Total Pageviews

Sunday 28 January 2018

ಸ್ಕೌಟ್ ಎಂಬ " ಜೀವನಪಥ "- 1

ಸ್ಕೌಟ್ ಎಂಬ " ಜೀವನಪಥ "
                              
              ಅಂದು ನಾನು ಬಸ್ಸನ್ನೇರಿದಾಗ ಸಮಯ ರಾತ್ರಿ ೮.೧೫ .ರಾಜ್ಯ ಸೌಟ್ಸ ತರಬೇತಿ ಸಂಸ್ಥೆಯ ವತಿಯಿಂದ ದಿ ೧೬ -೧-೨೦೧೮ ರಿಂದ ದಿ.೨೨-೧-೨೦೧೮ ರವರೆಗೆ ನಡೆಯುವ  'ರೋವರ್   ಸ್ಕೌಟ್ ಲೀಡರ್ ' ತರಬೇತಿಗೆಂದು ಬೆಂಗಳೂರಿನ ಹತ್ತಿರದ 'ದೊಡ್ಡಬಳ್ಳಾಪುರ'ದಲ್ಲಿರುವ  'ರಾಜ್ಯ ಸ್ಕೌಟ್ಸ ಮತ್ತು ಗೈಡ್ಸ ತರಬೇತಿ ಸಂಸ್ಥೆ' ಇರುವ ಅನಿಬೆಸೆಂಟ್ ಪಾರ್ಕಿಗೆ  ನಾನು ಸಿದ್ಧನಾಗಿ ಹೊರಟಿದ್ದೆ.ಈ ಮೊದಲು ೧೯೯೮-೯೯ ರಲ್ಲಿ ನಾನು ಟಿ ಸಿ ಹೆಚ್ ತರಬೇತಿ ಪಡೆಯುವಾಗ ಮೂರು ದಿನಗಳ 'ನಾಗರಿಕತ್ವ ತರಬೇತಿ ಶಿಬಿರ'  ದಲ್ಲಿ ಶಿಬಿರಾರ್ಥಿಯಾಗಿ ಈ 'ಅನಿಬೆಸೆಂಟ್ ಪಾರ್ಕ'ನಲ್ಲಿ ಗೆಳೆಯರೊಂದಿಗೆ  ಓಡಾಡಿದ ನೆನಪುಗಳು ಆ ಪ್ರಯಾಣದ ರಾತ್ರಿಯಲ್ಲಿ ಮನದ ಮೂಲೆಯಿಂದ ಗರಿಗೆದರಿ ನಿಂತು ನಿದ್ರಾದೇವಿಯನ್ನ ದೂರ ಮಾಡಿ ಕಾಡಹತ್ತಿದವು. ಕಿಟಕಿಯಿಂದ ಭರಗುಟ್ಟುವ ಹಿತವಾದ  ತಂಗಾಳಿ ನೆನಪುಗಳ ತಂಪಿಗೆ ಮತ್ತಷ್ಟು ಮುದವನ್ನು ತಂದಿತ್ತು. ಮತ್ತೊಮ್ಮೆ, ಮಗದೊಮ್ಮೆ ಆಸ್ವಾದಿಸುತ್ತ ಆಹ್ಲಾದಕರವಾಗಿದ್ದ  ಮನಸ್ಸು ಆ ಸವಿಘಳಿಗೆಗಳ ಧ್ಯಾನದಲ್ಲಿ ತೊಡಗಿತ್ತು.ಎಚ್ಚರವಾದಾಗ ತುಮಕೂರು ಹತ್ತಿರದ ದಾಬಸ್ ಪೇಟೆ ಯಲ್ಲಿದ್ದೆ. ಅಲ್ಲಿ ಇಳಿದು ಮತ್ತೊಂದು  ಖಾಸಗಿ ಬಸ್ಸಿನ ಮೂಲಕ ದೊಡ್ಡಬಳ್ಳಾಪುರಕ್ಕೆ ಬಂದೆ.ರೈಲ್ವೆ ಸ್ಟೇಷನ್ ನಿಂದ ನಡೆದುಕೊಂಡು ಅನಿಬೆಸೆಂಟ್ ಪಾರ್ಕ್ ಗೆ ಬಂದಾಗ ಸಮಯ ೮ ಗಂಟೆ .              

                              ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕುತೂಹಲದಿಂದಲೇ ಆವರಣ ಪ್ರವೇಶಿಸಿದ ನನ್ನನ್ನು ಹಾಗೂ ಶಿಬಿರಾರ್ಥಿಗಳಾಗಿ ನನ್ನಂತೆ  ಆಗಮಿಸುತ್ತಿದ್ದ ವರನ್ನೂ ತರಬೇತಿ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಬರಮಾಡಿಕೊಂಡು, ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲು ಸ್ಕೌಟ್ ಪಿತಾಮಹ   ಬೇಡನ್  ಪೊವೆಲ್ ಭವನದಲ್ಲಿ ನಮಗೆ ಶಿಬಿರಾರ್ಥಿಗಳಿಗೆಂದು ಇರುವ ಕೋಣೆಗಳಲ್ಲಿ ವ್ಯವಸ್ಥೆ ಕಲ್ಪಿಸಿದರು.ಬೆಳಗಿನ ಕಾರ್ಯಗಳನ್ನು ಮುಗಿಸಿ ನಮ್ಮ ಭವನದ ಎದುರಿಗಿದ್ದ ಊಟ ಮತ್ತು ಉಪಹಾರ ಭವನದಲ್ಲಿ ನಮಗಾಗಿ ತಯಾರಾಗಿದ್ದ ಉಪಹಾರವನ್ನು ಸೇವಿಸಿ ತರಬೇತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಮುಗಿಸಿದೆವು.ಸ್ಕೌಟ್ ಧ್ವಜಾರೋಹಣ ದಲ್ಲಿ ಪಾಲ್ಗೊಂಡು ಅದುವರೆಗೂ ನಮಗೆ ಅಪರಿಚಿತವಾಗಿದ್ದ ಸ್ಕೌಟ್ ಪ್ರಾರ್ಥನೆ ಮತ್ತು ಝಂಡಾ ಗೀತೆಗಳನ್ನು ಮೊದಲ ಬಾರಿಗೆ ಕೇಳುವುದರೊಂದಿಗೆ ಅಲ್ಪ ದನಿಗೂಡಿಸುವುದರ ಮೂಲಕ ನಮ್ಮ ತರಬೇತಿಗೆ ಅಧಿಕೃತ ಚಾಲನೆ ದೊರೆಯಿತು.

                                     ನಾನು  ಹಿಂದೆ ಇಲ್ಲಿ  ಬಿಟ್ಟುಹೋಗಿದ್ದ  ಹೆಜ್ಜೆಗುರುತುಗಳನ್ನು ಹುಡುಕಾಡಲು ತವಕಿಸಿದೆ.ಆ ಉದ್ಯಾನವನದಲ್ಲಿ ನಾವು ವಿಹರಿಸಿದ್ದ ಹಳೆಯ ನೆನಪುಗಳ ತಾಣಗಳನ್ನು ಶೋಧಿಸಿದೆ. ಕೊನೆಗೂ ಒಂದು ಮೂಲೆಯಲ್ಲಿ ಅಂದು ನಾವು ವಾಸವಿದ್ದ  ತಾವುಗಳನ್ನು ಕಂಡು ಹರ್ಷಿತನಾದೆ. ಶಿಬಿರಾಗ್ನಿಯ ಸ್ಥಳ ಕಂಡು ಪುಳಕಿತನಾದೆ.ಮನದಾಗಸದಲ್ಲಿ ಸವಿನೆನಪುಗಳ ನಕ್ಷತ್ರಗಳನ್ನು ದರ್ಶಿಸಿ ಅವುಗಳ ಬೆಳಕಿನಲ್ಲಿ ಕುಣಿದು ತಣಿದೆ.

                                     ಕಾಡಿನಂತೆ ಹಲವಾರು ಗಿಡ ಮರಗಳನ್ನು ಸುಂದರವಾಗಿ  ತನ್ನ ಮೈಯುದ್ದಕ್ಕೂ ಹರಡಿಕೊಂಡು ನಿಂತಿರುವ ಈ ಕೆಮ್ಮಣ್ಣಿನ ವಿಸ್ತಾರವಾದ ಆವರಣದಲ್ಲಿ ತರಬೇತಿ ಪಡೆಯುವುದೆಂದರೆ ನಮಗೆ ಎಲ್ಲಿಲ್ಲದ ಕುತೂಹಲ ಹಾಗೂ   ಉತ್ಸಾಹವನ್ನು ತಂದಿತ್ತು. ಆ ಮರಗಳ ಬುಡದಲ್ಲಿ ಕುಳಿತು ಅಕ್ಷರಶ:  ಪ್ರಕೃತಿಯ ಮಕ್ಕಳಾಗಿದ್ದ ನಮಗೆ ಪ್ರಾರ್ಥನೆ ಹಾಗೂ ಝಂಡಾ ಗೀತೆಗಳನ್ನು ,ರಾಗಬದ್ಧವಾಗಿ ಹಾಡುವುದನ್ನು, ಅವುಗಳ ಅರ್ಥವನ್ನು  ಹೇಳಿಕೊಡುವುದರೊಂದಿಗೆ ತರಬೇತಿಯ ಮೊದಲ ತರಗತಿಯನ್ನು, ವೃತ್ತಿಯಲ್ಲಿ ವಕೀಲರಾಗಿದ್ದರೂ, ಸ್ಕೌಟ್ ನೊಂದಿಗೆ ಅವಿನಾಭಾವ ಸಂಬಂಧದ ಮೂಲಕ  ತಮ್ಮನ್ನು ಸಮರ್ಪಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯವರಾದ ಶ್ರೀ ಎಂ ಗಣಪತಿ  ರೋವರ್ ಸ್ಕೌಟ್ ಲೀಡರ್ ರವರಿಂದ    ಶುರುವಾಯಿತು.ಹೀಗೆ ಪ್ರಾರಂಭವಾದ ನಮ್ಮ ತರಬೇತಿಯಲ್ಲಿ ಸ್ಕೌಟ ನ ಮೂಲಭೂತ ವಿಷಯಗಳು,ಉದ್ದೇಶ, ಪ್ರಮಾಣವಚನ,ನಿಯಮಗಳು,ಸಂಕೇತ,ಸೆಲ್ಯೂಟ್,ಎಡಗೈ ಹಸ್ತಲಾಘವದ ವಿಶೇಷತೆ,ಆದೇಶಗಳು,ಸ್ಕೌಟ್ ಧ್ವಜದ ಮಹತ್ವ ,ಸಂಘಟನೆಯ ಶಕ್ತಿ,ನಕಾಶೆ ರಚನೆ,ಉಪಯೋಗಗಳು,ದಿಕ್ಸೂಚಿ ಸಾಧನ ಪರಿಚಯ ,ಹಗ್ಗದಲ್ಲಿ ಹಾಕುವ ವಿವಿಧ ರೀತಿಯ ಗಂಟುಗಳು,ಹಗ್ಗದಿಂದ ಕೋಲಿಗೆ ಹಾಕುವ ಗಂಟುಗಳು, ಉಪಯೋಗಗಳು, ರೋವರ್ ಸ್ಕೌಟ್ ನ ಧ್ಯೇಯವಾದ ಸೇವೆಯ ಮಹತ್ವ, ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳೊಂದಿಗೆ ,ಪ್ರಾಯೋಗಿಕವಾಗಿ ಈ ಏಳು ದಿನಗಳ ತರಗತಿಗಳಲ್ಲಿ ಮನದಟ್ಟು  ಮಾಡಿಸಿದರು.

                                         ಬಿ.ಪಿ ಎಂದೇ ಸ್ಕೌಟ್ ಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಬೇಡನ್ ಪೊವೆಲ್ ಆಫ್ ಗಿಲ್ ವೆಲ್ (೧೮೫೭-೧೯೪೧)  ರವರಿಂದ ೧೯೦೭ ರಲ್ಲಿ ಇಂಗ್ಲೀಷ್ ಕಡಲ್ಗಾಲುವೆ ಯ ಬದಿಯಲ್ಲಿರುವ 'ಬ್ರೌನ್ ಸೀ' ದ್ವೀಪದಲ್ಲಿ ೨೦ ಬಾಲಕರ ತಂಡದೊಂದಿಗೆ ಪ್ರಾಯೋಗಿಕವಾಗಿ ಪ್ರಾರಂಭವಾದ ಪ್ರಥಮ ಸ್ಕೌಟ್ ಶಿಬಿರ ಇಂದು ೨೦೦ ರಷ್ಟು ದೇಶಗಳಲ್ಲಿ ಹೆಮ್ಮರವಾಗಿ ಬೆಳೆದು ವಿಶ್ವದಾದ್ಯಂತ   ತನ್ನ ರೆಂಬೆ ಕೊಂಬೆಗಳನ್ನು  ಹರಡಿಕೊಂಡು ವಿಸ್ತಾರವಾಗಿದೆ..

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...