Total Pageviews

Sunday 19 January 2020

ಅಲಿಬಾಬಾನ ಗುಹೆಯೊಳಗೆ

ಅಲಿಬಾಬಾನ ಗುಹೆಯೊಳಗೆ
ದಿಕ್ಕು ದಿಕ್ಕಿಗೂ ಅನುರಣಿಸುತಿದೆ
ಆಕಳಿಸುವ ಜಗದ ನೆತ್ತಿಯ 
ಮೇಲೆ ಕುಕ್ಕಿದಂತೆ
ಜ್ಯೋತಿ ಹಚ್ಚಿಟ್ಟ ಮಹಾಮನೆಯೆ ಜಗುಲಿಯೆಲ್ಲಿ
ಸಿರಿ ತುಂಬಿದ ಅರಮನೆಗಳೇ ಎಲ್ಲ ಇಲ್ಲಿ
ಗುಹೆಗಳ ಒಳ ಹೊಕ್ಕು ಬಾಚಿಕೊಂಡ
ಭೋಗದ ಚೀಲಗಳೇ ಬೆನ್ನ ಮೇಲೆ
ಅಲಿಬಾಬಾಗಳ ಕಣ್ಣುಗಳ ಭಿತ್ತಿಯೊಳಗೆ
ಮುತ್ತು ರತ್ನ ಹವಳ ಸುವರ್ಣ
ಮಹಾಮಾಲೆ
ಶರಣ ಪ್ರಮಥಂಗಳ ಮಾತು 
ಮಥನ ಅನುಭಾವದ ನವನೀತವೆತ್ತಣ
ದಾಸಯ್ಯರು ತೋರಿದ ಮಧುಸೂದನನ 
ಕೊಳಲಗಾನವೆತ್ತಣ
ಮುಕ್ತಿಯ ಪದಮಾಲಿಕೆ
ಶರೀಫರ ತಂಬೂರಿಯ ನಾದದೀಪಿಕೆ
ಮರೆತು ಹೋಗಿ ಹಾದಿ ತಪ್ಪಿದವರು
ಚಿಟ್ಟೆಯಾಗಿ ಹೊರಬರಲಾಗದ ತಹತಹಿಕೆ
ಕಾಮದೆಳೆ ಮೋಹ ಮತ್ಸರದ ಬಲೆ
ಹೆಣೆದು ಸಿಲುಕಿ ಗುದ್ದಿ ಒದ್ದಾಡಿ
ಬಳಲಿ ಬೆಂದು ಹೋದ ತೆರಣಿ
ತೊಳಲಾಟದ ಕನವರಿಕೆಯ ಕನಸು
ಸಿರಿ ಸುಖದ ಹಳಹಳಿಕೆಯ ಮನಸು
ಮಬ್ಬು ಮುಸುಕಿದ ಹಾದಿಯ ತುದಿ 
ಅಡ್ಡ ಹರಿಯುತಿದೆ ಭವದ ನದಿ
ದಡದಾಚೆ ಕರೆದೊಯ್ಯುವ ಅಂಬಿಗನ ದೋಣಿ
ಚೌಡಯ್ಯನಿಲ್ಲದೆ ಎಲ್ಲೆಲ್ಲೂ ಸೋರುವ 
ತೂತುಗಳ ಖಣಿ
ಎಲ್ಲಿ ಪಯಣದ ಯೋಗ 
ಇಲ್ಲ ಧ್ಯಾನದ ಜಾಗ
ಮಹಾಮಾಯೆಯಾಟ ಭವದ ಚಕ್ರವ್ಯೂಹ
ಸುಲಭ ಹೊರಟ ಅಭಿಮನ್ಯುಗಳಿಗೆ
ದಿಕ್ಕಿಲ್ಲದ ದ್ವಂದ್ವ ಭವಿಗಳಿಗೆ
ದುರಾಸೆ ಮೂಟೆ ಒಂದೆಡೆಗೆ 
ಧುಮ್ಮಿಕ್ಕಿ ಹರಿವ ನದಿ ಇನ್ನೊಂದೆಡೆಗೆ
ತೆರೆಯದ ಭದ್ರ ಬಾಗಿಲು ಮಗದೊಂದೆಡೆಗೆ
ಬಳಲುವುದೊಂದೇ ಕಾಯಕ
ನಿತ್ಯ ಸಂತೆಯ ಮಿಥ್ಯಗಳೊಳಗೆ 
ಸತ್ಯ ಶೋಧನೆಯ ಕುಹಕದಲಿ ಮುಳುಗಿ
ಭೋಗದರಮನೆಯೊಳಗೆ ಝಗಮಗಿಸುವ
ಥಳುಕು ಬಳುಕು
ಗುರಿಯಿಲ್ಲದ ನಾಳೆಗಳ ಕನಸು
ಮುಂದೆ ತೆವಳುವವರಿಲ್ಲ
ಹಿಂದೆ ತಳ್ಳುವವರೇ ಎಲ್ಲ
ಬಾಗಿಲ ಬಳಿ ನಿಂತನರಸ ಬಿಜ್ಜಳ 
ತಪ್ಪಿಸಿಕೊಳ್ಳದಂತೆ ಒಂದೇ ಒಂದು
ಸಾಮ್ರಾಜ್ಯದ ಹುಳ
ಕನಕನ ಕಿಂಡಿಯೇ ಬೆಳಕಿನ ಪಥ
ಸಾಹಸದ ಪಯಣ ದೂರ ಗಾವುದ
ಕಾಣುವುದಾರಿಗೋ ಎಲ್ಲ ಚೀಲ 
ಹೊತ್ತವರೇ
ಸುತ್ತುವುದಲ್ಲಿಯೇ ಗೂಡೊಳಗೆ 
ಸಿರಿಯ ಕೃತಕ ಮಯನರಮನೆಯೊಳಗೆ
ಬಂಧನ ಮುಕ್ತಿ ಬಂಧನ ಮುಕ್ತಿ
ಮಂತ್ರಜಪದ ಮಂಥನ 
ಜಾರುಬೀಳುವುದರೊಳಗೆ



Wednesday 1 January 2020


ಜಡತೆಯುರುಳು

ಬತ್ತಿದೊಡಲಲ್ಲಿಯೂ ಚಿಮ್ಮುವ 
ಜೀವನೋತ್ಸಾಹವೇ 
ನೀನೆಷ್ಟು  ಚಿರಂತನ
ಸುಕ್ಕು ಗಟ್ಟಿ ಮಡಿಕೆಗಳೆದ್ದ ಚರ್ಮ
ಕುಂಟುತ್ತಾ ಗುರಿಮುಟ್ಟುವ ಕರ್ಮ
ಜೋತುಬಿದ್ದ ಹುಬ್ಬು ದೃಷ್ಟಿ
ಬೆಂದು ಬಾಗಿ ನಡುಗುವ ಮೈ
ನಿನ್ನ ನೆಲೆಯ ಕಂಡವರೊಮ್ಮೆ 
ತಲೆದೂಗಬೇಕು ಬಾಗಿ 
ಮುನ್ನಡೆಯಬೇಕು

ಜಗದ ಬೆಳಗನೆಬ್ಬಿಸುವ ನೇಸರ 
ಸಂಜೆ ಮರೆತು ಕುಣಿಯಬೇಕು
ನೋಡಿ ಮತ್ತೆ ಬೆಳಗಬೇಕು
ಏನು ಬೆರಗು ಇಲ್ಲ ಕೊರಗು
ಚೈತನ್ಯದ ಜೊತೆಗೂಡಿ 
ಹೊರಟಿಹುದು ಅನಂತದೆಡೆಗೆ


ಸುಕ್ಕಿರದ ಒಡಲುಗಳಲಿ

ಹೊಕ್ಕುಳಿಯಲೇಕೆ ಹಿಂಜರಿಕೆ
ಓ ಜೀವನ ಪ್ರೀತಿಯೇ 
ಮುಪ್ಪರಿಗೊಂಡು ಮುಪ್ಪುಗಳಲಿ
ಆರ್ಭಟಿಸಿ ಮುನ್ನಡೆವಂತೆ
ನರ್ತಿಸುವುದಿಲ್ಲವೇಕೆ 
ಉದಯಕಾಲದ ಯುವಸಸಿಗಳಲಿ

ಆಲಸ್ಯದ ಭೂತವಿಹುದು
ದೇಹವನ್ನೇ ಮನೆಯ ಮಾಡಿ
ಜಡದ ಜೇಡ ಕಟ್ಟಿಹುದು
ಎಚ್ಚರಿಸಿ ಹೊರಗಟ್ಟಿ ತುಳಿದು
ಚೈತನ್ಯದ ನದಿ ಹರಿಸಬಾರದೇಕೆ
ಕನಸು ಬತ್ತಿರುವ ಎದೆಗಳಲಿ
ಉತ್ಸಾಹದ ಚಿಲುಮೆ ಚಿಮ್ಮಿಸಬಾರದೇಕೆ
ಕ್ರಾಂತಿ ಕಿಡಿಯ ಹೊತ್ತಿಸಿ
ಜಾಗೃತಿಯ ಮೂಡಿಸಬಾರದೇಕೆ

ಜಡತೆಯುರುಳಿನಿಂದ ಕೊರಳು
ಪಾರುಮಾಡಬಾರದೇಕೆ
ಕರ್ಮಸಿದ್ಧಾಂತದ ಹಾದಿ 
ತೋರಿ ಕರೆದೊಯ್ಯಬಾರದೇಕೆ
ಏಳಿ ಎದ್ದೇಳಿ ಎಂದರೂ
ಏಳದವರ ನಾಟಕಕೆ 
ತೆರೆ ಎಳೆಯಬಾರದೇಕೆ 


ಜಡತೆಯುರುಳು


ಬತ್ತಿದೊಡಲಲ್ಲಿಯೂ ಚಿಮ್ಮುವ
ಜೀವನೋತ್ಸಾಹವೇ
ನೀನೆಷ್ಟು  ಚಿರಂತನ
ಸುಕ್ಕು ಗಟ್ಟಿ ಮಡಿಕೆಗಳೆದ್ದ ಚರ್ಮ
ಕುಂಟುತ್ತಾ ಗುರಿಮುಟ್ಟುವ ಕರ್ಮ
ಜೋತುಬಿದ್ದ ಹುಬ್ಬು ದೃಷ್ಟಿ
ಬೆಂದು ಬಾಗಿ ನಡುಗುವ ಮೈ
ನಿನ್ನ ನೆಲೆಯ ಕಂಡವರೊಮ್ಮೆ
ತಲೆದೂಗಬೇಕು ಬಾಗಿ
ಮುನ್ನಡೆಯಬೇಕು
ಜಗದ ಬೆಳಗನೆಬ್ಬಿಸುವ ನೇಸರ
ಸಂಜೆ ಮರೆತು ಕುಣಿಯಬೇಕು
ನೋಡಿ ಮತ್ತೆ ಬೆಳಗಬೇಕು
ಏನು ಬೆರಗು ಇಲ್ಲ ಕೊರಗು
ಚೈತನ್ಯದ ಜೊತೆಗೂಡಿ
ಹೊರಟಿಹುದು ಅನಂತದೆಡೆಗೆ
ಸುಕ್ಕಿರದ ಒಡಲುಗಳಲಿ
ಹೊಕ್ಕುಳಿಯಲೇಕೆ ಹಿಂಜರಿಕೆ
ಓ ಜೀವನ ಪ್ರೀತಿಯೇ
ಮುನ್ನಡೆಸುವಂತೆ
ಮುಪ್ಪರಿಗೊಂಡು ಮುಪ್ಪುಗಳಲಿ
ಆರ್ಭಟಿಸಿ ಮುನ್ನಡೆವಂತೆ
ನರ್ತಿಸುವುದಿಲ್ಲವೇಕೆ
ಉದಯಕಾಲದ ಯುವಸಸಿಗಳಲಿ
ಆಲಸ್ಯದ ಭೂತವಿಹುದು
ದೇಹವನ್ನೇ ಮನೆಯ ಮಾಡಿ
ಜಡದ ಜೇಡ ಕಟ್ಟಿಹುದು
ಎಚ್ಚರಿಸಿ ಹೊರಗಟ್ಟಿ ತುಳಿದು
ಚೈತನ್ಯದ ನದಿ ಹರಿಸಬಾರದೇಕೆ
ಕನಸು ಬತ್ತಿರುವ ಎದೆಗಳಲಿ
ಉತ್ಸಾಹದ ಚಿಲುಮೆ ಚಿಮ್ಮಿಸಬಾರದೇಕೆ
ಕ್ರಾಂತಿ ಕಿಡಿಯ ಹೊತ್ತಿಸಿ
ಜಾಗೃತಿಯ ಮೂಡಿಸಬಾರದೇಕೆ
ಜಡತೆಯುರುಳಿನಿಂದ ಕೊರಳು
ಪಾರುಮಾಡಬಾರದೇಕೆ
ಕರ್ಮಸಿದ್ಧಾಂತದ ಹಾದಿ
ತೋರಿ ಕರೆದೊಯ್ಯಬಾರದೇಕೆ
ಏಳಿ ಎದ್ದೇಳಿ ಎಂದರೂ
ಏಳದವರ ನಾಟಕಕೆ
ತೆರೆ ಎಳೆಯಬಾರದೇಕೆ
x

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...