Total Pageviews

Saturday 30 June 2018

ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ ೨

ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ

                 ಹೊಸದಾಗಿ ನೇಮಕವಾಗಿರುವ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ   ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ವತಿಯಿಂದ ದಿನಾಂಕ ೨೧-೫-೨೦೧೮ ರಿಂದ ದಿನಾಂಕ ೧೦-೫-೨೦೧೮ ರವರೆಗೆ ನಡೆದ ವೃತ್ತಿ ಬುನಾದಿ ತರಬೇತಿಯ ಮುಂಗಾರು ಮಳೆಗಾಲದ ಹೊಸ್ತಿಲಲ್ಲಿದ್ದ ಧಾರವಾಡದ ಪ್ರಕೃತಿಯ ಮಡಿಲಿನ  ಶತಮಾನೋತ್ಸವ  ಭವನದಲ್ಲಿ ಕಳೆದ ಆ ದಿನಗಳು ಮರಳಿ ನಮ್ಮನ್ನು ಕಾಲೇಜು ನೆನಪುಗಳಿಗೆ ತೆರದುಕೊಳ್ಳುವಂತೆ  ಅವಿಸ್ಮರಣೀಯವಾಗಿದ್ದವು.

          ಅರಿಸ್ಟಾಟಲ್ ಸ್ಥಾಪಿಸಿದ್ದ ಗ್ರೀಕ್  ಅಕಾಡೆಮಿಯ ನೆನಪೊಂದು ಸುಳಿದುಹೋಗುವಂತೆ ನಡೆದ ಜ್ಞಾನದ ಚಿಂತನ ಮಂಥನಗಳು  ನಮ್ಮ ದೃಷ್ಟಿಕೋನಕ್ಕೆ ಹೊಸ ಆಯಾಮಗಳನ್ನು ನೀಡುವಲ್ಲಿ ಸಹಕಾರಿಯಾದವು.

                      ಇಂತಹ  ಉನ್ನತ ಶಿಕ್ಷಣ ಅಕಾಡೆಮಿಯ  ನಿರ್ದೇಶಕರಾಗಿರುವ ಡಾ ಶಿವಪ್ರಸಾದರವರು ಸಿ ಎನ್ ಆರ್ ರಾವ್, ಅಬ್ದುಲ್ ಕಲಾಂ, ರಂತಹ ಶ್ರೇಷ್ಠ  ವಿಜ್ಞಾನಿಗಳೊಂದಿಗೆ  ಕಾರ್ಯನಿರ್ವಹಿಸಿದ  ಅನುಭವವನ್ನು ಹೊಂದಿದ್ದಾರೆ. ಸೆಕೆಂಡುಗಳಲ್ಲಿ ಲೆಕ್ಕಹಾಕುವ ಅವರ ಸಮಯಪ್ರಜ್ಞೆಯಂತೂ ನಮಗೆಲ್ಲಾ ಮಾದರಿಯಾಗಿದೆ.ಅವರು ನಮ್ಮ ಪಾಠಬೋಧನೆಯ ವಿಧಾನಕ್ಕೆ ನೀಡಿದ ಸಲಹೆಗಳು ನಮ್ಮ ತರಗತಿಗಳನ್ನು ಸದಾ ಜೀವಂತವಾಗಿಡುವಲ್ಲಿ ಹಾಗೂ ವಿದ್ಯಾರ್ಥಿ ಕೇಂದ್ರಿತ ತರಗತಿ ನಿರ್ಮಾಣದಲ್ಲಿ ಎಂದೆಂದಿಗೂ ನಮಗೆ ನೆರವಾಗುತ್ತವೆ.
"ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತಿದ್ದಿತಯ್ಯಶಿವನ ಪ್ರಕಾಶ  "ಎಂಬ ವಚನದಲ್ಲಿನ ಆ 'ಶಿವನ ಪ್ರಕಾಶ' ಡಾ ಶಿವಪ್ರಸಾದರಾಗಿದ್ದಾರೆ  ಎಂಬ ನಂಬಿಕೆ ನಮ್ಮದು.
             ಸಾಮಾನ್ಯವಾಗಿ ವಿಜ್ಞಾನಿಗಳೆಲ್ಲ 
ದೇವರಲ್ಲಿ ನಂಬಿಕೆಯಿಲ್ಲದ ನಾಸ್ತಿಕವಾದಿಗಳು. ಡಾ.ಶಿವಪ್ರಸಾದರು ಅಂತಹ  ನಾಸ್ತಿಕರಾಗಿದ್ದರೂ, ಉದಾತ್ತ ಚಿಂತನೆಗಳಿಂದ ಸದಾ  ದೈವತ್ವದ ಕಡೆಗೆ ತುಡಿಯುತ್ತಿರುವ ಮುಗ್ಧ ಜೀವಿ.ಡಾ.ಶಿವಪ್ರಸಾದರವರು ವಿಜ್ಞಾನಿಯಾಗಿ,ದೇಶದ ಉಜ್ವಲ  ಭವಿಷ್ಯದ ಕನಸುಗಾರರಾಗಿ,ಶಿಕ್ಷಣ ತಜ್ಞರಾಗಿ,ಮಹೋನ್ನತ ಚಿಂತನೆಗಳ ಹರಿಕಾರರಾಗಿ ನಮ್ಮನ್ನು ಆಳವಾಗಿ  ಪ್ರಭಾವಿಸಿದ  ಘಳಿಗೆಗಳನ್ನು ಹಂಚಿಕೊಳ್ಳಲೇಬೇಕು.

         ಅವರು ತೆಗೆದುಕೊಂಡ ಮೂಲ ವಿಜ್ಞಾನದ ಕೆಲವು ಭೌತಿಕ ಸಂಗತಿಗಳನ್ನು ಕುರಿತ  ಒಂದು ತರಗತಿ  ವಿಜ್ಞಾನ ವಿಷಯದ ಬಗೆಗಿನ ನಮ್ಮ ವಿಜ್ಞಾನವೆಂದರೆ ಬಲ ಶಕ್ತಿ ದ್ರವ್ಯ ಚಲನೆ ವೇಗ ಜೀವಿ ಗಳ ರಸಾಯನವಾಗಿದ್ದು ಅರ್ಥವಾಗದ ಶಾಸ್ತ್ರ ವೆಂಬ  ಪೂರ್ವಾಗ್ರಹಪೀಡಿತ  ಮೂಲ ಕಲ್ಪನೆಗಳನ್ನು, ಬದಲಾಯಿಸಿಕೊಳ್ಳುವಂತೆ ಮಾಡಿತು.ನಮ್ಮಂತಹ ಭಾಷಾ ಪ್ರಾಧ್ಯಾಪಕ ಶಿಬಿರಾರ್ಥಿಗಳಿಗೆ ವಿಜ್ಞಾನದ ಪಾಠವನ್ನು  ಸರಳವಾಗಿ,ಸುಲಲಿತವಾಗಿ,ಉದಾತ್ತವಾಗಿ, ಹಾಸ್ಯಭರಿತ  ಜೀವನದ ನಿತ್ಯ ಸಂಗತಿಗಳೊಂದಿಗೆ ಅನ್ವಯಿಸಿ ಹೇಳುವ ಅವರ ಉಪನ್ಯಾಸ ಕೌಶಲ ಬೆರಗುಗೊಳಿಸುವಂತಹುದಾಗಿದೆ.

                      ಉದಾಹರಣೆಗೆ ಬೆಳಕಿನ' ಘಟಕಗಳಾಗಿರುವ  VIBGYOR ಎಂಬ ಸೂತ್ರದಲ್ಲಿರುವ ಪ್ರಪಂಚದ ಕಣ್ಣಿಗೆ ಕಾಣುವ ಏಳು ಬಣ್ಣಗಳು (ವಿಜ್ಞಾನದ ಪ್ರಕಾರ ಬೆಳಕಿನಲ್ಲಿ ಹಲವಾರು ಬಣ್ಣಗಳಿವೆ) ಈ ವಿಶ್ವದ ಪ್ರತಿಯೊಂದು ಭೌತಿಕ ವಸ್ತುವಿನ ಮೇಲೆ ಬಿದ್ದು ಉಂಟು ಮಾಡುವ ಪರಿಣಾಮವನ್ನು ತರಗತಿಯಲ್ಲಿನ ಕೆಲವು ವಸ್ತುಗಳ ಮೂಲಕ ವಿಶ್ಲೇಷಿಸಿದ ಡಾ.ಶಿವಪ್ರಸಾದರವರ ಪ್ರಾತ್ಯಕ್ಷಿಕೆ ಅನನ್ಯವಾಗಿತ್ತು.                                      ಯಾಜ್ಞವಲ್ಕ್ಯ ಮಹರ್ಷಿ ಹೇಳಿದ ಬಯಲು ಮತ್ತು ಬೆಳಕು ಎಂಬ ವಿಶ್ವದ ಎರಡು ಮಹತ್ವದ ಸಂಗತಿಗಳು ಭೌತಶಾಸ್ತ್ರದ ತಳಹದಿಯಾಗಿವೆ.ಈ ಭೌತಶಾಸ್ತ್ರದ ಬೆಳಕಾಗಿರುವ 'ಬೆಳಕಿ'ನ ವೇಗ, ಚಲನೆ,ಮುಂತಾದ ಕೌತುಕದ ಸಂಗತಿಗಳನ್ನು ಅವರು ವಿಶ್ಲೇಷಿಸಿದ ರೀತಿ ಮನಮುಟ್ಟುವಂತಿತ್ತು. ವಿಜ್ಞಾನಕ್ಕೆ ಸವಾಲಾಗಿರುವ  'QUANTUM MECHANICS 'ನ ಇತಿಹಾಸ, ಉದಾಹರಣೆಗಳೊಂದಿಗೆ  ಅರ್ಥೈಸಿ ಹೇಳುವ  ಶೈಲಿ ನಮ್ಮನ್ನು ಗಾಢವಾಗಿ ಪ್ರಭಾವಿಸಿತು.
              ಡಾ. ಶಿವಪ್ರಸಾದ ಗುರುಗಳು ಉಲ್ಲೇಖಿಸಿದ   ಖ್ಯಾತ ಭೌತವಿಜ್ಞಾನಿ  Richard  Feynman ಹೀಗೆ ಹೇಳುತ್ತಾನೆ ".   Fall in love with some activity, and do it! Nobody ever figures out what life is all about, and it doesn't matter. Explore the world. Nearly everything is really interesting if you go into it deeply enough. Work as hard and as much as you want to on the things you like to do the best. Don't think about what you want to be, but what you want to do. Keep up some kind of a minimum with other things so that society doesn't stop you from doing anything at all." 
ಇವನ ಹೇಳಿಕೆಯಂತೆ ನಾವೆಲ್ಲರೂ ಮತ್ತೆ ಬಸವಣ್ಣನವರ 'ಕಾಯಕ ತತ್ವದ  ಕೈಲಾಸ'ಕ್ಕೆ ಪ್ರೀತಿಯಿಂದ ಹೊರಳಬೇಕಾಗಿದೆ. 

         ಇಡೀ ಬ್ರಹ್ಮಾಂಡದಲ್ಲಿ 'ನಾನು' ಎಂಬ ಸ್ಥಾನ ಬಹು ಕುಬ್ಜ ಹಾಗೂ ಲೆಕ್ಕಕ್ಕೂ ಸಿಗದಷ್ಟು ನಗಣ್ಯ, ಅಲಕ್ಷಿತ.ಆದರೂ 'ನಾನು' ಎಂಬ ಅಸ್ತಿತ್ವದ ಏಕಮಾತ್ರ ಕಾರಣದಿಂದಾಗಿ ಈ ವಿಶಾಲ ಬ್ರಹ್ಮಾಂಡವನ್ನು ದರ್ಶಿಸಲು, ಅನ್ವೇಷಿಸಲು ಸಾಧ್ಯವಾಗಿದೆ ಎಂಬುದೇ ವಿಸ್ಮಯ ಎಂಬ  ಡಾ.ಶಿವಪ್ರಸಾದ ಗುರುಗಳು ಉದಾಹರಿಸಿದ ಸಿದ್ಧಾಂತ ಸಂತ ಶಿಶುನಾಳ ಶರೀಫರ "ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ....." "ತತ್ವಪದದಲ್ಲಿನತತ್ವಶಾಸ್ತ್ರವನ್ನು ಅರಿವಿಗೆ ತಂದುಕೊಳ್ಳುವಂತೆ ಮಾಡಿತು.
ಉದಾಹರಣೆ ೨  CONDUCTORS,SEMI CONDUCTORS,NON CONDUCTORS ಗಳಲ್ಲಿ ಇಲೆಕ್ಟ್ರಾನುಗಳು ತಮ್ಮ home orbit ನಿಂದ  Free orbit ಗಳಿಗೆ ಬಾಹ್ಯ ಶಕ್ತಿಯನ್ನು ನೀಡಿದಾಗಿನ ಅವುಗಳ ಚಲನೆ, ಈ ಚಲನೆಯ ಕಾರಣದಿಂದಾಗಿ ಉಂಟಾಗಿರುವ CONDUCTOR ನ ಈ ಮೂರು  ಪ್ರಕಾರಗಳನ್ನು ಕುರಿತು ಪಿಪಿಟಿಯ ಚಿತ್ರಗಳ ಪ್ರದರ್ಶನದ ಮೂಲಕ  ಅವರು ಮಾಡಿದ ಪಾಠ ನಮ್ಮಂತಹ ಕಲಾ ಪ್ರಾಧ್ಯಾಪಕರಿಗೆ ಅತ್ಯಂತ ರಸವತ್ತಾಗಿತ್ತು. 
ಉದಾಹರಣೆ ೩-ನ್ಯಾನೊ ಕಣಗಳಿಂದ ನಮ್ಮ  ಬದುಕಿನ ಸರ್ವಕ್ಷೇತ್ರಗಳಲ್ಲಿ ಆಗುತ್ತಿರುವ,ಭವಿಷ್ಯದಲ್ಲಿ ಮುಂದಾಗಬಹುದಾದ ಕ್ರಾಂತಿಕಾರಕ ಬದಲಾವಣೆಗಳು ಈ ವಸುಧೆಯಲ್ಲಿಯೇ  ಯಕ್ಷಣಿ ಲೋಕವನ್ನು ಸೃಷ್ಟಿಸಿದರೆ ಅಚ್ಚರಿಪಡಬೇಕಾಗಿಲ್ಲ  ಎಂಬುದನ್ನು ಮನಗಾಣಿಸಿದರು. ವಿಜ್ಞಾನದ ವಾಸ್ತವ ಹಾಗೂ ಸಾಹಿತ್ಯದ ಸೌಂದರ್ಯಗಳು ಮೇಳೈಸಿದಾಗ ಶಿಕ್ಷಣ ಅರ್ಥಪೂರ್ಣತೆಯನ್ನು, ಪೂರ್ಣದೃಷ್ಟಿಯನ್ನು ಪಡೆಯುತ್ತದೆ. ಇವೆರಡನ್ನೂ ಸಮನ್ವಯಗೊಳಿಸಿ ಮಾಡುವ ಪಾಠಗಳು ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಟಿಕೋನವನ್ನು ಬೆಳೆಸುತ್ತವೆ.
          ಆಗ "ಸಾಹಿತ್ಯವು "ವಾಸ್ತವಿಕ ಸೌಂದರ್ಯ ದ ಹೂಬನವಾಗುವುದರಲ್ಲಿ ಸಂಶಯವಿಲ್ಲ ಎಂಬ ಗುರುಗಳ ನಿಲುವು ನಮ್ಮನ್ನು ಜ್ಣಾನ ಶಿಸ್ತುಗಳ ಸಂಗಮದ ವಿಶಿಷ್ಟತೆಯನ್ನು ಅರಿಯುವಂತೆ ಮಾಡಿತು.
ಹೀಗೆ ವಿಜ್ಞಾನದ ವಿಸ್ಮಯಗಳನ್ನು ಕುರಿತು ಡಾ ಶಿವಪ್ರಸಾದರ ಉಪನ್ಯಾಸ ನಮ್ಮನ್ನು ವಿಜ್ಞಾನದ ವಿಧೇಯ ವಿದ್ಯಾರ್ಥಿಗಳನ್ನಾಗಿಸುವುದರ ಜೊತೆಗೆ ಕನ್ನಡ ಸಾಹಿತ್ಯ ದೇವಿಯ ಕಲಾ ಸೌಂದರ್ಯವನ್ನು ಪಾಠ ಮಾಡುವುದರ ಮೂಲಕ ಸವಿಯಲು ಉತ್ಸುಕರನ್ನಾಗಿಸಿದೆ.                                                      ಡಾ ಶಿವಪ್ರಸಾದ ರವರದು ತಲೆತಲಾಂತರದ ಸಾಂಪ್ರದಾಯಿಕ ಔಪಚಾರಿಕತೆಯ ಕಚೇರಿ ಪರಿಸರವನ್ನು ಬದಲಾಯಿಸಬೇಕೆನ್ನುವ, ಎಲ್ಲರೊಂದಿಗೆ ಸಹವರ್ತಿಯಾಗಿ ಬೆರೆಯಬೇಕೆನ್ನುವ 'ಸರಳ ಜೀವನ ಉದಾತ್ತ ಚಿಂತನೆ'ಯ ಹಾಗೂ'ಮಾತಿಗಿಂತ ಕೃತಿ ಲೇಸು ' ಎಂಬ ಬದ್ಧತೆಯ ವ್ಯಕ್ತಿತ್ವ.ನಮ್ಮನ್ನು ಪ್ರಭಾವಿಸಿದ  ಮತ್ತೊಂದು ವಿಶಿಷ್ಟ  ವ್ಯಕ್ತಿತ್ವವೆಂದರೆ ಕಿರಿಯ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ  ಸಂಶೋಧಕರು ಹಾಗೂ ಶಿಕ್ಷಣ ತಜ್ಞರೂ ಆಗಿರುವ ಶ್ರೀ ಸಾಗರ್ ರವರದು.
ಸಾಂಪ್ರದಾಯಿಕ ತರಗತಿಯ ಚೌಕಟ್ಟನ್ನು ಬದಿಗಿರಿಸಿ ಆಧುನಿಕ ಡಿಜಿಟಲ್ ಕಾಲಘಟ್ಟದಲ್ಲಿ ಹೊಸ ತರಗತಿ ಸಂರಚನೆ ಇಂದಿನ ತುರ್ತು ಅಗತ್ಯವಾಗಿದೆ ಎಂಬ ಹೆಸರಿಗೆ ತಕ್ಕಂತೆ ಜ್ಞಾನ ಸಾಗರದಂತಿರುವ ಶ್ರೀ ಸಾಗರ್ ರವರ ಸ್ಥಾಪಿತ ಸಂರಚನೆಯನ್ನು ಮುರಿದು ಹೊಸದಾಗಿ ಕಟ್ಟುವ ಪ್ರತಿಪಾದನೆ ,ಅಕಾಡೆಮಿಯಲ್ಲಿ ನಿರ್ದೇಶಕರ ನೇತೃತ್ವದಲ್ಲಿ ಒಂದು ಹೊಸ ತಂಡ ರಚನೆಯಾಗಲು ನಮ್ಮನ್ನು ಮಾರ್ಗದರ್ಶಿಸಲು ಕಾರಣವಾಗಿದೆ.ಸ್ಪರ್ಧಾತ್ಮಕ ಯುಗವನ್ನೆದುರಿಸಲು ವಿದ್ಯಾರ್ಥಿಗಳನ್ನು  ಸಜ್ಜುಗೊಳಿಸಬೇಕು ಎನ್ನುವ ಹಂಬಲ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಡಾ.ಸಾತಿಹಾಳ ರವರದು.

ಲಾಸ್ಟ್ ಪಂಚ್-'ಧಾರವಾಡದ ಆ ತುಂತುರು ಮಳೆಹನಿ,ತಂಪಾದ AC  ಗಾಳಿ, ಆ ಇಸ್ಕಾನ್ ನ ಸಾತ್ವಿಕ ಊಟ, ಗಂಟೆಗೊಮ್ಮೆ ಕೇಳುವ ಆ ಹಾಳಾದ್  Bell ಸದ್ದು, ಪಾರ್ಕ್ನನಲ್ಲಿ ಕಾರಂಜಿ ಸ್ನಾನ ,ಎಮ್ಮೆ ಸವಾರಿ ಮಜಾ,ಬಿಡುವಿಲ್ಲದ ಕ್ಲಾಸ್ ಗಳು, ಕಲಾಸುಂದರಿ, ಹೋಟೆಲ್ ಕರೀಷ್ಮಾಳ  ಸೆಳೆತ  ಎಲ್ಲಾ ಸೇರಿ ನಮ್ heart ನಲ್ಲಿ ಮಾಸಲಾಗದ ನೆನಪು ಕಟ್ಟಿಬಿಟ್ಟಿವೆ ಕಣ್ರೀ ........


7 comments:

  1. ಅದ್ಭುತ ಗುರೂಜಿ

    ReplyDelete
  2. ಓದಿ ಸಂತೋಷವಾಯಿತು(ಮುನ್ನುಡಿ ಸಾಲಿನಲ್ಲಿ ದಿನಾಂಕದ ವ್ಯತ್ಯಾಸವಾಗಿ ರುವುದು ಕಂಡುಬಂದಿದೆ ಸರಿಪಡಿಸು)
    ಧನ್ಯವಾದಗಳೊಂದಿಗೆ,
    ನಿನ್ನ ಪ್ರೀತಿಯ
    ಶಿವಕುಮಾರ(ಗೋವಾ)

    ReplyDelete
  3. HEA ದಲ್ಲಿ ನಮ್ಮ ಅನುಭವಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದೀರಿ ,ಧನ್ಯವಾದಗಳು

    ReplyDelete
  4. ನಿಜ ಅದು ನನ್ನ ಪಾಲಿಗೂ ದೇಗುಲವಾಯಿತು

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...