Total Pageviews

Friday 26 June 2020

ನೀನೊಮ್ಮೆ ಒಡಲುಗೊಂಡು ನೋಡಾ..

ನೀನೊಮ್ಮೆ ಒಡಲುಗೊಂಡು ನೋಡಾ..
ಅದು ಬ್ರಾಹ್ಮಿ ಮುಹೂರ್ತಕಾಲ. ಸಾಕಿ ಹೆಣೆದು ಹಾಸಿದ ಕೌದಿಯಿಂದ ಮೈಮನಗಳೆಲ್ಲವೂ ಎಚ್ಚರಗೊಂಡು ಮಂಜುಗಣ್ಣಿನಲ್ಲಿಯೇ ಮನೆಯ ಮುಂದಿನ ಉದ್ಯಾನವನದೊಳಗೆ ಪ್ರವೇಶಿಸಿದೆ. ಹಳದಿಯುಟ್ಟು ನಿಂತ ಅಲಂಕಾರದ ಗಿಡದೆಲೆಗಳ ಮೇಲೆ ಆಗ ತಾನೇ ಭುವಿಗಿಳಿದು ವಿರಮಿಸುತ್ತಿದ್ದ ಇಬ್ಬನಿಯ ಹನಿಗಳನ್ನು ಹುಡುಕಿ ಮೈಸವರಿದೆ. ಕಾಯುತ್ತಿದ್ದವೋ ಏನೋ ಅಂಟಿಕೊಂಡುಬಿಟ್ಟವು ದೂರದಿಂದಲೇ ಕಾಡಬೇಕೆಂದಿದ್ದ ಹಸ್ತಗಳಿಗೆ. ಎತ್ತಿಕೊಂಡೆ ಮುದ್ದಿನ ಕೂಸನ್ನು ತಾಯಿ ಹಿಡಿದೆತ್ತಿಕೊಂಬಂತೆ. ಕಣ್ಣುಗಳಿಗೆ ಸವರಿ ರೆಪ್ಪೆಗಳಿಂದ ತಬ್ಬಿಕೊಂಡೆ. ನೇತ್ರದೊಳಗೆ ಮಡುಗಟ್ಟಿದ ಅಂತರಂಗದಿಂದುದಿಸಿದ ಮಂಜಿನೊಳಗೆ ಬಹಿರಂಗದ ಇಬ್ಬನಿಯೂ ಐಕ್ಯವಾಗಿ ಅದ್ವೈತವಾಗುವುದರಲ್ಲಿರುವ ಅದಮ್ಯ ಸುಖವನ್ನನುಭವಿಸಿದೆ ಕಣ್ಣಾಲೆಗಳನ್ನು ಮೌನದಿಂದ ಮುಚ್ವಿಕೊಂಡು. ಆಗ ಶೂನ್ಯವೇ ಸಂಪಾದನೆ; ಭಾವವೇ ಆಲಾಪನೆ; ಧ್ಯಾನವೇ ಸಂಶೋಧನೆ. ಹಿಂದಿನ ರಾತ್ರಿ ಹನಿದ ಮಳೆಯಿಂದ ಮಜ್ಜನಗೈದ ಗಿಡಮರಗಳು  ಹಸಿರಿನ ಹೊಸ ದಿರಿಸನ್ನುಟ್ಟು ಮಧುವಣಗಿತ್ತಿಯಂತೆ ಶುಭೋದಯದ ಸ್ವಾಗತಕ್ಕಾಗಿ ಸಿದ್ಧವಾಗಿ ನಿಂತಿದ್ದವು. ಹೃದಯದಿಂದ ಹೊರಟ ರಾಗರತಿ ಕಣ್ಣುಗಳ ಮೂಲಕ ಮತ್ತೆ ಇಳೆಗಿಳಿಯುತಿತ್ತು ಹನಿ ಹನಿಯ ಬನಿಯಾಗಿ. ಕುವೆಂಪು ಹೇಳುವ "ಆನಂದಮಯ ಈ ಜಗಹೃದಯ" ವೆಂದರೆ ಯಾವುದೆಂದು ಸರಳವಾದ ಪ್ರಯೋಗದ ಮುಖೇನ ತೋರಿದ  ಇಬ್ಬನಿಯ ಹನಿ ಗೆಳೆಯರಿಗೆ ಕೈಮುಗಿದೆ. ಉದ್ಯಾನವನದಲ್ಲಿಯೇ ಸುಳಿದಾಡಿದೆ ಮಾರುತನ ಹೆಗಲ ಮೇಲೆ ಕೈಹಾಕಿ. ರಾತ್ರಿಯೆಲ್ಲಾ ಹರಿದಾಡಿ ಆಯಾಸಗೊಂಡು ಮಂದಗಾಮಿನಿಯಾಗಿದ್ದ ಒಡಲಿಲ್ಲದ ನಿರಾಕಾರನ ಕುಶಲೋಪರಿಯನ್ನು ವಿಚಾರಿಸಿದೆ.
"ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ"
ಎಂಬ ಜೇಡರ ದಾಸಿಮಯ್ಯನ ವಚನದ ಸಾಲುಗಳಲ್ಲಿರುವ ಒಡಲುಗೊಳ್ಳುವ ವ್ಯಕ್ತಿತ್ವ ವಾಯುದೇವನದಲ್ಲ ಎಂದ ಮೇಲೆ ಸತ್ಯ ಅಸತ್ಯಗಳ ದ್ವಂದ್ವಗಳ ಗೊಡವೆಯಿಲ್ಲದೇ ಆತ ಹೊತ್ತು ತಂದ ಎಲ್ಲ ಸುದ್ದಿ ಸಮಾಚಾರಗಳನ್ನೂ ಎದೆಯೊಳಗಿಳಿಸಿಕೊಂಡೆ. ಮಾತನಾಡಿಸುತ್ತಲೇ "ನೀನೊಮ್ಮೆ ಒಡಲುಗೊಂಡು ನೋಡಾ" ಎಂದು  ವಚನಕಾರರು ಕಂಡ ಕನಸನ್ನು ನಾಲಿಗೆಗೆ ತಂದು ಪುನರುಚ್ಚರಿಸಿದೆ. ಮಣಿಯಲಿಲ್ಲ ಆಸಾಮಿ. ಹುಸಿ ಹಾಗೂ ಹಸಿವುಗಳೇ ಜಗತ್ತನ್ನಾಳುವವರ ರಾಜತಂತ್ರಗಳಲ್ಲವೇ. ಇದೆಲ್ಲವೂ ಮಾರುತನಿಗೆ ಗೊತ್ತಿದೆ. ಒಡಲುಗೊಂಡರೆ ಯುಗಯುಗಗಳಿಂದ  ಕಾಪಾಡಿಕೊಂಡು ಬಂದ ಪಾವಿತ್ರ್ಯ ಕ್ಷಣಾರ್ಧದಲ್ಲಿಯೇ ಮಣ್ಣುಸೇರುವುದೆಂದು. ಪ್ರಹ್ಲಾದನ ತಂದೆ ಹಿರಣ್ಯಕಶ್ಯಪನಲ್ಲಿ ಮಡುಗೊಂಡ ಅಧಿಕಾರದ ಮದ ತನ್ನನ್ನೂ ಸುಮ್ಮನೇ ಬಿಟ್ಟೀತೇ? ರಾಮಾಯಣದ ಮರ್ಯಾದಾ ಪುರುಷೋತ್ತಮನನ್ನು, ಮಹಾಭಾರತದ‌ ಲೀಲಾ ಪುರುಷೋತ್ತಮನನ್ನು ಒಡಲು ಸತಾಯಿಸಿದ್ದನ್ನು ನೆನೆಸಿಕೊಂಡ ಮಾರುತ ಒಂದಾದ ನಂತರ ಒಂದರಂತೆ ದೃಷ್ಟಾಂತಗಳನ್ನು ಬೋಧಿಸಿದ. ತನ್ನ ಜೀವಮಾನದಲ್ಲಿ ಎಂತಿಂಥವರನ್ನು ಕಂಡಿಲ್ಲ ಹೇಳಿ ಆತ. ಭುವನದ ಒಂದು ತುದಿಯಿಂದ ಮತ್ತೊಂದು ಅಂಚಿನವರೆಗೂ ಸಾಮ್ರಾಜ್ಯ ಕಟ್ಟಿ ಮೆರೆದವರು, ಕಟ್ಟಿದ ಕೋಟೆ, ಕಟ್ಟಿಕೊಂಡ ಮಹಾರಾಣಿಯರನ್ನು ಬಿಟ್ಟು ಎಲ್ಲೋ ಮಣ್ಣಾದವರು, ಹೇಳಹೆಸರಿಲ್ಲದಂತೆ ರಣರಂಗದೊಳಗೆ ಸಮಾಧಿಯಾಗಿ ನರಿತೋಳಗಳಿಗೆ ಅಹಾರವಾದವರು, ಅಧಿಕಾರದ ಅಮಲಿನಲ್ಲಿ ಮನುಷ್ಯತ್ವವನ್ನು ಮರೆತು ಜಾರಿಹೋದವರು, ಹಣದ ಹೊಳೆಯಲ್ಲಿ ಅಂಧರಾಗಿ ಕೊಚ್ವಿಹೋದವರು, ಹಗರಣಗಳಲ್ಲಿ ಕಳೆದು ಕೊಳೆತು ಹೋದವರು, ಮೋಸ ವಂಚನೆಗಳನ್ನೇ ಹಾಸಿಕೊಂಡು ಹೊದ್ದು ಒಳಗೇ ಮಾಯವಾದವರು, ಹಸಿವಿನಿಂದ ಕಂಗೆಟ್ಟು ತಿಪ್ಪೆಯಲ್ಲಿ ಅಳಿದುಳಿದ ಎಂಜಲೆಲೆಗಳ ಮೇಲಿರುವ ಅನ್ನದಗುಳನ್ನುಂಡು ಹೊಟ್ಟೆ ಹೊರೆದುಕೊಳ್ಳುವ ಅಮಾಯಕರು, ಕೊರೊನಾ ಮಹಾಮಾರಿಯಿಂದಾಗಿ ಚಡಪಡಿಸಿ ಒಲ್ಲದ ಜೀವವನ್ನು ಕೈಯ್ಯಲ್ಲಿ
ಹಿಡಿದುಕೊಂಡು ತುತ್ತಿಗಾಗಿ ಅಂಡಲೆಯುತ್ತಿರುವ ಕೂಲಿಗಳು  ಹೀಗೆ ಒಂದೇ ಎರಡೇ ಮಾರುತ ದರ್ಶಿಸಿ ಉದಾಹರಿಸಿದ ಒಡಲುಗೊಂಡ  ಮಾನವ್ಯದ ಸ್ವರೂಪಗಳು. ಇಂತಹ ಅಸಂಖ್ಯಾತ, ಅಪರಿಮಿತ, ಅಗಣಿತ, ಅನಂತ ಒಡಲುಗಳನ್ನು ತನ್ನ ತೀಕ್ಷ್ಣ ದೃಷ್ಟಿ ಮಾತ್ರದಿಂದಲೇ ದಹಿಸಿ ಅರಗಿಸಿಕೊಂಡವನ ಮುಂದೆ "ನೀನೊಮ್ಮೆ ಒಡಲುಗೊಂಡು ನೋಡಾ.."ಎಂದವನ ನನ್ನ ಸ್ಥಿತಿ ಹೇಗಿರಬೇಡ ಎಂದೊಮ್ಮೆ ಕಲ್ಪಿಸಿಕೊಳ್ಳಿ. ಹೀಗೆನ್ನುತ್ತಲೇ ಆತ ಗಹಗಹಿಸಿ ನಕ್ಕುಬಿಟ್ಟ ವ್ಯಂಗ್ಯವಾಗಿ ಬಿರುಬೀಸಿ ಸೆಳೆದುಬಿಟ್ಟ ವ್ಯಗ್ರವಾಗಿ. ತಂಪಾದ‌ ಇರುಳಕೊನೆಯಲ್ಲಿಯೂ ಬಿಸಿಯಾಗಿ ತಾಪವೇರಿಸಿಕೊಂಡುಬಿಟ್ಟ ಎದೆಯೊಳಗೆ ಕೋಪದ ಕಿಚ್ಚನ್ನು ಹೊತ್ತಿಸಿಕೊಂಡವನಂತೆ. ಸಂದರ್ಭವನ್ನರಿತ ನಾನು "ಶಾಂತನಾಗು ಗೆಳೆಯಾ..ಶಾಂತನಾಗು..." ಎಂದು ಉಪಚರಿಸಿ "ನೀನು ಗಾಂಧಿಯ ಹೆಸರು ಹೇಳಲಿಲ್ಲ; ವಿವೇಕಾನಂದರ ನಾಮ ಉಲಿಯಲಿಲ್ಲ; ಅರವಿಂದರ ಮಾತೆತ್ತಲಿಲ್ಲ; ಪರಮಹಂಸರನ್ನೂ ಸ್ಮರಿಸಲಿಲ್ಲ ; ಶಾರದಾಂಬೆಯನ್ನು ನೆನೆಯಲಿಲ್ಲ..." ಎಂದು ಅಚ್ಚುಕಟ್ಟಾಗಿಯೇ ವಾಗ್ವಾದವನ್ನು ರೂಪಿಸಿ ಮಂಡಿಸಿದೆ. ಸತ್ಯವನ್ನೊಪ್ಪಿಕೊಂಡಂತೆ ಕಂಡ ಗಾಳಿಯ ಸದ್ದು ಕಡಿಮೆಯಾಯಿತೋ ಏನೋ ಕೋಪವಂತೂ ತಣ್ಣಗಾಯಿತು. ಮತ್ತೆ ಆತ ಎರೆಯುವ ತಂಪಿನ ಮಜ್ಜನಕ್ಕಾಗಿ ಕಾದು ಕುಳಿತೆ. ಅಲೆ ಅಲೆಯಾಗಿ ಮಂದಗಮನೆಯಾಗಿ ಅಪ್ಪಳಿಸಿದ ಅಂತರಂಗದ ಪರದೆಗಳಿಗೆ. ತೂಗುವ  ತೊಟ್ಟಿಲಿನಂತಹ ಹೊಯ್ದಾಟದ ಪರಮಸುಖವನ್ನುಂಡ ಅಂತರಂಗದ ರಂಗು ರಂಗಿನ ಭಾವಪರದೆಗಳು ಒಳಗಿಳಿದ ವಾಯುವಿನ ಆರ್ದ್ರತೆಯಿಂದ ಸಂತೃಪ್ತಿಯನ್ನನುಭವಿಸಿದವು. ರಂಗದೊಳಗೆ ಮಗುವಾಗಿ ಅಸಂಗತ ನಾಟ್ಯವಾಡಿದೆ. ಮೊಲವಾಗಿ ಮುಂಗಾಲನ್ನೆತ್ತಿ ನೆಕ್ಕಿ ಕುಪ್ಪಳಿಸಿದೆ.‌
ಆಮೆಯಾಗಿ ತಾಳ್ಮೆಯಿಂದ ಕತ್ತು ಹೊರಚಾಚಿ ಸಂಭ್ರಮದ ನಿರಾಳ ಹೆಜ್ಜೆಗಳನ್ನಿಟ್ಟು ತಣಿದೆ. ಭಾವಪೂರ್ಣವಾಯಿತು ಅಂತರಂಗ ಆಕಸ್ಮಿಕವಾಗಿ ಒದಗಿಬಂದ ಶುಭೋದಯದ ರಸಘಳಿಗೆಯಲ್ಲಿ.  ಬಸವಣ್ಣನವರು ಹೇಳುವ ಅಂತರಂಗ ಶುದ್ದಿಯೆಂದರೆ ಇದೇ ಅಲ್ಲವೇ ಎಂದೆನಿಸಿತು ನನಗೆ. ಅರಿವಿಲ್ಲದಂತೆಯೇ ಅದುವರೆಗೂ ಆ ರಂಗದಲ್ಲಾಡಿದ ಬದುಕಿನ ವಿಕಟತೆಗಳು ಭಾಷ್ಪಗಳ ಮೂಲಕ ಹೊರಬಂದವು ಬಹಿರಂಗದ ಇಬ್ಬನಿಯ ಹನಿಗಳನ್ನು ಆಲಂಗಿಸಿ ತಮ್ಮ ಪಾಪಗಳನ್ನು ಕಳೆದುಕೊಳ್ಳಲು. ಇದೇ ಇರಬೇಕು ಅರಿಸ್ಟಾಟಲ್ ನ  ಕೆಥಾರ್ಸಿಸ್( ಭಾವಶೋಧನೆ) ಎಂದುಕೊಂಡನುಭವಿಸಿದೆ. ಗ್ರೀಕ್ ತತ್ವಜ್ಞಾನಿಯ ಸಿದ್ಧಾಂತವೊಂದನ್ನು ಹೀಗೆ ಅಳವಡಿಸಿಕೊಂಡು ಅನುಭವಿಸಿದ ಅನುಯಾಯಿಯಾದೆ. "ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಂ" ಎಂದ ಪಂಪನಿಗೂ ಬನವಾಸಿ ದೇಶದಲ್ಲಿ ಇದೇ ಅನುಭವವಾಗಿರಬೇಕಲ್ಲವೇ ? ಎಂದು ಬೀಗಿದೆ. ಇಷ್ಟೆಲ್ಲಾ ಸಂಕಥನ ಕಟ್ಟಿ ನಿಮ್ಮ ಮುಂದೆ ಹೀಗೆ ಬಯಲಾಗುತ್ತಿರುವುದಕ್ಕೂ ಒಂದು ಗಹನವಾದ ಕಾರಣವಿದೆ. ಅದು ವ್ಯಷ್ಟಿ ಪ್ರಜ್ಞೆಯ ಪ್ರತಿಫಲ. ನಾನು ಒಡಲುಗೊಂಡ ದಿನವಾದ ಜೂನ್  ೨೫,  ಮತ್ತೊಂದು ಅರ್ಥದಲ್ಲಿ ನನಗೆ ಜಗತ್ತು ಒಡಲುಗೊಂಡ ದಿನವೂ ಹೌದು. ಮೊದಲನೇಯದು ವ್ಯಷ್ಟಿ ಪ್ರಜ್ಞೆ. ಎರಡನೇಯದು ಸಮಷ್ಟಿ ಪ್ರಜ್ಞೆ. ವಿಶಾಲಾರ್ಥದಲ್ಲಿ ನನಗೆ ಇವೆರಡೂ ಹುಟ್ಟಿಕೊಂಡ ದಿನವೂ ಹೌದು. ನಾನು ಹುಟ್ಟಿದ ದಿನಕ್ಕೂ, ಅಂದೇ  ಸಂಭವಿಸಿದ ಭಾವಶೋಧನೆಯ ಈ ಲೀಲಾವಿಲಾಸಕ್ಕೂ ಕಾಕತಾಳೀಯ ಸಂಬಂಧವಷ್ಟೇ ಇರಲಾರದು ಎಂದೇ ನನ್ನ ನಂಬಿಕೆ. ಹೆಂಡತಿ ಎದ್ದು ಬಂದು  ಹಾರೈಸಿದಳು. ಹುಟ್ಟುಹಬ್ಬವೆಂದರೆ ಏನೆಂದು ಅರಿಯದ ಮುಗ್ಧ ಜನಪದ ಸಮುದಾಯದ ಸಂಪ್ರದಾಯದಲ್ಲಿಯೇ ಬೆಳೆದುಬಂದ ನಮಗೆ ಇದೊಂದು ಮುಜುಗರದ ದಿನ. ತಿರುಳಿಗಿಂತ ರಂಗುರಂಗಿನ ಮುಲಾಮಿನ ಬಟ್ಟೆಯನ್ನುಟ್ಟು ನವವಧುವಿನಂತೆ ಕಂಗೊಳಿಸುವ  ವೃತ್ತಾಕಾರದ ಕೇಕು, ಅದರ ಮೇಲೆ ಬಣ್ಣದ ಮುಲಾಮಿನಿಂದ ಬರೆದ ಶುಭಾಶಯದ ಅಲಂಕಾರಿಕ ಕೆತ್ತನೆ, ಮೇಲೊಂದು ಹೊತ್ತಿಸಿದಾಗ ಸುರ್ ಎಂದು ನಭದತ್ತ ಮುಖಮಾಡಿ ಚಿತ್ತಾರಗೊಳ್ಳುವ ಮಾಂತ್ರಿಕ ಮೇಣದಬತ್ತಿ, ಪ್ಲಾಸ್ಟಿಕ್ ಕತ್ತಿ, ಮನೆಯಲ್ಲಿರುವವರ ಬಿಟ್ಟ ಕಣ್ಣು ಬಿಟ್ಟಂತೆ ಸದಾ ಸಿದ್ಧವಾಗಿರುವ, ಜಂಗಮವಾಣಿಯ ತೆರೆದ ಕಣ್ಣುಗಳ  ಕ್ಯಾಮರಾಗಳು, ಕೆಂಪು ಜುಟ್ಟಿನ ಒಂದಷ್ಟು ಸಾಂತಾಕ್ಲಾಸ್ ನ ಟೋಪಿಗಳಿದ್ದರೆ ಮುಗಿಯಿತು ಈ ಹೊತ್ತಿನ ಹುಟ್ಟಿದ ಹಬ್ಬದ ಆಚರಣೆಯ ಸಂಭ್ರಮ ಮುಗಿಲುಮುಟ್ಟಿಬಿಡಲು. ಇದಾವುದರ ಸೆಳೆತವೇ ಇಲ್ಲದವರಂತೆ ಬದುಕಿದ ಕುಟುಂಬದವರ ಕುಡಿಯಾಗಿ ನನಗಿದರ ಪರಿಚಯ ಬಹಳ ಕಡಿಮೆ. ಪುರಾಣವೆಂದು ಹೀಗಳೆಯದಿರಿ.
ಬಯಲು ಸೀಮೆಯ ನೆಲಮೂಲ ಸಂಸ್ಕೃತಿಯಲ್ಲಿ ಒಡಲುಗೊಂಡವರೆಲ್ಲರಿಗೂ ಸಾಮಾನ್ಯವಾಗಿ ಇದೇ ಇತಿಹಾಸದ ಹಿನ್ನೆಲೆಯಿದೆ. ಸಾಕಿಯು ಸ್ನಾನ ಮಾಡೆಂದು ಗದರಿಸಿದ ಹೊತ್ತಿಗೆ ಪ್ರಕೃತಿಯೂ ಮಳೆರಾಜನ ಪ್ರೇಮದ ಹೊಳೆಯಲ್ಲಿ ಮಿಂದೆದ್ದಿತ್ತು. ಪ್ರಾತಃಕಾಲ ನನ್ನೊಳಗೆ ಸಂಭವಿಸಿದ ಅಂತರಂಗದ ಸ್ನಾನವೂ ನನ್ನನ್ನು ನವನವೋನ್ಮೇಶನನ್ನಾಗಿ ಪರಿವರ್ತಿಸಿಬಿಟ್ಟಿತ್ತು. ಮೊಬೈಲಿನಲ್ಲಿ‌ ಘಂಟಾನಾದಗೈಯ್ಯುತ್ತಾ ಧಾವಿಸುತ್ತಿದ್ದ ಶುಭಾಶಯಗಳ ಹೊಳೆಯಲ್ಲಿ ಅಭ್ಯಂಜನಗೈದು ವಿನೀತನಾದೆ.‌ ಇದು ಕೇವಲ ವ್ಯಷ್ಟಿಯ ಸಂಕಥನವಲ್ಲ. ಕನಿಷ್ಠ ತಾವು ಒಡಲುಗೊಂಡ ಘಳಿಗೆಯೂ ಗೊತ್ತಿರದವರೆಲ್ಲರಿಗೂ ಸಲ್ಲಲೇಬೇಕಾದ ನುಡಿನಮನ. ಜನುಮದಿನದ ಸುಳುಹೂ ಇಲ್ಲದ ನನ್ನ ಸಾಕಿಯರಿಬ್ಬರೂ ಈ ವಿಸ್ಮೃತ ಸಮಯದಾಯದ ಪ್ರತಿನಿಧಿಗಳೇ. ಪಕ್ಕದ ಮನೆಯ ಅಜ್ಜಿಯೊಬ್ಬಳು ತೀರಿ ಹೋದಾಗ ಆಕೆಯ ವಯಸ್ಸಿನ‌ ಲೆಕ್ಕಾಚಾರವೇ ಅದಾರಿಗೂ ನಿಲುಕಲಿಲ್ಲ. ಡಿಜಿಟಲ್ ಯುಗದಲ್ಲಿಯೂ ತಾರೀಖು, ದಿನ, ಮುಹೂರ್ತ, ಘಳಿಗೆಗಳನ್ನು ಅವುಗಳೊಂದಿಗೆ ಜೀವಿಸುತ್ತಲೇ ದಾಖಲಿಸಲು ಹೆಣಗಾಡಿ, ಮರೆತು ಸಹವಾಸವೇ ಬೇಡವೆಂದರೂ, ಮತ್ತೆ  ಕ್ಯಾಲೆಂಡರಿನ ಮುಂದೆ ಧ್ಯಾನ ಮಾಡುವ ನಾವೆಲ್ಲಿ ? ಕ್ಯಾಲೆಂಡರುಗಳೇ ಇಲ್ಲದ ಹುಣ್ಣಿಮೆ ಬೆಳದಿಂಗಳು, ಅಮವಾಸ್ಯೆಗಳ ಕರಿನೆರಳುಗಳನ್ನೇ ಕಾಲವಳೆಯಲು ಆಧಾರವಾಗಿಟ್ಟುಕೊಂಡ  ಯುಗದ ಕತ್ತಲೆಯೊಳಗೆ, ಹೊತ್ತು ಗೊತ್ತಿಲ್ಲದೇ ಹುಟ್ಟಿ, ಬೆಳಕಿಲ್ಲದ ದಾರಿಯಲ್ಲಿಯೇ ಕನಸುಗಳನ್ನು ಕಟ್ಟಿ, ಮುಗಿಲೆತ್ತರದ ಭರವಸೆಗಳನ್ನು ಬೆಳೆಸಿ, ತಮ್ಮದೆಲ್ಲವನ್ನೂ ಬದುಕಿಗೆ ಸಮರ್ಪಿಸಿ, ಗೂಡಿನೊಳಗಿದ್ದು ವಂಶದ ಮರಿಗಳನ್ನು ಸಿಂಹಾಸನದ ಮೇಲೆ ಹೊತ್ತು ಮೆರೆಸುವ ಜನಪದರ ಕಾಲಭೈರವನೆಲ್ಲಿ ?. ಈ ಹೊತ್ತಿನ ಹುಟ್ಟುಹಬ್ಬಗಳು ನನ್ನಲ್ಲಿ  ಈ ಜಿಜ್ಞಾಸೆಯನ್ನು ಹುಟ್ಟಿಸಿವೆ.‌ ಸಾಮಾಜಿಕ ಜಾಲತಾಣಗಳಾದಿಯಾಗಿ ಗೆಳೆಯರ ಬಳಗ, ಕೇಕು, ಹಾರ ತುರಾಯಿಗಳೊಂದಿಗೆ  ಎಲ್ಲೆಲ್ಲೂ ಸಂಭ್ರಮಿಸುವ ಹುಟ್ಟಿದ ಹಬ್ಬ ನಮಗೆ ವರುಷಕ್ಕೊಮ್ಮೆ ಸಂಭವಿಸಿದರೆ, ತಮ್ಮದೇ ಜನುಮದಿನದ ಸುಳಿವನ್ನಿಟ್ಟುಕೊಳ್ಳದ ಸಾಕಿಯರಿಗೆ ನಿತ್ಯವೂ ಹುಟ್ಟುಹಬ್ಬವೇ. ಪ್ರತಿನಿತ್ಯ ತಮ್ಮವರೆಲ್ಲರ ಬದುಕನ್ನು ಹಸನುಗೊಳಿಸಿ, ಎಲ್ಲರೆದೆಯೊಳಗೂ ಚೈತನ್ಯವನ್ನು ತುಂಬಿ, ಬೇಂದ್ರೆಯವರು ಹೇಳುವ ಹಾಗೆ ಅಂತರಂಗದಲ್ಲಿ ತೊಂತನನ ಹಾಡಿದರೆ ಮುಗಿಯಿತು ಅವರು ಮತ್ತೆ ಮರುಹುಟ್ಟು ಪಡೆದಂತೆಯೇ ಅಲ್ಲವೇ ? ನಿತ್ಯದ ಕಾಯಕದಲ್ಲಿ ಒಂದರೆಘಳಿಗೆಯ ಲಯ ತಪ್ಪಿದರೂ ಸಾಕು; ಅವರೆದುರಿಸುವ ಸಂಕಟಗಳನ್ನೊಮ್ಮೆ ಕಣ್ಣೆದುರಿಗೆ ತಂದುಕೊಳ್ಳಿ. ಸಾಕಿಯನುಭವಿಸುವ ಯಾತನೆಗಳನ್ನೊಮ್ಮೆ ಸ್ಮರಿಸಿಕೊಳ್ಳಿ. ತಿಳಿದುಬಿಡುತ್ತದೆ ಅವರು ಅಚರಿಸಿಕೊಳ್ಳಲಾಗದ ಜನುಮದಿನದ ರಹಸ್ಯ. ಇವರಲ್ಲವೇ ಆ ದೇವನೂ ಸ್ವೀಕರಿಸಲಾಗದ ಸವಾಲನ್ನು ತಮ್ಮದಾಗಿಸಿಕೊಂಡು ಬದುಕಲು ನಿಜವಾಗಿಯೂ ಒಡಲುಗೊಂಡು ಬಂದವರು. ನಾವೋ ಒಡಲುಗೊಂಡು ವಿಷಯಸುಖಲೋಲುಪತೆಯ ಅರಗಿನರಮನೆಯಲ್ಲಿ ಕ್ಷಣ ಕ್ಷಣಕ್ಕೂ ಪರಿತಪಿಸುತ್ತಿರುವವರು. ಈ ಸಾಕಿಯರೋ, ಒಡಲುಗೊಂಡು ಬದುಕಿನ ಪ್ರಶ್ನೆಗಳಿಗೆ ಮತ್ತೆ ಮತ್ತೆ ಉತ್ತರವಾಗಿ ಮರಳಿ ಪ್ರಶ್ನೆಯಾಗುತ್ತಿರುವವರು.
ಗೋಧೂಳಿಯ ಸಮಯವದು. ಮನೆ ಬಿಟ್ಟು ಕಾಡಿನ ಕಡೆಗೆ ಕೈಹಿಡಿದು ಕರೆದೊಯ್ಯುವ ಕಾಲಪುರುಷ, ಎದುರಿಗಿದ್ದ ಸುಣ್ಣದ ಗೋಡೆಯ ಮೇಲೆ ತೂಗುಹಾಕಿರುವ ಗಡಿಯಾರದಲ್ಲಿರುವ ಕ್ಷಣದ ಮುಳ್ಳಿನ‌ ಕೊನೆಯಿಂದ ಸನ್ನೆ ಮಾಡಿದ. ಏನೋ ತಿವಿದಂತಾಗಿ ಎಚ್ಚರಗೊಂಡೆ. ಚಹಾಯಣವನ್ನು ಎದೆಯೊಳಗಿಳಿಸಿಕೊಂಡು ಕರುಳ ಕುಡಿಗಳ ಕಣ್ತಪ್ಪಿಸಿ ಹೊರಟ ನನ್ನ ಹಾದಿಯಲ್ಲಿ ಎದುರಾದ ಹುಟ್ಟಿದ ಹಬ್ಬದ ಸಂಭ್ರಮವನ್ನೊಮ್ಮೆ ಕೇಳಿಬಿಡಿ - ಶುಭೋದಯದ ಅಮೃತಘಳಿಗೆಯಲ್ಲಿ ತಂದೆ ವಾಯುದೇವ ನನಗೆ ಗೆಳೆಯನಾಗಿ ದಕ್ಕಿದರೆ, ಸಂಜೆ ಅವನ ಪುತ್ರ ಆಂಜನೇಯ ಆತ್ಮಸಖನಾಗಿ ಹತ್ತಿರವಾಗಿಬಿಡುತ್ತಾನೆ. ದರ್ಶನ ಪಡೆದು ಹೊರಟ ಆಂಜನೇಯನ ದೇವಾಲಯದ ಹಿಂಭಾಗದ ಕಾಂಕ್ರೀಟ್ ರಸ್ತೆ ನನಗೆ ಅಕ್ಷರಶಃ ವೇದಿಕೆಯಾಗಿಯೇ ಕಂಡಿತು. ಆ ರಸ್ತೆಯ ಬದಿಯಲ್ಲಿ ಸಾಮಾಜಿಕ‌ ಅಂತರವನ್ನು ಕಾಪಾಡಿಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತುಕೊಂಡಿದ್ದ ಆಲ, ಬೇವುಗಳೆಂಬ ಕಿಶೋರಿಯರು   ಒಡಲನ್ನಲ್ಲಾಡಿಸಿಕೊಂಡು ಬಳುಕಿನ ಸ್ವಾಗತ ಕೋರಿದವು.
ಊರನ್ನು ದಾಟುವ ಧಾವಂತದಿಂದ ಹೊರಟವನನ್ನು ತಡೆದು, ಹುಲ್ಲಿನ ಗುಡಿಸಲಿನಲ್ಲಿದ್ದ ಜಾತಿ, ಮತ, ಪಂಥಗಳಿಂದಾಚೆ ಬದುಕುತ್ತಿದ್ದ ಸಾಕಿ ಹಾಗೂ ಸೊಸೆ ಸೇರಿ ಕುಶಲೋಪರಿ ವಿಚಾರಿಸಿದರು. ಸ್ವಲ್ಪ‌ ಮುಂದೆ ಹೋದರೆ, ಹೊಲದಲ್ಲಿ ದುಡಿದು ಬಂದು ಎತ್ತುಗಳ ಆಯಾಸವನ್ನು ತನ್ನ ಆಪ್ತಮಾತುಗಳಿಂದ ಪರಿಹರಿಸುತ್ತಿದ್ದ ರಂಗಪ್ಪಗೌಡರು ಬಾಗಿ ನಮನಗಳನ್ನು ಸಲ್ಲಿಸಿದರು.  ಆ ಹಾದಿಯ ಮಧ್ಯದಲ್ಲಿ ತನ್ನ ಬೆಳಕಿಲ್ಲದ ಗುಡಿಸಲ ಮುಂದೆ, ತಲೆಯ ಮೇಲೆ ಬಿಳಿ ರುಮಾಲಿನ ಮುಕುಟವನ್ನಿಟ್ಟುಕೊಂಡು, ಬೀಡಿಯನ್ನು ಸೇದುತ್ತಾ ಕುಳಿತ  ಕುರಿಕಾಯುವ ಯಮನಪ್ಪ ಕುಳಿತಲ್ಲಿಂದಲೇ ಕೈಮುಗಿದನು. ಪಯಣ ಮುಂದುವರೆದು ಈ ಹಾದಿಯ ಕೊನೆಗೆ ಬಂದಾಗ ನನ್ನ ಸಾಕಿಯಂತೆಯೇ ನಡೆಯಲಾಗದ ಕೀಲುಗಳನ್ನು ಮೊಣಕಾಲಿನಲ್ಲಿಟ್ಟುಕೊಂಡು, ಅಸಂಖ್ಯಾತ ನೋವುಗಳನ್ನುಂಡ‌‌ ಹೆಗ್ಗುರುತಾದ ಹಣೆಯ ಗೆರೆಗಳ ಮಧ್ಯೆ ಎದ್ದು ಕಾಣುವ ವಿಭೂತಿಯನ್ನು ಧರಿಸಿ ಶಿವನಾಮ ಜಪಿಸುತ್ತಾ, ತನ್ನ ಗುಡಿಸಲಿನರಮನೆಯ ಮುಂದೆ ಕೌದಿ ಹಾಸಿಕೊಂಡು ಕಾಲುಚಾಚಿ  ಕುಳಿತಿದ್ದ ಹನಮವ್ವಜ್ಜಿ ತನ್ನೆರಡೂ ಕೈಗಳನ್ನೆತ್ತಿ ನಮಸ್ಕಾರಗಳನ್ನು ಸಲ್ಲಿಸಿದಳು.‌ ಭೇದವಿಲ್ಲದೇ ಮಾತಿಗಿಳಿಯುವ ಈ ಜನಪದರ ಅನರ್ಘ್ಯ ವಾತ್ಸಲ್ಯದ ಮಾಯೆಗೆ ಶರಣು ಶರಣೆಂದೆ.ಇದೆಂತಹ ಅಪೂರ್ವ ಸೌಭಾಗ್ಯವೆಂದೆನಿಸುತ್ತದೆ ನನಗೆ. ಎಲ್ಲರಿಗೂ ತಲೆದೂಗಿ ಆಶೀರ್ವಾದ ಬೇಡಿದೆ. ಲೌಕಿಕ ಪಯಣದಲ್ಲಿ ಎದುರಾದ ಮಾತೃಹೃದಯವುಳ್ಳ ಇವರೆಲ್ಲರ ಹುಟ್ಟುಗಳಿಗೂ ಕ್ಯಾಲೆಂಡರಿನಲ್ಲಿ ಖಚಿತವಾದ ದಿನವಿಲ್ಲ. ಇವರಿಗೆಂದು ಕೇಕು ತಂದಿಟ್ಟು ಸಂಭ್ರಮಿಸುವ ಜೀವಗಳನ್ನು ನಾನಿನ್ನೂ ಕಂಡಿಲ್ಲ. ವರ್ಷವಿಡೀ ಮಣ್ಣಿನಲ್ಲಿ ಮಣ್ಣಾಗಿ ಕೃಷಿಗೈದಾಗ ತುಂಬಿ ಬರುವ ಫಸಲು ಕೈಸೇರಿದ ದಿನವೇ ಇವರೆಲ್ಲರ ಹುಟ್ಟುಹಬ್ಬ. ಒಡಲುಗೊಂಡು ಬೀದಿಯ ಬದಿಯಲ್ಲಿದ್ದರೂ ಕಡಲಿನಂತಹ ಬದುಕನ್ನು ಈಜಿದವರಿವರು ಎಂದುಕೊಂಡು ಮನದಲ್ಲಿಯೇ ನಮನಗಳನ್ನು ಸಲ್ಲಿಸಿದೆ. ವಿಹಾರದ ಮಧ್ಯದಲ್ಲಿ ಮಳೆಗಾಲದ ಹಾರುವ ಕೀಟಗಳು ನನ್ನ ಜನುಮದಿನದ ಸವಿನೆನಪಿನ ಕಾಣಿಕೆಯಾಗಿ ತಾವು ತಂದ ಕಿರೀಟವನ್ನಿಡಲು ಧಾವಿಸಿದಂತೆ ತಲೆಗೆ ಮುತ್ತಿಕೊಂಡವು. "ಅಯ್ಯಾ ಗೆಳೆಯ ಕೀಟಗಳೆ ಬೇಡಪ್ಪಾ ಬೇಡ.. ಇದೆಲ್ಲ ಮುಜುಗರದ ಸಂಗತಿ ನನಗೆ..." ಎಂದು ಪರಿಪರಿಯಾಗಿ ಹೇಳಿದರೂ ಬಿಡದೇ ನನ್ನನ್ನು ಕಿಲೋಮೀಟರುಗಟ್ಟಲೇ ಬೆನ್ನು ಬಿಡದೇ ಹಾರುತ್ತಲೇ ಹಿಂಬಾಲಿಸಿದವು. ಕತ್ತಲಾಯಿತೆಂದು ಊರಿಗಭಿಮುಖವಾಗಿ ಹೊರಳಿದೆ. ಕೀಟಗಳೂ ದಿಕ್ಕು ಬದಲಿಸಿದವು. ದಾರಿಯಲ್ಲಿ  ಸಿಕ್ಕ ಕೇರಿಯ ರಾಮಪ್ಪನೊಂದಿಗೆ ಕೊರೊನಾ ಕಾಲಘಟ್ಟದ ಮಕ್ಕಳ ಶಿಕ್ಷಣದ ಬಗ್ಗೆ ಮಥಿಸುತ್ತಾ ದೌಡಾಯಿಸಿದೆ.  ಕೆಲಹೊತ್ತಿನ ನಂತರ ಊರು ಸಮೀಪಿಸಿತು. ಕೀಟಗಳು ಬೀಳ್ಕೊಟ್ಟವು. ವಿದಾಯ ಹೇಳಿ ಮನೆಯೆಡೆಗೆ ತೆರಳಿದೆ. ಸುತ್ತಲ ಸಮಾಜ, ಮಳೆಗಾಲದಲ್ಲಿ ಹಸಿರುಟ್ಟು ನಿಂತ ಪ್ರಕೃತಿ, ಬೆಂಬತ್ತಿ ಗೌರವಿಸುವ ಕೀಟಜಗತ್ತು, ಸಾಮಾಜಿಕ ಜಾಲತಾಣಗಳಲ್ಲಿನ ಪ್ರೀತಿಪಾತ್ರರ ಗುಣಗಾನ ಸಾಕಲ್ಲವೇ ಹಬ್ಬ ಹುರಿಗೊಂಡು ತಾರಕಕ್ಕೇರಲು. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಈ ಹಾದಿಯಲ್ಲಿ ನಾನು ಒಡಲುಗೊಂಡ ದಿನದ ಹಬ್ಬ ಸಹಜವಾಗಿಯೇ ಸಾಕಾರಗೊಂಡಿತ್ತು. ಸಾರ್ಥಕತೆಯ ಭಾವವನ್ನು ಹೃದಯದೊಳಿರಿಸಿ ಧನ್ಯೋಸ್ಮಿ ಎಂದುಕೊಂಡೆ. ರಾತ್ರಿ ಗೆಳೆಯರೊಬ್ಬರು ಹಂಚಿಕೊಂಡ ನನ್ನದೇ ಕವಿತೆ, ಈ ದುರಿತ ಕಾಲದಲ್ಲಿ ಹೊಸ ಆಶಯವನ್ನು ಧ್ವನಿಸುವಂತಿದೆಯೆಂದೆನಿಸಿತು-
ರಕ್ತಕಣಗಳೂ ವಿಭಜನೆಯಾಗಿವೆ
ಮತ, ಧರ್ಮ, ಜಾತಿ , ವರ್ಗಗಳ ತೊಳಲಾಟದೊಳಗೆ ನಲುಗಿ
ಯಾವ ಹೊತ್ತಿಗೆ ಅದಾವ ಸಿದ್ಧಾಂತ
ಬಂದಪ್ಪಳಿಸಿ‌ ಒಳಗಿಳಿಯುವುದೋ
ಆತ್ಮದೊಳಗೆ ಮರುಗಿ.....

Sunday 14 June 2020

ಸಂವೇದನೆಗಳೊಂದಿಗೆ ಸಂವಾದ...

ಸಂವೇದನೆಗಳೊಂದಿಗೆ ಸಂವಾದ...
ಬತ್ತಿಹೋಗಿರುವ ಸಂವೇದನೆಗಳೆ
ಮತ್ತೆ ಚಿಗುರುವಿರೆಂದು ?
ಹೆದ್ದಾರಿಯ ಬದಿಯಲ್ಲಿ ಉರುಳಿ
ಬಿದ್ದ ವೇಗದ ಲಾರಿ
ಹೊರಟಿತ್ತು ಬಯಕೆಗಳನ್ನೇ
ತುಂಬಿ ಚೆಲ್ಲುವಂತೆ ಹೇರಿ

ಮಾನವಧರ್ಮವೆಲ್ಲಿದೆ ?
ಬೆನ್ನುಬಿದ್ದ ಕರ್ಮವೆಲ್ಲಿದೆ ?
ಬಿದ್ದಿದೆಯಲ್ಲ ಕಾಲು ಮುರಿದುಕೊಂಡು
ಅನಾಥವಾಗಿ ಲಾರಿಯ ಕೆಳಗೆ
ಮತ್ತೆಂದೂ ಮೇಲೇಳದಂತೆ ಹಾಸಿದ
ವ್ಯವಹಾರದ ನೆಲಕೆ ಒರಗಿ

ಕಣ್ಣು,ಬಾಹುಗಳನಗಲಿಸಿ ದೊರೆತಷ್ಟು
ಬಾಚಿಕೊಳ್ಳುವುದೊಂದೇ ತವಕ
ಸೋಪು, ಎಣ್ಣೆ, ಡೀಸೆಲ್,ಸಿಮೆಂಟು
ಶಾಂಪೂ ಬಗೆ ಬಗೆಯ ಬಯಕೆಗಳ ರೂಪಕ
ಆಸೆಗಳೊಂದಿಗಿನ ಯುದ್ಧದಲ್ಲಿ
ಎಲ್ಲವೂ ಸರಿ ಸಮಾನ!
ಮಾನವೀಯತೆಯೂ, ಕ್ರೌರ್ಯವೂ.

ಬಯಕೆಗಳಿಗೆ ಅಳಿವಿಲ್ಲ;
ಸಾವು ನೋವುಗಳಿಗೆ ಬೆಲೆಯಿಲ್ಲ
ಮಾರುಕಟ್ಟೆಯ ಚಕ್ರವ್ಯೂಹದೊಳಗೆ
ಅರುಣೋದಯವೂ ಲಾಭವೇ
ಮಾರಾಟಕ್ಕಿಟ್ಟರೆ ತಾಪ, ಬೆಳಕು
ಕೊರಗುತ್ತಿದೆ ಹೀಗೆ ನಲುಗಾಟವೇ
ತುಂಬಿದ ಮಾನವ ಬದುಕು
ಬಂಧನದ ಜಗವೆಲ್ಲಾ ಹಣದ
ಮಾಯೆಯೊಳಗಿನ ಹುಳುಕು

ಲಾರಿಯವನ ಆರ್ತನಾದವೂ ಕ್ಷೀಣ
ಬೆಂಬೆಡಗಿನ ಯುಗದ ಗಿಜಿಗಿಡುವ
ವಾಂಛೆಗಳನಾಳುವ ಬಜಾರಿನ ರಣಭೇರಿಯ ಮುಂದೆ
ಸತ್ತು ಹೋಗಿರುವ ನಿಮಗೆಲ್ಲಿದೆ ಮದ್ದು
ಜಗದ ಮಂದಿಗೆ ಜಾಹೀರಾತುಗಳೇ ಮುದ್ದು

ಆಳಿ ಬಿಡಿ ಭುವನವ
ನಿಮ್ಮ ಕಾಲವಿರುವತನಕ
ಬೆಕ್ಕಿನ ಕೊರಳಿಗೆ ಗೆಜ್ಜೆ ಕಟ್ಟುವ ತನಕ
ವಿಷದ ಚಕ್ರವ್ಯೂಹದೊಳಗೆ
ಮಾನವತೆಯ ಅಭಿಮನ್ಯು
ಒಳಹೊಕ್ಕಿರುವನು ಅರಿವಿದ್ದರೂ ಇಲ್ಲದವನಂತೆ
ಹೊರಬರುವುದೆಂತೋ ಕ್ಷಮಿಸಿಬಿಡಿ
ಒಮ್ಮೆ ಅಪ್ಪಿ ಅರ್ಜುನನಂತೆ.

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...