Total Pageviews

Thursday 12 September 2019

ಜಗದ್ವಂದ್ಯ ಭಾರತ

ಭಾರತ ವೈವಿಧ್ಯಮಯ ಧರ್ಮ ಜಾತಿ ಮತ ಪಂಥಗಳೆಂಬ  ಅನನ್ಯವಾದ ಫಲಪುಷ್ಪಗಳ  ನಂದನವನ. ಅಖಂಡತೆ ಹಾಗೂ ಏಕತೆಯ ಸೌಂದರ್ಯದಲ್ಲಿ ನಳನಳಿಸುತ್ತಿರುವ ಇಲ್ಲಿಯ ಅಭೂತಪೂರ್ವ ವಿಭಿನ್ನ ಸಂಸ್ಕೃತಿಮಣಿಗಳ ಸಮ್ಮಿಲನ ಒಂದು ಮಹಾಬೆರಗು ಹಾಗೂ ಬೆಳಕನ್ನು ಸೃಷ್ಟಿಸಿದೆ." ಅಹಿಂಸೆಯೇ ಪರಮೋಧರ್ಮ" ಎಂದು ಸಾರಿದ ಜೈನ ಧರ್ಮದ ಉದ್ಯಾನವನವಾಗಿ, ಪ್ರೀತಿ,ಅನುಕಂಪ, ದಯೆ,ಮಾನವೀಯತೆ, ಅಂತಃಕರಣ, ಜ್ಞಾನಗಳನ್ನೇ ತನ್ನ ಕೊರಳ ಕುಸುಮಗಳನ್ನಾಗಿ ಧರಿಸಿ ಜಗತ್ತಿನೆಲ್ಲೆಡೆ ಪರಿಮಳವನ್ನೇ ಪಸರಿಸಿದ ಬುದ್ಧನ ಪವಿತ್ರ ನೆಲವಾಗಿ ; ಶೌರ್ಯ, ತ್ಯಾಗ, ಸೇವೆ, ಆಧ್ಯಾತ್ಮದ ದಾರ್ಶನಿಕ  ಗುರುನಾನಕರು ಮೆಟ್ಟಿದ ಧರೆಯಾಗಿ, ಸಮಾನತೆ, ಆಧ್ಯಾತ್ಮ ಸಾಧನೆ,ಸಮಾಜ ಸುಧಾರಣೆಯ ಹೆಮ್ಮರವನ್ನು ಬೆಳೆಸಿ ಎಳೆಹೂಟೆಗೆ ಕೊರಳು ಕೊಟ್ಟ ಸಹಸ್ರಾರು ಶರಣರ ಪುಣ್ಯಭೂಮಿಯಾಗಿ ; ಈ ದೇಶದ ಆತ್ಮವಾಗಿದ್ದು, ಮಹಾತ್ಮನಾದ ಗಾಂಧೀಜಿ ನಡೆದಾಡಿದ ನೆಲವಾಗಿ,  ಮೀರಾಬಾಯಿಯ, ಜಗನ್ನಾಟಕ ಸೂತ್ರಧಾರ ಮಾಧವ ನಲಿದಾಡಿದ ಬೃಂದಾವನವಾಗಿ, ಶಿವನ ತಾಂಡವ ನೃತ್ಯಕ್ಕೆ ಹಿಮಾಲಯವಾಗಿ, ನಿರ್ವಯಲ ನೀಲವನೇ ತೋರಿದ ಸೂಫಿಗಳ ತಾಣವಾಗಿ, ಜೀವಸಂಕುಲಕ್ಕೆಲ್ಲಾ ಹಸಿರುಸಿರನ್ನು ನೀಡಿದ ಯಮುನೆ ಗಂಗೆಯರನ್ನು ತಬ್ಬಿಕೊಂಡ ಮಾತೆಯಾಗಿ, ಭರತಭೂಮಿಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಹಿರಿಮೆ ಅವರ್ಣನೀಯ ಹಾಗೂ ಅನನ್ಯ. ಜಗತ್ತಿನ ಧರ್ಮಗಳೆಲ್ಲಾ ತಮ್ಮ ತಮ್ಮ ಅಸ್ಮಿತೆಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಸಮಕಾಲೀನ ಸಂದಿಗ್ಧ ಸಂದರ್ಭದಲ್ಲಿ ಅಗಣಿತ ಜಾತಿ, ಧರ್ಮ, ಮತ, ಪಂಗಡಗಳನ್ನು ಶಿಶುಗಳಂತೆ ತನ್ನೊಡಲಲ್ಲಿಟ್ಟುಕೊಂಡು, ಅತ್ತು ಹಠವಿಡಿದಾಗ ಸಮಾಧಾನದಿಂದ  ತೂಗಿ ಪೋಷಿಸಿ ಭಾವೈಕ್ಯತೆಯ ತಪಸ್ಸನ್ನಾಚರಿಸುತ್ತಿರುವ  ಭಾರತಿ ನಮ್ಮ ಹೆಮ್ಮೆ ಹಾಗೂ ಸ್ವಾಭಿಮಾನದ ದಿವ್ಯ ಪ್ರತಿರೂಪ. ಹಿಂದೂ ಮುಸಲ್ಮಾನರೆನ್ನದೇ ಐಕ್ಯತೆಯ ಸದ್ಭಾವದಲ್ಲಿ ಮಿಂದು ಮೊನ್ನೆ ತಾನೆ ಆಚರಿಸಿದ ಮೊಹರಂ ಹಬ್ಬ ನಮ್ಮ ದೇಶದ ಇಂತಹ ಐಕ್ಯತೆಯ ಸರ್ವಧರ್ಮ ಸಮಭಾವದ ಪರಂಪರೆಯಲ್ಲಿ ಹರಿಯುತ್ತಿರುವ ಒಂದು ಅನುಪಮ ಪರ್ವನದಿ. ಅವರಿವರೆನ್ನದೇ  ಸಕಲರಿಗೂ  ಸಕ್ಕರೆಯ ಸಿಹಿಯನ್ನು ಹಂಚಿ ಲೇಸನೇ ಬಯಸುವ ಜಾತ್ರೆ, ಉರುಸ್, ಮೊಹರಂ, ಗಣೇಶ ಚತುರ್ಥಿಯಂತಹ ಹಬ್ಬಗಳು ನಮ್ಮ ವಸುಧೈವ ಕುಟುಂಬಕಂ ಎಂಬ ಮಹಾಪರಂಪರೆಯ ರೂಪಕಗಳಲ್ಲಿ ಅನನ್ಯವಾದವುಗಳು. ಈ ಎಲ್ಲ ಸಂಗತಿಗಳಿಗೆ ಅಲಂಕಾರ ಸ್ವರೂಪವನ್ನು ನೀಡುವ ಹಾಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ಕೃತಿ ನನ್ನ ಗಮನವನ್ನು ಅತೀವವಾಗಿ ಸೆಳೆಯಿತು.

ರಾಗಂ ಎಂದೇ ನಾಡಿಗೆ ಚಿರಪರಿಚಿತವಾಗಿರುವ ಡಾ. ರಾಜಶೇಖರ ಮಠಪತಿಯವರ "ಜಗದ್ವಂದ್ಯ ಭಾರತ" ಕಾದಂಬರಿ ಕೃತಿ ಭಾರತಿಯ ಮುಕುಟಕ್ಕೊಂದು ಕನ್ನಡದ ಗರಿಯೆಂಬಂತೆ ಮೈದಾಳಿರರುವುದು ಅರ್ಥಪೂರ್ಣವಾಗಿದೆ.ಮತ್ತೆ ರಾಷ್ಟ್ರೀಯತೆಯ ವ್ಯಾಖ್ಯಾನದ ಚರ್ಚೆ ಮುನ್ನಲೆಗೆ ಬಂದಿರುವ ಈ ಹೊತ್ತಿನಲ್ಲಿ, ಈ ಕಾದಂಬರಿ ಲೋಕಾರ್ಪಣೆಯಾಗಿ ತನ್ಮೂಲಕ ಸ್ವಗತದ ಮಾರ್ಮಿಕ ಉತ್ತರವನ್ನು ನೀಡುತ್ತಿರುವಂತೆ ರಚನೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇದು ನಮ್ಮ ದೇಶದ ಬಾವುಟ ಏರಿದ ಎತ್ತರ, ಆವರಿಸಿಕೊಂಡ ಆಳದ  ಚರಿತ್ರೆಯನ್ನು ಕಟ್ಟಿಕೊಡುವ ಕಾದಂಬರಿಯಾಗಿರುವಂತೆಯೇ, ನಮ್ಮ ದೇಶದ ಅನನ್ಯ ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿಯುವ ಮಹತ್ವದ ಕೃತಿಯಾಗಿಯೂ ಗಮನ ಸೆಳೆಯುತ್ತದೆ. ರಾಷ್ಟ್ರಕವಿ ಜಿ. ಎಸ್ ಎಸ್ ರವರ  ಕವಿತೆಯ ಸಾಲುಗಳಂತೆ ನಮ್ಮ ದೇಶದ ಇತಿಹಾಸವೆಂಬ ಸುರಂಗವನ್ನು ಪ್ರವೇಶಿಸಿ ಸ್ವಾಭಿಮಾನದ ಬಾವುಟದ ಮೇಲೆ ಬೆಳಕು ಚೆಲ್ಲುವ ಮಹತ್ವದ ದಾಖಲೆಯಾಗಿ ಈ ಕೃತಿ  ಆಕರದ ಸ್ಥಾನವನ್ನು ಪಡೆದುಕೊಂಡರೂ ಅಚ್ಚರಿಯೇನಲ್ಲ. ಸರಜೂ ಕಾಟ್ಕರ್ ರವರರು ರಾಷ್ಟ್ರ ಧ್ವಜದ ಮಹತ್ವ ಎಂಬ ಪ್ರಬಂಧದಲ್ಲಿ  ನಮ್ಮ ಧ್ವಜದ ಇತಿಹಾಸವನ್ನು ಸಾಂದರ್ಭಿಕವಾಗಿ ಸ್ಮರಿಸಿದ್ದಾರೆ. ಇಂತಹ ಕೆಲವೇ ಕೆಲವು ಬರಹಗಳನ್ನು ಹೊರತುಪಡಿಸಿದರೆ  ಇದುವರೆಗೂ ಕನ್ನಡದಲ್ಲಿ ನಮ್ಮ ದೇಶದ ಬಾವುಟದ ಚರಿತ್ರೆಗೆ ಸಂಬಂಧಿಸಿದ ಕೃತಿಗಳು ರಚನೆಯಾಗಿರುವುದು ವಿರಳಾತಿವಿರಳ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ  ನಮ್ಮ ಭಾರತ ಮಾತೆಯ ನೆತ್ತಿಯ ಮೇಲಿನ ಸೆರಗಿನ ಪ್ರತೀಕದಂತಿರುವ ಧ್ವಜಚರಿತ್ರೆಯನ್ನು ಕಾದಂಬರಿಯ ವಿನೂತನ ಪ್ರಯೋಗದ ಮೂಲಕ ಕಟ್ಡಿಕೊಡುತ್ತಿರುವ ರಾಗಂರವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ರಾಗಂರವರಿಗೆ ಜನ್ಮದಿನದ ಶುಭಾಶಯಗಳನ್ನು  ಹೇಳಬೇಕಾದ ಈ ಶುಭಸಂದರ್ಭದಲ್ಲಿ ನೆನೆಯಲೇಬೇಕಾದ ಅವರ ಈ ಬಾವುಟದ ಕತೆಯ ಬೆಳಕು ಭಾರತೀಯರ ಮನೆಮನಗಳನ್ನು ಆವರಿಸಿ ಬೆಳಗಲಿ. ರಾಗಂರವರ ಲೇಖನಿ ಮತ್ತಷ್ಟು ಬೆಳಕಿನ ಬೆಳ್ಳಿರೇಖೆಗಳನ್ನು ಸೃಜಿಸಲಿ ಎಂದು ಹಾರೈಸೋಣ.

Tuesday 10 September 2019

ಭಾವಯಾನ

ಭಾವಯಾನ

'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ'ಎಂದು ಹಾಡುವ ಜನಪದರು ಬೆಳಗಾಗೆದ್ದು ಭೂತಾಯಿಯನ್ನು ಮನದ ದೇವರ ಕೋಣೆಯಲಿಟ್ಟು ಪೂಜಿಸಿ, ಆಲಾಪಿಸಿ ಹೃದಯ ಸಂಗೀತಕ್ಕೆ ತಲೆದೂಗುತ್ತಾರೆ. ಬೆಳಗೆಂದರೆ  ವಸುಂಧರೆಗೆ ಮರುಹುಟ್ಟು. ಈ ಜಗದ ಪ್ರತಿಯೊಂದು ಜೀವಸಂಕುಲಕೂ ಪುನರ್ಜನ್ಮ. ಸಸ್ಯ ಪ್ರತಿದಿನ ತನ್ನಲ್ಲಿ ಹುಟ್ಟುವ ಚಿಗುರಿನಿಂದ, ಮನುಷ್ಯನಿಗೆ ಅಗತ್ಯವಿರುವ ಬೆಳಗಿನ ನವಚೈತನ್ಯವನ್ನು ಕುರಿತು ಪಾಠ ಮಾಡುತ್ತದೆ. ರಾಷ್ಟ್ರಕವಿ  ಜಿ. ಎಸ್.ಎಸ್. ರವರ'ಹಾಡು ಹಳೆಯದಾದರೇನು ಭಾವ ನವನವೀನ' ಎನ್ನುವಂತೆ ದಿನ ಹಳೆಯದಾದರೇನು ಶುಭೋದಯ ಎಂದೆಂದಿಗೂ ನವನವೀನವೇ.  ಪ್ರತಿದಿನ ಹೊಸ ರಂಗನ್ನು ತೊಟ್ಟು ಕಂಗೊಳಿಸುವ ದಿನಪನ ಸಾಮ್ರಾಜ್ಯ ದರ್ಶನವೇ ಒಂದು ಯೋಗಾಯೋಗ. ನೇಸರನ ಹೊಂಬೆಳಕಿನ ಸುಖದ ಸ್ಪರ್ಶದೊಂದಿಗೆ ಉಜ್ಜಿಕೊಳ್ಳುತ್ತಾ ಕಣ್ಣುತೆರೆಯುವ ಈ ಧರೆಯು, ಎಂದೆಂದಿಗೂ ಬತ್ತಲಾರದ ಪುಟಿಯುವ ಚೈತನ್ಯದಿಂದ ಮಹಾಬೆಳಗನ್ನು ಸಂಭ್ರಮಿಸುತ್ತದೆ. ವರಕವಿ ದ.ರಾ ಬೇಂದ್ರೆಯವರನ್ನು ಕಾಡಿದ ಮೂಡಲ ಮನೆಯ ಮುತ್ತಿನ ಹನಿಗಳಿಂದ ಪಡೆಮೂಡುವ ಬೆಳಗು ಕುವೆಂಪುರವರಲ್ಲಿ ಸಕಲರಿಗೂ ಕರುಣೆದೋರುವ  ದೇವರ ದಯೆಯಾಗಿ ಸಂಭವಿಸಿದೆ. ಇಂತಹ ಸಕಲ ಜೀವಚರಾಚರಗಳೂ ಹಂಬಲಿಸುವ ಅದಮ್ಯ ಉತ್ಸಾಹದ ಬೆಳಗಿನೊಂದಿಗೆ'ನರವಿಂದ್ಯೆದೊಳಗೆನ್ನ ಹುಲುಗಿಳಿಯ ಮಾಡಿಸಲಹುತ್ತಾ ಶಿವ ಶಿವ ಎಂದೋದಿಸಯ್ಯ' ಎಂಬ ಶ್ರಾವಣದ ವಚನಗಾಯನದ ರಾಗಾಲಾಪವಿದ್ದರೆ ಮುಗಿಯಿತು, ಸ್ವರ್ಗಕ್ಕೆ ಕಿಚ್ಷುಹಚ್ಚುವುದೊಂದೇ ಬಾಕಿ. ಅದೇನು ವಿಸ್ಮಯವೋ ಗೊತ್ತಿಲ್ಲ, ಇಂತಹ ಬೆಳಗಿನ ಮಂದಸ್ಮಿತ ಮಬ್ಬು ನಸುಕಿನಲ್ಲಿ ನನ್ನ ನಯನಕರಣಗಳನ್ನು ತುಂಬಿ ತುಳುಕಿಸುವ  ಸುಪ್ರಭಾತದ ಭಾವೋನ್ಮಾದ, ಆ ಇಡೀ ದಿನ ನನ್ನ ಹೃದಯದರಮನೆಯಲ್ಲಿ ಸುತ್ತಿ ಸುಳಿದು ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತದೆ.  ನನ್ನ ಆ ದಿನದ  ದುಡಿಮೆಗೆ ಚೈತನ್ಯದ ಚಿಲುಮೆಯಾಗಿ ಆಗಾಗ ಜೀವಾಮೃತವನ್ನೆರೆಯುತ್ತಲೇ ಇರುತ್ತದೆ.  ಹೀಗೆ ಬೆಳಗಿನ ಅವಿಭಾಜ್ಯ ಭಾಗವಾದ ಹಾಡೊಂದು ಕಾಡುವ ಘಳಿಗೆಗೆ ನಾನು ಲೆಕ್ಕವಿಲ್ಲದಷ್ಟು ಬಾರಿ ಶರಣಾಗಿದ್ದಿದೆ. ಬೆಳಗು ನನಗೆ ಧ್ಯಾನವಾಗಿರುವಂತೆಯೇ, ಆ ಧ್ಯಾನವನ್ನು ನನ್ನೊಳಗಿಳಿಯುವಂತೆ ಮಾಡುವ  ಸುಪ್ರಭಾತದ ಚೆಲುವಿನ ಹಾಡು ನನಗೆ ಧ್ಯಾನಮಂದಿರವಾಗುತ್ತದೆ. ಅದು ಶ್ಲೋಕ, ವಚನ, ತ್ರಿಪದಿ,ಭಾವಗೀತೆ ಯಾವುದೋ ಸ್ವರೂಪದಲ್ಲಿರಬಹುದು.  ಕೆ. ಎಸ್. ನರಸಿಂಹಸ್ವಾಮಿಯವರ 'ದೀಪವೂ ನಿನ್ನದೇ ಗಾಳಿಯೂ ನಿನ್ನದೇಆರದಿರಲಿ ಬೆಳಕು ಹಡಗೂ ನಿನ್ನದೇ ಕಡಲೂ ನಿನ್ನದೇ ಮುಳುಗದಿರಲಿ ಬದುಕು.....ಎಂಬ ಗೀತೆಯು ಸುಪ್ರಭಾತವಾಗಿ ಕರಣ ತುಂಬಿದಾಗ, ನನ್ನ ಹೃದಯದಲ್ಲಿ ವಿನಯಪೂರ್ಣ ಉಲ್ಲಾಸವು ನದಿಯಾಗಿ ಹರಿದಿದ್ದನ್ನು ನಾನು ಮರೆಯಲಾರೆ.
ನನ್ನ ಮನವನ್ನು ಆ ಇಡೀ ದಿನ ಮತ್ತೆ ಮತ್ತೆ ಕಾಡಿದ ಗೀತೆಯಾಗಿ ಪ್ರಭಾವ ಬೀರಿತು. ಸದಾ ಪುಟಿಯುವ ನವೋತ್ಸಾಹದ  ನದಿಯೊಂದು ಅಂತರಂಗದಲ್ಲಿ ಪ್ರವಹಿಸಲು ಬೆಳಗಿನಲ್ಲಿ; ಸಾಧ್ಯವಾಗದಿದ್ದರೆ ಇನ್ನಾವುದೋ ಭೂತ ಕುಣಿಯುವ ಘಳಿಗೆಯಲ್ಲಾದರೂ ಸರಿ, ನನಗೊಂದು ಅಂತಹ ಗೀತೆ ಸಾಕು; ನನ್ನ ಆ ದಿನದ ಬದುಕು ತನ್ನದೇ ಭಾವಲಹರಿಯಲ್ಲಿ ಮತ್ತೆ ಮತ್ತೆ ಪ್ರಜ್ವಲಿಸುವಂತೆ ಮಾಡುತ್ತದೆ. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನೆಲ್ಲಾ ದೈವದ ಮೇಲೆ ಹೊರಿಸಿ ಸುಮ್ಮನಾಗುವ ವಿನಮ್ರತೆಯ ಆಸ್ತಿಕನನ್ನಾಗಿ ಮಾಡುತ್ತದೆ.
ಕಾಡುವ ಹಾಡೊಂದು ತಂದ ಸೌಭಾಗ್ಯವಿದು. ಅದರಲ್ಲಿಯೂ ಪ್ರಾತಃಕಾಲದ ಹಾಡಂತೂ ನನ್ನ ಮನದ ಕ್ಲೇಶ ಕಳೆಯುವ ದಿವ್ಯೌಷಧಿಯನ್ನಾಗಿ ಸೇವಿಸಿದ್ದೇನೆ. ಅಂತರಂಗದ ತುಮುಲಗಳಿಗೆ ಸಾಂತ್ವನದ ಧಾರೆಯೆರೆಯುವ ರಸೌಷಧಿಯನ್ನಾಗಿ ಮಾಡಿಕೊಂಡಿದ್ದೇನೆ. ನನ್ನ ಮನೆಯ ಪಕ್ಕದ ದೇವಾಲಯದ ಧ್ವನಿವರ್ಧಕದ ಇಂತಹ ಗಾಯನಕ್ಕಾಗಿ ಬೆಳಗಾಗೆದ್ದು ಕಾಯುತ್ತೇನೆ. ನನಗೆ ೫ ಗಂಟೆಗೆ ಎಚ್ಚರ ತರುವ ಬೆಳಗು ದೇವಾಲಯದ ಧ್ವನಿವರ್ಧಕಕ್ಕೆ ೬ ಗಂಟೆಗೆ ಜಾಗೃತಿಯನ್ನುಂಟುಮಾಡುತ್ತದೆ.  ಬೆಳಿಗ್ಗೆ ೬ ಗಂಟೆಗೆ ಕೊರಳೆತ್ತಿ ಉಚ್ಛ ಸ್ವರದಲ್ಲಿ ರಾಗ ತೆಗೆಯುವ ಧ್ವನಿವರ್ಧಕವೇ ನಮ್ಮೂರ ಜನರ ಆಧುನಿಕ ಮುಂಗೋಳಿಯೆಂದರೆ ಅತಿಶಯೋಕ್ತಿಯೇನಲ್ಲ. ಇದರಿಂದ ಹೊರಡುವ ಸುಪ್ರಭಾತಕ್ಕಾಗಿ ನಿದ್ದೆಯ ಮಂಪರಿನಲ್ಲಿರುವ ಅದೆಷ್ಟೋ ದೇಹ ಮತ್ತು ಮನಸುಗಳು ಕಾದುಮಲಗಿರುತ್ತವೆ. ಗಜಮುಖನೇ ಗಣಪತಿಯೇ ನಿನಗೆ ವಂದನೆನಂಬಿದವರ ಪಾಲಿನ ಕಲ್ಪತರು ನೀನೆ....ಎಂಬ ಸ್ವರ ಹೊರಟ ಕ್ಷಣವೇ ನಮ್ಮ ಜಗತ್ತು ಆಕಳಿಸಿ ಕಣ್ಣುಜ್ಜಿ ದೈವ ನೆನೆದು ಎಚ್ಚರಗೊಳ್ಳುತ್ತದೆ. ಸರ್ವಜನರ ಬೆಳಗಿನ ಲೋಕವ್ಯಾಪಾರ ಪ್ರಾರಂಭವಾಗುವುದೇ ಈ ಸುಪ್ರಭಾತದ ರಸಗಾನದಲ್ಲಿ ಮೈಮರೆಯುವುದರಿಂದ.ಸಮಷ್ಟಿಯಲ್ಲಿ ಈ ಸುಪ್ರಭಾತದ ಗಂತವ್ಯ ಒಂದು ಬಗೆಯಾದರೆ ವ್ಯಷ್ಟಿಯಲ್ಲಿ ನನಗೆ ಕಾಡುವುದು ಮತ್ತೊಂದು ಬಗೆಯದು. ಇಡೀ ದಿನ ಗುಣುಗುಣುಗುಟ್ಟುತ್ತಲೇ ಅಂತರಂಗವನ್ನು ಹಗುರಾಗಿಸುವ ಈ ಹಾಡಿನ ಬಲೆ ಕಲಾತ್ಮಕವಾದದ್ದು. ಅಷ್ಟೇ ಯೋಗಾನಂದದಿಂದ ಕೂಡಿದ್ದು.ನಾದಮಯ ಈ ಲೋಕವೆಲ್ಲಾ ಎಂದು ನನ್ನೊಳಗಿನ ಸಾಕ್ಷಾತ್ಕಾರಕ್ಕೆ ದಾರಿದೀಪವಾಗಬಲ್ಲ ಸ್ವರಗಾನವೆಂದರೆ ಅದು ಸುಪ್ರಭಾತ. ನನ್ನೆದೆಯ ಪಾಡಿಗೆ  ಹಾಡು ಮಹಾಮನೆ. ಬೆಳಗಿನ ಹಾಡು  ರಸದುಂದುಭಿಯ ಸವಿಸಮಯದ ಇಂಬು ನೋಡಿ  ನೇರವಾಗಿ ಎದೆಯೊಳಗಿಳಿದು ಗೂಡುಕಟ್ಟಿ ಮರಿಹಾಕುತ್ತದೆಯೆಂದರೆ ಅದರ ಮಾಂತ್ರಿಕ ಶಕ್ತಿಯ ಮಹಿಮೆ ಇನ್ನೆಂತಹುದೋ ?  ಹುಟ್ಟಿದ ಮರಿಗಳು ಚಿಂವ್ ಗುಟ್ಟುವ ಮಧುರ ಗಾನ ಎನ್ನ ಹೃದಯದ ಭಿತ್ತಿಯನ್ನಾವರಿಸಿ, ಅನುರಣಿಸಿ ಕೊರಳು ತುಂಬಿ ಉಕ್ಕಿ ಹೊರ ಬಂದಾಗಲೇ ಅದಕೆ ಮುಕ್ತಿ. ಎದೆಯೊಳಗಿನ ಸುಪ್ರಭಾತವೆಂಬ ತಾಯಿಹಕ್ಕಿಯ ಹಾಡು ಹೊಮ್ಮಿಸುವ ಸ್ವರಗಾನದ ನಾದಮಾಧುರ್ಯ ಅನುಪಮವಾದದ್ದು. ಚಿಕ್ಕಂದಿನಿಂದಲೂ ನಾನು ಸುಪ್ರಭಾತವೆಂದರೆ ಕೇವಲ ಭಕ್ತಿಗೀತೆಗಳಷ್ಟೇ ಎಂದುಕೊಂಡಿದ್ದ ನನ್ನ ಪೂರ್ವಾಗ್ರಹವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದ್ದು  ನಮ್ಮ ಮನೆಯ ಪಕ್ಕದ ದೇವಾಲಯದ ಧ್ವನಿವರ್ಧಕ. ಸುಪ್ರಭಾತದ ಗೀತೆಗಳನ್ನಾಗಿ ಸಿರಿಗನ್ನಡದ ಮಹಾಕವಿಗಳ  ಭಾವಗೀತೆಗಳನ್ನೂ, ಜನಪದ ಹಾಡುಗಳನ್ನು, ತ್ರಿಪದಿಗಳ ಗಾಯನವನ್ನು  ಬಳಸಿಕೊಳ್ಳಬಹುದು ಎಂಬುದಕ್ಕೆ ಅತ್ತ್ಯುತ್ತಮ ಉದಾಹರಣೆ ನಮ್ಮ ಮನೆಯ ಪಕ್ಕದ ದೇವಾಲಯದ ಸುಪ್ರಭಾತದ ಸಂಗೀತ.
ದೀಪವೂ ನಿನ್ನದೇ..ಎಂಬ ಕೆ ಎಸ್ ನರಸಿಂಹಸ್ವಾಮಿಯವರ ಗೀತೆಯನ್ನು ಸುಪ್ರಭಾತವಾಗಿ  ಆನಂದಿಸಿದ್ದೇನೆ. ಈ ದೇವಾಲಯದ ಮುಕುಟಮುಖದಿಂದ ಮತ್ತೊಂದು ಮುಂಜಾನೆ ಹೊರಟ  ಜಿ ಎಸ್ ಎಸ್ ರವರ  ಕಾಣದಾ ಕಡಲಿಗೆ ಹಂಬಲಿಸಿದೆ ಮನ....ಎಂಬ ಹಾಡನ್ನು ಕೇಳಿ ಮನಸ್ಸು ಕಾಣದ ಕಡಲಿನತ್ತ ಪಯಣಿಸಿದ್ದನ್ನು ಅನುಭವಿಸಿ, ಸುಪ್ರಭಾತವನ್ನೂ ಹೀಗೂ ಆಸ್ವಾದಿಸಬಹುದೆಂಬುದಕ್ಕೆ  ಮಾರ್ಗ ತೋರಿಸಿತು. ಬೆಳಗಿನ ಮಾಂತ್ರಿಕ ಸ್ಪರ್ಶವೇ ಅಂತಹುದು,ಆ ಶುಭಘಳಿಗೆಯಲ್ಲಿ ಕೇಳಿದ ಯಾವುದೋ ಒಂದು ಮಧುರ ಗೀತೆ ಇಡೀ ದಿನ ಎದೆಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಶುಭೋದಯದ ಹೊಂಬೆಳಕಿನಲ್ಲಿ ಒಮ್ಮೆ ಕರ್ಣಾನಂದಕ್ಕೆ ಕಾರಣವಾದ
' ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ಎಂಬ ವಚನನಾದ ಕೇಳಿದ ಘಳಿಗೆಯಿಂದ ರಾತ್ರಿ ಮಲಗುವವರೆಗೂ ಮನದಾಲಯದಲ್ಲಿ ಮರಮರಳಿ ರಿಂಗಣವಾಗುತ್ತಲೇ ಹೋಗುತ್ತದೆ. ಅದೆಂತಹ ಸಮ್ಮೋಹದ ಬಲೆಯೋ ಏನೋ! ಬೆಳಗಿನ ಆ ಒಂದು ಕ್ಷಣದ ಗೀತೆಯ ಸೆಳೆತ ನನ್ನ ದೇಹ,ಮನಸು,ಆತ್ಮಗಳನ್ನೂ ನುಂಗಿಬಿಡುತ್ತದೆ. ಮಾಯೆ ನಿನ್ನೊಳಗೋ ನೀ ಮಾಯೆಯೊಳಗೋ' ಎಂಬ ಕನಕದಾಸರ ಕೀರ್ತನೆಯಂತೆ ನಾನು ಗೀತೆಯ ಮಾಯೆಯೊಳಗೆ ಅದ್ವೈತಿಯಾಗುತ್ತೇನೆ. ಆಗಂತುಕನಾಗಿ ಬಂದು  ಅಂತರಂಗದೊಡೆಯನಾಗುವ ಗೀತೆಗೆ ದಾಸನಾಗುತ್ತೇನೆ.  ಏಕಾಂತದ ಹಾದಿಯಲ್ಲಿ ನಡೆದ ಬುದ್ಧನನ್ನು ನೆನೆದು,ಮನೋವ್ಯಾಪಾರದ ತಲ್ಲಣಗಳು ದಾಳಿಯಿಡದಂತೆ ರಕ್ಷಣಾಕೋಟೆಯೊಂದನ್ನು ಕಟ್ಟಿಕೊಳ್ಳಲು ನಾನು ಕಂಡುಕೊಂಡ ಸರಳ ಸುಂದರ ಉಪಾಯ ಈ ಗೀತೋಪಾಸನೆ.  ಡಿ ವಿ ಜಿ ಯವರ"ಎರಡು ಕೋಣೆಗಳ ನೀಂ ಮಾಡು ಮನದಾಲಯದಿ| ಹೊರಕೋಣೆಯಲಿ ಲೋಗರಾಟಗಳನಾಡು ವಿರಮಿಸೊಬ್ಬನೆ |ಮೌನದೊಳಮನೆಯ ಶಾಂತಿಯಲಿ ವರಯೋಗಸೂತ್ರವಿದು- ಮಂಕುತಿಮ್ಮ"ಎಂಬ ಕಗ್ಗದಂತೆ ಮೌನದೊಳ ಕೋಣೆಯೊಳಗೆ ವಿಹರಿಸುವ ಅದ್ಭುತ ಅವಕಾಶವನ್ನು ಗೀತ ನನಗೆ ನೀಡುತ್ತಲೇ ಬಂದಿದೆ. ನನ್ನನ್ನು ಸುಪ್ರಭಾತದಂತೆ ಕಾಡಿದ ಮತ್ತೊಂದು ಭಾವಗೀತೆಯೆಂದರೆ ದೀಪಧಾರಿಯ ಕವಿ ಜಿ. ಎಸ್. ಎಸ್. ರವರ 'ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು| ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು....ಎಂದು  ಮೃದುವಾಗುವ ನನ್ನ ಹೃದಯಕ್ಕೆ ಅಭಿಷೇಕವೆಂದರೆ ಆತ್ಮಾನಂದದ ಸುಪ್ರಭಾತ. ಹಾಗೆಂದು ಇದುವರೆಗೂ ನನಗೆ ಭಕ್ತಿಭಾವಗಳ ಸುಪ್ರಭಾತವೇ ವರಪ್ರಸಾದವಾಗಿದೆಯೆಂದೇನಿಲ್ಲ; ನೀರವ ಮಧ್ಯರಾತ್ರಿಯಲ್ಲಿ ಎದ್ದು ಕುಳಿತು ಕೇಳುವ" ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು' ಎಂಬ ಭಾವಗೀತೆಯೂ ನನ್ನ ನಿದ್ರೆಯನ್ನು ಪ್ರಶಾಂತದ ಧ್ಯಾನವನ್ನಾಗಿಸಿದೆ. ವಸಂತದ ಬಿರುಬಿಸಿಲ ನಡುಹಗಲಿನಲ್ಲಿಯೂ ಬೇವಿನ ಮರದ ತಂಪು ನೆರಳ ತಲ್ಪದಲ್ಲಿ ಕುಳಿತು ಕೇಳಿದ 'ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣುನನಗೂ ಆಕೆ ಕೃಷ್ಣನ ದೋರುವ ಪ್ರೀತಿಯು ನೀಡಿದ ಕಣ್ಣು"ಎಂಬ ಭಾವಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ಗೀತೆಯೂ ನನ್ನ ಭಾವದ ಹುಚ್ಚಿಗೆ ಆಗಾಗ ಕಿಚ್ಚು  ಹಚ್ಚಿದ್ದಿದೆ.
ಸಂಗೀತದ ಗಂಧ ಗಾಳಿಯೇ ಹಾಗೆ. ಆಲಿಸುವ ಹೃನ್ಮನಗಳನ್ನು ಸೆಳೆಯದೇ ಬಿಟ್ಟ ಉದಾಹರಣೆಗಳು ಅಪರೂಪ. ನನ್ನ ಮನಸು ಬಯಸುವ ಹಾಡುಗಳ ಇಂಪಾದ ಲಾಲಿತ್ಯಕ್ಕೆ ಮನಸೋತಿದ್ದೇನೆ. ಭಾವಲೋಕದ ಪಯಣದಲ್ಲಿನ ಈ ರಸಾನಂದಕ್ಕೆ ತಲೆದೂಗಿದ್ದೇನೆ.

ಬೃಂದಾವನದ ಮಾಧವನ ಕೊಳಲಗಾನ ಕೇಳುತ್ತಲೇ ಮರುಳಾಗಿ ಮರಳುವ ರಾಧೆಯಂತೆ, ಮನಸು  ಯಾವುದೋ ಮೂಲೆಯಲ್ಲಿ ಕೇಳಿದ ರಸಗಾನಕ್ಕೆ ಸೋತು, ಲೋಕವ್ಯಾಪಾರದ ಜಂಜಡಗಳಿಂದ ಬಿಡುವು ಪಡೆದು ವಿರಮಿಸಿದೆ. ನನ್ನ ಬದುಕಿನ ಸುಖದುಃಖಗಳೆಲ್ಲಾ ಸಂದರ್ಭಾನುಸಾರ ನನ್ನೆದೆಯಲ್ಲಿ ಕವಿಗಳ ಭಾವಗೀತೆಗಳಾಗಿ ಮೇಳೈಸಿ ಮೈಮರೆತು ಮುಕ್ತಿಯ ಮಾರ್ಗ ಕಂಡುಕೊಳ್ಳುವ ಬಗೆಯನ್ನು ಕಂಡು ವಿಸ್ಮಯಗೊಂಡಿದ್ದೇನೆ. ನನ್ನ ಸಕಲ ಹಾವಭಾವಗಳ  ಭಾಷೆಯನ್ನು ಬಲ್ಲ ಈ ಗೀತೆಗಳು ಕೆಲವೊಮ್ಮೆ ಅರಿಸ್ಟಾಟಲ್  ಕೆಥಾರ್ಸಿಸ್ ನ್ನು ಪ್ರಯೋಗಿಸಿ ನನ್ನನ್ನು ಭಾವಶೋಧನೆಗೊಳಗೂ ಮಾಡಿವೆ. ನೇಸರನ ಎಳೆಯ ಪಡಿನೆಳಲಿನಲ್ಲಿ ಆಸ್ವಾದಿಸಿದ ಗೀತೆಯೊಂದು ಇಡೀ ದಿನ ಸಂದರ್ಭ ಒದಗಿದಾಗೆಲ್ಲಾ ನನ್ನ ಮೇಲೆ ಆಗಾಗ ದಾಳಿಯಿಟ್ಟು ಹೃದಯವನ್ನು ಸೂರೆಗೊಳ್ಳುವ ಭಾವಾಲಾಪಕ್ಕೆ ನಾನು ಬೆಕ್ಕಸ ಬೆರಗಾಗಿದ್ದೇನೆ. ಮೋಹದ ಬಲೆಯಲ್ಲಿ ಸಿಲುಕುವುದೆಂದರೆ ಅದು ಗೀತೆಗಳ ಲಯದಲ್ಲಿ ನಾದವಾಗುವುದೆಂದೇ ಅರ್ಥ.

ಶುಭಮುಂಜಾನೆಯ ಸುಖೋಲ್ಲಾಸದ ಸಮಯದಲ್ಲಿ  ಭಕ್ತಿಯ ಮಂಜನ್ನು ಎರಕ ಹೊಯ್ಯುವ " ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನೆವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ..' ಎಂಬ ಹಾಡು ನನಗೆ ದೇವನನ್ನು ಕಾಣಲು ದಾರಿ ತೋರುವ ಬೆಳಕಿಂಡಿಯಾಗಿ ಕಂಡಿದೆ. ನನ್ನ ಪ್ರತಿದಿನವೂ ಇಂತಹ ಮೈಮನ ಸೂರೆಗೊಳ್ಳುವ  ಸುಪ್ರಭಾತದಿಂದಲೋ ಅಥವಾ ಭಾವಗೀತೆಗಳಿಂದಲೋ  ಪ್ರಾರಂಭವಾಗಬೇಕೆಂದು ಬಯಸುತ್ತೇನೆ. ನನ್ನಲ್ಲಿ  ಚೈತನ್ಯವನ್ನು ಸ್ಫುರಿಸುವ  ಈ ಗೀತೆಗಳು ನನ್ನೊಳಗೆ ಹುದುಗಿರುವ ಭಾವಮೊಗ್ಗುಗಳನ್ನು ಮೈಚಾಚಿ ಅರಳುವಂತೆ ಮಾಡುತ್ತವೆ. ಇನ್ನು ಸುಪ್ರಭಾತವೇ ಭಾವಗೀತೆಯಾದರಂತೂ ಮಹದಾನಂದದ ಹೊಳೆಯಲ್ಲಿ ಮನಸು ಕೊಚ್ಚಿಹೋಗುವುದೊಂದೇ ದಾರಿ. ಮುಸ್ಸಂಜೆಯ ಒಂದು ಇಳಿಹೊತ್ತಿನಲ್ಲಿ ಎಲ್ಲಿಂದಲೋ ತೇಲಿ ಬಂದ ' ನೀನಿರದೇ ಬಾಳೊಂದು ಬಾಳೆ ಕೃಷ್ಣಾ....ಎಂಬ ಭಾವರಾಗ ವಿರಹದ ಬೇಗೆಯಲ್ಲಿ ಬೇಯುತ್ತಿರುವ ರಾಧೆಯನ್ನೇ ಕಣ್ಣೆದುರಿಗೆ ಕಡೆದು ನಿಲ್ಲಿಸುತ್ತದೆ. ಮನಸು ಬೃಂದಾವನದ ಅಂಗಳದಲ್ಲಿನ ಕೃಷ್ಣ ರುಕ್ಮಿಣಿಯರ ಸಲ್ಲಾಪದ ಪಿಸುಮಾತುಗಳ ಶೋಧನೆಗಿಳಿಯುವಂತೆ ಮಾಡುತ್ತದೆ. ಭಾವನೆಗಳ ಚಿಟ್ಟೆಯ ಮೇಲೆ ವಿಹರಿಸುವ ಭಾಗ್ಯವನ್ನು ಕಲ್ಪಿಸುವ ಭಾವಗೀತೆಗಳ ಆಸ್ವಾದನೆಯೇ ನನಗೆ ಹೃದಯಂಗಮವೆನಿಸಿದೆ. ಜಿ. ಎಸ್.ಎಸ್. ರವರ ಕಾಣದಾ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನಾ ಕಡಲನುಕೂಡಬಲ್ಲೆನೆ ಒಂದು ದಿನಾ...ಎಂಬ ಗೀತೆಯನ್ನು ಕೇಳುತ್ತಲೇ ಕಾಣದ ಭಾವಸಾಗರದತ್ತ ತುಡಿದಿದ್ದೇನೆ. ಹಂಬಲಗಳ ಬೆನ್ನು ಹತ್ತಿ ಸಾವಿರ ನದಿಗಳ ಹುಡುಕಾಟಕ್ಕಿಳಿದಿದ್ದೇನೆ. 
ಲೋಕವ್ಯವಹಾರದ ಬಿರುಗಾಳಿಗೆ ಸಿಲುಕಿ ಅಲ್ಲೋಲಕಲ್ಲೋಲವಾಗುವ ಮನಕಡಲನ್ನೇ ಪ್ರಶಾಂತಗೊಳಿಸುವ ಮಾಂತ್ರಿಕ ಶಕ್ತಿಯನ್ನು  ಭಾವಗೀತೆಗಳೊಂದಿಗಿನ ಯಾಣ ನೀಡಬಲ್ಲದೆಂಬುದಕ್ಕೆ ನನ್ನನ್ನು ಆಗಾಗ ಹತ್ತಿರ ಕರೆದು ಕುಶಲೋಪರಿಯನ್ನು ಕೇಳಿದಂತಿರುವ " ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು..
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಎಂಬ ಗೀತೆಯು ಆಗಾಗ ಅಂತರಾಳದಲ್ಲಿ ಮೊರೆದು, ಬಯಕೆಗಳ ಮೋಹಕ ಜಾಲವನ್ನು ಹೆಣೆದು ಕುಣಿದಿದೆ. ಕವಿಪ್ರತಿಭೆ ಯಾವುದೋ ಸಂದರ್ಭದಲ್ಲಿ  ಕವಿಯನ್ನು ಸೆಳೆದು ಬೆಳಗುವ ಹಾಗೆ ಭಾವಗೀತೆಗಳೂ ಸಹೃದಯರಲ್ಲಿ  ಅನಾಮಿಕ ಸಂದರ್ಭದಲ್ಲಿ  ಮಿಂಚಿನ  ಸಂಚಲನವನ್ನುಂಟು ಮಾಡಿ ಪರಕಾಯ ಪ್ರವೇಶದಿಂದ ಕುಣಿದು ತಣಿಯುತ್ತವೆ. ಸಹೃದಯವನ್ನು ಕುಣಿಸಿ ನಲಿಸುತ್ತವೆ. ಹಾಗೆ ಎದೆಯೊಳಗಿಳಿದು ನಲಿಯುವ ಗೀತೆಗಳ ಮಾಧುರ್ಯ ಬಣ್ಣಿಸಲಸದಳವಾದದ್ದು. ಭಾವಾಂತರಂಗವನ್ನು ಮೀಟಿದ ಕುವೆಂಪುರವರ 'ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ....ಎಂಬ  ಭಾವಗೀತೆ ನನ್ನನ್ನು ಕವಿಯ ಆಶಯದಂತೆ ಸತ್ಯಾವತಾರವನ್ನು ಪ್ರಾರ್ಥಿಸುವಂತೆ ಮಾಡುತ್ತದೆ. ಸುಗಮ ಸಂಗೀತದ ಮೇರು ಧೃವತಾರೆ ಸಿ. ಅಶ್ವತ್ಥ ಅವರ ಶಾರೀರದಲ್ಲಿ ಮೊಳಗಿದ ಇಂತಹ ಭಾವನಾದದ ರಸಪಾಕವನ್ನು ಅನುಭವಿಸಿಯೇ ಸವಿಯಬೇಕು. ಭಾವಗೀತೆಗಳೊಂದಿಗಿನ ಸಾಂಗತ್ಯವೆಂದರೆ ಬೆಳದಿಂಗಳ ಚಂದಿರನೊಂದಿಗೆ ಮಾತಿಗಿಳಿದಂತೆ; ಹಕ್ಕಿಗಳ ಕಲರವದೊಂದಿಗೆ ಸಂವಾದಕ್ಕಿಳಿದಂತೆ; ಮನೆಯ ಮುಂದಿನ ಗಿಡದಲ್ಲರಳಿದ ಮಲ್ಲಿಗೆಯ ಗಂಧದಲ್ಲಿ ಮೈಮರೆತಂತೆ; ನಿತಾಂತವಾಗಿ ಹರಿಯುವ ನದಿಯ  ಜುಳು ಜುಳು ನಿನಾದದೊಂದಿಗೆ ಆಲಾಪಗೈದಂತೆ. ಸುಪ್ರಭಾತ ಇಲ್ಲವೇ ಭಾವಗೀತೆಯೊಂದು ಕೇಳದ ಆ ದಿನದ ನನ್ನ.ಮನಸು  ಒಣಗಿದ ತೆಂಗಿನ ಮರದಂತೆ ಬರಡು ಬರಡಾಗಿ ಒಣಗಿದ ಪುರಲೆಯಂತಾಗುತ್ತದೆ. ಭಾವದುಂಬಿಗಳು ಮುತ್ತಿ ಕರೆದೊಯ್ಯುವ ಮಾಯಾ ಲೋಕದ ದರ್ಶನ ನನಗೆ ಸಾಧ್ಯವಾಗುವುದು ಈ ಭಾವಗೀತೆಗಳಿಂದಲೇ. ಮಣ್ಣಿನ ವಾಸನೆಯ ಜಾಡು ಹಿಡಿದು ಜೀವತಳೆಯುವ ಎರೆಹುಳುವಿನಂತೆ, ಸದವಕಾಶ ಒದಗಿದಾಗಲೆಲ್ಲಾ ಭಾವಗೀತಾಂತರಂಗದ ಬೆನ್ನು ಹತ್ತಿ ಅಂತರ್ಮುಖಿಯಾಗುತ್ತೇನೆ. ದಿನದಲ್ಲಿ ಒಮ್ಮೆಯಾದರೂ ಗೀತಾಲಾಪಕ್ಕೆ  ಹೃದಯ ತೆರೆಯಲೇಬೇಕು. ನನ್ನ ದೇಹ ಮತ್ತು ಮನಸುಗಳು  ಸಲ್ಲಿಸುವ ಸೇವೆ ನನ್ನೊಳಗಿನ ಜೀವಾತ್ಮಕ್ಕೆ ದಕ್ಕಿದ್ದು ಈ ಭಾವಗೀತೆಗಳಿಂದಲೇ. ಎದೆ ತುಂಬಿ ಹಾಡಿದೆನು ಅಂದು ನಾನುಮನವಿಟ್ಟು ಕೇಳಿದಿರಿ ಅಲ್ಲಿ ನೀವು...ಎಂಬ ಜಿ ಎಸ್ ಶಿವರುದ್ರಪ್ಪನವರ ಹಾಡು, ಭಾವಬಿಂದುಗಳೆಲ್ಲ ಪ್ರೇಕ್ಷಕರ ರೂಪ ತಾಳಿ ಕಣ್ಣೆದುರು ಕುಳಿತು ಸಂವಾದಕ್ಕಿಳಿದಂತಿದೆ. ಹೌದು. ಮಾನವನಲ್ಲಿ  ಭಾವಗಳ ಗುಪ್ತಗಾಮಿನಿಯೊಂದು ಪ್ರವಹಿಸುತ್ತಲೇ ಇರುತ್ತದೆ. ಅದರ ನಿನಾದಕ್ಕೆ ಕಿವಿಗೊಟ್ಟಾಗಲೇ ಅಂತರಂಗದ ಶುದ್ಧಿಯನ್ನು ಸಾಧಿಸಿ ಭಾವಸಮಾಧಿಗೇರಲು  ಸಾಧ್ಯವಾಗುತ್ತದೆ. ಚೆನ್ನಮಲ್ಲಿಕಾರ್ಜುನನ ಲೀಲೆಗೆ ಅಕ್ಕ ,ಕೂಡಲಸಂಗಮದೇವನ  ಒಲುಮೆಗೆ ಬಸವಣ್ಣ, ಮಾಯೆಯ ಬಯಲಾಟಕ್ಕೆ ಅಲ್ಲಮ, ಈಸಕ್ಕಿಯಾಸೆಯನ್ನು  ಹುಟ್ಟಿಸುವ ಬಯಕೆಗೆ ಆಯ್ದಕ್ಕಿ ಮಾರಯ್ಯ ಬೆರಗಾದಂತೆ ಭಾವಗೀತೆಗಳ  ಅದಮ್ಯ ಸೆಳೆತಕ್ಕೆ ಎಚ್ಚರದ ಜೀವಗಳು ಬೆರಗಾಗಲೇಬೇಕು.
ಹಾಗೆಂದು ಕೇವಲ ಭಾವಗೀತೆಗಳಷ್ಟೇ ನನ್ನ ಮನಸೂರೆಗೊಂಡಿಲ್ಲ;  ಚಹಾಶಾಲೆಯೊಳಗಿನ ಉಪಹಾರ ಸಮಯದ 'ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ ...ಎಂಬ ದಾಸರ ಕೀರ್ತನೆಗಳೂ ನನ್ನೊಳಗಿನ ದಿವ್ಯಾನಂದದ ತುಡಿತವನ್ನು ಇಮ್ಮಡಿಗೊಳಿಸಿವೆ. ಇಂತಹ ಭಾವಯಾಣಕ್ಕೆ ಭಕ್ತಿಯ ಸುಪ್ರಭಾತ ಹಾಗೂ  ಭಾವಗೀತೆಗಳು ಚೈತನ್ಯಧಾರೆಯನ್ನು ಎರೆದಂತೆ ಆಗಾಗ ಚಲನಚಿತ್ರಗೀತೆಗಳೂ ಬಳಿ ಬಂದು ರಸಮಾಧುರ್ಯವನ್ನು  ಹಣಿಸಿವೆ. ೧೯೭೬ ರಲ್ಲಿ ಮೊಹಮ್ಮದ್ ಝಹೂರ್ ಖಯ್ಯಾಂ ಹಷ್ಮಿ ಸಂಗೀತ ನಿರ್ದೇಶನದ ಕವಿ ಮಜ್ರೂಹ್ ಸುಲ್ತಾನಪುರಿ ಅವರ ಉರ್ದು ಕವನ ಸಂಕಲನ 'ತಲ್ಖಿಯಾನ್' ನ ಕವಿತೆಯಾದ  "ಕಭಿ ಕಭಿ ಮೇರೇ ದಿಲ್ ಮೆ ಖಯಾಲ್ ಆತಾ ಹೈ..."  ಎಂಬ ಗೀತೆಯನ್ನು ಕೇಳಿದ ಮನಸು ಈಗಲೂ ಆನಂದದ ಉಯ್ಯಾಲೆಯಲ್ಲಿ ಕುಳಿತು ಪ್ರೇಮಾಲಾಪಗೈಯ್ಯುತ್ತದೆ. ನಟಸಾರ್ವಭೌಮ ಡಾ.ರಾಜಕುಮಾರರವರ ಧ್ವನಿಯಲ್ಲಿನ ಸುಮಧುರ ಕನ್ನಡ ಗೀತೆಗಳ  ಮಂಜುಳಗಾನವನ್ನು ಮೌನದ ಮಹಲಿನಲ್ಲಿ ನಿಂತೇ ಸವಿಯಬೇಕು. "ಹೂವಿಂದ ಬರೆವ ಕಥೆಯಾ ಮುಳ್ಳಿಂದ ಬರೆದೆ ನಾನು| 
ಉಲ್ಲಾಸ ತರುವ ಮನಕೆ ನೋವನ್ನೇ ತಂದೆ ನಾನು...ಎಂಬ ಸ್ವರ್ಣಸಂಗೀತಮಾಲೆ ಎಂಥವರ ಎದೆಯಲ್ಲಿಯೂ ಮಧುರ ಪ್ರೇಮರಸಾಯನವನ್ನು ಉಕ್ಕಿಸಬಲ್ಲದು. ತ್ರಿಮೂರ್ತಿ  ಚಲನಚಿತ್ರದ ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜನೆಯಲ್ಲಿ ಚಿ.ಉದಯಶಂಕರರ ಲೇಖನಿಯಲ್ಲಿ ಡಾ ರಾಜಕುಮಾರರ ಕಂಠಸಿರಿಯಲ್ಲಿ ಮೊಳಗಿದ 'ಮೂಗನ ಕಾಡಿದರೇನು ಸವಿ ಮಾತನು ಆಡುವನೇನು| ಕೋಪಿಸಲು ನಿಂದಿಸಲು ಮೌನವ ಮೀರುವನೇನು... ಗೀತೆಯು ಹೃದಯವನ್ನು ಹಿಂಡುತ್ತದೆ; ಮಾತು ಬಲ್ಲವನನ್ನೂ ಮೂಕನನ್ನಾಗಿಸುತ್ತದೆ. ಡಾ. ರಾಜಣ್ಣನವರೇ ಹಾಡಿದ  'ಬಡವರ ಬಂಧು' ಚಲನಚಿತ್ರದ, ಸಾಹಿತ್ಯ ರತ್ನ ಚಿ.ಉದಯಶಂಕರ್ ವಿರಚಿತ 'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ | ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ.. ಗೀತೆ ಆಲಿಸಿದಾಗೊಮ್ಮೆ ಹೃದಯದಲ್ಲಿ ಬಿಸಿಯುಸಿರು ಹುಟ್ಟಿಸಿ ಹೃದಯಕಮಲವನ್ನು ಆರ್ದ್ರವಾಗಿಸುತ್ತದೆ. ಇಂತಹ ಮಧುರವಾದ ಗಾನನಿನಾದದ ಪ್ರಭೆಯಲ್ಲಿ ಕಳೆದುಹೋಗುವಾಗ ಸಿಗುವ ಪರಮಸುಖ ಮತ್ತೆಲ್ಲಿ ದೊರೆತೀತು ಹೇಳಿ. ಒತ್ತಡದ ಮನೆಯಿಂದ ಹೊರಬಂದು ನಿಸರ್ಗದ ರಮಣೀಯತೆಯಲ್ಲಿ ಐಕ್ಯವಾಗಲು ಇರುವ ಹೆಬ್ಬಾಗಿಲು ಅದು ಸಂಗೀತ. ಗೀತೆಗಳ ರಸಗಂಗೆಯಲ್ಲಿ ತೇಲಿಹೋಗುವ ಮನದ ಭಾವಪಯಣ ಅನನ್ಯವಾದುದು.ನಿರ್ಮಲವಾದದ್ದು."ಪ್ರೇಮವೆಂಬುದು ಪವಿತ್ರ ಕಾರ್ಯ. ಪ್ರೇಮಿಸುವ ಮಂದಿರಕ್ಕೆ ಹೋಗುವಾಗ ಶುಭ್ರವಾಗಿ ಸ್ನಾನ ಮಾಡಿ,  ನಿಮ್ಮ ಬೂಟುಗಳನ್ನು ಹೊರಗೇ ಬಿಡಿ. ಆ ಬೂಟುಗಳಲ್ಲೇ ನಿಮ್ಮ ಮೆದುಳನ್ನು ಇಟ್ಟು ಒಳಗೆ ಹೋಗಿ. ಪ್ರೇಮಕ್ಕೆ ತೊಡಗುವ ಮುಂಚೆ ಕೆಲವು ನಿಮಿಷ ಧ್ಯಾನ ಮಾಡಿ ನಂತರ ಆ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ" ಎಂಬ ಓಶೋ ರ ಮಾತುಗಳು ಭಾವಗೀತೆಗಳ ಆರಾಧನೆಗೂ ಅಷ್ಟೇ ಅನ್ವರ್ಥಕದಂತಿವೆ. ಮನುಷ್ಯ ಭವದ ಕೇಡುಗಳ ಕೆಸರಿನಲ್ಲಿದ್ದು ಕಮಲದಂತೆ ಅರಳಬೇಕಾದರೆ ಇಂತಹ ಗೀತೆಗಳೊಂದಿಗಿನ ಪಯಣ ಅತ್ಯವಶ್ಯಕವೆಂದೆನಿಸುತ್ತದೆ. ಭವಸಾಗರದ ಬಿಡುವಿಲ್ಲದ, ಬಿಡುಗಡೆಯಿಲ್ಲದ ಮುಗಿಯದ ದೀರ್ಘ ಪಯಣದ  ಮಧ್ಯೆ ಇಂತಹ ಗೀತಮಣಿಗಳ ಹುಡುಕಾಟಕ್ಕಿಳಿಯಲೇಬೇಕು. ನಮ್ಮಲ್ಲಿನ ಸಂಕಟಗಳನ್ನು ಮರೆಸುವ, ಆತ್ಮೋನ್ನತಿಯೆಡೆಗಿನ ನಮ್ಮ ದಾರಿಯನ್ನು ಸುಗಮಗೊಳಿಸುವ, ಲೆಕ್ಕಾಚಾರದ ಬದುಕನ್ನು ವ್ಯವಹಾರಕ್ಕೆ ನಿಲುಕದ ಅಮಿತಾನಂದದ ಕಡೆಗೆ ಹೊರಳಿಸುವ, ದೇಹದಿಂದ ಆತ್ಮದೆಡೆಗೆ ಮನಸ್ಸನ್ನು ಸೆಳೆಯುವ, ತುಮುಲಗಳನ್ನು ನಿಯಂತ್ರಿಸಿ ಬದಿಗಿಟ್ಟು  ಆತ್ಮಾನಂದದೊಳಗೆ ನಾವು ಇಳಿಯುವಂತೆ ಮಾಡುವ, ಭಾವಗೀತೆಗಳ ಸಾಂಗತ್ಯವನ್ನು ಹೇಗೆ ಬಣ್ಣಿಸುವುದು? ಮಾಧುರ್ಯದ ರಸಕವಿ ಜಯಂತ ಕಾಯ್ಕಿಣಿಯವರ  "ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...."ಎಂಬ ಭಾವಾಂಜಲಿಯನ್ನು ಆಲಿಸುವುದೇ ತಡ ಮನಸೂರೆಗೊಂಡುಬಿಡುತ್ತದೆ. ಒಲವಿನ ಪೂಜಾರಿಗಳಿಗೆ ಬಿರುಬಿಸಿಲಿದ್ದರೂ ಮುಂಗಾರು ಮಳೆಯ ನೆನಪಾಗುತ್ತದೆ. ಮನದಲ್ಲಿಯೇ ತಂಗಾಳಿ ಸುಳಿದಂತಾಗುತ್ತದೆ. ಮೋಡಗಳ  ಗುಡುಗು ಎದೆಯಲ್ಲಿ ಲಯಗೊಂಡಂತಾಗುತ್ತದೆ. ಮನದ ಮೂಲೆಯಲ್ಲಿ ಒಲವಿನ ಮಂದ ಮಳೆಗಾಳಿ ಸುಳಿಯಾಗಿ ತಿರುಗಲಾರಂಭಿಸುತ್ತದೆ. ಇಂತಹ ಗಾನಮಾಧುರ್ಯ ನೀಡಿದ ಸಂಗೀತ ಕಾರಣಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು.ಇದೇ ಗೀತೆಯ "ಮುಗಿಲು ಸುರಿದ ಮುತ್ತಿನ ಗುರುತುನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತುಹೆಜ್ಜೆ ಗೆಜ್ಜೆಯಾ ಸವಿ ಸದ್ದು ..." ಎಂಬ ಸಾಲುಗಳನ್ನು ಕೇಳುವಾಗಲಂತೂ ಒಲವಿರದ ಎದೆಗೂಡಿನಲ್ಲಿಯೂ ಪ್ರೀತಿಯೊಡತಿಯ ಸದ್ದು ಕೇಳಲಾರಂಭಿಸುತ್ತದೆಯೆಂದರೆ ಭಾವಗೀತೆಗಳ ಲೀಲಾ ವಿಲಾಸವೆಂತಹುದು ಎಂಬುದನ್ನರಿಯಬಹುದು.ಭಾವಗೀತೆ ಎಂಬ ಹಕ್ಕಿಗಳ ಕಲರವವೇ ಅಂತಹದ್ದು. ಚಿಲಿಪಿಲಿ ಎಂದೋದುತ್ತಲೇ ತಮ್ಮ ಅಂತರಂಗದ ಸ್ವಚ್ಛಂದ  ನೀಲಾಗಸಕ್ಕೆ ನಮ್ಮನ್ನು ಕೈಹಿಡಿದು ತಾವು ವ್ಯಾಪಿಸಿದ ಭಾವಜಗತ್ತಿಗೆ ಕರೆದೊಯ್ದು ವಿಹರಿಸುವಂತೆ ಮಾಡಿ ಸವಿಜೇನನ್ನು ಉಣಬಡಿಸುತ್ತವೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...