Total Pageviews

Tuesday 29 May 2018

ರಾಗರತಿಯ ನಂಜು ಏರಿದಾಗ...

ರಾಗರತಿಯ ನಂಜು ಏರಿದಾಗ....
                  ದಿನಾಂಕ 28-5-2018 ರಂದು  ಸುಮಾರು ೪ ೩೦ ರ ವೇಳೆಗೆ ಧಾರವಾಡದ  ಸಾಧನಕೇರಿಯಲ್ಲಿಳಿದಾಗ,ಬೇಂದ್ರೆ ಯೆಂಬ 'ಶಬ್ದಗಾರುಡಿಗ, ',ಶಬ್ದಬ್ರಹ್ಮ' ರ ರಾಗರತಿಯ ನಂಜು ತನ್ನ ಮೋಹಕ ಲಾವಣ್ಯದಿಂದ ಹೃನ್ಮನ ಸೆಳೆಯುತ್ತಿದ್ದಂತೆ 'ಆಗ ಸಂಜೆಯಾಗಿತ್ತ' ; ನೆಲದ ಮೇಲೆ ಬಿದ್ದು   ಸಸಿಗೆ ನೀರೆರೆಯುವ  ಹಂಬಲಕೆ ಕಾದು ಕುಳಿತ ಮೋಡ ಮಂಜು  ಕಟ್ಟುತ್ತಿತ್ತು. ದಿನವೆಲ್ಲ ದಣಿದ  ಚಿತ್  'ಸೂರ್ಯಪಾನ' ಮತ್ತೆ ಪುನಃಶ್ಚೇತನದ ಚೈತನ್ಯಶೀಲತೆಯ ಕಡೆಗೆ ಹೊರಳುವ ಅಮೃತಘಳಿಗೆಯೂ ಆಗಿತ್ತು.ಸಹೃದಯರನ್ನು,ಜೀವನಪ್ರೇಮಿಗಳನ್ನು, ಶ್ರೀಸಾಮಾನ್ಯರನ್ನು ,ಸಾಹಿತ್ಯಪ್ರೇಮಿಗಳನ್ನು, ಕಾವ್ಯಾರ್ಥಿಗಳನ್ನು 'ಬಾರೋ ಸಾಧನಕೇರಿಗೆ' ಎಂದು ಬೇಂದ್ರೆಯವರು ಜೀವನಪ್ರೀತಿಯೆಂಬ ತಮ್ಮ  ಕಾವ್ಯಝರಿಯ ಕೆರೆಯಲ್ಲಿ ಮಿಂದೆದ್ದು ನವನೀತದ ನವೋಲ್ಲಾಸವನ್ನು ಪಡೆದು ವೈವಿಧ್ಯಮಯ ಸಾಸಿರವಿಧ ಸ್ಪೂರ್ತಿತೇಜಸ್ಸುಗಳಿಂದ ಕಂಗೊಳಿಸುವ ಬದುಕು ಪಡೆಯಬನ್ನಿ ಎಂದು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತದೆ. ಆ ನೆಲದ ಗುಣವೇ ಹಾಗೆ, ಬೇಂದ್ರೆ ಯೆಂಬ ಕಾವ್ಯ ಋಷಿ ಯ ಸ್ಪರ್ಶದಿಂದ ಹಸಿರು ಮೈದುಂಬಿ ನಿಂತು ಗಿಡ ಮರ ಪೊದೆ ಲತೆಗಳ ಕೊರಳೊಳಗಿಂದ ಹಕ್ಕಿಯ ಇಂಚರಗಳ ನಿನಾದವನ್ನು ಹೊಮ್ಮಿಸುವ, ಹಾಲ್ಗಡಲಲ್ಲಿ ಸವಿಸಕ್ಕರೆಯ ರಸಪಾಕ ಬೆರೆಸಿದಂತೆ ,ಸಹೃದಯರೆಂಬ ಮರಿದುಂಬಿಗಳನಾಕರ್ಷಿಸುವ  ಮಾಧುರ್ಯದ  ಪಕಳೆಗಳೊಳಗಿಂದ ಮಕರಂದವನ್ನು ಸ್ಫುರಿಸುವ ಬೆಡಗಿನ ಬೆರಗಿನ ಜೀವರಸಧಾರೆಯ ತಾಣವದು.ಅಲ್ಲಿ ಹೆಜ್ಜೆಯಿಡುವ ಪ್ರತಿ ಕ್ಷಣವೂ ಧನ್ಯತೆಯ ಆಲಿಂಗನ, ಕಾವ್ಯ ಪರಂಪರೆಯೊಂದರ ಭವ್ಯತೆಯ ದರ್ಶನ.
ಈ ಕಾವ್ಯತಪಸ್ವಿ ಬೇಂದ್ರೆಯಜ್ಜನ ಮನೆಯಂಗಳ ಹಾಗೂ ಎದುರಿಗಿರುವ ಕೆರೆಯಂಗಳ ಪಾತರಗಿತ್ತಿಯ ಬಣ್ಣ ಬಣ್ಣದ ರೆಕ್ಕೆಗಳ,ಬೆಳ್ಳಕ್ಕಿ,ಕೋಗಿಲೆ,ಹಂಸದ ಮೃದುಮಧುರ ಪುಕ್ಕಗಳ,ಬೇವು,ಮಾವಿನ ಚಿಗುರೆಲೆಗಳು ನಿತಾಂತವಾಗಿ ಹರಡಿಕೊಳ್ಳುವ ವಿಸ್ಮಯದ ತಾವು.ಕರ್ನಾಟಕ ಸರ್ಕಾರ ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಸ್ಕೃತಿ ಹಿರಿಮೆ ಬೇಂದ್ರೆ ಸಮಗ್ರ ದರ್ಶನಕ್ಕಾಗಿ ಸ್ಥಾಪಿಸಿರುವ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ 'ಬೇಂದ್ರೆ ಭವನ'ವನ್ನು ಒಳಹೊಕ್ಕಾಗ  ತಮ್ಮದೇ ವಿಶಿಷ್ಟ ಕಾವ್ಯಪರಂಪರೆಯೊಂದನ್ನು ನಿರ್ಮಿಸಿ ಸಾರಸ್ವತ ಲೋಕವನ್ನು ತಮ್ಮ ಕಾವ್ಯಮಣಿಗಳಿಂದ ಪ್ರಕಾಶಮಾನವಾಗಿ ಬೆಳಗಿರುವ  ಬೇಂದ್ರೆಯವರ ಭವ್ಯ ಕಲಾಕೃತಿಯೊಂದು ನಮ್ಮನ್ನು ಮೈಮರೆಸುತ್ತದೆ.ಆ ಭಾವುಕ ಕಣ್ಣುಗಳ ಮಾಂತ್ರಿಕ ನೋಟ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ ಹಾಗೂ ತನ್ನ ಪರಂಪರೆಗೆ ಸ್ವಾಗತ ಕೋರುತ್ತದೆ. ಆ ಪರಂಪರೆಯ ಹೆಗ್ಗುರುತಾಗಿದ್ದ ಅವರ ತಲೆಯ ಮೇಲಿನ  ರಟ್ಟಿನ ಟೊಪ್ಪಿಗೆ,ಟೊಪ್ಪಿಗೆಯಿಂದ ಹೊರಗೆ ಇಣುಕುತ್ತಿರುವ ಶಿವನ ಹರಡಿದ ಜಟಾಜೂಟವನ್ನು ನೆನಪಿಸುವ ಬಿಡಿ ಕೇಶದೆಳಗಳು,ಹಣೆಯಲ್ಲಿ ತೆಳು ಗಂಧ, ಕಂಡದ್ದೆಲ್ಲವನ್ನೂ ಎದೆಯ ಅಕ್ಷಯ ಪಾತ್ರೆಯಲ್ಲಿ ತೀರದ ಅನುಭಾವಗಳನ್ನಾಗಿಸುವ ತೇಜಸ್ಸಿನ ಕಂಗಳ  ತೀಕ್ಷ್ಣದೃಷ್ಟಿಗೆ ಹೆದರಿ ಮುದುಡಿರುವ ಬೆಳ್ಳನೆಯ ಹುಬ್ಬುಗಳು, ಮಾಸ್ತರಿಕೆಯ ಕುರುಹಾದ ಕಪ್ಪು ಕೋಟು,ಬದುಕಿನ ಸುಖ ದುಃಖಗಳನ್ನೆಲ್ಲಾ ಮಡುಗಟ್ಟಿ ಸ್ಥಾಯಿಯಾಗಿಸಿಕೊಂಡಿರುವ ಮೂಕವಿಸ್ಮಿತರನ್ನಾಗಿಸುವ ಮಂದಹಾಸ. ಇವು ಬೇಂದ್ರೆ ಮಾಸ್ತರರ ನಿರಾಡಂಬರದ ಸರಳ ವ್ಯಕ್ತಿತ್ವದ ಆಭರಣಗಳು.
ಆ ಕಲಾಕೃತಿಯನ್ನು ದಾಟಿ ಮುಂದೆ ಒಳಹೋದಾಗ ಬೇಂದ್ರೆಯವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು ತನ್ನ ಒಂದೊಂದೇ ಪುಟಗಳನ್ನು ತೆರೆದು ತೋರುತ್ತಿತ್ತು.ಬೇಂದ್ರೆಯವರು ಶಿವರಾಮ ಕಾರಂತರಿಂದ ಕರಂಡಿಕೆಯನ್ನು ಪಡೆದುಕೊಂಡ ಭಾವಚಿತ್ರ,೮೦ ವಸಂತ ತುಂಬಿದ ಸಂದರ್ಭದ ಕುಟುಂಬದ ಹಾರೈಕೆಯ ಭಾವಚಿತ್ರ,ಕುವೆಂಪುರವರೊಂದಿಗಿನ ಭಾವಚಿತ್ರ,ಹೀಗೆ ಗತಕಾಲದ ಸಾಹಿತ್ಯದ ಸುವರ್ಣಯುಗದ ಕಾಮನಬಿಲ್ಲಿನಂತೆ ವೈವಿಧ್ಯಮಯವಾದ ಅವರ ಕಾವ್ಯ ಬದುಕಿನ ಘಟನಾವಳಿಗಳನ್ನು ಕಪ್ಪು ಬಿಳುಪುಗಳಲ್ಲಿಯೇ ಕಟ್ಟಿಕೊಡುವ ಸುಂದರ ಛಾಯಾಗ್ರಹಣದ ಕೃತಿಗಳು ಮತ್ತೆ ನಮ್ಮನ್ನು ಆ ಕಾಲಕ್ಕೆ ಕರೆದೊಯ್ಯುತ್ತವೆ.ಮನಸ್ಸು ಏಕಾಗ್ರಚಿತ್ತವಾಗಿ ಸಲಿಲದರ್ಪಣದಂತೆ ಬೇಂದ್ರೆಯವರ ಪ್ರತಿಬಿಂಬಗಳನ್ನು ಮನಪಟಲದಲ್ಲಿ ಕಡೆದು ನಿಲ್ಲಿಸುತ್ತದೆ.ಆ ಕಲಾಕೃತಿಗಳಲ್ಲಿಯೇ ಮೈಮರೆಯುವಂತೆ ಮಾಡುತ್ತದೆ.ಜೊತೆಗೆ

                                ಘಮ ಘಮ ಘಮಾಡಸ್ತಾವ ಮಲ್ಲಿಗಿ 

ನೀ ಹೊರಟಿದ್ದೀಗ ಎಲ್ಲಿಗಿ

ತುಳುಕ್ಯಾಡತಾವ ತೂಕಡಿಕಿ

ಎವೆಗಪ್ಪುತಾವ ಕಣ್ಣ್ ದುಡುಕಿ

ಕನಸು ತೇಲಿ ಬರುತಾವ ಹುಡುಕಿ .....ಎಂಬ ಭಾವಗೀತೆಯ ಧ್ವನಿ ಈ ಮೈಮರೆಯುವಿಕೆಗೆ ಹಿಮ್ಮೇಳವಾಗಿ 'ಕನಸು ತೇಲಿ ಬರುವಂತೆ '  ಮಲ್ಲಿಗೆಯ ಸುಮಧುರತೆ,ಮಂದ್ರ ಪರಿಮಳ ,ಕಾವ್ಯ ಪ್ರತಿಮೆಗಳು ಮನದ ಮೂಲೆಯಿಂದ ಪಟಲದೆಡೆಗೆ ಅಲೆ ಅಲೆಯಾಗಿ ತೇಲಿ ಬರುತ್ತಿವೆ.
ಬೇಂದ್ರೆಯಜ್ಜನನ್ನು ಅಖಂಡವಾಗಿ ಕಟ್ಟಿಕೊಡಲು ಹೆಣಗುತ್ತಿವೆ.ಬೇಂದ್ರೆಯವರೆಂದರೆ ಹಾಗೆ ,ಅವರ ಬಗೆ ಬಗೆ ಭಂಗಿಯ ಭಾವಚಿತ್ರಗಳನ್ನು ನೋಡಿದಷ್ಟು ಹಾಗೂ ಸ್ಮರಿಸಿಕೊಂಡಷ್ಟು ಬಾರಿ ವೈವಿಧ್ಯಮಯ ನವ ನವೀನ ಭಾವಗಳು ಪ್ರತಿಯೊಬ್ಬರಲ್ಲೂ ಹುಟ್ಟು ಪಡೆಯುತ್ತಲೇ ಇರುತ್ತವೆ.ಅವರ ಕಾವ್ಯ ಓದಿದಾಗಲೊಮ್ಮೊಮ್ಮೆ ಒಂದೊಂದು  ಹೊಸ  ಹೊಳವು ಸ್ಮರಿಸಿಕೊಂಡಾಗಲೊಮ್ಮೆ ನಿಗೂಢ ರಹಸ್ಯವನ್ನು ಬಿಚ್ಚಿಡುತ್ತಲೇ ಹೋಗುತ್ತವೆ .ಅದು ಅವರ ಶಬ್ದಶಕ್ತಿಯ ಅಗಾಧತೆ ;ಶಬ್ದಾರ್ಥ ಚಮತ್ಕಾರದ ವಿರಾಟ್ ರೂಪ ಹಾಗೂ ಅವರ ಶ್ಲೇಷ ,ಉಪಮೆ ಪ್ರತಿಮೆಗಳ ಬೇಲೂರು ಶಿಲಾಬಾಲಿಕೆಯರಂತಹ ಸೌಂದರ್ಯದ ಸೃಷ್ಟಿಯ ಕಾವ್ಯಕಲೆಯ ಕುಸುರು.
ಬೇಂದ್ರೆಯವರ ಕಾವ್ಯ ಪ್ರತಿಬಾರಿಯೂ ನಮ್ಮನ್ನು ಚಕಿತಗೊಳಿಸುತ್ತಲೇ ಹೋಗುತ್ತದೆ.

ಇದಕ್ಕೆ ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾವ್ಯ ಸಂಕಲನದ ನಾಕುತಂತಿ ಯ ಈ ಪದಮಣಿಗಳನ್ನು ಗಮನಿಸಿ
'ಆವು ಈವಿನ ನಾವು ನೀವಿಗೆ ಆನು ತಾನದ ತನನನಾs
ನಾನು ನೀನಿನ ಈ ನಿನಾನಿಗೆ ಬೇನೆ ಏನೋ? ಜಾಣಿ ನಾs
ಚಾರು ತಂತ್ರಿಯ ಚರಣ ಚರಣದ ಘನಘನಿತ ಚತು- -ರಸ್ವನಾ
ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ
ಇವು ಬೇಂದ್ರೆಯವರ ಭವ್ಯತೆಯ ದರ್ಶನಕ್ಕೆ,ನಾದ ಬ್ರಹ್ಮತ್ವಕ್ಕೆ ಸಾಕ್ಷಿಯಾಗಿವೆ.ನಾದ ಸ್ವರಗಳೊಂದಿಗೆ ಮಾಧುರ್ಯದ ಚೆಲ್ಲಾಟವಾಡಿದವರು ಬೇಂದ್ರೆಯವರು.ಅವರ ಅನುಭವಗಳ ಅನುಭಾವದ ಚಿತ್ರಕಶಕ್ತಿ ಹಿಮಾಲಯದಷ್ಟು ಎತ್ತರ ಸಾಗರದಷ್ಟು ಆಳವಾದದ್ದು.ಅವರೊಳಗಿನ ಕವಿ ಕ್ರಾಂತದರ್ಶಿ.
ಕಾವ್ಯಕಡಲಿನ   ತಮ್ಮ ಮನೆ'ಶ್ರೀಮಾತಾ 'ಳ ಮಡಿಲಿಗೆ ತಬ್ಬಿ ಅವಳಾಶ್ರಯದಲ್ಲಿ ಹಬ್ಬಿಕೊಂಡ ಬೇಂದ್ರೆಯವರು ಕಾವ್ಯದ ರಸಪಾಕವನ್ಮು ತಮ್ಮ ಅನುಭವಗಳ ಮೂಸೆಯಲ್ಲಿ ಕಡೆದು ಸವಿಜೇನಾಗಿಸುತ್ತಾರೆ ಹಾಲೋಗರವಾಗಿಸುತ್ತಾರೆ.
ಮನವು ಕಡಲಾಗಿ ನಿಶಾಂತವಾಗಿ ಹರಿದಿತ್ತು ಆ ಕಡಲ ನೊರೆಯಲೆಗಳು ನಿಧಾನವಾಗಿ ಮನಭಿತ್ತಿಯ ಮೇಲೆ ಅಪ್ಫಳಿಸುತ್ತಿದ್ದವು.ಘಮ ಘಮ ಘಮಾಡಸ್ತಾವ ಮಲ್ಲಿಗೆ ಹಾಡು ಅಲೆ ಅಲೆಯಾಗಿ ಮನವನಾವರಿಸುತ್ತಿತ್ತು.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ
'ಪಾತರಗಿತ್ತಿ ಪಕ್ಕ 
ನೋಡಿದೇನ ಅಕ್ಕ
ಹಸಿರು ಹಚ್ಚಿ ಚುಚ್ಚಿ 
ಮೇಲಕ್ಕರಣ ಹಚ್ಚಿ'
ಎಂಬ ಸೃಷ್ಟಿಕರ್ತನ ಜಗನಿರ್ಮಾಣದ ಕೌಶಲವನ್ನೂ ತಮ್ಮ ಕಾವ್ಯಕಲೆಯ ಬಲೆಯಲ್ಲಿ ಹೆಣೆಯುತ್ತಾರೆ.ಹೀಗೆ ಬೇಂದ್ತೆಯವರೆಂಬ ಭುವನದ ಭಾಗ್ಯ ವೊಂದು ನಡೆದಾಡಿದ ಪುಣ್ಯಭೂಮಿಯಾದ ಸಾಧನಕೇರಿಯ ಕೆರೆಯ ದಂಡೆಯ ಮೇಲೆ  ಮೈಮರೆತು ಸಾಗುತ್ತಿರುವಾಗ ಬೇಂದ್ರೆಯಜ್ಜ ಕಟ್ಟಿದ ರಸಭಾವಗಳು ಮಡುಗಟ್ಟಿದ ಮುಂಗಾರಿನ ಮೋಡಗಳು ಹನಿ ಹನಿಯಾಗಿ ಸಿಂಚನಗೈಯ್ಯಲು ಪ್ರಾರಂಭಿಸಿದವು. ಆ ಮೈದುಂಬಿದ ಸರೋವರ ತಟದ  ಪ್ರಕೃತಿಯನ್ನು ನೋಡಿದ ನನಗೆ
"ನಾರಿ ನಿನ್ನ ಮಾರಿ ಮ್ಯಾಲ 
ನಗಿನವಿಲ ಕುಣಿಯುತಿತ್ತ"
ಎಂಬ ಸಾಲುಗಳನ್ನು ಉದ್ಘರಿಸಿತು ಮನ. ಪ್ರಕೃತಿಯ ಮೊಗದಲ್ಲಿ ಮಳೆಗಾಲದ  ನಗಿನವಿಲು ಕುಣಿಯುತಿತ್ತು.ಸಂಭ್ರಮ ಮನೆ ಮಾಡಿತ್ತು.

ಪಾತರಗಿತ್ತಿಯ ಕೆನೆರೆಕ್ಕೆಯ ಬೆಡಗು,ಕೆರೆಯ ಜಲ ನೀಲಿ,ಮರದ ಟೊಂಗೆಗಳ ಕಂದು,ತರುಲತೆಗಳ ಪುಷ್ಪಗಳ ಚೆದರಿದ ಬಣ್ಣ,ಮರಿದುಂಬಿಗಳ ಮೈಬಣ್ಣ  ಹೀಗೆ  ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳ್ಳುತ್ತಿರುವ ಈ  ರಸಘಳಿಗೆಗಳು ನಮಗಾಗಿ ಕಾದುಕುಳಿತಿರುವಂತೆ ಭಾಸವಾಯಿತು.ಜಡಿಮಳೆ ಬೇಂದ್ರೆಯವರ ಕಾವ್ಯ ಕನ್ನಿಕೆ ಮೋಡಗಳಿಂದ ಹನಿಹನಿಯಾಗಿ ಇಳಿದು ಇಳೆಯ ಮೇಲೆ ತನ್ನ ಪ್ರತಿಮೆಯನ್ನು ಸೃಷ್ಟಿಸುತ್ತಿರುವ ಹಾಗೆ   ಧರೆಗಿಳಿಯುತಿತ್ತು .ಆ ಕೆರೆಯಂಗಳದಲ್ಲಿ ನಿಲ್ಲಿಸಿದ  ಪ್ರತಿಮೆಯೊಂದು ಬಾನಿಗೆ ಗುರಿಯಿಟ್ಟು ಬಾಣ ಹೊಡೆಯುತ್ತಿತ್ತು.   ಅದು ಮರಳಿ ಮೇಘಮಂದಾರವನ್ನು ಇಳೆಗಿಳಿಸುತ್ತಿರುವಂತೆ ಪ್ರಕೃತಿ ವರುಣ ನ ಸಿಂಚನದಲ್ಲಿ ಮಿಂದೇಳುತ್ತಿತ್ತು.ಆ ಸಸ್ಯೋದ್ಯಾನ ಬೇಂದ್ರೆಯವರನ್ನು ಅವರ ಕಾವ್ಯಗಳನ್ನು  ಮತ್ತೆ ಮತ್ತೆ ಒಡಲಲ್ಲಿ ತುಂಬಿಕೊಂಡು ಚಿರನೂತನವಾಗಿ  ಕಂಗೊಳಿಸುತ್ತಿತ್ತು.
ಈ ಮುಂಗಾರಿನ ಮಳೆ ಮೋಡಗಳ ಚೆಲ್ಲಾಟದಲ್ಲಿ ಬೇಂದ್ರೆ ಎಂಬ ಜಲಾಮೃತ ಸಿಂಚನ ಮನಸ್ಸಿಗೆ ಮುದ ನೀಡುತ್ತಿತ್ತು.
'ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು 
ಜೀವದಾಣೆಯಂತೆ ತಾನೆ
ನುಡಿಯುತಿರುವುದು'
ಎಂಬ ಕಾವ್ಯಾಲಾಪ ಮನದ ಮೂಲೆಯಿಂದ  ತೇಲಿಬರುತಿತ್ತು.
ಬೇಂದ್ರೆಯವರು ಕಂಡನುಭವಿಸಿದ ಕಾವ್ಯ ಪ್ರತಿಮೆಗಳ ದರ್ಶನಕ್ಕಾಗಿ ಜೀವವೀಣೆ ಮಿಡಿಯುತ್ತಿತ್ತು.ಅವುಗಳ ಸೌಂದರ್ಯಮೀಮಾಂಸೆಯನ್ನು ಆನಂದಿಸುವುದರಲ್ಲಿಯೇ ಹೃದಯ ಕಳೆದುಹೋಗುತ್ತಿತ್ತು.

ಬೇಂದ್ರೆಯವರು ಮೀಟಿದ
ನಾನು ನೀನು ಆನು ತಾನು ಎಂಬ
ನಾಕೇ ನಾಕು ತಂತಿ
ನಮ್ಮೆದೆಯ ದೇವಚೈತನ್ಯವನ್ನು ರಾಗಿಸುತ್ತಿತ್ತು. ಸ್ವರ ಮಾಧುರ್ಯದ ರಾಗ ರಸ ಗಂಧ ತೀಡುತಿತ್ತು. ಬೇಂದ್ರೆಯವರ  ಶಬ್ದನಾದ ಕಿವಿಗಪ್ಪಳಿಸುತಿತ್ತು. 'ಎದೆ ತುಂಬಿ ಹಾಡುತ್ತಿತ್ತು.ಮನದುಂಬಿ ಹಾರುತ್ತಿತ್ತುಅಂತರಂಗವೆಲ್ಲ  ಉಲ್ಲಾಸ ಕವಿದು ಚೇತನವಾಗಿತ್ತು.ಹೃದಯವೇ  ತೇಲಿ ಅನಂತಾನಂದದಲಿ  ಚಿಗುರೊಡೆಯುತ್ತಿತ್ತು.' ಆನಂದಮಯ ಈ ಜಗ ಹೃದಯ ' ವೆಂಬ ಕುವೆಂಪುರವರ ಸಾಲುಗಳು ಧನ್ಯತೆಯ ಧ್ಯಾನದಿಂದ ಕಾಡಹತ್ತಿದವು.ದತ್ತಜ್ಜನ ಬದುಕಿನ ಜಿಜ್ಞಾಸೆ ನಮ್ಮನ್ನು  ಪ್ರತಿಕ್ಷಣದ ನವೀನತೆಗೆ ತೆರೆದುಕೊಳ್ಳುವಂತೆ ಮಾಡುತ್ತದೆ,ಹೇಗೆಂದರೆ
'ತಿರುತಿರುಗಿಯೂ ಹೊಸತಾಗಿರಿ
ಎನುತಿದೆ ಋತುಗಾನ
ಈ ಹಾಡಿಗೆ ಶೃತಿ ಹಿಡಿದಿದೆ
ಬ್ರಹ್ಮಾಂಡದ ಮೌನ'
ಸುರಿಯುತ್ತಿರುವ ಜಡಿಮಳೆಯ ತಂಪಿನಾರ್ದ್ರತೆಗೆ ಹೃದಯ ಸ್ವಾತಿಮುತ್ತಿನ ಅಮಿತಾನಂದವನ್ನು ಅನುಭವಿಸುವ ಮೋಡಿಯಲ್ಲಿತ್ತು

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಶಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ
ಎಂದು ಇಳೆಗಿಳಿಯುತ್ತಿರುವ ಗಂಗೆಯನ್ನು ಶಿರಬಾಗಿ ಸ್ವಾಗತಿಸುವ ದೀನ ಭಾವ ಪ್ರಕೃತಿಯೊಂದಿಗೆ ನೇರವಾಗಿ ಅನುಸಂಧಾನಕ್ಕಿಳಿದಿತ್ತು.ಬೇಂದ್ರೆಯಜ್ಜನ ಮನೆಯ ಮುಂದಿನ ಕೆರೆಯ ತೀರದ  ವಿಹಾರದಲ್ಲಿ ನನ್ನ
'ಅಂತರಂಗದಾ ಮೃದಂಗ 
ಅಂತು ತೊಂತನಾನ....' 
ಚಿತ್ತ ತಾಳ ಬಾರಿಸುತಿತ್ತು
ಝಂಝಣಣನಾನ..... ಎಂದು 
ಶೃತಿ ತಾಳದ ಲಯದಲ್ಲಿ ಅಂತರಂಗ  ಕುಣಿಯುತ್ತಿತ್ತು.ನನ್ನೊಳು ನಾ ಕಳೆದುಹೋಗಿದ್ದೆ  ಚಟಪಟ  ಹನಿಮಜ್ಜನ ನಿಂತರೂ ,ಎದೆಯಾಳದ  ಮರದೆಲೆಗಳ ಮೇಲಿಂದ ಶಬ್ದನಾದಗಳ  ಹನಿಗಳೊಂದೊಂದಾಗಿ   ತೊಟ್ಟಿಕ್ಕುತ್ತಿದ್ದವು.....ಹೊರಗೆ ಬಂದಾಗ ಏನನ್ನೋ ಕಳೆದುಕೊಳ್ಳುತ್ತರುವ ಆರ್ದ್ರಭಾವ.....ಮಾತ್ರ ಉಳಿದಿತ್ತು...




No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...