Total Pageviews

Friday 26 June 2020

ನೀನೊಮ್ಮೆ ಒಡಲುಗೊಂಡು ನೋಡಾ..

ನೀನೊಮ್ಮೆ ಒಡಲುಗೊಂಡು ನೋಡಾ..
ಅದು ಬ್ರಾಹ್ಮಿ ಮುಹೂರ್ತಕಾಲ. ಸಾಕಿ ಹೆಣೆದು ಹಾಸಿದ ಕೌದಿಯಿಂದ ಮೈಮನಗಳೆಲ್ಲವೂ ಎಚ್ಚರಗೊಂಡು ಮಂಜುಗಣ್ಣಿನಲ್ಲಿಯೇ ಮನೆಯ ಮುಂದಿನ ಉದ್ಯಾನವನದೊಳಗೆ ಪ್ರವೇಶಿಸಿದೆ. ಹಳದಿಯುಟ್ಟು ನಿಂತ ಅಲಂಕಾರದ ಗಿಡದೆಲೆಗಳ ಮೇಲೆ ಆಗ ತಾನೇ ಭುವಿಗಿಳಿದು ವಿರಮಿಸುತ್ತಿದ್ದ ಇಬ್ಬನಿಯ ಹನಿಗಳನ್ನು ಹುಡುಕಿ ಮೈಸವರಿದೆ. ಕಾಯುತ್ತಿದ್ದವೋ ಏನೋ ಅಂಟಿಕೊಂಡುಬಿಟ್ಟವು ದೂರದಿಂದಲೇ ಕಾಡಬೇಕೆಂದಿದ್ದ ಹಸ್ತಗಳಿಗೆ. ಎತ್ತಿಕೊಂಡೆ ಮುದ್ದಿನ ಕೂಸನ್ನು ತಾಯಿ ಹಿಡಿದೆತ್ತಿಕೊಂಬಂತೆ. ಕಣ್ಣುಗಳಿಗೆ ಸವರಿ ರೆಪ್ಪೆಗಳಿಂದ ತಬ್ಬಿಕೊಂಡೆ. ನೇತ್ರದೊಳಗೆ ಮಡುಗಟ್ಟಿದ ಅಂತರಂಗದಿಂದುದಿಸಿದ ಮಂಜಿನೊಳಗೆ ಬಹಿರಂಗದ ಇಬ್ಬನಿಯೂ ಐಕ್ಯವಾಗಿ ಅದ್ವೈತವಾಗುವುದರಲ್ಲಿರುವ ಅದಮ್ಯ ಸುಖವನ್ನನುಭವಿಸಿದೆ ಕಣ್ಣಾಲೆಗಳನ್ನು ಮೌನದಿಂದ ಮುಚ್ವಿಕೊಂಡು. ಆಗ ಶೂನ್ಯವೇ ಸಂಪಾದನೆ; ಭಾವವೇ ಆಲಾಪನೆ; ಧ್ಯಾನವೇ ಸಂಶೋಧನೆ. ಹಿಂದಿನ ರಾತ್ರಿ ಹನಿದ ಮಳೆಯಿಂದ ಮಜ್ಜನಗೈದ ಗಿಡಮರಗಳು  ಹಸಿರಿನ ಹೊಸ ದಿರಿಸನ್ನುಟ್ಟು ಮಧುವಣಗಿತ್ತಿಯಂತೆ ಶುಭೋದಯದ ಸ್ವಾಗತಕ್ಕಾಗಿ ಸಿದ್ಧವಾಗಿ ನಿಂತಿದ್ದವು. ಹೃದಯದಿಂದ ಹೊರಟ ರಾಗರತಿ ಕಣ್ಣುಗಳ ಮೂಲಕ ಮತ್ತೆ ಇಳೆಗಿಳಿಯುತಿತ್ತು ಹನಿ ಹನಿಯ ಬನಿಯಾಗಿ. ಕುವೆಂಪು ಹೇಳುವ "ಆನಂದಮಯ ಈ ಜಗಹೃದಯ" ವೆಂದರೆ ಯಾವುದೆಂದು ಸರಳವಾದ ಪ್ರಯೋಗದ ಮುಖೇನ ತೋರಿದ  ಇಬ್ಬನಿಯ ಹನಿ ಗೆಳೆಯರಿಗೆ ಕೈಮುಗಿದೆ. ಉದ್ಯಾನವನದಲ್ಲಿಯೇ ಸುಳಿದಾಡಿದೆ ಮಾರುತನ ಹೆಗಲ ಮೇಲೆ ಕೈಹಾಕಿ. ರಾತ್ರಿಯೆಲ್ಲಾ ಹರಿದಾಡಿ ಆಯಾಸಗೊಂಡು ಮಂದಗಾಮಿನಿಯಾಗಿದ್ದ ಒಡಲಿಲ್ಲದ ನಿರಾಕಾರನ ಕುಶಲೋಪರಿಯನ್ನು ವಿಚಾರಿಸಿದೆ.
"ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ"
ಎಂಬ ಜೇಡರ ದಾಸಿಮಯ್ಯನ ವಚನದ ಸಾಲುಗಳಲ್ಲಿರುವ ಒಡಲುಗೊಳ್ಳುವ ವ್ಯಕ್ತಿತ್ವ ವಾಯುದೇವನದಲ್ಲ ಎಂದ ಮೇಲೆ ಸತ್ಯ ಅಸತ್ಯಗಳ ದ್ವಂದ್ವಗಳ ಗೊಡವೆಯಿಲ್ಲದೇ ಆತ ಹೊತ್ತು ತಂದ ಎಲ್ಲ ಸುದ್ದಿ ಸಮಾಚಾರಗಳನ್ನೂ ಎದೆಯೊಳಗಿಳಿಸಿಕೊಂಡೆ. ಮಾತನಾಡಿಸುತ್ತಲೇ "ನೀನೊಮ್ಮೆ ಒಡಲುಗೊಂಡು ನೋಡಾ" ಎಂದು  ವಚನಕಾರರು ಕಂಡ ಕನಸನ್ನು ನಾಲಿಗೆಗೆ ತಂದು ಪುನರುಚ್ಚರಿಸಿದೆ. ಮಣಿಯಲಿಲ್ಲ ಆಸಾಮಿ. ಹುಸಿ ಹಾಗೂ ಹಸಿವುಗಳೇ ಜಗತ್ತನ್ನಾಳುವವರ ರಾಜತಂತ್ರಗಳಲ್ಲವೇ. ಇದೆಲ್ಲವೂ ಮಾರುತನಿಗೆ ಗೊತ್ತಿದೆ. ಒಡಲುಗೊಂಡರೆ ಯುಗಯುಗಗಳಿಂದ  ಕಾಪಾಡಿಕೊಂಡು ಬಂದ ಪಾವಿತ್ರ್ಯ ಕ್ಷಣಾರ್ಧದಲ್ಲಿಯೇ ಮಣ್ಣುಸೇರುವುದೆಂದು. ಪ್ರಹ್ಲಾದನ ತಂದೆ ಹಿರಣ್ಯಕಶ್ಯಪನಲ್ಲಿ ಮಡುಗೊಂಡ ಅಧಿಕಾರದ ಮದ ತನ್ನನ್ನೂ ಸುಮ್ಮನೇ ಬಿಟ್ಟೀತೇ? ರಾಮಾಯಣದ ಮರ್ಯಾದಾ ಪುರುಷೋತ್ತಮನನ್ನು, ಮಹಾಭಾರತದ‌ ಲೀಲಾ ಪುರುಷೋತ್ತಮನನ್ನು ಒಡಲು ಸತಾಯಿಸಿದ್ದನ್ನು ನೆನೆಸಿಕೊಂಡ ಮಾರುತ ಒಂದಾದ ನಂತರ ಒಂದರಂತೆ ದೃಷ್ಟಾಂತಗಳನ್ನು ಬೋಧಿಸಿದ. ತನ್ನ ಜೀವಮಾನದಲ್ಲಿ ಎಂತಿಂಥವರನ್ನು ಕಂಡಿಲ್ಲ ಹೇಳಿ ಆತ. ಭುವನದ ಒಂದು ತುದಿಯಿಂದ ಮತ್ತೊಂದು ಅಂಚಿನವರೆಗೂ ಸಾಮ್ರಾಜ್ಯ ಕಟ್ಟಿ ಮೆರೆದವರು, ಕಟ್ಟಿದ ಕೋಟೆ, ಕಟ್ಟಿಕೊಂಡ ಮಹಾರಾಣಿಯರನ್ನು ಬಿಟ್ಟು ಎಲ್ಲೋ ಮಣ್ಣಾದವರು, ಹೇಳಹೆಸರಿಲ್ಲದಂತೆ ರಣರಂಗದೊಳಗೆ ಸಮಾಧಿಯಾಗಿ ನರಿತೋಳಗಳಿಗೆ ಅಹಾರವಾದವರು, ಅಧಿಕಾರದ ಅಮಲಿನಲ್ಲಿ ಮನುಷ್ಯತ್ವವನ್ನು ಮರೆತು ಜಾರಿಹೋದವರು, ಹಣದ ಹೊಳೆಯಲ್ಲಿ ಅಂಧರಾಗಿ ಕೊಚ್ವಿಹೋದವರು, ಹಗರಣಗಳಲ್ಲಿ ಕಳೆದು ಕೊಳೆತು ಹೋದವರು, ಮೋಸ ವಂಚನೆಗಳನ್ನೇ ಹಾಸಿಕೊಂಡು ಹೊದ್ದು ಒಳಗೇ ಮಾಯವಾದವರು, ಹಸಿವಿನಿಂದ ಕಂಗೆಟ್ಟು ತಿಪ್ಪೆಯಲ್ಲಿ ಅಳಿದುಳಿದ ಎಂಜಲೆಲೆಗಳ ಮೇಲಿರುವ ಅನ್ನದಗುಳನ್ನುಂಡು ಹೊಟ್ಟೆ ಹೊರೆದುಕೊಳ್ಳುವ ಅಮಾಯಕರು, ಕೊರೊನಾ ಮಹಾಮಾರಿಯಿಂದಾಗಿ ಚಡಪಡಿಸಿ ಒಲ್ಲದ ಜೀವವನ್ನು ಕೈಯ್ಯಲ್ಲಿ
ಹಿಡಿದುಕೊಂಡು ತುತ್ತಿಗಾಗಿ ಅಂಡಲೆಯುತ್ತಿರುವ ಕೂಲಿಗಳು  ಹೀಗೆ ಒಂದೇ ಎರಡೇ ಮಾರುತ ದರ್ಶಿಸಿ ಉದಾಹರಿಸಿದ ಒಡಲುಗೊಂಡ  ಮಾನವ್ಯದ ಸ್ವರೂಪಗಳು. ಇಂತಹ ಅಸಂಖ್ಯಾತ, ಅಪರಿಮಿತ, ಅಗಣಿತ, ಅನಂತ ಒಡಲುಗಳನ್ನು ತನ್ನ ತೀಕ್ಷ್ಣ ದೃಷ್ಟಿ ಮಾತ್ರದಿಂದಲೇ ದಹಿಸಿ ಅರಗಿಸಿಕೊಂಡವನ ಮುಂದೆ "ನೀನೊಮ್ಮೆ ಒಡಲುಗೊಂಡು ನೋಡಾ.."ಎಂದವನ ನನ್ನ ಸ್ಥಿತಿ ಹೇಗಿರಬೇಡ ಎಂದೊಮ್ಮೆ ಕಲ್ಪಿಸಿಕೊಳ್ಳಿ. ಹೀಗೆನ್ನುತ್ತಲೇ ಆತ ಗಹಗಹಿಸಿ ನಕ್ಕುಬಿಟ್ಟ ವ್ಯಂಗ್ಯವಾಗಿ ಬಿರುಬೀಸಿ ಸೆಳೆದುಬಿಟ್ಟ ವ್ಯಗ್ರವಾಗಿ. ತಂಪಾದ‌ ಇರುಳಕೊನೆಯಲ್ಲಿಯೂ ಬಿಸಿಯಾಗಿ ತಾಪವೇರಿಸಿಕೊಂಡುಬಿಟ್ಟ ಎದೆಯೊಳಗೆ ಕೋಪದ ಕಿಚ್ಚನ್ನು ಹೊತ್ತಿಸಿಕೊಂಡವನಂತೆ. ಸಂದರ್ಭವನ್ನರಿತ ನಾನು "ಶಾಂತನಾಗು ಗೆಳೆಯಾ..ಶಾಂತನಾಗು..." ಎಂದು ಉಪಚರಿಸಿ "ನೀನು ಗಾಂಧಿಯ ಹೆಸರು ಹೇಳಲಿಲ್ಲ; ವಿವೇಕಾನಂದರ ನಾಮ ಉಲಿಯಲಿಲ್ಲ; ಅರವಿಂದರ ಮಾತೆತ್ತಲಿಲ್ಲ; ಪರಮಹಂಸರನ್ನೂ ಸ್ಮರಿಸಲಿಲ್ಲ ; ಶಾರದಾಂಬೆಯನ್ನು ನೆನೆಯಲಿಲ್ಲ..." ಎಂದು ಅಚ್ಚುಕಟ್ಟಾಗಿಯೇ ವಾಗ್ವಾದವನ್ನು ರೂಪಿಸಿ ಮಂಡಿಸಿದೆ. ಸತ್ಯವನ್ನೊಪ್ಪಿಕೊಂಡಂತೆ ಕಂಡ ಗಾಳಿಯ ಸದ್ದು ಕಡಿಮೆಯಾಯಿತೋ ಏನೋ ಕೋಪವಂತೂ ತಣ್ಣಗಾಯಿತು. ಮತ್ತೆ ಆತ ಎರೆಯುವ ತಂಪಿನ ಮಜ್ಜನಕ್ಕಾಗಿ ಕಾದು ಕುಳಿತೆ. ಅಲೆ ಅಲೆಯಾಗಿ ಮಂದಗಮನೆಯಾಗಿ ಅಪ್ಪಳಿಸಿದ ಅಂತರಂಗದ ಪರದೆಗಳಿಗೆ. ತೂಗುವ  ತೊಟ್ಟಿಲಿನಂತಹ ಹೊಯ್ದಾಟದ ಪರಮಸುಖವನ್ನುಂಡ ಅಂತರಂಗದ ರಂಗು ರಂಗಿನ ಭಾವಪರದೆಗಳು ಒಳಗಿಳಿದ ವಾಯುವಿನ ಆರ್ದ್ರತೆಯಿಂದ ಸಂತೃಪ್ತಿಯನ್ನನುಭವಿಸಿದವು. ರಂಗದೊಳಗೆ ಮಗುವಾಗಿ ಅಸಂಗತ ನಾಟ್ಯವಾಡಿದೆ. ಮೊಲವಾಗಿ ಮುಂಗಾಲನ್ನೆತ್ತಿ ನೆಕ್ಕಿ ಕುಪ್ಪಳಿಸಿದೆ.‌
ಆಮೆಯಾಗಿ ತಾಳ್ಮೆಯಿಂದ ಕತ್ತು ಹೊರಚಾಚಿ ಸಂಭ್ರಮದ ನಿರಾಳ ಹೆಜ್ಜೆಗಳನ್ನಿಟ್ಟು ತಣಿದೆ. ಭಾವಪೂರ್ಣವಾಯಿತು ಅಂತರಂಗ ಆಕಸ್ಮಿಕವಾಗಿ ಒದಗಿಬಂದ ಶುಭೋದಯದ ರಸಘಳಿಗೆಯಲ್ಲಿ.  ಬಸವಣ್ಣನವರು ಹೇಳುವ ಅಂತರಂಗ ಶುದ್ದಿಯೆಂದರೆ ಇದೇ ಅಲ್ಲವೇ ಎಂದೆನಿಸಿತು ನನಗೆ. ಅರಿವಿಲ್ಲದಂತೆಯೇ ಅದುವರೆಗೂ ಆ ರಂಗದಲ್ಲಾಡಿದ ಬದುಕಿನ ವಿಕಟತೆಗಳು ಭಾಷ್ಪಗಳ ಮೂಲಕ ಹೊರಬಂದವು ಬಹಿರಂಗದ ಇಬ್ಬನಿಯ ಹನಿಗಳನ್ನು ಆಲಂಗಿಸಿ ತಮ್ಮ ಪಾಪಗಳನ್ನು ಕಳೆದುಕೊಳ್ಳಲು. ಇದೇ ಇರಬೇಕು ಅರಿಸ್ಟಾಟಲ್ ನ  ಕೆಥಾರ್ಸಿಸ್( ಭಾವಶೋಧನೆ) ಎಂದುಕೊಂಡನುಭವಿಸಿದೆ. ಗ್ರೀಕ್ ತತ್ವಜ್ಞಾನಿಯ ಸಿದ್ಧಾಂತವೊಂದನ್ನು ಹೀಗೆ ಅಳವಡಿಸಿಕೊಂಡು ಅನುಭವಿಸಿದ ಅನುಯಾಯಿಯಾದೆ. "ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಂ" ಎಂದ ಪಂಪನಿಗೂ ಬನವಾಸಿ ದೇಶದಲ್ಲಿ ಇದೇ ಅನುಭವವಾಗಿರಬೇಕಲ್ಲವೇ ? ಎಂದು ಬೀಗಿದೆ. ಇಷ್ಟೆಲ್ಲಾ ಸಂಕಥನ ಕಟ್ಟಿ ನಿಮ್ಮ ಮುಂದೆ ಹೀಗೆ ಬಯಲಾಗುತ್ತಿರುವುದಕ್ಕೂ ಒಂದು ಗಹನವಾದ ಕಾರಣವಿದೆ. ಅದು ವ್ಯಷ್ಟಿ ಪ್ರಜ್ಞೆಯ ಪ್ರತಿಫಲ. ನಾನು ಒಡಲುಗೊಂಡ ದಿನವಾದ ಜೂನ್  ೨೫,  ಮತ್ತೊಂದು ಅರ್ಥದಲ್ಲಿ ನನಗೆ ಜಗತ್ತು ಒಡಲುಗೊಂಡ ದಿನವೂ ಹೌದು. ಮೊದಲನೇಯದು ವ್ಯಷ್ಟಿ ಪ್ರಜ್ಞೆ. ಎರಡನೇಯದು ಸಮಷ್ಟಿ ಪ್ರಜ್ಞೆ. ವಿಶಾಲಾರ್ಥದಲ್ಲಿ ನನಗೆ ಇವೆರಡೂ ಹುಟ್ಟಿಕೊಂಡ ದಿನವೂ ಹೌದು. ನಾನು ಹುಟ್ಟಿದ ದಿನಕ್ಕೂ, ಅಂದೇ  ಸಂಭವಿಸಿದ ಭಾವಶೋಧನೆಯ ಈ ಲೀಲಾವಿಲಾಸಕ್ಕೂ ಕಾಕತಾಳೀಯ ಸಂಬಂಧವಷ್ಟೇ ಇರಲಾರದು ಎಂದೇ ನನ್ನ ನಂಬಿಕೆ. ಹೆಂಡತಿ ಎದ್ದು ಬಂದು  ಹಾರೈಸಿದಳು. ಹುಟ್ಟುಹಬ್ಬವೆಂದರೆ ಏನೆಂದು ಅರಿಯದ ಮುಗ್ಧ ಜನಪದ ಸಮುದಾಯದ ಸಂಪ್ರದಾಯದಲ್ಲಿಯೇ ಬೆಳೆದುಬಂದ ನಮಗೆ ಇದೊಂದು ಮುಜುಗರದ ದಿನ. ತಿರುಳಿಗಿಂತ ರಂಗುರಂಗಿನ ಮುಲಾಮಿನ ಬಟ್ಟೆಯನ್ನುಟ್ಟು ನವವಧುವಿನಂತೆ ಕಂಗೊಳಿಸುವ  ವೃತ್ತಾಕಾರದ ಕೇಕು, ಅದರ ಮೇಲೆ ಬಣ್ಣದ ಮುಲಾಮಿನಿಂದ ಬರೆದ ಶುಭಾಶಯದ ಅಲಂಕಾರಿಕ ಕೆತ್ತನೆ, ಮೇಲೊಂದು ಹೊತ್ತಿಸಿದಾಗ ಸುರ್ ಎಂದು ನಭದತ್ತ ಮುಖಮಾಡಿ ಚಿತ್ತಾರಗೊಳ್ಳುವ ಮಾಂತ್ರಿಕ ಮೇಣದಬತ್ತಿ, ಪ್ಲಾಸ್ಟಿಕ್ ಕತ್ತಿ, ಮನೆಯಲ್ಲಿರುವವರ ಬಿಟ್ಟ ಕಣ್ಣು ಬಿಟ್ಟಂತೆ ಸದಾ ಸಿದ್ಧವಾಗಿರುವ, ಜಂಗಮವಾಣಿಯ ತೆರೆದ ಕಣ್ಣುಗಳ  ಕ್ಯಾಮರಾಗಳು, ಕೆಂಪು ಜುಟ್ಟಿನ ಒಂದಷ್ಟು ಸಾಂತಾಕ್ಲಾಸ್ ನ ಟೋಪಿಗಳಿದ್ದರೆ ಮುಗಿಯಿತು ಈ ಹೊತ್ತಿನ ಹುಟ್ಟಿದ ಹಬ್ಬದ ಆಚರಣೆಯ ಸಂಭ್ರಮ ಮುಗಿಲುಮುಟ್ಟಿಬಿಡಲು. ಇದಾವುದರ ಸೆಳೆತವೇ ಇಲ್ಲದವರಂತೆ ಬದುಕಿದ ಕುಟುಂಬದವರ ಕುಡಿಯಾಗಿ ನನಗಿದರ ಪರಿಚಯ ಬಹಳ ಕಡಿಮೆ. ಪುರಾಣವೆಂದು ಹೀಗಳೆಯದಿರಿ.
ಬಯಲು ಸೀಮೆಯ ನೆಲಮೂಲ ಸಂಸ್ಕೃತಿಯಲ್ಲಿ ಒಡಲುಗೊಂಡವರೆಲ್ಲರಿಗೂ ಸಾಮಾನ್ಯವಾಗಿ ಇದೇ ಇತಿಹಾಸದ ಹಿನ್ನೆಲೆಯಿದೆ. ಸಾಕಿಯು ಸ್ನಾನ ಮಾಡೆಂದು ಗದರಿಸಿದ ಹೊತ್ತಿಗೆ ಪ್ರಕೃತಿಯೂ ಮಳೆರಾಜನ ಪ್ರೇಮದ ಹೊಳೆಯಲ್ಲಿ ಮಿಂದೆದ್ದಿತ್ತು. ಪ್ರಾತಃಕಾಲ ನನ್ನೊಳಗೆ ಸಂಭವಿಸಿದ ಅಂತರಂಗದ ಸ್ನಾನವೂ ನನ್ನನ್ನು ನವನವೋನ್ಮೇಶನನ್ನಾಗಿ ಪರಿವರ್ತಿಸಿಬಿಟ್ಟಿತ್ತು. ಮೊಬೈಲಿನಲ್ಲಿ‌ ಘಂಟಾನಾದಗೈಯ್ಯುತ್ತಾ ಧಾವಿಸುತ್ತಿದ್ದ ಶುಭಾಶಯಗಳ ಹೊಳೆಯಲ್ಲಿ ಅಭ್ಯಂಜನಗೈದು ವಿನೀತನಾದೆ.‌ ಇದು ಕೇವಲ ವ್ಯಷ್ಟಿಯ ಸಂಕಥನವಲ್ಲ. ಕನಿಷ್ಠ ತಾವು ಒಡಲುಗೊಂಡ ಘಳಿಗೆಯೂ ಗೊತ್ತಿರದವರೆಲ್ಲರಿಗೂ ಸಲ್ಲಲೇಬೇಕಾದ ನುಡಿನಮನ. ಜನುಮದಿನದ ಸುಳುಹೂ ಇಲ್ಲದ ನನ್ನ ಸಾಕಿಯರಿಬ್ಬರೂ ಈ ವಿಸ್ಮೃತ ಸಮಯದಾಯದ ಪ್ರತಿನಿಧಿಗಳೇ. ಪಕ್ಕದ ಮನೆಯ ಅಜ್ಜಿಯೊಬ್ಬಳು ತೀರಿ ಹೋದಾಗ ಆಕೆಯ ವಯಸ್ಸಿನ‌ ಲೆಕ್ಕಾಚಾರವೇ ಅದಾರಿಗೂ ನಿಲುಕಲಿಲ್ಲ. ಡಿಜಿಟಲ್ ಯುಗದಲ್ಲಿಯೂ ತಾರೀಖು, ದಿನ, ಮುಹೂರ್ತ, ಘಳಿಗೆಗಳನ್ನು ಅವುಗಳೊಂದಿಗೆ ಜೀವಿಸುತ್ತಲೇ ದಾಖಲಿಸಲು ಹೆಣಗಾಡಿ, ಮರೆತು ಸಹವಾಸವೇ ಬೇಡವೆಂದರೂ, ಮತ್ತೆ  ಕ್ಯಾಲೆಂಡರಿನ ಮುಂದೆ ಧ್ಯಾನ ಮಾಡುವ ನಾವೆಲ್ಲಿ ? ಕ್ಯಾಲೆಂಡರುಗಳೇ ಇಲ್ಲದ ಹುಣ್ಣಿಮೆ ಬೆಳದಿಂಗಳು, ಅಮವಾಸ್ಯೆಗಳ ಕರಿನೆರಳುಗಳನ್ನೇ ಕಾಲವಳೆಯಲು ಆಧಾರವಾಗಿಟ್ಟುಕೊಂಡ  ಯುಗದ ಕತ್ತಲೆಯೊಳಗೆ, ಹೊತ್ತು ಗೊತ್ತಿಲ್ಲದೇ ಹುಟ್ಟಿ, ಬೆಳಕಿಲ್ಲದ ದಾರಿಯಲ್ಲಿಯೇ ಕನಸುಗಳನ್ನು ಕಟ್ಟಿ, ಮುಗಿಲೆತ್ತರದ ಭರವಸೆಗಳನ್ನು ಬೆಳೆಸಿ, ತಮ್ಮದೆಲ್ಲವನ್ನೂ ಬದುಕಿಗೆ ಸಮರ್ಪಿಸಿ, ಗೂಡಿನೊಳಗಿದ್ದು ವಂಶದ ಮರಿಗಳನ್ನು ಸಿಂಹಾಸನದ ಮೇಲೆ ಹೊತ್ತು ಮೆರೆಸುವ ಜನಪದರ ಕಾಲಭೈರವನೆಲ್ಲಿ ?. ಈ ಹೊತ್ತಿನ ಹುಟ್ಟುಹಬ್ಬಗಳು ನನ್ನಲ್ಲಿ  ಈ ಜಿಜ್ಞಾಸೆಯನ್ನು ಹುಟ್ಟಿಸಿವೆ.‌ ಸಾಮಾಜಿಕ ಜಾಲತಾಣಗಳಾದಿಯಾಗಿ ಗೆಳೆಯರ ಬಳಗ, ಕೇಕು, ಹಾರ ತುರಾಯಿಗಳೊಂದಿಗೆ  ಎಲ್ಲೆಲ್ಲೂ ಸಂಭ್ರಮಿಸುವ ಹುಟ್ಟಿದ ಹಬ್ಬ ನಮಗೆ ವರುಷಕ್ಕೊಮ್ಮೆ ಸಂಭವಿಸಿದರೆ, ತಮ್ಮದೇ ಜನುಮದಿನದ ಸುಳಿವನ್ನಿಟ್ಟುಕೊಳ್ಳದ ಸಾಕಿಯರಿಗೆ ನಿತ್ಯವೂ ಹುಟ್ಟುಹಬ್ಬವೇ. ಪ್ರತಿನಿತ್ಯ ತಮ್ಮವರೆಲ್ಲರ ಬದುಕನ್ನು ಹಸನುಗೊಳಿಸಿ, ಎಲ್ಲರೆದೆಯೊಳಗೂ ಚೈತನ್ಯವನ್ನು ತುಂಬಿ, ಬೇಂದ್ರೆಯವರು ಹೇಳುವ ಹಾಗೆ ಅಂತರಂಗದಲ್ಲಿ ತೊಂತನನ ಹಾಡಿದರೆ ಮುಗಿಯಿತು ಅವರು ಮತ್ತೆ ಮರುಹುಟ್ಟು ಪಡೆದಂತೆಯೇ ಅಲ್ಲವೇ ? ನಿತ್ಯದ ಕಾಯಕದಲ್ಲಿ ಒಂದರೆಘಳಿಗೆಯ ಲಯ ತಪ್ಪಿದರೂ ಸಾಕು; ಅವರೆದುರಿಸುವ ಸಂಕಟಗಳನ್ನೊಮ್ಮೆ ಕಣ್ಣೆದುರಿಗೆ ತಂದುಕೊಳ್ಳಿ. ಸಾಕಿಯನುಭವಿಸುವ ಯಾತನೆಗಳನ್ನೊಮ್ಮೆ ಸ್ಮರಿಸಿಕೊಳ್ಳಿ. ತಿಳಿದುಬಿಡುತ್ತದೆ ಅವರು ಅಚರಿಸಿಕೊಳ್ಳಲಾಗದ ಜನುಮದಿನದ ರಹಸ್ಯ. ಇವರಲ್ಲವೇ ಆ ದೇವನೂ ಸ್ವೀಕರಿಸಲಾಗದ ಸವಾಲನ್ನು ತಮ್ಮದಾಗಿಸಿಕೊಂಡು ಬದುಕಲು ನಿಜವಾಗಿಯೂ ಒಡಲುಗೊಂಡು ಬಂದವರು. ನಾವೋ ಒಡಲುಗೊಂಡು ವಿಷಯಸುಖಲೋಲುಪತೆಯ ಅರಗಿನರಮನೆಯಲ್ಲಿ ಕ್ಷಣ ಕ್ಷಣಕ್ಕೂ ಪರಿತಪಿಸುತ್ತಿರುವವರು. ಈ ಸಾಕಿಯರೋ, ಒಡಲುಗೊಂಡು ಬದುಕಿನ ಪ್ರಶ್ನೆಗಳಿಗೆ ಮತ್ತೆ ಮತ್ತೆ ಉತ್ತರವಾಗಿ ಮರಳಿ ಪ್ರಶ್ನೆಯಾಗುತ್ತಿರುವವರು.
ಗೋಧೂಳಿಯ ಸಮಯವದು. ಮನೆ ಬಿಟ್ಟು ಕಾಡಿನ ಕಡೆಗೆ ಕೈಹಿಡಿದು ಕರೆದೊಯ್ಯುವ ಕಾಲಪುರುಷ, ಎದುರಿಗಿದ್ದ ಸುಣ್ಣದ ಗೋಡೆಯ ಮೇಲೆ ತೂಗುಹಾಕಿರುವ ಗಡಿಯಾರದಲ್ಲಿರುವ ಕ್ಷಣದ ಮುಳ್ಳಿನ‌ ಕೊನೆಯಿಂದ ಸನ್ನೆ ಮಾಡಿದ. ಏನೋ ತಿವಿದಂತಾಗಿ ಎಚ್ಚರಗೊಂಡೆ. ಚಹಾಯಣವನ್ನು ಎದೆಯೊಳಗಿಳಿಸಿಕೊಂಡು ಕರುಳ ಕುಡಿಗಳ ಕಣ್ತಪ್ಪಿಸಿ ಹೊರಟ ನನ್ನ ಹಾದಿಯಲ್ಲಿ ಎದುರಾದ ಹುಟ್ಟಿದ ಹಬ್ಬದ ಸಂಭ್ರಮವನ್ನೊಮ್ಮೆ ಕೇಳಿಬಿಡಿ - ಶುಭೋದಯದ ಅಮೃತಘಳಿಗೆಯಲ್ಲಿ ತಂದೆ ವಾಯುದೇವ ನನಗೆ ಗೆಳೆಯನಾಗಿ ದಕ್ಕಿದರೆ, ಸಂಜೆ ಅವನ ಪುತ್ರ ಆಂಜನೇಯ ಆತ್ಮಸಖನಾಗಿ ಹತ್ತಿರವಾಗಿಬಿಡುತ್ತಾನೆ. ದರ್ಶನ ಪಡೆದು ಹೊರಟ ಆಂಜನೇಯನ ದೇವಾಲಯದ ಹಿಂಭಾಗದ ಕಾಂಕ್ರೀಟ್ ರಸ್ತೆ ನನಗೆ ಅಕ್ಷರಶಃ ವೇದಿಕೆಯಾಗಿಯೇ ಕಂಡಿತು. ಆ ರಸ್ತೆಯ ಬದಿಯಲ್ಲಿ ಸಾಮಾಜಿಕ‌ ಅಂತರವನ್ನು ಕಾಪಾಡಿಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತುಕೊಂಡಿದ್ದ ಆಲ, ಬೇವುಗಳೆಂಬ ಕಿಶೋರಿಯರು   ಒಡಲನ್ನಲ್ಲಾಡಿಸಿಕೊಂಡು ಬಳುಕಿನ ಸ್ವಾಗತ ಕೋರಿದವು.
ಊರನ್ನು ದಾಟುವ ಧಾವಂತದಿಂದ ಹೊರಟವನನ್ನು ತಡೆದು, ಹುಲ್ಲಿನ ಗುಡಿಸಲಿನಲ್ಲಿದ್ದ ಜಾತಿ, ಮತ, ಪಂಥಗಳಿಂದಾಚೆ ಬದುಕುತ್ತಿದ್ದ ಸಾಕಿ ಹಾಗೂ ಸೊಸೆ ಸೇರಿ ಕುಶಲೋಪರಿ ವಿಚಾರಿಸಿದರು. ಸ್ವಲ್ಪ‌ ಮುಂದೆ ಹೋದರೆ, ಹೊಲದಲ್ಲಿ ದುಡಿದು ಬಂದು ಎತ್ತುಗಳ ಆಯಾಸವನ್ನು ತನ್ನ ಆಪ್ತಮಾತುಗಳಿಂದ ಪರಿಹರಿಸುತ್ತಿದ್ದ ರಂಗಪ್ಪಗೌಡರು ಬಾಗಿ ನಮನಗಳನ್ನು ಸಲ್ಲಿಸಿದರು.  ಆ ಹಾದಿಯ ಮಧ್ಯದಲ್ಲಿ ತನ್ನ ಬೆಳಕಿಲ್ಲದ ಗುಡಿಸಲ ಮುಂದೆ, ತಲೆಯ ಮೇಲೆ ಬಿಳಿ ರುಮಾಲಿನ ಮುಕುಟವನ್ನಿಟ್ಟುಕೊಂಡು, ಬೀಡಿಯನ್ನು ಸೇದುತ್ತಾ ಕುಳಿತ  ಕುರಿಕಾಯುವ ಯಮನಪ್ಪ ಕುಳಿತಲ್ಲಿಂದಲೇ ಕೈಮುಗಿದನು. ಪಯಣ ಮುಂದುವರೆದು ಈ ಹಾದಿಯ ಕೊನೆಗೆ ಬಂದಾಗ ನನ್ನ ಸಾಕಿಯಂತೆಯೇ ನಡೆಯಲಾಗದ ಕೀಲುಗಳನ್ನು ಮೊಣಕಾಲಿನಲ್ಲಿಟ್ಟುಕೊಂಡು, ಅಸಂಖ್ಯಾತ ನೋವುಗಳನ್ನುಂಡ‌‌ ಹೆಗ್ಗುರುತಾದ ಹಣೆಯ ಗೆರೆಗಳ ಮಧ್ಯೆ ಎದ್ದು ಕಾಣುವ ವಿಭೂತಿಯನ್ನು ಧರಿಸಿ ಶಿವನಾಮ ಜಪಿಸುತ್ತಾ, ತನ್ನ ಗುಡಿಸಲಿನರಮನೆಯ ಮುಂದೆ ಕೌದಿ ಹಾಸಿಕೊಂಡು ಕಾಲುಚಾಚಿ  ಕುಳಿತಿದ್ದ ಹನಮವ್ವಜ್ಜಿ ತನ್ನೆರಡೂ ಕೈಗಳನ್ನೆತ್ತಿ ನಮಸ್ಕಾರಗಳನ್ನು ಸಲ್ಲಿಸಿದಳು.‌ ಭೇದವಿಲ್ಲದೇ ಮಾತಿಗಿಳಿಯುವ ಈ ಜನಪದರ ಅನರ್ಘ್ಯ ವಾತ್ಸಲ್ಯದ ಮಾಯೆಗೆ ಶರಣು ಶರಣೆಂದೆ.ಇದೆಂತಹ ಅಪೂರ್ವ ಸೌಭಾಗ್ಯವೆಂದೆನಿಸುತ್ತದೆ ನನಗೆ. ಎಲ್ಲರಿಗೂ ತಲೆದೂಗಿ ಆಶೀರ್ವಾದ ಬೇಡಿದೆ. ಲೌಕಿಕ ಪಯಣದಲ್ಲಿ ಎದುರಾದ ಮಾತೃಹೃದಯವುಳ್ಳ ಇವರೆಲ್ಲರ ಹುಟ್ಟುಗಳಿಗೂ ಕ್ಯಾಲೆಂಡರಿನಲ್ಲಿ ಖಚಿತವಾದ ದಿನವಿಲ್ಲ. ಇವರಿಗೆಂದು ಕೇಕು ತಂದಿಟ್ಟು ಸಂಭ್ರಮಿಸುವ ಜೀವಗಳನ್ನು ನಾನಿನ್ನೂ ಕಂಡಿಲ್ಲ. ವರ್ಷವಿಡೀ ಮಣ್ಣಿನಲ್ಲಿ ಮಣ್ಣಾಗಿ ಕೃಷಿಗೈದಾಗ ತುಂಬಿ ಬರುವ ಫಸಲು ಕೈಸೇರಿದ ದಿನವೇ ಇವರೆಲ್ಲರ ಹುಟ್ಟುಹಬ್ಬ. ಒಡಲುಗೊಂಡು ಬೀದಿಯ ಬದಿಯಲ್ಲಿದ್ದರೂ ಕಡಲಿನಂತಹ ಬದುಕನ್ನು ಈಜಿದವರಿವರು ಎಂದುಕೊಂಡು ಮನದಲ್ಲಿಯೇ ನಮನಗಳನ್ನು ಸಲ್ಲಿಸಿದೆ. ವಿಹಾರದ ಮಧ್ಯದಲ್ಲಿ ಮಳೆಗಾಲದ ಹಾರುವ ಕೀಟಗಳು ನನ್ನ ಜನುಮದಿನದ ಸವಿನೆನಪಿನ ಕಾಣಿಕೆಯಾಗಿ ತಾವು ತಂದ ಕಿರೀಟವನ್ನಿಡಲು ಧಾವಿಸಿದಂತೆ ತಲೆಗೆ ಮುತ್ತಿಕೊಂಡವು. "ಅಯ್ಯಾ ಗೆಳೆಯ ಕೀಟಗಳೆ ಬೇಡಪ್ಪಾ ಬೇಡ.. ಇದೆಲ್ಲ ಮುಜುಗರದ ಸಂಗತಿ ನನಗೆ..." ಎಂದು ಪರಿಪರಿಯಾಗಿ ಹೇಳಿದರೂ ಬಿಡದೇ ನನ್ನನ್ನು ಕಿಲೋಮೀಟರುಗಟ್ಟಲೇ ಬೆನ್ನು ಬಿಡದೇ ಹಾರುತ್ತಲೇ ಹಿಂಬಾಲಿಸಿದವು. ಕತ್ತಲಾಯಿತೆಂದು ಊರಿಗಭಿಮುಖವಾಗಿ ಹೊರಳಿದೆ. ಕೀಟಗಳೂ ದಿಕ್ಕು ಬದಲಿಸಿದವು. ದಾರಿಯಲ್ಲಿ  ಸಿಕ್ಕ ಕೇರಿಯ ರಾಮಪ್ಪನೊಂದಿಗೆ ಕೊರೊನಾ ಕಾಲಘಟ್ಟದ ಮಕ್ಕಳ ಶಿಕ್ಷಣದ ಬಗ್ಗೆ ಮಥಿಸುತ್ತಾ ದೌಡಾಯಿಸಿದೆ.  ಕೆಲಹೊತ್ತಿನ ನಂತರ ಊರು ಸಮೀಪಿಸಿತು. ಕೀಟಗಳು ಬೀಳ್ಕೊಟ್ಟವು. ವಿದಾಯ ಹೇಳಿ ಮನೆಯೆಡೆಗೆ ತೆರಳಿದೆ. ಸುತ್ತಲ ಸಮಾಜ, ಮಳೆಗಾಲದಲ್ಲಿ ಹಸಿರುಟ್ಟು ನಿಂತ ಪ್ರಕೃತಿ, ಬೆಂಬತ್ತಿ ಗೌರವಿಸುವ ಕೀಟಜಗತ್ತು, ಸಾಮಾಜಿಕ ಜಾಲತಾಣಗಳಲ್ಲಿನ ಪ್ರೀತಿಪಾತ್ರರ ಗುಣಗಾನ ಸಾಕಲ್ಲವೇ ಹಬ್ಬ ಹುರಿಗೊಂಡು ತಾರಕಕ್ಕೇರಲು. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಈ ಹಾದಿಯಲ್ಲಿ ನಾನು ಒಡಲುಗೊಂಡ ದಿನದ ಹಬ್ಬ ಸಹಜವಾಗಿಯೇ ಸಾಕಾರಗೊಂಡಿತ್ತು. ಸಾರ್ಥಕತೆಯ ಭಾವವನ್ನು ಹೃದಯದೊಳಿರಿಸಿ ಧನ್ಯೋಸ್ಮಿ ಎಂದುಕೊಂಡೆ. ರಾತ್ರಿ ಗೆಳೆಯರೊಬ್ಬರು ಹಂಚಿಕೊಂಡ ನನ್ನದೇ ಕವಿತೆ, ಈ ದುರಿತ ಕಾಲದಲ್ಲಿ ಹೊಸ ಆಶಯವನ್ನು ಧ್ವನಿಸುವಂತಿದೆಯೆಂದೆನಿಸಿತು-
ರಕ್ತಕಣಗಳೂ ವಿಭಜನೆಯಾಗಿವೆ
ಮತ, ಧರ್ಮ, ಜಾತಿ , ವರ್ಗಗಳ ತೊಳಲಾಟದೊಳಗೆ ನಲುಗಿ
ಯಾವ ಹೊತ್ತಿಗೆ ಅದಾವ ಸಿದ್ಧಾಂತ
ಬಂದಪ್ಪಳಿಸಿ‌ ಒಳಗಿಳಿಯುವುದೋ
ಆತ್ಮದೊಳಗೆ ಮರುಗಿ.....

Sunday 14 June 2020

ಸಂವೇದನೆಗಳೊಂದಿಗೆ ಸಂವಾದ...

ಸಂವೇದನೆಗಳೊಂದಿಗೆ ಸಂವಾದ...
ಬತ್ತಿಹೋಗಿರುವ ಸಂವೇದನೆಗಳೆ
ಮತ್ತೆ ಚಿಗುರುವಿರೆಂದು ?
ಹೆದ್ದಾರಿಯ ಬದಿಯಲ್ಲಿ ಉರುಳಿ
ಬಿದ್ದ ವೇಗದ ಲಾರಿ
ಹೊರಟಿತ್ತು ಬಯಕೆಗಳನ್ನೇ
ತುಂಬಿ ಚೆಲ್ಲುವಂತೆ ಹೇರಿ

ಮಾನವಧರ್ಮವೆಲ್ಲಿದೆ ?
ಬೆನ್ನುಬಿದ್ದ ಕರ್ಮವೆಲ್ಲಿದೆ ?
ಬಿದ್ದಿದೆಯಲ್ಲ ಕಾಲು ಮುರಿದುಕೊಂಡು
ಅನಾಥವಾಗಿ ಲಾರಿಯ ಕೆಳಗೆ
ಮತ್ತೆಂದೂ ಮೇಲೇಳದಂತೆ ಹಾಸಿದ
ವ್ಯವಹಾರದ ನೆಲಕೆ ಒರಗಿ

ಕಣ್ಣು,ಬಾಹುಗಳನಗಲಿಸಿ ದೊರೆತಷ್ಟು
ಬಾಚಿಕೊಳ್ಳುವುದೊಂದೇ ತವಕ
ಸೋಪು, ಎಣ್ಣೆ, ಡೀಸೆಲ್,ಸಿಮೆಂಟು
ಶಾಂಪೂ ಬಗೆ ಬಗೆಯ ಬಯಕೆಗಳ ರೂಪಕ
ಆಸೆಗಳೊಂದಿಗಿನ ಯುದ್ಧದಲ್ಲಿ
ಎಲ್ಲವೂ ಸರಿ ಸಮಾನ!
ಮಾನವೀಯತೆಯೂ, ಕ್ರೌರ್ಯವೂ.

ಬಯಕೆಗಳಿಗೆ ಅಳಿವಿಲ್ಲ;
ಸಾವು ನೋವುಗಳಿಗೆ ಬೆಲೆಯಿಲ್ಲ
ಮಾರುಕಟ್ಟೆಯ ಚಕ್ರವ್ಯೂಹದೊಳಗೆ
ಅರುಣೋದಯವೂ ಲಾಭವೇ
ಮಾರಾಟಕ್ಕಿಟ್ಟರೆ ತಾಪ, ಬೆಳಕು
ಕೊರಗುತ್ತಿದೆ ಹೀಗೆ ನಲುಗಾಟವೇ
ತುಂಬಿದ ಮಾನವ ಬದುಕು
ಬಂಧನದ ಜಗವೆಲ್ಲಾ ಹಣದ
ಮಾಯೆಯೊಳಗಿನ ಹುಳುಕು

ಲಾರಿಯವನ ಆರ್ತನಾದವೂ ಕ್ಷೀಣ
ಬೆಂಬೆಡಗಿನ ಯುಗದ ಗಿಜಿಗಿಡುವ
ವಾಂಛೆಗಳನಾಳುವ ಬಜಾರಿನ ರಣಭೇರಿಯ ಮುಂದೆ
ಸತ್ತು ಹೋಗಿರುವ ನಿಮಗೆಲ್ಲಿದೆ ಮದ್ದು
ಜಗದ ಮಂದಿಗೆ ಜಾಹೀರಾತುಗಳೇ ಮುದ್ದು

ಆಳಿ ಬಿಡಿ ಭುವನವ
ನಿಮ್ಮ ಕಾಲವಿರುವತನಕ
ಬೆಕ್ಕಿನ ಕೊರಳಿಗೆ ಗೆಜ್ಜೆ ಕಟ್ಟುವ ತನಕ
ವಿಷದ ಚಕ್ರವ್ಯೂಹದೊಳಗೆ
ಮಾನವತೆಯ ಅಭಿಮನ್ಯು
ಒಳಹೊಕ್ಕಿರುವನು ಅರಿವಿದ್ದರೂ ಇಲ್ಲದವನಂತೆ
ಹೊರಬರುವುದೆಂತೋ ಕ್ಷಮಿಸಿಬಿಡಿ
ಒಮ್ಮೆ ಅಪ್ಪಿ ಅರ್ಜುನನಂತೆ.

Monday 25 May 2020

ಭೃಂಗದ ಬೆನ್ನೇರಿ...

ಭೃಂಗದ ಬೆನ್ನೇರಿ...
ಒಂದು ಶುಭೋದಯದಲ್ಲಿ ಮನೆಯಂಗಳದಲ್ಲಿ ಬೆಳೆದು ನಿಂತ ಬೇವು, ಮಾವು, ಬದಾಮಿ, ಕಣಗಿಲೆ, ಜಾಜಿ, ಮಲ್ಲಿಗೆ, ಹಲಸಿನ ಸಸಿಗಳೊಂದಿಗೆ ಕುಶಲೋಪರಿಗಿಳಿದು ಮಾತನಾಡುತ್ತಿದ್ದೆ. ಬೇಸಿಗೆಯಾದ್ದರಿಂದ ಹಿಂದಿನ ದಿನವೆಲ್ಲಾ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ತಲೆಯಾದಿಯಾಗಿ ಅಂಗಾಂಗಳನ್ನೆಲ್ಲಾ ಕಾಯಿಸಿಕೊಂಡು ಸುಸ್ತಾದಂತಿದ್ದ ಸಸ್ಯಗಳ ಕೈಹಿಡಿದು ಸವರಿ, ಸಂತೈಸುತ್ತಾ, ರಾತ್ರಿಯೆಲ್ಲಾ ತಂಗಾಳಿಯಲ್ಲಿ ನೆನೆದು ತಂಪಾದ ಬೆಳದಿಂಗಳ ಅನುಭವಗಳನ್ನು ಹೆಕ್ಕಿ ತೆಗೆದು ತರುಲತೆಗಳ‌ ಮನಸ್ಸನ್ನು‌ ಮುದಗೊಳಿಸಬೇಕೆನ್ನಿಸಿ, ಒಂದೊಂದರ ಹತ್ತಿರವೂ ನಿಂತು, ರಂಬೆ, ಕೊಂಬೆ, ಎಲೆ, ಚಿಗುರು, ಹೂಗಳ ಮೈದಡವಿ ನೇವರಿಸುತ್ತಾ, ತಣಿರಸದಂತಿದ್ದ ತಂಪು ನೀರನ್ನೆರೆದು ಸಲ್ಲಾಪಕ್ಕಿಳಿದೆ. ಸಾವರಿಸಿಕೊಂಡು ಬಾಗಿ ಅಪ್ಪಿಕೊಳ್ಳುತ್ತಿರುವಂತೆ, ಬೀಸುತ್ತಿರುವ ಮರುಳ ಸುಳಿಗಾಳಿಗೆ ತಮ್ಮ ಅಂಗಾಂಗಳನ್ನೆಲ್ಲಾ ಮುಂದೆ ಚಾಚಿ ಧನ್ಯವಾದಗಳನ್ನು ಹೇಳುತ್ತಿರುವಂತೆ ಭಾಸವಾಗಿ, ಧನ್ಯತೆಯಿಂದ ಕಣ್ತುಂಬಿಕೊಂಡೆ. ಇಬ್ಬನಿಯಿಲ್ಲದೇ ಶುಷ್ಕವಾದಂತಿದ್ದ ವಾತಾವರಣಕ್ಕೀಗ, ಕರುಳಕುಡಿಯಂತಿದ್ದ ಸಸ್ಯಗಳ ಈ ಪ್ರೀತಿಯ ರೀತಿ ಕಂಡಾಗ, ಗೊತ್ತಿಲ್ಲದೇ ನನ್ನೊಳಗೆ ಹುಟ್ಟಿದ ಆನಂದಭಾಷ್ಪಗಳು ಸೇರಿಕೊಂಡು ಸನ್ನಿವೇಶವನ್ನು ಆರ್ದ್ರವಾಗಿಸಿತು. ಕ್ಷಣ ಹೊತ್ತು ಭಾವುಕನಾದೆ.  ಆ ಬಗೆ ಬಗೆಯ ಫಲ-ಪುಷ್ಪ ಸಸಿಗಳ ಬೇರಿಗೆರೆದ ಜಲಾಮೃತ ನಿಧಾನವಾಗಿ ಇಂಗಿ ಹೋಗುವಂತೆ, ಕ್ರಮೇಣ ಕಣ್ಣಹನಿಗಳೂ ಎದೆಯೊಳಗಿಳಿದು ಹಾಗೇ ಬತ್ತಿಹೋದವು. ಮತ್ತೆ ಶುಭೋದಯದ ಅಂಗಣಕ್ಕಿಳಿದೆ. ನೇಸರನ ಕಿರಣಗಳ ರಂಗೋಲಿ, ಅಂಗಳದಲ್ಲಿನ ಸಸ್ಯಸಂಕುಲ, ಕುಸುಮಗಳ ಸುತ್ತವೇ ನೆರೆದು ಮಧುವನ್ನರಸಿ ಹೊರಟ ದುಂಬಿಗಳ ಬಳಗ, ರಂಗುರಂಗಿನ ಚಾಮರದಂತಿದ್ದ ಚಿಟ್ಟೆಯ ರೆಕ್ಕೆಗಳ ಬೀಸುವಿಕೆ, ಗಿಳಿ, ಕೋಗಿಲೆ, ಗುಬ್ಬಿಗಳ ಉದಯಗಾನ, ಹೀಗೆ ಎಲ್ಲವೂ, ಎಲ್ಲರನ್ನೂ ಆಮಂತ್ರಿಸಿ, ಕರೆದು ಮೇಳೈಸಿದಂತಿತ್ತು ಆ ಶುಭೋದಯದ ದಿಬ್ಬಣಕ್ಕೆ.  ಬಹುಶಃ ನಾವೆಲ್ಲರೂ ಆಚರಿಸುವ ಯೋಜಿತ ಹಬ್ಬ, ಉತ್ಸವಗಳಲ್ಲಿಯೂ ಈ ಮಟ್ಟದ ಪ್ರಕೃತಿ ಸಹಜ ಮೇಳೈಸುವಿಕೆ ಅಸಾಧ್ಯವೇನೋ ? ಅಂತೂ, ಪ್ರಕೃತಿಯ ಮೆರವಣಿಗೆಯ ಸಂಭ್ರಮ ಮನೆ ಮಾಡಿತು. ಆಕಸ್ಮಾತ್ ಆಗಿ ಅಂದು ಸರಿಯಾದ ಸಮಯಕ್ಕೆ ದಾಂಗುಡಿಯಿಟ್ಟ ಮಂಗಗಳಿಂದಾಗಿ, ಅದು ಮಂಗಣ್ಞನ ಮದುವೆಯ ದಿಬ್ಬಣವಾಗಿ ಪರಿವರ್ತನೆಯೂ ಆಗಿಹೋಯಿತು. ಮಂಗಗಳ ಚೆಲ್ಲಾಟದ ಮದುವೆಯೆಂದರೆ ಕೇಳಬೇಕೆ ? ಎಲೆ, ಹೂ, ಹಣ್ಣು, ಕಾಯಿ, ತಾಂಬೂಲಗಳನ್ನು ಸಂಗ್ರಹಿಸುವುದೇ ಬೇಡ. ಆಗಸದಲ್ಲಿ ನಿಂತು ಆಶೀರ್ವದಿಸುತ್ತಿರುವ ದೇವತೆಗಳ ಕೈಯ್ಯಿಂದ ಉದುರುತ್ತಿರುವಂತೆ, ಸಕಲ ಮಂಗಳ ಪರಿಕರಗಳೆಲ್ಲವೂ ಧರೆಗೆ ಇಳಿಯಹತ್ತಿದವು. ಕೆಲವೊಮ್ಮೆ ಏಕಕಾಲಕ್ಕೆ, ಮತ್ತೊಮ್ಮೆ ಒಂದಾದ ನಂತರವೊಂದರಂತೆ. ಆಂಜನೇಯನ ಕಾಟದಿಂದ ಬೇಸತ್ತು ಹೀಗೆ ಒಲ್ಲದ ಮನಸ್ಸಿನಿಂದ, ಕಿರುಕುಳದ ಮುನಿಸಿನಿಂದ,    ಒತ್ತಾಯಪೂರ್ವಕವಾಗಿ, ತಮ್ಮಲ್ಲಿರುವ ಪರ್ಣಫಲಪುಷ್ಪಗಳ  ಚೀಲ ಬರಿದಾಗುವವರೆಗೂ ಮಂತ್ರಾಕ್ಷತೆಯನ್ನು ಸಲ್ಲಿಸಿ ಸಂಭ್ರಮಪಟ್ಟಂತೆ ಶುಭಾಶಯ ಹೇಳಿ ಸುಮ್ಮನಾಗಿಬಿಟ್ಟವು ಗಿಡಮರ, ಕೀಟ, ಪಕ್ಷಿ ಸಂಕುಲಗಳು.

   ವಸಂತದ ಒಂದು ಶುಭೋದಯದ ವಿಶೇಷ ಹಬ್ಬವೊಂದು ಕಣ್ಣೆದುರೇ ಅಂತರಂಗದಲ್ಲಿ ಅಚ್ಚೊತ್ತಿದಂತೆ ನಡೆದುಹೋಯಿತು. ಇದನ್ನು ಮಂಗಣ್ಣನ ಮದುವೆಯೆಂದೋ, ನೇಸರನ ಮೆರವಣಿಗೆಯೆಂದೋ,  ಇಲ್ಲವೇ ಪ್ರತಿನಿತ್ಯ ನಡೆಯುವ ಪ್ರಕೃತಿಯ‌ ನಿತ್ಯೋತ್ಸವವೆಂದಾದರೂ ಕರೆಯಿರಿ. ಒಟ್ಟಂದದಲ್ಲಿ ಮನೆಯಂಗಳದಲ್ಲಂತೂ ಚೈತ್ರವು ಹಬ್ಬಿಕೊಂಡ ಹಬ್ಬವೊಂದು ಸದ್ದಿಲ್ಲದೇ ಹೀಗೆ ಜರುಗಿಹೋಯಿತು. ಪಾಲ್ಗೊಂಡವರಲ್ಲಿ ನಾನೊಬ್ಬನೇ ಮನುಷ್ಯಜಾತಿ ಎನ್ನುವುದೇ ಹೆಮ್ಮೆಯ ಸಂಗತಿ!. ಅಲೌಕಿಕ ಭಾವಸಂತೃಪ್ತಿಯನ್ನನುಭವಿಸಿದ ಅನುಭಾವಿಯಾಗಿ ಸಂಭ್ರಮಿಸಿದೆ.  ಹಬ್ಬವೆಲ್ಲಾ ಮುಗಿದು ಹೋಗಿ, ಕೆಲಹೊತ್ತಿನ ನಂತರ, ಧ್ಯಾನದಂತಹ ಮೌನ ಆವರಿಸಿತು  ಅಂಗಳದ ಉದ್ಯಾನವನದಲ್ಲಿ. ಜೊತೆ ಜೊತೆಗೆ ಎದೆಯಾಳದಲ್ಲಿಯೂ. ಧೋ ಎಂದು ಸುರಿದ ಮಳೆಯ ನಂತರವೂ ತೊಟ್ಟಿಕ್ಕುವ ಹನಿಗಳು ಆಗೊಮ್ಮೆ ಈಗೊಮ್ಮೆ ಇಳೆಗಿಳಿಯುವಂತೆ, ಮೌನದೊಳಗಿಂದಲೇ ಹುಟ್ಟಿದ ನಾದದ ರೀತಿಯಲ್ಲಿ ಎಲ್ಲಿಂದಲೋ ಬಂದ ದುಂಬಿಗಳ ಝೇಂಕಾರ ಉದ್ಯಾನವನದಲ್ಲಿ ಅನುರಣಿಸಹತ್ತಿತು. ಪರೀಕ್ಷಿಸಿದೆ. ಹೌದು, ಜೇನುಹುಳುಗಳೇ ಅವು. ಅಪರೂಪದ ಮಿಂಚುಹುಳುಗಳಂತೆ ಅಲ್ಲೊಂದು ಇಲ್ಲೊಂದು ವಿರಳವಾಗಿ ಕಂಡುಬರುತ್ತಿದ್ದ ದುಂಬಿಗಳಿಂದು, ತಮ್ಮ ಮನೆ ಮಂದಿಯೊಂದಿಗೆ ಧಾವಿಸಿದ್ದನ್ನು ಗಮನಿಸಿದರೆ, ಇಲ್ಲೋ  ಎಲ್ಲೋ ನೆರೆದು ಕುಳಿತ ಇವುಗಳ ಜಾತ್ರೆಯ  ಸುಳಿವಿರಬೇಕಿದು ಎಂದುಕೊಂಡು ಉದ್ಯಾನವನವನ್ನೆಲ್ಲಾ ತಡಕಾಡಿದೆ‌. ಯಾವ ಸುಳಿವೂ ದಕ್ಕಲಿಲ್ಲ. ನದಿ ಮೂಲ, ಋಷಿ ಮೂಲಗಳನ್ನು ಹುಡುಕಿ ಹೋಗುವಂತೆ, ದುಂಬಿಗಳು ಹರಿದುಬರುತ್ತಿದ್ದ ಮೂಲವನ್ನು  ಅನ್ವೇಷಿಸಿ ಹೊರಟೆ.‌ ಕೊಲಂಬಸ್ ನಿಗಾದ ಶೋಧನೆಯ ಅನುಭವವೇ ನನಗೂ ಆಯಿತು. ಅವನು ಗುಲಾಬಿ ಯಿಂದಲಂಕರಿಸಿದ ಅಮೇರಿಕನ್ನರ ನಾಡು‌ ಕಂಡುಹಿಡಿದ. ನಾನಿಲ್ಲಿ ಗುಂಪೆ ಹಾಕಿದ ಒಣ ಕೊರಡುಗಳ ಸಂದಿಯೊಳಗೆ ಮೈಮೇಲೆಲ್ಲಾ ಕಪ್ಪು ಹಾಗೂ ಕೇಸರ ವರ್ಣದ ಪಟ್ಟೆಗಳೆಂಬ ನಿಸರ್ಗ ಸಹಜ ಟ್ಯಾಟೂ ಹಾಕಿಸಿಕೊಂಡ  ಜೇನ್ನೊಣಗಳ ಗೂಡನ್ನು ಶೋಧಿಸಿದೆ!. ಅಂಗಳದಲ್ಲಿ ಗುಡ್ಡೆ ಹಾಕಿದ  ಕೊರಡುಗಳ ಸಂದಿಯೊಳಗೆ ಜೇನುದುಂಬಿಗಳ ಸಂಸಾರವು ಕಟ್ಟಿದ ಗೂಡೊಂದು ಚಿಕ್ಕದಾದ ಕೊರಡು ತುಂಡಿನ ಆಧಾರದಿಂದ, ಬಾವಲಿಯೊಂದು ಮರದ ರೆಂಬೆಗೆ ತಲೆ ಕೆಳಗಾಗಿ ಜೋತುಬಿದ್ದಂತೆ, ನೇತಾಡುತ್ತಿತ್ತು. ಅಬ್ಬಾ! ಅದೆಂತಹ ಗಿಜಿಗಿಡುವ ದುಂಬಿಗಳ ಜಾತ್ರೆ. ಅತ್ತ ಕೊರೊನಾದಿಂದ ಜನರೆಲ್ಲಾ ಹೊರಬರದೇ ಬೀದಿಗಳೆಲ್ಲಾ ಸ್ಮಶಾನ ಮೌನವನ್ನನುಭವಿಸುತ್ತಿದ್ದರೆ, ಇತ್ತ ಯಾವ ಕೊರೊನಾನೂ ಲೆಕ್ಕಿಸದೇ , ಒಬ್ಬರ ಮೇಲೊಬ್ಬರು ಬಿದ್ದು ತರಕಾರಿಯನ್ನೋ,‌ ಹಾಲನ್ನೋ, ದಿನಸಿಯನ್ನೋ, ಸಿಕ್ಕೀತೋ ಇಲ್ಲವೋ ಎಂಬಂತೆ ಧಾವಂತದಿಂದ ಕೊಂಡುಕೊಳ್ಳುವ  ಜನಜಾತ್ರೆಯ ತೆರದಿ, ಗೂಡೂ ಕಾಣದಂತೆ ಗಿಜಿಗಿಡುತ್ತಿದ್ದ ದುಂಬಿಗಳ ಜಾತ್ರೆಯನ್ನು ಕಂಡ ನನಗೆ ವಿಸ್ಮಯವಾಯಿತು. ಹೊರಗಡೆ ಕೊರೊನಾ ಕಾರಣದ ಕರ್ಫ್ಯೂ ಜಾರಿಯಲ್ಲಿದ್ದರೆ, ಮನೆಯಂಗಳದ ಕೊರಡ ಸಂದಿಯಲ್ಲಿ ಈ ದುಂಬಿಗಳು ಮೇಲೆ ಬಿದ್ದು, ಒದ್ದು ಗುದ್ದಾಡುತ್ತಲೇ, ಮಧುವೆಂಬ ದೇವಲೋಕದಲ್ಲೂ ಸಿಗದ ಮೃತ್ಯುಂಜಯ ಅಮೃತದ ಮಡುವಿಗಾಗಿ ಯಾತ್ರೆ ಹೊರಟಿಂತಿದ್ದವು.
   ಇದೇನು ಲೌಕಿಕದಿಂದ ಪಾರಮಾರ್ಥಿಕತೆಯತ್ತ ಪಯಣ ಹೊರಟಿತಲ್ಲ ಎಂದು ಹೀಗಳೆಯದಿರಿ. ಹೌದು, ಇದೊಂದು ಇಹದಿಂದ ಪರದೆಡೆಗಿನ ಮಧುರ ಪಯಣವೆಂತಲೇ ನಾನು ಪರಿಭಾವಿಸಿದ್ದೇನೆ. ಪ್ರತಿ ಚದರ ಕಿಲೋಮೀಟರಿನಲ್ಲಿ ಕೇವಲ ೩೮೨ ರಂತೆ ಸರಾಸರಿ ಜನಸಾಂದ್ರತೆಯಲ್ಲಿ  ಹಬ್ಬಿಕೊಂಡರೂ ಬಿಡದೇ ಹಣ, ಅಧಿಕಾರ, ಆಸ್ತಿ, ಅಂತಸ್ತು, ಜಾತಿ, ಧರ್ಮ,‌ಮತ, ಪಂಗಡ, ವರ್ಣಗಳೆಂದು ಇಲ್ಲದ ಕಾರಣ ಹುಡುಕಿ, ಕೆಲವೊಮ್ಮೆ ಜಗಳವಾಡಲು ಹವಣಿಸುವ ನಾವು, ಈ ಅಂಗೈಯಷ್ಟಿರುವ ಗಾತ್ರದಲ್ಲಿಯೇ ಸಾವಿರಾರು ಮನೆ - ಸಂಸಾರಗಳನ್ನು ಹೊಂದಿ ಪರಸ್ಪರ, ಸಹಬಾಳ್ವೆ, ಪ್ರೀತಿ, ವಾತ್ಸಲ್ಯ, ಪರಿಶ್ರಮ, ಪರೋಪಕಾರಗಳಿಂದ ಕಂಗೊಳಿಸುವ ಜೇನುಗೂಡಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂಬುದೇ ನನ್ನ ಅಂಬೋಣ. ಇರಲಿ, ಮತ್ತೆ ಗೂಡಿಗೆ ಬರೋಣ. ಹಾಗೆ 'ಯುರೇಕಾ' ಎಂದು ಜೇನುಗೂಡನ್ನು ಸಂಶೋಧಿಸಿದವನೇ ಯಾವ ವೈರಸ್, ಕರ್ಫ್ಯೂ, ಕ್ವಾರೆಂಟೈನ್, ಐಸೋಲೇಶನ್ ಗಳ ಭಯವಿಲ್ಲದೇ ಹೀಗೆ ತಂಡೋಪತಂಡವಾಗಿ ಮುಗಿಬಿದ್ದು, ಕೂತಿರುವ ದುಂಬಿಗಳನ್ನು ಕಂಡು, ಪೋಲೀಸರನ್ನು ಕರೆಯಬೇಕೆನ್ನಿಸಿತು. ಆದರೆ ಹೊತ್ತಾದಂತೆ, ಈ  ದುಂಬಿಗಳೂ ಕೂಡ ಯಾರ ಸಂಪರ್ಕಕ್ಕೂ ಬಾರದೇ ತಮ್ಮಷ್ಟಕ್ಕೆ ತಾವೇ ತಮ್ಮ ಮನೆಯೊಳಗೆ ನಿಶ್ವಿಂತೆಯಿಂದ ಕೂರುತ್ತಿವೆಯಲ್ಲವೇ? ಇದಕ್ಕಿಂತ ಮುನ್ನೆಚ್ಚರಿಕೆ ಇನ್ನೇನಿದೆ ಅಲ್ಲವೇ ಎಂದೆನಿಸಿ ಬೆಪ್ಪಾಗಿ ಯೋಚಿಸಿ ಸುಮ್ಮನಾದೆ. ಜೇನ್ನೊಣಗಳಿಗೆ ಈ ಕಾನೂನು ಅನ್ವಯವಾಗುತ್ತದೋ ಇಲ್ಲವೋ ಎಂಬ ಗೊಂದಲವೂ ಮೂಡಿ, ಯೋಚಿಸಿ ಇಲ್ಲವೆಂದು ಖಾತ್ರಿಪಡಿಸಿಕೊಂಡೆ. ಅಷ್ಟಾಗಿಯೂ ದುಂಬಿಗಳು ಇಷ್ಟೇ ಗಾತ್ರದ ಗೂಡೊಳಗಿದ್ದು ಏನು ಮಾಡುತ್ತವೆ ಎಂಬ ಕುತೂಹಲವನ್ನಿಟ್ಟುಕೊಂಡು ಪರೀಕ್ಷಿಸಲೇಬೇಕೆಂದು ಮತ್ತೆ ಗೂಡಿನತ್ತ ತೆರಳಿದೆ. ಮಧ್ಯಾಹ್ನದ ಬಿಸಿಲು ನೆತ್ತಿಗೇರಿತ್ತು. ಪ್ರಾತಃಕಾಲದಲೆದ್ದು ಕುಸುಮಗಳ ಅಂತರಂಗವನ್ನರಸಿ, ಅಲ್ಲಿ  ಮಡುಗಟ್ಟಿದ ಮಧುವನ್ನು ಒಂದಿನಿತೂ ಬಿಡದಂತೆ ಹೀರಿ, ತನ್ನೊಡಲ ಪಾತ್ರೆಯೊಳಗೆ ತುಂಬಿಕೊಂಡು ಹಾರಿ, ಗೂಡಿನ ಗುಡಿಯೊಳಗೆ ನೈವೇದ್ಯ ಮಾಡಿ ಉಂಡು ಉಳಿದದ್ದನ್ನು ತಮ್ಮವರ ದಾಸೋಹಕ್ಕಾಗಿ ತೆಗೆದಿಟ್ಟರೆ ಮುಗಿದುಹೋಯಿತು, ದುಂಬಿಗಳ ಅಂದಿನ ಶ್ರದ್ಧೆಯ ಕಾಯಕದ ಕೈಲಾಸ. ದವನ, ಚೆಂಡು, ಸಂಪಿಗೆ, ನೀಲ, ದಾಸವಾಳ, ಗುಲಾಬಿ, ಕಣಗಿಲೆ,ಮಲ್ಲಿಗೆ, ಮಾವು ಇತ್ಯಾದಿ ಹೀಗೆ ಸುತ್ತ ಹತ್ತಲ್ಲದೇ ಮತ್ತೊಂದು ಕುಸುಮದ ಎದೆಗೂ ಹೊಂಚುಹಾಕಿ ಹೀರಿ ಕುಡಿದು, ಸಾಲದ್ದಕ್ಕೆ ಹೊತ್ತು ತರುವ ಮಧುಪ್ರಿಯರಂತೆ, ಮಧುವನ್ನು ಹೀರಿ ಮತ್ತೇರಿಸಿಕೊಂಡು ತೂಗಾಡುತ್ತಲೇ ತಮ್ಮದೇ ಮನೆಗೆ ಹಾರಿ ಬರುವ ದುಂಬಿಗಳ ಕಥೆ ವಿಸ್ಮಯ ಮೂಡಿಸುವಂತಹದ್ದು!. ಮಧುಶಾಲೆಯಲ್ಲಿ ಕುಳಿತು ಸೋಮರಸವನ್ನು ಹೀರಿ ಅಮಲನ್ನೇರಿಸಿಕೊಂಡು ರಸ್ತೆಯುದ್ದಕ್ಕೂ ತಮ್ಮದೇ ಲೋಕದಲ್ಲಿ ತೂರಾಡುತ್ತಾ ತೇಲಿ ಬರುವ ಯಾವ ಮಧುಪ್ರಿಯರಿಗಿಂತಲೂ ದುಂಬಿಗಳ ಕಥೆಯೇನೂ ವಿಭಿನ್ನವಾಗಿಲ್ಲವೆಂಬುದೇ ವಿಶೇಷವಾದದ್ದು. ವ್ಯತ್ಯಾಸವಿಷ್ಟೇ, ದುಂಬಿಗಳು ಹೆಕ್ಕಿ ತರುವ ಮಧು, ಪುಷ್ಪದೊಳಗೆ ಸ್ವಾಭಾವಿಕವಾಗಿ ತಯಾರಾದ ಪ್ರಕೃತಿ ರಸಾಯನ. ಆದರೆ ಮಧುಶಾಲೆಯಲ್ಲಿನ ಮಧು, ಮಾನವ ಸಂಸ್ಕರಿಸಿದ ರಸಾಯನಗಳ ಸೋಮರಸ. ಇನ್ನೊಂದು ಆಸಕ್ತಿಕರ  ಭಿನ್ನತೆಯೆಂದರೆ, ರಾಣಿಜೇನು ವೈವಿಧ್ಯಮಯ ಹೂಗಳ ಮಧುವನ್ನರಸಿ ಗುಟುಕು ಗುಟುಕಾಗಿ ಹೀರಲು ಹೊರಟರೆ, ರಾಜ ಜೇನು ಕೆಲವೊಮ್ಮೆ ಲವಣಾಂಶಗಳನ್ನು ಹುಡುಕಿ ಹೆಕ್ಕಿ ಮಣ್ಣು ತಿನ್ನುತ್ತದಂತೆ!. ಮನುಷ್ಯರಲ್ಲಿ ಮಾತ್ರ ಇದು ತಿರುವು ಮುರುವು. ಮಧುಪ್ರಿಯ ಗಂಡುಗಲಿಗಳು ಮಧುಶಾಲೆಯ ಸೋಮರಸವನ್ನು ಹುಡುಕಿಹೊರಟರೆ, ನಂಬಿದ ಹೆಂಡತಿ ಮಕ್ಕಳು ಜೀವನ ಸಾಗಿಸಲಾಗದೇ ಮಣ್ಣನ್ನೇ ಅವಲಂಬಿಸಬೇಕಾಗಿ ಬಂದಿರುವುದನ್ನು ಅಲ್ಲಲ್ಲಿ ಕಂಡರಿಯುತ್ತೇವೆ. ಇದೆಂತಹ ಕಾಕತಾಳೀಯವಲ್ಲವೇ ?
   ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್‌ ವಾನ್‌ ಫ್ರಿಶ್‌ ಅವರು 'ದುಂಬಿಯೊಂದು ಮಕರಂದದತ್ತ ನರ್ತಿಸುತ್ತ ಹಾರುತ್ತದೆ. ಈ ನರ್ತನದ ಲಯವನ್ನು ಅನುಸರಿಸಿ ಉಳಿದ ದುಂಬಿಗಳು ಹಿಂಬಾಲಿಸುತ್ತವೆ' ಎಂಬ ವಿಷಯವನ್ನು ಕ್ರಿ.ಶ.1940ರಲ್ಲಿಯೇ ಹೊರಗೆಡವಿದ್ದರು ಎಂಬ ಸಂಗತಿಯನ್ನು ಎಲ್ಲೋ ಓದಿದ ನೆನಪಾಗಿ, ದುಂಬಿಗಳೇ ಹೀಗೆ ಮಕರಂದಕ್ಕಾಗಿ ಓಲಾಡುತ್ತವೆಯೆಂದ ಮೇಲೆ ಇನ್ನು ಮಧುಪ್ರಿಯರು ತೂಗಾಡುವುದರಲ್ಲಿ ತಪ್ಪೇನಿಲ್ಲವೆಂದುಕೊಂಡು ತೆಪ್ಪಗಾದೆ‌. ಈ ಕೊರೊನಾ ಕಾರಣದ ಕರ್ಫ್ಯೂ ನಿಂದಾಗಿ ಬಾಗಿಲು ಹಾಕಿರುವ ಮಧುಶಾಲೆ ಹಾಗೂ ಅದರ ಮುಂದೆ ಮಧು ಹೀರಲೇಬೇಕೆಂದು ಸಾಲುಗಟ್ಟಿ ನಿಂತ  ಸೋಮರಸಪ್ರಿಯರನ್ನು ಈ ಹೊತ್ತಿನಲ್ಲಿ ನೆನೆದರೆ ವೇದನೆಯುಂಟಾಗುತ್ತದೆ!. ಇವರಿಗೇಕೆ ಜೇನುಗೂಡಿನೊಳಗಣ ಮಧು ಹಿಂಡಿ ಕೊಟ್ಟು ಸಮಾಧಾನ ಮಾಡಬಾರದು ಎಂದು ಪ್ರಶ್ನೆಯನ್ನಿಟ್ಟುಕೊಂಡು ತರ್ಕಕ್ಕಿಳಿದೆ. ಪ್ರಮಾಣದ ಅಸಂಗತ ಲೆಕ್ಕಾಚಾರ ನೆನೆದು ಹೌಹಾರಿದೆ‌. ಯಾವ ನೆಲೆಯಲ್ಲಿಯೂ ಅದು ಸಾಧ್ಯವಾಗದ ಸಾಹಸದ ಕಾರ್ಯವೆಂದು ತಿಳಿದು ನನ್ನೊಳಗೆ ಅಲ್ಲದೇ, ಮನೆಯೊಳಗೆ ಬಂಧಿಯಾದೆ. ಆ ಬಂದ್ ನ ಪ್ರಭಾವ ನಮ್ಮ ಮನೆಯಂಗಳದ ದುಂಬಿಗಳಿಗಿನ್ನೂ ತಟ್ಟಿರಲಿಲ್ಲ.  ಯಾಕೆಂದರೆ ಭ್ರಮರದ ಮಧುಪಾತ್ರೆಗಳನ್ನೊಳಗೊಂಡ ಕುಸುಮಗಳು ನಿತ್ಯ ನಿರಂತರ 24/7 ದುಂಬಿಗಳಿಗಾಗಿ ಸದಾ ಬಾಗಿಲು ತೆರೆದೇ ಇರುತ್ತವೆಯೆಂದರೆ ಈ ಭ್ರಮರಗಳ ಅದೃಷ್ಟವೋ ಅದೃಷ್ಟವೆನ್ನಬೇಕು. ಅಮಲೇರಿದ ದುಂಬಿಯಂತೆ ಎಲ್ಲೆಲ್ಲೋ ಹಾರಿ ಹೊರಟಿದೆಯಲ್ಲ ಪ್ರಬಂಧ!. ದುಂಬಿಗಳು ಆಕಾಶದಲ್ಲಿ ಎಲ್ಲಿ ಹಾರಿದರೂ ಮರಳಿ ನಿಖರವಾದ ಸ್ಥಳಕ್ಕೇ ಬಂದು ಸೇರುವಂತೆ, ನೇರವಾಗಿ ವಿಷಯಕ್ಕೆ ಬರೋಣ. ಮುಂಜಾವಿನ ಆ ನಿಷ್ಠೆಯ ಕಾಯಕದಲ್ಲಿ ಬಳಲಿ ಬೆಂಡಾದ ಜೇನ್ನೊಣಗಳು ಈ ಮಧ್ಯಾಹ್ನದ ಹೊತ್ತಿನಲ್ಲಿ, ಆಟವಾಡಿ ದಣಿದು ಆಗ ತಾನೇ  ತಾಯ ಹಾಲು ಕುಡಿದು ನಿದ್ರಾದೇವಿಯ ಮಾಯೆಯಲ್ಲಿ ತೇಲುತ್ತಿರುವ  ಹಸುಗೂಸುಗಳಂತೆ ಜೋಗುಳವನ್ನು ಬಯಸುತ್ತಿದ್ದವೋ ಏನೋ .ಅಂತೂ ಮಬ್ಬಾದ ಮಂಪರಿನಲ್ಲಿ ಕುಳಿತಲ್ಲಿಯೇ  ಅಲುಗಾಡುವುದನ್ನು ಹೊರತುಪಡಿಸಿದರೆ ದುಂಬಿಗಳ ಚಟುವಟಿಕೆಗಳು ಚೈತನ್ಯಯುತವಾಗಿರಲಿಲ್ಲ.
           "ಅನುಸರಿಸಬೇಕು ಜಗ ದುಂಬಿಗಳ ಕ್ರಿಯಾಶಕ್ತಿ, ಚಲನಶೀಲತೆ
                                ತಲೆದೂಗಬೇಕು ಕೇಳಿ ಮಧು
                                  ಹೀರಿ ರಾಗಿಸುವ ಅವುಗಳ
                            ಅಮಲಿನ ಹಾಡಿನ ಮಾಧುರ್ಯತೆ
ಎಂದು ಜೇನ್ನೊಣಗಳ ಬೆಳಗಿನ ಅದಮ್ಯ ಕಾಯಕವನ್ನು ಕಂಡು ಮೇಲಿನಂತೆ  ಹಾಡುವಂತಾಯಿತು. ಇದು ದುಂಬಿಗಳಿಗೆ ಜೋಗುಳದಂತೆ ಕೇಳಿತೋ ಏನೋ ? ಗೊತ್ತಾಗಲಿಲ್ಲ. ಅವು ತಮ್ಮ ಲೋಕದಲ್ಲಿಯೇ ತಾವಿದ್ದವು. ಹೀಗೆ ಅವು ಮಲಗಿದಂತೆ ನಿಸ್ತೇಜವಾದ  ಮೇಲೆ ನೋಡುವುದಿನ್ನೇನು ಎಂದು ಮೇಲೆದ್ದು ನನ್ನ ಗೂಡಿನತ್ತ ನಿಧಾನವಾಗಿ ಹೆಜ್ಜೆ ಹಾಕಿದೆ.  ಹೊಸದಾಗಿ‌ ಮನೆಯ ಮುಂದೆ ಗೂಡು ಕಟ್ಟಿಕೊಂಡು ಸಂಸಾರ ಹೂಡಿದ ಭೃಂಗಗಳನ್ನು ಮನೆಯಂಗಳಕೆ ಬಂದ ಅತಿಥಿಗಳೆಂದು, ಹೀಗೆ ದಿನವಿಡೀ ನೋಡುತ್ತಲೇ ಸಾಕಿದ ಮರಿಗಳಂತೆ ದೂರದಿಂದಲೇ ಮುದ್ದುಮಾಡಿದೆ. ತಕ್ಷಣ ನೆನಪಾಯಿತು. ಇದನ್ನು ನೋಡಿ ದುಂಬಿಗಳು ಮರಳಿ ಮುದ್ದು ಮಾಡಲು ಬಂದುಬಿಟ್ಟರೆ ಗತಿಯೇನಾಗುತ್ತದೆ ಎಂದವನೇ ಭಯಗೊಂಡು ಒಳತೂರಿಬಂದುಬಿಟ್ಟೆ. ಹೀಗೆಯೇ ಕೆಲವು ದಿನ ಕಳೆಯಿತು.  ಜೇನುಗೂಡು ಹುಣ್ಣಿಮೆಯ ಚಂದಿರನಂತೆ ಬೆಳೆಯುತ್ತಿತ್ತು. ನನ್ನ ಕನಸುಗಳೂ ಕೂಡ ಬೆನ್ನತ್ತಿ ಅರಳಿಕೊಳ್ಳಲಾರಂಭಿಸಿದವು. ಈ ದುಂಬಿಗಳು ಬಯಸದೇ ಮನೆಗೆ ಬಂದ ಅಪರೂಪದ ಗೆಳೆಯರೆಂದುಕೊಂಡು ಸಂಭ್ರಮಿಸಿದೆ. ಕಾಳಿದಾಸನ ಮನೆಯ ಮುಂದಿನ ಉದ್ಯಾನವನ ನೆನಪಾಯಿತು.ಇರುವಷ್ಟು ಕಾಲ ಇಲ್ಲಿದ್ದು ಹೇಗೋ ರಾಣಿಜೇನಿನ ಮಾತುಗಳನ್ನು ಕೇಳಿ ತಮ್ಮ ಸಂಸಾರವನ್ನು ನೀಗಿಸಿಕೊಂಡು, ಮಕ್ಕಳು, ಮರಿಮಕ್ಕಳೊಂದಿಗೆ, ಮಧು ಹೀರಿ ಉದ್ಯಾನವನದಲ್ಲಿ ಗುಂಯ್ ಎಂದು ಏಕತಾರಿ ಹಿಡಿದು ಹಾಡಿದರೆ ಸಾಕು. ಶುಭೋದಯದ ಸಂಗೀತಕ್ಕೆ ದಕ್ಕುವ ಕಳೆಯೇ ವಿಭಿನ್ನ. ಕೊರಡಿನೊಳಗಣ ಸಂದಿಯಲ್ಲರಳಿಕೊಂಡ ಜೀವನದಿಂದ ಒಂದೊಮ್ಮೆ ಬೇಸರವಾಯಿತೆಂದಾಗ, ಅದುವರೆಗೂ ಎಲ್ಲಿಂದಲೋ ಹುಡುಕಿ ಹೆಕ್ಕಿ ತಂದು ತೊಟ್ಟಿಕ್ಕಿ ಸಂಗ್ರಹಿಸಿದ ಮಂದ ಕಂದು ಬಣ್ಣದ ಸವಿಜೇನನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆಲ್ಲಾ ಕುಡಿಸಿ ಉಳಿದುದರಲ್ಲಿ ತಾವೂ ಉಂಡು, ತಮ್ಮ ಗೂಡಿನ ಕುರುಹು ಬಿಟ್ಟು ಸಂತೃಪ್ತಿಯಿಂದ ಹೋದರೆ ಸಾಕು. ಹಾರ, ತುರಾಯಿ,ವಾದ್ಯ ಗೋಷ್ಠಿಗಳಿಂದಲ್ಲದೇ ಇದ್ದರೂ,  ತುಂಬುಹೃದಯದ ನಿಷ್ಕಲ್ಮಶ ಪ್ರೀತಿಯ ಆರ್ದ್ರತೆಯಿಂದಲಾದರೂ ಬೀಳ್ಕೊಟ್ಟರಾಯಿತು ಎಂದು ಮನದೊಳಗೆ ಭೃಂಗಗಳ ಭವಿತವ್ಯದ ಹಂಚಿಕೆಯ ಕನಸುಗಳನ್ನು, ಸಂಚಿಕೆಯಾಗಿ, ನನ್ನೊಳಗೇ ತುಂಬಿಕೊಳ್ಳುತ್ತಾ ಹೋದೆ.
    ಹೀಗೆ ಒಂದು ಮಬ್ಬು ನಸುಕಿನಲ್ಲಿ ಎದ್ದು ಮನೆಯ ಕಿರು ಉದ್ಯಾನವನದಲ್ಲಿಯೇ  ವಿಹಾರಕ್ಕಿಳಿದೆ. ಕತ್ತಲೆ ವಿದಾಯ ಹೇಳುತ್ತಿತ್ತು. ಹಕ್ಕಿಗಳ ಕಲರವ ಆಗ ತಾನೇ ಶುರುವಾಗಿತ್ತು. ನೇಸರನ ಪ್ರಥಮ ಕಿರಣಗಳು ಭುವಿ ಸ್ಪರ್ಶಕ್ಕಾಗಿ ಕಾದಿದ್ದವು. ಇನ್ನೇನು ದುಂಬಿಗಳೂ ಎದ್ದು ಬರುವ ಹೊತ್ತಾಯಿತೆಂದು ಸಂಗೀತದ ಸಾಂಗತ್ಯಕ್ಕಾಗಿ ಕಾಯುತ್ತಿದ್ದೆ. ಸೂರ್ಯ ಕಿರಣಗಳ ದರ್ಶನವಾಯಿತು. ಪಕ್ಷಿಗಳು ಗೂಡಿನಿಂದ ನಿತ್ಯ ಕಾಯಕಕ್ಕಾಗಿ ತೆರಳಿದವು. ತಂಗಾಳಿಯೂ‌ ಭಾನು ಕಿರಣಗಳ ಅಪ್ಪುಗೆಯಿಂದ ಬೆಚ್ಚಗಾಗಲು ಪ್ರಾರಂಭಿಸಿತು. ಆದರೆ ದುಂಬಿಗಳ ಗುಂಯ್ ಗಾನ ಮಾತ್ರ ಸುಳಿಯಲೇ ಇಲ್ಲ.‌‌ ಪ್ರಕೃತಿ ನಿಶ್ಯಬ್ದವೆನಿಸಿತು, ಹಾಡುವವರಿಲ್ಲದೇ ವೇದಿಕೆ ಬಿಕೋ ಎನ್ನಿಸುವ ಹಾಗೆ. ರಾತ್ರಿಯೆಲ್ಲಾ ಮಧು ಕುಡಿದು ಅಮಲಿನಲ್ಲಿ ಮಲಗಿದ ದುಂಬಿಗಳಿನ್ನೂ ನಶೆಯಿಂದ ಹೊರಬಂದಿರಲಿಕ್ಕಿಲ್ಲ. ನಾನೇ ಎಬ್ಬಿಸಿದರಾಯಿತೆಂದು ಕೊರಡುಗಳ ಸಂದಿಯೊಳಗೆ ಕಣ್ಣುಹಾಯಿಸಿದೆ. ಅಚ್ಚರಿಯೋ ಅಚ್ಚರಿ! ಆತಂಕವೋ ಆತಂಕ! ಏಕೆಂದರೆ, ದುಂಬಿಗಳು ಹೋಗಲಿ, ಜೇನುಗೂಡಿನ ಯಾವ ಕುರುಹುಗಳೂ ಅಲ್ಲಿರಲಿಲ್ಲ. ಕ್ಷಣ ಹೊತ್ತು ತಬ್ಬಿಬ್ಬಾದೆ‌. ದುಂಬಿಗಳ ನಶೆಯನ್ನಿಳಿಸಿ ಎಚ್ಚರಗೊಳಿಸಲು ನಾನು ಹೋದರೆ, ನನ್ನದೇ ಶುಭೋದಯದ ಮಧುರ ಉಲ್ಲಾಸವೆಲ್ಲಾ ಮಂಜು ಕರಗುವಂತೆ ಕರಗಿಹೋಯಿತು. ಮನಸ್ಸು ತಳಮಳಗೊಂಡಿತು. ಏನಾಗಿರಬಹುದು ಎಂದು ಮನೆಯವರನ್ನು ವಿಚಾರಿಸುವಾಗ, ಕೈಯ್ಯಲ್ಲೊಂದು ಬಟ್ಟಲು ಹಿಡಿದ ಕರುಳ ಕುಡಿಯೇ ಎದುರಿಗೆ ಬಂದು  "ಅಪ್ಪಾ...ಜೇನು ಕುಡೀತೀಯಾ ?" ಎಂದಾಗಲೇ ನನ್ನ ಬೆಳಗಿನ ಮತ್ತೆಲ್ಲಾ ಸರ್ರನೆ ಪಾತಾಳಕ್ಕಿಳಿಯಿತು. ಮಗುವಿಗೆ ಏನೊಂದೂ ಉತ್ತರಿಸದೇ ಸ್ತಂಭೀಭೂತನಾದೆ. ಸಂಗತಿಯೇನೆಂದರೆ ಹಿಂದಿನ ದಿನವೇ ಮನೆಯವರೆಲ್ಲಾ ಸೇರಿಕೊಂಡು ಭ್ರಮರಗಳನ್ನು ಬಡಿದೋಡಿಸಿ ಗೂಡನ್ನೇ ಕಿತ್ತುಹಾಕಿ ಅದರೊಳಗಿನ ಮಧುವನ್ನು ಬಲವಂತದಿಂದ ಕಿತ್ತುಕೊಂಡಿದ್ದರು. ಇದನ್ನು ಕೇಳಿ ಮನಸ್ಸಿಗೆ ಆಘಾತವಾದಂತಾಗಿ, ಕರುಳ ಕುಡಿಗಳಂತೆಯೇ ಪ್ರೀತಿಸುತ್ತಿದ್ದ ಮರಿದುಂಬಿಗಳನ್ನು, ಕ್ರೂರವಾಗಿ ಕಳೆದುಕೊಂಡ ಭೀಕರ ನೋವನ್ನು ಮರೆಯಲಾಗದೇ ಹೊರಗೆ ಬಂದು ಒಂದು ಘಳಿಗೆ ಧ್ಯಾನದಲ್ಲಿ ಮೈಮರೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಹಿಂದೊಂದು ಬಾರಿ ಮನೆಯವರು ಇಂತಹುದೇ ಪ್ರಯತ್ನಕ್ಕಿಳಿದಾಗ ಬೈದು ಈ ಆಲೋಚನೆಯಿಂದ ದೂರ ಸರಿಸಿದ್ದೆ‌ .ಆದರೀಗ ನಾನಿಲ್ಲದ ಸರಿ ಹೊತ್ತು ನೋಡಿ ಕಾದು, ಜೇನು ಬಿಡಿಸಿದ್ದರು. ಕಣ್ಣುಗಳು ಮಂಜಾದವು. ಮೌನ ಬಿಸಿಯಾಯಿತು. ಉಸಿರು ಉರಿಯಾಯಿತು. ದುಂಬಿಗಳ ರಸಗಾನದ ಸಾಂಗತ್ಯದಲ್ಲಿ ಮೈಮರೆತು, ಕಳೆದ ನೆನಪುಗಳು ಮನದ ಗೂಡಿನಿಂದ ಒಂದೊಂದಾಗಿ  ಹೊರಬರಲಾರಂಭಿಸಿದವು. ಕಳೆದುಕೊಂಡ ಭೃಂಗದ ಬೆನ್ನೇರಿ ಹೊರಟುಬಿಟ್ಟೆ. ತೇವವಾದವು ಮನಸು, ಹೃದಯಗಳು. ಮನಕಡಲಿನಿಂದ ನೋವಿನಲೆಗಳು ದಾಳಿಯಿಡಲಾರಂಭಿಸಿದವು. ಮಗು ತಂದು ಕಣ್ಣೆದುರಿಗೆ ಹಿಡಿದ ಜೇನನ್ನು ನೋಡುವ ಧೈರ್ಯವೂ ಇಲ್ಲದಾಯಿತು.‌ ಕಣ್ಣಂಚಿನಲ್ಲಿ ಕಣ್ಣೀರು ಮಡುಗೊಂಡು ಕೆಂಪಾಗಿತ್ತು, ಜೇನಿನ ಪ್ರತಿಫಲನದಿಂದ. ಭಾಗ್ಯಗಳನ್ನು ಕೇಳಿ ಮನವೊಲಿಸಿ ಪಡೆದುಕೊಳ್ಳಬೇಕೆ ವಿನಃ ಕಿತ್ತುಕೊಳ್ಳಬಾರದಲ್ಲವೇ ? ಎಂದು ನನ್ನೊಳಗೆ ಸತ್ಯ ದರ್ಶನದ ಹುಡುಕಾಟಕ್ಕಿಳಿದೆ. ಮನುಷ್ಯ ಪ್ರಕೃತಿಯಿಂದ ಬೇಡಿ ಪಡೆದಿದ್ದಕ್ಕಿಂತ, ಕಿತ್ತುಕೊಂಡು ಕೊಳ್ಳೆ ಹೊಡೆದದ್ದೇ ಹೆಚ್ಚಲ್ಲವೇ ? ಉದ್ಯಾನವನಕ್ಕೇ ಶಿಖರಪ್ರಾಯ ಮುಕುಟದಂತಿದ್ದ ಜೇನುಗೂಡು ಮಾಯವಾಗಿತ್ತು: ಮನೆಯ ಮುಂದೆ ಒಟ್ಟಿದ ಕೊರಡುಗಳ ರಾಶಿಯೇ ದುಂಬಿಗಳ ಚಿತೆಯಾಯಿತಲ್ಲ ಎಂದು ಹಳಹಳಿಸಿ ಉಮ್ಮಳಿಸಿದೆ. ಹರ್ಷದ ಗೂಡಿಲ್ಲದ ಮನದುಂಬಿ ದಿಕ್ಕುತಪ್ಪಿ ಹಾರುತ್ತಿತ್ತು ; ಹೃದಯದರಮನೆ ಬರಿದಾಗಿತ್ತು. ಎದೆಯಗೂಡು ಬಿರಿದಾಗಿತ್ತು.

Sunday 24 May 2020

ಸಾವಿನ ದಾರಿ..

ಸಾವಿನ ದಾರಿ
ಸ್ಮಶಾನವಾಗುತಿವೆ ಹೆದ್ದಾರಿ
ತನ್ನೊಳಗೆ ಬರುವುದೆಲ್ಲವನೂ ನುಂಗಿ ತೇಗಿ
ಅಳಿಲು, ಕುರಿ, ಕೋಳಿ, ನಾಯಿ ಬೆಕ್ಕುಗಳ
ಜೀವಗಳಿಗಂತೂ ಬೆಲೆಯೇ ಇಲ್ಲ
ಮನುಷ್ಯನ ಪ್ರಾಣಕೂ ಹಾತೊರೆಯುತಿದೆಯಲ್ಲ
ಕಪ್ಪು ರಾಕ್ಷಸನೇ ಸರಿ
ಹಿರಿದಾರಿಯೆಂದೆನಿಕೊಂಡರೂ
ವಾಹನಗಳೇ ಮೃಷ್ಟಾನ್ನ ಭೋಜನ
ಚಾಚಿದ ಕರಿನಾಲಗೆಗೆ ಹರಿಯುವ
ನೆತ್ತರು ಚಪ್ಪರಿಸುವ ಉಪ್ಪಿನಕಾಯಿ
ಹಸಿಮಾಂಸವೇ ರುಚಿಕಟ್ಟಾದ
ಭೋಗವಾಸನೆಯ ಮುದ್ದೆ
ತಿಂದು ತೇಗುವುದೊಂದೇ
ಹೊರಟ ದಾರಿಯ ನಿತ್ಯಕಾಯಕ
ಉಂಡು ಬೀಗುವುದಕೆ ಯಮಧರ್ಮನೇ ನಾಯಕ

ಯಾವ ಕಿಂದರಿಜೋಗಿ ಕರೆದೊಯ್ಯುವನೋ
ರಸ್ತೆಗಳೆಲ್ಲಾ ಜಾಮ್ ಜಾಮ್......
ಮೈದುಂಬಿಕೊಂಡ ಕಪ್ಪು ವಸ್ತ್ರದ ಮೇಲೆ
ಹರಿಯುವ ವಾಹನಗಳ ಕೋಟಿನ‌ ಬಲೆ
ಕುಣಿಯುತ್ತ ಕಿನ್ನರಿಯನೂದುತ
ಹೊರಟ ಬಂಡಿಗಳು ಲೆಕ್ಕಕೂ ನಿಲುಕಲಾಗದ ಸೆಲೆ
ದಿಕ್ಕುತಪ್ಪಿದರೂ ಮರಳಲೇಬೇಕು
ಹೊರಳಿ ಮತ್ತೆ  ಸಾವಿನ ಹಾದಿಗೆ
ಮರ ಗಿಡ ಬಳ್ಳಿ ತುಂಬಿದ ಕಾಡು
ಕಡಿದು ಕಟ್ಟಿದ ರೆಸಾರ್ಟಿನಲ್ಲಿ
ಕಂಠದವರೆಗೂ ಕುಡಿದು ಕಟ್ಟಿಕೊಂಡ ಮಹಾಪಾಪ
ಬೆನ್ನು ಬಿಡುವುದೆಲ್ಲಿ ಕೊರಗಿ
ಕರಗುತ್ತಿರುವ ಪ್ರಕೃತಿಯ ಮಹಾಶಾಪ 

ಮರಗಿಡಗಳ‌ ಮಾರಣಹೋಮ
ಮಾರ್ಗವೊಂದರ ಪ್ರತಿಷ್ಠಾಪನೆಗೆ
ಬೆಲೆಕಟ್ಟಲಾಗದ ಜನುಮಹಾನಿ
ಉಣ್ಣಲೇಬೇಕಲ್ಲವೇ ಮಾಡಿದಡುಗೆ
ಬೇವು ಬಿತ್ತಿ ಮಾವು ಕೊಂಬುವ
ದುರಾಸೆಗೆ ಬಲಿಯಿನ್ನೆಷ್ಟೋ
ಒರಗಿಹೋದ ಜೀವಗಳ ಕೊರಳಿನ ಆರ್ತನಾದಗಳೆಷ್ಟೋ
ಕುಣಿದು ಕುಪ್ಪಳಿಸುವ ಪ್ರಗತಿಯ
ದಾರಿಯೆಂದು ಬೀಗುವ ಬಾಂಧವರೇ
ಕಣ್ಣರಳಿಸಿ ತುಂಬಿಕೊಳ್ಳಿ ಸಾವಿನ ಮೆರವಣಿಗೆಯನು;
ಕರಗುತ್ತಲೇ ಕುಸಿಯುತ್ತಿರುವ  ಘಟ್ಟಗಳ
ಮೈಮೇಲಿನ ಹಸಿಹಸಿಯಾದ ಗಾಯಗಳನ್ನು
ವ್ರಣಗಳಿಂದುಂಟಾದ ಕುಳಿಗಳಲ್ಲಿ ಮಡುಗಟ್ಟಿರುವ
ರಕ್ತಕಣ್ಣೀರಿನ ಹೊಳೆಯನ್ನೊಮ್ಮೆ ಹರಿಯಬಿಡಿ
ನಿಂತು ಹೋಗಲಿ ಒಮ್ಮೆ ನಿಮ್ಮ
ಮಿಡಿಯಲೊಲ್ಲದ ಪಾಪದ ಜೀವನಾಡಿ

ಹೆದ್ದಾರಿಯ  ಹೆಮ್ಮಾರಿಗೆ ಜೀವಗಳ
ಕರುಳ ಹಾರಗಳಲಂಕಾರ
ಪುಟಿಯುತಿರುವ ಹೊರಬಿದ್ದ ಮೆದುಳು
ಮಿಡಿಯುತಿರುವ ಅನಾಥವಾದ ಹೃದಯದಳು
ನಡೆಸಿದಂತೆ ವಾದ್ಯಗೋಷ್ಠಿ
ಜವರಾಯನ ಆಗಮನಕೆ
ಶೋಕಗೀತೆ ಚೀರಾಟ; ಭಜನೆ ಮೇಳ ಕೂಗಾಟ
ಸಂಗೀತದ ಮಹಾವೈಭವ!!!
ದಾರಿ ತುಂಬಿಕೊಂಡ ಸುಳ್ಳಾದ ಹರಕೆ;
ಆಯುಷ್ಮಾನುಭವ! ಆಯುಷ್ಮಾನುಭವ!


Friday 8 May 2020

ಮಧುಮೀಮಾಂಸೆ

ಮಧುಮೀಮಾಂಸೆ
  ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ  ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು  ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು  ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡಷ್ಟೇ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದಿರೆಗೂ, ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು  " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ  ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ,  ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.."  ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್  ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ.  ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ,  ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ  ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು  ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ  ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು  ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ.
ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ 
ಹೇಳಬೇಕಾದ್ದನ್ನು ಹೇಳದೆ 
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ 
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ” 
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ   ತಣ್ಣಗಾಗಲಾರವೇ ?  ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ  ಹಾರಾಡಿ ಅಬ್ಬರಿಸುತ್ತಿದ್ದ  ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ?  ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ  ಸೀಮೋಲ್ಲಂಘನ ಮಾಡಿತೇ?  ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ )  ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ  ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ  ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅಷ್ಟೇ ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ  ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ.  ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ  ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ  ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು  ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ  ಗುಟುಕು ಗುಟುಕಾಗಿ ಹೀರಿದರೆ  ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು.  ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು.
   ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ- 
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು.  ನಾಗಚಂದ್ರನೂ ಕೂಡ ತನ್ನ  "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ. 
  ಗಾಲಿಬ್  ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ.  ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು 
ಹನಿ ಒಬ್ಬೊಬ್ಬರಿಗೂ 
ನನ್ನ ಪ್ಯಾಲೆಯೊಳಗೆ 
ಒಂದೊಂದು ಗುಟುಕು ಎಲ್ಲರಿಗೂ 
ನನ್ನ ಸಾಕಿಯೊಳಗೆ 
ಅವರವರ ಸಾಕಿಯರ ಸುಖ ಎಲ್ಲರಿಗೂ 
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ".


ಮಧುಮೀಮಾಂಸೆ

ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ  ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು  ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು  ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡμÉ್ಟೀ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದ್ಯಕ್ಕೂ , ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು  " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ  ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ,  ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.."  ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್  ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ.  ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ,  ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ  ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು  ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ   ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು  ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ. ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ 
ಹೇಳಬೇಕಾದ್ದನ್ನು ಹೇಳದೆ 
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ 
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ” 
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ   ತಣ್ಣಗಾಗಲಾರವೇ ?  ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ  ಹಾರಾಡಿ ಅಬ್ಬರಿಸುತ್ತಿದ್ದ  ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ?  ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ  ಸೀಮೋಲ್ಲಂಘನ ಮಾಡಿತೇ?  ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ )  ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ  ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ  ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅμÉ್ಟೀ. ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ  ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ.  ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ  ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ  ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು  ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ  ಗುಟುಕು ಗುಟುಕಾಗಿ ಹೀರಿದರೆ  ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು.  ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು.   ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ- 
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆμÉ್ಟೀ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು.  ನಾಗಚಂದ್ರನೂ ಕೂಡ ತನ್ನ  "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ. 
ಗಾಲಿಬ್  ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ.  ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ 
ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು 
ಹನಿ ಒಬ್ಬೊಬ್ಬರಿಗೂ 
ನನ್ನ ಪ್ಯಾಲೆಯೊಳಗೆ 
ಒಂದೊಂದು ಗುಟುಕು ಎಲ್ಲರಿಗೂ 
ನನ್ನ ಸಾಕಿಯೊಳಗೆ 
ಅವರವರ ಸಾಕಿಯರ ಸುಖ ಎಲ್ಲರಿಗೂ 
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ.


Friday 17 April 2020

ಒಂದು ನಕ್ಷತ್ರದ ಕಥೆ

ಒಂದು ನಕ್ಷತ್ರದ ಕಥೆ
    ಕೈಯ್ಯಲ್ಲೊಂದು ಬೊಂಬೆ ಹಿಡಿದೋ, ಮನೆಯಂಗಳದಲ್ಲಿ ಗೆಳತಿಯರೊಂದಿಗೆ ಆಟವಾಡಿಯೋ ತೊದಲುನುಡಿಗಳನ್ನಾಡುತ್ತಾ ಮುಗ್ಧತೆಯ ಬದ್ದತೆಯಲ್ಲಿ ಬಾಲ್ಯವನ್ನು ಕಳೆಯಬೇಕಾಗಿದ್ದ ನರ್ಗೀಸ್ ಎಂಬ ‘ಸುಂದರ ಹೂವು’ ( ಪರ್ಷಿಯನ್ ಭಾಷೆಯಲ್ಲಿ ನರ್ಗೀಸ್ ಎಂದರೆ ಸುಂದರ ಹೂ ಎಂದರ್ಥ) ಸ್ವಚ್ಛಂದವಾಗಿ ಅರಳಬೇಕಾಗಿದ್ದ ವಯಸ್ಸಿನಲ್ಲಿಯೇ ಬಣ್ಣದ ಬದುಕಿಗೆ ತನ್ನನ್ನು ಅರ್ಪಿಸಿಕೊಂಡುಬಿಟ್ಟಿತ್ತು. ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಬಾಲನಟಿಯಾಗಿ ಪರದೆಯ ಮೇಲೆ ಕಾಣಿಸಿಕೊಂಡ ಆಕೆಯ ಮೊದಲ ಚಿತ್ರ 'ತಲಾಶ್ ಎ ಹಕ್'. ಆಗ ಆಕೆಯ ವಯಸ್ಸು ಕೇವಲ ಆರು ವರ್ಷ. ನಾಯಕಿಯಾಗಿ ನಟಿಸಿದ ಮೊದಲ ಚಿತ್ರ "ತಮನ್ನಾ" ತೆರೆ ಕಂಡಾಗ ಈಕೆಗಿನ್ನೂ ಹದಿನಾಲ್ಕು ವರ್ಷ ವಯಸ್ಸು. ಹೀಗೆ ಬಾಲ್ಯದ ಬಣ್ಣ ಬಣ್ಣದ ಕನಸುಗಳಲ್ಲಿ ಮುಳುಗಿಹೋಗಬೇಕಾಗಿದ್ದ ನರ್ಗೀಸ್, ಹೊತ್ತಲ್ಲದ ಹೊತ್ತಿನಲ್ಲಿ ಕಲಾವಿದೆಯಾಗಿ ತನ್ನ ಬದುಕನ್ನು ರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಳು. ಇಲ್ಲಿಂದ ಈಕೆ ಹೊರಳಿ ನೋಡಿದ್ದೇ ಇಲ್ಲ.  1949ರಲ್ಲಿ ‘ಬರ್ಸಾತ್’ ಮತ್ತು ‘ಅಂದಾಜ್’; 1951ರ ‘ಆವಾರಾ’ ಮತ್ತು ‘ದೀದಾರ್’; 1955ರ ‘ಶ್ರೀ 420’ ಮತ್ತು 1956ರ ‘ಚೋರಿ ಚೋರಿ’ ಸಿನೇಮಾಗಳು ಈಕೆಯನ್ನು ಚಿತ್ರರಂಗದ ಧೃವತಾರೆಯಾಗಿ ಕಂಗೊಳಿಸುವಂತೆ ಮಾಡಿಬಿಟ್ಟವು. ಈ ಯಶಸ್ಸಿನ ಹಿಂದೆ ರಾಜ್ ಕಪೂರ ನ ಪರಿಶ್ರಮದ ಪಾತ್ರವೂ ಮಹತ್ವದ್ದಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. 1929 ರ ಜೂನ್ 1 ರಲ್ಲಿ ತಂದೆ ಅಬ್ದುಲ್ ರಶೀದ್, ತಾಯಿ ಜದ್ದಾನ್ ಬಾಯಿ ಯ ಮಗಳಾಗಿ ಜನಿಸಿದ ಈಕೆಯ ಪೂರ್ವಾಶ್ರಮದ ಹೆಸರು ಫಾತೀಮಾ ರಶೀದ್. ಅದಾಗಲೇ ಸಂಗೀತಗಾರ್ತಿಯಾಗಿ ಹೆಸರು ಮಾಡಿದ್ದ ತಾಯಿ ಜದ್ದಾನ್ ಬಾಯಿಯ ಗರಡಿಯಲ್ಲಿ ಬೆಳೆದು ಬಂದ ನರ್ಗೀಸ್ ಳಿಗೆ ಬಾಲ್ಯದಲ್ಲಿಯೇ ಚಿತ್ರರಂಗದ ಮಹಾಮಹಿಮರ ಒಡನಾಟ ದಕ್ಕಿದ್ದು ಆಕೆ ಚಲನಚಿತ್ರರಂಗದಲ್ಲಿ ಖ್ಯಾತ ಅಭಿನೇತ್ರಿಯಾಗಿ ಬೆಳಗಲು ಕಾರಣವಾಯಿತು. ಮುಂಬೈನ ಮರೀನ್ ಡ್ರೈವ್‍ನಲ್ಲಿದ್ದ ಜದ್ದಾನ್ ಬಾಯಿಯ  ಮನೆ "ಚಾತ್ಯೂ ಮರೀನ್" ತನ್ನ ಸಾಯಂಕಾಲದ "ಮೆಹಫಿಲ್"ಗಳಿಗೆ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಬಾಲಿವುಡ್ ನ ಖ್ಯಾತನಾಮರಾದ ದಿಲೀಪ್ ಕುಮಾರ್, ಮೆಹಬೂಬ್ ಮತ್ತು ಕಮಲ್ ಅಮ್ರೋಹಿ ಅವರು ಖಾಯಂ ಸಂದರ್ಶಕರಾಗಿದ್ದರೆಂದ ಮೇಲೆ ನರ್ಗೀಸ್ ಅದೆಂತಹ ಭಾಗ್ಯಶಾಲಿಯಾಗಿದ್ದಳೆಂಬುದನ್ನು ಊಹಿಸಿಕೊಳ್ಳಿ. ಅವಳ ಚಿತ್ರರಂಗದ ಪಯಣಕ್ಕೆ ಬೇಕಾದ ಪೂರ್ವಸಿದ್ಧತೆ, ತರಬೇತಿ, ಸ್ಪೂರ್ತಿಗಳೆಲ್ಲವೂ ಆಕೆಗೆ ದಕ್ಕಿದ್ದು ಇದೇ ಚಿಂತಕರ ಚಾವಡಿಯಲ್ಲಿಯೇ. 
ಅದೊಂದು ಪತ್ರ ಅವಳ ಪ್ರೀತಿಯನ್ನು ಹರಿದುಹಾಕಿತ್ತು. ರಾಜ್ ಕಪೂರ್  ಪ್ರಕಾರ ಆ ಪತ್ರದಲ್ಲಿ ನರ್ಗೀಸ್ ನಿರ್ಮಾಪಕರೊಬ್ಬರನ್ನು ಮದುವೆಯಾಗುವ ಕುರಿತು ವಿವರಗಳಿದ್ದವು.  ಆ ಪತ್ರದ ಹಿನ್ನೆಲೆಯ ಸತ್ಯಸಂಗತಿಯನ್ನು ಮಾತ್ರ ನರ್ಗೀಸ್, ಮಲಗಿರುವ ತನ್ನ  ಸಮಾಧಿಯಿಂದ ಎದ್ದು ಬಂದು ಹೇಳಬೇಕಷ್ಟೇ.
'ಜಾನೇ ನ ನಜರ್ ಪೆಹಚಾನೇ ಜಿಗರ್ 
ಯೇ ಕೌನ್ ಜೋ ದಿಲ್ ಪಾರ್ ಚಾಯಾ
ಮೇರಾ ಅಂಗ್ ಅಂಗ್ ಮುಸ್ಕಾಯಾ"
(ಕಣ್ಣರಿಯದಿದ್ದರೂ ಹೃದಯವರಿಯುತ್ತಿರುವ ಆ ಚಿತ್ತಚೋರನಿಗಾಗಿ ನನ್ನ ಪ್ರತಿ ಅಂಗಾಂಗವೂ ತುಡಿಯುತ್ತಿದೆ)
ಎಂದು ಹಾಡುತ್ತಲೇ ರಾಜ್ ನನ್ನು ಪ್ರೀತಿಸುತ್ತಿದ್ದ ನರ್ಗೀಸ್ ಳ ಬಾಳಿನಲ್ಲಿ ಆ ಒಂದು  ಪತ್ರ ಬಿರುಗಾಳಿಯನ್ನೇ ಎಬ್ಬಿಸಿತು. ಈ ಕಾರಣದಿಂದ ರಾಜ್ ಕಪೂರ್ ನ ಪ್ರೇಮದ ನದಿಯಲ್ಲಿ ಜೊತೆಯಾಗಿ ಈಜುವ ಅದೃಷ್ಟ ದಕ್ಕದೇ ಹೋದಾಗ ಒಂಟಿಯಾದಳು ನರ್ಗೀಸ್. ಇದರ ಯಕಃಶ್ಚಿತ ಕಲ್ಪನೆಯ ಸುಳಿವೂ ಕೂಡ ಇಲ್ಲದವಳಿಗೆ ರಾಜ್ ಕಪೂರ್ ನ ಆ ವರ್ತನೆ ಆಘಾತ ತಂದಿತ್ತು.  ಹಾಗೆಂದು ಮೀನಾಕುಮಾರಿಯಂತೆ  ಧೃತಿಗೆಟ್ಟು ನಶೆಯೇರಿಸಿಕೊಳ್ಳಲಿಲ್ಲ;  ಮಧುಬಾಲಾಳಂತೆ ಮೋಹಪಾಶದಲ್ಲಿ ಬಿದ್ದು ಒದ್ದಾಡಲಿಲ್ಲ; ಮಿನುಗು ತಾರೆ ಕಲ್ಪನಾಳಂತೆ ಬಂಗಲೆಯಲ್ಲಿ ವಜ್ರದ ವಿಷದೊಳಗೆ ಲೀನವಾಗಲಿಲ್ಲ ಬದಲಾಗಿ ಆಕೆ ಕಂಡುಕೊಂಡದ್ದು ಜಗತ್ತಿನ ಪ್ರೇಮಿಗಳಿಗೊಂದು ಆದರ್ಶವಾಗಬಹುದಾದ ವಾಸ್ತವದ ಮಾದರಿ ಹಾದಿಯನ್ನೆಂದರೆ ನೀವು ನಂಬಲೇಬೇಕು. ಅದುವರೆಗೂ ಕುಸುಮಗಳಿಂದ ತುಂಬಿದ, ದುಂಬಿಗಳಿಂದ ನಾದಮಯವಾಗಿರುವ, ಸ್ವರ್ಗದ ದಾರಿಯಲ್ಲಿ ಕನಸುಗಳ ಅಂಬಾರಿಯನ್ನೇರಿ ಹೊರಟಿದ್ದ ನರ್ಗೀಸ್ ಳಿಗೆ ಈಗ ಇದ್ದಕ್ಕಿದ್ದಂತೆ ರಾಜ್ ನ  ಪ್ರೇಮದ ಪಲ್ಲಕ್ಕಿಯಿಂದ ಇಳಿಯುವ ಸಮಯವಾಗಿತ್ತು.
ನಿನ್ನ ದಾರಿ ಬೇರೆ ಇಳಿದುಬಿಡು ಎಂದು  ರಾಜ್ ಮೊರೆದನೋ ಅಥವಾ ತಾನೇ ಪ್ರತಿಷ್ಠೆಗೆ ಬಿದ್ದು ಇನ್ನು ಸಾಧ್ಯವಿಲ್ಲ ಎಂದು ತಾನೇ ಇಳಿದು ಹೋದಳೋ ಇಲ್ಲವೇ, ಇಲ್ಲದ ಗಾಸಿಪ್ ಗಳಿಂದ ಹುಟ್ಟಿಕೊಂಡ ಸಂದೇಹಗಳೇ ಬೇರೆ ಮಾಡಿದವೋ ಗೊತ್ತಿಲ್ಲ. ಅಂತೂ ರಾಜ್ ನ ಪ್ರೇಮದ ಪುಷ್ಪಕ ವಿಮಾನದಿಂದ ಇಳಿದೇ ಬಿಟ್ಟಿದ್ದಳು. ಹೋಗುವಾಗ ಮಾತ್ರ ನರ್ಗೀಸ್ 
"ರಸಿಕ್ ಬಲಮಾ ಯೇ ದಿಲ್ ಕ್ಯೂಂ ಲಗಾಯಾ 
ತುಝೆ ದಿಲ್ ಕ್ಯೂಂ ಲಗಾಯಾ".............
ಡೂಂಢೇ ಓ ಪಾಗಲ್ ನಯನಾ 
ಪಾಯೇ ನಾ ಏಕ್ ಪಲ್ ಚೈನಾ
(ಓ ಪ್ರೇಮವೇ ನಿನಗೇಕೆ ನನ್ನ ಹೃದಯವನ್ನು ಕೊಟ್ಟೆ......ಹುಡುಕುತ್ತಿವೆ ಹುಚ್ಚು ಕಣ್ಣುಗಳು ಕ್ಷಣವೂ ವಿರಮಿಸದಂತೆ ನಿನ್ನ) ಎಂದು ವಿರಹದ, ಪಶ್ಚಾತ್ತಾಪದ ಕಣ್ಣೀರನ್ನು  ಹರಿಸಿಯೇ ವಿದಾಯ ಹೇಳಿದಳು. ಹಾಗೆ ಹೃದಯತುಂಬಿ  ಹಾಡಿದ್ದಳೆಂಬುದಕ್ಕೆ ಸಾಕ್ಷಿಯೆಂದರೆ ಈ ಹಾಡಿನ ದೃಶ್ಯೀಕರಣದಲ್ಲಿ ಗ್ಲಿಸರಿನ್ ನ್ನೇ ಬಳಸಿರಲಿಲ್ಲ ನರ್ಗೀಸ್. ಆದರೂ ಕಣ್ಣೀರು ಮಾತ್ರ ಕೋಡಿಯಾಗಿ ಹರಿದಿತ್ತು. ಸುಳಿವೇ ಇಲ್ಲದ ಪ್ರೇಮಿಗಳ ಬದುಕಿನಲ್ಲಿ ಸಂದೇಹದ ಕಿಡಿಯೊಂದು ಬಿದ್ದು ಹೊತ್ತಿ ಉರಿಯಲಾರಂಭಿಸಿದಾಗ ಬದುಕು ಛಿದ್ರವಾಗಿರುತ್ತದೆ. ರಾಜ್ ಹಾಗೂ ನರ್ಗೀಸ್ ಳ ಪ್ರಣಯದ ಬಾಳಿನಲ್ಲಿ ಸಂಭವಿಸಿದ್ದು ಇದೇ. 
     ಹಾಗೆ ರಾಜ್ ನ ಹೃದಯ ಪಲ್ಲಕ್ಕಿಯಿಂದ ಇಳಿದು ಹೋದ ಮೇಲೆ  ಮುಂದೇನು ಎಂದು ಒಬ್ಬಂಟಿಯಾಗಿ ಅಲೆಯುತ್ತಿರುವಾಗಲೇ ಭಯಾನಕ ತೀರ್ಮಾನವನ್ನು ಕೈಗೊಂಡು ಆತ್ಮಹತ್ಯೆಯ ಬಾಗಿಲಿಗೂ ಹೋಗಿಬಂದಳು. ಈ ಸಂಕಟಗಳ ಮಧ್ಯೆ ಅವಳನ್ನು ಕರೆದು ಕೈಹಿಡಿದದ್ದು "ಮದರ್ ಇಂಡಿಯಾ" ಸಿನೇಮಾ. ಅದುವರೆಗೂ ರಾಜ್ ನನ್ನು ಕೇಳಿಯೇ ಪ್ರತಿಯೊಂದು ಹೆಜ್ಜೆ ಇಡುತ್ತಿದ್ದ ನರ್ಗೀಸ್ ಳಿಗೆ ಈಗ ಕೇಳದೇ ಮುನ್ನಡೆಯುವ ಅನಿವಾರ್ಯತೆ ಎದುರಾಗಿಬಿಟ್ಟಿತ್ತು. ಅದೇನೂ ಅರಿಯದ ಬಲಿಪಶುವಾದೆನೆಂಬ ಮುಗ್ಧತೆಯೋ ಅಥವಾ ರಾಜ್ ಮೇಲಿನ ಒಣ ಪ್ರತಿಷ್ಠೆ, ಸ್ವಾಭಿಮಾನದ ಪ್ರಲಾಪಕ್ಕೊ ಇಲ್ಲವೇ, ಕಾರಣವಿಲ್ಲದ ಮುನಿಸಿನ ಅಟ್ಟಹಾಸಕ್ಕೋ, ಅವಳಂತೂ ರಾಜ್ ನಿಂದ ಬೇರೆಯಾಗಿ ಮದರ್ ಇಂಡಿಯಾ ಸಿನೇಮಾದಲ್ಲಿ ನಟಿಸುವ ತೀರ್ಮಾನವನ್ನು ತೆಗೆದುಕೊಂಡೇ ಬಿಟ್ಟಿದ್ದಳು. ರಾಜ್ ಕಪೂರ್ ಪ್ರಕಾರ "ನರ್ಗೀಸ್ ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಾಗ, ಆಕೆಗೆ ಹೆಸರೊಂದನ್ನು ಬಿಟ್ಟರೆ, ಆ ಸಿನೇಮಾದ ಉಳಿದ ಯಾವ ಸಂಗತಿಗಳ ಬಗ್ಗೆಯೂ ಅರಿವಿರಲಿಲ್ಲ" ಹೌದು. ಇದರಿಂದ ಪ್ರತಿಯೊಂದು ಚಿತ್ರವನ್ನೂ ರಾಜ್ ಹಾಗೂ ನರ್ಗೀಸ್ ಇಬ್ಬರೂ ಸೇರಿ ಅಳೆದು ತೂಗಿ ಒಪ್ಪಿಕೊಳ್ಳುವ ತಾತ್ವಿಕತೆಯನ್ನಿಟ್ಟುಕೊಂಡಿದ್ದರೆಂದು  ತಿಳಿಯುತ್ತದೆ.
ಆ ಪ್ರೇಮವೆಂಬ ಮಾಯೆಯೇ ಹಾಗೆ. ಕೆಲವೊಮ್ಮೆ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿದರೆ, ಮಗದೊಮ್ಮೆ ಅಸಾಧ್ಯವಾದುದನ್ನೂ ಸಾಧಿಸಿಬಿಡುವಂತೆ ಮಾಡಿಬಿಡುತ್ತದೆ ಎಂಬುದಕ್ಕೆ ನರ್ಗೀಸ್ ಅತ್ಯುತ್ತಮ ನಿದರ್ಶನ. 
"ಲಗನ್ ಮೋರೆ ಮನ್ ಕಿ 
ಬಲಮ್ ನಹೀ ಜಾನೆ
ಸಜನ್ ನಹೀ ಜಾನೇ" 
(ಮನದ ಕಳವಳ ಹಾಗೂ ಹೃದಯದೊಲುಮೆಯನ್ನು ಅರಿಯಲೇ ಇಲ್ಲ ಪ್ರಿಯಕರ) 
ಎಂದು ನರ್ಗೀಸ್ ಹಾಡುವುದನ್ನು ಕೊನೆಯವರೆಗೂ ಕೇಳಿಸಿಕೊಳ್ಳಲೇ ಇಲ್ಲ ರಾಜ್. ಕುಪಿತಳಾಗದೇ ಆಕೆ ಆತ್ಮಸ್ಥೈರ್ಯದ ಬೆಳದಿಂಗಳಿನಲ್ಲಿ ಸಾಗಿ ಬೆಳಗಾಗುವುದರೊಳಗಾಗಿ ದಂತಕಥೆಯಾಗಿ ತನ್ನ ಹೆಸರನ್ನು ಜಗತ್ತಿನ ಇತಿಹಾಸದಲ್ಲಿ ದಾಖಲು ಮಾಡಿಬಿಟ್ಟಿದ್ದಳು.
      ಅರಿವಿತ್ತೋ ಅರಿವಿರಲಿಲ್ಲವೋ  'ಮದರ್ ಇಂಡಿಯಾ' ಎಂಬ ಅಭುತಪೂರ್ವ ಸಿನೇಮಾವೊಂದರಿಂದಲೇ ಆಕೆಯ ಜೀವನದ ದಿಕ್ಕುದೆಸೆಗಳೇ ಬದಲಾಗಿಬಿಟ್ಟವು.  ಹೌದು. ಆಕೆ ಅಂದುಕೊಂಡದ್ದನ್ನು ತನ್ನ ಮೊದಲ ಸ್ವತಂತ್ರ ಆಯ್ಕೆಯ ಸಿನೇಮಾವೊಂದರಿಂದಲೇ ಸಾಧಿಸಿಬಿಟ್ಟಳು. ಆಕೆ ಈ ತೀರ್ಮಾನದ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಳೆಂದರೆ ಅಂದು  ಜಗತ್ತು ನಂಬಲಿಲ್ಲ. ರಾಜ್ ಇನ್ನೆಂದೂ ತನ್ನ ಸಮೀಪ ಸುಳಿಯಬಾರದೆಂದು ದೂರವಿಡುವುದು ಆಕೆ ಹೊಡೆದ ಮೊದಲ ಹಕ್ಕಿಯಾದರೆ, ಮತ್ತೊಂದು ತನ್ನ ಮೊದಲ ಪ್ರೀತಿಯನ್ನು ಬಲಿಕೊಟ್ಟು,  ಸುನೀಲ್ ದತ್ತನಿಂದ ಜೀವ ಪಡೆಯುವುದಾಗಿತ್ತು. 
    ಮದರ್ ಇಂಡಿಯಾದಲ್ಲಿನ ಅದೊಂದು ಹೃದಯವಿದ್ರಾವಕ ದೃಶ್ಯ ನರ್ಗೀಸ್ ಹಾಗೂ ಸುನೀಲ್ ದತ್ತ ರ ಸುನೀಲ ಸಂಬಂಧಕ್ಕೆ ಮುನ್ನುಡಿ ಬರೆದುಬಿಟ್ಟಿತ್ತು. ಮದರ್ ಇಂಡಿಯಾ  ಕಥೆಯಲ್ಲಿ ತಾಯಿ ರಾಧಾ( ನರ್ಗೀಸ್)ಳು ಡಕಾಯಿತನಾಗಿ ಬದಲಾಗಿದ್ದ ತನ್ನ ಕರುಳ ಕುಡಿ ಬ್ರಿಜು ( ಸುನೀಲ್ ದತ್ತ) ನನ್ನು ಹುಲ್ಲಿನ ಬಣವೆಯಲ್ಲಿ ಬಚ್ಚಿಟ್ಟು ಉಳಿಸಿಕೊಳ್ಳುವ ಸನ್ನಿವೇಶದ ಚಿತ್ರೀಕರಣದಲ್ಲಿ ಅವಘಡವೊಂದು ಸಂಭವಿಸಿಬಿಟ್ಟಿತ್ತು. 1957 ರ ಸಮಯದಲ್ಲಿ ಒಣ ಹುಲ್ಲಿನ ಬಣವೆಗಳಿಗೆ ಬೆಂಕಿಯಿಟ್ಟು ಚಿತ್ರೀಕರಣ ಮಾಡುವಾಗ ಬೀಸಿದ ಗಾಳಿಯಿಂದಾಗಿ ಹೊತ್ತಿಕೊಂಡ ಬೆಂಕಿ ನಿಯಂತ್ರಣಕ್ಕೆ ಬಾರದೇ ನರ್ಗೀಸ್ ಅಗ್ನಿಯ ಮಧ್ಯೆ ಸಿಲುಕಿಕೊಂಡಳು. ತಕ್ಷಣ ಎಚ್ಚೆತ್ತುಕೊಂಡು ಮಧ್ಯೆ ಧುಮುಕಿದ  ಸುನೀಲ್ ದತ್ತ ಅವಳ ಮೇಲೆ ಹೊದಿಕೆ ಹೊದಿಸಿ ಹೊತ್ತು ತಂದು ಉರಿಯುವ ಬೆಂಕಿಯಿಂದ ಅವಳನ್ನು ಪಾರು ಮಾಡಿದ್ದ. ಇದು ಆಕೆಯ ಎದೆಯಲ್ಲಿದ್ದ ರಾಜ್ ಪ್ರೇಮದಿಂದಾದ ಮೋಸದ ಉರಿಯನ್ನು ನಂದಿಸಿ, ಜೀವ ಉಳಿಸಿದ ಸುನೀಲ್ ದತ್ತ ನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿತ್ತು. ಮುರಿದು ಬಿದ್ದ ಪ್ರೀತಿಯ ಮಹಲನ್ನು ಕಟ್ಟಬೇಕೆಂದು ಹೆಣಗಾಡಿದ ರಾಜ್ ಕಪೂರ್ ಒಮ್ಮೆ ಆಕಸ್ಮಾತ್ ಆಗಿ ನರ್ಗೀಸ್ ಳನ್ನು ಭೇಟಿಯಾಗುತ್ತಾನೆ.  ಮಾತುಗಳೇ ಹೊರಡದೇ ಮೌನದ ಕಡಲಿನಲ್ಲಿ ತೇಲಿದ ಆದ್ರ್ರ ಸಮಯದಲ್ಲಿ ನರ್ಗೀಸ್ ಳ ಕೈಹಿಡಿದು "ಮರಳಿ ಬರುವೆಯಾ ಎನ್ನ ಹೃದಯದರಮನೆಗೆ” ಎಂದು ಕೇಳಿದ. ಅದಾಗಲೇ ಆತನೊಂದಿಗೆ ಕಂಡ ಕನಸುಗಳನ್ನೆಲ್ಲಾ ಹೆಡೆಮುರಿ ಕಟ್ಟಿ ಸಮಾಧಿಮಾಡಿದ್ದ ನರ್ಗೀಸ್ ಳ ಹೃದಯದೊಳಗಿನ ಪ್ರೀತಿಯ ಚಿಲುಮೆ ಬತ್ತಿಹೋಗಿತ್ತು. ಕಾಲ ಮಿಂಚಿ ಹೋಗಿತ್ತು. ತಲೆಯೆತ್ತಿ ಉತ್ತರಿಸಿದ ನರ್ಗೀಸ್ ಳ "ನಿನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿರು" ಎಂಬ ಮಾತುಗಳನ್ನು ರಾಜ್ ಕಪೂರ ಜೀವವಿರುವವರೆಗೂ ಮರೆಯಲಾಗಲಿಲ್ಲ. ರಾಜ್ ನನ್ನು ಬಿಟ್ಟು ಏಕಾಂಗಿತನದೊಂದಿಗೆ ಗೆಳೆತನ ಮಾಡಿದ್ದ ನರ್ಗೀಸ್ ತನ್ನ ದಾರಿಯಲ್ಲಿ ಬಹು ದೂರ ಬಂದಾಗಿತ್ತು. ಈ ಮರಳುಗಾಡಿನ ಏಕಾಂತದ ಪಯಣದ ಮಧ್ಯದಲ್ಲಿ ಸುನೀಲ ದತ್ತ ನ ಒಲುಮೆಯ ಓಯಾಸಿಸ್ ದಕ್ಕಿಬಿಟ್ಟಿತ್ತು. ಅಲ್ಲಿಂದ ಪ್ರಾರಂಭವಾದ ಅವರಿಬ್ಬರ ಪ್ರೇಮಕಥನ ದಾಖಲಾದ ಪುಸ್ತಕದ ಹೆಸರು ‘ಡಾರ್ಲಿಂಗ್ ಜಿ’. ಈ ಕೃತಿಯಲ್ಲಿ ಲೇಖಕರಾದ ಕಿಶ್ವರ್ ದೇಸಾಯಿಯವರು ಅಕ್ಷರಿಸಿದಂತೆ ನರ್ಗೀಸ್ ಳ ಮಾತುಗಳಿವು - -  “If it were not for him, perhaps I would have ended my life before the 8th of March. For I alone know the turmoil that was going through me. ‘I want you to live,’ he said and I felt I had to live. Begin all over again.” ಒಬ್ಬರನ್ನೊಬ್ಬರು ‘ಡಾರ್ಲಿಂಗ್ ಜಿ’ ಎಂದೇ ಸಂಬೋಧಿಸಿಕೊಳ್ಳುತ್ತಿದ್ದ ಈ ದಂಪತಿಗಳು ಸಿನೇಮಾ ಬಿಟ್ಟರೆ ತಮ್ಮನ್ನು ತೊಡಗಿಸಿಕೊಂಡಿದ್ದು, ವಿಕಲಚೇತನ ಮಕ್ಕಳ ಕಲ್ಯಾಣದ ಸಾಮಾಜಿಕ ಸೇವೆಯಲ್ಲಿ. ಇದೆಲ್ಲವನ್ನು ಗಮನಿಸಿಯೇ ಆಕೆಗೆ ಜಗತ್ತು, ‘ಶತಮಾನ ಕಂಡ ಶ್ರೇಷ್ಠ ನಟಿ’ಯೆಂದು ಗೌರವವನ್ನು ಸಲ್ಲಿಸಿತು. ಭುವನವೇ ಭಾರತೀಯ ಚಿತ್ರರಂಗದತ್ತ ಹೊರಳಿನೋಡುವಂತೆ ಮಾಡಿದ ಈಕೆಯ ‘ಮದರ್ ಇಂಡಿಯಾ’ ಭಾರತೀಯ ಅಮೋಘ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿಯನ್ನು ಹೊಂದಿದೆ.
ರಾಜ್ ನ ಪ್ರೀತಿಯ ಮೋಸವನ್ನು ನುಂಗಿಕೊಂಡ ದುಃಖದಲ್ಲಿ ಒಪ್ಪಿಕೊಂಡ ‘ಮದರ್ ಇಂಡಿಯಾ’ ಸಿನೇಮಾ ಆಕೆಗೆ ಇನ್ನಿಲ್ಲದ ಹೆಸರನ್ನು ಜೊತೆಗೆ ಫಿಲ್ಮಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಅಪೂರ್ವವಾದ ಸಿನೇಮಾ ಕುರಿತು ನ್ಯೂಯಾರ್ಕ ಟೈಮ್ಸ ಪತ್ರಿಕೆ ಬಣ್ಣಿಸಿರುವುದು ಹೀಗೆ -
"A defining film in the history of Bollywood, the Hindi film industry based in Bombay, Mehboob Khan's ''Mother India'' (1957) is often said to have helped set the pattern for the nearly 50 years of Indian film that has followed it."  
ಮದರ್ ಇಂಡಿಯಾ ಸಿನೇಮಾ ಭಾರತೀಯ ಚಲನಚಿತ್ರರಂಗದಲ್ಲಿ ಹುಟ್ಟುಹಾಕಿದ ಸೆನ್ಸೇಷನ್ ಎಂತಹುದೆಂಬುದಕ್ಕೆ ಮೇಲಿನ ಮಾತುಗಳು ನಿದರ್ಶನವನ್ನೊದಗಿಸುತ್ತವೆ. ಜಗತ್ತಿನ ಅಕಾಡೆಮಿ ಪ್ರಶಸ್ತಿಯ ವಿದೇಶಿ ಭಾಷೆಯ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮಾಂಕಿತವಾದ ಭಾರತದ ಪ್ರಪ್ರಥಮ ಚಲನಚಿತ್ರ ಎಂಬ ಹೆಗ್ಗಳಿಕೆ ಈ 'ಮದರ್ ಇಂಡಿಯಾ' ಚಲನಚಿತ್ರದ್ದು. 2011ರಲ್ಲಿ ರೀಡಿಫ್.ಕಾಂ ಸಂಸ್ಥೆಯಂತೂ ನರ್ಗಿಸ್ ಅವರನ್ನು ‘ಸಾರ್ವಕಾಲಿಕವಾದ ಶ್ರೇಷ್ಠ ನಟಿ’ ಎಂದು ಹೆಸರಿಸುತ್ತಾ “ವೈವಿಧ್ಯತೆ, ಅಭಿವ್ಯಕ್ತಿ, ಪ್ರಸನ್ನತೆ ಮತ್ತು ಅಪ್ಯಾಯಮಾನತೆಗಳ ಸಂಗಮವನ್ನು ಬಿಂಬಿಸುವ ಸಂಭ್ರಮದ ನಟಿ ನರ್ಗಿಸ್ ದತ್’’ ಎಂದು ವರ್ಣಿಸಿದಾಗ, ಜಗತ್ತು ಇದು ಅವಳ ಸಾಧನೆಗೆ ಸಂದ ಅತ್ಯುತ್ತಮ ನುಡಿನಮನವೆಂದು ಬೀಗಿತ್ತು.
     ಹೀಗೆ ಸುನೀಲ ದತ್ತನೊಂದಿಗೆ ಸುಂದರವಾದ ಬದುಕನ್ನು ಕಟ್ಟಿಕೊಂಡ ನರ್ಗೀಸ್ ಳಿಗೆ ಹಾದಿ ತಪ್ಪುತ್ತಿದ್ದ ಮಕ್ಕಳ ಚಿಂತೆ ಕಾಡಲಾರಂಭಿಸಿತು. ಈ ಹೊತ್ತಿನಲ್ಲೇ ಅವಳೊಡಲಿಗೆ ಬಂದಡರಿದ ಕ್ಯಾನ್ಸರ್ ಮಹಾಮಾರಿ ಕೊನೆಯವರೆಗೂ ಅವಳನ್ನು ಕೈಬಿಡಲೇ ಇಲ್ಲ. ಅಂತಿಮವಾಗಿ 1981 ರಲ್ಲಿ ಆಕೆ  ಕೊನೆಯುಸಿರೆಳೆದಾಗ " ಕಾ ಸೇ ಕಹಾ ಮೈ ಬಹಾನಾ" (ಯಾರಿಗೆ ಹೇಳಲಿ ನನ್ನ ದುರಂತ ಕಥೆಯನ್ನು) ಎಂದು ಪರದೆಯ ಮೇಲೆ ಹಾಡಿದ್ದ ಹಾಡನ್ನು ಹೃದಯದೊಳಗೆ ಮತ್ತೊಮ್ಮೆ ಹಾಡಿಕೊಂಡಿರಬೇಕು. ಅಂದು ಅಂತಿಮ ದರ್ಶನಕ್ಕೆ ಬಂದ ರಾಜ್ ಕಪೂರ್ ನ ಕಪ್ಪುಕನ್ನಡಕದೊಳಗೆ ಹೊಳೆಯುವ ಕಣ್ಣೀರು ಮಡುಗಟ್ಟಿ ನಿಂತಿದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ರಾಜ್ ಕಪೂರ್ ನ ಆ ದುಸ್ಥಿತಿಯನ್ನು ನೋಡಿ ನರ್ಗೀಸ್ ಹಾಡಿದ ಸಾಲನ್ನು ನಾವು ಹೀಗೆ ಹಾಡಬೇಕಷ್ಟೇ.
"ಏಕ್ ಬಾರ್ ಕಹೋ ಓ ಜಾದೂಗಾರ್ 
ಯೇ ಕೌನಸಾ ಖೇಲ್ ರಚಾಯಾ" 

Thursday 26 March 2020

ಗಜಲ್

ಗಜಲ್

ನಿನ್ನ ಸಮಾಧಿಯ ಮೇಲೆ‌ ಗುಲಾಬಿಯನ್ನಿಡುವಾಸೆ ಗಾಲಿಬ್

ತೋರಿಬಿಡು ಕೈಹಿಡಿದು ಒಮ್ಮೆ ನಿನ್ನ ಸಮಾಧಿಯ ಹಾದಿ


ಶರಾಬಿನ ಗುಟುಕನ್ನು ನಿನ್ನೊಡನೆ ಹೀರುವಾಸೆ ಗಾಲಿಬ್

ಹೇಳಿಬಿಡು ತೂಗಿ, ಮದವೇರಿದ ಕಾವ್ಯ ಸಮಾಧಿಯ ಹಾದಿ


ಹಸಿದ ಹೊಟ್ಟೆಗೆ ಚೂರು ರೊಟ್ಟಿಯೂ‌ ನೀನೇ ಗಾಲಿಬ್

ಆಗಲಾದರೂ ತೋರೀತೇ ನಿನ್ನ ಪ್ರೇಮ ಸಮಾಧಿಯ ಹಾದಿ


ನಿನ್ನೊಡನೆ ಆಸ್ಥಾನ ಕವಿಯಾಗುವ ಹಂಬಲ‌ ಗಾಲಿಬ್ 

ಹಾಡುವ ಶೇರ್ ಕೇಳಿ‌ ಹಿಡಿದುಬಿಡುವೆ ಒಮ್ಮೆ ಸಮಾಧಿಯ ಹಾದಿ


ನಿನ್ನೊಡನೆ ಮಾವಿನ ಮಾಧುರ್ಯ ಸವಿಯುವಾಸೆ ಗಾಲಿಬ್

ಸವಿಯ ಬಿಡು ನಿನ್ನ ರಸಗಾನದ ರಹಸ್ಯ ಸಮಾಧಿಯ ಹಾದಿ


ಬೆಳಕಿಲ್ಲದ ದಾರಿಯಲಿ ನಿನ್ನೊಡನೆ ನಡೆಯಬೇಕೆಂದಿರುವೆ ಗಾಲಿಬ್

ಅರಿಯಬಿಡು ಒಮ್ಮೆ ಮೈಮರೆತ ಬೆಳಕಿನ ಸಮಾಧಿಯ ಹಾದಿ


ನೀ ಹೊರಟ ಪಲ್ಲಕ್ಕಿಯ ಹಿಂದೆ ನಿತ್ಯ ಹೆಜ್ಜೆ ಹಾಕುವೆ ಗಾಲಿಬ್

ಒಮ್ಮೆಯಾದರೂ ತೋರುವೆಯೆಂದು ಯೋಗ ಸಮಾಧಿಯ ಹಾದಿ


ಹಾರ ಸನ್ಮಾನ ಪ್ರಶಸ್ತಿಗಳಿಗೆ ಕೊರಳೊಡ್ಡುವೆ ಗಾಲಿಬ್

ಮೆರೆಯಬೇಕೆಂದಲ್ಲ, ನನಗೂ ಉಂಟೆಂದು ಸಮಾಧಿಯ ಹಾದಿ


ನಿನ್ನ ಬಯಸಿದ ಜಾನ್ ಳ ಜೀವವಾಗಿಬಿಡುವೆ ಗಾಲಿಬ್

ನಿನ್ನೆದುರಿಗೇ ತೆರಳಿಬಿಡಬಹುದಲ್ಲ ಆ ಸಮಾಧಿಯ ಹಾದಿ


ನೀ ಬಳಲಿದ ಗಾಯಗಳ ನೋವಾಗುವೆ ಗಾಲಿಬ್

ಇದಕ್ಕಿಂತ ಭಾಗ್ಯವೇ ದಕ್ಕಲು ನೋವ ಸಮಾಧಿಯ ಹಾದಿ


ನಕ್ಷತ್ರದಂತೆ ಉದುರಿ ಹೋದ ನಿನ್ನ ಮಗುವಾಗುವೆ ಗಾಲಿಬ್

ಅಪ್ಪಿಕೊಂಡೇ ಅನುಭವಿಸಬಹುದಲ್ಲ ನಿನ್ನ ಆತ್ಮ ಸಮಾಧಿಯ ಹಾದಿ


ನೀ‌ ಮುಳುಗೇಳುವ ತುಪ್ಪದ ಬಟ್ಟಲು ತಂದಿಡುವೆ ಗಾಲಿಬ್

ಆನಂದಿಸಬಹುದಲ್ಲ ಮದವೇರುವ ನಿನ್ನ ಭಾವ ಸಮಾಧಿಯ ಹಾದಿ


ಅಲೆಮಾರಿಯಾಗಿ ಹಿಂಬಾಲಿಸುವೆ ನಿನ್ನ ಓ ಗಾಲಿಬ್

ದನಿಗೂಡಿಸಿ ಕಲಿಯಬಹುದಲ್ಲ, ನೀ ಕಟ್ಟುವ ಸಮಾಧಿಯ ಹಾದಿ


ನಿನ್ನ ಛೇಡಿಸುವ ಕವಿಗಳ ಸಭೆಯಲ್ಲಿರುವೆ ಗಾಲಿಬ್ 

ಒಳಗಿಳಿಸಿಕೊಳ್ಳಬಹುದಲ್ಲ ಅವರಿಗೆ ನೀ ತೋರುವ ಸಮಾಧಿಯ ಹಾದಿ


ನೀ ಬರೆದ ಕಸೀದ್ ಗಳನ್ನು ಗುರಿ ತಲುಪಿಸುವೆ ಗಾಲಿಬ್

ಒಂದಂಶವಾದರೂ ಎದೆಗಿಳಿಯಬಹುದಲ್ಲ ಅದರಲ್ಲಿರುವ ಸಮಾಧಿಯ ಹಾದಿ


ನಿನ್ನ ವಿಧೇಯ ಹಂಬಲದ ಶಿಷ್ಯನಾಗುವೆ ಗಾಲಿಬ್ 

ಅಂತರಂಗದಿ ಕುಣಿಯಬಹುದಲ್ಲ ಕಂಡು ಸಮಾಧಿಯ ಹಾದಿ


ಉಮ್ರಾವ್ ಳ ಪೂಜೆಗೆ ಹೂಗಳನ್ನಾಯ್ದು ತಂದಿಡುವೆ ಗಾಲಿಬ್

ಮಥಿಸಬಹುದಲ್ಲ ಕಂಡು ನಿಮ್ಮಿಬ್ಬರ ಭಿನ್ನ ಸಮಾಧಿಯ ಹಾದಿ


ನಿನ್ನ ಹೋರಾಟದ ಬದುಕಿಗೆ ಲೇಖನಿಯಾಗುವೆ ಗಾಲಿಬ್

ಕಣ್ಣೀರು ಹಾಕಬಹುದಲ್ಲ, ಕಂಡು ನಿನ್ನ ಕನಸುಗಳ ಸಮಾಧಿಯ ಹಾದಿ


ಅಂಡಲೆಯುವ ನಿನಗೆ ಓಡುವ ಅಶ್ವವಾಗುವೆ ಗಾಲಿಬ್

ತುಳಿಯಬಹುದಲ್ಲ ನಿನ್ನೊಡನೆ ಬಹುಬೇಗ ಸಮಾಧಿಯ ಹಾದಿ


ನಿನ್ನೊಡನೆ ಸದಾ ಜೊತೆಗಿರುವ ಊರುಗೋಲಾಗುವೆ ಗಾಲಿಬ್

ಕಣ್ಣಾರೆ ಕಾಣಬಹುದಲ್ಲ, ಮೊಗಲರು ಹಿಡಿದ ಸಮಾಧಿಯ ಹಾದಿ


ನಿನ್ನ ಸಮಾಧಿಯ ಮೇಲಿನ ಶಿಲೆಯಾಗುವೆ ಗಾಲಿಬ್

ತೋರಿಬಿಡಬಹುದಲ್ಲ ಬಂದವರಿಗೆ ಅವರವರ ಸಮಾಧಿಯ ಹಾದಿ


ನಿನ್ನ ಸಮಾಧಿಯ‌‌ ಮೇಲಿನ ಬರಹವಾಗುವೆ ಗಾಲಿಬ್ 

ಬೆಳಕಾಗಬಹುದಲ್ಲ ತೋರಿ, ಬಂದವರ ಕತ್ತಲೆ ಸಮಾಧಿಯ ಹಾದಿ


Wednesday 25 March 2020

ಗಾಲಿಬ್@150

ಗಾಲಿಬ್@150
ದು ಪ್ರಾತಃಕಾಲ ೫ ಗಂಟೆಯ ಸಮಯ. ಶುಭೋದಯದ ಹೊಸ್ತಿಲಲ್ಲಿ ನಿಂತ ಪ್ರಕೃತಿಯು ವಸಂತಾಗಮನದಿಂದ ಉಲ್ಲಾಸಗೊಂಡಿತ್ತು. ಚೈತ್ರದ ಚಿಗುರಿನ ಸವಿಯನ್ನುಣಲು ಕಾದು ಕುಳಿತ ಗಿಳಿ, ಕೋಗಿಲೆ ,ರತುನಗಳು  ತಾ ಮುಂದು ನಾ ಮುಂದು ಎಂದು ಸ್ಪರ್ಧೆಗಿಳಿದು ಮೈಮುರಿಯುತ್ತಿದ್ದವು. ಮನೆಯ ಮುಂದಿನ ಮಲ್ಲಿಗೆ ದಾಸವಾಳ ಜಾಜಿ ಗಳು ತಂಗಾಳಿಗೆ ಮೈಯ್ಯೊಡ್ಡಿ ಮೊಗ್ಗುಗಳನ್ನರಳಿಸುತ್ತಿದ್ದ ಸುಸಮಯ. ಅದಾಗಲೇ ಅಂಗಳದ ತಲೆಯ ಮೇಲೆಲ್ಲಾ ಚಾಚಿ ಮುಗಿಲು ಚುಂಬಿಸುವ ಕೊಂಬೆಗಳಿಂದ ನೃತ್ಯಗೈಯ್ಯುತ್ತಿದ್ದ ಬೇವು, ಹೆಂಗಳೆಯರ ಬೆಂಡೋಲೆಯಂತಹ  ಚಿತ್ತಾರದ ಹಳದಿ ಹೂಗಳಿಂದಲಂಕರಿಸಿಕೊಳ್ಳುತ್ತಿದ್ದ ಶುಭಘಳಿಗೆ. ಕಣ್ಣ ಮುಂದಿನ ಪುಟ್ಟ ಮಗುವಿನಂತಿದ್ದ ಮಾವಿನ ಸಸಿಯೂ ಚಿಗುರೆಲೆಗಳಿಂದ ಸಿಂಗರಿಸಿಕೊಂಡು ಬರುವ ನವಯುಗಾದಿಯ ಹಬ್ಬಕ್ಕೆ ಹೊಸದಿರಿಸನ್ನುಡಲು ತಯಾರಿ ನಡೆಸುತ್ತಿತ್ತು. ಪಕ್ಕದಲ್ಲಿದ್ದ ಬ್ರಹ್ಮಕಮಲದ ಎಳೆಯ ಸಸ್ಯವೂ ತಾನೇನು ಕಮ್ಮಿ ಎಂದು ಉದ್ದನೆಯ ಚಾಮರದಂತಹ ಎಳೆಯ ಎಲೆಗಳನ್ನುಟ್ಟುಕೊಂಡು ಬರಲಿರುವ ಉತ್ಸವಕ್ಕಾಗಿ ಚಿಗಿಯುತ್ತಿರುವಂತಿತ್ತು. ನವ ವಸಂತದಲ್ಲಿ ರಾಗವೈಭವದಿಂದ ಹಾಡಿ ನಲಿಯಲು ದನಿಯನ್ನು ಚಿಲಿಪಿಲಿಗುಟ್ಟಿ ತಿದ್ದಿ ತೀಡಲು ಸಿದ್ಧವಾದಂತಿದ್ದವು ಕೋಗಿಲೆ, ಗುಬ್ಬಿ, ಗೀಜಗ, ಭ್ರಮರಗಳು. ಮುನ್ಸೂಚನೆಯಾಗಿ  ಗುಂಯ್ ಎನ್ನುವ ದುಂಬಿಗಳು ಏಕತಾರಿಯನ್ನು ಹಿಡಿದು ಕುಸುಮಗಳನ್ನು ಹುಡುಕಿ ಹೊರಟಂತಿದ್ದವು. ಹೀಗೆ ಪ್ರಕೃತಿಯ ಅಣುರೇಣು ತೃಣಕಾಷ್ಠವೂ ಆಗಮಿಸಿರುವ ಯುಗಾದಿಯ ಮನ್ವಂತರಕೆ ಹಾತೊರೆಯುತ್ತಿದ್ದವು. ಈ ಶುಭಘಳಿಗೆಯನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿದ ಪ್ರಕೃತಿ ಮಾತೆಗೆ‌ ಹೃದಯದಲ್ಲಿಯೇ ಶಿರಸಾಷ್ಟಾಂಗ ಶರಣು ಶರಣಾರ್ಥಿಗಳನ್ನು ಸಲ್ಲಿಸಿ ಬಾಗಿದೆ. 

          

          ಇಂತಹ ತಂಗಾಳಿಯ ಮಬ್ಬು ನಸುಕಿನ ಅಮೃತಘಳಿಗೆಗೆ ಯಾವುದಾದರೊಂದು ಕಾವ್ಯಾರಾಧನೆಯ ಘಮಲು ಸೇರಿದರೆ ಅದೆಷ್ಟು ಚೆನ್ನ ! ಸ್ವರ್ಗಕ್ಕೆ ಕಿಚ್ಚು ಹಚ್ಚುವುದೊಂದೇ ಬಾಕಿ. ಹಾಗೆಂದುಕೊಂಡು‌ ದೀಪ ಬೆಳಗಿಸಿ ಗ್ರಂಥಾಲಯದಲ್ಲೊಮ್ಮೆ ಇಣುಕಿ ಹುಡುಕಿದೆ. ಮಿರ್ಜಾ ಗಾಲಿಬನ ಕುರಿತಾದ ಪುಸ್ತಕವೊಂದು ಕೈಗೆ ದಕ್ಕಿತು. ಇನ್ನೇನು ಬೇಕು ? ನವ ಯುಗಾದಿಯ ಶುಭೋದಯವನ್ನಾಚರಿಸಲು. ಬೆಳಗಿನ ತಂಗಾಳಿಗೆ ಸುಗಂಧವಾಗಿ ಸುಳಿದ ಮಿರ್ಜಾ ಗಾಲಿಬ್ ನನ್ನು ಆಸ್ವಾದಿಸುವುದೆಂದರೆ, ಜಗದ ಕಾವ್ಯನಶೆಯನ್ನೆಲ್ಲಾ  ಎದೆಯೊಳಗಿಳಿಸಿಕೊಂಡಂತೆ! ಹೌದು. ಆತ ಕೇಳುತ್ತಾನೆ 


"ಗಾಲಿಬ್ ಶರಾಬ್ ಪೀನೆ ದೇ ಮಸಜಿದ್ ಮೆ ಬೈಠಕರ್

ಯ ವೋ ಜಗಾ ಬಥಾ ಜಹಾ ಖುದಾ ನಹೀ"

( ಮಸೀದಿಯಲ್ಲಿ ಕುಳಿತು ಮದಿರೆ ಕುಡಿಯಲು ಬಿಡುಇಲ್ಲಾ ದೇವನಿಲ್ಲದ ಸ್ಥಳವನ್ನಾದರೂ ತೋರು) 

ಎಂದು.‌ ಸ್ಥಾಪಿಸಿಕೊಂಡ ಸಾಂಸ್ಥಿಕ ವ್ಯವಸ್ಥೆ, ಧರ್ಮ, ಸಂಪ್ರದಾಯ, ನಂಬಿಕೆಗಳು ಅವನೆತ್ತುವ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸೋಲುವುದನ್ನು ಕಾಣುತ್ತೇವೆ. ಇದನ್ನೇ ಅಲ್ಲವೇ ಕನದಕದಾಸರ ಬಾಳೆಹಣ್ಣಿನ ರೂಪಕವೂ ಮತ್ತೊಂದು ಬಗೆಯಲ್ಲಿ ಜಗತ್ತನ್ನು ಪ್ರಶ್ನಿಸುತ್ತಿರುವುದು.ಶಬ್ದ ರೂಪಕಗಳಷ್ಟೇ ವಿಭಿನ್ನ, ಪ್ರತಿಪಾದಿಸುತ್ತಿರುವ ಇಬ್ಬರ ತಾತ್ವಿಕತೆಯ ದರ್ಶನವೂ ಒಂದೇ. 

     

              ಕವಿಯೊಬ್ಬ ಹಾಡುತ್ತಾನೆ- "ದೇವನ ಮೆನೆಯಿದು ಈ ಜಗವೆಲ್ಲಾ ಬಾಡಿಗೆದಾರರು ನಾವುಗಳೆಲ್ಲಾ" ಈ ಸತ್ಯಶೋಧನೆಯಿಂದ ಸಮಾಜವನ್ನು ಜಾಗೃತಗೊಳಿಸುವುದು ಗಾಲಿಬ್ ನ ಕವಿತೆಯ ಗುರಿಗಳಲ್ಲೊಂದಾಗಿತ್ತು. ಗಾಲಿಬನ ಕವಿತೆಗಳೆಂದರೆ ನಿಶಾಂತವಾಗಿ ಹರಿಯುವ ನದಿಯ  ಮಂಜುಳಗಾನ ; ಏಕಾಂತದ ತಪದಲಿದ್ದು ಆಚರಿಸುವ ಮೃದು ಮಧುರ ಧ್ಯಾನ; ಶಾಂತವಾಗಿ ದಡಕಪ್ಪಳಿಸಿ ಚುಂಬಿಸುವ ಕಡಲಲೆಗಳ ಮೊರೆವ ಯಾನ; ಹಸಿರೆಲೆಗಳ‌ ಮರೆಯಿಂದ ಇಣುಕಿ ಹರಿಸುವ ಗಿಳಿ ಕೋಗಿಲೆಗಳ ರಸಗಾನ. ಒಡಲೊಳಗಿಳಿಸಿಕೊಂಡ ಮದಿರೆಯ ನಿಶಾಗಾನ. ಈ  ಮಾಧುರ್ಯದ ಬನಿಯ ಜೊತೆ ಜೊತೆಗೆ ಮಿರ್ಜಾ ಅಸಾದುಲ್ಲಾಬೇಗ್ ಖಾನ್ ಗಾಲಿಬ್ ನ ಕಾವ್ಯದ ಇರಿಯುವಿಕೆಯೂ ಅದೆಷ್ಟು ಆಳವಾಗಿತ್ತೆಂದರೆ ಸ್ವತಃ ಮಹಾಕವಿಗಳಲ್ಲದೆ, ಆಳುವ ಅರಸರೇ ಕೇಳಿ ಬೆಚ್ಚಿಬೀಳುತ್ತಿದ್ದರು.
ಆ ಪ್ರಸಂಗವೊಂದು ಹೀಗಿದೆ -  ಮೊಗಲರ ದೊರೆಯ ಮಗ ಜಾಫರ್ ನ ಕಾವ್ಯಗುರುವಾಗಿದ್ದ ಮಹಾಕವಿ ಜೈಕ್. ಅರಮನೆಗೆ ಹೋಗುವ ಬೀದಿಯಲ್ಲೊಮ್ಮೆ ಆಕಸ್ಮಾತಾಗಿ ಸಿಕ್ಕ  ಜೈಕ್ ಕವಿಯ ಪಲ್ಲಕ್ಕಿಯಲ್ಲಿನ ಮೆರವಣಿಗೆಯನ್ನು ಕಂಡ ಗಾಲಿಬ್ " "ಮಹಾರಾಜರ ಕೃಪೆಯೆಂದು ಈ ಬೀಗುವಿಕೆಯೇ ' ಎಂದು ಹಾಡಿದ. ದೂರು ದರ್ಬಾರಿಗೆ ಹೋಯಿತು. ಆಹ್ವಾನಿಸಿದ ಕವಿಗೋಷ್ಠಿಗೆ ಮುನ್ನ ಇದರ ಬಗ್ಗೆ ಸ್ಪಷ್ಟನೆ ಕೇಳಿದಾಗ ಗಾಲೀಬನೆಂದ 'ಜೈಕ್‌‌ ಕವಿಗೆ ನಾನು ಅಪಮಾನಿಸಿಲ್ಲ.' ಹಾಗಾದರೆ ಆ ಕವಿತೆಯ ಸಾಲನ್ನೊಮ್ಮೆ ಪೂರ್ಣವಾಗಿ ಹೇಳು ಎಂದು ಒತ್ತಾಯಿಸಲಾಗಿ -ತಡಮಾಡದೇ ಗಾಲಿಬ್ ಆ ಆಶುಕವಿತೆಯನ್ನು ಮುಂದುವರೆಸಿ - 

"ಮಹಾರಾಜರ ಕೃಪೆಯೆಂದು ಈ ಬೀಗುವಿಕೆಯೇ ಗಾಲಿಬ್ 

ಬೇರೇನಿದೆ ಬದುಕಲು ನಿನಗಿದನ್ನು ಹೊರತುಪಡಿಸಿ "

 ಎಂದು ಹಾಡಿಬಿಟ್ಟ. ಅಲ್ಲಿದ್ದ ಚಕ್ರವರ್ತಿಯಾದಿಯಾಗಿ ಸಭಾಸದರೆಲ್ಲರೂ ಹೋ ಎಂದು ಮೆಚ್ಚುಗೆಯ ಸುರಿಮಳೆಗೈದರು. ಯೋಧನ ಕುಟುಂಬದಲ್ಲಿ ಜನಿಸಿ ಖಡ್ಗ ಹಿಡಿಯಬೇಕಾಗಿದ್ದವನು ಕತ್ತಿಯಂತೆ ಬಳಸಬಹುದಾದ ಲೇಖನಿಯನ್ನು ಹಿಡಿದೆ ಎಂದು ಬರೆದುಕೊಳ್ಳುತ್ತಾನೆ. ಗಾಲಿಬ್ ಐದು ವರ್ಷದವನಿರುವಾಗಲೇ  ತನ್ನ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ರವರನ್ನು ಕಳೆದುಕೊಂಡ. ಆಶ್ರಯದಾತನಾದ ಚಿಕ್ಕಪ್ಪ ನಸರುಲ್ಲಾ ಬೇಗ್ ಖಾನ್ ರು ‌ಗಾಲೀಬನ  ೯ ವರ್ಷದಲ್ಲಿಯೇ ತೀರಿಹೋದರು. ಇಂತಹ ವಿಧಿಯನ್ನು ಕುರಿತೇ ಗಾಲಿಬ್ ಹಾಡಿದ ಹಾಡನ್ನು ಕೇಳಿ - 

"ದೈತ್ಯ ಅಲೆಗಳ ಕದನದಲ್ಲಿ

ಸುಳಿಗೆ ಸಿಕ್ಕಿದೆ ನಾವೆ

ನಾವಿಕ ನಿದ್ದೆ ಹೋಗಿದ್ದಾನೆ

ವಿಧಿಯನ್ನೇಕೆ ಜರಿಯುವೆ ಗಾಲಿಬ್?"

             

                       ೧೨೦೦೦ ದ್ವಿಪದಿಗಳನ್ನು ರಚಿಸಿದ ಗಾಲಿಬನನ್ನು ದೆಹಲಿ ಸಹಿಸಿಕೊಂಡಿದ್ದು ಅಪರೂಪ. ಕಸೀದ್,ರೇಖ್ತಾ, ಗಜಲ್, ರುಬಾಯಿ, ದ್ವಿಪದಿ ಗಳಂತಹ ಕಾವ್ಯಾಕ್ಷಿಯರನ್ನೆಲ್ಲಾ ಮದಿರೆಯಂತೆ ಪ್ರೀತಿಸಿ ಅವರ ನಶೆಯನ್ನೇರಿಸಿಕೊಂಡ ಗಾಲಿಬನ ಬದುಕೇ ಹೋರಾಟದ ಮಹಾಕಾವ್ಯವಾಗಿತ್ತು. ಪರಿಶ್ರಮದಿಂದ ತೋಡಿದ ಬಾವಿಯ ಒರತೆಯಂತೆ ನಿತ್ಯವೂ ಕೂಲಿಗಾಗಿ ಕಾಯುವಂತಹ ದುಸ್ಥಿತಿಯನ್ನು ಅನುಭವಿಸಿ ಮಾಗಿದ. ದೆಹಲಿಯ ಸಿಂಹಾಸನದ ಪಕ್ಕದಲ್ಲಿದ್ದರೂ ಬಹುಪಾಲು ಅನಾಮಿಕನಾಗಿಯೇ ಬದುಕಿದ. ಚಿಕ್ಕಪ್ಪನ ರೂ. ೭೫೦  ಪಿಂಚಣಿಯಲ್ಲಿಯೇ ತನ್ನ ಬಾಳನ್ನು ಹಾಸಿಕೊಂಡು, ಬರೆದ ಕಾವ್ಯದ ಹಾಳೆಗಳನ್ನೇ ಹೊದ್ದು ಮಲಗಿದ‌ ಮಹಾ ಫಕೀರ. ಹೊತ್ತಲ್ಲದ ಹೊತ್ತಿನಲ್ಲಿ ಮದುವೆಯಾಗಿ ಬಾಲ್ಯದ ಗೆಳತಿಯನ್ನೇ ಸತಿಯನ್ನಾಗಿ ಕಟ್ಟಿಕೊಂಡು ತಿರುಗಿದವನ ಬಾಳಿಗೆ ಕಾವ್ಯಗಳೇ‌ ಬೆಳಕನ್ನು ನೀಡಿದವು. ದೆಹಲಿಯಲ್ಲಿನ ಮಸೀದಿಯ ಕತ್ತಲೆಯ ದಾರಿಯಲ್ಲಿ ನಡೆಯುವವನ ಕೈಹಿಡಿದು ಮುನ್ನಡೆಸಿದ್ದು ಗಜಲ್ ಗಳೇ. ತನ್ನ ಕಾವ್ಯಕ್ಕೊಂದು ಜನಮೆಚ್ಚುಗೆ ದೊರೆತು ದೊರೆಯ ಪುರಸ್ಕಾರ ದಕ್ಕಿಸಿಕೊಂಡರೆ ಸಾಕು. ಅಂದಿನ ಅವನ ಗುಲಾಬು, ಶರಾಬಿ, ರೊಟ್ಟಿಗೆ  ತಾಪತ್ರಯವಿರಲಿಲ್ಲ. ಇದಷ್ಟೇ ಅವನ ಬದುಕಿನ ಚಿಂತೆಯಾಗಿತ್ತು.  ಬಾರದು ಬಪ್ಪುದು, ಬಪ್ಪುದು ತಪ್ಪದು ಎಂಬಂತೆಯೇ ಬದುಕಿದ ಮಿರ್ಜಾ ಗಾಲಿಬ್ ದೆಹಲಿಯ ಸಂದಿಗೊಂದಿಗಳನ್ನು ತಿರುಗಿದ.‌ ಬೀದಿ ಬದಿಯ ಸಾಮಾನ್ಯರ ಸಂತೆಯಲ್ಲಿದ್ದೂ ಸಂತನಾದ. ಲೌಕಿಕ ಬದುಕಿನ ರಥ‌ ಮುನ್ನಡೆಸಲು ತನಗೆ ಬರಬೇಕಾದ ಪಿಂಚಣಿ ಹಣಕ್ಕಾಗಿ ಫಕೀರನಂತೆ ಪರದಾಡಿದ್ದರ ಮಧ್ಯೆಯೂ ಅಲೌಕಿಕ ದರ್ಶನದ ಕಾವ್ಯನಿಧಿಯನ್ನು ಭವಿತವ್ಯದ ಭಾರತಕ್ಕಾಗಿ ಸಂಪಾದಿಸಿದ ಹಿರಿಮೆ ಗಾಲೀಬನದು. 

             

                     ದೆಹಲಿಯ ದರ್ಬಾರಿನಲ್ಲಿ ರಾಜಕವಿಯಾಗುವ ಅವಕಾಶಕ್ಕಾಗಿ ಕಾದು ಕಾದು ಪ್ರಯತ್ನದಲ್ಲಿ ಸಫಲನಾದ. ಕಾವ್ಯವನ್ನೇ ಉಸಿರಾಗಿಸಿಕೊಂಡು  ಕಾವ್ಯದೊಂದಿಗೆ ಬಾಳುತ್ತಿದ್ದವನನ್ನು ಕಾವ್ಯಕನ್ನಿಕೆ ಕೈ ಬಿಡಲಿಲ್ಲ. ಆಸ್ಥಾನದ ದಾರಿ ತೋರಿ ಒಳಬಿಟ್ಟಳು. ಕಾವ್ಯಸಮ್ಮೇಳನ, ಕವಿಗೋಷ್ಠಿಗಳಲ್ಲಿ ಗಾಲೀಬನದೇ ಮೇಲುಗೈ. ಆಶ್ರಯವಿತ್ತ ಅರಸನ ಮೇಲೆ ಕಸೀದನ್ನು ಬರೆದು ಕುಣಿಸಿದ. ತನ್ನ ಮುಂದೆಯೇ ಪಲ್ಲಕ್ಕಿಯ ಮೇಲೆ ಮೆರೆದವರನ್ನು ಕಾವ್ಯಕುಂಚದಿಂದಲೇ ಕುಟುಕಿದ. ಒಳಗೊಳಗೆ ಪಿತೂರಿ ನಡೆಸುತ್ತಿದ್ದವರನ್ನು ವಿಡಂಬಿಸಿ ಹೆಡೆಮುರಿ ಕಟ್ಟಿದ. ತನ್ನ ಪಿಂಚಣಿ ಹಣಕ್ಕಾಗಿ ಕಾಡಿಸಿದವರನ್ನು ಕಸೀದ್ ಗಳಲ್ಲಿಯೇ ಬಂಧಿಸಿ ಮೆರೆಸಿ ಒಲಿಸಿಕೊಂಡ. ಮೌಢ್ಯತೆ, ಧಾರ್ಮಿಕ ಮೂಢನಂಬಿಕೆ, ಬೂಟಾಟಿಕೆಗಳನ್ನು ಖಂಡಾತುಂಡವಾಗಿ ವಿರೋಧಿಸಿ ಭಾವೈಕ್ಯತೆ, ವೈಚಾರಿಕತೆ ಮೂಲಕ ಜನ ಕಲ್ಯಾಣದ ಪಣ ತೊಟ್ಟುಕೊಂಡ.‌ ಈತನ  ಕಾವ್ಯದಲ್ಲಿ ದೋಷಗಳಿವೆ ಎಂದು ಆರೋಪಿಸಿದವರಿಗೆ ಗಜಲ್ ಗಳ  ಮೂಲಕವೇ ತಿರುಗೇಟು ಕೊಟ್ಟ. ಕನ್ನಡದ ಕವಿವರೇಣ್ಯರು ಪಂಡಿತರ ಭಾಷೆಯಾದ ಹಳಗನ್ನಡವನ್ನು ತ್ಯಜಿಸಿ ಸಾಮಾನ್ಯರ ಸವಿಗನ್ನಡಕ್ಕೆ ಒತ್ತುನೀಡಿದಂತೆ, ಗಾಲೀಬನೂ ಕೂಡ ಪಂಡಿತರ ಪರ್ಷಿಯನ್ ಬಿಟ್ಟು ಸಾಮಾನ್ಯರ ಉರ್ದುವಿನಲ್ಲಿ ಕಾವ್ಯಝರಿ ಹರಿಸಿ‌ ಉಭಯಭಾಷಾವಿಷಾರದನಾದ.‌
     ಜಾತಿ, ಮತ, ಪಂಥಗಳಾಚೆಯೂ ಬಹು ಜನರಿಗೆ ಹತ್ತಿರವಾದ. ಕಟ್ಟಿಕೊಂಡ ಸತಿ ಉಮ್ರಾವ್ ಬೇಗಂ ನಿತ್ಯ ಕರೆಗೊಡುವ ಐದೂ ಆಜಾನ್ ಗಳಿಗೆ  ತಪ್ಪದೇ ಪ್ರಾರ್ಥನೆ ಸಲ್ಲಿಸುವ ಪರಮ ದೈವ ಭಕ್ತೆ. ಆದರೆ ಗಾಲಿಬ್ ಮಸೀದಿಯ ಕಡೆಗೇ ಮುಖ ಮಾಡದ ಅಪ್ಪಟ ಕಾವ್ಯಧರ್ಮಿ. ಸಂಸಾರದ ಅಂತರಂಗದಲ್ಲಿ ದಾರಿ ಹೀಗೆ ಕವಲೊಡೆದಾಗ ಆಸರೆಯಾಗಿದ್ದು ಆತ ನಂಬಿದ ಕಾವ್ಯರಾಣಿಯೇ.  ಜನಿಸಿದ ಏಳು ಮಕ್ಕಳೂ ನಕ್ಷತ್ರಗಳಂತೆ ಕಣ್ಣೆದುರೇ ಉದುರಿಬಿದ್ದಾಗ ವಿಹ್ವಲನಾದ. ಕಣ್ಣೆದುರಿನ ಮಗುವಿನ ಕೆನ್ನೆ ಸವರಿದಾಗ ಸಿಗುವ ಸ್ವರ್ಗಾನಂದ ಯಾವ ಕಾವ್ಯಾನಂದಕ್ಕಿಂತ ಕಡಿಮೆ ಹೇಳಿ ?  ಈ ಭಾಗ್ಯ ಗಾಲೀಬನಿಗೆ ದಕ್ಕದಿದ್ದಾಗ ತನ್ನದೇ ಅಂತರಂಗದ ಕುಡಿಗಳಂತಿದ್ದ ಕಾವ್ಯಗಳನ್ನೇ ತಿರಸ್ಕರಿಸಲಾರಂಭಿಸಿದ.‌ ಆದರೆ ಕಾವ್ಯವನ್ನು ಬಿಟ್ಟ ಗಾಲಿಬ್ ನನ್ನು  ಕಲ್ಪಿಸಿಕೊಳ್ಳುವುದಾದರೂ ಹೇಗೆ? ಮೊಮ್ಮಕ್ಕಳ‌ ಮುಖ ನೋಡಿ ಮತ್ತೆ ಲಯಕ್ಕೆ ಹಿಂತಿರುಗಿದ. ಇದು ಅವನಲ್ಲಿದ್ದ ಜೀವನಪ್ರೀತಿಯ ವಿರಾಟ ರೂಪದ ವಿಲಾಸದ ಕೈಲಾಸ.‌ ಅರಮನೆಯ ಪಲ್ಲಕ್ಕಿಯ ಮೇಲೆ ಕುಳಿತುಕೊಂಡು ರಾಜಾಶ್ರಯ ಪಡೆದು ಆಸ್ಥಾನಕವಿಯಾಗಬೇಕೆಂಬ ಅವನ ಹಂಬಲ ಎಲ್ಲ ಕವಿಗಳಲ್ಲಿದ್ದಂತೆ ಈತನಲ್ಲಿಯೂ ಸಹಜವಾಗಿದ್ದುದರಲ್ಲಿ ಆಶ್ವರ್ಯವೇನಿಲ್ಲ .‌ಕಂಡ ಕನಸನ್ನು ನನಸಾಗಿಸಿಕೊಳ್ಳಲು ಇನ್ನಿಲ್ಲದಂತೆ ಹೆಣಗಾಡಿದ. 

         

                 ದೆಹಲಿಯ ಸಾಮ್ರಾಜ್ಯಶಾಹಿ ಸಂಘರ್ಷದ ಚರಿತ್ರೆ ಹಾಗೂ ತನ್ನದೇ ಡೋಲಾಯಮಾನ ಬದುಕಿನ ರೂಪಕದಂತಿರುವ   ಕವಿತೆಯೊಂದನ್ನು ಗಾಲಿಬ್ ಹಾಡಿದ್ದು ಹೀಗೆ- 'ಓಡುತಿದೆ ಆಯುಷ್ಯದ ಅಶ್ವ ಎಲ್ಲಿ ಹೋಗಿ ನಿಲ್ವುದೋಕಡಿವಾಣ ಕೈಯೊಳಿಲ್ಲ, ಅಂಕವಣೆಯೊಳಿಲ್ಲ ಕಾಲು!’.ಪೊಟ್ಟಣ ಕಟ್ಟುವ ಕಾಲಡಿಯ ಹಾಳೆಯಲ್ಲಿ ಸಿಕ್ಕ ಕಾವ್ಯದ ಸಾಲುಗಳನ್ನು ಆಕಸ್ಮಾತಾಗಿ ಗುಣುಗುಣಿಸಿ ಹಾಡಿದವಳ ದನಿಯನ್ನು ಕೇಳಿದ ಗಾಲಿಬನಿಗೆ ಹಾರಿ ಹೋಗುತ್ತಿದ್ದ ಹೃದಯದ ಹಕ್ಕಿ ಮರಳಿ ಎದೆಗೂಡಿಗೆ ಇಳಿದಂತಾಯಿತು; ದೆಹಲಿಗೆ ಬೇಡವಾದ ತನ್ನ ಕಾವ್ಯದಿಂದ ವಿಚಲಿತನಾಗಿದ್ದವನಿಗೆ ಮರಭೂಮಿಯಲ್ಲಿ ಓಯಸಿಸ್ ದೊರಕಿದ ಸಂಭ್ರಮ; ಬತ್ತಿ ಹೋಗುತ್ತಿದ್ದ ಅವನೆದೆಯ ಚೈತನ್ಯದ ಚಿಲುಮೆ ಮತ್ತೆ ಪುಟಿದಂತಾಯಿತು; ಮೋಡಗಳ‌ ಹಿಂದೆ ಮರೆಯಾಗಿ ಕತ್ತಲೆಯಲ್ಲಿ ಬೆಳದಿಂಗಳನ್ನು  ಕಳೆದುಕೊಂಡ ಚಂದಿರ ಮತ್ತೆ ತೆರೆ ಸರಿಸಿಕೊಂಡು ಬೆಳಗಿದಂತಾಯಿತು; ಬಾಡಿ ಹೋಗುತ್ತಿದ್ದ ಬಳ್ಳಿಗೆ  ಜೀವಜಲದ ಹನಿಗಳೆರೆದಂತಾಯಿತು; ಬರಗಾಲದಿಂದ ಬಿರುಕೊಡೆದು ದೆಸೆ ದೆಸೆಗೆ ಬಾಯಿಬಿಡುತ್ತಿದ್ದ ಇಳೆಗೆ ಇಬ್ಬನಿಯ ಸವಿಜೇನು ದಕ್ಕಿದಂತಾಗಿತ್ತು. ಕಾವ್ಯಾಲಾಪದಂತೆ ಗಾಲಿಬ್ ನ ಹೃದಯದೊಂದಿಗೆ ಹೀಗೆ ಹಾಡುತ್ತಲೇ ಜೊತೆಯಾದವಳು ದೆಹಲಿಯ ನರ್ತಕಿ ನವಾಬ್ ಜಾನ್. ಗಾಲಿಬ್ ನ ಕಾವ್ಯದೆಡೆಗಿನ ಅವಳ ವ್ಯಾಮೋಹ ಎಂತಹುದೆಂದರೆ, ಆಕೆ ತನ್ನ ಮನ- ಮನೆಗಳನ್ನೆಲ್ಲವನ್ನೂ ಅಲಂಕರಿಸಿಕೊಂಡಿದ್ದು ಗಾಲಿಬ್ ನ ಕಾಡುವ ಶೇರ್( ದ್ವಿಪದಿ) ಮಣಿಗಳಿಂದಲೇ. ಆಕೆ ತನ್ನ ಹೆಸರಿಗೆ ತಕ್ಕಂತೆ ಗಾಲೀಬನ ಕಾವ್ಯಾತ್ಮವೇ ಆಗಿಬಿಟ್ಟಳು ಎನ್ನುವುದಕ್ಕೆ ಕೆಳಗಿನ ಸಾಲುಗಳನ್ನು ಗಮನಿಸಿ -

ಜಾನ್ ತುಮ್ ಪರ್ ನಿಸಾರ್ ಕರ್ ತಾ ಹೂಮೈ 

ನಹಿ ಜಾನ್ ತಾ ದುವಾ ಕ್ಯಾ ಹೈ ? 

( ನೀನೆಂದರೆ ಜೀವ ಬಿಡುತ್ತೇನೆ, ಅದರ ಹೊರತಾಗಿ ಇನ್ಯಾವ ಪ್ರಾರ್ಥನೆಯೂ ನನಗೆ ಗೊತ್ತಿಲ್ಲ).

ಗಾಲೀಬನ ಸ್ನೇಹದಿಂದಾಗಿಯೇ ಸಮಾಧಿಯಾದ ನವಾಬ್ ಜಾನ್ ಳ ಗೋರಿಯ ಮೇಲೆ ಬರೆದ ಗಾಲೀಬನ ಸಾಲುಗಳಿವು- 

ಯೆ ನ ಥಿ ಹಮಾರಿ ಕಿಸ್ಮತ್ ಕೆ ಮಿಸಾಲ್ ಎ ಯಾರ್ ಹೋತಾ

ಅಗರ್ ಔರ್ ಜೀತೆ ರೆಹ್ತೆ ಯಹಿ ಇಂತಜಾರ್ ಹೋತಾ 

( ಪ್ರೇಮಿಯನ್ನು ಸಂಧಿಸುವುದು ನನ್ನ ಹಣೆಯಲ್ಲಿ ಬರೆದಿಲ್ಲಇನ್ನು ಬದುಕಿದ್ದರೂ ಇದೇ ನಿರೀಕ್ಷೆಯಲ್ಲೇ ಬದುಕಬೇಕಿತ್ತು) 

ಇದಲ್ಲವೇ ಎರಡು ದೇಹ ಒಂದೇ ಆತ್ಮದಂತಿದ್ದವರ ನಿರ್ಮಲ ಕಾವ್ಯಾನುರಾಗದ ಹೊಳೆಯ ಹರಿವು. ೧೭೯೭ ರಿಂದ ೧೮೬೯ ರವರೆಗೆ ೭೨ ವರ್ಷಗಳ ತುಂಬುಜೀವನವನ್ನೇ ಸವೆಸಿದ ಗಾಲಿಬ್ ಸಮಾಧಿಯಾಗಿ ೧೫೦ ವರ್ಷಗಳಾದ ಈ ಹೊತ್ತಿನಲ್ಲಿ ವರ್ತಮಾನದ ಲೇಖಕರನ್ನು ಆತ ಕಾಡಿದ ಬಗೆಯನ್ನೊಮ್ಮೆ ಕೇಳಿಬಿಡಿ- "ಗಾಲಿಬ್ ನನ್ನು ಮತ್ತೆ ಓದುವುದು, ಅವನೊಡನೆ ಗಲೀ ಖಾಸಿಮ್ ಉದ್ದಕ್ಕೂ ಹೆಜ್ಜೆ ಹಾಕುವುದು, ದೆಹಲಿಯ ಕಡುಚಳಿ, ರಣಬಿಸಿಲುಗಳ ತೀವ್ರತೆಯಲ್ಲಿ ಅರಳಿದ ಅವನ ಕಾವ್ಯಕ್ಕೆ ಎದೆಯೊಡ್ಡುವುದು ನನ್ನ ಸಂಭ್ರಮಕ್ಕೆ ಕಾರಣವಾಗುತ್ತದೆ. ಗಾಲಿಬ್ ಒಂದು ಹರಿಯುವ ನದಿಯಂಥವನು. ಅವನನ್ನು ನಾನು ಪದಗಳಲ್ಲಿ ಹೇಗೆ ಬಂಧಿಸಿಡಲಿ? ಅವನ ಬದುಕು ಮತ್ತು ಕಾವ್ಯ ಎರಡರ ಹರವೂ ವಿಸ್ತಾರವಾದದ್ದು.

ಇಷ್ಟೆಲ್ಲಾ ಬರೆದ ಮೇಲೂ ಕಾಡುತ್ತಿರುವ ಗಾಲಿಬನ ಸಾಲುಗಳಿವು-
ಹೂಂಗರೆ ಎ ನಿಶಾತ್ ಎ ತಸವ್ವರ್ ಸೆ ನಗಮಾ ಜ್ವಾನ್ಮೈಂ ಅಂದಲೀಬ್ ಎ ಗುಲ್ಶನ್ ನ ಆಫ್ರಿದಾ ಹೂಂ"  ಎಂದು ಗಾಲಿಬನ ಕಾವ್ಯಾರಾಧನೆ ಮಾಡುತ್ತಾರೆ ಖ್ಯಾತ ರಂಗಕರ್ಮಿ ಹಾಗೂ ಲೇಖಕಿಯರಾದ ಸಂಧ್ಯಾರಾಣಿಯವರು. ಗಾಲೀಬನ ಕುರಿತು ತಮ್ಮ ಪ್ರಪ್ರಥಮ ಅನುವಾದ ಕೃತಿಯನ್ನು ಹೊರತಂದ ಇಮಾಮ್ ಸಾಹೇಬ ಹಡಗಲಿಯವರು

"ಗಾಲಿಬ ಜೀವನದುದ್ದಕ್ಕೂ ಕನ್ನಡಿ ಒರೆಸುತ್ತಿದ್ದ 

ಈಗ ನಾನು ಅವನ ಮುಖ ಒರೆಸುತ್ತಿದ್ದೇನೆ 

ಅವನ ಸಮಾಧಿಯ ಮೇಲಿನ ಧೂಳನ್ನೂ ಕೂಡ

ಇನ್ನು ನೀವುಂಟು, ಗಾಲೀಬನುಂಟು" 

ಎಂದು ಗಾಲೀಬನನ್ನು  ಕಾವ್ಯಪ್ರೇಮಿಗಳ ಹೃದಯದೊಳಗಿಳಿಸುತ್ತಾರೆ.

"ಕವಿತಾವಿಲಾಸದ ಕಾವಿನಿಂದ ಹಾಡುತ್ತಲಿದ್ದೇನೆ

ನಾನಿಹೆನು ಬರಲಿರುವ ಬನದ ಬುಲ್‌ಬುಲ್!’

 ಯುಗಾದಿಯ ಕೆಂದಳಿರನ್ನುಂಡ ಕೋಗಿಲೆಯೊಂದು  ಹರ್ಷೋಲ್ಲಾಸದಲ್ಲಿ ಹಾಡಿದ ಗೀತೆಯಂತಿದೆ ಗಾಲೀಬನ ಮೇಲಿನ ಕವಿತೆ.  ಧರ್ಮ, ಭಕ್ತಿ, ಆಚರಣೆಗಳೆಂದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದ ಗಾಲಿಬ್ ಭಕ್ತಿಯ ವ್ಯಾಖ್ಯಾನ‌ ವಿಭಿನ್ನ ನೆಲೆಯದ್ದು.ಆಸೆ ಅಮಿಷ ಬಯಕೆಗಳಿಂದ ತುಂಬಿದ ಸ್ವಾರ್ಥ ಭಕ್ತಿಯನ್ನು ಗಾಲೀಬ್ ವಿಡಂಬಿಸುವುದು ಹೀಗೆ 

‘ಭಕ್ತಿಯೊಳಗಿರದಿರಲಿ ಮಧು ಸುಧೆಯ ಆಸೆಯು-ನರಕದೊಳಗೊಗೆಯಿರಿ ಸ್ವರ್ಗವನ್ನಾರಾದರೂ!’

ಈ ದ್ವಿಪದಿಯನ್ನು ಕೇಳುತ್ತಿದ್ದರೆ ವಚನಕಾರರು ಶರಣ, ಭಕ್ತ, ಭಕ್ತಿಯನ್ನು ಕುರಿತು ಹಾಡಿದ ವಚನಗಳು ನೆನಪಾಗುತ್ತವೆ. ಜಹಗೀರದಾರರ ಕುಟುಂಬದಲ್ಲಿ ಜನಿಸಿದ್ದ ಗಾಲಿಬ್ ಅದೆಷ್ಟು ಸ್ವಾಭಿಮಾನಿಯಾಗಿದ್ದ ಎಂಬುದಕ್ಕೆ ಕೆಳಗಿನ ಪ್ರಸಂಗವನ್ನು ಕೇಳಿ - ಬ್ರಿಟೀಷರು ದೆಹಲಿಯಲ್ಲೊಂದು ಕಾಲೇಜನ್ನು ತೆರೆದಿದ್ದರು. ಅಲ್ಲಿ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕಾದಾಗ ಸಚಿವ ಥಾಮ್ಸನ್ ಅದಾಗಲೇ ಪರಿಚಯವಿದ್ದ ಗಾಲಿಬ್ ನಿಗೆ ಹೇಳಿಕಳುಹಿಸುತ್ತಾನೆ. ಪಲ್ಲಕ್ಕಿಯ‌ಲ್ಲಿ ಬಂದ ಗಾಲಿಬ್ ಕಚೇರಿಯ ಹೊರಗೆ ನಿಂತು ಸ್ವಾಗತಿಸಲು ಬರುವರೆಂದು ಕಾಯುತ್ತಾನೆ. ಈ ಸಂಗತಿ ಥಾಮ್ಸನ್ನನಿಗೆ ತಿಳಿದು ಆತ ಜಹಗೀರದಾರನಾಗಿ ಬಂದಿದ್ದರೆ ಸಂಪ್ರದಾಯದಂತೆ ಸ್ವಾಗತಿಸಬಹುದಿತ್ತು ಆದರೀಗ ಆತ ಅಧ್ಯಾಪಕ ಹುದ್ದೆಗೆ ಅಭ್ಯರ್ಥಿಯಾಗಿ ಬಂದಿರುವುದರಿಂದ ಖುದ್ದಾಗಿ ಬಂದು ಸ್ವಾಗತಿಸಲು ಸಾಧ್ಯವಿಲ್ಲ ಎಂದು ಹೇಳಿಕಳುಹಿಸುತ್ತಾನೆ. ಸಹಾಯಕನಿಂದ ಈ ವಿಷಯ ಅರಿತುಕೊಂಡ ಗಾಲಿಬ್ ಇಲ್ಲಿ ಅಧ್ಯಾಪಕ ವೃತ್ತಿ ಮಾಡುವುದರಿಂದ ನನ್ನ ಹಾಗೂ ಪರಿವಾರದ ಗೌರವ ಹೆಚ್ಚಾಗುತ್ತದೆಂದು ಬಂದೆ. ಆದರೆ ಬದಲಾಗಿ ಇಲ್ಲಿ ಇದ್ದ ಮರ್ಯಾದೆಯೂ ಹರಾಜಾಗುತ್ತಿದೆ ಎಂದ ಮೇಲೆ ಈ ಕೆಲಸ ತನಗೆ  ಬೇಡವೆಂದು ನಿರ್ಧರಿಸಿ ಅದೇ ಪಲ್ಲಕ್ಕಿಯಲ್ಲಿ ಮರಳಿ ಹೋದ. ಇವನ ಸ್ಬಾಭಿಮಾನದ ಮುಂದೆ‌ ಬ್ರಿಟಿಷ್ ಸರಕಾರಿ ನೌಕರಿಯೂ ಯಕಃಶ್ಚಿತವಾಗಿಬಿಟ್ಟಿತು.

‘ಕೇಳದಿರು ಕೆಡುಕು ನುಡಿದರೆ ಯಾರಾದರೂ

ಹೇಳದಿರು ಕೆಡಕು ಗೈದರೆ ಯಾರಾದರೂ

ತಡೆ, ತಪ್ಪು ದಾರಿ ತುಳಿದರೆ ಯಾರಾದರೂ

ಕ್ಷಮಿಸಿ ಬಿಡು ತಪ್ಪು ಮಾಡಿದರೆ ಯಾರಾದರೂ

ಅಪೇಕ್ಷೆಯೇ ಇಲ್ಲವಾದಾಗ ಗಾಲೀಬ್,

ಯಾರನೇತಕೆ ದೂರುವುದು ಯಾರಾದರೂ

ಎಂಬ ಆತ್ಮಾವಲೋಕನದ ಆಧ್ಯಾತ್ಮ ಗಾಲೀಬನದು. ಈತ ವಚನಕಾರರಂತೆಯೇ ವ್ಯಕ್ತಿ ಸಾಧನೆಯ ಸೂತ್ರಗಳನ್ನು  ಕಟ್ಟಿಕೊಡುತ್ತಾನೆ. ಗಾಲಿಬ್ ನನ್ನು ಕೆಲವೇ ಪದಗಳಲ್ಲಿ ವ್ಯಾಖ್ಯಾನಿಸುವುದಾದರೆ, ಆತ್ಮದ ನಶೆಯೇರಿಸುವ ಕವಿತೆ, ರಸಾನುಭವಕ್ಕೊಂದಿಷ್ಟು ಗುಲಾಬು, ರಾತ್ರಿಯ ಅಮಲಿಗೊಂದಿಷ್ಟು ಶರಾಬು, ಹಸಿವಿಗೆರಡು ರೊಟ್ಟಿ. ಸ್ವಾದಕ್ಕೊಂದಿಷ್ಟು ಮಾವು. ಇವೆಲ್ಲವುಗಳ ಅದ್ಭುತ ರಸ ಸಂಯೋಜನೆಯೇ ನಾವೆಂದುಕೊಂಡ ಗಾಲಿಬ್. ಮೊಗಲ್ ಸಾಮ್ರಾಜ್ಯ ಪತನವಾಗಿ ಬ್ರಿಟಿಷ್ ಅಧಿಪತ್ಯ ಸ್ಥಾಪನೆಯಾಗುವ ವಿಷಮ ಸಂಕ್ರಮಣ ಕಾಲದಲ್ಲಿ ಚರಿತ್ರೆಯ ಸಾಕ್ಷಿಪ್ರಜ್ಞೆಯಾಗಿದ್ದವನು ಗಾಲಿಬ್. ಹಿಂಸೆ, ಕೊಲೆ, ರಕ್ತಪಾತ, ಕಾಳಗ, ಯುದ್ಧಗಳೇ ತುಂಬಿದ ಜಗತ್ತಿನಲ್ಲಿ ಆತನೇ ಹೇಳುವ ಹಾಗೆ ಹೃದಯದ  ದುಃಖಗಳಿಗೆ ಮದ್ದಾಗಬಲ್ಲ ಸೋಮರಸ ಹಾಗೂ ಕವಿತೆಗಳಿಂದ ನಶೆಯೇರಿಸಿಕೊಂಡು ಬದುಕುತ್ತಲೇ ಮಹಾಸಂತನಾಗಿ ಗುರ್ತಿಸಿಕೊಂಡ.‌ ತನ್ನದೇ ವಿಶಿಷ್ಟ ತಾತ್ವಿಕತೆ, ಚಿಂತನೆ, ಎಲ್ಲರನ್ನೊಳಗೊಂಡ ಕಾವ್ಯಗಳಿಂದ  ಸಾಂಸ್ಕೃತಿಕ ಲೋಕದ ಪ್ರಖರ ಸೂರ್ಯನಾಗಿ ಇಂದಿಗೂ ಕಂಗೊಳಿಸುತ್ತಿದ್ದಾನೆ. 

             

                  ಮಿರ್ ಮೆಹದಿಯು ಒಮ್ಮೆ "ಧರ್ಮಶಾಸ್ತ್ರವನ್ನೋದಿದರೆ ಏನಾದರೂ ಲಾಭವಾಗುತ್ತದೆಯೇ ? ಎಂದು ಕೇಳಿದ್ದಕ್ಕೆ ಗಾಲೀಬನೆಂದ- "ಧರ್ಮಶಾಸ್ತ್ರ ಓದಿ ಏನು ಮಾಡುವೆ ? ಚಿಕಿತ್ಸಾಶಾಸ್ತ್ರ, ಜ್ಯೋತಿಷ್ಯ,ತರ್ಕಶಾಸ್ತ್ರ, ದರ್ಶನಗಳನ್ನಾದರೂ ಓದು, ಕೊನೆಯ ಪಕ್ಷ ಮನುಷ್ಯನಾದರೂ ಆಗಬಹುದು." ಗಾಲೀಬನ ಈ ಮಾತೊಂದೇ ಸಾಕು ವರ್ತಮಾನದ ಸಾಮಾಜಿಕ, ಧಾರ್ಮಿಕ, ರಾಜಕಾರಣದ ತಲ್ಲಣಗಳಿಗೆ ಅವನು ಹೇಗೆ ಉತ್ತರವಾಗಬಲ್ಲನೆಂಬುದಕ್ಕೆ.‌ ಬದುಕಿನಲ್ಲಿ ಆತ ಪಡೆದ ಸುಖಕ್ಕಿಂತ ಉಂಡ ನೋವುಗಳ ಲೆಕ್ಕವೇ ಅಪರಿಮಿತ. ಗಾಯಗಳ‌‌ ಮೇಲೆ ಗಾಯ, ಸಂಕಟಗಳ‌ ಮೇಲೆ ಸಂಕಟ, ಬಾಡಿಗೆ ಮನೆಯೊಳಗೆ ಸಂಸಾರ, ಪಿಂಚಣಿಗಾಗಿ ಹೋರಾಟ, ಕೆಲವು ಬ್ರಿಟಿಷ್ ಅಧಿಕಾರಿಗಳು ಹಾಗೂ‌ ನಂಬಿದ ನವಾಬರಿಂದ ದ್ರೋಹ  ಹೀಗೆ ಬದುಕೆಲ್ಲವೂ ನಿತ್ಯಚಿಂತೆಗಳ ಸಂತೆಯಾಯಿತೇ ವಿನಃ ಆತ ಆಚರಿಸಬಹುದಾದ ಸಂಭ್ರಮದ ಹಬ್ಬವಾಗಲೇ ಇಲ್ಲ. ಹಾಸಿಗೆಯಿಂದ ಏಳಲಾಗದ ಕೊನೆಗಾಲದಲ್ಲಿಯೂ ಮಲಗಿಕೊಂಡೇ, ಬರಹವನ್ನು ನಿಲ್ಲಿಸಲಾಗದ ತಪವನ್ನಾಚರಿಸಿದ ಫಕೀರನೆಂದರೆ ಗಾಲಿಬ್. ಧರ್ಮಕ್ಕಿಂತಲೂ ಬದುಕಿನ ತತ್ವಜ್ಞಾನವೇ ಮಿಗಿಲಾದದ್ದು ಎಂದು ನಂಬಿ ಬದುಕಿದ ಧರ್ಮಾತೀತ ಸಂತ ಕೊನೆಯುಸಿರೆಳೆದಾಗ, ಧರ್ಮಪರೀಕ್ಷೆಯನ್ನೆದುರಿಸಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸವೇ ಸರಿ. ಹೀಗೆ ಬರೆಯುತ್ತಿರುವಾಗಲೇ ನನ್ನಲ್ಲಿ ಹುಟ್ಟಿದ ಸಾಲುಗಳಿವು - "ನಾನೂ ಗಾಲೀಬನ ಕವಿತೆಗಳನ್ನು ಪ್ರೀತಿಸುತ್ತೇನೆ ಏಕೆಂದರೆ ಅಲ್ಲಿ ಶರಾಬಿನ ಅಮಲಿದೆ. ಮಾವಿನ ಮದವಿದೆ. ಪ್ರೇಮದ ನಶೆಯಿದೆ. ಅನುಭಾವದ ನದಿಯಿದೆ."


Saturday 21 March 2020

ಕಾಲಚಕ್ರ
  ಸರಿದುಹೋಗುತ್ತದೆ ಕಾಲ
ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು 
ಸಮಯವಾಯಿತೆಂದು ಕರೆದುಕೊಂಡು

ಮರಣವೇ ಮಹಾನವಮಿ 
ಎಂದವರದೋ ಮಹದಾನಂದದಿ 
ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ 
ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ

ಅಳಿವಿದೆ ಹೆಸರಿಲ್ಲದೆ ನಡೆದು 
ಸದ್ದಿಲ್ಲದೇ ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ 
ಮರೆಯಲಾಗದ ಕೊಡುಗೆ 
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ 
ಹಾಕುತಿರುವ ಬದಲಾವಣೆಯ ಉಡುಗೆ

ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ 
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ 
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ 
ಸಮಾಧಿ ಮಾಡುವ  ಚಿಂತೆ

ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ 
ಧಿಮಾಕಿನ ಒಡೆಯನಂತೆ ಕೈಕೋಲು 
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ 
ತನ್ನಂಥವರು ಬೀಗುವುದ ಕಂಡು

ಮುನ್ನಡೆಸಿ ಜಗವಾಳುವ  
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ 
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ
ಆಲಿಸುವ ಬಡಪಾಯಿಗಳ ಮೋದ!


ಕಾಲಚಕ್ರ
ಸರಿದುಹೋಗುತ್ತದೆ ಕಾಲ
ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು 
ಸಮಯವಾಯಿತೆಂದು ಕರೆದುಕೊಂಡು 
ಮರಣವೇ ಮಹಾನವಮಿ ಎಂದವರದೋ 
ಮಹದಾನಂದದಿ ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ

ಅಳಿವಿದೆ ಹೆಸರಿಲ್ಲದೆ ನಡೆದು ಸದ್ದಿಲ್ಲದೇ 
ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ 
ಮರೆಯಲಾಗದ ಕೊಡುಗೆ 
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ ಹಾಕುತಿರುವ 
ಬದಲಾವಣೆಯ ಉಡುಗೆ

ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ 
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ 
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ 
ಸಮಾಧಿ ಮಾಡುವ  ಚಿಂತೆ

ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ 
ಧಿಮಾಕಿನ ಒಡೆಯನಂತೆ ಕೈಕೋಲು 
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ 
ತನ್ನಂಥವರು ಬೀಗುವುದ ಕಂಡು

ಮುನ್ನಡೆಸಿ ಜಗವಾಳುವ  
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ 
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ ಆಲಿಸುವ 
ಬಡಪಾಯಿಗಳ ಮೋದ!

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...