Total Pageviews

Wednesday 2 October 2019

ಹೊರಟಿದ್ದರು ಗಾಂಧಿ


ಹೊರಟಿದ್ದರು ಗಾಂಧಿ
ಸತ್ಯ ಶಾಂತಿ ಮೈಯ್ಯುಟ್ಟು
ಹೆಜ್ಜೆಗಳೂ ಮರ್ಮರಿಸುತ್ತಿದ್ದವು
ಕನಸುಗಳ ದಾರಿ ಬೆನ್ನು ಹತ್ತಿ
ನೋವ ಮರೆತು ವರ್ಣ ಚಿಂತೆ
ಹೊತ್ತು ಸಮಾನತೆ ನ್ಯಾಯಗಳ
ಶುಭ್ರ ಧೋತಿಯ ಧರಿಸಿ
ಅಲುಗಾಡದೆ ದಿಟ್ಟಿ ನೆಟ್ಟು
ಕನ್ನಡಕದ ಗಾಜಿನೊಳಗೆ
ದಾಸ್ಯ ಹಿಂಸೆ ದಬ್ಬಾಳಿಕೆಗಳ
ಮೇಲೆದ್ದು ಕುಣಿದು ತುಳಿಯುತಿರುವ
ಧೂಳು ಕಣಗಳಿಂದಾವೃತ
ಭರತ ಮಾತೆಯ ಮಡಿಲು
ಹುಡುಕುವ ಧಾವಂತದಲಿ
ಹೊರಟಿದ್ದರು  ಗಾಂಧಿ
ನೂಕಿದರೂ ಮನದ ಆಚೆ
ಮೌನ ಮುರಿಯಲಿಲ್ಲ ಮುಂಚೆ
ನೆಪವಾಯಿತು ರೈಲು
ಹೊರಟಿತವನೆದೆಯಲಿ
ವರ್ಣ ಜಾತಿ ಮತ ಪಂಥ ನೋಡಿ
ನಿಂತು ಯಾರ ನೂಕದೆ
ಬಾಚಿ ತಬ್ಬಿ ಜಗವ ಕರೆದು
ಕೂಗುಟ್ಟುತ ಎಚ್ಚರಿಕೆಯ ಕರೆಗಂಟೆ
ಬೆಚ್ಚಿ ಬಿತ್ತು  ನ್ಯಾಯಾಂಗ
ಅಸ್ಮಿತೆಯ ದನಿಯೊಂದು
ಗಟ್ಟಿಯಾಗಿ ಕಟಕಟೆಯ ಮೀರಿ
ಹೊರಡುವುದ ಕಂಡು
ಅಂತರಂಗಕೆ ಗುರಿಯಿಟ್ಟು
ವರ್ಣಭಾರದಿ ಬೀಗುತಿರುವ
ಬಿಳಿತಲೆಗಳ ಬಾಗಿಸಿ ನೇವರಿಸಿ
ಮತ್ತೆಂದೂ  ಎದ್ದು ಮರಳಿ
ತಿರುಗಿ ತಿವಿಯದಂತೆ ನಿಲಿಸಿ
ಮುನ್ನುಗ್ಗಿ ಹೊರಟಿದ್ದರು
ಜನರ ಜೀವ ಗಾಂಧಿ
ಕೋಟು ಅಂಗಿ ಭಾರವಾಗಿ
ಬೂಟು ಬೆಡಗು ಬೇಡವಾಗಿ
ಬರಿತೊಗಲ ಬಟ್ಟೆ ಹೊದ್ದು
ಭೂಮಿ ತೂಕದ ಮನುಜ
ಭರತಮಾತೆಯ ತನುಜ
ಭಾರತೀಯರ ಕಣ್ಣೀರು ಕುಡಿದು
ಗಹಗಹಿಸಿ ಅಟ್ಟಹಾಸ ಮೆರೆವ
ಬಂದೂಕುಗಳ ನಳಿಕೆ ತುದಿಗೆ
ಶಾಂತಿ ಸಹನೆ ದಯೆ ಕರುಣೆಗಳ
ಧೀಮಂತ ತೆರೆದೆದೆಯನೊಡ್ಡಿ
ರಾಮರಾಜ್ಯದ ಕನವರಿಕೆಯಲ್ಲಿ
ಮುಳುಗೆದ್ದು ಹೊರಟಿದ್ದರು
ಸತ್ಯ ಸತ್ವವನರಸಿ ಗಾಂಧಿ
ಹೋರಾಟದ ಕಿಡಿಗಳ
ಗೆರೆ ಎಳೆದು ಚರಕ ಕಟ್ಟಿ
ಚೈತನ್ಯದ ನೂಲು ಹಿಡಿದು
ಸ್ವಾತಂತ್ರ್ಯದ ಬಟ್ಟೆ ನೇಯ್ದು
ಭಾರತಿಯ ಸಂಕೋಲೆ ಕಳಚಿ
ಎದುರಾಳಿಯ ಮುಕ್ತಿಗೂ
ಪ್ರಾರ್ಥನೆಯ ಭಜನೆಗೈದು
ಉಪ್ಪಿನ ಋಣ ಹೊತ್ತು
ಕಡಲನೂ ಬಾಚಿ ಕರೆದು ನಾಚುವಂತೆ
ವಿಷಮ ಜಗದ ಹೊಣೆ ಹೊತ್ತು
ಹೊರಟಿದ್ದರು ಮುಂದೆ ಗಾಂಧಿ
ಬೇಗುದಿಗಳ ಕೆಂಡ ತುಳಿದು
ಹಿಂಸೆಗಳ ಮುಳ್ಳು ಹಾದಿ ಸವೆಸಿ
ಭಂಡರ ಬಂಡವಾಳ ಬಿಚ್ಚಿ
ಆಳುವವರ ಎದೆ ಬಗೆದು
ಆತ್ಮ ಹೃದಯ ಮನಸು ತೋರಿ
ಮಾನವತೆಯ ಕಂದೀಲು ಹಿಡಿದು
ವಸಾಹತು ಬುನಾದಿ ಕೆಡವಿ
ಕೆಚ್ಚಿನ ಕಿಚ್ಚು ಹೊತ್ತಿಸುತ
ಕತ್ತಲೆಯೊಳಗೆ ತನ್ನ ಬದುಕನುರಿಸಿ
ಬೆಳಕು ಬೀರಿ ಹೊರಟಿದ್ದರು
ದಿವ್ಯ ತಪಸ್ವಿ ಗಾಂಧಿ
ಅಧಿಕಾರದ ಚಳಿ ಬಿಡಿಸಿ
ಪ್ರಭುತ್ವದ ಅರ್ಥ ಬದಲಿಸಿ
ಧೀರತೆಗೆ ಹೆಮ್ಮೆ ಮೂಡಿಸಿ
ಬಲಿದಾನದ ಕೋಟೆಯ ಮೇಲೆ
ಬಾವುಟ ಹಾರುವುದ ಕಂಡು
ಬೆಂದು ಕಂದಿ ನೊಂದವರ ಕಣ್ಣೀರಿಗೆ
ಭವಿತವ್ಯದ ಸೂರ್ಯ ತೋರಿ
ಉಪವಾಸದ ಧಗೆಯಲ್ಲಿ
ಸಾಮ್ರಾಜ್ಯವನೇ ಸುಟ್ಟು
ನೆತ್ತರಿಲ್ಲದ ಕ್ರಾಂತಿ ಹಾದಿ ಕ್ರಮಿಸಿ
ಭವದಲಿದ್ದೂ ಭವಿಯಾಗದೆ
ಅನುಭಾವದ ಕಡಲಾಗಿ
ಹೃದಯವಾಗಿಲು ತೆರೆದಿಟ್ಟು
ಹೊರಟಿದ್ದರು ಯೋಗಿ ಗಾಂಧಿ
ಚಳುವಳಿಯ ಬೆಂಕಿಯಲ್ಲಿ
ಹಸಿವು ನೋವುಗಳ ಬೇಯಿಸಿ
ಮೃಷ್ಟಾನ್ನ ಅಡುಗೆ ಬಡಿಸಿ
ಕಾರ್ಮೋಡವನೆ ಹೊಕ್ಕು
ಜ್ವಾಲಾಮುಖಿಯೊಳಗೆ ಇಳಿದು
ಮೆಟ್ಟಿ ನಿಂತು ಮೆಟ್ಟಿಲಿಳಿದು
ಹೇಳದೇ ಹೇ ರಾಮ್ ಎಂದು
ಹೊರಟಿದ್ದರು ಗಾಂಧಿ
ಕೊರಳು ಬಿಗಿವ ಗುಂಡಿನಪ್ಪುಗೆಯಲಿ
ಭಾರತಿಯ ಕೈ ಬಿಟ್ಟು
ಅಹಿಂಸೆಯ ಒಂಟಿ ಮಾಡಿ
ಸತ್ಯ ಶಾಂತಿಗಳ ಅನಾಥವಾಗಿಸಿ
ಹಿಂಸೆ ರಕ್ಕಸನ ಕಬಂಧ
ಬಾಹುಗಳಲಿ ನರಳಿದ ಕೆನ್ನೆತ್ತರ
ಒಡಲುಗಳ ಮೇಲೆ ಹೂವಿಟ್ಟು
ಭಾರತಿಯ ಮುಡಿಗೆ ಬಾವುಟವನಿಟ್ಟು
ದಿಗ್ದೇಶಗಳ ತೋರಿ ಸ್ವಾತಂತ್ರ್ಯ
ಜ್ಯೋತಿಯ ಬೆಳಗಿಸಿ ತೊಳಗಿ
ಹೊರಟಿದ್ದರು ಗಾಂಧಿ
x

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...