Total Pageviews

Saturday 27 April 2019

ಕಾವ್ಯೋದ್ಯಾನವನದಲ್ಲೊಂದು ವಿಹಾರ...ಭಾಗ ೧

ಕಾವ್ಯೋದ್ಯಾನವನದಲ್ಲೊಂದು ವಿಹಾರ...ಭಾಗ ೧
"ಜಾಡಮಾಲಿಯ ಜೀವ ಕೇಳುವುದಿಲ್ಲ"ಇದೊಂದು ನಾಡಿನ ದಣಿವರಿಯದ ಬರಹಗಾರರಾದ ಡಾ. ರಾಜಶೇಖರ ಮಠಪತಿ( ರಾಗಂ) ರವರ ಅನುವಾದಿತ ಕೃತಿಯಾದರೂ,
ರಾಗಂರವರನ್ನು   ಆವರಿಸಿಕೊಂಡಿರುವ ನೆಲದ ಸೊಗಡಿನ ಅದಮ್ಯ ಪ್ರೀತಿಯನ್ನು  ಬಣ್ಣಿಸುವ ರಚನೆಯಾಗಿರುವುದು ಮಹತ್ವವಾಗಿದೆ. ರಾಗಂರವರು ರಕ್ತದ ಮಡುವಿನಲ್ಲಿ ಚಿತ್ತಾರಗೊಂಡ ಕಾವ್ಯದ ಕಲಾಕೃತಿಗಳನ್ನು ಹಾಗೂ ಕವಿಗಳನ್ನು  ಮನಮುಟ್ಟುವಂತೆ ಅನುವಾದಿಸಿದ್ದಾರೆ. ಜಗತ್ತಿನ ಭಾಷೆಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ಅವರ ಕಾವ್ಯಭಾಷೆ ಅದೆಷ್ಟು  ಆರ್ದ್ರವಾಗಿದೆ ಎಂಬುದಕ್ಕೆ ಈ ಕೆಳಗಿನ ಸಾಲುಗಳನ್ನು ಗಮನಿಸಿ...
"ಏಕೆ ಕಾಡುತ್ತಿರುವೆ ಕನಸುಗಳೆ?

ಏಕೆ ಹರಿಯುತ್ತಿರುವೆ ಕಣ್ಣೀರ ಹನಿಗಳಂತೆ

ಕೋಲ್ಮಿಂಚಿನಂತೆ, ಕದ್ದೋಡುವ ಕಳ್ಳನಂತೆಸುಮ್ಮನಿದ್ದರೂ ಸತಾಯಿಸುವ ನೊಣಗಳಂತೆ ಏಕೆ, ಏಕೆ,ಏಕೆ ಕದಿಯುತ್ತೀರಿ ನನ್ನ ಏಕಾಂತವನ್ನು..." 

ಖಡ್ಗ ಹಾಗೂ ಕಾವ್ಯದ ಗುರಿಗಳು ವಿಭಿನ್ನವಾಗಿದ್ದರೂ ಅವೆರಡೂ ಸಂಧಿಸಿ  ಸೃಜಿಸಿದ ಅಪರೂಪದ ಕಾವ್ಯಾನುವಾದ ಕೃತಿ "ಜಾಡಮಾಲಿಯ ಜೀವ ಕೇಳುವುದಿಲ್ಲ..." .ರಾಗಂರವರಿಗೆ ಕಾಡಿದ ಜಾಡಮಾಲಿ ದುಡಿಯುವ ವರ್ಗದ ಪರಿಶ್ರಮಜೀವಿ. ಆಕೆಯ ಅಂತಃಶಕ್ತಿ ಅನಂತವಾದುದು.ಅಗಣಿತವಾದುದು.ಆ ಜೀವಚೈತನ್ಯವೇ ರಾಗಂರವರ ಈ ಕೃತಿಗೆ ಸ್ಪೂರ್ತಿಯಾಗಿರುವುದು ವಿಶೇಷ. ಕಾವ್ಯಕ್ಕೆ ಹೇಗೆ ಆರಂಭ ಮಧ್ಯೆ ಅಂತ್ಯಗಳಿಲ್ಲವೋ ಈ ಕೃತಿಯಲ್ಲಿರುವ ಕವಿವರ್ಯರಿಗೂ ಆದಿ ಅಂತ್ಯಗಳ ಸೀಮೆಗಳಿಲ್ಲ; ಚೌಕಟ್ಟುಗಳೆಂಬ ಗಡಿಗಳಿಲ್ಲ; ಅಂತಿಮವೆಂಬ ಗೆರೆಗಳಿಲ್ಲ. ಇಲ್ಲಿ ಇರುವುದೊಂದೇ ಅದು ಅನಂತ, ಅತೀತ, ಅಮರ. ಈ ಕೃತಿಯ ಕಾವ್ಯಕತೆಗಳು ನಿರಂತರವಾಗಿ ಧುಮ್ಮಿಕ್ಕುವ ಪ್ರವಾಹ. ಕಾಲ ಸ್ಥಳ ವನ್ನೂ ಮೀರಿದ ಕಾವ್ಯಸಂವಾದ ಈ ಕೃತಿಯ ಪರಮ ಉದ್ದೇಶಗಳಲ್ಲಿ ಒಂದು. ಕಾವ್ಯವೆಂದರೆ ರಾಗಂ ಮಣ್ಣಿಗಿಳಿಯುತ್ತಾರೆ.  ಜೋಳಿಗೆಯ ನೆಲದಲ್ಲಿ ಇಳಿಯಬಿಟ್ಟಿರುವ ನೂರು  ಮರಗಳ ಬೇರಿಗಿಳಿಯುತ್ತಾರೆ. ಕಾವ್ಯವೆಂದರೆ  ರಾಗಂ ಜಾಡಮಾಲಿಯೊಂದಿಗೆ ಉದ್ಯಾನವನದಲ್ಲಿ ದಿನಗಟ್ಟಲೇ ಅಲೆಯುತ್ತಾರೆ. ಅಲ್ಲಿ ತಲೆಯೆತ್ತಿ ಮಂದಹಾಸ ಬೀರುತ್ತಾ ಕೈಬೀಸಿ ಸ್ವಾಗತಿಸುತ್ತಿರುವ ದೇಶವಿದೇಶಗಳ ಸಸಿಗಳೊಂದಿಗೆ ಮಾತಿಗಿಳಿಯುತ್ತಾರೆ. ಕಾವ್ಯದ ಸಂಗಾತ ಬಯಸಿದಾಗೊಮ್ಮೆ ಜೋಳಿಗೆಯಲ್ಲರಳಿದ ಮಲ್ಲಿಗೆಯ ಮೊಗ್ಗಿನ ಚೆಲುವನ್ನು ಕಂಡು ಬೆರಗಾಗಿ ಪಿಸುಮಾತಿಗಿಳಿಯುತ್ತಾರೆ. ಮಣ್ಣಿನಿಂದ ಮರ ಹೀರಿದ ಜೀವಸತ್ವ ಹೂವಾಗಿ ಅರಳಿ ಹಣ್ಣಾಗಿ ರಸದುಂಬುವಂತೆ, ರಾಗಂರವರು ಹೀರಿದ ನೆಲದ ಸೊಗಡು ಮಾಗಿ ಅಲೌಕಿಕತೆಗೇರಿ ಕಾವ್ಯವಾಗಿ ಅದೆಷ್ಟೋ ಜೀವಗಳ ಮನದುಂಬುತ್ತದೆ.
ಕಾವ್ಯವೆಂದರೆ ರಾಗಂ ಮಣ್ಣಿನೊಂದಿಗೆ ಸಂವಾದಕ್ಕಿಳಿಯುತ್ತಾರೆ. ಅವರ ಹಳೆಯ ಮನೆಯ ಮೇಲ್ಮುದ್ದಿಯ ಹಾಳು ಮಣ್ಣೂ ಇವರನ್ನು ಬಳಿ ಕರೆದು ಸಂವಾದಿಸುತ್ತದೆಯೆಂದರೆ ರಾಗಂರವರಲ್ಲಿ ನೆಲದ ಸೊಗಡಿನ ನಂಟು ಅದೆಷ್ಟು ಗಾಢವಾಗಿ ಆಳವಾಗಿ ಜೀವದೊಳಗಿಳಿದಿದೆ ಎಂಬುದನ್ನು ಅರಿಯಬೇಕು. ಹಾಗೆ ಅರಿತಾಗಲೇ ಅವರ ಕಾವ್ಯ ತನ್ನ ಮನೆಗೆ ಕರೆದೊಯ್ಯುತ್ತದೆ. ಬಳಿಸಾರಿ ತಲ್ಲಣಗಳನ್ನು ಹೆಕ್ಕಿ ತೋರುವ ಮನಸು ಮಾಡುತ್ತದೆ.
" ಮಸೀದಿ ಮಂದಿರಗಳ ಕರೆಗೆಓಡುವ ಹುಚ್ಚು ಮನವೆನಿನ್ನೆದೆಯ ದೇಗುಲವನೆಂದಾದರೂ ಹೊಕ್ಕೆಯೇನು?  ಇಲ್ಲಿ ಕಾಣದ ದೇವರುನಿನಗೆಂದಾದರೂ ಅಲ್ಲಿ ಕಂಡನೇನು?  "ಈ ಕೃತಿಯಲ್ಲಿ ಪದಗಳಾಗಿರುವ ಬುಲ್ಲೇಷಾನ ಕಾವ್ಯದ ಸಾಲುಗಳು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ""ಅನ್ವೇಷಣೆ"  ಕವಿತೆಯ ಪಾದಗಳನ್ನು  ನೆನಪಿಸುತ್ತವೆ. ದೇಶ, ಕಾಲಗಳು ಭಿನ್ನವಾಗಿದ್ದರೂ ಕಾವ್ಯ ಒಂದೇ, ಕಾವ್ಯದ ಆಶಯವೂ ಕೂಡ ಎಂಬುದಕ್ಕೆ ಮೇಲಿನ ಕವಿತೆ ದೃಷ್ಟಾಂತವಾಗಿದೆ.ರಾಗಂ ರವರ ಅನುವಾದಗಳೂ ಹಾಗೆಯೇ... "ಜಾನ್ ಕೀಟ್ಸ್...... ನೀರ ಮೇಲೆ ನೆನಪ ಬರೆದು "  ಕೃತಿ ಜಾನ್ ಕೀಟ್ಸ್ ಬರೆದ ಪತ್ರಗಳ ಅನುವಾದವಾದರೂ ರಾಗಂರವರ ಕಾವ್ಯಭಾಷೆಯಿಂದ ಸ್ವತಂತ್ರ ಕೃತಿಯೆಂಬಂತೆ  ಜೀವಂತಿಕೆಯಿಂದ ಕಂಗೊಳಿಸುತ್ತದೆ. ನನ್ನ ಮನೆಯ ಮುಂದೆ ಅರಳಿದ ದುಂಡುಮಲ್ಲಿಗೆಯ ಸುಗಂಧವನ್ನು ಹೀರಿದಾಗೊಮ್ಮೆ ಪಂಪ ರನ್ನ ಜನ್ನ  ಕುವೆಂಪು ಬೇಂದ್ರೆ ಸುಳಿಯುವಂತೆ, ಮೊದಲ ಮಳೆಯ ಹನಿಗೆ ಸುಗಂಧಿತವಾದ ಮಣ್ಣು  ಪರಿಮಳ ಬೀರಿದೊಡನೆ ನೆನಪಾಗುವುದು  ರಾಗಂರವರ  ಕಾವ್ಯಾಲಾಪ. ಈ ಜಾಡಮಾಲಿಯ...... ಕೃತಿಯನ್ನು ಕೈಗೆತ್ತಿಕೊಂಡಾಗಲೇ ಅದು ಬೀರುತ್ತಿರುವುದು  ಕಾವ್ಯಸುಮದ ಪರಿಮಳವೆಂದು ಮನಸು ಅರಿತುಬಿಡುತ್ತದೆ. "ಖಂಡಾಂತರ ಕಾವ್ಯಕ್ಕೊಂದು ಸಾಕ್ಷಿ" ಎಂಬ ಅಡಿಬರಹದೊಂದಿಗೆ ಸಹೃದಯರ ಕೈಗಿಳಿದ ಈ ಕೃತಿ ಖಂಡಗಳನ್ನೂ ಮೀರಿದ ಕಾವ್ಯಸಂವಾದಕ್ಕೆ ವೇದಿಕೆಯಾಗಿದೆ. ಕಾವ್ಯಕ್ಕೆ ಊರು, ನಗರ, ರಾಜ್ಯ, ದೇಶ, ಖಂಡಗಳೆಂಬ ಸೀಮೆಗಳಿಲ್ಲ. ಕಾವ್ಯ ಸೀಮಾತೀತ; ಕಾಲಾತೀತ; ಭಾವಾತೀತ;ರಂಜನಾತೀತ; ದೇಹಾತೀತ;ಆತ್ಮಾತೀತ. ರಾಗಂರವರೇ ಹೇಳುವಂತೆ ಗಾಳಿಯೊಡನಾಟದ ಗಂಧದಂತೆ ಸೀಮಾತೀತವಾಗುವುದೇ ಜೀವದ ಸಾರ್ಥಕ್ಯ ಹಾಗೂ ಕಾವ್ಯದ ಗುರಿ. ವೈಯಕ್ತಿಕತೆಯನ್ನೂ ಮೀರಿದ್ದು ಕಾವ್ಯವಾಗಬಲ್ಲದು ಎಂಬುದಕ್ಕೆ ಈ ಕೃತಿಯಲ್ಲಿ ಅನಾವರಣಗೊಂಡಿರುವ ವ್ಯಕ್ತಿತ್ವಗಳೇ ನಿದರ್ಶನಗಳಾಗಿವೆ.
"ಜೋಳಿಗೆಯಲ್ಲಿ ನೆಟ್ಟ ಮರಗಳಂತೆ, ಕಾವ್ಯದ ಈ ಅನಾಥ ಬೀಜಗಳನ್ನು ಎಲ್ಲೆಲ್ಲಿಂದಲೋ ತಂದೆ. ಯಾವುದೇ ನಿರ್ದಿಷ್ಟ ಗುರಿ, ಉದ್ದೇಶ ಈ ಕ್ರಿಯೆಯ ಹಿಂದಿಲ್ಲ. ದೇಶ ಕಾಲಗಳ ಪರಿವೆಯಿಲ್ಲದೆ ಹೊರಟ ದಾರಿಹೋಕನ ಜೋಳಿಗೆಗೆ ಬಿದ್ದ ಭಾವದ ಜೀವಗಳಿವು.ಸುಮಾರು ಎರಡು ದಶಕಗಳ ಹಾದಿ-ಹುಡಿ-ಮಣ್ಣು ಈ ಜೋಳಿಗೆಯಲ್ಲಿತ್ತು ಎನ್ನಿಸುತ್ತದೆ.ದಾರಿಹೋಕನ ಯಾತ್ರೆ  ಅವಿರತ ಅನಂತವಾಗಿತ್ತು.ಮುಂದೆಲ್ಲೋ ಮಳೆಯಾಯಿತು.ನಾನು ನೆನೆದುಹೋದೆ. ಆದರೆ ಈ ಜೋಳಿಗೆಯ ಬೀಜಗಳೆಲ್ಲ ಮೊಳೆತು ಕವಿತೆಯಾದವು." ಎಂಬ ರಾಗಂರವರ ಆರಂಭಿಕ ನುಡಿಗಳು ಈ ಕೃತಿಯ ಹುಟ್ಟು, ಉದ್ದೇಶವನ್ನು ಸಾರುತ್ತವೆ. ಹೌದು. ರಾಗಂರವರು ಕಾವ್ಯವೆಂದರೆ ಹೀಗೆ ಅಲೆಮಾರಿಯಾಗುತ್ತಾರೆ. ಲೋಕದಲ್ಲಿ ಸಿಗುವ ವೈವಿಧ್ಯಮಯ ಕಾವ್ಯಬೀಜಗಳನ್ನು ಆಯ್ದು ತಂದು ಇಲ್ಲಿ ಪ್ರೀತಿಯಿಂದ  ನೆಟ್ಟಿದ್ದಾರೆ. ಜತನದಿಂದ ಬೆಳೆಸಿ  ಅಕ್ಷರಗಳಾಗಿ ಪೋಣಿಸಿದ್ದಾರೆ.ತಮ್ಮ ಕಾವ್ಯಭಾಷೆಯ ನೀರೆರೆದು ಸುಂದರ ವಾತಾವರಣದಲ್ಲಿ ತಾವೇ ಜಾಡಮಾಲಿಯಾಗಿ ಸಲುಹಿ ಜಗಕೆ ನೆರಳಾಗುವ ಹೆಮ್ಮರಗಳಾಗಿ ಪೋಷಿಸಿದ್ದಾರೆ.

ಜಗತ್ತಿನ ದುರಂತ ಕವಿತೆಗಳು ಹಾಗೂ ಕವಿವರೇಣ್ಯರೆಲ್ಲಾ ರಾಗಂರವರ ಈ  ಕಾವ್ಯದರಮನೆಯಲ್ಲಿ ನಿರಮ್ಮಳವಾಗಿ ನಿರಾಳರಾಗಿ ಧೀಮಂತವಾಗಿ ಮಲಗಿದ್ದಾರೆ. ಸಮಾಧಿಯಲ್ಲಿಯೂ ಸಲ್ಲಾಪ  ನಡೆಸಿದ್ದಾರೆ; ಕಾವ್ಯದ ನೆನಪಾಗಿ ಆಲಾಪಿಸಿದ್ದಾರೆ; ಪಿಸುಗುಟ್ಟಿದ್ದಾರೆ. ಇತಿಹಾಸದ ಧೂಳಿನಡಿಯಲ್ಲಿ ಹೆಸರಿಲ್ಲದೆ  ಮರೆಯಾಗಿ ಹೋಗಬಹುದಾದ ಕಾವ್ಯಗಳನ್ನು, ಕಾವ್ಯಾರಾಧಕರನ್ನು  ರಾಗಂರವರು ಹೆಕ್ಕಿ ತೆಗೆದು ಹೊಳಪು ನೀಡಿದ್ದಾರೆ; ಬೆಳಕು ತೋರಿದ್ದಾರೆ. ನಮ್ಮ ಪಂಪನಂತೆ ಕಾವ್ಯ ಹಾಗೂ ಖಡ್ಗಗಳ ಸಾಂಗತ್ಯದಲ್ಲಿದ್ದ ಅಝರ್ ಬಝೈನಿನ ವೀರ ಕವಿ ಅಹಮದ್ ಜಾವೇದ್ ನ  ಕವಿತೆಯ"ನಿಸ್ಸಂಶಯ,  ನಾನೊಬ್ಬ ಕವಿನನ್ನಾಸೆ ಬೇರೆ, ಆಶಯವೂ ಆದರೆ ಉರಿದ ಈ ಮನೆ ಕುರಿತುಏನೆಂದು ಹಾಡಲಿ?"  ಎಂಬ ಸಾಲುಗಳು ರಾಗಂರವರೇ ಈ ಕೃತಿಯನ್ನು  ಹಾಗೂ ಬಹುಮುಖ್ಯವಾಗಿ ಮೊನ್ನೆ ತಾನೇ ಭಾರತದ ಕಣ್ಣೀರ ಹನಿಯಂತಿರುವ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕರ ಮಾರಣಹೋಮದ ರಕ್ತಪಾತವನ್ನೂ ಕುರಿತು ಹಾಡಿದಂತಿವೆ ಅಲ್ಲವೆ? ಮಾನವ ಸಂಬಂಧಗಳು ಶಿಥಿಲವಾಗುತ್ತಿರುವ ಸಂದರ್ಭದಲ್ಲಿ ಗಾಢವಾದ ಮಾನವ ಸಂಬಂಧಗಳ ಫಲಿತವಾಗಿರುವ ' ಡಾಲ್ಗಾ' ಹಾಗೂ ' ಗೋಶ್ಮಾ' ಎಂಬ ಕವನಸಂಕಲನಗಳ ಕರ್ತೃ ಅಝರ್ ಬಝೈನಿನ ಕಾಡುವ ಕವಿ ಅಹಮದ್ ಜಾವೇದ್ ನನ್ನು ಕುರಿತ ಚರ್ಚೆ ಔಚಿತ್ಯಪೂರ್ಣವೆನಿಸುತ್ತದೆ." ಓ ಸೂರ್ಯನೇ, ಮರದ ಮಗುವೇ ಮರ ಸಾಯಬಾರದು ನೀರಡಿಕೆಯಿಂದ ತಿಳಿದುಕೊ, ಅದು ನಿನ್ನ ಬೀಜಗಳ ಭೂಮಿ ನಿನ್ನ ಪ್ರೀತಿಗೊಂದು ಸಾಕ್ಷಿ " ಎಂದು ಪ್ರೀತಿಗೊಂದು ನವ ಪರಿಭಾಷೆಯೊಂದನ್ನು ಸೃಜಿಸಿ, ಲೋಕದೊಳಗಿದ್ದೂ ಒಂಟಿಯಾಗಿ ಬದುಕಿದ, ಸೌಂದರ್ಯವೇ ಮೈವೆತ್ತಿ ನಿಂತಂತಿದ್ದ ಮೆಕ್ಸಿಕನ್ ಚೆಲುವೆ, ಚಿಂತಕಿ, ಕಾವ್ಯಾರಾಧಕಿ ಹಾಗೂ ಕುಂಚಕಲಾವಿದೆ  ಫ್ರಿದಾ ಕಾಹಲೊವಾ ಳ ಭಗ್ನ ಶಿಲಾಬಾಲಿಕೆಯಂತಹ ಬದುಕನ್ನು  ರಾಗಂರವರು ಅವಳದೇ ಮತ್ತೊಂದು  ಕವಿತೆಯ ಮೂಲಕ ಹೀಗೆ ಕಟ್ಟಿಕೊಡುತ್ತಾರೆ -
ಕತ್ತಲೆಯ ಪ್ರತಿಬಿಂಬ ನೀನು
ನನ್ನೊಳಗಿಳಿಯುವ ಗಾಢ ಬಣ್ಣದ ಅಲಗು ನೀನುನೆಳಲು ನೀನುಬೆಳಕು ನೀನುಕಣ್ಣ ಕಾಂತಿಯೂ ನೀನು
..ಕತ್ತಲೆಯನ್ನಪ್ಪಿಕೊಂಡು ಬೆಳಕೇ ಆಗಿಬಿಡಬೇಕು ನಾನು".ಜಗತ್ತಿನ ವಿಭಿನ್ನ ಸಂಸ್ಕೃತಿಯ ಪ್ರತೀಕಗಳಂತಿರುವ ಇಂತಹ ಅಮರ ಕಾವ್ಯಗಳನ್ನು ಹಾಗೂ ಅಮರ ಕವಿಗಳನ್ನು ಹೆಕ್ಕಿ ತೆಗೆದು ಹೀಗೆ ಆಪ್ಯಾಯಮಾನವಾಗಿ ಕಟ್ಟಿಕೊಟ್ಟ ರಾಗಂ ರವರಿಗೆ ನಾವು ಋಣಿಯಾಗಲೇಬೇಕು.

ರಾಗಂರವರು  ಹಾಡಿರುವ ಈ ಕಾವ್ಯಗಳು ಅಮರಗೀತೆಗಳೇ ಆಗಿವೆ. ಬೆಂಗಳೂರಿನ ಉದ್ಯಾನವನದಲ್ಲಿ ರಾಗಂರವರನ್ನು ಭೇಟಿಯಾದ ಜಾಡಮಾಲಿ ನನಗೂ ಸಿಕ್ಕಿದ್ದಳು. ರಾಗಂರವರು  ಅಂದು ಕಬ್ಬನ್ ಉದ್ಯಾನವನದಲ್ಲಿ  ಜಾಡಮಾಲಿಯೊಂದಿಗೆ ಸಸ್ಯ ಮರಗಳೊಂದಿಗಿನ ಆಕೆಯ ಒಡನಾಟದ ಕುರಿತು ಮಾತಿಗಿಳಿದಾಗ ಅವರ ಪಕ್ಕದಲ್ಲಿದ್ದು  ನಾನೂ ಸಾಕ್ಷಿಯಾಗಿದ್ದು ನನ್ನ ಸೌಭಾಗ್ಯವೇ ಸರಿ.ಅಂದು ಕಂಡ ಅಪರೂಪದ ಸಸ್ಯಗಳ ಕೆನ್ನೆ ಸವರಿ ಖುಷಿಪಟ್ಟಿದ್ದೆ. ಅನಕ್ಷರಸ್ಥಳಾಗಿದ್ದರೂ  ಮರ ಗಿಡಗಳೊಂದಿಗಿನ ಮೂವತ್ತು ವರ್ಷಗಳ ಒಡನಾಟ, ಸಸ್ಯಸಂಕುಲದ ಬಗೆಗಿನ ಆಕೆಯ ಜ್ಞಾನ, ತಿಳುವಳಿಕೆ, ಆಸ್ಥೆ, ಅಕ್ಕರೆಯನ್ನು ಕಂಡು ಮೂಕವಿಸ್ಮಿತನಾಗಿದ್ದೆ. ಉದ್ಯಾನವನದ ಪೋಷಕಿಯಾಗಿದ್ದ ಅದೇ ಜಾಡಮಾಲಿ  ರಾಗಂರವರಿಗೆ ಹೀಗೆ ಕೃತಿಯಾಗಿ ದಕ್ಕಿದರೆ, ನನಗೆ ರಾಗಂರವರ ಮೂಲಕ ಕಾವ್ಯಕಾರಣವಾಗಿ ಹೀಗೆ ಕೆಲವು ಸಾಲುಗಳಾಗಿ ದಕ್ಕುತ್ತಿರುವುದು ಅಪೂರ್ವದ ಸಂಗತಿ." ನಿಮ್ಮ ಪಾದದ ಧೂಳು ನನ್ನ ನಗ್ನತೆಯ ಮುಚ್ಚಿದೆನಿಮ್ಮ ಹಾಳು ಮಾತು ನನ್ನನ್ನು ಮೌನದ ಕೂಪಕ್ಕೆ ನೂಕಿದೆ " ಎಂದು ಕವಿತೆಯೇ ಕೊರಳೆತ್ತಿ ಹಾಡಿದಂತಿರುವ ಈ ಸಾಲುಗಳ ಜನಕ ಬೇರಾರೂ ಅಲ್ಲ, ಬೆತ್ತಲೆಯ ಸಂತನೆಂದು, ತತ್ವಜ್ಞಾನಿಯೆಂದು, ಗಮ್ಮತ್ತೇ ಗೊತ್ತಿರದ ತುಂಬಿದ ಮದಿರೆಯ ಬಾಟಲಿಯಂತೆ ಮನುಷ್ಯನ ಜೀವನವೆಂದು ಘಂಟಾಘೋಷವಾಗಿ ಸಾರಿದ ಇರಾನಿನ ರುಬಾಯಿ ಕವಿ ಮೊಹಮ್ಮದ್ ಸಯೀದ್ ಸರ್ಮದ್ ಖಶಾನಿಯದು. ಅಕ್ಕಮಹಾದೇವಿ, ದಿಗಂಬರರು ಬದುಕಿದ ಭಾರತದ  ಬೆತ್ತಲೆಯ ಪರಂಪರೆಯ ಮುಂದುವರೆದ ಕೊಂಡಿಯೆಂಬಂತೆ ಬಾಳಿದ ಸರ್ಮದ್ "ನಿಜವಾದ ಪ್ರೇಮಿಗೆ ಸಾವಿನಂಜಿಕೆಯಿಲ್ಲ, ಗೊತ್ತುಪ್ರೀತಿಯ ಕಸಾಯಿಖಾನೆಯಲ್ಲಿಯೇ ನಂಬಿಗಸ್ತರ ನೆತ್ತರು ಹರಿಯುತ್ತದೆಆದರೆ ಹೀಗೆ ಒಮ್ಮೆ ಕೊಂದವನನ್ನು ಮತ್ತೊಮ್ಮೆ ಕೊಲ್ಲಲಾಗದು "ಎಂದು ಮಾನವ ಮಾನವರ ಮಧ್ಯೆ ಇರಬೇಕಾದ ಅಮರಪ್ರೇಮವನ್ನು ಕುರಿತು ಷರಾ ಬರೆಯುತ್ತಾನೆ. ಹೀಗೆ ವೈವಿಧ್ಯಮಯ ಕಾವ್ಯಕುಸುಮಗಳನ್ನು ಅವುಗಳ ಸುಗಂಧದೊಂದಿಗೆ ಪರಿಚಯಿಸುವ ಅದ್ವಿತೀಯ ಕೃತಿಯೆಂದರೆ ಡಾ. ರಾಜಶೇಖರ ಮಠಪತಿ(ರಾಗಂ) ಯವರ "ಜಾಡಮಾಲಿಯ ಜೀವ......" ಕಾವ್ಯ  ಹಾಗೂ ಕಾವ್ಯಪೂಜಾರಿಗಳನ್ನು  ಕಂಡ ರಾಗಂ ಎಂಬ " ಜಾಡಮಾಲಿಯ ಜೀವ  ಕೇಳುವುದಿಲ್ಲ ".
ಹೌದು. ಕಾವ್ಯಕ್ಕಾಗಿ  ಅಲೆಮಾರಿಗಳಾಗಿ ಭಾಷೆ ಭಾಷೆಗಳನ್ನು, ದೇಶ ದೇಶಗಳನ್ನು, ಸಂಸ್ಕೃತಿ ಸಂಸ್ಕೃತಿಗಳನ್ನು, ಖಂಡ ಖಂಡಗಳನ್ನು  ಅವಿರತ ಸುತ್ತುವ ರಾಗಂ ಒಬ್ಬ ಕಾವ್ಯಜಂಗಮ.  ಉರ್ದು ,ಪರ್ಶಿಯನ್, ಹಿಂದಿ,ಇಂಗ್ಲೀಷ್ ಹೀಗೆ ಜಗತ್ತಿನ ವಿವಿಧ ಸಂಸ್ಕೃತಿಯ ಕಾವ್ಯಜಂಗಮರನ್ನು ಜಾಡಮಾಲಿಯ ಅನುಭವ ಮಂಟಪದೊಳು ತಂದು  ಸಂವಾದಕ್ಕೆ ನಿಲ್ಲಿಸುತ್ತಾರೆ. ಕಾವ್ಯವನ್ನೇ ಉಸಿರಾಗಿಸಿಕೊಂಡು, ಕಾವ್ಯವನ್ನೇ ಬದುಕಾಗಿಸಿಕೊಂಡ ಕಾವ್ಯತಪಸ್ವಿಗಳನ್ನು ಈ ಕೃತಿಯ ಮೂಲಕ ಕಟ್ಟಿಕೊಡುವ ಮೌಲಿಕ ಪ್ರಯತ್ನ ರಾಗಂರವರದು. ಶುಷ್ಕ  ಅನುವಾದ ಓದಿಸಿಕೊಳ್ಳುವುದು ಕಷ್ಟ. ಜೀವ ತುಂಬುವ  ಪರಕಾಯ ಪ್ರವೇಶದ ಅನುವಾದ ರಾಗಂರವರದು. ಮೂಲ ಕಾವ್ಯದ ಅನುಕರ್ತರಾದರೂ  ಅನುಕಾರ್ಯರಷ್ಟೇ ಪ್ರಭಾವ ಬೀರುವ ಶಕ್ತಿ ರಾಗಂರವರ ಭಾಷೆಗಿದೆ. ಕಾವ್ಯ ದಕ್ಕದಿದ್ದಾಗ ಜಾನ್ ಕೀಟ್ಸ್ ನಂತೆ  ಚಡಪಡಿಸುತ್ತಾರೆ. ಕಾವ್ಯದ ಬೇರುಗಳನ್ನು ಹುಡುಕಿ ಮಾಳಿಗೆಯಿಂದ ಜೋಳಿಗೆಗಿಳಿಯುತ್ತಾರೆ. ಇದ್ದಕ್ಕಿದ್ದಂತೆ ಕಾವ್ಯಾರಾಧಕರನ್ನು ಸೆಳೆಯಬಲ್ಲ " ಜಾಡಮಾಲಿಯ ಜೀವ ಕೇಳುವುದಿಲ್ಲ" ಎಂಬ ಕೃತಿಯು ರೂಪು ತಳೆಯುತ್ತದೆ." ಕಾವ್ಯ ಹುಟ್ಟಬೇಕೆಂದರೆ ಕವಿಯಾಗಿರಲೇಬೇಕೆಂದೇನಿಲ್ಲ; ಕನಸುಗಾರನಾಗಿರಬೇಕು;  ಪ್ರಾಮಾಣಿಕನಾಗಿರಬೇಕು; ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮುಗ್ಧತೆಯ ಪ್ರತಿರೂಪವಾಗಿರಬೇಕು " ಎಂಬ ಈ ಕೃತಿಯಲ್ಲಿನ ಕಾವ್ಯಕಟ್ಟುವ ಕಲೆಯ ಸಾಲುಗಳನ್ನು ಓದಬೇಕಾದರೆ ನನ್ನ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಲು ನನ್ನ ತಾಯಿ ಹಾಡುವ ಅವನಿಗಿಷ್ಟವಾದ 

" ಆಡಿ ಬಾ ನನ ಕಂದ ಅಂಗಾಲ ತೊಳದೇನ 

ತೆಂಗಿನ ಕಾಯಿ ತಿಳಿನೀರ! ತಕ್ಕೊಂಡು

ಬಂಗಾರದ ಮಾರಿ ತೊಳದೇನ "

 ಎಂಬ ಹಾಡಿನಲ್ಲಿಯ ಮುಗ್ಧತೆಯ ನೆನಪಾಗುತ್ತದೆ.        

" ಬಾ ಗುಬ್ಬಿ ಕಾಳು ತಗೋಬಾ ಗುಬ್ಬಿ ಕಾಳು ತಿನ್ನು"ಎಂಬ ತೊದಲುನುಡಿಗಳನ್ನಾಡುತ್ತ ನಮ್ಮ ಮನೆಯ ಮುಂದಿನ ದಾಸವಾಳದ ಟೊಂಗೆಯ ಮೇಲೆ ಕುಳಿತ ಗುಬ್ಬಿಗಳನ್ನು ಕರೆಯುವ ನನ್ನ ಮಗುವಿನ  ಮುಗ್ಧತೆಯ ಬಾಲಭಾಷೆಯ ಮುದ ಮನದ ಮುಂದೆ ಸುಳಿಯುತ್ತದೆ.


Friday 5 April 2019

ಚಂದ್ರಗಿರಿಯ ತೀರದಲ್ಲೊಂದು ವಿಹಾರ...
ಯುಗಾದಿ ಅಮವಾಸ್ಯೆಯ ನವಮನ್ವಂತರದ ಶುಭಮುಂಜಾವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಕುರಿತು ಪಾಠ ಸಾಗಿತ್ತು. ಅನೌಪಚಾರಿಕ ಕುಶಲೋಪರಿಯೊಂದಿಗೆ ಪ್ರಾರಂಭವಾದ ತರಗತಿ ಗಂಭೀರ ಚರ್ಚೆಗೆ ಹೊರಳಿಕೊಳ್ಳುವುದರಲ್ಲಿತ್ತು. ಧಾರವಾಹಿಯಂತೆ ಕುತೂಹಲವನ್ನಿಟ್ಟುಕೊಂಡೇ ಮುಂದುವರಿದಿದ್ದ ಈ ಕಾದಂಬರಿ ಕಥೆ ಹಾಗೂ ಸಂವಾದ  ಅಂತಿಮ ಹಂತದ ಕ್ಲೈಮ್ಯಾಕ್ಸ ಘಟ್ಟಕ್ಕೆ ಬಂದು ನಿಂತಿತ್ತು. ನಾದಿರಾ ತನ್ನ ಪತಿಯನ್ನೇ ಪುನರ್ವಿವಾಹವಾಗಲು ಪರಪುರುಷನನ್ನು ಒಂದು ದಿನದ ಮಟ್ಟಿಗಾದರೂ ಮದುವೆಯಾಗಿ ಅವನಿಂದ ತಲಾಖ್ ಪಡೆಯಲೇಬೇಕೆಂಬ ತೊಡಕಿನ ಕುರಿತು ಚರ್ಚಿಸಲು ನಾದಿರಾಳ ತಂದೆ ಮಹಮ್ಮದ್ ಖಾನ್ ನ ಗೆಳೆಯ ಕಾದರ್ ಖಾಜಿಗಳ ಹತ್ತಿರ ಹೋದ ಪ್ರಸಂಗದ ವಿಶ್ಲೇಷಣೆ ನಡೆದಿತ್ತು. ಕಾದರ್ ಕೇಳಿದ ಪ್ರಶ್ನೆಗಳಿಗೆ ಖಾಜಿಯವರು ತಲಾಖ್ ನ್ನು ಒಂದೇ ಬಾರಿಗೆ ಮೂರೂ ಸಲ ಹೇಳಿಬಿಡುವುದಲ್ಲ. ಮೂರು ತಿಂಗಳ ಅಂತರದಲ್ಲಿ ಪ್ರತ್ಯೇಕವಾಗಿ ಒಂದೊಂದು ಬಾರಿ ಹೇಳಿ ದಂಪತಿಗಳಿಗೆ ಒಂದಾಗುವ ಅವಕಾಶ ಕಲ್ಪಿಸಿಕೊಡುವ ಪದ್ಧತಿ ಖುರಾನ್ ನಲ್ಲಿ ಇರುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ ಎಂದಿದ್ದೇ ತಡ ಚರ್ಚೆಗಿಳಿದ ವಿದ್ಯಾರ್ಥಿನಿಯೊಬ್ಬಳು "ಹಾಗಾದರೆ ನಾದಿರಾಳ ಪತಿ ರಶೀದ್ ತಲಾಖ್ ಕೊಡುವಾಗ  ಯಾಕೆ ಹಾಗೆ ಮಾಡಲಿಲ್ಲ ಸರ್ ? " ಎಂದಳು . ಖಾಜಿಗಳು ಹೇಳುತ್ತಿರುವ ಉತ್ತರವಿನ್ನೂ ಮುಗಿದಿಲ್ಲ ಎನ್ನುತ್ತಲೇ ಮುಂದುವರೆಸಿ  "ಈ ಮೂರ್ಖ  ಗಂಡಸರು ತಮ್ಮ ಸೌಕರ್ಯಕ್ಕಾಗಿ ಕೈಗೊಂಡ ಉಪಾಯಗಳು " ಎಂದು ಖಾಜಿಯವರು ಉತ್ತರ ಕೊಡುವುದನ್ನು ಗಡಸು ಧ್ವನಿಯಿಂದಲೇ ಎತ್ತರಿಸಿ ಹೇಳಿದಾಗ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ಅರ್ಧ ಉತ್ತರ ಹೊಳೆದಾಗಿತ್ತು. ಮಹಮ್ಮದ್ ಖಾನ್ ರಶೀದ್ ನಂತಹ ಗಂಡಸರು ತಾವೇ ಮಾಡಿಕೊಂಡ ಬದಲಾವಣೆಗಳ ಬಲಿಪಶು ನಾದಿರಾ ಎಂಬ ನತದೃಷ್ಟ ಹೆಣ್ಣು ಎಂಬುದನ್ನು ನೆನೆದು ವಿಷಾದಿಸುವಂತೆ ಮೌನಿಯಾದಳು. ಈ ಸಂದರ್ಭದಲ್ಲಿ ಲೇಖಕಿಯರಾದ ಸಾರಾ ರವರು  ಕಾದರ್ ನ ಮೂಲಕ   ಹೆಣ್ಣುಮಕ್ಕಳು ಅನುಭವಿಸುತ್ತಿರುವ ಬವಣೆಗಳನ್ನು ಕುರಿತು ಖಾಜಿಗಳನ್ನು ಕೇಳಿದ  ಪ್ರಶ್ನೆಗಳು ಸಮಕಾಲೀನ  ಆಧುನಿಕ ಸಮಾಜವನ್ನೂ ಎಚ್ಚರಿಸುವಂತಿವೆ. ರಾತ್ರಿಯೆಲ್ಲ ಧೋ ಎಂದು ಸುರಿದ ಮಳೆಗೆ ಯುಗಾದಿಯ ಸೂರ್ಯೋದಯದ  ಪ್ರಕೃತಿ ಹೇಗೆ  ನವವಧುವಿನಂತೆ ಹಸಿರುಟ್ಟು ಕಂಗೊಳಿಸುತ್ತಿದೆಯೋ ಹಾಗೆಯೇ ಅಂದೊಂದು ದಿನ ನಾದಿರಾ ಎದ್ದ ಬೆಳಗು ಮಣ್ಣಿನ ಸುವಾಸನೆಯನ್ನು ಹೊತ್ತು ಅವಳನ್ನು ಸ್ವಾಗತಿಸಿತ್ತು.

ನಾದಿರಾಳ ಬದುಕು ಪ್ರಕೃತಿಯ ಮನ್ವಂತರದಂತೆ  ಹೊಸದೊಂದು ವಸಂತಕೆ ಹೊರಳಿಕೊಳ್ಳುತ್ತಿದ್ದ ಸುಸಂದರ್ಭದ ವರ್ಣನೆಯು, ಮುಂಗಾರು ಮಳೆ  ಧರೆಗಿಳಿಯಲು  ಕಾತರದಿಂದ ಸಜ್ಜಾಗುತ್ತಿದ್ದ ಕಾಲದ ಬೆಳಗಿನಲ್ಲಿ  ನನ್ನ  ತರಗತಿಯಲ್ಲಿ ಸಾಧ್ಯವಾಗಿದ್ದು ಕಾದಂಬರಿ ಕತೆಗೊಂದು ಸೂಕ್ತವಾದ ಹಾಗೂ ಅಷ್ಟೇ ಆಪ್ತವಾದ  ಪರಿಸರವನ್ನು ಒದಗಿಸಿತ್ತು.ಇಂತಹ ವಿಶಿಷ್ಟ  ಸಂದರ್ಭಗಳ ವರ್ಣನೆಯಿಂದಾಗಿ  ಕಾದಂಬರಿಯು ಕರಾವಳಿ ಸಂಸ್ಕೃತಿಯ  ದೃಶ್ಯಕಾವ್ಯವಾಗಿ ಮೂಡಿಬಂದಿದೆ. ಹೀಗೆ ಕತೆಯ ಜೊತೆ ಸಂವಾದ ಸಾಗುತ್ತಿದ್ದಾಗಲೇ ಒಬ್ಬ ವಿದ್ಯಾರ್ಥಿನಿಯನ್ನು ಕರೆದು ಕತೆಯ ಮುಂದುವರಿದ ಭಾಗವನ್ನು ವಿವರಿಸಲು ಹೇಳಿದಾಗ ತಾನು ಪಠ್ಯವನ್ನು  ಗ್ರಹಿಸಿದಂತೆ ಕತೆಯನ್ನು ಅದರ ವಿವರವನ್ನು ತರಗತಿಯ ಮುಂದೆ ಉತ್ಸಾಹದಿಂದಲೇ ಹಂಚಿಕೊಂಡದ್ದು ನನಗೆ ಅಪಾರ ಸಂತಸವನ್ನುಂಟು ಮಾಡಿತು. ಮತ್ತೊಬ್ಬ ವಿದ್ಯಾರ್ಥಿನಿಯನ್ನು ಕರೆದು ಕತೆಯನ್ನು ಮುಂದುವರೆಸಲು ಹೇಳಿದೆ.ಇದೇ ಸರಿಯಾದ ಅವಕಾಶವೆಂದು ಬಗೆದ ವಿದ್ಯಾರ್ಥಿನಿ ಮುಂದಿನ ಕಥಾಭಾಗವನ್ನು ಹೇಳಿ ಕಥೆಯನ್ನು ಕೊನೆಗೊಳಿಸಿದಾಗ ಎಲ್ಲ ವಿದ್ಯಾರ್ಥಿಗಳ ಮೊಗದಲ್ಲಿ ನಾದಿರಾಳ ಸ್ವಾತಂತ್ರ್ಯ,ಸಂಸಾರ, ಸುಖ,ನೆಮ್ಮದಿ,ಬದುಕು,ಶಕ್ತಿ,ಧೈರ್ಯ,ಪ್ರೀತಿ, ವಾತ್ಸಲ್ಯ ಕೊನೆಗೆ  ಪ್ರಾಣವನ್ನೂ ಬಲಿ ಪಡೆದ  ಬದಲಾಗದ  ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಆಕ್ರೋಶ ಮಡುಗಟ್ಟಿತ್ತು.ತರಗತಿಯನ್ನಾವರಿಸಿದ ವಿಷಣ್ಣ ಭಾವವನ್ನು  ಚಿಂತನೆಯ ಚೈತನ್ಯವಾಗಿ ಪರಿವರ್ತಿಸುವ ಸವಾಲಿನೊಂದಿಗೆ  ಪ್ರಶ್ನೆ ಕೇಳುವ ಸರದಿ ನನ್ನದಾಯಿತು. ಹತ್ತಿರದಲ್ಲಿದ್ದ    ಚಂದ್ರಗಿರಿ ನದಿಯನ್ನು ಬಿಟ್ಟು  ಮಸೀದಿಯ ಕೊಳದಲ್ಲಿ ನಾದಿರಾ  ಮುಳುಗಲು ಕಾರಣವೇನಿರಬಹುದು ? ಎಂದು ಒಂದು ಪ್ರಶ್ನೆಯನ್ನೆಸೆದೆ. ಪ್ರಶ್ನೆ ಕೇಳಿದುದರ ಇಂಗಿತವನ್ನರಿತ ವಿದ್ಯಾರ್ಥಿನಿಯೊಬ್ಬಳು " ರಶೀದ್ ನನ್ನು ಸೇರಲು ಬಹುದೊಡ್ಡ ಅಡ್ಡಿಯಾಗಿದ್ದ ಚಂದ್ರಗಿರಿಯ ಬಗ್ಗೆ ನಾದಿರಾಳಲ್ಲಿ ಒಂದು ಬಗೆಯ ಆಕ್ರೋಶ ಮನೆ ಮಾಡಿರಬಹುದು ಸರ್ " ಎಂದುಲಿದಾಗ, ನಾನು" ಇದರ ಜೊತೆಗೆ ಚಂದ್ರಗಿರಿ ನಾದಿರಾಳಂತಹ  ನೂರಾರು ಹೆಣ್ಣುಮಕ್ಕಳ ಕಣ್ಣೀರಿನ ನದಿಯಾಗಿ ಹರಿದವಳು ಹೇಗೆ ತಾನೇ ಈ ಹೆಣ್ಣಿಗೆ ಸಾಂತ್ವನ ನೀಡಬಲ್ಲಳು ಎಂಬುದು ಮತ್ತೊಂದು ಕಾರಣವಾಗಿರಬಹುದಲ್ಲದೇ, ಧರ್ಮದ ನಿಯಮಗಳನ್ನೇ ಉಸಿರಾಡಿಸಿ, ಧರ್ಮದ ನಿಯಮದಂತೆಯೇ ಬೆಳೆದು, ಧರ್ಮದ ನಿಯಮಗಳನ್ನೇ ಬದುಕಿ, ಆ ನಿಯಮಗಳ ಒಂದಕ್ಷರವನ್ನೂ  ಮೀರಲಾಗದ ನಾದಿರಾಳಿಗೆ ಧರ್ಮದ ಸಂಕೇತವಾದ ಮಸೀದಿಯ ಆವರಣದಲ್ಲಿನ ಕೊಳಕ್ಕಿಂತ ಔಚಿತ್ಯಪುರ್ಣವಾದ  ನ್ಯಾಯ ಸ್ಥಾನ ದೊರಕುವುದಿನ್ನೆಲ್ಲಿ ?
ಎಂಬ ಉತ್ತರವನ್ನು ದನಿಗೂಡಿಸಿ ಆಕೆಯ ಸಾವು ಕತೆಯ ಅಂತ್ಯವಲ್ಲ ; ಬದಲಾಗಲೇಬೇಕಾದ ಸಾಂಸ್ಥಿಕ ವ್ಯವಸ್ಥೆಗೊಂದು ಮುನ್ನುಡಿಯೂ ಹೌದು  ಎಂಬ ಸತ್ಯದರ್ಶನದ ವಿಮರ್ಶೆಗೆ ತೊಡಗಿ ನಾದಿರಾಳ ತಣ್ಣಗಿನ ಈ ಪ್ರತಿಭಟನೆ ಸಮಾಜಕ್ಕೊಂದು ಎಚ್ಚರಿಕೆಯ ಕರೆಗಂಟೆಯಲ್ಲದೇ ಎಂಥವರನ್ನೂ ಮರುಗಟ್ಟಿಸಬಲ್ಲದು  ಎನ್ನುವಾಗ ಅದೇಕೋ  ಕುವೆಂಪುರವರ ಈ ಸಾಲುಗಳು ನೆನಪಾದವು.....
"ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ
ನಾದಿರಾಳಂತಹ ಅದೆಷ್ಟೋ ಜೀವಗಳು  ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಹಾಗೂ ಸಾಂಸ್ಥಿಕ ವ್ಯವಸ್ಥೆಯ  ಕಾರಣದಿಂದಾಗಿ ಸಮಕಾಲೀನ ಸಂದರ್ಭದಲ್ಲಿಯೂ ನರಳುತ್ತಿರುವ ಧ್ವನಿಗಳು ಆಗಾಗ ಕೇಳಿ ಬರುತ್ತಿರುವುದು ವಿಷಾದನೀಯ ಸಂಗತಿ. ಕಾಲಕ್ಕೆ ತಕ್ಕಂತೆ ಇಂದು ಶೋಷಣೆಯ ಸ್ವರೂಪ ಆಕೃತಿ ವಿಧಾನಗಳು ಭಿನ್ನವಾಗಿರಬಹದು ಆದರೆ ಶೋಷಣೆಯುಂಟು ಮಾಡಬಹುದಾದ ದುಃಖ  ಸಂಕಟಗಳ ಅಂತರಂಗದ ನರಳುವಿಕೆಯೆಂದೆಂದಿಗೂ ಒಂದೇ. ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದಲ್ಲಿಯೂ ಮಹಿಳೆಯರಿಗೆ ದೇಗುಲ ಪ್ರವೇಶದಂತಹ ವಿಷಯಗಳು ಸುಪ್ರಿಂಕೋರ್ಟ್ ನ ಕಟಕಟೆಯಿಂದ  ಆದೇಶಗಳಾಗಿ ಹೊರಬರುತ್ತಿವೆಯೆಂದರೆ  ಶೋಷಿತರ ಧ್ವನಿಗಳ ಆರ್ತನಾದ  ಕಡಿಮೆಯಾಗಿಲ್ಲವೆಂದೇ ಅರ್ಥವಲ್ಲವೇ?


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...