Total Pageviews
Monday, 16 August 2021
Saturday, 1 May 2021
ಜಗವೆಂಬ ಕಡಲ ಕುದಿ ದಂಡಿ
ಜಗವೆಂಬ ಕಡಲ ಕುದಿ ದಂಡಿ‘ದಂಡಿ' ಇದು ಇದುವರೆಗೂ ನಾವು ತಿಳಿದಿರುವಂತೆ ಕೇವಲ ಒಂದು ಸ್ಥಳದ ಹೆಸರಲ್ಲ ಎಂಬ ಸತ್ಯ ಡಾ.ರಾಜಶೇಖರ ಮಠಪತಿಯವರ (ರಾಗಂ) "ದಂಡಿ" ಕಾದಂಬರಿಯನ್ನೋದಿದ ನಂತರ ದರ್ಶನವಾಗದೇ ಇರದು. 'ದಂಡಿ' ಹೋರಾಟದ ರೂಪಕವೂ ಹೌದು. ಸತ್ಯಕ್ಕಾಗಿ ನಡೆದ ಆಗ್ರಹದ ಪ್ರತಿರೂಪವೂ ಹೌದು. ದಂಡಿಯೆಂದರೆ ನಮಗೆ ನೆನಪಾಗುವುದು ಗಾಂಧೀಜಿಯವರು ೧೯೩೦ ಜನವರಿ ೩೦ ರಂದು ಬ್ರಿಟಿಷರು ಉಪ್ಪಿನ ಮೇಲೆ ಹೇರಿದ ಕರವನ್ನು ವಿರೋಧಿಸಿ ನಡೆಸಿದ ಉಲ್ಲಂಘನೆಯ ಪ್ರತಿಭಟನೆ. ಸ್ವದೇಶಿ ಚಳುವಳಿ ತೀವ್ರವಾಗಿ ಸಂಭವಿಸುತ್ತಿದ್ದ ಕಾಲಘಟ್ಟವದು. ಗುಲಾಮಗಿರಿಯಲ್ಲಿ ದೇಶ ನರಳುತ್ತಿದ್ದ ಸಂದರ್ಭವದು. ಪರಂಗಿಯವರ ಬಂದೂಕಿನ ಮೇಲೆ ಜನ್ಮತಳೆದ ಕಾಯಿದೆಗಳು ನಮ್ಮನ್ನಾಳಿ ತುಳಿದು ಮೆರೆಯುತ್ತಿದ್ದ ದುರಿತ ಸಂಕಟಗಳ ಸಮಯ. ಮಂದಗಾಮಿಗಳು, ತೀವ್ರಗಾಮಿಗಳು ತಮ್ಮದೇ ನೆಲೆಯಲ್ಲಿ ಹೋರಾಟವನ್ನು ರೂಪಿಸಿಕೊಂಡು ಬ್ರಿಟಿಷರಿಗಾಗಿ ಕ್ರಾಂತಿಯ ಬಲೆಯನ್ನು ನೇಯುತ್ತಿದ್ದ ಸಂದಿಗ್ಧ ಕಾಲದಲ್ಲಿ ಸ್ವಾತಂತ್ರ‍್ಯ ಸಂಗ್ರಾಮಕ್ಕೊಂದು ನಿರ್ಣಾಯಕವಾಗಬಹುದಾದ ದಿಕ್ಕು ದೆಸೆಯನ್ನು ತೋರಿದ ಚಳುವಳಿಯೆಂದರೆ ದಂಡಿ ಉಪ್ಪಿನ ಸತ್ಯಾಗ್ರಹ. ಸ್ವಾತಂತ್ರ‍್ಯ ಚಳುವಳಿಯ ಇತಿಹಾಸದಲ್ಲಿ ದಂಡಿ ಹೋರಾಟಕ್ಕೆ ವಿಶೇಷವಾದ ಮಹತ್ವವಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಅನುಯಾಯಿಗಳೊಂದಿಗೆ ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ೨೪೦ ಮೈಲುಗಳ ಕಾಲ್ನಡಿಗೆಯ ಮೂಲಕ ಮಾರ್ಚ್ - ಎಪ್ರಿಲ್ ನಲ್ಲಿ ೨೫ ದಿನಗಳ ಕಾಲ ದಂಡಿಯವರೆಗೆ ಸಾಗಿ ಅಲ್ಲಿ ಉಪ್ಪನ್ನು ತಯಾರಿಸುವುದರ ಮೂಲಕ ಉಪ್ಪಿನ ಮೇಲೆ ಆಂಗ್ಲರು ಹಾಕಿದ ತೆರಿಗೆಯನ್ನು ವಿರೋಧಿಸಿದರು. ಸಾವಿಲ್ಲದ ಸ್ವಾತಂತ್ರ‍್ಯ ಹೋರಾಟದ ಹಸಿ ಹಸಿಯಾದ ನೆನಪುಗಳನ್ನಿಟ್ಟುಕೊಂಡು, ಸಾವಿರದ ಹೆಜ್ಜೆಗಳನ್ನು ಗಾಂಧೀಜಿಯೊಂದಿಗೆ ಇಡಬಯಸಿದವರು ದಂಡಿ ಕಾದಂಬರಿಯ ಕರ್ತೃ ರಾಗಂರವರು. ಹಾಗೆಂದು ದಂಡಿ ಕೇವಲ ಉಪ್ಪಿನ ಕಥೆಯಲ್ಲ ; ಉಪ್ಪು ತಿಂದು ನೀರನ್ನು ಕುಡಿದವರ ಕಥೆಯೂ ಅಲ್ಲ ; ಉಪ್ಪಿನ ಋಣಕ್ಕಾಗಿ ಹೋರಾಡಿ ಹಾಡಿ ಮಡಿದವರ ವ್ಯಥೆ ; ಸ್ವಾತಂತ್ರ‍್ಯವೆಂಬ ಉಪ್ಪಿನ ರುಚಿಗಾಗಿ ಬಲಿಯಾದವರ ಯಶೋಗಾಥೆ. ಉಪ್ಪು ಭಾರತೀಯರ ಅಸ್ಮಿತೆಯ ಸಂಗತಿ ; ಬದುಕಿನ ಗೆಳತಿ. ವೈಜ್ಞಾನಿಕವಾಗಿ ಉಪ್ಪು ಕೊಳೆಯನ್ನು ತೊಳೆಯಲು ಹೆಸರಾಗಿರುವಂತೆಯೇ ಭಾರತಕ್ಕಂಟಿದ ವಸಾಹತುಶಾಹಿ ಮಾಲಿನ್ಯದಿಂದ ಬಿಡುಗಡೆಗೊಳಿಸುವ ವಿಮುಕ್ತಿಯ ಸಂಜೀವಿನಿಯಾಗಿಯೂ ಪಾತ್ರವನ್ನು ನಿರ್ವಹಿಸಿದೆ ಹಾಗೂ ಕೆಲವೊಮ್ಮೆ ಮಹಾತ್ಮಾಗಾಂಧಿಯಾಗಿ, ಮಗದೊಮ್ಮೆ ಕಾದಂಬರಿ ದಂಡಿಯಾಗಿ. ಈ ಕಾದಂಬರಿಯಲ್ಲಿ ದಂಡಿ ಹೋರಾಟದ ಪ್ರತಿಮೆಯಾಗಿ ಮಾತ್ರ ವಿರಮಿಸದೇ ಒಂದು ಪಾತ್ರವಾಗಿ ಕಡಲಿನ ಪ್ರವಾಹದಂತೆ ಹರಿದುಬಂದಿರುವುದು ವಿಶೇಷವಾಗಿದೆ.ಕರಾವಳಿಯು ನಮ್ಮ ನಾಡಿನ ದಂಡಿಯಾಗಿ ಮಾರ್ಪಟ್ಟ ಘಳಿಗೆಗಳ ಜೀವಂತ ನೆನಪುಗಳನ್ನು ಮರಳಿ ಹಸಿರು ಹಸಿರಾಗಿ ಕಟ್ಟಿಕೊಡುವ ಮಹತ್ವದ ದಾಖಲೆಯಾಗಿ ಈ ಕಾದಂಬರಿ ಗಮನ ಸೆಳೆಯುತ್ತದೆ. ಕಾದಂಬರಿಕಾರರು ಕರಾವಳಿಯ ನಾಡಿನವರಲ್ಲದಿದ್ದರೂ ಅಲ್ಲಿಯ ಪರಿಸರದ ಹೋರಾಟವೊಂದನ್ನು ಮನೋಜ್ಞವಾಗಿ ಹೆಣೆದುಕೊಡುವ ಪ್ರಯತ್ನ ವಿಸ್ಮಯ ಮೂಡಿಸುವಂತಿದೆ. ತಮ್ಮ ವೃತ್ತಿ ಜೀವನದ ಹನ್ನೊಂದು ಹಾಗೂ ಮತ್ತೊಂದು ತಿಂಗಳ ಕೆಲವೇ ಅವಧಿಯನ್ನು ಭಟ್ಕಳದ ನೆಲದಲ್ಲಿ ಕಳೆದ ಅನುಭವಗಳ ಆಧಾರದ ಮೇಲೆಯೇ ಕಡಲತಡಿಯ ಪ್ರದೇಶದ ಸಾತಂತ್ರ‍್ಯ ಹೋರಾಟವೊಂದರ ಚಿತ್ರಣದ ಮಲ್ಲಿಗೆಯಮಾಲೆಯನ್ನು ಅಭೂತಪೂರ್ವವಾಗಿ ಹೆಣೆದು ಕನ್ನಡ ಸರಸ್ವತಿಗೆ ಮುಡಿಸಿದ ಯಶಸ್ಸು ಕಾದಂಬರಿಕಾರರಿಗೆ ಸಲ್ಲುತ್ತದೆ. ಲೇಖನಿ ಹಾಗೂ ಲೇಖಕರು ಎಂದೆಂದಿಗೂ ಸೀಮಾತೀತ ಎನ್ನುವುದಕ್ಕೆ ನಿದರ್ಶನದಂತಿದೆ ಈ ಕೃತಿ. ಕಡಲ ಕಿನಾರೆಯ ನಾಡಿನಲ್ಲಿ ಸಂಭವಿಸಿದ ಸಾತಂತ್ರ‍್ಯ ಹೋರಾಟವನ್ನು ಕುರಿತು ಪ್ರಥಮ ದಾಖಲೆಯ ಕೃತಿಯಾಗಿಯೂ 'ದಂಡಿ'ಗೆ ವಿಶೇಷ ಸ್ಥಾನಮಾನವಿದೆ. ನಮ್ಮ ನಾಡಿನ ಪಶ್ಚಿಮದ ಸಾಗರದ ದಂಡೆಯ ಮೇಲೆ ಹರಳುಗಟ್ಟಿದ ಸಾತಂತ್ರ‍್ಯ ಹೋರಾಟದ ಘಟನೆಗಳನ್ನು ಎಳೆಎಳೆಯಾಗಿ ಹೆಕ್ಕಿಕೊಡುವ ದೃಶ್ಯಕಾವ್ಯವೇ ದಂಡಿ ಕಾದಂಬರಿ.ಅಮಾಯಕರ ಮೇಲೆ ನಡೆದ ವಸಾಹತುಶಾಹಿಯ ದೌರ್ಜನ್ಯ, ಉಳುವವರನ್ನೇ ಗುರಿಯಾಗಿಸಿಕೊಂಡ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ, ಹೊರಗಿನ ಶತ್ರುಗಳಿಗಿಂತ ಅಪಾಯಕಾರಿಯಾದ ನಾಡಿನೊಳಗಿನ ವೈರಿಗಳ ಕುತಂತ್ರಗಳು, ಇದೇ ಸರಿಯಾದ ಸಂದರ್ಭವೆಂದು ಬಗೆದು ಬಡವರ ಹೊಟ್ಟೆ ಬಗೆದ ದುರುಳರ ಅಟ್ಟಹಾಸ, ಜೋಳಿಗೆ ಹಾಕಿಕೊಂಡು ತಿರುಗಿದರೆ ಸಾಕು ಬಂಧಿಸಿ ಕೊಲ್ಲುವ ಪರಂಗಿಯವರ ಬಂದೂಕುಗಳ ಮಾರಣಹೋಮ, ವಂದೇಮಾತರಂ ಎಂದವರನ್ನು ಜೈಲಿಗಟ್ಟಿ ಮೂಳೆಗಳನ್ನು ಪುಡಿಮಾಡಿ ಜೀವಂತ ಶವಗಳನ್ನಾಗಿಸುವ ಪರಂಗಿಯವರ ಪಕ್ಷವಹಿಸಿ ಮೆರೆದ ನಮ್ಮವರ ದುರುಳುತನಗಳು ಇವೆಲ್ಲವುಗಳ ಸುತ್ತ ಹೆಣೆದ ಹುತ್ತಗಟ್ಟಿದ ಚಿತ್ತವೇ ಈ ಕಾದಂಬರಿಯ ಮೂಲಸೆಲೆ. ಹಾಲಿನಂತೆಯೇ ಪರಿಶುದ್ಧವಾಗಿರುವ ಹಾಲಕ್ಕಿ ಜನರ ಜೀವನದೊಳಗೆ ವಿಷ ಬೆರೆಸಿ ಕಾಡಿನಿಂದ ಒಕ್ಕಲೆಬ್ಬಿಸುವ ಹುನ್ನಾರದ ವಿರುದ್ಧದ ಪ್ರತಿಭಟನೆಯೂ ಒಂದು ಸಾತಂತ್ರ‍್ಯ ಹೋರಾಟವೇ ಎಂಬ ಕ್ರಾಂತಿಗಿರುವ ಹೊಸ ಆಯಾಮದತ್ತ ಬೊಟ್ಟು ಮಾಡುತ್ತದೆ ಕಾದಂಬರಿಯೊಳಗಿನ ಆಶಯ. ಈ ಕಾದಂಬರಿಯು ವಿಶಾಲ್ ರಾಜ್ ರವರ ನಿರ್ದೇಶನದಲ್ಲಿ ಚಲನಚಿತ್ರವಾಗುತ್ತಿರುವ ಈ ಹೊತ್ತಿನಲ್ಲಿ ಈ ಕೃತಿಯೊಂದಿಗಿನ ನನ್ನ ಅನುಸಂಧಾನ ಕೊರೊನಾ ದೊಂದಿಗಿನ
ಹೋರಾಟವನ್ನು ಚೈತನ್ಯಪೂರ್ಣಗೊಳಿಸಿದೆ. ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ, ಮನೋಬಲಗಳನ್ನು ವೃದ್ಧಿಸುವಲ್ಲಿ
ರೂಪಕವಾಗಿ ಕಾದಂಬರಿಯ ಅಧ್ಯಯನ ಈ ಹೊತ್ತಿನ ಮದ್ದಾಗಿದೆ ಎಂಬುದರಲ್ಲಿ ಅತಿಶಯೋಕ್ತಿಯೇನಲ್ಲ.
ಕಾದಂಬರಿಕಾರರಾದ ರಾಗಂರವರು "ಈ ನನ್ನ ದಂಡಿ ತುಂಡು ನೆಲದ ಕಥನವಲ್ಲ. ಜಗವೆಂಬ ಕಡಲ ಕುದಿ. 'ದಂಡಿ' ಸತ್ತವರ ಚರಿತ್ರೆಯಲ್ಲ, ವರ್ತಮಾನವಲ್ಲ, ಮುಂದೊಮ್ಮೆ ಇದು ಭವಿಷ್ಯವಾಗುವುದಾದರೆ ಅದು ಗುಣದ ಶಕ್ತಿ ಒಂದರ್ಥದಲ್ಲಿ ಇದು ನಾವು ನಿತ್ಯ ತಿಂದು ಮರೆಯುವ ಉಪ್ಪಿನ ಆತ್ಮಚರಿತ್ರೆ. ಆದರೆ, ಉಪ್ಪೆಂದರೆ ? ಗುಣ ಮತ್ತು ಋಣದ ಹಾಡು. ಈ ಅರ್ಥದಲ್ಲಿ 'ದಂಡಿ' ಇಡಿಯಾದ ಜಗತ್ತಿನಲ್ಲಿ ಚಾಚಿಕೊಂಡ ಮನುಷ್ಯನೆಂಬೋ ಮನುಷ್ಯ ಧರ್ಮದ ಅನಾವರಣವಷ್ಟೇ. ಗಾಂಧಿಯಾಗುವ ಈ ಮನುಷ್ಯ ಋಣದ ಕಾರಣ ಖಂಡಾಂತರ ಸುತ್ತುತ್ತಾನೆ. ಲೋಕದ ಜೀವನ್ಮರಣದಲ್ಲಿ ಬೆರೆತು ಕಡಲುಕ್ಕಿದಲ್ಲೆಲ್ಲಾ ದಂಡಿ ದಂಡಿಯಾಗಿ ಧರ್ಮವೆಂದರೇನು ? ಋಣವೆಂದರೇನು ? ಮನುಷ್ಯಗುಣವೆಂದರೇನು ? ಎಂದು ಪ್ರಶ್ನೆ-ಪ್ರಜ್ಞೆಗಳ ಸಾಲು ಮರಗಳ ನೆಟ್ಟು ನಮ್ಮ ಸಾವನ್ನೂ ಪ್ರಶ್ನೆಯಾಗಿಸುತ್ತಾನೆ." ಎಂದು ಹಿಡಿಉಪ್ಪನ್ನು , ಚಿಟಿಕೆ ಮಣ್ಣನ್ನು ಹಿಡಿದು ಅರೆಬೆತ್ತಲೆ ಫಕೀರನೊಬ್ಬ ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದವರ ಬುಡವನ್ನೇ ಅಲ್ಲಾಡಿಸಿದ ಚರಿತ್ರೆಯಾಗಿ ದಂಡಿ ಕಾದಂಬರಿ ರೂಪುಗೊಂಡ ಬಗೆಯನ್ನು ಅನೂಹ್ಯವಾಗಿ ಬಣ್ಣಿಸುತ್ತಾರೆ. ‘ದಂಡಿ’ ಈ ಕಾದಂಬರಿಯ ನಾಯಕನ ಹೆಸರು. ಅಹಿಂಸಾತ್ಮಕತೆಯನ್ನೇ ಉಸಿರಾಡುವ ಜನರ ಮಧ್ಯೆ ತರವಲ್ಲದ ಸ್ವರವಾಗಿ ಮೂಡಿಬಂದವನೀತ. ತನ್ನ ಜನರನ್ನು ಭೂತದಂತೆ ಕಾಡಿದ ಲತೀಫ್ ಖಾನ್ ನ ರುಂಡವನ್ನು ಚೆಂಡಾಡಿ ಹಿಂಸೆಯ ದಾರಿಯನ್ನು ಹಿಡಿದ ಉಗ್ರಗಾಮಿಯಾಗಿ ದಾರಿ ತಪ್ಪಿದ ದಂಡಿಯನ್ನು ನಿಲ್ಲಿಸಿ, ಉಪ್ಪಿನ ಕಥೆಯನ್ನು ಹೇಳಿ, ಬಾಯಿಗೆ ಚಿಟಿಕೆ ಉಪ್ಪು ಹಾಕಿ, ಋಣದ ಶಾಂತಿಯ ಹಾದಿಗೆ ತಂದವಳು ತಾಯಿಯಂತಿದ್ದ ರುಕ್ಮಣಿಬಾಯಿ. ಕರಾವಳಿ ಕರ್ನಾಟಕದ ಮಡಿಲ ಹೋರಾಟಗಳೆಲ್ಲವನ್ನೂ ತನ್ನದೆಂಬಂತೆ ಮಡಿಲು ತುಂಬಿಕೊಂಡು ಸವೆದ ರುಕ್ಮಣಿಬಾಯಿ ತಾಯಿ ಭಾರತಿಯ ಮಗದೊಂದು ಪ್ರತಿರೂಪ. ಹಳಿ ತಪ್ಪಿದ ದಂಡಿಯೆಂಬ ಕುದಿರಕ್ತದ ಒಡಲ ಬಂಡಿಗೆ ರುಕ್ಮಿಣಿಬಾಯಿಯ ನುಡಿಗಡಣವೇ ಕಡೆಗೀಲಾದವು. ಮಲ್ಲಿಗೆಯ ಪರಿಮಳದಂತಿದ್ದ ಒಲುಮೆಯ ಗೆಳತಿ ವಸುಧೆಯ ಹೃದಯಮಿಡಿತ ದಂಡಿಯ ಬಾಳಿನ ಬೆಳಕಾಯಿತು. ದಂಡಿ ಹೊರಡುತ್ತಾನೆ ತಾನೇ ಕಂಡುಕೊಂಡ ಹೋರಾಟದ ಹಾದಿಯೆಡೆ್ಗೆ; ಬಯಕೆಗಳಿಂದ ಬಿಡುಗಡೆಗೊಂಡ ಮುಕ್ತಿಯ ಪಥದೆಡೆಗೆ. ತಾನೊಬ್ಬನೇ ಬೆಳಕನ್ನು ಕಂಡದ್ದಲ್ಲದೇ ನಮಗೆಲ್ಲರಿಗೂ ಬೆಳಕಿನ ಹಾದಿಯನ್ನು ತೋರುವ ನಾಯಕನಾಗಿ ದಂಡಿ ಇಲ್ಲಿ ರೂಪು ಪಡೆಯುವ ಪರಿ ವಿಭಿನ್ನವಾಗಿದೆ.
ಜನಾಂಗವೊಂದು ಜನಾಂಗದಾಚೆಗೆ, ಪ್ರದೇಶವೊಂದು ಪ್ರದೇಶದಾಚೆಗೆ, ಹೋರಾಟವೊಂದು ಹೋರಾಟದಾಚೆಗೆ ವಿಸ್ತರಿಸಿಕೊಂಡ ಸೀಮಾತೀತತೆಯನ್ನು ಅನಾವರಣಗೊಳಿಸುತ್ತದೆ ಕಾದಂಬರಿ. ಇಲ್ಲಿ ಮೈವಡೆದಿರುವ ಹೋರಾಟ ಕೇವಲ ಕರಾವಳಿ ಕರ್ನಾಟಕದ್ದಲ್ಲ, ಅಖಂಡ ಭಾರತದ್ದು, ಅಸೀಮ ಜಗತ್ತಿನದು. ಏಕೆಂದರೆ ಸ್ವಾತಂತ್ರ‍್ಯದ ಸಂಗ್ರಾಮ ಕಾಲಾತೀತ ಹಾಗೂ ಸೀಮಾತೀತ. ಇದು ಭೂತದೊಳಗೆ ಮಣ್ಣಾಗಿ ಹೋಗಿರುವಂತೆಯೇ ವರ್ತಮಾನದೊಳಗೆ ಗುಪ್ತಗಾಮಿನಿಯಾಗಿ, ಭವಿಷ್ಯತ್ತಿನೊಳಗೆ ಕ್ಷೀರಪಥವಾಗಿ ಗೋಚರಿಸಬಲ್ಲದು. ವರ್ತಮಾನದಲ್ಲಿಯ ಜಗತ್ತಿನ ಯಾವುದೇ ಮೂಲೆಯಲ್ಲಿ ಜರುಗುತ್ತಿರುವ ಬಂಡಾಯದ ಕಹಳೆಯಿರಬಹುದು, ರೈತ ಹೋರಾಟಗಳಿರಬಹುದು, ಕಾರ್ಮಿಕರ ಪ್ರತಿಭಟನೆಗಳಿರಬಹುದು ಅಲ್ಲಿ ಸತ್ಯದ ಆಗ್ರಹವಿದ್ದರೆ ಖಂಡಿತವಾಗಿಯೂ ದಂಡಿ ಮುನ್ನಲೆಯಲ್ಲಿದ್ದಾನೆಂದೇ ಅರ್ಥ. ದಂಡಿ ಒಂದು ಐತಿಹಾಸಿಕ ಕಾದಂಬರಿಯಾಗಿದ್ದರೂ ಒಳನೋಟದಲ್ಲಿ ವರ್ತಮಾನದ ತಲ್ಲಣಗಳ ಸಂಕಥನವನ್ನೂ ಹಾಡುತ್ತಲೇ ಸಾಗುತ್ತದೆ. ದಂಡಿ ಕೇವಲ ಚರಿತ್ರೆಯ ಪಾತ್ರವಾಗಿರದೇ ವರ್ತಮಾನದ ಎಚ್ಚರವೂ ಆಗಿದ್ದಾನೆ. ಕಾದಂಬರಿಕಾರರೇ ಉಲ್ಲೇಖಿಸುವ ಹಾಗೆ " ಮಹಾತ್ಮಾ ಗಾಂಧೀಜಿ ಅವರಿಂದಾದಿಯಾಗಿ ಕರ್ನಾಟಕದ ಉತ್ತರ ಕನ್ನಡದ ಟಿ.ಎಸ್. ನಾಯಕ, ರಂಗನಾಥ ದಿವಾಕರ, ಡಾ. ಹರ್ಡೀಕರರ ರಾಷ್ಟ್ರೀಯ ಕಾಳಜಿಗಳು ಕಾದಂಬರಿಯ ನಾಯಕ ದಂಡಿಯಲ್ಲಿ ಸಮ್ಮಿಳಿತಗೊಂಡಿವೆ. ಅವರಂತೆಯೇ ಈ ನೆಲದ ಉಪ್ಪಿನ ಋಣವನ್ನು ತೀರಿಸಿದ ಧನ್ಯತೆಯನ್ನು ಅನುಭವಿಸುವುದೇ ನಮ್ಮ ನಾಯಕ ದಂಡಿಯ ಉದ್ಧೇಶ. ಈ ಅರ್ಥದಲ್ಲಿ ದಂಡಿ ಸರ್ವಕಾಲಕ್ಕೂ ಸಲ್ಲುವ ನಾಯಕ. ಈತನಿಗೆ ಭೂತದ ಹಂಗಿಲ್ಲ, ವರ್ತಮಾನದ ಬಂಧನವಿಲ್ಲ, ಮತ್ತು ಭವಿಷ್ಯದ ಮಿತಿ ಇಲ್ಲ." ಭಾರತೀಯರಿಗೆ ಉಪ್ಪು ಸ್ವಾತಂತ್ರ‍್ಯದ ಸಂಕೇತವಾದಂತೆಯೇ ಹೋರಾಟ ಜೀವನದ ಧ್ಯೇಯವೂ ಆಗಿಹೋಯಿತು. ಭಾಷೆಯ ದೃಷ್ಟಿಯಿಂದ ಕರಾವಳಿ ಕನ್ನಡದ ಸೊಬಗನ್ನು ಇನ್ನೂ ಸ್ವಾರಸ್ಯಕರವಾಗಿ ಹೆಣೆಯಬಹುದಾಗಿತ್ತು. ಕಾದಂಬರಿಯ ಕಥಾಸಂವಿಧಾನವು ನೆಲಮೂಲ ಸಂಸ್ಕೃತಿಯೊಳಗೆ ರೂಪು ತಳೆದಿರಬಹುದಾದ ಕ್ರಾಂತಿಯ ಸ್ವರೂಪವನ್ನು ಆಲಂಗಿಸಿಕೊಂಡು ಕಸುವಿನಿಂದ ಕಂಗೊಳಿಸಿದೆ. ಪಾತ್ರ ವೈವಿಧ್ಯತೆ ಕಥೆಯ ಓಘಕ್ಕೆ ಮೆರಗನ್ನು ತಂದಿದೆ. ಚಳುವಳಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡ ಶ್ಯಾನುಭೋಗ ಹಾಗೂ ರುಕ್ಮಿಣಿಬಾಯಿ ದಂಪತಿ, ನಾಗೇಶ ಹೆಗಡೆಯವರ ಪರಿವಾರ, ದೇಶಾವರಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡ ವಿನಾಯಕ ಭಟ್ಟರು ಹಾಗೂ ವಸುಧೆ, ಚಳುವಳಿಯಲ್ಲಿ ಏನೆಲ್ಲವನ್ನು ಕಳೆದುಕೊಂಡರೂ ಏನೂ ಆಗಿಲ್ಲವೆಂಬಂತೆ ಚೈತನ್ಯದ ಸೇವೆಯನ್ನು ಸಲ್ಲಿಸುವ ಬೊಮ್ಮ, ರಾಕರು, ಸತ್ಯಾಗ್ರಹಕ್ಕಾಗಿ ಸದಾ ಸಿದ್ಧರಾಗಿರುವಂತೆ ಕಾಯುತ್ತಿದ್ದ ರಾಯನಗೌಡ ಮತ್ತು ಸೋಮ್ನಿ, ನಾಗೇಶ ಹೆಗಡೆಯವರ ಅಪಾರ ನಿಧಿಯನ್ನು ರಕ್ಷಿಸಿ ತಾನುಂಡ ಉಪ್ಪಿನ ಋಣವನ್ನು ವಿಭಿನ್ನ ಬಗೆಯಲ್ಲಿ ತೀರಿಸಿ ಮಹಾತ್ಮನಿಂದ ನಮಿಸಲ್ಪಟ್ಟ ಹಸಲರದೇವಿ ಹೀಗೆ ಕರಾವಳಿಯ ನೆಲದ ಹೋರಾಟದ ಪ್ರತಿಮೆಗಳಂತೆ ಮೈತಳೆದು ನಿಂತ ಪಾತ್ರವೈವಿಧ್ಯತೆ ಕಾದಂಬರಿಯನ್ನು ದೃಶ‍್ಯಕಾವ್ಯವಾಗಿಸಿವೆ. ಅರಿತು ನೋಡಿದರೆ ಇವರೆಲ್ಲರೂ ಆಧುನಿಕ ಜಗತ್ತಿನ ಹೋರಾಟಗಳಲ್ಲಿನ ಪ್ರತಿನಿಧಿಗಳೇ ಆಗಿರುವುದನ್ನು ನಾವು ಮನಗಾಣಬಹುದು. ಬಸವಣ್ಣನವರು
ತಮ್ಮ ವಚನವೊಂದರಲ್ಲಿ ಅದಂದೇ ಹುಟ್ಟಿತ್ತು ಅದಂದೇ ಹೊಂದಿತ್ತು ಎಂದು ಹಾಡಿದಂತೆ ದಂಡಿಯೂ ಅಂದೇ ಹುಟ್ಟಿ
ಅಂದೇ ಯಶಸ್ವಿಯಾಗಿ ಅಂತ್ಯವಾದಂತೆನಿಸಿದರೂ ಕೂಡ ಅದು ಜಗದ ಒಡಲೊಳಗೆ ನಿರಂತವರಾಗಿ ಜರುಗುತ್ತಿರುವ ಸಂಘರ್ಷದ ಪ್ರತಿಮೆಯಾಗಿಯೂ
ನಿಲ್ಲುವ ಕಾಣ್ಕೆಯನ್ನು ಹೊಂದಿದೆ. ಪಾತ್ರಗಳು ಅಂದಂದೇ ಹುಟ್ಟಿ ಅಂದಂದೇ ಮುಗಿದಿದ್ದರೂ ಹೋರಾಟ ಮಾತ್ರ ನಿರಂತರವಾಗಿರುತ್ತದೆ ಎಂಬ ಧ್ವನಿ ದಂಡಿಯ ಪಾತ್ರದ ಮೂಲಕ ಹೊರಹೊಮ್ಮಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳಂತಹ ಸ್ವಾತಂತ್ರ‍್ಯ ಪೂರ್ವ ಭಾರತದ ರೋಚಕ ಯಾತ್ರೆಯನ್ನು ತನ್ನದೇ ಶೈಲಿಯಲ್ಲಿ ತೆರದಿಡುವ ಕಾದಂಬರಿಯು ಬಾಪೂಜಿಯವರ ಅಂತರಂಗದ ಶೋಧನೆಯಾಗಿರುವ ಸತ್ಯಾಗ್ರಹವು ಹೇಗೆ ಮಾನವನ ಧರ್ಮವೇ ಆಗಿಹೋಯಿತೆನ್ನುವುದಕ್ಕೆ ದೃಷ್ಟಾಂತಗಳನ್ನೊದಗಿಸುತ್ತದೆ. ಸತ್ಯ, ಅಹಿಂಸೆ, ಹಾಗೂ ಶಾಂತಿ ಎಂಬ ತತ್ವಗಳು ಹೇಗೆ ಲಕ್ಷಾಂತರ ಜನರ ಬದುಕನ್ನು ಒಳಹೊಕ್ಕು ರೂಪಿಸಿದ ಮಂತ್ರವಾದವು ಎನ್ನುವುದರ ನಿರೂಪಣೆ ಕಾದಂಬರಿಯ ಆಶಯಗಳನ್ನು ಇನ್ನಿಲ್ಲದಂತೆ ದೃಢೀಕರಿಸುತ್ತದೆ. ಸರ್ವರಿಗೂ ಸಮಬಾಳು ಎನ್ನುವ ಕುವೆಂಪುರವರ ಉಕ್ತಿಯು ಈ ಕಾದಂಬರಿಯ ಕತೆಯ ಹಿನ್ನೆಲೆಯಲ್ಲಿನ ಭಿತ್ತಿಯಾಗಿ ಗಮನಸೆಳೆಯುತ್ತದೆ. ಜಾತಿ ಮತ ಭೇದಗಳಿಲ್ಲದೇ ಎಲ್ಲರ ಜೀವನಾಡಿಯಾಗಿರುವ ಉಪ್ಪು ಸ್ವತಂತ್ರಪೂರ್ವ ಭಾರತದ ಅಸ್ಮಿತೆಯಾಗಿ ಹೇಗೆ ಜನರನ್ನು ಒಗ್ಗೂಡಿಸಲು ಕಾರಣವಾಯಿತೆನ್ನುವುದಕ್ಕೆ ದಂಡಿ ಉತ್ತರವಾಗಿ ನಿಲ್ಲುತ್ತದೆ. ಪ್ರಾದೇಶಿಕ ಸಂಸ್ಕೃತಿಯ ತಲ್ಲಣಗಳನ್ನೂ ಅಷ್ಟೇ ಆಪ್ತವಾಗಿ ಕಟ್ಟಿಕೊಡುವ ಕಾದಂಬರಿಯು ಏಕಕಾಲಕ್ಕೆ ವಿಶ್ವ ಸಂಸ್ಕೃತಿಗೂ ತನ್ನದೇ ಆದ ಕೊಡುಗೆಯನ್ನು ನೀಡುವಂತಿದೆ. ದಂಡಿ ಆಂಗ್ಲರ ವಿರುದ್ಧದ ಬಂಡಾಯದ ಕಥೆಯಾಗಿದ್ದರೂ ನಮ್ಮೊಳಗಿನ ವೈರಿಗಳ ವಿರುದ್ಧದ ಪ್ರತಿಭಟನೆಯಾಗಿಯೂ ಎದುರು ನಿಲ್ಲುತ್ತದೆ.
ರಣಹದ್ದಿನಂತೆ ಜನರನ್ನು ಕುಕ್ಕಿ ತಿನ್ನುವ ದುಷ್ಟನೊಬ್ಬನ ಕೊಲೆಯಿಂದಲೇ ಆರಂಭವಾಗುವ ಕಾದಂಬರಿಯು ಬಂಡಾಯದ ಉತ್ತುಂಗವನ್ನು ಅನುಭವಿಸುವಂತೆ ಮಾಡುತ್ತದೆ. ನಂತರ ಗಂಗಾವಳಿ ನದಿಯಂತೆ ಹರಹನ್ನು ಪಡೆದುಕೊಂಡು ತನ್ನ ಲೋಕವನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ನದಿಯೊಳಗಿನ ಅಲೆಗಳಂತೆ ಪಾತ್ರಗಳು ಏರಿಳಿದು ದಡ ಸೇರುವ ಪರಿಯನ್ನು ಓದಿಯೇ ಆನಂದಿಸಬೇಕು. ಪ್ರವಾಹದಂತೆ ಮುನ್ನುಗ್ಗುವ ನಾಯಕ ದಂಡಿ ಊರೊಳಗೆ ಹೊಕ್ಕು ಸಲ್ಲದ ಪಾತಕವನ್ನು ಮಾಡಿ ಆವೇಶ ಕಡಿಮೆಯಾದಾಗ ಮರಳಿ ತಣ್ಣಗಾಗುವಂತೆ ರೂಪಿತವಾಗಿರುವ ಗುಣಶೀಲತೆಯನ್ನು ಹೊಂದಿದ್ದಾನೆ. ಲತೀಫ್ ಖಾನ್ ಎಂಬ ಮೊಸಳೆಯಂತಹ ನದಿಯೊಳಗಿನ ಶತ್ರುಗಳು ನದಿಗೆ ನೀರಾದವರನ್ನೇ ನುಂಗಿ ನೊಣೆಯುವ ಕ್ರೂರತೆಯನ್ನು ಅಭಿವ್ಯಕ್ತಿಸುವುದರಲ್ಲಿ ಮುಕ್ತಿಯನ್ನು ಕಾಣುತ್ತಾರೆ. ಚಳುವಳಿಕಾರರೆಲ್ಲರೂ ಹರಿಯುವ ಜಲದಂತೆ ಒಂದುಗೂಡಿ ಆಂಗ್ಲರೆಂಬ ವಿಷಗಾಳಿಯ ವಿರುದ್ಧವಾಗಿ ಪ್ರತಿಭಟಿಸುತ್ತಾ ಕಾದಂಬರಿಯುದ್ದಕ್ಕೂ ಗಾಂಧೀಜಿಯವರ ತಾತ್ವಿಕತೆಗನುಗುಣವಾಗಿ ವರ್ತಿ ಸುವುದನ್ನು ಗುರುತಿಸಬಹುದಾಗಿದೆ. ಕಾದಂಬರಿಯು ತನ್ನಲ್ಲಿರುವ ಸತ್ಯಗಳನ್ನು ಅನಾವರಣಗೊಳಿಸುತ್ತಲೇ ಸ್ವಾತಂತ್ರ‍್ಯ ಹೋರಾಟದ ಸಂಕಥನವನ್ನು ರಾಗಿಸುತ್ತಾ ಸಾಗುವುದರಲ್ಲಿ ಸಂತೃಪ್ತಿಯನ್ನನುಭವಿಸುತ್ತದೆ. ಒಟ್ಟಂದದಲ್ಲಿ ಈ ಕಾದಂಬರಿಯೊಂದು ದಿವ್ಯ ಭಾರತದ ಯಾತ್ರೆ; ಕ್ರಾಂತಿಯೊಳಗಿನ ಸವ್ಯಸಾಚಿಯರ ಅಕ್ಷಯಪಾತ್ರೆ; ಚಳುವಳಿಯೆಂದು ಹೊರಟವರ ಬಲಿದಾನದ ಜಾತ್ರೆ.
Tuesday, 16 February 2021
ಅಮ್ಮಾ ಹಚ್ಚಿದೊಂದು ಹಣತೆ.....
ಅಮ್ಮಾ ಹಚ್ಚಿದೊಂದು ಹಣತೆ ಅದು ನಮ್ಮೂರಿನ ಜಾತ್ರೆ ಊರ ಹಬ್ಬವಾಗಿ ನೆರೆಯುತ್ತಿದ್ದ ಸಂದರ್ಭ. ಊರ ದೇವರ ಜಾತ್ರಾ ಮಹೋತ್ಸವವೆಂದರೆ ಕೇಳಬೇಕೆ? ಊರಿನಲ್ಲಿ ನಡೆಯುವ ಹನ್ನೆರಡು ಜಾತ್ರೆಗಳಲ್ಲಿಯೇ ಅತಿ ದೊಡ್ಡ ಜಾತ್ರೆಯ ಸಂಭ್ರಮವದು. ಊರಿನಲ್ಲಿಯೇ ೫ ದಿನಗಳ ದೀರ್ಘ ಕಾಲದವರೆಗೆ ನಡೆಯುವ ಮಹಾ ಉತ್ಸವವದು. ಜಾತ್ರೆಯೆಂದರೆ ಅಂತಿಂಥ ಜಾತ್ರೆಯಲ್ಲ. ಜರುಗುವ ಐದೂ ದಿನಗಳ ರಾತ್ರಿಯಿಡೀ ಸಂಭ್ರಮಿಸಬಲ್ಲ ನಾಟಕ ಕಲಾಪ್ರದರ್ಶನದ ರಸದೌತಣ ಮನೆ ಮನಗಳಲ್ಲಿಯೂ ತುಂಬಿ ತುಳುಕುತ್ತಿರುತ್ತದೆ. ಜಾತ್ರೆಯ ಹಿಂದಿನ ದಿನವೇ, ಬಣ್ಣಬಣ್ಣದ ಬಾವುಟಗಳನ್ನು ಗರಿಗಳಂತೆ ಅಳವಡಿಸಿದ ಮುಕುಟವನ್ನು ರಾಜನ ಪಟ್ಟಾಭಿಷೇಕಕ್ಕಾಗಿ ಸಿದ್ಧಗೊಳಿಸಿದಂತೆ, ರಥದ ಶಿರವನ್ನಲಂಕರಿಸುವ ಸಿದ್ಧತೆಗಳನ್ನು ಕೈಗೊಳ್ಳಲಾಗಿರುತ್ತದೆ. ರಥವೋ ಸುಮಾರು ಮೂವತ್ತು ವರ್ಷಗಳ ಅನುಭವವುಳ್ಳ ಮಹಾರಾಜ. ಜಾತ್ರೆಯ ಸಮಯದಲ್ಲಿ ಇದರ ಅಲಂಕಾರವೂ ರಾಜಗಾಂಭೀರ್ಯದಿಂದ ವಿಹರಿಸುವ ಅರಸನೊಬ್ಬನಿಗೆ ಸಲ್ಲುವಂತೆ ಭೂಷಣವಾಗಿರುವುದು ಈ ಜಾತ್ರೆಯ ವಿಶೇಷತೆಗಳಲ್ಲೊಂದು. ಅಂದು ರಥರಾಜನ ಮೈದುಂಬ ಸ್ವರ್ಣದೊಡವೆಗಳಂತೆ ಕಂಗೊಳಿಬಲ್ಲ ಸುವರ್ಣ ಬಣ್ಣದ ಲೇಪನಗಳ ಮಹಾಮೇಳ. ಮಲ್ಲಿಗೆ, ಚೆಂಡು, ಸುಗಂಧಿ, ಗುಲಾಬಿಗಳ ಪುಷ್ಪಮಾಲೆಗಳೆಲ್ಲವೂ ರಥಮನ್ಮಥನ ಮೆರವಣಿಗೆಯೆಂದು ತಾವೇ ಪಾದಯಾತ್ರೆ ಮಾಡುತ್ತಾ ಬಂದು ರಥಕುಮಾರನ ಕೊರಳನ್ನಲಂಕರಿಸಿ ಸಾರ್ಥಕವಾಯಿತು ಇಂದು ತಮ್ಮ ಜನ್ಮವೆಂದು ಜಪಿಸುತ್ತಾ ಒಡಲನ್ನೇ ಮೇಲಿನಿಂದ ಕೆಳಗೆ ಇಳಿಬಿಟ್ಟು ಉಯ್ಯಾಲೆಯಾಡುತ್ತವೆ. ಪರ್ಯಟನೆಗೆಂದು ಹೊರಟ ಈ ಮಹಾರಾಜನ ದರ್ಶನ ಸುಖವೇ ಕಣ್ಣಿಗೊಂದು ವೈಭವದ ಹಬ್ಬ. ಒಡಲನ್ನೇ ನುಂಗುವಂತಹ ಸುವರ್ಣ ಬಣ್ಣದಲ್ಲಿ ಹೊಳೆಯುತ್ತಿರುವ ರೇಷ್ಮೆಯಂತಹ ಅಂಗಿ, ಅದೇ ರಂಗಿನಲ್ಲಿ ಕಂಗೊಳಿಸುತ್ತಿರುವ ಧೋತಿಯನ್ನುಟ್ಟ ಮಧುಮಗನಂತೆ ಬಂಗಾರದ ಬಣ್ಣದಿಂದ ಥಳಥಳಿಸುವ ಹಾಳೆಗಳ ಲೇಪನದಿಂದ ಅಲಂಕೃತವಾಗಿ ಸಾಗುವ ರಥರಾಯನ ಬೀಗುವಿಕೆಯನ್ನೊಮ್ಮೆ ಕಣ್ತುಂಬಿಕೊಂಡೇ ಸವಿಯಬೇಕು. ಹೀಗೆ ಸುರಸುಂದರಾಂಗನಾಗಿ ಮೆರೆಯಲು ರಥನಾಯಕ ತೆಗೆದುಕೊಳ್ಳುವ ಸಮಯ ಬರೋಬ್ಬರಿ ಒಂದು ತಿಂಗಳು. ಮೂವತ್ತು ದಿನಗಳ ಮಾಘಸ್ನಾನಕ್ಕಿಂತ ಮುನ್ನ, ಮೈಮೇಲಿನ ಚಿಕ್ಕಪುಟ್ಟ ಗಾಯಗಳಿಗೆ ಔಷಧಿಯನ್ನು ಸವರುವಂತೆ, ಬಡಿಗರೊಬ್ನರಿಂದ ಕ್ಷೇಮ ಸಮಾಚಾರದ ಕುಶಲೋಪರಿಯೇ ಮೊದಲ ವಾರದ ಪೂರ್ವ ತಯಾರಿ. ರಥಕುಮಾರನ ಮೂರ್ತಿಯೆಂದು ಮೆತ್ತಿಕೊಂಡು ಅವನೊಡಲ ಬಾಹ್ಯ ಹಾಗೂ ಅಂತರಂಗದೊಳಗೆ ಮನೆ ಮಾಡಿದ ಕಣಜಗಳ ಮಣ್ಣಿನ ಗೂಡುಗಳನ್ನೆಲ್ಲಾ ಒಂದೊಂದಾಗಿ ಕೆತ್ತಿ ತೆಗೆದರೆ ಅಲ್ಲಿಗೆ ಪ್ರಾಣ ತುಂಬುವ ಪ್ರಕ್ರಿಯೆಗೊಂದು ಅಧಿಕೃತ ಚಾಲನೆ ದೊರಕಿದಂತಾಗುತ್ತದೆ. ಜಾತ್ರೆ ಮುಗಿದ ಎರಡು ವಾರಗಳ ನಂತರ ಕೆಲಸವಿಲ್ಲದೇ ವಸಂತವಿಡೀ ವಿಶ್ರಾಂತಿಯನ್ನು ಬಯಸಿ ರಥದ ಅರಮನೆಯೊಳಗೆ ಪ್ರವೇಶಿಸುವ ರಥ ಋಷಿಯ ತಪಸ್ಸನ್ನಾಚರಿಸಲು ಯಾರಿಗೆ ತಾನೇ ಸಾಧ್ಯವಾದೀತು ? ಪಾಪ ! ರಾಜಸತ್ತೆಯ ಕಾಲ ಅಂತ್ಯವಾಗಿ ಪ್ರಜಾಪ್ರಭುತ್ವವೇ ಮೆರೆಯುತ್ತಿದೆಯೆಂದು ಅವನಿಗೇನು ಗೊತ್ತು ? ತಪಸ್ಸಿಗೆ ಕುಳಿತ ವಾಲ್ಮೀಕಿ ಮಹರ್ಷಿಯ ಮೈಮೇಲೆ ಮಣ್ಣಿನ ಹುತ್ತವೇ ಸುತ್ತಿಕೊಂಡು ಬಿಡದೇ ಅಪ್ಪಿಕೊಂಡಂತೆ, ರಥಯೋಗಿಯ ಒಡಲಿನೊಳಗೆ ಹಾಗೂ ಹೊರಗೆ ಎಲ್ಲಿ ನೋಡಿದರಲ್ಲಿ ಕಣಜಗಳ ಮಣ್ಣಿನ ಗೂಡುಗಳು ಹಾಗೂ ಚಿಕ್ಕಪುಟ್ಟ ಹಕ್ಕಿಗಳ ಹುಲ್ಲಿನ ಮನೆಗಳೇ ರಾರಾಜಿಸುತ್ತಿರುತ್ತವೆ. ಒಂದು ತಿಂಗಳ ಮುಂಚೆ ತನ್ನರಮನೆಯಿಂದ ವಾದ್ಯಗೋಷ್ಠಿಗಳ ಮೆರವಣಿಗೆಯ ಸಮ್ಮಾನದಿಂದ ಕರೆದೊಯ್ಯಲ್ಪಡುವ ರಥರಾಜನನ್ನು ಶುಚಿಗೊಳಿಸುವ ಮಜ್ಜನದ ಯಾತ್ರೆಗೂ ಅಂದೇ ಅಧಿಕೃತ ಚಾಲನೆ ಸಿಗುತ್ತದೆ. ದಿನಕ್ಕೊಂದರಂತೆ ಮಜ್ಜನದ ಕಾರ್ಯಗಳನ್ನೆಸಗುವ ತಂಡವೇ ರಚನೆಯಾಗಿ ಇದಕ್ಕಾಗಿ ಶ್ರಮಿಸುತ್ತಿರುತ್ತದೆ. ಹೀಗೆ ತಿಂಗಳುಗಟ್ಟಲೇ ಸಜ್ಜುಗೊಂಡು, ವರುಷಕ್ಕೊಮ್ಮೆ ದರ್ಶನ ಕೊಡುವ ಈ ರಥಪುರುಷನ ಸಂದರ್ಶನಕ್ಕಾಗಿ ಭಕ್ತಾದಿಗಳೆಲ್ಲರೂ ಮುಗಿಬಿದ್ದು ನಮಿಸಿ ಮೈಮರೆಯುತ್ತಾರೆ. ಸಾಲದೆಂಬಂತೆ ಆ ರಥಧೀರನ ಅಂತರಂಗದ ಬಾಗಿಲುಗಳನ್ನು ತೆರೆದು ಅಡಿಯಿಂದ ಮುಡಿಯವರೆಗೆ ಹರಿದಾಡಿದಾಗಲೇ ಮನಸಾರೆ ಅಪ್ಪಿಕೊಂಡಂತಹ ಅನುಭವ ನಮ್ಮದಾಗುತ್ತಿತ್ತು. ಆ ಸಂಭ್ರಮದಿಂದಲೇ ನಮ್ಮ ಜಾತ್ರೆಯ ಉಲ್ಲಾಸಮಯ ಘಳಿಗೆಗಳಿಗೆ ಅಧಿಕೃತ ಆರಂಭವೊಂದು ದಕ್ಕಿದಂತಾಗುತ್ತಿತ್ತು. ತನ್ನ ಮೈಮೇಲಿನ ತುಂಟಾಟ ಹೆಚ್ಚಾದಾಗ ಕೆಲವೊಮ್ಮೆ ತನ್ನೊಡಲೊಳಗಿನ ಗೂಡುಗಳಿಂದ ಕಣಜದ ಕೀಟಗಳನ್ನು ಬಿಟ್ಟು ಶಿಕ್ಷೆ ವಿಧಿಸಿರುವುದನ್ನೂ ಅನುಭವಿಸಿದ್ದೇವೆ. ನಮಗೆ ರಥರಾಮನು ಹೊರಬಂದ ದಿನದಿಂದಲೇ ನಿತ್ಯೋತ್ಸವ. ರಥವೆಂಬ ಯುವರಾಜನನ್ನು ಮಹಾರಾಜನನ್ನಾಗಿ ಪಟ್ಟಾಭಿಷೇಕ ಮಾಡುವ ಕಾರ್ಯಕಾರಣಗಳಲ್ಲಿ ಸರ್ವ ಭಕ್ತಗಣದ ಅಳಿಲುಸೇವೆ ನಿರಂತರವಾಗಿರುತ್ತದೆ. ಹಾಗೆ ತಿಂಗಳಿಡೀ ಭಿನ್ನ ಭಿನ್ನ ಬಗೆಯ ಅಭ್ಯಂಜನಗಳಗೈದು ತಲೆಯ ಮೇಲೊಂದು ಶ್ರೀಕೃಷ್ಣನಂತೆ ಬಾವುಟಗಳ ಗರಿಗಳನ್ನು ಧರಿಸಿದ ಕಿರೀಟವನ್ನು ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವ ದೃಶ್ಯವನ್ನೊಮ್ಮೆ ಮನದುಂಬಿ ತಣಿಯಲೇಬೇಕು. ನಮ್ಮೂರಿನಲ್ಲಿಯೇ ಅತ್ಯಂತ ಎತ್ತರದ ರಥರಾಜನೆಂದು ಬಿರುದಾಂಕಿತನೆಂದ ಮೇಲೆ ಎದೆಯುಬ್ಬಿಸಿ ಮುನ್ನಡೆಯುವ ಅದರ ಬೀಗುವಿಕೆಯನ್ನು ಕೇಳಬೇಕೆ ? ಕೈಯ್ಯಲ್ಲಿ ಗಂಟೆಯೊಂದನ್ನು ಹಿಡಿದು ರಥವನ್ನೇರುವ ಪೂಜಾರಿಗಳೂ ಗಡಗಡನೆ ಇವನೊಂದಿಗೆ ಹೆಜ್ಜೆ ಹಾಕಲು ನಡುಗುತ್ತಾರೆಂದರೆ, ರಥರಾಜನ ದಿಟ್ಟ ನಡಿಗೆಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಈ ರಥಮೋಹನನ ಯಾತ್ರೆಯನ್ನು ಮಧುಮಗಳ ಮದುವೆಗೆ ಹೋಲಿಸಿದರೂ ಅಷ್ಟೇ ಔಚಿತ್ಯಪೂರ್ಣವಾಗಿ ಹೊಂದಿಕೆಯಾಗುತ್ತದೆ ಗಮನಿಸಿ - ಜಾತ್ರೆಯೊಂದು ಮದುವೆಯ ಮಹಾದಿಬ್ಬಣವೆಂಬಂತೆ ಪರಿಭಾವಿಸಿಕೊಂಡಾಗ ರಥರಾಣಿಯನ್ನು ಮಧುಮಗಳನ್ನಾಗಿ ಕಲ್ಪಿಸಿಕೊಳ್ಳಿ. ಜಾತ್ರೆಯೆಂಬ ಮದುವೆಯ ಒಂದು ಮಾಸದ ಮುಂಚೆಯೇ ಮಧುಮಗಳನ್ನು ಕರೆದೊಯ್ಯಲು ಬರುವ ಮೆರವಣಿಗೆಯೇ, ರಥರಾಣಿಯನ್ನು ಅವಳ ಅಂತಃಪುರವಾದ ರಥದಮನೆಯಿಂದ ಮದುವೆ ಮನೆಯೆಡೆಗೆ ಸ್ವಾಗತಿಸುವ ಉತ್ಸವವಾಗಿಬಿಡುತ್ತದೆ. ಮದುವೆಯ ಸಮಾರಂಭವೆಂಬುದು ಕೆಲವೇ ಕ್ಷಣಗಳಲ್ಲಿ ಸಂಪನ್ನಗೊಳ್ಳುತ್ತಿರುವ ಈ ಹೊತ್ತಿನಲ್ಲಿ,ನಮ್ಮ ಪೂರ್ವಜರ ಮದುವೆಗಳೆಲ್ಲವೂ ಒಂದೊಂದು ತಿಂಗಳ ಅವಧಿಯ ದೀರ್ಘ ಕಾಲದವರೆಗೂ ಸಂಭವಿಸುತ್ತಿದ್ದವು ಎಂಬುದನ್ನು ನೆನೆದರೆ ರೋಮಾಂಚನ ಹಾಗೂ ವಿಸ್ಮಯಗಳೆರಡೂ ಏಕಕಾಲಕ್ಕೆ ಮನದ ಪಟಲಕ್ಕೆ ಬಂದಪ್ಪಳಿಸುತ್ತವೆ. ಅಂಥದ್ದೇ ಪ್ರಾಚೀನ ಮದುವೆಯ ಘಳಿಗೆಗಳನೊಮ್ಮೆ ಸ್ಮರಿಸಿಕೊಂಡು ಬಿಡಿ. ಈಗ ಸರಿಹೊಂದುತ್ತದೆ. ರಥರಾಣಿಯನ್ನು ಹಾಗೆ ಅಂತಃಪುರದಿಂದ ಕರೆದೊಯ್ದು ಮಧುಮಗಳನ್ನಾಗಿ ಪರಿವರ್ತಿಸುವ ಕಾರ್ಯವೀಗ ಸಾಂಗವಾಗಿಯೇ ನೆರವೇರುತ್ತದೆ ಹಂತ ಹಂತವಾಗಿ. ಮದುವೆಯ ದಿನ ಸಮೀಪಿಸಿದ ಹಾಗೆ ಅದಕ್ಕೆ ತಕ್ಕಂತೆ ರಥಷೋಡಶಿಯ ಅಲಂಕಾರವೂ ಉತ್ಕರ್ಷಿಸಲ್ಪಡುತ್ತದೆ. ಮದುವೆಯ ದಿನ ಅಂದರೆ ಜಾತ್ರೆಯ ದಿನ ರೇಷ್ಮೆಯ ಪೀತಾಂಬರವನ್ನುಟ್ಟ ಮಧುಮಗಳ ಶೃಂಗಾರ, ಸಡಗರ ಒಯ್ಯಾರಗಳಂತೂ ಹೇಳತೀರದು. ಬಗೆ ಬಗೆಯ ಬಣ್ಣದ ಮಣಿಗಳಿಂದ ಹೆಣೆಯಲ್ಪಟ್ಟ ರತ್ನದ ಹಾರಗಳಂತೆ ಕಂಗೊಳಿಸುವ ವೈವಿಧ್ಯಮಯ ಪುಷ್ಪಮಾಲೆಗಳಿಂದಲಕೃತವಾದ ರನ್ನದ ಕೊರಳು ಒಂದೆಡೆಯಾದರೆ ರಥರಾಗಿಣಿಯ ಲಾವಣ್ಯಕ್ಕೆ ಕಲಶದಂತಿರುವ ಬಣ್ಣದ ಹಾಳೆಗಳ ಸೀರೆಯ ಮೆರಗು ಮಗದೊಂದೆಡೆಗೆ. ಹೊರಡುವಾಗ ಸಂಗೀತದ ರಸಾನಂದ ನೀಡಲೆಂದು ರಥರಮಣಿಯ ಉರುಳುವ ಚಕ್ರಪಾದಗಳ ಕೊರಳಿಗೆ ಕಟ್ಟಿದ ಕಾಲ್ಗೆಜ್ಜೆಗಳ ಮೆರುಗು ಮತ್ತೊಂದೆಡೆಗೆ. ವೈವಿಧ್ಯಮಯ ಬಣ್ಣದ ಬಾವುಟಗಳ ಗರಿಗಳಿಂದ ರೂಪುಗೊಂಡ ಬಿದಿರಿನ ಕಿರೀಟಕ್ಕೇ ಮುಕುಟವೆಂಬಂತೆ ಹೊನ್ನಿನ ರಂಗಿನಿಂದ ಮಿಂಚುವ ಕಲಶದ ಶಿಖರ ಮಗದೊಂಡೆದೆಡೆಗೆ. ಹೀಗೆ ಎತ್ತ ನೋಡಿದರತ್ತ ಮಧುವೆಯಾಗುತ್ತಿರುವ ಮಧುಮಗಳಿಗೂ ಜಾತ್ರೆಯೊಳಗೆ ಯಾತ್ರೆ ಹೊರಡುತ್ತಿರುವ ರಥವಧುವಿಗೂ ಅದೆಂತಹ ಸಾದೃಶ್ಯಗಳಿವೆಯಲ್ಲವೇ ? ಜಾತ್ರೆಯ ದಿನದ ಮದುವೆಯ ಮೆರವಣಿಗೆ ಮುಗಿದ ನಂತರ ಮತ್ತೆ ಮಧುವಣಗಿತ್ತಿಯನ್ನು ತವರುಮನೆಗೆ ಕಳುಹಿಸುವಂತೆ ರಥಕೋಮಲೆಯನ್ನೂ ಮತ್ತೆ ಆಕೆಯ ಎಂದಿನ ಅಂತಃಪುರದತ್ತ ಕರೆತರಲಾಗುತ್ತದೆ ತಾತ್ಕಾಲಿಕವಾಗಿ. ಇದು ನಮ್ಮೂರಿನ ಮಹಾಮದುವೆಯ ದಿಬ್ಬಣವೂ ಹೌದು,ಮರೆಯಲಾಗದ ಜಾತ್ರೆಯ ಮಹೋತ್ಸವವೂ ಹೌದು. ನಮ್ಮೂರಿನ ಹೆಮ್ಮೆಯ ಅರಸನನ್ನು ರಥದ ಸ್ವರೂಪದಲ್ಲಿ ಪ್ರತಿವರ್ಷವೂ ಬಿಡದೇ ಕಣ್ತುಂಬಿಕೊಳ್ಳುವ ಸೌಭಾಗ್ಯ ನನ್ನದು. ಇಂದೇಕೋ ಕೋವಿಡ್ ಮಹಾಮಾರಿ ಈ ರಥರಾಜನ ಮೆರವಣಿಗೆಯನ್ನು ಸಹಿಸಲಾಗುತ್ತಿಲ್ಲವೆಂದೆನಿಸಿದೆ. ವೈರಾಣುವಿನ ಅಸೂಯೆಯೇ ಮೇಲುಗೈ ಪಡೆಯುತ್ತಿರುವಂತೆ ಭಾಸವಾಗುತ್ತಿದ್ದರೂ, ವೈರಾಣುವಿನ ಎದೆಯ ಮೇಲೆ ಲಸಿಕೆಯ ಮರಣ ಶಾಸನ ಕೊರೆದು, ಮತ್ತೆ ಪುಟಿದೆದ್ದು ಚರಿಸುವ ಜಪವನ್ನಾಚರಿಸಲು ರಥವೂ ಸನ್ನದ್ಧವಾಗುತ್ತಿದೆ. ಬಸವಣ್ಣನವರ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹಾಡಿದಂತೆ ಜಂಗಮವೇ ಆಗಿ ಜನರ ಹೃನ್ಮನಗಳ ಒಳಪೊಕ್ಕು ಸದಾ ಚೈತನ್ಯದ ಸಂಚಲನವನ್ನುಂಟು ಮಾಡುತ್ತಿರುವ ಈ ರಥರಮಣನ ಧೀಃಶಕ್ತಿಗೆಲ್ಲಿಯ ಅಳಿವು ? ಹಸಿವಾದೊಡೆ ಭಿಕ್ಷಾನ್ನಗಳುಂಟುತೃಷೆಯಾದೊಡೆ ಕೆರೆಕಟ್ಟೆ ಬಾವಿಗಳುಂಟುಶಯನಕ್ಕೆ ಪಾಳು ದೇಗುಲಗಳುಂಟುಆತ್ಮಸಂಗಾತಕ್ಕೆ ನೀ ಎನಗುಂಟು ಚೆನ್ನಮಲ್ಲಿಕಾರ್ಜುನ ಎಂದು ಹಾಡಿದ ಅಕ್ಕಮಹಾದೇವಿಯಂತೆ ಉತ್ಸವದ ದಿನ ಯಾತ್ರೆ ಹೊರಡುವ ರಥದೇವನೆದುರಿಗೆ ನಿಂತು ಪ್ರಾರ್ಥಿಸುವ ಭಕ್ತರ ಸಂಖ್ಯೆಯಂತೂ ಎಣಿಕೆಗೆ ನಿಲುಕದು. ಹಿಂದೆ ಮಣ್ಣಿನ ರಥಬೀದಿಯಿರುವಾಗ ರಥರಾಜನಂತೂ ದೃಢವಾದ ಹಾಗೂ ಅಷ್ಟೇ ತಾಳ್ಮೆಯ ಚಿಂತನಶೀಲತೆಯ ಹೆಜ್ಜೆಗಳನ್ನು ಹಾಕಿ ಗಾಂಭೀರ್ಯವನ್ನು ಮೆರೆಯುತ್ತಿದ್ದ. ಆದರೀಗ ಮಣ್ಣ ಮೇಲೊಂದು ಅಡಿ ಕಾಂಕ್ರೀಟನ್ನು ಸುರಿದು ಮಾಡಿದ ಜಾರುಬಂಡೆಯಂತಿರುವ ರಥಬೀದಿಯ ಮೇಲೆ ಈ ಬಾರಿ ಅದೆಂತು ಹೆಜ್ಜೆ ಹಾಕುವನೋ ಎಂಬ ಕುತೂಹಲವೂ ನನ್ನಲ್ಲಿ ಮನೆ ಮಾಡಿದೆ. ಕಳೆದ ಬಾರಿ ಇದೇ ಕಾಂಕ್ರೀಟ್ ಬೀದಿಯಲ್ಲಿ ಹೇಳದೇ ಓಡಿಹೋಗುತ್ತಿದ್ದ ರಥರಾಜನನ್ನು ತಡೆದು ನಿಲ್ಲಿಸುವುದೇ ಹರಸಾಹಸವಾಗಿತ್ತು. ಆಧುನಿಕತೆಯ ಹಾದಿಯಿಂದಾಗಿ ಗಾಂಭೀರ್ಯದ ಹೆಜ್ಜೆಗಳೆಲ್ಲವೂ ಮಾಯವಾಗಿ ತಪ್ಪಿಸಿಕೊಂಡು ಓಡುವ ಕಳ್ಳನಂತಾಗಿತ್ತು ರಥದರಸನ ಸ್ಥಿತಿ. ಕೆಂಪುಹಾಸಿನ ( ರೆಡ್ ಕಾರ್ಪೆಟ್ ) ಸ್ವಾಗತ ಕೋರುತ್ತಿದ್ದಕೆಮ್ಮಣ್ಣಿನ ( ಜಾತ್ರೆಗೆಂದು ಹಾಸುವ ಕೆಂಪು ಗೊರಸು ಮಣ್ಣು) ಹೊದಿಕೆಯ ಕಳೆಯೇ ಅನನ್ಯವಾಗಿರುತ್ತಿತ್ತು. ರಥೋತ್ಸವಕ್ಕಾಗಿ ಬೀದಿಗಾಗಿ ಹೊದಿಸಿದ ಕೆಮ್ಮಣ್ಣು ರಥಬೀದಿಯ ಸಹಜ ಸೌಂದರ್ಯವನ್ನು ಇಮ್ಮಡಿಸಿ, ತನ್ನ ಮಡಿಲಿನೊಳಗೆ ಕುಳಿತು, ಹೊರಳಿ ಆಡುವಂತೆ ಓಣಿಯ ಮಕ್ಕಳನ್ನೆಲ್ಲಾ ಕರೆದು ಆಟವಾಡಿಸುತ್ತಿತ್ತು ಮಹೋತ್ಸವದ ನೆಪದಲ್ಲಿ. ಇದೂ ಕೂಡ ಜಾತ್ರೆಯ ಭಾಗವೇ. ಮಹೋತ್ಸವ ತರುವ ಆನಂದದ ಮಗದೊಂದು ವಿಲಾಸವಿದು. ಆದರೆ ಇಂದುಕಾಲಿಟ್ಟರೆ ಪಾದಗಳಿಗೆ ಬರೆಯಿಡುವ ಕಾಂಕ್ರಿಟ್ ರಸ್ತೆಯ ಮೇಲೆ ಕೂಸುಗಳು ಹೊರಳಾಡಿ ಆಡುವುದಿರಲಿ ಹೆಜ್ಜೆ ಹಾಕುವುದೇ ದುಸ್ತರವಾಗಿಬಿಟ್ಟಿದೆ. ಕಾಲಾಯ ತಸ್ಮೈನಮಃ.ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆಒಸಗೆ ವೈಭವಂಗಳು ತಾನೆ ಕಾಣಿರೊ.ಎಂಬ ಷಣ್ಮುಖಸ್ವಾಮಿಯವರ ವಚನದಂತೆ ನಮ್ಮ ಅಂತರಂಗದೊಳಗೆ ಜರುಗುವ ನಿತ್ಯ ಜಾತ್ರೆ ಉತ್ಸವಗಳನ್ನು ಮರೆತು, ಬಹಿರಂಗದೊಳಗಿನ ಸಂಭ್ರಮವನ್ನು ಹಬ್ಬಹರಿದಿನಗಳಲ್ಲಿ ಶೋಧಿಸಲು ತುಡಿಯುವ ನಾವು ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಪಯಣವನ್ನೇ ನಿತ್ಯೋತ್ಸವವೆಂದು ಭ್ರಮೆಯಲ್ಲಿ ಸುಖಿಸುತ್ತಿದ್ದೇವೆ. ನನ್ನೊಳಗೆ ಕೆಲವೊಮ್ಮೆ ದಕ್ಕದ ಪರಮಾನಂದದ ಜಾತ್ರೆಯನ್ನು ನಾನೀಗ ಮನೆಯ ಮುಂದಿನ ರಥೋತ್ಸವದಲ್ಲಿ ಹುಡುಕಿ ಆನಂದಿಸುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ. ಒಂದು ಬಾರಿ ಆಕಸ್ಮಾತ್ ಆಗಿ ಭೇಟಿಯಾದ ಜಾತ್ರಾ ಪ್ರಹಸನವೊಂದನ್ನು ಹೇಳುತ್ತೇನೆ ಕೇಳಿಬಿಡಿ - ಐದು ದಿನಗಳ ಮಹೋತ್ಸವವಾದುದರಿಂದ, ನಮ್ಮೂರಿನ ಓಣಿ, ಓಣಿಗೊಂದು ನಿಯಮಿತವಾಗಿರುವ ಮ್ಯಾಳ ( ನಾಟ್ಯ ಸಂಘ)ಗಳ ನಡುವೆ ನಾಟಕ ಪ್ರದರ್ಶನದ ಆರೋಗ್ಯಕರ ಸ್ಪರ್ಧೆಯೊಂದು ತಾನೇ ತಾನಾಗಿ ಉದ್ಭವವಾಗುತ್ತಿತ್ತು. ಕೆಲವೊಮ್ಮೆ ಅನಾರೋಗ್ಯಕರವಾಗಿಯೂ ಪರಿಣಮಿಸಿದ್ದನ್ನು ನಾನು ಕಂಡಿದ್ದೇನೆ. ದಿನಕ್ಕೊಂದು ಮ್ಯಾಳದ ನಾಟಕವೆಂಬಂತೆ ಒಟ್ಟು ಐದು ದಿನಗಳ ರಂಗೋತ್ಸವವೂ ಜಾತ್ರೆಯೊಡನೆ ತಾನಾಗಿಯೇ ಮೈದಳೆಯುವುದು ವಾಡಿಕೆ. ಐದು ಮ್ಯಾಳ (ನಾಟ್ಯ ಸಂಘ) ಗಳಲ್ಲಿ ಯಾವುದೋ ಒಂದು ಮ್ಯಾಳದ ನಾಟಕದ ಬಗ್ಗೆ ಯಾರಾದರೂ " ಎಂಥಾ ಅದ್ಭುತ ನಾಟಕಾ ಮಾಡಿದ್ರು ಆ ಮ್ಯಾಳದವ್ರು " ಎಂದು ಹೊಗಳಿಬಿಟ್ಟರೆ ಸಾಕು ಆಭಾಸವಾದರೂ ಚಿಂತೆಯಿಲ್ಲ, ಮಾರನೇ ದಿನದ ಬೇರೊಂದು ಮ್ಯಾಳದ ನಾಟಕದ ಮೃದು ಸ್ವಭಾವದ ಅಳುಮುಂಜಿ ಪಾತ್ರಗಳಲ್ಲಿಯೂ ರೊಚ್ಚು ಕೆಚ್ಚು ವೀರಾವೇಶ ತುಂಬಿ ರಂಗಸಜ್ಜಿಕೆ ನಡುಗಿಬಿಡುತ್ತಿತ್ತು. ರಂಗೋತ್ಸವದ ಮೂರನೇ ದಿನ ಒಂದು ಮ್ಯಾಳದ ಯಾವುದೋ ನಾಟಕ ಪ್ರದರ್ಶನವೊಂದು ನಿಗದಿಯಾಗಿತ್ತು. ಯಥಾಪ್ರಕಾರ ಜನರೆಲ್ಲಾ ಜಾತ್ರೆಯ ನಿಮಿತ್ಯ ಮಧ್ಯಾಹ್ನ ಮಾಡಿದ ಹೋಳಿಗೆಯನ್ನೊ ಅಥವಾ ಗೋಧಿಹುಗ್ಗಿಯನ್ನೊ, ಮಗದೊಮ್ಮೆ ರಾತ್ರಿಯ ಕವಳವಾಗಿ ಬಿಗಿದು ಚಳಿಯಿಂದ ತಪ್ಪಿಸಿಕೊಳ್ಳಲೊಂದು ಶಾಲು ಹೊದ್ದು , ರಂಗಸಜ್ಜಿಕೆಯ ಮುಂದೆ ಆರು ಚದರ ಅಡಿ ಜಾಗ ಹಿಡಿದು ಕುಳಿತರೆ ಮುಗಿಯಿತು. ನಾಟಕಕ್ಕೆ ಮಂಗಳ ಹಾಡುವವರೆಗೂ ಇಲ್ಲವೇ ಪಾತ್ರಧಾರಿಗಳೇ ಮಾತು ತಪ್ಪಿ ಎಬ್ಬಿಸುವವರೆಗೂ ಆ ಸ್ಥಳ ಅವರವರ ಹೆಸರಿಗೆ ನೋಂದಣಿಯಾದಂತೆಯೇ. ನಾಂದಿ ಹಾಡಲು ಬಣ್ಣದೊಳಗಿನ ನಟರು ಬಂದು ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾಗಿ ಉತ್ಸಾಹ ತುಂಬಿಕೊಂಡು, ಎದೆಯ ನಡುಕವೂ ಕೂಡ ಇವರ ಧ್ವನಿಗೆ ಹೆದರಿ ಹೊರಹೋಗುವಂತೆ ಏರುದನಿಯಿಂದಲೇ ಪ್ರಸ್ತುತಪಡಿಸಿದರು. ಅದುವರೆಗೂ ನಾಟಕವಿನ್ನೂ ಆರಂಭವಾಗಿಲ್ಲವೆಂದು ಮನೆಯಲ್ಲಿಯೇ ಚಡಪಡಿಸುತ್ತಿದ್ದ ಉಳಿದ ಸಾಮಾಜಿಕರೆಲ್ಲರೂ ಶಸ್ತ್ರಸಜ್ಜಿತರಾಗಿ ಯುದ್ದೋಪಾದಿಯಲ್ಲಿ ಧಾವಿಸಿ ನೆರೆದು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ರಂಗಪ್ರವೇಶ ಮಾಡಿ, ಗಜಮುಖನೇ ಗಣಪತಿಯೇ ನಿನಗೆ ವಂದನೆ ಎಂದು ಗಣಪತಿಯನ್ನು ಸ್ತುತಿಸಿದ ನಟಿಯು ಆರತಿ ಹಿಡಿದು ಕುರ್ಚಿಯಲ್ಲಿ ಕುಳಿತ ಗಜಮುಖನಿಗೆ ಹಾಗೂ ದೈವಸಮಾನರಾದ ಸಾಮಾಜಿಕರಿಗೆ ಬೆಳಗಿ ಒಂದೆರಡು ಮಾತು ಹೇಳಿ ನಾಟಕದ ಕಥೆಗೆ ಶಾಸ್ತ್ರೋಕ್ತ ಆರಂಭವನ್ನೊದಗಿಸಿದಳು. ನಂತರ ನಿಜವಾದ ನಾಟಕವೀಗ ಆರಂಭವಾಯಿತು. ಆದಿಪುರಾಣದಲ್ಲಿಪಂಪ ಬಣ್ಣಿಸುವ "ಕರ್ಬಿನ ಬಿಲ್ಲಿಂ ಮಸೆದ ಮದನನಲರ್ಗಣೆ ಬರ್ದುಕಿತ್ತೆನಿಸುತ್ತೊಳಪೊಕ್ಕಳ್ ಭೋಂಕೆನೆ ನಿಖಿಳಜನಾಂತರಂಗಮಂ ರಂಗಮುಂ" ಎನ್ನುವಂತೆ ಇಲ್ಲಿಯೂ ಇಂದ್ರಲೋಕದ ನೀಲಾಂಜನೆಯಂತಹ ನರ್ತಕಿಯೊಬ್ಬಳು ರಂಗವನ್ನೂ ಜನರ ಅಂತರಂಗವನ್ನೂ ಮದನನ ಪುಷ್ಲಬಾಣದಂತೆ ಏಕಕಾಲಕ್ಕೇ ಹೊಕ್ಕುಬಿಡುವಂತೆ ರಂಗಪ್ರವೇಶವನ್ನು ಪಡೆದಳು. ಶೃಂಗಾರ ರಸದೊಳಗೆ ಅದ್ದಿ ತೆಗೆದಂತಿದ್ದ ನಟಿಯತ್ತಲೇ ಎಲ್ಲರ ಚಿತ್ತ. ಬಿಟ್ಟಗಣ್ಣು ಬಿಟ್ಟಂತೆ ಬಿಟ್ಟ ಬಾಯಿ ಬಿಟ್ಟಂತೆ ಕಣ್ಣೆವೆಯಿಕ್ಕದೇ ದಿಟ್ಟಿಸುತ್ತಿದ್ದ ನೋಟಗಳನ್ನು, ಕಲಾಕೋವಿದೆಯ ಮುಕ್ತಶೈಲಿಯ ನೃತ್ಯ ಲೀಲಾಜಾಲವಾಗಿ ಅಪಹರಿಸಿತ್ತು. ಹೋ ಎಂದು ಶಿಳ್ಳೆ ಹಾಕುತ್ತಿದ್ದ ಜನರ ಗಮನವೆಲ್ಲಾ ಅವಳ ಮೇಲೆಯೇ ಕೆಂದ್ರೀಕೃತವಾಗಿತ್ತು. ಬಗೆ ಬಗೆಯ ಬೆಡಗಿನ ಭಂಗಿಗಳ ಮೂಲಕ ನಾಟ್ಯ ರಂಗೇರುತ್ತಿತ್ತು. ಅಷ್ಟರಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮಧ್ಯೆ ಒಮ್ಮಿಂದೊಮ್ಮೆಲೇ ಗಲಾಟೆ ಶುರುವಾಯಿತು. ಗಲಾಟೆಯು ತರಂಗವಾಗಿ ಅದರ ಕೇಂದ್ರದಿಂದ ಸುತ್ತಲೂ ವಿಸ್ತರಿಸುತ್ತಾ ಬಂದು ವೇದಿಕೆಗೂ ತಟ್ಟಿತು. ಕಡೆಗೆ ನಾಟ್ಯ ನಿಲ್ಲುವವರೆಗೂ ಮುಂದುವರೆಯಿತು. ಜನರೆಲ್ಲಾ ಚೆದುರಿ ಹಾರಿದರು. ಕೆಲವರು ಅಪ್ಪಳಿಸಿ ಓಡಲಾರಂಭಿಸಿದರು. ಇನ್ನೂ ಕೆಲರು ಜಿಗಿದು ಮನೆಯ ಜಗುಲಿಗಳ ಮೇಲೆ ಹಾರಿ ಸರಿದು ನಿಂತರು. ಏನಾಯಿತೆಂದು ತಿಳಿಯುವಷ್ಟರಲ್ಲಿ ನಾಟಕ ನಿಂತು ಹೋಯಿತು. ಜನರನ್ಜು ಭೋಗಾನಂದದ ಔನ್ನತ್ಯಕ್ಕೇರಿಸುವ ಸಂದರ್ಭದಲ್ಲಿಯೇ ಇದೆಂತಹ ಅನಾಹುತವಾಯಿತು, ಛೇ ರಸಭಂಗವಾಯಿತೆಂದುಕೊಂಡು ಜನರು ಜೋಲುಮೋರೆ ಹಾಕಿಕೊಂಡು ಲೊಚಗುಟ್ಟಿದರು. ಅಲ್ಲಿಯೇ ಇದ್ದ ಪರಿಚಯದವರೊಬ್ಬರನ್ನು ಕೇಳಿದೆ - " ಯಾಕೀ ಗಲಾಟೆ ಏನಾಯ್ತಂತೆ?"" ನಾಗರಹಾವು ಬಂತಂತೆ..." ಕೇಳಿದೊಡನೆಯೇ ನನ್ನೆದೆಯೂ ನಡುಗಿಹೋಯಿತು. ಇದ್ದಕ್ಕಿದ್ದಂತೆ ಚಳಿ ಹೆಚ್ಚಾಯಿತು. ಕಾಲಡಿಯೇ ಹಾದು ಹೋದಂತೆನಿಸಿ ಭಯಗೊಂಡು ದೂರ ಸರಿದು ನಿಂತೆ. ಹೆಣ್ಣುಮಕ್ಕಳು, ಕೂಸುಗಳೆಲ್ಲಾ ಹೋ ಎಂದು ಚೀರಲಾರಂಭಿಸಿದವು. ಅಬಾಲವೃದ್ಧರಾದಿಯಾಗಿ ಪ್ರೇಕ್ಷಕರೆಲ್ಲರೂ ದಿಕ್ಕೆಟ್ಟು ಓಡಲಾರಂಭಿಸಿದರು. ಅತ್ತಿಯ ಹಣ್ಣಿನೊಳಗಿನ ಹುಳುವೂ ಕೂಡ ನುಸುಳಲು ಜಾಗವಿಲ್ಲದಂತೆ ತುಂಬಿ ಹೋಗಿದ್ದ ರಂಗಸಭಾಂಗಣದಲ್ಲಿ ನಾಲ್ಕಡಿಯುದ್ದದ ಕಾಳಕೂಟ ಹೇಗೆ ಸುಳಿಯಿತೋ ಗೊತ್ತೇ ಆಗಲಿಲ್ಲ!! ನೃತ್ಯದ ರಸದೌತಣದಲ್ಲಿ ತಲ್ಲೀನವಾಗಿ ತುಂಬಿ ತುಳುಕುತ್ತಿದ್ದ ರಸಿಕರ ಸಭಾ ಮಂಟಪವೀಗ ಖಾಲಿ ಖಾಲಿ. ಸಂಘಟಕರಿಗೂ ದಿಗಿಲುಬಡಿಯಿತು. ಇದೇನು ಅಪಶಕುನವಾಯಿತು ಎಂದು ಕಳವಳಗೊಂಡರು. ಆಮೇಲೆ ಗೊತ್ತಾಯಿತು, ಯಾವ ನಾಗರಹಾವೂ ಇಲ್ಲ. ಈ ಮ್ಯಾಳದ ನಾಟಕದ ಸೌಂದರ್ಯವನ್ನು ಸೈರಿಸದ ಕೆಲವು ಕಿಡಿಗೇಡಿಗಳು ಸುಳ್ಳೇ ಸುದ್ದಿಯನ್ನು ಹಬ್ಬಿಸಿ ನಾಟಕಕ್ಕೆ ಅಡಚಣೆ ಮಾಡಿದರು ಎಂಬುದು. ಅಂದಿನ ನಾಟಕವನ್ನು ಪ್ರಯೋಗಿಸುತ್ತಿದ್ದ ಆ ಸಂಘದ ಗುಪ್ತಚರ ಇಲಾಖೆ ಈ ಆಫ್ ದಿ ರೆಕಾರ್ಡ ವಿಚಾರವನ್ನು ಬಯಲೆಗೆಳೆಯಿತು. ಸತ್ಯ ಗೊತ್ತಾಗಿ ಜನ ನಿಟ್ಟುಸಿರು ಬಿಟ್ಟರು. ರಂಗ ಪ್ರೇಕ್ಷಕರಿಗೀಗ ಮತ್ತೊಮ್ಮೆ ಸುವರ್ಣ ಭಾಗ್ಯ. ಪಂಪಭಾರತದಲ್ಲಿ ನೀಲಾಂಜನೆಯು ಒಂದು ಬಾರಿ ಮಾತ್ರ ರಂಗವನ್ನು ಹೊಕ್ಕಿದ್ದರೆ, ಈ ನಾಟಕದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಜವನಿಕೆಯ ಮರೆಯಿಂದ ಮಗದೊಮ್ಮೆ ರಂಗಪ್ರವೇಶವನ್ನು ಮಾಡಬೇಕಾಯಿತು ನಮ್ಮೂರಿನ ಈ ಆಧುನಿಕ ನೀಲಾಂಜನೆ. ನೀಲಾಂಜನೆಯ ನೃತ್ಯವನ್ಜು ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದ ಪ್ರೇಕ್ಷಕ ಗಣ ಹಾವಿನ ಸುದ್ದಿ ಸುಳ್ಳೆಂದು ತಿಳಿದು ತಕ್ಷಣವೇ ರಂಗಮಂಟಪದೆದುರು ಕಾತರಿಸಿ ನೆರೆದರು. ಆದರೂ ಹೀಗೆ ಎಲ್ಲವೂ ಸರಿಯಾಗಿ ನಾಟ್ಯ ಆರಂಭವಾಗಬೇಕಾದರೆ ಸುಮಾರು ಎರಡು ಗಂಟೆ ಕಳೆಯಿತು. ಸಮಯದ ಕೊರತೆಯಾಯಿತೆಂದು ಮೂರ್ನಾಲ್ಕು ದೃಶ್ಯಗಳನ್ನು ಕಡಿತಗೊಳಿಸಿಕೊಂಡು ಅಂತೂ ಯಶಸ್ವಿಯಾದ ಪ್ರದರ್ಶನ ಕಂಡಿತು ಆ ನಾಟಕ.
ಇದೇ ಜಾತ್ರೆಯೊಂದಿಗೆ ಅವಿನಾಭಾವ ನಂಟನ್ನು ಹೊಂದಿರುವ ಬಾಲ್ಯದ ಪ್ರಸಂಗವೊಂದನ್ನು ಹೇಳುತ್ತೇನೆ ಕೇಳಿ - " ನಾನಗಾಗ ಐದೋ ಅಥವಾ ಆರರ ಹರೆಯ. ಈಗಿನಂತೆ ಕಿವಿಗಡಚಿಕ್ಕುವ ಧ್ವನಿವರ್ಧಕ ಸೇರಿ ರಂಗಪರಿಕರಗಳ ಕೊರತೆಯಿದ್ದರೂ, ತಕ್ಕಮಟ್ಟಿನ ರಂಗಪ್ರಯೋಗಗಳು ಜನಮನವನ್ನು ಸೆಳೆದಿದ್ದ ಕಾಲಘಟ್ಟವದು. ಅಂದರೆ ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಪ್ರಸಂಗವಿದು. ಜಾತ್ರೆಯ ಮೂರನೇಯ ದಿನ . ಐದು ಮ್ಯಾಳ ( ನಾಟ್ಯ ಸಂಘ)ಗಳಲ್ಲಿ ಮೂರನೇಯ ಸಂಘದ ನಾಟಕವು ಅಯೋಜನೆಯಾಗಿತ್ತು. ನಮ್ಮ ಮನೆಯವರೆಲ್ಲರೂ, ನಾನಂದು ನಾಟಕದ ಸಮಯಕ್ಕೆ ನಿದ್ದೆ ಮಾಡುತ್ತಿದ್ದುದರಿಂದ ನನ್ನನ್ನು ಬಿಟ್ಟು ನಾಟಕ ನೋಡಲು ಹೋಗಿದ್ದರು. ಒಂದೇ ಒಂದೇ ದೀಪವಿಲ್ಲದ, ಕನಿಷ್ಠ ಕಂದೀಲಿನ ಬೆಳಕೂ ಇಲ್ಲದ ಖಗ್ರಾಸ ಕತ್ತಲೆಯ ನಡುಮನೆಯಲ್ಲಿ ನಾನೊಬ್ಬ ತೊಟ್ಟಿಲಲ್ಲಿ ಮಲಗಿಕೊಂಡಿದ್ದೆ. ನಿದ್ರಾದೇವಿಯ ಲೋಕವೇ ಹಾಗೆ. ಆ ಮಾಯೆ ಸುತ್ತಿಕೊಂಡ ಮೇಲೆ ಇನ್ನಾವ ಕತ್ತಲು ಬೆಳಕಿನ ಪ್ರಶ್ನೆ ಎದುರಾಗಬಲ್ಲದು ಹೇಳಿ ? ಸಾಧ್ಯವೇ ಇರಲಿಲ್ಲ. ಯಾವುದರ ಪರಿವೆಯಿಲ್ಲದೇ ತಾಯಿ ಮಲಗಿಸಿದಲ್ಲೇ ತಣ್ಣಗೆ ಪರವಶನಾಗಿದ್ದೆ. ಮಲಗಿಕೊಂಡಿದ್ದಾನೆಂದು ತಿಳಿದು ಹೊರಗೆ ಚಿಲುಕ ಹಾಕಿಕೊಂಡು, ನಾಟಕದ ರುಚಿ ಸವಿಯುಣ್ಣಲು ಹೋದವರು ನಾಟಕ ಮುಗಿಯದೇ ಹೇಗೆ ಮರಳಬಲ್ಲರು ?. ಅದು ಮಧ್ಯರಾತ್ರಿಯ ಸಮಯ. ಕಾಲದ ಅರಿವಿಲ್ಲದಿದ್ದ ನನಗೆ ಒಮ್ಮಿಂದೊಮ್ಮೆಲೆ ಎಚ್ಚರವಾಯಿತು. ಕಣ್ಣು ತೆಗೆದು ನೋಡಿದೆ ಏನೂ ಕಾಣಿಸುತ್ತಿಲ್ಲ. ನಾನು ತೊಟ್ಟಿಲಲ್ಲಿದ್ದೇನೆ ಎಂಬುದಷ್ಟರ ಅರಿವನ್ನು ಹೊರತುಪಡಿಸಿ ಇನ್ನಾವುದೂ ಗಮನಕ್ಕೆ ಬರುತ್ತಿಲ್ಲ. ಕಣ್ಣುಜ್ಜಿಕೊಂಡು ನೋಡಿದೆ ಆಗಲೂ ಏನೂ ಕಾಣಲಿಲ್ಲ. ದಟ್ಟವಾದ ಕತ್ತಲೆಯ ಕರಾಳ ಕಪ್ಪು ಕಣ್ಷಿಗೆ ರಾಚುತ್ತಿತ್ತು. ಕಣ್ಣಿದ್ದರೂ ಕುರುಡನಾದೆ ಎಂದೆನಿಸಿತು. ಮಗದೊಮ್ಮೆ ಕಣ್ಣುಜ್ಜಿಕೊಂಡು ಏನಾದರೂ ಕಾಣುವುದೇ ಎಂದು ನೋಡಲೆತ್ನಿಸಿದೆ. ಬದಲಾಗಲಿಲ್ಲ ದೃಶ್ಯ. ಗರಬಡಿದವರಂತೆ ದಿಗ್ಗನೆ ಎದ್ದು ಕುಳಿತೆ. ಕತ್ತಲೆಯೊಂದನ್ನು ಹೊರತುಪಡಿಸಿ ಇನ್ನಾರ ಸುಳಿವೂ ಅಲ್ಲಿರಲಿಲ್ಲ. ಒಂದು ಕ್ಷಣ ಬೆಚ್ಚಿಬಿದ್ದೆ. ಬೆವರೊಡೆಯಿತು ಒಡಲ ತುಂಬ. ಎತ್ತ ನೋಡಿದರತ್ತ ಕತ್ತಲೆಯೇ. ಕತ್ತಲೆಯೆಂದರೆ ಮಾರುದೂರವಿರುತ್ತಿದ್ದವನೇ ಈಗ ಅದರ ಮಡಿಲಲ್ಲಿ ಎಂದರೆ ಹೇಗಾಗಿರಬೇಡ ನನ್ನ ಪರಿಸ್ಥಿತಿ ? ಭಯಾನಕತೆಯನ್ನು ಕಲ್ಪಿಸಿಕೊಳ್ಳಲೂ ಈಗ ಸಮಯವಿಲ್ಲ. ನಡುಗಿಹೋದೆ. ಏನೊಂದು ತೋಚದೇ ಅಳಲು ಶುರುವಿಟ್ಟುಕೊಂಡೆ. ಯಾರೂ ಇಲ್ಲದ ಮನೆಯಲ್ಲಿ ಅತ್ತರೂ ಅಷ್ಟೇ, ನಕ್ಕರೂ ಅಷ್ಟೇ. ಚೀರಿದೆ. ಬಿಕ್ಕಿ ಬಿಕ್ಕಿದೆ; ಒದ್ದಾಡಿದೆ. ಯಾರೊಬ್ಬರೂ ಸುಳಿಯದಾದಾಗ ಭಯದಿಂದ ಮತ್ತಷ್ಟು ತಲ್ಲಣಿಸಿದೆ. ಸೋತು ಸುಸ್ತಾಗಿ ಹೋದೆ. ಕತ್ತಲೆಯೊಂದೇ ತನಗೀಗ ಜೊತೆಗಾರನೆಂದು ಅಳುವುದನ್ನು ನಿಲ್ಲಿಸಿದೆ. ತೊಟ್ಟಿಲನಿಂದ ನಿಧಾನವಾಗಿ ಕೆಳಗುರುಳಿದೆ. ನೆಲ ಸಿಕ್ಕಿತು. ಕೈಗೆ ಏನಾದರೂ ಸಿಗುವುದೇ ಆಧಾರವಾಗಿ ಎಂದು ಕೈಯ್ಯಾಡಿಸಿದೆ. ಸೆಗಣಿಯ ನೆಲದ ಹುಡಿಯಷ್ಟೇ ದಕ್ಕಿದ ಪಾಲು. ಏನು ಮಾಡುವುದು ಏನೊಂದೂ ಹೊಳೆಯುತ್ತಿಲ್ಲ. ಎದ್ದು ನಿಲ್ಲಲೂ ಧೈರ್ಯ ಸಾಲದೇ ಮಲಗಿದಲ್ಲಿಂದಲೇ ಅಂಬೆಗಾಲಿಡುತ್ತಾ"ದಾರಿ ಯಾವುದಯ್ಯ" ಎಂದು ಹೊರಟೆ. ನಾನು ಅನುಭವಿಸಿದ ಭಯಂಕರ ಘಟನೆಗಳಲ್ಲಿ ಇದೂ ಒಂದು. ಕೊನೆಗೆ ಯಾವುದೋ ಒಂದು ದಿಕ್ಕಿಗೆ ಅಂಬೆಗಾಲಿನ ಹೆಜ್ಜೆ ಗಳನ್ನಿಟ್ಟುಕೊಂಡೇ ಸಾಗಿದೆ. ಆಗಿನ್ನೂ ನಮ್ಮ ಮನೆಯಲ್ಲಿ ಕೈಮಗ್ಗಗಳಿದ್ದವು. ( Hand Looms). ನಾನು ನಡೆಯುವ ನೆಲ ಸಗಣಿಯದ್ದಾಗಿದ್ದರಿಂದ ಅಂಕುಡೊಂಕುಗಳಿಂದಾಗಿ ಮೊಣಕಾಲುಗಳು ನೋಯಲಾರಂಭಿಸಿದವು. ಈಗ ಆಗಿದ್ದರೆ ಡಾ.ಎನ್ .ಎಸ್ ಲಕ್ಷ್ಮೀನಾರಾಯಣ ಭಟ್ಟರ"ಯಾರು ಅರಿವರು ಹೇಳು ನನ್ನ ನೋವ ತಲ್ಲಣಿಸಿ ಕೂಗುತಿದೆ ದಾಸೀ ಜೀವ" ಎಂದು ಹಾಡಿಬಿಡುತ್ತಿದ್ದೆನೇನೋ ?. ಹೊರಹೋಗುವ ಯಾವುದಾದರೊಂದು ದಾರಿ ಸಿಗಬಹುದೇನೊ ಎಂದುಕೊಂಡು ನಿಧಾನವಾಗಿ ಮುಂದೆ ಸಾಗಿದೆ...ಹೋಗಹೋಗುತ್ತಿದ್ದಂತೆಯೇ ಧೊಪ್ಪನೇ ಕೆಳಗೆ ಬಿದ್ದೆ. ಆಳವಾದ ಪ್ರಪಾತಕ್ಕೆ ಬಿದ್ದ ಅನುಭವವಾಯಿತು.ಒಂದು ಕ್ಷಣ ಎದೆಯೇ ಒಡೆದು ಹೋಯಿತು. ತಲೆ ಹಾಗೂ ಬೆನ್ನಿಗೆ ಬಿದ್ದ ಏಟುಗಳಿಂದ ನರಳಿದೆ. ಮೊದಲಿಗಿಂತ ಜೋರಾಗಿ ಅಳತೊಡಗಿದೆ. ಅರಣ್ಯರೋದನವಾಯಿತು ನನ್ನ ಕೂಗು. ಅಕ್ಷರಶಃ ಕುರುಡನಾಗಿ ಪರಿತಪಿಸಿದೆ. ನಾನು ಬಿದ್ದ ಸ್ಥಳ ಯಾವುದೆಂದು ನಿಧಾನವಾಗಿ ಅಲ್ಲಿರುವ ಸಾಧನಗಳನ್ನು ಮುಟ್ಟಿ ಪರಿಶೀಲಿಸಿದೆ. ಅದು ಕೈಮಗ್ಗದ ಕುನಿಯಾಗಿತ್ತು (ತಗ್ಗು, ಕುಸಿ ). ಸ್ಪರ್ಶಮಾತ್ರದಿಂದಲೇ ಇದನ್ನರಿತುಕೊಂಡೆ ; ಭಯಭೀತನಾದೆ. ಆಗಿನ ನನ್ನ ದುಸ್ಥಿತಿಯಂತೂ ಹೇಳತೀರದು. ಕುನಿಯಲ್ಲಿದ್ದ (ತಗ್ಗು) ಮಣ್ಣು ಮೈಕೈಗಳನ್ನು ಮೆತ್ತಿಕೊಂಡಿತು. ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು ನನ್ನ ಕಥೆ. ಹೇಗೆಂದು ಬಣ್ಣಿಸುವುದು ಈ ವ್ಯಥೆ. ಅತ್ತೂ ಅತ್ತೂ ಕಣ್ಣೀರು ಬತ್ತಿಹೋದವು. ನಡುಗಿದ ಎದೆಯೊಳಗೆ ಭಯವೊಂದನ್ನು ಬಿಟ್ಟು ಏನೂ ಇರಲಿಲ್ಲ. ಕಣ್ಣೀರು ಒಣಗಿದ ಕೆನ್ನೆಗಳು ಹಾಳೆಯಂತಾದವು. ಮಗ್ಗದ ಕುನಿ ( ತಗ್ಗು ) ಯಲ್ಲಿನ ಧೂಳು ಮೆತ್ತಿದ ಕೈಗಳಿಂದಲೇ ಕಣ್ಣುಗಳನ್ನೊರೆಸಿಕೊಂಡೆ. ಕಣ್ಣುರಿಯತೊಡಗಿದವು, ಸಹಿಸಿಕೊಂಡೆ. ತಲೆಯ ಮೇಲೆ ಜೋತುಬಿದ್ದಿದ್ದ ಮಗ್ಗದ ತಂತಿಗಳಿಂದ ಹೊಡೆಸಿಕೊಂಡು ದಡಬಡಾಯಿಸುತ್ತಲೇ ಎದ್ದು ನಿಂತೆ. ಮಗ್ಗದ ಮೇಲೆ ಹಾಸಿದ ರೇಷ್ಮೆಯ ಖಣದ ಕೆಳಗೆ ತೂರಿ ಕುಳಿಯಿಂದ ಮೇಲೆ ಬರಲು ಅಡ್ಡ ಬಿದ್ದೆ. ರೇಷ್ಮೆಯ ಎಳೆಗಳ ಬಲೆಯೊಳಗೆ ಸಿಲುಕಿ ಒದ್ದಾಡಿದೆ, ಬೇಟೆಗಾರನ ಬಲೆಯಲ್ಲಿ ಸಿಲುಕಿದ ಹುಲ್ಲೆಯಂತೆ. ಪಕ್ಕದ ಕಟ್ಟಿಗೆಯ ಹಲಗೆ ಧಡಲ್ ಎಂದಿತು ತಲೆಗೆ ಬಡಿದು. ಎದ್ದು ಬಿದ್ದು ಹೇಗೋ ಮೇಲೆ ಹತ್ತಿ ಬಂದೆ.
ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಿಗೂ ನನಗೂ ಯಾವ ಭಿನ್ನತೆಗಳೂ ಇರಲಿಲ್ಲ. ಅಲ್ಲಿ ಸುಳಿದು ಸುತ್ತಿ ಇರಿಯುವ ಸರಳುಗಳು ಅಭಿಮನ್ಯುವಿನ ಮೈಯ್ಯನ್ನು ಹೊಗಲು ಹವಣಿಸುತ್ತಿದ್ದರೆ , ಇಲ್ಲಿ ಮಗ್ಗದ ತಂತಿ, ಕೋಲುಗಳು ಸುತ್ತ ನೆರೆದು ಥಳಿಸಲೆಂಬಂತೆ ನೆರೆದು ನಿಂತಿದ್ದವು. ಶೂರನಲ್ಲದಿದ್ದರೂ ಕತ್ತಲೆಯ ಹೊಡೆತಕ್ಕೆ ನಲುಗಿ ಪರಾಕ್ರಮಿಯಾಗಿ ಬದಲಾಗಬೇಕಾಯಿತು. ಅಭಿಮನ್ಯು ಮರಳಿ ಬರಲಿಲ್ಲ. ನಾನು ಛಲ ಬಿಡದೇ ಭೇದಿಸಿ ಹೊರಬಂದೆ. ನನ್ನ ವಿದ್ಯೆಯೇ ಅಭಿಮನ್ಯುವಿಗಿಂತ ತುಸು ಹೆಚ್ಚೆನಿಸುತ್ತಿದೆ ನನಗೆ. ಏಕೆ ಎನ್ನುವಿರೋ ತುಲನೆ ಮಾಡಿ. ನನಗಿನ್ನೂ ನಾಲ್ಕೈದರ ಹರೆಯ. ಆತನಿಗೆ ಯೌವ್ವನದ ವಯ. ಹತ್ತಾರು ವರ್ಷದ ತರಬೇತಿ ಅವನದು. ತರಬೇತಿ ಎಂದರೇನೆಂದು ತಿಳಿಯದ ಎಳಸು ನನ್ನದು. ಬೆಳ್ಳಂಬೆಳಕಿನಲ್ಲಿ ಆತನ ಯುದ್ಧ; ನನ್ನದೋ ಖಗ್ರಾಸ ಕತ್ತಲೆಯಲ್ಲಿನ ಬಿಡದ ಜಿದ್ದು. ಜಿ.ಎಸ್. ಎಸ್ ರವರು ಹಾಡುವ ಹಾಗೆ ಕಾಣದ ಕಡಲಿನಲ್ಲಿಯೇ ಈಜಿದಂತಾಗಿತ್ತು ನನ್ನ ಗತಿ. ಎದ್ದೋ ಬಿದ್ದೋ ಮೇಲೆ ಬಂದೆ. ಕಾದು ಕುಳಿತ ಸುಣ್ಣವೂ ಮೈಕೈಗಳಿಗೆಲ್ಲಾ ಮೆತ್ತಿಕೊಂಡು ಅಲಂಕಾರ ಮಾಡಿತ್ತೆಂದು ನಂತರ ತಿಳಿಯಿತು. ಬಯಸದ ನೋವುಗಳನುಂಡು, ಅಂತೂ ಒದ್ದಾಡಿ ಮೇಲೆ ಬಂದೆ. ನಿದ್ದೆಗಣ್ಣುಗಳೀಗ ನಿಚ್ಚಳವಾಗಿದ್ದರೂ ಪ್ರಯೋಜನವಿರಲಿಲ್ಲ. ಈ ರಣರಂಗದಿಂದ ಮೊದಲು ತಪ್ಪಿಸಿಕೊಂಡು ಬೆಳಕು ಹುಡುಕಿದರಾಯಿತೆಂದು ಅರಿವಿನಿಂದಲೋ, ಅರೆಪ್ರಜ್ಞೆಯಿಂದಲೋ ನಿಧಾನವಾಗಿ ಅಂಬೆಗಾಲಿನ ಮೇಲೆಯೇ ಬಾಗಿಲ ಬಳಿ ಬಂದೆ.ಸ್ಪರ್ಶಮಾತ್ರದಿಂದ ಬಾಗಿಲು ದಕ್ಕಿತೆಂದುಕೊಂಡು ತಡಬಡಾಯಿಸಿದೆ. ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರೆಯುತ್ತಿಲ್ಲ. ಸತ್ಯದ ಅರಿವಾಯಿತು. ಹೊರಗೆ ಬೀಗ ಹಾಕಿದ ಬಾಗಿಲನ್ನು ತೆರೆಯಲು ಹೇಗೆ ಸಾಧ್ಯವಾದೀತು ?"ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ಎಲೆ ಹೋತೆ ಅಳು ಕಂಡೆಯಾನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲ ಸಂಗಮದೇವ"ಎಂಬ ವಚನ ಹಾಡಿ ಮನೆಯವರ ಮೇಲೆ ಸೇಡು ತೀರಿಸಿಕೊಂಡು ಬಿಡುತ್ತಿದ್ದೆನೇನೋ ? ಆ ಅವಕಾಶವೂ ಇರಲಿಲ್ಲ ನನಗೆ. ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿದೆ. ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿಕೈ ಹಿಡಿದು ನಡೆಸೆನ್ನನುಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿಕೈ ಹಿಡಿದು ನಡೆಸೆನ್ನನುಎಂಬ ಬಿ.ಎಂ.ಶ್ರೀಯವರ ಪ್ರಾರ್ಥನೆಯಂತೆ, ಬೆಳಕನ್ನೊಮ್ಮೆ ನನಗೆ ತಿಳಿದ ಭಾಷೆಯಿಂದೊಮ್ಮೆ ಕರೆದೆ. ಬೆಳಕಿನ ಸುಳಿವಿರಲಿಲ್ಲ. ಕೋಲೆಬಸವನಂತೆ ಜೋತುಬಿದ್ದ ಮೋರೆಯನ್ನು ಕೆಳಗೆ ಹಾಕಿ ಅಲುಗಾಡಿಸುತ್ತಾ ಮತ್ತೆ ತೆವಳಿದೆ. ತಲೆಗೆ ಏನೋ ತದಕಿದಂತಾಯಿತು. ಅದಾಗಲೇ ಸಾಕಷ್ಟು ಪೆಟ್ಟು ತಿಂದ ತಲೆಯು ಅನುಭವಿಯಾಗಿಬಿಟ್ಟಿತ್ತು. ಯಾವುದೋ ವಸ್ತುವಿರಬೇಕೆಂದು ತಿಳಿದು, ಕುಳಿತಲ್ಲೇ ಕೈಯ್ಯಾಡಿಸಿದೆ. ಕುರುಡನೊಬ್ಬ ಆನೆಯನ್ನು ಸ್ಪರ್ಶಿಸಿದಂತೆ ಸೋಫಾದ ಮೇಲೆ ಕೈಯ್ಯಾಡಿಸಿದೆ. ಯಾವುದೋ ಮಾನವಾಕೃತಿಯು ಮಲಗಿದಂತೆ ಕಂಡಿತು. ಸ್ವಲ್ಪ ಧೈರ್ಯ ಬಂದಂತಾಯಿತು. ಅದುವರೆಗೂ ಒಬ್ಬಂಟಿಯೆಂದುಕೊಂಡವನಿಗೀಗ ಯಾರೋ ಜೊತೆಯಾದರಲ್ಲ ಎನ್ನುವುದು ಎಲ್ಲಿಲ್ಲದ ಸಮಾಧಾನವನ್ನು ತಂದಿತು. ಅನುಮಾನ ಬಂದು ಮತ್ತೊಮ್ಮೆ ಆ ಮನುಷ್ಯಾಕೃತಿಯ ಮೈಕೈಗಳನ್ನು ಮುಟ್ಟಿದೆ. ಅನುಮಾನವೇ ಇಲ್ಲ. ಯಾರೋ ಮಲಗಿದ್ದಾರಿಲ್ಲಿ ಎಂದು ಕತ್ತಲೆಯಲ್ಲಿಯೇ ಸಂತಸಗೊಂಡೆ. ಕಣ್ಣಿಲ್ಲದವನಿಗೆ ಬೆಳಕು ಕಂಡಂತಾಯಿತು. ಮುಳುಗುತ್ತಿದ್ದವನಿಗೊಂದು ನೆಲೆ ನಿಲುಕಿದಂತಾಯಿತು. ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಕರೆದರೂ ಇಣುಕದ ಬೆಳಕನ್ನು ಶಪಿಸುತ್ತಿದ್ದವನಿಗೆ ಬೆಳಕಿನ ನಿಜ ರೂಪವನ್ನು ಕಂಡದ್ದೇ ಆನಂದಭಾಷ್ಪಗಳುದುರಿದವು. ಚಿಕ್ಕಪ್ಪನ ರೂಪದಲ್ಲಿ ಸಹಾಯಕ್ಕೆ ಬಂದ ಬೆಳಕಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ. ಕುಂಭಕರ್ಣ ನಿದ್ದೆಯಲ್ಲಿದ್ದವರನ್ನು ಎಬ್ಬಿಸಿದರೂ ಅಲುಗಾಡಲಿಲ್ಲವೆಂದ ಮೇಲೆ ಇವರು ಚಿಕ್ಕಪ್ಪನೇ ಸರಿಯೆಂದು ತಿಳಿದೆ. ಗೊಡವೆಯೇ ಬೇಡವೆಂದು ಬೆನ್ನು ಮೇಲೆ ಮಾಡಿ ಮಲಗಿದ್ದವನ ಮೇಲೆ ಕುದುರೆಯನ್ನೇರುವಂತೆ ಏರಿ ಹಾಗೆಯೇ ಬೆನ್ನಿಗಂಟಿಕೊಂಡು ಒರಗಿದೆ. ನಮ್ಮ ಮನೆಯಲ್ಲಿ ಬೆನ್ನು ಮೇಲೆ ಮಾಡಿಕೊಂಡು ಕುಂಭಕರ್ಣನಂತೆ ಎಚ್ವರಿಸಿದರೂ ಸರಳವಾಗಿ ಏಳದೇ ಮಲಗುವ ಏಕೈಕ ವ್ಯಕ್ತಿ ಎಂದರೆ ಅದು ಚಿಕ್ಕಪ್ಪನೇ. ಇನ್ನೇನು ಬೇಕು ಕತ್ತಲೆಯಲ್ಲಿ ಪಯಣಹೊರಟವನಿಗೆ. ಕಣ್ಣೀರನ್ನೊರೆಸಿಕೊಳ್ಳುತ್ತಲೇ ನೆಮ್ಮದಿಯ ನಿದ್ದೆಗೆ ಜಾರಿದೆ. ದಟ್ಟಾರಣ್ಯದಲ್ಲಿ ದಿಕ್ಕೆಟ್ಟ ಜಿಂಕೆಯ ಮರಿಗೆ ತಾಯಿ ಸಿಕ್ಕಂತಾಯಿತು. ಅತ್ತ ಹೊರಗಡೆ ಜಾತ್ರೆಯ ನಾಟಕ ಜನರ ಕೇಕೆಗಳಿಂದ ರಂಗೇರುತ್ತಿದ್ದರೆ, ನನ್ನ ಸಂಕಟದ ನಾಟಕಕ್ಕೆ ತೆರೆ ಬಿದ್ದಿತ್ತು. ಬೆಳಿಗ್ಗೆ ನಾಟಕ ಮುಗಿಸಿಕೊಂಡು ಬಂದ ಮನೆಯವರು ಈ ದೃಶ್ಯ ಕಂಡು ಮಮ್ಮಲ ಮರಗಿದರಂತೆ. ಅಲ್ಲದೇ ಊರಿಗೆ ಹೋಗಿದ್ದ ನನ್ನ ದೊಡ್ಡಪ್ಪ ಬಂದವರೇ ನಡೆದ ಘಟನೆಯನ್ನು ಕೇಳಿ ನನ್ನೆದುರಿಗೆ ಮನೆಯವರೆಲ್ಲರನ್ನೂ ಚೆನ್ನಾಗಿ ಬೈದರು. ಆಗ ನನಗೆ "ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ" ಎಂಬ ಸಾಲು ನೆನಪಿಗೆ ಬಂದಿರಬೇಕು. ಯಾರೋ ಹೇಳಿದ ನೆನಪು"ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗದು " ಎಂದು. ಆದರೆ ಈ ಘಟನೆಯ ನಂತರ ಬೆಳಕಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎನ್ನುವುದೇ ಬಿಡಿಸಲಾಗದ ಒಗಟಾಯಿತು ನನಗೆ. ಬಹುಶಃ ಅಂತಹ ಕತ್ತಲೆಯಲ್ಲೂ ನನ್ನನ್ನೂ ಮುನ್ನಡೆಸಿದ ಶಕ್ರಿ ಯಾವುದಿರಬಹುದು ಎಂದು ಚಿಂತಿಸಿದ್ದೇನೆ. ಉತ್ತರವೀಗ ಕವಯಿತ್ರಿ ಎಂ.ಆರ್.ಕಮಲ ರವರ "ಅಮ್ಮಾ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ"ಎಂಬ ಭಾವಗೀತೆಯ ಮೂಲಕ ಹೀಗೆ ದಕ್ಕಿದೆ. ತಾಯಿ ನನ್ನೆದೆಯೊಳಗೆ ಹಚ್ಚಿಟ್ಟ ಇಂತಹ ಹಣತೆಯ ಬೆಳಕಿನಲ್ಲಿಯೇ ಸಾಗಿ ಅಂತೂ ನೆಲೆಯೊಂದನ್ನು ಕಂಡುಕೊಂಡಿರಬೇಕು ನಾನು. ಆ ಹಣತೆಯ ಬೆಳಕಿನ್ನೂ ಬೆಳಗುತ್ತಲೇ ಇದೆ ಹೀಗೆ ಬರಹವಾಗಿ; ಕೆಲವೊಮ್ಮೆ ಅರಿವಾಗಿ; ಮಗದೊಮ್ಮೆ ಬದುಕಾಗಿ.
Friday, 26 June 2020
ನೀನೊಮ್ಮೆ ಒಡಲುಗೊಂಡು ನೋಡಾ..
ನೀನೊಮ್ಮೆ ಒಡಲುಗೊಂಡು ನೋಡಾ..
ಅದು ಬ್ರಾಹ್ಮಿ ಮುಹೂರ್ತಕಾಲ. ಸಾಕಿ ಹೆಣೆದು ಹಾಸಿದ ಕೌದಿಯಿಂದ ಮೈಮನಗಳೆಲ್ಲವೂ ಎಚ್ಚರಗೊಂಡು ಮಂಜುಗಣ್ಣಿನಲ್ಲಿಯೇ ಮನೆಯ ಮುಂದಿನ ಉದ್ಯಾನವನದೊಳಗೆ ಪ್ರವೇಶಿಸಿದೆ. ಹಳದಿಯುಟ್ಟು ನಿಂತ ಅಲಂಕಾರದ ಗಿಡದೆಲೆಗಳ ಮೇಲೆ ಆಗ ತಾನೇ ಭುವಿಗಿಳಿದು ವಿರಮಿಸುತ್ತಿದ್ದ ಇಬ್ಬನಿಯ ಹನಿಗಳನ್ನು ಹುಡುಕಿ ಮೈಸವರಿದೆ. ಕಾಯುತ್ತಿದ್ದವೋ ಏನೋ ಅಂಟಿಕೊಂಡುಬಿಟ್ಟವು ದೂರದಿಂದಲೇ ಕಾಡಬೇಕೆಂದಿದ್ದ ಹಸ್ತಗಳಿಗೆ. ಎತ್ತಿಕೊಂಡೆ ಮುದ್ದಿನ ಕೂಸನ್ನು ತಾಯಿ ಹಿಡಿದೆತ್ತಿಕೊಂಬಂತೆ. ಕಣ್ಣುಗಳಿಗೆ ಸವರಿ ರೆಪ್ಪೆಗಳಿಂದ ತಬ್ಬಿಕೊಂಡೆ. ನೇತ್ರದೊಳಗೆ ಮಡುಗಟ್ಟಿದ ಅಂತರಂಗದಿಂದುದಿಸಿದ ಮಂಜಿನೊಳಗೆ ಬಹಿರಂಗದ ಇಬ್ಬನಿಯೂ ಐಕ್ಯವಾಗಿ ಅದ್ವೈತವಾಗುವುದರಲ್ಲಿರುವ ಅದಮ್ಯ ಸುಖವನ್ನನುಭವಿಸಿದೆ ಕಣ್ಣಾಲೆಗಳನ್ನು ಮೌನದಿಂದ ಮುಚ್ವಿಕೊಂಡು. ಆಗ ಶೂನ್ಯವೇ ಸಂಪಾದನೆ; ಭಾವವೇ ಆಲಾಪನೆ; ಧ್ಯಾನವೇ ಸಂಶೋಧನೆ. ಹಿಂದಿನ ರಾತ್ರಿ ಹನಿದ ಮಳೆಯಿಂದ ಮಜ್ಜನಗೈದ ಗಿಡಮರಗಳು ಹಸಿರಿನ ಹೊಸ ದಿರಿಸನ್ನುಟ್ಟು ಮಧುವಣಗಿತ್ತಿಯಂತೆ ಶುಭೋದಯದ ಸ್ವಾಗತಕ್ಕಾಗಿ ಸಿದ್ಧವಾಗಿ ನಿಂತಿದ್ದವು. ಹೃದಯದಿಂದ ಹೊರಟ ರಾಗರತಿ ಕಣ್ಣುಗಳ ಮೂಲಕ ಮತ್ತೆ ಇಳೆಗಿಳಿಯುತಿತ್ತು ಹನಿ ಹನಿಯ ಬನಿಯಾಗಿ. ಕುವೆಂಪು ಹೇಳುವ "ಆನಂದಮಯ ಈ ಜಗಹೃದಯ" ವೆಂದರೆ ಯಾವುದೆಂದು ಸರಳವಾದ ಪ್ರಯೋಗದ ಮುಖೇನ ತೋರಿದ ಇಬ್ಬನಿಯ ಹನಿ ಗೆಳೆಯರಿಗೆ ಕೈಮುಗಿದೆ. ಉದ್ಯಾನವನದಲ್ಲಿಯೇ ಸುಳಿದಾಡಿದೆ ಮಾರುತನ ಹೆಗಲ ಮೇಲೆ ಕೈಹಾಕಿ. ರಾತ್ರಿಯೆಲ್ಲಾ ಹರಿದಾಡಿ ಆಯಾಸಗೊಂಡು ಮಂದಗಾಮಿನಿಯಾಗಿದ್ದ ಒಡಲಿಲ್ಲದ ನಿರಾಕಾರನ ಕುಶಲೋಪರಿಯನ್ನು ವಿಚಾರಿಸಿದೆ.
"ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ"
ಎಂಬ ಜೇಡರ ದಾಸಿಮಯ್ಯನ ವಚನದ ಸಾಲುಗಳಲ್ಲಿರುವ ಒಡಲುಗೊಳ್ಳುವ ವ್ಯಕ್ತಿತ್ವ ವಾಯುದೇವನದಲ್ಲ ಎಂದ ಮೇಲೆ ಸತ್ಯ ಅಸತ್ಯಗಳ ದ್ವಂದ್ವಗಳ ಗೊಡವೆಯಿಲ್ಲದೇ ಆತ ಹೊತ್ತು ತಂದ ಎಲ್ಲ ಸುದ್ದಿ ಸಮಾಚಾರಗಳನ್ನೂ ಎದೆಯೊಳಗಿಳಿಸಿಕೊಂಡೆ. ಮಾತನಾಡಿಸುತ್ತಲೇ "ನೀನೊಮ್ಮೆ ಒಡಲುಗೊಂಡು ನೋಡಾ" ಎಂದು ವಚನಕಾರರು ಕಂಡ ಕನಸನ್ನು ನಾಲಿಗೆಗೆ ತಂದು ಪುನರುಚ್ಚರಿಸಿದೆ. ಮಣಿಯಲಿಲ್ಲ ಆಸಾಮಿ. ಹುಸಿ ಹಾಗೂ ಹಸಿವುಗಳೇ ಜಗತ್ತನ್ನಾಳುವವರ ರಾಜತಂತ್ರಗಳಲ್ಲವೇ. ಇದೆಲ್ಲವೂ ಮಾರುತನಿಗೆ ಗೊತ್ತಿದೆ. ಒಡಲುಗೊಂಡರೆ ಯುಗಯುಗಗಳಿಂದ ಕಾಪಾಡಿಕೊಂಡು ಬಂದ ಪಾವಿತ್ರ್ಯ ಕ್ಷಣಾರ್ಧದಲ್ಲಿಯೇ ಮಣ್ಣುಸೇರುವುದೆಂದು. ಪ್ರಹ್ಲಾದನ ತಂದೆ ಹಿರಣ್ಯಕಶ್ಯಪನಲ್ಲಿ ಮಡುಗೊಂಡ ಅಧಿಕಾರದ ಮದ ತನ್ನನ್ನೂ ಸುಮ್ಮನೇ ಬಿಟ್ಟೀತೇ? ರಾಮಾಯಣದ ಮರ್ಯಾದಾ ಪುರುಷೋತ್ತಮನನ್ನು, ಮಹಾಭಾರತದ ಲೀಲಾ ಪುರುಷೋತ್ತಮನನ್ನು ಒಡಲು ಸತಾಯಿಸಿದ್ದನ್ನು ನೆನೆಸಿಕೊಂಡ ಮಾರುತ ಒಂದಾದ ನಂತರ ಒಂದರಂತೆ ದೃಷ್ಟಾಂತಗಳನ್ನು ಬೋಧಿಸಿದ. ತನ್ನ ಜೀವಮಾನದಲ್ಲಿ ಎಂತಿಂಥವರನ್ನು ಕಂಡಿಲ್ಲ ಹೇಳಿ ಆತ. ಭುವನದ ಒಂದು ತುದಿಯಿಂದ ಮತ್ತೊಂದು ಅಂಚಿನವರೆಗೂ ಸಾಮ್ರಾಜ್ಯ ಕಟ್ಟಿ ಮೆರೆದವರು, ಕಟ್ಟಿದ ಕೋಟೆ, ಕಟ್ಟಿಕೊಂಡ ಮಹಾರಾಣಿಯರನ್ನು ಬಿಟ್ಟು ಎಲ್ಲೋ ಮಣ್ಣಾದವರು, ಹೇಳಹೆಸರಿಲ್ಲದಂತೆ ರಣರಂಗದೊಳಗೆ ಸಮಾಧಿಯಾಗಿ ನರಿತೋಳಗಳಿಗೆ ಅಹಾರವಾದವರು, ಅಧಿಕಾರದ ಅಮಲಿನಲ್ಲಿ ಮನುಷ್ಯತ್ವವನ್ನು ಮರೆತು ಜಾರಿಹೋದವರು, ಹಣದ ಹೊಳೆಯಲ್ಲಿ ಅಂಧರಾಗಿ ಕೊಚ್ವಿಹೋದವರು, ಹಗರಣಗಳಲ್ಲಿ ಕಳೆದು ಕೊಳೆತು ಹೋದವರು, ಮೋಸ ವಂಚನೆಗಳನ್ನೇ ಹಾಸಿಕೊಂಡು ಹೊದ್ದು ಒಳಗೇ ಮಾಯವಾದವರು, ಹಸಿವಿನಿಂದ ಕಂಗೆಟ್ಟು ತಿಪ್ಪೆಯಲ್ಲಿ ಅಳಿದುಳಿದ ಎಂಜಲೆಲೆಗಳ ಮೇಲಿರುವ ಅನ್ನದಗುಳನ್ನುಂಡು ಹೊಟ್ಟೆ ಹೊರೆದುಕೊಳ್ಳುವ ಅಮಾಯಕರು, ಕೊರೊನಾ ಮಹಾಮಾರಿಯಿಂದಾಗಿ ಚಡಪಡಿಸಿ ಒಲ್ಲದ ಜೀವವನ್ನು ಕೈಯ್ಯಲ್ಲಿ
ಹಿಡಿದುಕೊಂಡು ತುತ್ತಿಗಾಗಿ ಅಂಡಲೆಯುತ್ತಿರುವ ಕೂಲಿಗಳು ಹೀಗೆ ಒಂದೇ ಎರಡೇ ಮಾರುತ ದರ್ಶಿಸಿ ಉದಾಹರಿಸಿದ ಒಡಲುಗೊಂಡ ಮಾನವ್ಯದ ಸ್ವರೂಪಗಳು. ಇಂತಹ ಅಸಂಖ್ಯಾತ, ಅಪರಿಮಿತ, ಅಗಣಿತ, ಅನಂತ ಒಡಲುಗಳನ್ನು ತನ್ನ ತೀಕ್ಷ್ಣ ದೃಷ್ಟಿ ಮಾತ್ರದಿಂದಲೇ ದಹಿಸಿ ಅರಗಿಸಿಕೊಂಡವನ ಮುಂದೆ "ನೀನೊಮ್ಮೆ ಒಡಲುಗೊಂಡು ನೋಡಾ.."ಎಂದವನ ನನ್ನ ಸ್ಥಿತಿ ಹೇಗಿರಬೇಡ ಎಂದೊಮ್ಮೆ ಕಲ್ಪಿಸಿಕೊಳ್ಳಿ. ಹೀಗೆನ್ನುತ್ತಲೇ ಆತ ಗಹಗಹಿಸಿ ನಕ್ಕುಬಿಟ್ಟ ವ್ಯಂಗ್ಯವಾಗಿ ಬಿರುಬೀಸಿ ಸೆಳೆದುಬಿಟ್ಟ ವ್ಯಗ್ರವಾಗಿ. ತಂಪಾದ ಇರುಳಕೊನೆಯಲ್ಲಿಯೂ ಬಿಸಿಯಾಗಿ ತಾಪವೇರಿಸಿಕೊಂಡುಬಿಟ್ಟ ಎದೆಯೊಳಗೆ ಕೋಪದ ಕಿಚ್ಚನ್ನು ಹೊತ್ತಿಸಿಕೊಂಡವನಂತೆ. ಸಂದರ್ಭವನ್ನರಿತ ನಾನು "ಶಾಂತನಾಗು ಗೆಳೆಯಾ..ಶಾಂತನಾಗು..." ಎಂದು ಉಪಚರಿಸಿ "ನೀನು ಗಾಂಧಿಯ ಹೆಸರು ಹೇಳಲಿಲ್ಲ; ವಿವೇಕಾನಂದರ ನಾಮ ಉಲಿಯಲಿಲ್ಲ; ಅರವಿಂದರ ಮಾತೆತ್ತಲಿಲ್ಲ; ಪರಮಹಂಸರನ್ನೂ ಸ್ಮರಿಸಲಿಲ್ಲ ; ಶಾರದಾಂಬೆಯನ್ನು ನೆನೆಯಲಿಲ್ಲ..." ಎಂದು ಅಚ್ಚುಕಟ್ಟಾಗಿಯೇ ವಾಗ್ವಾದವನ್ನು ರೂಪಿಸಿ ಮಂಡಿಸಿದೆ. ಸತ್ಯವನ್ನೊಪ್ಪಿಕೊಂಡಂತೆ ಕಂಡ ಗಾಳಿಯ ಸದ್ದು ಕಡಿಮೆಯಾಯಿತೋ ಏನೋ ಕೋಪವಂತೂ ತಣ್ಣಗಾಯಿತು. ಮತ್ತೆ ಆತ ಎರೆಯುವ ತಂಪಿನ ಮಜ್ಜನಕ್ಕಾಗಿ ಕಾದು ಕುಳಿತೆ. ಅಲೆ ಅಲೆಯಾಗಿ ಮಂದಗಮನೆಯಾಗಿ ಅಪ್ಪಳಿಸಿದ ಅಂತರಂಗದ ಪರದೆಗಳಿಗೆ. ತೂಗುವ ತೊಟ್ಟಿಲಿನಂತಹ ಹೊಯ್ದಾಟದ ಪರಮಸುಖವನ್ನುಂಡ ಅಂತರಂಗದ ರಂಗು ರಂಗಿನ ಭಾವಪರದೆಗಳು ಒಳಗಿಳಿದ ವಾಯುವಿನ ಆರ್ದ್ರತೆಯಿಂದ ಸಂತೃಪ್ತಿಯನ್ನನುಭವಿಸಿದವು. ರಂಗದೊಳಗೆ ಮಗುವಾಗಿ ಅಸಂಗತ ನಾಟ್ಯವಾಡಿದೆ. ಮೊಲವಾಗಿ ಮುಂಗಾಲನ್ನೆತ್ತಿ ನೆಕ್ಕಿ ಕುಪ್ಪಳಿಸಿದೆ.
ಆಮೆಯಾಗಿ ತಾಳ್ಮೆಯಿಂದ ಕತ್ತು ಹೊರಚಾಚಿ ಸಂಭ್ರಮದ ನಿರಾಳ ಹೆಜ್ಜೆಗಳನ್ನಿಟ್ಟು ತಣಿದೆ. ಭಾವಪೂರ್ಣವಾಯಿತು ಅಂತರಂಗ ಆಕಸ್ಮಿಕವಾಗಿ ಒದಗಿಬಂದ ಶುಭೋದಯದ ರಸಘಳಿಗೆಯಲ್ಲಿ. ಬಸವಣ್ಣನವರು ಹೇಳುವ ಅಂತರಂಗ ಶುದ್ದಿಯೆಂದರೆ ಇದೇ ಅಲ್ಲವೇ ಎಂದೆನಿಸಿತು ನನಗೆ. ಅರಿವಿಲ್ಲದಂತೆಯೇ ಅದುವರೆಗೂ ಆ ರಂಗದಲ್ಲಾಡಿದ ಬದುಕಿನ ವಿಕಟತೆಗಳು ಭಾಷ್ಪಗಳ ಮೂಲಕ ಹೊರಬಂದವು ಬಹಿರಂಗದ ಇಬ್ಬನಿಯ ಹನಿಗಳನ್ನು ಆಲಂಗಿಸಿ ತಮ್ಮ ಪಾಪಗಳನ್ನು ಕಳೆದುಕೊಳ್ಳಲು. ಇದೇ ಇರಬೇಕು ಅರಿಸ್ಟಾಟಲ್ ನ ಕೆಥಾರ್ಸಿಸ್( ಭಾವಶೋಧನೆ) ಎಂದುಕೊಂಡನುಭವಿಸಿದೆ. ಗ್ರೀಕ್ ತತ್ವಜ್ಞಾನಿಯ ಸಿದ್ಧಾಂತವೊಂದನ್ನು ಹೀಗೆ ಅಳವಡಿಸಿಕೊಂಡು ಅನುಭವಿಸಿದ ಅನುಯಾಯಿಯಾದೆ. "ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಂ" ಎಂದ ಪಂಪನಿಗೂ ಬನವಾಸಿ ದೇಶದಲ್ಲಿ ಇದೇ ಅನುಭವವಾಗಿರಬೇಕಲ್ಲವೇ ? ಎಂದು ಬೀಗಿದೆ. ಇಷ್ಟೆಲ್ಲಾ ಸಂಕಥನ ಕಟ್ಟಿ ನಿಮ್ಮ ಮುಂದೆ ಹೀಗೆ ಬಯಲಾಗುತ್ತಿರುವುದಕ್ಕೂ ಒಂದು ಗಹನವಾದ ಕಾರಣವಿದೆ. ಅದು ವ್ಯಷ್ಟಿ ಪ್ರಜ್ಞೆಯ ಪ್ರತಿಫಲ. ನಾನು ಒಡಲುಗೊಂಡ ದಿನವಾದ ಜೂನ್ ೨೫, ಮತ್ತೊಂದು ಅರ್ಥದಲ್ಲಿ ನನಗೆ ಜಗತ್ತು ಒಡಲುಗೊಂಡ ದಿನವೂ ಹೌದು. ಮೊದಲನೇಯದು ವ್ಯಷ್ಟಿ ಪ್ರಜ್ಞೆ. ಎರಡನೇಯದು ಸಮಷ್ಟಿ ಪ್ರಜ್ಞೆ. ವಿಶಾಲಾರ್ಥದಲ್ಲಿ ನನಗೆ ಇವೆರಡೂ ಹುಟ್ಟಿಕೊಂಡ ದಿನವೂ ಹೌದು. ನಾನು ಹುಟ್ಟಿದ ದಿನಕ್ಕೂ, ಅಂದೇ ಸಂಭವಿಸಿದ ಭಾವಶೋಧನೆಯ ಈ ಲೀಲಾವಿಲಾಸಕ್ಕೂ ಕಾಕತಾಳೀಯ ಸಂಬಂಧವಷ್ಟೇ ಇರಲಾರದು ಎಂದೇ ನನ್ನ ನಂಬಿಕೆ. ಹೆಂಡತಿ ಎದ್ದು ಬಂದು ಹಾರೈಸಿದಳು. ಹುಟ್ಟುಹಬ್ಬವೆಂದರೆ ಏನೆಂದು ಅರಿಯದ ಮುಗ್ಧ ಜನಪದ ಸಮುದಾಯದ ಸಂಪ್ರದಾಯದಲ್ಲಿಯೇ ಬೆಳೆದುಬಂದ ನಮಗೆ ಇದೊಂದು ಮುಜುಗರದ ದಿನ. ತಿರುಳಿಗಿಂತ ರಂಗುರಂಗಿನ ಮುಲಾಮಿನ ಬಟ್ಟೆಯನ್ನುಟ್ಟು ನವವಧುವಿನಂತೆ ಕಂಗೊಳಿಸುವ ವೃತ್ತಾಕಾರದ ಕೇಕು, ಅದರ ಮೇಲೆ ಬಣ್ಣದ ಮುಲಾಮಿನಿಂದ ಬರೆದ ಶುಭಾಶಯದ ಅಲಂಕಾರಿಕ ಕೆತ್ತನೆ, ಮೇಲೊಂದು ಹೊತ್ತಿಸಿದಾಗ ಸುರ್ ಎಂದು ನಭದತ್ತ ಮುಖಮಾಡಿ ಚಿತ್ತಾರಗೊಳ್ಳುವ ಮಾಂತ್ರಿಕ ಮೇಣದಬತ್ತಿ, ಪ್ಲಾಸ್ಟಿಕ್ ಕತ್ತಿ, ಮನೆಯಲ್ಲಿರುವವರ ಬಿಟ್ಟ ಕಣ್ಣು ಬಿಟ್ಟಂತೆ ಸದಾ ಸಿದ್ಧವಾಗಿರುವ, ಜಂಗಮವಾಣಿಯ ತೆರೆದ ಕಣ್ಣುಗಳ ಕ್ಯಾಮರಾಗಳು, ಕೆಂಪು ಜುಟ್ಟಿನ ಒಂದಷ್ಟು ಸಾಂತಾಕ್ಲಾಸ್ ನ ಟೋಪಿಗಳಿದ್ದರೆ ಮುಗಿಯಿತು ಈ ಹೊತ್ತಿನ ಹುಟ್ಟಿದ ಹಬ್ಬದ ಆಚರಣೆಯ ಸಂಭ್ರಮ ಮುಗಿಲುಮುಟ್ಟಿಬಿಡಲು. ಇದಾವುದರ ಸೆಳೆತವೇ ಇಲ್ಲದವರಂತೆ ಬದುಕಿದ ಕುಟುಂಬದವರ ಕುಡಿಯಾಗಿ ನನಗಿದರ ಪರಿಚಯ ಬಹಳ ಕಡಿಮೆ. ಪುರಾಣವೆಂದು ಹೀಗಳೆಯದಿರಿ.
ಬಯಲು ಸೀಮೆಯ ನೆಲಮೂಲ ಸಂಸ್ಕೃತಿಯಲ್ಲಿ ಒಡಲುಗೊಂಡವರೆಲ್ಲರಿಗೂ ಸಾಮಾನ್ಯವಾಗಿ ಇದೇ ಇತಿಹಾಸದ ಹಿನ್ನೆಲೆಯಿದೆ. ಸಾಕಿಯು ಸ್ನಾನ ಮಾಡೆಂದು ಗದರಿಸಿದ ಹೊತ್ತಿಗೆ ಪ್ರಕೃತಿಯೂ ಮಳೆರಾಜನ ಪ್ರೇಮದ ಹೊಳೆಯಲ್ಲಿ ಮಿಂದೆದ್ದಿತ್ತು. ಪ್ರಾತಃಕಾಲ ನನ್ನೊಳಗೆ ಸಂಭವಿಸಿದ ಅಂತರಂಗದ ಸ್ನಾನವೂ ನನ್ನನ್ನು ನವನವೋನ್ಮೇಶನನ್ನಾಗಿ ಪರಿವರ್ತಿಸಿಬಿಟ್ಟಿತ್ತು. ಮೊಬೈಲಿನಲ್ಲಿ ಘಂಟಾನಾದಗೈಯ್ಯುತ್ತಾ ಧಾವಿಸುತ್ತಿದ್ದ ಶುಭಾಶಯಗಳ ಹೊಳೆಯಲ್ಲಿ ಅಭ್ಯಂಜನಗೈದು ವಿನೀತನಾದೆ. ಇದು ಕೇವಲ ವ್ಯಷ್ಟಿಯ ಸಂಕಥನವಲ್ಲ. ಕನಿಷ್ಠ ತಾವು ಒಡಲುಗೊಂಡ ಘಳಿಗೆಯೂ ಗೊತ್ತಿರದವರೆಲ್ಲರಿಗೂ ಸಲ್ಲಲೇಬೇಕಾದ ನುಡಿನಮನ. ಜನುಮದಿನದ ಸುಳುಹೂ ಇಲ್ಲದ ನನ್ನ ಸಾಕಿಯರಿಬ್ಬರೂ ಈ ವಿಸ್ಮೃತ ಸಮಯದಾಯದ ಪ್ರತಿನಿಧಿಗಳೇ. ಪಕ್ಕದ ಮನೆಯ ಅಜ್ಜಿಯೊಬ್ಬಳು ತೀರಿ ಹೋದಾಗ ಆಕೆಯ ವಯಸ್ಸಿನ ಲೆಕ್ಕಾಚಾರವೇ ಅದಾರಿಗೂ ನಿಲುಕಲಿಲ್ಲ. ಡಿಜಿಟಲ್ ಯುಗದಲ್ಲಿಯೂ ತಾರೀಖು, ದಿನ, ಮುಹೂರ್ತ, ಘಳಿಗೆಗಳನ್ನು ಅವುಗಳೊಂದಿಗೆ ಜೀವಿಸುತ್ತಲೇ ದಾಖಲಿಸಲು ಹೆಣಗಾಡಿ, ಮರೆತು ಸಹವಾಸವೇ ಬೇಡವೆಂದರೂ, ಮತ್ತೆ ಕ್ಯಾಲೆಂಡರಿನ ಮುಂದೆ ಧ್ಯಾನ ಮಾಡುವ ನಾವೆಲ್ಲಿ ? ಕ್ಯಾಲೆಂಡರುಗಳೇ ಇಲ್ಲದ ಹುಣ್ಣಿಮೆ ಬೆಳದಿಂಗಳು, ಅಮವಾಸ್ಯೆಗಳ ಕರಿನೆರಳುಗಳನ್ನೇ ಕಾಲವಳೆಯಲು ಆಧಾರವಾಗಿಟ್ಟುಕೊಂಡ ಯುಗದ ಕತ್ತಲೆಯೊಳಗೆ, ಹೊತ್ತು ಗೊತ್ತಿಲ್ಲದೇ ಹುಟ್ಟಿ, ಬೆಳಕಿಲ್ಲದ ದಾರಿಯಲ್ಲಿಯೇ ಕನಸುಗಳನ್ನು ಕಟ್ಟಿ, ಮುಗಿಲೆತ್ತರದ ಭರವಸೆಗಳನ್ನು ಬೆಳೆಸಿ, ತಮ್ಮದೆಲ್ಲವನ್ನೂ ಬದುಕಿಗೆ ಸಮರ್ಪಿಸಿ, ಗೂಡಿನೊಳಗಿದ್ದು ವಂಶದ ಮರಿಗಳನ್ನು ಸಿಂಹಾಸನದ ಮೇಲೆ ಹೊತ್ತು ಮೆರೆಸುವ ಜನಪದರ ಕಾಲಭೈರವನೆಲ್ಲಿ ?. ಈ ಹೊತ್ತಿನ ಹುಟ್ಟುಹಬ್ಬಗಳು ನನ್ನಲ್ಲಿ ಈ ಜಿಜ್ಞಾಸೆಯನ್ನು ಹುಟ್ಟಿಸಿವೆ. ಸಾಮಾಜಿಕ ಜಾಲತಾಣಗಳಾದಿಯಾಗಿ ಗೆಳೆಯರ ಬಳಗ, ಕೇಕು, ಹಾರ ತುರಾಯಿಗಳೊಂದಿಗೆ ಎಲ್ಲೆಲ್ಲೂ ಸಂಭ್ರಮಿಸುವ ಹುಟ್ಟಿದ ಹಬ್ಬ ನಮಗೆ ವರುಷಕ್ಕೊಮ್ಮೆ ಸಂಭವಿಸಿದರೆ, ತಮ್ಮದೇ ಜನುಮದಿನದ ಸುಳಿವನ್ನಿಟ್ಟುಕೊಳ್ಳದ ಸಾಕಿಯರಿಗೆ ನಿತ್ಯವೂ ಹುಟ್ಟುಹಬ್ಬವೇ. ಪ್ರತಿನಿತ್ಯ ತಮ್ಮವರೆಲ್ಲರ ಬದುಕನ್ನು ಹಸನುಗೊಳಿಸಿ, ಎಲ್ಲರೆದೆಯೊಳಗೂ ಚೈತನ್ಯವನ್ನು ತುಂಬಿ, ಬೇಂದ್ರೆಯವರು ಹೇಳುವ ಹಾಗೆ ಅಂತರಂಗದಲ್ಲಿ ತೊಂತನನ ಹಾಡಿದರೆ ಮುಗಿಯಿತು ಅವರು ಮತ್ತೆ ಮರುಹುಟ್ಟು ಪಡೆದಂತೆಯೇ ಅಲ್ಲವೇ ? ನಿತ್ಯದ ಕಾಯಕದಲ್ಲಿ ಒಂದರೆಘಳಿಗೆಯ ಲಯ ತಪ್ಪಿದರೂ ಸಾಕು; ಅವರೆದುರಿಸುವ ಸಂಕಟಗಳನ್ನೊಮ್ಮೆ ಕಣ್ಣೆದುರಿಗೆ ತಂದುಕೊಳ್ಳಿ. ಸಾಕಿಯನುಭವಿಸುವ ಯಾತನೆಗಳನ್ನೊಮ್ಮೆ ಸ್ಮರಿಸಿಕೊಳ್ಳಿ. ತಿಳಿದುಬಿಡುತ್ತದೆ ಅವರು ಅಚರಿಸಿಕೊಳ್ಳಲಾಗದ ಜನುಮದಿನದ ರಹಸ್ಯ. ಇವರಲ್ಲವೇ ಆ ದೇವನೂ ಸ್ವೀಕರಿಸಲಾಗದ ಸವಾಲನ್ನು ತಮ್ಮದಾಗಿಸಿಕೊಂಡು ಬದುಕಲು ನಿಜವಾಗಿಯೂ ಒಡಲುಗೊಂಡು ಬಂದವರು. ನಾವೋ ಒಡಲುಗೊಂಡು ವಿಷಯಸುಖಲೋಲುಪತೆಯ ಅರಗಿನರಮನೆಯಲ್ಲಿ ಕ್ಷಣ ಕ್ಷಣಕ್ಕೂ ಪರಿತಪಿಸುತ್ತಿರುವವರು. ಈ ಸಾಕಿಯರೋ, ಒಡಲುಗೊಂಡು ಬದುಕಿನ ಪ್ರಶ್ನೆಗಳಿಗೆ ಮತ್ತೆ ಮತ್ತೆ ಉತ್ತರವಾಗಿ ಮರಳಿ ಪ್ರಶ್ನೆಯಾಗುತ್ತಿರುವವರು.
ಗೋಧೂಳಿಯ ಸಮಯವದು. ಮನೆ ಬಿಟ್ಟು ಕಾಡಿನ ಕಡೆಗೆ ಕೈಹಿಡಿದು ಕರೆದೊಯ್ಯುವ ಕಾಲಪುರುಷ, ಎದುರಿಗಿದ್ದ ಸುಣ್ಣದ ಗೋಡೆಯ ಮೇಲೆ ತೂಗುಹಾಕಿರುವ ಗಡಿಯಾರದಲ್ಲಿರುವ ಕ್ಷಣದ ಮುಳ್ಳಿನ ಕೊನೆಯಿಂದ ಸನ್ನೆ ಮಾಡಿದ. ಏನೋ ತಿವಿದಂತಾಗಿ ಎಚ್ಚರಗೊಂಡೆ. ಚಹಾಯಣವನ್ನು ಎದೆಯೊಳಗಿಳಿಸಿಕೊಂಡು ಕರುಳ ಕುಡಿಗಳ ಕಣ್ತಪ್ಪಿಸಿ ಹೊರಟ ನನ್ನ ಹಾದಿಯಲ್ಲಿ ಎದುರಾದ ಹುಟ್ಟಿದ ಹಬ್ಬದ ಸಂಭ್ರಮವನ್ನೊಮ್ಮೆ ಕೇಳಿಬಿಡಿ - ಶುಭೋದಯದ ಅಮೃತಘಳಿಗೆಯಲ್ಲಿ ತಂದೆ ವಾಯುದೇವ ನನಗೆ ಗೆಳೆಯನಾಗಿ ದಕ್ಕಿದರೆ, ಸಂಜೆ ಅವನ ಪುತ್ರ ಆಂಜನೇಯ ಆತ್ಮಸಖನಾಗಿ ಹತ್ತಿರವಾಗಿಬಿಡುತ್ತಾನೆ. ದರ್ಶನ ಪಡೆದು ಹೊರಟ ಆಂಜನೇಯನ ದೇವಾಲಯದ ಹಿಂಭಾಗದ ಕಾಂಕ್ರೀಟ್ ರಸ್ತೆ ನನಗೆ ಅಕ್ಷರಶಃ ವೇದಿಕೆಯಾಗಿಯೇ ಕಂಡಿತು. ಆ ರಸ್ತೆಯ ಬದಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತುಕೊಂಡಿದ್ದ ಆಲ, ಬೇವುಗಳೆಂಬ ಕಿಶೋರಿಯರು ಒಡಲನ್ನಲ್ಲಾಡಿಸಿಕೊಂಡು ಬಳುಕಿನ ಸ್ವಾಗತ ಕೋರಿದವು.
ಊರನ್ನು ದಾಟುವ ಧಾವಂತದಿಂದ ಹೊರಟವನನ್ನು ತಡೆದು, ಹುಲ್ಲಿನ ಗುಡಿಸಲಿನಲ್ಲಿದ್ದ ಜಾತಿ, ಮತ, ಪಂಥಗಳಿಂದಾಚೆ ಬದುಕುತ್ತಿದ್ದ ಸಾಕಿ ಹಾಗೂ ಸೊಸೆ ಸೇರಿ ಕುಶಲೋಪರಿ ವಿಚಾರಿಸಿದರು. ಸ್ವಲ್ಪ ಮುಂದೆ ಹೋದರೆ, ಹೊಲದಲ್ಲಿ ದುಡಿದು ಬಂದು ಎತ್ತುಗಳ ಆಯಾಸವನ್ನು ತನ್ನ ಆಪ್ತಮಾತುಗಳಿಂದ ಪರಿಹರಿಸುತ್ತಿದ್ದ ರಂಗಪ್ಪಗೌಡರು ಬಾಗಿ ನಮನಗಳನ್ನು ಸಲ್ಲಿಸಿದರು. ಆ ಹಾದಿಯ ಮಧ್ಯದಲ್ಲಿ ತನ್ನ ಬೆಳಕಿಲ್ಲದ ಗುಡಿಸಲ ಮುಂದೆ, ತಲೆಯ ಮೇಲೆ ಬಿಳಿ ರುಮಾಲಿನ ಮುಕುಟವನ್ನಿಟ್ಟುಕೊಂಡು, ಬೀಡಿಯನ್ನು ಸೇದುತ್ತಾ ಕುಳಿತ ಕುರಿಕಾಯುವ ಯಮನಪ್ಪ ಕುಳಿತಲ್ಲಿಂದಲೇ ಕೈಮುಗಿದನು. ಪಯಣ ಮುಂದುವರೆದು ಈ ಹಾದಿಯ ಕೊನೆಗೆ ಬಂದಾಗ ನನ್ನ ಸಾಕಿಯಂತೆಯೇ ನಡೆಯಲಾಗದ ಕೀಲುಗಳನ್ನು ಮೊಣಕಾಲಿನಲ್ಲಿಟ್ಟುಕೊಂಡು, ಅಸಂಖ್ಯಾತ ನೋವುಗಳನ್ನುಂಡ ಹೆಗ್ಗುರುತಾದ ಹಣೆಯ ಗೆರೆಗಳ ಮಧ್ಯೆ ಎದ್ದು ಕಾಣುವ ವಿಭೂತಿಯನ್ನು ಧರಿಸಿ ಶಿವನಾಮ ಜಪಿಸುತ್ತಾ, ತನ್ನ ಗುಡಿಸಲಿನರಮನೆಯ ಮುಂದೆ ಕೌದಿ ಹಾಸಿಕೊಂಡು ಕಾಲುಚಾಚಿ ಕುಳಿತಿದ್ದ ಹನಮವ್ವಜ್ಜಿ ತನ್ನೆರಡೂ ಕೈಗಳನ್ನೆತ್ತಿ ನಮಸ್ಕಾರಗಳನ್ನು ಸಲ್ಲಿಸಿದಳು. ಭೇದವಿಲ್ಲದೇ ಮಾತಿಗಿಳಿಯುವ ಈ ಜನಪದರ ಅನರ್ಘ್ಯ ವಾತ್ಸಲ್ಯದ ಮಾಯೆಗೆ ಶರಣು ಶರಣೆಂದೆ.ಇದೆಂತಹ ಅಪೂರ್ವ ಸೌಭಾಗ್ಯವೆಂದೆನಿಸುತ್ತದೆ ನನಗೆ. ಎಲ್ಲರಿಗೂ ತಲೆದೂಗಿ ಆಶೀರ್ವಾದ ಬೇಡಿದೆ. ಲೌಕಿಕ ಪಯಣದಲ್ಲಿ ಎದುರಾದ ಮಾತೃಹೃದಯವುಳ್ಳ ಇವರೆಲ್ಲರ ಹುಟ್ಟುಗಳಿಗೂ ಕ್ಯಾಲೆಂಡರಿನಲ್ಲಿ ಖಚಿತವಾದ ದಿನವಿಲ್ಲ. ಇವರಿಗೆಂದು ಕೇಕು ತಂದಿಟ್ಟು ಸಂಭ್ರಮಿಸುವ ಜೀವಗಳನ್ನು ನಾನಿನ್ನೂ ಕಂಡಿಲ್ಲ. ವರ್ಷವಿಡೀ ಮಣ್ಣಿನಲ್ಲಿ ಮಣ್ಣಾಗಿ ಕೃಷಿಗೈದಾಗ ತುಂಬಿ ಬರುವ ಫಸಲು ಕೈಸೇರಿದ ದಿನವೇ ಇವರೆಲ್ಲರ ಹುಟ್ಟುಹಬ್ಬ. ಒಡಲುಗೊಂಡು ಬೀದಿಯ ಬದಿಯಲ್ಲಿದ್ದರೂ ಕಡಲಿನಂತಹ ಬದುಕನ್ನು ಈಜಿದವರಿವರು ಎಂದುಕೊಂಡು ಮನದಲ್ಲಿಯೇ ನಮನಗಳನ್ನು ಸಲ್ಲಿಸಿದೆ. ವಿಹಾರದ ಮಧ್ಯದಲ್ಲಿ ಮಳೆಗಾಲದ ಹಾರುವ ಕೀಟಗಳು ನನ್ನ ಜನುಮದಿನದ ಸವಿನೆನಪಿನ ಕಾಣಿಕೆಯಾಗಿ ತಾವು ತಂದ ಕಿರೀಟವನ್ನಿಡಲು ಧಾವಿಸಿದಂತೆ ತಲೆಗೆ ಮುತ್ತಿಕೊಂಡವು. "ಅಯ್ಯಾ ಗೆಳೆಯ ಕೀಟಗಳೆ ಬೇಡಪ್ಪಾ ಬೇಡ.. ಇದೆಲ್ಲ ಮುಜುಗರದ ಸಂಗತಿ ನನಗೆ..." ಎಂದು ಪರಿಪರಿಯಾಗಿ ಹೇಳಿದರೂ ಬಿಡದೇ ನನ್ನನ್ನು ಕಿಲೋಮೀಟರುಗಟ್ಟಲೇ ಬೆನ್ನು ಬಿಡದೇ ಹಾರುತ್ತಲೇ ಹಿಂಬಾಲಿಸಿದವು. ಕತ್ತಲಾಯಿತೆಂದು ಊರಿಗಭಿಮುಖವಾಗಿ ಹೊರಳಿದೆ. ಕೀಟಗಳೂ ದಿಕ್ಕು ಬದಲಿಸಿದವು. ದಾರಿಯಲ್ಲಿ ಸಿಕ್ಕ ಕೇರಿಯ ರಾಮಪ್ಪನೊಂದಿಗೆ ಕೊರೊನಾ ಕಾಲಘಟ್ಟದ ಮಕ್ಕಳ ಶಿಕ್ಷಣದ ಬಗ್ಗೆ ಮಥಿಸುತ್ತಾ ದೌಡಾಯಿಸಿದೆ. ಕೆಲಹೊತ್ತಿನ ನಂತರ ಊರು ಸಮೀಪಿಸಿತು. ಕೀಟಗಳು ಬೀಳ್ಕೊಟ್ಟವು. ವಿದಾಯ ಹೇಳಿ ಮನೆಯೆಡೆಗೆ ತೆರಳಿದೆ. ಸುತ್ತಲ ಸಮಾಜ, ಮಳೆಗಾಲದಲ್ಲಿ ಹಸಿರುಟ್ಟು ನಿಂತ ಪ್ರಕೃತಿ, ಬೆಂಬತ್ತಿ ಗೌರವಿಸುವ ಕೀಟಜಗತ್ತು, ಸಾಮಾಜಿಕ ಜಾಲತಾಣಗಳಲ್ಲಿನ ಪ್ರೀತಿಪಾತ್ರರ ಗುಣಗಾನ ಸಾಕಲ್ಲವೇ ಹಬ್ಬ ಹುರಿಗೊಂಡು ತಾರಕಕ್ಕೇರಲು. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಈ ಹಾದಿಯಲ್ಲಿ ನಾನು ಒಡಲುಗೊಂಡ ದಿನದ ಹಬ್ಬ ಸಹಜವಾಗಿಯೇ ಸಾಕಾರಗೊಂಡಿತ್ತು. ಸಾರ್ಥಕತೆಯ ಭಾವವನ್ನು ಹೃದಯದೊಳಿರಿಸಿ ಧನ್ಯೋಸ್ಮಿ ಎಂದುಕೊಂಡೆ. ರಾತ್ರಿ ಗೆಳೆಯರೊಬ್ಬರು ಹಂಚಿಕೊಂಡ ನನ್ನದೇ ಕವಿತೆ, ಈ ದುರಿತ ಕಾಲದಲ್ಲಿ ಹೊಸ ಆಶಯವನ್ನು ಧ್ವನಿಸುವಂತಿದೆಯೆಂದೆನಿಸಿತು-
ರಕ್ತಕಣಗಳೂ ವಿಭಜನೆಯಾಗಿವೆ
ಮತ, ಧರ್ಮ, ಜಾತಿ , ವರ್ಗಗಳ ತೊಳಲಾಟದೊಳಗೆ ನಲುಗಿ
ಯಾವ ಹೊತ್ತಿಗೆ ಅದಾವ ಸಿದ್ಧಾಂತ
ಬಂದಪ್ಪಳಿಸಿ ಒಳಗಿಳಿಯುವುದೋ
ಆತ್ಮದೊಳಗೆ ಮರುಗಿ.....
Sunday, 14 June 2020
ಸಂವೇದನೆಗಳೊಂದಿಗೆ ಸಂವಾದ...
ಸಂವೇದನೆಗಳೊಂದಿಗೆ ಸಂವಾದ...
ಬತ್ತಿಹೋಗಿರುವ ಸಂವೇದನೆಗಳೆ
ಮತ್ತೆ ಚಿಗುರುವಿರೆಂದು ?
ಹೆದ್ದಾರಿಯ ಬದಿಯಲ್ಲಿ ಉರುಳಿ
ಬಿದ್ದ ವೇಗದ ಲಾರಿ
ಹೊರಟಿತ್ತು ಬಯಕೆಗಳನ್ನೇ
ತುಂಬಿ ಚೆಲ್ಲುವಂತೆ ಹೇರಿ
ಮಾನವಧರ್ಮವೆಲ್ಲಿದೆ ?
ಬೆನ್ನುಬಿದ್ದ ಕರ್ಮವೆಲ್ಲಿದೆ ?
ಬಿದ್ದಿದೆಯಲ್ಲ ಕಾಲು ಮುರಿದುಕೊಂಡು
ಅನಾಥವಾಗಿ ಲಾರಿಯ ಕೆಳಗೆ
ಮತ್ತೆಂದೂ ಮೇಲೇಳದಂತೆ ಹಾಸಿದ
ವ್ಯವಹಾರದ ನೆಲಕೆ ಒರಗಿ
ಕಣ್ಣು,ಬಾಹುಗಳನಗಲಿಸಿ ದೊರೆತಷ್ಟು
ಬಾಚಿಕೊಳ್ಳುವುದೊಂದೇ ತವಕ
ಸೋಪು, ಎಣ್ಣೆ, ಡೀಸೆಲ್,ಸಿಮೆಂಟು
ಶಾಂಪೂ ಬಗೆ ಬಗೆಯ ಬಯಕೆಗಳ ರೂಪಕ
ಆಸೆಗಳೊಂದಿಗಿನ ಯುದ್ಧದಲ್ಲಿ
ಎಲ್ಲವೂ ಸರಿ ಸಮಾನ!
ಮಾನವೀಯತೆಯೂ, ಕ್ರೌರ್ಯವೂ.
ಬಯಕೆಗಳಿಗೆ ಅಳಿವಿಲ್ಲ;
ಸಾವು ನೋವುಗಳಿಗೆ ಬೆಲೆಯಿಲ್ಲ
ಮಾರುಕಟ್ಟೆಯ ಚಕ್ರವ್ಯೂಹದೊಳಗೆ
ಅರುಣೋದಯವೂ ಲಾಭವೇ
ಮಾರಾಟಕ್ಕಿಟ್ಟರೆ ತಾಪ, ಬೆಳಕು
ಕೊರಗುತ್ತಿದೆ ಹೀಗೆ ನಲುಗಾಟವೇ
ತುಂಬಿದ ಮಾನವ ಬದುಕು
ಬಂಧನದ ಜಗವೆಲ್ಲಾ ಹಣದ
ಮಾಯೆಯೊಳಗಿನ ಹುಳುಕು
ಲಾರಿಯವನ ಆರ್ತನಾದವೂ ಕ್ಷೀಣ
ಬೆಂಬೆಡಗಿನ ಯುಗದ ಗಿಜಿಗಿಡುವ
ವಾಂಛೆಗಳನಾಳುವ ಬಜಾರಿನ ರಣಭೇರಿಯ ಮುಂದೆ
ಸತ್ತು ಹೋಗಿರುವ ನಿಮಗೆಲ್ಲಿದೆ ಮದ್ದು
ಜಗದ ಮಂದಿಗೆ ಜಾಹೀರಾತುಗಳೇ ಮುದ್ದು
ಆಳಿ ಬಿಡಿ ಭುವನವ
ನಿಮ್ಮ ಕಾಲವಿರುವತನಕ
ಬೆಕ್ಕಿನ ಕೊರಳಿಗೆ ಗೆಜ್ಜೆ ಕಟ್ಟುವ ತನಕ
ವಿಷದ ಚಕ್ರವ್ಯೂಹದೊಳಗೆ
ಮಾನವತೆಯ ಅಭಿಮನ್ಯು
ಒಳಹೊಕ್ಕಿರುವನು ಅರಿವಿದ್ದರೂ ಇಲ್ಲದವನಂತೆ
ಹೊರಬರುವುದೆಂತೋ ಕ್ಷಮಿಸಿಬಿಡಿ
ಒಮ್ಮೆ ಅಪ್ಪಿ ಅರ್ಜುನನಂತೆ.
Monday, 25 May 2020
ಭೃಂಗದ ಬೆನ್ನೇರಿ...
ಭೃಂಗದ ಬೆನ್ನೇರಿ...
ಒಂದು ಶುಭೋದಯದಲ್ಲಿ ಮನೆಯಂಗಳದಲ್ಲಿ ಬೆಳೆದು ನಿಂತ ಬೇವು, ಮಾವು, ಬದಾಮಿ, ಕಣಗಿಲೆ, ಜಾಜಿ, ಮಲ್ಲಿಗೆ, ಹಲಸಿನ ಸಸಿಗಳೊಂದಿಗೆ ಕುಶಲೋಪರಿಗಿಳಿದು ಮಾತನಾಡುತ್ತಿದ್ದೆ. ಬೇಸಿಗೆಯಾದ್ದರಿಂದ ಹಿಂದಿನ ದಿನವೆಲ್ಲಾ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ತಲೆಯಾದಿಯಾಗಿ ಅಂಗಾಂಗಳನ್ನೆಲ್ಲಾ ಕಾಯಿಸಿಕೊಂಡು ಸುಸ್ತಾದಂತಿದ್ದ ಸಸ್ಯಗಳ ಕೈಹಿಡಿದು ಸವರಿ, ಸಂತೈಸುತ್ತಾ, ರಾತ್ರಿಯೆಲ್ಲಾ ತಂಗಾಳಿಯಲ್ಲಿ ನೆನೆದು ತಂಪಾದ ಬೆಳದಿಂಗಳ ಅನುಭವಗಳನ್ನು ಹೆಕ್ಕಿ ತೆಗೆದು ತರುಲತೆಗಳ ಮನಸ್ಸನ್ನು ಮುದಗೊಳಿಸಬೇಕೆನ್ನಿಸಿ, ಒಂದೊಂದರ ಹತ್ತಿರವೂ ನಿಂತು, ರಂಬೆ, ಕೊಂಬೆ, ಎಲೆ, ಚಿಗುರು, ಹೂಗಳ ಮೈದಡವಿ ನೇವರಿಸುತ್ತಾ, ತಣಿರಸದಂತಿದ್ದ ತಂಪು ನೀರನ್ನೆರೆದು ಸಲ್ಲಾಪಕ್ಕಿಳಿದೆ. ಸಾವರಿಸಿಕೊಂಡು ಬಾಗಿ ಅಪ್ಪಿಕೊಳ್ಳುತ್ತಿರುವಂತೆ, ಬೀಸುತ್ತಿರುವ ಮರುಳ ಸುಳಿಗಾಳಿಗೆ ತಮ್ಮ ಅಂಗಾಂಗಳನ್ನೆಲ್ಲಾ ಮುಂದೆ ಚಾಚಿ ಧನ್ಯವಾದಗಳನ್ನು ಹೇಳುತ್ತಿರುವಂತೆ ಭಾಸವಾಗಿ, ಧನ್ಯತೆಯಿಂದ ಕಣ್ತುಂಬಿಕೊಂಡೆ. ಇಬ್ಬನಿಯಿಲ್ಲದೇ ಶುಷ್ಕವಾದಂತಿದ್ದ ವಾತಾವರಣಕ್ಕೀಗ, ಕರುಳಕುಡಿಯಂತಿದ್ದ ಸಸ್ಯಗಳ ಈ ಪ್ರೀತಿಯ ರೀತಿ ಕಂಡಾಗ, ಗೊತ್ತಿಲ್ಲದೇ ನನ್ನೊಳಗೆ ಹುಟ್ಟಿದ ಆನಂದಭಾಷ್ಪಗಳು ಸೇರಿಕೊಂಡು ಸನ್ನಿವೇಶವನ್ನು ಆರ್ದ್ರವಾಗಿಸಿತು. ಕ್ಷಣ ಹೊತ್ತು ಭಾವುಕನಾದೆ. ಆ ಬಗೆ ಬಗೆಯ ಫಲ-ಪುಷ್ಪ ಸಸಿಗಳ ಬೇರಿಗೆರೆದ ಜಲಾಮೃತ ನಿಧಾನವಾಗಿ ಇಂಗಿ ಹೋಗುವಂತೆ, ಕ್ರಮೇಣ ಕಣ್ಣಹನಿಗಳೂ ಎದೆಯೊಳಗಿಳಿದು ಹಾಗೇ ಬತ್ತಿಹೋದವು. ಮತ್ತೆ ಶುಭೋದಯದ ಅಂಗಣಕ್ಕಿಳಿದೆ. ನೇಸರನ ಕಿರಣಗಳ ರಂಗೋಲಿ, ಅಂಗಳದಲ್ಲಿನ ಸಸ್ಯಸಂಕುಲ, ಕುಸುಮಗಳ ಸುತ್ತವೇ ನೆರೆದು ಮಧುವನ್ನರಸಿ ಹೊರಟ ದುಂಬಿಗಳ ಬಳಗ, ರಂಗುರಂಗಿನ ಚಾಮರದಂತಿದ್ದ ಚಿಟ್ಟೆಯ ರೆಕ್ಕೆಗಳ ಬೀಸುವಿಕೆ, ಗಿಳಿ, ಕೋಗಿಲೆ, ಗುಬ್ಬಿಗಳ ಉದಯಗಾನ, ಹೀಗೆ ಎಲ್ಲವೂ, ಎಲ್ಲರನ್ನೂ ಆಮಂತ್ರಿಸಿ, ಕರೆದು ಮೇಳೈಸಿದಂತಿತ್ತು ಆ ಶುಭೋದಯದ ದಿಬ್ಬಣಕ್ಕೆ. ಬಹುಶಃ ನಾವೆಲ್ಲರೂ ಆಚರಿಸುವ ಯೋಜಿತ ಹಬ್ಬ, ಉತ್ಸವಗಳಲ್ಲಿಯೂ ಈ ಮಟ್ಟದ ಪ್ರಕೃತಿ ಸಹಜ ಮೇಳೈಸುವಿಕೆ ಅಸಾಧ್ಯವೇನೋ ? ಅಂತೂ, ಪ್ರಕೃತಿಯ ಮೆರವಣಿಗೆಯ ಸಂಭ್ರಮ ಮನೆ ಮಾಡಿತು. ಆಕಸ್ಮಾತ್ ಆಗಿ ಅಂದು ಸರಿಯಾದ ಸಮಯಕ್ಕೆ ದಾಂಗುಡಿಯಿಟ್ಟ ಮಂಗಗಳಿಂದಾಗಿ, ಅದು ಮಂಗಣ್ಞನ ಮದುವೆಯ ದಿಬ್ಬಣವಾಗಿ ಪರಿವರ್ತನೆಯೂ ಆಗಿಹೋಯಿತು. ಮಂಗಗಳ ಚೆಲ್ಲಾಟದ ಮದುವೆಯೆಂದರೆ ಕೇಳಬೇಕೆ ? ಎಲೆ, ಹೂ, ಹಣ್ಣು, ಕಾಯಿ, ತಾಂಬೂಲಗಳನ್ನು ಸಂಗ್ರಹಿಸುವುದೇ ಬೇಡ. ಆಗಸದಲ್ಲಿ ನಿಂತು ಆಶೀರ್ವದಿಸುತ್ತಿರುವ ದೇವತೆಗಳ ಕೈಯ್ಯಿಂದ ಉದುರುತ್ತಿರುವಂತೆ, ಸಕಲ ಮಂಗಳ ಪರಿಕರಗಳೆಲ್ಲವೂ ಧರೆಗೆ ಇಳಿಯಹತ್ತಿದವು. ಕೆಲವೊಮ್ಮೆ ಏಕಕಾಲಕ್ಕೆ, ಮತ್ತೊಮ್ಮೆ ಒಂದಾದ ನಂತರವೊಂದರಂತೆ. ಆಂಜನೇಯನ ಕಾಟದಿಂದ ಬೇಸತ್ತು ಹೀಗೆ ಒಲ್ಲದ ಮನಸ್ಸಿನಿಂದ, ಕಿರುಕುಳದ ಮುನಿಸಿನಿಂದ, ಒತ್ತಾಯಪೂರ್ವಕವಾಗಿ, ತಮ್ಮಲ್ಲಿರುವ ಪರ್ಣಫಲಪುಷ್ಪಗಳ ಚೀಲ ಬರಿದಾಗುವವರೆಗೂ ಮಂತ್ರಾಕ್ಷತೆಯನ್ನು ಸಲ್ಲಿಸಿ ಸಂಭ್ರಮಪಟ್ಟಂತೆ ಶುಭಾಶಯ ಹೇಳಿ ಸುಮ್ಮನಾಗಿಬಿಟ್ಟವು ಗಿಡಮರ, ಕೀಟ, ಪಕ್ಷಿ ಸಂಕುಲಗಳು.
ವಸಂತದ ಒಂದು ಶುಭೋದಯದ ವಿಶೇಷ ಹಬ್ಬವೊಂದು ಕಣ್ಣೆದುರೇ ಅಂತರಂಗದಲ್ಲಿ ಅಚ್ಚೊತ್ತಿದಂತೆ ನಡೆದುಹೋಯಿತು. ಇದನ್ನು ಮಂಗಣ್ಣನ ಮದುವೆಯೆಂದೋ, ನೇಸರನ ಮೆರವಣಿಗೆಯೆಂದೋ, ಇಲ್ಲವೇ ಪ್ರತಿನಿತ್ಯ ನಡೆಯುವ ಪ್ರಕೃತಿಯ ನಿತ್ಯೋತ್ಸವವೆಂದಾದರೂ ಕರೆಯಿರಿ. ಒಟ್ಟಂದದಲ್ಲಿ ಮನೆಯಂಗಳದಲ್ಲಂತೂ ಚೈತ್ರವು ಹಬ್ಬಿಕೊಂಡ ಹಬ್ಬವೊಂದು ಸದ್ದಿಲ್ಲದೇ ಹೀಗೆ ಜರುಗಿಹೋಯಿತು. ಪಾಲ್ಗೊಂಡವರಲ್ಲಿ ನಾನೊಬ್ಬನೇ ಮನುಷ್ಯಜಾತಿ ಎನ್ನುವುದೇ ಹೆಮ್ಮೆಯ ಸಂಗತಿ!. ಅಲೌಕಿಕ ಭಾವಸಂತೃಪ್ತಿಯನ್ನನುಭವಿಸಿದ ಅನುಭಾವಿಯಾಗಿ ಸಂಭ್ರಮಿಸಿದೆ. ಹಬ್ಬವೆಲ್ಲಾ ಮುಗಿದು ಹೋಗಿ, ಕೆಲಹೊತ್ತಿನ ನಂತರ, ಧ್ಯಾನದಂತಹ ಮೌನ ಆವರಿಸಿತು ಅಂಗಳದ ಉದ್ಯಾನವನದಲ್ಲಿ. ಜೊತೆ ಜೊತೆಗೆ ಎದೆಯಾಳದಲ್ಲಿಯೂ. ಧೋ ಎಂದು ಸುರಿದ ಮಳೆಯ ನಂತರವೂ ತೊಟ್ಟಿಕ್ಕುವ ಹನಿಗಳು ಆಗೊಮ್ಮೆ ಈಗೊಮ್ಮೆ ಇಳೆಗಿಳಿಯುವಂತೆ, ಮೌನದೊಳಗಿಂದಲೇ ಹುಟ್ಟಿದ ನಾದದ ರೀತಿಯಲ್ಲಿ ಎಲ್ಲಿಂದಲೋ ಬಂದ ದುಂಬಿಗಳ ಝೇಂಕಾರ ಉದ್ಯಾನವನದಲ್ಲಿ ಅನುರಣಿಸಹತ್ತಿತು. ಪರೀಕ್ಷಿಸಿದೆ. ಹೌದು, ಜೇನುಹುಳುಗಳೇ ಅವು. ಅಪರೂಪದ ಮಿಂಚುಹುಳುಗಳಂತೆ ಅಲ್ಲೊಂದು ಇಲ್ಲೊಂದು ವಿರಳವಾಗಿ ಕಂಡುಬರುತ್ತಿದ್ದ ದುಂಬಿಗಳಿಂದು, ತಮ್ಮ ಮನೆ ಮಂದಿಯೊಂದಿಗೆ ಧಾವಿಸಿದ್ದನ್ನು ಗಮನಿಸಿದರೆ, ಇಲ್ಲೋ ಎಲ್ಲೋ ನೆರೆದು ಕುಳಿತ ಇವುಗಳ ಜಾತ್ರೆಯ ಸುಳಿವಿರಬೇಕಿದು ಎಂದುಕೊಂಡು ಉದ್ಯಾನವನವನ್ನೆಲ್ಲಾ ತಡಕಾಡಿದೆ. ಯಾವ ಸುಳಿವೂ ದಕ್ಕಲಿಲ್ಲ. ನದಿ ಮೂಲ, ಋಷಿ ಮೂಲಗಳನ್ನು ಹುಡುಕಿ ಹೋಗುವಂತೆ, ದುಂಬಿಗಳು ಹರಿದುಬರುತ್ತಿದ್ದ ಮೂಲವನ್ನು ಅನ್ವೇಷಿಸಿ ಹೊರಟೆ. ಕೊಲಂಬಸ್ ನಿಗಾದ ಶೋಧನೆಯ ಅನುಭವವೇ ನನಗೂ ಆಯಿತು. ಅವನು ಗುಲಾಬಿ ಯಿಂದಲಂಕರಿಸಿದ ಅಮೇರಿಕನ್ನರ ನಾಡು ಕಂಡುಹಿಡಿದ. ನಾನಿಲ್ಲಿ ಗುಂಪೆ ಹಾಕಿದ ಒಣ ಕೊರಡುಗಳ ಸಂದಿಯೊಳಗೆ ಮೈಮೇಲೆಲ್ಲಾ ಕಪ್ಪು ಹಾಗೂ ಕೇಸರ ವರ್ಣದ ಪಟ್ಟೆಗಳೆಂಬ ನಿಸರ್ಗ ಸಹಜ ಟ್ಯಾಟೂ ಹಾಕಿಸಿಕೊಂಡ ಜೇನ್ನೊಣಗಳ ಗೂಡನ್ನು ಶೋಧಿಸಿದೆ!. ಅಂಗಳದಲ್ಲಿ ಗುಡ್ಡೆ ಹಾಕಿದ ಕೊರಡುಗಳ ಸಂದಿಯೊಳಗೆ ಜೇನುದುಂಬಿಗಳ ಸಂಸಾರವು ಕಟ್ಟಿದ ಗೂಡೊಂದು ಚಿಕ್ಕದಾದ ಕೊರಡು ತುಂಡಿನ ಆಧಾರದಿಂದ, ಬಾವಲಿಯೊಂದು ಮರದ ರೆಂಬೆಗೆ ತಲೆ ಕೆಳಗಾಗಿ ಜೋತುಬಿದ್ದಂತೆ, ನೇತಾಡುತ್ತಿತ್ತು. ಅಬ್ಬಾ! ಅದೆಂತಹ ಗಿಜಿಗಿಡುವ ದುಂಬಿಗಳ ಜಾತ್ರೆ. ಅತ್ತ ಕೊರೊನಾದಿಂದ ಜನರೆಲ್ಲಾ ಹೊರಬರದೇ ಬೀದಿಗಳೆಲ್ಲಾ ಸ್ಮಶಾನ ಮೌನವನ್ನನುಭವಿಸುತ್ತಿದ್ದರೆ, ಇತ್ತ ಯಾವ ಕೊರೊನಾನೂ ಲೆಕ್ಕಿಸದೇ , ಒಬ್ಬರ ಮೇಲೊಬ್ಬರು ಬಿದ್ದು ತರಕಾರಿಯನ್ನೋ, ಹಾಲನ್ನೋ, ದಿನಸಿಯನ್ನೋ, ಸಿಕ್ಕೀತೋ ಇಲ್ಲವೋ ಎಂಬಂತೆ ಧಾವಂತದಿಂದ ಕೊಂಡುಕೊಳ್ಳುವ ಜನಜಾತ್ರೆಯ ತೆರದಿ, ಗೂಡೂ ಕಾಣದಂತೆ ಗಿಜಿಗಿಡುತ್ತಿದ್ದ ದುಂಬಿಗಳ ಜಾತ್ರೆಯನ್ನು ಕಂಡ ನನಗೆ ವಿಸ್ಮಯವಾಯಿತು. ಹೊರಗಡೆ ಕೊರೊನಾ ಕಾರಣದ ಕರ್ಫ್ಯೂ ಜಾರಿಯಲ್ಲಿದ್ದರೆ, ಮನೆಯಂಗಳದ ಕೊರಡ ಸಂದಿಯಲ್ಲಿ ಈ ದುಂಬಿಗಳು ಮೇಲೆ ಬಿದ್ದು, ಒದ್ದು ಗುದ್ದಾಡುತ್ತಲೇ, ಮಧುವೆಂಬ ದೇವಲೋಕದಲ್ಲೂ ಸಿಗದ ಮೃತ್ಯುಂಜಯ ಅಮೃತದ ಮಡುವಿಗಾಗಿ ಯಾತ್ರೆ ಹೊರಟಿಂತಿದ್ದವು.
ಇದೇನು ಲೌಕಿಕದಿಂದ ಪಾರಮಾರ್ಥಿಕತೆಯತ್ತ ಪಯಣ ಹೊರಟಿತಲ್ಲ ಎಂದು ಹೀಗಳೆಯದಿರಿ. ಹೌದು, ಇದೊಂದು ಇಹದಿಂದ ಪರದೆಡೆಗಿನ ಮಧುರ ಪಯಣವೆಂತಲೇ ನಾನು ಪರಿಭಾವಿಸಿದ್ದೇನೆ. ಪ್ರತಿ ಚದರ ಕಿಲೋಮೀಟರಿನಲ್ಲಿ ಕೇವಲ ೩೮೨ ರಂತೆ ಸರಾಸರಿ ಜನಸಾಂದ್ರತೆಯಲ್ಲಿ ಹಬ್ಬಿಕೊಂಡರೂ ಬಿಡದೇ ಹಣ, ಅಧಿಕಾರ, ಆಸ್ತಿ, ಅಂತಸ್ತು, ಜಾತಿ, ಧರ್ಮ,ಮತ, ಪಂಗಡ, ವರ್ಣಗಳೆಂದು ಇಲ್ಲದ ಕಾರಣ ಹುಡುಕಿ, ಕೆಲವೊಮ್ಮೆ ಜಗಳವಾಡಲು ಹವಣಿಸುವ ನಾವು, ಈ ಅಂಗೈಯಷ್ಟಿರುವ ಗಾತ್ರದಲ್ಲಿಯೇ ಸಾವಿರಾರು ಮನೆ - ಸಂಸಾರಗಳನ್ನು ಹೊಂದಿ ಪರಸ್ಪರ, ಸಹಬಾಳ್ವೆ, ಪ್ರೀತಿ, ವಾತ್ಸಲ್ಯ, ಪರಿಶ್ರಮ, ಪರೋಪಕಾರಗಳಿಂದ ಕಂಗೊಳಿಸುವ ಜೇನುಗೂಡಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂಬುದೇ ನನ್ನ ಅಂಬೋಣ. ಇರಲಿ, ಮತ್ತೆ ಗೂಡಿಗೆ ಬರೋಣ. ಹಾಗೆ 'ಯುರೇಕಾ' ಎಂದು ಜೇನುಗೂಡನ್ನು ಸಂಶೋಧಿಸಿದವನೇ ಯಾವ ವೈರಸ್, ಕರ್ಫ್ಯೂ, ಕ್ವಾರೆಂಟೈನ್, ಐಸೋಲೇಶನ್ ಗಳ ಭಯವಿಲ್ಲದೇ ಹೀಗೆ ತಂಡೋಪತಂಡವಾಗಿ ಮುಗಿಬಿದ್ದು, ಕೂತಿರುವ ದುಂಬಿಗಳನ್ನು ಕಂಡು, ಪೋಲೀಸರನ್ನು ಕರೆಯಬೇಕೆನ್ನಿಸಿತು. ಆದರೆ ಹೊತ್ತಾದಂತೆ, ಈ ದುಂಬಿಗಳೂ ಕೂಡ ಯಾರ ಸಂಪರ್ಕಕ್ಕೂ ಬಾರದೇ ತಮ್ಮಷ್ಟಕ್ಕೆ ತಾವೇ ತಮ್ಮ ಮನೆಯೊಳಗೆ ನಿಶ್ವಿಂತೆಯಿಂದ ಕೂರುತ್ತಿವೆಯಲ್ಲವೇ? ಇದಕ್ಕಿಂತ ಮುನ್ನೆಚ್ಚರಿಕೆ ಇನ್ನೇನಿದೆ ಅಲ್ಲವೇ ಎಂದೆನಿಸಿ ಬೆಪ್ಪಾಗಿ ಯೋಚಿಸಿ ಸುಮ್ಮನಾದೆ. ಜೇನ್ನೊಣಗಳಿಗೆ ಈ ಕಾನೂನು ಅನ್ವಯವಾಗುತ್ತದೋ ಇಲ್ಲವೋ ಎಂಬ ಗೊಂದಲವೂ ಮೂಡಿ, ಯೋಚಿಸಿ ಇಲ್ಲವೆಂದು ಖಾತ್ರಿಪಡಿಸಿಕೊಂಡೆ. ಅಷ್ಟಾಗಿಯೂ ದುಂಬಿಗಳು ಇಷ್ಟೇ ಗಾತ್ರದ ಗೂಡೊಳಗಿದ್ದು ಏನು ಮಾಡುತ್ತವೆ ಎಂಬ ಕುತೂಹಲವನ್ನಿಟ್ಟುಕೊಂಡು ಪರೀಕ್ಷಿಸಲೇಬೇಕೆಂದು ಮತ್ತೆ ಗೂಡಿನತ್ತ ತೆರಳಿದೆ. ಮಧ್ಯಾಹ್ನದ ಬಿಸಿಲು ನೆತ್ತಿಗೇರಿತ್ತು. ಪ್ರಾತಃಕಾಲದಲೆದ್ದು ಕುಸುಮಗಳ ಅಂತರಂಗವನ್ನರಸಿ, ಅಲ್ಲಿ ಮಡುಗಟ್ಟಿದ ಮಧುವನ್ನು ಒಂದಿನಿತೂ ಬಿಡದಂತೆ ಹೀರಿ, ತನ್ನೊಡಲ ಪಾತ್ರೆಯೊಳಗೆ ತುಂಬಿಕೊಂಡು ಹಾರಿ, ಗೂಡಿನ ಗುಡಿಯೊಳಗೆ ನೈವೇದ್ಯ ಮಾಡಿ ಉಂಡು ಉಳಿದದ್ದನ್ನು ತಮ್ಮವರ ದಾಸೋಹಕ್ಕಾಗಿ ತೆಗೆದಿಟ್ಟರೆ ಮುಗಿದುಹೋಯಿತು, ದುಂಬಿಗಳ ಅಂದಿನ ಶ್ರದ್ಧೆಯ ಕಾಯಕದ ಕೈಲಾಸ. ದವನ, ಚೆಂಡು, ಸಂಪಿಗೆ, ನೀಲ, ದಾಸವಾಳ, ಗುಲಾಬಿ, ಕಣಗಿಲೆ,ಮಲ್ಲಿಗೆ, ಮಾವು ಇತ್ಯಾದಿ ಹೀಗೆ ಸುತ್ತ ಹತ್ತಲ್ಲದೇ ಮತ್ತೊಂದು ಕುಸುಮದ ಎದೆಗೂ ಹೊಂಚುಹಾಕಿ ಹೀರಿ ಕುಡಿದು, ಸಾಲದ್ದಕ್ಕೆ ಹೊತ್ತು ತರುವ ಮಧುಪ್ರಿಯರಂತೆ, ಮಧುವನ್ನು ಹೀರಿ ಮತ್ತೇರಿಸಿಕೊಂಡು ತೂಗಾಡುತ್ತಲೇ ತಮ್ಮದೇ ಮನೆಗೆ ಹಾರಿ ಬರುವ ದುಂಬಿಗಳ ಕಥೆ ವಿಸ್ಮಯ ಮೂಡಿಸುವಂತಹದ್ದು!. ಮಧುಶಾಲೆಯಲ್ಲಿ ಕುಳಿತು ಸೋಮರಸವನ್ನು ಹೀರಿ ಅಮಲನ್ನೇರಿಸಿಕೊಂಡು ರಸ್ತೆಯುದ್ದಕ್ಕೂ ತಮ್ಮದೇ ಲೋಕದಲ್ಲಿ ತೂರಾಡುತ್ತಾ ತೇಲಿ ಬರುವ ಯಾವ ಮಧುಪ್ರಿಯರಿಗಿಂತಲೂ ದುಂಬಿಗಳ ಕಥೆಯೇನೂ ವಿಭಿನ್ನವಾಗಿಲ್ಲವೆಂಬುದೇ ವಿಶೇಷವಾದದ್ದು. ವ್ಯತ್ಯಾಸವಿಷ್ಟೇ, ದುಂಬಿಗಳು ಹೆಕ್ಕಿ ತರುವ ಮಧು, ಪುಷ್ಪದೊಳಗೆ ಸ್ವಾಭಾವಿಕವಾಗಿ ತಯಾರಾದ ಪ್ರಕೃತಿ ರಸಾಯನ. ಆದರೆ ಮಧುಶಾಲೆಯಲ್ಲಿನ ಮಧು, ಮಾನವ ಸಂಸ್ಕರಿಸಿದ ರಸಾಯನಗಳ ಸೋಮರಸ. ಇನ್ನೊಂದು ಆಸಕ್ತಿಕರ ಭಿನ್ನತೆಯೆಂದರೆ, ರಾಣಿಜೇನು ವೈವಿಧ್ಯಮಯ ಹೂಗಳ ಮಧುವನ್ನರಸಿ ಗುಟುಕು ಗುಟುಕಾಗಿ ಹೀರಲು ಹೊರಟರೆ, ರಾಜ ಜೇನು ಕೆಲವೊಮ್ಮೆ ಲವಣಾಂಶಗಳನ್ನು ಹುಡುಕಿ ಹೆಕ್ಕಿ ಮಣ್ಣು ತಿನ್ನುತ್ತದಂತೆ!. ಮನುಷ್ಯರಲ್ಲಿ ಮಾತ್ರ ಇದು ತಿರುವು ಮುರುವು. ಮಧುಪ್ರಿಯ ಗಂಡುಗಲಿಗಳು ಮಧುಶಾಲೆಯ ಸೋಮರಸವನ್ನು ಹುಡುಕಿಹೊರಟರೆ, ನಂಬಿದ ಹೆಂಡತಿ ಮಕ್ಕಳು ಜೀವನ ಸಾಗಿಸಲಾಗದೇ ಮಣ್ಣನ್ನೇ ಅವಲಂಬಿಸಬೇಕಾಗಿ ಬಂದಿರುವುದನ್ನು ಅಲ್ಲಲ್ಲಿ ಕಂಡರಿಯುತ್ತೇವೆ. ಇದೆಂತಹ ಕಾಕತಾಳೀಯವಲ್ಲವೇ ?
ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ವಾನ್ ಫ್ರಿಶ್ ಅವರು 'ದುಂಬಿಯೊಂದು ಮಕರಂದದತ್ತ ನರ್ತಿಸುತ್ತ ಹಾರುತ್ತದೆ. ಈ ನರ್ತನದ ಲಯವನ್ನು ಅನುಸರಿಸಿ ಉಳಿದ ದುಂಬಿಗಳು ಹಿಂಬಾಲಿಸುತ್ತವೆ' ಎಂಬ ವಿಷಯವನ್ನು ಕ್ರಿ.ಶ.1940ರಲ್ಲಿಯೇ ಹೊರಗೆಡವಿದ್ದರು ಎಂಬ ಸಂಗತಿಯನ್ನು ಎಲ್ಲೋ ಓದಿದ ನೆನಪಾಗಿ, ದುಂಬಿಗಳೇ ಹೀಗೆ ಮಕರಂದಕ್ಕಾಗಿ ಓಲಾಡುತ್ತವೆಯೆಂದ ಮೇಲೆ ಇನ್ನು ಮಧುಪ್ರಿಯರು ತೂಗಾಡುವುದರಲ್ಲಿ ತಪ್ಪೇನಿಲ್ಲವೆಂದುಕೊಂಡು ತೆಪ್ಪಗಾದೆ. ಈ ಕೊರೊನಾ ಕಾರಣದ ಕರ್ಫ್ಯೂ ನಿಂದಾಗಿ ಬಾಗಿಲು ಹಾಕಿರುವ ಮಧುಶಾಲೆ ಹಾಗೂ ಅದರ ಮುಂದೆ ಮಧು ಹೀರಲೇಬೇಕೆಂದು ಸಾಲುಗಟ್ಟಿ ನಿಂತ ಸೋಮರಸಪ್ರಿಯರನ್ನು ಈ ಹೊತ್ತಿನಲ್ಲಿ ನೆನೆದರೆ ವೇದನೆಯುಂಟಾಗುತ್ತದೆ!. ಇವರಿಗೇಕೆ ಜೇನುಗೂಡಿನೊಳಗಣ ಮಧು ಹಿಂಡಿ ಕೊಟ್ಟು ಸಮಾಧಾನ ಮಾಡಬಾರದು ಎಂದು ಪ್ರಶ್ನೆಯನ್ನಿಟ್ಟುಕೊಂಡು ತರ್ಕಕ್ಕಿಳಿದೆ. ಪ್ರಮಾಣದ ಅಸಂಗತ ಲೆಕ್ಕಾಚಾರ ನೆನೆದು ಹೌಹಾರಿದೆ. ಯಾವ ನೆಲೆಯಲ್ಲಿಯೂ ಅದು ಸಾಧ್ಯವಾಗದ ಸಾಹಸದ ಕಾರ್ಯವೆಂದು ತಿಳಿದು ನನ್ನೊಳಗೆ ಅಲ್ಲದೇ, ಮನೆಯೊಳಗೆ ಬಂಧಿಯಾದೆ. ಆ ಬಂದ್ ನ ಪ್ರಭಾವ ನಮ್ಮ ಮನೆಯಂಗಳದ ದುಂಬಿಗಳಿಗಿನ್ನೂ ತಟ್ಟಿರಲಿಲ್ಲ. ಯಾಕೆಂದರೆ ಭ್ರಮರದ ಮಧುಪಾತ್ರೆಗಳನ್ನೊಳಗೊಂಡ ಕುಸುಮಗಳು ನಿತ್ಯ ನಿರಂತರ 24/7 ದುಂಬಿಗಳಿಗಾಗಿ ಸದಾ ಬಾಗಿಲು ತೆರೆದೇ ಇರುತ್ತವೆಯೆಂದರೆ ಈ ಭ್ರಮರಗಳ ಅದೃಷ್ಟವೋ ಅದೃಷ್ಟವೆನ್ನಬೇಕು. ಅಮಲೇರಿದ ದುಂಬಿಯಂತೆ ಎಲ್ಲೆಲ್ಲೋ ಹಾರಿ ಹೊರಟಿದೆಯಲ್ಲ ಪ್ರಬಂಧ!. ದುಂಬಿಗಳು ಆಕಾಶದಲ್ಲಿ ಎಲ್ಲಿ ಹಾರಿದರೂ ಮರಳಿ ನಿಖರವಾದ ಸ್ಥಳಕ್ಕೇ ಬಂದು ಸೇರುವಂತೆ, ನೇರವಾಗಿ ವಿಷಯಕ್ಕೆ ಬರೋಣ. ಮುಂಜಾವಿನ ಆ ನಿಷ್ಠೆಯ ಕಾಯಕದಲ್ಲಿ ಬಳಲಿ ಬೆಂಡಾದ ಜೇನ್ನೊಣಗಳು ಈ ಮಧ್ಯಾಹ್ನದ ಹೊತ್ತಿನಲ್ಲಿ, ಆಟವಾಡಿ ದಣಿದು ಆಗ ತಾನೇ ತಾಯ ಹಾಲು ಕುಡಿದು ನಿದ್ರಾದೇವಿಯ ಮಾಯೆಯಲ್ಲಿ ತೇಲುತ್ತಿರುವ ಹಸುಗೂಸುಗಳಂತೆ ಜೋಗುಳವನ್ನು ಬಯಸುತ್ತಿದ್ದವೋ ಏನೋ .ಅಂತೂ ಮಬ್ಬಾದ ಮಂಪರಿನಲ್ಲಿ ಕುಳಿತಲ್ಲಿಯೇ ಅಲುಗಾಡುವುದನ್ನು ಹೊರತುಪಡಿಸಿದರೆ ದುಂಬಿಗಳ ಚಟುವಟಿಕೆಗಳು ಚೈತನ್ಯಯುತವಾಗಿರಲಿಲ್ಲ.
"ಅನುಸರಿಸಬೇಕು ಜಗ ದುಂಬಿಗಳ ಕ್ರಿಯಾಶಕ್ತಿ, ಚಲನಶೀಲತೆ
ತಲೆದೂಗಬೇಕು ಕೇಳಿ ಮಧು
ಹೀರಿ ರಾಗಿಸುವ ಅವುಗಳ
ಅಮಲಿನ ಹಾಡಿನ ಮಾಧುರ್ಯತೆ
ಎಂದು ಜೇನ್ನೊಣಗಳ ಬೆಳಗಿನ ಅದಮ್ಯ ಕಾಯಕವನ್ನು ಕಂಡು ಮೇಲಿನಂತೆ ಹಾಡುವಂತಾಯಿತು. ಇದು ದುಂಬಿಗಳಿಗೆ ಜೋಗುಳದಂತೆ ಕೇಳಿತೋ ಏನೋ ? ಗೊತ್ತಾಗಲಿಲ್ಲ. ಅವು ತಮ್ಮ ಲೋಕದಲ್ಲಿಯೇ ತಾವಿದ್ದವು. ಹೀಗೆ ಅವು ಮಲಗಿದಂತೆ ನಿಸ್ತೇಜವಾದ ಮೇಲೆ ನೋಡುವುದಿನ್ನೇನು ಎಂದು ಮೇಲೆದ್ದು ನನ್ನ ಗೂಡಿನತ್ತ ನಿಧಾನವಾಗಿ ಹೆಜ್ಜೆ ಹಾಕಿದೆ. ಹೊಸದಾಗಿ ಮನೆಯ ಮುಂದೆ ಗೂಡು ಕಟ್ಟಿಕೊಂಡು ಸಂಸಾರ ಹೂಡಿದ ಭೃಂಗಗಳನ್ನು ಮನೆಯಂಗಳಕೆ ಬಂದ ಅತಿಥಿಗಳೆಂದು, ಹೀಗೆ ದಿನವಿಡೀ ನೋಡುತ್ತಲೇ ಸಾಕಿದ ಮರಿಗಳಂತೆ ದೂರದಿಂದಲೇ ಮುದ್ದುಮಾಡಿದೆ. ತಕ್ಷಣ ನೆನಪಾಯಿತು. ಇದನ್ನು ನೋಡಿ ದುಂಬಿಗಳು ಮರಳಿ ಮುದ್ದು ಮಾಡಲು ಬಂದುಬಿಟ್ಟರೆ ಗತಿಯೇನಾಗುತ್ತದೆ ಎಂದವನೇ ಭಯಗೊಂಡು ಒಳತೂರಿಬಂದುಬಿಟ್ಟೆ. ಹೀಗೆಯೇ ಕೆಲವು ದಿನ ಕಳೆಯಿತು. ಜೇನುಗೂಡು ಹುಣ್ಣಿಮೆಯ ಚಂದಿರನಂತೆ ಬೆಳೆಯುತ್ತಿತ್ತು. ನನ್ನ ಕನಸುಗಳೂ ಕೂಡ ಬೆನ್ನತ್ತಿ ಅರಳಿಕೊಳ್ಳಲಾರಂಭಿಸಿದವು. ಈ ದುಂಬಿಗಳು ಬಯಸದೇ ಮನೆಗೆ ಬಂದ ಅಪರೂಪದ ಗೆಳೆಯರೆಂದುಕೊಂಡು ಸಂಭ್ರಮಿಸಿದೆ. ಕಾಳಿದಾಸನ ಮನೆಯ ಮುಂದಿನ ಉದ್ಯಾನವನ ನೆನಪಾಯಿತು.ಇರುವಷ್ಟು ಕಾಲ ಇಲ್ಲಿದ್ದು ಹೇಗೋ ರಾಣಿಜೇನಿನ ಮಾತುಗಳನ್ನು ಕೇಳಿ ತಮ್ಮ ಸಂಸಾರವನ್ನು ನೀಗಿಸಿಕೊಂಡು, ಮಕ್ಕಳು, ಮರಿಮಕ್ಕಳೊಂದಿಗೆ, ಮಧು ಹೀರಿ ಉದ್ಯಾನವನದಲ್ಲಿ ಗುಂಯ್ ಎಂದು ಏಕತಾರಿ ಹಿಡಿದು ಹಾಡಿದರೆ ಸಾಕು. ಶುಭೋದಯದ ಸಂಗೀತಕ್ಕೆ ದಕ್ಕುವ ಕಳೆಯೇ ವಿಭಿನ್ನ. ಕೊರಡಿನೊಳಗಣ ಸಂದಿಯಲ್ಲರಳಿಕೊಂಡ ಜೀವನದಿಂದ ಒಂದೊಮ್ಮೆ ಬೇಸರವಾಯಿತೆಂದಾಗ, ಅದುವರೆಗೂ ಎಲ್ಲಿಂದಲೋ ಹುಡುಕಿ ಹೆಕ್ಕಿ ತಂದು ತೊಟ್ಟಿಕ್ಕಿ ಸಂಗ್ರಹಿಸಿದ ಮಂದ ಕಂದು ಬಣ್ಣದ ಸವಿಜೇನನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆಲ್ಲಾ ಕುಡಿಸಿ ಉಳಿದುದರಲ್ಲಿ ತಾವೂ ಉಂಡು, ತಮ್ಮ ಗೂಡಿನ ಕುರುಹು ಬಿಟ್ಟು ಸಂತೃಪ್ತಿಯಿಂದ ಹೋದರೆ ಸಾಕು. ಹಾರ, ತುರಾಯಿ,ವಾದ್ಯ ಗೋಷ್ಠಿಗಳಿಂದಲ್ಲದೇ ಇದ್ದರೂ, ತುಂಬುಹೃದಯದ ನಿಷ್ಕಲ್ಮಶ ಪ್ರೀತಿಯ ಆರ್ದ್ರತೆಯಿಂದಲಾದರೂ ಬೀಳ್ಕೊಟ್ಟರಾಯಿತು ಎಂದು ಮನದೊಳಗೆ ಭೃಂಗಗಳ ಭವಿತವ್ಯದ ಹಂಚಿಕೆಯ ಕನಸುಗಳನ್ನು, ಸಂಚಿಕೆಯಾಗಿ, ನನ್ನೊಳಗೇ ತುಂಬಿಕೊಳ್ಳುತ್ತಾ ಹೋದೆ.
ಹೀಗೆ ಒಂದು ಮಬ್ಬು ನಸುಕಿನಲ್ಲಿ ಎದ್ದು ಮನೆಯ ಕಿರು ಉದ್ಯಾನವನದಲ್ಲಿಯೇ ವಿಹಾರಕ್ಕಿಳಿದೆ. ಕತ್ತಲೆ ವಿದಾಯ ಹೇಳುತ್ತಿತ್ತು. ಹಕ್ಕಿಗಳ ಕಲರವ ಆಗ ತಾನೇ ಶುರುವಾಗಿತ್ತು. ನೇಸರನ ಪ್ರಥಮ ಕಿರಣಗಳು ಭುವಿ ಸ್ಪರ್ಶಕ್ಕಾಗಿ ಕಾದಿದ್ದವು. ಇನ್ನೇನು ದುಂಬಿಗಳೂ ಎದ್ದು ಬರುವ ಹೊತ್ತಾಯಿತೆಂದು ಸಂಗೀತದ ಸಾಂಗತ್ಯಕ್ಕಾಗಿ ಕಾಯುತ್ತಿದ್ದೆ. ಸೂರ್ಯ ಕಿರಣಗಳ ದರ್ಶನವಾಯಿತು. ಪಕ್ಷಿಗಳು ಗೂಡಿನಿಂದ ನಿತ್ಯ ಕಾಯಕಕ್ಕಾಗಿ ತೆರಳಿದವು. ತಂಗಾಳಿಯೂ ಭಾನು ಕಿರಣಗಳ ಅಪ್ಪುಗೆಯಿಂದ ಬೆಚ್ಚಗಾಗಲು ಪ್ರಾರಂಭಿಸಿತು. ಆದರೆ ದುಂಬಿಗಳ ಗುಂಯ್ ಗಾನ ಮಾತ್ರ ಸುಳಿಯಲೇ ಇಲ್ಲ. ಪ್ರಕೃತಿ ನಿಶ್ಯಬ್ದವೆನಿಸಿತು, ಹಾಡುವವರಿಲ್ಲದೇ ವೇದಿಕೆ ಬಿಕೋ ಎನ್ನಿಸುವ ಹಾಗೆ. ರಾತ್ರಿಯೆಲ್ಲಾ ಮಧು ಕುಡಿದು ಅಮಲಿನಲ್ಲಿ ಮಲಗಿದ ದುಂಬಿಗಳಿನ್ನೂ ನಶೆಯಿಂದ ಹೊರಬಂದಿರಲಿಕ್ಕಿಲ್ಲ. ನಾನೇ ಎಬ್ಬಿಸಿದರಾಯಿತೆಂದು ಕೊರಡುಗಳ ಸಂದಿಯೊಳಗೆ ಕಣ್ಣುಹಾಯಿಸಿದೆ. ಅಚ್ಚರಿಯೋ ಅಚ್ಚರಿ! ಆತಂಕವೋ ಆತಂಕ! ಏಕೆಂದರೆ, ದುಂಬಿಗಳು ಹೋಗಲಿ, ಜೇನುಗೂಡಿನ ಯಾವ ಕುರುಹುಗಳೂ ಅಲ್ಲಿರಲಿಲ್ಲ. ಕ್ಷಣ ಹೊತ್ತು ತಬ್ಬಿಬ್ಬಾದೆ. ದುಂಬಿಗಳ ನಶೆಯನ್ನಿಳಿಸಿ ಎಚ್ಚರಗೊಳಿಸಲು ನಾನು ಹೋದರೆ, ನನ್ನದೇ ಶುಭೋದಯದ ಮಧುರ ಉಲ್ಲಾಸವೆಲ್ಲಾ ಮಂಜು ಕರಗುವಂತೆ ಕರಗಿಹೋಯಿತು. ಮನಸ್ಸು ತಳಮಳಗೊಂಡಿತು. ಏನಾಗಿರಬಹುದು ಎಂದು ಮನೆಯವರನ್ನು ವಿಚಾರಿಸುವಾಗ, ಕೈಯ್ಯಲ್ಲೊಂದು ಬಟ್ಟಲು ಹಿಡಿದ ಕರುಳ ಕುಡಿಯೇ ಎದುರಿಗೆ ಬಂದು "ಅಪ್ಪಾ...ಜೇನು ಕುಡೀತೀಯಾ ?" ಎಂದಾಗಲೇ ನನ್ನ ಬೆಳಗಿನ ಮತ್ತೆಲ್ಲಾ ಸರ್ರನೆ ಪಾತಾಳಕ್ಕಿಳಿಯಿತು. ಮಗುವಿಗೆ ಏನೊಂದೂ ಉತ್ತರಿಸದೇ ಸ್ತಂಭೀಭೂತನಾದೆ. ಸಂಗತಿಯೇನೆಂದರೆ ಹಿಂದಿನ ದಿನವೇ ಮನೆಯವರೆಲ್ಲಾ ಸೇರಿಕೊಂಡು ಭ್ರಮರಗಳನ್ನು ಬಡಿದೋಡಿಸಿ ಗೂಡನ್ನೇ ಕಿತ್ತುಹಾಕಿ ಅದರೊಳಗಿನ ಮಧುವನ್ನು ಬಲವಂತದಿಂದ ಕಿತ್ತುಕೊಂಡಿದ್ದರು. ಇದನ್ನು ಕೇಳಿ ಮನಸ್ಸಿಗೆ ಆಘಾತವಾದಂತಾಗಿ, ಕರುಳ ಕುಡಿಗಳಂತೆಯೇ ಪ್ರೀತಿಸುತ್ತಿದ್ದ ಮರಿದುಂಬಿಗಳನ್ನು, ಕ್ರೂರವಾಗಿ ಕಳೆದುಕೊಂಡ ಭೀಕರ ನೋವನ್ನು ಮರೆಯಲಾಗದೇ ಹೊರಗೆ ಬಂದು ಒಂದು ಘಳಿಗೆ ಧ್ಯಾನದಲ್ಲಿ ಮೈಮರೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಹಿಂದೊಂದು ಬಾರಿ ಮನೆಯವರು ಇಂತಹುದೇ ಪ್ರಯತ್ನಕ್ಕಿಳಿದಾಗ ಬೈದು ಈ ಆಲೋಚನೆಯಿಂದ ದೂರ ಸರಿಸಿದ್ದೆ .ಆದರೀಗ ನಾನಿಲ್ಲದ ಸರಿ ಹೊತ್ತು ನೋಡಿ ಕಾದು, ಜೇನು ಬಿಡಿಸಿದ್ದರು. ಕಣ್ಣುಗಳು ಮಂಜಾದವು. ಮೌನ ಬಿಸಿಯಾಯಿತು. ಉಸಿರು ಉರಿಯಾಯಿತು. ದುಂಬಿಗಳ ರಸಗಾನದ ಸಾಂಗತ್ಯದಲ್ಲಿ ಮೈಮರೆತು, ಕಳೆದ ನೆನಪುಗಳು ಮನದ ಗೂಡಿನಿಂದ ಒಂದೊಂದಾಗಿ ಹೊರಬರಲಾರಂಭಿಸಿದವು. ಕಳೆದುಕೊಂಡ ಭೃಂಗದ ಬೆನ್ನೇರಿ ಹೊರಟುಬಿಟ್ಟೆ. ತೇವವಾದವು ಮನಸು, ಹೃದಯಗಳು. ಮನಕಡಲಿನಿಂದ ನೋವಿನಲೆಗಳು ದಾಳಿಯಿಡಲಾರಂಭಿಸಿದವು. ಮಗು ತಂದು ಕಣ್ಣೆದುರಿಗೆ ಹಿಡಿದ ಜೇನನ್ನು ನೋಡುವ ಧೈರ್ಯವೂ ಇಲ್ಲದಾಯಿತು. ಕಣ್ಣಂಚಿನಲ್ಲಿ ಕಣ್ಣೀರು ಮಡುಗೊಂಡು ಕೆಂಪಾಗಿತ್ತು, ಜೇನಿನ ಪ್ರತಿಫಲನದಿಂದ. ಭಾಗ್ಯಗಳನ್ನು ಕೇಳಿ ಮನವೊಲಿಸಿ ಪಡೆದುಕೊಳ್ಳಬೇಕೆ ವಿನಃ ಕಿತ್ತುಕೊಳ್ಳಬಾರದಲ್ಲವೇ ? ಎಂದು ನನ್ನೊಳಗೆ ಸತ್ಯ ದರ್ಶನದ ಹುಡುಕಾಟಕ್ಕಿಳಿದೆ. ಮನುಷ್ಯ ಪ್ರಕೃತಿಯಿಂದ ಬೇಡಿ ಪಡೆದಿದ್ದಕ್ಕಿಂತ, ಕಿತ್ತುಕೊಂಡು ಕೊಳ್ಳೆ ಹೊಡೆದದ್ದೇ ಹೆಚ್ಚಲ್ಲವೇ ? ಉದ್ಯಾನವನಕ್ಕೇ ಶಿಖರಪ್ರಾಯ ಮುಕುಟದಂತಿದ್ದ ಜೇನುಗೂಡು ಮಾಯವಾಗಿತ್ತು: ಮನೆಯ ಮುಂದೆ ಒಟ್ಟಿದ ಕೊರಡುಗಳ ರಾಶಿಯೇ ದುಂಬಿಗಳ ಚಿತೆಯಾಯಿತಲ್ಲ ಎಂದು ಹಳಹಳಿಸಿ ಉಮ್ಮಳಿಸಿದೆ. ಹರ್ಷದ ಗೂಡಿಲ್ಲದ ಮನದುಂಬಿ ದಿಕ್ಕುತಪ್ಪಿ ಹಾರುತ್ತಿತ್ತು ; ಹೃದಯದರಮನೆ ಬರಿದಾಗಿತ್ತು. ಎದೆಯಗೂಡು ಬಿರಿದಾಗಿತ್ತು.
Sunday, 24 May 2020
ಸಾವಿನ ದಾರಿ..
ಸಾವಿನ ದಾರಿ
ಸ್ಮಶಾನವಾಗುತಿವೆ ಹೆದ್ದಾರಿ
ತನ್ನೊಳಗೆ ಬರುವುದೆಲ್ಲವನೂ ನುಂಗಿ ತೇಗಿ
ಅಳಿಲು, ಕುರಿ, ಕೋಳಿ, ನಾಯಿ ಬೆಕ್ಕುಗಳ
ಜೀವಗಳಿಗಂತೂ ಬೆಲೆಯೇ ಇಲ್ಲ
ಮನುಷ್ಯನ ಪ್ರಾಣಕೂ ಹಾತೊರೆಯುತಿದೆಯಲ್ಲ
ಕಪ್ಪು ರಾಕ್ಷಸನೇ ಸರಿ
ಹಿರಿದಾರಿಯೆಂದೆನಿಕೊಂಡರೂ
ವಾಹನಗಳೇ ಮೃಷ್ಟಾನ್ನ ಭೋಜನ
ಚಾಚಿದ ಕರಿನಾಲಗೆಗೆ ಹರಿಯುವ
ನೆತ್ತರು ಚಪ್ಪರಿಸುವ ಉಪ್ಪಿನಕಾಯಿ
ಹಸಿಮಾಂಸವೇ ರುಚಿಕಟ್ಟಾದ
ಭೋಗವಾಸನೆಯ ಮುದ್ದೆ
ತಿಂದು ತೇಗುವುದೊಂದೇ
ಹೊರಟ ದಾರಿಯ ನಿತ್ಯಕಾಯಕ
ಉಂಡು ಬೀಗುವುದಕೆ ಯಮಧರ್ಮನೇ ನಾಯಕ
ಯಾವ ಕಿಂದರಿಜೋಗಿ ಕರೆದೊಯ್ಯುವನೋ
ರಸ್ತೆಗಳೆಲ್ಲಾ ಜಾಮ್ ಜಾಮ್......
ಮೈದುಂಬಿಕೊಂಡ ಕಪ್ಪು ವಸ್ತ್ರದ ಮೇಲೆ
ಹರಿಯುವ ವಾಹನಗಳ ಕೋಟಿನ ಬಲೆ
ಕುಣಿಯುತ್ತ ಕಿನ್ನರಿಯನೂದುತ
ಹೊರಟ ಬಂಡಿಗಳು ಲೆಕ್ಕಕೂ ನಿಲುಕಲಾಗದ ಸೆಲೆ
ದಿಕ್ಕುತಪ್ಪಿದರೂ ಮರಳಲೇಬೇಕು
ಹೊರಳಿ ಮತ್ತೆ ಸಾವಿನ ಹಾದಿಗೆ
ಮರ ಗಿಡ ಬಳ್ಳಿ ತುಂಬಿದ ಕಾಡು
ಕಡಿದು ಕಟ್ಟಿದ ರೆಸಾರ್ಟಿನಲ್ಲಿ
ಕಂಠದವರೆಗೂ ಕುಡಿದು ಕಟ್ಟಿಕೊಂಡ ಮಹಾಪಾಪ
ಬೆನ್ನು ಬಿಡುವುದೆಲ್ಲಿ ಕೊರಗಿ
ಕರಗುತ್ತಿರುವ ಪ್ರಕೃತಿಯ ಮಹಾಶಾಪ
ಮರಗಿಡಗಳ ಮಾರಣಹೋಮ
ಮಾರ್ಗವೊಂದರ ಪ್ರತಿಷ್ಠಾಪನೆಗೆ
ಬೆಲೆಕಟ್ಟಲಾಗದ ಜನುಮಹಾನಿ
ಉಣ್ಣಲೇಬೇಕಲ್ಲವೇ ಮಾಡಿದಡುಗೆ
ಬೇವು ಬಿತ್ತಿ ಮಾವು ಕೊಂಬುವ
ದುರಾಸೆಗೆ ಬಲಿಯಿನ್ನೆಷ್ಟೋ
ಒರಗಿಹೋದ ಜೀವಗಳ ಕೊರಳಿನ ಆರ್ತನಾದಗಳೆಷ್ಟೋ
ಕುಣಿದು ಕುಪ್ಪಳಿಸುವ ಪ್ರಗತಿಯ
ದಾರಿಯೆಂದು ಬೀಗುವ ಬಾಂಧವರೇ
ಕಣ್ಣರಳಿಸಿ ತುಂಬಿಕೊಳ್ಳಿ ಸಾವಿನ ಮೆರವಣಿಗೆಯನು;
ಕರಗುತ್ತಲೇ ಕುಸಿಯುತ್ತಿರುವ ಘಟ್ಟಗಳ
ಮೈಮೇಲಿನ ಹಸಿಹಸಿಯಾದ ಗಾಯಗಳನ್ನು
ವ್ರಣಗಳಿಂದುಂಟಾದ ಕುಳಿಗಳಲ್ಲಿ ಮಡುಗಟ್ಟಿರುವ
ರಕ್ತಕಣ್ಣೀರಿನ ಹೊಳೆಯನ್ನೊಮ್ಮೆ ಹರಿಯಬಿಡಿ
ನಿಂತು ಹೋಗಲಿ ಒಮ್ಮೆ ನಿಮ್ಮ
ಮಿಡಿಯಲೊಲ್ಲದ ಪಾಪದ ಜೀವನಾಡಿ
ಹೆದ್ದಾರಿಯ ಹೆಮ್ಮಾರಿಗೆ ಜೀವಗಳ
ಕರುಳ ಹಾರಗಳಲಂಕಾರ
ಪುಟಿಯುತಿರುವ ಹೊರಬಿದ್ದ ಮೆದುಳು
ಮಿಡಿಯುತಿರುವ ಅನಾಥವಾದ ಹೃದಯದಳು
ನಡೆಸಿದಂತೆ ವಾದ್ಯಗೋಷ್ಠಿ
ಜವರಾಯನ ಆಗಮನಕೆ
ಶೋಕಗೀತೆ ಚೀರಾಟ; ಭಜನೆ ಮೇಳ ಕೂಗಾಟ
ಸಂಗೀತದ ಮಹಾವೈಭವ!!!
ದಾರಿ ತುಂಬಿಕೊಂಡ ಸುಳ್ಳಾದ ಹರಕೆ;
ಆಯುಷ್ಮಾನುಭವ! ಆಯುಷ್ಮಾನುಭವ!
Subscribe to:
Posts (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2) JOHN KEATS ಕೀಟ್ಸ್ ನಲ್ಲಿ ಕಾವ್ಯ ಪವಿತ್ರವಾಗಿತ್ತು,ದಿವ್ಯ ಬೆಳಕಾಗಿತ್ತು, ಮೌನದ ಮಹ...




















