Total Pageviews

Thursday 26 March 2020

ಗಜಲ್

ಗಜಲ್

ನಿನ್ನ ಸಮಾಧಿಯ ಮೇಲೆ‌ ಗುಲಾಬಿಯನ್ನಿಡುವಾಸೆ ಗಾಲಿಬ್

ತೋರಿಬಿಡು ಕೈಹಿಡಿದು ಒಮ್ಮೆ ನಿನ್ನ ಸಮಾಧಿಯ ಹಾದಿ


ಶರಾಬಿನ ಗುಟುಕನ್ನು ನಿನ್ನೊಡನೆ ಹೀರುವಾಸೆ ಗಾಲಿಬ್

ಹೇಳಿಬಿಡು ತೂಗಿ, ಮದವೇರಿದ ಕಾವ್ಯ ಸಮಾಧಿಯ ಹಾದಿ


ಹಸಿದ ಹೊಟ್ಟೆಗೆ ಚೂರು ರೊಟ್ಟಿಯೂ‌ ನೀನೇ ಗಾಲಿಬ್

ಆಗಲಾದರೂ ತೋರೀತೇ ನಿನ್ನ ಪ್ರೇಮ ಸಮಾಧಿಯ ಹಾದಿ


ನಿನ್ನೊಡನೆ ಆಸ್ಥಾನ ಕವಿಯಾಗುವ ಹಂಬಲ‌ ಗಾಲಿಬ್ 

ಹಾಡುವ ಶೇರ್ ಕೇಳಿ‌ ಹಿಡಿದುಬಿಡುವೆ ಒಮ್ಮೆ ಸಮಾಧಿಯ ಹಾದಿ


ನಿನ್ನೊಡನೆ ಮಾವಿನ ಮಾಧುರ್ಯ ಸವಿಯುವಾಸೆ ಗಾಲಿಬ್

ಸವಿಯ ಬಿಡು ನಿನ್ನ ರಸಗಾನದ ರಹಸ್ಯ ಸಮಾಧಿಯ ಹಾದಿ


ಬೆಳಕಿಲ್ಲದ ದಾರಿಯಲಿ ನಿನ್ನೊಡನೆ ನಡೆಯಬೇಕೆಂದಿರುವೆ ಗಾಲಿಬ್

ಅರಿಯಬಿಡು ಒಮ್ಮೆ ಮೈಮರೆತ ಬೆಳಕಿನ ಸಮಾಧಿಯ ಹಾದಿ


ನೀ ಹೊರಟ ಪಲ್ಲಕ್ಕಿಯ ಹಿಂದೆ ನಿತ್ಯ ಹೆಜ್ಜೆ ಹಾಕುವೆ ಗಾಲಿಬ್

ಒಮ್ಮೆಯಾದರೂ ತೋರುವೆಯೆಂದು ಯೋಗ ಸಮಾಧಿಯ ಹಾದಿ


ಹಾರ ಸನ್ಮಾನ ಪ್ರಶಸ್ತಿಗಳಿಗೆ ಕೊರಳೊಡ್ಡುವೆ ಗಾಲಿಬ್

ಮೆರೆಯಬೇಕೆಂದಲ್ಲ, ನನಗೂ ಉಂಟೆಂದು ಸಮಾಧಿಯ ಹಾದಿ


ನಿನ್ನ ಬಯಸಿದ ಜಾನ್ ಳ ಜೀವವಾಗಿಬಿಡುವೆ ಗಾಲಿಬ್

ನಿನ್ನೆದುರಿಗೇ ತೆರಳಿಬಿಡಬಹುದಲ್ಲ ಆ ಸಮಾಧಿಯ ಹಾದಿ


ನೀ ಬಳಲಿದ ಗಾಯಗಳ ನೋವಾಗುವೆ ಗಾಲಿಬ್

ಇದಕ್ಕಿಂತ ಭಾಗ್ಯವೇ ದಕ್ಕಲು ನೋವ ಸಮಾಧಿಯ ಹಾದಿ


ನಕ್ಷತ್ರದಂತೆ ಉದುರಿ ಹೋದ ನಿನ್ನ ಮಗುವಾಗುವೆ ಗಾಲಿಬ್

ಅಪ್ಪಿಕೊಂಡೇ ಅನುಭವಿಸಬಹುದಲ್ಲ ನಿನ್ನ ಆತ್ಮ ಸಮಾಧಿಯ ಹಾದಿ


ನೀ‌ ಮುಳುಗೇಳುವ ತುಪ್ಪದ ಬಟ್ಟಲು ತಂದಿಡುವೆ ಗಾಲಿಬ್

ಆನಂದಿಸಬಹುದಲ್ಲ ಮದವೇರುವ ನಿನ್ನ ಭಾವ ಸಮಾಧಿಯ ಹಾದಿ


ಅಲೆಮಾರಿಯಾಗಿ ಹಿಂಬಾಲಿಸುವೆ ನಿನ್ನ ಓ ಗಾಲಿಬ್

ದನಿಗೂಡಿಸಿ ಕಲಿಯಬಹುದಲ್ಲ, ನೀ ಕಟ್ಟುವ ಸಮಾಧಿಯ ಹಾದಿ


ನಿನ್ನ ಛೇಡಿಸುವ ಕವಿಗಳ ಸಭೆಯಲ್ಲಿರುವೆ ಗಾಲಿಬ್ 

ಒಳಗಿಳಿಸಿಕೊಳ್ಳಬಹುದಲ್ಲ ಅವರಿಗೆ ನೀ ತೋರುವ ಸಮಾಧಿಯ ಹಾದಿ


ನೀ ಬರೆದ ಕಸೀದ್ ಗಳನ್ನು ಗುರಿ ತಲುಪಿಸುವೆ ಗಾಲಿಬ್

ಒಂದಂಶವಾದರೂ ಎದೆಗಿಳಿಯಬಹುದಲ್ಲ ಅದರಲ್ಲಿರುವ ಸಮಾಧಿಯ ಹಾದಿ


ನಿನ್ನ ವಿಧೇಯ ಹಂಬಲದ ಶಿಷ್ಯನಾಗುವೆ ಗಾಲಿಬ್ 

ಅಂತರಂಗದಿ ಕುಣಿಯಬಹುದಲ್ಲ ಕಂಡು ಸಮಾಧಿಯ ಹಾದಿ


ಉಮ್ರಾವ್ ಳ ಪೂಜೆಗೆ ಹೂಗಳನ್ನಾಯ್ದು ತಂದಿಡುವೆ ಗಾಲಿಬ್

ಮಥಿಸಬಹುದಲ್ಲ ಕಂಡು ನಿಮ್ಮಿಬ್ಬರ ಭಿನ್ನ ಸಮಾಧಿಯ ಹಾದಿ


ನಿನ್ನ ಹೋರಾಟದ ಬದುಕಿಗೆ ಲೇಖನಿಯಾಗುವೆ ಗಾಲಿಬ್

ಕಣ್ಣೀರು ಹಾಕಬಹುದಲ್ಲ, ಕಂಡು ನಿನ್ನ ಕನಸುಗಳ ಸಮಾಧಿಯ ಹಾದಿ


ಅಂಡಲೆಯುವ ನಿನಗೆ ಓಡುವ ಅಶ್ವವಾಗುವೆ ಗಾಲಿಬ್

ತುಳಿಯಬಹುದಲ್ಲ ನಿನ್ನೊಡನೆ ಬಹುಬೇಗ ಸಮಾಧಿಯ ಹಾದಿ


ನಿನ್ನೊಡನೆ ಸದಾ ಜೊತೆಗಿರುವ ಊರುಗೋಲಾಗುವೆ ಗಾಲಿಬ್

ಕಣ್ಣಾರೆ ಕಾಣಬಹುದಲ್ಲ, ಮೊಗಲರು ಹಿಡಿದ ಸಮಾಧಿಯ ಹಾದಿ


ನಿನ್ನ ಸಮಾಧಿಯ ಮೇಲಿನ ಶಿಲೆಯಾಗುವೆ ಗಾಲಿಬ್

ತೋರಿಬಿಡಬಹುದಲ್ಲ ಬಂದವರಿಗೆ ಅವರವರ ಸಮಾಧಿಯ ಹಾದಿ


ನಿನ್ನ ಸಮಾಧಿಯ‌‌ ಮೇಲಿನ ಬರಹವಾಗುವೆ ಗಾಲಿಬ್ 

ಬೆಳಕಾಗಬಹುದಲ್ಲ ತೋರಿ, ಬಂದವರ ಕತ್ತಲೆ ಸಮಾಧಿಯ ಹಾದಿ


1 comment:

  1. ಬಹಳ ಚೆನ್ನಾಗಿವೆ.
    ನಿನ್ನ ಆಸೆಯನ್ನು ಹೇಳಿಕೊಂಡಂತೆ.
    ಈ ದ್ವಿಪದಿಯಲ್ಲಿ ಗಾಲಿಬ್ ನ್ನನೆ ಹಿಡಿದಿಟ್ಟ ಹಾಗಿದೆ. ಆ ಮಹಾಕವಿಯನ್ನು ಹೀಗೆ ದ್ವಿಪದಿಗಳಲ್ಲಿ ಹಿಡಿದಿಡುವ ಆ ನಿನ್ನ ಶಕ್ತಿ ಅನನ್ಯ. ....
    ಜೀವನದ ಆದ ಘಟನೆಗಳ ಘಟ್ಟವನ್ನು ಕ್ರಮಬದ್ದ ವಾಗಿ ಜೋಡಿಸಿದ್ದೊಂದು ವಿಶೇಷವಾಗಿದೆ.
    ಸಮಾಧಿ ಅಂದರೆ ಅಂತ್ಯವಲ್ಲ. ಕೆಲವರಿಗೆ ಜೀವವನ್ನು ಹುದುಗಿಟ್ಟ ಸ್ಥಳವಾದರೆ, ಇನ್ನು ಕೆಲವರಿಗೆ ಆತ್ಮಾವಲೋಕನದ ಹಂತ.
    ಹುಡುಕಿದರೆ ಅಲ್ಲಿ ಎಲ್ಲವೂ‌ ಸಿಗಬಲ್ಲದು ಅದು ನಿನ್ನಂಥವರ ಅಭಿವ್ಯಕ್ತಿಗೆ....

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...