Total Pageviews

Wednesday 25 April 2018

ಪುಸ್ತಕದಪುಂಜದ ಬೆಳಕಿನಲ್ಲಿ..

'ಪುಸ್ತಕಪುಂಜ'ದ ಬೆಳಕಿನಲ್ಲಿ.....

           ಪುಸ್ತಕಗಳು ನಾಗರಿಕ ಸಂಸ್ಕೃತಿಯ ಮಹತ್ವದ ದಾಖಲೆಗಳಾಗಿವೆ.ಅವು ಜನ ಸಂಸ್ಕೃತಿಯ ದರ್ಶನದ ಪ್ರತಿಬಿಂಬಗಳಾಗಿವೆ.ಒಂದು ದೇಶದ ಸಾಂಸ್ಕೃತಿಕ  ಸುಭಿಕ್ಷೆಯನ್ನು ಅಲ್ಲಿಯ ಶಿಕ್ಷಣ ಹಾಗೂ ಗ್ರಂಥಭಂಡಾರಗಳಿಂದ   ನಿರ್ಣಯಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ.ಜಗತ್ತಿನ ಪ್ರಾಚೀನ ವಿಶ್ವವಿದ್ಯಾಲಯಗಳಾದ ತಕ್ಷಶಿಲೆ, ಹಾಗೂ ನಳಂದಾ  ವಿದ್ಯಾಕೇಂದ್ರಗಳು  ತಮ್ಮ  ಕಾಲವನ್ನು ಸಾಂಸ್ಕೃತಿಕವಾಗಿ ಸುವರ್ಣಯುಗವನ್ನಾಗಿ ರೂಪಿಸಿದ್ದವು. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿ ಅದಕ್ಕೊಂದು ಕಲಾಕೃತಿಯ ಸೌಂದರ್ಯವನ್ನು ನೀಡಬಹುದಾದ ಶಕ್ತಿ ಇರುವುದು ಪುಸ್ತಕಗಳಿಗೆ ಮಾತ್ರ. ಪುಸ್ತಕಗಳು  ಮನುಷ್ಯನ ವ್ಯಕ್ತಿತ್ವಕ್ಕೆ   ಸೂರ್ಯನ ಬೆಳಕಿನಷ್ಟೇ ಪ್ರಖರವಾದ ಪ್ರಜ್ವಲಿಸುವ ಮೆರಗನ್ನು ನೀಡುತ್ತವೆ. ಮಸ್ತಕಕ್ಕೆ ಜೀವದ್ರವ್ಯವನ್ನು ಪ್ರವಹಿಸಿ ಚೈತನ್ಯಶೀಲತೆ, ಕ್ರಿಯಾಶೀಲತೆಯನ್ನು ಪ್ರದಾನಿಸುತ್ತವೆ.
                    ಪುಸ್ತಕಗಳಲ್ಲಿ ಪ್ಲೇಟೋ ,ಅರಿಸ್ಟಾಟಲ್,ಸಾಕ್ರಟೀಸ್  ರಂತಹ ವಿದ್ವಾಂಸರ ತತ್ವಜ್ಞಾನವಿದೆ.ಕೀಟ್ಸ್ , ಶೆಲ್ಲಿ,ಬೈರನ್  ರಂತಹ ಕವಿ ಕಾವ್ಯಗಳ ರಮ್ಯತೆಯಿದೆ . ಅರಬಿಂದೊ,ರವೀಂದ್ರನಾಥ ಟ್ಯಾಗೋರ್ ರಾಮಕೃಷ್ಣ ಪರಮಹಂಸ ರಂತಹ ಪರಮಜ್ಞಾನಿಗಳ ದಾರ್ಶನಿಕತೆಯಿದೆ.ಗುಪ್ತರು,ಮೌರ್ಯರ,ಕದಂಬ,ಚಾಲುಕ್ಯ ರಾಷ್ಟ್ರಕೂಟ ಸಾಮ್ರಾಜ್ಯಗಳ ವೈಭವದ ರೋಚಕ  ಇತಿಹಾಸವಿದೆ. ಪಂಪ, ರನ್ನ, ಬಸವಣ್ಣ, ಹರಿಹರ, ಗೋವಿಂದ ಪೈ, ಬಿ ಎಂ ಶ್ರೀ,ಕುವೆಂಪು ಬೇಂದ್ರೆ ಯವರಂತಹ ಕವಿಪುಂಗವರು ಸಾರಿದ ಮಹೋನ್ನತ ಸಂಸ್ಕೃತಿಯ ಮೌಲ್ಯಗಳಿವೆ. ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಾದ ಆವಿಷ್ಕಾರಗಳ ಮೈಲುಗಲ್ಲುಗಳಿವೆ.   ಹೀಗೆ ಪುಸ್ತಕಗಳಲ್ಲಿ ಸರ್ವಾಂತರ್ಯಾಮಿ ಜ್ಞಾನವಿದೆ.
               
ನನ್ನನ್ನು  ಅತಿಯಾಗಿ  ಕಾಡಿದ ಪುಸ್ತಕಗಳಲ್ಲಿ ಶಿವರಾಮ ಕಾರಂತರ.ಆತ್ಮಕತೆ "ಹುಚ್ಚುಮನಸ್ಸಿನ ಹತ್ತುಮುಖಗಳು" ಪುಸ್ತಕವೂ ಒಂದು.ಶಿವರಾಮ ಕಾರಂತರ ಸಾಹಿತ್ಯ,ಕಲೆ, ವಿಜ್ಞಾನ,ಶಿಕ್ಷಣ,ಚಲನಚಿತ್ರನಿರ್ದೇಶನ,  ನಟನೆ ಪರಿಸರ ಪ್ರೇಮ, ಯಕ್ಷಗಾನ ಕಲೆಗಳ  ಕಡೆಗಿನ ಅವರ ಶತಮುಖಿ ಪ್ರತಿಭೆ, ಕಂಡಿದ್ದೆಲ್ಲವನ್ನೂ ಪ್ರಯೋಗಶೀಲ ಮನಸ್ಸಿನಿಂದ ಪರಿಶೀಲಿಸುವ ಚಿಕಿತ್ಸಕ ಗುಣ, ಅದಮ್ಯ ಜೀವನ ಪ್ರೀತಿ,ಬದುಕಿನ ಪ್ರತಿ ಕ್ಷಣವನ್ನೂ ಸಂಭ್ರಮಿಸಿ ಸಾರ್ಥಕ ಮಾಡಿಕೊಳ್ಳುವ ಅನನ್ಯ ಬಯಕೆಗಳ ಕಾರಂತಜ್ಜರಿಗೆ ಜಗತ್ತೇ ಪ್ರಯೋಗಶಾಲೆ. ಜೀವನಾನುಭವಗಳೇ ಅವರ ಚಿರಂತನ ಶಕ್ತಿಯಾಗಿದ್ದವು. ಕಾಣುವ ಬೆಟ್ಟ ಗುಡ್ಡ ಬಯಲುಗಳನ್ನೆಲ್ಲಾ ಸುತ್ತುವ ಯಾತ್ರಿಕ ಶಕ್ತಿ,ನಮ್ಮೂರಾದ ಗುಳೇದಗುಡ್ಡ ಕ್ಕೂ ಭೇಟಿ ನೀಡಿ ತಮ್ಮ ಕೃತಿಯಲ್ಲಿ ದಾಖಲಿಸುವಷ್ಟರ ಮಟ್ಟಿನ ಸವಿ ನೆನಪುಗಳನ್ನು ನೀಡಿದ ಅವರ ಅಲೆಮಾರಿತನ,ಗಳೆಲ್ಲವನ್ನೂ ಸಮೃದ್ಧವಾಗಿ ಬರಹಕ್ಕಿಳಿಸಿ, ಸಹೃದಯರ ಅಂತರಂಗದ ಚೈತನ್ಯಕ್ಕೆ ಉತ್ಸಾಹವನ್ನು ತುಂಬಿ, ಬದುಕಿದ ಒಂದೇ ಜನ್ಮದಲ್ಲಿ ನೂರು ಬದುಕಿಗಾಗುವಷ್ಟು ಅನುಭವಗಳನ್ನು ಎದೆಯಾಳದಲ್ಲಿ ತುಂಬಿಕೊಂಡು,ಸಾಹಿತ್ಯ ಸವಿಯನ್ನೆಲ್ಲ  ತನ್ನ ನಾಡಿಗೆ ಹಂಚುತ್ತ ಹೋದ" "ನಡೆದಾಡುವ ವಿಶ್ವಕೋಶವೇ "ಆಗಿದ್ದ  "ಜ್ಞಾನಜಂಗಮ"  ರು ಡಾ.ಶಿವರಾಮ ಕಾರಂತರು. ತಮ್ಮ "ಹುಚ್ಚು ಮನಸ್ಸಿನ ಹತ್ತು ಮುಖಗಳ"ನ್ನೆಲ್ಲ ಅವುಗಳ ವೈವಿಧ್ಯಮಯವಾದ ಅನುಭವದ ಬಣ್ಣಗಳೊಂದಿಗೆ ಚಿತ್ರಿಸಿರುವ ಚಿತ್ರ ಕಲಾಕೃತಿ ಓದುಗರ ಮನಸ್ಸನ್ನು ತನ್ನ ಪ್ರಭಾವಲಯದೊಳಕ್ಕೆ ಅರಿವಿಗೆ ಬಾರದಂತೆ ಸೆಳೆಯುತ್ತದೆ.
               ವಿಲಿಯಮ್ ಸ್ಟೈರನ್  "A great book should leave you with many experiences, and slightly exhausted at the end. You live several lives while reading."ಎಂದು ಹೇಳುವ ಹಾಗೆ ಜೀವನಕ್ಕೆ ಬಹುಮುಖಿ ನೆಲೆಗಳನ್ನು ಸೃಷ್ಟಿಸುವ ಶಕ್ತಿ ಇರುವುದು ಪುಸ್ತಕಗಳಿಗೆ.
             ಈ ಎಲ್ಲ ವೃತ್ತಾಂತಕ್ಕೆ ಕಾರಣವಾಗಿದ್ದು  ನಾನು ಭಾಗವಹಿಸಿದ ಎಪ್ರಿಲ್ ೨೩ ರಂದು ಸೃಜನಶೀಲ ಸಾಹಿತ್ಯ ಬಳಗ ಗುಳೇದಗುಡ್ಡ ತಾಲೂಕಾ ಘಟಕದ ವತಿಯಿಂದ ಶ್ರೀ ಶಿವಕೃಪಾ ರಂಗಮಂದಿರ ಗುಳೇದಗುಡ್ಡ ದಲ್ಲಿ ಹಮ್ಮಿಕೊಂಡ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮ.

             ೧೯೬೦ ರ ದಶಕದಿಂದಲೇ ಕಾವ್ಯದೇವಿಯ ಸೇವೆಯಲ್ಲಿ ತೊಡಗಿ ಇಲ್ಲಿಯವರೆಗೆ ಸುಮಾರು ೧೮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಹಾಗೂ ಅಖಂಡ ವಿಜಯಪುರ ಜಿಲ್ಲೆಯಲ್ಲಿಯೇ ಪ್ರಥಮ ಪಿ ಹೆಚ್ ಡಿ ಗೌರವಕ್ಕೆ ಪಾತ್ರರಾದ  ಡಾ.ಎಸ್ ಎಸ್ ಬಸುಪಟ್ಟದ ರವರ ಸಾಹಿತ್ಯಗರಡಿಯಲ್ಲಿ  ಪಳಗಿದ  ಗುಳೇದಗುಡ್ಡದವರಾದ ಸಾಹಿತಿ  ಶ್ರೀ ಮಲ್ಲಿಕಾರ್ಜುನ ಬನ್ನಿ ಯವರು ಮಾತನಾಡಿ  ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸಾಹಿತಿ ಚಿಂತಕ  ಬುದ್ದಣ್ಣ ಹಿಂಗಮಿರೆ, ಚೆನ್ನವೀರ ಕಣವಿ ಯವರಂತಹ ಹಿರಿಯ ಹೆಮ್ಮರಗಳ ಆಶ್ರಯದ ನೆರಳಲ್ಲಿ ಕಟ್ಟಿದ ಗೆಳೆಯರ ಬಳಗದಲ್ಲಿ ಭಾಗವಹಿಸಿ ಸಾಹಿತ್ಯದ ಮೊದಲ ಪಾಠಗಳನ್ನು ಕಲಿತ ಹೆಮ್ಮೆಯನ್ನು ಹಂಚಿಕೊಂಡದ್ದು ಔಚಿತ್ಯಪೂರ್ಣವಾಗಿತ್ತು ಹಾಗೂ ಅರ್ಥಪೂರ್ಣವಾಗಿತ್ತು.

              ನನ್ನನ್ನು ಕಾಡಿದ ಮತ್ತೊಂದು ಪುಸ್ತಕವೆಂದರೆ "ಓ ಮನಸೇ .."
ರವಿ ಬೆಳಗೆರೆ ಯವರ ಮಾಸಿಕ ಪತ್ರಿಕೆ ಯುವ ಮನಸ್ಸುಗಳನ್ನು ಸೂಜಿಗಲ್ಲಿನಂತೆ ಸೆರೆಹಿಡಿದು,ಅಬಾಲವೃಧ್ಧರಾದಿಯಾಗಿ ಎಲ್ಲರೂ  ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿ, ನಾಡಿನಾಚೆಯೂ  ದಂಡಯಾತ್ರೆ ಕೈಗೊಂಡ ಪುಸ್ತಕ ಓ ಮನಸೇ.....ನಮ್ಮ
ಮನಸುಗಳೊಂದಿಗೆ ಪಿಸು ಮಾತನಾಡುತ್ತಾ, ಹೃದಯದ ಭಾವನೆಗಳ ಭಿತ್ತಿಯಲ್ಲಿ ಸಂಚಲನ ಮೂಡಿಸುವ,ಸಂವೇದನೆಗಳ ಹಸಿವನ್ನು ಹಿಂಗಿಸುವ  ಮಹತ್ವದ ಪತ್ರಿಕೆಯಾಗಿ ಜನಮಾನಸದಲ್ಲಿ ನೆಲೆನಿಂತಿದೆ.

             ಇತ್ತೀಚೆಗೆ ನನ್ನನ್ನು ಬಹುವಾಗಿ ಸೆಳೆದ ಕೃತಿ ಡಾ.ರಾಜಶೇಖರ ಮಠಪತಿ (ರಾಗಂ) ರವರ   "ಜಾನ್ ಕೀಟ್ಸ್ ನೀರ ಮೇಲೆ ನೆನಪ ಬರೆದು......" ಕೃತಿ ನಮ್ಮನ್ನು ಕೀಟ್ಸ್ ನ ಕಾವ್ಯಲೋಕದ ಅಪ್ರತಿಮ ಹಂಬಲದೆಡೆಗೆ ನಿತ್ಯಧ್ಯಾನವನ್ನು ಮಾಡಿಸುತ್ತದೆ.ಕಾವ್ಯವ್ಯಸನಿ ಕೀಟ್ಸ್ ನ ಅಲ್ಪಾಯುಷ್ಯದ  ಬದುಕು ನೂರಾರು ವರ್ಷಗಳ  ದೀರ್ಘ ಕಾಲದ ನಂತರ ಬೆಳಕಿಗೆ ಬಂದು ಪಟ್ಟಭದ್ರ ವಿಮರ್ಶಕರ ಕೈಯ್ಯಲ್ಲಿ ನಲುಗಿದ ಮುಗ್ಧ ಜೀವವೊಂದರ ಕಾವ್ಯ ಮುಖದ ಅನಾವರಣ ಸಹೃದಯರನ್ನು  ಮರಳಿ ರೊಮ್ಯಾಂಟಿಕ್ ಯುಗಕ್ಕೆ ಕೊಂಡೊಯ್ಯುತ್ತದೆ.
   ಇಂಥಹ ಪುಸ್ತಕಗಳು ನಮ್ಮ ಬದುಕಿಗೆ ಜ್ಞಾನದ  ದಶದೀವಿಗೆಗಳನ್ನು ಬೆಳಗಿಸಿ ಅಂತರಂಗದ ಅಂಧಕಾರವನ್ನು ಕಳೆಯುವುದರಲ್ಲಿ ಸಂದೇಹವಿಲ್ಲ.

3 comments:

  1. ಪುಸ್ತಕಗಳು ಕೈಯಲ್ಲಿ ಹಿಡಿಯಬಹುದಾದ ದೇವಲೋಕದ ಪ್ರಜ್ವಲಿಸುವ ಜ್ಯೋತಿಗಳು, ವಿಶ್ವಪುಸ್ತಕದ ದಿನ ಪುಸ್ತಕ ಕೈಯಲ್ಲಿ ಹಿಡಿಯಲು ನೆನಪಿಸುವ ಲೇಖನ.��

    ReplyDelete
  2. ಪುಸ್ತಕದಂತೆ ನಿಷ್ಠಾವಂತರಾಗಿ ಇರುವಂತೆ ಯಾವುದೇ ಸ್ನೇಹಿತನೂ ಇಲ್ಲ ಆದ್ದರಿಂದ ನಾವು ಪುಸ್ತಕಕ್ಕೆ ವಿಧೇಯತೆಯನ್ನು ತೋರಿದರೆ ಅವು ನಮ್ಮನ್ನು ವಿನಯಶೀಲರನ್ನಾಗಿ ಮಾಡುವವು ಇದಕ್ಕೆ ಸಂದೇಹವಿಲ್ಲ.....

    ReplyDelete
  3. ನಾವು ಪುಸ್ತಕಗಳಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತೇವೆ. ನಮ್ಮಲ್ಲಿಯೂ ಕೂಡ ನಾವು ನಮ್ಮನ್ನು ಕಾಣುತ್ತೇವೆ.ಹಾಗಾಗಿ
    ಪುಸ್ತಕಗಳು ಎಂದಿಗೂ ಕಣ್ಮರೆಯಾಗುವುದಿಲ್ಲ ಅವು ನಮ್ಮ ಬದುಕಿನ ಕನ್ನಡಿ, ಬದುಕನ್ನು ಬೆಳಗಿಸುವ ಆಶಾ ದೀವಿಗೆಗಳಾಗಿವೆ.......*ESCN*

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...