Total Pageviews

Friday 8 June 2018

ಚೆಂಬೆಳಕಿನ ಪ್ರಭೆಯಲ್ಲಿ ಕಳೆದು ಹೋದಾಗ...
          ಆ ಸಂಜೆ'ವಿಶ್ವ ವಿನೂತನ ವಿದ್ಯಾ ಚೇತನ' ಕವಿತೆಯಲ್ಲಿನ
ಸರ್ವ ಹೃದಯ ಸಂಸ್ಕಾರಿ ಯಾಗಿ ಆಧುನಿಕ ಕನ್ನಡ ಕಾವ್ಯದೇವಿಯ ಅನವರತ ಸೇವೆಗೈಯ್ಯುತ್ತಿರುವ ೯೦ ಹರೆಯದ  ಬಲು ಚೆನ್ನ "ವೀರ "ಕವಿಯಾದ ಕಣವಿಯವರ ದರ್ಶನ ಭಾಗ್ಯ ನಮ್ಮನ್ನು ಪುಳಕಿತರನ್ನಾಗಿಸಿತ್ತು.ಧಾರವಾಡದ ಕಾವ್ಯ ದೇವತೆಯೇ ಸ್ವತಃ ತನ್ನ ಮುಗ್ಧ ಕನ್ನಡ  ಕಂದಮ್ಮಗಳ ಸೈರಣೆಗಾಗಿ  ಉನ್ನತ ಶಿಕ್ಷಣ ಅಕಾಡೆಮಿಯ ಬಾಗಿಲಿಗೆ ಬಂದು ಜೀವಚೈತನ್ಯ ಸ ದರ್ಶನ ನೀಡಿ ಕಾವ್ಯರಸಧಾರೆಯನ್ನು ಉಣಬಡಿಸಿದ್ದು ನಮ್ಮ ಜೀವನದ  ಸೌಭಾಗ್ಯ.
      ಧಾರವಾಡದೊಂದು  ಸಂಜೆಯ ಮುಂಗಾರಿನ ತುಂತುರು ಮಳೆಯ ತಂಪಾದ ಹಿತಾವರಣದಲ್ಲಿ ಸುವರ್ಣ ಸೌಧ ದ ಮಧ್ಯೆ  ಕನ್ನಡ ಸಾಂಸ್ಕೃತಿಕ ಲೋಕದ ದಿವ್ಯ ಕವಿ ಚೇತನವು ಚೆಂಬೆಳಕಾಗಿ ಆವರಿಸಿದ ಕ್ಷಣಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದವು.

     "ಗ್ರೀಷ್ಮದಲ್ಲಿ ಬಂದ ಗುರು"ವಾದ ಆ ಕಾವ್ಯ ಬೆಳಕಿನ ಪ್ರಭೆ ನಮ್ಮನ್ನು ರಸಾನುಭವದಲ್ಲಿ ಮಿಂದೇಳುವಂತೆ ಮಾಡಿತ್ತು.
                    "ಎನ್ನ ಪಾಡು ಎನಗಿರಲಿ ಅದರ ಹಾಡನ್ನಷ್ಟೆ
                              ನೀಡುವೆನು ರಸಿಕ ನಿನಗೆ
                      ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
                             ಆ ಸವಿಯ ಹಣಿಸು ನನಗೆ"
     ಎಂಬ ಬೇಂದ್ರೆಯವರ ಹಾಡಿನ ಹಂಬಲ 'ಕಾವ್ಯವೀರ' 'ಕಣವಿ'ಯವರದೂ ಆಗಿತ್ತು.ತಮಗೆ ಅರಿವಿದ್ದೂ, ಅರಿವಿಲ್ಲದಂತೆ ಕುವೆಂಪು ಬೇಂದ್ರೆ, ಪುತಿನ ,ಮಾಸ್ತಿ ಯವರಂತಹ ಕಾವ್ಯತಪಸ್ವಿಗಳ  ಪ್ರಭಾವಕ್ಕೊಳಗಾದವರು ಕಣವಿಯವರು.
ಅದಕ್ಕೊಂದು ಉದಾಹರಣೆ
                        "ಹೂವು ಹೊರಳುವವು ಸೂರ್ಯನ ಕಡೆಗೆ
                              ನಮ್ಮ ದಾರಿ ಬರಿ ಚಂದ್ರನವರೆಗೆ
                           ಗಿಡದಿಂದುದುರುವ ಎಲೆಗಳಿಗೂ ಮುದ
                               ಚಿಗುರುವಾಗಲು ಒಂದೆ ಹದ                           

                           ನೆಲದ ಒಡಲಿನೊಳಗೇನ ನಡೆವುದೋ
                               ಎಲ್ಲಿ ಕುಳಿತಿಹನು ಕಲಾವಿದ?"

              ಹೀಗೆ ಕಣವಿಯವರು ನವೋದಯದ ನಿಸರ್ಗ ಪ್ರಿಯತೆ, ರಮಣೀಯತೆಗಳ ಆರಾಧಕರೂ ಆಗಿದ್ದಾರೆ.ನಂತರ ಗೋಚರಿಸಿದ  ಅಡಿಗ,ಗೋಕಾಕ ರಂತಹ  ಕಾವ್ಯಗಾರುಡಿಗರ  ನವ್ಯ ಪ್ರವಾಹದಲ್ಲಿ, ಕೊಚ್ಚಿಕೊಂಡು ಹೋಗದೆ ತಮ್ಮದೇಯಾದ 'ಜೀವಧ್ವನಿ'ಯ ಅನನ್ಯತೆಯನ್ನು ಕಾಪಾಡಿಕೊಂಡ ಕಾವ್ಯಪೂಜಾರಿಗಳು ಕಣವಿಯವರಾಗಿದ್ದಾರೆ.ಜಿ ಎಸ್ ಎಸ್, ಕೆ.ಎಸ್.ನ ಹಾಗೂ ಕಣವಿ ಎಂಬ ಕಾವ್ಯಲೋಕದ ತ್ರಿಮೂರ್ತಿಗಳ ಒಳನೋಟ ನವೋದಯ ನವ್ಯ ಪ್ರಗತಶೀಲಗಳನ್ನು ಮೀರಿ ಕಾವ್ಯಾಗಸದಲ್ಲಿ ವಿಶಿಷ್ಟವಾಗಿ ಬೆಳಗುವ  ತಾರೆಗಳಾಗಿದ್ದಾರೆ.ಪಂಥದ ಪ್ರಭಾವಕ್ಕೊಳಗಾಗಿಯೂ ಪಂಥಕ್ಕೆ ಸೀಮಿತವಾಗಲಿಲ್ಲವೆಂಬುದೇ ಇವರ ಕಾವ್ಯಧರ್ಮವಾಗಿದೆ.

      ಕಣವಿಯವರು ಧಾರವಾಡದ -'ಕಾವ್ಯಾನುಭವ ಮಂಟಪ'ವನ್ನು ಕೀರ್ತಿನಾಥ ಕುರ್ತಕೋಟಿ ,ವಸಂತ ಕವಲಿ ಮುಂತಾದವರ  ಜೊತೆಗೂಡಿ ಕಟ್ಟಿ,ಬೇಂದ್ರೆ, ಗೋಕಾಕರ ಗುರುಕುಲದಲ್ಲಿ ಕಾವ್ಯ ಸವಿಯನ್ನು  ಆಸ್ವಾದಿಸಿದ 'ದೀಪಧಾರಿ'.'ನೆಲ'ದಲ್ಲಿದ್ದೇ 'ಮುಗಿಲ'ನ್ನು ಮುಟ್ಟುವ ಕವಿ ಹಂಬಲ ಕಣವಿಯವರದಾಗಿತ್ತು.ಅವರ ಕಾವ್ಯ ಗಂಭೀರತೆಯಲ್ಲೂ ಸರಳತೆಯನ್ನು ಮೈಗೂಡಿಸಿಕೊಂಡ  ಜನಪರ ನಿಲುವಿನದಾಗಿದೆ.
         ಮೈದುಂಬಿದ ಉದ್ದ ತೋಳಿನ ಸುವರ್ಣ ಬಣ್ಣದ  ನೆಹರೂ ಶರ್ಟ್, ತಲೆಯ ಮೇಲೊಂದು ರಟ್ಟಿನ ಟೊಪ್ಪಿಗೆ,ಅನಾರೋಗ್ಯದಿಂದ  ಬಳಲುತ್ತಿದ್ದರೂ ತಮ್ಮ  ಕಾವ್ಯದಂತೆ ಸದಾ ಕಲ್ಲುಸಕ್ಕರೆಯ ಸಿಹಿಯನ್ನು ಉಣಬಡಿಸುವ ಮೊಗದ  ಮಂದಹಾಸ ,ಬಿಳಿ ಪೈಜಾಮಿನ ಸರಳ ಉಡುಗೆಯ  'ಭಾವಜೀವಿ' ಕಣವಿಯವರು.

"ಧಾರವಾಡದ ಮಳೆಗಾಲ" ಕಣವಿಯವರ ಕಾವ್ಯರಾಣಿಯನ್ನು ಬಹುವಾಗಿ ಕಾಡಿದೆ. ಇವರ ಕಾವ್ಯ ಕನ್ನಡದ "ಹೊಂಬೆಳಕಿನ" ಜ್ಯೋತಿಗಳನ್ನು   'ಆಕಾಶಬುಟ್ಟಿ'ಯ ಎದೆಯಲ್ಲಿಟ್ಟು ಆಗಸದೆತ್ತರಕೆ ಹಾರಿ ತನ್ನ ಪ್ರಭೆಯಿಂದ ಚಂದ್ರನ ಬೆಳದಿಂಗಳಿಗೂ ಸವಾಲೆಸೆಯುವ "ಚಿರಂತನ ದಾಹ"ವನ್ನು ಹೊಂದಿದೆ.
ಇಂತಹ ಕಾವ್ಯಾರಾಧಕರಾದ ಚೆನ್ನವೀರ ಕಣವಿಯವರು  ನಮ್ಮ ನಾಡಿನ ಸಾಂಸ್ಕೃತಿಕ ವಿಶಿಷ್ಟತೆ  ಹಾಗೂ
"ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ" ಎಂದು
ನದಿಗಳ ಮೂಲಕ ಜನಾಂಗವೊಂದರ ಸೀಮೆಯನ್ನು ಕಾವ್ಯದಲ್ಲಿ ಗುರುತಿಸಿದ ಶ್ರೀವಿಜಯನ 'ಕವಿರಾಜಮಾರ್ಗ'ದ ನಿದರ್ಶನ ಜಗತ್ತಿನ ಯಾವ ಸಾಹಿತ್ಯ ಲೋಕದಲ್ಲಿಯೂ ಕಾಣಸಿಗದು.
ಈ ನಮ್ಮ ಚೆಲುವ ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆ ಗರಿಮೆಗಳ ಬಗ್ಗೆ ಹೆಮ್ಮೆ ಅಭಿಮಾನಗಳಿರಬೇಕು. ಏಕೆಂದರೆ, ನಮ್ಮ ನಾಡವರು
"ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳ್ ಅಭಿಜನರ್ಕಳ್ ಗುಣಿಗಳ್
ಅಭಿಮಾನಿಗಳ್ ಅತ್ಯುಗ್ರರ್ ಗಂಭೀರ ಚಿತ್ತರ್ ವಿವೇಕಿಗಳೂ ಆಗಿದ್ದಾರೆ ಎಂಬ ಪರಂಪರೆಯನ್ನು ಗೌರವಿಸಬೇಕಾದ ಅವಶ್ಯಕತೆಯನ್ನು ಕಣವಿಯವರು ಒತ್ತಿಹೇಳುತ್ತಾರೆ.

       ಇವರ 'ಕಾವ್ಯಾಕ್ಷಿ' ಗಳು ಕನ್ನಡ ದೀಪಗಳ ಚೆಂಬೆಳಕನ್ನು ನಮ್ಮ ಘನ  ಪರಂಪರೆಯ ಮೇಲೆ ಬೀರುತ್ತವೆ
ಎಂಬುದಕ್ಕೆ ಸ್ವತಃ  ಕಣವಿಯವರ ಕಂಠಸಿರಿಯಿಂದ ಮೂಡಿಬಂದ ಈ ಕವಿತೆಯೆ ಸಾಕ್ಷಿಯಾಗಬಲ್ಲದು
"ಕಾವ್ಯ ಕನ್ನಿಕೆಯುಲಿದು
ಮಾರ್ಗದೇಶಿ ಬೆಸೆದು
ವಾಗ್ವಿಭುವನಗುನ್ನತಿ ರಸಧ್ವನಿಯ ಹಿಡಿದು
ಒಂದೇ ಮಾನವ ಜಾತಿ
ಸ್ತಂಭ ದೀವಿಗೆಯಂತೆ
ಪ್ರಜ್ವಲಿಸಿ ಕನ್ನಡಕ್ಕೆ ಪಡೆಯನೆರೆ,
ಪಂಪ"
ಇದು ಪರಂಪರೆಯನ್ನು ಸುವರ್ಣಾಕ್ಷರಗಳಿಂದ ಬೆಳಗಿರುವ ಮಹಾಕಾವ್ಯಗಳ ಓದು ಹಾಗೂ ಕನ್ನಡ ಸಂಸ್ಕೃತಿಯ ಅವಲೋಕನವಾಗಿದೆ.


'ಸುನೀತಗಳ ಸಾಮ್ರಾಟ'ರೆಂದೇ ಪ್ರಖ್ಯಾತವಾಗಿರುವ ವಿದ್ವಾಂಸರಾದ ಕಣವಿಯವರಿಗೆ  ಸುನೀತಗಳೆಂದರೆ ಕೇವಲ ಗಂಭೀರತೆಯ ಪ್ರವಾಹವಲ್ಲ ಅದೊಂದು
ಗಾಂಧಿ,ಬೇಂದ್ರೆ,ಶಾಸ್ತ್ರಿ,ಮುಗಳಿ,ತೀನಂಶ್ರೀ ಯವರಂತಹ ಸುನೀಲ ವಿಸ್ತರವಾದ ಮಹಾವ್ಯಕ್ತಿಗಳ ದರ್ಶನ ಮಾಧ್ಯಮ.

ದಿನಾಂಕ ೭ ನೇ ಫೆಬ್ರವರಿ ೨೦೧೮ ರಂದು ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ಹೊಸದಾಗಿ  ನೇಮಕವಾದ ಕನ್ನಡ ಪ್ರಾಧ್ಯಾಪಕರಿಗೆ ನೀಡುತ್ತಿರುವ   ವೃತ್ತಿ ಬುನಾದಿ ತರಬೇತಿಯ ಅವಧಿಯಲ್ಲಿ ನಮಗೆ 'ಕಣವಿ'  ಎಂಬ ಚೆಂಬೆಳಕಿನ ದಾರ್ಶನಿಕರ ಸಾಂಗತ್ಯ ಸಾಧ್ಯವಾಗಿದ್ದು ಬದುಕಿನ ಅವಿಸ್ಮರಣೀಯ ಕಾಣಿಕೆಯಾಗಿದೆ.ಸಾಧ್ಯವಾಗಿಸಿದ ಅಕಾಡೆಮಿಗೆ ಕೃತಜ್ಞತೆಗಳು.....

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...