ಡಾ.ರಾಜಶೇಖರ ಮಠಪತಿ (ರಾಗಂ) ರವರು ಗಡಿನಾಡು ಬೆಳಗಾವಿ ಜಿಲ್ಲೆಯ ತೆಲಸಂಗದಲ್ಲಿ ಜನಿಸಿ,
'ಅಥಣಿ', 'ಚಡಚಣ' ದಲ್ಲಿ ಬೆಳೆದು 'ಸೊಲಾಪುರ' 'ವಿಜಯಪುರ' 'ಧಾರವಾಡ' ಗಳಲ್ಲಿ ಶಿಕ್ಷಣ
ಪಡೆದು ,ಗುಳೇದಗುಡ್ಡ ,ಬಾಗಲಕೋಟೆ, ಬೇಲೂರು, ಮೈಸೂರು ಬೆಂಗಳೂರು ಗಳಲ್ಲಿ ಅಧ್ಯಾಪಕ
ವೃತ್ತಿಯನ್ನು ಕೈಗೊಂಡು ಕನ್ನಡ ನಾಡಿನಾದ್ಯಂತ ಅಲೆದು 'ಅಕ್ಷರದ ಮಹಾಮನೆ' ಕಟ್ಟುವ
ಜಂಗಮನಂತೆ ಬದುಕುತ್ತಿದ್ದಾರೆ.
"ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂಬುದನ್ನು ಸಾಧಿಸಿ ತೋರುತ್ತಿರುವಂತೆ
ಅಲೆಮಾರಿ ಗುರುವಾಗಿ, ಹೋದ ಕಡೆಯಲ್ಲೆಲ್ಲಾ ಸಾಹಿತ್ಯ ಸಂಭ್ರಮವನ್ನು ಸೃಷ್ಟಿಸಿ
ಸಾಹಿತಿಗಳ, ಸಾಧಕರ,ಗೆಳೆಯರ, ಶಿಷ್ಯ ಬಳಗಗಳ ಬಹು ದೊಡ್ಡ ಜೀವಂತ ಪರಂಪರೆಯೊಂದನ್ನು
ಹುಟ್ಟುಹಾಕಿ ಮತ್ತೆ ಮುನ್ನಡೆಯುವ "ರಾಗಂ" ರವರ "ಅಕ್ಷರ ಜಂಗಮ"ನ ಜಾಯಮಾನ
ವಿಶಿಷ್ಟವಾದುದು.
೪೬ ರ ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಹಿಮಾಲಯವನ್ನೇರಿ ಸಾಹಿತ್ಯದ ಭೀಮೆಯಾಗಿ ,'ಓಶೋ - ಬೆಳಕಿನ ಕಥೆ' , 'ಹೂವ
ತಂದವರು' ,'ಇರುವಷ್ಟು ಕಾಲ' , 'ಗಾಂಧಿ ಅಂತಿಮ ದಿನಗಳು', 'ಬಹಿಷ್ಕೃತರ ಬೆಳಕಿನಲ್ಲಿ',
'ಹೆಣ್ಣು ಹೇಳುವ ಅರ್ಧಸತ್ಯ', 'ಗಲ್ಲು ಗಡಿಪಾರು' ಮುಂತಾದ ೭೨ ರಷ್ಟು ಸಂಖ್ಯೆಯ ಕೃತಿಗಳ
ಮೂಲಕ 'ರಾಗಂ'ರವರು ಕನ್ನಡ ನಾಡಿನಾದ್ಯಂತ ಹಾಗೂ ನಾಡಿನಾಚೆಯೂ ವಿಸ್ತಾರವಾಗಿ
ಪ್ರವಹಿಸಿದ್ದಾರೆ.
ಡಾ.ರಾಜಶೇಖರ ಮಠಪತಿ(ರಾಗಂ) ರವರು ದಣಿವರಿಯದ ಬರಹಗಾರ.ಅವರ ಲೇಖನಿಗೆ ನಿಂತು
ವಿರಮಿಸುವಷ್ಟು ತಾಳ್ಮೆಯಿಲ್ಲ .ಹಾಗೆಂದು ಮೀರಿದ ಓಘದಿಂದ ಅವರ ಸಾಹಿತ್ಯ ಲಯ ತಪ್ಪಿದ್ದೂ
ಇಲ್ಲ. ಅವರ ಲೇಖನಿಗೆ ಗೊತ್ತಿರುವುದೊಂದೆ ಅದು "ನಿರಂತರ ಅಕ್ಷರ ಪ್ರವಾಹ". ಕಾಣುವುದೆಲ್ಲವನ್ನೂ ಅರ್ಥಪೂರ್ಣವಾಗಿ ಅನುಭವಿಸಿ ಪದಗಳನ್ನು ಕಟ್ಟುವ 'ರಾಗಂ' ರವರ ಕವಿಕೌಶಲ ರಮಣೀಯವಾದದ್ದು.
ಬದುಕೆಂಬ ಮಹಾಕಾವ್ಯವನ್ನು
ಸನಿಹಕ್ಕೆ ಬರುವ ಒಂದಂಶವೂ ಬಿಟ್ಟುಹೋಗದಂತೆ ಅರ್ಥಪೂರ್ಣವಾಗಿ, ಸಾರ್ಥಕವಾಗಿ ಕಟ್ಟಬೇಕೆಂಬ ರಾಗಂ ರವರ ಹಂಬಲ ತೀರದ ದಾಹ.
"ಆಕಾಶವೆಂಬ ಪಾತ್ರೆಯನ್ನು
ಕಣ್ಣುಗಳಿಂದಲೇ ಖಾಲಿ ಮಾಡುತ್ತೇನೆ
ಜಗದ ಹಿಮಗಿರಿಗಳನ್ನೆಲ್ಲ
ನನ್ನೆದೆಯಲ್ಲಿ ಬಚ್ಚಿಡುತ್ತೇನೆ
ಸೂರ್ಯರಶ್ಮಿಗಳನ್ನೆಲ್ಲ
ಬುದ್ಧಿಯ ಬುತ್ತಿಯಲ್ಲಿ ಹೊಚ್ಚಿಡುತ್ತೇನೆ
ನನ್ನ ನಿಲುವಿನಲ್ಲಿ ಆ ದೇವನನ್ನೂ ಸೋಲಿಸುತ್ತೇನೆ "
ಎಂದು ಅವರೇ ಒಂದು ಕಡೆ ಉಲ್ಲೇಖಿಸುವ 'ಜಾನ್ ಕೀಟ್ಸ್'ನ ಸಾಲುಗಳಿಗೆ 'ರಾಗಂ' ರವರು ಅನ್ವರ್ಥವಾಗಿ ಬದುಕುತ್ತಿದ್ದಾರೆ.
ಪ್ರಚಾರಪ್ರಿಯ ಸಾಹಿತ್ಯಕ್ಕಿಂತಲೂ, ವಿಚಾರ ಪ್ರಿಯ ಸಾಹಿತ್ಯ ರಚಿಸಿ ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.ಮೊಗೆದಷ್ಟೂ , ಬರೆದಷ್ಟೂ ಒರತೆಯಾಗಿ, ಜೀವಸೆಲೆಯಾಗಿ ಉಕ್ಕುವ 'ರಾಗಂ' ರವರ ಸಾಹಿತ್ಯಗಂಗೆ
ಕಾವ್ಯ, ನಾಟಕ, ಪ್ರಬಂಧ ,ಅಂಕಣ ಬರಹ, ಸಂಶೋಧನೆ, ವಿಮರ್ಶೆ, ಭಾಷಾಂತರ ಪ್ರಕಾರಗಳ ಮೂಲಕ
ವಿಶಾಲ ಹರವನ್ನು ಪಡೆದಿದ್ದಾಳೆ
ತವರಿಗಾಗಿ
ತುಡಿಯುವ ಈ ಹೆಜ್ಜೆ ಗುರುತುಗಳೇ ಇದೇ ಜನವರಿ ೨೨ ರಂದು ತವರು ನಾಡಾದ ಇಂಡಿ ತಾಲೂಕಿನ
ಕೆರೂರು ನಲ್ಲಿ ನಡೆಯುವ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ರಾಗಂ
ರವರನ್ನು ಹುಡುಕಿಕೊಂಡು ಬರುವಂತೆ ಮಾಡಿವೆ.
'ರಾಗಂ' ರವರಿಗೆ ಹಾರ್ದಿಕ ಅಭಿನಂದನೆಗಳು
No comments:
Post a Comment