Total Pageviews

Friday 5 April 2019

ಚಂದ್ರಗಿರಿಯ ತೀರದಲ್ಲೊಂದು ವಿಹಾರ...
ಯುಗಾದಿ ಅಮವಾಸ್ಯೆಯ ನವಮನ್ವಂತರದ ಶುಭಮುಂಜಾವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಕುರಿತು ಪಾಠ ಸಾಗಿತ್ತು. ಅನೌಪಚಾರಿಕ ಕುಶಲೋಪರಿಯೊಂದಿಗೆ ಪ್ರಾರಂಭವಾದ ತರಗತಿ ಗಂಭೀರ ಚರ್ಚೆಗೆ ಹೊರಳಿಕೊಳ್ಳುವುದರಲ್ಲಿತ್ತು. ಧಾರವಾಹಿಯಂತೆ ಕುತೂಹಲವನ್ನಿಟ್ಟುಕೊಂಡೇ ಮುಂದುವರಿದಿದ್ದ ಈ ಕಾದಂಬರಿ ಕಥೆ ಹಾಗೂ ಸಂವಾದ  ಅಂತಿಮ ಹಂತದ ಕ್ಲೈಮ್ಯಾಕ್ಸ ಘಟ್ಟಕ್ಕೆ ಬಂದು ನಿಂತಿತ್ತು. ನಾದಿರಾ ತನ್ನ ಪತಿಯನ್ನೇ ಪುನರ್ವಿವಾಹವಾಗಲು ಪರಪುರುಷನನ್ನು ಒಂದು ದಿನದ ಮಟ್ಟಿಗಾದರೂ ಮದುವೆಯಾಗಿ ಅವನಿಂದ ತಲಾಖ್ ಪಡೆಯಲೇಬೇಕೆಂಬ ತೊಡಕಿನ ಕುರಿತು ಚರ್ಚಿಸಲು ನಾದಿರಾಳ ತಂದೆ ಮಹಮ್ಮದ್ ಖಾನ್ ನ ಗೆಳೆಯ ಕಾದರ್ ಖಾಜಿಗಳ ಹತ್ತಿರ ಹೋದ ಪ್ರಸಂಗದ ವಿಶ್ಲೇಷಣೆ ನಡೆದಿತ್ತು. ಕಾದರ್ ಕೇಳಿದ ಪ್ರಶ್ನೆಗಳಿಗೆ ಖಾಜಿಯವರು ತಲಾಖ್ ನ್ನು ಒಂದೇ ಬಾರಿಗೆ ಮೂರೂ ಸಲ ಹೇಳಿಬಿಡುವುದಲ್ಲ. ಮೂರು ತಿಂಗಳ ಅಂತರದಲ್ಲಿ ಪ್ರತ್ಯೇಕವಾಗಿ ಒಂದೊಂದು ಬಾರಿ ಹೇಳಿ ದಂಪತಿಗಳಿಗೆ ಒಂದಾಗುವ ಅವಕಾಶ ಕಲ್ಪಿಸಿಕೊಡುವ ಪದ್ಧತಿ ಖುರಾನ್ ನಲ್ಲಿ ಇರುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ ಎಂದಿದ್ದೇ ತಡ ಚರ್ಚೆಗಿಳಿದ ವಿದ್ಯಾರ್ಥಿನಿಯೊಬ್ಬಳು "ಹಾಗಾದರೆ ನಾದಿರಾಳ ಪತಿ ರಶೀದ್ ತಲಾಖ್ ಕೊಡುವಾಗ  ಯಾಕೆ ಹಾಗೆ ಮಾಡಲಿಲ್ಲ ಸರ್ ? " ಎಂದಳು . ಖಾಜಿಗಳು ಹೇಳುತ್ತಿರುವ ಉತ್ತರವಿನ್ನೂ ಮುಗಿದಿಲ್ಲ ಎನ್ನುತ್ತಲೇ ಮುಂದುವರೆಸಿ  "ಈ ಮೂರ್ಖ  ಗಂಡಸರು ತಮ್ಮ ಸೌಕರ್ಯಕ್ಕಾಗಿ ಕೈಗೊಂಡ ಉಪಾಯಗಳು " ಎಂದು ಖಾಜಿಯವರು ಉತ್ತರ ಕೊಡುವುದನ್ನು ಗಡಸು ಧ್ವನಿಯಿಂದಲೇ ಎತ್ತರಿಸಿ ಹೇಳಿದಾಗ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ಅರ್ಧ ಉತ್ತರ ಹೊಳೆದಾಗಿತ್ತು. ಮಹಮ್ಮದ್ ಖಾನ್ ರಶೀದ್ ನಂತಹ ಗಂಡಸರು ತಾವೇ ಮಾಡಿಕೊಂಡ ಬದಲಾವಣೆಗಳ ಬಲಿಪಶು ನಾದಿರಾ ಎಂಬ ನತದೃಷ್ಟ ಹೆಣ್ಣು ಎಂಬುದನ್ನು ನೆನೆದು ವಿಷಾದಿಸುವಂತೆ ಮೌನಿಯಾದಳು. ಈ ಸಂದರ್ಭದಲ್ಲಿ ಲೇಖಕಿಯರಾದ ಸಾರಾ ರವರು  ಕಾದರ್ ನ ಮೂಲಕ   ಹೆಣ್ಣುಮಕ್ಕಳು ಅನುಭವಿಸುತ್ತಿರುವ ಬವಣೆಗಳನ್ನು ಕುರಿತು ಖಾಜಿಗಳನ್ನು ಕೇಳಿದ  ಪ್ರಶ್ನೆಗಳು ಸಮಕಾಲೀನ  ಆಧುನಿಕ ಸಮಾಜವನ್ನೂ ಎಚ್ಚರಿಸುವಂತಿವೆ. ರಾತ್ರಿಯೆಲ್ಲ ಧೋ ಎಂದು ಸುರಿದ ಮಳೆಗೆ ಯುಗಾದಿಯ ಸೂರ್ಯೋದಯದ  ಪ್ರಕೃತಿ ಹೇಗೆ  ನವವಧುವಿನಂತೆ ಹಸಿರುಟ್ಟು ಕಂಗೊಳಿಸುತ್ತಿದೆಯೋ ಹಾಗೆಯೇ ಅಂದೊಂದು ದಿನ ನಾದಿರಾ ಎದ್ದ ಬೆಳಗು ಮಣ್ಣಿನ ಸುವಾಸನೆಯನ್ನು ಹೊತ್ತು ಅವಳನ್ನು ಸ್ವಾಗತಿಸಿತ್ತು.

ನಾದಿರಾಳ ಬದುಕು ಪ್ರಕೃತಿಯ ಮನ್ವಂತರದಂತೆ  ಹೊಸದೊಂದು ವಸಂತಕೆ ಹೊರಳಿಕೊಳ್ಳುತ್ತಿದ್ದ ಸುಸಂದರ್ಭದ ವರ್ಣನೆಯು, ಮುಂಗಾರು ಮಳೆ  ಧರೆಗಿಳಿಯಲು  ಕಾತರದಿಂದ ಸಜ್ಜಾಗುತ್ತಿದ್ದ ಕಾಲದ ಬೆಳಗಿನಲ್ಲಿ  ನನ್ನ  ತರಗತಿಯಲ್ಲಿ ಸಾಧ್ಯವಾಗಿದ್ದು ಕಾದಂಬರಿ ಕತೆಗೊಂದು ಸೂಕ್ತವಾದ ಹಾಗೂ ಅಷ್ಟೇ ಆಪ್ತವಾದ  ಪರಿಸರವನ್ನು ಒದಗಿಸಿತ್ತು.ಇಂತಹ ವಿಶಿಷ್ಟ  ಸಂದರ್ಭಗಳ ವರ್ಣನೆಯಿಂದಾಗಿ  ಕಾದಂಬರಿಯು ಕರಾವಳಿ ಸಂಸ್ಕೃತಿಯ  ದೃಶ್ಯಕಾವ್ಯವಾಗಿ ಮೂಡಿಬಂದಿದೆ. ಹೀಗೆ ಕತೆಯ ಜೊತೆ ಸಂವಾದ ಸಾಗುತ್ತಿದ್ದಾಗಲೇ ಒಬ್ಬ ವಿದ್ಯಾರ್ಥಿನಿಯನ್ನು ಕರೆದು ಕತೆಯ ಮುಂದುವರಿದ ಭಾಗವನ್ನು ವಿವರಿಸಲು ಹೇಳಿದಾಗ ತಾನು ಪಠ್ಯವನ್ನು  ಗ್ರಹಿಸಿದಂತೆ ಕತೆಯನ್ನು ಅದರ ವಿವರವನ್ನು ತರಗತಿಯ ಮುಂದೆ ಉತ್ಸಾಹದಿಂದಲೇ ಹಂಚಿಕೊಂಡದ್ದು ನನಗೆ ಅಪಾರ ಸಂತಸವನ್ನುಂಟು ಮಾಡಿತು. ಮತ್ತೊಬ್ಬ ವಿದ್ಯಾರ್ಥಿನಿಯನ್ನು ಕರೆದು ಕತೆಯನ್ನು ಮುಂದುವರೆಸಲು ಹೇಳಿದೆ.ಇದೇ ಸರಿಯಾದ ಅವಕಾಶವೆಂದು ಬಗೆದ ವಿದ್ಯಾರ್ಥಿನಿ ಮುಂದಿನ ಕಥಾಭಾಗವನ್ನು ಹೇಳಿ ಕಥೆಯನ್ನು ಕೊನೆಗೊಳಿಸಿದಾಗ ಎಲ್ಲ ವಿದ್ಯಾರ್ಥಿಗಳ ಮೊಗದಲ್ಲಿ ನಾದಿರಾಳ ಸ್ವಾತಂತ್ರ್ಯ,ಸಂಸಾರ, ಸುಖ,ನೆಮ್ಮದಿ,ಬದುಕು,ಶಕ್ತಿ,ಧೈರ್ಯ,ಪ್ರೀತಿ, ವಾತ್ಸಲ್ಯ ಕೊನೆಗೆ  ಪ್ರಾಣವನ್ನೂ ಬಲಿ ಪಡೆದ  ಬದಲಾಗದ  ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಆಕ್ರೋಶ ಮಡುಗಟ್ಟಿತ್ತು.ತರಗತಿಯನ್ನಾವರಿಸಿದ ವಿಷಣ್ಣ ಭಾವವನ್ನು  ಚಿಂತನೆಯ ಚೈತನ್ಯವಾಗಿ ಪರಿವರ್ತಿಸುವ ಸವಾಲಿನೊಂದಿಗೆ  ಪ್ರಶ್ನೆ ಕೇಳುವ ಸರದಿ ನನ್ನದಾಯಿತು. ಹತ್ತಿರದಲ್ಲಿದ್ದ    ಚಂದ್ರಗಿರಿ ನದಿಯನ್ನು ಬಿಟ್ಟು  ಮಸೀದಿಯ ಕೊಳದಲ್ಲಿ ನಾದಿರಾ  ಮುಳುಗಲು ಕಾರಣವೇನಿರಬಹುದು ? ಎಂದು ಒಂದು ಪ್ರಶ್ನೆಯನ್ನೆಸೆದೆ. ಪ್ರಶ್ನೆ ಕೇಳಿದುದರ ಇಂಗಿತವನ್ನರಿತ ವಿದ್ಯಾರ್ಥಿನಿಯೊಬ್ಬಳು " ರಶೀದ್ ನನ್ನು ಸೇರಲು ಬಹುದೊಡ್ಡ ಅಡ್ಡಿಯಾಗಿದ್ದ ಚಂದ್ರಗಿರಿಯ ಬಗ್ಗೆ ನಾದಿರಾಳಲ್ಲಿ ಒಂದು ಬಗೆಯ ಆಕ್ರೋಶ ಮನೆ ಮಾಡಿರಬಹುದು ಸರ್ " ಎಂದುಲಿದಾಗ, ನಾನು" ಇದರ ಜೊತೆಗೆ ಚಂದ್ರಗಿರಿ ನಾದಿರಾಳಂತಹ  ನೂರಾರು ಹೆಣ್ಣುಮಕ್ಕಳ ಕಣ್ಣೀರಿನ ನದಿಯಾಗಿ ಹರಿದವಳು ಹೇಗೆ ತಾನೇ ಈ ಹೆಣ್ಣಿಗೆ ಸಾಂತ್ವನ ನೀಡಬಲ್ಲಳು ಎಂಬುದು ಮತ್ತೊಂದು ಕಾರಣವಾಗಿರಬಹುದಲ್ಲದೇ, ಧರ್ಮದ ನಿಯಮಗಳನ್ನೇ ಉಸಿರಾಡಿಸಿ, ಧರ್ಮದ ನಿಯಮದಂತೆಯೇ ಬೆಳೆದು, ಧರ್ಮದ ನಿಯಮಗಳನ್ನೇ ಬದುಕಿ, ಆ ನಿಯಮಗಳ ಒಂದಕ್ಷರವನ್ನೂ  ಮೀರಲಾಗದ ನಾದಿರಾಳಿಗೆ ಧರ್ಮದ ಸಂಕೇತವಾದ ಮಸೀದಿಯ ಆವರಣದಲ್ಲಿನ ಕೊಳಕ್ಕಿಂತ ಔಚಿತ್ಯಪುರ್ಣವಾದ  ನ್ಯಾಯ ಸ್ಥಾನ ದೊರಕುವುದಿನ್ನೆಲ್ಲಿ ?
ಎಂಬ ಉತ್ತರವನ್ನು ದನಿಗೂಡಿಸಿ ಆಕೆಯ ಸಾವು ಕತೆಯ ಅಂತ್ಯವಲ್ಲ ; ಬದಲಾಗಲೇಬೇಕಾದ ಸಾಂಸ್ಥಿಕ ವ್ಯವಸ್ಥೆಗೊಂದು ಮುನ್ನುಡಿಯೂ ಹೌದು  ಎಂಬ ಸತ್ಯದರ್ಶನದ ವಿಮರ್ಶೆಗೆ ತೊಡಗಿ ನಾದಿರಾಳ ತಣ್ಣಗಿನ ಈ ಪ್ರತಿಭಟನೆ ಸಮಾಜಕ್ಕೊಂದು ಎಚ್ಚರಿಕೆಯ ಕರೆಗಂಟೆಯಲ್ಲದೇ ಎಂಥವರನ್ನೂ ಮರುಗಟ್ಟಿಸಬಲ್ಲದು  ಎನ್ನುವಾಗ ಅದೇಕೋ  ಕುವೆಂಪುರವರ ಈ ಸಾಲುಗಳು ನೆನಪಾದವು.....
"ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ
ನಾದಿರಾಳಂತಹ ಅದೆಷ್ಟೋ ಜೀವಗಳು  ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಹಾಗೂ ಸಾಂಸ್ಥಿಕ ವ್ಯವಸ್ಥೆಯ  ಕಾರಣದಿಂದಾಗಿ ಸಮಕಾಲೀನ ಸಂದರ್ಭದಲ್ಲಿಯೂ ನರಳುತ್ತಿರುವ ಧ್ವನಿಗಳು ಆಗಾಗ ಕೇಳಿ ಬರುತ್ತಿರುವುದು ವಿಷಾದನೀಯ ಸಂಗತಿ. ಕಾಲಕ್ಕೆ ತಕ್ಕಂತೆ ಇಂದು ಶೋಷಣೆಯ ಸ್ವರೂಪ ಆಕೃತಿ ವಿಧಾನಗಳು ಭಿನ್ನವಾಗಿರಬಹದು ಆದರೆ ಶೋಷಣೆಯುಂಟು ಮಾಡಬಹುದಾದ ದುಃಖ  ಸಂಕಟಗಳ ಅಂತರಂಗದ ನರಳುವಿಕೆಯೆಂದೆಂದಿಗೂ ಒಂದೇ. ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದಲ್ಲಿಯೂ ಮಹಿಳೆಯರಿಗೆ ದೇಗುಲ ಪ್ರವೇಶದಂತಹ ವಿಷಯಗಳು ಸುಪ್ರಿಂಕೋರ್ಟ್ ನ ಕಟಕಟೆಯಿಂದ  ಆದೇಶಗಳಾಗಿ ಹೊರಬರುತ್ತಿವೆಯೆಂದರೆ  ಶೋಷಿತರ ಧ್ವನಿಗಳ ಆರ್ತನಾದ  ಕಡಿಮೆಯಾಗಿಲ್ಲವೆಂದೇ ಅರ್ಥವಲ್ಲವೇ?


5 comments:

  1. ಮಾಹಿತಿ ತುಂಬಾ ಚೆನ್ನಾಗಿದೆ ಸರ್...

    ReplyDelete
  2. yes sir well said. the patriarchal society in the name of religious codes and social practices have spoiled the wonderful and happy life of Nadira and Rashid. The only difference between Nadira and Rasheid is that she lives by dying, he dies by living. Death is not an end of struggle, this is a great protest which inspires many people/ women to fight for justice and to change the society and mindset of men.

    ReplyDelete
    Replies
    1. ಅತ್ತ್ಯುತ್ತಮ ಪೂರಕ ಗ್ರಹಿಕೆ ತಮ್ಮದು.ತಮ್ಮ ಪ್ರತಿಕ್ರಿಯೆಗೆ ಸ್ವಾಗತ ಹಾಗೂ ಅನಂತ ಧನ್ಯವಾದಗಳು.

      Delete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...