Total Pageviews

Sunday 9 February 2020

ಅರ್ಧಾಂಗಿ ಪುರಾಣ!

ಅರ್ಧಾಂಗಿ ಪುರಾಣ!
ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ  ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋತ್ತಿಯೋ? ಇಲ್ಲಾ ಲ್ಯಾವಿ ಗಂಟಿನೊಳಗೆ ಕಟ್ಟಿಡಲೋ " ಎಂದು. "ಯಾವುದದು ನೋಡೋಣ ತೋರಿಸು" ಎಂದೆ. "ತಗೋ ಇದೇ ನೋಡು" ಕೈಗಿತ್ತಳು. ಅಂಗಿಯ ದ್ವಂದ್ವ ಕಾಡಹತ್ತಿತು. ಸರಿಯಾದ ಸಮಯಕ್ಕೆ ಎನ್ನ ಮನದೊಳಗೆ ಬಿಡಬೇಕಾದ ಹಳೆಯಂಗಿಯ ಹುಳು ಬಿಟ್ಟು ತನ್ನ ನಿತ್ಯ ಬದುಕಿನ ಸಂತೆಯಲ್ಲಿ ಕಳೆದುಹೋದ ಸಾಕಿಯ ಮುಂದೆ ಕ್ಷಣ ಹೊತ್ತು ಬೆಪ್ಪನಂತಾದೆ‌. ಏಕೆನ್ನುವಿರಾ ಬನ್ನಿ ಈ ಅಂಗಿಪುರಾಣವನ್ನೊಮ್ಮೆ ಹೇಳಿಬಿಡುವೆ. ಅದಕ್ಕಿಂತ ಮುಂಚೆ ಈ ಲ್ಯಾವಿ ಗಂಟಿನ ಬಗ್ಗೆ ನೀವು ಗಮನಿಸಲೇಬೇಕಾದ ಕೆಲವು ಸಂಗತಿಗಳನ್ನು ಹೇಳಿಬಿಡುವೆ ಕೇಳಿ- ಲ್ಯಾವಿ ಗಂಟು ಸಾಕಿಯರಿಗೆ ಪ್ರಿಯವಾದ ಹಳೆಯ ಬಟ್ಟೆಗಳ ಅಕ್ಷಯನಿಧಿ. ಬಳಸಿ ಎಸೆಯಿರಿ (Use and Throw) ಎಂಬ ಆಧುನಿಕ ಮಾರುಕಟ್ಟೆ ಬೆಡಗಿಯ ಸೆಳೆತದಲ್ಲಿ ಮೈಮರೆತಿರುವ ನವಯುಗದ ಮಾನವ ಜನಾಂಗಕ್ಕೊಂದು ಅಭೂತಪೂರ್ವ ಸಂದೇಶ ಈ ಲ್ಯಾವಿ ಗಂಟಿನಲ್ಲಿದೆ. ಬಳಸಿ ಎಸೆಯುವ ಬಟ್ಟೆಗಳ ಕಸದಿಂದಲೇ ರಸ ತೆಗೆದು, ಅದರಿಂದಲೇ ಬದುಕಿನ ಬಟ್ಟೆಗೆ ಚೈತನ್ಯವನ್ನು ಪಡೆಯುವ ತಾತ್ವಿಕತೆ ಈ ಲ್ಯಾವಿ ಗಂಟಿನೊಳಗಣ ಗುಟ್ಟು. ಸಾಕಿಯು ಮನೆಯವರೆಲ್ಲಾ ಬಳಸಿದ ವಸ್ತ್ರಗಳನ್ನೆಲ್ಲಾ ಗಂಟಿನೊಳಗೆ ಬಚ್ಚಿಟ್ಟು, ನಾಳೆಯ ಬದುಕಿಗೆ ಅವಶ್ಯಕತೆಯೆನಿಸಿದರೆ ಬಿಚ್ಚಿಟ್ಟು ಬಳಸುತ್ತಾರೆ. ಕೌದಿ, ದುಪ್ಪಟ್ಟಾ, ಮಕ್ಕಳ ಕುಲಾಯಿ, ಅಡುಗೆಮನೆಯಲ್ಲಿ ಬಳಸುವ ಮಸಿಬಟ್ಟೆ, ನೆಲ ತೊಳೆಯುವ ಬಟ್ಟೆ, ತೊಟ್ಟಿಲು ಕಟ್ಟಲು, ಧಾನ್ಯ ಸಂಗ್ರಹದ ಚೀಲ, ಹೆರಿಗೆಯ ಸಂದರ್ಭದ ಬಟ್ಟೆಗಳು, ಜನಿಸಿದ ಮಗುವಿಗೆ ಬೆಚ್ಚನೆಯ ಹೊದಿಕೆ, ಸಂತೆಗೆ ಬಳಸುವ  ಕೈಚೀಲ, ಕರವಸ್ತ್ರ,  ಅಂಗವಸ್ತ್ರ,ಇತ್ಯಾದಿ ಮನೆಯ ಬಹುಪಾಲು ಕಾರ್ಯನಿರ್ವಹಣೆಗೆ ಬೇಕಾದ ಸಂಗತಿಗಳಿಗೆಲ್ಲಾ ವೈವಿಧ್ಯಮಯ ಗಾತ್ರ, ಬಣ್ಣ, ರೂಪ ಲಾವಣ್ಯಗಳಿಂದ ಬಳುಕುತ್ತಿರುವ ಹಳೆಯ ಬಟ್ಟೆಗಳೆಂಬ ಚಿಟ್ಟೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಜೋಳಿಗೆಯೆಂದರೆ ಅದು ಲ್ಯಾವಿ ಗಂಟು. ಇದನ್ನು ಬಳಸುವ ವಿಧಾನ ಮಾತ್ರ ಸಾಕಿಯರಿಗೇ ಮೀಸಲು. ಎರಡು ಮೂರು ತಲೆಮಾರುಗಳ ಬಟ್ಟೆಗಳನ್ನೆಲ್ಲಾ ತುಂಬಿಕೊಂಡು ಬೀಗುತ್ತಿರುವ ಬಟ್ಟೆಗಳ ಈ ಅಕ್ಷಯ ನಿಧಿಯನ್ನು ನಾನು ಕಂಡಿದ್ದೇನೆ. ಅಂದು ತುಂಬಿದ ಸಭೆಯಲ್ಲಿ ದ್ರೌಪದಿಗೆ ಅಕ್ಷಯಾಂಬರವನ್ನು ಇತ್ತು ಪಾಂಡುಕುಲದ ಮಾನ ಕಾಪಾಡಿದ ಮಧುಸೂಧನನಂತೆ, ಇಂದು ತುಂಬಿದ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ವಿಧದ ಬಳಕೆಯ ಬಟ್ಟೆಗಳನ್ನು ಕೈತುದಿಯಲ್ಲಿಯೇ ಪೂರೈಸುತ್ತಿರುವ ಆಧುನಿಕ ಶ್ರೀಕೃಷ್ಣನಂತಿರುವ ಲ್ಯಾವಿ ಗಂಟಿನ ಮಹಿಮೆಯನ್ನು ಹೇಗೆ ಬಣ್ಣಿಸುವುದು?. ಅಜ್ಜಿಯರು ತೊಟ್ಟ ೧೮ ಮೊಳದ ಇಕಲ್ಲಿನ ರೇಷ್ಮೆಯ ಕಡ್ಡಿ ಸೀರೆಯಿಂದ ಹಿಡಿದು ಮೊಮ್ಮಕ್ಕಳು ತೊಟ್ಟುಬಿಟ್ಟ ಚೋಟು ಅಂಗಿ, ಕಾಲುಚೀಲಗಳವರೆಗೆ ಈ ಲ್ಯಾವಿ ಗಂಟಿನ ಬೃಹತ್ ವ್ಯಾಪ್ತಿ ಸರಳವಾಗಿ ನಿಲುಕಲಾರದ್ದು. ಅಜ್ಜಿಯರು ಮುತ್ತಿಟ್ಟು ಬೆಳೆಸುವ ಕೈಗೂಸಿನಂತೆ ಬೆಳೆಯುತ್ತಾ ಹೋಗುವ ಲ್ಯಾವಿ ಗಂಟು ಕುಟುಂಬದ ಆಪತ್ಕಾಲದ ಬಾಂಧವ. ಈಗ ಅಂಗಿಯ ದ್ವೈತಕ್ಕೆ ಬರೋಣ. ಅದು ಸುಮಾರು ಆರು ವರ್ಷಗಳ ಹಿಂದಿನ ಕತೆ. ನನ್ನ ಸಂಬಂಧಿಕರ ಮದುವೆಗಾಗಿ ನವನವೀನ ವೇಷ ತೊಡಬೇಕೆಂದು ಬಟ್ಟೆಯ ಜೊತೆಯೊಂದನ್ನು ಖರೀದಿಸಿ ಬಹು ಆಸ್ಥೆಯಿಂದ ದರ್ಜಿಯ ಕೈಗಿತ್ತಿದ್ದೆ.
ಪರಿಚಿತ ದರ್ಜಿಗೆ ನಾನು ಹಾಕಿಕೊಳ್ಳುವ ಅಂಗಿ ಪ್ಯಾಂಟುಗಳ ನಿಖರ ಅಳತೆಗಳ ಮಾಹಿತಿ ಇತ್ತು. ಆದರೆ ನಾನು ಕೊಟ್ಟ ಹೊಸ ಬಟ್ಟೆಗಳ ಚಿತ್ತಾರಕ್ಕೆ ಮನಸೋತ ಆತ ಈಗಾಗಲೇ ಹಳೆಯದಾಗಿರುವ ಧಾರಾಳ ಗಾತ್ರದ ಶೈಲಿ ಬಿಟ್ಟು ಹೊಸ ಟ್ರೆಂಡ್ ಆಗಿರುವ ಇಕ್ಕಟ್ಟಿನ ರೀತಿಯಲ್ಲಿ ಬಟ್ಟೆಗಳನ್ನು ಹೊಲಿದುಕೊಡುವೆನೆಂದ‌ ಮಾತಿಗೆ ನಾನೂ ಹ್ಞೂಂಗುಟ್ಟಿದೆ. ಮೊಟ್ಟಮೊದಲ ಬಾರಿಗೆ ನನ್ನ ಕೃಶ ದೇಹದ ಹಿರಿಮೆ ಸಾರುವ ರೀತಿ ಮೈಗಂಟಿದಂತೆ, ಒಂದಿಂಚೂ ಆಚೀಚೆ ಸಡಿಲವಾಗದಂತೆ ನಿಖರವಾದ  ಅಳತೆಯಿಟ್ಟು ಹೊಲಿದ ದರ್ಜಿಯ ಕೈಗಳಿಗೆ ಅಂದು ನಮಿಸಿದ ನೆನಪು! ಅರ್ಜುನನಿಗೆ ಯುದ್ಧದ ದಿರಿಸನ್ನು ತೊಡಿಸಿ ಬಿಗಿದು ಕಟ್ಟಿದಂತಾಗಿತ್ತು ಸಮರಕಲೆಗೆ ಸಿದ್ಧಪಡಿಸಿ. ಅರ್ಜುನನ ದಿರಿಸೆಂದ ಮೇಲೆ ಕೇಳಬೇಕೆ ? ಮೈಯ್ಯೆಲ್ಲೆಲ್ಲಾ ಪುಳಕ, ನವಚೈತನ್ಯದ ನೆವಕ. ನವದಿರಿಸು ತೊಟ್ಟು ಹೊರಟು ನಿಂತೆ ಯುದ್ಧೋತ್ಸಾಹದಿಂದ ಸಂಬಂಧಿಕರ ಮದುವೆಗೆ. ಸಂಬಂಧಿಗಳಿಗೆಲ್ಲಾ ಆಶ್ಚರ್ಯವೋ ಆಶ್ಚರ್ಯ. ಇಬ್ಬರು ತೊಡುವ ಬಟ್ಟೆಯನ್ನುಟ್ಟು ಬೆದರುಗೊಂಬೆಯಂತಿರುತ್ತಿದ್ದವನ ಅರ್ಜುನನಂತಹ ಬಿಗಿದಿರಿಸು ತೊಟ್ಟು ಕಾರ್ಟೂನಿನ ಗೊಂಬೆಯಂತಾಗಿದ್ದ  ಹೊಸ ಅವತಾರ ಕಂಡು ಬೆಚ್ಚಿಬಿದ್ದವರೇ ಬಹಳ ಜನ. ಮದುವೆ ಮನೆಯಲ್ಲಿ ನೆರೆದಿದ್ದ ಜನರೆಲ್ಲಾ ಬಹಳ ವಿಚಿತ್ರವಾಗಿ ನೋಡಹತ್ತಿದರು.  ಪ್ರಾರಂಭದಲ್ಲಿ ಹೇಗೋ ಹೊಸ ಟ್ರೆಂಡ್ ಎಂದು ಸಮಾಧಾನ ಪಟ್ಟುಕೊಂಡು ಬೀಗುತ್ತಿದ್ದೆ. ಗಂಟೆಗಳೆರಡು ಉರುಳಿದವು‌." ಮೊದಲು ಈ ಬಟ್ಟೆಗಳನ್ನು ಕಳಚಿ ಬನ್ನಿ ನಿಮ್ಮ ಆರರ ಜೊತೆಗೆ ಮತ್ತೊಂದಾರು ಸೇರಿ ಡಜನ್ ಮೂಳೆಯ ಪ್ಯಾಕುಗಳೆಲ್ಲಾ ಕ್ಷಕಿರಣದ ಚಿತ್ರದ ಮೂಲಕ ಸ್ಪಷ್ಟವಾಗಿ ಕಾಣುತ್ತಿರುವಂತಿದೆ" ಎಂದು ಯಾರೋ ಬಂದು ಕಿವಿಯಲ್ಲುಸುರಿದಂತಾಯಿತು. ಅಲ್ಲಿಯವರೆಗೆ ತಲೆಯೆತ್ತಿ ಸುಂದರವಾದ ವೇಷಭೂಷಣವೆಂದು ನನ್ನಷ್ಟಕ್ಕೆ ನಾನೇ ತಲೆಯೆತ್ತಿ ಬೀಗುತ್ತಿದ್ದವನೀಗ ತಲೆಬಾಗಿ ತಪ್ಪಿಸಿಕೊಳ್ಳಲಾರಂಭಿಸಿದೆ‌. ಆಗ ಗೊತ್ತಾಗಿತ್ತು ಆ ನವರಂಗಿ ಅಂಗಿಯ ನಿಜವಾದ  ಕರಾಮತ್ತು!. ಹೇಗೋ ತಾಳಿಕೊಂಡು, ಬೇಡವೆಂದರೂ ಎದುರಾಗುವ ಗಿಜಿಗಿಡುವ ಜನರ ವಕ್ರದೃಷ್ಟಿಗೆ ಹೆದರಿ, ಅಳಿದುಳಿದ ಮಾನ ಮುಚ್ಚಿಕೊಂಡು ಓಡಾಡಲಾರಂಭಿಸಿದ ನನಗೆ ಉತ್ತರಕುಮಾರನ ದುಸ್ಥಿತಿ ಬಂದೊದಗಿದಂತಾಯಿತು. ಆವಾಹನೆಯಾಗಿದ್ದ ಅರ್ಜುನನ ಪಾತ್ರ ತೊರೆದು ಉತ್ತರಕುಮಾರನಾಗಬೇಕಾದ ದಾರುಣ ಸ್ಥಿತಿ ಬಂದೆರಗಿತು.  ಮನೆಯವರೆಲ್ಲರೂ "ಇದೇನು ಮಹಾ! ಇದಕ್ಕಿಂತಲೂ ವಿಚಿತ್ರ ಆಧುನಿಕ ದಿರಿಸುಗಳಿವೆ. ಅನ್ನ ಆಗುವವರೆಗೂ ನಿಂತಿರುವೆ‌. ಆರುವವರೆಗೂ ನಿಲ್ಲಲಾರೆಯಾ ಇನ್ನೇನು ಅಕ್ಷತೆ ಹಾಕಿ ತೆರಳಿಬಿಡು, ತಾಳು ನಡೆ " ಎಂದು ಸಮಾಧಾನ ಮಾಡಿ ಸಮಜಾಯಿಷಿ ಕೊಟ್ಟು ತಡೆದು ನಿಲ್ಲಿಸಲು ಪ್ರಯತ್ನಿಸಿದರೂ, ನಿಲ್ಲುವ ಮನಸಿಲ್ಲದೇ ಒಲ್ಲದ ಯುದ್ಧಕ್ಕೇಕೆ ಹೋಗಬೇಕೆಂದುಕೊಂಡು ಕೊಸರಿಕೊಳ್ಳಲಾರಂಭಿಸಿದೆ. ವೀರಾವೇಶದ ಶಸ್ತ್ರಾಸ್ತ್ರ ತೊಟ್ಟ ಅರ್ಜುನನಂತೆ ಮಂಗಲಭವನಕ್ಕೆ ಪ್ರವೇಶಿಸಿದ್ದ ನಾನು ಹೊರಹೋಗಬೇಕಾದರೆ ಉತ್ತರಕುಮಾರನಾಗಿ ಶಸ್ತ್ರಾಸ್ತ್ರಗಳನ್ನೆಲ್ಲಾ ರಂಗದಲ್ಲಿಯೇ ಬಿಟ್ಟು  ಬಂದವನಾಗಿದ್ದೆ. ಹೇಗೋ ಒದ್ದಾಡಿ ಮದುವೆ ಮುಗಿಸಿ ಬಂದ ನೆನಪುಗಳಿನ್ನೂ ಹಸಿರಾಗಿವೆ‌. ಹ್ಞಾಂ! ಇದಿಷ್ಟು ಸಾಕಿ ಕೈಗಿತ್ತ ಅಂಗೀಪುರಾಣ. ಈಗ ವರ್ತಮಾನಕ್ಕೆ ಬರೋಣ.  ಆ ಅಂಗಿ ಆರು ವರ್ಷಗಳ ಸೇವೆ ಸಲ್ಲಿಸಿ ಹಳೆಯದಾಗಿದ್ದರೂ ತನ್ನ ಮೂಲ ಹೊಳಪನ್ನಿನ್ನೂ ಬಿಟ್ಟುಕೊಟ್ಟಿಲ್ಲದಿರುವುದು ಈಗಲೂ ನನ್ನನ್ನು ಬಹುವಾಗಿ ಸೆಳೆಯುತ್ತದೆ. ಅದು ಮದುವೆ- ಮುಂಜಿ, ಮೆರವಣಿಗೆ,  ಕಿರಿಕಿರಿಸಭೆ ಸಮಾರಂಭಗಳಲ್ಲೆಲ್ಲಾ ಮಿಂಚಿ‌ ಆಯಾಸಗೊಂಡು ಕೊಳೆಯನ್ನಂಟಿಸಿಕೊಂಡು ಮಂಕಾದಾಗಲೆಲ್ಲಾ ನಡೆಯುವ ವೈವಿಧ್ಯಮಯ ರಾಸಾಯನಿಕ ಮಾರ್ಜಕಗಳ ಮಜ್ಜನದಲ್ಲಿ ಮಿಂದರೂ ತಾನು ಜಗ್ಗುವುದಿಲ್ಲ ಯಾರಿಗೂ ಬಗ್ಗುವುದಿಲ್ಲ ಎಂಬಂತೆ ಹಠವಿಡಿದು ತನ್ನ ಚರ್ಯೆಯನ್ನು ನಟಿಯಂತೆ ಕಾಪಿಟ್ಟುಕೊಂಡು ಬಂದಿರುವುದು ನನಗೆ ವಿಸ್ಮಯವನ್ನುಂಟು ಮಾಡಿದೆ.
ನನ್ನ ಎಷ್ಟೋ ಸ್ಪನ್ ಅಂಗಿಗಳೆಲ್ಲಾ ಅದರ ಮುಂದೆ ಮಕಾಡೆ ಮಲಗಿ ಮೈ ಹರಿದುಕೊಂಡು ಲ್ಯಾವಿ ಗಂಟು ಸೇರಿವೆ. ಪಾಪ! ಅವುಗಳದೇನೂ ತಪ್ಪಿಲ್ಲ . ರೈತ ಬೆಳೆದ ಹತ್ತಿಯ ನೂಲಿನೆಳೆಗಳೆಗಳಿಗಿರುವ ಶಕ್ತಿಯೇ ಅಷ್ಟು! ಹಾಗೆಂದು ಅದರ ಮಹಿಮೆಯನ್ನು ಅಲ್ಲಗಳೆಯಲಾದೀತೆ ? ಖಂಡಿತಾ ಇಲ್ಲ. ಹತ್ತಿಬಟ್ಟೆ ಇತರೆ ಬಟ್ಟೆಗಳಂತೆ ತೊಟ್ಟವರ ಮೈಗೆ ಅಲರ್ಜಿಯನ್ನಾಗಲಿ ಕಿರಿಕಿರಿಯನ್ನಾಗಲಿ ಅಸಹನೆಯನ್ನಾಗಲಿ ಉಂಟುಮಾಡುವುದಿಲ್ಲ.  ಧರಿಸಿದವರ ಒಡಲಿಗೆ ಒಳಬರುವ ತಾಜಾ ತಂಗಾಳಿ , ಹೊರಹೋಗುವ ದೇಹದ ಬಿಸಿಯನ್ನೊಳಗೊಂಡ ಜೊಳ್ಳು ಗಾಳಿಗಳನ್ನು ನಿಯಂತ್ರಿಸಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುವ ಅತ್ಯದ್ಭುತ ವಾತಾನುಕೂಲಿ ವ್ಯವಸ್ಥೆಯನ್ನೊದಗಿಸುವ ಈ ಖಾದಿಬಟ್ಟೆಯೇ ಶಾಶ್ವತ ಪರಮಸುಖದ ಮಾರ್ಗ. ಮೈಮೇಲೆ ಇರುವಷ್ಟು ದಿನ ವಾತಾನುಕೂಲಿಯಾಗಿ ಒಡಲಿನೊಂದಿಗೆ ಮನಸ್ಸನ್ನೂ ಬೆಚ್ಚಗಿಡುವ ಅದರ ಸತ್ಯಶುದ್ಧ ಕಾಯಕವನ್ನು ಮರೆಯಲಾದೀತೆ?  ಆದರೆ ವೈವಿಧ್ಯಮಯ ಮೈಬಣ್ಣಗಳನ್ನಂಟಿಸಿಕೊಂಡು ಒಯ್ಯಾರದ ಕೃತಕ ಅಲಂಕಾರಗಳಿಂದ  ಶೃಂಗಾರಗೊಂಡು ಪ್ರತಿಷ್ಠಿತ ನಗರಗಳ ಕೆಂಪುಹಾಸಿನ ವೇದಿಕೆಯ ಮೇಲೆ ಬೆಕ್ಕಿನ ನಡಿಗೆ ಮಾಡಿ ಜನಮರುಳು ಮಾಡುವ ಪಾಲಿಯೆಸ್ಟರ್ ಎಳೆಗಳ ಮುಂದೆ, ಯಾರ ಪ್ರೋತ್ಸಾಹವಿಲ್ಲದೇ ಸರಕಾರದ ಅರೆಕಾಸಿನ ಮಜ್ಜಿಗೆಯನ್ನು ಕುಡಿದು ಗ್ರಾಮ್ಯ ಸಹಜ ಶ್ವೇತ ಸುಂದರಿಯಾಗಿ ಬೆಳಗುತ್ತಿರುವ ನೂಲಿನೆಳೆಗಳು ಸ್ಪರ್ಧಿಸಲಾರದೇ  ನಲುಗುತ್ತಿರುವುದಂತೂ ಸುಳ್ಳಲ್ಲ. ಚರಕಗಳು ನವಯುಗದ ಕಾರ್ಖಾನೆಯ ಯಂತ್ರಗಳೊಂದಿಗೆ ಸ್ಪರ್ಧಿಸಲಾಗದೇ ಮೂಲೆ ಸೇರುತ್ತಿರುವುದು ವಿಷಾದನೀಯ. ವೇಗದ ಓಟಕ್ಕೆ ವಿದ್ಯುತ್ ಮಗ್ಗಗಳ ಶಕ್ತಿಯೂ ಸಾಲುತ್ತಿಲ್ಲ! ಗಾಂಧೀಜಿಯವರ ಗ್ರಾಮೀಣ ಭಾರತದ ಕನಸಿಗೆ ಹೊದಿಕೆಯಾಗಿ ಬೆಚ್ಚನೆಯ ಮೂಲಶಿಕ್ಷಣದ ಪ್ರತಿಪಾದನೆಗೆ ಆಸರೆಯನ್ನೊದಗಿಸಿದ ಯೋಗವೆಂದರೆ ಖಾದಿ. ನೆಲಮೂಲ ಸಂಸ್ಕೃತಿಯ ಸೊಗಡಿನ ಕಥೆಗಾರರಾದ ಡಾ. ಸಂಗಮನಾಥ ಲೋಕಾಪುರ ರವರು "ಗಾಂಧಿ ಭಾರತ ಕನಸು" ಎಂಬ ತಮ್ಮ ಕಥಾಸಂಕಲನದಲ್ಲಿನ ' ಗಾಂಧೀಗಿಡ' ಕಥೆಯಲ್ಲಿ ತರುವ ತಂಪೂರು ಹೆಸರಿನ ಗ್ರಾಮವೂ ಕೂಡ ಖಾದಿಯನ್ನೇ ಉಟ್ಟು , ಖಾದಿಯನ್ನೇ ಹೊದ್ದುಕೊಂಡು, ಗಾಂಧೀಜಿಯವರ ತತ್ವಾದರ್ಶಗಳ ಪ್ರತಿಮೆಯಾಗಿದ್ದ ಗಾಂಧೀಗಿಡವನ್ನು ನೆಟ್ಟು ಪೋಷಿಸಿರುವುದನ್ನು ಕಾಣುತ್ತೇವೆ. ಎಂದರೆ ಗ್ರಾಮಸ್ವರಾಜ್ಯಕ್ಕೊಂದು ಮುನ್ನುಡಿಯಂತಿದ್ದ ಖಾದಿಯನ್ನು , ಖಾದಿ ಕೇಂದ್ರಗಳನ್ನು ಇಂದಿಗೂ ಕೆಲವು ಹಳ್ಳಿಗಳು ಅನ್ನಾಹಾರ ನೀಡಿ ಪೋಷಿಸುತ್ತಾ ಬಂದಿವೆ ಎಂಬುದೇ ಸಮಾಧಾನದ ಸಂಗತಿ. ಅರೆ! ಎಲ್ಲೆಲ್ಲೋ ಕರೆದೊಯ್ದೆ ಕ್ಷಮಿಸಿ. ಅಂಗಿಪುರಾಣದ ಮಹಿಮೆಯೇನೋ ಗೊತ್ತಿಲ್ಲ ನನ್ನ ಬರಹದ ಹಾದಿಯನ್ನೇ ತಪ್ಪಿಸುತ್ತಿದೆ. ಮನ ಕದಡುವ ಆಧುನಿಕ ಗಾಳಿಯ ಪ್ರತೀಕದಂತಿರುವ ನನ್ನ ಆ ಪಾಲಿಯೆಸ್ಟರ್ ಅಂಗಿಯ ಕೈವಾಡವಿರಬೇಕು ಇದರಲ್ಲಿ. ಇರಲಿ. ಸಾಕಿಯೆಡೆಗೆ ಬರೋಣ. ಇನ್ನೂ ಸಹಜ ಸೌಂದರ್ಯದಲ್ಲಿ ಮೆರೆಯುತ್ತಿರುವ ಆ ಅಂಗಿಯನ್ನು ಮೂಲೆಗೆಸೆಯುವುದೆಂದರೆ ಸಂಕಟವಾಯಿತು. ಈಗ ಆ ಅಂಗಿ ತನ್ನ ಗಾತ್ರವನ್ನು ಹಿಗ್ಗಿಸಿಕೊಂಡಿದೆಯೋ ಅಥವಾ ನನ್ನ ಶರೀರವೇ ಗಾತ್ರವನ್ನು ಕುಗ್ಗಿಸಿಕೊಂಡಿದೆಯೋ ಗೊತ್ತಿಲ್ಲ ಈಗ ಹಾಕಿಕೊಂಡು ನೋಡಿದರೆ ಸರಿಯಾಗಿ ಹೊಂದಿಕೆಯಾಗುವಂತಿತ್ತು ಆದರೆ ಷರತ್ತುಗಳು ಅನ್ವಯವಾಗುತ್ತಿದ್ದವು.  ಆ ಅಂಗಿಯನ್ನು ಎಸೆಯಲೊಲ್ಲದೇ ಹೇಗೋ ಧರಿಸಿದರಾಯಿತೆಂದುಕೊಂಡು ಮೈಮೇಲೆಳೆದುಕೊಂಡರೆ ೩೦ ವರ್ಷದ ತರುಣನಿಗೆ ಬೆಡಗಿನಿಂದ ತೊಡಿಸಿದಂತೆ ಗಿಡ್ಡವಾಯಿತು!  ಎಸೆಯಬೇಕೆಂದರೆ ಮನಸ್ಸಿಲ್ಲದ,  ತೊಡಲು ಹೊಂದಾಣಿಕೆಯಾಗದ ಅಂಗಿಯ ಈ ದ್ವೈತಗಳ ತೊಳಲಾಟದಲ್ಲಿ ಲೀನವಾದೆ‌. ತನ್ನ ಸಹಜ ಸೌಂದರ್ಯದ ಬಲೆಯಂತಿರುವ ಗೆರೆಗಳ ಗಣಿತಬದ್ದ ವಿನ್ಯಾಸದ ಅದರ ಸೆಳೆತದಿಂದ ನನಗೆ ತಪ್ಪಿಸಿಕೊಳ್ಳಲಾಗಲಿಲ್ಲ. ಕೊನೆಗೆ ಏನಾದರಾಗಲಿ ಧರಿಸಿಯೇ ತೀರೋಣವೆಂದು ತೊಟ್ಟುಕೊಂಡು,  ಸರಳ ಉಪಾಯವೊಂದನ್ನು ಹೂಡಿದೆ.  ಹತ್ತು ವರ್ಷಗಳ ಹಳೆಯ ಟ್ರೆಂಡಿನ ಅಂಗಿಯೊಂದನ್ನು, ವರ್ತಮಾನದ ಹೊಸ ಪ್ರವರಕ್ಕೆ ಹೊಂದಿಸಬೇಕಾದ ಅನಿವಾರ್ಯತೆ ಎದುರಾಯಿತು.
ಅಧ್ಯಾಪಕರಿಗೆ ಹೊಂದುವ ಸರಳ ಉಪಾಯವೊಂದನ್ನು ಹೂಡಿ ಗಿಡ್ಡ ಒಡಲಿನ ಕಿರಿ ಅಂಗಿಯನ್ನು ಪ್ಯಾಂಟಿನ ಒಳಗೆ ತೂರಿ Inshirt ಮಾಡಿ ಹಾತೊರೆದು ಕರೆಯುತ್ತಿರುವ ಕನ್ನಡಿಯ ಮುಂದೆ ನಿಂತೆ. ಅಚ್ಚರಿಯ ಜೊತೆಗೆ ಭಯವೂ ಆಯಿತು. ಮೂವತ್ತರ ಆಸುಪಾಸಿನಲ್ಲಿದ್ದ ನನಗಂದು ಮೈಗೆ ಹಾಳೆಯನ್ನಂಟಿಸಿಕೊಂಡಂತೆ ಮೆತ್ತಿಕೊಳ್ಳುತ್ತಿದ್ದ ಅಂಗಿಯೀಗ ಕೃಶವಾದ  ದೇಹಕ್ಕೆ ಹೇಳಿಮಾಡಿಸಿದಂತಹ ರೂಪರಚನೆಯನ್ನು ಹೊಂದಿದೆಯಲ್ಲ ಎನ್ನುವಂತೆ‌ ನನ್ನೊಡಲಿಗೆ ಅಂಟಿಕೊಂಡು ಅದ್ಭುತವಾಗಿ ಹೊಂದಿಕೆಯಾಗಿ ಅದೇ ಹಳೆಯ ಬೆಚ್ಚನೆಯ  ಭಾವಗಳಿಂದ ಅಪ್ಪುಗೆಯನ್ನು ನೀಡಿ ಕಿಲಕಿಲನೆ ನಕ್ಕಂತಾಯಿತು.  ಅಚ್ಚರಿಗೊಂಡೆ. ಅರ್ಧಾಂಗಿಯ ಅಲಂಕಾರ ಹೊಯ್ದಾಡುವ ದ್ವಂದ್ವಕ್ಕೊಂದು ಪರಿಹಾರವನ್ನೊದಗಿಸಿತ್ತು. ಕರ್ತವ್ಯದಲ್ಲಿದ್ದಾಗ ಆಕಸ್ಮಾತ್ ಏನಾದರೂ 
Inshirt ನ್ನು ಹೊರತೆಗೆಯಬೇಕಾದ ಪ್ರಸಂಗ ಎದುರಾದರೆ ಏನು ಮಾಡುವುದು ಎಂಬ ಭಯ ಸಂತಸದೊಂದಿಗೆ ಏಕಕಾಲದಲ್ಲಿಯೇ ಅವರಿಸಿತು. ಅದುವರೆಗೂ ಕ್ವಚಿತ್ತಾಗಿ ಅರ್ಧಾಂಗಿಯ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನು, ಈಗ ಈ ಹಳೆಯಂಗಿಯ ಕಾರಣದಿಂದಾಗಿ  ಕಂಗೊಳಿಸುತ್ತಾ ನಲಿಯುತ್ತಿದ್ದ ಕನ್ನಡಿಯಲ್ಲಿದ್ದ ನನ್ನ ಪ್ರತಿಬಿಂಬದೆಡೆಗೆ ಒಮ್ಮೆ ದಿಟ್ಟಿ ಹಾಯಿಸಿದೆ. ಪಾಪ! ಎನ್ನುವಂತೆ  ತಕ್ಷಣ ಗೀಚಿದಂತಾಗಿ ದುಃಖವನ್ನು ವ್ಯಕ್ತಪಡಿಸಿತು ದರ್ಪಣ. Inshirt ನ ಬಗ್ಗೆ ಆಸಕ್ತಿಯಿಲ್ಲದ ನನಗೆ ಮೊದಲೇ ಆತಂಕವಿರುವಾಗ Inshirt ಮಾಡಿದ ಮೇಲೆ ಬಂದೆರಗಬಹುದಾದ ಈ ಸಂಕಟ ನೆನೆದು ಕಳವಳಗೊಂಡೆ. ಮನಸು ಮುದುಡಿತಾದರೂ ಆದದ್ದಾಗಲಿ ಇಂದು ಯಾವ ಕಾರಣಕ್ಕೂ, ಯಾರು ಏನು ಹೇಳಿದರೂ iಟಿ shiಡಿಣ ಮಾತ್ರ ತೆಗೆಯುವಂತಿಲ್ಲ ಎಂದು ದರ್ಪಣದಲ್ಲಿನ ನನ್ನ ಪ್ರತಿರೂಪದ ಮನಸ್ಸಿಗೆ ಷರತ್ತನ್ನು ವಿಧಿಸಿಕೊಂಡು ಕರ್ತವ್ಯಕ್ಕೆ ಹೊರಟೆ. ವರ್ಷಕ್ಕೆರಡು ಮೂರು ಸಲ ಈ ರೀತಿಯ ಅರ್ಧಾಂಗಿ ವೇಷದಲ್ಲಿ ಬರುತ್ತಿದ್ದ ನನ್ನ ಅಂದಿನ ಅವತಾರವನ್ನು ಕಂಡು ಗೆಳೆಯರು ಹಾಗೂ ವಿದ್ಯಾರ್ಥಿಗಳೆಲ್ಲಾ ಕೌತುಕದಿಂದ ಗಮನಿಸುತ್ತಿದ್ದರೆಂಬುದು ಅವರ ಹಾವಾಭಾವ, ದೇಹಭಾಷೆಯಿಂದ ಅರ್ಥವಾಗುತ್ತಿತ್ತು. ತರಗತಿಯೊಳಗೆ ಹೋದಾಗಲೂ ವಿದ್ಯಾರ್ಥಿಗಳು ನನ್ನ  ಅಪರಾವತಾರದ ಬಗ್ಗೆಯೇ ಗುಣುಗುಣುಗುಟ್ಟಲಾರಂಭಿಸಿದ್ದು ವಿಶೇಷವಾಗಿತ್ತು. ಸಹೋದ್ಯೋಗಿ ಗೆಳೆಯ ಪ್ರಾಧ್ಯಾಪಕರೊಬ್ಬರಂತೂ  " ತುಂಬಾ ಸುಂದರವಾಗಿದೆ ತಮ್ಮ ಈ ಅರ್ಧಾಂಗಿಯ ದಿರಿಸಿನ ಕೆಮಿಸ್ಟ್ರಿ" ಎಂದುಬಿಟ್ಟರು. ಹೆಲಿಕಾಪ್ಟರ್ ಹತ್ತಿಸುತ್ತಿದ್ದಾರೇನೋ ಎಂದುಕೊಂಡು ವಾಶ್ ರೂಮಿಗೆ ಹೋಗಿ ಅಲ್ಲಿರುವ ಹೊಸ ಕನ್ನಡಿಯೊಳಗೆ ಮತ್ತೊಮ್ಮೆ   ಇಣುಕಿದೆ. ಇನ್ನೂ ಅಂಥದ್ದೇನೂ ಸಂಭವಿಸಿರಲಿಲ್ಲ, ಸಮಾಧಾನವಾಯಿತು. ಇಡೀ ದಿನ ದೇಹದ ಎರಡುನೂರಾ ಆರು ಮೂಳೆಗಳು ಹಾಗೂ ದೇಹದೊಳಗೆ ಕೋಟಿಗಟ್ಟಲೇ ಆವರಿಸಿಕೊಂಡಿರುವ ನ್ಯೂರಾನುಗಳ ಮೇಲೆ ಭದ್ರವಾದ  ಬಿಗಿಹಿಡಿತವನು ಹೊಂದಿಯೇ ಅಲುಗಾಡುತ್ತಿದ್ದೆ ಹೃದಯವೊಂದನ್ನು ಬಿಟ್ಟು. ಅದೃಷ್ಟವಶಾತ್ ಅಂದು ಕಾಲೇಜಿನಲ್ಲಿ ನಾನು Inshirt  ತೆಗೆಯುವ ಯಾವ ಪ್ರಸಂಗಗಳೂ ಜರುಗಲಿಲ್ಲವೆಂಬುದೇ ಹರ್ಷೊಲ್ಲಾಸದ ಸಂಗತಿ. ಮಹಾವಿದ್ಯಾಲಯದಲ್ಲೆಲ್ಲಾ ಅಂದು ಅಳುಕಿನಿಂದಲೇ ಓಡಾಡಿಕೊಂಡಿದ್ದ ನಾನು ಯಾವಾಗ ಸಂಜೆಯಾದೀತೋ ಎಂದು ಕಾಯುತ್ತಿದ್ದೆ. ನೇಸರ ಪಶ್ಚಿಮಾಭಿಮುಖವಾಗಿ ಮನೆಗೆ ಹೊರಟರೆ, ನಾನು ಪೂರ್ವಾಭಿಮುಖವಾಗಿ ಹೊರಟೆ. ಮನೆಗೆ ಬಂದವನೇ ನಿಟ್ಟುಸಿರುಬಿಟ್ಟೆ. ಶರೀರವೂ ಉಸಿರಾಡಲಾರಂಭಿಸಿತು. ಹೃದಯವೂ ಸಾಕಪ್ಪಾ ಸಾಕು ನಿನ್ನ ಹಳೆಯಂಗಿ ಸುಂದರಿಯ ಪ್ರಣಯದ ಸಹವಾಸ ಎಂದೊಮ್ಮೆ ಮೈಮುರಿಯಿತು.ಒಂದಿನಿತೂ ಬಿಡದಂತೆ ತಬ್ಬಿಕೊಂಡು ಹಳೆಯ ನೆನಪುಗಳಿಗೆ ಮರುಜೀವ ನೀಡಿದ  ಅರ್ಧಾಂಗಿಯನ್ನು ಕಳಚಿ ದೀರ್ಘವಾದ ಪ್ರಾಣಾಯಮ ಮಾಡಿದೆ. ಅಬ್ಬಾ ! ಎಂತಹ ಸವಾಲಿನ ಸಂದಿಗ್ಧತೆಯಿದು ಎಂದು ಮತ್ತೊಮ್ಮೆ ಉಸಿರು ಹೊರಹಾಕಿದೆ.  ಸೌಂದರ್ಯಕ್ಕೆ ಮರುಳಾಗಿ ಹಳೆಯಂಗಿಯನ್ನು ಹೊಸತಾಗಿ ತೊಟ್ಟ ಸಂಭ್ರಮ ಒಂದೆಡೆಯಾದರೆ, ಆಕಸ್ಮಾತ್ ಏನಾದರೂ ಅಂಗಿಯನ್ನು Inshirt  ತೆಗೆಯುವ ಪ್ರಸಂಗ ಬಂದೊದಗಿದ್ದರೆ  ಮಾನದ ಗತಿಯೇನಾಗುತ್ತಿತ್ತೋ ಎಂಬ ಭಯ ಇನ್ನೊಂದೆಡೆಗೆ ಉಂಟಾಗಿತ್ತು. ಗಿಡ್ಡ ಅಂಗಿಗೆ ಹೋದ ಮಾನ ಉದ್ದನೆಯ ನಿಲುವಂಗಿ ಧರಿಸಿದರೂ ಬರದು. ಅಲ್ಲವೇ ? ಭಲೇ ಅರ್ಜುನ ! ಕುರುಕ್ಷೇತ್ರದಲ್ಲಿ  ವೀರಾವೇಶದಿಂದ ಹೋರಾಡಿ ವಿಜಯಿಯಾಗಿ ಬಂದವನಂತೆ, ದಿನದ ಸವಾಲುಗಳನ್ನೆದುರಿಸಿ ಮಾನ ಉಳಿಸಿಕೊಂಡು ಬಂದ ಸಂಭ್ರಮ ನನ್ನದಾಯಿತಲ್ಲ ಎಂದು ನನಗೆ ನಾನೇ ಬೆನ್ನುತಟ್ಟಿಕೊಂಡೆ‌! ಬೆಳಿಗ್ಗೆ ಹೋಗುವಾಗ ಗೀಚಿದಂತಹ ಪ್ರತಿರೂಪ ತೋರಿಸಿ ಅಣುಕಿಸಿದ್ದ ಕನ್ನಡಿ ಈಗ ಮರಳಿ ಹೊಳೆದು ಕಿಲಕಿಲನೆ ನಗಲಾರಂಭಿಸಿತು. ನನ್ನ ಈ ಅರ್ಧಾಂಗಿ ಪ್ರಣಯ ಪ್ರಸಂಗ ನೆನೆಸಿಕೊಂಡರೆ .ಎಸ್. ಸುಂಕಾಪುರರವರ "ಮಾವ ಕೊಡಿಸಿದ ಕೋಟು" ಎಂಬ ಪ್ರಬಂಧ ನನಗೆ ನೆನಪಾಗುತ್ತದೆ. ಕೋಟು ಹಳೆಯದಾಗಿ ನೂರಾರು ಬಾಗಿಲು ಕಿಡಕಿಗಳನ್ನು ತೆರೆದಿಟ್ಟುಕೊಂಡು ಇಣುಕುತ್ತಿದ್ದರೂ ಬೇಸರವಾಗದ ನಿರೂಪಕರು ಹೆಂಡತಿಗಿಂತ ಹೆಚ್ಚಿನ ಪ್ರೀತಿಯನ್ನು ಕೋಟಿನ ಮೇಲೆ ತೋರಿರುವುದನ್ನು ಗಮನಿಸಿದರೆ, ಹಳೆಯಂಗಿಗಳು  ಕಾಡುವ ಬಗೆಯನ್ನು ಅರ್ಥೈಸಿಕೊಳ್ಳಬಹುದು. ಅಂಗಿ ಕೆಲವರಿಗೆ ನೂಲಿನೆಳೆಗಳ ಭೌತಿಕ ವಸ್ತುವಾದರೆ, ಹಲವರಿಗೆ ಸಂತೋಷ, ಶಾಂತಿ, ಸುಖ, ಜೀವ, ಭಾವಗಳು ತುಂಬಿದ ವ್ಯಕ್ತಿತ್ವದ ಪ್ರತೀಕ. ಬಹುಶಃ ಈ ಭಾವನಾತ್ಮಕ ಸಂಬಂಧವೇ ನಾನು ಈ ಹಳೆಯಂಗಿಯನ್ನು ಮತ್ತೆ ಧರಿಸುವಂತೆ ಪ್ರೇರೇಪಿಸಿರಬಹುದು. ಇಂತಹುದೇ ಒಂದು ಅಂಗಿಯ ಮೇಲಿನ ನನ್ನ ತಂದೆಯ ಪ್ರೀತಿ ಹೇಗಿತ್ತು ಎಂದರೆ ಧರಿಸಿದಾಗ ಅದರ ಕಾಲರ್ ಪಟ್ಟಿಯು ಬೆವರಿನಿಂದ ಕೊಳೆಯಾಗದಂತೆ, ಕರವಸ್ತ್ರವನ್ನು ಕುತ್ತಿಗೆಯ ಹಿಂದೆ ಹಾಕಿಕೊಂಡು, ಇಸ್ತ್ರೀ ಮಾಡಿದ ಮಡಿಕೆಗಳು ಒಂದಿನಿತೂ ಹಾಳಾಗದಂತೆ ಎಚ್ಚರಿಕೆಯಿಂದ ಓಡಾಡುತ್ತಿದ್ದುದ್ದನ್ನು  ಕಂಡು ಅಚ್ಚರಿಪಟ್ಟಿದ್ದಿದೆ‌. ಹೀಗೆ ಅಂಗಿಯ ಮೇಲಿನ ವ್ಯಾಮೋಹ ಯಾವ ಮನುಷ್ಯ ಜೀವಿಯನ್ನೂ ಕಾಡದಿರಲಾರದು. ಅಂಗಿ ಹಲವರಿಗೆ ಮಾನದ ಪ್ರಶ್ನೆಯಾದರೆ, ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆ.




7 comments:

  1. Super,ಓದಲು ಮಜವಾಗಿದೆ..

    ReplyDelete
  2. ಚನ್ನಾಗಿದೆ ಸರ್

    ReplyDelete
  3. ಓದುತ್ತ ಹೋದಂತೆ..... ಸಮಾಂತರವಾದ, ಅಂದಿನಿಂದ ಇಂದಿಗೂ ಹಳೆಯದಾದರೂ ಬಿಡಲೊಪ್ಪದ ಬಟ್ಟೆಗಳ ಭಾವನೆಗಳು, ನೆನಪುಗಳು ಗರಿಬಿಚ್ಚುತ್ತ ಹೋದವು.... ತುಂಬಾ ಖುಶಿ ಒದಗಿಸಿದ ಪ್ರಬಂಧ....

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...