Total Pageviews

Sunday 4 March 2018

ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)

ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)

JOHN KEATS

                         ಕೀಟ್ಸ್  ನಲ್ಲಿ ಕಾವ್ಯ ಪವಿತ್ರವಾಗಿತ್ತು,ದಿವ್ಯ ಬೆಳಕಾಗಿತ್ತು, ಮೌನದ ಮಹಾನದಿಯಾಗಿತ್ತು. ಚೈತನ್ಯದ ಚಿಲುಮೆಯಾಗಿತ್ತು.

''ಕೀಟ್ಸ್  ಅಲೆಮಾರಿಯಾಗಿದ್ದ ಕಾವ್ಯಕ್ಕಾಗಿ.
ಕೀಟ್ಸ್ ಖಿನ್ನನಾಗಿದ್ದ 
ಕಾವ್ಯಕ್ಕಾಗಿ,
ಕೀಟ್ಸ್ ನಿಷ್ಠುರನಾಗಿದ್ದ ಕಾವ್ಯಕ್ಕಾಗಿ.
ಕೀಟ್ಸ್ ತಾಳ್ಮೆ ಕಳೆದುಕೊಂಡಿದ್ದ ಕಾವ್ಯಕ್ಕಾಗಿ.
ಕೀಟ್ಸ್ ಧ್ಯಾನಿಯಾಗಿದ್ದ ,
ಯೋಗಿಯಾಗಿದ್ದ,
ಪ್ರೇಮಿಯಾಗಿದ್ದ, ಮೌನಿಯಾಗಿದ್ದ, ಬಂಧುವಾಗಿದ್ದ, 
ಜೀವದ ಗೆಳೆಯನಾಗಿದ್ದ,
ಹಂಬಲದ ಮಹಾ ಕೀಟವಾಗಿದ್ದ 
ಕಾವ್ಯಕ್ಕಾಗಿ ''
ಎಂಬುದನ್ನು ರಾಗಂ ರವರು  ಕೀಟ್ಸ್ ನ ಕಾವ್ಯಭಾಷೆಯಲ್ಲಿಯೇ ಕಟ್ಟಿಕೊಡುತ್ತಾರೆ.

JAMES RENOLDS

''ಕೀಟ್ಸ್ ನ ಮತ್ತೊಂದು ಕಾವ್ಯ
ನನ್ನ ಆಕಾಶದ ಬಟ್ಟಲೊಳಗೆ
ಈ ವಸಂತವೆಲ್ಲ ಹೀರಿದರೂ
ಖಾಲಿಯಾಗದ ಶೆರೆ
ಮರೆಯಲಾಗದ್ದನ್ನು ಮರುಕಳಿಸಿಕೊಂಡು
ಕುಡಿಯುತ್ತಲೇ ಇದ್ದೇನೆ ಕಣ್ಣುಗಳಿಂದ
ಒಂಟಿಯಾಗಿದ್ದೇನೆ ಬಾ ಗೆಳೆಯ''
           ಎಂದು ಸ್ನೇಹಕ್ಕೂ ಕಾವ್ಯದ ಸೇತುವೆಯನ್ನು ಕಟ್ಟುತ್ತಾನೆ.

I was never afraid of failure, for I would sooner fail than not be among the greatest. . ಎಂದು ತನ್ನ ಕವಿ ಸಾಧನೆಯ  ಜೀವನವೇ ವಿಫಲವೆಂದು ಬಗೆದು, ಬಾಗಿದ, ಮಾಗಿದ  ಮಹಾನುಭಾವ ಜಾನ್ ಕೀಟ್ಸ್.
         ತನ್ನಲ್ಲಿ ಕಾವ್ಯವೊಂದು ಸೃಜಿಸದಿದ್ದಲ್ಲಿ ಹುಚ್ಚನಂತೆ ಚಡಪಡಿಸುತ್ತಿದ್ದ ಕೀಟ್ಸ್ ಮಗುವಾಗಿ ಹಠಕ್ಕೆ ಬೀಳುತ್ತಿದ್ದ. ಕಾವ್ಯದೊಂದಿಗೆ ಜಗಳವಾಡುತ್ತಿದ್ದ .ಮುನಿಸಿಗೆ ಇಳಿದ ಕಾವ್ಯ ಹೇಗೆ ತಾನೆ ಒಲಿದೀತು? ಸೋಲುತ್ತಿದ್ದ, ಪರಿತಪಿಸುತ್ತಿದ್ದ ಸಂಕಟ ಪಡುತ್ತಿದ್ದ. ಮತ್ತೊಮ್ಮೆ ಕಾವ್ಯ  ಘಟಿಸುವ ಸಂಭ್ರಮದ  ಮಳೆಗಾಗಿ, ಆ ಅಮೃತ ಘಳಿಗೆಗಾಗಿ,  ಕಾಯುತ್ತಿದ್ದ. ಪ್ರಕೃತಿಯ ಮಡಿಲಲ್ಲಿ ಮಗುವಾಗಿ ವೀಣಾಪಾಣಿಯನ್ನು ಕಾವ್ಯಾರ್ಥಿಯಾಗಿ ಬೇಡುತ್ತಿದ್ದ. ಅಷ್ಟಾಗಿಯೂ ಒಲಿಯದಿದ್ದಾಗ,  ಶೇಕ್ಸಪಿಯರ್ ನಂತಹ ಸಾಧಕರು ನಡೆದಾಡಿದ ತಾಣದಲ್ಲಿ ಕುಳಿತು ಧ್ಯಾನಿಸುತ್ತಿದ್ದ .ಕಾವ್ಯದೇವಿಯನ್ನು ಆಹ್ವಾನಿಸುತ್ತಿದ್ದ. ಬಹುಶಃ ಈ  ಶ್ರಧ್ಧೆಯೇ ಅವನಲ್ಲಿ ಶ್ರೇಷ್ಠ ಕಾವ್ಯ ವಾಣಿಯಾಗಿ ಜನ್ಮ ತಳೆಯಿತು.ಅವನ ತನು ಮನ ನರ ನಾಡಿಯ  ಕಣ ಕಣದಲ್ಲೂ ರುಧಿರದ ಬದಲಾಗಿ ಕಾವ್ಯವೇ ಜೀವಧಾರೆಯಾಗಿ,ಪ್ರಾಣ ವಾಯುವಾಗಿ  ಪ್ರವಹಿಸುತ್ತಿತ್ತು .

RAGAM

                           ಇಂತಹ ಕೀಟ್ಸ್ ನ ಉಸಿರಾದ ಕಾವ್ಯ ಬದುಕನ್ನು  ಡಾ.ರಾಜಶೇಖರ ಮಠಪತಿಯವರು "ಜಾನ್ ಕೀಟ್ಸ್  -  ನೀರ ಮೇಲೆ ನೆನಪು ಬರೆದು" ಸಾಹಿತ್ಯದ    ಸಲಿಲ ದರ್ಪಣದಲ್ಲಿ ಕೀಟ್ಸ್ ನ ಬದುಕನ್ನು ದೃಶ್ಯಕಾವ್ಯವಾಗಿಸಿದ್ದಾರೆ. ನಮ್ಮನ್ನು ಕೈಹಿಡಿದು ಮತ್ತೆ ಕೀಟ್ಸ್ ನ ರೊಮ್ಯಾಂಟಿಕ್ ಯುಗಕ್ಕೆ ಕರೆದೊಯ್ದು, ಅವನ ಪತ್ರದ  ಸಾಲು ಮರಗಳ ತಂಪಾದ ಹೆದ್ದಾರಿಯಲ್ಲಿ ವಿಹಂಗಮವಾಗಿ  ವಿಹರಿಸುವಂತೆ ಮಾಡುತ್ತಾರೆ.

                               ಕೀಟ್ಸ್ ನಮ್ಮೊಂದಿಗೆ ಸಂವಾದಿಸುತ್ತ, ಹತ್ತಿರವಾಗುವುದೇ  ಈ ಪತ್ರಗಳ ಓದಿನ ಧ್ಯಾನಕ್ಕಿಳಿದಾಗ.ಗೆಳೆಯರು,ಸಹೋದರರು,ಹಿತೈಷಿಗಳು ಸಂಗ್ರಹಿಸಿದ್ದ ಈ ಅಮೂಲ್ಯ ಐತಿಹಾಸಿಕ ದಾಖಲೆಗಳೇ ಕವಿಯ ಶುದ್ಧ ಅಂತರಂಗವನ್ನು ನಮಗೆ ತೆರೆದಿಡುತ್ತವೆ. ಇಲ್ಲದಿದ್ದರೆ ವಿಮರ್ಶಕರಿಂದ ಮೊದಲೇ ನಿರ್ಲಕ್ಷಿತನಾಗಿದ್ದ ಕೀಟ್ಸ್ ಬಹುಶಃ ಇಂದು  ಡಾ.ರಾಜಶೇಖರ ಮಠಪತಿಯವರ ಕೃತಿಯ ಮೂಲಕ. ನಮಗೆ ಹೀಗೆ ದಕ್ಕುತ್ತಿರಲಿಲ್ಲ. ಅನಾಮಿಕನಾಗಿಬಿಡುತ್ತಿದ್ದ.
                                ನಾವು ರಾಗಂ ರವರ ಈ ಕೃತಿಯ ಅಂತರಂಗದ ಒಳಹೊಕ್ಕಾಗ,  ೨೩ ರ    ಕಿರಿಯ ವಯಸ್ಸಿನಲ್ಲಿಯೇ , ಸಮಕಾಲೀನರು ಹಾಗೂ ಹಿರಿಯರೆಲ್ಲಾ ಬೆರಗಾಗುವಂತೆ ಕಾವ್ಯಗಂಗೆಯನ್ನು  ಪ್ರವಾಹವಾಗಿ ಧುಮ್ಮಿಕ್ಕುವಂತೆ ಮಾಡಿದ ಅಸಾಮಾನ್ಯ ಕವಿಯ ಅದಮ್ಯ ಉತ್ಸಾಹ,  ಎಂದೂ ಬತ್ತದ ಜೀವನ ಪ್ರೀತಿಯನ್ನೇ ನೆಲವಾಗಿಸಿ, ಮೇಲೆ ರಮ್ಯ ಕಾವ್ಯವನ್ನು ಹುಲುಸಾಗಿ   ಎಡೆಬಿಡದೆ ಕೃಷಿಗೈದ ಕಾವ್ಯಯೋಗಿಯೊಬ್ಙನ  ಶ್ರಧ್ದೆ, ಪರಿಶ್ರಮ, ವಿಲಕ್ಷಣ ಹಂಬಲ, ಪ್ರಾಮಾಣಿಕತೆ, ಜೀವನ ಚೈತನ್ಯ, ಸ್ವಾಭಿಮಾನ, ಗಳು ನಮ್ಮನ್ನು ಬಹುವಾಗಿ ಕಾಡುತ್ತವೆ.                                        ಇಂದು ಆಧುನಿಕ ಮನುಷ್ಯ ಯಂತ್ರನಾಗರಿಕತೆಯಿಂದಾಗಿ ಆಲಸ್ಯ,ದಾರಿದ್ರ್ಯ ದೇವತೆಯ ವಿಷಯಾಸಕ್ತಿಗಳ  ತೆಕ್ಕೆಯಲ್ಲಿ ಮೈಮರೆತು, ಅಮೂಲ್ಯ ಜೀವನ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವಾಗ,  ಜಾನ್ ಕೀಟ್ಸ್ ಎಂಬ, ಅರ್ಧಕ್ಕಿಂತಲೂ ಕಡಿಮೆ ಆಯುಷ್ಯದಲ್ಲಿಯೇ ಅಗಾಧವಾದ  ಕ್ರಿಯಾಶೀಲತೆ,ಸೃಜನಶೀಲತೆ,ಪ್ರಾಮಾಣಿಕತೆ ಗಳನ್ನು  ಮೈಗೂಡಿಸಿಕೊಂಡಿದ್ದ , ರಮ್ಯ  ಯುಗದ ಕಾವ್ಯ ತಪಸ್ವಿ ಯೊಬ್ಬನ ಬದುಕು ನಮ್ಮನ್ನು  "ಜಡ ದಿಂದ ಜಂಗಮದೆಡೆಗೆ " ಕರೆದೊಯ್ಯುವ  ಆದರ್ಶವಾಗಬೇಕಾಗಿದೆ. 
                            ಹಾಗಾದಾಗಲೇ    ಸಾಹಿತ್ಯದ ಸುದೀರ್ಘ ಮ್ಯಾರಾಥಾನ್ ನಲ್ಲಿ   ೬೩ ನೇಯ ಕೃತಿಯ ಮೂಲಕ ಜಾನ್ ಕೀಟ್ಸ್ ಕವಿಯ  ನೀರ ಮೇಲೆ ಬರೆದ ನೆನಪುಗಳನ್ನು ಜನಮನದಲ್ಲಿ ಶಾಶ್ವತವಾಗಿಸುವ ಹೆಬ್ಬಯಕೆಯ ಲೇಖಕರಾದ ಡಾ.ರಾಜಶೇಖರ ಮಠಪತಿ ಯವರ ನಿರಂತರ ಬರಹ ಧ್ಯಾನ ಸಾರ್ಥಕವಾಗುತ್ತದೆ.


1 comment:

  1. ಆಂಗ್ಲ ಕಾವ್ಯ ಆರಾಧಕ ಕೀಟ್ಸ್ ಹಾಗೂ ಆ ಕವಿಯ ಬಗೆಗೆ ಪುಸ್ತಕ ಬರೆದ ರಾಗಂರವರು, ಅವರ ಪುಸ್ತಕವನ್ನು ವಿಮರ್ಶಾತ್ಮಕ ಪರಿಚಯಿಸಿದ ನೀವೂ ಸೇರಿದಂತೆ ಎಲ್ಲರೂ ಅಭಿನಂದನಾರ್ಹರು.

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...