Total Pageviews

Wednesday 1 January 2020

ಜಡತೆಯುರುಳು

ಬತ್ತಿದೊಡಲಲ್ಲಿಯೂ ಚಿಮ್ಮುವ 
ಜೀವನೋತ್ಸಾಹವೇ 
ನೀನೆಷ್ಟು  ಚಿರಂತನ
ಸುಕ್ಕು ಗಟ್ಟಿ ಮಡಿಕೆಗಳೆದ್ದ ಚರ್ಮ
ಕುಂಟುತ್ತಾ ಗುರಿಮುಟ್ಟುವ ಕರ್ಮ
ಜೋತುಬಿದ್ದ ಹುಬ್ಬು ದೃಷ್ಟಿ
ಬೆಂದು ಬಾಗಿ ನಡುಗುವ ಮೈ
ನಿನ್ನ ನೆಲೆಯ ಕಂಡವರೊಮ್ಮೆ 
ತಲೆದೂಗಬೇಕು ಬಾಗಿ 
ಮುನ್ನಡೆಯಬೇಕು

ಜಗದ ಬೆಳಗನೆಬ್ಬಿಸುವ ನೇಸರ 
ಸಂಜೆ ಮರೆತು ಕುಣಿಯಬೇಕು
ನೋಡಿ ಮತ್ತೆ ಬೆಳಗಬೇಕು
ಏನು ಬೆರಗು ಇಲ್ಲ ಕೊರಗು
ಚೈತನ್ಯದ ಜೊತೆಗೂಡಿ 
ಹೊರಟಿಹುದು ಅನಂತದೆಡೆಗೆ


ಸುಕ್ಕಿರದ ಒಡಲುಗಳಲಿ

ಹೊಕ್ಕುಳಿಯಲೇಕೆ ಹಿಂಜರಿಕೆ
ಓ ಜೀವನ ಪ್ರೀತಿಯೇ 
ಮುಪ್ಪರಿಗೊಂಡು ಮುಪ್ಪುಗಳಲಿ
ಆರ್ಭಟಿಸಿ ಮುನ್ನಡೆವಂತೆ
ನರ್ತಿಸುವುದಿಲ್ಲವೇಕೆ 
ಉದಯಕಾಲದ ಯುವಸಸಿಗಳಲಿ

ಆಲಸ್ಯದ ಭೂತವಿಹುದು
ದೇಹವನ್ನೇ ಮನೆಯ ಮಾಡಿ
ಜಡದ ಜೇಡ ಕಟ್ಟಿಹುದು
ಎಚ್ಚರಿಸಿ ಹೊರಗಟ್ಟಿ ತುಳಿದು
ಚೈತನ್ಯದ ನದಿ ಹರಿಸಬಾರದೇಕೆ
ಕನಸು ಬತ್ತಿರುವ ಎದೆಗಳಲಿ
ಉತ್ಸಾಹದ ಚಿಲುಮೆ ಚಿಮ್ಮಿಸಬಾರದೇಕೆ
ಕ್ರಾಂತಿ ಕಿಡಿಯ ಹೊತ್ತಿಸಿ
ಜಾಗೃತಿಯ ಮೂಡಿಸಬಾರದೇಕೆ

ಜಡತೆಯುರುಳಿನಿಂದ ಕೊರಳು
ಪಾರುಮಾಡಬಾರದೇಕೆ
ಕರ್ಮಸಿದ್ಧಾಂತದ ಹಾದಿ 
ತೋರಿ ಕರೆದೊಯ್ಯಬಾರದೇಕೆ
ಏಳಿ ಎದ್ದೇಳಿ ಎಂದರೂ
ಏಳದವರ ನಾಟಕಕೆ 
ತೆರೆ ಎಳೆಯಬಾರದೇಕೆ 


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...