Total Pageviews

Wednesday 4 December 2019

ವಿಜ್ಞಾನದ ಹಬ್ಬ
ಬಂದಿದೆ ಬಂದಿದೆ ವಿಜ್ಞಾನದ ಹಬ್ಬ
ನಮಗೆಂದೇ ತಂದಿದೆ ಬೆಳಕಿನ ಹಬ್ಬ
ಏಳು ಬಣ್ಣಗಳ ತಿಳಿಯುವ ಹಬ್ಬ
ಹಲವು ವಿಷಯಗಳ ಕಲಿಯುವ ಹಬ್ಬ

ಪರಿಸರ ಗಣಿತ ಸಮಾಜದ ಹಬ್ಬ
ಹಾಡು ನಾಟಕ ಕುಣಿಯುವ ಹಬ್ಬ
ಮಾಡುತ ನಲಿಯುತ ಕಲಿಯುವ ಹಬ್ಬ
ಹರ್ಷದಿ ಆಡಿ ತಿಳಿಯುವ ಹಬ್ಬ

ಬದುಕಿನ ಪಾಠವ ಕಲಿಸುವ ಹಬ್ಬ
ಜ್ಞಾನದ ದೀವಿಗೆ ಹಿಡಿಯುವ ಹಬ್ಬ
ಚಟುವಟಿಕೆ ಪ್ರಯೋಗ ದರ್ಶನ ಹಬ್ಬ
ನೆಚ್ಚಿನ ಕೌಶಲ ಗಳಿಸುವ ಹಬ್ಬ

ನಾವ್ ಇಂದೇ ಜ್ಞಾನಿಗಳಾಗುವ ಹಬ್ಬ
ಗೆಳೆಯರೊಂದಿಗೆ ಕಲಿಯುವ  ಹಬ್ಬ
ವಿಶ್ಲೇಷಣೆ, ತರ್ಕ, ಕಾರಣ  ಹಬ್ಬ
ಪರಿಸರವನ್ನು ಅರಿಯುವ ಹಬ್ಬ

ತಿರುಗುವ ಭೂಮಿಯ ಹಿಡಿಯುವ ಹಬ್ಬ
ನ್ಯೂಟನ್ ಬೋಸ್ ನೆನಪಿನ ಹಬ್ಬ
ಕೂಡಿ ಕಳೆದು ಭಾಗಿಸುವ ಹಬ್ಬ
ಸಂಧಿ ವಚನ ವ್ಯಾಕರಣದ ಹಬ್ಬ

ರೈಮ್ಸ ಗೇಮ್ಸ ಟಿ ಪಿ ಆರ್ ಹಬ್ಬ
ಭೂಗೋಳವ ಸುತ್ತಿ ಬರೆಯುವ ಹಬ್ಬ
ಗೀತ ಸಂಗೀತ ಒಗಟಿನ ಹಬ್ಬ
ನಾಟಕ ನಾಟ್ಯವನಾಡುವ ಹಬ್ಬ

ನಾವೆಲ್ಲರೂ ಹಕ್ಕಿಗಳಾಗುವ ಹಬ್ಬ
ಹಾರಿ ಚಂದಿರ ಹಿಡಿಯುವ ಹಬ್ಬ
ಮರ ಗಿಡಗಳು ನಾವು ಆಗುವ ಹಬ್ಬ
ಉಸಿರಿನ ಹಸಿರು ತುಂಬುವ ಹಬ್ಬ

ನಮ್ಮೊಡನೆ ತಾರೆಗಳಿಳಿಯುವ ಹಬ್ಬ
ಸೌರಮಂಡಲಕೆ ನೆಗೆಯುವ ಹಬ್ಬ
ಬುಧ ಗುರು ಶುಕ್ರವ ಮುಟ್ಟುವ ಹಬ್ಬ
ಶನಿಯ ಉಂಗುರ ಧರಿಸುವ ಹಬ್ಬ

ಹುಣಸೆ ಬೀಜ ಗೋಲಿಗಳ ಹಬ್ಬ
ಎಣಿಸಿ ಲೆಕ್ಕವ ಮಾಡುವ ಹಬ್ಬ
ಗುಣಿಸಿ ಸಂತಸ ಹಂಚುವ ಹಬ್ಬ
ಭಾಗಿಸಿ ಕಷ್ಟವ ಕಳೆಯುವ ಹಬ್ಬ

ಬಣ್ಣದ ಚಿತ್ರವ ಬಿಡಿಸುವ ಹಬ್ಬ
ಬರಹದ ಕಲೆಯ ಅರಳಿಸೊ ಹಬ್ಬ
ರೇಖೆಯ ಮೇಲೆ ಪಯಣದ ಹಬ್ಬ
ಚಿತ್ತಾರದ ಮಾಯಾಲೋಕದ ಹಬ್ಬ

ಮೈಟೋಕಾಂಡ್ರಿಯ ಮೀರಿಸೋ ಹಬ್ಬ
ಹೃದಯದ ಮಾತು ಕೇಳುವ ಹಬ್ಬ
ಮೆದುಳಿನ ಚಿಂತನೆ ಅರಿಯುವ ಹಬ್ಬ
ಕರುಳಿನ ಕೂಗು ಆಲಿಸೋ ಹಬ್ಬ

ಭೂಪಟ ನಕಾಶೆ ರಚಿಸುವ ಹಬ್ಬ
ಏಳು ಖಂಡಗಳ ಜಿಗಿಯುವ ಹಬ್ಬ
ಸಾಗರದೊಳಗೆ ಮುಳುಗುವ ಹಬ್ಬ
ಜಲಚರಗಳೊಂದಿಗೆ ಆಡುವ ಹಬ್ಬ

ಜೀವಿಯ ನಿಜ ಜಾತಿ ತಿಳಿಯುವ ಹಬ್ಬ
ತಾರತಮ್ಯವ ತೊಲಗಿಸೋ ಹಬ್ಬ
ಕಲಿಕೆಯ ಅಂಬರವೇರುವ ಹಬ್ಬ
ಪಂಚತಂತ್ರಗಳ ಬಳಸುವ ಹಬ್ಬ

ಜೀವನ ಕಲೆಯ ತೋರಿಸೊ ಹಬ್ಬ
ಅಜ್ಞಾನದ ಬಲೆಯ ಬಿಡಿಸುವ ಹಬ್ಬ
ಪ್ರೀತಿ ಸಂತಸದಿ ಕುಣಿಯುವ ಹಬ್ಬ
ಜ್ಞಾನಸಾಗರದಿ ಈಜುವ ಹಬ್ಬ

ನೆಲ ಜಲ ಗಾಳಿಯಲಾಡುವ ಹಬ್ಬ
ಸೀಳಿ ರಚನೆಯ ತಿಳಿಯುವ ಹಬ್ಬ
ಕಾಡು ಪರ್ವತ ಏರುವ ಹಬ್ಬ
ಮಂಗಳನಂಗಳ ಕಾಣುವ ಹಬ್ಬ


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...