Total Pageviews

Saturday 30 June 2018

ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ ೨

ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ

                 ಹೊಸದಾಗಿ ನೇಮಕವಾಗಿರುವ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ   ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ವತಿಯಿಂದ ದಿನಾಂಕ ೨೧-೫-೨೦೧೮ ರಿಂದ ದಿನಾಂಕ ೧೦-೫-೨೦೧೮ ರವರೆಗೆ ನಡೆದ ವೃತ್ತಿ ಬುನಾದಿ ತರಬೇತಿಯ ಮುಂಗಾರು ಮಳೆಗಾಲದ ಹೊಸ್ತಿಲಲ್ಲಿದ್ದ ಧಾರವಾಡದ ಪ್ರಕೃತಿಯ ಮಡಿಲಿನ  ಶತಮಾನೋತ್ಸವ  ಭವನದಲ್ಲಿ ಕಳೆದ ಆ ದಿನಗಳು ಮರಳಿ ನಮ್ಮನ್ನು ಕಾಲೇಜು ನೆನಪುಗಳಿಗೆ ತೆರದುಕೊಳ್ಳುವಂತೆ  ಅವಿಸ್ಮರಣೀಯವಾಗಿದ್ದವು.

          ಅರಿಸ್ಟಾಟಲ್ ಸ್ಥಾಪಿಸಿದ್ದ ಗ್ರೀಕ್  ಅಕಾಡೆಮಿಯ ನೆನಪೊಂದು ಸುಳಿದುಹೋಗುವಂತೆ ನಡೆದ ಜ್ಞಾನದ ಚಿಂತನ ಮಂಥನಗಳು  ನಮ್ಮ ದೃಷ್ಟಿಕೋನಕ್ಕೆ ಹೊಸ ಆಯಾಮಗಳನ್ನು ನೀಡುವಲ್ಲಿ ಸಹಕಾರಿಯಾದವು.

                      ಇಂತಹ  ಉನ್ನತ ಶಿಕ್ಷಣ ಅಕಾಡೆಮಿಯ  ನಿರ್ದೇಶಕರಾಗಿರುವ ಡಾ ಶಿವಪ್ರಸಾದರವರು ಸಿ ಎನ್ ಆರ್ ರಾವ್, ಅಬ್ದುಲ್ ಕಲಾಂ, ರಂತಹ ಶ್ರೇಷ್ಠ  ವಿಜ್ಞಾನಿಗಳೊಂದಿಗೆ  ಕಾರ್ಯನಿರ್ವಹಿಸಿದ  ಅನುಭವವನ್ನು ಹೊಂದಿದ್ದಾರೆ. ಸೆಕೆಂಡುಗಳಲ್ಲಿ ಲೆಕ್ಕಹಾಕುವ ಅವರ ಸಮಯಪ್ರಜ್ಞೆಯಂತೂ ನಮಗೆಲ್ಲಾ ಮಾದರಿಯಾಗಿದೆ.ಅವರು ನಮ್ಮ ಪಾಠಬೋಧನೆಯ ವಿಧಾನಕ್ಕೆ ನೀಡಿದ ಸಲಹೆಗಳು ನಮ್ಮ ತರಗತಿಗಳನ್ನು ಸದಾ ಜೀವಂತವಾಗಿಡುವಲ್ಲಿ ಹಾಗೂ ವಿದ್ಯಾರ್ಥಿ ಕೇಂದ್ರಿತ ತರಗತಿ ನಿರ್ಮಾಣದಲ್ಲಿ ಎಂದೆಂದಿಗೂ ನಮಗೆ ನೆರವಾಗುತ್ತವೆ.
"ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತಿದ್ದಿತಯ್ಯಶಿವನ ಪ್ರಕಾಶ  "ಎಂಬ ವಚನದಲ್ಲಿನ ಆ 'ಶಿವನ ಪ್ರಕಾಶ' ಡಾ ಶಿವಪ್ರಸಾದರಾಗಿದ್ದಾರೆ  ಎಂಬ ನಂಬಿಕೆ ನಮ್ಮದು.
             ಸಾಮಾನ್ಯವಾಗಿ ವಿಜ್ಞಾನಿಗಳೆಲ್ಲ 
ದೇವರಲ್ಲಿ ನಂಬಿಕೆಯಿಲ್ಲದ ನಾಸ್ತಿಕವಾದಿಗಳು. ಡಾ.ಶಿವಪ್ರಸಾದರು ಅಂತಹ  ನಾಸ್ತಿಕರಾಗಿದ್ದರೂ, ಉದಾತ್ತ ಚಿಂತನೆಗಳಿಂದ ಸದಾ  ದೈವತ್ವದ ಕಡೆಗೆ ತುಡಿಯುತ್ತಿರುವ ಮುಗ್ಧ ಜೀವಿ.ಡಾ.ಶಿವಪ್ರಸಾದರವರು ವಿಜ್ಞಾನಿಯಾಗಿ,ದೇಶದ ಉಜ್ವಲ  ಭವಿಷ್ಯದ ಕನಸುಗಾರರಾಗಿ,ಶಿಕ್ಷಣ ತಜ್ಞರಾಗಿ,ಮಹೋನ್ನತ ಚಿಂತನೆಗಳ ಹರಿಕಾರರಾಗಿ ನಮ್ಮನ್ನು ಆಳವಾಗಿ  ಪ್ರಭಾವಿಸಿದ  ಘಳಿಗೆಗಳನ್ನು ಹಂಚಿಕೊಳ್ಳಲೇಬೇಕು.

         ಅವರು ತೆಗೆದುಕೊಂಡ ಮೂಲ ವಿಜ್ಞಾನದ ಕೆಲವು ಭೌತಿಕ ಸಂಗತಿಗಳನ್ನು ಕುರಿತ  ಒಂದು ತರಗತಿ  ವಿಜ್ಞಾನ ವಿಷಯದ ಬಗೆಗಿನ ನಮ್ಮ ವಿಜ್ಞಾನವೆಂದರೆ ಬಲ ಶಕ್ತಿ ದ್ರವ್ಯ ಚಲನೆ ವೇಗ ಜೀವಿ ಗಳ ರಸಾಯನವಾಗಿದ್ದು ಅರ್ಥವಾಗದ ಶಾಸ್ತ್ರ ವೆಂಬ  ಪೂರ್ವಾಗ್ರಹಪೀಡಿತ  ಮೂಲ ಕಲ್ಪನೆಗಳನ್ನು, ಬದಲಾಯಿಸಿಕೊಳ್ಳುವಂತೆ ಮಾಡಿತು.ನಮ್ಮಂತಹ ಭಾಷಾ ಪ್ರಾಧ್ಯಾಪಕ ಶಿಬಿರಾರ್ಥಿಗಳಿಗೆ ವಿಜ್ಞಾನದ ಪಾಠವನ್ನು  ಸರಳವಾಗಿ,ಸುಲಲಿತವಾಗಿ,ಉದಾತ್ತವಾಗಿ, ಹಾಸ್ಯಭರಿತ  ಜೀವನದ ನಿತ್ಯ ಸಂಗತಿಗಳೊಂದಿಗೆ ಅನ್ವಯಿಸಿ ಹೇಳುವ ಅವರ ಉಪನ್ಯಾಸ ಕೌಶಲ ಬೆರಗುಗೊಳಿಸುವಂತಹುದಾಗಿದೆ.

                      ಉದಾಹರಣೆಗೆ ಬೆಳಕಿನ' ಘಟಕಗಳಾಗಿರುವ  VIBGYOR ಎಂಬ ಸೂತ್ರದಲ್ಲಿರುವ ಪ್ರಪಂಚದ ಕಣ್ಣಿಗೆ ಕಾಣುವ ಏಳು ಬಣ್ಣಗಳು (ವಿಜ್ಞಾನದ ಪ್ರಕಾರ ಬೆಳಕಿನಲ್ಲಿ ಹಲವಾರು ಬಣ್ಣಗಳಿವೆ) ಈ ವಿಶ್ವದ ಪ್ರತಿಯೊಂದು ಭೌತಿಕ ವಸ್ತುವಿನ ಮೇಲೆ ಬಿದ್ದು ಉಂಟು ಮಾಡುವ ಪರಿಣಾಮವನ್ನು ತರಗತಿಯಲ್ಲಿನ ಕೆಲವು ವಸ್ತುಗಳ ಮೂಲಕ ವಿಶ್ಲೇಷಿಸಿದ ಡಾ.ಶಿವಪ್ರಸಾದರವರ ಪ್ರಾತ್ಯಕ್ಷಿಕೆ ಅನನ್ಯವಾಗಿತ್ತು.                                      ಯಾಜ್ಞವಲ್ಕ್ಯ ಮಹರ್ಷಿ ಹೇಳಿದ ಬಯಲು ಮತ್ತು ಬೆಳಕು ಎಂಬ ವಿಶ್ವದ ಎರಡು ಮಹತ್ವದ ಸಂಗತಿಗಳು ಭೌತಶಾಸ್ತ್ರದ ತಳಹದಿಯಾಗಿವೆ.ಈ ಭೌತಶಾಸ್ತ್ರದ ಬೆಳಕಾಗಿರುವ 'ಬೆಳಕಿ'ನ ವೇಗ, ಚಲನೆ,ಮುಂತಾದ ಕೌತುಕದ ಸಂಗತಿಗಳನ್ನು ಅವರು ವಿಶ್ಲೇಷಿಸಿದ ರೀತಿ ಮನಮುಟ್ಟುವಂತಿತ್ತು. ವಿಜ್ಞಾನಕ್ಕೆ ಸವಾಲಾಗಿರುವ  'QUANTUM MECHANICS 'ನ ಇತಿಹಾಸ, ಉದಾಹರಣೆಗಳೊಂದಿಗೆ  ಅರ್ಥೈಸಿ ಹೇಳುವ  ಶೈಲಿ ನಮ್ಮನ್ನು ಗಾಢವಾಗಿ ಪ್ರಭಾವಿಸಿತು.
              ಡಾ. ಶಿವಪ್ರಸಾದ ಗುರುಗಳು ಉಲ್ಲೇಖಿಸಿದ   ಖ್ಯಾತ ಭೌತವಿಜ್ಞಾನಿ  Richard  Feynman ಹೀಗೆ ಹೇಳುತ್ತಾನೆ ".   Fall in love with some activity, and do it! Nobody ever figures out what life is all about, and it doesn't matter. Explore the world. Nearly everything is really interesting if you go into it deeply enough. Work as hard and as much as you want to on the things you like to do the best. Don't think about what you want to be, but what you want to do. Keep up some kind of a minimum with other things so that society doesn't stop you from doing anything at all." 
ಇವನ ಹೇಳಿಕೆಯಂತೆ ನಾವೆಲ್ಲರೂ ಮತ್ತೆ ಬಸವಣ್ಣನವರ 'ಕಾಯಕ ತತ್ವದ  ಕೈಲಾಸ'ಕ್ಕೆ ಪ್ರೀತಿಯಿಂದ ಹೊರಳಬೇಕಾಗಿದೆ. 

         ಇಡೀ ಬ್ರಹ್ಮಾಂಡದಲ್ಲಿ 'ನಾನು' ಎಂಬ ಸ್ಥಾನ ಬಹು ಕುಬ್ಜ ಹಾಗೂ ಲೆಕ್ಕಕ್ಕೂ ಸಿಗದಷ್ಟು ನಗಣ್ಯ, ಅಲಕ್ಷಿತ.ಆದರೂ 'ನಾನು' ಎಂಬ ಅಸ್ತಿತ್ವದ ಏಕಮಾತ್ರ ಕಾರಣದಿಂದಾಗಿ ಈ ವಿಶಾಲ ಬ್ರಹ್ಮಾಂಡವನ್ನು ದರ್ಶಿಸಲು, ಅನ್ವೇಷಿಸಲು ಸಾಧ್ಯವಾಗಿದೆ ಎಂಬುದೇ ವಿಸ್ಮಯ ಎಂಬ  ಡಾ.ಶಿವಪ್ರಸಾದ ಗುರುಗಳು ಉದಾಹರಿಸಿದ ಸಿದ್ಧಾಂತ ಸಂತ ಶಿಶುನಾಳ ಶರೀಫರ "ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ....." "ತತ್ವಪದದಲ್ಲಿನತತ್ವಶಾಸ್ತ್ರವನ್ನು ಅರಿವಿಗೆ ತಂದುಕೊಳ್ಳುವಂತೆ ಮಾಡಿತು.
ಉದಾಹರಣೆ ೨  CONDUCTORS,SEMI CONDUCTORS,NON CONDUCTORS ಗಳಲ್ಲಿ ಇಲೆಕ್ಟ್ರಾನುಗಳು ತಮ್ಮ home orbit ನಿಂದ  Free orbit ಗಳಿಗೆ ಬಾಹ್ಯ ಶಕ್ತಿಯನ್ನು ನೀಡಿದಾಗಿನ ಅವುಗಳ ಚಲನೆ, ಈ ಚಲನೆಯ ಕಾರಣದಿಂದಾಗಿ ಉಂಟಾಗಿರುವ CONDUCTOR ನ ಈ ಮೂರು  ಪ್ರಕಾರಗಳನ್ನು ಕುರಿತು ಪಿಪಿಟಿಯ ಚಿತ್ರಗಳ ಪ್ರದರ್ಶನದ ಮೂಲಕ  ಅವರು ಮಾಡಿದ ಪಾಠ ನಮ್ಮಂತಹ ಕಲಾ ಪ್ರಾಧ್ಯಾಪಕರಿಗೆ ಅತ್ಯಂತ ರಸವತ್ತಾಗಿತ್ತು. 
ಉದಾಹರಣೆ ೩-ನ್ಯಾನೊ ಕಣಗಳಿಂದ ನಮ್ಮ  ಬದುಕಿನ ಸರ್ವಕ್ಷೇತ್ರಗಳಲ್ಲಿ ಆಗುತ್ತಿರುವ,ಭವಿಷ್ಯದಲ್ಲಿ ಮುಂದಾಗಬಹುದಾದ ಕ್ರಾಂತಿಕಾರಕ ಬದಲಾವಣೆಗಳು ಈ ವಸುಧೆಯಲ್ಲಿಯೇ  ಯಕ್ಷಣಿ ಲೋಕವನ್ನು ಸೃಷ್ಟಿಸಿದರೆ ಅಚ್ಚರಿಪಡಬೇಕಾಗಿಲ್ಲ  ಎಂಬುದನ್ನು ಮನಗಾಣಿಸಿದರು. ವಿಜ್ಞಾನದ ವಾಸ್ತವ ಹಾಗೂ ಸಾಹಿತ್ಯದ ಸೌಂದರ್ಯಗಳು ಮೇಳೈಸಿದಾಗ ಶಿಕ್ಷಣ ಅರ್ಥಪೂರ್ಣತೆಯನ್ನು, ಪೂರ್ಣದೃಷ್ಟಿಯನ್ನು ಪಡೆಯುತ್ತದೆ. ಇವೆರಡನ್ನೂ ಸಮನ್ವಯಗೊಳಿಸಿ ಮಾಡುವ ಪಾಠಗಳು ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಟಿಕೋನವನ್ನು ಬೆಳೆಸುತ್ತವೆ.
          ಆಗ "ಸಾಹಿತ್ಯವು "ವಾಸ್ತವಿಕ ಸೌಂದರ್ಯ ದ ಹೂಬನವಾಗುವುದರಲ್ಲಿ ಸಂಶಯವಿಲ್ಲ ಎಂಬ ಗುರುಗಳ ನಿಲುವು ನಮ್ಮನ್ನು ಜ್ಣಾನ ಶಿಸ್ತುಗಳ ಸಂಗಮದ ವಿಶಿಷ್ಟತೆಯನ್ನು ಅರಿಯುವಂತೆ ಮಾಡಿತು.
ಹೀಗೆ ವಿಜ್ಞಾನದ ವಿಸ್ಮಯಗಳನ್ನು ಕುರಿತು ಡಾ ಶಿವಪ್ರಸಾದರ ಉಪನ್ಯಾಸ ನಮ್ಮನ್ನು ವಿಜ್ಞಾನದ ವಿಧೇಯ ವಿದ್ಯಾರ್ಥಿಗಳನ್ನಾಗಿಸುವುದರ ಜೊತೆಗೆ ಕನ್ನಡ ಸಾಹಿತ್ಯ ದೇವಿಯ ಕಲಾ ಸೌಂದರ್ಯವನ್ನು ಪಾಠ ಮಾಡುವುದರ ಮೂಲಕ ಸವಿಯಲು ಉತ್ಸುಕರನ್ನಾಗಿಸಿದೆ.                                                      ಡಾ ಶಿವಪ್ರಸಾದ ರವರದು ತಲೆತಲಾಂತರದ ಸಾಂಪ್ರದಾಯಿಕ ಔಪಚಾರಿಕತೆಯ ಕಚೇರಿ ಪರಿಸರವನ್ನು ಬದಲಾಯಿಸಬೇಕೆನ್ನುವ, ಎಲ್ಲರೊಂದಿಗೆ ಸಹವರ್ತಿಯಾಗಿ ಬೆರೆಯಬೇಕೆನ್ನುವ 'ಸರಳ ಜೀವನ ಉದಾತ್ತ ಚಿಂತನೆ'ಯ ಹಾಗೂ'ಮಾತಿಗಿಂತ ಕೃತಿ ಲೇಸು ' ಎಂಬ ಬದ್ಧತೆಯ ವ್ಯಕ್ತಿತ್ವ.ನಮ್ಮನ್ನು ಪ್ರಭಾವಿಸಿದ  ಮತ್ತೊಂದು ವಿಶಿಷ್ಟ  ವ್ಯಕ್ತಿತ್ವವೆಂದರೆ ಕಿರಿಯ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ  ಸಂಶೋಧಕರು ಹಾಗೂ ಶಿಕ್ಷಣ ತಜ್ಞರೂ ಆಗಿರುವ ಶ್ರೀ ಸಾಗರ್ ರವರದು.
ಸಾಂಪ್ರದಾಯಿಕ ತರಗತಿಯ ಚೌಕಟ್ಟನ್ನು ಬದಿಗಿರಿಸಿ ಆಧುನಿಕ ಡಿಜಿಟಲ್ ಕಾಲಘಟ್ಟದಲ್ಲಿ ಹೊಸ ತರಗತಿ ಸಂರಚನೆ ಇಂದಿನ ತುರ್ತು ಅಗತ್ಯವಾಗಿದೆ ಎಂಬ ಹೆಸರಿಗೆ ತಕ್ಕಂತೆ ಜ್ಞಾನ ಸಾಗರದಂತಿರುವ ಶ್ರೀ ಸಾಗರ್ ರವರ ಸ್ಥಾಪಿತ ಸಂರಚನೆಯನ್ನು ಮುರಿದು ಹೊಸದಾಗಿ ಕಟ್ಟುವ ಪ್ರತಿಪಾದನೆ ,ಅಕಾಡೆಮಿಯಲ್ಲಿ ನಿರ್ದೇಶಕರ ನೇತೃತ್ವದಲ್ಲಿ ಒಂದು ಹೊಸ ತಂಡ ರಚನೆಯಾಗಲು ನಮ್ಮನ್ನು ಮಾರ್ಗದರ್ಶಿಸಲು ಕಾರಣವಾಗಿದೆ.ಸ್ಪರ್ಧಾತ್ಮಕ ಯುಗವನ್ನೆದುರಿಸಲು ವಿದ್ಯಾರ್ಥಿಗಳನ್ನು  ಸಜ್ಜುಗೊಳಿಸಬೇಕು ಎನ್ನುವ ಹಂಬಲ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಡಾ.ಸಾತಿಹಾಳ ರವರದು.

ಲಾಸ್ಟ್ ಪಂಚ್-'ಧಾರವಾಡದ ಆ ತುಂತುರು ಮಳೆಹನಿ,ತಂಪಾದ AC  ಗಾಳಿ, ಆ ಇಸ್ಕಾನ್ ನ ಸಾತ್ವಿಕ ಊಟ, ಗಂಟೆಗೊಮ್ಮೆ ಕೇಳುವ ಆ ಹಾಳಾದ್  Bell ಸದ್ದು, ಪಾರ್ಕ್ನನಲ್ಲಿ ಕಾರಂಜಿ ಸ್ನಾನ ,ಎಮ್ಮೆ ಸವಾರಿ ಮಜಾ,ಬಿಡುವಿಲ್ಲದ ಕ್ಲಾಸ್ ಗಳು, ಕಲಾಸುಂದರಿ, ಹೋಟೆಲ್ ಕರೀಷ್ಮಾಳ  ಸೆಳೆತ  ಎಲ್ಲಾ ಸೇರಿ ನಮ್ heart ನಲ್ಲಿ ಮಾಸಲಾಗದ ನೆನಪು ಕಟ್ಟಿಬಿಟ್ಟಿವೆ ಕಣ್ರೀ ........


Friday 15 June 2018

'ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....(ಭಾಗ 1)

ನಮ್ಮ ತಂಡ

             ಹೊಸದಾಗಿ ನೇಮಕವಾಗಿರುವ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ   ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ವತಿಯಿಂದ ದಿನಾಂಕ ೨೧-೫-೨೦೧೮ ರಿಂದ ದಿನಾಂಕ ೧೦-೬-೨೦೧೮ ರವರೆಗೆ  ಹಮ್ಮಿಕೊಂಡ ೨೧ ದಿನಗಳ ವೃತ್ತಿ ಬುನಾದಿ ತರಬೇತಿ ನಮ್ಮ ವೃತ್ತಿಸಾಮರ್ಥ್ಯ ಹಾಗೂ ಬೋಧನಾ ಕೌಶಲಗಳನ್ನು ವೃದ್ಧಿಸಿಕೊಳ್ಳಲು  ಪ್ರೇರಣಾತ್ಮಕವಾಗಿತ್ತು.ನಮ್ಮ ನಾಡಿನ ಸಹೃದಯಿ ಖ್ಯಾತ ಸಾಹಿತಿಗಳಾದ ದಿವಂಗತ ಡಾ.ವೃಷಭೆಂದ್ರ ಸ್ವಾಮಿಯವರ ಸುಪುತ್ರರಾಗಿರುವ ಡಾ.ಎಸ್ ಎಂ ಶಿವಪ್ರಸಾದ ರವರು ಈ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ನಿರ್ದೇಶಕರಾಗಿದ್ದಾರೆ.

                      ಅಂತಾರಾಷ್ಟ್ರೀಯ ಮಟ್ಟದ' ಎ' ದರ್ಜೆ ವಿಜ್ಞಾನಿಗಳೂ ಆಗಿರುವ ಶ್ರೀಯುತ ಡಾ.ಶಿವಪ್ರಸಾದ ರವರು  ಅಕಾಡೆಮಿಯ ನೇತೃತ್ವ ವಹಿಸಿರುವುದು ನಮ್ಮ ಭಾಗ್ಯವೇ ಸರಿ. ಇವರು ತಮ್ಮ  ಕಂಗಳಲ್ಲಿ ನವಭಾರತ, ನವಕರ್ನಾಟಕ ನಿರ್ಮಾಣದ ದೂರದೃಷ್ಟಿಯನ್ನು ಹೊಂದಿದ್ದಾರೆ.ಹೆಸರಿಗೆ ತಕ್ಕಂತೆ ಗುಣದಲ್ಲಿ, ಜ್ಞಾನದಲ್ಲಿ, ಆಚಾರದಲ್ಲಿ,ವಿಚಾರಗಳಲ್ಲಿ ,ಬದ್ಧತೆಯಲ್ಲಿ, ಶಿವನ ವರ ಪ್ರಸಾದವೇ ಆಗಿರುವ ಶ್ರೀ ಶಿವಪ್ರಸಾದರವರು ನಮ್ಮಲ್ಲಿರುವ ಸಾಂಪ್ರದಾಯಿಕ ಶಿಕ್ಷಣದ ಬೋಧನಾ ಪದ್ಧತಿಗಳಿಗಿಂತ ವಿಭಿನ್ನವಾಗಿ ವಿಶಿಷ್ಟವಾಗಿ ಪರಿಣಾಮಕಾರಿಯಾಗಿ,ಕ್ರಾಂತಿಸ್ವರೂಪದ ತರಗತಿ ಬೋಧನಾ ಕೌಶಲ್ಯಗಳ ಮಾದರಿ ವಿನ್ಯಾಸವನ್ನು ರೂಪಿಸಬೇಕೆಂಬ ಹಂಬಲವುಳ್ಳವರಾಗಿದ್ದಾರೆ.

ನಿರ್ದೇಶಕರಾದ ಡಾ.ಶಿವಪ್ರಸಾದರವರೊಂದಿಗೆ...

               ತಾವು ಕಂಡ ಉನ್ನತ ಶಿಕ್ಷಣದ ತರಗತಿ ಬೋಧನಾ ಸುಧಾರಣೆಯ ಕನಸುಗಳನ್ನು  ಪ್ರಾಧ್ಯಾಪಕರಿಗಾಗಿ ನಡೆಯುತ್ತಿರುವ ವಿಭಿನ್ನ ರೀತಿಯ "ವೃತ್ತಿಬುನಾದಿ ತರಬೇತಿಯ" ಮೂಲಕ ಸಾಕಾರಗೊಳಿಸಲು ಕಂಕಣಬದ್ಧರಾಗಿದ್ದಾರೆ.

"ನಮ್ಮ ದೇಶದ ಭವಿಷ್ಯ ನಮ್ಮ ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುತ್ತದೆ "ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಯಂತೆ ಕಾರ್ಯತತ್ಪರರಾಗಿ ನಮ್ಮ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಸಂಪನ್ಮೂಲ ಪ್ರಾಧ್ಯಾಪಕರನ್ನು ನಿರ್ಮಾಣ ಮಾಡುವ ಅವರ ಮಹತ್ವಾಕಾಂಕ್ಷೆ ಅದಮ್ಯವಾದದ್ದು.ಸಮಾಜದಲ್ಲಿ  ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸ್ಥಾನವನ್ನು ಪಡೆದಿರುವ ಶಿಕ್ಷಕ ರಿಂದ ಮಾತ್ರ ದೇಶ ಮಹೋನ್ನತವಾದ ಜ್ಞಾನಸಂಪನ್ನೂಲವನ್ನು ಸೃಷ್ಟಿಸಬಹುದಾಗಿದೆ,ಅಲ್ಲದೇ ದೇಶವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು  ಎಂಬ ಶ್ರೀ ಶಿವಪ್ರಸಾದ ಗುರುಗಳ ಅಚಲ ವಿಶ್ವಾಸ ,ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಅವರಲ್ಲಿರುವ ಪವಿತ್ರ ದೃಷ್ಟಿಕೋನವನ್ನು ಬಿಂಬಿಸುತ್ತದೆ.
      "ಗುರು ಬ್ರಹ್ಮ ಗುರು ವಿಷ್ಣು 

     ಗುರುದೇವೋ ಮಹೇಶ್ವರ

    ಗುರು ಸಾಕ್ಷಾತ್ ಪರಬ್ರಹ್ಮ
        ತಸ್ಮೈ ಶ್ರೀ ಗುರುವೇನಮಃ"
ಶ್ಲೋಕದಂತೆ 'ಗುರು' ದೇವರಿಗಿಂತ ಮಹತ್ವದ ಸ್ಥಾನವನ್ನು ಹೊಂದಿದ್ದು, ಆತ ಇಂದಿನ  ಆಧುನಿಕ ಲೋಕವನ್ನು ಮಾರ್ಗದರ್ಶಿಸುವ, ಉದ್ಧರಿಸುವ ಶಕ್ತಿ ಯಿಂದ ಮುನ್ನುಗ್ಗಬೇಕಾದ ಅಗತ್ಯವಿದೆ.ಕ್ಷಣ ಕ್ಷಣ ಕ್ಕೂ ಬದಲಾಗುತ್ತಿರುವ ಜಗತ್ತಿನ ಸವಾಲುಗಳಿಗೆ ಶಿಕ್ಷಣದ ಮೂಲಕ ಉತ್ತರಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.ಅದಕ್ಕೆ ತಕ್ಕಂತೆ ನಮ್ಮ ಶಿಕ್ಷಣ ಪದ್ಧತಿಗಳಲ್ಲಿಯೂ ಪರಿವರ್ತನೆಗಳನ್ನು ಅಳವಡಿಸಿಕೊಂಡು ನವಪೀಳಿಗೆಯನ್ನು ಮುನ್ನಡೆಸಬೇಕಾದ ಜವಾಬ್ದಾರಿ ಗುರುಗಳ ಮೇಲಿದೆ. ಇಂತಹ ನ್ಯಾನೊ ಜಗತ್ತಿನ  ಸಂದಿಗ್ಧ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ನಮ್ಮನ್ನು ಸಕಲ ರೀತಿಯಿಂದ ಸಜ್ಜುಗೊಳಿಸುವ ಕಾರ್ಯದಲ್ಲಿ ಡಾ ಶಿವಪ್ರಸಾದರವರು ಶ್ರದ್ಧೆಯಿಂದ ನಿರತರಾಗಿದ್ದಾರೆ ಹಾಗೂ ಅವರ ಕನಸಿನ ಯೋಜನೆಯಲ್ಲಿ ನಾವು ಭಾಗಿಗಳಾಗುತ್ತಿದ್ದೇವೆ   ಎಂಬುದೇ ನಮಗೆ ಹೆಮ್ಮೆಯ ಸಂಗತಿಯಾಗಿದೆ.

ಜ್ಞಾನಸಾಗರ ಕೆ.ಸಾಗರ್ ರವರೊಂದಿಗೆ.....

ಅವರು ನಮಗೆ ನೀಡಿದ ತರಬೇತಿಯ ನವ ವಿಧಾನ, ತರಗತಿಯ  ಬೋಧನಾ ನವ ವಿನ್ಯಾಸ,೨೧ ಅಂಶಗಳ ಬೋಧನೆಯ ವೈವಿಧ್ಯತೆ,ಡಾ.ರಹಮತ್ ತರೀಕೆರೆ,ಡಾ.ರಾಜೇಂದ್ರ ಚೆನ್ನಿ,ಡಾ.ನಟರಾಜ ಬೂದಾಳು,ಡಾ.ನಟರಾಜ ಹುಳಿಯಾರು,ಡಾ.ವಿನಯಾ ಒಕ್ಕುಂದ, ಡಾ ಎಂ ಡಿ ಒಕ್ಕುಂದ,ಡಾ ಅಣ್ಬನ್, ಡಾ.ವಿ. ಎಸ್. ಮಾಳಿ ಮುಂತಾದ ಸಾಹಿತಿಗಳು ಹಾಗೂ ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನ,ಚರ್ಚೆ, ಸಂವಾದಗಳು ನಮ್ಮ ಜ್ಞಾನದ,ಅರಿವಿನ ಪರಿಧಿಯನ್ನು ವಿಸ್ತರಿಸಿದವು.ನಮ್ಮ ನಾಡಿನ  ಪ್ರಸಿದ್ಧ ಸಾಹಿತಿ ಚಿಂತಕರಾಗಿರುವ  ಡಾ. ರಹಮತ್ ತರೀಕೆರೆ ಯವರ ಪಠ್ಯದ ಮರು ವ್ಯಾಖ್ಯಾನ, ಅಂತರ್ ಪಠ್ಯೀಯತೆ ಹಾಗೂ ಸಂಶೋಧನೆಯ ಸ್ವರೂಪ,ವಿಧಾನ ಕುರಿತು ಪರಿಣಾಮಕಾರಿ ಉಪನ್ಯಾಸ,ಚರ್ಚೆಗಳು ನಮ್ಮನ್ನು ಪಠ್ಯದ ವಿಶಾಲವಾದ ಮರು ಓದಿಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು.ಡಾ.ಶ್ರೀಮತಿ ವಿನಯಾ ಒಕ್ಕುಂದ ರವರ "ಜನ್ನನ ಯಶೋಧರ ಚರಿತೆ ; ಒಂದು  ಸ್ತ್ರೀವಾದಿ ಅಧ್ಯಯನ "ವಿಷಯದ ಉಪನ್ಯಾಸ  ಸ್ತ್ರೀವಾದದ ಸೂಕ್ಷ್ಮ ಒಳನೋಟಗಳನ್ನು, ಸಾಹಿತ್ಯದ ಬಹುಶಿಸ್ತೀಯ ಆಧ್ಯಯನದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು.'ರವಿ ಕಾಣದ್ದನ್ನು ಕವಿ ಕಂಡ ಕವಿಯೂ ಕಾಣದ್ದನ್ನು ಒಬ್ಬ ಸ್ತ್ರೀ ಕಾಣುವ ಜಗತ್ತು ನಮ್ಮ ಕಣ್ಣ ಮುಂದಿದೆ ಎಂಬ ಸತ್ಯವನ್ನು ಅರಿಯುವಂತೆ ಮಾಡಿತು.
                               ಮತ್ತೊಬ್ಬ ವಿದ್ವಾಂಸರಾದ ಶ್ರೀ ಡಾ. ವಿ ಎಸ್ ಮಾಳಿ ಯವರ "ಪ್ರಾಚೀನ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯ ಗಳ ತೌಲನಿಕ ಅಧ್ಯಯನ"ದ ಉಪನ್ಯಾಸ ನಮ್ಮದೇ ಸಾಹಿತ್ಯದಲ್ಲಿರುವ ಅನನ್ಯತೆಗಳನ್ನು ಕುರಿತು ಅಧ್ಯಯನ ಮಾಡಲು ನಮ್ಮನ್ನು ಪ್ರೇರೇಪಿಸಿತು.ಹೀಗೆ ಪ್ರತಿ ದಿನದ ತರಬೇತಿಯಲ್ಲಿಯೂ ಕನ್ನಡದ ಮಹತ್ವದ ಚಿಂತಕರೊಂದಿಗೆ ಅನುಸಂಧಾನಿಸುವ ಯೋಗ ನಮ್ಮನ್ನುನವನವೋನ್ಮೇಶಶಾಲಿಗಳನ್ನಾಗಿ ಮಾಡಿದೆ.
ರಾಜ್ಯಮಟ್ಟದ ಅಕಾಡೆಮಿಯೊಂದರ  'ನಿರ್ದೇಶಕರು' ಎಂಬ ಉನ್ನತ ಹುದ್ದೆಯಲ್ಲಿದ್ದರೂ,ಸ್ವತಃ ವಿಜ್ಞಾನಿ ಗಳಾಗಿದ್ದರೂ, ಡಾ.ಶಿವಪ್ರಸಾದ ರವರಲ್ಲಿನ  ಬಸವಣ್ಣನವರ ಸುಜ್ಞಾನ,ಸುಗುಣಶೀಲತೆ,ಅಲ್ಲಮನ  ನಿಗರ್ವ,ನಿರಹಂಕಾರ,ಗಾಂಧೀಜಿಯವರ ಸಹನೆ,ಶಾಂತಿ, ಸಜ್ಜನಿಕೆ,ಭುಜದ ಮೇಲೆ ಕೈಹಾಕಿ ಮಾತನಾಡಿಸುವ ಸರಳತೆ,ಅಬ್ದುಲ್ ಕಲಾಂ ರವರ ದೂರದೃಷ್ಟಿಯ ಕಾಯಕ ನಿಷ್ಠತೆ,ವಿಜ್ಞಾನಿ  ಸಿ ಎನ್ ಆರ್ ರಾವ್ ರವರ ಸಂಶೋಧನಾ ಮನೋಭಾವ, ಯಾವುದೇ ಸಮಸ್ಯೆಯನ್ನು ಸಮಚಿತ್ತದಿಂದ ಪರಿಹರಿಸುವ ಅವರ ಸಮಸ್ಯೆಗಳನ್ನು ಪರಿಹಾರ ಕೌಶಲ,ತರಬೇತಿಯ ಕಾರ್ಯಕ್ರಮದಲ್ಲಾಗುವ ಸಣ್ಣ ವ್ಯತ್ಯಾಸಗಳಿಗೂ ನಿರ್ದಾಕ್ಷಿಣ್ಯವಾಗಿ ಕ್ಷಮೆ ಕೇಳುವ ಅವರ ಸಹೃದಯ ವೈಶಾಲ್ಯತೆ , ಔದಾರ್ಯಗಳು,ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಆಯೋಜಿಸುವ ವೈಜ್ಞಾನಿಕ ಮನೋಭಾವ, ಇಂದಿನ ಮಡಿವಂತಿಕೆಯ ಬೌದ್ಧಿಕ ಜಗತ್ತಿಗೆ ಮಾದರಿಯಾಗಿವೆ.
              ಅವರಲ್ಲಿನ ವಿಜ್ಞಾನಿ ಶೈಕ್ಷಣಿಕ ತತ್ವಜ್ಞಾನದ ಆಧಾರದ ಮೇಲೆ  ಉನ್ನತ ಶಿಕ್ಷಣದ ಹೊಸ  ಜಗತ್ತಿನ ನಿರ್ಮಾಣಕ್ಕೆ ಹಾತೊರೆಯುತ್ತಿದ್ದಾನೆ.ಡಾ. ಶಿವಪ್ರಸಾದರವರು  ಸತ್ಯ , ಶಿವ  ತತ್ವಗಳ ಸುಂದರರೂ ಆಗಿದ್ದಾರೆ.  ಶಿಕ್ಷಣದ ಮುಖ್ಯವಾಹಿನಿಯ ಸ್ವರೂಪ ಇಂದು ಬದಲಾಗಿದೆ.ಅಂಗೈಯಲ್ಲಿನ ಸ್ಮಾರ್ಟ್ ಫೋನ್ ಗಳಿಂದಾಗಿ  'ವಿಶ್ವರೂಪ'ದ ದರ್ಶನ ಸಾಧ್ಯವಾಗಿದೆ. ಮನೆಯಲ್ಲಿ ಸ್ಮಾರ್ಟ ಕಂಪ್ಯೂಟರ್ ಗಳು ಬಂದು ಕುಳಿತಿವೆ. ಡಿಜಿಟಲ್  ಮಾಧ್ಯಮಗಳ ಆಧುನಿಕ ತಂತ್ರಜ್ಞಾನ ಅಬಾಲವೃದ್ದರಾದಿಯಾಗಿ ಎಲ್ಲರನ್ನೂ ಸಮ್ಮೋಹನಗೊಳಿಸಿದೆ.

              ನಮ್ಮ ಪೌರಾಣಿಕ ಕಾಲದ ದೇವಾನುದೇವತೆಗಳು ಕುಳಿತಲ್ಲಿಯೇ ತ್ರಿಲೋಕಗಳನ್ನು ಜಾಲಾಡುತ್ತಿದ್ದ ,ನಮಗೆ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ  'ಮಾಯಾದರ್ಪಣ' ಇಂದು ಬದಲಾದ ಕಾಲಘಟ್ಟದಲ್ಲಿ  'ಅಂತರ್ಜಾಲ' ವೆಂಬ ತಾಂತ್ರಿಕ ಶಕ್ತಿಯಾಗಿ ಹೆಸರು ಪಡೆದು ವಿಶ್ವದ ರಹಸ್ಯಗಳನ್ನೆಲ್ಲಾ ಬಚ್ಚಿಟ್ಟುಕೊಂಡಿರುವ  'ಮಾಯಾಲೋಕ'ವಾಗಿ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.ವಿದ್ಯಾಲಯಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳು ನಿರ್ಮಾಣವಾಗುತ್ತಿವೆ.ಇಂತಹ ಸಂದರ್ಭದ ಈ ತರಬೇತಿ ನಮ್ಮಗೆ ನವಪೀಳಿಗೆಯನ್ನು ಮುನ್ನಡೆಸುವ ಕೈದೀವಿಗೆಯಾಯಿತು ಎಂಬುದರಲ್ಲಿ ಸಂದೇಹವಿಲ್ಲ .


Saturday 9 June 2018

ಸಮಾಗಮ
ವಿಜ್ಞಾನ ದ ವಾಸ್ತವ
ಸಾಹಿತ್ಯದ ಸೌಂದರ್ಯ
ಬೆರೆಯಲದೊ ಮಾಧುರ್ಯ
ಸವಿಯಲದೊ ಸಹಚರ್ಯ
ಕವಿ ಕಾಣದ್ದು ರವಿ ಕಂಡ
ರವಿ ಕಾಣದ್ದು ವಿಜ್ಞಾನಿ ಕಂಡ
ಸಿಹಿ ಜೇನು ಕಾವ್ಯದೂಟ
ರಸವಾದ ಕವಿಯನೋಟ
ವಿಸ್ಮಯಗಳ ರಸದೌತಣ
ಜ್ಞಾನದ ನವ ಸಂಶೋಧನ
ಸಾಹಿತ್ಯದ ನವರಸಕೆ
ವಿಜ್ಞಾನದ ಸಮರಸ
ನೂರಾರು ನದಿ ಪಯಣ
ಜ್ಞಾನದ ಸಾಗರಕೆ
ಬಗೆ ಬಗೆಯ ಸಂವೇದನೆ
ಅಂತರಂಗ ನಿವೇದನೆ
ಹುಲುಮಾನವ ಜಗದಚ್ಚರಿ
ಕಡಲಾಳದ ಕೌತುಕ
ಸಾಹಿತ್ಯದ ರಸದೌತಣ
ವಿಜ್ಞಾನಕೆ ನವ ಮಂಥನ
ಬೆಳಗಬೇಕು ವಿಶ್ವಚೇತನ
ವಿಜ್ಞಾನದ ಕಲಾದರ್ಶನ
ಜಗವು ಸಂಭ್ರಮಿಸಬೇಕು
ಕಂಡು ಸಮನ್ವಯದ ಬೆರಗು
ಬೆಳಕು ಒಂದು ಭೌತಗುಣ
ಕಲೆಗೆ ಮಹಾದರ್ಶನ
ಇಕ್ಕೆಲಗಳ  ಸಮಾಗಮ
ನವೋದಯದ ಸಂಭ್ರಮ




Friday 8 June 2018

ಚೆಂಬೆಳಕಿನ ಪ್ರಭೆಯಲ್ಲಿ ಕಳೆದು ಹೋದಾಗ...
          ಆ ಸಂಜೆ'ವಿಶ್ವ ವಿನೂತನ ವಿದ್ಯಾ ಚೇತನ' ಕವಿತೆಯಲ್ಲಿನ
ಸರ್ವ ಹೃದಯ ಸಂಸ್ಕಾರಿ ಯಾಗಿ ಆಧುನಿಕ ಕನ್ನಡ ಕಾವ್ಯದೇವಿಯ ಅನವರತ ಸೇವೆಗೈಯ್ಯುತ್ತಿರುವ ೯೦ ಹರೆಯದ  ಬಲು ಚೆನ್ನ "ವೀರ "ಕವಿಯಾದ ಕಣವಿಯವರ ದರ್ಶನ ಭಾಗ್ಯ ನಮ್ಮನ್ನು ಪುಳಕಿತರನ್ನಾಗಿಸಿತ್ತು.ಧಾರವಾಡದ ಕಾವ್ಯ ದೇವತೆಯೇ ಸ್ವತಃ ತನ್ನ ಮುಗ್ಧ ಕನ್ನಡ  ಕಂದಮ್ಮಗಳ ಸೈರಣೆಗಾಗಿ  ಉನ್ನತ ಶಿಕ್ಷಣ ಅಕಾಡೆಮಿಯ ಬಾಗಿಲಿಗೆ ಬಂದು ಜೀವಚೈತನ್ಯ ಸ ದರ್ಶನ ನೀಡಿ ಕಾವ್ಯರಸಧಾರೆಯನ್ನು ಉಣಬಡಿಸಿದ್ದು ನಮ್ಮ ಜೀವನದ  ಸೌಭಾಗ್ಯ.
      ಧಾರವಾಡದೊಂದು  ಸಂಜೆಯ ಮುಂಗಾರಿನ ತುಂತುರು ಮಳೆಯ ತಂಪಾದ ಹಿತಾವರಣದಲ್ಲಿ ಸುವರ್ಣ ಸೌಧ ದ ಮಧ್ಯೆ  ಕನ್ನಡ ಸಾಂಸ್ಕೃತಿಕ ಲೋಕದ ದಿವ್ಯ ಕವಿ ಚೇತನವು ಚೆಂಬೆಳಕಾಗಿ ಆವರಿಸಿದ ಕ್ಷಣಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದವು.

     "ಗ್ರೀಷ್ಮದಲ್ಲಿ ಬಂದ ಗುರು"ವಾದ ಆ ಕಾವ್ಯ ಬೆಳಕಿನ ಪ್ರಭೆ ನಮ್ಮನ್ನು ರಸಾನುಭವದಲ್ಲಿ ಮಿಂದೇಳುವಂತೆ ಮಾಡಿತ್ತು.
                    "ಎನ್ನ ಪಾಡು ಎನಗಿರಲಿ ಅದರ ಹಾಡನ್ನಷ್ಟೆ
                              ನೀಡುವೆನು ರಸಿಕ ನಿನಗೆ
                      ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
                             ಆ ಸವಿಯ ಹಣಿಸು ನನಗೆ"
     ಎಂಬ ಬೇಂದ್ರೆಯವರ ಹಾಡಿನ ಹಂಬಲ 'ಕಾವ್ಯವೀರ' 'ಕಣವಿ'ಯವರದೂ ಆಗಿತ್ತು.ತಮಗೆ ಅರಿವಿದ್ದೂ, ಅರಿವಿಲ್ಲದಂತೆ ಕುವೆಂಪು ಬೇಂದ್ರೆ, ಪುತಿನ ,ಮಾಸ್ತಿ ಯವರಂತಹ ಕಾವ್ಯತಪಸ್ವಿಗಳ  ಪ್ರಭಾವಕ್ಕೊಳಗಾದವರು ಕಣವಿಯವರು.
ಅದಕ್ಕೊಂದು ಉದಾಹರಣೆ
                        "ಹೂವು ಹೊರಳುವವು ಸೂರ್ಯನ ಕಡೆಗೆ
                              ನಮ್ಮ ದಾರಿ ಬರಿ ಚಂದ್ರನವರೆಗೆ
                           ಗಿಡದಿಂದುದುರುವ ಎಲೆಗಳಿಗೂ ಮುದ
                               ಚಿಗುರುವಾಗಲು ಒಂದೆ ಹದ                           

                           ನೆಲದ ಒಡಲಿನೊಳಗೇನ ನಡೆವುದೋ
                               ಎಲ್ಲಿ ಕುಳಿತಿಹನು ಕಲಾವಿದ?"

              ಹೀಗೆ ಕಣವಿಯವರು ನವೋದಯದ ನಿಸರ್ಗ ಪ್ರಿಯತೆ, ರಮಣೀಯತೆಗಳ ಆರಾಧಕರೂ ಆಗಿದ್ದಾರೆ.ನಂತರ ಗೋಚರಿಸಿದ  ಅಡಿಗ,ಗೋಕಾಕ ರಂತಹ  ಕಾವ್ಯಗಾರುಡಿಗರ  ನವ್ಯ ಪ್ರವಾಹದಲ್ಲಿ, ಕೊಚ್ಚಿಕೊಂಡು ಹೋಗದೆ ತಮ್ಮದೇಯಾದ 'ಜೀವಧ್ವನಿ'ಯ ಅನನ್ಯತೆಯನ್ನು ಕಾಪಾಡಿಕೊಂಡ ಕಾವ್ಯಪೂಜಾರಿಗಳು ಕಣವಿಯವರಾಗಿದ್ದಾರೆ.ಜಿ ಎಸ್ ಎಸ್, ಕೆ.ಎಸ್.ನ ಹಾಗೂ ಕಣವಿ ಎಂಬ ಕಾವ್ಯಲೋಕದ ತ್ರಿಮೂರ್ತಿಗಳ ಒಳನೋಟ ನವೋದಯ ನವ್ಯ ಪ್ರಗತಶೀಲಗಳನ್ನು ಮೀರಿ ಕಾವ್ಯಾಗಸದಲ್ಲಿ ವಿಶಿಷ್ಟವಾಗಿ ಬೆಳಗುವ  ತಾರೆಗಳಾಗಿದ್ದಾರೆ.ಪಂಥದ ಪ್ರಭಾವಕ್ಕೊಳಗಾಗಿಯೂ ಪಂಥಕ್ಕೆ ಸೀಮಿತವಾಗಲಿಲ್ಲವೆಂಬುದೇ ಇವರ ಕಾವ್ಯಧರ್ಮವಾಗಿದೆ.

      ಕಣವಿಯವರು ಧಾರವಾಡದ -'ಕಾವ್ಯಾನುಭವ ಮಂಟಪ'ವನ್ನು ಕೀರ್ತಿನಾಥ ಕುರ್ತಕೋಟಿ ,ವಸಂತ ಕವಲಿ ಮುಂತಾದವರ  ಜೊತೆಗೂಡಿ ಕಟ್ಟಿ,ಬೇಂದ್ರೆ, ಗೋಕಾಕರ ಗುರುಕುಲದಲ್ಲಿ ಕಾವ್ಯ ಸವಿಯನ್ನು  ಆಸ್ವಾದಿಸಿದ 'ದೀಪಧಾರಿ'.'ನೆಲ'ದಲ್ಲಿದ್ದೇ 'ಮುಗಿಲ'ನ್ನು ಮುಟ್ಟುವ ಕವಿ ಹಂಬಲ ಕಣವಿಯವರದಾಗಿತ್ತು.ಅವರ ಕಾವ್ಯ ಗಂಭೀರತೆಯಲ್ಲೂ ಸರಳತೆಯನ್ನು ಮೈಗೂಡಿಸಿಕೊಂಡ  ಜನಪರ ನಿಲುವಿನದಾಗಿದೆ.
         ಮೈದುಂಬಿದ ಉದ್ದ ತೋಳಿನ ಸುವರ್ಣ ಬಣ್ಣದ  ನೆಹರೂ ಶರ್ಟ್, ತಲೆಯ ಮೇಲೊಂದು ರಟ್ಟಿನ ಟೊಪ್ಪಿಗೆ,ಅನಾರೋಗ್ಯದಿಂದ  ಬಳಲುತ್ತಿದ್ದರೂ ತಮ್ಮ  ಕಾವ್ಯದಂತೆ ಸದಾ ಕಲ್ಲುಸಕ್ಕರೆಯ ಸಿಹಿಯನ್ನು ಉಣಬಡಿಸುವ ಮೊಗದ  ಮಂದಹಾಸ ,ಬಿಳಿ ಪೈಜಾಮಿನ ಸರಳ ಉಡುಗೆಯ  'ಭಾವಜೀವಿ' ಕಣವಿಯವರು.

"ಧಾರವಾಡದ ಮಳೆಗಾಲ" ಕಣವಿಯವರ ಕಾವ್ಯರಾಣಿಯನ್ನು ಬಹುವಾಗಿ ಕಾಡಿದೆ. ಇವರ ಕಾವ್ಯ ಕನ್ನಡದ "ಹೊಂಬೆಳಕಿನ" ಜ್ಯೋತಿಗಳನ್ನು   'ಆಕಾಶಬುಟ್ಟಿ'ಯ ಎದೆಯಲ್ಲಿಟ್ಟು ಆಗಸದೆತ್ತರಕೆ ಹಾರಿ ತನ್ನ ಪ್ರಭೆಯಿಂದ ಚಂದ್ರನ ಬೆಳದಿಂಗಳಿಗೂ ಸವಾಲೆಸೆಯುವ "ಚಿರಂತನ ದಾಹ"ವನ್ನು ಹೊಂದಿದೆ.
ಇಂತಹ ಕಾವ್ಯಾರಾಧಕರಾದ ಚೆನ್ನವೀರ ಕಣವಿಯವರು  ನಮ್ಮ ನಾಡಿನ ಸಾಂಸ್ಕೃತಿಕ ವಿಶಿಷ್ಟತೆ  ಹಾಗೂ
"ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ" ಎಂದು
ನದಿಗಳ ಮೂಲಕ ಜನಾಂಗವೊಂದರ ಸೀಮೆಯನ್ನು ಕಾವ್ಯದಲ್ಲಿ ಗುರುತಿಸಿದ ಶ್ರೀವಿಜಯನ 'ಕವಿರಾಜಮಾರ್ಗ'ದ ನಿದರ್ಶನ ಜಗತ್ತಿನ ಯಾವ ಸಾಹಿತ್ಯ ಲೋಕದಲ್ಲಿಯೂ ಕಾಣಸಿಗದು.
ಈ ನಮ್ಮ ಚೆಲುವ ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆ ಗರಿಮೆಗಳ ಬಗ್ಗೆ ಹೆಮ್ಮೆ ಅಭಿಮಾನಗಳಿರಬೇಕು. ಏಕೆಂದರೆ, ನಮ್ಮ ನಾಡವರು
"ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳ್ ಅಭಿಜನರ್ಕಳ್ ಗುಣಿಗಳ್
ಅಭಿಮಾನಿಗಳ್ ಅತ್ಯುಗ್ರರ್ ಗಂಭೀರ ಚಿತ್ತರ್ ವಿವೇಕಿಗಳೂ ಆಗಿದ್ದಾರೆ ಎಂಬ ಪರಂಪರೆಯನ್ನು ಗೌರವಿಸಬೇಕಾದ ಅವಶ್ಯಕತೆಯನ್ನು ಕಣವಿಯವರು ಒತ್ತಿಹೇಳುತ್ತಾರೆ.

       ಇವರ 'ಕಾವ್ಯಾಕ್ಷಿ' ಗಳು ಕನ್ನಡ ದೀಪಗಳ ಚೆಂಬೆಳಕನ್ನು ನಮ್ಮ ಘನ  ಪರಂಪರೆಯ ಮೇಲೆ ಬೀರುತ್ತವೆ
ಎಂಬುದಕ್ಕೆ ಸ್ವತಃ  ಕಣವಿಯವರ ಕಂಠಸಿರಿಯಿಂದ ಮೂಡಿಬಂದ ಈ ಕವಿತೆಯೆ ಸಾಕ್ಷಿಯಾಗಬಲ್ಲದು
"ಕಾವ್ಯ ಕನ್ನಿಕೆಯುಲಿದು
ಮಾರ್ಗದೇಶಿ ಬೆಸೆದು
ವಾಗ್ವಿಭುವನಗುನ್ನತಿ ರಸಧ್ವನಿಯ ಹಿಡಿದು
ಒಂದೇ ಮಾನವ ಜಾತಿ
ಸ್ತಂಭ ದೀವಿಗೆಯಂತೆ
ಪ್ರಜ್ವಲಿಸಿ ಕನ್ನಡಕ್ಕೆ ಪಡೆಯನೆರೆ,
ಪಂಪ"
ಇದು ಪರಂಪರೆಯನ್ನು ಸುವರ್ಣಾಕ್ಷರಗಳಿಂದ ಬೆಳಗಿರುವ ಮಹಾಕಾವ್ಯಗಳ ಓದು ಹಾಗೂ ಕನ್ನಡ ಸಂಸ್ಕೃತಿಯ ಅವಲೋಕನವಾಗಿದೆ.


'ಸುನೀತಗಳ ಸಾಮ್ರಾಟ'ರೆಂದೇ ಪ್ರಖ್ಯಾತವಾಗಿರುವ ವಿದ್ವಾಂಸರಾದ ಕಣವಿಯವರಿಗೆ  ಸುನೀತಗಳೆಂದರೆ ಕೇವಲ ಗಂಭೀರತೆಯ ಪ್ರವಾಹವಲ್ಲ ಅದೊಂದು
ಗಾಂಧಿ,ಬೇಂದ್ರೆ,ಶಾಸ್ತ್ರಿ,ಮುಗಳಿ,ತೀನಂಶ್ರೀ ಯವರಂತಹ ಸುನೀಲ ವಿಸ್ತರವಾದ ಮಹಾವ್ಯಕ್ತಿಗಳ ದರ್ಶನ ಮಾಧ್ಯಮ.

ದಿನಾಂಕ ೭ ನೇ ಫೆಬ್ರವರಿ ೨೦೧೮ ರಂದು ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ಹೊಸದಾಗಿ  ನೇಮಕವಾದ ಕನ್ನಡ ಪ್ರಾಧ್ಯಾಪಕರಿಗೆ ನೀಡುತ್ತಿರುವ   ವೃತ್ತಿ ಬುನಾದಿ ತರಬೇತಿಯ ಅವಧಿಯಲ್ಲಿ ನಮಗೆ 'ಕಣವಿ'  ಎಂಬ ಚೆಂಬೆಳಕಿನ ದಾರ್ಶನಿಕರ ಸಾಂಗತ್ಯ ಸಾಧ್ಯವಾಗಿದ್ದು ಬದುಕಿನ ಅವಿಸ್ಮರಣೀಯ ಕಾಣಿಕೆಯಾಗಿದೆ.ಸಾಧ್ಯವಾಗಿಸಿದ ಅಕಾಡೆಮಿಗೆ ಕೃತಜ್ಞತೆಗಳು.....

Friday 1 June 2018

'ಅಕ್ಷಯ ಪಾತ್ರೆ'

'ಅಕ್ಷಯ ಪಾತ್ರೆ'
'ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ವಾಯು ನಿಮ್ಮ ದಾನ 
ನಿಮ್ಮ ದಾನವನುಂಡು ಅನ್ಯರ
ಹೊಗಳುವ ಕುನ್ನಿಗಳೇನೆಂಬೆ ರಾಮನಾಥ'
ಎಂಬ ಆದ್ಯವಚನಕಾರ ಜೇಡರ ದಾಸಿಮಯ್ಯನವರ ವಚನದಂತೆ ಈ ಸೃಷ್ಟಿಯಲ್ಲಿರುವ ಪಂಚಭೂತಗಳಾದ  ನೆಲ ,ಜಲ, ವಾಯು,ಆಕಾಶ,ಅಗ್ನಿ ಗಳು ಸೇರಿ
ಸರ್ವವೂ ಭಗವಂತನ ಕೃಪೆಯಾಗಿರುವಾಗ, ಇಂತಹ ಶ್ರೇಷ್ಠದಾನ ನೀಡಿದ ದೇವನಿಗೆ ನಾವು ಚಿರಋಣಿಯಾಗಿರಬೇಕು.ಹಾಗೆಯೇ ಮಾನವ ದೇವರು ತನಗೆ ದಯಪಾಲಿಸಿದ್ದರಲ್ಲಿ ಅಲ್ಪವನ್ನಾದರೂ ದಾನ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕು.ಮಹಾಭಾರತದ  "ಅನ್ನದಾನ ಮಾಡಿದರೆ ಬದುಕನ್ನೇ ದಾನಮಾಡಿದಂತೆ " ಎಂಬ  ಶ್ಲೋಕ ಅನ್ನ ದಾನದ ಮಹತ್ವವನ್ನು  ಹೇಳುತ್ತದೆ.೧೨ ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ವು ಸಾಮೂಹಿಕ ದಾಸೋಹ  ಹಾಗೂ ಅನ್ನ ದಾನದ ಮಹತ್ವವನ್ನು ಪ್ರಥಮವಾಗಿ ಜಗತ್ತಿಗೆ ಸಾರಿದ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ.
                     ದಾನಗಳಲ್ಲಿ ಅನ್ನದಾನವೂ ಶ್ರೇಷ್ಠವಾದ ದಾನವಾಗಿದೆ ಎಂಬುದಕ್ಕೆ ಮಹಾಭಾರತದಲ್ಲಿ ಕೃಷ್ಣನು ವನವಾಸದಲ್ಲಿದ್ದ ಪಾಂಡವರಿಗೆ ದಯಪಾಲಿಸಿದ ಅಕ್ಷಯ ಪಾತ್ರೆ ನಿದರ್ಶನವಾಗಿದೆ.'ಅಕ್ಷಯ' ಎಂದರೆ ಅ- ಕ್ಷಯ- 'ಕ್ಷಯಿಸಲಾರದ','ಕರಗಲಾರದ', 'ತೀರಿಹೋಗದ','ಮುಗಿಯಲಾರದ' ಎಂಬ ಅರ್ಥಗಳಿವೆ.ಇಂತಹ 'ಅಕ್ಷಯ' ಎಂಬ ಹೆಸರು ಹೊತ್ತು, ಶಾಲಾ ಮಕ್ಕಳ ಹಸಿವನ್ನು ನೀಗಿಸಲು ಸರಕಾರದ ಸಹಯೋಗದಲ್ಲಿ ಅಕ್ಷರ ದಾಸೋಹ ವೆಂಬ ಕೈಂಕರ್ಯದಲ್ಲಿ ಸಕ್ರಿಯವಾಗಿ ನಮ್ಮ ಭಾರತ ದೇಶಾದ್ಯಂತ ತೊಡಗಿಸಿಕೊಂಡಿರುವ,. ಆಧುನಿಕ 'ಅಕ್ಷಯ ಪಾತ್ರೆ'ಗೆ ಅನ್ವರ್ಥವಾಗಿ  ಕಾರ್ಯನಿರ್ವಹಿಸುತ್ತಿರುವ  ಸಂಸ್ಥೆಯೆಂದರೆ  "AKSHAYA PATRA FOUNDATION ".
               ಇದೊಂದು ಸರಕಾರೇತರ ಸಂಸ್ಥೆಯಾಗಿದ್ದು, ನಮ್ಮ ದೇಶಾದ್ಯಂತ ೩೫ ಶಾಖೆಗಳನ್ನು ಹೊಂದಿ  ನಿಸ್ವಾರ್ಥ ಪರಸೇವೆ ಗೆ ತನ್ನನ್ನು ತೊಡಗಿಸಿಕೊಂಡಿದೆ.ಅನ್ನ ಬ್ರಹ್ಮ ಎಂದು ಅನ್ನವನ್ನು ಸೃಷ್ಟಿಕರ್ತನಿಗೆ  ಸಮೀಕರಿಸಿರುವುದನ್ನು ನಾವು ಕಾಣುತ್ತೇವೆ.ಇಂತಹ ಮಹತ್ತರವಾದ ಅನ್ನದಾನದ ಕಾರ್ಯವನ್ನು ಸರಕಾರದ ಸಹಯೋಗದೊಂದಿಗೆ ಅಕ್ಷಯ ಪಾತ್ರ ಫೌಂಡೇಶನ್ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಸಾಮಾಜಿಕವಾಗಿ ಮಹತ್ತರ ಕಾರ್ಯವಾಗಿದೆ.               ಈ ಅಕ್ಷಯ ಫೌಂಡೆಶನ್ನಿನ 'ವಿಶ್ವದ ಅತಿ ದೊಡ್ಡ ಅಡುಗೆಮನೆ' ಎಂದು  'LIMCA BOOK OF WORLD RECORDS'ನಲ್ಲಿ ದಾಖಲಾಗಿರುವ ಹುಬ್ಬಳ್ಳಿ- ಧಾರವಾಡ ದ ಇಸ್ಕಾನ್  ಅಕ್ಷಯ ಫೌಂಡೇಶನ್ ನ ವಿಶ್ವದ ಅತಿ ದೊಡ್ಡ  ಅಡುಗೆ ಕೇಂದ್ರ ಕ್ಕೆ ದಿನಾಂಕ ೨೮-೦೫-೨೦೧೮ ರ ಸಂಜೆಯ ನಮ್ಮ  ಭೇಟಿ ಅವಿಸ್ಮರಣೀಯವಾಗಿತ್ತು.
ನೆಲದಿಂದ ೨೦೦ ಅಡಿ ಎತ್ತರದಲ್ಲಿರುವ  ಬೆಟ್ಟದ ಮೇಲೆ ನಿರ್ಮಿಸಲಾದ  ಶ್ರೀ ಕೃಷ್ಣ ದೇವಾಲಯ  ನಮಗೆ  ಭಕ್ತಿ, ಸೇವೆ, ಧ್ಯಾನ ಹಾಗೂ ಆತ್ಮೋನ್ನತಿಯ  ಮತ್ತೊಂದು ಲೋಕವನ್ನು ತೆರೆದು ತೋರಿ,ನಮ್ಮ ಮನಸು ಆ ಹೊತ್ತು ಭಕ್ತಿಯ ಕಡಲಲ್ಲಿ ಮುಳುಗುವಂತೆ ಮಾಡಿತು.
ದೇವಾಲಯವನ್ನು ಪ್ರವೇಶಿಸಿದಾಗ
' ಜಗದೋದ್ಧಾರನ ಆಡಿಸಿದಳು ಯಶೋಧೆ'
     ಎಂಬ ಜಗದೋಧ್ಧಾರನ ಆರಾಧನೆಯ ಗೀತೆ ಮನದಲ್ಲಿ ಮರ್ಮರಿಸುತ್ತಿತ್ತು.ಹರಿಭಕ್ತಕವಿ ಕುಮಾರವ್ಯಾಸ 'ತಿಳಿಯಹೇಳುವ  ಕೃಷ್ಣಕತೆ ಯೂ, ಭಾಗವತ ಪರಂಪರೆಯೂ ,ಏಕಕಾಲಕ್ಕೆ ಕೃಷ್ಣ ನೆಂಬ ಮಾಯಾವಿ ದೇವನ   ತೇಜೋಮೂರ್ತಿಯ ಮೂಲಕ ದರ್ಶನ ನೀಡಿದ್ದು  ವಿಶೇಷವಾದ ಅನುಭಾವವನ್ನು ನೀಡಿತು.                          ಶ್ರೀ ಕೃಷ್ಣ ದರ್ಶನವಾದ ನಂತರ ದೇವಾಲಯದ ಹಿಂದಿನ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಲಾಗಿರುವ,ಪ್ರತಿದಿನ  ಧಾರವಾಡ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುಮಾರು ೧,೫೦,೦೦೦  ಮಕ್ಕಳಿಗೆ ಕರ್ನಾಟಕ ಸರ್ಕಾರದ ಮಹತ್ತರವಾದ  'ಅಕ್ಷರ ದಾಸೋಹ' ಯೋಜನೆಯ ಸಹಯೋಗದೊಂದಿಗೆ ಆಹಾರವನ್ನು ಪೂರೈಸುವ  ವಿಶ್ವದ ಅತಿ ದೊಡ್ಡ  ಅಡುಗೆ ಕೇಂದ್ರ ಕ್ಕೆ ಸಂದರ್ಶನ ನೀಡುವ ಭಾಗ್ಯ ನಮ್ಮದಾಯಿತು. ಆ ಕೇಂದ್ರದ ಮುಖ್ಯಸ್ಥರಾಗಿದ್ದ, ಕೃಷ್ಣಸೇವಾಭಕ್ತ ರಾಗಿದ್ದವರೊಬ್ಬರು ನಮಗೆ ಕೇಂದ್ರದ ಬಗ್ಗೆ ಸವಿವರವಾದ  ಮಾಹಿತಿ ನೀಡಿದರು.
                    ಹಸಿವು ಹಾಗೂ ಅನಕ್ಷರತೆಯನ್ನು  ತೊಲಗಿಸುವ ಉದ್ದೇಶದಿಂದ ೨೦೦೬ ರಲ್ಲಿ ಸ್ಥಾಪನೆಯಾಗಿದ್ದು ,ಪ್ರತಿದಿನ ಈ ಕೇಂದ್ರದಲ್ಲಿ ೧೪ ಟನ್ (೧ ಟನ್ -೧೦೦೦ಕೆ.ಜಿ) ಅಕ್ಕಿ,೩ ಟನ್ ಬೇಳೆ,೭.೫ ಟನ್ ತರಕಾರಿ ಗಳನ್ನು ಬಳಸಿ ಧಾರವಾಡ ಜಿಲ್ಲೆಯ ೮೦೦ ಶಾಲೆಗಳ ೧,೫೦,೦೦೦ ಮಕ್ಕಳಿಗೆ ಅಡುಗೆಯನ್ನು ತಯಾರಿಸಿ ೬೦ ವಾಹನಗಳ ಮೂಲಕ ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತದೆ  ಎಂದರೆ ಈ ಕೇಂದ್ರದ ಕಾರ್ಯವೈಖರಿಯ ವಿರಾಟ್ ದರ್ಶನವಾಗದಿರದು.
ಲೋಕವೆಲ್ಲ ಸವಿಸಕ್ಕರೆಯ ನಿದ್ದೆಯ ಮಂಪರಿನಲ್ಲಿರುವ  ಬೆಳಿಗ್ಗೆ ೩ ಗಂಟೆಯಿಂದಲೇ ೪೦೦ ಕೆಲಸಗಾರರಿಂದ  ಪ್ರಾರಂಭವಾಗುವ  ಅಡುಗೆ ಸಿದ್ಧಪಡಿಸುವ ಕಾರ್ಯ ಬೆಳಿಗ್ಗೆ ೮ ಗಂಟೆಗೆ ಮುಗಿದು ನಂತರ ಸರಬರಾಜು ಹಾಗೂ ಸ್ವಚ್ಛತೆ ಕಾರ್ಯ ೨ ಗಂಟೆಯವರೆಗೆ ನಡೆಯುವುದನ್ನು ವಿವರಿಸಿದಾಗ ಕಾರ್ಯದ ಅಗಾಧತೆಯ ಅರಿವು ನಮಗಾಯಿತು.ಕೇಂದ್ರದ  ಎರಡನೇ ಮಹಡಿಯಲ್ಲಿ ಆಹಾರ ತಯಾರಿಸಲು ಬೇಕಾದ ಕಚ್ಚಾ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳುವ 'PREPARATION UNIT' ಇದೆ.ಒಂದನೇ  ಮಹಡಿಯಲ್ಲಿ,ಎರಡನೇ ಮಹಡಿಯಿಂದ ಬರುವ ಸ್ವಚ್ಚಗೊಳಿಸಿದ ಅಕ್ಕಿಯಿಂದ  ಅನ್ನ ಮತ್ತು ಸಾಂಬಾರನ್ನು  ತಯಾರಿಸುವ ಘಟಕವಿದ್ದು ,ಪ್ರತಿ ಅನ್ನದ  ಪಾತ್ರೆಯಲ್ಲಿ ಸುಮಾರು ೧೦೦೦ ಮಕ್ಕಳಿಗಾಗುವಷ್ಟು ಅನ್ನವನ್ನು ಕೇವಲ ೧೫ ನಿಮಿಷದಲ್ಲಿ ಹಾಗೂ ಸುಮಾರು ೬೦೦೦ ಮಕ್ಕಳಿಗಾಗುವಷ್ಟು ಸಾಂಬಾರನ್ನು ಕೇವಲ ೪೫ ನಿಮಿಷಗಳಲ್ಲಿ ತಯಾರಿಸುವ  ತಂತ್ರಜ್ಞಾನ ನಮ್ಮನ್ನು ಬೆರಗುಗೊಳಿಸಿತು.ನೆಲ ಮಹಡಿಯಲ್ಲಿ ಒಂದನೇಯ ಮಹಡಿಯಿಂದ ತಯಾರಾದ ಆಹಾರ ವನ್ನು ಪಾತ್ರೆಗಳಲ್ಲಿ ತುಂಬಿ  'CONVEY BELT' ಮೂಲಕ ಸರಬರಾಜು ಮಾಡುವ ಘಟಕವಿದ್ದು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತಲುಪಿಸಲಾಗುವ ಸಂಗತಿಯೇ ನಮಗೆ ವಿಸ್ಮಯವನ್ನುಂಟು ಮಾಡುತ್ತದೆ.

  ನಮ್ಮ ಭಾರತ ದೇಶಾದ್ಯಂತ ಇಂತಹ  'ಇಸ್ಕಾನ್' ನ ೩೫ ಕೇಂದ್ರಗಳಿದ್ದು ಇನ್ನೂ ೩೫ ಘಟಕಗಳು ನಿರ್ಮಾಣ ಹಂತದಲ್ಲಿವೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ,ಮೈಸೂರು,  ಬಳ್ಳಾರಿ ಸೇರಿದಂತೆ  ಒಟ್ಟು ೫ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ದುರ್ಮಾರ್ಗದ ಮೂಲಕವಾದರೂ ಸರಿ, ಕೇವಲ  ಹಣ ,ಆಸ್ತಿ ಗಳಿಸುವ  ಉದ್ದೇಶವನ್ನಿಟ್ಟುಕೊಂಡಿರುವ ಹಲವಾರು ನಕಲಿ  NON GOVERNMENT ORGANISATION ಗಳು ದೇಶಾದ್ಯಂತ ನಾಯಿಕೊಡೆಗಳಂತೆ  ಉದ್ಭವಿಸುತ್ತಿರುವ ಇಂತಹ ವಿಷಮ ಸಂದರ್ಭದಲ್ಲಿ,ಸರ್ಕಾರದ ಸಹಯೋಗದ ಜೊತೆಗೆ ತನ್ನ ಕೊಡುಗೆಯನ್ನೂ ಸಂಯುಕ್ತಗೊಳಿಸಿ ಬಡ ಮಕ್ಕಳಿಗೆ  ಪೌಷ್ಠಿಕಾಂಶಯುಕ್ತ  ಆಹಾರ ಪೂರೈಸುವ ನಿಸ್ವಾರ್ಥ  ಸೇವೆಯ  'ಇಸ್ಕಾನ್' ನ ಅಕ್ಷಯ ಫೌಂಡೇಶನ್ ನ ಕಾರ್ಯ ಮೆಚ್ಚುವಂತಹುದು ಹಾಗೂ ಆದರ್ಶಪ್ರಾಯವಾಗಿದೆ. 'UNLIMITED FOOD FOR EDUCATION'' ಎಂಬ ಧ್ಯೇಯವಾಕ್ಯದೊಂದಿಗೆ  ಹಸಿವು ಮತ್ತು ಅನಕ್ಷರತೆ ಯ ವಿರುದ್ಧ ಹೋರಾಡುವ ಪಣ ತೊಟ್ಟಿರುವುದು ವಿಭಿನ್ನವಾಗಿದೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...