Total Pageviews

Tuesday 11 June 2019

"ತುಘಲಕ್" ನೊಂದಿಗೆ ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ', ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಡಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ.ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು.ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು.ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ ತುಘಲಕ್. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ.ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು.ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ.ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ,ತನ್ನ ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು.ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ,ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ.ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು.
ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು. ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು,ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ.
ತಾನು ಪ್ರಾರ್ಥನೆಯಲ್ಲಿರುವಾಗ   ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ. ಸಮುದಾಯ ರಂಗತಂಡ ವ್ಯಕ್ತಿಗಳನ್ನೇ ಕಾಯಿಗಳನ್ನಾಗಿ ಮಾಡಿಕೊಂಡು ರೂಪಿಸಿದ ಚದುರಂಗದಾಟದ ರೂಪಕ  ತುಘಲಕ್ ನಾಟಕದ ರಂಗಪ್ರಯೋಗಕ್ಕೆ ವಿನೂತನ ಕಳೆಯನ್ನು ತಂದುಕೊಟ್ಟಿದೆ.ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು.

ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿಯುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ "ಮಾವಿನ ತಳಿರು" ಇಹದ ಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.



No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...