Total Pageviews

Friday 1 June 2018

'ಅಕ್ಷಯ ಪಾತ್ರೆ'

'ಅಕ್ಷಯ ಪಾತ್ರೆ'
'ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ವಾಯು ನಿಮ್ಮ ದಾನ 
ನಿಮ್ಮ ದಾನವನುಂಡು ಅನ್ಯರ
ಹೊಗಳುವ ಕುನ್ನಿಗಳೇನೆಂಬೆ ರಾಮನಾಥ'
ಎಂಬ ಆದ್ಯವಚನಕಾರ ಜೇಡರ ದಾಸಿಮಯ್ಯನವರ ವಚನದಂತೆ ಈ ಸೃಷ್ಟಿಯಲ್ಲಿರುವ ಪಂಚಭೂತಗಳಾದ  ನೆಲ ,ಜಲ, ವಾಯು,ಆಕಾಶ,ಅಗ್ನಿ ಗಳು ಸೇರಿ
ಸರ್ವವೂ ಭಗವಂತನ ಕೃಪೆಯಾಗಿರುವಾಗ, ಇಂತಹ ಶ್ರೇಷ್ಠದಾನ ನೀಡಿದ ದೇವನಿಗೆ ನಾವು ಚಿರಋಣಿಯಾಗಿರಬೇಕು.ಹಾಗೆಯೇ ಮಾನವ ದೇವರು ತನಗೆ ದಯಪಾಲಿಸಿದ್ದರಲ್ಲಿ ಅಲ್ಪವನ್ನಾದರೂ ದಾನ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕು.ಮಹಾಭಾರತದ  "ಅನ್ನದಾನ ಮಾಡಿದರೆ ಬದುಕನ್ನೇ ದಾನಮಾಡಿದಂತೆ " ಎಂಬ  ಶ್ಲೋಕ ಅನ್ನ ದಾನದ ಮಹತ್ವವನ್ನು  ಹೇಳುತ್ತದೆ.೧೨ ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ವು ಸಾಮೂಹಿಕ ದಾಸೋಹ  ಹಾಗೂ ಅನ್ನ ದಾನದ ಮಹತ್ವವನ್ನು ಪ್ರಥಮವಾಗಿ ಜಗತ್ತಿಗೆ ಸಾರಿದ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ.
                     ದಾನಗಳಲ್ಲಿ ಅನ್ನದಾನವೂ ಶ್ರೇಷ್ಠವಾದ ದಾನವಾಗಿದೆ ಎಂಬುದಕ್ಕೆ ಮಹಾಭಾರತದಲ್ಲಿ ಕೃಷ್ಣನು ವನವಾಸದಲ್ಲಿದ್ದ ಪಾಂಡವರಿಗೆ ದಯಪಾಲಿಸಿದ ಅಕ್ಷಯ ಪಾತ್ರೆ ನಿದರ್ಶನವಾಗಿದೆ.'ಅಕ್ಷಯ' ಎಂದರೆ ಅ- ಕ್ಷಯ- 'ಕ್ಷಯಿಸಲಾರದ','ಕರಗಲಾರದ', 'ತೀರಿಹೋಗದ','ಮುಗಿಯಲಾರದ' ಎಂಬ ಅರ್ಥಗಳಿವೆ.ಇಂತಹ 'ಅಕ್ಷಯ' ಎಂಬ ಹೆಸರು ಹೊತ್ತು, ಶಾಲಾ ಮಕ್ಕಳ ಹಸಿವನ್ನು ನೀಗಿಸಲು ಸರಕಾರದ ಸಹಯೋಗದಲ್ಲಿ ಅಕ್ಷರ ದಾಸೋಹ ವೆಂಬ ಕೈಂಕರ್ಯದಲ್ಲಿ ಸಕ್ರಿಯವಾಗಿ ನಮ್ಮ ಭಾರತ ದೇಶಾದ್ಯಂತ ತೊಡಗಿಸಿಕೊಂಡಿರುವ,. ಆಧುನಿಕ 'ಅಕ್ಷಯ ಪಾತ್ರೆ'ಗೆ ಅನ್ವರ್ಥವಾಗಿ  ಕಾರ್ಯನಿರ್ವಹಿಸುತ್ತಿರುವ  ಸಂಸ್ಥೆಯೆಂದರೆ  "AKSHAYA PATRA FOUNDATION ".
               ಇದೊಂದು ಸರಕಾರೇತರ ಸಂಸ್ಥೆಯಾಗಿದ್ದು, ನಮ್ಮ ದೇಶಾದ್ಯಂತ ೩೫ ಶಾಖೆಗಳನ್ನು ಹೊಂದಿ  ನಿಸ್ವಾರ್ಥ ಪರಸೇವೆ ಗೆ ತನ್ನನ್ನು ತೊಡಗಿಸಿಕೊಂಡಿದೆ.ಅನ್ನ ಬ್ರಹ್ಮ ಎಂದು ಅನ್ನವನ್ನು ಸೃಷ್ಟಿಕರ್ತನಿಗೆ  ಸಮೀಕರಿಸಿರುವುದನ್ನು ನಾವು ಕಾಣುತ್ತೇವೆ.ಇಂತಹ ಮಹತ್ತರವಾದ ಅನ್ನದಾನದ ಕಾರ್ಯವನ್ನು ಸರಕಾರದ ಸಹಯೋಗದೊಂದಿಗೆ ಅಕ್ಷಯ ಪಾತ್ರ ಫೌಂಡೇಶನ್ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಸಾಮಾಜಿಕವಾಗಿ ಮಹತ್ತರ ಕಾರ್ಯವಾಗಿದೆ.               ಈ ಅಕ್ಷಯ ಫೌಂಡೆಶನ್ನಿನ 'ವಿಶ್ವದ ಅತಿ ದೊಡ್ಡ ಅಡುಗೆಮನೆ' ಎಂದು  'LIMCA BOOK OF WORLD RECORDS'ನಲ್ಲಿ ದಾಖಲಾಗಿರುವ ಹುಬ್ಬಳ್ಳಿ- ಧಾರವಾಡ ದ ಇಸ್ಕಾನ್  ಅಕ್ಷಯ ಫೌಂಡೇಶನ್ ನ ವಿಶ್ವದ ಅತಿ ದೊಡ್ಡ  ಅಡುಗೆ ಕೇಂದ್ರ ಕ್ಕೆ ದಿನಾಂಕ ೨೮-೦೫-೨೦೧೮ ರ ಸಂಜೆಯ ನಮ್ಮ  ಭೇಟಿ ಅವಿಸ್ಮರಣೀಯವಾಗಿತ್ತು.
ನೆಲದಿಂದ ೨೦೦ ಅಡಿ ಎತ್ತರದಲ್ಲಿರುವ  ಬೆಟ್ಟದ ಮೇಲೆ ನಿರ್ಮಿಸಲಾದ  ಶ್ರೀ ಕೃಷ್ಣ ದೇವಾಲಯ  ನಮಗೆ  ಭಕ್ತಿ, ಸೇವೆ, ಧ್ಯಾನ ಹಾಗೂ ಆತ್ಮೋನ್ನತಿಯ  ಮತ್ತೊಂದು ಲೋಕವನ್ನು ತೆರೆದು ತೋರಿ,ನಮ್ಮ ಮನಸು ಆ ಹೊತ್ತು ಭಕ್ತಿಯ ಕಡಲಲ್ಲಿ ಮುಳುಗುವಂತೆ ಮಾಡಿತು.
ದೇವಾಲಯವನ್ನು ಪ್ರವೇಶಿಸಿದಾಗ
' ಜಗದೋದ್ಧಾರನ ಆಡಿಸಿದಳು ಯಶೋಧೆ'
     ಎಂಬ ಜಗದೋಧ್ಧಾರನ ಆರಾಧನೆಯ ಗೀತೆ ಮನದಲ್ಲಿ ಮರ್ಮರಿಸುತ್ತಿತ್ತು.ಹರಿಭಕ್ತಕವಿ ಕುಮಾರವ್ಯಾಸ 'ತಿಳಿಯಹೇಳುವ  ಕೃಷ್ಣಕತೆ ಯೂ, ಭಾಗವತ ಪರಂಪರೆಯೂ ,ಏಕಕಾಲಕ್ಕೆ ಕೃಷ್ಣ ನೆಂಬ ಮಾಯಾವಿ ದೇವನ   ತೇಜೋಮೂರ್ತಿಯ ಮೂಲಕ ದರ್ಶನ ನೀಡಿದ್ದು  ವಿಶೇಷವಾದ ಅನುಭಾವವನ್ನು ನೀಡಿತು.                          ಶ್ರೀ ಕೃಷ್ಣ ದರ್ಶನವಾದ ನಂತರ ದೇವಾಲಯದ ಹಿಂದಿನ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಲಾಗಿರುವ,ಪ್ರತಿದಿನ  ಧಾರವಾಡ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುಮಾರು ೧,೫೦,೦೦೦  ಮಕ್ಕಳಿಗೆ ಕರ್ನಾಟಕ ಸರ್ಕಾರದ ಮಹತ್ತರವಾದ  'ಅಕ್ಷರ ದಾಸೋಹ' ಯೋಜನೆಯ ಸಹಯೋಗದೊಂದಿಗೆ ಆಹಾರವನ್ನು ಪೂರೈಸುವ  ವಿಶ್ವದ ಅತಿ ದೊಡ್ಡ  ಅಡುಗೆ ಕೇಂದ್ರ ಕ್ಕೆ ಸಂದರ್ಶನ ನೀಡುವ ಭಾಗ್ಯ ನಮ್ಮದಾಯಿತು. ಆ ಕೇಂದ್ರದ ಮುಖ್ಯಸ್ಥರಾಗಿದ್ದ, ಕೃಷ್ಣಸೇವಾಭಕ್ತ ರಾಗಿದ್ದವರೊಬ್ಬರು ನಮಗೆ ಕೇಂದ್ರದ ಬಗ್ಗೆ ಸವಿವರವಾದ  ಮಾಹಿತಿ ನೀಡಿದರು.
                    ಹಸಿವು ಹಾಗೂ ಅನಕ್ಷರತೆಯನ್ನು  ತೊಲಗಿಸುವ ಉದ್ದೇಶದಿಂದ ೨೦೦೬ ರಲ್ಲಿ ಸ್ಥಾಪನೆಯಾಗಿದ್ದು ,ಪ್ರತಿದಿನ ಈ ಕೇಂದ್ರದಲ್ಲಿ ೧೪ ಟನ್ (೧ ಟನ್ -೧೦೦೦ಕೆ.ಜಿ) ಅಕ್ಕಿ,೩ ಟನ್ ಬೇಳೆ,೭.೫ ಟನ್ ತರಕಾರಿ ಗಳನ್ನು ಬಳಸಿ ಧಾರವಾಡ ಜಿಲ್ಲೆಯ ೮೦೦ ಶಾಲೆಗಳ ೧,೫೦,೦೦೦ ಮಕ್ಕಳಿಗೆ ಅಡುಗೆಯನ್ನು ತಯಾರಿಸಿ ೬೦ ವಾಹನಗಳ ಮೂಲಕ ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತದೆ  ಎಂದರೆ ಈ ಕೇಂದ್ರದ ಕಾರ್ಯವೈಖರಿಯ ವಿರಾಟ್ ದರ್ಶನವಾಗದಿರದು.
ಲೋಕವೆಲ್ಲ ಸವಿಸಕ್ಕರೆಯ ನಿದ್ದೆಯ ಮಂಪರಿನಲ್ಲಿರುವ  ಬೆಳಿಗ್ಗೆ ೩ ಗಂಟೆಯಿಂದಲೇ ೪೦೦ ಕೆಲಸಗಾರರಿಂದ  ಪ್ರಾರಂಭವಾಗುವ  ಅಡುಗೆ ಸಿದ್ಧಪಡಿಸುವ ಕಾರ್ಯ ಬೆಳಿಗ್ಗೆ ೮ ಗಂಟೆಗೆ ಮುಗಿದು ನಂತರ ಸರಬರಾಜು ಹಾಗೂ ಸ್ವಚ್ಛತೆ ಕಾರ್ಯ ೨ ಗಂಟೆಯವರೆಗೆ ನಡೆಯುವುದನ್ನು ವಿವರಿಸಿದಾಗ ಕಾರ್ಯದ ಅಗಾಧತೆಯ ಅರಿವು ನಮಗಾಯಿತು.ಕೇಂದ್ರದ  ಎರಡನೇ ಮಹಡಿಯಲ್ಲಿ ಆಹಾರ ತಯಾರಿಸಲು ಬೇಕಾದ ಕಚ್ಚಾ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳುವ 'PREPARATION UNIT' ಇದೆ.ಒಂದನೇ  ಮಹಡಿಯಲ್ಲಿ,ಎರಡನೇ ಮಹಡಿಯಿಂದ ಬರುವ ಸ್ವಚ್ಚಗೊಳಿಸಿದ ಅಕ್ಕಿಯಿಂದ  ಅನ್ನ ಮತ್ತು ಸಾಂಬಾರನ್ನು  ತಯಾರಿಸುವ ಘಟಕವಿದ್ದು ,ಪ್ರತಿ ಅನ್ನದ  ಪಾತ್ರೆಯಲ್ಲಿ ಸುಮಾರು ೧೦೦೦ ಮಕ್ಕಳಿಗಾಗುವಷ್ಟು ಅನ್ನವನ್ನು ಕೇವಲ ೧೫ ನಿಮಿಷದಲ್ಲಿ ಹಾಗೂ ಸುಮಾರು ೬೦೦೦ ಮಕ್ಕಳಿಗಾಗುವಷ್ಟು ಸಾಂಬಾರನ್ನು ಕೇವಲ ೪೫ ನಿಮಿಷಗಳಲ್ಲಿ ತಯಾರಿಸುವ  ತಂತ್ರಜ್ಞಾನ ನಮ್ಮನ್ನು ಬೆರಗುಗೊಳಿಸಿತು.ನೆಲ ಮಹಡಿಯಲ್ಲಿ ಒಂದನೇಯ ಮಹಡಿಯಿಂದ ತಯಾರಾದ ಆಹಾರ ವನ್ನು ಪಾತ್ರೆಗಳಲ್ಲಿ ತುಂಬಿ  'CONVEY BELT' ಮೂಲಕ ಸರಬರಾಜು ಮಾಡುವ ಘಟಕವಿದ್ದು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತಲುಪಿಸಲಾಗುವ ಸಂಗತಿಯೇ ನಮಗೆ ವಿಸ್ಮಯವನ್ನುಂಟು ಮಾಡುತ್ತದೆ.

  ನಮ್ಮ ಭಾರತ ದೇಶಾದ್ಯಂತ ಇಂತಹ  'ಇಸ್ಕಾನ್' ನ ೩೫ ಕೇಂದ್ರಗಳಿದ್ದು ಇನ್ನೂ ೩೫ ಘಟಕಗಳು ನಿರ್ಮಾಣ ಹಂತದಲ್ಲಿವೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ,ಮೈಸೂರು,  ಬಳ್ಳಾರಿ ಸೇರಿದಂತೆ  ಒಟ್ಟು ೫ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ದುರ್ಮಾರ್ಗದ ಮೂಲಕವಾದರೂ ಸರಿ, ಕೇವಲ  ಹಣ ,ಆಸ್ತಿ ಗಳಿಸುವ  ಉದ್ದೇಶವನ್ನಿಟ್ಟುಕೊಂಡಿರುವ ಹಲವಾರು ನಕಲಿ  NON GOVERNMENT ORGANISATION ಗಳು ದೇಶಾದ್ಯಂತ ನಾಯಿಕೊಡೆಗಳಂತೆ  ಉದ್ಭವಿಸುತ್ತಿರುವ ಇಂತಹ ವಿಷಮ ಸಂದರ್ಭದಲ್ಲಿ,ಸರ್ಕಾರದ ಸಹಯೋಗದ ಜೊತೆಗೆ ತನ್ನ ಕೊಡುಗೆಯನ್ನೂ ಸಂಯುಕ್ತಗೊಳಿಸಿ ಬಡ ಮಕ್ಕಳಿಗೆ  ಪೌಷ್ಠಿಕಾಂಶಯುಕ್ತ  ಆಹಾರ ಪೂರೈಸುವ ನಿಸ್ವಾರ್ಥ  ಸೇವೆಯ  'ಇಸ್ಕಾನ್' ನ ಅಕ್ಷಯ ಫೌಂಡೇಶನ್ ನ ಕಾರ್ಯ ಮೆಚ್ಚುವಂತಹುದು ಹಾಗೂ ಆದರ್ಶಪ್ರಾಯವಾಗಿದೆ. 'UNLIMITED FOOD FOR EDUCATION'' ಎಂಬ ಧ್ಯೇಯವಾಕ್ಯದೊಂದಿಗೆ  ಹಸಿವು ಮತ್ತು ಅನಕ್ಷರತೆ ಯ ವಿರುದ್ಧ ಹೋರಾಡುವ ಪಣ ತೊಟ್ಟಿರುವುದು ವಿಭಿನ್ನವಾಗಿದೆ.


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...