Total Pageviews

Thursday 27 June 2019

ಕಾವ್ಯೋದ್ಯಾನವನದಲ್ಲೊಂದು ವಿಹಾರ ಭಾಗ 2
ಶಬ್ದಸೂತಕದಿಂದ ಕಾವ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗೆಯೇ ಬದುಕನ್ನೂ ಕೂಡ. ಶಬ್ದಗಳ ಬಂಧನದಲ್ಲಿಟ್ಟಷ್ಟೂ ಮುಕ್ತವಾಗುತ್ತಲೇ ಹೋಗುವುದು  ಕಾವ್ಯದ ಜಾಯಮಾನ; ನಿಗೂಢವಾಗುತ್ತಲೇ ಹೋಗುವುದು ಕಾವ್ಯದ ಗುಣ.ಕಾವ್ಯದ ಪಯಣವೆಂದಿಗೂ ಅನಂತತೆಯ ಕಡೆಗೆ.ದಕ್ಕಿದೆ ಎನ್ನುವಾಗಲೇ ದಕ್ಕದೇ ಹೋಗುವುದೂ ಕೂಡ ಕಾವ್ಯರಾಣಿಯ ಚಂಚಲತೆಯ ಲಕ್ಷಣ.ಇಂತಹ ಚಂಚಲ ಹಾಗೂ ಅಷ್ಟೇ  ಅಮಲಿನ ಕಾವ್ಯವನ್ನು ಸಾರ್ಥಕವಾಗಿ ದಕ್ಕಿಸಿಕೊಂಡ ಜಗತ್ತಿನ ದಾರ್ಶನಿಕರನ್ನು ದರ್ಶಿಸುವ ಮಹತ್ವದ ಕೃತಿಯಾಗಿ "ಜಾಡಮಾಲಿಯ ಜೀವ......." ಗಮನಸೆಳೆಯುತ್ತದೆ. ತನ್ನ ಪರಮಶಿಷ್ಯ ಜಲಾಲುದ್ದೀನ್ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾಗಿ ರೂಮಿಯ ಮಗನಿಂದ ಸಮಾಧಿಯನ್ನಲಂಕರಿಸಿಕೊಂಡ,"ವಕಾಲತ್- ಎ-ಶಾಮ್ಸ -ಎ-ತಬ್ರೀಝಿ" ಎಂಬ ಏಕೈಕ ಪರ್ಶಿಯನ್ ಕೃತಿಯ ನೇಕಾರ, ಜಗತ್ಪ್ರಸಿದ್ಧ ಚಿಂತಕ ಶಾಮ್-ಎ-ತಬ್ರೀಝಿಯಾಗಿರಬಹುದು,ಸೌಂದರ್ಯವನ್ನೇ ಆರಾಧಿಸಿ,ಕಾಲು ಕಳೆದುಕೊಂಡ ಭಗ್ನ ಶಿಲ್ಪವಾಗಿ ಬದುಕನ್ನು ಸಾವಿನೊಂದಿಗೆ ಸವೆಸಿದ ಮೆಕ್ಸಿಕನ್ ಕಾವ್ಯಾರಾಧಕಿ ಫ್ರಿದಾ ಕಾಹಲೊವಾ ಆಗಿರಬಹದು,ಕಾವ್ಯ ಮತ್ತು ಖಡ್ಗಗಳ ಸಾಂಗತ್ಯದಲ್ಲಿ ಕ್ರಾಂತಿಯ ಬೀಜ ಬಿತ್ತಿ ಸೋವಿಯತ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಅಹಮದ್ ಜಾವೇದ್ ಇರಬಹುದು,"ಸಾಂಗ್ಸ ಆಫ್ ದಿ ಆರ್ಮಿ "ಯನ್ನು ರಚಿಸಿ ಇಂಗ್ಲೆಂಡಿನ ಕಾರ್ಮಿಕರ ದನಿಯಾಗಿ ಕೊನೆಗೆ ಆತ್ಮಹತ್ಯೆಯಂತಹ ದುರಂತ ಸಾವನ್ನು ಕಂಡ ಕಾದಂಬರಿಕಾರ ಫ್ರಾನ್ಸಿಸ್ ಆ್ಯಡಮ್ಸ್ ಆಗಿರಬಹದು, ಸೇವೆಯನ್ನು ಸೈತಾನನಿಂದ ಕಲಿಯಬೇಕು ಎಂದು ಪ್ರತಿಪಾದಿಸಿ ಔರಂಗಜೇಬನಿಂದ ತಲೆದಂಡಕ್ಕೊಳಗಾದ ನಗ್ನತೆಯ ಆರಾಧಕ ಮೊಹಮ್ಮದ ಸಯೀದ್ ಸರ್ಮದ್ ಖಶಾನಿಯಾಗಿರಬಹುದು ,ಧರ್ಮಸುಧಾರಣೆಗಾಗಿ ತುಡಿದ ಮಾರ್ಟಿನ್ ಲೂಥರ್ ಕಿಂಗ್ ನನ್ನು ನೆನಪಿಸುವ, ಬಸವಣ್ಣನವರ ಆಚಾರವೇ ಸ್ವರ್ಗ ಅನಾಚಾರವೇ ನರಕ ವೆಂಬ ಚಿಂತನೆಗಳಿಗೆ ಹತ್ತಿರವಾಗಿ, ಅಕ್ಕಮಹಾದೇವಿಯಂತೆ ಸಾವಿಲ್ಲದ ಗಂಡನನ್ನು ಹುಡುಕುತ್ತಲೇ ಲೀನವಾದ ರಾಬಿಯಾ ಆಗಿರಬಹದು,ಪ್ರೇಯಸಿಯಿಂದ ಪ್ರೀತಿಯಿಂದ ಹೊಡೆಸಿಕೊಳ್ಳದವನು,ಶೆರೆ ಕುಡಿಯದವನು ಎಂದಿಗೂ ಕವಿಯಾಗಲಾರ ಎಂಬ ವಿಲಕ್ಷಣವಾದ ಸತ್ಯವನ್ನು ಪ್ರತಿಪಾದಿಸಿ ಕವಿತೆಯಾಗಿ ಮಾತ್ರ ಈ ಜಗಕೆ ದಕ್ಕಿದ ಗಾಲಿಬನಾಗಿರಬಹದು ಹೀಗೆ ಈ ಕೃತಿಗೆ ಮುನ್ನುಡಿಯಾದವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಬದುಕೆಂಬ  ದುರಂತ ನಾಟಕದ ನತದೃಷ್ಟ ನಾಯಕರುಗಳೆ;
ಸಮಾಜೋದ್ಧಾರಕ್ಕಾಗಿ ಪ್ರಭುತ್ವದ ವಿರುದ್ದ ಕಾವ್ಯಖಡ್ಗವನ್ನು ಹಿಡಿದು ಝಳಪಿಸಿದವರೇ ; ಕ್ರಾಂತಿಯ  ಮೂಲಕ ಮಾನವತೆಗಾಗಿ  ಪ್ರತಿಭಟಿಸಿದವರೇ.ಈ ಜಗದ ಸಾಂಸ್ಕೃತಿಕ ಲೋಕವನ್ನು ತಮ್ಮೊಳಗಿನ ಆಂತರ್ಯದ ಒಳನೋಟದ ಮೂಲಕ ನಿರ್ಭೀತಿಯಿಂದ ಎಚ್ಚರಗೊಳಿಸಿದವರೇ. ಮನುಷ್ಯನೊಳಗಣ ಮನುಷ್ಯತ್ವವನ್ನು ತೆರೆದು ತೋರಿಸುವ ಇಲ್ಲಿಯ ಕವಿತೆಗಳು ಮಹಾಮಾನವೀಯತೆಯ ಗಿಡದಲ್ಲರಳಿದ ಪುಷ್ಪಗಳು. ಮಾನವ ಆಚರಿಸಬೇಕಾದ ತತ್ವಜ್ಞಾನದ ಸಾಲುಗಳನ್ನು ಸರಳ ಸಾಲುಗಳ ಪರಿಮಳದ ಮೂಲಕ ಜನಮನಕೆ ತಲುಪಿಸಿದ ದಾಸಯ್ಯರು ಇಲ್ಲಿಯ ಕವಿಸೂರಿಗಳು. ಮೂಲ ಭಾವ, ಅರ್ಥ, ಆಶಯಗಳಿಗೆ ಕಿಂಚಿತ್ತೂ  ಧಕ್ಕೆಯೊದಗದಂತೆ ರಾಗಂರವರ ಲೇಖನಿಯಲ್ಲಿ ಇಲ್ಲಿಯ ಕವಿತೆಗಳು ಮರುಹುಟ್ಟು ಪಡೆದಿವೆ. ರಾಗಂರವರೇ ಹೇಳುವಂತೆ ಇಲ್ಲಿಯ ಕವನಗಳು  ಬರಿ ಶುಷ್ಕವಾದ ಭಾಷಾಂತರವಲ್ಲ ಬದಲಾಗಿ ಭಾವಶುದ್ಧತೆಯೊಂದಿಗೆ ಪುನರ್ ಸೃಷ್ಠಿಗೊಳಗಾಗಿವೆ. ನಿಜ. ನೀರಸ ಅನುವಾದ ಮೌಲಿಕವಾದುದನ್ನು ಹೊರಗಿಡುತ್ತದೆ. ಈ ಕವಿತೆಗಳನ್ನು ಪುನರ್ ಸೃಷ್ಟಿಸುವ ರಾಗಂರವರ  ಪರಿಯೇ ಮನೋಜ್ಞವಾಗಿದೆ -
"ಎಲ್ಲ ಇದೆ ಈ ಮೈಯೊಳಗೆ
ಹಸಿ ಗಂಧದ ಪರಿಮಳ
ಬಗೆ ಹೂಗಳ ಉಸಿರು
ಕೋಟಿ ಸಸಿಗಳಿಗೊಂದು ಬಸಿರು
ಎಲ್ಲ ಇದೆ ಈ ಮೈಯೊಳಗೆ
ಎದೆಯ ಬಟ್ಟಲದೊಳಗೇ
ಉಸಿರು ಕಟ್ಟಿಸುವ ವಿಷ
ಎಲ್ಲ ಎಲ್ಲ ಇದೆ ಈ ಮೈಯೊಳಗೆ"
ಎಂಬಲ್ಲಿನ ಆರ್ದ್ರತೆ ನವಪರಿಮಳದೊಂದಿಗೆ  ಘಮಘಮಿಸುತ್ತಿರುವ ಪರಿಯನ್ನು ಗಮನಿಸಿ. ರೂಪದರ್ಶಿ,"ವೈಟ್ ಎಲಿಫೆಂಟ್", "ವರ್ಲ್ಡ್ ಹೋಟೆಲ್ " ನಂತಹ ಕಾವ್ಯ ಸಂಕಲನಗಳ ಮೂಲಕ ಜನಮನಸೂರೆಗೊಂಡು ಮಡಿಲು ತುಂಬಿ ಹರಿಯುವಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು  ಪಂಜಾಬಿನಲ್ಲಿ ಹುಟ್ಟಿ ಅಮೆರಿಕಾದವರೆಗೆ ಹಬ್ಬಿಕೊಂಡ ಕಾವ್ಯಬಳ್ಳಿಯಂತಿದ್ದ ರೀತಿಕಾ ವಾಜಿರಾಣಿ ಎಂಬ, ಹೆತ್ತ ಮಗನನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕಿಯ ಮೇಲಿನ ಕಾವ್ಯ ಏನೆಲ್ಲವನ್ನೂ ಧ್ವನಿಸುತ್ತಿದೆ ಅಲ್ಲವೇ?  ಜನನದಿಂದ ಮರಣದವರೆಗಿನ ಉಸಿರು, ಬಸಿರು, ವಿಷದ ಮೂಲಕ ಅಂತ್ಯದ ಸಂಗತಿಗಳನ್ನು ಮೇಲಿನಂತೆ ಕೆಲವೇ ಸಾಲುಗಳಲ್ಲಿ ಹಾಡಿದ ರೀತಿಕಾಳ ನೋವ ಒಡಲು ಅದೆಷ್ಟು ಯಾತನೆಯಿಂದ ನರಳಿರಬೇಕಲ್ಲವೇ?  ಆ ನರಳುವಿಕೆ ಈ ಪದಗಳ ಮೂಲಕ ಬ್ರಹ್ಮಾಂಡವನ್ನೇ ಆವರಿಸಿ ಅನುರಣಿಸುತ್ತಿದೆ. ಕರಣ ಕರಣದಲೂ ರಿಂಗಣಿಸಿ ಸುತ್ತಿ ಸುಳಿಯುವ ಮಡುವನ್ನೇ ಸೃಷ್ಟಿಸುವ ಈ ಕಾವ್ಯದ ಅಂತಃಶಕ್ತಿಗೆ ನಾವು ತಲೆಬಾಗಲೇಬೇಕು.
ರಾಗಂ ರವರು ಜಗತ್ತಿನ ಹೊರವಲಯದ ಗುಡಿಸಲುಗಳಲ್ಲಿ ಕಳೆದುಹೋಗಿದ್ದ ಕಾವ್ಯಮಣಿಗಳನ್ನು ಆಯ್ದು ತಂದು ಪೊಸ ಮಾಲೆಯನ್ನಾಗಿ ಕಟ್ಟಿ ಕನ್ನಡ ಸರಸ್ವತಿಯ ಮುಡಿಗೇರಿಸಿ ಅಲಂಕರಿಸಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿ. ರೋಮ್ಯಾಂಟಿಕ್ ಯುಗದ ನಂತರದ ಸಮರ ಕಾವ್ಯಯುಗದ ಕವಿಗಳೂ ಕೂಡ ಶಬ್ದಸಂಗೀತವಾಗಿ ಈ ಕೃತಿಯ ಮೂಲಕ ಸುಮಧುರವಾದ ಕಾವ್ಯವಾಗಿದ್ದಾರೆ. "ದೇವರು" ಎಂಬ ತಮ್ಮ ವಿಶಿಷ್ಟ  ವೈಚಾರಿಕ ಕೃತಿಯಿಂದ ಭಗವಂತನನ್ನು ಹುಡುಕಿದ ಚಿಂತಕರಾದ ಎ. ಎನ್. ಮೂರ್ತಿರಾಯರು ಅಂತಿಮವಾಗಿ ಶೋಧಿಸಿದ್ದು ಇಲ್ಲಿಯ ಮನ್ಸೂರ ನೆಂಬ ಮಾನವಪ್ರೇಮಿ ಕವಿಯೊಬ್ಬ ತಡಕಾಡಿದ ದೇವರನ್ನೇ ಎಂಬುದನ್ನು ನೋಡಿ -  "ಹೃದಯದ ಕಣ್ಣುಗಳಿಂದ
ದೇವರ ಕಂಡೆ
ಯಾರು ನೀ ಎಂದೆ
ಮುಗುಳ್ನಕ್ಕು ಆತ ನುಡಿದ
"ನೀನು"
ನಾನೆಂದರೆ ನೀನೆ.." .
ಯುದ್ದಕಾವ್ಯ ಯುಗದಲ್ಲಿ ಪರಿಶುದ್ಧ ಪ್ರೇಮವನ್ನು ಬಿತ್ತಿ,
ಪ್ರೇಮ ತುಂಬಿದ ಹೃದಯದ ಬೆಳಕನ್ನು ಹರಡುವ ರಷ್ಯಾದ ಅಲೆಮಾರಿ ಕವಿ ನಾಟಕಕಾರ ವಿಮರ್ಶಕ ನಿಖೊಲೆ ಗ್ಯಾಮಿಲಿಯೊ ನ ಪ್ರಣಯ ಕವಿತೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ -
"ಯಾರೂ ಸಾಯುವುದಿಲ್ಲ
ನಿನ್ನ ಮುಟ್ಟಿ
ಯಾರೂ ಬದುಕುವುದಿಲ್ಲ
ನಿನ್ನ ಮೆಟ್ಟಿ
ಒಟ್ಟಂದದ ಬದುಕಿನಲ್ಲಿ
ನಿನ್ನ ಸಂಗವೆ
ಪರಮ ಮಂಗಳ
ನಿನ್ನ ಸ್ಮರಣೆಯ
ಬೆಳಕು ಹಬ್ಬಿದೆ
ಗೆಲುವಾಗಿದೆ ಹೃದಯದಂಗಳ"
ಈ ಕವಿತೆಯ ಸಾಲುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಕೆ ಎಸ್ ನರಸಿಂಹಸ್ವಾಮಿಯವರ
" ನಿನ್ನ ಪ್ರೇಮದ ಪರಿಯೆ
ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.." ಎಂಬ ಕಾವ್ಯದೆಸಳುಗಳು  ನೆನಪಾಗುತ್ತವೆ.ಹೌದು. ಪ್ರೇಮದ ಲಲಾಟವೇ ಅಂಥಹದ್ದು. ಪ್ರೇಮ ಕಾಡದ ಕವಿಯಿರಲಾರ ಎಂಬುದಕ್ಕೆ ಷೇಕ್ಸಪಿಯರ್ ನ ನಾಟಕಗಳೂ ಸಾಕ್ಷ್ಯ ಹೇಳುತ್ತವೆ; ಬೇಂದ್ರೆಯವರ ಸಖಿಗೀತ ಗಳು ದೃಷ್ಟಾಂತವನ್ನೊದಗಿಸುತ್ತವೆ; ಕುವೆಂಪುರವರ ಪ್ರೇಮಕಾಶ್ಮೀರ ಹಿಮಸುರಿಸಿ ಹಾಡುತ್ತದೆ. ಎಚೆಸ್ವಿಯವರ ಭಾವಗೀತೆಗಳು ದನಿಯೆತ್ತಿ ಗಾಯನಗೈಯ್ಯುತ್ತವೆ.
ಮಾನವಸಮಾಜವನ್ನು ಮುನ್ನಡೆಸಲು ಬೇಕಾದ ಸಮಾಜವಿಜ್ಞಾನ, ರಾಜ್ಯಶಾಸ್ತ್ರ,ತತ್ವಜ್ಞಾನ,ವಿಜ್ಞಾನ,ಆಧ್ಯಾತ್ಮ,ಯೋಗ,ಇತಿಹಾಸ, ಮಾನವಶಾಸ್ತ್ರಗಳಾದಿಯಾಗಿ ಮುಗಿಯದ ಮುಗಿಲಿನಂತಹ ವಸ್ತುವೈವಿಧ್ಯದ ಇಲ್ಲಿಯ ಕಾವ್ಯಗಳು ಸಾರ್ವತ್ರಿಕ ಸತ್ಯವನ್ನು ತಮ್ಮ ಉಸಿರೆಂಬಂತೆ ಸಾರುತ್ತವೆ.
ಆಧುನಿಕ ಧರ್ಮಕಾರಣದ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿರುವ ಭಾವೈಕ್ಯೆತೆಯ ಪ್ರಜ್ಞೆಯನ್ನು ಕುರಿತು ಚರ್ಚಿಸುವ ಕವಿಕಾವ್ಯಗಳು ಈ ಕೃತಿಯನ್ನಲಂಕರಿಸಿರುವುದು ಔಚಿತ್ಯಪೂರ್ಣವಾಗಿದೆ.
ಪಾಕಿಸ್ತಾನಕ್ಕಂಟಿಕೊಂಡಿರುವ ಪಂಜಾಬಿನವನಾದ ಸಂತ,ಮಹಾವಿದ್ರೋಹಿಯಾದ ಬುಲ್ಲೇಷಾ ನಲ್ಲಿ ಹುಟ್ಟಿದ
" ಎಲ್ಲ ಎಲ್ಲರೂ ಕುರುಡರಾದಲ್ಲಿ
ಹೋಗೋಣ ಬಾ ಬುಲ್ಲೆ
ಅಲ್ಲಿ ಗುರ್ತಿಸುವುದಿಲ್ಲ ನಮ್ಮನಾರೂ
ಜಾತಿ ಬಣ್ಣ ದೇಶ ಧರ್ಮಗಳಿಲ್ಲದ
ಕುರುಡರ ಕಾರುಣ್ಯದಲ್ಲಿ
ನಾನ್ಯಾರು?  ಅನ್ಯರಾರು" ಎಂಬ ಕಾವ್ಯಝರಿಯು ಭೇದವಿಲ್ಲದ ಲೋಕದ ಆಲಾಪವನ್ನು ಸರ್ವರ ಕಿವಿಗಿಂಪಾಗುವಂತೆ ಹೇಗೆ  ಮೊರೆಯುತ್ತಿದೆಯಲ್ಲವೇ ? ಇದೇ ಇಂದಿನ ತುರ್ತು ಸಂದರ್ಭದ ತುಡಿತವಾಗಬೇಕು.
ಅರಸೊತ್ತಿಗೆಯ ಹೊಂಚಿಗೆ, ಮಿಲಿಟರಿಯ ಬಲೆಯ ಸಂಚಿಗೆ ಕೊರಳೊಡ್ಡಿಕೊಂಡ, ಕ್ರಾಂತಿಕಾರಿ
ಬಂಡಾಯಕ್ಕೆ ಮತ್ತೊಂದು ಹೆಸರಾಗಿದ್ದ ಮೈನುಯೆಂಗ್ ಕೆ. ಕುಂತೀ ಯ ಸಿಡಿಲ ಕಿಡಿಗಳನ್ನು ಒಮ್ಮೆ ಕೇಳಿ-
" ಗೊತ್ತಿರಲಿಲ್ಲ ನಾಯಕರೆ
ಬೂಟಿನ ಹಿಂಬದಿಯ ಹಿಡಿ ಮಣ್ಣಿನಲ್ಲಿ
ನನ್ನ ಕ್ರಾಂತಿಯ ಕನಸರಳುತ್ತದೆ
ಅದು ಸಿಡಿದರೆ ಕಿಡಿಯಾಗಿ
ಅನ್ಯಾಯದ ಗದ್ದುಗೆ ಉರುಳುತ್ತದೆ " ನಮ್ಮ ಕನ್ನಡದ
ಬಂಡಾಯ ಕಾವ್ಯದ ಬಿಸುಪನ್ನು ಸ್ಮರಿಸುವ ಈ ಸಾಲುಗಳು ಅನ್ಯಾಯವನ್ನು  ಧಿಕ್ಕರಿಸಿ ನಿಲ್ಲುತ್ತವೆ. ಭಾವೈಕ್ಯತೆಯೂ ಜಗತ್ತಿನ ತಲ್ಲಣಗಳನ್ನು ತುಂಬಿಕೊಂಡ ಕಾವ್ಯ ಎಷ್ಟು ಅರ್ಥಪೂರ್ಣವಾಗಿರಬಲ್ಲದು ? ಎಷ್ಟು ಚಿಂತನಾಶೀಲವಾಗಿರಬಲ್ಲದು ? ಎಂಬುದಕ್ಕೆ ಇಲ್ಲಿ ಪದಗಳಾದ ಕವಿಕಾವ್ಯಗಳೇ ನಿದರ್ಶನಗಳಾಗಿವೆ. ಬದುಕಿನ ಮುಂದಿರುವ ಸವಾಲುಗಳನ್ನು ಎದುರಿಸಿ ಹೋರಾಡುವ ಆಂತರಿಕ ಎಚ್ಚರಿಕೆಯ ಪ್ರಜ್ಞೆ, ಸಮಾಜದ ಸಮಸ್ಯೆಗಳೊಂದಿಗೆ ಬದುಕುವ ಕಲೆಯನ್ನು ಕಲಿಸುವ ಸಾಮಾಜಿಕ ಪ್ರಜ್ಞೆ, ಶೋಷಿಸುವ ಪ್ರಭುತ್ವದ ವಿರುದ್ಧ ಹೋರಾಡುವ ಬಂಡಾಯದ ಪ್ರಜ್ಞೆ, ರಾಜ್ಯವನ್ನು ಮುನ್ನಡೆಸುವ ರಾಜಕೀಯ ಪ್ರಜ್ಞೆ, ವಕ್ರರೇಖೆಯಂತೆ ಎದುರಾಗುವ ಬದುಕನ್ನು ಬಂದಂತೆ ಪ್ರೀತಿಸುವ ಜೀವನ ಪ್ರಜ್ಞೆಗಳೊಂದಿಗೆ ಮುಖಾಮುಖಿಯಾಗುವಂತೆ ಮಾಡುವ ಅಪರೂಪದ ಕೃತಿ ಜಾಡಮಾಲಿಯ ಜೀವ ಕೇಳುವುದಿಲ್ಲ.
ಪ್ರೊ.ಸಂಗಮೇಶ ಗಣಿಯವರು ಹೇಳುವಂತೆ ಭೌತಿಕ ಹಾಗೂ ಮನುಷ್ಯನೊಳಗಿನ ಆಂತರಿಕ ಯುದ್ಧೋನ್ಮಾದದ ಸಮಕಾಲೀನ ವಿಷಮ  ಸಂದರ್ಭದಲ್ಲಿ ಪ್ರೀತಿ,ವಾತ್ಸಲ್ಯ, ದಯೆ, ಅಂತಃಕರಣ, ಮಾನವೀಯತೆಗಳನ್ನು ನಮ್ಮ ಎದೆಯಲ್ಲಿ ಬಿತ್ತಬಲ್ಲ ಈ ಕೃತಿ  ಇಂದು ಅತ್ಯಂತ ಪ್ರಸ್ತುತ ಹಾಗೂ ಔಚಿತ್ಯಪೂರ್ಣವೆನಿಸಿದೆ. ಜಾಗತಿಕವಾಗಿ ವಿಭಿನ್ನ ಸಂಸ್ಕೃತಿಯ ಕವಿಕಾವ್ಯಗಳನ್ನು ಕನ್ನಡದ ಸಂದರ್ಭದಲ್ಲಿಟ್ಟು ಅನುಸಂಧಾನಿಸುವ ಕ್ರಿಯೆಯೇ ಅನನ್ಯವಾದುದು. ಹೀಗೆ ಅನನ್ಯತೆಯನ್ನೇ ತಮ್ಮ ಸಾಹಿತ್ಯದ ಲಕ್ಷಣವಾಗಿಸಿಕೊಂಡ ಡಾ.ರಾಜಶೇಖರ ಮಠಪತಿಯವರು (ರಾಗಂ) ಈ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ವಿಭಿನ್ನವಾದ ಕೊಡುಗೆಯೊಂದನ್ನು ನೀಡಿದ್ದಾರೆ.ಈ ಕೃತಿಯಲ್ಲಿ ಪಡೆಮೂಡಿರುವ ಬಹುಪಾಲು ಕಾವ್ಯಾರಾಧಕರೆಲ್ಲ ಪ್ರೇಮಪೂಜಾರಿಗಳೇ. ಪ್ರೇಮದ ಜೊತೆಗೂಡಿ ಬಂದ ಮಾನವೀಯತೆ ಈ ಕೃತಿಯನ್ನಾವರಿಸಿದ  ಮತ್ತೊಂದು ವಿಶ್ವಪಥದ ಮೌಲ್ಯ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕನ್ನಡ ಕವಿಯ ಸಾಲುಗಳು ಇಲ್ಲಿಯ ಕಾವ್ಯದ ಪಾದಗಳನ್ನು ಹೋಲುತ್ತವೆ. ಮಹಾಮಾನವತಾವಾದಿಗಳನ್ನೆಲ್ಲ ತಮ್ಮ ಕೃತಿಯ ಮೂಲಕ ಹೀಗೆ ಕಟ್ಟಿಕೊಡುತ್ತಿರುವ ಪ್ರಯತ್ನ ಅರ್ಥಪೂರ್ಣವಾದುದು. ಕವಿಕಾವ್ಯಗಳ ಜಾಗತಿಕ ಸಂಕಥನಗಳನ್ನು ಕಟ್ಟಿಕೊಡುವ ರಾಗಂರವರ ಪ್ರಯತ್ನ ಅನುಪಮವಾದದ್ದು.ಸಾರ್ಥಕವಾದದ್ದು. ಈ ಕೃತಿಯ ಶೀರ್ಷಿಕೆಯಲ್ಲಿ ಬಳಕೆಯಾದ ಜಾಡಮಾಲಿಯೇ ಒಂದು ರೂಪಕ.ಜಗತ್ತನ್ನು ಪೊರೆಯುವ ಪ್ರಕೃತಿಯಿಂದ  ಹಿಡಿದು ಉದ್ಯಾನವನದಲ್ಲಿ ಸಸಿಗಳನ್ನು ಪೋಷಿಸುವ ಪೋಷಕಿಯವರೆಗೆ ಜಾಡಮಾಲಿ  ಇಲ್ಲಿ ವಿಶಾಲವಾದ ಹರವು ಪಡೆದುಕೊಂಡಿದ್ದಾಳೆ. ಜೀವ ತುಂಬಿ ಕಾವ್ಯ ಹೆಣೆದು ಕಾಪಿಡುವ ಈ ಕುಶಲಿಗರೂ ಇಲ್ಲಿ ಜಾಡಮಾಲಿಗಳೆ.ಕರಕಿಯೆಳೆಯ ಹೆಕ್ಕಿ ತಂದು, ತೂಗುವಂಥ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿ, ಗುಟುಕಿಡುವ ಹಕ್ಕಿಯೂ ಜಾಡಮಾಲಿಯೇ. ನವಮಾಸಗಳ ಹೊತ್ತು ಹೆತ್ತು ಕರುಳು ಕುಡಿಗಳಿಗೆ ಜೀವತುಂಬುವ ತಾಯಿಯೂ ಜಾಡಮಾಲಿಯೇ.ಹೀಗೆ ಜಾಡಮಾಲಿಯನ್ನು ನಾವು ಇದುವರೆಗೂ ಕಂಡು ಕೇಳರಿಯದ ಬಗೆಯಲ್ಲಿ ವಿಸ್ತರಿಸಿಕೊಳ್ಳುವ ರೂಪಕವನ್ನಾಗಿಸಿದ್ದಾರೆ ರಾಗಂರವರು.  ವಿಶ್ವದ ಕಾವ್ಯಕುಸುರಿಗರ ಕಾವ್ಯಗಳನ್ನು ತಮ್ಮದೇ ಭಾಷೆಯಲ್ಲಿ ಅರಳಿಸಿ, ಕನ್ನಡದ ತೊಡುಗೆಯುಡಿಸಿ  ಅಲಂಕರಿಸಿರುವ  ಡಾ. ರಾಜಶೇಖರ ಮಠಪತಿಯವರೂ ಒಬ್ಬ ಜಾಡಮಾಲಿಯೇ. ತನ್ನೆಲ್ಲ ನೋವು ಸಂಕಟಗಳನ್ನು ಪೊರೆಯುವುದರಲ್ಲಿಯೇ ತನ್ನೆಲ್ಲ ನೋವು ಸಂಕಷ್ಟಗಳನ್ನು ಮರೆಯುವ ಅವಳ ಅಂತಃಕರಣ, ಸಹನೆ, ತ್ಯಾಗ,  ಅವಿಸ್ಮರಣೀಯವಾದುದು. ಆರ್ತನಾದ, ವೇದನೆಯನ್ನು ಕೇಳಿದಾಗ ಜಾಡಮಾಲಿಯ ಜೀವ ಹೇಗೆ ಕೇಳುವುದಿಲ್ಲವೋ,  ( ತಡೆಯುವುದಿಲ್ಲವೋ)  ಹಾಗೆ ದುರಂತನಾಯಕರಾಗಿರುವವರ ಕವಿಕಾವ್ಯಗಳನ್ನು ಕಂಡಾಗ ರಾಗಂ ರವರ ಜೀವವೂ ಕೇಳಿಲ್ಲ.
ಡಾ. ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಂದರ್ಭದಲ್ಲಿ  ಉಲ್ಲೇಖಿಸಿದ ಗಂಭೀರ ಮಾತುಗಳನ್ನು ಇಲ್ಲಿ ಪಡೆಮೂಡಿರುವ ಜಾಗತಿಕ ಸಾಹಿತ್ಯ ಕ್ಷೇತ್ರಕ್ಕೆ ಅನ್ವಯಿಸುವುದಾದರೆ, ಸತ್ಯ,ಶಾಂತಿ, ಪ್ರೀತಿ,ನಿರ್ಮಲತೆ,ಪರಿಶುದ್ಧತೆಯ ಮಾನವತಾವಾದದ ಅಮರ ಮೌಲ್ಯಗಳನ್ನು ತಮ್ಮ ಕಾವ್ಯಗಳ ಮೂಲಕ ಬಿತ್ತಿದ ಇಂತಹ ಕವಿಕಾವ್ಯಗಳನ್ನು ಭಾಷೆ,ಸಾಹಿತ್ಯ,ದೇಶ ಕಾರಣವಾಗಿ ವಿಮರ್ಶೆಯ ಮುಖ್ಯವಾಹಿನಿಯಿಂದ ಹೊರಗಿಟ್ಟ ಸಾಂಸ್ಕೃತಿಕ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕಾಗಿದೆ.ಇಂತಹ ಸಾಂಸ್ಕೃತಿಕ ಅಸ್ಪೃಶ್ಯ  ಪರಂಪರೆಯೊಂದರ ಕಡೆಗೆ ಎಚ್ಚರಗೊಳ್ಳಬೇಕಾದ ಅವಶ್ಯಕತೆಯನ್ನು ಈ ಕೃತಿ ಅತ್ಯಪೂರ್ವವಾಗಿ ಸಾರುತ್ತದೆ.


9 comments:

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...