Total Pageviews

Wednesday, 19 November 2025

ಚಹಾ ಮತ್ತು ನಾನು

 ಚಹಾ ಮತ್ತು ನಾನು

ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ
ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ
ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ
ರಸವೇ ಜನನ ಎಂಬ ತತ್ವವಿನ್ನೇಕೆ ? ಮುಕ್ತಿಯೆಂಬುದಿದೆಯೆ 


ವಿರಸದಲ್ಲಿಯೂ ರಸವಿದೆ ಸಮರಸವಲ್ಲವೇ ಭೂಮಿತೂಕ
ನೀನೊಂದು ವ್ಯಾಖ್ಯಾನಿಸಲಾಗದ ಆಜನ್ಮ ರಸಪಾಕ
ಬ್ರಹ್ಮಾಂಡದತ್ತ ಕೊಂಡೊಯ್ಯುವ ನೀನು ಕರಸ್ಥಲದ ತುಳುಕು 

ಬಾ ಜೇನಾಗುವಾ ಎಂದು ಹಾಕೋಣ ಮೆಲುಕು 


ತೊರೆದು ಜೀವಿಸಬಹುದೆ ಮಹಾರಾಣಿ ನಿನ್ನ
ಹುಟ್ಟುವ ಕಸುವು ಕನಸು, ಮನಸು ಮುನಿಸು ಎಲ್ಲವೂ ಚೆನ್ನ
ಒಲವು ಚೆಲುವು ಸಂಚಲನಗಳಿಗೆ ನೀನಲ್ಲವೇ ಸಂಭ್ರಮದ ಬಣ್ಣ
ಸುಖ ಸಂಸಾರದ ಮೇಲೆ ಹಾಕಿದರಲ್ಲ ಕನ್ನ

ಏನಾದರಾಗಲಿ ಹೊಂದಬೇಕಂತೆ ನಿನ್ನಿಂದ ನಾನು ಮುಕ್ತಿ
ಬೈನರಿಯವರಿಗೇನು ಗೊತ್ತು ನಮ್ಮಿಬ್ಬರ ಅದ್ವೈತದ ಶಕ್ತಿ
ಹೂಡಬೇಕು ಸಖಿ ಬೇಗ ಇದಕೊಂದು ಯೋಗ್ಯ ಯುಕ್ತಿ
ಒಳಗಿಳಿದು ಬಿಡು ಸಖಿ ಕಾಣದಂತೆ; ನಮ್ಮದು ಗುಪ್ತಭಕ್ತಿ


ಕಲಿಸಿಕೊಟ್ಟವಳು ನೀನು ಹಿತ ಮಧುರ ಯಾತನೆ
ತ್ಯಾಗವೆಂಬುದೊಂದು ಬಲು ಭೀಕರ ಆಲೋಚನೆ
ಮರೆಯುವುದೆಂತು ?ಎನಗೆ ನೀನೇ ಸುಲೋಚನೆ
ಕುಡಿದಾಗಲೊಮ್ಮೆ ಮೈಯ್ಯೊಳಗೆ ಸಾಗರದ ಸಂಚಲನೆ


ಮಹಿಮೆ ಗೊತ್ತಿಲ್ಲದವರ ಮುಂದೆ ಮುನಿಸೇಕೆ ಓ ಗೆಳತಿ
ರಜವಿಲ್ಲದ ಮನದೊಳಗೆ ನೀನೇ ನಿಜದ ಮನೆಯೊಡತಿ
ಜೀವನರಥಕೆ ಶ್ರೀಕೃಷ್ಣನಂತೆ ನೀನೇ ಸಾರಥಿ
ಸಂಕಥನದ ಕುರುಕ್ಷೇತ್ರದಿಂದ ತೆರಳಿಬಿಡೋಣ  ಬಾ ರತಿ


ಚಲಿತಮಾದ ಚಿತ್ತದಿಂದ ವಿರಹಿಯಾಗಬೇಕೆಂದರು ನಾನು
ದೃಷ್ಟಿಗೆ ನೀ ಬೀಸಿದ ಬಲೆಯನ್ನು ಹರಿದೊಗೆಯಬೇಕೆಂದರು ಜಾನು
ಪ್ರಮೇಯ, ಪ್ರಣಾಳಿಕೆಗಳ ಹಂಗೇಕೆ ಸಮಾಧಾನಿಯಾಗಿರು ರಾಣಿಜೇನು
ಮೇಲೊರಗಿದ ಜಲಬಿಂದುವನ್ನು  ಹೀರುವ ಭಾಗ್ಯ ಪದ್ಮಪತ್ರಕಿದೆಯೇನು?


ನೀನು ಅತಿ ಮಧುರವೆಂದರೆ ವಿಮರ್ಶಕರ ಎದೆಯೊಳಗೇಕೆ ಕಿಚ್ಚು
ಬಹುಶಃ ನಮ್ಮೊಲುಮೆಯೇ ಈ ಲೋಕಕೆ ಅರ್ಥವಾಗದ ಹುಚ್ಚು
ಗೊತ್ತಿರಲಿ ಸಹವಾಸವೇ ಸಕಲ ಜೀವಾತ್ಮರಿಗೂ  ಅಚ್ಚು ಮೆಚ್ಚು
ಬನಿ ಬನಿಯಾಗಿ ಎದೆಯೊಳಗಿಳಿಸಿಕೊಳ್ಳಲು  ಸಾಕು ಆಸ್ವಾದಿಸಬಲ್ಲ ಕೆಚ್ಚು

Sunday, 24 November 2024



 ಆಗಸ್ತ್ಯ ತೀರ್ಥ

ನಯನ ಮನೋಹರ ಮಣಿ ಮುಕುಟ
ವಾತಾಪಿಗೊದಗಿದ ರಜತ ಕಿರೀಟ
ಬನಶಂಕರಿಯ ಬನದ ರನ್ನಗನ್ನಡಿ
ಪುಲಿಕೇಶಿಯು ಕಂಡ ಸಲಿಲ  ದರ್ಪಣ

ಆಹಾ ಚೈತನ್ಯದ ಸಿರಿ ಅಗಸ್ತ್ಯ  ತೀರ್ಥ
ಶಿಲಾಲತೆಗಳು ತಬ್ಬಿದ ಮೋಹ  ಪದಾರ್ಥ
ಕಣ್ಣುಕ್ಕುವುದು ಕಂಡು ಸೊಬಗಿನ ಮೊನಚು
ಹಿಮ ಹಾಕಿದೆ ರಸಿಕರ ಎದೆಗೆ ಹೊಂಚು

ಧನ್ಯವೋ ಧನ್ಯ ಕಂಡ ಜೀವವೇ ಗಣ್ಯ
ಚೆಲುವಾಗಿದೆ ಹಸಿರ ಸಿರಿಯ ಅರಣ್ಯ
ಕನ್ಮಡಿ ಕಂಡ ಭೂತನಾಥನಾದ ಕನ್ಯೆ!
ಅಕ್ಕತಂಗಿಯರೂ ಧುಮುಕುವರಿಲ್ಲಿ 
ದರ್ಪಣ ದೊಳಗಾಗಲು ಶೂನ್ಯ

ಶಿಲೆಯೂ ಮಣಿದಿದೆ ಜಲಗನ್ನಡಿಯ ಕಾಲಿಗೆ ಒರಗಿ
ಕಲೆಯೂ ವಿಸ್ಮಿತ ಸೊಬಗಿನ  ಸುಗ್ಗಿಗೆ ಮರುಗಿ
ಹೊನಲಾಗಿದೆ ಹರುಷ ಹಬ್ಬವೇ ಜರುಗಿ
ಮನವಾಗಿದೆ ಮಯೂರಿ ಕುಣಿಯುತ ಕರಗಿ

ತೀರ್ಥದಲೆಯ ಮೇಲೆ ರವಿಕೀರ್ತಿಯ ಶಾಸನ
ಕೇಳುತಿದೆ ಇಮ್ಮಡಿ ದಿಗ್ವಿಜಯದ ಸ್ವನ
ತುಳುಕಿತು ಎದೆಯಲಿ ನೆಲದ ಅಭಿಮಾನ
ಮೈದುಂಬಿದ ಸರಸಿಗಿದೋ ಕಾವ್ಯ ನಮನ

Monday, 29 July 2024

 ಸೋರುತಿಹುದು ಮನೆಯ ಮಾಳಿಗೆ...

    ಕವಿ ಚಾಂದ್ ಪಾಷಾರವರು ಆಧುನಿಕ ಕಾವ್ಯದ ಬೆರಗಿನ ಕವಿ ಎಂಬುದಕ್ಕೆ ಸಾಕ್ಷಿಯಾಗಿ ಸಂತೆಯಲ್ಲಿದ್ದೇನೆ ಕವಿತೆ ಗಮನ ಸೆಳೆಯುತ್ತದೆ. ತನ್ನೊಡಲಿನಲ್ಲಿ ಅನಂತವಾದ ಚಿಂತನೆಗಳನ್ನು ಬಚ್ಚಿಟ್ಟುಕೊಂಡಿರುವ ಹಾಗೆ ಕಾಣುವ ಈ ಕವಿತೆ ಸಹೃದಯರನ್ನು ಇದುವರೆಗೂ ಕಾಣದ ಸಂತೆಗೆ ಕರೆದೊಯ್ಯತ್ತದೆ. ಬದುಕಿನ ರೂಪಕವಾಗಿ ಸಂತೆಯನ್ನು ಕಾಣುವ ಕವಿಸೂರಿಗಳ ಕಣ್ಣುಗಳಿ     nಗೇನೂ ಲೆಕ್ಕವಿಲ್ಲ. ಸಂತ ಶಿಶುನಾಳ ಶರೀಫರು ಗಿರಣಿ ವಿಸ್ತಾರ ನೋಡಮ್ಮ ಎಂದು ಸಂತೆಯೊಳಗಿನ  ಮಾನವನೊಡಲಿನ ಚಕ್ರಮೀಮಾಂಸೆಯನ್ನು ಬಯಲಿಗೆಳೆದಿರುವುದು, ತತ್ವಜ್ಞಾನದ ಅಸೀಮ ಅನುಸಂಧಾನ. ಅಕ್ಕಮಹಾದೇವಿಯು ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ಎಂದು ಹಾಡಿ ಬದುಕಿನ ವಿಲಕ್ಷಣತೆಯನ್ನು  ಅಪ್ಪಿಕೊಳ್ಳುತ್ತಾಳೆ. ಅದೇ ಅಲ್ಲವೇ ಆಕೆಗೆ ಬೆತ್ತಲೆಯ ಸನ್ನಿಧಿ.
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ ಎಂದೊಲಿದು ರಾಗಿಸಿದ ಬಸವಣ್ಣನವರು, ನಾವು ಜೀವಕ್ಕಿಂತಲೂ ಹೆಚ್ಚಾಗಿ ನಂಬಿರುವ ಐಸಿರಿ ಬದುಕಿನ ಅನಿಶ್ಚಿತತೆಯನ್ನು, ಅನಿಮಿಷ ಚಾಪದಂತಿರುವ ಕ್ಷಣಿಕತೆಯನ್ನು, ಹಾದಿ‌ ಕಂಡಲ್ಲಿ ಹೊರಳಿಬಿಡುವ ಭೋಗದ ಚಂಚಲತೆಯನ್ನು ವ್ಯಂಗ್ಯವಾಡಿರುವುದು ನನಗೆ ಎದುರಾದ ಸಾಂರ‍್ಭಿಕ ತಥ್ಯ.  ಹೀಗೆ ಶರಣರಿಂದ ಇಲ್ಲಿಯವರೆಗಿನ ಕಾವ್ಯಗಳು ಸಂತೆಯನ್ನು ತಮಗೆದುರಾದಂತೆ ಮೊರೆದಿವೆ. ಇವೆಲ್ಲವುಗಳಿಗೆ ಕೊಂಡಿಯಂತಿರುವ ಚಾಂದ್ ಪಾಷಾರವರ ಸಂತೆಯ  ವ್ಯಾಖ್ಯಾನ ಅವಿಚ್ಚಿನ್ನ ಹಾಗೂ ವಿಭಿನ್ನ. ಇಲ್ಲಿಯ ರ‍್ತಮಾನದ ಸಂತೆಯಲ್ಲಿ ಹನ್ನೆರಡನೆಯ ಶತಮಾನದ ಶಿವಶರಣರೇ ವ್ಯವಹಾರಸ್ಥರು. ಈ ವಿಡಂಬನೆ ಸಾಕು! ಕಾವ್ಯವನ್ನು ಪ್ರವೇಶಿಸಬೇಕಾದ ಗಂಭೀರತೆಯು ಮೈಮನಗಳನ್ನು ತುಂಬಿಕೊಳ್ಳಲು. ಈ ಕಾವ್ಯ ಪ್ರತಿಮೆಗಳ ಸಂತೆಯಂತಿದೆ; ರೂಪಕಗಳ ಮಹಾಂತನಂತಿದೆ;  ಗಂಭೀರ ಧ್ವನಿಗಳ ಸಂತನಂತಿದೆ. ಈ ಸಂತೆಯೊಳಗೆ ಕವಿ ನಮ್ಮನ್ನು ಕರೆದೊಯ್ಯುವ  ಪರಿಯನ್ನೊಮ್ಮೆ ಗಮನಿಸಿ-
ಸಂತೆಯಲಿ ನಿಂತಿದ್ದೇನೆ
ಅನುಭವದ ಅಂಗಡಿಯಲ್ಲಿ ಬೆಳಕ ಕೊಳ್ಳಲು 
ಅದೋ, ಕತ್ತಲೆಯ ಹೊತ್ತು ನಿಂತವನ ಮಡಿಲಲಿ
ಅಲ್ಲಮ ಮಲಗಿದ್ದಾನೆ'
ಹೌದು. ನಮ್ಮ ಅಜ್ಞಾನದ ತೊಟ್ಟಿಲಲ್ಲಿ ಜ್ಞಾನದ ಶಿಶುವಾಗಿ  ಅಲ್ಲಮನನ್ನು ಮಲಗಿಸಿರುವುದು ವಿರ‍್ಯಾಸವೇ ಸರಿ. ಬೆಳಕು ಮತ್ತು ಬಯಲೆಂಬ ಭಾಗ್ಯಗಳ ಮಧ್ಯೆ ಬದುಕುತ್ತಿರುವ ನಮಗೆ ಇವುಗಳ ಅರಿವಿಲ್ಲದಿರುವುದೊಂದು ದುರಂತ. ಯಾಂತ್ರಿಕ ಜೀವನದಲ್ಲಿ  ಕ್ರಮಬದ್ಧತೆಯ ಲೆಕ್ಕಾಚಾರ ಮಾಡುವ ನಮಗೆ ಅಂತರಂಗದ ಕತ್ತಲೆಗೊಂದು ದೀವಿಗೆಯನ್ನಿಡಬೇಕು ಎನ್ನುವ ಸತ್ಯ ಗೋಚರಿಸದೇ ಹೋಗಿಬಿಡುತ್ತದೆ. ಗಾಂಧೀಜಿಯವರನ್ನು ಮರ‍್ತಿಯನ್ನಾಗಿ ನಿಲ್ಲಿಸಿದ ನಮಗೆ ಅಲ್ಲಮನನ್ನು ಮಲಗಿಸಲೆಷ್ಟು ಸಮಯ ಬೇಕು ಅಲ್ಲವೆ ? ಮೌಲ್ಯಗಳು ಮಲಗಿ ನಿದ್ರಿಸುವ ಸಂರ‍್ಭವಿದು. ಕುಮಾರವ್ಯಾಸ ಹೇಳುವ ಹಾಗೆ ಮಾರಿದ ತಲೆಯ ಭಂಡವ ಹೊತ್ತುಕೊಳ್ಳದೇ ಹೋರಾಡಬೇಕಾಗಿದೆ ನಮ್ಮ ಆತ್ಮವಿಕಾಸಕ್ಕಾಗಿ. ಎಂ. ಆರ್. ಕಮಲ ರವರು ಚಿಂತಿಸುವಂತೆ '
'ಬೆಳಕಿನ ಮೇಲೆ ಕತ್ತಲೆಯ ಹೊದಿಕೆಯೋ
ಕತ್ತಲೆಯ ಮೇಲೆ ಬೆಳಕಿನ ಹೊದಿಕೆಯೋ'
ಅರಿಯಲಾಗುತ್ತಿಲ್ಲ ಭ್ರಾಂತಿಯ ಲೋಕದೊಳಗೆ. 
ನೇಣು ಹರಿಯುವವರಾರೋ ? ನಿದ್ದೆಯಿಂದೆಬ್ಬಿಸುವವರಾರೋ ? ಮಾಯದ ಜೋಗುಳ ನಿಲ್ಲಿಸುವವರಾರೋ ?-ಯಕ್ಷಪ್ರಶ್ನೆಗಳು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ?. ಮಠದೊಳಗಣ ಇಲಿಯ ಕಂಡು ಪುಟನೆಗೆಯುವ ಬೆಕ್ಕಿನ ಜಾಯಮಾನದ ಮನುಷ್ಯನನ್ನು ಬದಲಾಯಿಸುವುದೆಂತು ? ಕವಿ ಚಾಂದ್ ಪಾಷಾರವರು ಎತ್ತಿಕೊಳ್ಳುವ ಸಂಕಥನವಿದು.
ಕವಯಿತ್ರಿ ಕಮಲಾರವರು ಮುಂದೊರೆದು ಹಾಡಿದ ಈ ಸಾಲುಗಳನ್ನು ಗಮನಿಸಿ-
ಕಾಲಕ್ಕೇ ಉಸಿರುಗಟ್ಟಿದೆ. 
ಋತುಮಾನಗಳು ಆಯಾಸದಿಂದ ರೆಪ್ಪೆ ಮುಚ್ಚಿ ತೆರೆಯುತ್ತಿವೆ. 
ಸಾವಿರ ಸಂಬಂಧಗಳನ್ನು ನೇಯ್ದು ಮಾಡಿದ ಅವಳ ಸೀರೆ ಅಲ್ಲಲ್ಲಿ ಎಳೆ ಬಿಟ್ಟುಕೊಳ್ಳುತ್ತಿದೆ.
ಇಷ್ಟು ಸಾಕಲ್ಲವೇ ಮಾನವನ ಹಿಮ್ಮುಖ ಚಲನೆಗೆ. ಸಂಬಂಧಗಳ ಶಿಥಿಲತೆ ಯುಗದ ಲಕ್ಷಣವಾಗಿ ಪರಿರ‍್ತನೆಯಾಗಿರುವುದು ಪರಂಪರೆಯ ಹಿನ್ನಡೆಯೇ. ಸಂಬಂಧಗಳ ಸರಪಳಿಯನ್ನು ಕಡಿದೊಗೆಯುವುದರಲ್ಲಿಯೇ ನಮಗೆ ವಿಕೃತ ಸಂತೋಷ. ಗೋಡೆಗಳನ್ನು ಕಟ್ಟುವುದರಲ್ಲಿಯೇ ಎಲ್ಲಿಲ್ಲದ ಹರುಷ. 'ಈ ಬಾಳಿನ ಸಂಬಂಧಗಳ ಸೀರೆಯನ್ನು ನೇಯ್ದವ ನಾನೋ ನೀನೋ ಎಂದು ರಾಮನಾಥನನ್ನು ಪ್ರಶ್ನಿಸಿದ ಜೇಡರ ದಾಸಿಮಯ್ಯನವರೊಂದಿಗೆ ಶಿಥಿಲವಾಗಿರುವ ಮನಸುಗಳ ಸೀರೆಯನ್ನು ತೋರಿ ಅನುಸಂಧಾನ ಮಾಡುವುದು ಹೇಗೆ ? ಋತುಮಾನಗಳ ಅಲ್ಲೋಲಕಲ್ಲೋಲವು ಮಾನವನ ಇಂದಿನ ಅಸಾಮಾಜಿಕ ರ‍್ತನೆಗೆ ಪ್ರತಿಮೆಯಂತಾಗಿರುವುದು ವಿಷಾದನೀಯ. 
ಇದನ್ನು ಚಾಂದ್ ಪಾಷಾರವರು ಹೀಗೆ ಬಣ್ಣಿಸುತ್ತಾರೆ-
ಅವನ ಅನುಭಾವದ ತೊಟ್ಟಿಲಲ್ಲಿ ಸಿಗಲೇ ಇಲ್ಲ
ಬೊಗಸೆಯಷ್ಟು ಬೆಳಕು
ನಾ ಮಿಂಚು ಹುಳುವಿನ ರ‍್ಮ ಮಾತ್ರ
ಹೊತ್ತು ತಂದೆ
ಎಂಬಲ್ಲಿಗೆ ಕವಿಯ  ಶೋಧನೆಯು, ಲೌಕಿಕಕ್ಕೆ  ದೀವಿಗೆಯಾಗಬಲ್ಲ ಅಲೌಕಿಕ ಬೆಳಕಿನತ್ತ ಹರಿಯುತ್ತದೆ. ಭೌತಿಕ ಪ್ರಪಂಚವನ್ನು ಇನ್ನಿಲ್ಲದಂತೆ ಆರಾಧಿಸಿ ಸುಖಿಸುವ ನಮ್ಮ ಅಲ್ಪಮತಿತ್ವವನ್ನು ವಿಡಂಬಿಸುವ ಈ ಸಾಲುಗಳು ಕಳೆದುಕೊಳ್ಳುತ್ತಿರುವ ಕಣ್ಣೊಳಗಿನ ಬೆಳಕಿಗಾಗಿ ಪರಿತಪಿಸುತ್ತವೆ. ಪ್ರಕೃತಿಯೊಡಲನ್ನು ಬಗೆದು ನಮ್ಮನ್ನು ಅಲಂಕರಿಸಿಕೊಳ್ಳುವ ಕೃತಕತೆಯನ್ನು ಅಣಕಿಸುವ ಈ ನಿನಾದಗಳು, ಮೊರೆಯದಲೆಗಳ ಮೂಕ ರ‍್ಮರವನ್ನು ಕೇಳಿಸಿಕೊಳ್ಳಬೇಕಾದ ವ್ಯವಧಾನವನ್ನು ಬೇಡುತ್ತವೆ. ಮುಖವಾಡಗಳಿಂದಲೇ ಬದುಕುತ್ತಿರುವ ಮನುಷ್ಯನ ಬಯಲಾಟವನ್ನು ಕಾವ್ಯವೇದಿಕೆಯ ಮೇಲೆ ತರುವ ಪರಿಯೇ, ಈ ಕಾವ್ಯವನ್ನು ವಿಭಿನ್ನವಾದ ನೆಲೆಗೆ ಕೊಂಡೊಯ್ದಿದೆ. ಶೂನ್ಯಸಿಂಹಾಸನಾಧೀಶನೊಂದಿಗಿನ ಕಳವಳದ ಅನುಸಂಧಾನದ ನಂತರ ಕವಿ ತೆರಳುವುದು ಅಕ್ಕಮಹಾದೇವಿಯ ಬಟ್ಟೆಯಂಗಡಿಗೆ!! ಕಳವಳಿಸಿಬಿಡಿ ಒಮ್ಮೆ ಕೇಳಿ-
ಅಕ್ಕನ ಅಂಗಡಿಯಲ್ಲಿ ಬಟ್ಟೆಯೇ ಇಲ್ಲ!!!
ಬೆತ್ತಲೆಯನೆ ಉಟ್ಟ ಅವಳ ಎದುರು
ಬಟ್ಟೆ ತೊಟ್ಟು ನಾನೇ ನಗ್ನನಾದೆ
ಸುಮ್ಮನೆ ಬಂದೆ ಈ ಬಟ್ಟೆಯ ಸಂತೆಯಲಿ ಬೆತ್ತಲೆಯ ಕೊಳ್ಳಲಾಗದೆ
ಬೆತ್ತಲಾಗಿ ಬಯಲಾದವರ ಮುಂದೆ ಬಟ್ಟೆಯಿಂದಲಂಕರಿಸಿಕೊಳ್ಳುವ  ನಮ್ಮ ಚೋದ್ಯವನ್ನು ವ್ಯಂಗ್ಯವಾಡುವ ಈ ಚರಣಗಳು ಬೆತ್ತಲೆಯನ್ನು ಮರುವ್ಯಾಖ್ಯಾನಿಸುತ್ತವೆ. ಆಧುನಿಕ ಮಾನವನ 
ನಾಟಕೀಯತೆ, ಆತ್ಮಭ್ರಷ್ಟತೆ, ಆತ್ಮವಂಚನೆ, ನೈತಿಕ ಆತ್ಮಾಹುತಿಗಳನ್ನು ವಿರ‍್ಶಿಸುವಂತಿರುವ  ಕಾವ್ಯವು, ಅಲ್ಲಮನ ಈ ವಚನವನ್ನು ನೆನಪಿಸುತ್ತದೆ-
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ?
ಇಂತೀ ಆಶೆಯ ವೇಷದ ಭಾಷೆಗೆ, ಗುಹೇಶ್ವರಾ, ನೀ ಸಾಕ್ಷಿಯಾಗಿ ಛೀ ಎಂಬೆನು
ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರತಿರೋಧಿಸುವ ಕಾವ್ಯದ ಈ ಸಾಲುಗಳು ಸರಕು ಸಂಸ್ಕೃತಿಯನ್ನು ಧಿಕ್ಕರಿಸುತ್ತವೆ. ಪಶ್ಚಿಮೀಕರಣದಿಂದುದಿಸಿದ ಲಾಲಸೆಗಳ ಭೋಗಾಧಿಪತ್ಯವನ್ನು ವಿರೋಧಿಸುತ್ತವೆ. ಭಾವೋದ್ಯಾನದೊಳಗಿನ ವಿಷಬೀಜಗಳನ್ನು ಹೆಕ್ಕಿ ನರ‍್ಮಲಗೊಳಿಸಬೇಕೆನ್ನುವ ಚಾಂದ್ ಪಾಷಾ ರವರ ಕಾವ್ಯದ ಸದಾಶಯ ಮಾನವಕುಲದ ಉದ್ಧಾರವೇ ಆಗಿದೆ. ಈ ಕಾವ್ಯ ಆಧುನಿಕ ಕಲ್ಯಾಣ ಕ್ರಾಂತಿಗೆ ಮುನ್ನುಡಿ ಬರೆಯುವಂತಿರುವುದು ಕಾಲನ ದಿವ್ಯದೃಷ್ಟಿ. ವಸಾಹತೋತ್ತರ ಮನುಷ್ಯನ  ಗುಣ ಸ್ವಭಾವಗಳಲ್ಲಿಯ ಅಗಾಧ ಪರಿರ‍್ತನೆಗಳನ್ನು ಸಮೀಕ್ಷೆ ಮಾಡಿ ವಿರ‍್ಶಿಸುವಂತಿರುವ ಈ ಕಾವ್ಯದ ಬಿಳಲುಗಳು ಹನ್ನೆರಡನೆಯ ಶತಮಾನದ ವಚನ ಸಾಹಿತ್ಯದಾಚೆಗೂ ಹಬ್ಬಿಕೊಂಡಿರುವುದು ಕವಿಯ ಕಾವ್ಯಪ್ರತಿಭೆಯ ಉಜ್ವಲತೆಗೆ ಸಾಕ್ಷಿಯಾಗಿದೆ. ಬೆತ್ತಲಾಗುವಿಕೆಯೂ ಒಂದು ವ್ರತವೇ. ಸಾಕ್ಷಿಯಾಗಿ ಶಿವಶರಣೆ ಗುಡ್ಡವ್ವೆಯ 'ತನು ಬೆತ್ತಲಾದಡೇನು ಮನ ಬೆತ್ತಲೆಯಾಗದನ್ನಕ್ಕ'  ವಚನವನ್ನು  ಉಲ್ಲೇಖಿಸಬಹುದು. ಅಂತರಂಗದ ನಗ್ನತೆಯನ್ನು ಪ್ರತಿಪಾದಿಸುವ ಈ ಕಾವ್ಯದ ಸಾಲುಗಳು ಸತ್ಯಂ ಶಿವಂ ಸುಂದರಂ ಎಂಬ ತತ್ವಜ್ಞಾನವನ್ನು ಮುನ್ನಲೆಗೆ ತಂದು ರ‍್ಚೆಗೀಡು ಮಾಡುತ್ತವೆ. ತನ್ನ ಬೆಳಕಿನಿಂದ ಮತ್ತೊಬ್ಬರ ಹೃದಯ ಜ್ಯೋತಿಯನ್ನು ಬೆಳಗಿಸುವುದೇ ಕಾವ್ಯರ‍್ಮದ  ಅಂತಿಮಗುರಿ.  ಈ ಕಾವ್ಯ ಅದರಲ್ಲಿ ಸರ‍್ಥಕತೆಯನ್ನು ಮೆರೆದಿದೆ. ಕುಡಿಯುವಾಗಲೇ ಮನಸಾಗರದಲ್ಲಿ ಚಿಂತನೆಯ  ಅಸಂಖ್ಯಾತ ಅಲೆಗಳು ದಂಡಿಯಾಗಿ ಮುನ್ನಲೆಯ ದಡಕ್ಕೆ ಬಂದು ಅಪ್ಪಳಿಸುವಂತೆ ಮಾಡುವ  ಕವಿಯ ಕಾವ್ಯಕೌಶಲ್ಯ ಚುಳುಕಾಗಿದೆ‌. ಅನುಕೂಲ ಸಿಂಧು ರೂಪಾಂತರಗಳನ್ನು, ಕರ‍್ಯವಾಸಿ ವೈವಿಧ್ಯಮಯ ಅವತಾರಗಳನ್ನೆತ್ತುವ ನಮ್ಮ ಬೂಟಾಟಿಕೆಗಳನ್ನು ಚಾಂದ್ ಪಾಷಾರವರ ಕಾವ್ಯ ಬಯಲು ಮಾಡುತ್ತದೆ. ಸನ್ನಿವೇಶ- ಸಂರ‍್ಭಗಳಿಗೆ ತಕ್ಕಂತೆ ಹಗಲು ವೇಷ ಹಾಕುವ ವಿಲಾಸಿ ಮನುಷ್ಯನ ಗೋಸುಂಬೆ ಗುಣಗಳನ್ನು ವಿಶ್ಲೇಷಿಸುವ ಇಲ್ಲಿಯ ಕಾವ್ಯಕಲೆ ಅನುಪಮವಾಗಿದೆ. ರಾಮಾಯಣದ ವಿಪ್ಲವಗಳಿಗೂ ಹಬ್ಬಿಕೊಳ್ಳುವ ಕವಿಯ ಕಾವ್ಯದ ಸಾಲುಗಳನ್ನೊಮ್ಮೆ ಅವಲೋಕಿಸಿ-
ಸಂತೆಯಲಿ ನಿಂತಿದ್ದೇನೆ 
ಸೂಳೆ ಸಂಕವ್ವನ ಶೀಲವಕೊಳ್ಳಲು! 
ಗಂಡಸಿನ ಗತ್ತಿನಲಿ ಅವಳೆದುರು ಗುಲಾಮನಾಗಲು!! 
ಸಂಕವ್ವನ ಗರತಿಯ ಎದುರು ಸೀತೆ ಸತ್ತು ಹೋದಾಗಲೇ ಗಂಡಸಲ್ಲದ ನಾನು ತಿರುಗಿ ಬಂದೆ ಇಂಗಿಹೋದ ಗಂಡಸ್ತನದ ಗುಂಗಿನಲಿ 
ಪುರುಷ ಪ್ರಜ್ಞೆಯನ್ನೇ ಅಲುಗಾಡಿಸಿ ಬಿಡುವ ಸಾಲುಗಳಿವು. ಪುರುಷತ್ವವನ್ನು ಮರುಓದಿಗೊಳಪಡಿಸುವ ಇಲ್ಲಿಯ ಲಿಂಗ ಜಿಜ್ಞಾಸೆ ಸಂಕವ್ವಳ ಶೀಲಶೋಧನೆಗಿಳಿಯುತ್ತದೆ. ಸಂಕವ್ವ ಹಾಗೂ ಸೀತೆಯರನ್ನು ಮುಖಾಮುಖಿಯಾಗಿಸುವ ಕಾವ್ಯವು ಕಾಲಾತೀತವಾಗಿ ಮೌಲ್ಯಗಳನ್ನು ಒರೆಗೆ ಹಚ್ಚುತ್ತದೆ. ಸಾಂಪ್ರದಾಯಿಕ ಸಿದ್ಧಾಂತಗಳನ್ನು ಮುರಿದುಕಟ್ಟುವ ಕವಿಯ ಪರಿಕಲ್ಪನೆಗಳು ರ‍್ತಮಾನದಲ್ಲಿ ಸಂವೇದನೆಗಳ ಹುಡುಕಾಟದಲ್ಲಿ ತೊಡಗಿಸಿಕೊಳ್ಳುತ್ತವೆ. ಸ್ತ್ರೀವಾದದ ಚೆಹರೆಗಳನ್ನು ರ‍್ಚಿಸುವ ಈ ಸಾಲುಗಳು ಶೋಭಾ ನಾಯಕರವರ ಕವಿತೆಯನ್ನು ನೆನಪಿಸುತ್ತವೆ -
ಬ್ರೈಲ್ ಲಿಪಿಯಲ್ಲಿ ಬರೆದ
ಶೃಂಗಾರ ಕಾವ್ಯ ನಾನು
ದುರಂತವೆಂದರೆ,
ಓದಬೇಕಾದ ನೀನು ಕುರುಡನಲ್ಲ
ಸ್ತ್ರೀ ಸಂವೇದನೆಗಳು ಬ್ರೈಲ್ ಲಿಪಿಯಲ್ಲಿರುವಾಗ ಓದಬೇಕಾದವರು ಕುರುಡರಾಗಲೇಬೇಕಾಗಿದೆ ಎಂಬುದು ಮನೋಜ್ಞವಾದ ಸಂದೇಶ. ಸಂಕವ್ವಳ ಶೀಲದ ವಿಷಯದಲ್ಲಿಯೂ, ಅಕ್ಕನ ಬೆತ್ತಲೆಯಲ್ಲಿಯೂ, ಸೀತೆಯ ಪಾತಿವ್ರತ್ಯದಲ್ಲಿಯೂ, ಶೋಭಾ ನಾಯಕರವರು ಪ್ರತಿಪಾದಿಸಿದ ಸರಳ ಸತ್ಯದ ತಾತ್ವಿಕತೆಯನ್ನೇ ಅನುಸರಿಸಬೇಕೆನ್ನುವುದು ಕವಿ ಚಾಂದ್ ಪಾಷಾರವರ ಅಭಿಮತವಾಗಿದೆಯೆನಿಸಿದರೆ ಕಾಕತಾಳೀಯವಾಗಿರಲಾರದು. ಸೀತೆಯ ಹದಿಬದೆಯ ಅಗ್ನಿಪರೀಕ್ಷೆ, ಶೀಲೋಲ್ಲಂಘನೆ ಮಾಡುವ ಸಂಕವ್ವಳ ಕಾಯಕದೀಕ್ಷೆಗಳೆರಡರ ಅನುಸಂಧಾನಕ್ಕೆ ವೇದಿಕೆಯಾಗಿದೆ ಈ ಕಾವ್ಯ.
ಸಂತೆಯಲಿ ನಿಂತಿದ್ದೇನೆ 
ಅಂಬಿಗರ ಚೌಡಯ್ಯನ ತೆಪ್ಪದಲಿ ತೇಲಿ ಹೋಗಲು। ತೂತಿನ ಪಾದದ ನಾನು ನೀರಲ್ಲೇ ಮುಳುಗುವಾಗ ಕಲ್ಯಾಣದ ಕಿಡಿ ತಾಕಿ, ದಹಿಸಿತೋ ಸಂಗಮನ ಸಂತೆ॥
ಭ್ರಮೆಯ ತೂತುಗಳ ಪಾದಗಳನ್ನಿಟ್ಟುಕೊಂಡು ತೇಲುವ ಸಾಹಸವನ್ನು ಮಾಡುವ ಇಂದಿನ ಮನುಷ್ಯನಿಗೆ ಅಂಬಿಗರ ಚೌಡಯ್ಯನವರ ತೆಪ್ಪದಲ್ಲಿ ತೇಲಿ ಹೋಗುವ ಹೆಬ್ಬಯಕೆ. ರ‍್ತಮಾನದ ಮತ್ತೊಂದು ಕನಸಿದು. ಹುಳುಕುಗಳ ಭಾರವನ್ನು ಹೊತ್ತವರಿಗಿದು ಹೇಗೆ ಸಾಧ್ಯ ? ನಿರಾಳವೆಂಬ ಕೂಸಿಂಗೆ ಹೆಸರಿಟ್ಟು ಬೆಣ್ಣೆಯನಿಕ್ಕಿ ಮುದ್ದಿಸುವವರು ನಾವು. ಹೆಸರಿಲ್ಲದೇ ಮುಂದಡಿಯಿಡಲಾರದ ಪೀಳಿಗೆಯೊಂದರ ಗುಣಸ್ವಭಾವಗಳನ್ನು ಅಣಕವಾಡುತ್ತಿರುವ 'ಸಂತೆಯಲ್ಲಿದ್ದೇನೆ..' ಕಾವ್ಯದ ಹೊಳಹುಗಳು ವಿಸ್ಮಯವನ್ನುಂಟು ಮಾಡುತ್ತವೆ. 
ಅಪಮೌಲ್ಯಗಳ, ಅಜ್ಞಾನದ ತೂತು ಪಾದಗಳನ್ಜಿಟ್ಟುಕೊಂಡು ತೇಲುವುದಕ್ಕೆ ಹೇಗೆ ಸಾಧ್ಯವಿದೆ ? ಇದನ್ನೇ ಶಿಶುನಾಳ ಶರೀಫರು 'ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ' ಎಂದು ಹಾಡಿ ಎಚ್ಚರಿಸುತ್ತಾರೆ. 
ಸೀಮೋಲ್ಲಂಘನವನ್ನು ಅಪರಾಧವೆಂದು ಬಗೆದವರಿಗೆ ಚೌಡಯ್ಯನವರ ತೆಪ್ಪದ ಪ್ರಯಾಣವು ಹೇಗೆ ಸುಖಿಸೀತು ?  ಆತ್ಮಬಲಿದಾನವೊಂದೇ ಕಲ್ಯಾಣದ ಸಂತೆಗಿರುವ ರಹದಾರಿ. ಶಿವಶರಣರು ಕಂಡುಕೊಂಡ ಜಯಭೇರಿ. ವಿಷಮಯ ಜಗದ ಮುಂದೆ ಕಲ್ಯಾಣ ಅಸಂಗತ!! ಬೇವಿನ ಬೀಜವನ್ನು ಬಿತ್ತಿ ಚೂತವನದ ಸವಿಯನ್ನು ಬಯಸುವಂತಹ  ನಮ್ಮ ದುರಾಸೆಗಳ ಹಿಂದೆ ಕಾಲನ ಕೈಚಳಕವೂ ಇಲ್ಲದಿಲ್ಲ. ಇತಿಹಾಸದ ಕಾಲ್ಚಳಕವೂ ಬಲ್ಲದಿಲ್ಲ.  ತಾಂತ್ರಿಕವಾಗಿ ಮಾತ್ರ ಮನುಷ್ಯನೆನಿಸಿಕೊಂಡವರ ಭಾವದೆಳೆಗಳ ಮೇಲೆ ರ‍್ತನಾವಾದದ ಪ್ರಭಾವವೂ ಇಲ್ಲದಿಲ್ಲ. ಕವಿಯ ವ್ಯಾಖ್ಯಾನದಲ್ಲಿ ನಾವೀಗ ಮನುಷ್ಯರಾಗಿ ಉಳಿದಿಲ್ಲ‌ವೆಂಬುದೇ ಸೋಜಿಗ!!
ಸುಟ್ಟ ಗಾಯದಲಿ ಬಸವಣ್ಣ ವಚನ ಬರೆಯುವಾಗ!
ಹಿಡಿ ಬೂದಿಯ ಹಿಡಿದು ತಂದೆ 
ಮತ್ತು ಗುರುತೇ ಸಿಗದ 'ಶರಣ'ನ ಹೆಣ..!!
ಸಂತೆಯಲ್ಲಿ ನಿಂತಿದ್ದೇನೆ...!?
ಲೋಕದಲ್ಲಿ ಕೋಟಿಗೊಬ್ಬರಂತೆ ಅವತರಿಸಿದ 'ಶರಣ' ನೇ ಹೆಣದ ಪ್ರತಿಮೆಯಾಗಿ ನಿಂತಿರುವುದು, ಕರ‍್ಪೋರೇಟ್  ಸಂಸ್ಕೃತಿಯ ಅಡಿಯಾಳಾಗಿರುವ ನಮ್ಮನ್ನು ವಿಡಂಬಿಸುವಂತಿದೆ. ಸುಟ್ಟ ಗಾಯಗಳು  ಒಂದೆರಡಾಗಿದ್ದರೆ ಮದ್ದು ಅರೆಯಬಹುದಿತ್ತು. ಒಡಲಿಗೊಡಲೇ ರುಣಗಳಿಂದ ಸೋರುತಿರುವಾಗ ಹಿಡಿ ಬೂದಿಯನ್ನು ಸವರುವುದೆಂತು ?  ದಂದುಗಗಳ ಮಧ್ಯೆ ಜಂಗಮವಾಗುವ ಬಗೆಯನ್ನು ಅರಿತಿದ್ದ ಬಸವಣ್ಣನವರು ಮಾಹಿತಿ ತಂತ್ರಜ್ಞಾನ ಯುಗದೊಳಗೆ ತೊಳಲಾಡುತ್ತಿರುವ ನಮ್ಮ ಜೀವನ ಮೌಲ್ಯಗಳಿಗೆ ರೂಪಕವಾಗಿ ನಿಲ್ಲುವ ರೀತಿಯನ್ನು ಕವಿಯಿಲ್ಲಿ ಮರ‍್ಮಿಕವಾಗಿ ನಿರೂಪಿಸಿದ್ದಾರೆ. ಇದಕ್ಕೇ ಇರಬೇಕು ಬಸವಣ್ಣನವರು -
'ಜೋಳವಾಳಿಯವ ನಾನಲ್ಲ
ವೇಳೆವಾಳಿಯವ ನಾನಲ್ಲ
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು ಕೂಡಲಸಂಗಮದೇವಾ
ಮರಣವೇ ಮಹಾನವಮಿ

ಎಂದು ಹಾಡಿರುವುದು.  ಈ ಸ್ವಾಭಿಮಾನ, ಛಲ, ಸ್ವಾವಲಂಬನೆ,  ಆತ್ಮವಿಶ್ವಾಸ ನಿಷ್ಠುರತೆ ಹಾಗೂ ನರ‍್ಮಲತೆಗಳು ಒಂಭತ್ತು ಶತಮಾನಗಳ ನಂತರವೂ ನಮಗಿನ್ನೂ ಮೈಗೂಡಬೇಕಾಗಿವೆ. ಕಂಪೆನಿಗಳು ಹೇರುವ ಸರಕುಗಳೇ ನಮಗೆ ಅಂಗ ಹಾಗೂ ಲಿಂಗ ಭೋಗಗಳಾಗಿರುವಾಗ ನಾವೆಲ್ಲರೂ ಜೋಳವಾಳಿಗಳೇ‌. ಆಧುನಿಕ ಉಪಕರಣಗಳ ಕಾಣದೊಡೆಯರು ತರಂಗಗಳನ್ನು ನಿಲ್ಲಿಸಿದಾಕ್ಷಣ ಮಾನಸಿಕ ವ್ಯಸ್ತರಂತೆ ಕಂಪಿಸುವ ನಾವು ವೇಳೆವಾಳಿಗಳೇ. ಅಧಿಕಾರದ ಹಿಂದೆ ಬೆನ್ನುಬಿದ್ದು ಓಡುವ ನಾವು ಲೆಂಕವಾಳಿಗಳೇ. ಮರಣವೇ ಮಹಾನವಮಿ ಯಾದಾಗ ನಮ್ಮನ್ನಾಳುತ್ತಿರುವ ಹೊನ್ನು, ಮಣ್ಣುಗಳು ಎಮ್ಮ ಚರಣಕಮಲದೊಳಗೆ ದುಂಬಿಯಂತಾಗಿಬಿಡುವುದನ್ನು ನಾವಿನ್ನೂ ಕಾಣಬೇಕಾಗಿದೆ. 
ಇಂತಹ ವೈವಿಧ್ಯಮಯ ವೈರುಧ್ಯಮಯ ಚಿಂತನೆಗಳ ವಿಭಿನ್ನ ಆಯಾಮಗಳಿಂದ ಕಂಗೊಳಿಸುವ ಚಾಂದ್ ಪಾಷಾ ರವರ ಕವಿತೆ ಮನೋಜ್ಞವಾಗಿದೆ. ರ‍್ತಮಾನಕ್ಕೊಂದು ಅಗತ್ಯವಾದ ಶರಣರ ರ‍್ಪಣವೊಂದನ್ನು ಜಗತ್ತಿನ ಕೈಯ್ಯಲ್ಲಿಡುವ ಈ ಕಾವ್ಯ ಬೆರಗನ್ನು ಹುಟ್ಟಿಸುವಂತಿದೆ‌. ರ‍್ತಮಾನೀಕರಣ ಕಾವ್ಯದ ರಸಸೂತ್ರ. ಪ್ರತಿಮಾತ್ಮಕವಾಗಿರುವ ಈ ಕಾವ್ಯ ಅಗಣಿತ ವಿಚಾರಗಳ ಕಿಡಿಗಳಿಂದ ಬೆಳಕಾಗಿದೆ. ಶಿಶುನಾಳ ಶರೀಫರು ಹಾಡಿದ 
ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ 
ಎಂಬ ಸಾಲುಗಳು ಸಂತೆಯಲ್ಲಿದ್ದೇನೆ ಕವಿತೆಯ ಸಾರವನ್ನು ತಾತ್ವಿಕವಾಗಿ ಧ್ವನಿಸುತ್ತವೆ. ಕೋಲಾಹಲಕ್ಕೀಡಾಗಿರುವ ನಮ್ಮ ಸ್ಥಿತಪ್ರಜ್ಞೆಯೊಂದಿಗೆ ಅನುಸಂಧಾನ ಮಾಡುವ ಚಾಂದ್ ಪಾಷಾರವರ ಕಾವ್ಯವು ಡಿಜಿಟಲ್ ಯುಗದಲ್ಲಿ ಬದಲಾಗುತ್ತಿರುವ ಮನುಷ್ಯನ ಗುಣ ಸ್ವಭಾವಗಳನ್ನು ಒರೆಗೆ ಹಚ್ಚುತ್ತದೆ. ಕವಿ ಚಾಂದ್ ರವರ ಕಾವ್ಯ ಕ್ಷಣಿಕ ಮಿಥ್ಯಗಳನ್ನು ನಿರಾಕರಿಸಿ ಶಾಶ್ವತ ಸತ್ಯಗಳ ಕಡೆಗೆ ಕರೆದೊಯ್ಯುವ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ.
ಪರ‍್ಚುಗೀಸ್ ಕವಿ ಮಾರಿಯೋ ಪಿಂಟೋರವರ ಕಾವ್ಯದ  
ನನಗೆ ಬೇಕು ನಿಜ ಮನುಷ್ಯರ ಸಾಂಗತ್ಯ
ತಮ್ಮ ತಪ್ಪುಗಳ ಒಪ್ಪಿಕೊಂಡು ನಗುವವರು
ತಮ್ಮ ಗೆಲುವಿನಿಂದ ಉಬ್ಬದವರು
ಎಂಬ ಸಾಲುಗಳು ಚಾಂದ್ ಪಾಷಾರವರ ಕಾವ್ಯದ ಅಂತರಾಳವನ್ನೇ ಮಥಿಸುವಂತಿವೆ. ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವದ ಮೌಲ್ಯಗಳ ಅಗತ್ಯತೆಯನ್ನು ಪ್ರತಿಪಾದಿಸುವ ಪಿಂಟೋರವರ ಈ ಸಾಲುಗಳು ಮೌನ ಕ್ರಾಂತಿಯನ್ನು ಪ್ರೇರೇಪಿಸುತ್ತವೆ. ಮೇಲೆ ಉಲ್ಲೇಖಿಸಿದ ಎಲ್ಲ ಕಾವ್ಯಗಳೂ ಒಂದೇ ಪೊಸ ಮಾಲೆಯ ಅವಿಭಾಜ್ಯ ಪುಷ್ಪಗಳಂತಿವೆ. ಒಳಗಿರುವ ತತ್ವ ಸೂತ್ರವೂ  ಎಂಬಂತೆ ಸಂವಹನಗೈಯ್ಯುತ್ತಿರುವುದು ವಿಸ್ಮಯ ತರುತ್ತದೆ. 

Friday, 24 November 2023

 ಉಳುಕು


                    ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
                    ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
                    ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ತಿ ಮಜ್ಜೆಗಳು
                    ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
        ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ
        ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
        ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
        ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
                    ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು
                    ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
                    ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
                    ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
        ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ
        ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
        ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
        ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
                    ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು
                    ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
                    ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ                             ಹುಳುಕು
                    ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ                         ಕೊಂಕು
                    ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು
x

 ಉಳುಕು
ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ
 ಮಜ್ಜೆಗಳು
ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ

ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು

ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ

ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು

ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
ಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕು
ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕು
ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು

ಉಳುಕು



ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
ಸತ್ಯದ ರ‍್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ತಿ ಮಜ್ಜೆಗಳು
ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ

ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು

ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ

ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು

ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
ಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕು
ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕು
ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು

Thursday, 17 November 2022

 ದಿಗಂಬರವೇ ದಿವ್ಯಾಂಬರ

ಪಂಪ ರನ್ನ ಜನ್ನರು ಸಾಕು ಅರಿವುದು ಸೌಜನ್ಯ
ಕೋಟಿ ಜೀವರಾಶಿಗಳ ಜಗದಲ್ಲಿ ಮನುಷ್ಯನೇ ವಿಶ್ವಮಾನ್ಯ
ಗ್ಯಾಲಕ್ಸಿಗಳ ಬ್ರಹ್ಮಾಂಡದಲ್ಲಿ ನಾವು ತೃಣ ಸಾಮಾನ್ಯ
ನ್ಯಾಯದ ಗುಡಿಯಿದು ಪರಿಮಳದ ಶ್ರೀಗಂಧದ ಅರಣ್ಯ


ಕೋಮಲವಾಗಿ ಬಳುಕುವ ಬಿಳಿಯಿರುವುದೆಲ್ಲ ಹಾಲಲ್ಲ 
ಎಂದರು ಕುವೆಂಪು ಸಚಿವ ಮಂಡಲವೆಂದೂ ಶಾಶ್ವತವಲ್ಲ
ನಂಬದಿರಿ ಕಿವಿ ಕಚ್ಚಿ ಹಾಡುವ ಹಾಲುಗಲ್ಲ
ಎದುರಾಗುವವರೆಲ್ಲರೂ ಬಾಗುವ ಸಣ್ಣತನಗಳ ಜಾಳಲ್ಲ


ತಲ್ಲಣಿಸದಿರು ಕಂಡ್ಯ ತಾಳು ಮನವೆಂದರು ದಾಸರು
ಹೊರಡುವ ಹಾದಿಯೊಂದೇ ನಾವು ಭಗವಂತನ ದಾಸರು
ಭುವನ ಗೆದ್ದ ತಥಾಗತನಿಗೆ ಹೆಸರು ಮಂದಹಾಸರು
ಕಾಯಕವೇ ಕೈಲಾಸ ಬೇಕೆ ಹಂಗಿನರಮನೆಯ ಹೆಸರು?


ವಿಚಾರಿಸಿದರೆ ತಪ್ಪು ಒಪ್ಪುಗಳ ಪ್ರಶ್ನೆ  ಅನಂತ
ಆರಾಧಿಸಿದರೆ ಸಾಕು ಸರಸ್ವತಿಯ  ಏಕಾಂತ
ದಿಗಂಬರವೇ ದಿವ್ಯಾಂಬರ ಅಕ್ಕಮಹಾದೇವಿಯ ಪಂಥ
ತಿದ್ದಿ ಬೆಳಕಾಗಬೇಕೆನ್ನುವುದೇ ಭುವನದ ಮನುಜ ಮತ

ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...