Total Pageviews

Monday 25 May 2020

ಭೃಂಗದ ಬೆನ್ನೇರಿ...

ಭೃಂಗದ ಬೆನ್ನೇರಿ...
ಒಂದು ಶುಭೋದಯದಲ್ಲಿ ಮನೆಯಂಗಳದಲ್ಲಿ ಬೆಳೆದು ನಿಂತ ಬೇವು, ಮಾವು, ಬದಾಮಿ, ಕಣಗಿಲೆ, ಜಾಜಿ, ಮಲ್ಲಿಗೆ, ಹಲಸಿನ ಸಸಿಗಳೊಂದಿಗೆ ಕುಶಲೋಪರಿಗಿಳಿದು ಮಾತನಾಡುತ್ತಿದ್ದೆ. ಬೇಸಿಗೆಯಾದ್ದರಿಂದ ಹಿಂದಿನ ದಿನವೆಲ್ಲಾ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ತಲೆಯಾದಿಯಾಗಿ ಅಂಗಾಂಗಳನ್ನೆಲ್ಲಾ ಕಾಯಿಸಿಕೊಂಡು ಸುಸ್ತಾದಂತಿದ್ದ ಸಸ್ಯಗಳ ಕೈಹಿಡಿದು ಸವರಿ, ಸಂತೈಸುತ್ತಾ, ರಾತ್ರಿಯೆಲ್ಲಾ ತಂಗಾಳಿಯಲ್ಲಿ ನೆನೆದು ತಂಪಾದ ಬೆಳದಿಂಗಳ ಅನುಭವಗಳನ್ನು ಹೆಕ್ಕಿ ತೆಗೆದು ತರುಲತೆಗಳ‌ ಮನಸ್ಸನ್ನು‌ ಮುದಗೊಳಿಸಬೇಕೆನ್ನಿಸಿ, ಒಂದೊಂದರ ಹತ್ತಿರವೂ ನಿಂತು, ರಂಬೆ, ಕೊಂಬೆ, ಎಲೆ, ಚಿಗುರು, ಹೂಗಳ ಮೈದಡವಿ ನೇವರಿಸುತ್ತಾ, ತಣಿರಸದಂತಿದ್ದ ತಂಪು ನೀರನ್ನೆರೆದು ಸಲ್ಲಾಪಕ್ಕಿಳಿದೆ. ಸಾವರಿಸಿಕೊಂಡು ಬಾಗಿ ಅಪ್ಪಿಕೊಳ್ಳುತ್ತಿರುವಂತೆ, ಬೀಸುತ್ತಿರುವ ಮರುಳ ಸುಳಿಗಾಳಿಗೆ ತಮ್ಮ ಅಂಗಾಂಗಳನ್ನೆಲ್ಲಾ ಮುಂದೆ ಚಾಚಿ ಧನ್ಯವಾದಗಳನ್ನು ಹೇಳುತ್ತಿರುವಂತೆ ಭಾಸವಾಗಿ, ಧನ್ಯತೆಯಿಂದ ಕಣ್ತುಂಬಿಕೊಂಡೆ. ಇಬ್ಬನಿಯಿಲ್ಲದೇ ಶುಷ್ಕವಾದಂತಿದ್ದ ವಾತಾವರಣಕ್ಕೀಗ, ಕರುಳಕುಡಿಯಂತಿದ್ದ ಸಸ್ಯಗಳ ಈ ಪ್ರೀತಿಯ ರೀತಿ ಕಂಡಾಗ, ಗೊತ್ತಿಲ್ಲದೇ ನನ್ನೊಳಗೆ ಹುಟ್ಟಿದ ಆನಂದಭಾಷ್ಪಗಳು ಸೇರಿಕೊಂಡು ಸನ್ನಿವೇಶವನ್ನು ಆರ್ದ್ರವಾಗಿಸಿತು. ಕ್ಷಣ ಹೊತ್ತು ಭಾವುಕನಾದೆ.  ಆ ಬಗೆ ಬಗೆಯ ಫಲ-ಪುಷ್ಪ ಸಸಿಗಳ ಬೇರಿಗೆರೆದ ಜಲಾಮೃತ ನಿಧಾನವಾಗಿ ಇಂಗಿ ಹೋಗುವಂತೆ, ಕ್ರಮೇಣ ಕಣ್ಣಹನಿಗಳೂ ಎದೆಯೊಳಗಿಳಿದು ಹಾಗೇ ಬತ್ತಿಹೋದವು. ಮತ್ತೆ ಶುಭೋದಯದ ಅಂಗಣಕ್ಕಿಳಿದೆ. ನೇಸರನ ಕಿರಣಗಳ ರಂಗೋಲಿ, ಅಂಗಳದಲ್ಲಿನ ಸಸ್ಯಸಂಕುಲ, ಕುಸುಮಗಳ ಸುತ್ತವೇ ನೆರೆದು ಮಧುವನ್ನರಸಿ ಹೊರಟ ದುಂಬಿಗಳ ಬಳಗ, ರಂಗುರಂಗಿನ ಚಾಮರದಂತಿದ್ದ ಚಿಟ್ಟೆಯ ರೆಕ್ಕೆಗಳ ಬೀಸುವಿಕೆ, ಗಿಳಿ, ಕೋಗಿಲೆ, ಗುಬ್ಬಿಗಳ ಉದಯಗಾನ, ಹೀಗೆ ಎಲ್ಲವೂ, ಎಲ್ಲರನ್ನೂ ಆಮಂತ್ರಿಸಿ, ಕರೆದು ಮೇಳೈಸಿದಂತಿತ್ತು ಆ ಶುಭೋದಯದ ದಿಬ್ಬಣಕ್ಕೆ.  ಬಹುಶಃ ನಾವೆಲ್ಲರೂ ಆಚರಿಸುವ ಯೋಜಿತ ಹಬ್ಬ, ಉತ್ಸವಗಳಲ್ಲಿಯೂ ಈ ಮಟ್ಟದ ಪ್ರಕೃತಿ ಸಹಜ ಮೇಳೈಸುವಿಕೆ ಅಸಾಧ್ಯವೇನೋ ? ಅಂತೂ, ಪ್ರಕೃತಿಯ ಮೆರವಣಿಗೆಯ ಸಂಭ್ರಮ ಮನೆ ಮಾಡಿತು. ಆಕಸ್ಮಾತ್ ಆಗಿ ಅಂದು ಸರಿಯಾದ ಸಮಯಕ್ಕೆ ದಾಂಗುಡಿಯಿಟ್ಟ ಮಂಗಗಳಿಂದಾಗಿ, ಅದು ಮಂಗಣ್ಞನ ಮದುವೆಯ ದಿಬ್ಬಣವಾಗಿ ಪರಿವರ್ತನೆಯೂ ಆಗಿಹೋಯಿತು. ಮಂಗಗಳ ಚೆಲ್ಲಾಟದ ಮದುವೆಯೆಂದರೆ ಕೇಳಬೇಕೆ ? ಎಲೆ, ಹೂ, ಹಣ್ಣು, ಕಾಯಿ, ತಾಂಬೂಲಗಳನ್ನು ಸಂಗ್ರಹಿಸುವುದೇ ಬೇಡ. ಆಗಸದಲ್ಲಿ ನಿಂತು ಆಶೀರ್ವದಿಸುತ್ತಿರುವ ದೇವತೆಗಳ ಕೈಯ್ಯಿಂದ ಉದುರುತ್ತಿರುವಂತೆ, ಸಕಲ ಮಂಗಳ ಪರಿಕರಗಳೆಲ್ಲವೂ ಧರೆಗೆ ಇಳಿಯಹತ್ತಿದವು. ಕೆಲವೊಮ್ಮೆ ಏಕಕಾಲಕ್ಕೆ, ಮತ್ತೊಮ್ಮೆ ಒಂದಾದ ನಂತರವೊಂದರಂತೆ. ಆಂಜನೇಯನ ಕಾಟದಿಂದ ಬೇಸತ್ತು ಹೀಗೆ ಒಲ್ಲದ ಮನಸ್ಸಿನಿಂದ, ಕಿರುಕುಳದ ಮುನಿಸಿನಿಂದ,    ಒತ್ತಾಯಪೂರ್ವಕವಾಗಿ, ತಮ್ಮಲ್ಲಿರುವ ಪರ್ಣಫಲಪುಷ್ಪಗಳ  ಚೀಲ ಬರಿದಾಗುವವರೆಗೂ ಮಂತ್ರಾಕ್ಷತೆಯನ್ನು ಸಲ್ಲಿಸಿ ಸಂಭ್ರಮಪಟ್ಟಂತೆ ಶುಭಾಶಯ ಹೇಳಿ ಸುಮ್ಮನಾಗಿಬಿಟ್ಟವು ಗಿಡಮರ, ಕೀಟ, ಪಕ್ಷಿ ಸಂಕುಲಗಳು.

   ವಸಂತದ ಒಂದು ಶುಭೋದಯದ ವಿಶೇಷ ಹಬ್ಬವೊಂದು ಕಣ್ಣೆದುರೇ ಅಂತರಂಗದಲ್ಲಿ ಅಚ್ಚೊತ್ತಿದಂತೆ ನಡೆದುಹೋಯಿತು. ಇದನ್ನು ಮಂಗಣ್ಣನ ಮದುವೆಯೆಂದೋ, ನೇಸರನ ಮೆರವಣಿಗೆಯೆಂದೋ,  ಇಲ್ಲವೇ ಪ್ರತಿನಿತ್ಯ ನಡೆಯುವ ಪ್ರಕೃತಿಯ‌ ನಿತ್ಯೋತ್ಸವವೆಂದಾದರೂ ಕರೆಯಿರಿ. ಒಟ್ಟಂದದಲ್ಲಿ ಮನೆಯಂಗಳದಲ್ಲಂತೂ ಚೈತ್ರವು ಹಬ್ಬಿಕೊಂಡ ಹಬ್ಬವೊಂದು ಸದ್ದಿಲ್ಲದೇ ಹೀಗೆ ಜರುಗಿಹೋಯಿತು. ಪಾಲ್ಗೊಂಡವರಲ್ಲಿ ನಾನೊಬ್ಬನೇ ಮನುಷ್ಯಜಾತಿ ಎನ್ನುವುದೇ ಹೆಮ್ಮೆಯ ಸಂಗತಿ!. ಅಲೌಕಿಕ ಭಾವಸಂತೃಪ್ತಿಯನ್ನನುಭವಿಸಿದ ಅನುಭಾವಿಯಾಗಿ ಸಂಭ್ರಮಿಸಿದೆ.  ಹಬ್ಬವೆಲ್ಲಾ ಮುಗಿದು ಹೋಗಿ, ಕೆಲಹೊತ್ತಿನ ನಂತರ, ಧ್ಯಾನದಂತಹ ಮೌನ ಆವರಿಸಿತು  ಅಂಗಳದ ಉದ್ಯಾನವನದಲ್ಲಿ. ಜೊತೆ ಜೊತೆಗೆ ಎದೆಯಾಳದಲ್ಲಿಯೂ. ಧೋ ಎಂದು ಸುರಿದ ಮಳೆಯ ನಂತರವೂ ತೊಟ್ಟಿಕ್ಕುವ ಹನಿಗಳು ಆಗೊಮ್ಮೆ ಈಗೊಮ್ಮೆ ಇಳೆಗಿಳಿಯುವಂತೆ, ಮೌನದೊಳಗಿಂದಲೇ ಹುಟ್ಟಿದ ನಾದದ ರೀತಿಯಲ್ಲಿ ಎಲ್ಲಿಂದಲೋ ಬಂದ ದುಂಬಿಗಳ ಝೇಂಕಾರ ಉದ್ಯಾನವನದಲ್ಲಿ ಅನುರಣಿಸಹತ್ತಿತು. ಪರೀಕ್ಷಿಸಿದೆ. ಹೌದು, ಜೇನುಹುಳುಗಳೇ ಅವು. ಅಪರೂಪದ ಮಿಂಚುಹುಳುಗಳಂತೆ ಅಲ್ಲೊಂದು ಇಲ್ಲೊಂದು ವಿರಳವಾಗಿ ಕಂಡುಬರುತ್ತಿದ್ದ ದುಂಬಿಗಳಿಂದು, ತಮ್ಮ ಮನೆ ಮಂದಿಯೊಂದಿಗೆ ಧಾವಿಸಿದ್ದನ್ನು ಗಮನಿಸಿದರೆ, ಇಲ್ಲೋ  ಎಲ್ಲೋ ನೆರೆದು ಕುಳಿತ ಇವುಗಳ ಜಾತ್ರೆಯ  ಸುಳಿವಿರಬೇಕಿದು ಎಂದುಕೊಂಡು ಉದ್ಯಾನವನವನ್ನೆಲ್ಲಾ ತಡಕಾಡಿದೆ‌. ಯಾವ ಸುಳಿವೂ ದಕ್ಕಲಿಲ್ಲ. ನದಿ ಮೂಲ, ಋಷಿ ಮೂಲಗಳನ್ನು ಹುಡುಕಿ ಹೋಗುವಂತೆ, ದುಂಬಿಗಳು ಹರಿದುಬರುತ್ತಿದ್ದ ಮೂಲವನ್ನು  ಅನ್ವೇಷಿಸಿ ಹೊರಟೆ.‌ ಕೊಲಂಬಸ್ ನಿಗಾದ ಶೋಧನೆಯ ಅನುಭವವೇ ನನಗೂ ಆಯಿತು. ಅವನು ಗುಲಾಬಿ ಯಿಂದಲಂಕರಿಸಿದ ಅಮೇರಿಕನ್ನರ ನಾಡು‌ ಕಂಡುಹಿಡಿದ. ನಾನಿಲ್ಲಿ ಗುಂಪೆ ಹಾಕಿದ ಒಣ ಕೊರಡುಗಳ ಸಂದಿಯೊಳಗೆ ಮೈಮೇಲೆಲ್ಲಾ ಕಪ್ಪು ಹಾಗೂ ಕೇಸರ ವರ್ಣದ ಪಟ್ಟೆಗಳೆಂಬ ನಿಸರ್ಗ ಸಹಜ ಟ್ಯಾಟೂ ಹಾಕಿಸಿಕೊಂಡ  ಜೇನ್ನೊಣಗಳ ಗೂಡನ್ನು ಶೋಧಿಸಿದೆ!. ಅಂಗಳದಲ್ಲಿ ಗುಡ್ಡೆ ಹಾಕಿದ  ಕೊರಡುಗಳ ಸಂದಿಯೊಳಗೆ ಜೇನುದುಂಬಿಗಳ ಸಂಸಾರವು ಕಟ್ಟಿದ ಗೂಡೊಂದು ಚಿಕ್ಕದಾದ ಕೊರಡು ತುಂಡಿನ ಆಧಾರದಿಂದ, ಬಾವಲಿಯೊಂದು ಮರದ ರೆಂಬೆಗೆ ತಲೆ ಕೆಳಗಾಗಿ ಜೋತುಬಿದ್ದಂತೆ, ನೇತಾಡುತ್ತಿತ್ತು. ಅಬ್ಬಾ! ಅದೆಂತಹ ಗಿಜಿಗಿಡುವ ದುಂಬಿಗಳ ಜಾತ್ರೆ. ಅತ್ತ ಕೊರೊನಾದಿಂದ ಜನರೆಲ್ಲಾ ಹೊರಬರದೇ ಬೀದಿಗಳೆಲ್ಲಾ ಸ್ಮಶಾನ ಮೌನವನ್ನನುಭವಿಸುತ್ತಿದ್ದರೆ, ಇತ್ತ ಯಾವ ಕೊರೊನಾನೂ ಲೆಕ್ಕಿಸದೇ , ಒಬ್ಬರ ಮೇಲೊಬ್ಬರು ಬಿದ್ದು ತರಕಾರಿಯನ್ನೋ,‌ ಹಾಲನ್ನೋ, ದಿನಸಿಯನ್ನೋ, ಸಿಕ್ಕೀತೋ ಇಲ್ಲವೋ ಎಂಬಂತೆ ಧಾವಂತದಿಂದ ಕೊಂಡುಕೊಳ್ಳುವ  ಜನಜಾತ್ರೆಯ ತೆರದಿ, ಗೂಡೂ ಕಾಣದಂತೆ ಗಿಜಿಗಿಡುತ್ತಿದ್ದ ದುಂಬಿಗಳ ಜಾತ್ರೆಯನ್ನು ಕಂಡ ನನಗೆ ವಿಸ್ಮಯವಾಯಿತು. ಹೊರಗಡೆ ಕೊರೊನಾ ಕಾರಣದ ಕರ್ಫ್ಯೂ ಜಾರಿಯಲ್ಲಿದ್ದರೆ, ಮನೆಯಂಗಳದ ಕೊರಡ ಸಂದಿಯಲ್ಲಿ ಈ ದುಂಬಿಗಳು ಮೇಲೆ ಬಿದ್ದು, ಒದ್ದು ಗುದ್ದಾಡುತ್ತಲೇ, ಮಧುವೆಂಬ ದೇವಲೋಕದಲ್ಲೂ ಸಿಗದ ಮೃತ್ಯುಂಜಯ ಅಮೃತದ ಮಡುವಿಗಾಗಿ ಯಾತ್ರೆ ಹೊರಟಿಂತಿದ್ದವು.
   ಇದೇನು ಲೌಕಿಕದಿಂದ ಪಾರಮಾರ್ಥಿಕತೆಯತ್ತ ಪಯಣ ಹೊರಟಿತಲ್ಲ ಎಂದು ಹೀಗಳೆಯದಿರಿ. ಹೌದು, ಇದೊಂದು ಇಹದಿಂದ ಪರದೆಡೆಗಿನ ಮಧುರ ಪಯಣವೆಂತಲೇ ನಾನು ಪರಿಭಾವಿಸಿದ್ದೇನೆ. ಪ್ರತಿ ಚದರ ಕಿಲೋಮೀಟರಿನಲ್ಲಿ ಕೇವಲ ೩೮೨ ರಂತೆ ಸರಾಸರಿ ಜನಸಾಂದ್ರತೆಯಲ್ಲಿ  ಹಬ್ಬಿಕೊಂಡರೂ ಬಿಡದೇ ಹಣ, ಅಧಿಕಾರ, ಆಸ್ತಿ, ಅಂತಸ್ತು, ಜಾತಿ, ಧರ್ಮ,‌ಮತ, ಪಂಗಡ, ವರ್ಣಗಳೆಂದು ಇಲ್ಲದ ಕಾರಣ ಹುಡುಕಿ, ಕೆಲವೊಮ್ಮೆ ಜಗಳವಾಡಲು ಹವಣಿಸುವ ನಾವು, ಈ ಅಂಗೈಯಷ್ಟಿರುವ ಗಾತ್ರದಲ್ಲಿಯೇ ಸಾವಿರಾರು ಮನೆ - ಸಂಸಾರಗಳನ್ನು ಹೊಂದಿ ಪರಸ್ಪರ, ಸಹಬಾಳ್ವೆ, ಪ್ರೀತಿ, ವಾತ್ಸಲ್ಯ, ಪರಿಶ್ರಮ, ಪರೋಪಕಾರಗಳಿಂದ ಕಂಗೊಳಿಸುವ ಜೇನುಗೂಡಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂಬುದೇ ನನ್ನ ಅಂಬೋಣ. ಇರಲಿ, ಮತ್ತೆ ಗೂಡಿಗೆ ಬರೋಣ. ಹಾಗೆ 'ಯುರೇಕಾ' ಎಂದು ಜೇನುಗೂಡನ್ನು ಸಂಶೋಧಿಸಿದವನೇ ಯಾವ ವೈರಸ್, ಕರ್ಫ್ಯೂ, ಕ್ವಾರೆಂಟೈನ್, ಐಸೋಲೇಶನ್ ಗಳ ಭಯವಿಲ್ಲದೇ ಹೀಗೆ ತಂಡೋಪತಂಡವಾಗಿ ಮುಗಿಬಿದ್ದು, ಕೂತಿರುವ ದುಂಬಿಗಳನ್ನು ಕಂಡು, ಪೋಲೀಸರನ್ನು ಕರೆಯಬೇಕೆನ್ನಿಸಿತು. ಆದರೆ ಹೊತ್ತಾದಂತೆ, ಈ  ದುಂಬಿಗಳೂ ಕೂಡ ಯಾರ ಸಂಪರ್ಕಕ್ಕೂ ಬಾರದೇ ತಮ್ಮಷ್ಟಕ್ಕೆ ತಾವೇ ತಮ್ಮ ಮನೆಯೊಳಗೆ ನಿಶ್ವಿಂತೆಯಿಂದ ಕೂರುತ್ತಿವೆಯಲ್ಲವೇ? ಇದಕ್ಕಿಂತ ಮುನ್ನೆಚ್ಚರಿಕೆ ಇನ್ನೇನಿದೆ ಅಲ್ಲವೇ ಎಂದೆನಿಸಿ ಬೆಪ್ಪಾಗಿ ಯೋಚಿಸಿ ಸುಮ್ಮನಾದೆ. ಜೇನ್ನೊಣಗಳಿಗೆ ಈ ಕಾನೂನು ಅನ್ವಯವಾಗುತ್ತದೋ ಇಲ್ಲವೋ ಎಂಬ ಗೊಂದಲವೂ ಮೂಡಿ, ಯೋಚಿಸಿ ಇಲ್ಲವೆಂದು ಖಾತ್ರಿಪಡಿಸಿಕೊಂಡೆ. ಅಷ್ಟಾಗಿಯೂ ದುಂಬಿಗಳು ಇಷ್ಟೇ ಗಾತ್ರದ ಗೂಡೊಳಗಿದ್ದು ಏನು ಮಾಡುತ್ತವೆ ಎಂಬ ಕುತೂಹಲವನ್ನಿಟ್ಟುಕೊಂಡು ಪರೀಕ್ಷಿಸಲೇಬೇಕೆಂದು ಮತ್ತೆ ಗೂಡಿನತ್ತ ತೆರಳಿದೆ. ಮಧ್ಯಾಹ್ನದ ಬಿಸಿಲು ನೆತ್ತಿಗೇರಿತ್ತು. ಪ್ರಾತಃಕಾಲದಲೆದ್ದು ಕುಸುಮಗಳ ಅಂತರಂಗವನ್ನರಸಿ, ಅಲ್ಲಿ  ಮಡುಗಟ್ಟಿದ ಮಧುವನ್ನು ಒಂದಿನಿತೂ ಬಿಡದಂತೆ ಹೀರಿ, ತನ್ನೊಡಲ ಪಾತ್ರೆಯೊಳಗೆ ತುಂಬಿಕೊಂಡು ಹಾರಿ, ಗೂಡಿನ ಗುಡಿಯೊಳಗೆ ನೈವೇದ್ಯ ಮಾಡಿ ಉಂಡು ಉಳಿದದ್ದನ್ನು ತಮ್ಮವರ ದಾಸೋಹಕ್ಕಾಗಿ ತೆಗೆದಿಟ್ಟರೆ ಮುಗಿದುಹೋಯಿತು, ದುಂಬಿಗಳ ಅಂದಿನ ಶ್ರದ್ಧೆಯ ಕಾಯಕದ ಕೈಲಾಸ. ದವನ, ಚೆಂಡು, ಸಂಪಿಗೆ, ನೀಲ, ದಾಸವಾಳ, ಗುಲಾಬಿ, ಕಣಗಿಲೆ,ಮಲ್ಲಿಗೆ, ಮಾವು ಇತ್ಯಾದಿ ಹೀಗೆ ಸುತ್ತ ಹತ್ತಲ್ಲದೇ ಮತ್ತೊಂದು ಕುಸುಮದ ಎದೆಗೂ ಹೊಂಚುಹಾಕಿ ಹೀರಿ ಕುಡಿದು, ಸಾಲದ್ದಕ್ಕೆ ಹೊತ್ತು ತರುವ ಮಧುಪ್ರಿಯರಂತೆ, ಮಧುವನ್ನು ಹೀರಿ ಮತ್ತೇರಿಸಿಕೊಂಡು ತೂಗಾಡುತ್ತಲೇ ತಮ್ಮದೇ ಮನೆಗೆ ಹಾರಿ ಬರುವ ದುಂಬಿಗಳ ಕಥೆ ವಿಸ್ಮಯ ಮೂಡಿಸುವಂತಹದ್ದು!. ಮಧುಶಾಲೆಯಲ್ಲಿ ಕುಳಿತು ಸೋಮರಸವನ್ನು ಹೀರಿ ಅಮಲನ್ನೇರಿಸಿಕೊಂಡು ರಸ್ತೆಯುದ್ದಕ್ಕೂ ತಮ್ಮದೇ ಲೋಕದಲ್ಲಿ ತೂರಾಡುತ್ತಾ ತೇಲಿ ಬರುವ ಯಾವ ಮಧುಪ್ರಿಯರಿಗಿಂತಲೂ ದುಂಬಿಗಳ ಕಥೆಯೇನೂ ವಿಭಿನ್ನವಾಗಿಲ್ಲವೆಂಬುದೇ ವಿಶೇಷವಾದದ್ದು. ವ್ಯತ್ಯಾಸವಿಷ್ಟೇ, ದುಂಬಿಗಳು ಹೆಕ್ಕಿ ತರುವ ಮಧು, ಪುಷ್ಪದೊಳಗೆ ಸ್ವಾಭಾವಿಕವಾಗಿ ತಯಾರಾದ ಪ್ರಕೃತಿ ರಸಾಯನ. ಆದರೆ ಮಧುಶಾಲೆಯಲ್ಲಿನ ಮಧು, ಮಾನವ ಸಂಸ್ಕರಿಸಿದ ರಸಾಯನಗಳ ಸೋಮರಸ. ಇನ್ನೊಂದು ಆಸಕ್ತಿಕರ  ಭಿನ್ನತೆಯೆಂದರೆ, ರಾಣಿಜೇನು ವೈವಿಧ್ಯಮಯ ಹೂಗಳ ಮಧುವನ್ನರಸಿ ಗುಟುಕು ಗುಟುಕಾಗಿ ಹೀರಲು ಹೊರಟರೆ, ರಾಜ ಜೇನು ಕೆಲವೊಮ್ಮೆ ಲವಣಾಂಶಗಳನ್ನು ಹುಡುಕಿ ಹೆಕ್ಕಿ ಮಣ್ಣು ತಿನ್ನುತ್ತದಂತೆ!. ಮನುಷ್ಯರಲ್ಲಿ ಮಾತ್ರ ಇದು ತಿರುವು ಮುರುವು. ಮಧುಪ್ರಿಯ ಗಂಡುಗಲಿಗಳು ಮಧುಶಾಲೆಯ ಸೋಮರಸವನ್ನು ಹುಡುಕಿಹೊರಟರೆ, ನಂಬಿದ ಹೆಂಡತಿ ಮಕ್ಕಳು ಜೀವನ ಸಾಗಿಸಲಾಗದೇ ಮಣ್ಣನ್ನೇ ಅವಲಂಬಿಸಬೇಕಾಗಿ ಬಂದಿರುವುದನ್ನು ಅಲ್ಲಲ್ಲಿ ಕಂಡರಿಯುತ್ತೇವೆ. ಇದೆಂತಹ ಕಾಕತಾಳೀಯವಲ್ಲವೇ ?
   ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್‌ ವಾನ್‌ ಫ್ರಿಶ್‌ ಅವರು 'ದುಂಬಿಯೊಂದು ಮಕರಂದದತ್ತ ನರ್ತಿಸುತ್ತ ಹಾರುತ್ತದೆ. ಈ ನರ್ತನದ ಲಯವನ್ನು ಅನುಸರಿಸಿ ಉಳಿದ ದುಂಬಿಗಳು ಹಿಂಬಾಲಿಸುತ್ತವೆ' ಎಂಬ ವಿಷಯವನ್ನು ಕ್ರಿ.ಶ.1940ರಲ್ಲಿಯೇ ಹೊರಗೆಡವಿದ್ದರು ಎಂಬ ಸಂಗತಿಯನ್ನು ಎಲ್ಲೋ ಓದಿದ ನೆನಪಾಗಿ, ದುಂಬಿಗಳೇ ಹೀಗೆ ಮಕರಂದಕ್ಕಾಗಿ ಓಲಾಡುತ್ತವೆಯೆಂದ ಮೇಲೆ ಇನ್ನು ಮಧುಪ್ರಿಯರು ತೂಗಾಡುವುದರಲ್ಲಿ ತಪ್ಪೇನಿಲ್ಲವೆಂದುಕೊಂಡು ತೆಪ್ಪಗಾದೆ‌. ಈ ಕೊರೊನಾ ಕಾರಣದ ಕರ್ಫ್ಯೂ ನಿಂದಾಗಿ ಬಾಗಿಲು ಹಾಕಿರುವ ಮಧುಶಾಲೆ ಹಾಗೂ ಅದರ ಮುಂದೆ ಮಧು ಹೀರಲೇಬೇಕೆಂದು ಸಾಲುಗಟ್ಟಿ ನಿಂತ  ಸೋಮರಸಪ್ರಿಯರನ್ನು ಈ ಹೊತ್ತಿನಲ್ಲಿ ನೆನೆದರೆ ವೇದನೆಯುಂಟಾಗುತ್ತದೆ!. ಇವರಿಗೇಕೆ ಜೇನುಗೂಡಿನೊಳಗಣ ಮಧು ಹಿಂಡಿ ಕೊಟ್ಟು ಸಮಾಧಾನ ಮಾಡಬಾರದು ಎಂದು ಪ್ರಶ್ನೆಯನ್ನಿಟ್ಟುಕೊಂಡು ತರ್ಕಕ್ಕಿಳಿದೆ. ಪ್ರಮಾಣದ ಅಸಂಗತ ಲೆಕ್ಕಾಚಾರ ನೆನೆದು ಹೌಹಾರಿದೆ‌. ಯಾವ ನೆಲೆಯಲ್ಲಿಯೂ ಅದು ಸಾಧ್ಯವಾಗದ ಸಾಹಸದ ಕಾರ್ಯವೆಂದು ತಿಳಿದು ನನ್ನೊಳಗೆ ಅಲ್ಲದೇ, ಮನೆಯೊಳಗೆ ಬಂಧಿಯಾದೆ. ಆ ಬಂದ್ ನ ಪ್ರಭಾವ ನಮ್ಮ ಮನೆಯಂಗಳದ ದುಂಬಿಗಳಿಗಿನ್ನೂ ತಟ್ಟಿರಲಿಲ್ಲ.  ಯಾಕೆಂದರೆ ಭ್ರಮರದ ಮಧುಪಾತ್ರೆಗಳನ್ನೊಳಗೊಂಡ ಕುಸುಮಗಳು ನಿತ್ಯ ನಿರಂತರ 24/7 ದುಂಬಿಗಳಿಗಾಗಿ ಸದಾ ಬಾಗಿಲು ತೆರೆದೇ ಇರುತ್ತವೆಯೆಂದರೆ ಈ ಭ್ರಮರಗಳ ಅದೃಷ್ಟವೋ ಅದೃಷ್ಟವೆನ್ನಬೇಕು. ಅಮಲೇರಿದ ದುಂಬಿಯಂತೆ ಎಲ್ಲೆಲ್ಲೋ ಹಾರಿ ಹೊರಟಿದೆಯಲ್ಲ ಪ್ರಬಂಧ!. ದುಂಬಿಗಳು ಆಕಾಶದಲ್ಲಿ ಎಲ್ಲಿ ಹಾರಿದರೂ ಮರಳಿ ನಿಖರವಾದ ಸ್ಥಳಕ್ಕೇ ಬಂದು ಸೇರುವಂತೆ, ನೇರವಾಗಿ ವಿಷಯಕ್ಕೆ ಬರೋಣ. ಮುಂಜಾವಿನ ಆ ನಿಷ್ಠೆಯ ಕಾಯಕದಲ್ಲಿ ಬಳಲಿ ಬೆಂಡಾದ ಜೇನ್ನೊಣಗಳು ಈ ಮಧ್ಯಾಹ್ನದ ಹೊತ್ತಿನಲ್ಲಿ, ಆಟವಾಡಿ ದಣಿದು ಆಗ ತಾನೇ  ತಾಯ ಹಾಲು ಕುಡಿದು ನಿದ್ರಾದೇವಿಯ ಮಾಯೆಯಲ್ಲಿ ತೇಲುತ್ತಿರುವ  ಹಸುಗೂಸುಗಳಂತೆ ಜೋಗುಳವನ್ನು ಬಯಸುತ್ತಿದ್ದವೋ ಏನೋ .ಅಂತೂ ಮಬ್ಬಾದ ಮಂಪರಿನಲ್ಲಿ ಕುಳಿತಲ್ಲಿಯೇ  ಅಲುಗಾಡುವುದನ್ನು ಹೊರತುಪಡಿಸಿದರೆ ದುಂಬಿಗಳ ಚಟುವಟಿಕೆಗಳು ಚೈತನ್ಯಯುತವಾಗಿರಲಿಲ್ಲ.
           "ಅನುಸರಿಸಬೇಕು ಜಗ ದುಂಬಿಗಳ ಕ್ರಿಯಾಶಕ್ತಿ, ಚಲನಶೀಲತೆ
                                ತಲೆದೂಗಬೇಕು ಕೇಳಿ ಮಧು
                                  ಹೀರಿ ರಾಗಿಸುವ ಅವುಗಳ
                            ಅಮಲಿನ ಹಾಡಿನ ಮಾಧುರ್ಯತೆ
ಎಂದು ಜೇನ್ನೊಣಗಳ ಬೆಳಗಿನ ಅದಮ್ಯ ಕಾಯಕವನ್ನು ಕಂಡು ಮೇಲಿನಂತೆ  ಹಾಡುವಂತಾಯಿತು. ಇದು ದುಂಬಿಗಳಿಗೆ ಜೋಗುಳದಂತೆ ಕೇಳಿತೋ ಏನೋ ? ಗೊತ್ತಾಗಲಿಲ್ಲ. ಅವು ತಮ್ಮ ಲೋಕದಲ್ಲಿಯೇ ತಾವಿದ್ದವು. ಹೀಗೆ ಅವು ಮಲಗಿದಂತೆ ನಿಸ್ತೇಜವಾದ  ಮೇಲೆ ನೋಡುವುದಿನ್ನೇನು ಎಂದು ಮೇಲೆದ್ದು ನನ್ನ ಗೂಡಿನತ್ತ ನಿಧಾನವಾಗಿ ಹೆಜ್ಜೆ ಹಾಕಿದೆ.  ಹೊಸದಾಗಿ‌ ಮನೆಯ ಮುಂದೆ ಗೂಡು ಕಟ್ಟಿಕೊಂಡು ಸಂಸಾರ ಹೂಡಿದ ಭೃಂಗಗಳನ್ನು ಮನೆಯಂಗಳಕೆ ಬಂದ ಅತಿಥಿಗಳೆಂದು, ಹೀಗೆ ದಿನವಿಡೀ ನೋಡುತ್ತಲೇ ಸಾಕಿದ ಮರಿಗಳಂತೆ ದೂರದಿಂದಲೇ ಮುದ್ದುಮಾಡಿದೆ. ತಕ್ಷಣ ನೆನಪಾಯಿತು. ಇದನ್ನು ನೋಡಿ ದುಂಬಿಗಳು ಮರಳಿ ಮುದ್ದು ಮಾಡಲು ಬಂದುಬಿಟ್ಟರೆ ಗತಿಯೇನಾಗುತ್ತದೆ ಎಂದವನೇ ಭಯಗೊಂಡು ಒಳತೂರಿಬಂದುಬಿಟ್ಟೆ. ಹೀಗೆಯೇ ಕೆಲವು ದಿನ ಕಳೆಯಿತು.  ಜೇನುಗೂಡು ಹುಣ್ಣಿಮೆಯ ಚಂದಿರನಂತೆ ಬೆಳೆಯುತ್ತಿತ್ತು. ನನ್ನ ಕನಸುಗಳೂ ಕೂಡ ಬೆನ್ನತ್ತಿ ಅರಳಿಕೊಳ್ಳಲಾರಂಭಿಸಿದವು. ಈ ದುಂಬಿಗಳು ಬಯಸದೇ ಮನೆಗೆ ಬಂದ ಅಪರೂಪದ ಗೆಳೆಯರೆಂದುಕೊಂಡು ಸಂಭ್ರಮಿಸಿದೆ. ಕಾಳಿದಾಸನ ಮನೆಯ ಮುಂದಿನ ಉದ್ಯಾನವನ ನೆನಪಾಯಿತು.ಇರುವಷ್ಟು ಕಾಲ ಇಲ್ಲಿದ್ದು ಹೇಗೋ ರಾಣಿಜೇನಿನ ಮಾತುಗಳನ್ನು ಕೇಳಿ ತಮ್ಮ ಸಂಸಾರವನ್ನು ನೀಗಿಸಿಕೊಂಡು, ಮಕ್ಕಳು, ಮರಿಮಕ್ಕಳೊಂದಿಗೆ, ಮಧು ಹೀರಿ ಉದ್ಯಾನವನದಲ್ಲಿ ಗುಂಯ್ ಎಂದು ಏಕತಾರಿ ಹಿಡಿದು ಹಾಡಿದರೆ ಸಾಕು. ಶುಭೋದಯದ ಸಂಗೀತಕ್ಕೆ ದಕ್ಕುವ ಕಳೆಯೇ ವಿಭಿನ್ನ. ಕೊರಡಿನೊಳಗಣ ಸಂದಿಯಲ್ಲರಳಿಕೊಂಡ ಜೀವನದಿಂದ ಒಂದೊಮ್ಮೆ ಬೇಸರವಾಯಿತೆಂದಾಗ, ಅದುವರೆಗೂ ಎಲ್ಲಿಂದಲೋ ಹುಡುಕಿ ಹೆಕ್ಕಿ ತಂದು ತೊಟ್ಟಿಕ್ಕಿ ಸಂಗ್ರಹಿಸಿದ ಮಂದ ಕಂದು ಬಣ್ಣದ ಸವಿಜೇನನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆಲ್ಲಾ ಕುಡಿಸಿ ಉಳಿದುದರಲ್ಲಿ ತಾವೂ ಉಂಡು, ತಮ್ಮ ಗೂಡಿನ ಕುರುಹು ಬಿಟ್ಟು ಸಂತೃಪ್ತಿಯಿಂದ ಹೋದರೆ ಸಾಕು. ಹಾರ, ತುರಾಯಿ,ವಾದ್ಯ ಗೋಷ್ಠಿಗಳಿಂದಲ್ಲದೇ ಇದ್ದರೂ,  ತುಂಬುಹೃದಯದ ನಿಷ್ಕಲ್ಮಶ ಪ್ರೀತಿಯ ಆರ್ದ್ರತೆಯಿಂದಲಾದರೂ ಬೀಳ್ಕೊಟ್ಟರಾಯಿತು ಎಂದು ಮನದೊಳಗೆ ಭೃಂಗಗಳ ಭವಿತವ್ಯದ ಹಂಚಿಕೆಯ ಕನಸುಗಳನ್ನು, ಸಂಚಿಕೆಯಾಗಿ, ನನ್ನೊಳಗೇ ತುಂಬಿಕೊಳ್ಳುತ್ತಾ ಹೋದೆ.
    ಹೀಗೆ ಒಂದು ಮಬ್ಬು ನಸುಕಿನಲ್ಲಿ ಎದ್ದು ಮನೆಯ ಕಿರು ಉದ್ಯಾನವನದಲ್ಲಿಯೇ  ವಿಹಾರಕ್ಕಿಳಿದೆ. ಕತ್ತಲೆ ವಿದಾಯ ಹೇಳುತ್ತಿತ್ತು. ಹಕ್ಕಿಗಳ ಕಲರವ ಆಗ ತಾನೇ ಶುರುವಾಗಿತ್ತು. ನೇಸರನ ಪ್ರಥಮ ಕಿರಣಗಳು ಭುವಿ ಸ್ಪರ್ಶಕ್ಕಾಗಿ ಕಾದಿದ್ದವು. ಇನ್ನೇನು ದುಂಬಿಗಳೂ ಎದ್ದು ಬರುವ ಹೊತ್ತಾಯಿತೆಂದು ಸಂಗೀತದ ಸಾಂಗತ್ಯಕ್ಕಾಗಿ ಕಾಯುತ್ತಿದ್ದೆ. ಸೂರ್ಯ ಕಿರಣಗಳ ದರ್ಶನವಾಯಿತು. ಪಕ್ಷಿಗಳು ಗೂಡಿನಿಂದ ನಿತ್ಯ ಕಾಯಕಕ್ಕಾಗಿ ತೆರಳಿದವು. ತಂಗಾಳಿಯೂ‌ ಭಾನು ಕಿರಣಗಳ ಅಪ್ಪುಗೆಯಿಂದ ಬೆಚ್ಚಗಾಗಲು ಪ್ರಾರಂಭಿಸಿತು. ಆದರೆ ದುಂಬಿಗಳ ಗುಂಯ್ ಗಾನ ಮಾತ್ರ ಸುಳಿಯಲೇ ಇಲ್ಲ.‌‌ ಪ್ರಕೃತಿ ನಿಶ್ಯಬ್ದವೆನಿಸಿತು, ಹಾಡುವವರಿಲ್ಲದೇ ವೇದಿಕೆ ಬಿಕೋ ಎನ್ನಿಸುವ ಹಾಗೆ. ರಾತ್ರಿಯೆಲ್ಲಾ ಮಧು ಕುಡಿದು ಅಮಲಿನಲ್ಲಿ ಮಲಗಿದ ದುಂಬಿಗಳಿನ್ನೂ ನಶೆಯಿಂದ ಹೊರಬಂದಿರಲಿಕ್ಕಿಲ್ಲ. ನಾನೇ ಎಬ್ಬಿಸಿದರಾಯಿತೆಂದು ಕೊರಡುಗಳ ಸಂದಿಯೊಳಗೆ ಕಣ್ಣುಹಾಯಿಸಿದೆ. ಅಚ್ಚರಿಯೋ ಅಚ್ಚರಿ! ಆತಂಕವೋ ಆತಂಕ! ಏಕೆಂದರೆ, ದುಂಬಿಗಳು ಹೋಗಲಿ, ಜೇನುಗೂಡಿನ ಯಾವ ಕುರುಹುಗಳೂ ಅಲ್ಲಿರಲಿಲ್ಲ. ಕ್ಷಣ ಹೊತ್ತು ತಬ್ಬಿಬ್ಬಾದೆ‌. ದುಂಬಿಗಳ ನಶೆಯನ್ನಿಳಿಸಿ ಎಚ್ಚರಗೊಳಿಸಲು ನಾನು ಹೋದರೆ, ನನ್ನದೇ ಶುಭೋದಯದ ಮಧುರ ಉಲ್ಲಾಸವೆಲ್ಲಾ ಮಂಜು ಕರಗುವಂತೆ ಕರಗಿಹೋಯಿತು. ಮನಸ್ಸು ತಳಮಳಗೊಂಡಿತು. ಏನಾಗಿರಬಹುದು ಎಂದು ಮನೆಯವರನ್ನು ವಿಚಾರಿಸುವಾಗ, ಕೈಯ್ಯಲ್ಲೊಂದು ಬಟ್ಟಲು ಹಿಡಿದ ಕರುಳ ಕುಡಿಯೇ ಎದುರಿಗೆ ಬಂದು  "ಅಪ್ಪಾ...ಜೇನು ಕುಡೀತೀಯಾ ?" ಎಂದಾಗಲೇ ನನ್ನ ಬೆಳಗಿನ ಮತ್ತೆಲ್ಲಾ ಸರ್ರನೆ ಪಾತಾಳಕ್ಕಿಳಿಯಿತು. ಮಗುವಿಗೆ ಏನೊಂದೂ ಉತ್ತರಿಸದೇ ಸ್ತಂಭೀಭೂತನಾದೆ. ಸಂಗತಿಯೇನೆಂದರೆ ಹಿಂದಿನ ದಿನವೇ ಮನೆಯವರೆಲ್ಲಾ ಸೇರಿಕೊಂಡು ಭ್ರಮರಗಳನ್ನು ಬಡಿದೋಡಿಸಿ ಗೂಡನ್ನೇ ಕಿತ್ತುಹಾಕಿ ಅದರೊಳಗಿನ ಮಧುವನ್ನು ಬಲವಂತದಿಂದ ಕಿತ್ತುಕೊಂಡಿದ್ದರು. ಇದನ್ನು ಕೇಳಿ ಮನಸ್ಸಿಗೆ ಆಘಾತವಾದಂತಾಗಿ, ಕರುಳ ಕುಡಿಗಳಂತೆಯೇ ಪ್ರೀತಿಸುತ್ತಿದ್ದ ಮರಿದುಂಬಿಗಳನ್ನು, ಕ್ರೂರವಾಗಿ ಕಳೆದುಕೊಂಡ ಭೀಕರ ನೋವನ್ನು ಮರೆಯಲಾಗದೇ ಹೊರಗೆ ಬಂದು ಒಂದು ಘಳಿಗೆ ಧ್ಯಾನದಲ್ಲಿ ಮೈಮರೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಹಿಂದೊಂದು ಬಾರಿ ಮನೆಯವರು ಇಂತಹುದೇ ಪ್ರಯತ್ನಕ್ಕಿಳಿದಾಗ ಬೈದು ಈ ಆಲೋಚನೆಯಿಂದ ದೂರ ಸರಿಸಿದ್ದೆ‌ .ಆದರೀಗ ನಾನಿಲ್ಲದ ಸರಿ ಹೊತ್ತು ನೋಡಿ ಕಾದು, ಜೇನು ಬಿಡಿಸಿದ್ದರು. ಕಣ್ಣುಗಳು ಮಂಜಾದವು. ಮೌನ ಬಿಸಿಯಾಯಿತು. ಉಸಿರು ಉರಿಯಾಯಿತು. ದುಂಬಿಗಳ ರಸಗಾನದ ಸಾಂಗತ್ಯದಲ್ಲಿ ಮೈಮರೆತು, ಕಳೆದ ನೆನಪುಗಳು ಮನದ ಗೂಡಿನಿಂದ ಒಂದೊಂದಾಗಿ  ಹೊರಬರಲಾರಂಭಿಸಿದವು. ಕಳೆದುಕೊಂಡ ಭೃಂಗದ ಬೆನ್ನೇರಿ ಹೊರಟುಬಿಟ್ಟೆ. ತೇವವಾದವು ಮನಸು, ಹೃದಯಗಳು. ಮನಕಡಲಿನಿಂದ ನೋವಿನಲೆಗಳು ದಾಳಿಯಿಡಲಾರಂಭಿಸಿದವು. ಮಗು ತಂದು ಕಣ್ಣೆದುರಿಗೆ ಹಿಡಿದ ಜೇನನ್ನು ನೋಡುವ ಧೈರ್ಯವೂ ಇಲ್ಲದಾಯಿತು.‌ ಕಣ್ಣಂಚಿನಲ್ಲಿ ಕಣ್ಣೀರು ಮಡುಗೊಂಡು ಕೆಂಪಾಗಿತ್ತು, ಜೇನಿನ ಪ್ರತಿಫಲನದಿಂದ. ಭಾಗ್ಯಗಳನ್ನು ಕೇಳಿ ಮನವೊಲಿಸಿ ಪಡೆದುಕೊಳ್ಳಬೇಕೆ ವಿನಃ ಕಿತ್ತುಕೊಳ್ಳಬಾರದಲ್ಲವೇ ? ಎಂದು ನನ್ನೊಳಗೆ ಸತ್ಯ ದರ್ಶನದ ಹುಡುಕಾಟಕ್ಕಿಳಿದೆ. ಮನುಷ್ಯ ಪ್ರಕೃತಿಯಿಂದ ಬೇಡಿ ಪಡೆದಿದ್ದಕ್ಕಿಂತ, ಕಿತ್ತುಕೊಂಡು ಕೊಳ್ಳೆ ಹೊಡೆದದ್ದೇ ಹೆಚ್ಚಲ್ಲವೇ ? ಉದ್ಯಾನವನಕ್ಕೇ ಶಿಖರಪ್ರಾಯ ಮುಕುಟದಂತಿದ್ದ ಜೇನುಗೂಡು ಮಾಯವಾಗಿತ್ತು: ಮನೆಯ ಮುಂದೆ ಒಟ್ಟಿದ ಕೊರಡುಗಳ ರಾಶಿಯೇ ದುಂಬಿಗಳ ಚಿತೆಯಾಯಿತಲ್ಲ ಎಂದು ಹಳಹಳಿಸಿ ಉಮ್ಮಳಿಸಿದೆ. ಹರ್ಷದ ಗೂಡಿಲ್ಲದ ಮನದುಂಬಿ ದಿಕ್ಕುತಪ್ಪಿ ಹಾರುತ್ತಿತ್ತು ; ಹೃದಯದರಮನೆ ಬರಿದಾಗಿತ್ತು. ಎದೆಯಗೂಡು ಬಿರಿದಾಗಿತ್ತು.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...