Total Pageviews

Thursday 12 September 2019

ಜಗದ್ವಂದ್ಯ ಭಾರತ

ಭಾರತ ವೈವಿಧ್ಯಮಯ ಧರ್ಮ ಜಾತಿ ಮತ ಪಂಥಗಳೆಂಬ  ಅನನ್ಯವಾದ ಫಲಪುಷ್ಪಗಳ  ನಂದನವನ. ಅಖಂಡತೆ ಹಾಗೂ ಏಕತೆಯ ಸೌಂದರ್ಯದಲ್ಲಿ ನಳನಳಿಸುತ್ತಿರುವ ಇಲ್ಲಿಯ ಅಭೂತಪೂರ್ವ ವಿಭಿನ್ನ ಸಂಸ್ಕೃತಿಮಣಿಗಳ ಸಮ್ಮಿಲನ ಒಂದು ಮಹಾಬೆರಗು ಹಾಗೂ ಬೆಳಕನ್ನು ಸೃಷ್ಟಿಸಿದೆ." ಅಹಿಂಸೆಯೇ ಪರಮೋಧರ್ಮ" ಎಂದು ಸಾರಿದ ಜೈನ ಧರ್ಮದ ಉದ್ಯಾನವನವಾಗಿ, ಪ್ರೀತಿ,ಅನುಕಂಪ, ದಯೆ,ಮಾನವೀಯತೆ, ಅಂತಃಕರಣ, ಜ್ಞಾನಗಳನ್ನೇ ತನ್ನ ಕೊರಳ ಕುಸುಮಗಳನ್ನಾಗಿ ಧರಿಸಿ ಜಗತ್ತಿನೆಲ್ಲೆಡೆ ಪರಿಮಳವನ್ನೇ ಪಸರಿಸಿದ ಬುದ್ಧನ ಪವಿತ್ರ ನೆಲವಾಗಿ ; ಶೌರ್ಯ, ತ್ಯಾಗ, ಸೇವೆ, ಆಧ್ಯಾತ್ಮದ ದಾರ್ಶನಿಕ  ಗುರುನಾನಕರು ಮೆಟ್ಟಿದ ಧರೆಯಾಗಿ, ಸಮಾನತೆ, ಆಧ್ಯಾತ್ಮ ಸಾಧನೆ,ಸಮಾಜ ಸುಧಾರಣೆಯ ಹೆಮ್ಮರವನ್ನು ಬೆಳೆಸಿ ಎಳೆಹೂಟೆಗೆ ಕೊರಳು ಕೊಟ್ಟ ಸಹಸ್ರಾರು ಶರಣರ ಪುಣ್ಯಭೂಮಿಯಾಗಿ ; ಈ ದೇಶದ ಆತ್ಮವಾಗಿದ್ದು, ಮಹಾತ್ಮನಾದ ಗಾಂಧೀಜಿ ನಡೆದಾಡಿದ ನೆಲವಾಗಿ,  ಮೀರಾಬಾಯಿಯ, ಜಗನ್ನಾಟಕ ಸೂತ್ರಧಾರ ಮಾಧವ ನಲಿದಾಡಿದ ಬೃಂದಾವನವಾಗಿ, ಶಿವನ ತಾಂಡವ ನೃತ್ಯಕ್ಕೆ ಹಿಮಾಲಯವಾಗಿ, ನಿರ್ವಯಲ ನೀಲವನೇ ತೋರಿದ ಸೂಫಿಗಳ ತಾಣವಾಗಿ, ಜೀವಸಂಕುಲಕ್ಕೆಲ್ಲಾ ಹಸಿರುಸಿರನ್ನು ನೀಡಿದ ಯಮುನೆ ಗಂಗೆಯರನ್ನು ತಬ್ಬಿಕೊಂಡ ಮಾತೆಯಾಗಿ, ಭರತಭೂಮಿಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಹಿರಿಮೆ ಅವರ್ಣನೀಯ ಹಾಗೂ ಅನನ್ಯ. ಜಗತ್ತಿನ ಧರ್ಮಗಳೆಲ್ಲಾ ತಮ್ಮ ತಮ್ಮ ಅಸ್ಮಿತೆಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಸಮಕಾಲೀನ ಸಂದಿಗ್ಧ ಸಂದರ್ಭದಲ್ಲಿ ಅಗಣಿತ ಜಾತಿ, ಧರ್ಮ, ಮತ, ಪಂಗಡಗಳನ್ನು ಶಿಶುಗಳಂತೆ ತನ್ನೊಡಲಲ್ಲಿಟ್ಟುಕೊಂಡು, ಅತ್ತು ಹಠವಿಡಿದಾಗ ಸಮಾಧಾನದಿಂದ  ತೂಗಿ ಪೋಷಿಸಿ ಭಾವೈಕ್ಯತೆಯ ತಪಸ್ಸನ್ನಾಚರಿಸುತ್ತಿರುವ  ಭಾರತಿ ನಮ್ಮ ಹೆಮ್ಮೆ ಹಾಗೂ ಸ್ವಾಭಿಮಾನದ ದಿವ್ಯ ಪ್ರತಿರೂಪ. ಹಿಂದೂ ಮುಸಲ್ಮಾನರೆನ್ನದೇ ಐಕ್ಯತೆಯ ಸದ್ಭಾವದಲ್ಲಿ ಮಿಂದು ಮೊನ್ನೆ ತಾನೆ ಆಚರಿಸಿದ ಮೊಹರಂ ಹಬ್ಬ ನಮ್ಮ ದೇಶದ ಇಂತಹ ಐಕ್ಯತೆಯ ಸರ್ವಧರ್ಮ ಸಮಭಾವದ ಪರಂಪರೆಯಲ್ಲಿ ಹರಿಯುತ್ತಿರುವ ಒಂದು ಅನುಪಮ ಪರ್ವನದಿ. ಅವರಿವರೆನ್ನದೇ  ಸಕಲರಿಗೂ  ಸಕ್ಕರೆಯ ಸಿಹಿಯನ್ನು ಹಂಚಿ ಲೇಸನೇ ಬಯಸುವ ಜಾತ್ರೆ, ಉರುಸ್, ಮೊಹರಂ, ಗಣೇಶ ಚತುರ್ಥಿಯಂತಹ ಹಬ್ಬಗಳು ನಮ್ಮ ವಸುಧೈವ ಕುಟುಂಬಕಂ ಎಂಬ ಮಹಾಪರಂಪರೆಯ ರೂಪಕಗಳಲ್ಲಿ ಅನನ್ಯವಾದವುಗಳು. ಈ ಎಲ್ಲ ಸಂಗತಿಗಳಿಗೆ ಅಲಂಕಾರ ಸ್ವರೂಪವನ್ನು ನೀಡುವ ಹಾಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ಕೃತಿ ನನ್ನ ಗಮನವನ್ನು ಅತೀವವಾಗಿ ಸೆಳೆಯಿತು.

ರಾಗಂ ಎಂದೇ ನಾಡಿಗೆ ಚಿರಪರಿಚಿತವಾಗಿರುವ ಡಾ. ರಾಜಶೇಖರ ಮಠಪತಿಯವರ "ಜಗದ್ವಂದ್ಯ ಭಾರತ" ಕಾದಂಬರಿ ಕೃತಿ ಭಾರತಿಯ ಮುಕುಟಕ್ಕೊಂದು ಕನ್ನಡದ ಗರಿಯೆಂಬಂತೆ ಮೈದಾಳಿರರುವುದು ಅರ್ಥಪೂರ್ಣವಾಗಿದೆ.ಮತ್ತೆ ರಾಷ್ಟ್ರೀಯತೆಯ ವ್ಯಾಖ್ಯಾನದ ಚರ್ಚೆ ಮುನ್ನಲೆಗೆ ಬಂದಿರುವ ಈ ಹೊತ್ತಿನಲ್ಲಿ, ಈ ಕಾದಂಬರಿ ಲೋಕಾರ್ಪಣೆಯಾಗಿ ತನ್ಮೂಲಕ ಸ್ವಗತದ ಮಾರ್ಮಿಕ ಉತ್ತರವನ್ನು ನೀಡುತ್ತಿರುವಂತೆ ರಚನೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇದು ನಮ್ಮ ದೇಶದ ಬಾವುಟ ಏರಿದ ಎತ್ತರ, ಆವರಿಸಿಕೊಂಡ ಆಳದ  ಚರಿತ್ರೆಯನ್ನು ಕಟ್ಟಿಕೊಡುವ ಕಾದಂಬರಿಯಾಗಿರುವಂತೆಯೇ, ನಮ್ಮ ದೇಶದ ಅನನ್ಯ ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿಯುವ ಮಹತ್ವದ ಕೃತಿಯಾಗಿಯೂ ಗಮನ ಸೆಳೆಯುತ್ತದೆ. ರಾಷ್ಟ್ರಕವಿ ಜಿ. ಎಸ್ ಎಸ್ ರವರ  ಕವಿತೆಯ ಸಾಲುಗಳಂತೆ ನಮ್ಮ ದೇಶದ ಇತಿಹಾಸವೆಂಬ ಸುರಂಗವನ್ನು ಪ್ರವೇಶಿಸಿ ಸ್ವಾಭಿಮಾನದ ಬಾವುಟದ ಮೇಲೆ ಬೆಳಕು ಚೆಲ್ಲುವ ಮಹತ್ವದ ದಾಖಲೆಯಾಗಿ ಈ ಕೃತಿ  ಆಕರದ ಸ್ಥಾನವನ್ನು ಪಡೆದುಕೊಂಡರೂ ಅಚ್ಚರಿಯೇನಲ್ಲ. ಸರಜೂ ಕಾಟ್ಕರ್ ರವರರು ರಾಷ್ಟ್ರ ಧ್ವಜದ ಮಹತ್ವ ಎಂಬ ಪ್ರಬಂಧದಲ್ಲಿ  ನಮ್ಮ ಧ್ವಜದ ಇತಿಹಾಸವನ್ನು ಸಾಂದರ್ಭಿಕವಾಗಿ ಸ್ಮರಿಸಿದ್ದಾರೆ. ಇಂತಹ ಕೆಲವೇ ಕೆಲವು ಬರಹಗಳನ್ನು ಹೊರತುಪಡಿಸಿದರೆ  ಇದುವರೆಗೂ ಕನ್ನಡದಲ್ಲಿ ನಮ್ಮ ದೇಶದ ಬಾವುಟದ ಚರಿತ್ರೆಗೆ ಸಂಬಂಧಿಸಿದ ಕೃತಿಗಳು ರಚನೆಯಾಗಿರುವುದು ವಿರಳಾತಿವಿರಳ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ  ನಮ್ಮ ಭಾರತ ಮಾತೆಯ ನೆತ್ತಿಯ ಮೇಲಿನ ಸೆರಗಿನ ಪ್ರತೀಕದಂತಿರುವ ಧ್ವಜಚರಿತ್ರೆಯನ್ನು ಕಾದಂಬರಿಯ ವಿನೂತನ ಪ್ರಯೋಗದ ಮೂಲಕ ಕಟ್ಡಿಕೊಡುತ್ತಿರುವ ರಾಗಂರವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ರಾಗಂರವರಿಗೆ ಜನ್ಮದಿನದ ಶುಭಾಶಯಗಳನ್ನು  ಹೇಳಬೇಕಾದ ಈ ಶುಭಸಂದರ್ಭದಲ್ಲಿ ನೆನೆಯಲೇಬೇಕಾದ ಅವರ ಈ ಬಾವುಟದ ಕತೆಯ ಬೆಳಕು ಭಾರತೀಯರ ಮನೆಮನಗಳನ್ನು ಆವರಿಸಿ ಬೆಳಗಲಿ. ರಾಗಂರವರ ಲೇಖನಿ ಮತ್ತಷ್ಟು ಬೆಳಕಿನ ಬೆಳ್ಳಿರೇಖೆಗಳನ್ನು ಸೃಜಿಸಲಿ ಎಂದು ಹಾರೈಸೋಣ.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...