Total Pageviews

Saturday 10 February 2018

ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ......

ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ........
                                                                  (ಮುಂದುವರಿದ ಭಾಗ)

                           'ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎಂಬ  'ಜೇಡರ ದಾಸಿಮಯ್ಯ' ರ ವಚನದಂತೆ
                                   " ಗಂಡ ಹೂಡ್ಯಾನ ಗಾಡಿ
                                    ಕುಂತೇವ ಅದರಾಗ ಕೂಡಿ
                      ಹೊಲ್ದಾಗ ಹೋಗಿ ದಗದಾ ನಾವು ಮಾಡತೇವ ಜೋಡಿ "
                                                   ( 'ನನ್ನ ಗಂಡನ ಪ್ರೀತಿ 'ಕವಿತೆಯಿಂದ)
                 ಎಂದು ಬಿದರಿಯವರು ಕಾಯಕದ ಕೈಲಾಸದಲ್ಲಿ ದಾಂಪತ್ಯಪ್ರೇಮದ ಅನಂತ ಗೀತೆಯನ್ನು ಹಾಡುತ್ತಾರೆ.
                                "ಮಾತಿನೊಳಗಿನ ಬಂಬಾಟ
                                   ಬದುಕಿನೊಳಗ ಒದ್ದಾಟ
                                   ಬಾಳೇದಾಗಿನ ಗುದ್ದಾಟ"
                                                               (ತೊಗಲ ಗೊಂಬಿ)
                ಎಂದು ಬದುಕಿನ ಭವಸಾಗರದಲ್ಲಿ ಅನಿರೀಕ್ಷಿತ ಅತಿಥಿಗಳಂತೆ  ಬಂದಪ್ಪಳಿಸುವ ಸುಖ ದು:ಖ ಗಳ ಏರಿಳಿತಗಳೊಂದಿಗಿನ ಕಾದಾಟದ  ಜೀವನ ಪಾಠ ವನ್ನು ಹೇಳಿಕೊಡುವ ಇವರ ಕವಿತೆಗಳು ಸಾಮಾಜಿಕರ  ಬದುಕಿಗೆ ಆತ್ಮವಿಶ್ವಾಸವನ್ನು ತುಂಬುತ್ತವೆ.

                       "ಈಗೀಗ ಹೊಳುತೈತಿ ಜ್ಞಾನದ ಲೋಕ
                            ಶರಣರು ಹಚ್ಚಿದ ಮಾತಿನ ಬೆಳಕ
                          ಪುಣ್ಯ ಪುರುಷರು ಹಚ್ಚಿಟ್ಟ ಹೋಗ್ಯಾರ
                            ಭಕ್ತಿ ಎಂಬುದು ಒಂದೇ ಆಧಾರ"
                                                                   ( ದೀಪದ ಬೆಳಕು)
              ಎಂಬ ಸಾಲುಗಳ ಮೂಲಕ
'ಶರಣರ ನುಡಿಗಡಣವೇ  ಮೇಲು"  'ಎಂದು ಸಾರುತ್ತಾರೆ.
                   "ಯಾಕರೆವ್ವ ಹಿಂಗ  ನೀವು ಬಡಿದಾಡತೀರೋ
                   ಸತ್ತಾಗ ಎದಿಮ್ಯಾಲ ಹೊತಗೊಂಡ ಹೋಗುವಂಗ
                    ಮಾಡತೀರೋ"
                                                             ( ತಿಳಕೊರ್ರೋ ಮನಸ್ಸಿಗೆ)
                         ಎಂದು ಜೀವನದ ತತ್ವಜ್ಞಾನದ ಅಮೃತವನ್ನು ಈ ಸಾಲುಗಳ ಮೂಲಕ ಉಣಬಡಿಸುತ್ತಾರೆ.


                      ಹೀಗೆ ಸಿದ್ದಣ್ಣ ಬಿದರಿ ಯವರ ಕಾವ್ಯಗಳಲ್ಲಿ ಜವ್ವನದಲ್ಲಿ ಕಾಡುವ 'ಪ್ರಣಯ' ದ ಅದಮ್ಯ ಬಯಕೆಗಳಿವೆ, ಮನುಷ್ಯನ  ಎಂದೂ ಬತ್ತದ ಉತ್ಸಾಹದ ಚಿಲುಮೆಗಳಿವೆ,ಜೀವನ ಪ್ರೀತಿಯ ರಸಘಳಿಗೆಗಳಿವೆ, ಹೋರಾಟದ ಕ್ರಾಂತಿಯ ಕಿಡಿಗಳಿವೆ.
ವೈಚಾರಿಕ ಜೀವನದ ಪರಮ ಸತ್ಯಗಳಿಗೆ, ಆಧ್ಯಾತ್ಮದ ಧ್ಯಾನ, ಮುಕ್ತಿಯ ಮಾರ್ಗಗಳಿವೆ. ಜನಪದರ ಬದುಕಿನ ಗ್ರಾಮ್ಯ ಸಂಸ್ಕೃತಿಯ ಸೊಗಡಿದೆ,ದಾಂಪತ್ಯ ಪ್ರೇಮದ ಸರಸ ಸಲ್ಲಾಪಗಳಿವೆ.
                        ತೊಗಲುಗೊಂಬೆ, ಎತ್ತಿನ ಗಾಡಿ,ಊರಿನ ಹೊಳೆ,ಹೋರಿ,ಮಲ್ಲಿಗೆ ಹೂ,ಗಡಿಗಿ,ಮುಂತಾದ ಹಳ್ಳಿಯ ಸಮೃದ್ಧ ಬದುಕಿನ ರೂಪಕಗಳಿವೆ. ಸಾಮಾನ್ಯನ ಮುಗ್ಧ ಭಾವಗಳಿವೆ. ವಿವೇಕದ ಹಿತನುಡಿಗಳಿವೆ.ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ನೈಜ ಜೀವನದ  ದೃಷ್ಟಾಂತಗಳಿವೆ.ಇತ್ತೀಚೆಗೆ "ನುಡಿಮುತ್ತಿನ ಮಾಲಿ" ಎಂಬ ಸಮಗ್ರ  ಸಂಕಲನ ವನ್ನು ಹೊರತಂದಿದ್ದಾರೆ. ಬಡತನದ  ಬೆಂದೊಡಲಿನಲ್ಲೂ ಸಾಲ ಮಾಡಿ   ಸಾಹಿತ್ಯ ಸರಸ್ವತಿಯ ಸೇವೆ ಮಾಡುತ್ತಿರುವ ಸಿದ್ದಣ್ಣ  ಬಿದರಿಯವರು ಒಬ್ಬ  ಕಾವ್ಯತಪಸ್ವಿ.

ಇವರ ಕಾವ್ಯ ಕುಮಾರವ್ಯಾಸನ
                                "ಅರಸುಗಳಿಗಿದು ವೀರ
                            ದ್ವಿಜರಿಗೆ ಪರಮ ವೇದದ ಸಾರ
                            ಯೋಗೀಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ                     ವಿರಹಿಗಳಿಗೆ ಶೃಂಗಾರ "

                    ಎಂಬ ಸಾಲುಗಳನ್ನು ನೆನಪಿಗೆ ತರುತ್ತವೆ.ಇವರ ಹಾಡುಗಳು  ಕಲಿಯದವರ ಕಾಮಧೇನುವಾಗಿವೆ

Thursday 8 February 2018

ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ

ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ

                         ಅನಕ್ಷರಸ್ಥರಾಗಿದ್ದರೂ ಮಾತನಾಡುತ್ತಲೇ ಆಡು ಭಾಷೆಯಲ್ಲಿ ಕಾವ್ಯಗಳನ್ನು ಕಟ್ಟುವ, ಸುಮಾರು ೬೦೦ ಕಾವ್ಯಗಳ ಸರಸ್ವತಿಯನ್ನೇ ತಮ್ಮ ನಾಲಗೆಯ ಮೇಲೆ ನಲಿಸುತ್ತಿರುವ ಅಗಾಧ ಜ್ಞಾಪಕ ಶಕ್ತಿ ಯ ಮೌಖಿಕ ಪರಂಪರೆಯ ಅಪ್ರತಿಮ  ಆಶುಕವಿ ಶ್ರೀ ಸಿದ್ದಣ್ಣ ಸಾಬಣ್ಣ ಬಿದರಿ.ಬಾಗಲಕೋಟ ಜಿಲ್ಲೆಯ ಬೀಳಗಿಯವರಾದ  ಬಿದರಿಯವರು ಕೃಷ್ಣಾ ನದಿ ತೀರದ ಗ್ರಾಮೀಣ ನೆಲಮೂಲ ಸಂಸ್ಕೃತಿ ಸತ್ವವನ್ನು ಹೀರುತ್ತಾ, ತಾನು ಜೀವನದ ನಿತ್ಯ ಸಂತೆಯಲ್ಲಿ ಕಂಡುಂಡ ಅನುಭವಗಳನ್ನೇ ಜನಪದರ ಭಾಷೆಯಲ್ಲಿ ಕಾವ್ಯವನ್ನಾಗಿ ಸೃಷ್ಟಿಸುವ ಜಾನಪದ ಗಾರುಡಿಗ .

                         ಕನ್ನಡ ಸಾರಸ್ವತ ಲೋಕದ 'ಮೇರು ಕವಿ', 'ಶಬ್ದಬ್ರಹ್ಮ '  ಬೇಂದ್ರೆ ಯವರ  ಹೆಸರಿನಲ್ಲಿರುವ  ಧಾರವಾಡದ  "ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ " ಪ್ರತಿವರ್ಷ, ಅವರ ಜನ್ಮದಿನವಾದ ಜನೇವರಿ ೩೧ ರಂದು   ಕೊಡಮಾಡುವ ರಾಷ್ಟ್ರಮಟ್ಟದ ಪ್ರಶಸ್ತಿ ಈ ಬಾರಿ  'ಸಿದ್ದಣ್ಣ ಬಿದರಿ'ಯವರಿಗೆ ದೊರೆತಿರುವುದು ಔಚಿತ್ಯಪೂರ್ಣವಾದುದು ಹಾಗೂ ಅರ್ಥಪೂರ್ಣವಾದುದು. ಡಾ.ಮಲ್ಲಿಕಾ ಘಂಟಿ ಯವರು ಹೇಳಿದ ಹಾಗೆ
ಕವಿರಾಜಮಾರ್ಗಕಾರನ "ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳಿಗೆ"  ಬಿದರಿಯವರು ಸಾಕ್ಷಿಯಾಗಿದ್ದಾರೆ.


                               ತಾವು ಕವಿಯಾದ ಬಗೆಯ ಕುರಿತು ಅವರನ್ನು ಮಾತನಾಡಿಸಿದಾಗ "ಜನ ನನ್ನನ್ನ ಎಲ್ಲೆಲ್ಲಿಗೆ ಕರೀತಾರ ಅಲ್ಲಿಗೆ ಹೊಕ್ಕೀನಿ. ಅವರ ಹಾಡಂತಾರ ನಾ ಹಾಡತೀನಿ.ಮತ್ತೊಂದು ಹಾಡಂತಾರ ಹಾಡತೀನಿ.ಖುಷಿಯಾಗ್ತಾರ.ಗೌರವ ಸಲ್ಲಿಸ್ತಾರ.ಸಂತೋಷ ಆಕ್ಕತಿ.ಹಿಂಗ ಅವರ ನನ್ ಕರದು ಕವಿ ಮಾಡ್ಯಾರ " ಎಂದು ಜನಪರ  ಕಾವ್ಯವನ್ನು ಅಹಂಕಾರ ಮಾಡಿಕೊಳ್ಳದೆ ಕವಿಗಿರಬೇಕಾದ  ವಿನಮ್ರತೆಯನ್ನು ಮೆರೆಯುತ್ತಾರೆ.  ಕುಳಿತಲ್ಲಿ, ನಿಂತಲ್ಲಿ,ಕರೆದಲ್ಲಿ, ಕಾವ್ಯ ಕಟ್ಟುವ ಇವರ ಕಾವ್ಯ ಕಲೆ ಬೆರಗು ಮೂಡಿಸುವಂತಹುದು.
         "ನಾನು ನೇಗಿಲಾ ಹೊಡದೀನಿ, ಬಿತ್ತಿ ಬೆಳದೀನಿ,ಕಣ ಮಾಡೀನಿ,ರಾಶಿ ಮಾಡೀನಿ, ಮಣ್ಣಿನ್ಯಾಗ ಅನ್ನ ಬೆಳದೀನಿ." ಎಂದು ಹೇಳಿಕೊಳ್ಳುವ ಸಿದ್ದಣ್ಣ ರು ಅಪ್ಪಟ ಮಣ್ಣಿನ ಸಂಸ್ಕೃತಿಯನ್ನೇ ತಮ್ಮ ಉಸಿರಾಗಿಸಿಕೊಂಡ ಗ್ರಾಮೀಣ ಪ್ರತಿಭೆ.

       "ನಾನು ಚಿಂತಿ ಬೆಂಕ್ಯಾಗ ಸುಟ್ಟೀನಿ, ಪ್ರೀತಿ ಹೊಳ್ಯಾಗ ಈಜಾಡೀನಿ, ಕಷ್ಟ ಹಾಸಿ ಹೊತಗೊಂಡೀನಿ, ಏರುಪೇರು ಸಂಸಾರದೊಳಗ ಗೆದ್ದೀನಿ, ಸೋತೀನಿ." ಎನ್ನುವ ಇವರು ಜೀವನದ ಬೆಂಕಿಯಲ್ಲಿ ಬೆಂದ, ಪ್ರೀತಿಯ ಹೊಳೆಯಲ್ಲಿ ಮಿಂದ ಹಾಡುಗಬ್ಬದ ಮೋಡಿಗಾರ.
  "ನಾಟಕ ಮಾಡೀನಿ.ಭಜನಾ ಪದ ಹಾಡೀನಿ.ಡೊಳ್ಳಿನ ಪದ ಹಾಡೀನಿ.ಗೀಗಿ ಪದ ಕೇಳಿನಿ.ಚೌಡಕಿ ಪದ ಹಾಡೀನಿ.ಸೋಬಾನ ಪದ ಕೇಳಿನಿ."  ಎಂದು ತನ್ನ ಕವಿತೆಗೆ ಪ್ರೇರಣೆಯಾದ ಹಿನ್ನಲೆಯನ್ನು ಸ್ಮರಿಸಿಕೊಳ್ಳುತ್ತಾರೆ.
              ಸಿದ್ದಣ್ಣ ಬಿದರಿ ಯವರ
'ಹೊಳಿ ಸಾಲ ಹೋರಿ ','ಹತ್ತೂನ ಬಾ ಪ್ರೀತಿಗಾಡಿ', 'ಅನುಭವದ ಗಡಿಗಿ','ಮಾತು ಮಾಣಿಕ್ಯ', 'ಮುಟ್ಟೋಣ ನೀಲಿ ಚುಕ್ಕಿ', 'ಕೆರೆಯ ನೀರನು ಕೆರೆಗೆ ಚೆಲ್ಲೀನಿ', 'ಬಿತ್ತೋಣ ಬಾ ಜಾತಿ ಮುತ್ತ' 'ಹತ್ತೈತೊ ಉರಿ', 'ನಮ್ಮ ದೇವ್ರು', 'ಇದ ನನ್ನ ಬದುಕು',  'ದೇವರ ಜಗಳ ', 'ಅಡವಿ ಮಲ್ಲಿಗಿ' ಮುಂತಾದ ೩೦ ಕ್ಕೂ ಹೆಚ್ಚು ಕಾವ್ಯ ಮಣಿ ಮಾಲೆಗಳು ಕನ್ನಡ  ಸಾರಸ್ವತ ಲೋಕವನ್ನು ಅಲಂಕರಿಸಿ ಮೆರುಗನ್ನು ತಂದಿವೆ.

          ಬಿದರಿಯವರ ಕಾವ್ಯಗಳಲ್ಲಿ ವ್ಯಕ್ತವಾಗುವ ಪ್ರೇಮದ ಭಾವ ತೀವ್ರತೆಯನ್ನು, ರಮಣೀಯತೆಯನ್ನು ಅವರ ಬಾಯಿಂದ ಕೇಳಿಯೇ ಸವಿಯಬೇಕು.
ಉದಾ : ಗೆ
                       "ಹೇಳೀನ ನಿನಗ ಎಷ್ಟೋ ಬಾರಿ
                      ದೂರ ನಿಲ್ಲ ನೀ ಹೋದಾಡು ಪೋರಿ
                    ಮೇದ ನಿಂತೈತಿ ಹೊಳಿ ಸಾಲ ಹೋರಿ
                     ತಿರವ್ಯಾಡಿ ಹಾದರ ಹರಿದೀತ ಮಾರಿ"
                                                   ( 'ಹೊಳಿಸಾಲ ಹೋರಿ' ಕವಿತೆಯಿಂದ)
             

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...