬಿ ಬೆಳೆದ ಕರಕಿಯೊಂದಿಗೆ  ಜಗಳವಾಡಲೇಬೇಕು. ಪ್ರತಿ ಮಳೆಗಾಲಕ್ಕೂ ಚಿಗುರಿ ತನ್ನ ಪರಿವಾರದೊಂದಿಗೆ ಹಬ್ಬುವ ಅದರ ಮೊಂಡುತನಕ್ಕೆ ಬೇಸತ್ತು ಹಳಿದು ಕದನಕ್ಕಿಳಿಯಲೇಬೇಕು.  ಅಲ್ಲಿ ಮಲ್ಲಯುದ್ಧ ದೃಷ್ಟಿಯುದ್ದ ಸಂಭವಿಸಲೇಬೇಕು. ಗೊಣಗುಟ್ಟುವ ಸದ್ದು ವಠಾರವನ್ನು ಆವರಿಸಿ ಅನುರಣಿಸಲೇಬೇಕು. ಹೌದು ಮನೆಯ ಮುಂದೆ ಹಸಿರು ಹಸಿರಾಗಿ ಮೆತ್ತನೆಯ ಕುಸುರಾಗಿ ಚಾಚಿಕೊಳ್ಳಬೇಕಾದ ಕರಕಿ ಮನೆಯ ತಲೆಯ ಮೇಲೆ ಹಬ್ಬಿಕೊಂಡರೆ ಅದಕ್ಕೆ ಸಿಗುವ ಸಮ್ಮಾನವಾದರೂ ಎಂತಹುದು ಎಂಬುದಕ್ಕೆ ನನ್ನವ್ವನ ಮಾತುಗಳನ್ನು ಕೇಳಬೇಕು. ಕರಕಿಯದ್ದೇ ಮಹಾಪರಾಧ. ಅದಕ್ಕಾಗಿ ಶಿಕ್ಷೆ ಕಟ್ಟಿಟ್ಟಬುತ್ತಿ. ಏನು ಕಾದಿದೆಯೋ ಇಂದು ಮಾಳಿಗೆಯ ಕರಕಿಗೆ ? ಎಂದು ಅಂಗಳದಲ್ಲಿನ ಮರ ಗಿಡ ಪ್ರಾಣಿಪಕ್ಷಿಗಳಿಗೆಲ್ಲ ಚಿಂತೆ. ನನ್ನ ಸಾಕಿ   ಹದಬೆರೆತ ಹಸಿ ನೆಲದ ಬಲೆ ಹಾಕಿ ಮತ್ತೆಂದೂ ಮೇಲೇಳದಂತೆ ಕರಕಿಯನ್ನು ಅದರ ಮಕ್ಕಳೊಂದಿಗೆ ಬಾಚಿ  ಸೆರೆಹಿಡಿಯುವ ಪರಿಯೇ ನನ್ನನ್ನು ಬೆರಗಾಗಿಸಿದೆ. ಒಮ್ಮೆ ಕರಕಿಯ ಮೂಗು ಹಿಡಿದು ಮಗದೊಮ್ಮೆ ಅದರ ಬೆಳೆದ ಜುಟ್ಟು ಎಳೆದು ಉಸಿರಾಡಲು ಬಿಡದಂತೆ, ನೆಲದ ಮರೆಯ ನಿಧಾನದಂತೆ ಅಡಗಿರುವ ಅದರ ಬೇರು ಸಹಿತ ಮೇಲೆತ್ತಿ ಹೆಡೆಮುರಿಕಟ್ಟಿ ಮುರಿದು ಕಸದ ಬುಟ್ಟಿಯೊಳಗೆ ಹಾಕಿದಳೆಂದರೆ ಮುಗಿಯಿತು ಕರಕಿಯೊಂದಿಗಿನ ಮಳೆಗಾಲದ ಸಹವಾಸ! ಆ ಕಳೆಯನ್ನು ಹೀಗೆ ಬುಡಸಮೇತ  ಕೀಳುವುದರಲ್ಲಿಯೂ ಒಂದು ಮಹಾತಂತ್ರವಿದೆ. ಅದು ಭವಿಷ್ಯದ ದೂರದೃಷ್ಟಿ.  ಬದುಕಿನಲ್ಲಿ ಅರಿತು ಆಚರಿಸಬೇಕಾದ ಮಹಾತತ್ವಶಾಸ್ತ್ರ. ಮನೆಯ ಹಣೆಯನ್ನೇರಿ ಕುಳಿತಿರುವ ಕಳೆಯನ್ನು ಅದರ ಬೀಜದ ಒಂದಂಶವೂ ನೆಲ ಮುಟ್ಟದಂತೆ ಹುಷಾರಾಗಿ ಮುಷ್ಟಿಯಲ್ಲಿ ಹಿಡಿದು ಕೀಳಬೇಕು. ರಕ್ತಬೀಜಾಸುರನಂತೆ ಈ ಮಾಳಿಗೆಯ ಕರಕಿ. ಬಿಟ್ಟಿರುವ ಬೀಜದ ಗೊನೆಯಿಂದ ಒಂದಂಶ ಬಿದ್ದರೂ ಸಾಕು ಮುಕ್ತಿ ಸಿಕ್ಕಿತೆಂದು ಕಾದು ಶುಭಕಾಲದಲ್ಲಿ ಒಮ್ಮೆಲೇ ಚಿಗುರೊಡೆಯುತ್ತವೆ ಸಾವಿರಾರು ಸಸಿಗಳು, ರಕ್ತಬೀಜಾಸುರನ ಹನಿ ರಕ್ತದಿಂದ ಪುಟಿದೇಳುವ ಲಕ್ಷಾಂತರ ರಾಕ್ಷಸರಂತೆ. ಅದರ ಪೌರಾಣಿಕ ಸೂತ್ರವನ್ನು ಚೆನ್ನಾಗಿಯೇ ಬಲ್ಲ ನನ್ನವ್ವಳ ಕೈಯ್ಯಿಂದ ಈ ಕರಕಿಯ ಒಂದೇ ಒಂದು ಬೀಜದ ಉಸಿರೂ ನೆಲಕಿಳಿಯದಂತೆ ಎಚ್ಚರದಿಂದ ಸಂಹಾರ ಮಾಡುವ ಆಕೆಯ ಯುದ್ಧೋತ್ಸಾಹದ ಕಲೆಯೇ ಅನುಕರಣೀಯ. ಅಷ್ಟೇ ಶಿಸ್ತುಬದ್ದ.  ಈ ಕಳೆ ಸಂಹಾರ ಕಲೆಯಲ್ಲೇನು  ಬದುಕಿನ ತತ್ವಶಾಸ್ತವಿದೆ ಎನ್ನುತ್ತಿರುವಿರೇನು ? ಸಮುದ್ರದ ನೆಲ್ಲಿ ಕಡಲ ಉಪ್ಪುಗಳಿಗಿರುವ ಸಂಬಂಧವೇ ಈ ಸಾಕಿ  ತೆಗೆಯುವ ಕಳೆ  ಮತ್ತು ಬದುಕುವ ಕಲೆಗಳ ಮಧ್ಯವಿರುವುದು. ಕಳೆಯನ್ನು ಬುಡಸಮೇತ ಕೀಳಬೇಕೆಂದು ನನ್ನವ್ವ ಹೇಳಿಕೊಟ್ಟ ಪಾಠ ಬದುಕಿನಲ್ಲಿಯ ಕೊಳೆಯನ್ನೂ ಬೇರುಸಹಿತ  ತೊಳೆಯಬೇಕೆಂಬುದನ್ನು ಕಲಿಸಿಕೊಟ್ಟಿದೆ ಅದರ ಬೀಜಸಹಿತ.
  ಅಂತರಂಗದ ಮಲಿನತೆಯನ್ನು ಕತ್ತಲೆಯನ್ನೂ ಕಳೆದುಕೊಳ್ಳುವ ತತ್ವಜ್ಞಾನದ ಈ ಕಳೆ ತೆಗೆಯುವ ಕಲೆಯ ದೃಷ್ಟಾಂತ ಬೋಧನೆ ಯಾವ ವಿಶ್ವವಿದ್ಯಾಲಯದಲ್ಲಿಯೂ ಹೀಗೆ ಸರಳ ಸುಲಾಲಿತ್ಯವಾಗಿ ದಕ್ಕಲಾರದು.
ಹಾಲುಂಡ ತವರೀಗಿ ಏನೆಂದು ಹರಸಲಿ
ಹೊಳೆದಂಡಿಲಿರುವ ಕರಕೀಯ ಕುಡಿಹಾಂಗ
ಹಬ್ಬಲಿ ಅವರ ರಸಬಳ್ಳಿ||
ಎಂಬ ತ್ರಿಪದಿಯ ಆಶಯದಲ್ಲಿ ( ಗರಿಕೆ) ಮನೆಯ ಮುಂದೆ ಇಲ್ಲವೇ ಹೊಳೆಯ ದಂಡೆಯ ಮೇಲೆ ಸುಂದರವಾಗಿ ಹಸಿರು ಹಾಸಿಗೆಯಂತೆ ಹಬ್ಬುವ ಕರಕಿಯ ಕುರಿತಾದದ್ದೇ ವಿನಹ ಮನೆಯ ನೆತ್ತಿಯನ್ನೇರಿ ಹಠಮಾಡಿ ಕುಳಿತಿರುವ ಹುಲ್ಲನ್ನು ಕುರಿತಾದದ್ದಲ್ಲ! ಇದು ನನ್ನವ್ವನಿಗೆ ತಿಳಿದಿರುವ ಸಂಗತಿಯೆಂದೇ ಆಕೆ ಅಟ್ಟವನ್ನೇರಿ ಅಟ್ಟಹಾಸಗೈಯ್ಯುತ್ತಿರುವ ಕರಕಿಯೊಂದಿಗೆ ಕದನಕ್ಕಿಳಿಯುವುದು.  ವಿಜಯದಶಮಿಯ ಆಚರಣೆಗೆ ಮುಂಚೆ ಒಂಭತ್ತು ದಿನಗಳ ನವರಾತ್ರಿಗೆ ಪೂರ್ವಸಿದ್ದತೆ ಮಾಡಿಕೊಳ್ಳುವಂತೆ, ಮಳೆ ತರುವ ಮೋಡಗಳಿಗಾಗಿ ಹಲವು ದಿನಗಳ ಕಾಲ ಕಾದು ಹೊಂಚುಹಾಕಿ ಕುಳಿತಿರುತ್ತಾಳೆ ಈ ಸಾಕಿ. ಹಸಿಯಾಗಿ ನೆಲ ಹದ ಮಾಡುವ ಚಿಟಪಟ ಸದ್ದಿನ ಜಡಿಮಳೆ ಬಿದ್ದೊಡನೆಯೇ ಜಾಗೃತವಾಗುತ್ತದೆ ಆಕೆಯ ಯುದ್ಧೋನ್ಮಾದ. ಅರಸನೊಬ್ಬ ಯುದ್ಧಸನ್ನದ್ಧತೆಗೆ ಬೇಕಾದ ಅಶ್ವದಳ, ಪದಾತಿ ದಳ, ಗಜಪಡೆ, ಭರ್ಚಿ,ಖಡ್ಗ, ಭಲ್ಲೆ, ಗುರಾಣಿಗಳೊಂದಿಗೆ ಹರಿತಗೊಂಡು ಸಂಹಾರಕ್ಕಾಗಿ ಕಾಯುವ ಸಕಲ ಶಸ್ತ್ರಾಸ್ತ್ರಗಳ ಪೂರ್ವತಯಾರಿಗಳನ್ನು ಮಾಡಿಟ್ಟುಕೊಳ್ಳುವಂತೆ, ಮಳೆಯಾಗುವುದಕ್ಕಿಂತ ಮೊದಲೇ ಕರಕಿಯ ಸಂಹಾರಕ್ಕೆ ಬೇಕಾದ ಕುರುಪಿ, ಕಳೆ ತುಂಬಲೆಂದೇ ಜತನದಿಂದ ಕಾದಿಟ್ಟ ಪ್ಲಾಸ್ಟಿಕ್ ಚೀಲಗಳು, ಯುದ್ಧದ ಮಧ್ಯದಲ್ಲಿ ಆಯಾಸವಾದರೆ ಪರಿಹರಿಸಲು ಬೇಕಾಗುವಷ್ಟು ಒಂದೆರಡು ತಂಬಿಗೆ ನೀರು, ಕದನಕ್ಕಿಳಿದಾಗ ಕಾಡುವ ಅಸ್ತಮಾದ ಉಬ್ಬಸವನ್ನು ನಿಯಂತ್ರಿಸಿ ಮತ್ತೆ ಮುನ್ನುಗ್ಗಲು ಬೇಕಾದ ವೈದ್ಯರು ಕೊಟ್ಟ Iಟಿhಚಿಟeಡಿ (ಉಸಿರಿನೊಂದಿಗೆ ಮಾತ್ರೆ ಎಳೆದುಕೊಳ್ಳುವ ಸಾಧನ)-  ಇವೆಲ್ಲವುಗಳನ್ನು ಯಾರಿಗೂ ಹೇಳದಂತೆಯೇ ಸಿದ್ಧತೆಯಲ್ಲಿಟ್ಟುಕೊಂಡಿರುತ್ತಾಳೆ. ನಿತಾಂತವಾಗಿ ನೆಲದ ಅಂತರಂಗಕಿಳಿಯುವ ಜಡಿಮಳೆಯಾದೊಡನೆಯೇ ಹೊರಡಲು ಅಣಿಯಾಗುತ್ತಾಳೆ. ಮನೆಯಲ್ಲಿರುವ ಯಾರಿಗೂ ಇದರ ಪರಿವೆಯಿಲ್ಲದಂತೆ ಏಕ ಮಾತ್ರ ಯೋಧನಂತೆ ಹೋರಾಟಕ್ಕಿಳಿಯಲು ಅನುವಾಗುತ್ತಾಳೆ. ವರ್ಷಧಾರೆ ನೆಲವನಪ್ಪಿದ ಮಾರನೇ ದಿನ ತನ್ನ ಕಿರಣಗಳ ಅಶ್ವವನ್ನೇರಿ ಬರುವ ನೇಸರನ ಬೆಳಗು, ಹಿಂದಿನ ರಾತ್ರಿ ಧರೆಗಿಳಿದ ಮೇಘರಾಜ, ಮಣ್ಣಿನ ಕಣಗಳೊಳಗೆ ಕರಗಿದಾಗ ಹೊರಟ ಸುಮಧುರ ಸುಗಂಧ, ವರುಣ ಬಂದನೆಂದು ಮುಖವೆತ್ತಿ ಎದೆಯೊಳಗೆ ಮುತ್ತುಗಳ ಹನಿಗಳನ್ನಿಟ್ಟುಕೊಂಡು ನಸುನಗುತ್ತಿರುವ ಮನೆಯಂಗಳದಲ್ಲಿನ ಮಲ್ಲಿಗೆ, ದಾಸವಾಳ, ಪೇರು, ಸೇವಂತಿಗೆ ಕುಸುಮಗಳ ತೂಗಾಟ,   ಇನಿಯ ಬಂದನೆಂಬ ಖುಷಿಗೆ ಮೈಹರಡಿಕೊಂಡು ಆರ್ದ್ರಹೃದಯದಿಂದ ಬಾಚಿ ತಬ್ಬಿಕೊಂಡ ಬಯಕೆಯಿಂದ ಸಂತೃಪ್ತಿಯನ್ನನುಭವಿಸುತ್ತಿರುವ ಹಸಿ ನೆಲ, ವರುಣನಿಂದಾಗಿ ಪ್ರಪುಲ್ಲವಾಗಿ ಕುಡಿಯೊಡೆದಿರುವ ಚಿಗುರನ್ನುಂಡು, ಆನಂದದ ರಾಗವನ್ನು ಹಾಡುತ್ತಿರುವ ಗುಬ್ಬಿ ಕೋಗಿಲೆ ಗಿಳಿಗಳ ಕಲರವ- ಮನೆಯಂಗಳದ ಮಹಾಹಬ್ಬವೆಂಬಂತೆ ಸಂಭ್ರಮವನ್ನು ತಂದ ಪ್ರಕೃತಿಗೆ ನಮಿಸುತ್ತಲೇ ಉಪವಾಸದ ವ್ರತವನ್ನಾಚರಿಸುತ್ತಾ ತನ್ನೆಲ್ಲಾ ಸಕಲ ಅಸ್ತ್ರಗಳೊಂದಿಗೆ ಮಾಳಿಗೆಯನ್ನೇರಿ ಹೊರಡುವ ಸಾಕಿಯ ಜೀವನೋತ್ಸಾಹವನ್ನು ಹೇಗೆಂದು ಬಣ್ಣಿಸುವುದು.
ಅಂದೇ ವಿಜಯದಶಮಿ ಅವಳಿಗೆ ರಾವಣನಂತೆ ದಶಾವತಾರವನ್ನು ಎತ್ತಿ ಮಾಳಿಗೆಯ ಮೇಲೆ ವಿರಾಟ್ ರೂಪ ಮೆರೆಯುತ್ತಿರುವ ಕರಕಿಯ ಸಂಹಾರಕ್ಕೆ.  ಸಾಕಿಯ ಈ ಯುದ್ಧಸಂಭ್ರಮವನ್ನು  ಮಗುವಿನಂತೆ ಕಣ್ಣು ತುಂಬಿಕೊಂಡು ನೋಡುವ ಮುಗ್ಧತೆಯೊಂದೇ ನನಗುಳಿದ ದಾರಿಯಾಯಿತು. ಆದರೂ ಮಾಳಿಗೆಯನ್ನೇರಿ ಹೇಗೆ ಯುದ್ಧ ಮಾಡುತ್ತಾಳೆಂದು ಕಣ್ತುಂಬಿಕೊಂಡು ಬಿಡಲೇಬೇಕು ಎಂದು ಕಷ್ಟಪಟ್ಟು ಅವಳನ್ನು ಹಿಂಬಾಲಿಸಿದೆ. ನನ್ನ ಎರಡು ಕರುಳ ಕುಡಿಗಳಿರಲಿಲ್ಲ ಆ ಸಮಯದಲ್ಲಿ.  ಅವರಿದ್ದರೆ ಒಟ್ಟಿಗೇ ಮೂರು ತಲೆಮಾರುಗಳು ಸೇರಿ ಕರಕಿಯೊಂದಿಗಿನ ಯುದ್ಧ ಮಾಡಿದ ಶ್ರೇಯಸ್ಸಾದರೂ ಸಿಗಬಹುದಿತ್ತೇನೋ ? ಅಂದು ಆ ಬಾಗ್ಯವಿರಲಿಲ್ಲ.  ಸರಿ. ಕೊನೆಗೆ ಎರಡು ತಲೆಮಾರುಗಳಾದರೂ  ಕಳೆ ಸಂಹಾರದ ಕಲೆಯಲ್ಲಿ  ಪರವಶವಾದವಲ್ಲ ಎಂಬ ಹೆಮ್ಮೆಯಂತೂ ಹೆಗಲೇರಿತು. ಮೇಲೇರಿದೆ. ರಾತ್ರಿಯಿಡೀ ಶೃಂಗಾರಸಮಯದಲ್ಲಿ ಹೊರಳಾಡಿದ ನೆಲದ ಹಸಿ ನಿಧಾನವಾಗಿ ಆರುತ್ತಿತ್ತು.  ಎದುರಿಗಿರುವ ನೇಸರನೂ ನೆಲದಾಕೆಯ ಸಂಭ್ರಮಕ್ಕೆ ಕಳೆಯನ್ನು ತಂದಿದ್ದ. ಮಾಳಿಗೆಯಾಕೆಯ ಮುಖ ಮಂದಹಾಸದಿಂದ ಅರಳಿ ಕೆಂಬಣ್ಣವೇರಿತ್ತು. ಕೆಂಪು ಮಣ್ಣ ಈ ಹೊಸ ಮೊಗವನ್ನು ಕಂಡು ಸಾಕಿಗೆ ಮಹದಾನಂದವಾಯಿತು. ಆ ಮಣ್ಣ ಮೊಗದ ಮೇಲೆ ಕುರೂಪ ತಂದ ಕರಕಿಯ(ಗರಿಕೆಯ) ಜಟೆಯನ್ನು ಕಂಡು ನನಗೆ ಹಾಗೆಯೇ  ಹಿಡಿದೆಳೆಯಬೇಕೆನ್ನಿಸಿತೆಂದರೆ, ಕರಕಿಯಿಂದ ಸೋರುತಿಹುದು ಮನೆಯ ಮಾಳಿಗೆ ಎಂದು  ಪರಿತಾಪವನ್ನನುಭವಿಸಿದ ನನ್ನ ಸಾಕಿಗಿನ್ನೆಷ್ಟು ಮುನಿಸು ಬಂದಿರಬೇಕು ? ಅಲ್ಲವೇ ! ಸಾಕಿ ಬರುವುದನ್ನು ಕಂಡು ಯುದ್ದಕ್ಕಾಗಿಯೇ ಸಿದ್ಧವಾಗಿ ನಿಂತಂತಿದ್ದ ಕರಕಿಯೂ ತಲೆಯೆತ್ತಿ ಗಾಳಿಗೆ ತಲೆದೂಗುತ್ತಾ ಪಂಥಾಹ್ವಾನ ನೀಡಿ ಸಾಕಿ ಹಾಗೂ ಪಡೆಯನ್ನು  ಕರೆದಂತೆ ಭಾಸವಾಗುತ್ತಿತ್ತು. ಹಾಗೆ ಕರಕಿ ಮೊದಲೇ ಸಿದ್ದವಾಗುತ್ತಿದ್ದುದಕ್ಕೂ ಬಲವಾದ ಕಾರಣವಿದೆ. ಯುದ್ಧಕ್ಕೆ ಹೋಗುವ ಮೊದಲು ಈ ಕರಕಿ ಯುದ್ಧದ ಇತಿಹಾಸದ ಕಥೆಯನ್ನೊಮ್ಮೆ  ಕೇಳಿಬಿಡಿ- ಕುರುಕ್ಷೇತ್ರದಂತಹ ಮಹಾಭಾರತ ಯುದ್ಧವೇ ಕೇವಲ ಹದಿನೆಂಟು ದಿನಗಳಲ್ಲಿ ಮುಗಿದುಹೋಗಿತ್ತು. ಆದರೆ ನಮ್ಮ ಮನೆ ಮಾಳಿಗೆಯ ಮೇಲಿನ ಕರಕಿಯೊಂದಿಗಿನ ನನ್ನವ್ವಳ ಈ ಯುದ್ಧ ಮಾತ್ರ ಎಂದೋ ಪ್ರಾರಂಭವಾಗಿ ಈಗಲೂ ಮುಂದುವರೆಯುತ್ತಲೇ ಇದೆ. ಈ ಯುದ್ಧ ಇಂದು ನಿನ್ನೆಯದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನನ್ನ ಗ್ರಹಿಕೆಯಂತೆ  ನನ್ನವ್ವ ನಮ್ಮ ಮನೆಗೆ ಬಂದಂದಿನಿಂದಲೂ ನಡೆಯುತ್ತಲೇ ಇದೆ. ಹಿಂದೆ ನಮ್ಮ ಪೂರ್ವಜರು ಯಾರು ಈ ಯುದ್ಧದಲ್ಲಿ ಪಾಲ್ಗೊಂಡಿದ್ದರೋ ಗೊತ್ತಿಲ್ಲ. ಈ ಯುದ್ಧ ಸಾಗುವ ಪ್ರಕ್ರಿಯೆಯೇ  ಬಲು ವಿಸ್ಮಯ. ಮಹಾಭಾರತದ ಯುದ್ಧಕ್ಕೆ ಷರತ್ತುಗಳಿದ್ದಂತೆ ಈ ಯುದ್ಧದಲ್ಲಿಯೂ ಅಘೋಷಿತ ನಿಯಮಗಳಿವೆ.  ಮೊದಲನೇಯದಾಗಿ ಈ ಕದನ ವರುಷದಲ್ಲೊಮ್ಮೆ ಮಳೆಗಾಲದಲ್ಲಿ ಮಾತ್ರ ನಡೆಯುವಂತಹುದು. ಎರಡನೇಯದಾಗಿ ಇದರ ಕಾಲಾವಧಿ ಮಳೆಗಾಲದ ದಿನಗಳಷ್ಟೇ. ಮೂರನೇಯದಾಗಿ ಮಳೆಗಾಲದ ನಂತರ ಎರಡೂ ಪಕ್ಷದವರು ಕದನವಿರಾಮ ಘೋಷಿಸಬೇಕು. ಅರ್ಥಾತ್ ಮಳೆಗಾಲ ಮುಗಿದ ನಂತರದಿಂದ ಹಿಡಿದು ಮರಳಿ ಮಳೆ ಪ್ರಾರಂಭವಾಗುವ  ಅವಧಿಯವರೆಗಿನ ಸಮಯದಲ್ಲಿ ಕರಕಿ ಕಿರಿಕಿರಿ  ಮಾಡುವ ಹಾಗಿಲ್ಲ, ನನ್ನವ್ವನೂ ಕರಕಿಯನ್ನು ಮರಳಿ ಕೆಣಕುವ ಹಾಗಿಲ್ಲ. ಇದು ಯುದ್ಧದ ಅತ್ಯಂತ ಮಹತ್ವದ ಶಾಂತಿ ಒಪ್ಪಂದ. ಅಂದರೆ ಒಂದು ವಸಂತದ ಮೂರನೇಯ ಒಂದು ಭಾಗ ಮಾತ್ರ ಯುದ್ಧಕಾಲ. ಈ ಮಹತ್ವದ ಷರತ್ತುಗಳನ್ನು ಎರಡೂ ಪಕ್ಷದವರೂ ಉಲ್ಲಂಘಿಸುವ ಹಾಗಿಲ್ಲ.
ಅದೂ ನಡೆದುಹೋಯಿತೊಮ್ಮೆ. ನನ್ನ ಅವ್ವ ಒಮ್ಮೆ ವರ್ಷಾಕಾಲ ಮುಗಿದು ಚಳಿಗಾಲ ಕೊನೆಯಾಗುವ ಮಾರ್ಗಶಿರ ಮಾಸದಲ್ಲೊಂದು ದಿನ ಮಾಳಿಗೆಯನ್ನೇರಿ, ಕರಕಿ  ಒಣಗಿದ್ದನ್ನು ಕಂಡು ಇದೇ ಸರಿಯಾದ  ಸಮಯವೆಂದುಕೊಂಡು ಕದನವಿರಾಮವನ್ನು ಮುರಿದು  ಕುರುಪೆ ಹಿಡಿದು ನಿರ್ಮೂಲನೆಗಿಳಿದುಬಿಟ್ಟಳಂತೆ. ಮೊದಲೇ ಅಶಕ್ತವಾಗಿ ಒಣಗಿದ ಹುಲ್ಲು ಒಲ್ಲದ ಮನಸಿನಿಂದ ಮಣ್ಣಿನಿಂದ ಹೊರಬರದೇ ಹಠವಿಡಿದ ಮಗುವಿನಂತೆ ನೆಲ ತಬ್ಬಿ ಆರ್ತನಾದ ಮಾಡಿತಂತೆ. ಮಣ್ಣಿನಿಂದ ಪೂರ್ಣ ಕೀಳಲಾಗದ ಒಣ ಕರಕಿಯ ಮೊಂಡಾಟದಿಂದ ಅರ್ಧಕ್ಕೆ ಬಿಟ್ಟುಬಂದಳಂತೆ. ನಿಯಮ ಮೀರಿ ಬಲವನ್ನು ಕಳೆದುಕೊಂಡು ಶಸ್ತ್ರಾಸ್ತ್ರ ಕಳಚಿಟ್ಟ ಹೊತ್ತಲ್ಲದ ಹೊತ್ತಿನಲ್ಲಿ  ತನ್ನ ಬುಡವನ್ನೇ ಅಲ್ಲಾಡಿಸಲು ಬಂದ ಸಾಕಿಯ ಸೀಮೋಲ್ಲಂಘನದಿಂದ ರೊಚ್ಚಿಗೆದ್ದ ಕರಕಿ ಈಗಲೂ ಮಾಳಿಗೆ ತೊಲಗಿ ಹೋಗುವ ಬದಲು ರಕ್ತಬೀಜಾಸುರನ ಗುಣ ಬೆಳೆಸಿಕೊಂಡು  ಮೊದಲಿಗಿಂತ ಹುಲುಸಾಗಿ ಮಾಳಿಗೆಯ ತುಂಬೆಲ್ಲಾ ಹರಡಿಕೊಂಡು  ನನ್ನವ್ವನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆಯಂತೆ ಎಂದು ನನ್ನವ್ವನೇ ನನಗೆ ವಿಷಾದದಿಂದ ಹೇಳಿದ ನೆನಪು. ನನಗೂ ಸಾಕಿಯದೇ ತಪ್ಪೆಂದೆನಿಸಿದರೂ ಋತುವಿನಲ್ಲೊಂದರಲ್ಲಿಯೇ ಎಲ್ಲ ಅರಿವಿದ್ದೂ ನೂರೆಂಟು ಸಲ ಕದನವಿರಾಮ ಉಲ್ಲಂಘಿಸುವ ದೇಶಗಳಿಗಿಂತ ಯಾವಾಗಲೋ ಒಂದು ಬಾರಿ ತಿಳಿಯದೇ ಕದನವಿರಾಮ ಮೀರಿದ ನನ್ನವ್ವ ಎಷ್ಟೋ ಪಾಲು ಶ್ರೇಷ್ಠವಲ್ಲವೇ ಎಂದು ಕರಕಿಯ ಮುಂದೆ ಬಾಗುವುದರ ಬದಲಾಗಿ ಬೀಗಿದೆ.  ಹ್ಞಾಂ!  ಈಗ ಯುದ್ಧಕ್ಕೆ ಬರೋಣ- ಇದು ಮುಗಿಯದ ಅಧ್ಯಾಯವೆಂದು  ಕರಕಿಗೂ ಚೆನ್ನಾಗಿ ಗೊತ್ತಿದ್ದುದರಿಂದಲೋ ಏನೋ ತಲೆಯೆತ್ತಿ ಸೆಡ್ಡು ಹೊಡೆಯುತ್ತಿರುವಂತೆ ಚಟಪಟ ಓಲಾಡುತ್ತಿತ್ತು. ಮೊದಲು ಯುದ್ಧ ಪ್ರಾರಂಭವಾಗಲಿ ಆಮೇಲೆ ನೋಡಿಕೊಳ್ಳುತ್ತೇನೆ ನಿನ್ನನ್ನು ಎಂದು ನಾನೂ ಕಾಯುತ್ತಿದ್ದೆ. ರಾಣಿಯೇ ಎಂದಾದರೂ ಮುನ್ನುಗ್ಗಿ ಹೋರಾಡುವ ಯುದ್ಧವನ್ನೆಂದಾದರೂ ಕಂಡಿದ್ದೀರಾ ? ನೀವು ಕಂಡಿರಲಿಕ್ಕಿಲ್ಲ. ಆದರೆ ನಾನಂದು ಕಣ್ಣಾರೆ ಕಂಡೆ.  ಚೀಲದೊಳಗಿದ್ದ ಕುರುಪೆಯನ್ನು ಹೊರಗೆಳೆದವಳೆ  ಜಟಾಜೂಟಳಾಗಿ ಮೆರೆಯುತ್ತಿದ್ದ ಹುಲ್ಲನ್ನು ಕತ್ತರಿಸುತ್ತಾಳೆಂದುಕೊಂಡಿದ್ದೆ. ಆದರೆ ಕರಕಿಯ ವಿಕಟ ವಿಲಾಸವನ್ನು ಬಲ್ಲ ಸಾಕಿ ಮಾತ್ರ ಕುರುಪೆಯನ್ನೇ ಖಡ್ಗದಂತೆ ಬೀಸಿ  ಗುರಿಯಿಟ್ಟು ಹೊಡೆದಿದ್ದು ಮಾತ್ರ ಕರಕಿಯ ಬುಡಕ್ಕೆ ಎಂದರೆ ಮಣ್ಣಿನೊಳಗೆ ಅಡಗಿಕುಳಿತಿರುವ ಬೇರಿಗೆ.  ಸಾಕಿಗೆ ಗೊತ್ತಿತ್ತು ಒಳಗೊಳಗೇ ಎಲ್ಲೆಂದರಲ್ಲಿ ಚಾಚಿ ನಡೆಸುವ ಬೇರಿನ  ಗೆರಿಲ್ಲಾ ಯುದ್ಧ ತಂತ್ರ. ಕುರುಪೆಯಿಂದ ಮಣ್ಣ ಮುಖಕ್ಕೆ ತರಿದು ಕರಕಿಯ ಬೇರಿಗೇ ಕೈ ಹಾಕಿ ಮೇಲೆತ್ತಿ ನಕ್ಕು ಮುಂದುವರಿದಳು.  ಬೇರುಗಡಿತವಾದ ಮೊಂಡು ಕರಕಿ ಅದುರಿ ಅಲ್ಲಾಡಿ ಬೆದರಿ ಬೆಂಡಾಡಿ ಸಾಕಿಯ ಕೈಯ್ಯಲ್ಲಿನ ಕುರುಪೆಯ ಗರಗಸಕ್ಕೆ  ಅಂಗಾಂಗಗಳನ್ನು ಕತ್ತರಿಸಿಕೊಂಡು ಕಂಗಾಲಾಗಿ  ಬಲಿಯಾಗಿ ಹೋಗುತ್ತಿತ್ತು. ಪಾಪ ಕಣ್ಣಮುಂದೆಯೇ ತನ್ನ ಒಡಲ ಕುಡಿಗಳು ಬುಡ ಕತ್ತರಿಸಿಕೊಂಡು ಮಾಡುತ್ತಿದ್ದ ಆರ್ತನಾದ ಕೇಳಿ ಒಂದು ಕ್ಷಣ ಯುದ್ಧದಿಂದ ಹಿಂದೆ ಸರಿಯಬೇಕೆಂದು ವಿಚಲಿತನಾದರೂ, ನನ್ನವ್ವನ ವಿರುದ್ಧ ಶಕುನಿಯಂತೆ ಅಂದಕಾಲತ್ತಿನ ಸೇಡನ್ನಿಟ್ಟುಕೊಂಡು ಮಾಳಿಗೆಯ ತುಂಬೆಲ್ಲಾ ಚಾಚಿಕೊಂಡು ತನ್ನ ಬೇರುಗಳ ಮೂಲಕ ಮನೆಯೊಳಗೆ ನೀರನ್ನು ಇಳಿಬಿಟ್ಟು ಹೊಂಡದಂತೆ ಕೆಸರು ಮಾಡುತ್ತಾ ಕುಟುಂಬಕ್ಕೆ ಕಿರಿಕಿರಿ ಮಾಡುತ್ತಿದ್ದುದನ್ನು ನೆನೆದು, ಸಹೋದರ ಪ್ರೀತಿಯಿಂದ ಕರ್ಣನ ವಿರುದ್ಧ ಬಿಲ್ಲನ್ನು ಮೇಲೆತ್ತದೇ ಕುರುಕ್ಷೇತ್ರದಲ್ಲಿ ಅರ್ಜುನ ತೊಳಲಾಡಿ ಕೊನೆಗೆ ಕೃಷ್ಣನಿಂದ ಯುದ್ದೋತ್ಸಾಹವನ್ನು ಪಡೆದು ಮುನ್ನುಗ್ಗಿದಂತೆ, ನಾನೂ ಚಿಕ್ಕ ಕೈಚೂರಿಯಂತಿದ್ದ ಕುರುಪೆಯನ್ನು ಹಿಡಿದು ಮುನ್ನುಗ್ಗಿದೆ.
ಕೈಗೆ ಸಿಕ್ಕಂತೆ ಜುಟ್ಟು ಹಿಡಿದೆಳೆದು ಬೇರು ಸಹಿತ ಕೀಳಲಾರಂಭಿಸಿದೆ. ಸೇಡಿನ ಕಿಚ್ಚೋ ಏನೋ ಕರಕಿ ಮಾತ್ರ ತನ್ನೊಡನೆ ಬೇರಿನ ಹಿಡಿತಕ್ಕೆ ಸಾಧ್ಯವಾಗುವಷ್ಟು  ಮಣ್ಣನ್ನು ಮೆತ್ತಿಕೊಂಡೇ ಬರಲಾರಂಭಿಸಿತು. ಸುಂದರ ಕೆಂಬಣ್ಣವನ್ನೇರಿಸಿಕೊಂಡ ಮಾಳಿಗೆಯ ಮೊಗ ನಾವು ಕೀಳುವ ಕರಕಿಯಿಂದ ಬಿದ್ದ ಚಿಕ್ಕ ದೊಡ್ಡ ಹೊಂಡಗಳಿಂದಾಗಿ ಮತ್ತಷ್ಟು ಕುರೂಪಗೊಂಡಿತು. ಸಾವಿನಲ್ಲೂ ಸೆಣಸಾಡುವ ಕರಕಿಯ ಈ ಅದಮ್ಯ ಹೋರಾಟದ ವೀರೋತ್ಸಾಹವನ್ನು ಕಂಡು ವಿಸ್ಮಯಗೊಂಡೆ.  ಸಾಕಿ ಎಚ್ಚರಿಸಿದಳು, ಈ ಮೊಂಡ ಕರಕಿಯ ಒಂದೇ ಒಂದು ಬೀಜವನ್ನು ನೆಲ ತಬ್ಬದಂತೆ ಕೀಳು ಎಂದು.  ಹೌದು, ಈ ಕರಕಿ ರಕ್ತಬೀಜಾಸುರನಿದ್ದಂತೆ. ಒಂದೇ ಒಂದು ಬೀಜ ನೆಲಕ್ಕುದುರಿದರೆ ಸಾಕು ಅದು ಮಣ್ಣಿನಲ್ಲಡಗಿಕೊಂಡು  ಮತ್ತೆ ಮುಂದಿನ ಮಳೆಗಾಲದಲ್ಲಿ ಚಿಗುರೊಡೆದು ಹಬ್ಬಿ ಮಾಳಿಗೆಯ ಅಂದಗೆಡಿಸಲು ಕಾತರಿಸುತ್ತಿರುತ್ತದೆ. ಕರಕಿಯ ಈ ಅಮಿತ ಜೀವನ ಪ್ರೀತಿಯೇ ನಮ್ಮನ್ನು ಬೆರಗುಗೊಳಿಸುತ್ತದೆ.  ಈ ಅಡಗಿಕೊಂಡು ಹೋರಾಡುವ ಗೆರಿಲ್ಲಾ ಯುದ್ಧತಂತ್ರದಿಂದಲೇ ಅದು ಇಲ್ಲಿಯವರೆಗೆ ಸುಮಾರು ಐವತ್ತು ವಸಂತಗಳಷ್ಟು  ನಿರಂತರವಾಗಿ ನನ್ನವ್ವಳೊಂದಿಗೆ ಕದನ ಮಾಡುತ್ತಲೇ ಬಂದಿದೆ. ಎಷ್ಟೋ ದೇಶಗಳು ಈ ತಂತ್ರದಿಂದಲೇ ತಾನೇ ಇನ್ನೂ ಜೀವಂತವಾಗಿರುವುದು ! ಏಕಕಾಲಕ್ಕೆ ನೂರಾರು ಬೀಜಗಳನ್ನು ಹೊತ್ತು ಕುಣಿಯುವ ಕರಕಿಯನ್ನು ಮಣಿಸುವುದೇ ಒಂದು ಸವಾಲು. ಇದರ ವಿಜ್ಞಾನವನ್ನು ತಿಳಿದು ಯುದ್ದದಲ್ಲಿ ಭೀಷ್ಮನಂತಾಗಿದ್ದ ಸಾಕಿ ಎಚ್ಚರಿಕೆಯಿಂದಲೇ ಕರಕಿಯ ಸಂಹಾರ ಮಾಡುತ್ತಿದ್ದಳು. ನಾನು ಎಷ್ಟೇ ಎಚ್ಚರವಹಿಸಿದರೂ ಜೀರಿಗೆಯಷ್ಟಿರುವ ಗಾತ್ರದ ನೂರಾರು ಹಸಿರು ಬೀಜಗಳಲ್ಲಿ ಅರ್ಧದಷ್ಟಾದರೂ ನೆಲಕಚ್ಚುತ್ತಿದ್ದವು. ಸಾಕಿ ಅವುಗಳನ್ನು ಹುಡುಕಿ ಹುಡುಕಿ ಹೊಸಕಿಹಾಕುತ್ತಿದ್ದಳು. ಈ ಯುದ್ಧದಲ್ಲಿ ನಮ್ಮದು ಅಭಿಮನ್ಯುವಿನ ಪಾತ್ರವಿದ್ದಂತೆ. ಕರಕಿಯ ಚಕ್ರವ್ಯೂಹದೊಳಗೆ ಪ್ರವೇಶಿಸುವುದು ಮಾತ್ರ ಗೊತ್ತು. ಬಿಡಿಸಿಕೊಂಡು ಹೊರಬರುವ ವಿದ್ಯೆ ನಮಗೆ ದಕ್ಕಲಿಲ್ಲವೆಂದೇ ಹೇಳಬೇಕು.  ಇದುವರೆಗೂ ಈ ಹಠಮಾರಿ ಮಾಳಿಗೆಯ ಕಡುಮೋಹಿ ಕರಕಿಯೂ ಯುದ್ಧ ಸಾಕು ಎಂದು ಸೋತು ಹಿಂದೆಸರಿದಿಲ್ಲ.  ಯಕಃಶ್ಚಿತ  ಎರಡೆಲೆಗಳ ನೀಳ ತೃಣಕ್ಕೆ ಶತಮಾನಗಳ ಕಾಲ ಯುದ್ಧವನ್ನು ಮಾಡುವ ವೀರೋತ್ಸಾಹವಿರಬೇಕಾದರೆ ಇನ್ನು ನನ್ನಂತಹ ಮನೆಯಲ್ಲಿರುವ ಇಪ್ಪತ್ತು ಕರುಳಕುಡಿಗಳನ್ನು ಎತ್ತಿ ಆಡಿಸಿ ಬೆಳೆಸಿರುವ ಸಾಕಿಗೆ ಇನ್ನೆಷ್ಟು ವೀರಾವೇಶದ  ಚೈತನ್ಯವಿರಲಿಕ್ಕಿಲ್ಲ ನೀವೇ ಕಲ್ಪಿಸಿಕೊಳ್ಳಿ. ಸಾಕಪ್ಪ ಈ ಕರಕಿಯ ಸಹವಾಸ ಎಂದು ಸಾಕಿಯೂ ಮಾಳಿಗೆಯ ರಣರಂಗದಿಂದ ಹಿಂದೆಸರಿದವಳಲ್ಲ. ತಾನು ಕಾಯಿಲೆಯಿಂದ ನರಳುತ್ತಿರುವಾಗಲೂ ಈ ಕರಕಿಯೊಂದಿಗಿನ ಹೋರಾಟವನ್ನು ನಿಲ್ಲಿಸಿದವಳಲ್ಲ ಸಾಕಿ ಎಂದ ಮೇಲೆ  ಯುದ್ದ ಮುಂದುವರೆಯಲೇಬೇಕಲ್ಲ. ಸಾಕಿಯೇ ಮುಂದುವರೆಸಿ ಕರಕಿಯನ್ನು ಚೆನ್ನಾಗಿ ತರಿದೊಟ್ಟಿದಳು. ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಹೆಡೆಮುರಿ ಕಟ್ಟಿ ಮುರಿಮುರಿದು ತುಂಬಿದಳು. ನೇಸರ ಸಂಜೆಗಣ್ಣಿನಿಂದ ವೀಕ್ಷಿಸುತ್ತಿದ್ದ. ಬಹುಶಃ ಸಾಕಿಯ ಈ ಬತ್ತದ ಅನುಪಮ ಚೈತನ್ಯಕ್ಕೆ ಆತನೂ ಬೆರಗಾದಂತಿದ್ದ. ಮಾಳಿಗೆ ಮೊದಲಿನ ಕಳೆಯನ್ನು ಪಡೆದುಕೊಂಡು ಸಂಜೆಯ ಕಿರಣಗಳ ಸ್ಪರ್ಶದಿಂದ ಮತ್ತೆ ಮಂದಹಾಸ ಬೀರುತ್ತಿತ್ತು. ಈಗಲೂ ಅದೇ ಕೆಂಬಣ್ಣ ಮಾಳಿಗೆಯ ಮುಖವನ್ನಾವರಿಸಿ ಸಂಜೆಗೊಂದು ಅನನ್ಯ ಸೌಂದರ್ಯ ತಂದಿತ್ತು. ಅಲ್ಲಿಗೆ ಕರಕಿಯೊಂದಿಗಿನ ಈ ಮಳೆಗಾಲದ ಯುದ್ಧ ಮುಗಿದಿತ್ತು ಮತ್ತೆ ಮುಂದಿನ ಮಳೆಗಾಲದವರೆಗೆ ಕದನವಿರಾಮವನ್ನು ಘೋಷಿಸಿಯೇ ಬಿಟ್ಟ ನೇಸರ.  ಚೀಲದೊಳಗೆ ಗಹಗಹಿಸಿ ನಗುತ್ತಿದ್ದ ಎಂದೂ ಸೋಲದ ಕರಕಿಯ ವಿಕಟ ನಗುವಿನ ಧ್ವನಿ ಮಾತ್ರ ಮತ್ತೆ ಮುಂದಿನ ಮಳೆಗಾಲದವರೆಗೆ ಅನುರಣಿಸುತ್ತಲೇ ಇರುತ್ತದೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...