Total Pageviews

Wednesday 19 December 2018

ಸ್ತ್ರೀ ಎಂದರೆ ಅಷ್ಟೆ ಸಾಕೆ ?...(ಭಾಗ ೨)
ಸಾಮಗಾನದ ಕವಿ ಜಿ. ಎಸ್. ಶಿವರುದ್ರಪ್ಪ, ನವಿಲೂರ ಚೆಲುವೆಯ ರವಿ ಕೆ. ಎಸ್.ನರಸಿಂಹಸ್ವಾಮಿ, ಸಖಿಗೀತ ಹಾಡಿದ ಗಾರುಡಿಗ ದ.ರಾ.ಬೇಂದ್ರೆ, 'ಷೋಡಶಿ'ಯ ರನ್ನ ಕುವೆಂಪು ಮೊದಲಾದ ಕಾವ್ಯಾರಾಧಕರ ಆಲಾಪವಾದ 'ಅವಳು' 'ರಾಗಂ'(ಡಾ.ರಾಜಶೇಖರ ಮಠಪತಿ) ರವರ "ಹೆಣ್ಣು ಹೇಳುವ ಅರ್ಧ ಸತ್ಯ" ಕೃತಿಯಲ್ಲಿ ಬದುಕೆಂಬ ಬೆಳಕಿನ ಸುತ್ತಲೇ  ಸುಳಿದು ಸುಟ್ಟುಕೊಳ್ಳುವ ಪತಂಗವಾಗಿದ್ದಾಳೆ. 'ಹೊನ್ನೋಲೆ ಕಿವಿಯೋಳೆ,ಕೆನ್ನೇಲಿ ಸೂರ್ಯ ಹೊಳೆಯೋಳೆ' ಎಂದು ಜನಪದರಿಂದ ಸಿಂಗರಿಸಿಕೊಂಡ 'ಅವಳು' ಕುರಿತು ಲೇಖಕರು ಬಸವರಾಜ ಒಕ್ಕುಂದರ ಅಗ್ನಿಸಾಕ್ಷಿ ಕವಿತೆಯೊಂದರ ಆಯ್ದ ಭಾಗವನ್ನು  ಹೀಗೆ ಉಲ್ಲೇಖಿಸಿದ್ದಾರೆ-
"ಗೆಳತಿ
ಅಗ್ನಿಸಾಕ್ಷಿಗೆ ಏನೇನೋ ಅರ್ಥಗಳ 
ಮೂಡಿಸಿದೆ ನೀನು
................
ಜತೆಗೂಡಿ ಬಂದಿ, ಸಹಗಮನವೆಂದಿ
ಬೆಂಕಿಯನು ಸಮನಾಗಿ
ಹಂಚಿಕೊಂಡಿ
ಅರ್ಧಾಂಗಿಯಾಗಿ ಸರಿಯಾಗಿ
ಅರ್ಧ ಸುಟ್ಟುಕೊಂಡಿ"
ಎಲ್ಲಿಂದಲೋ  ಜೊತೆಯಾಗಿ , ತನ್ನದೆನ್ನುವ ಎಲ್ಲವನ್ನೂ ಬಸಿದುಕೊಂಡು ಅರ್ಧಾಂಗಿಯಾಗಿ, ಕರುಳು ಬಳ್ಳಿಯ ಬೆಳೆಸಲು ಬರುವ ಜೀವವೊಂದನ್ನು ಕುರಿತು ನನ್ನಲ್ಲಿ ಹುಟ್ಟಿದ ಸಾಲುಗಳಿವು-
ಬಯಕೆಗಳ ಉಸಿರು
ಬಿಗಿಹಿಡಿದು
ತಲ್ಲಣಗಳ ದನಿಯಾಗಿ
ಕರುಳಬಳ್ಳಿಯ ಬೇರಿಗೆ
ಹೀರುವ ಸವಿ ಸಾರವಾಗಿ
ವಾತ್ಸಲ್ಯದ ತಣಿಯನೆರೆದು
ತಣ್ಣನೆ ಬಸಿಬಸಿದು 
ಹಸಿದ ಒಡಲ ಜೇನಾಗಿ
ಏಕೆ ಹೆಸರು ನಿನಗೆ
ಬರಿದಾಗುವ  ವಿಶಾಖಿ
ಮಮತೆಯ ಗೂಡಿನಲ್ಲಿ
ಹಸಿರು ತ್ಯಾಗವ ಹಾಸಿ
ಉಸಿರ ಬಿಸಿಯ
ಹೊರಹಾಕುತ
ಬಯಸಿದವರ ಬೆಚ್ಚಗಿಡುವ 
ನೀ ಮಾಯಿ ಹೆಮ್ಮರ
ತಾಯಿ ನೀನು ಅಜರಾಮರ
ಬಿಗಿದಪ್ಪುವ ನೋವುಗಳಿಗೆ
ಸಾಂತ್ವನದ ಕೊರಳೊಡ್ಡಿ
ನೆಪ ಹೇಳದೆ ನಗುವಾಗಿ
ಬಯಸಿ ಬಂದ 
ಮಗುವಿನಂತೆ
ಚೈತನ್ಯದ ಮಡುವಾಗಿ
ಬೆಂಕಿಯ ಬಲೆಯಲ್ಲಿ
ಆನಂದದ ಹೊಳೆ ಹರಿಸುವ
ಜಲಧಾರಿಣಿ ಓ ಮಾನಿನಿ
ತನ್ನ ಮಮತೆಯ ಮಡಿಲು ಹಿಡಿದು, ಎಲ್ಲ ನೋವುಗಳನ್ನು ಮರೆತು ತನ್ನವರೆನ್ನುವ ಎಲ್ಲರನ್ನೂ  ಕಾಪಿಡುವ ಆ ಪರಿಯೇ ಹೃದಯಂಗಮಯ."ಹರಿವ ಹೊಳೆಯೊಳಗೆ, ಮೊರೆವ ಅಲೆಗಳೊಳಗೆ, ಜಗದ ಸಚರಾಚರ ಜೀವಗಳೊಳಗೆ ಬದುಕಿನ ವ್ಯಾಪಾರಕ್ಕೆ ಕಾರಣವಾದ, ಕಣ್ಣೀರ ಹನಿಗೂ, ಹವಳದಾ ಕುಡಿಗೂ,  ಜೀವಧಾರೆಯಾಗುವ ಆ ಶಕ್ತಿಯನ್ನು 'ಅವಳು' ಎನ್ನಬೇಕೆ?" ಎಂದು 'ಅವಳ'ನ್ನು ಮತ್ತೆ ನಮ್ಮಲ್ಲಿ  ಮೂಡಿ, ಎಂದೆಂದಿಗೂ ಉತ್ತರಿಸಲಾಗದೇ  ಉಳಿಯುವ ಪ್ರಶ್ನೆಯಾಗಿ ನಮ್ಮ ಮುಂದಿಡುತ್ತಾರೆ. ಪುರಂದರದಾಸರು ಹೇಳುವಂತೆ
" ಶೃಂಗಾರದ ದೇಹವೆಲ್ಲಾ
ಅಂಗ ಮುರಿದು ಬೀಳುವಾಗ
ಕಂಗಳಿಗಾತ್ಮ ಸೇರಿದಾಗ
ಧ್ಯಾನ ಒದಗದೋ
ರಂಗನ ಧ್ಯಾನ ಒದಗದೋ"
ಶೃಂಗಾರ ವೆಂಬ ಮಾಯಾ ಜಿಂಕೆಯ ಬೆನ್ನು ಹತ್ತಿ ಬೆಡಗಿನ ಲೋಕದ ಬಿನ್ನಾಣದಲ್ಲಿ ನಮ್ಮನ್ನು ನಾವು ಕಳೆದುಕೊಂಡು ಮೈಮನಕೆ ಮುಪ್ಪಡರಿದಾಗ ದೇವನ ಧ್ಯಾನದೊಳು ಪೊಗುವೆನೆಂದರೆ, ಸಮಾಧಿಯಾಗುವ ಮುಸ್ಸಂಜೆಯ ಹೊತ್ತಿನಲ್ಲಿ ಉದ್ಧಾರದ ಅಂಬರಕ್ಕೇರುವ ಹುಸಿ ಕನಸುಗಳನ್ನು ಕಟ್ಟಿದಂತಾಗುತ್ತದೆ . ಶೃಂಗಾರದ ಮಾಯೆಯಲ್ಲಿ, ಸಾತ್ವಿಕವಾಗಿಯೇ ಬದುಕಬೇಕೆಂದು ನಿರ್ಧರಿಸಿ,  ಜೀವನದ ತಿರುವುಗಳಲ್ಲಿ ಗೊತ್ತಿಲ್ಲದೆ  ಜಾರಿ ಹೋದ 'ಜಾನಕಿ'ಯರಂತಹ  ಸಾಕಿಯರ ಹಣೆಬರಹವನ್ನು ದಾಸರ ಈ  ಸಾಲುಗಳು ಮನೋಜ್ಞವಾಗಿ ಬಣ್ಣಿಸುತ್ತವೆ. ದಾಸರು ಹೇಳಿದ ಶೃಂಗಾರದ ಶಾಶ್ವತವಲ್ಲದ ನಿಸ್ಸಾರತೆಯನ್ನು ಓದಿದ ನನಗೆ ಹೀಗೆ ಹಾಡಬೇಕೆನಿಸುತ್ತಿದೆ-
"ಜಗವಿದು ರಂಗನ ರಂಗ
ಪಾತ್ರಧಾರಿಗಳು ನಾವು
ಕುಣಿಯಬೇಕು ಕುಣಿಸಿದಂತೆ
ಬೆಳಗಬೇಕು ನೀಲಾಗಸದಲಿ 
ಬದುಕು ಬಿಡಿಸುವ 
ರಂಗು ರಂಗಿನ
ಕಾಮನಬಿಲ್ಲಿನಂತೆ...."
ಸಿನಿಮಾ ರಂಗದ ಕಲ್ಪನೆಯ ಬೆಳಕಿನಲ್ಲಿ, ಕಷ್ಡಪಟ್ಟು ತನ್ನಲ್ಲರಳಿದ ಕಲಾ ಪ್ರತಿಭೆಯಿಂದ ಚಿತ್ರರಂಗದ ಕೆಲವು ದಿಗ್ಗಜರ ಬೆರಳು ಹಿಡಿದು ಬಹದೂರ ಸಾಗಿ, ಯಶಸ್ಸಿನ ಉತ್ತುಂಗಕ್ಕೇರಿ, ಮತ್ತೆ ರಂಗಭೂಮಿಯ ಕಡೆಗೆ ಹೆಜ್ಜೆ ಹಾಕಿ ಬದುಕಿನ ಬವಣೆಗಳ ತಾಪಕ್ಕೆ ಮಂಜುಗಡ್ಡೆಯಾಗಿ ಕರಗುತ್ತಲೇ ಮಿನುಗಿ  ಮಾಯವಾದವಳು ಮಿನುಗುತಾರೆ ಕಲ್ಪನಾ. ಅಪ್ಪಟ ವೃತ್ತಿಪರ ಕಲಾವಿದೆಯೊಬ್ಬಳು ಏರಬೇಕಾದ ಎತ್ತರವನ್ನೇರಿಯೂ, ಜೀವನ ಕಷ್ಟವಾದಾಗ ಮರಳಿ ಬಂದು ಬಸವರಾಜ ಗುಡಗೇರಿಯವರೊಂದಿಗೆ ರಂಗಭೂಮಿಯ ಕಲಾವಿದೆಯಾಗಿ ಹಾಡಿ ಕುಣಿದವಳು; ಬದುಕು ಇಷ್ಟೊಂದು ಅನಿಶ್ಚಿತವೆ ಎಂಬ ಕಲ್ಪನೆಯೂ ಬಾರದಂತೆ ಬದುಕನ್ನು ಬಂದಂತೆ ಸ್ವೀಕರಿಸಿದವಳು; ಕಲಾಲೋಕದ  ಶರಪಂಜರದಲ್ಲಿ, ಹೊಳೆಯುವ ಬೆಳ್ಳಿಮೋಡದ ಗೆರೆಗಳನ್ನು ಕಾಣುತ್ತಲೇ, ಸಿನೆಮಾ ಹಾಗೂ ರಂಗಭೂಮಿಯೆಂಬ  ಎರಡು ಕನಸು ಕಂಡು, ಚಿನ್ನದ ಗೊಂಬೆಯಾದವಳು  ಕಲ್ಪನಾ. ಪಂತಲು ರವರ 'ಸಾಕುಮಗಳು' 'ಸೀತೆ'ಯಾಗಿ 'ಬಂಗಾರದ ಹೂ' ಮುಡಿದು  ಕಲ್ಪನೆಯ 'ಬಯಲು ದಾರಿ' ಸವೆಸಿ ಬದುಕಿನಲ್ಲಿ 'ಸೋತು ಗೆದ್ದವಳು';ಕಾವ್ಯ ಛಂದಸ್ಸಿನ ಏರಿಳಿತದಂತೆ ಬದುಕಿ  ಕೊನೆಗೆ ಕವಿತೆಯಾಗಿ ಪುಟಗಳಲ್ಲಿ ಸೇರಿ ಹೋದವಳು. ಪುಟ್ಟಣ್ಣ ಕಣಗಾಲ್ ರಂತಹ ಅತ್ಯಾಪ್ತ ಮಾರ್ಗದರ್ಶಕರ ಗರಡಿಯಲ್ಲಿ  ಧೃವತಾರೆಯಾಗಿ ಬೆಳೆದ ಜೀವವೊಂದು ಗೋಟೂರಿನ ಬಂಗಲೆಯಲ್ಲಿ ಉಂಗುರದ ವಜ್ರ ಕುಡಿದು ತಣ್ಣಗೆ ಮಲಗಿತ್ತು ಎಂದರೆ ಜಗತ್ತು ನಂಬಲಾಗಲಿಲ್ಲ. ಸತ್ಯವಾಗಿತ್ತು ಆಕೆ ಬದುಕಿನ ತಿರುವಿನಲ್ಲಿದ್ದಳು ಎಂಬುದು; ಸತ್ಯವಾಗಿತ್ತು ಆಕೆಗೆ ಬದುಕು ಕೊನೆಗಾಲದಲ್ಲಿ ಸಹಿಸಲಾಗದ ಸಂಕಟಗಳನ್ನು ನೀಡಿತ್ತು ಎಂಬುದು. ರಾಗಂರವರು 
"ಕಣ್ಣೀರ ಮಳೆಯೊಳಗೆ
ಎದೆಯ ಉರಿ ಹೊಳೆಯೊಳಗೆ
ಬಳಗ ಚೆಲ್ಲಿದ ಬದುಕು
ಕೊಚ್ಚಿ ಹೋಗಿದ್ದಕ್ಕಾಗಿ
ನಾನು ಸಾಯುತ್ತೇನೆ" 
ಎಂದು ಕಲ್ಪನಾಳ ಸಾವನ್ನು ಕವಿತೆಯ ಅಚ್ಚಿನಲ್ಲಿ ಎರಕ ಹೊಯ್ದಿದ್ದಾರೆ. ಬದುಕು ಹೋಗೆಂದ ಕಡೆ ಹೋದ  ಕಲ್ಪನಾ ಬರೆದ ಮರಣ ಪತ್ರದಲ್ಲಿನ ಸಾಲುಗಳಿವು-
'ಬದುಕು ಜಟಕಾ ಬಂಡಿ
ವಿಧಿಯದರ ಸಾಹೇಬ
ಮದುವೆಗೋ ಮಸಣಕೋ
ಹೋಗೆಂದ  ಕಡೆ ಹೋಗು
ಮಂಕುತಿಮ್ಮ"
ಹೀಗೆ ಓದುತ್ತಾ ಹೋದಂತೆ ನಮ್ಮನ್ನು ಕತೆಯ ಆವರಣದೊಳಗೆ ಎಳೆದುಕೊಂಡು ನಮ್ಮನ್ನಾವರಿಸಿಕೊಳ್ಳುವ ಅಪರೂಪದ ಕೃತಿ. ರಾಗಂ ರವರ ಕಾವ್ಯಭಾಷೆ ಗದ್ಯಕ್ಕೊಂದು ಸಂಗೀತದ ಸ್ಪರ್ಶವನ್ನು ನೀಡಿದೆ.ಇಲ್ಲಿಯ ಶಬ್ದಗಳು ರಾಗಂ ರವರು ಕುಣಿಸಿದಂತೆ ಕುಣಿಯುತ್ತವೆ; ಮಣಿಸಿದಂತೆ ಮಣಿಯುತ್ತವೆ; ತೇಲಿಸಿದಂತೆ ತೇಲುತ್ತವೆ; ಹಕ್ಕಿಯಂತೆ ಹಾರುತ್ತವೆ. ಸಹೃದಯರನ್ನು ಕೈಹಿಡಿದು ಕರೆದೊಯ್ಯುತ್ತವೆ. ಇಲ್ಲಿ ಬರುವ ಕತೆಗಳು ನಿಜ ಜೀವನದಲ್ಲಿ ಲೇಖಕರು ಕಂಡ ಜೀವಂತ ದಂತಕಥೆಗಳೇ ಆಗಿರುವುದರಿಂದ ಸಹೃದಯರಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸುತ್ತವೆ. ಸ್ವತಃ ಲೇಖಕರೇ ನಮ್ಮ ಕಣ್ಣೆದುರಿಗೆ ನಿಂತು ಸಂವಾದ ನಡೆಸುತ್ತಾ ಈ ಘಟನೆಗಳನ್ನು ಮೆಲುಕು ಹಾಕುತ್ತಿರುವರೇನೋ  ಎಂಬಂತೆ ಕತೆಗಳು ಆರ್ದ್ರವಾಗಿ ಆಪ್ತವಾಗಿ ನಿರೂಪಿತವಾಗಿರುವುದು ವಿಶೇಷ. ಇಲ್ಲಿ ಬಯಲಾಗಿರುವ ಸಾಕಿಯರನ್ನು ಓದುವಾಗ, ಹಿನ್ನೆಲೆಯಾಗಿ ತಕ್ಕ ಲಯದ ಗದ್ಯಸಂಗೀತವೊಂದು ಶಬ್ದಗಳ ನಾದದೊಂದಿಗೆ ಹೊರಟು ಅಲೆಅಲೆಯಾಗಿ ತೇಲಿಬಂದು ಕತೆಯ ಘಟನೆಗಳನ್ನು ದೃಶ್ಯಕಾವ್ಯಗಳನ್ನಾಗಿ ಪರಿವರ್ತಿಸುತ್ತವೆ. ಶಬ್ದಗಳು ರಾಗಂರವರ ಲೇಖನಿಯೆಂಬ ಕುಂಚದಲ್ಲಿ ಕಲಾಕೃತಿಗಳಾಗಿವೆ; ಕಣ್ಣ ಮುಂದಿನ ದೃಶ್ಯಗಳಾಗಿವೆ. ಕಾಲ್ಪನಿಕ ಕತೆಗಳಿಗಿಂತ  ನೈಜ ಬದುಕುಗಳನ್ನು ಕತೆಯಾಗಿ ಹೆಣೆಯುವುದು  ಬಲು ಸಾಹಸದ ಸಂಗತಿ. ಲೇಖಕರು ಸವಾಲಾಗಿ ಸ್ವೀಕರಿಸಿ, ಆ ಸಾಹಸ ಮೆರೆದಿದ್ದಾರೆ. ನೆಲದ ಮರೆಯ ನಿದಾನದಂತೆ ಎಲ್ಲೋ  ಅರಳಿ, ಎಲ್ಲೋ ಪರಮಳ ಬೀರಿ ಮತ್ತೆಲ್ಲೋ ಕಾಯಿಯಾಗಿ, ಹಣ್ಣಾಗಿ,ಬೀಜವಾಗಿ ಕೊನೆಗೆ  ಮಣ್ಣಲ್ಲಿ ಮಣ್ಣಾಗುವ ಗಟ್ಟಿಗಿತ್ತಿ, ಭಂಡ, ದುರಂತ ಸಾಕಿಯರನ್ನು ಕಣ್ಣ ಮುಂದೆ ಸಾಲಾಗಿ ನಿಲ್ಲಿಸಿ, ಒಬ್ಬೊಬ್ಬರನ್ಬಾಗಿ ಕರೆದು ಅನಾವರಣಗೊಳಿಸುವ  ಅತ್ಯುತ್ತಮವಾದ ದಾಖಲೆಯಾಗಿದೆ ಈ ಕೃತಿ. ತಮ್ಮ ನೆಲಕ್ಕಂಟಿ ಬದುಕಿ,ನೊಂದು, ಬೆಂದು,ಸವೆದು, ತೆವಳಿದರೂ ಸೋಲು ಬಿಟ್ಟುಕೊಡದ  ಈ ಸಾಕಿಯರ  ಜೀವನೋತ್ಸಾಹದ ಪರಿ ಅದಮ್ಯವಾದುದು. ರಾಗಂರವರು  ಜೀವನಸಾಗರದಲ್ಲಿ ಮಳೆಹನಿಗಳಾಗಿ ಕರಗಿ ಮರೆಯಾಗಬೇಕಾಗಿದ್ದ  ಈ ಸಾಕಿಯರನ್ನು ತಮ್ಮ ಕತೆಗಳ ಚಿಪ್ಪುಗಳಲ್ಲಿ ಹಿಡಿದು ಬೆಳಕಿನ ಮಣಿಗಳನ್ನಾಗಿಸಿದ್ದಾರೆ; ತಮ್ಮನ್ನು ಸುಟ್ಟುಕೊಂಡು ಜಗಕೆ ಬೆಳಕು ಬೀರುವ ಜ್ಯೋತಿಗಳನ್ನಾಗಿಸಿದ್ದಾರೆ. ಹೆಸರಿಲ್ಲದಂತೆ ಸಮಾಧಿಯಾಗಿ ಹೋದ ಜೀವಗಳನ್ನು ಮೇಲೆತ್ತಿ ರಕ್ತಕಣ್ಣೀರಿನ  ಕಲಾಮೂರ್ತಿಗಳನ್ನಾಗಿ ಕೆತ್ತಿ  ನಿಲ್ಲಿಸಿದ್ದಾರೆ. ಬದುಕಿನ ಮತ್ತೊಂದು ಆಯಾಮವನ್ನು ದರ್ಶಿಸುವಂತೆ ಮಾಡುವ ಈ ಕೃತಿ ಸಮಾಜದ ನಿಗೂಢ ಸತ್ಯಗಳನ್ನು  ತೆರೆದಿಡುತ್ತದೆ. ಆದರ್ಶಗಳ ಬೆನ್ನುಬಿದ್ದು ಉಪದೇಶ  ಮಾಡುವ ನಮಗೆ ಈ ಸಾಕಿಯರ ಬದುಕುಗಳೇ ಜೀವನ ಪಾಠವಾಗಲಿಕ್ಕೆ ಸಾಕು.
ಈ ಕೃತಿಯಲ್ಲಿ ನನ್ನನ್ನು ಸೆಳೆದ ಮತ್ತೊಬ್ಬ ದುರಂತ ಭಾವದೊಡತಿಯೆಂದರೆ , ಭಾರತೀಯ ಚಿತ್ರರಂಗದ ಅಂದಕಾಲತ್ತಿನ ಅನಭಿಷಕ್ತ ರಾಣಿಯಾಗಿ ಅಕ್ಷರಶಃ ಸಿನೆಮಾ ಸಾಮ್ರಾಜ್ಯವನ್ನಾಳಿ,
ಹುಚ್ಚು ಪ್ರೇಯಸಿ ನಾನು 
ರಾತ್ರಿ ಕಳೆಯುತ್ತೇನೆ
ದುಃಖ ನನ್ನ ವೈರಿ,
ದುಃಖವೇ ಹಂಬಲ ಈ 
ಹೃದಯಕೆ ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ"
ಎಂದು ಹಾಡಿ ಬರೆದು ಈ ಕವಿತೆಯೊಳಗಿನ ಪ್ರಿಯತಮೆಯಾದ ಮೀನಾಕುಮಾರಿ ಅಲಿಯಾಸ್ ಮುನ್ನಿ ಅಲಿಯಾಸ್ ಮಜಹಬೀನ್ ಜಗತ್ತಿನ ನಶೆಯೆಲ್ಲಾ ತನ್ನೊಳಗೇ ಇಳಿಯಬೇಕೆಂದು  ಹೀರಿ ಮದಿರೆಯೊಳಗಿನ ಮಧುವಾದ ಮೀನಾಕುಮಾರಿ ಬಣ್ಣ ಹಚ್ಚಿದ್ದು ತನ್ನ ಏಳನೇ ವಯಸ್ಸಿನಲ್ಲಿ. ಕಿತ್ತು ತಿನ್ನುವ ಬಡತನವೆಂಬ ಹಂತಕ ಹದ್ದಿನ ಕೆಂಗಣ್ಣುಗಳಿಗೆ ಗುರಿಯಾಗಿ, ಬಣ್ಣದ ಬದುಕೆಂದರೆ ಏನೆಂದೂ ಅರಿಯದ ಎಳೆಯ ಬಾಲ್ಯದಲ್ಲಿಯೇ, ಕೆಲವಾರು ಸಿನೇಮಾಗಳಲ್ಲಿ ನಟಿಸಿ ಬಾಲಕಲಾವಿದೆಯಾಗಿ ಗುರ್ತಿಸಿಕೊಂಡವಳು. ಈಕೆ ಲೇಖಕರೇ ಅಕ್ಷರಿಸಿದಂತೆ
ಗೊಂಬೆಯೊಳಗೊಣ ಗೊಂಬೆ
ಗೊಂಬೆಯೊಳಗಣ ಗೊಂಬೆ
ಗೊಂಬೆಯೊಳಗಣ ಗೊಂಬೆಯಾಗಿದ್ದವಳು. 
"ಮಾನವಸಂಬಂಧಗಳ ಭೀಷ್ಮ"ನೆಂಬ ಖ್ಯಾತಿಯ ಕೆ. ಎ. ಅಬ್ಬಾಸರು ಈಕೆಗೆ ವಿದೇಶದಿಂದ  ತಂದುಕೊಟ್ಟ ಗೊಂಬೆಗೆ ಪ್ರೀತಿಯ ಪ್ರಾಣ ಕೊಟ್ಟು ಮುದ್ದಿಸಿದವಳು. ಗೊಂಬೆಗಳೊಂದಿಗೆ ಆಟವಾಡಿ ಸಂಭ್ರಮಿಸಬೇಕಾಗಿದ್ದ ಬಾಲ್ಯವನ್ಜು ಪರದೆಯ ಮೇಲೆ ಗೊಂಬೆಯಾಗಿ ನಟಿಸಿ ಕಳೆದುಕೊಂಡ ದುರ್ದೈವಿ. ಬಾಲ್ಯದಲ್ಲಿ ಜೊತೆಯಾಗದ ಗೊಂಬೆಯೆಂದರೆ ಅವಳಿಗೆ ಪಂಚಪ್ರಾಣವಾಗಿತ್ತು.ಅದಕ್ಕಾಗಿ ಮನೆಯಲ್ಲೊಂದು ಗೊಂಬೆಗಳ ಮ್ಯುಸಿಯಂನ್ನೇ ನಿರ್ಮಾಣ ಮಾಡಿದ್ದಳು. ಕಮಲ್ ಅಮ್ರೋಹಿ ನಿರ್ದೇಶನದ ಬಿಜುಬಾವ್ರಾ, ಪರಿಣಿತಾ ,ಗುರುದತ್ತ ನಿರ್ದೇಶನದ ' ಸಾಹಿಬ್ ಬೀಬಿ ಔರ್ ಗುಲಾಮ್' ಹಾಗೂ ' ಕಾಜಲ್' ಸೇರಿದಂತೆ ೩೯ ವರ್ಷಗಳಲ್ಲಿ ಆಕೆ ನಟಿಸಿದ ಚಿತ್ರಗಳ ಸಂಖ್ಯೆ ಬರೋಬ್ಬರಿ ೭೦ ಎಂದರೆ ಆಕೆಯಲ್ಲಿರುವ ಕಲಾವಿದೆಯ ಸೆಳೆತವನ್ನು ಅರ್ಥಮಾಡಿಕೊಳ್ಳಬೇಕು. 'ಬದುಕೆಂದರೆ ಸಿನೇಮಾ, ಸಿನೇಮಾ ಎಂದರೆ ಬದುಕು' ಎಂದೇ ಜೀವಿಸಿದವಳು.
"ನಾ ಹೇಗೆ ಬದುಕುವೆ 
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ..."
ಎಂಬ ಅವಳ ವೇದನೆ ಯಾರಿಗೂ  ಕೇಳಿಸದೇ ಹೋಯಿತು. ಇವಳನ್ನು ಕೇವಲ  ಕಲಾವಿದೆಯಾಗಿ ಕಲಾರಾಧಕಳಾಗಿ ಕಂಡ ಜಗತ್ತು ಸ್ವತಃ ಜೀವಂತ ಕವಿತೆಯಾಗಿದ್ದ  ಈಕೆಯ ಕವಯಿತ್ರಿಯ ಮನಸ್ಸನ್ನು ಅರಿಯದೆ ಹೋಯಿತು. ಹೀಗೆ ನಟಿಸಿ, ಕುಡಿದು ಇತಿಹಾಸದ ಪುಟದೊಳಗಿನ  ಕವಿತೆಯಾಗಿ  ಮರೆಯಾದ ಮೀನಾಕುಮಾರಿಯ ಬದುಕು ಕಡುಕಷ್ಟಗಳಿಗೂ ಬಂಡೆಯಂತೆ ನಿಲ್ಲುವ ಗೊಂಬೆಯಂತಾಗಿತ್ತು. ತನ್ನದೇ ಕವಿತೆಯೊಳಗಿನ ಕವಿತೆಯಾಗಿ ಸಾವನ್ನೇ ನಶೆ ಎಂದು ಆಹ್ವಾನಿಸಿದ  ಮೀನಾಕುಮಾರಿ ಈ ಹೊತ್ತಿನಲ್ಲಿ ನಮ್ಮನ್ನು ನೋಡಿ ಧೃವತಾರೆಯಾಗಿ ನಗುತ್ತಿರಬೇಕು ಎಂದೆನಿಸುತ್ತದೆ.
"ಇಹವ ತೊರೆದವಳೊಂದಿಗೇನು
ಎಂದು, ಮನಸ್ಸಿಲ್ಲದೆ ಮಾತಿಗಿಳಿದೆ
ಮುಸಲಧಾರೆಯಂತೆ ಬಂದವು
ದಡಬಡಿಸಿ ಹೋದವಳ
ನೆನಪು ಮರುಕಳಿಸಿದವು"
ಜೀವನದ ಸಂತೆಯಲ್ಲಿ  ಮಕ್ಕಳ ಹೊಟ್ಟೆಗೆ ಹಿಟ್ಟು ಹುಡುಕುವ, ಬಡತನವೆಂಬ ಮಾರಿಗಾಗಿ ತನ್ನ ಸೆರಗಿನ ಕಷ್ಟಗಳನ್ನು  ಶೆರೆಯ  ಗುಂಗಿನಲ್ಲಿ ಅನುಭವಿಸುತ್ತಾ ಜನರ ಬಾಯಿಗೆ ತುತ್ತಾಗಿ ಹಳ್ಳದ ದಂಡೆಯ ಹೆಣವಾದ ಗಂಗವ್ವಳನ್ನು ಕುರಿತು ಲೇಖಕರ ಸಾಲುಗಳಿವು. ನಿಜ.ಲೇಖಕರಾದ ರಾಗಂರವರು ನೆಲಮೂಲ ಸಂಸ್ಕೃತಿಯ ಬೇರುಗಳಾಗಿ  ಆಳಕ್ಕಿಳಿದು ಬದುಕುತ್ತಾ,ಬಾಳಪಯಣದಲ್ಲಿ  ಹೆಸರಿಲ್ಲದ  ಹೂಗಳಂತೆ ಎದುರಾದ ಸಾಕಿಯರೊಂದಿಗೆ  ಮುಖಾಮುಖಿಯಾಗುತ್ತಾರೆ. ಅವರ ಎದೆಯ ಭಿತ್ತಿಯೊಳಗೆ ಅವಿತಿರುವ ನೋವುಗಳ ಚಿತ್ತಾರಗಳನ್ನು ಅಕ್ಷರಗಳ ಕುಂಚದಲ್ಲಿ ಮೇಲಿನಂತೆ ಬರೆಯುತ್ತಾರೆ. ಅಲಿ ಸರ್ದಾರ್ ಜಾಫ್ರಿಯವರ
"ಒಂದು ಕ್ಷಣ, ನೀನು ಬೆಂಕಿ, 
ಮತ್ತೊಂದು ಕ್ಷಣ ಇಬ್ಬನಿ
ನೀನು ವಜ್ರ,ಒಮ್ಮೆ ದೇವತೆ,
ಮತ್ತೆ ಪುನಃ ಶಿಲಾಮೂರ್ತಿ" 
ಎಂಬ  ಮಾತುಗಳನ್ನು ಉಲ್ಲೇಖಿಸುವ ಲೇಖಕರು ಮಾತಿಗೆ ಸೋತವಳನ್ನು ಮಾತಾಗಿಸುತ್ತಾರೆ; ಕಾವ್ಯದಲ್ಲಿ ಸೋತವಳನ್ನು ಗದ್ಯವಾಗಿಸುತ್ತಾರೆ; ಗದ್ಯದಲ್ಲಿ ಸೋತವಳನ್ನು ಪದ್ಯವಾಗಿಸುತ್ತಾರೆ; ಚಾರಿತ್ರ್ಯದಲಿ ಸೋತವಳನ್ನು ಚರಿತ್ರೆಯಾಗಿಸುತ್ತಾರೆ; ಪದಗಳಿಗೂ ಸೋತವಳನ್ನು ನಮ್ಮೆದೆಯೊಳಗಿನ ಭಾವವಾಗಿಸುತ್ತಾರೆ; ಬದುಕಾಗಿ ಸೋತವರನ್ನು ತಮ್ಮ ಮಾಂತ್ರಿಕ ಲೇಖನಿಯಲ್ಲಿ ಅಮರವಾಗಿಸುತ್ತಾರೆ."ಬಾಳಿನ ದಾರಿಯಲ್ಲಿ ಬೆಳಕಿದ್ದವರ ಬೆನ್ನುಹತ್ತಿ ಬಹಳಷ್ಟು ಹೆಂಗಸರು ಬರುತ್ತಾರೆ.ಬಂದವರು ಮೈಯಲ್ಲಿ ಮುಳುಗಿ, ಮಾತಲ್ಲಿ ಅರಳಿ,ಮತ್ಯಾವುದೋ ವಿನಾಕಾರಣಕ್ಕೆ ಕೆರಳಿ, ಇದುವರೆಗಿನ ಈ ಬದುಕೇ ಸುಳ್ಳು ಎನ್ನುವಂತೆ ಎಲ್ಲ ಕಿತ್ತೆಸೆದು ಹೊರಟು ಹೋಗುತ್ತಾರೆ. ಕೆಲವೇ ಕೆಲವರು ಮಾತ್ರ ಹಳೆಯ ಹಾಡಿನಂತೆ, ಗಂಟೆಯ ರಿಂಗಣದಂತೆ,ಮಧುರವಾಸನೆಯಂತೆ ಅವರ ನಿರ್ಗಮನದ ನಂತರವೂ ಉಳಿದುಬಿಡುತ್ತಾರೆ.
ಇಂಥವರ ನೆನಪೆಂದರೆ ಹುಚ್ಚು ಹುಚ್ಚಾಗಿ ಕೆನ್ನೆ ಕಚ್ಚುವ ಕೂಸಿನ ಮಾತೇ ಅಲ್ಲವೇ?"ಎಂದು ಅವಳು ಕುರಿತು ಹೃದಯದಾಳಕ್ಕಿಳಿಯುತ್ತಾರೆ ರಾಗಂರವರು. ಸಾಕಿಯನ್ನು ಬರಹಕ್ಕಿಳಿಸುವಾಗ ಲೇಖಕರು ಬಹುದೂರದ ವ್ಯರ್ಥ ಅಲೆದಾಟಕ್ಕೆ ತೊಡಗದೇ ತಮ್ಮ ತಲೆ ನೇವರಿಸಿ ಕೈ ಸೋಕಿಸಿ ನೆತ್ತಿ ಕಾದ  ಅವರ ಅಜ್ಜಿ ಕಾಶೀಬಾಯಿಯನ್ನೇ ಕರೆತರುತ್ತಾರೆ. ಹೀಗೆ ನಮ್ಮ ದೇಶದ ಚರಿತ್ರೆಯೆಂಬ ನೀಲಾಗಸದಲ್ಲಿ  ಮಿನುಗುತಾರೆಗಳಾಗಿ ಬೆಳಗಬೇಕಾಗಿದ್ದ ಸಾಕಿಯರ ದುರದೃಷ್ಟಕರ, ದುರಂತ ಬದುಕುಗಳನ್ನು ಲೇಖಕರಾದ ರಾಗಂ ರವರು  ಅರ್ಥಪೂರ್ಣವಾಗಿ  ಕಟ್ಟಿಕೊಟ್ಟಿದ್ದಾರೆ. ಸದಾ  ಆದರ್ಶ  ಜೀವನಗಳತ್ತಲೇ ನೋಟ ಬೀರುವ ಸಮಾಜದ ದೃಷ್ಟಿಕೋನವನ್ನು ದುರಂತದ ವಾಸ್ತವಿಕ  ಬದುಕುಗಳ ಕಡೆಗೂ  ಅಷ್ಟೇ ಪ್ರೀತಿಯಿಂದ ಹರಿಸಬೇಕಾದ ಅವಶ್ಯಕತೆಯಿದೆ ಎಂಬ ಕಾಳಜಿ ರಾಗಂರವರದು. ಸಾಕಿಯರ ಜೀವನದ  ಕತ್ತಲೆ ಬೆಳಕುಗಳನ್ನು ಅನಾವರಣಗೊಳಿಸುತ್ತಲೆ ಕಟ್ಟಿದ ಕಪ್ಪುಬಿಳುಪಿನ ದೃಶ್ಯಕಾವ್ಯವಿದು. ಆದರ್ಶದ ಬೆಳಕಿನಲ್ಲಿ ಕಪ್ಪು ಕಲೆಗಳಿಂದ ಮರೆಯಾಗಿ ಹೋಗಬೇಕಾಗಿದ್ದ ವ್ಯಕ್ತಿತ್ವಗಳನ್ನು  ಸಾಹಿತ್ಯದ ಬೆಳಕಿನಲ್ಲಿ ಮತ್ತೆ  ಪ್ರಕಾಶಿಸುವಂತೆ ಮಾಡಿದ್ದಾರೆ. ಲೇಖಕರು ಸಮಾಜವನ್ನು ನೋಡುವ ದೃಷ್ಟಿಯೇ ವಿಭಿನ್ನ ಎಂಬುದಕ್ಕೆ ಈ ಕೃತಿ ನಿದರ್ಶನವಾಗಿದೆ. ಈ 'ಅವಳು' ಕುರಿತು ಎಷ್ಟು ಬರೆದರೂ, ಎಷ್ಟು ಭಾಷಣ ಮಾಡಿದರೂ ಅವಳೊಂದು ಬರಿ ಮಾತಿಗೆ ದಕ್ಕದ ಎಂದೆಂದಿಗೂ ಮುಗಿಯದ ಅಧ್ಯಾಯ. ಏಕೆಂದರೆ ಅವಳು ಮೇಲೆ ಹೇಳಿದಂತೆ ಹರಿಯುವ ನದಿ; ಉಕ್ಕುವ ಕಡಲು; ಬೆಳಗುವ ನಂದಾದೀಪ; ಅಂತ್ಯವಿಲ್ಲದ ಅನಂತ; ಕೈಗೆಟುಕುವಂತೆ ಕಾಣುವ ನಿಲುಕದ ನಕ್ಷತ್ರ; ಸೀಮಾತೀತ ನಭೋಮಂಡಲ. ರಾಗಂರವರು  "...ನಾನು ಅವಳನ್ನು ಕುರಿತು ಏನೆಲ್ಲ ಬರೆದೂ ವಿಫಲನಾಗಿದ್ದೇನೆ.ಯಾಕೆಂದರೆ, 'ಅವಳು' ಕಾಮನಬಿಲ್ಲಿನಂತೆ,  ಏಳೂ ಬಣ್ಣಗಳನ್ನು ಸೇರಿಸಿ ಕಾಮನಬಿಲ್ಲು ಎಂದು ಕರೆದೆ, ಆದರೆ ಬಣ್ಣ ಬಣ್ಣಗಳು ಸಂಧಿಸಿ ಹೊರಹೊಮ್ಮುವ ಚೆಲುವಿಗೆ ಏನೆಂದು ಹೆಸರಿಸಲಿ? ಮಾತಿಗೆ ಮಾತೆಂದೆ,ಮೌನಕ್ಕೆ ಮೌನ. ಮಾತು ಮತ್ತು ಮೌನಗಳು ಸಂಧಿಸುವ ಸುಮ್ಕಾನಕ್ಕೆ ಯಾವ ಹೊಸ ವ್ಯಾಖ್ಯಾನ ನೀಡಲಿ?  " ಎಂದು ಲೇಖನಿಯ ತುದಿಯಲ್ಲಿ ಹಿಡಿಯಲಾಗದ ಬ್ರಹ್ಮಾಂಡ ಅವಳು ಎಂದು ಮನೋಜ್ಞವಾಗಿ ಬಣ್ಣಿಸುತ್ತಾರೆ ; ಕಾವ್ಯದ ಕ್ಯಾನ್ವಾಸಿನಲ್ಲಿಯೂ ಬಿಡಿಸಲಾಗದ ಭವ್ಯ ಸಂಕೀರ್ಣ ಕಲಾಕೃತಿ ಅವಳು  ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಕವಿತೆಯಾಗಿಯೂ ಅವಳು ಎಷ್ಟು ಅಪೂರ್ಣವೆಂಬುದನ್ನು ಕೆಳಗಿನಂತೆ ನಾನು ಹೀಗೆ ಬರೆಯಬೇಕೆನ್ನಿಸುತ್ತಿದೆ -
"ಹೇಗೆ ಬಿಡಿಸಲಿ ಗೆಳತಿ 
ನಿನ್ನ ಹಂಬಲದ ಗೆರೆಗಳನು
ಮನದ ತುಮುಲರೇಖೆಗಳನು
ಒಲವ ಧಾರೆಗಾವ ಬಣ್ಣ
ಇದೆಯೊ ಬಣ್ಣ ಉಸುರಿಗೆ
ಮಮತೆಗೆಲ್ಲಿಯ ರೂಹು
ವಾತ್ಸಲ್ಯಕ್ಕಾವ ರಂಗು 
ನೀನೆಂದರೆ 
ಸುಳಿಯಲೆಗಳ ಮಹಾಕಡಲು
ಸುಳಿಸುಳಿದು ಬೀಸುವ
ಮಂದಾನಿಲ ಹೇಗೆಂದರೂ
ನೀನೊಂದು ಬರೆದಷ್ಟೂ
ಬಗೆದಷ್ಟೂ ಎಂದಿಗೂ
ಮುಗಿಯದ ಮಹಾಧ್ಯಾಯ".



x

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...