Total Pageviews

Monday 15 January 2018

ಭೀಮಾ ತೀರದ ಬೆಳಕು ಭಾಗ ೨

ಭೀಮಾ ತೀರದ ಬೆಳಕು ಭಾಗ ೨
                                 'ಜೋಳಿಗೆ' ಯೆಂಬ ಕವಿಶೈಲ

                 ಅಂದು ದಿ.೧೪.೧.೧೮ ರ ರಾತ್ರಿ ೧೧ ಗಂಟೆಯ ಹೊತ್ತಿಗೆ ಗುರುಗಳಾದ ಡಾ.ರಾಜಶೇಖರ ಮಠಪತಿ (ರಾಗಂ) ರವರಿಗೆ ಸುಮ್ಮನೆ   ಫೋನಾಯಿಸಿದಾಗ  ಇಂಡಿ ತಾಲೂಕಾ ೧೦ ನೆಯ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಪರಿವರ್ತನೆಗೊಂದು ಹೆದ್ದಾರಿಯೆಂಬಂತಿದ್ದ, ದಿಕ್ಸೂಚಿಯಾಗಿರುವ ವಿಶಿಷ್ಟವಾದ ಆಮಂತ್ರಣ ಪತ್ರಿಕೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚಿಸಿದೆವು. ರಾಗಂವರು ಅಂದು "ಜೋಳಿಗೆ "(ರಾಗಂ ರವರು ಸ್ಥಾಪಿಸಿದ ಗ್ರಂಥಾಲಯ ಹಾಗೂ ಧ್ಯಾನಮಂದಿರ) ಯಲ್ಲಿದ್ದ ಸಂಗತಿ ತಿಳಿದು ತಡ ಮಾಡದೇ ಅವರ ಅನುಮತಿಗೂ ಕಾಯದೇ ಚಡಚಣಕ್ಕೆ ಹೊರಟು ನಿಂತೆ. 

               ಬೀಳಗಿಯ ನನ್ನ ಕಾಲೇಜಿನ ಕರ್ತವ್ಯ ಮುಗಿಸಿ ಮಧ್ಯಾಹ್ನ ೩ .೩೦ ರ ಹೊತ್ತಿಗೆ ವಿಜಯಪುರದ ಬಸ್ಸನ್ನೇರಿ ಕುಳಿತಾಗ ಅಲ್ಲಿಯವರೆಗೆ 'ಜೋಳಿಗೆ' ಯನ್ನು  ನೋಡಿರದಿದ್ದ ನನಗೆ ಆ ಸ್ಥಾವರ ವನ್ನು ಕುರಿತ  ನನ್ನ  ಕಲ್ಪನೆಯ  ಚಿತ್ರ ಚಿತ್ತಾರಗಳು ಮನಭಿತ್ತಿಯ ಮೇಲೆ ಪುಂಖಾನುಪುಂಖವಾಗಿ ಆಗಮಿಸಿ ಕುಣಿಯತೊಡಗಿದವು. ಸಮಾಧಾನಿಸಿದೆ, ಅನುಭವಿಸಿದೆ, ಆನಂದಿಸಿದೆ ಧ್ಯಾನಿಸಿದೆ, ತವಕಿಸಿದೆ .ಮೈಮರೆತು ಭಾವಲೋಕದಲ್ಲಿ ಮುಳುಗಿದೆ. ವಿಜಯಪುರದಲ್ಲಿಳಿದಾಗ ಗೋಧೂಳಿಯ ಸಮಯ ೬ ಗಂಟೆ .ಅಲ್ಲಿ ಚಡಚಣ ದ ಮೂಲಕ  ವಿಠ್ಠಲನ ಫಂಡರಾಪುರಕ್ಕೆ ಹೋಗುವ ಬಸ್ಸಿನಲ್ಲಿ ಕುಳಿತು, ಪ್ರಥಮ ಬಾರಿಗೆ ಪಯಣಿಸುತ್ತಿರುವ, ಚಡಚಣ ಎಂಬ ಭೀಮಾ ತೀರದ ಊರಾದರೂ ಹೇಗಿದ್ದೀತು ಜೋಳಿಗೆ ಹೇಗಿರಬಹುದು ಎಂದು ಮತ್ತದೇ ಕನವರಿಕೆಯಲ್ಲಿ ಚಡಪಡಿಸಿದೆ. ಅದಾಗಲೇ ಎರಡು ಸಲ ಎಲ್ಲಿರುವೆ ಎಂದು ವಿಚಾರಿಸಿದ್ದ ಗುರುಗಳೂ ನನಗಾಗಿ ಕಾಯುತ್ತಿದ್ದರು.

                             ಝಳಕಿಯ ಮೂಲಕ "ಬಿಸಿಲನಾಡು" ಚಡಚಣ ಕ್ಕೆ ಬಂದಿಳಿದಾಗ ಸಮಯ ಸುಮಾರು ರಾತ್ರಿ೮ ಗಂಟೆ.ಕುತೂಹಲದಿಂದಲೇ ಗುರುಗಳು ನನಗಾಗಿ ಕಳುಹಿಸಿದ ತಮ್ಮ ಮಿತ್ರನಾದ ಬಷೀರ್ ಮುಲ್ಲಾ ರವರು ನನ್ನನ್ನು  ಹೇಗೋ ಗುರ್ತಿಸಿ ಸ್ವಾಗತದ ಹಸನ್ಮುಖದೊಂದಿಗೆ ಬರಮಾಡಿಕೊಂಡರು.
ಮನದಲ್ಲಿ ಅದುವರೆಗೂ ನಾನು ಕಲ್ಪಿಸಿಕೊಂಡಿದ್ದ ಚಡಚಣ ಕ್ಕೂ, ನಾನು ಉದ್ಯಮಿ ಬಷೀರ್  ಮುಲ್ಲಾ ರವರ  ಮಾನವತೆಯ ಮೂಲಕ  ನೋಡುತ್ತಿರುವ ಚಡಚಣಕ್ಕೂ ಅಜಗಜಾಂತರ ವ್ಯತ್ಯಾಸ.ಬಷೀರ್ ಮುಲ್ಲಾ ರವರು ರಾಗಂರವರ ತಂದೆಯವರ ಪ್ರೀತಿಯ ಶಿಷ್ಯರಲ್ಲಿ ಒಬ್ಬರು.  ಬಸ್ ನಿಲ್ದಾಣದಿಂದ ಸುಮಾರು  ಎರಡು  ಕಿ.ಮೀ ದೂರವಿದ್ದ ಗುರುಗಳ ಮನೆಗೆ ನನ್ನನ್ನು ತಮ್ಮ ಹುಡುಗನೊಬ್ಬನ ಬೈಕಿನಲ್ಲಿ ಕಳುಹಿಸಿದರು. ಬೈಕನ್ನೇರಿದ ನನಗೆ ಚಡಚಣ ದ ಬಯಲು ಸೀಮೆ ಬೆರಗುಗೊಳಿಸಿತ್ತು.

                       ಎದುರಾಗಿ ಬರುವ ತಂಗಾಳಿಯ ಮುದವನ್ನು ಆನಂದಿಸುತ್ತಾ
ನೇರವಾಗಿ ಗುರುಗಳ ಮನೆಯ ಮುಂದಿಳಿದಾಗ ಅದಾವುದೋ ಸ್ವರ್ಗಕ್ಕೆ ಬಂದ ಅನುಭವ.ನಾನು ಅಲ್ಲಿ ಇಳಿದದ್ದು ನೇಸರನು ದಕ್ಷಿಣಾಯನದಿಂದ ಉತ್ತರಾಯಣ ಕ್ಕೆ ತನ್ನ ಪಥವನ್ನು ಬದಲಿಸುತ್ತಿರುವ ಮಹಾ ಸಂಕ್ರಮಣದ ಘಳಿಗೆಯಲ್ಲಿ. ಅದು ನನ್ನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿಯೂ ಹೊಸ ಮನ್ವಂತರಕ್ಕೆ ನಾಂದಿಯಾಗುತ್ತದೆಂದು ನಾನು ಗ್ರಹಿಸಿರಲಿಲ್ಲ.   ಒಂದು ಎಕರೆಯಷ್ಟಿರುವ ಗಟ್ಟಿ ನೆಲದ ಮೇಲೆ ಅಚ್ಚುಕಟ್ಟಾಗಿ ಮೈತಳೆದು ನಿಂತಿರುವ ಆ 'ಜೋಳಿಗೆ' ಯೆಂಬ ಸುಂದರವಾದ ಮಂದಿರ ದಂತಿರುವ  ಭವ್ಯ ಕಟ್ಟಡ ದ ಮುಂದೆ ನಿಂತು ಗುರುಗಳು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು.ನನಗೆ ಪುಣ್ಯಭೂಮಿಯ ಮೇಲೆ ಕಾಲಿಟ್ಟ ಅನುಭವ. ನಾನು ಅಲ್ಲಿ ಇಳಿದದ್ದು ನೇಸರನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುತ್ತಿರುವ ಸಂಕ್ರಮಣ ಕಾಲದಲ್ಲಿ. ನನ್ನ ಸಾಂಸ್ಕೃತಿಕ ಬದುಕಿನ ಪಥವನ್ನೂ  ಬದಲಿಸುವ ಹೊಸ ಮನ್ವಂತರ ಕಾಲದ ಮಹತ್ವದ 'ದರ್ಶನ' ವಾಗಿ ಸಂಭ್ರಮವಾಯಿತು .  

                         ಆ ನೆಲದ ಮಹಿಮೆಯೋ ಏನೋ ಅಲ್ಲಿಗೆ ಭೇಟಿ ನೀಡಿದ ಎಲ್ಲರಿಗೂ ಅದು ಆಧ್ಯಾತ್ಮದ ಸವಿನೆನಪುಗಳನ್ನು ಕಟ್ಟಿಕೊಟ್ಟಿದೆ. ತುಂಬಿದ ನನ್ನ ತನುಮನಗಳು ಪುಳಕಗೊಂಡು ಏನನ್ನೋ ನೆನೆಯುತ್ತಾ  ಜೋಳಿಗೆ ಯನ್ನು ಪ್ರವೇಶಿಸಿದವು. ಗುರುಗಳ ಪುಟ್ಟ ಕಂದಮ್ಮಗಳಾದ ತರಂಗಿಣಿ ಹಾಗೂ ಸಿದ್ಧಾರ್ಥ ರು ನಮ್ಮನ್ನು ಹಿಂಬಾಲಿಸಿದರು.
                           ಒಳಗೆ ಪ್ರವೇಶಿಸುತ್ತಲೇ ಅಪ್ಪಟ ಭೀಮಾ ತೀರದ ನೆಲದ ಜನಪದ ಸಂಸ್ಕೃತಿಯ  ಸೊಗಡಿನ ಸಾಮಗ್ರಿಗಳಿಂದಲೇ ಮೈವೆತ್ತು  ಜಾನಪದ ರಂಗಭೂಮಿಯಂತೆ ಸುಂದರವಾದ ವೇದಿಕೆಯ ರೂಪಿನಿಂದ ಕಂಗೊಳಿಸುತ್ತಿರುವ ಒಳಾಂಗಣ ದ ರಚನೆ ನನ್ನನ್ನು ಬಹುವಾಗಿ ಸೆಳೆಯಿತು.ಎಲ್ಲಿಯೂ ಕೃತಕತೆಯ ಸ್ಪರ್ಶವಿಲ್ಲದ 'ಜೋಳಿಗೆ'ಯ ಸಹಜ ಸೌಂದರ್ಯ ಎಂಥವರನ್ನೂ
                                ಬಯಲು ಆಲಯದೊಳಗೊ
                                ಆಲಯವು ಬಯಲೊಳಗೊ
                     ಎಂಬಂತೆ ಸೆಳೆದು ಮಂತ್ರಮುಗ್ಧರನ್ನಾಗಿಸುತ್ತದೆ.
ಹಾಗೆಂದೇ ಅದು ತನ್ನ ಶಂಕುಸ್ಥಾಪನೆಗೆಂದು   ನಾಡಿನ ಹಿರಿಯ ಕ್ರೀಯಾಶೀಲ ಸಾಹಿತಿ ಚಿಂತಕ  ಚಂಪಾ ರವರನ್ನು  ಮುನ್ನುಡಿಯಾಗಿ  ಬರಮಾಡಿಕೊಂಡಿದೆ. 

                         
ಅಲ್ಲದೇ ಉದ್ಘಾಟನೆಗೆಂದು ಇಡೀ ದಿನವೆಲ್ಲಾ ಹೊನಲು ಹರಿಸಿದ   ಕಾವ್ಯಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು, ಗ್ರೀನ್ ಆಸ್ಕರ್ ವಿಜೇತ ಶ್ರೀ ಧರ್ಮದಾಸ ಭಾರತಿ,ನಾಡಿನ ಹೆಸರಾಂತ ಕವಯಿತ್ರಿ ಶ್ರೀಮತಿ  ಸುಜಾತಾ ಕುಮಟಾ, ಖ್ಯಾತ ಭಾಷಾಂತರಕಾರ ಪ್ರೊ ಜಿ. ಬಿ. ಸಜ್ಜನ ,ಹಿರಿಯ ನಟ ಶ್ರೀ ರಾಜೇಶ್, ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಶ್ರೀ ಮದಭಾವಿ, ಮಧುರಚೆನ್ನರ ಪುತ್ರ ಶ್ರೀ ಪುರುಷೋತ್ತಮ ಗಲಗಲಿ, ರಾಜ್ಯಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಶ್ರೀ ರವೀಂದ್ರನಾಥ ಸಿರಿವರ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಬೇಲೂರು ರಘುನಂದನ್, ಹೆಸರಾಂತ ನಾಟಕಕಾರ ಶ್ರೀ ಬಿ  ಆರ್ ಪೋಲೀಸ್ ಪಾಟೀಲ, ಸಾಹಿತಿ ಚಿಂತಕರಾದ ಪ್ರೊ.ಆರ್ ಕೆ ಕುಲಕರ್ಣಿ, ರಾಷ್ಟ್ರಪ್ರಶಸ್ತಿ ವಿಜೇತ ಪ್ರಸಿದ್ಧ ಚಿತ್ರನಿರ್ದೇಶಕ ಶ್ರೀ ವಿ. ಮೂರ್ತಿ (ಜಿ. ವಿ. ಅಯ್ಯರ್ ಅವರ ಅಳಿಯ), ಚಿತ್ರಕಲಾ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀ ಬಿ. ಎಸ್. ದೇಸಾಯಿ ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಶ್ರೀ ಸಿದ್ಧಲಿಂಗಪ್ಪ ಹಳ್ಳೂರ ಹೀಗೆ ನಾಡಿನ ಅನೇಕ ಮಹತ್ವದ ರಾಜಕೀಯ ಸಾಹಿತ್ಯಿಕ,ಸಾಂಸ್ಕೃತಿಕ,  ಕ್ಷೇತ್ರಗಳ ಸಾಧಕ ಮಹನೀಯರು 'ಜೋಳಿಗೆ' ಯ  ಗ್ರಂಥಗಳಲ್ಲಿ ತಮ್ಮ ಪುಟಗಳನ್ನು ದಾಖಲಿಸಿ ಹೋಗಿದ್ದಾರೆ.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...