Total Pageviews

Monday 21 May 2018

'ಶಬ್ದ' ಮಂಜರಿಗೆ ಮನಸೋತಾಗ......

'ಶಬ್ದ' ಮಂಜರಿಗೆ ಮನಸೋತಾಗ.......

ಅದೊಂದು ಅಪೂರ್ವ ಮಹಾಸಂಗಮ. ಅಷ್ಟಾವರಣಗಳಲ್ಲಿ ಮಹತ್ವವಾದ   ಗುರು, ಲಿಂಗ, ಜಂಗಮ ರೆಂಬ ಮೂರು ಆವರಣಗಳು ಏಕತ್ರಯದಲ್ಲಿ ಸಂಗಮಿಸಿ  ಡಾ.ಗುರುಲಿಂಗ ಕಾಪಸೆ  ಎಂಬ ಗುರುವಾಗಿ ಮೈವೆತ್ತು ದರ್ಶನ ನೀಡಿದ  ಅಪರೂಪದ ಅನೂಹ್ಯ ಕ್ಷಣಗಳು ಇಡೀ ಸಭಾಂಗಣವನ್ನು ನಿಶ್ಯಬ್ದಗೊಳಿಸಿವೆ.ಈ ನಿಶ್ಯಬ್ದತೆಗೆ ಕಾರಣವಾಗಿದ್ದು 'ಶಬ್ದ' ಕಾರಣದ ಬೆಳಕು.
           ಅಕ್ಕನ ವಚನ ವರ್ಣಿಸಲಸದಳವಾದ " ಶಬ್ದದ ಲಜ್ಜೆ ನೋಡಾ, ಅಕಟಕಟಾ"ಎಂದು ಉಲಿದರೆ,ಈ ಸುವರ್ಣ  ಸೌಧದ 'ಬಯಲಿ'ನಲ್ಲಿ ಮಾತ್ರ 'ಶಬ್ದದ ಬೆಳಕು ನೋಡಾ' ಎಂಬ ಅರಿವಿನ ಮಂತ್ರಮುಗ್ಧತೆ ಆವರಿಸಿತ್ತು
ಈ ಶಬ್ದ ವೆಂಬ ಬೆಳಕಿನ ದರ್ಶನದ ಈ ವೃತ್ತಾಂತಕ್ಕೆ ಕಾರಣವಾಗಿದ್ದು,ಆಲೂರು ವೆಂಕಟರಾಯರು,ದ ರಾ ಬೇಂದ್ರೆ,  ಜಿ.ಬಿ ಜೋಶಿ,ಜಿ ವಿ ಕುಲಕರ್ಣಿ,  ಚಂದ್ರಶೇಖರ ಪಾಟೀಲ,ಪಾಟೀಲ ಪುಟ್ಟಪ್ಪನ,ಚನ್ನವೀರ ಕಣವಿ ,ಎಂ ಎಂ ಕಲಬುರ್ಗಿ,ಸಿದ್ಧಲಿಂಗ ಪಟ್ಟಣಶೆಟ್ಟಿ ,ಆನಂದಕಂದ,ಮಲ್ಲಿಕಾರ್ಜುನ ಮನ್ಸೂರ,ರಂಥ ಸಾಹಿತ್ಯ ಹಾಗೂ ಸಂಗೀತ ಕಲಾ ದಿಗ್ಗಜರ ಪುಣ್ಯಭೂಮಿಯಾಗಿರುವ,ಮೈತುಂಬ ಹಸಿರುಟ್ಟು, ಕಾಕ,ಕುಕಿಲ,ಕಾಜಾಣದ ಸಪ್ತಸ್ವರಗಳ ನಾದಮಯವಾಗಿರುವ, ಮಲೆನಾಡ ಉದ್ಯಾನವನದಂತಿರುವ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದ ಪ್ರಕೃತಿ ದೇವಿಯ ಮಡಿಲಿನ ಸುಂದರ ಸುವರ್ಣ ಮಹೋತ್ಸವ ಭವನ ರಲ್ಲಿ ನಡೆಯುತ್ತಿರುವ,
ಹೊಸದಾಗಿ ನೇಮಕವಾದ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ವೃತ್ತಿ ಬುನಾದಿ ತರಬೇತಿ ಯ ಉದ್ಘಾಟನಾ ಸಮಾರಂಭ.

              ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.
ಗುರುಲಿಂಗ ಕಾಪಸೆಯವರ 'ಶಬ್ದ 'ಮಾಧುರ್ಯವನ್ನು ಆಹ್ಲಾದಿಸುವ ಸೌಭಾಗ್ಯವೊಂದು ನಮಗೆ ದಕ್ಕಿದ್ದು, ಮತ್ತೆ ನಾವು ಧಾರವಾಡದ 'ಸಾಂಸ್ಕೃತಿಕ ಸುವರ್ಣಯುಗಕ್ಕೆ' ಹೊರಳುವಂತೆ ಮಾಡಿತ್ತು.
              ಹಸುವಿನ ಕ್ಷೀರಕ್ಕಾಗಿ ಹಂಬಲಿಸುವ ಕರುವಿನಂತೆ,ತಾಯಿಹಕ್ಕಿಯ ಗುಟುಕಿಗಾಗಿ ಕಾದಿರುವ ಮರಿಯಂತೆ,ವರ್ಷಧಾರೆಗಾಗಿ ಕಾತರಿಸುತ್ತಿರುವ ನವಿಲಿನಂತೆ ಡಾ. ಗುರುಲಿಂಗ ಕಾಪಸೆ ಎಂಬ ಗುರುವಿನ ಸಾನಿಧ್ಯದಲ್ಲಿ,ಕಾದಿರುವ  ನಮ್ಮ ನಿಶ್ಯಬ್ದದಲ್ಲಿಯೂ 'ಶಬ್ದ 'ದ ಮಾರ್ದವತೆ ಅನುರಣಿಸುತ್ತಿತ್ತು.

       ಡಾ ಗುರುಲಿಂಗ ಕಾಪಸೆ ಯವರೆಂದರೆ ,ಜ್ಞಾನದ ನಿತಾಂತ ನದಿಯೊಂದರ ಮಧುರವಾದ ಜುಳು ಜುಳು ನಿನಾದದ ಹಾಗೆ,ಗುರುವಿನಿಂದ ಲಿಂಗಕ್ಕೆ,ಲಿಂಗದಿಂದ ಜಂಗಮಕ್ಕೆ, ಉದಾತ್ತೀಕರಣಗೊಂಡ  ಹಾಗೆ,ತಾಯಿಯೊಬ್ಬಳು ಮಗುವನ್ನು ತಬ್ಬಿ ಮೇಲೆತ್ತಿ ಮುದ್ದಿಸಿದ ನಿರ್ಮಲ ಅನುಭಾವದ ಹಾಗೆ, ಕನ್ನಡ ದೇವಿ ಮರಾಠಿ ಗೆಳತಿಯ ಹೆಗಲ ಮೇಲೆ ಕೈಹಾಕಿ ಕುಶಲೋಪರಿ ಮಾತಾಡಿದ ಹಾಗೆ,ಭಾಷಾವಿಜ್ಞಾನ, ಕಾವ್ಯಮೀಮಾಂಸೆ,ಸಾಹಿತ್ಯವಿಮರ್ಶೆ,ಆಧ್ಯಾತ್ಮಿಕತೆ,ಉಪನಿಷತ್ತು,  ಐಹಿಕತೆ, ದಾರ್ಶನಿಕತೆ ಎಂಬ ಅನಂತತೆಗಳ ಕೂಡಲಸಂಗಮ .

             ಅವರು ಬೆಳಗಿಸಿದ ಶಬ್ದ ಪ್ರಸಂಗವನ್ನು ಗಮನಿಸಿ...
  " ಬಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ, ಮಹರ್ಷಿ ಹಾಗೂ  ಮಹರ್ಷಿಯ ಸತಿಯರಾದ ಕಾತ್ಯಾಯಿಣಿ ಹಾಗೂ ಮೈತ್ರೇಯಿ ಯರ ನಡುವಿನ ಸಂವಾದದಲ್ಲಿ ಯಾಜ್ಞವಲ್ಕರು 'ಜಗತ್ತಿನ ಎರಡು ಪ್ರಧಾನವಾದ ವಸ್ತುಗಳೆಂದರೆ,
ಬಯಲು ಮತ್ತು ಬೆಳಕು. ಬಯಲಿನಲ್ಲಿ ವಸ್ತುವಿನ ಅಸ್ತಿತ್ವವಿದ್ದರೆ,ಬೆಳಕಿನಲ್ಲಿ ವಸ್ತುವಿನ ಕಾಣ್ಕೆ ಅಡಕವಾಗಿರುತ್ತದೆ.
ಬೆಳಕಿನ ಮೂಲಗಳು ಸೂರ್ಯ,ಸೂರ್ಯಪ್ರೇರಿತ ಚಂದ್ರ,ನಕ್ಷತ್ರಗಳೆಂಬ ಭೌತಿಕ ವಸ್ತುಗಳಾದರೂ,ಇವುಗಳ ನಿರ್ವಾತದಲ್ಲಿ ಜಗತ್ತಿಗೆ ಬೆಳಕನ್ನು ನೀಡುವ ಸರ್ವಶಕ್ತತೆ ಇರುವದು 'ಶಬ್ದ'ಕ್ಕೆ ಮಾತ್ರ ಎಂಬುದು ಅಂತಿಮ ವಾಕ್ಯ."
ಇದನ್ನು ಆಲಿಸಿದ ನಮಗೆ" ಬಯಲು ಬೆಳಕಿನೊಳಗೊ ಅಥವಾ ಬೆಳಕು ಬಯಲೊಳಗೊ"ಎನ್ನುವಂತಾಯಿತು.ಇದೇ ಅಲ್ಲವೇ  'ಶಬ್ದ'ವೆಂಬ ಮಹಾಬೆಳಕಿನಿಂದ ನಮಗೆ ಅಂತಿಮವಾಗಿ ದಕ್ಕಬೇಕಾಗಿದ್ದು,ಆನಂದಿಸಬೇಕಾಗಿದ್ದು. ಬೇಂದ್ರೆಯವರು ಹೇಳಿದ 'ಅಂತರಂಗದಾ ಮೃದಂಗ ಅಂತು ತೊಂತನಾನ' ಎಂದು ಮಿಡಿಯುವುದೇ ಶಬ್ದವೆಂಬ ಕಿರಣಗಳ ಬೆಳಕಿನಲ್ಲಿ; "ಮಾನಿಷಾದ......."ಶ್ಲೋಕದ ನೆಲೆಯಿರುವುದೇ ಶಬ್ದಸೌಧದ ಆಶ್ರಯದಲ್ಲಿ;ರನ್ನನು ಮುದ್ರೆಯೊಡೆದ ಸರಸ್ವತಿ ಭಂಡಾರದ ಸೌಂದರ್ಯವಿರುವುದು ಶಬ್ದ ವೆಂಬ ವಜ್ರವೈಢೂರ್ಯದ ಹೊಳಪಿನಲ್ಲಿ.
ಹೀಗೆ
ಚಿಂತನೆಯ ಸೆಳತಕ್ಕೆ ಒಳಗಾಗುವ ಡಾ. ಗುರುಲಿಂಗ ಕಾಪಸೆ ಯವರ ಮತ್ತೊಂದು ಕಾವ್ಯಮೀಮಾಂಸೆಯನ್ನೊಮ್ಮೆ ಕೇಳಿ.....
"...  ೧೦ನೇ ಶತಮಾನದಲ್ಲಿಯೇ  ಆದಿಕವಿ ಪಂಪ ಜಗತ್ತಿಗೆ  ಮಾದರಿಯಾಗುವಂತಹ  ಕೊಡುಗೆ ನೀಡಿದ  ಶಬ್ದ ವೈಭವವನ್ನೊಮ್ಮೆ ನೋಡಿ
"ಮಾನವ ಜಾತಿ ತಾನೊಂದೆ ವಲಂ".
೧೨ ನೇ ಶತಮಾನದಲ್ಲಿ ಸಾಹಿತ್ಯದ ಸ್ವರೂಪ ಮತ್ತು ವಸ್ತುವನ್ನೇ ಬದಲಿಸಿ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಗೆ ಕಾರಣವಾಗಿದ್ದು  ಶಿವಶರಣರು  ವಿಶ್ವಸಾಹಿತ್ಯಕ್ಕೆ ನೀಡಿದ ಮೌಲಿಕ ಕೊಡುಗೆಯಾಗಿದೆ.
"ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎಂಬ ಶಬ್ದ ಮಜ್ಜನ ಪ್ರಾಚೀನತಮ   ತಮಿಳು ಇಂಗ್ಲೀಷ ಸೇರಿ ಯಾವ ಭಾಷೆಗಳಲ್ಲಿಯೂ ಸಿಗಲಾರದು.ಸಂಸಾರಕ್ಕೆ ಅಂಟಿಯೂ ಅಂಟದಂತೆ,
ಭವದಲ್ಲಿದ್ದೂ ಭವಿಯಾಗದೇ ಅನುಭಾವಿಯಾಗಬೇಕು.ಲೌಕಿಕದಲ್ಲಿದ್ದೂ ಅಲೌಕಿಕತೆಯನ್ನು ಸಾಧಿಸಬೇಕೆಂಬುವ ಸಮರಸದ ಆಧ್ಯಾತ್ಮ ,ಪ್ರಪಂಚದ ಯಾವ ದರ್ಶನದಲ್ಲೂ ಕಾಣಲಾರದು." 

     ಹೀಗೆ ನಮ್ಮ ಸಾಹಿತ್ಯದ ಹಿರಿಮೆಯನ್ನು ಸಾರುತ್ತಲೇ  ಮತ್ತೆ ಶಬ್ದ ವೆಂಬ ಮಾಂತ್ರಿಕ ಲೋಕಕ್ಕೆ  ನಮ್ಮನ್ನು ಕೈಹಿಡಿದು ಕರೆದೊಯ್ದು ಬೆಳಕು ತೋರಿದ ಪರಿಯನ್ನು ಡಾ.ಕಾಪಸೆಯವರು ಉಲ್ಲೇಖಿಸಿದ   ಈ ವಾಕ್ಯಗಳಿಂದ ಆಘ್ರಾಣಿಸಬಹುದು
"ಮನುಷ್ಯನಲ್ಲಿರುವ ಪಶುತ್ವವನ್ನು ಪಳಗಿಸಬೇಕು ದೈವತ್ವವನ್ನು ಎಚ್ಚರಿಸಬೇಕು"-ಸ್ವಾಮಿ ವಿವೇಕಾನಂದ
"ಮಹಿಳೆಯನ್ನು ಗೌರವಿಸಬೇಕು ಮಕ್ಕಳನ್ನು ಪ್ರೀತಿಸಬೇಕು"  ಈ ಪದಾರ್ಥಗಳನ್ನೇ ನಾವು ತಿರುವು ಮುರುವು ಮಾಡಿ ಪಶು ಬದುಕನ್ನು ಬದುಕುತ್ತಿದ್ದೇವೆ.
ಕಾಮಧೇನುವಿನಂತೆ ಜ್ಞಾನದ ಕ್ಷೀರಧಾರೆಯನೆರೆದು ನಮ್ಮನ್ನು ತಣಿಸುತ್ತಲೇ ,
ಸಾಹಿತ್ಯದ ಸೌಂದರ್ಯಮೀಮಾಂಸೆಯತ್ತ ಹೊರಳಿದರು
"ಸಾಹಿತ್ಯದಲ್ಲಿ ಅಮೂಲ್ಯ ಸೌಂದರ್ಯಗಳಿವೆ.
೧ ಐಂದ್ರಿಕ ಸೌಂದರ್ಯ(Sensuous Beauty)
ಇದಕ್ಕೆ  ಬೇಂದ್ರೆಯವರ
"ನಾನು ಬಡವಿ ಆತ ಬಡವ
      ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
      ಅದಕು ಇದಕು ಎದಕು" ಎಂಬ ಕವಿತೆ,
"ಇದು ಬರಿ ಬೆಳಗಲ್ಲೋ ಅಣ್ಣಾ"ಎಂಬ ಬೆಳಗು ಕವಿತೆ ಹಾಗೂ "ಮೂಡಲ ಮನೆಯ ಮುತ್ತಿನ ನೀರಿನ ..." ಕವಿತೆಗಳು ಇಂದ್ರಿಯ ಸೌಂದರ್ಯದ ನಕ್ಷತ್ರಗಳಾಗಿವೆ.

೨ .ಬೌದ್ಧಿಕ ಸೌಂದರ್ಯ (Intellectual Beauty)
ಈ ಸೌಂದರ್ಯವನ್ನು ಆಸ್ವಾದಿಸಲು
"ಕೇಳುವುದೆಲ್ಲ ಮಧುರ
ಕೇಳದೇ ಇರುವುದೆಲ್ಲ ಅತಿ ಮಧುರ"ಎನ್ನುವ ಹಾಗೆ,
ಚನ್ಮವೀರ ಕಣವಿಯವರ
"ಗಾಂಧೀಜಿ ಯಾರು ಹೇಳಿದರು
ನಿಮ್ಮನ್ನು ಮರೆತಿರುವೆವೆಂದು
ಕೂಟಕೂಟದಲ್ಲಿ ನಿಮ್ಮನ್ನು ನಿಲ್ಲಿಸಿದ್ದೇವೆ.
ಏಕೆಂದರೆ
ನಿಮ್ಮ ಆದರ್ಶ ಪಾಲನೆ
ನಾವು ನಿಲ್ಲಿಸಿದ್ದೇವೆ"
ಎಂಬ ಪದ್ಯಗಳಲ್ಲಿನ ಚಿಂತನೆಯನ್ನು ಗ್ರಹಿಸಬೇಕು
೩.ಆಧ್ಯಾತ್ಮಿಕ ಸೌಂದರ್ಯ-(Spiritual Beauty)
ಅರವಿಂದರು ವ್ಯಕ್ತಿಯಲ್ಲಿರುವ
1 ಜೀವಾತ್ಮ-(Individualself)
2.ಪರಮಾತ್ಮ - (Universalself)
ಜೀವಾತ್ಮ ಪರಮಾತ್ಮಗಳೆರಡೂ ಎಂಬುದೇ  ಅದ್ವೈತ.ಈ ಅದ್ವೈತವೇ ಬೌದ್ಧಿಕ ಸೌಂದರ್ಯ"
ಹೀಗೆ ಡಾ.ಕಾಪಸೆಯವರ ಶಬ್ದ ಬೆಳಕಿನ ಕಿರಣಗಳು ನಮ್ಮ ಮೌನ ಮನಗಳನ್ನು ಇನ್ನಿಲ್ಲದಂತೆ ವ್ಯಾಪಿಸಿಕೊಂಡದ್ದು ನಮ್ಮನ್ನು ಅಚ್ಚರಿಗೊಳಿಸಿತ್ತು
ಅವರ  ಮನಸು ಹರಿದಲ್ಲೆಲ್ಲಾ ಜ್ಞಾನಪ್ರವಾಹ ದೃಷ್ಟಾಂತಗಳದ್ದೇ ರಸಪಾಕ .ಪಂಪ, ಕುವೆಂಪು, ಬೇಂದ್ರೆ,ಯವರಂತಹ ದಾರ್ಶನಿಕ ಕವಿಗಳ ವಿಶ್ವ ಶ್ರೇಷ್ಠತೆ,ಕನ್ನಡ ಮರಾಠಿ ಭಾಷೆ  ಗಳ ಸಹ ಸಂಬಂಧ,ಸಂಸ್ಕೃತ ಇಂಗ್ಲೀಷ ಭಾಷೆಗಳ ಜ್ಞಾನಾತ್ಮಕ ವ್ಯಾಪ್ತಿಯ ಕಲಿಕೆ,ಈ ಎಲ್ಲ ಸಂಗತಿಗಳು ನಿರರ್ಗಳವಾಗಿ ಶಬ್ದಮಂಜರಿಯ ಪ್ರವಾಹದ ಕೊನೆಗೆ ಅವರಿಂದ ಬಂದ  ಮಾತು
"ಅರವತ್ತಕ್ಕೆ ಅರಳು ಮರಳು ಆದರೆ ನನಗೆ ತೊಂಬತ್ತಕ್ಕೆ ತಿರುವು ಮುರುವು "
  ಇದಲ್ಲವೇ ಶಬ್ದ ಗಾರುಡಿಗನ ಕೌಶಲ್ಯ...




x

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...