Total Pageviews

Saturday 10 February 2018

ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ......

ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ........
                                                                  (ಮುಂದುವರಿದ ಭಾಗ)

                           'ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎಂಬ  'ಜೇಡರ ದಾಸಿಮಯ್ಯ' ರ ವಚನದಂತೆ
                                   " ಗಂಡ ಹೂಡ್ಯಾನ ಗಾಡಿ
                                    ಕುಂತೇವ ಅದರಾಗ ಕೂಡಿ
                      ಹೊಲ್ದಾಗ ಹೋಗಿ ದಗದಾ ನಾವು ಮಾಡತೇವ ಜೋಡಿ "
                                                   ( 'ನನ್ನ ಗಂಡನ ಪ್ರೀತಿ 'ಕವಿತೆಯಿಂದ)
                 ಎಂದು ಬಿದರಿಯವರು ಕಾಯಕದ ಕೈಲಾಸದಲ್ಲಿ ದಾಂಪತ್ಯಪ್ರೇಮದ ಅನಂತ ಗೀತೆಯನ್ನು ಹಾಡುತ್ತಾರೆ.
                                "ಮಾತಿನೊಳಗಿನ ಬಂಬಾಟ
                                   ಬದುಕಿನೊಳಗ ಒದ್ದಾಟ
                                   ಬಾಳೇದಾಗಿನ ಗುದ್ದಾಟ"
                                                               (ತೊಗಲ ಗೊಂಬಿ)
                ಎಂದು ಬದುಕಿನ ಭವಸಾಗರದಲ್ಲಿ ಅನಿರೀಕ್ಷಿತ ಅತಿಥಿಗಳಂತೆ  ಬಂದಪ್ಪಳಿಸುವ ಸುಖ ದು:ಖ ಗಳ ಏರಿಳಿತಗಳೊಂದಿಗಿನ ಕಾದಾಟದ  ಜೀವನ ಪಾಠ ವನ್ನು ಹೇಳಿಕೊಡುವ ಇವರ ಕವಿತೆಗಳು ಸಾಮಾಜಿಕರ  ಬದುಕಿಗೆ ಆತ್ಮವಿಶ್ವಾಸವನ್ನು ತುಂಬುತ್ತವೆ.

                       "ಈಗೀಗ ಹೊಳುತೈತಿ ಜ್ಞಾನದ ಲೋಕ
                            ಶರಣರು ಹಚ್ಚಿದ ಮಾತಿನ ಬೆಳಕ
                          ಪುಣ್ಯ ಪುರುಷರು ಹಚ್ಚಿಟ್ಟ ಹೋಗ್ಯಾರ
                            ಭಕ್ತಿ ಎಂಬುದು ಒಂದೇ ಆಧಾರ"
                                                                   ( ದೀಪದ ಬೆಳಕು)
              ಎಂಬ ಸಾಲುಗಳ ಮೂಲಕ
'ಶರಣರ ನುಡಿಗಡಣವೇ  ಮೇಲು"  'ಎಂದು ಸಾರುತ್ತಾರೆ.
                   "ಯಾಕರೆವ್ವ ಹಿಂಗ  ನೀವು ಬಡಿದಾಡತೀರೋ
                   ಸತ್ತಾಗ ಎದಿಮ್ಯಾಲ ಹೊತಗೊಂಡ ಹೋಗುವಂಗ
                    ಮಾಡತೀರೋ"
                                                             ( ತಿಳಕೊರ್ರೋ ಮನಸ್ಸಿಗೆ)
                         ಎಂದು ಜೀವನದ ತತ್ವಜ್ಞಾನದ ಅಮೃತವನ್ನು ಈ ಸಾಲುಗಳ ಮೂಲಕ ಉಣಬಡಿಸುತ್ತಾರೆ.


                      ಹೀಗೆ ಸಿದ್ದಣ್ಣ ಬಿದರಿ ಯವರ ಕಾವ್ಯಗಳಲ್ಲಿ ಜವ್ವನದಲ್ಲಿ ಕಾಡುವ 'ಪ್ರಣಯ' ದ ಅದಮ್ಯ ಬಯಕೆಗಳಿವೆ, ಮನುಷ್ಯನ  ಎಂದೂ ಬತ್ತದ ಉತ್ಸಾಹದ ಚಿಲುಮೆಗಳಿವೆ,ಜೀವನ ಪ್ರೀತಿಯ ರಸಘಳಿಗೆಗಳಿವೆ, ಹೋರಾಟದ ಕ್ರಾಂತಿಯ ಕಿಡಿಗಳಿವೆ.
ವೈಚಾರಿಕ ಜೀವನದ ಪರಮ ಸತ್ಯಗಳಿಗೆ, ಆಧ್ಯಾತ್ಮದ ಧ್ಯಾನ, ಮುಕ್ತಿಯ ಮಾರ್ಗಗಳಿವೆ. ಜನಪದರ ಬದುಕಿನ ಗ್ರಾಮ್ಯ ಸಂಸ್ಕೃತಿಯ ಸೊಗಡಿದೆ,ದಾಂಪತ್ಯ ಪ್ರೇಮದ ಸರಸ ಸಲ್ಲಾಪಗಳಿವೆ.
                        ತೊಗಲುಗೊಂಬೆ, ಎತ್ತಿನ ಗಾಡಿ,ಊರಿನ ಹೊಳೆ,ಹೋರಿ,ಮಲ್ಲಿಗೆ ಹೂ,ಗಡಿಗಿ,ಮುಂತಾದ ಹಳ್ಳಿಯ ಸಮೃದ್ಧ ಬದುಕಿನ ರೂಪಕಗಳಿವೆ. ಸಾಮಾನ್ಯನ ಮುಗ್ಧ ಭಾವಗಳಿವೆ. ವಿವೇಕದ ಹಿತನುಡಿಗಳಿವೆ.ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ನೈಜ ಜೀವನದ  ದೃಷ್ಟಾಂತಗಳಿವೆ.ಇತ್ತೀಚೆಗೆ "ನುಡಿಮುತ್ತಿನ ಮಾಲಿ" ಎಂಬ ಸಮಗ್ರ  ಸಂಕಲನ ವನ್ನು ಹೊರತಂದಿದ್ದಾರೆ. ಬಡತನದ  ಬೆಂದೊಡಲಿನಲ್ಲೂ ಸಾಲ ಮಾಡಿ   ಸಾಹಿತ್ಯ ಸರಸ್ವತಿಯ ಸೇವೆ ಮಾಡುತ್ತಿರುವ ಸಿದ್ದಣ್ಣ  ಬಿದರಿಯವರು ಒಬ್ಬ  ಕಾವ್ಯತಪಸ್ವಿ.

ಇವರ ಕಾವ್ಯ ಕುಮಾರವ್ಯಾಸನ
                                "ಅರಸುಗಳಿಗಿದು ವೀರ
                            ದ್ವಿಜರಿಗೆ ಪರಮ ವೇದದ ಸಾರ
                            ಯೋಗೀಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ                     ವಿರಹಿಗಳಿಗೆ ಶೃಂಗಾರ "

                    ಎಂಬ ಸಾಲುಗಳನ್ನು ನೆನಪಿಗೆ ತರುತ್ತವೆ.ಇವರ ಹಾಡುಗಳು  ಕಲಿಯದವರ ಕಾಮಧೇನುವಾಗಿವೆ

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...