Total Pageviews

Friday 24 November 2023

ಉಳುಕು



ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
ಸತ್ಯದ ರ‍್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ತಿ ಮಜ್ಜೆಗಳು
ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ

ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು

ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ

ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು

ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
ಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕು
ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕು
ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...