Total Pageviews

Sunday 12 August 2018

ದರ್ಶನದ ಬೆಳಕಿನಲ್ಲಿ.....(ಭಾಗ 2)

ಡಾ.ಗುರುಲಿಂಗ ಕಾಪಸೆಯವರು ಕುವೆಂಪುರವರು ಹೇಗೆ ತಮ್ಮ  ಮಹಾಕಾವ್ಯದಲ್ಲಿ ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಪಾತ್ರಗಳನ್ನು ರೂಪಿಸಿದ್ದರು ಎಂಬುದಕ್ಕೆ ಮಂಥರೆಯ ಪಾತ್ರವನ್ನು ನಿದರ್ಶನವಾಗಿ ನೀಡುತ್ತಾರೆ. ಕನಿಷ್ಠ ತಂದೆ ತಾಯಿಗೂ  ಬೇಡವಾದ,  ಬೀದಿಯಲ್ಲಿ ಅನಾಥ ಮಗುವಾಗಿ ಮಲಗಿದ್ದ ದುರಾದೃಷ್ಟ  ಮಂಥರೆಯು ಕ್ರಮೇಣ ಗೂನು ಬೆನ್ನು,ನಡುಗುವ ವಿಕಾರ ದೇಹಾಕೃತಿಯನ್ನು ಹೊಂದಿ ತನಗೆ ಬಾಲ್ಯದಲ್ಲಿ ಸಿಗಬೇಕಾಗಿದ್ದ ಸಹಜ ಮಾತೃವಾತ್ಸಲ್ಯದಿಂದ ವಂಚಿತಳಾಗಿ ಸರ್ವರಿಂದಲೂ ತಿರಸ್ಕೃತಳಾಗುತ್ತಾಳೆ. ಅವಳ ಸುಪ್ತ ಮನಸ್ಸಿನ ಈ ಅತೃಪ್ತ ನೋವು ಮುಂದೆ ರಾಮಾಯಣಕ್ಕೆ ಕಾರಣವಾಗುತ್ತದೆ ಎಂದು ಕಾಪಸೆಯವರು ಪ್ರತಿಪಾದಿಸುತ್ತಾರೆ.
ಒಂದು ದಿನ ಹಸುಳೆ ರಾಮ ಮುಗಿಲ ಚಂದ್ರನನ್ನು ಕಂಡು ಆಕರ್ತಷಿತನಾಗಿ ಆ ಚಂದ್ರ ತನಗೆ ಬೇಕೆಂದು ಮಗುಸಹಜ ಹಟವಿಡಿದಾಗ ಅರಮನೆಯ ಎಲ್ಲರೂ ರಾಜನನ್ನು ಸಂತೈಸುವಲ್ಲಿ ವಿಫಲರಾಗುತ್ತಾರೆ.ಆಗ ಮಂಥರೆ ಕನ್ನಡಿಯನ್ನು ತಂದು ಚಂದ್ರನನ್ನು ತೋರಿದಾಗ ರಾಮ ನಲಿಯುತ್ತಾನೆ. ಮುದ್ದಾಡುವ ಹಂಬಲದಿಂದ ಮಂಥರೆ ಮಗುವನ್ನು ಬರಸೆಳೆಯುವಾಗ ತಾಯಿ ಕೌಸಲ್ಯೆ ತಡೆದು 'ಗೂನೆ, ಕುಬ್ಜೆ,ಕೂಸನ್ನು ಸ್ಪರ್ಶಿಸಿದರೆ ಅಮಂಗಳವಾದೀತು ' ಎಂದು ತಡೆದು ಮೂದಲಿಸುತ್ತಾಳೆ.
             ಇದರಿಂದ ಕುಪಿತಗೊಂಡ ಅವಳ ಮಮತೆಯ  ಮನಸಿನಲ್ಲಿ  ಈ ಅಪಮಾನದ ಬೀಜ ಹೆಮ್ಮರವಾಗಿ ಬೆಳೆದು ಮುಂದೆ  ರಾಮನನ್ನು ಕಾಡಿಗೆ ಕಳುಹಿಸುವುದರಲ್ಲಿ ತಪ್ತವಾಗುತ್ತದೆ ಎಂಬುದನ್ನು ಗುರುತಿಸುತ್ತಾರೆ. ಈ ಮನಶಾಸ್ತ್ರೀಯ  ದೃಷ್ಡಿಕೋನವನ್ನೇ ಇನ್ನಷ್ಟು ವಿಸ್ತರಿಸುವುದಾದರೆ, ರಾವಣನು   ಸ್ವಯಂವರದಲ್ಲಿ ಸೀತೆಯನ್ನು ಗೆಲ್ಲಲಾಗದೆ ಅಪಹಾಸ್ಯಕ್ಕಿಡಾಗಿ   ಈಡೇರದ ಬಯಕೆಯಾಗಿಯೇ ಉಳಿದ ರಾವಣನ ಅತೃಪ್ತ ಮನಸಿನ 'ತೀರದ ಆಸೆ' ಸೀತೆಯನ್ನು ಅಪಹರಿಸುವಲ್ಲಿ ಮುಕ್ತಿ ಕಾಣುತ್ತದೆ ಎಂದು ವಿಶ್ಲೇಷಿಸಬಹುದು.ಊರ್ಮಿಳೆಯ ಪತಿಭಕ್ತಿಯ ಮನಸ್ಸನ್ನು ಕುವೆಂಪುರವರು ತಪಸ್ಸಿನ ಸಾತ್ವಿಕ ಶಕ್ತಿಯ ಕಡೆಗೆ ತಿರುಗಿಸುತ್ತಾರೆ.
ರಾಮ ಲಕ್ಷ್ಮಣರು ಕಾಡಿನೊಳಗೆ ಬರುತ್ತಿರುವಾಗ ಧುತ್ತನೆ ಪ್ರತ್ಯಕ್ಷವಾದ  ಕೈಗಳಿಲ್ಲದ ದೈತ್ಯಾಕಾರದ ರಕ್ಕಸನ ರೂಪವನ್ನು, ಮನಶಾಸ್ತ್ರೀಯ ಹಿನ್ನಲೆಯಲ್ಲಿ ಅವಲೋಕಿಸಿದಾಗ ಅದು  ಸೀತೆಯನ್ನು ಕಳೆದುಕೊಂಡ ದುಃಖದಿಂದ ರಾಮನ ಮನದಲ್ಲಿ ಸೃಷ್ಟಿಯಾದ ಮಾನಸಿಕ ಪ್ರಕ್ಷುಬ್ಧತೆ ತೊಳಲಾಟಗಳೆ ಕಣ್ಣೆದುರಿನ ರಕ್ಕಸ ರೂಪವಾಗಿ ಮೈವೆತ್ತಂತೆ ಭಾಸವಾಗುತ್ತದೆ.
ಇದಕ್ಕೆ ಪುಷ್ಟಿ ನೀಡುವಂತೆ, ತನ್ನ ತಮ್ಮ ಲಕ್ಷ್ಮಣನಿಗೆ ಪ್ರಾಣ ಉಳಿಸಿಕೊಳ್ಳಲು 'ಓಡು ಇಲ್ಲಿಂದ ತಪ್ಪಿಸಿಕೊ' ಎಂಬ ಹೆದರಿಕೆಯ ಮಾತುಗಳನ್ನು  ಸರ್ವಶಕ್ತ ರಾಮ ಆಡುತ್ತಾನೆಂದರೆ ಅವನಲ್ಲಿ ಮನೆ ಮಾಡಿದ್ದ ಸೀತಾಕಾರಣ ದ ಮಾನಸಿಕ ಹೊಯ್ದಾಟ ಹಾಗೂ ದುಃಖಗಳು ಹೇಗೆ ಅವನ ತನುಮನಗಳನ್ನಾವರಿಸಿ ಅಶಕ್ತತೆಯನ್ನು ತಂದಿತ್ತು ಎಂಬುದರ  ಅರಿವು ನಮಗಾಗದಿರದು. ಹೀಗೆ ಮನಶಾಸ್ತ್ರವನ್ನು ತಮ್ಮ ಕಾವ್ಯದಲ್ಲಿ ಒಂದು ಅನ್ವಯಿಕ ವಿಜ್ಞಾನವಾಗಿ ಅತ್ತ್ಯಂತ ಸಮರ್ಥವಾಗಿ ಬಳಸಿದವರು ಕುವೆಂಪುರವರು. ಈ ರಾಮಾಯಣದರ್ಶನಂ ಎಂಬ ಕವಿಯ ಕಾವ್ಯದ ಮೂಸೆಯಲ್ಲಿ ಇಲ್ಲಿಯ  ಪ್ರತಿಯೊಂದು  ಪಾತ್ರವೂ ತಮ್ಮ ವ್ಯಕ್ತಿತ್ವದ ಕಲ್ಮಶಗಳನ್ನೆಲ್ಲಾ ಕಳೆದುಕೊಂಡು ಆತ್ಮೋದ್ಧಾರದ ಉನ್ನತ ಶೃಂಗವೇರಿ ಅಪ್ಪಟ ಸುವರ್ಣವಾಗಿ ಕಂಗೊಳಿಸುತ್ತವೆ.ಇಲ್ಲಿ ಬರುವ ಸೂತ್ರಧಾರಿ  ಕೈಕೆಗೂ ಕೂಡ ರಾಮನು 'ತಾಯಿ, ನನ್ನನ್ನು ಸೇರಿ ಈ ರಾಮಾಯಣದ ಹಲವಾರು  ಜೀವಗಳ ಉದ್ಧಾರಕ್ಕೆ ಕಾರಣವಾಗಿರುವ ನೀನೇ ಅತಿ ಮುಖ್ಯಳು.'ಎಂಬ   ವಾಕ್ಯಗಳಿಂದ ಅವಳಿಗೂ ಆತ್ಮವಿಕಾಸದ ಹಾದಿಯನ್ನು  ಕಲ್ಪಿಸುತ್ತಾರೆ ಕುವೆಂಪುರವರು.
ಕುವೆಂಪುರವರ ದರ್ಶನದ ಕಣ್ಣಿಗೆ ಬಿದ್ದ ಮತ್ತೊಂದು ಮಮತಾಮಯಿ ಪಾತ್ರವೆಂದರೆ ಶಬರಿಯದು.ಅವಳಿಗಾಗಿ 'ಶಬರಿಗಾದನು ಅತಿಥಿ ದಾಶರಥಿ' ಎಂಬ ಇಡೀ ಅಧ್ಯಾಯವೇ ಮೀಸಲಾಗಿದೆ. ಇಲ್ಲಿಯ  ಶಬರಿಯ ಪಾತ್ರವಂತೂ ಮಮತೆಯ ಕಡಲಾಗಿ ಉಕ್ಕಿಹರಿಯುವ  ಮಾತೃಹೃದಯದ ಪ್ರತೀಕವಾಗಿದೆ.'ರಾಮನ ದರ್ಶನಕ್ಕಾಗಿ ಹಗಲು ರಾತ್ರಿಗಳೆನ್ನದೆ ಕನಸು ಮನಸುಗಳಲ್ಲಿಯೂ ರಾಮ ಮಂತ್ರವನ್ನೇ ಜಪಿಸುತ್ತಾ    ಪ್ರತಿಕ್ಷಣವೂ  ತುಡಿಯುವ ಅವಳ ಕಾಯುವಿಕೆ ತಪಸ್ಸಾಗಿ ಪರಿಣಮಿಸಿದೆ.
ಸುತ್ತಲೂ ಹಸಿರು ಚೆಲ್ಲಿದ ಆವರಣ ಹೊಂದಿದ ಗುಡಿಸಿಲಿನಲ್ಲಿ ತನ್ನ ಬದುಕಿನ ಸಂಧ್ಯಾಕಾಲದಲ್ಲಿ ಯಾವುದೇ ಕ್ಷಣದಲ್ಲೂ ಬಿದ್ದುಹೋಗಬಹುದಾದ  ನಡುಗುವ ಮುಪ್ಪಾದ  ದೇಹವನ್ನು ಹೊತ್ತು , ಜೇನು, ಹಣ್ಣು ಹಂಪಲಗಳನ್ನು ಹಿಡಿದು'ಎಲ್ಲಿರುವನೊ, ಎಂದು ಬರುವನೊ ನನ್ನಯ್ಯ,ದೃಷ್ಟಿ  ಮಂಜಾಗಿ ಕಳೆದುಹೋಗುವುದಕ್ಕಿಂತ  ಮುನ್ನ  ದರ್ಶನ ನೀಡು'  ಎಂದು ರಾಮನಿಗಾಗಿಯೇ ಜೀವವನ್ನು ಹಿಡಿದುಕೊಂಡಿರುವ ಶಬರಿಯ  ರಾಮನೆಡೆಗಿನ ಶ್ರದ್ಧೆ, ಭಕ್ತಿ ವಾತ್ಸಲ್ಯಗಳು ಅವಳನ್ನು ಅಮರಳನ್ನಾಗಿಸಿದೆ; ಕುವೆಂಪುರವರ ಕವಿದರ್ಶನದಲ್ಲಿ ಶಬರಿ
"ಕಣ್ಮುಚ್ಚಿದಳು ಆ ಅಮರ ಸನ್ಮಾನ್ಯೆ
ದೇವ ಸೀತಾನಾಥ ದಿವ್ಯಶ್ರು
ತೀರ್ಥ ಜಲ ಸಂಸ್ನಾತೆ ಸಂಪೂತೆ
ಮರಣದ ಶಿವಕಳೇಬರೆ ಧನ್ಯೆ" 
ಎಂದು ಕವಿಯ ಶಬ್ದಮಜ್ಜನದ ಮೂಲಕ  ಸನ್ಮಾನಿತಳಾಗುತ್ತಾಳೆ.
ಕಾಡಿನ ಮಡಿಲಲ್ಲಿ ಅವಳು ಮಮತೆಯ ಹೂವಾಗಿದ್ದಾಳೆ.
ರಾಮ ಮತ್ತು ಲಕ್ಷ್ಮಣರು ಶಬರಿಯ ಆಶ್ರಮಕ್ಕೆ  ಬಂದಾಗ ತಡವಾಗಿ ಗುರುತಿಸಿದ ತಕ್ಷಣ ಆಕೆಯಲ್ಲಿ ಸ್ಫುರಿಸಿದ ಆತ್ಮಾನಂದಕ್ಕೆ ಪಾರವೇ ಇಲ್ಲ ಅವಳ ಪ್ರಾಣ ಪಾತ್ರೆ  ರಾಮದರ್ಶನದಿಂದುಂಟಾದ ಪರಮಾನಂದದಿಂದ  ತುಂಬಿ ಹೋಯಿತು.ಸೀತೆಯ ದುಃಖದಲ್ಲಿ ಕಳೆಗುಂದಿದ ರಾಮನ ಶಕ್ತಿಯನ್ನು  ತನ್ನ ನಿರ್ಮಲ ತಪೋತೇಜದಿಂದ ಪುನಶ್ಚೇತನಗೊಳಿಸುತ್ತಾಳೆ.

ಕುವೆಂಪು ರವರ ದಾರ್ಶನಿಕ ದೃಷ್ಟಿ ಭವ್ಯ ಮಹೇಂದ್ರಾಚಲದ ಮೇಲೆ ನಿಂತು ಪರ್ವತವನೊತ್ತಿ ನಭಕ್ಕೆ ಚಿಮ್ಮಿದ ಆಂಜನೇಯನ ಯೌಗಿಕ ಅನಂತಶಕ್ತಿಯನ್ನೂ ಬಿಟ್ಟಿಲ್ಲ. ಶ್ರದ್ಧೆ ನಿರ್ಮಲ ಪ್ರೇಮ ಭಕ್ತಿ ವಾತ್ಸಲ್ಯಗಳ ಆಗರವಾದ ಶಬರಿಯಲ್ಲಡಗಿರುವ ಸಾತ್ವಿಕ ಶಕ್ತಿಯನ್ನೂ ಬಿಟ್ಟಿಲ್ಲ; ಊರ್ಮಿಳೆಯು ಪತಿಗಾಗಿ ಕಾಯುವ  ಪತಿಭಕ್ತಿಯ ತಪಸ್ಸನ್ನೂ ಬಿಟ್ಟಿಲ್ಲ.ದುಷ್ಟೆ ಎಂದು ಹಣೆಪಟ್ಟಿ ಹೊತ್ತು ಮೂಲರಾಮಾಯಣದಲ್ಲಿ ತಿರಸ್ಕಾರಕ್ಕೊಳಗಾದ ಈಗಲೂ ನಾವು ನಮ್ಮೊಳಗೆ ಕರುಣೆಯ ಹೃದಯದಲ್ಲಿ ಸ್ಥಾನ ಕಲ್ಪಿಸಲು  ಹಿಂಜರಿಯುತ್ತಿರುವ ಮಂಥರೆಯ ಕೈಕೆಯೆಡೆಗಿನ ಮಮತೆಯನ್ನೂ ಬಿಟ್ಟಿಲ್ಲ;ರಾಮಚಂದ್ರನಂತೂ ಕಥೆಯ ನಾಯಕನಾಗಿದ್ದು, ಅವನ ಸರ್ವಸ್ವವೂ ಕವಿಯ ದರ್ಶನದ ಕಣ್ಣಿಗೆ  ಹಿಮಾಲಯವಾಗಿ ದೃಗ್ಗೋಚರವಾಗಿದೆ.ರಾಮ ಇಲ್ಲಿ ಕೇವಲ  ವ್ಯಕ್ತಿಯಾಗಿ ಬಣ್ಣಿಸಲ್ಪಟ್ಟಿಲ್ಲ,ರಾಮಾಯಣದಲ್ಲಿ ತನ್ನ ಪ್ರಭಾವಲಯಕ್ಕೆ ಬರುವ ಸಕಲ ಜೀವಾತ್ಮಗಳಿಗೆ ಲೇಸನೇ ಬಯಸುವ, ಆತ್ಮೋಧ್ಧಾರದ ಮಾರ್ಗವನ್ನು ಕರುಣಿಸುವ ತಪಶ್ಶಾಲಿಯಾಗಿ ತೋರುತ್ತಾನೆ.ಸರ್ವರಿಗೂ  ಮುಕ್ತಿಯ ಪಥವನ್ನು ದಯಪಾಲಿಸುವ ಮಹಾಮಹಿಮನಾಗಿ  ಹೊಳೆಯುತ್ತಾನೆ.ಕುವೆಂಪುರವರು"ಪುಟ್ಟಪ್ಪ ಎಂದು  ಕರೆಯಲ್ಪಡುವ , ಕಾವ್ಯ ಗಾನಗೈಯ್ಯುತ್ತಿರುವ ಈ ಪರಪುಟ್ಟನನ್ನು ಹರಸು" ಎಂದು  ಸರಸ್ವತಿಯನ್ನು ವಿನಮ್ರವಾಗಿ ತಮ್ಮ ಕಾವ್ಯದಲ್ಲಿ  ಸ್ತುತಿಸುತ್ತಾರೆ.ತಮ್ಮ ಸಾಹಿತ್ಯದ ಮೂಲಕ ಯಾರೂ ತಲುಪಲಾಗದ  ವಿರಾಟ್ ದರ್ಶನವನ್ನು, ಭವ್ಯತೆಯ ಮಹೋನ್ನತಿಯನ್ನು  ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ದಾರ್ಶನಿಕ ಮಹಾಕವಿಯಾಗಿ, ಸಾರಸ್ವತ ಲೋಕದಲ್ಲಿ ದರ್ಶನ ಸೂರ್ಯರಾಗಿ ಅಜರಾಮರರಾದವರು ಕುವೆಂಪುರವರು.
ನಮ್ಮ  ಆಧುನಿಕ ಕಾಲಘಟ್ಟದ ಸಮಾಜದಲ್ಲಿ ಎಷ್ಟೋ ಜನ ಅತೃಪ್ತ ರಾವಣರು ಹೆಣ್ಣುಮಕ್ಕಳನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದ್ದಾರೆ.  ಮಾತಾಪಿತೃಗಳ  ಪ್ರೀತಿ ವಾತ್ಸಲ್ಯವಂಚಿತ ಅಸಂಖ್ಯಾತ ಅನಾಥ2ಮಂಥರೆಯರು ಸಮಾಜದಿಂದ ತಿರಸ್ಕೃತರಾಗಿ ನರಳುತ್ತಿದ್ದಾರೆ. ತಮ್ಮ ಕೈಕೆಯಂತಹ ರಾಣಿಯರ  ಮೋಹದ ಬಲೆಯಲ್ಲಿ ಸಿಲುಕಿದ ಎಷ್ಟೋ ಆಧುನಿಕ ದಶರಥರು ತಮ್ಮ ಮಕ್ಕಳನ್ನು ಹೊರಹಾಕಿ ಪ್ರೀತಿ ವಾತ್ಸಲದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ.ಅಸಂಖ್ಯಾತ ಆಧುನಿಕ ವಾಲಿ ಸುಗ್ರೀವ ರಂತಹ ಸಹೋದರರು ಅಪನಂಬಿಕೆಯಿಂದ  ಪರಸ್ಪರ  ಕದನಗೈದು ನಾಶವಾಗುತ್ತಿದ್ದಾರೆ.ಇವರೆಲ್ಲರನ್ನೂ ಆತ್ಮೋನ್ಮತಿಯ ಅನಂತತೆಯ ಕಡೆಗೆ ಉದ್ಧಾರದ ಮಹೋನ್ನತಿಯ ಕಡೆಗೆ ಕರೆದೊಯ್ಯಬೇಕಾದ ರಾಮ ನಂಥವರ ಅವಶ್ಯಕತೆ ಇಂದಿನ ನಮ್ಮ ಸಮಾಜಕ್ಕೆ ಹೆಚ್ಚಿದೆ. ಇಂತಹ ಆಧುನಿಕ ಸಮಾಜದಸಾಂಸ್ಕೃತಿಕ, ರಾಜಕೀಯ,ನೈತಿಕ,ತಾತ್ವಿಕ,ಆಧ್ಯಾತ್ಮಿಕ,
ಪಾರಂಪರಿಕ ಸಮಸ್ಯೆಗಳಿಗೂ ಪರಿಹಾರವನ್ನು ನೀಡಬಲ್ಲ  ಕುವೆಂಪುರವರ ಶ್ರೇಷ್ಠ ಕೊಡುಗೆಯೆಂದರೆ   ಶ್ರೀರಾಮಾಯಣದರ್ಶನಂ' ಮಹಾಕಾವ್ಯ.ಇದರಲ್ಲಿ ಬರುವ ನ್ಯಾಯ,ಸಮಾನತೆ,ಸ್ವಾತಂತ್ರ್ಯ,ರಾಜಧರ್ಮ ತತ್ವಗಳು ಸಾರ್ವಕಾಲಿಕವಾದದ್ದು. ನಮ್ಮಲ್ಲಿಯೇ ದುಷ್ಟತನಗಳನ್ನು ಆಗಾಗ ಹೊರಹಾಕುವ ರಾವಣನಿದ್ದಾನೆ ; ಒಳ್ಳೆಯತನಗಳನ್ನು ಒಳಗೊಂಡ ರಾಮನಿದ್ದಾನೆ ; ಸಹೋದರನಿಗಾಗಿ ಮಿಡಿಯುವ ಲಕ್ಷ್ಮಣನಿದ್ದಾನೆ. ಆರಾಧನೆಗಾಗಿ ಕಾಯುವ ಶಬರಿಯಿದ್ದಾಳೆ;ನಮ್ಮೊಳಗೆ ಸಂಗಾತಿಯನ್ನು ಆರಾಧಿಸುವ ಸೀತೆಯಿದ್ದಾಳೆ; ಕೆಲವೊಮ್ಮೆ ಸಾಹಸಕ್ಕೆ ಕೈಹಾಕುವ ಹನುಮನಿದ್ದಾನೆ ; ತ್ಯಾಗ ಮಾಡುವ ಭರತನಿದ್ದಾನೆ; ಮಗನ ಸ್ವಾರ್ಥಕ್ಕಾಗಿ ಬದುಕುವ ಕೈಕೆಯಿದ್ದಾಳೆ;ಮಮತೆಯಿಂದ ಕುರುಡಾಗುವ ಮಂಥರೆಯಿದ್ದಾಳೆ. ಹೀಗೆ ಇಡೀ ರಾಮಾಯಣವೇ ನಾವಾಗಿದ್ದೇವೆ ಎಂಬುದೇ  ದರ್ಶನದ ಅಂತಿಮ ಸತ್ಯವಾಗಿದೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...