Total Pageviews

Saturday 23 December 2017

ಕೃತಿ – ಹೂವ ತಂದವರು
ಲೇಖಕರು – ಡಾ|| ರಾಜಶೇಖರ ಮಠಪತಿ(ರಾಗಂ)
ವಿಮರ್ಶೆ – ಚಂದ್ರಶೇಖರ ಹೆಗಡೆ
         
        
ಸಾಹಿತ್ಯದ ದ್ರವ್ಯದಲ್ಲಿ ಬಯಸಿ ಇಳಿದು ಬುದ್ದಿ, ಮನಸ್ಸು, ಆತ್ಮಗಳನ್ನು ಸಂವೇದನೆಗೊಳಪಡಿಸಿ ಕೊನೆಗೆ ರಸಾನುಭವದ ಈಜು ಕಲಿತು ಆಳಕ್ಕಿಳಿದು ಅದರ ಸಾಂಗತ್ಯದಲ್ಲಿ ತೇಲಾಡುವುದಿದೆಯಲ್ಲ ಅದು ಅನಿಕೇತನವಾದದ್ದು. ಅದರ ಪರಿಧಿಯೊಳಗೆ ಸಹೃದಯದಿಂದ ಪ್ರವೇಶಿಸಿ ಯಾರೊಬ್ಬರನ್ನೂ ಅದು ಆವರಿಸದೇ ಬಿಡುವುದಿಲ್ಲ. ಅಂತಹ ಅನುಭೂತಿಯ ಆವರಣಕ್ಕೆ ನಮ್ಮನ್ನು ಕರೆದೊಯ್ಯುವ ಕೃತಿ “ಹೂವ ತಂದವರು”. ಸಾಹಿತ್ಯದೊಂದಿಗಿನ ಪಯಣದಲ್ಲಿ ಮುಖಾಮುಖಿಯಾಗುವ ಕವಿ, ಕೃತಿ ಹಾಗೂ ಸಂಸ್ಕøತಿ ವಿಚಾರಗಳನ್ನು ಕುರಿತ ಮಂಥನ, ಜೀವನ್ಮುಖಿ ಪರಂಪರೆಯಲ್ಲಿ ಗುರುತಿಸಬಹುದಾದ ಪ್ರೇರಣೆಯ ಮೈಲುಗಲ್ಲುಗಳನ್ನು ಶೋಧಿಸಿ, ಅನುಸಂಧಾನಿಸಿ ಮುನ್ನಡೆಸುತ್ತದೆ. 2009ರಲ್ಲಿ “ಶಬ್ಧಸೂತಕದಿಂದ” ಎಂಬ ಕೃತಿಯಿಂದ ಪ್ರಾರಂಭವಾದ ಲೇಖಕರ ಈ ವೈಚಾರಿಕ ಸಾಹಿತ್ಯ ಸರಣಿ 2016ರಲ್ಲಿ ಪ್ರಕಟವಾದ ಈ ಕೃತಿಯವರೆಗೆ ಮುಂದುವರೆದಿದೆ.

       ಲೇಖಕರು ನವನವೋನ್ಮೇಷಶಾಲಿಯಾದ ಯುವ ಪೀಳಿಗೆಗೆ ಜಿಜ್ಞಾಸೆಯ ಹೊಸ ಹೊಳಹುಗಳನ್ನು ಆಯಾಮಗಳನ್ನು ಪರಮಾಪ್ತವಾದ ಭಾಷೆಯಲ್ಲಿ ಬಳಿಸಾರಿ ಆಪ್ಯಾಯಮಾನವಾಗಿ ಹೇಳುವ ನಿರೂಪಣಾ ಶೈಲಿ ಇಷ್ಟವಾಗುತ್ತದೆ ಎನ್ನುವುದಕ್ಕೆ

“ಈ ಪ್ರಪಂಚವೊಂದು ಭ್ರಮೆ
ಧೂಳಿನ ಮೋಹ
ಬಂದುದಕೆ ಬೇಡ
ಹೋದುದನು ಮತ್ತೆಂದೂ ಕರೆಯಬೇಡ”

       ಅವರು ಉಲ್ಲೇಖಿಸುವ “ಅಬು ರುಡಾಕಿ”ಯ ಈ ಸಾಲುಗಳು ನಿದರ್ಶನವಾಗಿವೆ.
         
  “ಮಹಾತ್ಮಾ ಗಾಂಧಿ”ಯವರು ಇತಿಹಾಸದ ಕಾಲಗರ್ಭzಲ್ಲಿÀ ಬಿಟ್ಟುಹೋದ ಸಾವು, ಪ್ರಾರ್ಥನೆ, ದೇವರು, ಭಕ್ತಿ, ಸಂಸ್ಕøತಿ, ಆಚರಣೆ, ಶಿಸ್ತು ಕುರಿತು ಬಿಡಿ ಮಾತಿನ ಮುತ್ತುಗಳನ್ನು ಹಾರದಂತೆ ಪೋಣಿಸುವ ಅಕ್ಷರ ಕೌಶಲ್ಯದಿಂದ ಪ್ರವೇಶ ಪಡೆಯುವ ಈ ಕೃತಿ ಜೀವನದ ಪ್ರೀತಿಯ ಪಯಣದಲ್ಲಿ ಸಾಹಿತ್ಯ ಕಾರಣವಾಗಿ ಮನದಲ್ಲಿ ನೆನಹು ತುಂಬಿ ಪರಿಮಳದ ಪೊಸ ಮಲ್ಲಿಗೆಯ “ಹೂವ ತಂದವರ”, ಚೆದುರಿದ ವ್ಯಕ್ತಿತ್ವಗಳಾದ ಚಿತ್ರದುರ್ಗದ ಸಿನೆಮಾ ರಾಮಸ್ವಾಮಿ,  ಕಾದಂಬರಿಕಾರ ದು ನಿಂ ಬೆಳಗಲಿ, ಕಲಾತ್ಮಕ ಸಾಹಿತಿ ಚಂದ್ರಕಾಂತ ಕುಸನೂರ ಸಂಶೋಧಕರಾದ ಲಿಂಗದೇವರು ಹಳೇಮನೆ, ಕೆ.ಎಸ್.ಭಾಗವಾನ, ಚನ್ನಣ್ಣ ವಾಲೀಕಾರ, ಪರ್ವತವಾಣಿ, ಶ್ರೀ ಕಂಠೇಶಗೌಡರು, ಶಂಕರ ಕಟಗಿ, ಡಾ ರಾಜಕುಮಾರ ಹೀಗೆ ಸಾಹಿತ್ಯಕಲೆಯ ನೀಲಾಗಸದಲ್ಲಿ ತಮ್ಮದೇ ವ್ಯಕ್ತಿ ವಿಶಿಷ್ಟತೆ ಬೆಳಕಿನಿಂದ ಮಿನುಗುವ ನಕ್ಷತ್ರಗಳನ್ನು, ಅವುಗಳೊಂದಿಗಿನ ತಮ್ಮ ಸಾಂಗತ್ಯವನ್ನು ಆಪ್ತವಾಗಿ ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ.

          “ಪ್ರಚಾರ ಪ್ರಿಯ ಸಾಹಿತ್ಯಕ್ಕಿಂತಲೂ ವಿಚಾರ ಪ್ರಧಾನ ಸಾಹಿತ್ಯ ಮೇಲು” ಎಂಬ ಲೇಖಕರ ವಿಮರ್ಶೆಯ ಪರಿಭಾಷೆ “ಒತ್ತಡದ ಸಾಹಿತ್ಯ ರಚನೆಗಿಂತ ಬತ್ತದ, ಮನುಷ್ಯನ ಮೌಲ್ಯ ಹೆಚ್ಚಿಸುವ ಸಾಹಿತ್ಯ ರಚನೆ ಹೃದಯಂಗಮವಾಗುತ್ತದೆ.” ಎಂಬ ವಿಲಿಯಂ ಫಾಕ್ನರ್‍ನ ಈ ನುಡಿಗಳನ್ನು ಅನುಮೋದಿಸುತ್ತದೆ.
ಪ್ರತಿ ಕವಿತೆಯೂ ಉಲ್ಲಂಘನೆಯೇ ಎಂದು ಹೇಳುತ್ತಾ



“ಅಂದು ನನ್ನ ಶವಯಾತ್ರೆ
ನಿನ್ನ ಮನೆ ಮುಂದೆ ಸಾಗುವಾಗ
ಎದ್ದು ಕುಳಿತು ಕೈ ಎತ್ತಿ
ಸಲಾಂ ಸಲ್ಲಿಸಬೇಕೆಂದುಕೊಂಡೆ
ದೇಹ ಸಹಕರಿಸಲಿಲ್ಲ”

         ಎಂಬ ಹನಿಗವಿ ಬೇಲೂರು ನವಾಬರ ಹನಿಗವದ ಮೂಲಕ ಸಾವಿನಾಚೆಯ ಭಾವಲೋಕಕ್ಕೆ ಹೆಜ್ಜೆ ಹಾಕಿಸುತ್ತಾರೆ.

        
        
ಕಾವ್ಯ ಹೇಗೆ ಪರಮಾರ್ಥವಾಗಬಲ್ಲದು ಎಂಬುದಕ್ಕೆ ಬಾದಾಮಿಯ ಕೆಮ್ಮಣ್ಣಿನ ನೆಲದ ಸೊಗಡಿನ ಕವಯಿತ್ರಿ “ಕಸ್ತೂರಿ ಬಾಯರಿಯವರ ಅಲ್ಲಮನಡೆಗೆ” ಕಾವ್ಯಸಂಕಲನ ಕುರಿತ ಸೊಗಸಾದ ಬರಹ ಸಾಕ್ಷಿಯಾಗಿ ನಿಲ್ಲುತ್ತದೆ.

“ಹೆಣ್ಣು ನಾನು ಭೂಮಿ ತೂಕದವಳು
ರಿಂಗಣಿಸುತ್ತಿವೆ ರೋಮ ರೋಮಗಳು”

        ಸಾಲುಗಳು ಸ್ತ್ರೀ ಸಂವೇದನೆಯ ತವಕ ತಲ್ಲಣಗಳನ್ನು ಬೆರಗು ಹುಟ್ಟಿಸುವಂತೆ ಕವಿತೆಯಾಗಿಸುತ್ತವೆ. ಈ ಬದುಕುನ್ನು ಒಂದು ಮೆರವಣಿಗೆಯಾಗಿಸುತ್ತವೆ. ಜೀವ ಬದುಕಿನಲ್ಲಿ ಬೆಂದೆಷ್ಟೂ ಚಿನ್ನವಾಗುತ್ತದೆ ಹೊನಲಾಗುತ್ತದೆ ಮುಂದಿನವರಿಗೆ ದೀವಿಗೆಯಾಗುತ್ತದೆ ಎನ್ನುವುದಕ್ಕೆ ‘ದು ನಿಂ ಬೆಳಗಲಿ ಎಂಬ ಬೆಳಕು, ಸಜ್ಜನ ಸಾವಿಲ್ಲದ ಹೆಸರು’ ಬರಹಗಳಲ್ಲಿ ವ್ಯಕ್ತವಾಗುವ ಶಿಸ್ತು, ಪ್ರಮಾಣಿಕತೆ, ಸರಳತೆ, ನೆಲಕ್ಕೆ ಅಂಟಿಕೊಂಡು ಬದುಕುವ ಕಾದಂಬರಿ ಪಾತ್ರಗಳ ಜೀವನ ಪ್ರೀತಿ ವಿಚಿಕಿತ್ಸಕವಾಗಿ ಮೂಡಿಬಂದಿವೆ.

      
ಇತಿಹಾಸಕ್ಕೆ ಎಲ್ಲವನ್ನೂ ದಾಖಲಿಸಿಕೊಳ್ಳುವ ಶಕ್ತಿ ಇದೆಯೇ ಎಂಬ ಸಂಶಯ ಎಂ ಎಲ್ ಶ್ರೀಕಂಠೇಶಗೌಡರು ಹೊಸಗನ್ನಡದ ಅರುಣೋದಯಲ್ಲಿ ಮುನ್ನುಡಿಕಾರರಾಗಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲದೇ ಹೋದಾಗ ಮೂಡುತ್ತದೆ ಎಂಬುದನ್ನು ಲೇಖಕರು ದಾಖಲಿಸುತ್ತಾರೆ. ಪ್ರವಾಸ ಮಾನವನನ್ನು ವಿಸ್ತರಿಸಬಲ್ಲ ಮತ್ತೊಂದು ಹೆದ್ದಾರಿ. ಆ ಹಾದಿಯಲ್ಲಿ ನಡೆದಾಗ ದಕ್ಕುವ ಅನುಭವಗಳು, ನೆನಪುಗಳು ಅವಿಸ್ಮರಣೀಯ. ಬರಹಗಾರನ ಹೃದಯದಲ್ಲಂತೂ ತನ್ನದೇ ನವ್ಯಲೋಕವನ್ನು ತೆರೆದು ‘ನಡೆದ ದಾರಿಯಲ್ಲೊಂದಿಷ್ಟು ನೆನಪುಗಳನ್ನು’ ಕಂಡುಂಡ ಅನುಭವಗಳನ್ನು ದಾಖಲಿಸುತ್ತಾ ವಿಸ್ಮಯವನ್ನು ಉಂಟುಮಾಡುತ್ತದೆ.




No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...