Total Pageviews

Friday 6 April 2018

ಅಗ್ನಿಗಾನದ ಬೆನ್ನು ಹತ್ತಿ.....(ಭಾಗ-1)

ಅಗ್ನಿಗಾನದ ಬೆನ್ನು ಹತ್ತಿ.....(ಭಾಗ-1)

           ದಿನಾಂಕ ೩೦-೩-೨೦೧೮ ರಜೆಯ ನಿಮಿತ್ತ ಬಿಸಿಲ ನಾಡು ಚಡಚಣದಲ್ಲಿರುವ ಸಾಹಿತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರೂ ಆಗಿರುವ ಡಾ.ರಾಜಶೇಖರ ಮಠಪತಿ (ರಾಗಂ) ರವರ ಸಾಂಸ್ಕೃತಿಕ ಮನೆ 'ಜೋಳಿಗೆ'ಗೆ ವಿರಾಮವಾಗಿ ಭೇಟಿಯಿತ್ತಾಗ, ಕನಕದಾಸರ 'ಮೋಹನ ತರಂಗಿಣಿ'  ಕಾವ್ಯವನ್ನಾಧರಿಸಿದ ತಮ್ಮ ಹೊಸ ನಾಟಕ 'ಅಂತಪುರದ ಹಾಡು' ರಚಿಸಲು ಅಲ್ಲಿಗೆ ಆಗಮಿಸಿದ್ದ ಕರ್ನಾಟಕ  ನಾಟಕ ಅಕಾಡೆಮಿ ಸದಸ್ಯರು ,ಪ್ರಾಧ್ಯಾಪಕರು ಹಾಗೂ ಖ್ಯಾತ ನಾಟಕಕಾರರೂ ಆಗಿರುವ ಶ್ರೀ ಬೇಲೂರು ರಘುನಂದನ್ ರವರ ಸಂದರ್ಶನ ಮಾಡುವ ಭಾಗ್ಯ ನನ್ನದಾಯಿತು. ರಾಗಂ ರವರೊಂದಿಗಿನ ನನ್ನ ಚರ್ಚೆಯಲ್ಲಿ  ಆಗಾಗ ಶ್ರೀ ರಘುನಂದನ್ ರವರ ಪ್ರಸ್ತಾಪವಾಗುತ್ತಿದ್ದುದರಿಂದ ಮಾನಸಿಕವಾಗಿ ಆಗಲೇ ಹತ್ತಿರವಾಗಿದ್ದ ಶ್ರೀ  ಬೇಲೂರು ರಘುನಂದನ್ ರವರನ್ನು  ಗುರುತಿಸಿ ಹತ್ತಿರದಿಂದ ಮಾತನಾಡಿಸಿದೆ. ಕನಕದಾಸರ ಮೋಹನ ತರಂಗಿಣಿ  ಸಾಂಗತ್ಯ ಕಾವ್ಯವನ್ನು ಆಸ್ವಾದಿಸುತ್ತ ನಾಟಕದ ದೃಶ್ಯಗಳನ್ನಾಗಿ ಸೃಷ್ಟಿಸುವ ತಲ್ಲೀನತೆಯಲ್ಲಿದ್ದುದರಿಂದ ಮುಗುಳ್ನಗುತ್ತಾ  ಪರಿಚಯಿಸಿಕೊಂಡು ಸುಮ್ಮನಾದರು. ಜೋಳಿಗೆಯಲ್ಲಿ ಆ ಸಾಂಸ್ಕೃತಿಕ ಜಂಗಮರೊಂದಿಗಿನ ಸಂವಾದಗಳು ನನ್ನ ಅರಿವಿನ ನದಿಯ ಹರವನ್ನು ವಿಸ್ತರಿಸಿದವು. ಜಿ.ಎಸ್.ಎಸ್ ರವರು ಗೀತಿಸುವಂತೆ "ನನ್ನನ್ನು ನಾನರಿಯದ ಲೊಕದತ್ತ,
ಕಾಣದ ಕಡಲಿನತ್ತ ಹಂಬಲಿಸುವಂತೆ ಮಾಡಿದವು."

             ನಾಟಕ ರಚನೆಯ ಮಧ್ಯ ಬಿಡುವಿನಲ್ಲಿದ್ದ ಶ್ರೀ ಬೇಲೂರು ರಘುನಂದನ್ ರವರನ್ನು ಸಂದರ್ಶನ ಮಾಡಲು ವಿನಂತಿಸಿಕೊಂಡು, ಪೂರ್ವಸಿದ್ಧತೆಯೊಂದಿಗೆ ನೇಸರನು ಪಡುವಣ ಮನೆಯ ಕಡೆ ಹೊರಳಲು ಉದ್ಯುಕ್ತನಾಗುತ್ತಿದ್ದ  ಸಂಜೆ ೪ ಗಂಟೆಯ ಸಮಯದಲ್ಲಿ ಸಂದರ್ಶನವನ್ನು ಪ್ರಾರಂಭಿಸಿದೆ.
ಪ್ರಶ್ನೆ : ಕರ್ನಾಟಕ ನಾಟಕ ಅಕಾಡೆಮಿಯ  ಸದಸ್ಯರಾಗಿ ಆಯ್ಕೆಯಾಗಿರುವ ತಮಗೆ ಅಭಿನಂದನೆಗಳು ಸರ್
ರಘುಜಿ  : Thank u
ಪ್ರಶ್ನೆ :  ವಿಶ್ವ ರಂಗಭೂಮಿ ದಿನ ವನ್ನು ಆಚರಿಸಿರುವ ಈ ಸಂದರ್ಭದಲ್ಲಿ ಕನ್ನಡ ರಂಗಭೂಮಿ ಎದುರಿಸುತ್ತಿರುವ ಸವಾಲುಗಳೇನು?
ರಘುಜಿ : ರಂಗಭೂಮಿ ತನ್ನದೇ ಆದ ಪರಂಪರೆಯನ್ನು ಹೊಂದಿದೆ.ನಾಟಕ ಅಕಾಡೆಮಿಯು ಕನ್ನಡ ರಂಗಭೂಮಿಯ ಅಸ್ಮಿತೆಯನ್ನು ಕಾಪಾಡುತ್ತಾ, ಉದಾತ್ತವಾಗಿಸುತ್ತ  ಬಂದಿದೆ.ಶಿಕ್ಷಣದಲ್ಲಿ ರಂಗತರಬೇತಿ ಹಾಗೂ ರಂಗಶಿಕ್ಷಣವನ್ನು ಅಳವಡಿಸಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿದೆ . ಅದು ಕನ್ನಡ ಮತ್ತು ರಂಗಭೂಮಿಯ  ಅಸ್ಮಿತೆಯನ್ನು ಉಳಿಸಿಕೊಳ್ಳಲು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ..ವಿದ್ಯಾರ್ಥಿಗಳ ಹೃದಯಾಳದಲ್ಲಿ  ಹುದುಗಿರುವ  ಪ್ರೀತಿ ,ದಯೆ,ಅಂತಃಕರಣ,ಕರುಣೆ ಜನಾನುರಾಗ, ಗಳಿಂದ ಸಂಕಲಿಸಿದ  ಸಂವೇದನಾಶೀಲತೆಯನ್ನು ಜಾಗೃತಗೊಳಿಸಬೇಕಾಗಿದೆ.ಇದಕ್ಕೆ "ರಂಗಶಿಕ್ಷಣ "ದಂತಹ ಪ್ರಬಲ ಮಾಧ್ಯಮ ಬೇರೊಂದಿಲ್ಲ ಎನ್ನುವುದು ನನ್ನ ಬಲವಾದ ನಂಬಿಕೆಯಾಗಿದೆ.
ಪ್ರಶ್ನೆ : ತಾವು ಹೊಸ ನಾಟಕವೊಂದನ್ನು ಬರೆಯುತ್ತಿರುವುದು ತಿಳಿಯಿತು.ಆ ನಾಟಕ ಯಾವುದು. ಅದರ ಬಗ್ಗೆ
      ಹೇಳಿ
ರಘುಜಿ : ಕನಕದಾಸರ ಮೋಹನ ತರಂಗಿಣಿ ಕಾವ್ಯ ಆಧಾರಿತ 'ಅಂತ:ಪುರದ ಹಾಡು' ನಾಟಕವನ್ನು ಬರೀತಾ ಇದೀನಿ.


ಪ್ರಶ್ನೆ : ಈ ನಾಟಕದ ಮೂಲಕ ಯುವಪೀಳಿಗೆಗೆ ತಾವು ಹೇಳಬಯಸುತ್ತಿರುವುದೇನು?
ರಘುಜಿ : ಕನಕದಾಸರು ಮೋಹನ ತರಂಗಿಣಿಯಲ್ಲಿ ಕೃಷ್ಣನ ಮೂಲಕ ತಂದಿರುವ ಪುರುಷ ವ್ಯಾಮೋಹಗಳಿಗಿಂತ ಭಿನ್ನವಾದ. ನೆಲೆಯಲ್ಲಿ ಕಾವ್ಯದಲ್ಲಿ ಬರುವ  ಉಷೆ,  ಚಿತ್ರಲೇಖೆ, ರತಿ,ರುಕ್ಮಿಣಿ ಮುಂತಾದ    ಸ್ತ್ರೀ ಪಾತ್ರಗಳ ಹೆಣ್ತನದ ಹಂಬಲಗಳನ್ನು,ಸಂಕಟಗಳನ್ನು, ನೋವುಗಳನ್ನು ಪ್ರೇಮದ ಸೂತ್ರದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.ಇದು ಒಂದು ರೀತಿಯಲ್ಲಿ  ಶೃಂಗಾರ ಮೋಹನನನ್ನು ಆವರಿಸಿಕೊಂಡಿರುವ  ತರಂಗಿಣಿಯರ ಹೆಣ್ತನದ ಪ್ರೇಮ ಕತೆ.
ಪ್ರಶ್ನೆ :ತಮ್ಮ ಹೊಸ ನಾಟಕ ರಚನೆಗೆ ಬಿಸಿಲ ನಾಡಾದ ಚಡಚಣದ ಸಾಂಸ್ಕೃತಿಕ ಮನೆ ಜೋಳಿಗೆಯ ಆಯ್ಕೆಗೆ ಕಾರಣ ತಿಳಿಸಿ
ರಘುಜಿ : ರಾಗಂ  ರವರ ಸ್ನೇಹ, ಪ್ರೀತಿ,ಯ ಮಧುರ ಬಂಧಗಳು ನನ್ನನ್ನು ಈ ಮನೆಗೆ ಕರೆತಂದಿವೆ.ಜೋಳಿಗೆ  ಪ್ರಶಾಂತವಾದ ಪುಣ್ಯಭೂಮಿ.ಇಲ್ಲಿಯ ಸಸ್ಯಸಂಕುಲದ ಪ್ರಸನ್ನತೆ, ನಿಶಾಂತತೆ, ನನ್ನ ನಾಟಕದ ರಚನೆಗೆ ಬಹಳ ಪೂರಕವಾಗಿದ್ದರಿಂದ ೮ ರಿಂದ ೧೦ ಗಂಟೆಗಳ ಕಾಲ ನಿರಂತರವಾಗಿ ಸೃಜನಶೀಲ ಬರವಣಿಗೆಯಲ್ಲಿ  ತೊಡಗಿಸಿಕೊಳ್ಳಲು ಸೂಕ್ತವಾದ ಬಯಲು ಆಲಯವಾಗಿದ್ದರಿಂದ ಈ ಸ್ಥಳವನ್ನು ಆಯ್ಕೆಮಾಡಿಕೊಂಡೆ.

ಪ್ರಶ್ನೆ :  ಕುವೆಂಪುರವರ ಮಲೆನಾಡಿನ ಮಂದಿರ ' ಕವಿಶೈಲ'ಕ್ಕೂ. ಬಿಸಿಲನಾಡಿನಲ್ಲಿರುವ ಈ 'ಜೋಳಿಗೆ'ಗೂ ಇರುವ ಸಾಮ್ಯತೆಗಳೇನು?
ರಘುಜಿ: 'ಮಲೆಗಳಲ್ಲಿ ಮಧುಮಗಳು ','ಕಾನೂರು ಹೆಗ್ಗಡಿತಿ','ಶ್ರೀರಾಮಾಯಣ ದರ್ಶನಂ ', 'ಶೂದ್ರತಪಸ್ವಿ' ,ಪಾಂಚಜನ್ಯ ,'ಕಲಾಸುಂದರಿ','ಪ್ರೇಮ ಕಾಶ್ಮೀರ','ಅಗ್ನಿಹಂಸ','ಅನಿಕೇತನ'ದಂತಹ ಕಾವ್ಯ, ಕಥನ,ಕಾದಂಬರಿ ,ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿ ನಾಡಿಗೆ ಸಾಂಸ್ಕೃತಿಕ ನ್ಯಾಯವನ್ನು ಒದಗಿಸಿದ ಜ್ಞಾನದ ಮಹಾ ಶಿಖರವದು.ಅದನ್ನು ಕುರಿತು 'ಕವಿಶೈಲದ ಕವಿತೆಗಳ'ನ್ನು ರಚಿಸಿದ್ದೇನೆ.'ಜೋಳಿಗೆ' ಬಿಸಿಲ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯುತ್ತಿದೆ.  ಇವೆರಡರ ಹೋಲಿಕೆಗಿಂತ  ಎರಡಕ್ಕೂ ತಮ್ಮದೇ  ಆದ ಪ್ರಾದೇಶಿಕ ಅನನ್ಯತೆಯಿದೆ.ಮಹತ್ವವಿದೆ.
ಪ್ರಶ್ನೆ : ಉತ್ತರ ಕರ್ನಾಟಕಕ್ಕೆ ತಮ್ಮ ಅಕಾಡೆಮಿಯಿಂದ ರೂಪಿಸಲಾದ ಕಾರ್ಯಕ್ರಮಗಳೇನು?
ರಘುಜಿ : ಉತ್ತರ ,ದಕ್ಷಿಣ ಎಂಬ ಭೇದಭಾವ ಅಕಾಡೆಮಿಗಿಲ್ಲ. ಅಖಂಡ ನಾಡಿನ ತುಂಬ ರಂಗಭೂಮಿ ಕಲರವವನ್ನು ನಿತ್ಯ ನೂತನವಾಗಿಡುವುದು ಅಕಾಡೆಮಿಯ ಉದ್ದೇಶಗಳಲ್ಲೊಂದು.ಉದಾ ಗೆ ಕಲಬುರ್ಗಿಯಲ್ಲಿ   ಒಂದು ತಿಂಗಳ ಕಾಲ ರಂಗಶಿಬಿರ ವನ್ನು  ಹಮ್ಮಿಕೊಂಡು ಸ್ಥಳೀಯ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ನೀಡಿ ಎರಡು ಮೂರು ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.ಹೀಗೆ ಚಿತ್ರದುರ್ಗ, ಮೈಸೂರು,ಬೆಂಗಳೂರು, ಶಿವಮೊಗ್ಗ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ೧೦ ಕ್ಕಿಂತಲೂ ಹೆಚ್ಚು ರಂಗ ಶಿಬಿರಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.ಹೀಗೆ ಪ್ರತಿ ಜಿಲ್ಲೆ, ಪ್ರತಿ ತಾಲೂಕುಗಳಲ್ಲಿ ಅಕಾಡೆಮಿಯ ಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದೆ.ಬಾಗಲಕೋಟೆಯಲ್ಲಿ ಮೊನ್ನೆ ತಾನೆ  ವರ್ಷದ  ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿ ರಂಗಸಾಧಕರನ್ನು ಗೌರವಿಸಲಾಗಿದೆ.

ಪ್ರಶ್ನೆ : ಯುವವಿದ್ಯಾರ್ಥಿಗಳಿಗಾಗಿ ಅಕಾಡೆಮಿ ಯಾವ  ಯೋಜನೆಗಳನ್ನು ಹಾಕಿಕೊಂಡಿದೆ?
ರಘುಜಿ: ಈಗಾಗಲೇ ಹೇಳಿದಂತೆ ರಂಗಶಿಬಿರಗಳು ,ಕಾಲೇಜುಗಳಲ್ಲಿ ನಾಟಕ ಪ್ರಯೋಗ,೪೫ ರಷ್ಟು  ಫೆಲೋಶಿಪ್ ಗಳನ್ನು ಕೊಡುವುದು, ಸಂಶೋಧನಾ ಕಮ್ಮಟಗಳನ್ನೇರ್ಪಡಿಸುವುದು,ನಾಟಕ ರಚನೆ ಸ್ಪರ್ಧೆಗಳಂತಹ ಕಾರ್ಯಕ್ರಮಗಳ ಮೂಲಕ ಯುವ ಮನಸ್ಸುಗಳನ್ನು ನಾಟಕದತ್ತ ಸೆಳೆಯಲಾಗುತ್ತಿದೆ.
ಪ್ರಶ್ನೆ : ನಾನು ಗುಳೇದಗುಡ್ಡ ದವನಾಗಿದ್ದರಿಂದ ಈ ಪ್ರಶ್ನೆ.ಗುಳೇದಗುಡ್ಡ ವು "ಕರ್ನಾಟಕದ ಷೇಕ್ಸಪಿಯರ್ " ಎಂದೇ ಖ್ಯಾತರಾದ  ಕಂದಗಲ್ಲ ಹನಮಂತರಾಯರು, ಪಿ ಬಿ ಧುತ್ತರಗಿ ಯವರಂತಹ ರಂಗಕರ್ಮಿಗಳ ರಂಗಭೂಮಿಯಾಗಿತ್ತು.ಇಂತಹ ಸಾಂಸ್ಕೃತಿಕವಾಗಿ ಶ್ರಿಮಂತವಾದ ಗುಳೇದಗುಡ್ಡದಲ್ಲಿ  ಕಂದಗಲ್ಲ ಹನಮಂತರಾಯರ ಬಯಲು ರಂಗಮಂದಿರ ಕಟ್ಟಡ  ಅಪೂರ್ಣವಾಗಿದ್ದು ದುಸ್ಥಿತಿಯಲ್ಲಿದೆ.ಇಂತಹ ರಂಗಸ್ಥಾವರಗಳ ಪುನಶ್ಚೇತನಕ್ಕೆ  ಅಕಾಡೆಮಿಯಿಂದ ಕೈಗೊಳ್ಳುವ ಕ್ರಮಗಳೇನು?
ರಘುಜಿ: ನಾಟಕ ಅಕಾಡೆಮಿ ನಾಟಕದ  ಅಕಾಡೆಮಿಕ್ ಸಂಗತಿಗಳಿಗೆ ಆದ್ಯತೆ ನೀಡುತ್ತಿದ್ದು, ಸರಕಾರದಿಂದ ದೊರಕುವ  ಮಿತವಾದ ಅನುದಾನದಲ್ಲಿ ಥಿಯೇಟರ್ ಗಳ ನಿರ್ಮಾಣ, ದುರಸ್ತಿ,ಪುನಶ್ಚೇತನಕ್ಕೆ ಅವಕಾಶವಾಗುವುದಿಲ್ಲ.ಆದಾಗ್ಯೂ ಇಂತಹ ರಂಗಸ್ಥಾವರಗಳ ನಿರ್ಮಾಣಕ್ಕೆ  ಪ್ರಸ್ತಾವನೆ ಸಲ್ಲಿಸಿದರೆ ಅಕಾಡೆಮಿ ಮೂಲಕ ಸರಕಾರಕ್ಕೆ ತಲುಪಿಸಿ ಒತ್ತಡ ಹಾಕಲಾಗುವುದು.

ಪ್ರಶ್ನೆ : ನಮ್ಮ ನಾಡಿನ ಹೆಸರಾಂತ ನಾಟಕಕಾರರು ಹಾಗೂ ರಂಗಕರ್ಮಿಗಳ ಕುರಿತು ನಾಟಕ  ಅಕಾಡೆಮಿ ಯಾವ ಕಾರ್ಯಯೋಜನೆ ರೂಪಿಸಿದೆ?
ಉತ್ತರ: "ರಂಗಸಂಪನ್ನರು"ಮಾಲಿಕೆಯಲ್ಲಿ ನಾಡಿನ ಹಿರಿಯ ರಂಗವಿದ್ವಾಂಸರ ಜೀವನ ಮತ್ತು  ಸಾಧನೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಕುರಿತು ಪುಸ್ತಕಗಳನ್ನು ಪ್ರಕಟಿಸಿದೆ ರಂಗಕರ್ಮಿಗಳ ಸಾಕ್ಷ್ಯಚಿತ್ರ, ಜಿಲ್ಲಾರಂಗ ಮಾಹಿತಿ ಸಂಪುಟ ಪ್ರಕಟಣೆ  ಯಂತಹ ಮಹತ್ವದ ಯೋಜನೆಗಳನ್ನು ಅಕಾಡೆಮಿ ಹಾಕಿಕೊಂಡಿದೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ  ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು    ಹಮ್ಮಿಕೊಂಡು ಅವರಿಂದ ಪ್ರಸಿದ್ಧ ನಾಟಕಕಾರರ ನಾಟಕಗಳನ್ನು ರಂಗಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ.ಇತ್ತೀಚೆಗೆ ಕಲಬುರ್ಗಿಯಲ್ಲಿ ಇಂತಹುದೇ ತರಬೇತಿ ಕಾರ್ಯಾಗಾರದ ಮೂಲಕ. ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಎರಡು ಮೂರು ನಾಟಕಗಳನ್ನು ಯಶಸ್ವಿಯಾಗಿ  ಪ್ರಯೋಗಿಸಲಾಗಿದೆ.
      ಹೀಗೆ  ಹೊಂಬಣ್ಣದ ಸೂರ್ಯ ಮರೆಯಾಗುವುದರೊಂದಿಗೆ  ಸಂದರ್ಶನವೂ ಮುಕ್ತಾಯವಾಯಿತು.

        ಅಂದೇ ರಾತ್ರಿ ಚಡಚಣದ ಜನರು ಜಾತ್ರೆಯ ನಿಮಿತ್ತ ಹಮ್ಮಿಕೊಂಡ "ಇಂದ್ರಜಿತ್ ಕಾಳಗ " ಎಂಬ ಅಪರೂಪದ ಬಯಲಾಟವನ್ನು ಕಣ್ತುಂಬಿಕೊಳ್ಳುವ ಸದಾವಕಾಶ ನನಗೆ ದೊರೆಯಿತು.ಆ ಬಯಲಾಟದ ಉದ್ಘಾಟಕರಾಗಿ ರಾಗಂ ರವರು ಮುಖ್ಯ ಅತಿಥಿಗಳಾಗಿ ಶ್ರೀ ಬೇಲೂರು ರಘುನಂದನ್ ರವರು ಭಾಗವಹಿಸಿದರು .ಬಯಲಾಟಗಳು ತಮ್ಮ ಜನ್ಮಸ್ಥಳದಲ್ಲಿಯೇ  ಇಂದು  ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ  ಇಂತಹ  ಗಡಿನಾಡಿನಾಡಿನಲ್ಲಿಯೂ  ಕನ್ನಡ ಜಾನಪದ ರಂಗಭೂಮಿ ಜೀವಚೈತನ್ಯದಿಂದ  ಕಂಗೊಳಿಸುತ್ತಿದ್ದ ಪರಿ ಅಪೂರ್ವವಾಗಿತ್ತು.ದೊಡ್ಡಾಟದ ಆ ದೃಶ್ಯ ವೈಭವ ಮನ ಮೋಹಕವಾಗಿತ್ತು.ಜ್ಞಾನಿಗಳ ಸಂಗ ದಿಂದ ಜ್ಞಾನದ ಹೆಜ್ಜೇನಿನ ಜೊತೆಗೆ ದೊಡ್ಡಾಟದ ಸವಿಯೂ ದಕ್ಕಿದ್ದು ನನ್ನ ಯೋಗಾಯೋಗ.











1 comment:

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...