Total Pageviews

Sunday 29 April 2018

ನದಿಯಾದವರು...ಕಾಡುಮಲ್ಲಿಗೆಯಾದವರು...

ನದಿಯಾದವರು...ಕಾಡುಮಲ್ಲಿಗೆಯಾದವರು...
                           ನೆಲ ಮೂಲ ಸಂಸ್ಕೃತಿಗೆ ಅಂಟಿಕೊಂಡು ಬರೆದ ನಮ್ಮ ನೆಲದ ಲೇಖಕಿಯರಲ್ಲಿ ಶ್ರೀಮತಿ ಕಸ್ತೂರಿಬಾಯಿ ಶಂಕರ ಬಾಯೆರಿ ಯವರು ಸ್ತ್ರೀ ಸಂವೇದನೆಗಳ ಸಶಕ್ತ ಲೇಖಕಿಯಾಗಿ ,ತಾವು ಬದುಕುತ್ತಿರುವ "ನೆಲದ ಮರೆಯ ನಿದಾನ"ದಂತೆ ಸಾಹಿತ್ಯ ದೇವಿಯ ಸೇವೆಯಲ್ಲಿ ತಮ್ಮನ್ನು ಸಮೃದ್ಧವಾಗಿ ತೊಡಗಿಸಿಕೊಂಡವರು. ತಾವು ಬರವಣಿಗೆ ಪ್ರಾರಂಭಿಸಿದ ೫೨ ನೇ ವಯಸ್ಸಿನಿಂದ ಎಂದರೆ ೨೦೦೮ ರಿಂದ ಇಲ್ಲಿಯವರೆಗಿನ ಒಂದೇ ದಶಕದ ಅಲ್ಪಾವಧಿಯಲ್ಲಿಯೇ ಸುಮಾರು ೨೬ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಶಬ್ದ ತಪಸ್ವಿ ಬಾಯೆರಿಯವರು. ಸಾಹಿತ್ಯ ಸರಸ್ವತಿಯೊಲಿದ ನಮ್ಮ ಬಯಲುಸೀಮೆಯ ಅದರಲ್ಲೂ ಚಾಲುಕ್ಯರಾಳಿದ ಉದಾತ್ತ ಸಂಸ್ಕೃತಿಯ ಪುಣ್ಯಭೂಮಿ "ವಾತಾಪಿ"(ಬದಾಮಿ)ಯ ಸತ್ವಶಾಲಿ,ವಿರಳ,ಅಪರೂಪದ ಕಥೆಗಾರ್ತಿ,ಕವಯಿತ್ರಿ,ಅಂಕಣಗಾರ್ತಿ,ಅನುವಾದಕರು ಶ್ರೀಮತಿ ಕಸ್ತೂರಿ ಶಂಕರ ಬಾಯೆರಿ ಯವರಿಗೆ ೨೦೧೬ -೧೭ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ.
 
                  ಈ ಸಂಭ್ರಮವೇ ನಮ್ಮನ್ನು ಬಾಯೆರಿಯವರ ಕಸ್ತೂರಿ ನಿವಾಸ "ಕಾತ್ಯಾಯಿನಿ"ಗೆ ಭೇಟಿ ನೀಡುವಂತೆ ಮಾಡಿತ್ತು.ದಿನಾಂಕ ೨೯/೪/೨೦೧೮ ಭಾನುವಾರ ಸೃಜನಶೀಲ ಸಾಹಿತ್ಯ ಬಳಗ ಗುಳೇದಗುಡ್ಡ ತಾಲೂಕಾ ಘಟಕ ದ ವತಿಯಿಂದ ಶ್ರೀಮತಿ ಕಸ್ತೂರಿಬಾಯಿ ಬಾಯೆರಿ ಯವರಿಗೆ ಪುಟ್ಟ ಗೌರವ ಸಮರ್ಪಣೆಯ ಸುಸಂದರ್ಭ. ಕಾಡುತ್ತಿರುವ ಕಾಯಿಲೆಯಿಂದಾಗಿ ಸಾಕಷ್ಟು ಬಳಲಿದಂತೆ ಕಂಡರೂ,ಸ್ವತಃ ಬಾಗಿಲಿಗೆ ಬಂದು  ನಮ್ಮನ್ನು  ಸ್ವಾಗತಿಸಿದ ಬಾಯೆರಿಯವರ ಪುಟಿಯುವ ಜೀವನೋತ್ಸಾಹ ಅದಮ್ಯವಾದದ್ದು.ಬಳಗದ ಸಲಹಾ ಸಮಿತಿಯ ಸದಸ್ಯರಲ್ಲೊಬ್ಬರಾದ ನಾಡಿನ ಪ್ರಸಿದ್ಧ ಕವಿ ದಿ .ಎಸ್ ಎಸ್ ಬಸುಪಟ್ಟದ ರವರ ಸುಪುತ್ರರಾದ  ಡಾ .ರಾಜಶೇಖರ ಬಸುಪಟ್ಟದ ರವರಿಂದ ಬಾಯೆರಿಯವರಿಗೆ ಗೌರವ ಸಮರ್ಪಣೆ.ನಂತರ ನಡೆದಿದ್ದು ಸಾಂಸ್ಕೃತಿಕ  ನದಿಯೊಂದು ನಿಶಾಂತವಾಗಿ ಪ್ರವಹಿಸಿದ,ವೈಶಾಖದ ಧಗೆಯಲ್ಲೂ ಕಾವ್ಯ ತಂಪನು ಸಿಂಚನಗರೆದ ಸಾಹಿತ್ಯ,ಕಲೆ,ಕಲಾವಿದ,ನೆಲ,ಜಲ,ಗಾಳಿ,ಬೇವು,ವೈಶಾಖ,ವಿಶಾಖ, ಕವಿತೆ,ಕತೆ,ವಿಮರ್ಶೆಯ ಸ್ಥಿತಿಗತಿ,ಜಾತಿನಿರಸನ,ಓದು,ನೀಲಾಂಬಿಕೆ, ಗಂಗಾಂಬಿಕೆ,ಬಸವಣ್ಣ, ಕಲ್ಯಾಣ ಕ್ರಾಂತಿ,ಪ್ರಶಸ್ತಿ ,ಕಾವ್ಯಧಾರೆ,ಕುರಿತು ನಿರರ್ಗಳ  ಅನುಭವದ ಅನುಭಾವ.
                ಕಸ್ತೂರಿಬಾಯಿ ಬಾಯೆರಿ ಯವರು ೧೯೫೬ ಎಪ್ರಿಲ್ ೨೭ ರಂದು ಉಡುಪಿ ಜಿಲ್ಲೆಯ ಶಾಸ್ತಾನದ  ಕರಾವಳಿ ಸಂಸ್ಕೃತಿಯಲ್ಲಿ ,ಕರ್ನಾಟಕ ಏಕೀಕರಣ ಚಳುವಳಿ ಮುಗಿದು ಕನ್ನಡ ನಾಡು ಉದಯವಾಗುತ್ತಿದ್ದ ಅರುಣೋದಯದ ಶುಭಗಳಿಗೆಯ ಹೊಸ್ತಿಲಲ್ಲಿ, ಜನ್ಮತಾಳಿ, ಅಲ್ಲಿಂದ ಬಯಲುಸೀಮೆಗೆ ಪ್ರವಹಿಸಿ,ಇಲ್ಲಿಯ ನೆಲಮೂಲ ಸಂಸ್ಕೃತಿಯ ಸೊಗಡನ್ನು ತನ್ನಲ್ಲಿ ಕರಗತಗೊಳಿಸಿಕೊಂಡು, ನಾಡಿನ ಸಹೃದಯರಿಗೆಲ್ಲ ಅದರ ಸವಿಯನ್ನು ಕತೆ,ಕಾವ್ಯ, ಪ್ರಬಂಧ,ಭಾಷಾಂತರ ,ಅಂಕಣ ಸಾಹಿತ್ಯದ ಮೂಲಕ ಉಣಬಡಿಸುತ್ತಾ ಸ್ವತಃ "ನದಿಯಾದವರು".( 'ನದಿಯಾದವಳು '  -ಕವನ ಸಂಕಲನ ). ತಂದೆ ಶಂಕರ, ತಾಯಿ ಕಾತ್ಯಾಯಿಣಿಯ ಮಗಳಾಗಿ "ಬೆಳೆಯುವ ಸಿರಿ ಮೊಳಕೆಯಲ್ಲಿಯೇ ನೋಡು" ಎನ್ನುವಂತೆ ಚಿಕ್ಕಂದಿನಲ್ಲಿಯೇ ತಮ್ಮ ಅಜ್ಜಯ್ಯನಿಗೆ ಎಲೆಗಳ ಮೇಲೆ ಚಿತ್ತಾರ ಬಿಡಿಸಿ ಇದೇ  ಕವಿತೆ ಎಂದು ತೋರಿಸಿ ಆಗಲೇ ಕಾವ್ಯದೇವಿಯನ್ನು ಆಹ್ವಾನಿಸಿದ್ದವರು   ಬಾಯೆರಿಯವರು.
               'ನದಿಯಾದವಳು','ಗಂಧವತಿ','ನೀ ತೆರೆದ ಆಕಾಶ','ನೀಲಿ ಆಕಾಶಕ್ಕೆ ರೆಕ್ಕೆಗಳ ಬಿಚ್ಚಿ','ಕಾತ್ಯಾಯಿನಿ','ಇನಕ್ರೆಡಿಬಲ್ ವೈಸಸ್' ಮುಂತಾದ ಹತ್ತು ಕವನ ಸಂಕಲನಗಳು ಹಾಗೂ 'ಥೈರಾಯಿಡ್​ ಮತ್ತು ಪಾಂಚಾಲಿ' ','ಹಲವು ಮಕ್ಕಳ ತಾಯಿಬೇರು','ಒಂದೇ ಕಾಂಡದ ಖುರ್ಚಿ','ದಿಂಡಿ','ಕಲ್ಲಾದಳು ಅಹಲ್ಯೆ','ಎರಡು ರೆಕ್ಕೆಗಳು' ಮುಂತಾದ ಹತ್ತು ಕಥಾ ಸಂಕಲನಗಳು,ಅನುವಾದ,ಅಂಕಣ, ಪ್ರಬಂಧ ರಚಿಸಿದ ನಮ್ಮ ಭಾಗದ " ಸಾಹಿತ್ಯ ರತ್ನ" ಶ್ರೀಮತಿ ಕಸ್ತೂರಿಬಾಯಿ ಬಾಯೆರಿವರು.               ಬದುಕಿನಲ್ಲಿ ಎಷ್ಟೋ ನೋವು ಸಂಕಟಗಳಿದ್ದರೂ              "ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.            ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.             ಆನಂದಮಯ ಈ ಜಗ ಹೃದಯ..."  ಎಂಬ ಕುವೆಂಪುರವರ ಕವಿತೆಯ ಆಶಯದಂತೆ ಬದುಕು ನೀಡುವ ಸುಖ ,ಸೌಂದರ್ಯ ಅನುಪಮವಾದದ್ದು ಎಂಬ ಬದುಕಿನ  ಸೌಂದರ್ಯ ಮೀಮಾಂಸೆ ಬಾಯರಿಯವರದ್ದು.
                    "ಈ ಬದುಕು ಒಂದು ಮೆರವಣಿಗೆ                     ಹೆಜ್ಜೆ ಹಾಕಲಾಗದವರು                  ಮೆಲ್ಲಕೆ, ಕಳ್ಳ ಹೆಜ್ಜೆಗಳಿರಿಸಿ ಹಿಂದೆ ಸರಿವರು                  ಪಕ್ಷಕ್ಕೆ ಚಲಿಸುವ ಸೂರ್ಯಕಾಂತಿಯ ಹಾಗೆ"                                               (ಸಮುದ್ರಗೀತೆ)     ಎಂದು  ಹಿಂದೆ ಸರಿದವರನ್ನೂ  ಬಳಿ ಕರೆದು  ಬಳಗ ಕಟ್ಟಿದವರು ಬಾಯೆರಿಯವರು ಎನ್ನತ್ತಾರೆ ಡಾ. ರಾಜಶೇಖರ ಮಠಪತಿಯವರು.(ರಾಗಂ)                ಬದುಕು ಪ್ರೀತಿ - ದ್ವೇಷ,ಪ್ರಶ್ನೆ-ಉತ್ತರ,ಎಂಬ ವೈರುಧ್ಯ ಕ್ಷಣಗಳ  ಸುಂದರ ಸಂಗಮ. ಬರುವುದನ್ನೆಲ್ಲಾ ನಿರ್ಮಲ ಭಾವದಿಂದ ಆನಂದಿಸಿ ಸ್ವೀಕರಿಸಬೇಕು  ಎನ್ನುವುದು ಕಸ್ತೂರಿಬಾಯಿ ಬಾಯೆರಿಯವರ  ಜೀವನ ಕುರಿತಾದ ತತ್ವಜ್ಞಾನ. ಬಾಯೆರಿಯವರು "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ" ಎಂಬ ಬಸವಣ್ಣನವರ ಹಾಗೂ "ಕುಲ ಕುಲ ಕುಲವೆಂದು ಬಡಿದಾಡದಿರಿ        ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ"    ಎಂಬ ಕನಕದಾಸರ ಮತದಂತೆ ಕವಿಯಾದವನು ಜಾತಿ,  ಧರ್ಮ, ಮತ ,ಲಿಂಗ,ಪಂಗಡ ಭೇದಗಳಿಗೆ ಆತೀತನಾಗಿರಬೇಕು ಎಂದು ಪ್ರತಿಪಾದಿಸುತ್ತಾರೆ.
"ನವೋದಯ ನವ್ಯ ಬಂಡಾಯಗಳ ಎಳೆಎಳೆಗಳನ್ನೂ ತೆಗೆದುಕೊಂಡು ಸೊಗಸಾದ ಕಾವ್ಯ ಕಸೂತಿ ಹೆಣೆದ ಬಾಯೆರಿಯವರು ಈ ಮಿಶ್ರಣದಿಂದಾಗಿ ಭಿನ್ನವಾಗುತ್ತಾರೆ."ಎಂದು ಬಾಯೆರಿಯವರ ಕಾವ್ಯ ಕಲೆಯನ್ನು ಡಾ.ರಾಜಶೇಖರ ಮಠಪತಿಯವರು ಬಣ್ಣಿಸುತ್ತಾರೆ.                        "ಅಮ್ಮ ಹೇಳುತ್ತಿದ್ದಳು,                    ಹರಿಯುವ ನದಿಯಾಗು ಮಗಳೇ                   ಹಾಕಿದ ಪಾತ್ರೆಯ ಅಳತೆಯಾಗು,ಮತ್ತೆ                     ಚೆಲ್ಲಿದರೆ ಸೋರಿ ಆವಿಯಾಗು                   ಮೋಡ ತೇಲಿ ಭೋರೆಂದು ಸುರಿದು                         ಹಗುರಾದ ನದಿಯಾಗು                   ಮೆಚ್ಚಿದ ಮಲ್ಲನ ಎದೆಯ ಮಲ್ಲಿಗೆಯಾಗು "                          ('ನದಿಯಾದವಳು' ಕವನ ಸಂಕಲನದಿಂದ)ಎಂದು   ಬಾಯೆರಿಯವರು  ತಾವು ನೆಲೆನಿಂತ ನೆಲದ ಸಂಸ್ಕೃತಿಯ ,ಸಾಹಿತ್ಯಗಂಗೆಯಾಗಿ ಹರವು ಪಡೆಯುತ್ತಾರೆ.                 ದೈಹಿಕವಾಗಿ ಬಳಲುತ್ತಿದ್ದರೂ,ಅವರ ಚೈತನ್ಯಶೀಲ  ಮನಸ್ಸು ಸದಾ ಸಾಹಿತ್ಯ ಸೃಷ್ಟಿಗಾಗಿ ತುಡಿಯುತ್ತಿರುತ್ತದೆ ಎನ್ನುವುದಕ್ಕೆ ಅವರು ಬರೆಯ ಹೊರಟಿರುವ  ಕಲ್ಯಾಣದ ಕ್ರಾಂತಿ ಪುರುಷ ಬಸವಣ್ಣನವರ ಎರಡು ಕಣ್ಣುಗಳಂತಿದ್ದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ಅಂತಃಶಕ್ತಿ ಕುರಿತಾದ ಹೊಸ ನಾಟಕ "ನೀಲಗಂಗಾ"ಕೃತಿ ಸಾಕ್ಷಿಯಾಗಿದೆ. ಬಾಯೆರಿಯವರಿಗೆ ಮುಂಬೈ ಕರ್ನಾಟಕ ಲೇಖಕಿಯರ ಸಂಘ,ಕರ್ನಾಟಕ ಲೇಖಕಿಯರ ಸಂಘ,ಹಾಸನ ಲೇಖಕಿಯರ ಸಂಘ ದ ಪ್ರಶಸ್ತಿಗಳು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ವರ್ಧಮಾನ ಪ್ರಶಸ್ತಿ,ಸುವರ್ಣ ನ್ಯೂಸ್ ಕನ್ನಡಪ್ರಭ ಜಂಟಿ ಮಹಿಳಾ ಸಾಧಕಿ ಪ್ತಶಸ್ತಿ,ಬದಾಮಿ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವಗಳು ಇವರ ಸಾಧನೆಗೆ ಒಲಿದು ಬಂದಿವೆ .ಇವರ ಸಾಹಿತ್ಯ ಕುರಿತು ಈಗಾಗಲೇ  ಆರು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ.  ಕರ್ನಾಟಕ ವಾರ್ತಾ ಇಲಾಖೆ ಬಾಯೆರಿಯವರನ್ನು ಕುರಿತು 'ಸಾಕ್ಷ್ಯ ಚಿತ್ರ'  ನಿರ್ಮಾಣದ ಗೌರವ ನೀಡಿದೆ. 
                ಭಗವಂತ ಶ್ರೀಮತಿ ಕಸ್ತೂರಿಬಾಯಿ ಬಾಯೆರಿಯವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲಿ. ಅವರ ಕೃತಿಗಳಿಂದ ಕನ್ನಡ ಸಾರಸ್ವತ ಲೋಕ ಮತ್ತಷ್ಟು ಶ್ರೀಮಂತವಾಗಲಿ.


3 comments:

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...