Total Pageviews

Monday 15 January 2018

ಭೀಮಾ ತೀರದ ಬೆಳಕು ಭಾಗ 3


                                 'ಜೋಳಿಗೆ' ಯೆಂಬ ಕವಿಶೈಲ.....

                              ಸ್ಥಾವರವೊಂದು ಸಾಂಸ್ಕೃತಿಕ ಪರಂಪರೆಯನ್ನು ಹುಟ್ಟುಹಾಕಿ ತನ್ನೊಡಲಲ್ಲಿ ಕಡಲಾಳದಷ್ಟು,ಸಾಹಿತ್ಯ, ಕಲೆ, ಜ್ಞಾನ ಚಿಂತನ ಹಾಗೂ ಅನುಭವಗಳ ಬುತ್ತಿಯನ್ನು, ದರ್ಶಿಸಿದವರಿಗೆಲ್ಲಾ ಮಥನದ ಮೂಲಕ ವಿನಿಮಯ ಮಾಡಿಕೊಳ್ಳುತ್ತಾ    ಮನ ಮನಗಳಲ್ಲಿ ಚಲನಶೀಲತೆ ಕ್ರಿಯಾಶೀಲತೆ ಪಡೆದು "ಜೋಳಿಗೆ"ಯಾಗಿ ಸ್ವಯಂ ಜಂಗಮ' ವಾಗುವುದಿದೆಯಲ್ಲ ಅದು ಅನೂಹ್ಯವಾದದ್ದು. 

                                ಇಳಕಲ್ಲಿನ ಶ್ರೀ ಮಹಾಂತ ಶಿವಯೋಗಿಗಳ 'ಜಂಗಮ ಜೋಳಿಗೆ' ಮನುಷ್ಯರ ದುಶ್ಚಟಗಳನ್ನೇ ಭಿಕ್ಷೆಯಾಗಿ ಪಡೆದು ಸಾಮಾಜಿಕ ಕ್ರಾಂತಿಯೊಂದನ್ನು ಹುಟ್ಟುಹಾಕಿದಂತೆ,ಚಡಚಣ ದ ರಾಗಂ ರವರ ಈ ಜೋಳಿಗೆ  ಸಾಧಕರ, ಚಿಂತಕರ, ಸಾಹಿತಿಗಳ, ಕಲಾವಿದರ,ಜನಪದರ, ಮಹನೀಯರ , ನಮ್ಮ ನೆಲದ ಜ್ಞಾನ,  ಸಂಸ್ಕೃತಿ ಹಾಗೂ  ಅನುಭವಗಳನ್ನೆಲ್ಲ ತನ್ನ  ಮೂರ್ತ ಮತ್ತು ಅಮೂರ್ತ ರೂಪದಲ್ಲಿ ಹೀರಿಕೊಂಡು  ಮಥಿಸಿ,ಅವುಗಳನ್ನು ಸಾಹಿತ್ಯ ಸೇವೆಯ  ಮೂಲಕ  ಸಮಾಜಕ್ಕೆ ಮರಳಿಸುವ "ಜ್ಞಾನಕಣಜ'' ದ ಅಕ್ಷಯ ಪಾತ್ರೆ ಯಾಗಿ ಸಾಂಸ್ಕೃತಿಕ ಕ್ರಾಂತಿಗೆ ಕಾರಣವಾಗಿದೆ.

                                  ಜೋಳಿಗೆ ಯ ಒಳಗೆ ಎಡಭಾಗದಲ್ಲಿ ಜ್ಞಾನದ ಹಸಿವು ತಣಿಸುವ ಹೃದಯದಂತಿರುವ ಹಲವು ಸಾವಿರಗಳಷ್ಟು ಪುಸ್ತಕಗಳನ್ನು ಹೊಂದಿದ ಸುಸಜ್ಜಿತ ಗ್ರಂಥಾಲಯ,ನನ್ನನ್ನು ಕೈಬೀಸಿ ಕರೆಯಿತು.ತಗ್ಗಾದ ನಡುಮನೆ ಒಳಾಂಗಣ ಸೌಂದರ್ಯವನ್ನು ಸಹಜವಾಗಿ ಹೆಚ್ಚಿಸಿದೆ.ಕಿಟಕಿಗಳನ್ನು ಕೇಳಿಯೇ ಒಳಬರಬೇಕಾದ ಸೂರ್ಯನ ಹಿತ ಮಿತ ಗಾಳಿ ಬೆಳಕುಗಳು ಮನೆಯ ಒಳಗೆ ತಂಪಾದ ವಾತಾವರಣವನ್ನು ರೂಪಿಸಿವೆ.  

                                  ಆಗ್ನೇಯ ಮೂಲೆಯಲ್ಲಿ ಬರುವ ಅತಿಥಿಗಳ ಹಸಿವು ನೀಗಿಸುವ ಹೊಸ ಶೈಲಿಯ ವಿನ್ಯಾಸ ಹೊಂದಿರುವ ಸುಸಜ್ಜಿತವಾದ  ಅಡುಗೆ ಮನೆ ಸುಂದರವಾಗಿದೆ. ನೈರುತ್ಯ ಮೂಲೆ ಹಾಗೂ ವಾಯುವ್ಯ ಮೂಲೆಗೊಂದೊಂದು ವಿಶ್ರಾಂತಿ ಕೊಠಡಿಗಳು.ಮನೆಯ ಹೃದಯದ  ಮೇಲ್ಭಾಗದಲ್ಲಿ ಮನೆಯ ಎತ್ತರಕ್ಕೆ ತಕ್ಕಂತೆ ಸೊಗಸಾಗಿ ನಿರ್ಮಿತವಾಗಿರುವ 'ಧ್ಯಾನಮಂದಿರ',  ಒಳಗೆ ಪ್ರವೇಶಿಸಿದ ಕೂಡಲೇ ಮನಸ್ಸನ್ನು ನಿರ್ಮಲವಾಗಿಸಿ  ಧ್ಯಾನಾಸಕ್ತಿಯನ್ನು ಉದ್ದೀಪನಗೊಳಿಸುವ ಮನೆಯ  ಪ್ರಶಾಂತ ತಾಣವಾಗಿದೆ. ಟಿಬೇಟಿಯನ್ ಶೈಲಿಯ ಮಧ್ಯಗೋಪುರ ಮನೆಯ ಸೌಂದರ್ಯಕ್ಕೊಂದು ಅಲಂಕಾರದ ಮುಕುಟವಾಗಿದೆ.ಮನೆಯ ಮುಂದಣ  ಪಡಸಾಲೆ ಮಂದಿರ ದ ಕಳೆಯನ್ನು ಹೆಚ್ಚಿಸಿದೆ.

                                   ಮನೆಯೊಳಗೆ ಹಗಲಿನಲ್ಲಿ ರಂಗದ ನೆನಪು ತರುವ ಸಹಜವಾದ ನೆರಳು ಬೆಳಕಿನಾಟ,ರಾತ್ರಿಯ ಮಂದ ಪ್ರಕಾಶದ  ಅಲಂಕಾರ ದೀಪಗಳ ಬೆಳಕ ನೋಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
    ಹೊರಗೆ 'ಜೋಳಿಗೆ' ಯ ಮುಂದೆ ವಿಶಾಲವಾದ ಬಯಲು .ಬಯಲಿನಲ್ಲಿ ಬಿಸಿಲಿಗೆ ಹೊಂದಿಕೊಂಡು ನಿಧಾನವಾಗಿ  ಬೆಳೆಯುತ್ತಿರುವ  ಗಿಡಮರಗಳು ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಊರ ಹೊರಗಿನ ನಿಶಾಂತವಾದ, ನಿಶ್ಯಬ್ದವಾದ ಜಾಗದಲ್ಲಿ ನಿರ್ಮಾಣವಾಗಿರುವ ಈ 'ಜೋಳಿಗೆ' ಯಲ್ಲಿ ರಾಗಂ ರವರು ತಂದೆಯೊಂದಿಗೆ ನಡೆದಾಡಿದ  ಹೆಜ್ಜೆಗುರುತುಗಳಿವೆ. 'ಭೀಮೆ' ಯಂತೆ ಹೊಳೆಯಾಗಿ ಹರಿಯುವಷ್ಟು  ಭಾವಬಿಂದುಗಳಿವೆ, ಸಿಹಿ ಕಹಿ ನೆನಪುಗಳಿವೆ,ಶುದ್ಧ ಪ್ರೇಮದ ಸಲ್ಲಾಪಗಳಿವೆ. ಪರಿಶ್ರಮದ,ಸ್ವಾಭಿಮಾನದ ಬದುಕು ನಡೆಸಿದ ಸವಾಲುಗಳ ಪುಟಗಳಿವೆ, ಊರಮನೆಗಳ ಸಾಕಿಯರ ಮೃಷ್ಟಾನ್ನದ  ಋಣಗಳಿವೆ,ಬಾಲ್ಯದ ಗೆಳೆಯರ ಒಡನಾಟದ  ಒರತೆಗಳಿವೆ.ಅವರು ಪ್ರೀತಿಸುವ ನಿಷ್ಠೆಯ ಪ್ರಾಣಿ ನಾಯಿಗಳೊಂದಿಗಿನ ಮುದ್ದಾಟಗಳಿವೆ. 

                               ಹೀಗೆ ನಾನು ಒಂದು ದಿನ ಅಲ್ಲಿದ್ದು ಮರುದಿನ ಮಧ್ಯಾಹ್ನ ೩ .೧೫ ರ ಹೊತ್ತಿಗೆ ಗುರು ರಾಗಂ ರವರಿಗೆ ಅವರ ಮುದ್ದು ಕುಡಿಗಳಿಗೆ ವಿದಾಯ ಹೇಳಿ ಮತ್ತೆ ಊರ ಕಡೆಗೆ ಹೊರಟೆ.ಆ ಮಂದಿರದಲ್ಲಿ ಕಳೆದ ಮಧುರ ನೆನಪುಗಳು ನಮ್ಮೂರಿನವರೆಗೆ ಕರೆದುಕೊಂಡು ಬಂದವು.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...